ಮನುಷ್ಯರಿದ್ದಾರಾ ! ಎಲ್ಲಿದ್ದಾರೆ ಅವರು ?....

 ಮನುಷ್ಯರಿದ್ದಾರಾ ! ಎಲ್ಲಿದ್ದಾರೆ ಅವರು ? ಮನುಷ್ಯರೆಂದರೆ ಇವರೇನಾ ! ಅವರಾ ! ?

 ಲೇಖಕರು : ಎಂ ಆರ್ ವೆಂಕಟರಾಮಯ್ಯ 

 


 ‘ಮನುಷ್ಯ’ ಎಂಬ ಮೂರಕ್ಷರದ ಪದಕ್ಕೆ, ಮನುಜ, ಮಾನವ, ನರಮಾನವ, ಮನುಕುಲಕ್ಕೆ ಅರ್ಥಾತ್ ಮನುಷ್ಯ ಜಾತಿಗೆ ಸೇರಿದವನು ಈ ಮನುಷ್ಯ ಎಂಬ ವಿವರಣೆ ಬಳಕೆಯಲ್ಲಿದೆ. ಬ್ರಹ್ಮನ ಹದಿನಾಲ್ಕು ಮಂದಿ ಮಾನಸ ಪುತ್ರರಲ್ಲಿ ಒಬ್ಬನಾದ ಸ್ವಯಂಬು ಮನುವೇ ಈ ಮನುಷ್ಯ ಕುಲದ ಮೂಲ ಪುರುಷ ಎನ್ನಲಾಗಿದೆ. ‘ಮಂಗನಿಂದ ಮಾನವ’ ಎಂದಿದೆ ವಿಜ್ಞಾನದ ವಿಕಾಸವಾದ. ಅಂದರೆ ಆ ಹಂತದಿಂದ  ಇಂದಿನ ಹಂತ ತಲುಪುವವರೆಗೂ ತನ್ನ ಗುಣ, ಸ್ವಭಾವ, ನಡತೆ, ರುಚಿ, ಅಭಿರುಚಿಗಳನ್ನು ತಿದ್ದಿ, ತೀಡಿ, ಪಾಲಿಶ್ ಮಾಡಿಕೊಂಡ ಈ ಮಾನವ, ಇಂದು ‘ನಾಗರಿಕ ‘ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾನೆ. ಮಾನವ ಸಂಘಜೀವಿ, ಅವನು ಒಂಟಿಯಾಗಿ ಇರಲಾರ, ತನ್ನ ಸಹ ಜೀವಿಗಳೊಂದಿಗೆ ಬದುಕು ಬಾಳ್ವೆ ನಡೆಸಬೇಕಾಗಿದೆ. ಈ ಕಾರಣದಿಂದ ಈ ತತ್ವ ನೀತಿಯನ್ನು ಅನುಷ್ಠಾನಗೊಳಿಸಲು ಒರಟುತನವಿಲ್ಲದ, ಮೃದು ಸ್ವಭಾವದ, ಸುಸಂಸ್ಕೃತ, ಸಭ್ಯ, ಸಹ ಜೀವಿಗಳ ಬಗ್ಗೆ ಅನುಕಂಪ, ದಯೆ ಕರುಣೆ, ಸಹಾನುಭೂತಿ, ಧರ್ಮ, ನ್ಯಾಯ ನೀತಿ, ಪ್ರೀತಿ, ಪ್ರೇಮ, ಸಹೃದಯತ್ವ, ಸಹನೆ, ಸೌಜನ್ಯ, ಹಿರಿಯರ ಬಗ್ಗೆ ಮರ್ಯಾದೆ, ಗೌರವನ್ನಿಡುವ ದೈವೀ ಗುಣಗಳನ್ನು ಇವನು ತನ್ನಲ್ಲಿ ಮೈಗೂಡಿಸಿಕೊಂಡಾಗ, ಮಾನವನೆನಿಸಿಕೊಳ್ಳುವನು. ಸಹ ಜೀವನ ನಡೆಸಲು ‘ಲಿವ್ ಅಂಡ್ ಲೆಟ್ ಲಿವ್ ‘ ತಾನೂ ಬದುಕಿ, ಇತರರನ್ನೂ ಬದುಕಲು ಇವನು ಅವಕಾಶ ಮಾಡಿಕೊಡಬೇಕು. ‘ಸರ್ವೇ ಜನಾಃ ಸುಖನೋ ಭವಂತು’ಎಂಬುದು ಇವನ ನಿತ್ಯ ಮಂತ್ರವಾಗಿರಬೇಕು.

