ಸಂಸಾರದಲ್ಲಿನ ಒಡಂಬಡಿಕೆಗಳು

 ಸಂಸಾರ 

 ಲೇಖನ  - ಬಿ ವಿ ಕೃಷ್ಣಮೂರ್ತಿ

ಸಂಸಾರದಲ್ಲಿನ ಒಡಂಬಡಿಕೆಗಳು ಹಾಗೂ ಇವೆ - ಹೀಗೂ ಇವೆ 



‘ಹಾಗೂ ಇವೆ’ ಗುಂಪಿಗೆ ಸೇರುವ ಸಂಸಾರಗಳು ನದಿಯಮೇಲೆ ನಿಧಾನವಾಗಿ ಚಲಿಸುತ್ತಿರುವ ದೋಣಿಯಂತೆ ಎಲ್ಲೋ ಅಲ್ಲೊಂದು ಇಲ್ಲೊಂದು ಕಾಣುತ್ತವೆ. ಗಂಡ ವಿದ್ಯಾವಂತ, ಬ್ಯಾಂಕಿನಲ್ಲಿ ಒಳ್ಳೆಯ ಉನ್ನತ ಸ್ಥಾನದಲ್ಲಿದ್ದವನು. ಗ್ರಹಚಾರವಶಾತ್ ದೃಷ್ಟಿಮಾಂದ್ಯವಾಗಿ ಎರಡು ಕಣ್ಣೂ ಹೋಯಿತು. ಮನೆಯಲ್ಲಿ ವಯಸ್ಸಾದ ತಂದೆ ತಾಯಿಗಳು. ಸಂಸಾರದ ಹೊರೆಯನ್ನು ಇನ್ನೊಬ್ಬರಮೇಲೆ ಹಾಕಬೇಕಾಯಿತಲ್ಲ ಎಂದು ಅವನ ಮನಸ್ಸಿಗೆ ಆತಂಕ.

ಹೆಂಡತಿ ಕೆಲಸದಲ್ಲಿದ್ದವಳು, ನಿವೃತ್ತಳಾಗಿ ಗಂಡನ ಮನಸ್ಸಿಗೆ ಬೇಜಾರಾಗದಂತೆ ಅವನ ಆರೋಗ್ಯವನ್ನು ಕಾಪಾಡುತ್ತ, ಜೊತೆಜೊತೆಗೆ ವೃದ್ಧರಾದ ಅತ್ತೆ ಮಾವಂದಿರ ಸೇವೆಮಾಡುತ್ತ ಸಂಸಾರದ ಹೊರೆಹೊತ್ತು ಜೀವನ ಸಾಗಿಸುತ್ತಿರುವ ಸಾಧ್ವೀಮಣಿ ಒಂದುಕಡೆ.

ಇನ್ನೊಂದುಕಡೆ ಗಂಡ ಮಗನ ಶುಶ್ರೂಷೆಮಾಡಿಕೊಂಡು, ವಯಸ್ಸಾದ ಅತ್ತೆಗೆ ಸೇವೆಮಾಡುವುದು ತನ್ನ ಕರ್ತವ್ಯ ಎಂದು ಭಾವಿಸಿ, ಸಂಸಾರಸಾಗಿಸುತ್ತಿರುವ ಗೃಹಿಣೀಮಣಿ. ಹೊರಗಡೆ ಕೆಲಸ, ಮನೆಕೆಲಸ, ವಿಶ್ರಾಂತಿ ಎನ್ನುವುದೇ ಗೊತ್ತಿಲ್ಲ ಆಕೆಗೆ. ಮನೆಕೆಲಸದಲ್ಲೂ ಅಚ್ಚುಕಟ್ಟು. 

ಇಬ್ಬರಲ್ಲಿ ಯಾರು ದೊಡ್ಡವರು, ಯಾರು ಚಿಕ್ಕವರು ಎಂದು ನಿರ್ಧರಿಸುವುದು ಬಹಳ ಕಷ್ಟದ ಕೆಲಸ. ತಕ್ಕಡಿಯಲ್ಲಿ ತೂಗಿನೋಡಿದರೆ ಎರಡೂ ಒಂದೇ ಸಮ ಕಾಣುತ್ತೆ. ನೀವೇನಾದರೂ ಯೋಚಿಸುವುದಾದರೆ ಅದನ್ನು ನಿಮಗೇ ಬಿಟ್ಟಿದ್ದೇನೆ. 

