ದಣಿ ದನಿ ಎತ್ತೊ ಹೊತ್ಗೆ ದೀನನ (ದಮ್ಮು) ಉಸಿರು ಉಡುಗಿತ್ತು

 ದಣಿ ದನಿ ಎತ್ತೊ ಹೊತ್ಗೆ ದೀನನ (ದಮ್ಮು) ಉಸಿರು ಉಡುಗಿತ್ತು

 ಲೇಖಕರು : ಎಂ ಆರ್ ವೆಂಕಟರಾಮಯ್ಯ                                       

ಮನುಷ್ಯ ಸಂಘ ಜೀವಿ. ಅವನು ಒಂಟಿಯಾಗಿ ಬದುಕಲಾರ. ಇದರ ಜೊತೆಗೇನೇ ಅವನು ಸರ್ವ ಸ್ವತಂತ್ರನಾಗಿಯೂ ಜೀವಿಸಲಾರ. ಅಂದರೆ ನಿತ್ಯ ಜೀವನದ ವ್ಯವಹಾರಗಳಲ್ಲಿ ಯಾವುದಾದರೊಂದು ಬಾಬ್ತಿಗೆ ಇವನಿಗೆ ಮತ್ತೊಬ್ಬ ಸಹಜೀವಿಯದೋ, ಪ್ರಕೃತಿಯದೋ, ಸಂಘ, ಸಂಸ್ಥೆ, ಸರ್ಕಾರಗಳದೋ,  ಆಸರೆ, ಆಶ್ರಯ, ನೆರವು, ಸಲಹೆ, ಸೂಚನೆ, ಮಾರ್ಗದರ್ಶನ ಇಲ್ಲದೆ ತನ್ನ ಕೆಲಸ : ಅಗತ್ಯಗಳನ್ನು ಪೂರೈಸಿಕೊಳ್ಳಲಾರ. ಈ ಹಿನ್ನೆಲೆಯಲ್ಲಿ ಅವನು ಪರಾವಲಂಬಿಯೇ. ಈ ಪರಾವಲಂಬನೆ ಅನಿವಾರ್ಯವೂ ಹೌದು. ಈ ಆಸರೆ, ಆಶ್ರಯ, ನೆರವು ವ್ಯಕ್ತಿಗೆ ಅಗತ್ಯವಾದಾಗ ಸಿಕ್ಕಿದರೆ ಅದವನಿಗೆ ಉಪಯೋಗ. ನೆರವಿನ ಅಗತ್ಯತೆ ತೀರಿದ ಮೇಲೆ “ಇಗೋ ಬಂದೆ” ಎಂದು ಕಾಣಿಸಿಕೊಂಡರೆ ಅವನಿಗೇನು ಪ್ರಯೋಜನ ?  ಅಂತಹಾ ನೆರವು, ಆಸರೆ “ಊಟಕ್ಕಿಲ್ಲದ ಉಪ್ಪಿನ ಕಾಯಿ,” ಊರೆಲ್ಲಾ ಸೂರೆಯಾದ ಮೇಲೆ ಕೋಟೆ ಬಾಗಿಲು ಹಾಕಿದರು” ಎಂಬ ಗಾದೆಗಳಂತೆ ಅಪ್ರಯೋಜಕವಾಗುತ್ತದೆ. 

