ಅನಿವಾಸಿಯ ಹೊರಳುಗಳು

ಅನಿವಾಸಿಯ ಹೊರಳುಗಳು

ಮೇರಾ ಜೂತಾ ಹೈ ಜಪಾನಿ ಏ ಪತಲೂನ್ ಇಂಗ್ಲಿಸ್ತಾನಿ

ಸರ್ ಪೇ ಲಾಲ್ ಟೋಪಿ ರೂಸಿ ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ ||

ಅನಿವಾಸಿಯ ಸ್ಪಷ್ಟ ಚಿತ್ರಣವನ್ನು ಇದಕ್ಕಿಂತ ಸೊಗಸಾಗಿ ಯಾರೂ ಕೊಡಲು ಸಾಧ್ಯವಿಲ್ಲ. “ಚಲೊ ಉಡ್ ಜಾ ರೇ ಪಂಛೀ ಕೀ ಅಬ್ ಯೇ ದೇಶ ಹುವಾ ಬೇಗಾನಾ” ಎಂಬ ಪರಿಸ್ಥಿತಿಗೆ ಮನೆಯ ಪರಿಸ್ಥಿತಿಯೋ, ಮನದ ಪರಿಸ್ಥಿತಿಯೋ ತಲುಪಿದಾಗ “ಹಮ್ ಛೋಡ್ ಚಲೇ ಹೈ ಮೆಹಫಿಲ್ ಕೋ” ಎನ್ನುತ್ತಾ ಹೊರಡುವ ಅನಿವಾಸಿಗೆ Doleful existence ಗಿಂತ Dollar-full subsistence ಮುಖ್ಯವಾಗುತ್ತದೆ.



ಅನಿವಾಸಿಗಳಲ್ಲಿ ಹಲವು ವಿಧ – ಅನಿವಾಸಿ ಬೈ ಚಾಯ್ಸ್; ಅನಿವಾಸಿ ಬೈ ಚಾನ್ಸ್; ಅನಿವಾಸಿ ಬೈ ಮ್ಯಾರೇಜ್. ಅನಿವಾಸಿ ಬೈ ಚಾಯ್ಸ್ ಆಗುವುದು ಅರ್ಜುನನ ಕಾಲದಿಂದಲೂ ಇದೆ. ನಾಯಿಯು ಚಪ್ಪಲಿಯನ್ನು ಕಚ್ಚಿಕೊಂಡುಹೋದ ಕಾರಣ ಸಹೋದರನು ದ್ರೌಪದಿಯೊಂದಿಗೆ ಇರುವುದನ್ನು ಅರಿಯದೆ ಒಳನುಗ್ಗಿ, “ಗೆಟ್ ಔಟ್ ಆಫ್ ಹಿಯರ್” ಎಂದು ಶಾಪವಿಕ್ಕಿಸಿಕೊಂಡ ಅರ್ಜುನನೇ ಮೊಟ್ಟಮೊದಲ ಅನಿವಾಸಿ. ಆಗೆಲ್ಲ ನೂರಾರು ದೇಶಗಳಿದ್ದ ಕಾಲ. ಮಣಿಪುರ, ನಾಗಲೋಕ, ಹಸ್ತಿನಾಪುರಗಳೆಲ್ಲ ಡಿಫರೆಂಟ್ ಸ್ಟೇಟ್ಸ್ ರೂಲ್ಡ್ ಬೈ ಡಿಫರೆಂಟ್ ರೂಲರ್ಸು. ಅರ್ಜುನನು ಅಲ್ಲೆಲ್ಲ ಹೋಗಿ, ಹೋದಲ್ಲೆಲ್ಲ ಒಂದೊಂದು ಸಂಸಾರವನ್ನು ಸ್ಥಾಪಿಸಿ, ಅನಿವಾಸಿ ಅಷ್ಟೇ ಅಲ್ಲದೆ ಮೊಟ್ಟಮೊದಲ ಅನೇಕಾನಿವಾಸಿ ಎಂಬ ಕೀರ್ತಿ(?)ಗೂ ಭಾಜನನಾದನು. ಶಾಪಗ್ರಸ್ತನಾದ ಕಾರಣ ಹೊರಹೋಗಲೇ ಬೇಕಾಗಿದ್ದ ಕಾರಣ ಅರ್ಜುನನದು ಅನಿವಾಸಿ ಬೈ ಚಾನ್ಸ್. (ಹೊರಹೋಗಿ ಮೂವರೂ ಸುಂದರಿಯರನ್ನು ಮದುವೆಯಾಗುವುದು ಚಾನ್ಸೇ ಅಲ್ಲವೇ!)

