ಪೂರ್ವ ಜನ್ಮವೆಂಬ ಪವಾಡ

ಪೂರ್ವ ಜನ್ಮವೆಂಬ ಪವಾಡ

ಲೇಖನ - ಶ್ರೀಮತಿ ಮಂಜುಳಾ ಡಿ


ರಾಜಸ್ಥಾನದ ಪರಾವಲ್ ಗ್ರಾಮದಲ್ಲಿ ತಾಯಿ ದುರ್ಗಾ ತಂದೆ ರತನ್ ಸಿಂಗ್ ಅವರ ನಾಲ್ಕು ವರ್ಷದ ಮಗಳು ಕಿಂಜಲ್.  ಮುಗ್ಧ ಮಗುವಾಗಿದ್ದ ಕಿಂಜಲ್  ನಾಲ್ಕನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ತಾನು ಉಷಾ ಎಂದೂ ಪಿಂಪಲ್ ಪಾತ್ರಿ ಊರಿನಲ್ಲಿ ತನ್ನ ತಂದೆ, ತಾಯಿ, ಅಣ್ಣ ಇದ್ದಾರೆ ಎಂದೂ , ಗಂಡನ‌ ಮನೆ ಓಡನ್ ನಲ್ಲಿ ಇದೆ ಹಾಗೂ 9 ವರ್ಷಗಳ ಹಿಂದೆ ತನ್ನ ಸಾವು ಸಂಭವಿಸಿತು ಎಂದು ಹೇಳತೊಡಗಿದಳು.  ತನ್ನನ್ನು ತನ್ನ ತಂದೆ ತಾಯಿ ಬಳಿ ‌ಕರೆದೊಯ್ಯಿರಿ ಎಂದು ಹಠ ಮಾಡಲಾರಂಭಿಸಿದಳು. 

ಕಿಂಜಲ್
ಕಿಂಜಲ್


ಕಿಂಜಲ್ ಳ‌ ಮಾತು ಮೊದಲಿಗೆ ಆಕೆಯ ತಂದೆ-ತಾಯಿಗೆ ತಮಾಷೆಯಾಗಿ ತೋರಿದರೂ,  ಕ್ರಮೇಣ ಕಿಂಜಲ್ ಳ ಹಠ ಹೆಚ್ಚಾಗತೊಡಿತು. ಪೋಷಕರು ಗಾಬರಿಬಿದ್ದರು. ವೈದ್ಯರು-ದೈವ ಎಲ್ಲಾ ಮಾಡಿದರೂ ಯಾವುದೇ ಉಪಯೋಗವಾಗಲಿಲ್ಲ. ಈ ವಿಷಯ ಪಿಂಪಲ್ ಪಾತ್ರಿ ತಲುಪಿ, ಉಷಾಳ ಅಣ್ಣಾ ಪಂಕಜ್ ಪರಾವಲ್ ಗೆ ದೌಡಾಯಿಸಿದ. ಪಂಕಜ್ ನ ಕಂಡೊಡನೇ, ನಾಲ್ಕರ ಬಾಲೆ ಕಿಂಜಲ್ ಳ‌ ಜಗತ್ತು ಆಕಾಶದಷ್ಟು ಅಗಲವಾಯಿತು. ಬಹುದಿನಗಳಿಂದ ಕಾತರಿಸಿದ‌ ಆಪ್ತ ಜಗತ್ತಿಗೆ ಮತ್ತೆ ಮರಳಿದಂತೆ. ಪಂಕಜ್ ತನ್ನ ಮೊಬೈಲಿನಲ್ಲಿ ಉಷಾ ಮತ್ತು ಆಕೆಯ ತಾಯಿ ಗೀತಾರ ಒಟ್ಟಿಗೆ ಇರುವ ಫೋಟೋ ತೊರಿಸಿದೊಡನೇ, ಕಿಂಜಲ್ ಳ  ಮನಸ್ಸು ವರ್ಷಗಳಿಂದ ಹಿಡಿದಿಟ್ಟ ಭಾರ ಸುರಿಸುವಂತೆ ಧಾರಾಕಾರವಾಯಿತು. ಕೊನೆಗೂ ಜೂನ್ 14 - 2022 ರಂದು ಕಿಂಜಲ್ ತನ್ನ ತಂದೆಯೊಂದಿಗೆ ಪಿಂಪಲ್ ಪಾತ್ರಿಗೆ ಹೋದಾಗ ಒಮ್ಮೆ ಆಕೆಯ ಸುತ್ತಲಿದ್ದವರು ಕಂಪಿಸುವಂತೆ ಪ್ರತೀ ಸ್ಥಳ ಗುರುತಿಸುವುದಲ್ಲದೇ,  ಹಲವಾರು ಹೆಂಗಸರನ್ನು ಬಹುಕಾಲದ ಪರಿಚಯವೆಂಬಂತೆ  ಮಾತಾಡಿಸುತ್ತಾ ಸಾಗಿದಳು. 