ಕರ್ತವ್ಯವೇ ಒಂದು ಮಾನವನ ನಿಜ ಧರ್ಮ

ಮಾಡುವುದು ಮಾಡುವುದು ಮಾಡುತ್ತ ದುಡಿಯುವುದು

ದುಡಿದುದರ ಫಲಗಳನು ಬಯಸದಿರುವುದು ನೋಡು

ಇದನರಿತು ಹೇ ಮನುಜ ಶಿವಯೋಗಿಯಾಗೊ      ಶಿವಯೋಗಿಯಾಗೋ ||

‘ಹೀಗೂ ಇವೆ’ ಬಣಕ್ಕೆ ಸೇರುವ ಸಂಸಾರಗಳು ಅನೇಕ, ಎಣಿಸಲಾರದಷ್ಟು. ಮದುವೆಯಾದ ಹೊಸದರಲ್ಲಿ ಗಂಡ ಹೆಂಡತಿ ಒಬ್ಬರನ್ನೊಬ್ಬರು ಅತಿಯಾಗಿ ಪ್ರೇಮಿಸುತ್ತಾರೆ. ಆಗ ಅವರಿಗೆ ಪ್ರಪಂಚವೇ ಮರೆತುಹೋಗಿರುತ್ತೆ. ಅವನು ಅವಳನ್ನು ಮುದ್ದುಗಿಳಿ, ಅರಗಿಳಿ ಎಂದೆಲ್ಲ ಮಾತುಗಳನ್ನು ಹೇಳಿ ಉಬ್ಬಿಸಿ ಅಟ್ಟಕ್ಕೇರಿಸುತ್ತಾನೆ. ಅವನು ಎಷ್ಟೇ ವಿದ್ಯಾವಂತನಾಗಿದ್ದರೂ, ಮೇಧಾವಿಯಾಗಿದ್ದರೂ, ಎಲ್ಲವನ್ನೂ ಮರೆತು ಅವಳ ಕೈಗೊಂಬೆಯಾಗುತ್ತಾನೆ.

ಹೆಂಡತಿ ಅವನ ದಡ್ಡತನವನ್ನು ದುರುಪಯೋಗಮಾಡಿಕೊಂಡು ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಾಳೆ. ಪ್ರತಿಯೊಂದಕ್ಕೂ ಅವನು ತನ್ನನ್ನೇ ಕೇಳಬೇಕೆಂಬ ಸ್ಥಿತಿಗೆ ತರುತ್ತಾಳೆ. ಅವನಿಗೆ ಸ್ವಲ್ಪವೂ ಸ್ವಾತಂತ್ರ್ಯವಿರುವುದಿಲ್ಲ. ಬರಬರುತ್ತಾ ಅವಳು ಅತ್ತೆ ಮಾವಂದಿರನ್ನು ದೂಷಿಸುತ್ತಾಳೆ. ಅವಳಿಗೆ ಪೋಷಕವಾಗಿ ಬೆಂಬಲವೆಂಬಂತೆ ಅವನು ತನ್ನನ್ನು ಹೆತ್ತು ಹೊತ್ತು ಚಿಕ್ಕಂದಿನಿಂದ ಸಾಕಿಸಲಹಿದ ತಂದೆತಾಯಿಯರನ್ನು ದೂರಮಾಡುತ್ತಾನೆ. ಒಡಹುಟ್ಟಿದ ಅಕ್ಕತಂಗಿಯರ ಜೊತೆ ಕೂಡ ಸಂಪರ್ಕ ಬಿಟ್ಟುಹೋಗುತ್ತೆ. ಹೆಂಡತಿಯಾದವಳು ತನಗೆ ಬೇಕಾದಂತೆ ಅವನನ್ನು ಆಟವಾಡಿಸುತ್ತಾಳೆ. ಅವಳಿಲ್ಲದೆ ಅವನ ಜೀವನವೇ ಸಾಗದು ಎಂದು ಭ್ರಮೆಗೊಳ್ಳುತ್ತಾನೆ.