ಅಂದರೆ ಹಸಿದಾಗ ಊಟ, ಕಾಯಿಲೆ ಬಂದಾಗ ವೈದ್ಯಕೀಯ ಚಿಕಿತ್ಸೆ, ಕಷ್ಟ, ನಷ್ಟದಲ್ಲಿದ್ದಾಗ ಸಹಾಯ,  ನೋವು, ಸಂಕಟ,  ದುಃಖದಲ್ಲಿದ್ದಾಗ, ಸಮಯೋಚಿತ ಸಾಂತ್ವನ, ಸಹಾನುಭೂತಿ, ಅನುಕಂಪ, ನೆರವನ್ನು ಒದಗಿಸುವುದು ಮಾನವ ಧರ್ಮ, ಅದು ಮಾನವೀಯತೆ ಎನಿಸಿಕೊಳ್ಳುತ್ತದೆ. ಇವೆಲ್ಲಾ ಸಕಾಲದಲ್ಲಿ ಲಭ್ಯವಾದಾಗ, ಸಿಕ್ಕಿದ್ದು ಉಪಯುಕ್ತ ಎನಿಸಿಕೊಳ್ಳುತ್ತದೆ. ಇದಕ್ಕೆಲ್ಲಾ ಮುಖ್ಯ ಪಾತ್ರಧಾರಿಗಳು ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಘ, ಸಂಸ್ಥೆ, ಸರ್ಕಾರಗಳು. ಇಲ್ಲಿ ಪ್ರತಿಯೊಬ್ಬರೂ ತಮ್ಮ ನಿಗದಿತ ಹೊಣೆ, ಜಬಾಬ್ಧಾರಿಗಳನ್ನು ಸರಿಯಾಗಿ, ಸಕಾಲದಲ್ಲಿ ನಿರ್ವಹಿಸಿದಾಗ ಕಾರ್ಯಗಳು ಸುಗಮವಾಗಿ ನಡೆದು, ಅದರಿಂದ ಫಲಾನುಭವಿಗಳು ಉಪಯುಕ್ತರಾಗಲು ಸಾಧ್ಯ. ಈ ಕೆಲಸಗಳು ನಮ್ಮದೇ, ನಮ್ಮವರದೇ ಆದರೂ ‘ಮಾಡೋಣ ಆಮೇಲೆ, ನಾಳೆಯೋ, ನಾಡಿದ್ದೋ,’ ಎಂದು ಮುಂದೂಡಿದರೆ ! ‘ನಾಳೆ ಎಂದ ಕೆಲಸ ಹಾಳು, ಆಲಸ್ಯಂ ಅಮೃತಂ ವಿಷಂ’ ಎಂಬಂತೆ  ಹಾಳಾಗುವ ಸಂಭವವಿರುತ್ತದೆ.. ಈ ಮುಂದೂಡಿಕೆ, ಪೋಸ್ಟೊನ್ಮೆಂಟ್ ಪ್ರವೃತ್ತಿಯನ್ನು ಇಂಗ್ಲೀಷಿನಲ್ಲಿ ಪ್ರೋಕ್ರೇಸ್ಟ್ಟಿನೇಷನ್ ಎಂದು ಕರೆಯಲಾಗಿದೆ. ಇದಕ್ಕೆ ಕಾರಣ ಒಂದೋ, ಹಲವೋ ಇರಬಹುದು. ಅವುಗಳ ಪೈಕಿ, ಮುಖ್ಯವಾದುವೆಂದರೆ ಆಲಸ್ಯ, ಅಸಡ್ಡೆ, ತಾತ್ಸಾರ, ತಿರಸ್ಕಾರ, ಉಪೇಕ್ಷೆ, ಅನಾಸಕ್ತಿ, ಉದಾಸೀನತೆ,  ಹೊಣೆಗಾರಿಕೆಯಿಲ್ಲದ, ಹೊಣೆಯಿಂದ ನುಣಚಿಕೊಳ್ಳುವ ಉದ್ದೇಶವೋ ಇರಬಹುದು.  ಕಾರಣಗಳು ಏನೇ ಇರಲಿ, ಇದರ ಪರಿಣಾಮ, ಈ ಸಂಬಂಧಿತ ವ್ಯಕ್ತಿಯ ಕೆಲಸ ಕೆಡುವುದೊಂದಕ್ಕೇ ಸೀಮಿತವಾಗದೆ, ಕಷ್ಟ, ವಿನಾಶ್ರಮ, ಹಣದ ನಷ್ಟ, ಸಂಬಂಧಿತರಲ್ಲಿ ನಿಷ್ಠೂರ ಮೊದಲಾದ ಮತ್ತಷ್ಟು ಅಡ್ಡ ಪರಿಣಾಮಗಳನ್ನೂ ಬೀರಬಹುದು. ಹಲವು ವೇಳೆ, ಈ ಅಡ್ಡ ಪರಿಣಾಮಗಳು ಇವನಿಗಾಗದಿದ್ದರೂ,  ಇವನಿಂದಾಗಬೇಕಾದ ಕೆಲಸಕ್ಕೇ ಕಾದು ಕೂತ ಇತರರಿಗೂ ಕಷ್ಟ, ನಷ್ಟ, ಮಾನಸಿಕ ಕ್ಷೋಭೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ, ಮಾಡಬೇಕಾದ ಕೆಲಸ ನಿಧಾನ ಮಾಡಿದರೆ, ಮುಂದೂಡಿದರೆ, ಕೆಲಸ ಮಾಡಲು ನಿರ್ಲಕ್ಷö್ಯ ಅಸಡ್ಡೆ ತೋರಿದರೆ, ನನಗೆ ತಾನೇ ನಷ್ಟ ಎನ್ನುವಹಾಗಿಲ್ಲ. ಇದರಿಂದ ನಮ್ಮ ಅವಲಂಬಿತರಿಗೂ ಇದರ ಬಿಸಿ ತಟ್ಟಲು ಸಾಧ್ಯ. ಈ ಪ್ರವೃತ್ತಿ, ಪ್ರಕ್ರಿಯೆ, ಪರಿಣಾಮಗಳು ಹೆಚ್ಚಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಘ, ಸಂಸ್ಥೆ, ಸರ್ಕಾರದ ಕಾರ್ಯನಿರ್ವಾಹಕರಲ್ಲಿ ಕಾಣಬಹುದಾಗಿದೆ. 