ಇಷ್ಟೆಲ್ಲಾ ಗುಣ, ಸ್ವಭಾವಗಳನ್ನು ಪ್ರತಿ ಮನುಷ್ಯನೂ ಹೊಂದಿರಬೇಕೇ ? ಅದು ಸಾಧ್ಯವೇ ? ಎಂದಿರಾ ! ಅಸಾಧ್ಯವೆಂಬುದು ಮನುಷ್ಯನ ನಿಘಂಟಿನಲ್ಲಿ ಇಲ್ಲ. ಮನುಷ್ಯನಂತೆ ವರ್ತಿಸದಿದ್ದರೆ ಇವನು ‘ಪಶು ಸಮಾನ ‘ ಎನಿಸಿಕೊಳ್ಳುತ್ತಾನೆ. ಮನುಷ್ಯನಿಗೂ ಪಶುವಿಗೂ ಇರುವ ಮೂಲ ಭೂತ ವ್ಯತ್ಯಾಸವೆಂದರೆ, ಮನುಷ್ಯ ಬುದ್ಧಿ ಜೀವಿ, ‘ಉದ್ದರೇತಾತ್ಮನಾತ್ಮಾನಾಮ್ ‘ ಎಂಬ ಗೀತಾ ವಾಕ್ಯದಂತೆ ತನ್ನ ಉದ್ದಾರವನ್ನು ತಾನೇ ಸಾಧಿಸಬಲ್ಲ ಶಕ್ತಿ, ಸಾಮರ್ಥ್ಯವನ್ನು ಹೊಂದಿರುವವನು. ತಾನು ಮನುಷ್ಯನಾಗಿದ್ದಾನೋ, ಪಶು ಸಮಾನನಾಗಿದ್ದಾನೋ ಎಂಬ ಬಗ್ಗೆ ವ್ಯಕ್ತಿ ತನ್ನನ್ನು ಕುರಿತು ತಾನೇ ಕೂಲಂಕಶವಾಗಿ ವಿಮರ್ಶಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕಾತ್ತದೆ. ಈ ಸ್ವ ವಿಮರ್ಶೆ ಎಂತಹುದು ಎಂದರೆ, “ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತ ಮಾತ್ಮನ ಃ | ಕಿಂ ನು ಮೇ ಪಶುಭಿಃüಸುಲ್ಯಂ ಕಿಂ ನು ಸತ್ಪುರುಷೈರಿತಿ” ಎಂಬ ಮಾರ್ಗದರ್ಶನ ನೀಡಿದ್ದಾರೆ ಅಧ್ಯಾತ್ಮಿಗಳು. ಪ್ರತಿ ದಿನವೂ, ತನ್ನ ಶರೀರ ಪೋಷಣೆಗಾಗಿ ಕಾಲ ಕಾಲಕ್ಕೆ ಸರಿಯಾಗಿ ತಿಂಡಿ, ಊಟ, ಅಲಂಕಾರ, ಮನರಂಜನೆ, ನಿದ್ರೆ, ಇತ್ಯಾದಿಗಳ ಕಡೆ ತಪ್ಪದೆ ಗಮನ ಕೊಟ್ಟಂತೆ, ದಿನದ ಕೊನೆಯಲ್ಲಿ ಅಲ್ಪ ಕಾಲವಾದರೂ ಅಂದಿನ ತನ್ನ ವ್ಯವಹಾರಗಳಲ್ಲಿನ ವರ್ತನೆ, ನಡವಳಿಕೆ, ಆದ ಸರಿ ತಪ್ಪುಗಳೇನು, ತಾನು ಒಬ್ಬ ಸತ್ಪುರುಷನಂತೆ ವರ್ತಿಸಿರುವೆನೆ ಅಥವಾ ಪಶುವಿನಂತೆ ನಡೆದುಕೊಂಡೆನೆ ? ಎಂಬುವನ್ನು ಪೂರ್ವಾಗ್ರಹ ಪೀಡಿತನಾಗದೆ, ಬಲು ಎಚ್ಚರಿಕೆ, ಪ್ರಾಮಾಣಿಕತೆಯಿಂದ ತನಗೆ ತಾನೇ ಒರೆಹಚ್ಚಿ ವಿಮರ್ಶೆ : ತುಲನೆ ಮಾಡಿಕೊಳ್ಳುತ್ತಿರಬೇಕು. ಇಲ್ಲಿ ಪಶು ಸಮಾನವೆಂದರೆ, ಪಶುಗಳು ಭಯಸುವ ದೈಹಿಕ ಸುಖ, ಅನ್ಯಾಯ, ಹಿಂಸೆಗಳನ್ನೇ ನಾವೂ ಬಯಸಿದೆವೆ ? ಅಥವಾ ಪಾರಲೌಕಿಕ್ಕೆ ಅಗತ್ಯವಾದ ಪ್ರೀತಿ, ದಯೆ, ಅಹಿಂಸೆ ಇತ್ಯಾದಿ ದೈವೀ ಗುಣಗಳನ್ನು ಬೆಳೆಸಿಕೊಂಡಿದ್ದೇವೆಯೇ ಎಂಬುದರ ಅವಲೋಕನೆ. 

 ಏಕೆಂದರೆ,

 “ಜಂತೂನಾ ನರಜನ್ಮಂ ದುರ್ಲಭಂ, ದುರ್ಲಭಂ ತ್ರಯಮೇವೈತದ್ದೇವಾನುಗ್ರಹ ಹೇತುಕಮ್ | ಮನುಷ್ಯತ್ವಂ ಮುಮುಕ್ಷತ್ವಂ ಮಹಾಪುರುಷ ಸಂಶ್ರಯಃ” 

ಮನುಷ್ಯ ಜನ್ಮ ಸಿಗುವುದು ಬಹಳ ಕಷ್ಟ , ಮನುಷ್ಯತ್ವ, ಮೋಕ್ಷವನ್ನು ಪಡೆಯಬೇಕೆಂಬ ಉತ್ಕಟೇಕ್ಷೆ ಮತ್ತು ಮಹಾಪುರುಷರ ಆಶ್ರಯ ಇವು ಮೂರೂ ಪಡೆಯಲು ಕಷ್ಟ ಸಾಧ್ಯವಾದುವು. ಅವು ಭಗವಂತನ ಅನುಗ್ರಹದಿಂದ ಮಾತ್ರ ದೊರೆಯುವಂತಹವು ಎಂದಿದ್ದಾರೆ ಶ್ರೀ ಶ್ರೀ ಶಂಕರಾಚಾರ್ಯರು ವಿವೇಕ ಚೂಡಾಮಣಿಯಲ್ಲಿ. ಹೀಗೆ ಮನುಷ್ಯನಾಗಿ ಜನಿಸಿದ ಮೇಲೆ, ನಾವು ಮನುಷ್ಯರಂತೇನೇ ವರ್ತಿಸಬೇಕೇ ವಿನಃ ಪಶುಗಳಂತಾಗಬಾರದು. ಏಕೆಂದರೆ, ಸೃಷ್ಠಿಯಲ್ಲಿನ ಮತ್ಯಾವ ಜೀವಿಗೂ ನೀಡದಿರುವ ಅಮೂಲ್ಯ ವರಗಳಾಗಿ ಬುದ್ಧಿ, ವಿವೇಕ, ವಿವೇಚನೆಗಳೆಂಬ ಸದ್ಗುಣಗಳನ್ನು ದೇವರು ಮನುಷ್ಯನಿಗೆ ನೀಡಿದ್ದಾನೆ. ನಮ್ಮಿಂದ ಇವುಗಳ ಸದ್ಬಳಕೆಯಾಗಬೇಕೇ ವಿನಹಾ ದುರ್ಬಳಕೆಯಾಗಬಾರದು. 

