ಬೆರಳಚ್ಚುಯಂತ್ರದ ವೈನೋದಿಕ ಕೊಡುಗೆಗಳು

 ಬೆರಳಚ್ಚುಯಂತ್ರದ ವೈನೋದಿಕ ಕೊಡುಗೆಗಳು

ಹಾಸ್ಯ ಲೇಖನ - ಅಣಕು ರಾಮನಾಥ್

‘Father and son went together’ ವಾಕ್ಯವನ್ನು ಟೈಪ್ ಮಾಡಲು ನೀಡಿದೆ.

‘Father and son went to get her’ ಎಂದು ಅವನು ಟೈಪ್ ಮಾಡಿದ. ಆ ಸಾಲು ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಪದಗಳನ್ನು ಒಡೆದಾಗ ಕಂಡುಬರುವ ಹೊಸ ಅರ್ಥಗಳನ್ನು ಗುರುತಿಸುವುದು ನನ್ನ ‘second nature’ ಆಗಿಬಿಟ್ಟಿತು.

ನಾನು ಓದಿದ್ದು ಸಿವಿಲ್ ಇಂಜಿನಿಯರಿಂಗ್. ತತ್ಸಂಬಂಧಿತವಾಗಿ ಕೆಲವು ಬಿಲ್‌ಗಳನ್ನು ಟೈಪ್ ಮಾಡಿಸಬೇಕಾಗಿತ್ತು. ‘ಕೊಟ್ಹೋಗಿ ಸಾರ್’ ಎಂದಳು ಆಕೆ. ಹಿಂತಿರುಗಿ, ತರಾತುರಿಯಿಂದ ಟೈಪ್ ಆದ ಬಿಲ್ಲಿನ ಮೇಲೆ ಕಣ್ಣಾಡಿಸದೆಯೇ ಕಟ್ಟಡದ ಮಾಲಿಕರ ಕೈಗೆ ನೀಡಿದೆ. ಇಡೀ ಬಿಲ್ಲಿನ ಮೇಲೆ ಕಣ್ಣಾಡಿಸಿ, ಮತ್ತೊಮ್ಮೆ ಪರಿಶೀಲಿಸಿದ ಅವರು, ‘ನಿಮ್ಮ ಪ್ರಾಮಾಣಿಕತೆಗೆ ಮೆಚ್ಚುತ್ತೇನೆ. ತಪ್ಪು ಮಾಡಿದವರು ಹೀಗೆ ಒಪ್ಪಿ ಬರೆದುಕೊಡುವುದು ವಿರಳ” ಎಂದರು.



ಬಿಲ್ಲನ್ನು ಹಿಂಪಡೆದು ಕೂಲಂಕಷವಾಗಿ ನೋಡಿದೆ. ‘Providing and laying cement concrete including mixing, curing, tamping, etc complete’ ಎಂದು ಇರಬೇಕಾದ ಜಾಗದಲ್ಲಿ ‘.... including MORPHING, TAMPERING and CURVING’ ಎಂದು ಟೈಪ್ ಮಾಡಿದ್ದಳಾಕೆ. ‘ಕಾಂಕ್ರೀಟಿನ ಆಕಾರವನ್ನು ಬದಲಾಯಿಸುವುದು, ಎಂದರೆ ಐದು ಇಂಚಿಗೆ ನಾಲ್ಕಿಂಚು ಹಾಕುವುದು; ಟ್ಯಾಂಪರಿಂಗ್ ಎಂದರೆ ಅದರ ಗುಣಮಟ್ಟದೊಡನೆ ಆಟವಾಡುವುದು; ಕರ್ವಿಂಗ್ ಎಂದರೆ ಸೊಟ್ಟಂಬಟ್ಟ ಮಾಡುವುದೆಲ್ಲವೂ ಗುತ್ತಿಗೆದಾರರ ಆಜನ್ಮಸಿದ್ಧ ಹಕ್ಕು. ಅವೆಲ್ಲವನ್ನು ಮಾಲಿಕರು ತೋರಿಸಿ ದಬಾಯಿಸುವುದು ರೂಢಿ. ಹೀಗೆ ನೀವೇ ಮೊದಲೇ ಒಪ್ಪಿಕೊಂಡುಬಿಟ್ಟರೆ ತೊಂದರೆಯೇ ಇಲ್ಲ’ ನುಡಿದರು ಮಾಲಿಕರು.