ಇದೆಲ್ಲಾ ಲೇಖಕನ ಊಹಾ ಪೋಹಗಳಲ್ಲ. ಬದಲಿಗೆ ಪ್ರತ್ಯಕ್ಷವಾಗಿ ಕಂಡಿದ್ದೋ, ಅವರಿವರಿಂದ  ಕೇಳಿದ್ದೋ,  ಹಲವು ಮೂಲಗಳ ಮೂಲಕ ತಿಳಿದಿದ್ದು ಆಗಿರುತ್ತದೆ ಇದೇ ವಿಷಯದ ಸಂಬAಧದಲ್ಲಿ  ಕೆಲ ಕಾಲದ ಹಿಂದೆ  ವೃತ್ತ ಪತ್ರಿಕೆಯಲ್ಲಿ ವರದಿಯಾದ ಒಂದು ಪ್ರಸಂಗ, ಪ್ರಸಕ್ತ ಲೇಖನದ ಶೀರ್ಷಿಕೆಯನ್ನು ಪುಷ್ಟೀಕರಿಸುತ್ತದೆ :  

“ಜೈಲಿನಲ್ಲಿರುವ ಕೈದಿಗಳ ಸನ್ನಡೆತೆಯ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲು ಸಂಬಂಧಿತ ಪ್ರಾಧಿಕಾರಗಳಿಗೆ ಅವಕಾಶ : ಅಧಿಕಾರವಿದೆ ಎಂದಿತಂತೆ ಒಂದು ನ್ಯಾಯಾಧಿಕರಣದ ಒಂದು ತೀರ್ಪು. ಇದರ ಹಿನ್ನೆಲೆಯಲ್ಲಿ ಜೈಲುವಾಸದಲ್ಲೂ ಸನ್ನಡತೆ ತೋರಿದ ಕೆಲವು ನೂರುಗಳಷ್ಟು ಕೈದಿಗಳ ಬಿಡುಗಡೆಗೆ ಅನುಮತಿ ಕೋರಿದ ದಾಖಲೆಯನ್ನು ಕೆಳ ಮಟ್ಟದ ಅಧಿಕಾರಿ, ಪುಟ್ಟಣ್ಣನಿಂದ ದೊಡ್ಡಣ್ಣ, ಯಜಮಾನಣ್ಣನವರೆಗೆ ಹಲವಾರು ಸಾರಿ, ಹಲವು ವರ್ಷಗಳ ಅವಧಿಯಲ್ಲಿ ‘ಆಯಾ ರಾಮ್ ಗಯಾರಾಮ್’ ಎಂಬಂತೆ ಬಂದು ಹೋಗಿದ್ದರೂ ಕೈದಿಗಳ ಬಿಡುಗಡೆಗೆ ಕೋರಿದ್ದ ಅನುಮತಿ ಮಾತ್ರ ಸಿಗದೆ, ಅವರ ಸನ್ನಡತೆಗೆ ಸಿಗಬೇಕಿದ್ದ ಪುರಸ್ಕಾರ ದೊರಕದೆ ಈ ಜೀವಿಗಳು ತಮ್ಮ ದುರಾದೃಷ್ಟವನ್ನು ಹಳಿಯುತ್ತಾ ಜೈಲಿನಲ್ಲೇ ಕೊಳೆಯುತ್ತಾ ಇದ್ದಾಗಲೇ, ‘ನಿಮ್ಮವರು ಎಂದೂ ನಿಮ್ಮ ಪರವಾಗಿ ಕೆಲಸ ಮಾಡುವುದಿಲ್ಲ’ ಪರವಾಗಿಲ್ಲ, ಈ ಜೈಲಿನಿಂದ ನಿಮಗೆ ಬಿಡುಗಡೆ ಸಿಗದಿದ್ದರೇನಂತೆ ! ನಿಮ್ಮನ್ನು ಈ ಪ್ರಪಂಚದಿಂದಲೇ ಬಿಡುಗಡೆ ಮಾಡ್ತೀನಿ, ನಾನು’ ಎಂದ ಜವರಾಯ, ಸುಮಾರು ೧೯೫ ಮಂದಿ ಕೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿ ತನ್ನೊಡನೆ ಕರೆದುಕೊಂಡು ಹೋದನಂತೆ.”   