ಇದುವರೆಗೂ ಮನುಷ್ಯ,ನಲ್ಲಿರಬೇಕಾದ ಸದ್ಗುಣಗಳು-ಇವನಿಗೂ ಪಶುವಿಗೂ ಇರುವ ಮುಖ್ಯ ವ್ಯತ್ಯಾಸಗಳನ್ನು ತಿಳಿದೆವು. ’ಮನುಷ್ಯ, ನಾಗರಿಕ’ ಎನಿಸಿಕೊಂಡವ ಹೇಗಿರಬೇಕು ಎಂಬ ಬಗ್ಗೆ ಸ್ಥೂಲ ಪರಿಚಯವನ್ನೂ ಪಡೆದೆವು. ಈ ಹಿನ್ನೆಲೆಯಲ್ಲಿ, ನಮ್ಮೀ ‘ಕಲ್ಪನೆಯ ಮನುಷ್ಯ’ ಇಂದಿದ್ದಾನೆಯೇ ! ಇಲ್ಲದಿದ್ದರೆ ಇಂದಿನ ಮಾನವ ಹೇಗಿದ್ದಾನೆ ? ಎಂಬ ಬಗ್ಗೆ ತಿಳಿಯೋಣ. 

ಇಂದೆಲ್ಲಾ ಹೆಚ್ಚಿನ ಮಟ್ಟದ ಶೋಷಣೆಗೆ, ದೌರ್ಜನ್ಯಕೆ ಒಳಗಾಗುತ್ತಿರುವವರು ಮಕ್ಕಳು, ಸ್ತ್ರೀಯರು, ವೃದ್ದರು. ಮೊದಲು ಮಕ್ಕಳ ಪ್ರಸಂಗವನ್ನೇ ಗಮನಿಸೊಣ. ‘ಮಕ್ಕಳು ದೇವರ ಸಮಾನ, ಅವರು ಮೋಸ ವಂಚನೆ ಅರಿಯದವರು’ ಎಂಬ ಮಾತು ನಮ್ಮಲ್ಲಿ ಬಹು ಹಿಂದಿನಿಂದಲೂ ಬಳಕೆಯಲ್ಲಿದೆ. ಮಾತಾ ಪಿತರು, ಪೋಷಕರು, ಮಕ್ಕಳನ್ನು ಶಾಲೆಗೆ ಕಳುಹಿಸುವುದು ವಿದ್ಯೆ ಕಲಿಯಲೆಂದು. ಸರ್ಕಾರ ಉಪಾಧ್ಯಾಯರನ್ನು ನೇಮಿಸಿ ಸಂಬಳ ಕೊಡುವುದು ಅವರು ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಲಿ ಎಂದು, ಇಂತಹಾ ಧ್ಯೇಯ, ಗುರಿ ಸಾಧನೆಗಾಗಿ ನೇಮಕವಾದ ಉಪಾಧ್ಯಾಯರ ಪೈಕಿ ಬಹಳಷ್ಟು ಮಂದಿ ಮಕ್ಕಳನ್ನು ಹೇಗೆ ಟ್ರೀಟ್ ಮಾಡ್ತಿದ್ದಾರೆ ? ಇಲ್ಲಿದೆ ನೋಡಿ, ಕೆಲವು ಸ್ಯಾಂಪಲ್‌ಗಳು : ‘ಕ್ಯಾಪಿಟಲ್ ಪನಿಶ್‌ಮೆಂಟ್ ಅನ್ನು ಸರ್ವೋಚ್ಛ ನ್ಯಾಯಲಯವೇ ರದ್ದು ಮಾಡಿ, ಇಂತಹಾ ಅಮಾನವೀಯ ವರ್ತನೆಯಲ್ಲಿ ತೊಡಗಿದವರನ್ನು ಕಠಿಣವಾಗಿ ಶಿಕ್ಷಿಸಬೇಕೆಂದು ನೇಮಕಾತಿ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನೂ ನೀಡಿದೆ. ಆದರೂ ಇಂದು ಯಾವುದೋ ಒಂದು ಕಾರಣಕ್ಕೆ ಬಹಳಷ್ಟು ಶಿಕ್ಷಕರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಎಂಬುದು ವಿವಿಧ ಮಾಧ್ಯಮಗಳಿಂದ ತಿಳಿಯುತ್ತಿದೆ, ಅದೂ ಎಂತಹಾ ಶಿಕ್ಷೆ ! 



ಕೈ ಮೇಲೆ, ಇತರ ಅಂಗಗಳ ಮೇಲೆ ಬರೆ ಹಾಕುವ, ಕೈ ಬೆರಳುಗಳನ್ನು, ಹಲ್ಲುಗಳನ್ನು ಮುರಿಯು ವಂತೆ ಹೊಡೆಯುವ, ತಲೆಯನ್ನು ಗೋಡೆಗೆ ಚಚ್ಚುವ, ಡಸ್ಟರ್, ಚಾಕ್‌ಪೀಸ್ ಅನ್ನು ಮಕ್ಕಳ ತಲೆಗೆ ಗುರಿ ಯಿಟ್ಟು ಎಸೆಯುವ, ಗಂಟೆಗಟ್ಟಲೆ ಮಂಡಿಯೂರಿ : ಕುಕ್ಕರು ಕೂಡಿಸುವ, ಬೆಂಚಿನ ಮೇಲೆ ನಿಲ್ಲಿಸುವ, ಅವಾಚ್ಯ ಶಬ್ಧಗಳಿಂದ ಬೈಗಳು, ಸಹಪಾಠಿಗಳೆದುರಿಗೆ ಅವಹೆಳನ, ನಿಂದೆ, ಸತತವಾಗಿ ನಡೆಯುತ್ರಿವೆ. ‘ಗುರು ಬ್ರಹ್ಮ , ಗುರು ವಿಷ್ಣು ಗುರು ದೇವೋ ಮಹೇಶ್ವರಃ’ ಎಂಬ ಸ್ತುತಿಗೆ ಪಾತ್ರರಾದಂತಹಾ ಹಲವು ಗುರುಗಳೇ ತಮ್ಮ ಶಿಷ್ಯೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳೂ ಕೇಳಿಬರುತ್ತಿವೆ. . ಇಂತಹಾ ಶಿಕ್ಷೆ ಕೊಡುತ್ತಿರುವ ಶಿಕ್ಷಕರ ಪೈಕಿ ಹೆಚ್ಚಿನ ಮಂದಿ, ಮಹಿಳೆಯರೇ ಎಂಬುದು ದುರದೃಷ್ಟಕರ ಸಂಗತಿ. ಏಕೆಂದರೆ, ಮಹಿಳೆ ಸಹನಾ ಮೂರ್ತಿ, ಆಕೆ ಕರುಣಾಮಯಿ, ಪುರುಷ ಅದೆಷ್ಟೇ ಕಠಿಣವಾಗಿ ವರ್ತಿಸಿದರೂ, ಮಹಿಳೆ ಸಹೃದಯಿ, ಆಕೆ ಎಂದೂ ಮಕ್ಕಳ ಬಗ್ಗೆ ಕಠಿಣ ಹೃದಯದವಳಾಗರಿಳು ಎಂಬ ದೃಢ ನಂಬಿಕೆ ನಮ್ಮದು. ನಿಮ್ಮೀ ಮಾತು ಸುಳ್ಳು ಎಂಬಂತೆ ವರ್ತಿಸುತ್ತಿದ್ದಾರೆ ನಮ್ಮೀ ಶಿಕ್ಷಕಿಯರು. 