ಟೈಪಿಂಗ್ ಲೋಕವೇ ಒಂದು ಮಾಯಾಲೋಕ. ಒಂದು ಚುಕ್ಕೆ, ಒಂದು ಗೀಟು, ಒಂದು ಸೊನ್ನೆ, ಒಂದು ಕಾಮಾ ಬದಲಾದರೆ ಅಲ್ಲೋಲಕಲ್ಲೋವಾದೀತು; ಅಂತೆಯೇ ಕೆಲವೊಮ್ಮೆ ಹಾಸ್ಯದ ಬುಗ್ಗೆಯನ್ನೂ ಹರಿಸೀತು. ‘ಕಿರಣ್ ಅಜ್ಮೀರ್ ಗಯಾ’ ಎಂದು ಟೈಪ್ ಮಾಡುವವನು ‘ಕಿರಣ್ ಆಜ್ ಮರ್‌ಗಯಾ’ ಎಂದು ಮಾಡಿದ್ದುಂಟಂತೆ. ‘ಷಿಫ್ಟ್’ ಕೀಯನ್ನು ಎಲ್ಲಿ ಒತ್ತಬೇಕೋ ಅಲ್ಲಿ ಒತ್ತದಿದ್ದರೆ ‘ಘನ ವಿದ್ವಾಂಸ’ ಹೋಗಿ ‘ಗಣ ವಿದ್ವಾಂಸ’ ಆಗುತ್ತಾನೆ. ಬೆರಳು ಕೊಂಚ ಅತ್ತಿತ್ತ ಆಡಿದರೆ ಲಾಲಾ ಅಮರನಾಥನು ಕಾಕಾ ಅಮರನಾಥನಾಗುತ್ತಾನೆ. ಗಣೇಶನು ಘನೇಶನಾಗಿ ಘನತೆಯನ್ನು ಉಳಿಸಿಕೊಂಡರೂ ಕಲಾ ಖಳ ಆಗುವ ಸಂಭವ ಹೆಚ್ಚಿರುತ್ತದೆ.

ಕನ್ನಡದ ಕೀಬೋರ್ಡ್ ಕಥೆಯೂ ಸ್ಮರಣೀಯವೇ. ‘ಇಂಗ್ಲಿಷ್‌ನಲ್ಲಾದರೆ ೨೬ ಅಕ್ಷರಗಳು. ಕನ್ನಡದಲ್ಲಿ ಐವತ್ತು ಅಕ್ಷರಗಳೊಡನೆ ಒಂದಷ್ಟು ಒತ್ತಕ್ಷರಗಳು. ಇದಕ್ಕೆ ಬೇರೆಯೇ ಟೈಪ್‌ರೈಟರ್ ಬೇಕಾಗುತ್ತದೆ’ ಎಂದಾಗ ‘ಹಾಗೇನಿಲ್ಲ. ೨೬ ದೊಡ್ಡಕ್ಷರ, ೨೬ ಚಿಕ್ಕಕ್ಷರಗಳಿರುವುದರಿಂದ ಇಂಗ್ಲಿಷ್‌ನಲ್ಲಿರುವುದು ೫೨ ಅಕ್ಷರಗಳು. ಇದೇ ಕೀಬೋರ್ಡನ್ನೇ ಕನ್ನಡಕ್ಕೆ ಬಳಸಲು ಸಾಧ್ಯ’ ಎಂದರು ಕೆ.ಪಿ. ರಾವ್. ಅಂದು ಆರಂಭವಾದ ಕನ್ನಡ ಟೈಪಿಂಗ್ ಇಂದಿಗೂ ಎಷ್ಟೋ ಜನರ ಜೀವನೋಪಾಯವಾಗಿದೆ.