ವಯಸ್ಸಾದ ತಂದೆ, ತಾಯಿ, ಅತ್ತೆ, ಮಾವ ಯಾರೂ ಅವರಿಗೆ ಬುದ್ಧಿಹೇಳಲು ಅಶಕ್ತರಾಗುತ್ತಾರೆ. ಇದನ್ನು ಅನುಭವಿಸುವುದು ತಮ್ಮ ಕರ್ಮ ಎಂದು ಅದಕ್ಕೆ ಶರಣುಹೋಗುತ್ತಾರೆ. ಸಂಸಾರದ ಗಾಡಿ, ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು ಅನ್ನುವಂತೆ ಮಗುಚಿಕೊಳ್ಳುವ ಸಂಭವಗಳೇ ಜಾಸ್ತಿ.

ಗುಜರಾತಿನ ಒಂದು ಸಂಸಾರ. ತಂದೆ ತಾಯಿಗಳಿಗೆ ಒಬ್ಬನೇ ಮಗ, ಒಬ್ಬ ಮಗಳು. ಮಗನಿಗೆ ಇಬ್ಬರು ಮಕ್ಕಳಿದ್ದರು. ಚಿಕ್ಕ ಮಕ್ಕಳಾಗಿದ್ದುದರಿಂದ ಅವರು ದೊಡ್ಡವರಾಗುವವರೆಗೂ ಅಜ್ಜ-ಅಜ್ಜಿ ನೋಡಿಕೊಂಡರು. ಮಗನ ಹೆಂಡತಿಗೂ ಅವರ ಸಹಾಯ ಬೇಕಾಗಿತ್ತು. ಅವಳ ಮಕ್ಕಳು ದೊಡ್ಡವರಾದಮೇಲೆ, ಗಂಡನಿಗೆ ಚಿತಾವಣೆಮಾಡಿ, ನಿಮ್ಮ ಅಪ್ಪ ಅಮ್ಮನನ್ನು ಭಾರತಕ್ಕೆ ವಾಪಸ್ ಕಳುಹಿಸು ಎಂದು ಪ್ರತಿನಿತ್ಯ ಗಂಡನೊಡನೆ ಜಗಳ. 

ತಂದೆ ತಾಯಿಗಳು ಎಲ್ಲಿಗೆತಾನೇ ಹೋಗಲು ಸಾಧ್ಯ, ಮಗಳ ಮನೆಯಲ್ಲಿ ಎಷ್ಟು ದಿವಸ ಇರುವುದಕ್ಕೆ ಸಾಧ್ಯ. ಅವರು ಭಾರತಕ್ಕೆ ಹೋದರೆ ಈ ಇಳಿವಯಸ್ಸಿನಲ್ಲಿ ನೋಡಿಕೊಳ್ಳುವವರು ಯಾರು?

ಇನ್ನೊಂದು ಸಂಸಾರ ವಯಸ್ಸಾದ ತಾಯಿಗೆ ಎರಡು ಕಾಲಿನಲ್ಲೂ ಬಲವಿಲ್ಲ. ವ್ಹೀಲ್‌ಚೇರಿನಲ್ಲಿ ಕುಳಿತಿರಬೇಕು. ಇಬ್ಬರು ಗಂಡು ಮಕ್ಕಳು, ಒಬ್ಬ ಹೆಣ್ಣುಮಗಳು. ಗಂಡ ತೀರಿಕೊಂಡಿದ್ದರು. ಇಬ್ಬರು ಗಂಡುಮಕ್ಕಳೂ ಬ್ಯಾಂಕಿನಲ್ಲಿ ಕೆಲಸಮಾಡಿ ಬೇಕಾದಷ್ಟು ಸಂಪಾದನೆ ಇದೆ. ಆದರೂ ಒಬ್ಬ ಮಗ ಹೇಳಿದ, ನಾನು ತಾಯಿಯನ್ನು ನಾಲ್ಕು ತಿಂಗಳು ನೋಡಿಕೊಂಡಿದ್ದೇನೆ, ನನ್ನ ಜವಾಬ್ದಾರಿ ಮುಗಿಯಿತು. ಇನ್ನೊಬ್ಬ ಮಗ ಹೇಳಿದ, ನಾನು ಐದು ತಿಂಗಳು ನಿಭಾಯಿಸಿದ್ದೇನೆ, ನನ್ನ ಜವಾಬ್ದಾರಿಯೂ ಮುಗಿಯಿತು ಎಂದು. ವರ್ಷದಲ್ಲಿ ಇನ್ನು ಮೂರು ತಿಂಗಳು ಅವರ ಪಾಡು?

