ಬದುಕ ದೀಕ್ಷೆ...

 ಬದುಕ ದೀಕ್ಷೆ... 

ಲೇಖನ  -  ಶ್ರೀಮತಿ ಮಂಜುಳಾ ಡಿ

     ಬಸ್ಸು ರಭಸವಾಗಿ ಶೀತಲ ಗಾಳಿಯನ್ನು ಸೀಳಿ ಸಾಗುತ್ತಿತ್ತು. ಮುಂಜಾವಿನ ಎಳೆಬಿಸಿಲು. ಆಗಷ್ಟೇ ಎಚ್ಚರವಾಗಿ, ಬಸ್ಸಿನ  ದೊಡ್ಡ ಗಾಜಿನ ಕಿಟಕಿಯ ಪರದೆಯನ್ನು ತುಸುವೇ ಸರಿಸಿ, ಸಾಗುವ ದೃಶ್ಯಾವಳಿಯನ್ನು ದಿಟ್ಟಿಸುತ್ತಾ ಕೂತೆ. ಅರೆ! ತಿಳಿದ ಊರು ಇದು ಎಂಬುದು ಹೊಳೆದ ಕೂಡಲೇ, ಮಿದುಳಿನ ಕೋಶಗಳು ಸಕ್ರಿಯವಾದವು. ಹಾಯುತ್ತಿದ್ದ ಕಟ್ಟಡಗಳು ನೆನಪಿನ‌ ಕೋಶಗಳನ್ನು ಜಾಗೃತಗೊಳಿಸುತ್ತಿದ್ದವು. ಅನತಿ ದೂರದಲ್ಲಿಯೇ ‘ಹಿರಿಯ ಪ್ರಾಥಮಿಕ ಪಾಠಶಾಲೆ’ ಎಂಬ ಕಾಮನಬಿಲ್ಲಿನಾಕಾರದ ತುಸು ಮಾಸಿದ ಬೋರ್ಡ ಕಂಡ ಕ್ಷಣ, ಆ ಶಾಲೆಯ ಸ್ಥಳದಿಂದ ಜರುಗಿದ ಎಂದೂ ಮಾಸದ ಹಲವಾರು ಕಥೆಗಳು ಮತ್ತೆ ತೇಲಿ ಬಂದವು. 


  ಆ ಹಳ್ಳಿಯ ದೂರದೃಷ್ಟಿಯುಳ್ಳ ಹಿರಿಯರೊಬ್ಬರು ಆ ಕಾಲಕ್ಕೆ ಅಂದರೆ ನಾಲ್ಕು ದಶಕಗಳ ಹಿಂದೆ, ತೀವ್ರತರ ಹೋರಾಟ ಮತ್ತು ಪ್ರಯತ್ನದಿಂದ ಆ ಊರಿನಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಂತರದ ದಿನಗಳಲ್ಲಿ ಪ್ರೌಢಶಾಲೆ ಆರಂಭವಾಗಲು ಕಾರಣಕರ್ಥರು. ಊರಿನ ಮುಖ್ಯಸ್ಥರಾದ ಅವರ ಕಾಳಜಿ ಇಡೀ ಊರಿನ ಬಗ್ಗೆ ಎಷ್ಟರಮಟ್ಟಿಗೆ ಇತ್ತೆಂದರೆ, ಶಾಲೆ ಆರಂಭಿಸಲು  ತಮ್ಮ ಸ್ವಂತದ ಜಮೀನಿನಲ್ಲಿ 4.30 ಎಕರೆ ಜಮೀನನ್ನು ದಾನವಾಗಿ  ಬರೆದುಕೊಟ್ಟಿದ್ದರು. ಅವರ ಸತತ ಹೋರಾಟದಿಂದ ಶಾಲೆ ಆರಂಭವಾಗಿ ಸಹಸ್ರಾರು ಮಕ್ಕಳು ಅದೇ ಶಾಲೆಯಲ್ಲಿ ಕಲಿತರು. ಹೀಗೆ ಕಲಿತ  ಮಕ್ಕಳು ಇಂದು ಹಳ್ಳಿಗೆ ಬಂದಾಗಲೆಲ್ಲಾ ಆ ಶಾಲೆಗೆ ಭೇಟಿ ನೀಡಿ ಆಪ್ತತೆಯಿಂದ ಹೋಗುತ್ತಾರೆ. ಸಹಸ್ರಗಳ ಜನರ ಲೆಕ್ಕದಲ್ಲಿ ಆ ಶಾಲೆ ವಿದ್ಯಾರ್ಥಿಗಳಿಗೆ ಬದುಕಿನ‌ ದೀಕ್ಷೆ ಕಲ್ಪಿಸಿದೆ. ತದನಂತರದ ದಿನಗಳಲ್ಲಿ ಪ್ರೌಢಶಾಲೆ ಆರಂಭವಾಗಿ ಆಟ-ಪಾಟ ಎಲ್ಲದರಲ್ಲೂ ಶಾಲೆ ಹೆಮ್ಮರವಾಗಿ ನಿಂತಿದೆ.

   ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಆ ಗ್ರಾಮದಲ್ಲಿ ಇಂದು  ಜಮೀನಿನ ಬೆಲೆಗಳು ಆಗಸಕ್ಕೇರಿವೆ. ಶಾಲೆಗೆ ಜಮೀನು ನೀಡಿದ ಆ ಮಹನೀಯರ ವಾರಸುದಾರರು, "ತಮ್ಮ ತಂದೆ ಅಸ್ವಸ್ಥ ಮನಸ್ಥಿತಿಯಲ್ಲಿ ಜಮೀನು ದಾನ ಮಾಡಿದ್ದು, ತಮಗೆ ತಿಳಿದಿಲ್ಲವೆಂದೂ, ಶಾಲೆಯ ಸುತ್ತಾ ಉಳಿದಿರುವ ಆಟದ ಮೈದಾನದ  ಜಮೀನು ತಮ್ಮ ಹಕ್ಕು" ಎಂದು ದಾವೆ ಹೂಡಿದ್ದಾರೆ!? ಚಿಕ್ಕದಾಗಿ ಹೊತ್ತಿದ ಈ ಕಿಡಿ ಇಡೀ ಊರನ್ನು ಸುಡುವ ಮಟ್ಟಕ್ಕೆ ಬೆಳೆಯಲು ಸಮಯವೇನೂ ಬೇಕಾಗಲಿಲ್ಲ! ಶಾಲೆಯ ಸ್ಥಳ ಅವರದ್ದು-ಸರ್ಕಾರದ್ದು ಎನ್ನುವ ಎರಡು ಬಣಗಳಲ್ಲದೇ ಎರಡೂ ಬಣಗಳೊಂದಿಗೆ ಚನ್ನಾಗಿರುವ ಮೂರನೇ ಬಣ ಹೀಗೆ ಇಡೀ ಉರು ಮೂರು ಬಣಗಳಾಗಿ ಮಾರ್ಪಟ್ಟು ಹೊಡೆದಾಟಗಳಾಗಿ ಶಾಲಾ ಕಾಂಪೌಂಡಿನ ಮೇಲೆ ರಕ್ತದ ಕಲೆಗಳು ಎಂದೂ ಮಾಸದ ಕಥೆಗಳಾಗಿ ಉಳಿದಿವೆ.

      ಇದು ಒಂದು ಹಳ್ಳಿಯ ಕಥೆಯಲ್ಲ. ಅಚ್ಚರಿಯೆಂದರೆ, ಸಹಸ್ರಾರು ಶಾಲೆ, ಆಸ್ಪತ್ರೆಗಳು, ಧರ್ಮಛತ್ರಗಳು,  ಹೀಗೆ ನಮ್ಮ ಹಿರಿಯರು ಸರ್ವಜನಿಕ ಉದ್ದೇಶಕ್ಕಾಗಿ ದಾನವಾಗಿ ನೀಡಿದ ಜಮೀನಿನಲ್ಲೇ. ಅಂದಿನಿಂದಲೂ ಲಕ್ಷಾಂತರ ಜನರಿಗೆ ಬದುಕು ಕಲ್ಪಿಸಿರುವುದು. 