ನಾಲ್ಕರ ಬಾಲೆ ಅಪರಿಚಿತ ಸ್ಥಳದಲ್ಲಿ ಜನರನ್ನ ಗುರುತಿಸಿದ ರೀತಿ, ‌ಮಾತಾಡಿದ ಶೈಲಿ ನೋಡಿದ ಎಲ್ಲರಿಗೂ ಉಷಾ-ಕಿಂಜಲ್ ಆಗಿ ಜನ್ಮಿಸಿದ್ದಾಳೆ ಎಂಬ ಬಗ್ಗೆ ಯಾವ ಪ್ರಶ್ನೆ ಉಳಿಯಲಿಲ್ಲ. ಇದಾದ ನಂತರ ಉಷಾ-ಕಿಂಜಲ್ ಕುಟುಂಬ ಆಪ್ತವಾಗಿವೆ.

ಈ ವಿಷಯವನ್ನು  ಓದಿ ಮುಗಿಸುವ ಹೊತ್ತಿಗೆ ನನ್ನ  ಮನಸ್ಸು ಕದಡಿ ಹೋಗಿತ್ತು.    ಪುನರ್ಜನ್ಮ ನಿಜಕ್ಕೂ ಇದೆಯೇ...!?  ಎಂಬುದೊಂದೇ ಅನಂತದವರೆಗೂ ರಿಂಗಣಿಸುತ್ತಿದ್ದ ಪ್ರಶ್ನೆಯಾಗಿ‌ ಕಾಡತೊಡಗಿತು. ಅತ್ರಿ ಪುತ್ರನಾಗಿ ಜನಿಸಿದ ದತ್ತಾತ್ರೇಯ ಪ್ರತಿ ಜನ್ಮದಲ್ಲೂ ಜನರ ಸಂಕಷ್ಟ ಪರಿಹರಿಸಲು ಭೂಮಿಯ ಮೇಲೆ ಅವತರಿಸುವುದಾಗಿ ಸಂಕಲ್ಪಿಸಿದ. ರಾಮ-ಕೃಷ್ಣ-ಉಗ್ರ ನರಸಿಂಹ ಇವೆಲ್ಲಾ ರಾಕ್ಷಸ ಸಂಹಾರಕ್ಕಾಗಿ ವಿಷ್ಣುವಿನ ‌ಅವತಾರಗಳು ಎಂಬುದು ಭಾರತದ ನೆಲದ ಬಲವಾದ ನಂಬಿಕೆ.


ಹಿಂದೂ ಧರ್ಮದ ಹಲವಾರು ಗ್ರಂಥಗಳ ಪ್ರಕಾರ ನಮ್ಮ ಪ್ರಸ್ತುತ ಜೀವನಗತಿ ನಮ್ಮ ಪೂರ್ವಜನ್ಮಗಳ ಕರ್ಮಫಲ.

ಶಂಕರಾಚಾರ್ಯರು ತಮ್ಮ ಕೃತಿ ಭಜಗೊಂವಿಂದಂನಲ್ಲಿ

ಪುನರಪಿ ಜನನಂ ಪುನರಪಿ  ಮರಣಂ

ಜನನೀಜಠರೇ ಶಯನಮ್ | ಇಹ ಸಂಸಾರೇ ಬಹುದುಸ್ತಾರೇ

ಮತ್ತೆ ಹುಟ್ಟು ಮತ್ತೆ ಸಾವು ಮತ್ತೆ ತಾಯಿಯ ಗರ್ಭದಲ್ಲಿ ಮಲಗುವುದು...ಇಷ್ಟೇ ಸಂಸಾರ, ಎಂಬುದಾಗಿ ಹೇಳುವಾಗ ಜನನ-ಮರಣಗಳು ನಿರಂತರ ಕ್ರಮ, ಆತ್ಮಕ್ಕೆ‌ಸಾವಿಲ್ಲ ಎಂಬುದನ್ನು ಬಹು ಸರಳವಾಗಿ ತಿಳಿಸಿದ್ದಾರೆ.