 ಆಕೆಯ ಮೊಮ್ಮಗಳು (ಮಗಳ ಮಗಳು) ಅಜ್ಜಿಯ ಕೊನೆಯ ಉಸಿರಿರುವವರೆಗೂ ಅಕ್ಕರೆಯಿಂದ ನೋಡಿಕೊಂಡಳು! ಅದು ಆ ಹುಡುಗಿಯ ಕರ್ತವ್ಯದೃಷ್ಟಿ. 

 ಇನ್ನೊಂದು ಸಂಸಾರ. ಗಂಡ ಹೆಂಡತಿ ಇಬ್ಬರೂ ಅಕ್ಕತಂಗಿಯರ ಮಕ್ಕಳೇ. ಅಕ್ಕನ ಮಗ, ತಂಗಿಯ ಮಗಳು. ಮದುವೆಯೇನೋ ನಡೆಯಿತು. ಕೆಲವಾರು ತಿಂಗಳ ನಂತರ ಗಂಡ ಹೆಂಡತಿಯರಲ್ಲಿ ಮನಸ್ತಾಪ. ಪ್ರತಿನಿತ್ಯವೂ ಜಗಳ. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಇಬ್ಬರೂ ವಾಚಾಮಗೋಚರವಾಗಿ ಬೈದಾಡಿದರು. 

  ವಿವಾಹ ವಿಚ್ಛೇದನದ ಮಾತುಕತೆಗಳಾಯಿತು. ಒಬ್ಬ ವಕೀಲರು ತನಿಖೆಮಾಡಿ ಇಬ್ಬರನ್ನೂ ಒಂದುಗೂಡಿಸುವ ಪ್ರಯತ್ನ ನಡೆಯಿತು. ವಕೀಲರ ಮುಂದೆಯೆ ಗಂಡ ಹೆಂಡತಿ ಕೈಕೈ ಮಿಲಾಯಿಸಿ ಹೊಡೆದಾಡುವ ಮಟ್ಟಕ್ಕೆ ಬಂತು ಪರಿಸ್ಥಿತಿ! ವಕೀಲರು ಇಬ್ಬರ ನಡುವೆ ಕುಳಿತು ಹೊಡೆದಾಟವನ್ನು ತಪ್ಪಿಸಿದರು. ವಿವಾಹ ವಿಚ್ಛೇದನಕ್ಕೆ ನಾಂದಿಯಾಗಿ, ಒಂದು ತಿಂಗಳಲ್ಲೇ ನ್ಯಾಯಾಲಯ ತೀರ್ಪುಕೊಟ್ಟಿತು ಎಂದು ನನ್ನ ಸಹೋದ್ಯೋಗಿ ವರದಿಮಾಡಿದ. ನನಗೆ ಮೊದಮೊದಲು ಇದೊಂದು ಕಟ್ಟುಕತೆ ಇರಬಹುದು ಎನಿಸಿತು. ನಂತರ ನನ್ನ ಕೇವಲ ಆಪ್ತಗೆಳೆಯರೊಬ್ಬರು ಇದು ನನ್ನ ಎದುರಿಗೇ ನಡೆದದ್ದು ಎಂದು ಹೇಳಿದಾಗ ನಂಬಲೇಬೇಕಾಯಿತು. ಅದಲ್ಲದೆ ಈ ತರಹ ಸಂದರ್ಭಗಳನ್ನು ನನ್ನ ಜೀವಮಾನದಲ್ಲೇ ಕಂಡಿರಲಿಲ್ಲ. 