ಸಮುದ್ರಮಥನ ನಡೆಯುತ್ತಿತ್ತು. ಒಂದೊಂದಾಗಿ ವಸ್ತುಗಳು ಹೊರಬರುತ್ತಿದ್ದವು. ಹಾಗೆ ಬಂದ ವಸ್ತುಗಳ ಪೈಕಿ ಲಕ್ಷ್ಮಿಯೂ ಒಬ್ಬಳು. ಸಮುದ್ರರಾಜನು ವಿಷ್ಣುವಿನತ್ತ ತಿರುಗಿ “Will you marry my daughter?” ಎಂದು ಕೇಳಿದ. ವಿಷ್ಣುವು ಸಮ್ಮತಿಸಿದ. “One condition. You will have to stay in my place”  ಎಂದ ಸಮುದ್ರರಾಜ. “ಊಹೂ. ದೇವಲೋಕದಲ್ಲೇ...” ಎಂದು ಹೇಳಹೊರಟ ವಿಷ್ಣುವು ಇಂತಹ ಸಕಲೈಶ್ವರ್ಯ ಸಂಪನ್ನೆ Change of placeಗೆ ಒಪ್ಪದಿದ್ದರೆ ಕೈಗೆ ಬಂದ ತುತ್ತು boyಗೆ ಬರದಂತಾದೀತೆಂದು ಕ್ಷೀರಸಾಗರದಲ್ಲಿರಲು ಸಮ್ಮತಿಸಿ, ಸಮುದ್ರರಾಜನು ನೀಡಿದ ಫ್ಲೋಟಿಂಗ್ ಬೆಡ್‍ನಲ್ಲಿ ಪವಡಿಸಿದ. ವಿಷ್ಣುವೇ ವಿಶ್ವದ ಎರಡನೆಯ ಅನಿವಾಸಿ ಬೈ ಚಾಯ್ಸ್. ಮೊದಲನೆಯವನು ಪರ್ವತರಾಜನ ಮತ್ತು ಅವಳ ಪುತ್ರಿಯ ಮಾತನ್ನು ಮೀರಲಾರದೆ ಕೈಲಾಸದಲ್ಲಿಯೇ ಉಳಿದ ಶಿವ.

ರಾವಣ ಬಂದ. ಮಯಾಸುರನ ಮಗಳನ್ನು ನೋಡಿದ. “ವರಿಸುವೆನೈ ನಿನ್ನ ಕುವರಿಯನ್ನು” ಎಂದ. ಬೇಡವೆಂದರೆ ಮಯಾಸುರನಿಗೆ ಪರ್ಮನೆಂಟ್ worry  ಆಗುವಂತೆ ನಡೆದುಕೊಳ್ಳುವ ತಾಕತ್ತು ರಾವಣನಿಗಿದೆ ಎಂದು ಮಯಾಸುರನಿಗೆ ಗೊತ್ತಿತ್ತು. ರಾವಣನು ತಾನು ಲಂಕಾಧಿಪತಿಯೆಂದ. ಲಂಕೆ ಶ್ರೀಮಂತ ದೇಶವೋ ಅಲ್ಲವೋ ಮಯಾಸುರನಿಗೇನು ಗೊತ್ತು! ಇಂದಿನ ವರಗಳ ಸ್ಟೇಟಸ್ಸನ್ನು ಅವರು ಬಂದ ವೆಹಿಕಲ್‍ಗಳ ಮೇಲೆಯೇ ನಿರ್ಧರಿಸುವಂತೆಯೇ ಮಯಾಸುರನೂ “How have you come?” ಎಂದ. ರಾವಣನು “By flight” ಎನ್ನುತ್ತಾ ತಾನು ದರೋಡೆ ಮಾಡಿ ತಂದಿದ್ದ ಪುಷ್ಪಕ ವಿಮಾನವನ್ನು ತೋರಿಸಿದ. ಮಯಾಸುರ, ಮಂಡೋದರಿ “ಆಲ್‍ರೈಟ್” ಎಂದರು. ಈ ರೀತಿಯಲ್ಲಿ ಮಂಡೋದರಿ ಜಗದ ಮೊಟ್ಟಮೊದಲ ಅನಿವಾಸಿ ಬೈ ಮ್ಯಾರೇಜ್ ಆದಳು.