ಇದೆಲ್ಲಾ ಶಾಲೆಯ ನಾಲ್ಕು ಗೋಡೆಗಳ ನಡುವೆ ಜರುಗುವಂತಹದು. ಸಾರ್ವಜನಿಕ ರಸ್ತೆಗಳಲ್ಲಿ, ಅದೂ ಹಗಲು ಹೊತ್ತಿನಲ್ಲಿಯೇ ಹುಡುಗಿಯರು, ವಿವಾಹಿತ ಸ್ತ್ರೀ ಯರು ನಡೆದಾಡಿದರೆ ಅವರ ವಯಸ್ಸು ಅದೆಷ್ಟೇ ಆಗಿರಲಿ, ಅವರನ್ನು ಕಿಚಾಯಿಸುವ, ಅಶ್ಲೀಲ ನುಡಿಗಳು, ಸಂಜ್ಞೆಗಳಿಂದ  ಅವಮಾನಿಸುವ, ಅವರಲ್ಲಿರುವ ಪರ್ಸ್, ಮೊಬೈಲ್, ಮೈಮೇಲಿರುವ ಆಭರಣಗಳನ್ನು ಸೆಳೆದು ಓಡುವ, ಬಸ್ಸು, ರೈಲು ಗಳಲ್ಲಿ ಪಯಣಿಸುವ ಸಮಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು,

 ಮನೆಯೊಳಗಿರುವ ಒಂಟಿ ಮಹಿಳೆಯರೋ, ಮಧ್ಯ ವಯಸ್ಕರೋ ವೃದ್ಧರೋ, ತಾರತಮ್ಯವಿಲ್ಲದೆ ಹಣ, ಆಭರಣ, ಲೂಟಿಮಾಡಿ, ಅವರ ಶೀಲವನ್ನೂ ಹರಣ ಮಾಡಿ, ತಮ್ಮ ಅಪರಾಧ ಬೇರೆಯವರಿಗೆ ಪತ್ತೆಯಾಗದಿರಲಿ ಎಂದು ಆ ಅಸಹಾಯಕರನ್ನು ಕೊಲೆಮಾಡುವ ಪ್ರಸಂಗಗಳು,

 ಮೇಲೆ ಉಲ್ಲೇಖಿಸಿದ ಕೆಲವು ದೌರ್ಜನ್ಯಗಳು ಹೊರಗಿನವರಿಂದ ಆದರೆ, ಮತ್ತೆ ಹಲವು ‘ಇಂಟಿ ದೊಂಗನು ಈಶ್ವರಡೂ ಪಟ್ಟಲೇಡು’ (ಮನೆಯೊಳಗಿನ ಕಳ್ಳನನ್ನು ಈಶ್ವರನೂ ಹಿಡಿಯಲಾರ)ಎಂಬ ತೆಲುಗು ಗಾದೆಯಿದೆ. ನಮ್ಮ ಮನೆಯೊಳಗೋ, ನಮ್ಮ ನಡುವೆಯೋ ಇರುವ ಕೆಲವರು ಅಪ್ರಾಪ್ತರೋ ವೃದ್ಧರೋ ಹಿತಶತ್ರುಗಳಂತೆ ವರ್ತಿಸುತ್ತಿರುವುದು ಮತ್ತೊಂದು ಕೆಟ್ಟ ಬೆಳವಣಿಗೆಯಾಗಿದೆ. ಹತ್ತಿರದ ಬಂಧುಗಳೋ, ಆತ್ಮೀಯರಾಗಿ ಹಿತಶತ್ರುಗಳಾಗುವ ಸೋದರ ಮಾವ, ಕಸಿನ್ಸ್, ಅಣ್ಣ, ತಮ್ಮ, ಜನ್ಮ ಕಾರಣನಾದ ತಂದೆ ಎನಿಸಿ ಕೊಂಡವನೋ, ಅಕ್ಕಪಕ್ಕದವರೋ, ಯಾರೋ ಒಬ್ಬರು, ವಾ ವರಸೆಯಿಲ್ಲದೆ ಬಾಲಕಿಯರ, ಅಸಹಾಯಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ, ಅಪರಾಧ ತಿಳಿಯದಿರಲೆಂದು ಅವರನ್ನು ಕೊಲೆ ಮಾಡುವ ಪ್ರಕರಣಗಳು,

 ತಾವು ಹೇಳಿದಂತೆ ಕೇಳಲಿಲ್ಲ, ವರ್ತಿಸಲಿಲ್ಲ ಎಂಬ ಕಾರಣಕ್ಕೆ ಅವಿವಾಹಿತ ಸ್ತ್ರೀಯರ : ಮಹಿಳೆಯರ ಮೇಲೆ ಆಸಿಡ್ ಎರಚಿ, ಅಮಾಯಕರ ಮೈ ಸುಡುವ ಘೋರ ಪ್ರಕರಣಗಳು, ಅಂತರ್ ಜಾತೀಯ ವಿವಾಹಕ್ಕೆ ಒಳಗಾಗಿ ತಮ್ಮ ಹುಡುಗಿಯೇ ಕುಟುಂಬದ ಮಾನ ಮರ್ಯಾದೆ ಕಳೆದದ್ದಕ್ಕಾಗಿ ತೌರಿನವರೇ ಹೆಣ್ಣಿಗೆ ಕಿರುಕುಳ ಕೊಡುವ, ಪ್ರಾಣಹರಣ ಮಾಡುವ, ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ವಿವಾಹ ಮಾಡಿಕೊಂಡ ಪತಿಯೇ ಪತ್ನಿಯನ್ನು ಜೀವಸಹಿತ ಸುಡುವ ಪ್ರಕರಣಗಳು, ಹೀಗೆ, ನಡೆಸುತ್ತಿರುವ ಅಮಾನವಿಯ ಕೃತ್ಯಗಳನ್ನು ಪಟ್ಟಿ ಮಾಡುತ್ತಾ ಹೊರಟರೆ ಪುಟಗಳು ಬೆಳೆಯುತ್ತವೆ,