  ಕೇವಲ ಒಂದೇಒಂದುಬಾರಿ ನಮ್ಮ ಹಳ್ಳಿಯಲ್ಲಿ ನಡೆದ ಪ್ರಸಂಗ ಜ್ಞಾಪಕಕ್ಕೆ ಬಂತು. ಇದು ಸುಮಾರು ಎಪ್ಪತ್ತಾರು ವರ್ಷಗಳ ಹಿಂದಿನದು. ಆಗಿನ್ನೂ ನನ್ನ ಮದುವೆ ಆಗಿತ್ತು. ನಮ್ಮ ಮನೆಯಲ್ಲಿ ಒಂದು ಸಮಾರಂಭ. ನಮ್ಮ ಕೇರಿಯ ನಾಲ್ಕಾರು ಹೆಂಗಸರು ಬಂದಿದ್ದರು. ನಮ್ಮ ಎದುರುಗಡೆ ಮುಂದಿನ ಮನೆಯ ಹೆಂಗಸರೂ ಬಂದರು. ನಮ್ಮ ಮನೆಗೂ ಅವರ ಮನೆಗೂ ಕೇವಲ ಹತ್ತು ಅಡಿ ಅಂತರ. ಅದು ಸಣ್ಣ ಓಣಿ ಎಂದೆ ಹೇಳಬಹುದು. ಆ ಮನೆಯವರು ನಮ್ಮ ನೆಂಟರೇ.

ಕಾರ್ಯಕ್ರಮಗಳು ಮುಗಿದು ಎಲ್ಲರೂ ಹರಟೆಯಲ್ಲಿ ತಲ್ಲೀನರಾಗಿದ್ದರು. ರಾತ್ರೆ ಬಹಳ ಹೊತ್ತಾಗಿತ್ತು. ನಮ್ಮ ಎದುರುಗಡೆ ಮನೆಯಾಕೆ ಹೋದಾಗ ಅವರ ಯಜಮಾನರು ಆಕೆಯನ್ನು ಮನೆಯ ಜಗುಲಿಯಮೇಲೆ ನಿಲ್ಲಿಸಿ ಒಳಗೆ ಬರಬೇಡ ಎಂದು ಹೇಳಿದರಂತೆ. ನಾನು ಅಕಸ್ಮಾತ್ ಅಲ್ಲಿಗೆ ಬಂದಾಗ ಆಕೆಯನ್ನು ನೋಡಿ ಬಹಳ ಬೇಜಾರಾಯಿತು. ನಾನು ಆಕೆಯ ಗಂಡನಿಗೆ ಕೈಮುಗಿದು ಕೇಳಿಕೊಂಡೆ ದಯವಿಟ್ಟು ಹೀಗೆಮಾಡಬೇಡಿ, ನಾನು ಕಾಲಿಗೆಬಿದ್ದು ಕೇಳುತ್ತೇನೆ, ಆಕೆಯನ್ನು ಒಳಕ್ಕೆ ಕರೆಯಿರಿ ಎಂದು. ಹೋಗಲಿ ಬಿಡಪ್ಪ, ಅವಳನ್ನು ಒಳಕ್ಕೆ ಕರೆಯುತ್ತೇನೆ ಎಂದರು. ನನ್ನ ಕೋರಿಕೆಗೆ ಅಷ್ಟಾದರೂ ಬೆಲೆ ಕೊಟ್ಟರಲ್ಲ, ಅವರ ಅಭಿಮಾನ ದೊಡ್ಡದು. ಅವರು ನನ್ನ ಸೋದರಮಾವ!