“ಅನ್ನಿದಾನಿಕಿ ಒಕ ರಾಗಮುಂದಿ, ಒಕ ಲಯಮುಂದಿ” ಎನ್ನುತ್ತಾರೆ ಶಂಕರಾಭರಣದ ಶಂಕರಶಾಸ್ತ್ರಿ. ನಿವಾಸಿಗಳಿದು ಒಂದೇ ರಾಗ: ವಿದೇಶವನ್ನು ನೋಡೋದು ಯಾವಾಗ? ಅನಿವಾಸಿಗಳದೂ ಒಂದೇ ರಾಗ; “ವಾಪಸ್ಸು ಬಂದುಬಡ್ತೇವೆ ಎರಡು ವರ್ಷದಾಗ!” ಹೋದವಾರ ನಮ್ಮ ಮನೆಗೆ ಬಂದಿದ್ದ ಹಿರಿಯ ಅನಿವಾಸಿಯೊಬ್ಬರೂ “ಇನ್ನು ಟೂ ಇಯರ್ಸ್ ಅಷ್ಟೇ ಸಾರ್. ಆಮೇಲೆ ಇಲ್ಲಿಗೇ ಬಂದ್ಬಿಡೋದೇ” ಎಂದರು. ಈ ಮಾತನ್ನು ಅವರು ಕಡೆಯ ಐವತ್ತಾರು ವರ್ಷಗಳಿಂದಲೂ ಹೇಳುತ್ತಿರುವರಂತೆ. ಅವರು ಅನಿವಾಸಿಯಾದಾಗ ಅವರಿಗೆ ಮೂವತ್ತರ ಪ್ರಾಯ. ಇನ್ನೂ ಹದಿನಾಲ್ಕು ವರ್ಷಗಳು ಹೀಗೆಯೇ ಹೇಳುವ ಸಾಧ್ಯತೆ ಇದೆಯಂತೆ.

ಅ-ನಿವಾಸಿ ಎಂದರೆ ನಿವಾಸದಲ್ಲಿ ಇಲ್ಲದವನೆಂದರ್ಥ. ಪ್ರತಿ ಪ್ರವಾಸಿಯೂ ಅ-ನಿವಾಸಿಯೇ. “Being a nomad and not being mad about it”  ಎಂಬ ಧೋರಣೆ ಇದ್ದವನು ಮಾತ್ರ ಅ-ನಿವಾಸಿ ಆಗಿರಬಲ್ಲ. ವಿಶ್ವದ ಅತಿ ಪ್ರಮುಖ ಅ-ನಿವಾಸಿಗಳೆಂದರೆ ಗಾಳಿ, ಮೋಡ ಮತ್ತು ಜಲ.