ಆದರೆ! ಹೀಗೆ ಸಾರ್ವಜನಿಕ ಉದ್ದೇಶಕ್ಕಾಗಿ ತಮ್ಮ ಸ್ವಂತದ ಜಮೀನು ಕೊಡುಗೆ ನೀಡುವ ಆ ಹಿರಿಯರ ಹೃದಯ ವೈಶಾಲ್ಯತೆ ಮಾನವೀಯ ಕಾಳಜಿ, ಸ್ವಾರ್ಥಕ್ಕಾಗಿ ಮನುಷ್ಯ ಮನುಷ್ಯನನ್ನು ಜೀವಂತ ಸಮಾಧೀ ಮಾಡಿ ಅದರ ಮೇಲೆ ಬದುಕುವ ಈ ಕಾಲದ ನಮಗೆ ಎಂದೆಂದಿಗೂ ಅರ್ಥಕ್ಕೆ ಸಿಗಲಾರದೇನೋ.

    ಹೀಗೆ ಲಕ್ಷಾಂತರ ಎಕರೆ ಜಮೀನು ಭೂರಹಿತರಿಗಾಗಿ ಅದೂ ಭೂಮಿ ದಾನವಾಗಿ ದೊರೆತಿದೆ ಎಂದರೆ!? ಅದೊಂದು ದಿಗ್ಬ್ರಮೆಯೆ ಸರಿ.

    ಅದೊಂದು ತುಂಬಿದ ಸಭಾಂಗಣ, ಭಾಷಣ ಮಾಡುತ್ತಿದ್ದ ಮಹನೀಯನ ಮಾತುಗಳು ವಿದ್ಯುತ್ ತರಂಗಗಳಂತೆ ನೆರೆದಿದ್ದವರ ಪ್ರವಹಿಸುತ್ತಿದ್ದವು. ಇಷ್ಟಕ್ಕೂ ಆತ ಹೇಳುತ್ತಿದ್ದ ಮಾತುಗಳಾದರೂ ಏನು?

         ‘ದೊಡ್ಡ-ಹಿರಿಯ ಜಮೀನ್ದಾರರು, ಜಮೀನು ದಾನ ಮಾಡಬೇಕು, ಮತ್ತು ಹೀಗೆ ಜಮೀನು ನೀಡುವುದನ್ನು ಯಾವುದೇ ಕಾರಣಕ್ಕೂ ತಾವು ಮಾಡುತ್ತಿದ್ದೇವೆ ಎಂಬ ಭಾವದಿಂದ ಮಾಡಕೂಡದು, ದುಡಿಯುವ ಕೈಗಳಿಗೆ ನೀಡುತ್ತಿರುವ ದೀಕ್ಷೆ ಎಂಬ ಭಾವದಿಂದ ಮಾಡಬೇಕು’ ಎಂಬುದಾಗಿ ಭಾಷಣ ಮಾಡಿದರು  ಎನ್ನುದಕ್ಕಿಂತ ಬೋದಿಸಿದರು  ಎಂದರೆ ಸೂಕ್ತ.