 ‘ಹೀಗೂ ಇವೆ’ ಗುಂಪಿಗೆ ಸೇರಿಸಬಹುದಾದ ಒಂದೆರಡು ಸಂಸಾರಗಳ ಜೀವನ ಇವೆ. ಇದು ತೀರಾ ಅತಿರೇಕದ್ದು. ಗಂಡ ಹೆಂಡತಿಯನ್ನು ಹೀಯಾಳಿಸಿ, ಹೊಡೆದು ಬಡಿದು ಮಾಡುತ್ತಾನೆಂಬ ಸುದ್ದಿಯನ್ನು ಕೇಳಿದ್ದೆ. ಆದರೆ ಹೆಂಡತಿ, ಗಂಡನ ನಿಶ್ಶಕ್ತತೆಯನ್ನು ದುರುಪಯೋಗಮಾಡಿಕೊಂಡು, ಗಂಡನಿಗೇ ಹೊಡೆಯುವ ಸುದ್ದಿ ಕೇಳಿರಲಿಲ್ಲ. ಇದನ್ನು ನನ್ನ ಸ್ನೇಹಿತನಿಗೆ ಹೇಳಿದಾಗ, ಏನೋ ಕತೆ ಹೇಳು ಅಂದರೆ ಹೀಗೆಲ್ಲ ಸುಳ್ಳುಪಳ್ಳು ಶುರುಮಾಡಿದೆಯ ಎಂದು ಹಾರಾಡುವುದಕ್ಕೇ ಬಂದ. ನನ್ನ ಇನ್ನೊಬ್ಬ ಗೆಳೆಯರು ಜೊತೆಯಲ್ಲಿ ಇದ್ದರು. ಇಲ್ಲದಿದ್ದರೆ ಅವನು ಖಂಡಿತ ನನ್ನನ್ನು ತದಿಕಿಬಿಡುತ್ತಿದ್ದ. ಸಧ್ಯ ನಾನು ಬಚಾವಾದೆ. ಮಾರಾಯಾ ಇದು ನಿಜವಾಗಿಯೂ ನಡೆಯುತ್ತಿರುವ ಪ್ರಸಂಗ. ಅದಕ್ಕೆ ಬಲಿಯಾದವರೇ ಕಣ್ಣೀರಿಟ್ಟು ಹೇಳಿದರೆ ನಂಬದೇ ಇರುವುದಕ್ಕೆ ಹೇಗೆ ಸಾಧ್ಯ? ಅದನ್ನು ಕೇಳಿದನಂತರ ನನ್ನ ಕಣ್ಣಿನಿಂದಲೂ ನೀರು ತೊಟ್ಟಿಕ್ಕಿತು.

 ಹೆಂಗಸಿಗೆ ಯಾವ ಒಂದು ಉನ್ನತಸ್ಥಾನ ಕೊಟ್ಟಿದ್ದೇವೋ ಆ ಮಟ್ಟಕ್ಕೆ ಏರಬೇಕಾದ ಹೆಂಗಸು ತನ್ನ ದರ್ಪ, ಅಹಂಕಾರಗಳನ್ನು ಪ್ರದರ್ಶಿಸಿ, ತೀರಾ ಕೆಳಮಟ್ಟಕ್ಕೆ ತೆವಳಿದ್ದಾಳೆಂಬುದು ಶೋಚನೀಯವಾದ ಸಂಗತಿ. 

ನಮಗೆ ಗೋಚರವಾಗಿರುವುದು ಕೇವಲ ಕೆಲವು ಸಂಸಾರಗಳು. ಇಂತಹವುಗಳು ಲೆಖ್ಖವಿಲ್ಲದಷ್ಟು, ಈ ವ್ಯಾಧಿಯಿಂದ ನರಳುತ್ತಿರಬಹುದು. ಸಂಸಾರವೆಂದರೆ, ಅದರ ಆಧಾರಸ್ತಂಭಗಳಾದ ಗಂಡ ಹೆಂಡತಿ ಇಬ್ಬರಿಗೂ ಸಮನಾದ ಜವಾಬ್ದಾರಿ ಇದೆ ಅನ್ನುವುದನ್ನು ಅವರು ತಿಳಿದುಕೊಳ್ಳಬೇಕು. ಒಬ್ಬರು ಹೆಚ್ಚಲ್ಲ, ಒಬ್ಬರು ಕಡಿಮೆಯಲ್ಲ. ಅವರ ಖಂಡನೀಯವಾದ ವರ್ತನೆಗಳು ಮುಂದೆ ಮಕ್ಕಳ ಮೇಲೆ ಯಾವ ತರಹ ದುಷ್ಪರಿಣಾಮಮಾಡಬಹುದು ಅನ್ನುವುದನ್ನು ಯೋಚಿಸಬೇಕು. ಇದನ್ನು ಬೇರೊಬ್ಬರು ತಿಳಿಸಿಕೊಡಲು ಸಾಧ್ಯವಿಲ್ಲ. ತಿದ್ದುಪಡಿ ಮಾಡಿಕೊಳ್ಳುವುದಕ್ಕೆ ಅವರೇ ಜವಾಬ್ದಾರರು. 

ಅನೇಕ ಸಂಸಾರಗಳ ನಾನಾ ಮುಖಗಳನ್ನು ದೃಶ್ಯರೂಪವಾಗಿ ಅಳವಡಿಸಿದ್ದಾರೆ ಸ್ನೇಹಿತ ಟಿ. ಎನ್. ಸೀತಾರಾಮ್ ತಮ್ಮ ಧಾರಾವಾಹಿ ಮಾಯಾಮೃಗದಲ್ಲಿ. ಎಷ್ಟುಬಾರಿ ನೋಡಿದರೂ ಇನ್ನೊಮ್ಮೆ ನೋಡಬಯಸುವ ಧಾರಾವಾಹಿ ಮಾಯಾಮೃಗ. ಟಿ. ಏನ್. ಸೀತಾರಾಮ್‌ರವರಿಗೆ ನನ್ನ ಅಭಿನಂದನೆಗಳು. ಮಾಯಾಮೃಗದ ಯಶಸ್ಸನ್ನು ಹೆಚ್ಚಿಸುವಲ್ಲಿ ಪಾತ್ರವಹಿಸಿರುವ ಎಲ್ಲ ಪಾತ್ರಧಾರಿಗಳಿಗೂ ಧನ್ಯವಾದಗಳು. ಆಯಾಯ ಪಾತ್ರಗಳಿಗೆ ಹೊಂದಿಕೊಳ್ಳುವಂತೆ ನಟನಟಿಯರನ್ನು ಆರಿಸುವ ಕಾರ್ಯ ಬಹಳ ಕಷ್ಟದ್ದು. ಲಕ್ಷ್ಮೀನರಸಿಂಹಶಾಸ್ತ್ರಿಗಳು, ನಾರಾಯಣಮೂರ್ತಿಯಂತಹವರು ಇನ್ನೊಬ್ಬರು ಬೇಕೆಂದರೆ ಸಿಗುವುದು ಅನುಮಾನ. ನಿರ್ದೇಶಕರು ಆ ಮಹತ್ವದ ಕಾರ್ಯವನ್ನು ಹೆಚ್ಚು ಮೆಹನತ್ತಿನಿಂದ ಕೈಗೊಂಡಿದ್ದಾರೆ ಅನ್ನುವುದರಲ್ಲಿ ಸಂದೇಹವೇ ಇಲ್ಲ.

ಇನ್ನೊಂದು ಸಂಗತಿಯೆಂದರೆ, ಸೀತಾರಾಮ್‌ರವರು ವಕೀಲಿವೃತ್ತಿಯನ್ನು ಬಿಟ್ಟು ಧಾರಾವಾಹಿಗಳಲ್ಲಿ ನಿರತರಾಗಿದ್ದರೂ, ಅವರ ಪ್ರತಿಯೊಂದು ಕೃತಿಗಳಲ್ಲೂ ಅವರೇ ಮುಖ್ಯ ವಕೀಲರಾಗಿ ನ್ಯಾಯಾಲಯದ ಮುಂದೆ ಬಂದಿದ್ದಾರೆ, ವಕೀಲಿವೃತ್ತಿಯ ಮನೋಭಾವವನ್ನು ಬಿಟ್ಟಿಲ್ಲ ಅನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ? ಅವರ ಧಾರಾವಾಹಿಗಳು ಹೀಗೇ ಸಾಗುತ್ತಿರಲಿ ಎಂದು ಆಶಿಸುತ್ತೇನೆ. 