ಈ ೧೯೫ ಮಂದಿಯಲ್ಲಿ ಅದೆಷ್ಟು ಮಂದಿ ಯುವಕರೋ, ನಡುವಯಸ್ಸಿನವರು, ವೃದ್ಧರಿದ್ದರೋ ತಿಳಿಯದು. ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ, ಆವೇಶದಲ್ಲಿ ಕೆಟ್ಟ ಕೆಲಸ ಮಾಡಿ ಅದಕ್ಕೆ ಶಿಕ್ಷೆ ಅನುಭವಿಸಿದ್ದೇವೆ, ಇನ್ನು ಉಳಿದಿರುವ ಆಯುಸ್ಸಿನಲ್ಲಾದರೂ ಒಳ್ಳೆಯವರೆನಿಸಿಕೊಂಡು ಬಾಳೋಣ, ಉದರ ಪೋಷಣೆಗೆ ದೇಹ ಶ್ರಮ ಪಟ್ಟು ದುಡಿದು ಗಳಿಸೋಣ, ನಮ್ಮ ಹೆಂಡತಿ ಮಕ್ಕಳು ಮೊಮ್ಮಕ್ಕಳೊಂದಿಗೆ ಸೇರಿ ಸುಖದ ದಿನಗಳನ್ನು ಕಾÀಣೋಣ    ‘ಅಚ್ಚೆ ದಿನ್ ಆಯೇಗಾ’ಎಂಬೆಲ್ಲಾ ಕನಸುಗಳನ್ನು ಕಾಣುತ್ತಾ, ಎಂದು ಮನಸ್ಸಿನಲ್ಲೇ ಮಂಡಿಗೆಯನ್ನು ಸವಿದ ಈ ನತದೃಷ್ಟರಿಗೆ ಕನಸು ನನಸಾಗಲೇ ಇಲ್ಲ. ಕನಸನ್ನು ಕಾಣುತ್ತಲೇ ಶಾಶ್ವತ ನಿದ್ರೆಗೆ ಜಾರಿದರು. “ದಣಿ ದನಿ ಎತ್ತೋ ಹೊತ್ಗೆ ದೀನರ ಉಸಿರು ಉಡುಗಿತ್ತು,” (ಯಜಮಾನರು ಸೇವಕರಿಗೆ ಬಿಡುಗಡೆ ನೀಡಿದ್ದೀನಿ ಎಂದು ಹೇಳುವ ಹೊತ್ತಿಗೆ ಸೇವಕರು ಜೀವ ತ್ಯಜಿಸಿ ತಣ್ಣಗಾಗಿದ್ದರು ಎಂಬ ಅರ್ಥದಲ್ಲಿ) ಜೈಲಿನಿಂದಲೇ ಏನು ! ಈ ಲೋಕದಿಂದಲೇ ಶಾಶ್ವತ ಬಿಡುಗಡೆ ಹೊಂದಿ, ಧನ್ಯೋಸ್ಮಿ ! ಎಂದು ನಿಟ್ಟುಸಿರು ಬಿಟ್ಟಿದ್ದರು.