ಚುಕ್ಕೆ, ಗೀಟು, ಇತ್ಯಾದಿಗಳ ವಿಷಯವನ್ನು ನೋಡೋಣ. ‘Hang him. Not leave him’ ಎಂಬ ತೀರ್ಪನ್ನು ಕೋರ್ಟಿನ ಟೈಪಿಸ್ಟ್ ಟೈಪಿಸಬೇಕಾಗಿತ್ತು. ಆದೇಶದ ಪ್ರಕಾರ ಅಪರಾಧಿಯ ಪ್ರಾಣ ಹೋಗುವವರೆಗೆ ಅವನನ್ನು ಗಲ್ಲಿಗೇರಿಸಿಯೇ ಇರಬೇಕಿತ್ತು. ಟೈಪಿಸ್ಟ್ ‘Hang him not. Leave him’ ಎಂದು ಟೈಪ್ ಮಾಡಿದುದರ ಪರಿಣಾಮವಾಗಿ ಅಪರಾಧಿಗೆ ಖುಲಾಸೆಯಾಯಿತು. ನಮ್ಮ ರಸ್ತೆಗಳಲ್ಲಿ ಕೆಲಸ ನಡೆಯುವಾಗ ಕಂಡುಬರುವ ಬೋರ್ಡುಗಳಿಗೂ ಹೀಗೆ ಚುಕ್ಕೆಸ್ಥಾನ ಬದಲಾವಣೆ ಮಾಡಬೇಕೆಂದು ನನಗೆ ಎಷ್ಟೋ ಬಾರಿ ಅನ್ನಿಸಿದೆ. ‘‘Go slow. Work in progress’’ ಎನ್ನುವ ಜಾಗದಲ್ಲಿ, ಬಸವನಹುಳುವಿನ ವೇಗದಲ್ಲಿ ನಡೆಯುವ ಕೆಲಸಗಳನ್ನು ಕಂಡಾಗ ‘‘Go. Slow work in progress’’ ಎಂದು ಚುಕ್ಕೆಸ್ಥಾನ ಬದಲಾಯಿಸುವುದೇ ಸೂಕ್ತವಲ್ಲವೇ!

ಗೀಟಿನ ಕಥೆಯೂ ಅಂತಹದ್ದೇ. ‘His is a protest attitude’ ಎನ್ನುವುದು ವ್ಯಕ್ತಿಯೊಬ್ಬನ ಪ್ರತಿರೋಧ ಬುದ್ಧಿಯನ್ನು ತೋರುತ್ತದೆ. ಆದರೆ ಪ್ರೊ ಮತ್ತು ಟೆಸ್ಟ್ ಮಧ್ಯದಲ್ಲಿ ಅಡ್ಡಗೆರೆಯೊಂದನ್ನು ಹಾಕಿದರೆ pro-test ಆಗಿ ಅವನು ಪ್ರಯೋಗಶೀಲತೆಗೆ ಇಂಬು ಕೊಡುವವನು ಎಂದಾಗಿಬಿಡುತ್ತದೆ.

ಅಕ್ಷರಗಳು ಬಿಟ್ಟುಹೋಗುವುದರಿಂದ ಆಗುವ ಪ್ರಮಾದಗಳೂ ಅನೇಕ. ಎಲ್ಲೋ ಓದಿದ ಜೋಕ್ ಇದು. ಪತಿಯು ಹೊರದೇಶದ ನೈಸರ್ಗಿಕ ತಾಣವೊಂದರಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡು ‘Such a lovely place. I wish you were here’  ಎಂದು ಮೆಸೇಜ್ ಕಳುಹಿಸಿದ. ಕಡೆಯ e ಅದು ಹೇಗೋ ಅವನ ಕೈತಪ್ಪಿತ್ತು. ‘ಹಿಯರ್’ ಪದವು ‘ಹರ್’ ಆದ ಕಾರಣ ಪತಿಯು ಸುದೀರ್ಘವಾದ enquiryಗೆ ಒಳಪಡಬೇಕಾಯಿತು. ಒಂದು ಸೊನ್ನೆಯ ವ್ಯತ್ಯಾಸವಾದರೆ ಬಿಲ್ಲುಗಳಲ್ಲಿ ಸಂಖ್ಯೆಗಳು ವ್ಯತ್ಯಾಸವಾಗಿ ಅಕೌಂಟುಗಳು ಏರುಪೇರಾಗುವುದು ವೇದ್ಯವೇ. ಅಕ್ಷರಗಳಲ್ಲಿ ಒಂದು ಓ ವ್ಯತ್ಯಾಸವಾದರೆ ಆಂಗ್ಲದಲ್ಲಿ ‘ಗುಡ್’ ಹೋಗಿ ‘ಗಾಡ್’ ಆಗುವುದು; ‘ಶೌಟ್’ ಪದವು ‘ಶಟ್’ ಆಗುವುದು, ‘ಶಿ ಈಸ್ ಬ್ಯೂಟಿಫುಲ್’ ಎನ್ನುವುದರಲ್ಲಿ ‘ಓ’ವೊಂದು ತೂರಿಕೊಂಡರೆ ‘ಶೂ ಈಸ್ ಬ್ಯೂಟಿಫುಲ್’ ಆಗುವುದು. ವೇಗವಾಗಿ ಟೈಪ್ ಮಾಡಹೊರಟಾಗ ಹಾರುವ ಬೆರಳುಗಳು ಎಲ್ಲೆಲ್ಲೋ ತಗುಲಿ ಏನೇನೋ ಪ್ರಿಂಟಿಂಗ್ ಆಭಾಸಗಳಾಗುವುದು ಸರ್ವವಿದಿತವೇ.