ಭಗವದ್ಗೀತೆಯಲ್ಲಿ ಅಧ್ಯಾಯ ಎರಡು ಶ್ಲೋಕ 22 ರಲ್ಲಿ

"ವಾಸಾಂಸಿ ಜೀರ್ಣಾನಿ ಯಥಾ ವಿಹಾಯ

ನವನಿ ಗೃಹ್ಣಾತಿ ನರೋS  ಪರಾಣಿ |

ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ

 ಸಂಯತಿ ನವನಿ ದೇಹಿ"||

ಅರ್ಜುನನಿಗೆ ;  'ಮನುಷ್ಯನು ಹೊಸ ವಸ್ತ್ರಗಳನ್ನು ಧರಿಸಿ ಹಳೆಯದನ್ನು ತ್ಯಜಿಸಿದಂತೆ, ಆತ್ಮವು ಹೊಸ ಭೌತಿಕ ದೇಹಗಳನ್ನು ಸ್ವೀಕರಿಸುತ್ತದೆ. ಹಳೆಯ ಮತ್ತು ನಿಷ್ಪ್ರಯೋಜಕವಾದವುಗಳನ್ನು ತ್ಯಜಿಸುತ್ತದೆ' ಎಂಬುದಾಗಿ ಶ್ರೀಕೃಷ್ಣ ವಿವರಿಸಿದ್ದಾನೆ.

ಅಂದರೆ ದೇಹ ತೊರೆದ ಆತ್ಮ ಮತ್ತೊಂದು ದೇಹ ಧರಿಸಿ ಜನ್ಮಿಸುತ್ತದೆ ಎಂಬುದಾಗಿದೆ. ಇಷ್ಟಕ್ಕೂ ಜನ್ಮಾಂತರ-ಪುನರ್ಜನ್ಮ ಎಂಬ ಪರಿಕಲ್ಪನೆ ನಿಜವೇ!? ಮುಂದಿನ ಗಳಿಗೆ ಜೀವಂತ ಇರುತ್ತೇವೆ ಎಂಬ ಖಾತರಿ ಇಲ್ಲದ ಉಸಿರು! ಪುನರ್ಜನ್ಮವೆಂಬುದನ್ನು  ನಂಬುವುದಾದರೂ ಹೇಗೆ!? ಹೀಗೆ ಪ್ರಶ್ನೆಗಳ ಜಾಡು ಬಿಡಿಸುತ್ತಾ ಹೋದಂತೆ ಮೊದಲು ದೊರೆತ ಮುಖ್ಯ ಮಾಹಿತಿ ಎಂದರೆ, ಭಾರತದ ಪ್ರಸಿದ್ಧ ಪುನರ್ಜನ್ಮ ಪ್ರಕರಣ ಶಾಂತಿದೇವಿ ಬಗ್ಗೆ.

ಡಿಸೆಂಬರ್ 14-1926  ರಂದು ದೆಹಲಿಯಲ್ಲಿ ಜನಿಸಿದ ಶಾಂತಿದೇವಿ ನಾಲ್ಕರ ವಯಸ್ಸಿನಲ್ಲಿ, ತನ್ನ ನಿಜವಾದ ಮನೆ ಮಥುರಾದಲ್ಲಿದೆ. ಅಲ್ಲಿಗೆ ಹೋಗಬೇಕು ಎಂಬುದಾಗಿ  ಹಠಮಾಡತೊಡಗಿದಳು. ತಂದೆ ತಾಯಿ ತಿದ್ದಿ ಬುದ್ದಿ ಹೇಳುವ ಪ್ರಯತ್ನ ಮಾಡಿದರು. ಶಾಂತಿದೇವಿ ತನ್ನ ಆರನೇ  ವಯಸ್ಸಿನಲ್ಲಿ ಮಥುರಾಗೆ ಓಡಿ ಹೋಗುವ ವ್ಯರ್ಥಪ್ರಯತ್ನ ಮಾಡಿದಳು. ನಂತರ ಈಕೆಯನ್ನು ದೆಹಲಿಯಲ್ಲಿ ಶಾಲೆಗೆ ಸೇರಿಸಲಾಯಿತು. ಶಾಲೆಯಲ್ಲಿ ತನಗೆ ಒಬ್ಬ ಮಗ ಇದ್ದಾನೆ, ತನ್ನ ಗಂಡ ಬಟ್ಟೆ ವ್ಯಾಪಾರಿ, ಎಂದು ಮಥುರಾ ಶೈಲಿಯ ಭಾಷೆಯಲ್ಲಿ ವಿವರಿಸುತ್ತಿದ್ದಳು. ಶಾಲೆಯ ಮಾಸ್ತರೊಬ್ಬರು ಈಕೆ ಹೇಳಿದ ವಿವರಗಳನ್ನಾಧರಿಸಿ ಮಥುರಾ ದಲ್ಲಿ ಪರಿಶೀಲಿಸಲಾಗಿ, ಕೇದಾರ್ ನಾಥ್ ಎಂಬ ಬಟ್ಟೆ ವ್ಯಾಪರಿ ಇರುವಿಕೆ ಬಗ್ಗೆ ಮಾಹಿತಿ ದೊರೆಯಿತು.