ಈ ಪ್ರಸಂಗದಲ್ಲಿ ತಪ್ಪು ಯಾರದು ? ಎಂದು ಹುಡುಕುವುದಾಗಲಿ, ಯಾರನ್ನೂ ಆಕ್ಷೇಪಿಸುವುದಾಗಲಿ ಈ ಬರಹದ ಉದ್ದೇಶವಲ್ಲ. ಬದಲಿಗೆ, ಇಂತಹಾ ತಪ್ಪು, ಲೋಪಗಳ ಪರಿಣಾಮವೇನಾಗುತ್ತದೆ ಎಂಬುದರ ಕಡೆಗೆ ಗಮನ ಸೆಳೆಯುವುದಾಗಿದೆ. ಮಾಡಬೇಕಾದ ಕೆಲಸ ಸಕಾಲದಲ್ಲಿ ಮಾಡದೆ, ತನಗಿಚ್ಛೆ ಬಂದಾಗ ಮಾಡಿದರೆ, ಅದು ಈ ರೀತಿ ನಿಷ್ಫಲವಾಗುತ್ತದೆ. ‘ಊಟಕ್ಕೆ ಇಲ್ಲದ ಉಪ್ಪಿನಕಾಯಿ ಆಮೇಲೇಕೇ’ ! ಎಂಬಂತಾಗುತ್ತದೆ. 

   ವಿಷಯ, ಒಬ್ಬರಿಗೆ ಹಣ, ಕಾಸಿನ ನೆರವೋ, ದಾನ ನೀಡುವುದೋ, ಶಾರೀರಿಕ ಸಹಾಯವೋ, ಸಲಹೆ ಸೂಚನೆ ಮಾರ್ಗದರ್ಶನ, ಸಾಂತ್ವನ ಸಮಾಧಾನ ತಿಳಿಯುವುದೋ, ಕೊಟ್ಟ ಭರವಸೆ ಈಡೇರಿಸುವ ವಿಷಯವೋ ಮಾತು ಯಾವುದೇ ಆಗಲಿ, ಪ್ರತಿಯೊಂದರ ನಿರ್ವಹಣೆಗೂ ಇಂತಹುದೇ ಸಕಾಲ, ಸರಿಯಾದ ಸಮಯ, ಅವಧಿ ಎಂಬುದಿರುತ್ತದೆ. ಆಗ ಮಾಡಿದ ಕೆಲಸ ಸತ್ಫಲ ನೀಡುತ್ತದೆಯೇ ಹೊರತು, ಎಂದೋ ಮಾಡಿದ್ದಲ್ಲ ಎಂಬ ನೀತಿ ಈ ಪ್ರಸಂಗದಲ್ಲಿ ಗಮನಾರ್ಹ.  

  “ದಣಿ ದನಿ ಎತ್ತೋ ಹೊತ್ಗೆ ದೀನನ ಉಸಿರು ಉಡುಗಿತ್ತು” ಎಂಬ ಗಾದೆ ನಮ್ಮ ನಿತ್ಯ ಜೀವನದಲ್ಲಿನ ಇನ್ನಿತರ ವಿಷಯಗಳಿಗೂ ಅನ್ವಯಿಸುತ್ತದೆ. ಇದೇ ಸಂದರ್ಭದಲ್ಲಿ ನನ್ನ ಪರಿಚಿತ ಅವಿವಾಹಿತರೊಬ್ಬರ ತೊಳಲಾಟ ನೆನಪಿಗೆ ಬರುತ್ತಿದೆ. ಆತ ಕೇಂದ್ರ ಸರ್ಕಾರದ ಉದ್ಯೋಗಿ. ಸರಳ, ಸುಖ ಜೀವನಕ್ಕೆ ಸಾಕಾಗುವಷ್ಟು ಸಂಬಳವಿತ್ತು. ಯೌವನದಲ್ಲಿ ಮದುವೆಯಾಗಲಿಲ್ಲ, ಇದಕ್ಕೆ ಕಾರಣ ಆತ ಇಂದು ತಿಳಿಸದೆ, ಏನೋ, ಅದೆಲ್ಲಾ ಮುಗಿದುಹೋದ ಕಥೆ ಅಂತಾರೆ. ಹಾಗೆಂದು ನೆಮ್ಮದಿಯಾಗಿಯೂ ಇರಲಾರ. ಆಪ್ತರು ಸಿಕ್ಕಿದಾಗ, ನೋಡಿ ಇವರೇ ! ನನ್ನ ಪಡಿಪಾಟಲು ! ಜೀವನಕ್ಕೆ ಸಾಕು ಎನ್ನುವಷ್ಟು  ಪಿಂಚಣೆ ರ‍್ತಿದೆ. ಆದರೇನು !  ಹೊರಗೋಗಿ ಮನೆಗೆ ¨ಂದಾಗ, ಬಂದ್ರಾ !  ಬನ್ನಿ, ಕುಡೀರಿ ಅಂತಾ ಲೋಟ ನೀರೋ ಕಾಫಿಯೋ ಕೊಡಲು ಮನೇಲಿ ಹೆಂಗಸಿಲ್ಲ, ನನ್ನ ಕಷ್ಟ ನಷ್ಟದ ವಿಷಯ ಸಮಾಧಾನದಿಂದ ಕೇಳಿ, ಅಯ್ಯೋ ಇಷ್ಟೇನಾ ! ಚಿಂತಿಸಬೇಡಿ, ಹೀಗೆ ಮಾಡಿ ಎಲ್ಲಾ ಸರಿಹೋಗುತ್ತೆ ಅಂತಾ ಸಲಹೆ ನೀಡಿ ಧೈರ್ಯ ತುಂಬೋ ಒಂದು ಸಹಜೀವಿ ಮನೇಲಿಲ್ಲ, ಕಾಯಿಲೆ ಅಂತಾ ಹಾಸಿಗೆ ಹಿಡಿದರೆ ಇವರು ನನ್ನವರು ಅಂತಾ ಕಕ್ಕುಲತೆಯಿಂದ ಔಷಧಿ ಕುಡಿಸಿ ಆರೈಕೆ ಮಾಡುವರಿಲ್ಲ. ಏನಿದೆ ಈ ಜೀವಕ್ಕೆ ಸುಖ ! ಅಂತಾ ನಿಟ್ಟುಸಿರಿಡ್ತಾರೆ ಈತ. ಈತನ ಈ ಭವಣೆಗೆ ಕಾರಣ ಏನೇ ಇರಲಿ,  ಯಾರೇ ಇರಲಿ, ಭವಿಷ್ಯ ಕುರಿತು ಚಿಂತಿಸಿ, ತನಗೆ ಸರಿಹೊಂದುವ ಕನ್ಯೆಯನ್ನು ಸಕಾಲದಲ್ಲಿ ವಿವಾಹವಾಗದೆ, ನನಗ್ಯಾರೂ ಇಲ್ಲ, ನನ್ನವರಾರೂ ಇಲ್ಲ ಎಂದು ಈ ಇಳಿವಯಸ್ಸಿನಲ್ಲಿ ಪೇಚಾಡಿದರೇನು ಪ್ರಯೋಜನ ?  ಅಂದು ವಿವಾಹವಾಗಬೇಕಿತ್ತು ಎಂದು ತಲೆ ತುರಿಸಿಕೊಳ್ಳುವ ಇಂದಿನ ಈತನಿಗೆ ಜ್ಞಾನೋದಯವಾಗುವ ವೇಳೆಗೆ ಈತನ ಉಸಿರು ಉಡುಗುವ ಸಮಯವಾಗಿದೆ. ಎಂದೋ ಮಾಡಬೇಕಿದ್ದ ಕೆಲಸ ಅಂದೇ ಮಾಡದೆ ಇಂದು ಪಶ್ಚಾತ್ತಾಪ ಪಟ್ಟೇನು ಪ್ರಯೋಜನ ! ಚೆಲ್ಲಿದ ಹಾಲಿಗೆ ಅತ್ತೇನು ಪ್ರಯೋಜನ ? ಎಂಬ ಗಾದೆಯಂತಾಗುತ್ತದೆ ಈ ವಿಷಯ.