ಕನ್ನಡದಲ್ಲಿ ಅನುಸ್ವಾರವೊಂದು ಹೋದರೆ ‘ವಂದಿಪೆ’ಯು ‘ವದಿಪೆ’ ಆಗುತ್ತದೆ; ಕಂಸನು ಕಸವಾಗುತ್ತಾನೆ; ಮಂಗವು ಮಗ ಆಗುತ್ತದೆ (ಟೀನೇಜಿನಲ್ಲಿ ಎರಡೂ ಒಂದೇ ಎನ್ನುವವರೂ ಇದ್ದಾರು!), ಮಂಜ ಮಜವಾಗುತ್ತಾನೆ, ಸಿಂಗವು ಸಿಗದಂತಾಗುತ್ತದೆ, ಸಂಬಂಧವು ಅರ್ಥಹೀನವಾಗುತ್ತದೆ, ವಿಸರ್ಗವಿಲ್ಲದ ದುಃಖ ಅದೇಕೋ ಮನಸ್ಸಿಗೆ ಅವಶ್ಯವಾದ ಭಾವವನ್ನು ನೀಡುವುದೇ ಇಲ್ಲ.

ಟೈಪ್‌ರೈಟರ್‌ಗಳ/ಕಂಪ್ಯೂಟರ್‌ಗಳ ಕೀಬೋರ್ಡಿನಲ್ಲಿಯೂ ಕೆಲವು ಜೀವನದ ಸಂದೇಶಗಳಿವೆ. ಅಕ್ಷರಗಳ ಮೂರು ಸಾಲುಗಳ ಪೈಕಿ ಮೇಲಿನ ಸಾಲಿನಲ್ಲಿ   ಡಬ್ಲ್ಯೂ  ಮತ್ತು ವಿ ಒಟ್ಟಿಗಿದ್ದು, ‘ವಿ’ ಅರ್ಥಾತ್ ನಾವು ಎನ್ನುವುದು ಎಂದಿಗೂ ಮೇಲಿನ ಸ್ಥಾನದಲ್ಲಿರುವುದೇ ಸರಿಯೆನ್ನುವುದನ್ನು ಸೂಚಿಸುತ್ತದೆ. ‘ಐ’ ಸಹ ಅದೇ ಸಾಲಿನಲ್ಲಿದೆ, ನಾನು ಎಂಬುದು ಅಹಂಕಾರಸೂಚಕವಲ್ಲವೆ ಎಂದು ಕೇಳುವವರಿಗೆ ಇದೋ ನನ್ನ ಉತ್ತರ – ಐ ಎನ್ನುವುದು ಯು ಅಕ್ಷರದ ನಂತರ ಬಂದಿದೆ. ‘ಪೆಹಲೇ ಆಪ್’ ಎನ್ನುವುದು ಸಭ್ಯತೆಯ ದ್ಯೋತಕ. ಕೀಬೋರ್ಡ್ ಇದನ್ನೇ ನಮಗೆ ಮುಗುಮ್ಮಾಗಿ ಸೂಚಿಸುತ್ತಿದೆ. ಎರಡನೆಯ ಸಾಲಿನಲ್ಲಿ ನಮ್ಮ ಬೆರಳುಗಳ ಪೈಕಿ ತರ್ಜನಿಯು ಕೂರುವುದು ಜಿ ಅಕ್ಷರದ ಮೇಲೆ, ಕನಿಷ್ಠಿಕಾ ಕೂರುವುದು ಎ ಅಕ್ಷರದ ಮೇಲೆ. ‘ಜೀ’ ಗೌರವಸೂಚಕ; ಏ ಸಂಬೋಧನಾಕ್ಷರ. ‘ಅಯ್ಯಾ, ಧಣೀ, ಜೀ ಎಂದರೆ ಸ್ವರ್ಗ; ಏ, ಎಲವೋ ಎಂದರೆ ನರಕ’ ಎನ್ನುವುದನ್ನು ಟೈಪಿಂಗ್ ಕೀಬೋರ್ಡ್ ಹೀಗೆ ನಮಗೆ ಸೂಚಿಸುತ್ತಿರುವುದನ್ನು ಎಂದಾದರೂ  ಗಮನಿಸಿದ್ದಿರೆ?