ಶಾಂತಿ ದೇವಿ
ಶಾಂತಿ ದೇವಿ


ಶಾಂತಿ ದೇವಿಗೆ ವಿಷಯ ತಿಳಿಸದೇ ಕೇದಾರ್ ನಾಥ್ ಆಕೆಯ ಭೇಟಿಗಾಗಿ ಬಂದ. ಕೂಡಲೇ ಆತನನ್ನು ಗುರುತಿಸಿದ ಶಾಂತಿದೇವಿ, ತನ್ನ ಖಾಸಗಿ ಬದುಕಿನ‌ ವಿವರಗಳನ್ನೆಲ್ಲಾ ಆತನಿಗೆ ಹೇಳಿದ ನಂತರ ಆಕೆ ತನ್ನ ಪತ್ನಿ ಲುಗ್ಡಾದೇವಿ, ಪ್ರಸ್ತುತ  ಶಾಂತಿದೇವಿಯಾಗಿ ಪುನರ್ಜನ್ಮ ಹೊಂದಿದ್ದಾಳೆ  ಎಂದು ಒಪ್ಪಿಕೊಂಡ. ಪ್ರಕರಣ ಪಡೆದ ತೀವ್ರತೆ ಎಷ್ಟಿತ್ತೆಂದರೆ, ವಿಷಯ ಮಹಾತ್ಮಾ ಗಾಂಧಿಯವರ ‌ಮುಂದೆ ನಿಲ್ಲತ್ತದೆ. ಮಹತ್ಮಾ ಗಾಂಧಿಯವರು ಪುನರ್ಜನ್ಮದ ವಾಸ್ತವಾಂಶದ ಪರಿಶೀಲನೆಗಾಗಿ ಕಮಿಷನ್  ನೇಮಕ‌ಮಾಡುತ್ತಾರೆ.  ಈ ಕಮೀಷನ್  15 ಜನ ಬಹು ಮುಖ್ಯ ವ್ಯಕ್ತಿಗಳ ತಂಡವಾಗಿತ್ತು. ನವಂಬರ್ 15-1935 ರಂದು ಶಾಂತಿದೇವಿಯನ್ನು   ಕಮೀಷನ್  ಮಥುರಾಗೆ ಕರೆದೊಯ್ಯಿತು.  10 ರ ಬಾಲೆ ರೈಲ್ವೇ ನಿಲ್ದಾಣದಲ್ಲಿ ‌ಇಳಿದ ಕೂಡಲೇ ಜನರ ಗುಂಪಿನಲ್ಲಿದ್ದ ಮಧ್ಯ ವಯಸ್ಕರೊಬ್ಬರನ್ನು ತನ್ನ ಗಂಡನ ಅಣ್ಣ ಎಂದು ಗುರುತಿಸಿದಳು.   ದಾರಿಯುದ್ದಕ್ಕೂ ಎಲ್ಲರನ್ನೂ ಬಹುಕಾಲದಿಂದ ಪರಿಚಯ ಎಂಬಂತೆ ಮಥುರಾ ಶೈಲಿಯ ಭಾಷೆಯಲ್ಲಿ  ಮಾತಾಡಿಸುತ್ತಾ ಸಾಗಿದಳು. ಆ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದವಳ ಕಣ್ಣುಗಳಲ್ಲಿನ ಭಾವ ಬಹುಕಾಲದ ನಂತರ ಆಪ್ತತೆಯ ಸ್ಪರ್ಶ ಸೂಸುತ್ತಿದ್ದವು. ಆಕೆಯ ಮನೆ ತಲುಪಿದ ಕೂಡಲೇ ಹಿರಿಯ ವ್ಯಕ್ತಿಯೊಬ್ಬರಿಗೆ ತನ್ನ ಮಾವ ಎಂದು ಗುರುತಿಸಿ ನಮಸ್ಕರಿಸಿದಳು. ಮನೆಯ ಗಿಡದ ಕುಂಡವೊಂದನ್ನು ತೋರಿ ಇದರ ಆಳದಲ್ಲಿ ಹಣ ಹೂತಿದ್ದೇನೆ ಎಂದು ತೋರಿದಳು. ಆದರೆ ಅದರಲ್ಲಿ ಹಣ ಇರಲಿಲ್ಲ. ಆಕೆಯ ಗಂಡ ಅದರಲ್ಲಿದ್ದ ಹಣ ತಾನು ತೆಗೆದುಕೊಂಡಿದ್ದೇನೆ ಎಂದು ಮಾಹಿತಿ ನೀಡಿದ.