ಹೀಗೇನೇ ಆಧ್ಯಾತ್ಮಿಕದ ವಿಚಾರ. ‘ಅಧ್ಯಾತ್ಮ’ ಎಂಬ ಪದ ಕೇಳಿದ ಕೂಡಲೇ ಏ, ಅದೆಲ್ಲಾ ಸೇವೆಯಿಂದ ನಿವೃತ್ತರಾದ ಮೇಲೆ ಮಾತನಾಡಬೇಕಾದ್ದು, ಇಂದಲ್ಲ, ಇಂದೇನಿದ್ದರೂ ಲೌಕಿಕ ವಿಷಯಗಳಷ್ಟೇ  ಚಿಂತಿಸಬೇಕಾದ್ದು ಅಂತಾರೆ ಹಲವರು. ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ‘ ಎಂಬ ಗಾದೆಯಂತೆ, ಯೋಗ, ದೇವರ ಸ್ಮರಣೆ, ಧ್ಯಾನ, ಜಪ, ಪೂಜೆ, ಇಂದ್ರಿಯ ನಿಯಂತ್ರಣ ಮೊದಲಾದುವನ್ನು ಸಣ್ಣ ವಯಸ್ಸಿನಿಂದಲೂ ಅಭ್ಯಾಸ ಮಾಡದೆ, ಇಳಿ ವಯಸ್ಸಾದ ಮೇಲೆ, ನಟ್ಟು ಬೋಲ್ಟೆಲ್ಲಾ ಸಡಿಲವಾಗಿ : ಶಿಥಿಲವಾಗಿ, ಶರೀರ ಹಲವು ರೋಗಗಳ ಬೀಡಾದಾಗ, ಇಂದ್ರಿಯಗಳು ನಮ್ಮ ವಶದಲ್ಲಿರದೆ, ಯಾವ ಘಳಿಗೆಯಲ್ಲಿ, ಯಾವ ರೂಪದಲ್ಲಿ ಮರಣ ನಮ್ಮ ಮೇಲೆ ಎರಗುವುದೋ ಎಂಬ ಭಯ, ಚಿಂತೆಯಲ್ಲೇ ಮನ ಪೂರ್ತಿ ಮುಳುಗಿರುವಾಗ ಭಗವಂತನ ಸ್ಮರಣೆಗೆ ಮನವನ್ನು ಸಿದ್ಧಪಡಿಸಲು ಸಾಧ್ಯವೇ ?  ಯಾವುದೇ ಅಭ್ಯಾಸ, ಅದು ಒಳ್ಳೆಯದೋ, ಕೆಟ್ಟದ್ದೋ, ಬಾಲ್ಯದಿಂದಲೂ ಮುಂದುವರಿಸಿಕೊಂಡು ಬಂದರೆ, ಅದು ಕಡೆಯವರೆಗೂ ನಮ್ಮಲ್ಲಿ ದೃಢವಾಗಿ ನಿಲ್ಲಬಲ್ಲದಾದ ಕಾರಣ, ನಮ್ಮ ನಿತ್ಯ ಕರ್ಮಗಳ ಮಧ್ಯೆಯೂ ಭಗವಂತನ ನಾಮ ಸ್ಮರಣೆಮಾಡುವುದನ್ನು ಸಣ್ಣ ವಯಸ್ಸಿನಿಂದಲೇ ನಾವು ಕಲಿಯಬೇಕು. ಮಾಡಬೇಕಾದ ಕೆಲಸವನ್ನು ನಿಗದಿತ ಕಾಲದಲ್ಲಿ ಮಾಡದೆ, ಅಂತ್ಯಕಾಲದಲ್ಲಿ ನನ್ನದು ಸಾರ್ಥಕ ಜೀವನವಾಗಲಿಲ್ಲ ಎಂದು ಪೇಚಾಡಿದರೇನು ಫಲ ? ಇದೇ ಸಂದರ್ಭದಲ್ಲಿ ‘ಗಾಳಿ ಬಂದಾಗ ತೂರಿಕೋ. ಬೀಟ್ ದಿ ಐರನ್ ವೈಲ್ ಇಟೀಸ್ ಹಾಟ್, ಎಂಬ ರೂಢಿಗತ ಗಾದೆಗಳು ನಮಗೆ ಸಕಾಲಿಕ ಮಾರ್ಗದರ್ಶನ ನೀಡುತ್ತವೆ.

Comments