ಮಾಯಾಮೃಗ ಧಾರಾವಾಹಿಯನ್ನು ಅಮೆರಿಕಾದಲ್ಲಿರುವ ಕನ್ನಡಿಗರಿಗೆ ತೋರಿಸುವ ಸಲುವಾಗಿ ಡಿವಿಡಿ ಅನ್ಲಿಮಿಟೆಡ್ ಇಂಕ್ ಎಂಬ ಹೆಸರಿನಲ್ಲಿ ಒಂದು ಕಂಪೆನಿ ಸ್ಥಾಪಿತವಾಯಿತು. ನನ್ನ ಅಳಿಯ ಪುರುಷೋತ್ತಮ್ ಚಿಕ್ಕಾತೂರ್ ಮತ್ತು ಅವರ ಸ್ನೇಹಿತರು ನಂದಾವರ್ ಮೋಹನ್ ಪಾಲುದಾರರಾಗಿ ಕಂಪೆನಿ ನಡೆಸಿದರು. ಕೆಲವು ವರ್ಷಗಳ ನಂತರ ಅದು ನಿಂತುಹೋಯಿತು. ಈಗ ಡಿಸ್ಕ್ ತಯಾರಿಕೆಯೇ ಇಲ್ಲವಲ್ಲ. ನಮ್ಮ ಅದೃಷ್ಟ, ಮಾಯಾಮೃಗ ಯೂ ಟ್ಯೂಬ್‌ನಲ್ಲಿ ನಾವು ನೋಡಬಹುದು.



ಸಂಸಾರದ ಆಗುಹೋಗುಗಳನ್ನು ಲೇಖನರೂಪದಲ್ಲಿಯಾಗಲೀ, ಪುಸ್ತಕರೂಪದಲ್ಲಿಯಾಗಲೀ, ನಾಟಕ, ಚಲನಚಿತ್ರ, ಜನಗಳಿಗೆ ತಿಳಿಯಪಡಿಸುವ ಪ್ರಯತ್ನಗಳು ಎಷ್ಟೇ ಇರಲಿ, ಬದಲಾವಣೆ ಮಾಡುವುದು ಯಾರಿಗೂ ಸಾಧ್ಯವಿಲ್ಲ. ದಿನದಿನಕ್ಕೂ ಹೆಚ್ಚಾಗುತ್ತಿರುವ ಈ ಬವಣೆ ಎಂದಿಗೆ ಕೊನೆಗಾಣುತ್ತದೆಯೋ ಕಾದು ನೋಡಬೇಕು. ಅಲ್ಲಿಯವರೆಗೂ ನಾವು ಬದುಕಿರಬೇಕು!

  ನಮ್ಮ ಸ್ನೇಹಿತರೊಬ್ಬರು ಇನ್ನೂ ಕೆಲವಾರು ನಿದರ್ಶನಗಳನ್ನು ಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಸೂಚಿಸಿದರು. ಒಂದೆರಡು ಆದರೆ ಪರವಾಗಿಲ್ಲ ಅಂತ ನಾನೂ ಹೂ ಅಂದುಬಿಡ್ತಿದ್ದೆ. ಹಾಗೇನಾದರು ನಾನು ಆಗಲಿ ಎಂದು ಒಪ್ಪಿಕೊಂಡಿದ್ದರೆ, ಅದು ಒಂದು ದೊಡ್ಡ ಕಂತೆಯೇ ಆಗಬಹುದು. ಅದಕ್ಕೆ ನನಗೆಲ್ಲಿ ಬಿಡುವಿದೆ? ನಾನು ಮೊದಲೇ ಹೇಳಿರುವಂತೆ, ವಯೋಮಿತಿ, ಕಾಲಮಿತಿ, ಜ್ಞಾಪಕಶಕ್ತಿ, ???



Comments

  1. To write from a collection of memories at this age is remarkable Sir. Pranams.

    ReplyDelete

Post a Comment