 ಮಹಿಳೆಯರೇನೋ ಅಬಲೆಯರು, ಪುರುಷರಾದ ನಾವು ಸಬಲರು, ಯಾರಾದರೂ ನಮ್ಮ ತಂಟೆಗೆ ಬರಲಿ, ನೋಡೋಣ ! ಎಂದು ಚಾಲೆಂಜ್ ಮಾಡುವಂತಿಲ್ಲ. ಏಕೆಂದರೆ ದುಷ್ಟರು ಪುರುಷರನ್ನೂ ಬಿಡದೆ ಶೋಷಿಸುತ್ತಿದ್ದಾರೆ. ಅಮಾಯಕ, ಅಸಹಾಯಕ ಪುರುಷರ ಬಳಿ ಇರುವ ಉಳುವ ಭೂಮಿ, ಖಾಲಿ ಸೈಟು, ಮನೆ, ಬ್ಯಾಂಕ್ ಅಕೌಂಟ್‌ಗಳಲ್ಲಿÀರುವ ಡಿಪಾಜಿಟ್ಸ್ಗಳನ್ನೂ ತಂತ್ರ ಕುತಂತ್ರಗಳಿಂದ ತಮದಾಗಿಸಿಕೊಳ್ಳುವ ಪ್ರಕರಣಗಳು, ಭ್ರಷ್ಟಚಾರವೇ ತಮಗೆ ಸದಾಚಾರ ಎಂದು ಅದರಲ್ಲಿ ತೊಡಗಿ, ಸಮಾನರಾರಿಹರು ! ಎಂಬ ಅಟ್ಟಹಾಸದ ನಗೆ ಬೀರುತ್ತಿರುವ ಸ್ವಾರ್ಥಿ : ದುಷ್ಟರನ್ನು ಮನುಷ್ಯರೆನ್ನೋಣವೇ ! ಇವರಿರುವ ಸಮಾಜ ವನ್ನು ನಾಗರಿಕ ಸಮಾಜವೆನ್ನಬಹುದೇ !

 ಇಂತಹಾ ಕ್ರೂರ ಕೃತ್ಯಗಳನ್ನು ಪ್ರತ್ಯಕ್ಷವಾಗಿ ಕಂಡವರು, ಸಾಕ್ಷಿ ಹೇಳುವ ಇಚ್ಚೆಯಿದ್ದರೂ, ಹೀಗೆ ಮಾಡಿದರೆ ಈ ಅಪರಾಧಿಗಳಿಂದ ಮುಂದೆ ತಮ್ಮ ಮಾನ, ಆಸ್ತಿ, ಪ್ರಾಣಕ್ಕೇ ಧಕ್ಕೆ ಬರಬಹುದೆಂಬ ಭಯ ದಿಂದ ಸಾಕ್ಷಿ ನುಡಿಯಲು ಜನ ಮುಂದಾಗದಿರುವುದೇ ದುಷ್ಟರ ಕಾರ್ಯಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಈ ವಿವಿಧ ದೌರ್ಜನ್ಯ ಪ್ರಕರಣಗಳನ್ನು ಕೇಳಿದ ಮೇಲೆ ನಮಗನ್ನಿಸುತ್ತದಿದೆ “ಮನುಷ್ಯರೆಂದರೆ ಇವರೇನಾ ! ಇವರಾ ! ಅವರಾ ಮನುಷ್ಯರು “ ಎಂಬ ಸಂಶಯ ಹುಟ್ಟಿಸುತ್ತದೆ. 

 ‘ಸರ್ವೇ ಜನಾಃ ಸುಖಿನೋ ಭವಂತು ‘ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೇ ಸಾರಿ, ನಮ್ಮಲ್ಲಿ ರುವ ವಿವಿಧ ಮತ, ಧರ್ಮ, ಪಂಥ, ಸಂಸ್ಕೃತಿಗಳನ್ನು ಪ್ರೀತಿಯಿಂದಪ್ಪಿ ಒಪ್ಪಿಕೊಂಡು, ಅವಕ್ಕೆ ಉದಾರ ಆಶ್ರಯ ನೀಡಿ, ಸೌಹಾರ್ದ, ಭ್ರಾತೃತ್ವ, ಶಾಂತಿಯುತ ಸಹಬಾಳ್ವೆ, ಮಾನವೀಯತೆಗೆ ನೆಲೆವೀಡಾದ ನಮ್ಮೀ ಪುಣ್ಯಭೂಮಿ ಭಾರತದಲ್ಲಿ, ಮಾನವೀಯತೆ, ಮನುಷ್ಯತ್ವಕ್ಕೇ ಬರ ಬಂದಿರುವುದು ಇಂದಿನ ದೊಡ್ಡ ದುರಂತವಾಗಿದೆ. ಇಂತಹಾ ಶೋಚನೀಯ ಪರಿಸ್ಥಿತಿಯಿಂದ ನೊಂದ ರಾಷ್ಟç ಕವಿ ಡಾ| ಜಿ. ಎಸ್. ಶಿವರುದ್ರಪ್ಪನವರು ‘ಕೆಲವು ಪ್ರಶ್ನೆಗಳು’ ಎಂಬ ತಮ್ಮ ಕವನದಲ್ಲಿ ಮೂರು ಮೂಲಭೂತ ಪ್ರಶ್ನೆಗಳನ್ನು ಎತ್ತಿ, ಅದಕ್ಕೆ ಉತ್ತರ ಬಯಸಿದ್ದಾರೆ. ಆ ಪ್ರಶ್ನೆಗಳಲ್ಲಿ ಮೊದಲನೆಯದು, “ನಾನು ಹುಡುಕುತ್ತಿರುವುದು ಮನುಷ್ಯರನ್ನು | ದಯಮಾಡಿ ಹೇಳಿ ಅವರೆಲ್ಲಿದ್ದಾರೆ ? “ಎಂಬುದು. ನಾವೆಲ್ಲರೂ ಒಂದೇ ಸೃಷ್ಟಿಕರ್ತನ : ಭೂಮಿಯ ಮಕ್ಕಳಾದರೂ, ಒಂದೇ ಮನುಷ್ಯ ಜಾತಿಗೆ ಸೇರಿದವರಾದರೂ, ನಮ್ಮೆಲ್ಲರ ನೋವು ನಲಿವುಗಳು ಆಸೆ ಆಕಾಂಕ್ಷೆಗಳು ಒಂದೇ ಆದರೂ ನಾವೇಕೆ ಪರಸ್ಪರ ಶತ್ರು : ರಾಕ್ಷಸರಂತೆ ವರ್ತಿಸುತ್ತಿದ್ದೇವೆ ಎಲ್ಲ ಮತ, ಧರ್ಮ, ಜಾತಿ, ಪಂಥ, ಪಂಡಗಳನ್ನು ಮೀರಿ, ಸ್ವಾರ್ಥವನ್ನು ಬದಿಗೊತ್ತಿ, “ತನ್ನಲ್ಲಿ ಎಲ್ಲ ರನ್ನು, ಎಲ್ಲರಲ್ಲಿ ತನ್ನನ್ನು ಕಂಡು ಕೊಳ್ಳುವ,’ ‘ಪರೋಪಕಾರರ್ಥಂ ಇದಂ ಶರೀರಂ ‘ ‘ಮಾನವಸೇವೆಯೇ ಮಾಧವ ಸೇವೆ’ ಎಂಬ ತತ್ವವನ್ನು ನಂಬಿ ಸೇವೆ ಸಲ್ಲಿಸುವವನೇ “ನಿಜವಾದ ಮನುಷ್ಯನೆನಿಸಿಕೊಳ್ಳುತ್ತಾನೆ”. ಇಂತಹಾ ಶ್ರೇಷ್ಠ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಮನುಷ್ಯರು ಇಂದು ಅತಿ ವಿರಳ. ಈ ಹಿನ್ನೆಲೆ ಯಲ್ಲಿ, ಮಾನವೀಯತೆ ಇರುವ ಮನುಷ್ಯರಿದ್ದಾರಾ ! ಎಲ್ಲಿದ್ದಾರೆ ಅವರು ! ? ಎಂಬ ಪ್ರಶ್ನೆ ನಮ್ಮ ಮುಂದೆ ಏಳುತ್ತದೆ.