    ಅದೇ ತುಂಬಿದ ಸಭೆಯಿಂದ ಎದ್ದ ಶ್ರೀ ರಾಮಚಂದ್ರ ರೆಡ್ಡಿ ಎಂಬಾಂತ ತನಗಿದ್ದ ಜಮೀನಿನಲ್ಲಿ 100 ಎಕರೆ ದಾನವಾಗಿ ನೀಡುವುದಾಗಿ ಘೋಷಿಸಿದ. ಈ ಘೋಷಣೆಯಿಂದ ಇಡೀ ಸಭಾಂಗಣ ಮತ್ತು ಖುದ್ದು ಬೋದಿಸುತ್ತಿದ್ದ ಮಹನೀಯ ಸ್ಥಂಭೀಭೂತರಾಗಿ ಹೋದರು. ಅದೊಂದು ಮಿಂಚಿನ  ಸಂಚಾರದ ಗಳಿಗೆ, ಕೋಟ್ಯಾಂತರ ಭೂರಹಿತರಿಗೆ ಆಶಯ ಕಲ್ಪಿಸಿದ ಗಳಿಗೆ, ಇತಿಹಾಸದಲ್ಲಿ ದೊಡ್ಡ ಪರ್ವವೊಂದಕ್ಕೆ ಮೊದಲ ಮಿಂಚಿನ ಹೆಜ್ಜೆ.

ಅದೇ ವಿನೋಬಾ ಬಾವೆಯವರ ಭೂದಾನ ಚಳುವಳಿಯ ಮೊದಲ ಸಭೆ!  ಹಾಗಾದರೆ, ಇಂತಹ ಐತಿಹಾಸಿಕ ಚಳುವಳಿಗೆ ಮುನ್ನುಡಿ ಬರೆದದ್ದು,  ವಿನೋಬಾ ಬಾವೆಯವರ ನಿಷ್ಕಲ್ಮಷ, ಸೇವಾ ಭಾವವಾ!? ಆಗಿನ ಜನಮಾನಸದಲ್ಲಿ ಇನ್ನು ಜೀವಂತವಿದ್ದ ಸಹಜ ಮಾನವೀಯ ಕಳಕಳಿಯಾ!?  ಅಥವಾ ಅರೆಗಳಿಗೆ ಕೂಡ ಯೋಚಿಸದೇ, ತನ್ನದಾಗಿದ್ದ 100 ಎಕರೆಯನ್ನು ದಾನ ಮಾಡಿ ಲಕ್ಷಾಂತರ ಮಂದಿಗೆ ಬದುಕು ಕಲ್ಪಿಸುವ ಸಂಕಲ್ಪವೊಂದಕ್ಕೆ ಮುನ್ನುಡಿ ಬರೆದ ರಾಮಚಂದ್ರ ರೆಡ್ಡಿಯವರದ್ದಾ!!!

  ಇದನ್ನು ಅರಿಯುತ್ತಿದ್ದಂತೆ ಮನುಷ್ಯರು ಇಷ್ಟು ದೊಡ್ಡ ಮನಸ್ನಿನವರಾಗಿರುವುದು ಸಾಧ್ಯವಾ...ಎಂಬ ಪ್ರಶ್ನೆ ಭೂತಾಕಾರವಾಗಿ ನಿಂತಿತು.

    ಮೇಲಿನ ಘಟನೆ ನಡೆದದ್ದು 1951 ಏಪ್ರಿಲ್ 18 ರಂದು. ಆಂಧ್ರದ ತೆಲಂಗಾಣ ಪ್ರದೇಶದ 700 ಕುಟುಂಬಗಳಿದ್ದ ಪೂಚಂಪಲ್ಲಿ ಎಂಬ ಗ್ರಾಮದಲ್ಲಿ. ಗಾಂಧಿಜಿಯವರ ಕಟ್ಟಾ ಅನುಯಾಯಿ, ಅವರ ಅಹಿಂಸಾ ತತ್ವಗಳನ್ನಾಧರಿಸಿಯೇ ಬದುಕಿದ ಸಂತ ವಿನೋಬಾ ಬಾವೆಯವರು ನೇತೃತ್ವದಲ್ಲಿ.