ಮರಗಳ ಸಂದಲಿ ಸೊಯ್ಯನೆ ತೂರುತ | ಗಿರಿಗಳ ಶಿಖರವ ರೊಯ್ಯನೆ ಏರುತ |

ಬಿರುಬೇಸಿಗೆಯಲಿ ತಣ್ಪನು ಹರಡುತ | ಗಾಳಿ ಬೀಸುತಿದೆ ನೋಡಿದಿರಾ... ||

ಹಡಗಿನ ಹಾಯಿಗೆ ದಿಕ್ಕನು ನೀಡಿ | ಜಡಜೀವಿಗಳಿಗೆ ತ್ರಾಣವ ನೀಡಿ |

ಸಡಗರದಿಂದಲಿ ಅಲ್ಲಿಂದಿಲ್ಲಿಗೆ | ಗಾಳಿ ಬೀಸುತಿದೆ ನೋಡಿದಿರಾ... ||

ಹೂವಿನ ಪರಿಮಳ ಮೈಗೇರಿಸುತ | ಗೋಗಳ ಗಂಟೆಯ ಕಿಣಿಕಿಣಿಸುತ್ತ |

ಸಾವಿರ ಸಾವಿರ ಮೈಲಿಗಳುದ್ದಕೆ | ಗಾಳಿ ಬೀಸುತಿದೆ ನೋಡಿದಿರಾ... ||

ಎಂದು ಈ ಅ-ನಿವಾಸಿಯ ಬಗ್ಗೆ ವರ್ಣಿಸಬಲ್ಲ ಕವಿಪಡೆಯಿದ್ದೀತು. “ಎಂದಿಗೂ ನಿಲ್ಲದಿರು; ಮನೆಯನೆಂದು ಕಟ್ಟದಿರು” ಎಂದು ಕುವೆಂಪು ಬರೆದುದೂ ಗಾಳಿಗೆ ಬಹಳ ಸೂಕ್ತವಾಗಿ ಅನ್ವಯವಾಗುತ್ತದೆ. ಗಾಳಿ ನಿಶ್ಚಲವಾದರೆ ಬದುಕು ನಿಶ್ಚಲಮಲ್ತೇ!

ಎರಡನೆಯ ಪರ್ಮನೆಂಟ್ ಅ-ನಿವಾಸಿಯೇ ಮೋಡ.

ಆಷಾಢಸ್ಯ ಪ್ರಥಮ ದಿವಸೇ ಮೇಘಮ್ ಆಶ್ಲಿಷ್ಟ ಸಾನುಂ |

ವಪ್ರಕ್ರೀಡಾ ಪರಿಣತ ಗಜ ಪ್ರೇಕ್ಷಣೀಯ ದದರ್ಶ ||

ಎಂದು ಕಾಳಿದಾಸನು “ಮೇಘದೂತ”ದಲ್ಲಿ ವರ್ಣಿಸಿದ್ದಾನೆ. “ಆನೆಗಳು ತಮ್ಮ ಚೂಪಾದ ದಂತದಿಂದ ಬೆಟ್ಟದ ಕಿಬ್ಬದಿಯನ್ನು ತಿವಿಯುತ್ತಾ ಅಗೆದು, ಕಲ್ಲು ಮಣ್ಣುಗಳನ್ನು ಚೆಲ್ಲಾಟವಾಡುವ ದೃಶ್ಯದಂತೆ ಆ ಮೋಡವು ಯಕ್ಷನ ಕಣ್ಣಿಗೆ ಕಂಡಿತು” ಎನ್ನುತ್ತಾನೆ ಕಾಳಿದಾಸ. ನಮಗೆ ಕೇವಲ ಹತ್ತಿಯ ಉಂಡೆಗಳಂತೆಯೋ, ಕಾಟನ್ ಕ್ಯಾಂಡಿಯಂತೆಯೋ ಕಾಣುವ ಮೋಡವು ಕಾಳಿದಾಸನಿಗೆ ಯಾವ ಯಾವ ಆಕಾರಗಳಲ್ಲಿ ಕಂಡಿತೆನ್ನುವುದನ್ನು “ಮೇಘದೂತ”ವನ್ನು ಓದೇ ಅರಿಯಬೇಕು.

ಮೋಡಗಳಿಗೂ NRIಗಳಿಗೂ ಬಹಳ ಸಾಮ್ಯವಿದೆ. ಮೋಡಗಳಂತೆಯೇ ಅವರೂ ಹನಿಹನಿಯಾಗಿ ಹಣವನ್ನು ಶೇಖರಿಸುತ್ತಾರೆ. ಭಾರತಕ್ಕೆ ಬರಬೇಕಾದ ಸಂದರ್ಭ ಒದಗಿಬಂದಾಗ “ಸರ್ವಭೂತತೃಪ್ತಿ”ಗಾಗಿ ಮೋಡಗಳಂತೆಯೇ ಶೇಖರಿಸಿದ್ದೆಲ್ಲವನ್ನೂ ಮಳೆಸುರಿಸಿ ಖಾಲಿಯಾಗಿಬಿಡುತ್ತಾರೆ. ಭಾರತದಿಂದ ಹಿಂತಿರುಗುವಾಗ ಹೃದಯ ಭರ್ತಿ; ಜೇಬು ಖಾಲಿ! 