ಡಾ. ಜಿ ಎಸ್ ಎಸ್ ರವರ ಎರಡನೆಯ ಪ್ರಶ್ನೆ, ದೇವರೆಲ್ಲಿದ್ದಾನೆ ? ಎಂಬುದು. ಕವಿಯ ದೃಷ್ಟಿ ಯಲ್ಲಿ , ಪ್ರೀತಿ, ಕರುಣೆ, ಸ್ನೇಹ, ಮರುಕಗಳೇ ದೇವರು. ಈ ಗುಣಗಳ ಮೂಲಕ ದೈವೀ ಸಾಕ್ಷಾತ್ಕಾರವಾಗ ಬೇಕು. ಈ ಕಾರಣದಿಂದ, ಈ ಗುಣಗಳುಳ್ಳ ಮನುಷ್ಯರಿದ್ದಾರಾ !ಎಲ್ಲಿದ್ದಾರೆ ಅವರು ? ಎನಿಸುತ್ತದೆ. 

 ‘ಏನಾದರೂ ಸರಿ, ಮೊದಲು ಮಾನವನಾಗು’ ಎಂಬ ಕನ್ನಡದ ಹಿರಿಯ ಕವಿ, ದಿವಂಗತ ಡಾ| ಸಿದ್ಧಯ್ಯಪುರಾಣಿಕ್ ರವರ ಕವನದ ಸಾಲುಗಳು, ‘ಯೋಗಿ ಆಗಬೇಡ, ಭೋಗಿ ಆಗಬೇಡ, ಮನುಷ್ಯನಾಗು ‘ ಎಂದಿರುವ ಖ್ಯಾತ ಕವಿ, ವಿಮರ್ಶಕ ಮ್ಯಾಥ್ಯೂ ರ‍್ನಾಲ್ಡ್ ರ ನುಡಿ, ‘ಎಲ್ಲವೂ ಮಾನವೀಯತೆ, ಮನುಷ್ಯತ್ವಕ್ಕೆ ಮೊದಲ ಆದ್ಯತೆ ನೀಡಿರುವುದು ವಿಶೇಷ ಗಮನಾರ್ಹ. ನುಡಿಯುವುದು ಸುಲಭ, ನುಡಿದಂತೆ ನಡೆಯುವುದು ಕಷ್ಟ. ದಿಟವಾಗಿ ಮಾನವನಾಗುವುದು ದಿಟವಾಗಿ ರಾಜನಾಗುವಷ್ಟೇ ಕಷ್ಟ. ಎರಡಕ್ಕೂ ಧೈರ್ಯ,  ಸ್ಥೈರ್ಯ ಶುದ್ಧ ಮನೋಧರ್ಮ, ಸಾಧನೆ ಬೇಕು’ ಎಂದಿರುವ ‘ಕನ್ನಡದ ಆಸ್ತಿ ನಮ್ಮೀ ಮಾಸ್ತೀ’ ಎಂಬ ಹೊಗಳಿಕೆ ಪಾತ್ರರಾದ ಡಾ| ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ನುಡಿಯೂ ಈ ಸಂದರ್ಭದಲ್ಲಿ ಉಲ್ಲೇಖಾರ್ಹವಾಗಿದೆ. ನಿಜ ಮಾನವನಾಗುವುದು ಕಷ್ಟ ಎಂದಿದ್ದಾರೆಯೇ ಹೊರತು, ಅದು ಅಸಾಧ್ಯ ಎಂದಿಲ್ಲ ಮಾಸ್ತಿಯವರು. ಎಂಬ ಸತ್ಯವೂ ಗಮನಾರ್ಹ. ಈ ಹಿನ್ನೆಲೆಯಲ್ಲಿ, ಮಾನವೀಯತೆ ಇರುವ ಮನುಷ್ಯರಿದ್ದಾರಾ ! ಎಲ್ಲಿದ್ದಾರೆ ಅವರು ! ? ಎಂಬ ಪ್ರಶ್ನೆ ನಮ್ಮ ಮುಂದೆ ಏಳುತ್ತದೆ.