ವಿನೋಬಾ ಬಾವೆಯವರು ಜನಿಸಿದ್ದು 1895 ಸೆಪ್ಟಂಬರ್ 11 ರಂದು, ಮಹಾರಾಷ್ಟ್ರಾದ  ಕೋಲಬಾ ಜಿಲ್ಲೆಯ ಗಾಗೋದೆ ಎಂಬಲ್ಲಿ. ಬಾಲ್ಯದಲ್ಲೇ ಎಲ್ಲಾ ಧರ್ಮಗಳ ಸಾರವನ್ನು ಅರಗಿಸಿಕೊಂಡಿದ್ದರು. ಸಂತನಂತೆ ಬದುಕಿದ ಬಾವೆಯವರ ಅಂತಃಸತ್ವ ಬಹಳ ಪ್ರಭಾವಶಾಲಿಯಾಗಿತ್ತು. 1960 ರಲ್ಲಿ ಚಂಬಲ್ ಕಣಿವೆಯ ಡಕಾಯಿತರು, 1972 ರಲ್ಲಿ ವಿವಿಧ ವಿಭಾಗದ ಡಕಾಯಿತರು ಬಾವೆಯರಿಗೆ ಶರಣು ಬಂದು ಮುಂದಿನ ಬದುಕನ್ನು ಅವರ ಸಹಚರ್ಯದಲ್ಲಿ ಕಳೆದುದು ದೊಡ್ಡ ಉದಾಹರಣೆಯಾಗಿದೆ. ಸಂತ ಬಾವೆಯವರ ಬಗ್ಗೆ ಬರೆಯುವುದು ಅರಿಯುವುದಕ್ಕೆ ಒಂದು ಚಿಕ್ಕ ಲೆಖನ ಖಂಡಿತಾ ಸಾಧ್ಯವಾಗಲಾರದು.

ತೆಲಂಗಾಣದ ಪೂಚಂಪಲ್ಲಿ ಗ್ರಾಮದಲ್ಲಿ “ಭೂದಾನ ಚಳುವಳಿ” ಆರಂಭಗೊಂಡಿತು. ಇಲ್ಲಿ ನಮ್ಮನ್ನು ದಿಗ್ಬ್ರಮೆಗೊಳಿಸುವದು ಭೂದಾನ ಚಳುವಳಿಯ ಮುಂದಿನ  ಹಂತಗಳು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂದಾನವಾಗಿ ದೊರೆಯಿತು.

ಹೈದರಾಬಾದ್ ನ ನಿಜಾಮ ಸೇರಿದಂತೆ, ರಾಜ ಬಹದ್ದೂರ್ ಗಿರಿಧರ್ ನಾರಾಯಣ ಸಿಂಗ್, ರಾಂಕಾದ ರಾಜಾ ... ಹೀಗೆ ಹಲವಾರು ಮಹರಾಜರು ಸಹಸ್ರಾರು ಎಕರೆ ಜಮೀನುಗಳನ್ನು ಈ ಚಳುವಳಿಯ ನಿಮಿತ್ತ  ದಾನವಾಗಿತ್ತರು. 

 ವಿನೋಬಾ ಬಾವೆಯವರು ಒಟ್ಟು 14 ವರ್ಷಗಳಲ್ಲಿ ಒಟ್ಟು 70000ಸಾವಿರ ಕಿ.ಮೀ ದೂರ ನಡೆದು 50 ಲಕ್ಷ ಎಕರೆ ಭೂಮಿಯನ್ನು ಭೂದಾನವಾಗಿ ಪಡೆಯುವಲ್ಲಿ ಮತ್ತು ಅದನ್ನು ಭೂರಹಿತರಿಗೆ ಹಂಚಿ ಅವರಿಗೆ “ಬದುಕ ದೀಕ್ಷೆ” ನೀಡಿದ ಸಂತರಾದರು. 