ಕೀಬೋರ್ಡಿನ ಅಕ್ಷರದಾಚೆಯ ಕೀಗಳು ‘ಸೂರ್ಯಚಂದ್ರರೇ ಶಿಫ್ಟ್‍ನಲ್ಲಿ ವರ್ಕ್ ಮಾಡುವಾಗ ಮನುಷ್ಯರಿಗೂ ಎರಡು ಶಿಫ್ಟ್‍ಗಳಿದ್ದು ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕೆಂದು ಸೂಚಿಸುತ್ತವೆ. ನಮ್ಮ ಇಡೀ ಜೀವನಕ್ಕೆ ತಳಹದಿಯೆಂದರೆ ನಿಯಂತ್ರಣವೇ – control your thoughts, control your emotions, control your desires ಎನ್ನುವುದರ ಸೂಚಕವಾಗಿ ಅತ್ತಿತ್ತ ಕಂಟ್ರೋಲ್ ಬಟನ್‌ಗಳಿವೆ. ಕೆಲವೊಮ್ಮೆ ಜೀವನದಲ್ಲಿ ಬದಲಾವಣೆ ಅವಶ್ಯವಾಗುತ್ತದೆ ಎನ್ನಲು ಆಲ್ಟ್ ಬಟನ್ ಇದೆ. ಲೆಕ್ಕವಿಲ್ಲದೆ ಜೀವನವಿಲ್ಲ; ಪ್ರತಿ ಪ್ರಾಣಿ, ಪಕ್ಷಿ, ಸಸ್ಯದ ಸೃಷ್ಟಿಯಲ್ಲಿಯೂ ಒಂದು ಲೆಕ್ಕಾಚಾರವಿದೆ ಎನ್ನುವುದನ್ನು ಸೂಚಿಸಲೋ ಎಂಬಂತೆ ಮೇಲುಸ್ತರದಲ್ಲಿ ಅಂಕಿಗಳಿವೆ.



ಟೈಪ್‌ರೈಟರ್ ಪತ್ತೇದಾರಿಕೆಯಲ್ಲಿಯೂ ನೆರವಾಗಿರುವ ಸಂದರ್ಭಗಳಿವೆ. ಅಕ್ಷರವೊಂದು ಸವೆದುಹೋಗಿದ್ದ ಟೈಪ್‌ರೈಟರ್‌ನಲ್ಲಿ ಟೈಪ್ ಆದ ಕಾಗದದ ಜಾಡು ಹಿಡಿದು ಅಪರಾಧಿಯನ್ನು ಹಿಡಿದಂತಹ ಪತ್ತೇದಾರಿ ಕಥೆಯೊಂದಿದೆ. ಕನ್ನಡದ ಶ್ರೇಷ್ಠ ಪತ್ತೇದಾರಿ ಕಥೆಗಾರ ಟಿ.ಕೆ.ರಾಮರಾವ್‌ರ ‘ಬೆನ್ನುಕಾಗದ’ ಸಹ ಟೈಪ್‌ರೈಟರ್ ನೀಡಿದ ಸುಳಿವಿನ ಮೂಲಕ ಅಪರಾಧಿಯನ್ನು ಹಿಡಿದುದನ್ನು ವರ್ಣಿಸುವ ಕಥೆಯಾಗಿದೆ.  

ಈ ಲೇಖನವನ್ನು ನೀವು ಓದುತ್ತಿರುವುದು ಸಹ ಟೈಪ್‌ರೈಟರ್ ಉರುಫ್ keyboardನ ಕೃಪೆಯಿಂದಲೇ. ೧೪೯ ವರ್ಷಗಳ ಹಿಂದೆ (೧೮೭೪) ಸಂವಹನದಲ್ಲಿ ಕ್ರಾಂತಿಯನ್ನೇ  ಉಂಟುಮಾಡಿದ ಟೈಪ್‌ರೈಟರ್‌ಗೆ ಇದೋ ನಿಮ್ಮೆಲ್ಲರ ಪರವಾಗಿ ಒಂದು ಸಲಾಂ.


Comments