 ಬಾಲಕ : ಬಾಲಕಿಯರ ಮೇಲೆ ಶಿಕ್ಷಕರಿಂದ ಜರಗುತ್ತಿರುವ ಕ್ರೌರ್ಯ, ದೌರ್ಜನ್ಯದ ಪ್ರಕರಣಗಳ ತಡೆಗಟ್ಟುವಿಕೆಗೆ ಮಾನವೀಯತೆಯುಳ್ಳ, ಉಪಾಧ್ಯಾಯ ವೃತ್ತಿಯಲ್ಲಿ ನಿಜವಾದ ಆಸಕ್ತಿ ಇರುವ ಶಿಕ್ಷಕರನ್ನು ನೇಮಿಸುವುದು, ಅವರಿಗೆ ಕಾಲ ಕಾಲಕ್ಕೆ ವಿದ್ಯಾರ್ಥಿ : ವಿದ್ಯಾರ್ಥಿಗಳನ್ನು ಹೇಗೆ ಟ್ರೀಟ್ ಮಾಡಬೇಕು ಎಂಬ ಬಗ್ಗೆ ತರಬೇತಿ ನೀಡಿ, ಕ್ರೂರ ಕೃತ್ಯಗಳಲ್ಲಿ ತೊಡಗಿದ ಉಪಾಧ್ಯಾಯರನ್ನು ಕಠಿಣವಾಗಿ ಶಿಕ್ಷಿಸಬೇಕು. 

ಬಾಲಕಿಯರ, ಮಹಿಳೆಯರ, ದುರ್ಬಲರ ಮೇಲೆ ನಡೆಯುವ ಲೈಂಗಿಕ ಆಕ್ರಮಣ, ಕ್ರೌರ್ಯ, ಕೊಲೆ ಮೊದಲಾದ ಹೀನ ಕೃತ್ಯಗಳಿಗೆ ಕಠಿಣ ಶಿಕ್ಷೆ ನೀಡಲು ಈಗಿರುವ ಕಾನೂನುಗಳನ್ನು ತಿದ್ದುಪಡಿಮಾಡಲು ಕ್ರಮ ಕೈಗೊಳ್ಳಬೇಕು. ದೃಶ್ಯ ಮಾಧ್ಯಮಗಳಲ್ಲಿ ಈಗ ಭಿತ್ತರಿಸುತ್ತಿರುವ, ಸಿರಿಯಲ್‌ಗಳಲ್ಲಿ ಹಾಗೂ ಕೆಲ ವರ್ಷಗಳಿಂದೀಚೆಗೆ ಬಿಡುಗಡೆಯಾಗತ್ತಿರುವ ಹಲವು ಭಾಷೆಗಳ ಹಲವು ಚಲನಚಿತ್ರಗಳಲ್ಲಿನ ಅಶ್ಲೀಲ, ದ್ವಂದ್ವ : ಅರ್ಥ ನೀಡುವ ಸಂಭಾಷಣೆಗಳು, ಜಾಹೀರಾತುಗಳು, ಕೊಲೆ, ದರೋಡೆ, ಲೂಟಿ, ಮಾನಭಂಗ ದೃಶ್ಯಗಳನ್ನು ವೈಭವೀಕರಿಸಿ ಪ್ರದರ್ಶಿಸುತ್ತಿರುವುದೂ ಯುವ ಜನಾಂಗದ ಮನಸ್ಸು ಕೆಡಿಸಲು ಪ್ರಮುಖÀ ಕಾರಣವಾಗಿದೆ. ಈ ದಿಸೆಯಲ್ಲಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಸಂಬಂಧಿತ ಪ್ರಾಧಿಕಾರಗಳು ಜರೂರಾಗಿ ಜರುಗಿಸಬೇಕು. ಎಂದು ಮನಃಶಾಸ್ತçಜ್ಞರೇ ಅಭಿಪ್ರಾಯ ಪಡುತ್ತಿದ್ದಾರೆ. ಈಗಾಗಲೇ ನಡೆದ ದೌರ್ಜನ್ಯ, ಕೊಲೆ ಪ್ರಕರಣಗಳಿಗೆ ಕಾರಣರಾದವರನ್ನು ವಿಳಂಬವಿಲ್ಲದೆ ತತಕ್ಷಣ ಪತ್ತೆ ಮಾಡಿ, ಅಪರಾಧªನ್ನು ನ್ಯಾಯಾಲಯಗಳಲ್ಲಿ ಸಾಬೀತು ಪಡಿಸಲು ಅಗತ್ಯವಾದ ಎಲ್ಲ ಸಾಕ್ಷಾö್ಯಧಾರಗಳನ್ನು ಜರೂರಾಗಿ ಕಲೆಹಾಕಿ, ನ್ಯಾಯಾಲಯಕ್ಕೆ ಸಲ್ಲಿಸುವ ಕಾರ್ಯ ಜರುಗಬೇಕು. ಮೌಕಿಕ ಸಾಕ್ಷಿ, ದಾಖಲಾತಿಯ ಮೂಲಕದÀ ಸಾಕ್ಷಿ, ಸಾಂದರ್ಭಿಕ ಸಾಕ್ಷಿ ಇತ್ಯಾದಿಗಳೆಲ್ಲವನ್ನೂ ನ್ಯಾಯಾಧಿಕರಣಗಳು ಮೊದಲ ಆದ್ಯತೆಯ ಮೇಲೆ ಪರಿಶೀಲಿಸಿ, ಬಲು ಬೇಗ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿ, ಜಾರಿ ಮಾಡಿಸಿದರೆ, “ಅಪರಾಧ ಮಾಡಿದರೆ ಇಂತಹಾ ಕಠಿಣ ಶಿಕ್ಷೆ ಆಗುತ್ತದೆ” ಎಂಬ ಭಯ ಜನರಲ್ಲಿ ಆವರಿಸಿ, ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಲು ಸಾಧ್ಯ. ಜೊತೆಗೇನೇ, ಕ್ರೌರ್ಯಕ್ಕೆ ಒಳಗಾದವರಿಗೆ ಸರ್ಕಾರದ ಖರ್ಚಿನಲ್ಲಿ ಚಿಕಿತ್ಸೆ, ಹಣದ ಪರಿ ಹಾರವನ್ನು ಜರೂರಾಗಿ ನೀಡುವುದೂ ಅಷ್ಟೇ ಅಗತ್ಯವಾಗುತ್ತದೆ. ಸಂಪನ್ಮೂಲ ಕೊರತೆ ಇಲ್ಲಿ ಅಡ್ಡಿಯಾಗ ದಂತೆ ಎಚ್ಚರವಹಿಸಬೇಕು. ಇವಕ್ಕೆಲ್ಲಾ ಇಚ್ಛಾ ಶಕ್ತಿ ಅತ್ಯಗತ್ಯ. 