ನಿಜಕ್ಕೂ ‘ಭೂದಾನ’ ಚಳುವಳಿಯ ಬಗ್ಗೆ ತಿಳಿಯುತ್ತಾ ಹೋದಂತೆ, ದಾನಗಳಲ್ಲಿ ಯಾವುದು ಶ್ರೇಷ್ಠ ಎಂಬ  ಪ್ರಶ್ನೆ ಸಹಜವಾಗಿ ಏಳುತ್ತದೆ. ದಾನದ ಶ್ರೇಷ್ಠತೆ ಕೂಡ ಸ್ಥಳ ಸಮಯ ಆಧರಿಸಿ ನಿರ್ಧಾರವಾಗುತ್ತದೆ. ಅನ್ನದಾನ, ವಿದ್ಯಾದಾನ, ಗೋದಾನ... ಇತ್ಯಾದಿ ಹತ್ತಾರು ಬಗೆಗಳಿವೆ. ಹೀಗೆ ದಾನ ಮಾಡುವಾಗ ಯೋಚಿಸಿ ಅಳೆದು-ತೂಗಿ, ವಿವೇಚಿಸಿ ಮಾಡುವ ದಾನಗಳಿಗೆ ಅರ್ಥ ಬರುವುದಿಲ್ಲ ಎನ್ನುತ್ತದೆ ಶಾಸ್ತ್ರ.  ಆದರೆ ಬಾವೆಯವರ ಭೂದಾನ ಚಳುವಳಿಯಲ್ಲಿ ಭೂಮಿಯನ್ನು ದಾನ ನೀಡಿದವರಿಗೆ ತಮ್ಮ ಭೂಮಿ ಯಾರಿಗೆ ಕೊಡುಗೆಗಾಗಿ ಹೋಗುತ್ತದೆ ಎಂಬ ಕಿಂಚಿತ್ತೂ ತಿಳಿದಿರಲಿಲ್ಲ. ಕೇವಲ ನೀಡುತ್ತಿದ್ದೇವೆ ಎಂಬ ಮನಸ್ಥಿತಿಯಿಂದ ನೀಡಿದವರು. ಭೂದಾನ ಚಳುವಳಿಯ  ಆಳ ಅಗಲ ಅರಿಯುತ್ತಿದ್ದಂತೆ, ಅನ್ನಿಸುವುದು, ಇಡೀ ಒಂದು ಕುಟುಂಬ ಪೋಷಿಸುವ ಮೇಲೆತ್ತುವ “ಭೂದಾನ” ಬರೀ ದಾನವಲ್ಲ, ಇದು ಬದುಕ ದೀಕ್ಷೆ ನಿಡಿದ ದಾನ ಎಂಬುದೇ ಸರಿ. ಸ್ವಯಂ ಪ್ರೇರಿತರಾಗಿ  ಜಮೀನುಗಳನ್ನು ದೇಣೀಗೆ ರೂಪದಲ್ಲಿ ಸ್ವೀಕರಿಸಿ, ನಂತರ ಭೂರಹಿತರಿಗೆ ವಿತರಿಸುವುದು ಚಳುವಳಿಯ ಆರಂಭಿಕ ಉದ್ದೇಶವಾಗಿತ್ತು. ಹೀಗೆ ದಾನ ಪಡೆದ ಜಮೀನನ್ನು ಕೃಷಿ ಹೊರತಾಗಿ ಇನ್ಯಾವುದೇ ಉದ್ದೇಶಗಳಿಗೆ ಬಳಸುವುದಾಗಲೀ-ಮಾರಾಟ ಮಾಡುವುದಾಗಲಿ ಮಾಡಿದರೆ ಅಂತಹ ಜಮೀನನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳುವ ಕಾಯ್ದಿರಿಸಿಕೊಂಡಿತ್ತು.

ಕ್ರಮೇಣ ಭೂದಾನ ಚಳುವಳಿ, “ಗ್ರಾಮ ದಾನ” ಚಳುವಳಿಯಾಗಿ ಮಾರ್ಪಟ್ಟಿತು. ಇಂದಿಗೂ ಭಾರತದ ಏಳು ರಾಜ್ಯಗಳಲ್ಲಿ ಗ್ರಾಮದಾನ ಬೋರ್ಡ್ ಗಳು ಕಾರ್ಯನಿರ್ವಹಿಸುತ್ತಿವೆ.  1960 ರ ನಂತರ ಚಳುವಳಿ ವೇಗ ಕಳೆದುಕೊಂಡಿತು. ಆದರೆ, ಸತತ 14 ವರ್ಷಗಳ ಕಾಲ 70000 ಸಾವಿರ ಕಿ ಮೀ ಪಾದಯಾತ್ರೆ ಮಾಡಿ ಲಕ್ಷಾಂತರ ಕುಟುಂಬಗಳಿಗೆ ಬದುಕ ದೀಕ್ಷೇ ನೀಡಿದ ಈ ಐತಿಹಾಸಿಕ ಚಳುವಳಿ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸುವರ್ಣ ಮುದ್ರೆ ಹಾಕಿತು.