ಮೂರನೆಯ ಅ-ನಿವಾಸಿ ಜಲ. ಈಶ್ವರನು ಜಲವನ್ನು ಜಟೆಯಲ್ಲಿ ಕಟ್ಟಿಕೊಂಡಿದ್ದರೂ ಭಗೀರಥನಂತಹವರು “ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ; ದೇವದೇವರನು ತಣಿಸಿ ಬಾ; ದಿಗ್ದಿಗಂತದಲಿ ಹಣಿಸಿ ಬಾ; ಚರಾಚರಗಳಿಗೆ ಉಣಿಸಿ ಬಾ” ಎಂದು ರೂಟ್ ಮ್ಯಾಪ್ ಹಾಕಿ ಕೆಳಗಿಳಿಸಿಬಿಡುತ್ತಾರೆ. ಕೆಲವೊಮ್ಮೆ “ಜಲವೀರರು” ಪರನಾಡಿಗೆ ನೀರು ಹರಿಯದಂತೆ ದಿನವೆಲ್ಲ ಎಚ್ಚರ ವಹಿಸಿದರೂ “ಚಲ್ನಾ ಪೊಲಿಟಿಕ್ಸ್ ಕೀ ಕಹಾನಿ; ರುಕ್ನಾ ಪಾರ್ರ್ಪಿಯಾಲ್ಟೀ ಕೀ ನಿಶಾನಿ” ಎನ್ನುತ್ತಾ ಆಳುವ ಪಕ್ಷಗಳು ಅಳುವ ಪಕ್ಷಗಳಿಗೆ ರಾತ್ರೋರಾತ್ರಿ “ಜಲಭಾಗ್ಯ” ಕರುಣಿಸಿಬಿಡುತ್ತವೆ.

ಅನಿವಾಸಿಗಳು ಸ್ವದೇಶದಿಂದ ಬಂದವರನ್ನು ಕಾಣುವ ಪರಿಯೂ ವಿಭಿನ್ನ. ಕೆಲವೆಡೆಗಳಲ್ಲಿ ರಾಜಾತಿಥ್ಯ ದೊರೆತರೆ, ಕೆಲವೊಮ್ಮೆ “ಜನನೀ ಜನ್ಮಬೂಮಿಶ್ಚ...” ಎನ್ನಿಸಿಬಿಡುತ್ತದೆ. ನನಗಂತೂ ಸಿಡ್ನಿಯ ಪ್ರವಾಸ ಎಲ್ಲ ಸುಕಾರಣಗಳಿಂದ ಅವಿಸ್ಮರಣೀಯ. ಆದರೆ ಮಾಸ್ಟರ್ ಹಿರಣ್ಣಯ್ಯನವರದು ಅತ್ಯದ್ಭುತ ಆತಿಥ್ಯದಿಂದ ಹಿಡಿದು “ಛೀ” ಎನಿಸುವಂತಹ ಅನುಭವದವರೆಗಿನ ಕೆಲಿಡಿಯೋಸ್ಕೋಪ್. ಅಮೇರಿಕಾ ಪ್ರವಾಸದಲ್ಲೊಮ್ಮೆ ಅನಿವಾಸಿಯೊಬ್ಬರು “ನಮ್ಮ ಮನೆಯಲ್ಲೇ ಇರಬೇಕು ತಾವು” ಎಂದ ಕೊರಳಕರೆಯನ್ನೇ ಕರುಳಕರೆಯೆಂದು ಭಾವಿಸಿದ ಮಾಸ್ಟರ್ ಅವರ ಮನೆಯಲ್ಲಿ ಅಂದು ರಾತ್ರಿ ತಂಗಿದರು. ಮಧ್ಯರಾತ್ರಿಯಲ್ಲಿ ಹಿಮಾಲಯದ ಹಿಮವೇ ಮೈಮೇಲೆದಿಯೇನೋ ಎಂದು ಭಾಸವಾಗುವಷ್ಟು ಚಳಿಗೆ ತರಗೆಲೆಯಂತೆ ನಡುಗತೊಡಗಿದರು. ಮರದ ಮಂಚದ ಮೇಲೆ ಮಲಗಿ ಹಾಸಿಗೆಯನ್ನೇ ಹೊದಿಕೆಯಾಗಿ ಹೊತ್ತರೂ ತಗ್ಗದ ಚಳಿ. ಬೆಳಗಿನವರೆಗೆ ಅಪ್ಪ-ಮಗನಿಗೆ ಹಿಮವತ್ಪವರ್ತದ ಮರದಲ್ಲಿನ ಎಲೆಗಳಿಗೆ ಆಷಾಢದಲ್ಲಾಗುವ ಅನುಭವದ fisrt hand experience.  ಬೆಳಗ್ಗೆ ಮನೆಯವರಲ್ಲಿ “ಅದೇನು ಚಳಿ ಸಾರ್! ನೀವು ಹೇಗೆ ತಡೆದಿರಿ?” ಎಂದು ಕೇಳಿದರೆ “Oh! We had turned on our room heater. To save power, we had switched off the one in your room”  ಎಂದರು. ಅನಿವಾಸಿಗಳೊಡನೆ ಆದ ಅನುಭವಗಳು ತಮಗೆ “ಸುಖದುಃಖೇ ಸಮೇ ಕೃತ್ವಾ” ಎಂಬುದನ್ನು ಅಳವಡಿಸಿಕೊಳ್ಳಲು ಸಹಾಯಕವಾದವೆಂದು ಮಾಸ್ಟರ್ ನುಡಿಯುತ್ತಿದ್ದರು.