ಮುಂದಿನದು ಕ್ರೌರ್ಯ, ದೌರ್ಜನ್ಯದ ಪ್ರಕರಣಗಳ ಪುನರಾವರ್ತನೆಯಾಗದಂತೆ ಎಚ್ಚರವಹಿಸುವಿಕೆ. “ಇಂದಿನ ಮಕ್ಕಳೇ ನಾಳಿನ ಪ್ರಜೆ ಗಳು” ಎಂಬ ಘೋಷಣೆಯನ್ನು ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. 

ಇಂದು ನಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತರರೊಡನೆ ಸ್ಪರ್ಧಿಸಲು 2-3 ಭಾಷೆಗಳನ್ನು, ಇತಿ ಹಾಸ, ಗಣಿತ, ವಿಜ್ಞಾನ, ಕಂಪ್ಯೂಟರ್, ಯಂತ್ರ, ತಂತ್ರಜ್ಞಾನಗಳನ್ನು ಕಲಿಸಿ, ಹೆಚ್ಚು ಹೆಚ್ಚು ಹಣ ಸಂಪಾದಿಸುವ ಯಂತ್ರಗಳನ್ನಾಗಿ ಸಿದ್ಧಪಡಿಸುತ್ತಿದ್ದೇವೆಯೇ ಹೊರತು, ಮೊದಲು ಮಾನವರಾಗಿ ಬದುಕುವುದನ್ನು ಕಲಿಸುತ್ತಿಲ್ಲ. ಪರಿಣಾಮವಾಗಿ, ಹೆಚ್ಚಿನ ಯುವ ಜನಾಂಗ, ತಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲದೆ ಕಾಮ ಕ್ರೋಧಾದಿ ಅರಿಷಡ್ವರ್ಗಗಳಿಗೆ ದಾಸರಾಗಿ, ನಾನು, ನನ್ನದು, ನನ್ನವರು ಎಂಬ ಸ್ವಾರ್ಥದಲ್ಲಿ ಮುಳುಗಿ, ತಮಗೆ ತಾವೇ ಅನ್ಯಾಯ ಮಾಡಿಕೊಳ್ಳುವುದರ ಜೊತೆಗೆ, ಕುಟುಂಬ, ಸಮಾಜ, ದೇಶಕ್ಕೂ ಕಂಟಕಪ್ರಾಯರಾಗಿ ವಿನಾಶದ ಹಾದಿಯಲ್ಲಿ ನಡೆಯುತ್ತಿದ್ದಾರೆ. ನಮ್ಮ ಮಕ್ಕಳು ಸತ್ಪçಜೆಗಳಾಗಿ, ನಾಗರಿಕರಾಗಿ ಬಾಳಬೇಕಾದರೆ, ಅದಕ್ಕೆ ಸರಿಯಾದ ವೇದಿಕೆ, ಭೂಮಿಕೆ ಸಣ್ಣ ವಯಸ್ಸಿನಿಂದಲೇ ಸಿದ್ಧವಾಗಬೇಕು. ಇದಕ್ಕೆ ತಂದೆ ತಾಯಿ, ಪೋಷಕರು, ಶಿಕ್ಷಕರು, ಧರ್ಮಗುರುಗಳು, ಧಾರ್ಮಿಕ ಸಂಸ್ಥೆಗಳು ಮಕ್ಕಳಿಗೆ ಮಾನವೀಯತೆ, ಮನುಷ್ಯತ್ವ, ನಾಗರಿಕರಾಗಿ ಬದುಕು ಸಾಗಿಸುವುದನ್ನು ಸಣ್ಣ ವಯಸಿನಿಂದಲೇ ಕಲಿಸಬೇಕು. ಸ್ವಾರ್ಥ, ಅಕ್ರಮ, ಅನ್ಯಾಯ, ಅನೀತಿ, ಅಧರ್ಮ, ಹಿಂಸೆ, ಸುಳ್ಳು ಹೇಳುವಿಕೆ ಕ್ರೌರ್ಯ ಇವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳುವ, ಸಹ ಜೀವಿಗಳ ಬಗ್ಗೆ ಪ್ರೀತಿ, ಸ್ನೇಹ, ಭ್ರಾತೃತ್ವ, ಶಾಂತಿಯುತ ಸಹಬಾಳ್ವೆ, ಸಹನೆ, ತಾಳ್ಮೆ, ಸತ್ಯ, ಧರ್ಮ ಕರುಣೆ ಅಹಿಂಸೆ, ದಯೆ, ಪರೋಪಕಾರ ಮೊದಲಾದ ದೈವೀ ಗುಣಗಳ ಬಗೆ ಸೂಕ್ತ ನೀತಿ ಪಾಠಗಳನ್ನು ಸತತವಾಗಿ ಕೆಲ ವರ್ಷಗಳ ಕಾಲವಾದರೂ ಕಲಿಸುತ್ತಾ ಬಂದರೆ, ಮಕ್ಕಳು ಬೆಳೆದಂತೆ ಇವನ್ನು ಮೈಗೂಡಿಸಿಕೊಂಡು ದಾನವರಾಗದೆ, ಮಾನವರಾಗಿ, ಒಳ್ಳೆಯ ಪ್ರಜೆಗಳಾಗಿ, ನಾಗರಿಕರಾಗಲು ಸಾಧ್ಯ. 

Comments

  1. ಉತ್ತಮ ಲೇಖನ. ಇಂದಿನ ಚಲನಚಿತ್ರಗಳೂ, ದೂರದರ್ಶನದ ಧಾರಾವಾಹಿಗಳಂತೂ ಒಬ್ಬ ಉತ್ತಮ ಮಾನವನಾಗು ವಿ ಗುಣಗಳನ್ನು ಬಿಂಬಿಸುವ ಗೋಜಿಗೇ ಹೋಗುವುದಿಲ್ಲ. ಸರಿ ಹಿಂಸೆ, ಕ್ರೂರತೆ, ವಂಚನೆ, ಕುಟಿಲತೆ, ಅಸೂಯೆ ಆಡಂಬರಗಳಿಂದ ತುಂಬಿ, ಜನ ಸಾಮಾನ್ಯರ ಮಾನವೀಯತೆಯನ್ನು ಮರೆಯಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

    ReplyDelete
  2. Abhipraayakkagi Dhanyavaadagalu sir.

    ReplyDelete

Post a Comment