ಸಂಬಂಧಗಳನ್ನು ಕಳಚಿಕೊಳ್ಳುತ್ತಾ ನಿರ್ಮಾನುಷಿಕರಣವನ್ನೇ ಪ್ರಧಾನವಾಗಿಸಿಕೊಂಡ ಆಧುನಿಕ ಪ್ರಜ್ಞೆಯ ಬದುಕು, ಇಂದು ಚಲಿಸುವ ಕಾಲ ಸ್ವಾರ್ಥದ ಚಕ್ರದ ಮೇಲೆ ಆಗಿರುವಾಗ,  ಡೀ-ನೋಟಿಫೀಕೇಷನ್ ಯುಗದಲ್ಲಿರುವ ನಮಗೆ ಇಂಥ  ತಮ್ಮ ಸ್ವಂತದ ಜಮೀನನ್ನೇ ಅಂದರೆ ಆಸ್ತಿಯನ್ನೇ ಇನ್ಯಾರೋ ತಿಳಿಯದವರಿಗಾಗಿ ನೀಡಬಹುದು ಎಂಬುದನ್ನು ಕಲ್ಪನೆಗೂ ನಿಲುಕಲಾರದ ನಮಗೆ 

  "ಭೂದಾನ ಚಳುವಳಿಗಳು”  ಎಂದಿಗೂ ಅರ್ಥವಾಗುವುದು ಕಷ್ಟಸಾಧ್ಯವೇನೋ.


Comments

  1. ಭೂದಾನದ ಪಿತಾಮಹರಾದ ಆಚಾರ್ಯ ವಿನೋಬಾಭಾವೆಯವರ ಪರಿಚಯ ಇಂದಿನ ಜನಕ್ಕೆ ಅಷ್ಟು ತಿಳಿಯದಿದ್ದರೂ, ಸುಮಾರು ಐವತ್ತು ವರ್ಷಗಳ ಹಿಂದೆ ಅವರು ಮನೆಮಾತಾಗಿದ್ದರು. ಭಾವೆಯವರು ಗಾಂಧೀಜಿ ಅವರ ಶಿಷ್ಯರಾಗಿದ್ದರೂ, ಸಂಯಮ, ಬ್ರಹ್ಮಚರ್ಯ ಇತ್ಯಾದಿಗಳಲ್ಲಿ ಅವರನ್ನೂ ಮೀರಿಸಿದ್ದರು! ಅವರು ಮೂಲತಃ ಮಹಾರಾಷ್ಟ್ರದವರು. ಆದರೆ ಅವರಿಗೆ ಕನ್ನಡವನ್ನೂ ಒಳಗೊಂಡಂತೆ ಭಾರತದ ಹಲವಾರು ಭಾಷೆಗಳಲ್ಲಿ ಪ್ರವೀಣತೆಯಿತ್ತು. ಉತ್ತಮ ಲೇಖನವನ್ನು ಬರೆದು ಕೊಟ್ಟಿರುವ ಲೇಖಕಿಯರಿಗೆ ಅಭಿನಂದನೆಗಳು.

    ReplyDelete
  2. ಭೂದಾನ ಚಳುವಳಿ ಮತ್ತಿತರ ವಿಷಯ ನನಗೆ ತಿಳಿದಿರಲಿಲ್ಲ, ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು

    ReplyDelete

Post a Comment