ಅ-ನಿವಾಸಿಗಳ ಪೈಕಿ ಅತಿ ದೊಡ್ಡ ಅಲೆಮಾರಿಯೇ ಆತ್ಮ ಎನ್ನುತ್ತದೆ ಅಧ್ಯಾತ್ಮ. ಒಂದು ದೇಹದಿಂದ ಮತ್ತೊಂದು ದೇಹಕ್ಕೆ, ಅದಾವ ಲಾಭಕ್ಕೆಂದೂ ಅರಿಯದೆ, ಅಲೆದಾಡುವ ಆತ್ಮದ ಬಗ್ಗೆ ಬರೆಯತೊಡಗಿದರೆ ಮತ್ತೊಂದು ಲೇಖನವೇ ಆದೀತು.

“ಅನಿವಾಸಿ”ಯ ಬಗ್ಗೆ ಬರೆಯಿರಿ ಎಂದು ಗೆಳತಿ ಅನಸೂಯ ಶಿವರಾಮ್ ಕೋರಿದುದರ ಮೇರೆಗೆ ಈ ಲೇಖನ. ನಿವಾಸಿ-ಅನಿವಾಸಿಗಳ ಸುಸ್ನೇಹವೇ ಕನ್ನಡವು ಗಡಿ ದಾಟಲು ಅವಶ್ಯವಾದ ಸೇತುವೆ. ಡುಂಡಿರಾಜರೇ ಹೇಳುವಂತೆ,

ಎನ್ನಾರೈ ಎನ್ನಾರೈ ನಮ್ಮಯ ನೆಚ್ಚಿನ ಎನ್ನಾರೈ

ವಿದೇಶದಲ್ಲಿ ನಮ್ಮನು ಕಾವರು ನೀವೇ ಅಲ್ಲದೆ ಇನ್ನಾರೈ!

Comments

  1. ನಾನು ಅನಿವಾಸಿ ಪದ ಸೂಚಿಸಿದಾಗ ಏನೋ ನಮ್ಮಂತಹ ಬಡಪಾಯಿ ಅನಿವಾಸಿಗಳ ಬಗ್ಗೆ ಒಂದು ಹಾಸ್ಯ ಲೇಖನದ ನಿರೀಕ್ಷೆಯಲ್ಲಿದ್ದೆ. ಪಾರ್ಥ, ಪನ್ನಗಶಯನ, ಪರಮೇಶ್ವರ, ಪವನ, ಪಾನೀಯ,ಪರ್ಜನ್ಯಗಳನ್ನೂ ಅನಿವಾಸಿಗಳೆಂದು ಪ್ರೂವ್ ಮಾಡಿ ಪರದೇಶಿಗಳ ಸ್ಟೇಟಸನ್ನು ಇಂಪ್ರೂವ್ ಮಾಡಿದ್ದಾರೆ ರಾಂಜೀಯವರು! ಈ ಅಮೂಲ್ಯ ಲೇಖನ ಅನಿವಾಸಿಗಳ ಮನದಲ್ಲಿ ಸದಾ ನಿವಾಸ ಮಾಡುವುದರಲ್ಲಿ ಸಂದೇಹವೇ ಇಲ್ಲ.

    ReplyDelete
  2. ಅನಿವಾಸಿಗಳು ಖುಷಿ ಪಡುವಂತಹ ಲೇಖನ. ಧನ್ಯವಾದ ಸರ್.

    ReplyDelete

Post a Comment