ಹೀಗೇ ಥೇಟ್ ಸಿನೆಮಾ ಕಥೆಯಂತೆ ರೋಚಕವಾಗಿ ಸಾಗುವ ಈಕೆಯ ಜೀವನ, ಚಿಕ್ಕ ಬಾಲೆಯಾಗಿ, ದೆಹಲಿಯಲ್ಲಿ ಬೆಳೆದರೂ ಮಥುರಾ ಶೈಲಿಯ ಭಾಷೆ, ಆಕೆ ಸಾಯುವಾಗ ಅನುಭವಿಸಿದ ಯಾತನೆಯ ವಿವರಣೆ,  ಮೆಡಿಕಲ್ ಟರ್ಮ್ಸ್ ಗಳ ಬಳಕೆ, ಇದುವರೆಗೂ ಕಂಡರಿಯದ ಜನರನ್ನ ಸುಸ್ಪಷ್ಟವಾಗಿ ಗುರುತಿಸಿದ ರೀತಿ ಎಲ್ಲರನ್ನೂ ದಂಗುಬಡಿಸಿದ್ದವು.

ಹೀಗೆ ಶಾಂತಿದೇವಿಯ ಸ್ವಭಾವ, ಮಾತು, ನಡೆತೆ ಎಲ್ಲವನ್ನೂ  ವಿಧವಿಧವಾಗಿ ಪರಿಶೀಲಿಸಿದ ಕಮೀಷನ್ 1936 ರಲ್ಲಿ ರಿಪೋರ್ಟ್ ಪ್ರಕಟಿಸಿ, ಲುಗ್ಡಾದೇವಿ- ಶಾಂತಿದೇವಿಯಾಗಿ ಪುನರ್ಜನ್ಮ ಹೊಂದಿದ್ದಾಳೆ ಎಂದು ಪ್ರಕಟಿಸಿತು.

ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ. ಇಲ್ಲಿಂದ ವಿಚಾರಣೆಗಳ ದಾಳಿ ಶುರುವಾಯಿತು. ಆಕೆಯ ಜೀವನವೇ ಪುನರ್ಜನ್ಮದ ಪ್ರಯೋಗಶಾಲೆಯಂತಾಯಿತು. ನೂರಾರು ವಿಚಾರಣೆ ಜರುಗಿ ಹಲವಾರು ರಿಪೋರ್ಟ್ ಗಳು ಪ್ರಕಟಗೊಂಡವು.  ಅಮೇರಿಕಾದ ವರ್ಜೀನಿಯಾದ ಯುನಿವರ್ಸಿಟಿಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಇಯಾನ್ ಸ್ಟೀವನ್ ಸನ್ ಕೂಡ ಹೀಗೆ ಈಕೆಯ ಪುನರ್ಜನ್ಮ ಕುರಿತು ಪರಿಶೀಲನೆ ಮಾಡಿ ಈಕೆಯ ಪುನರ್ಜನ್ಮ ಪಡೆದಿರುವುದಾಗಿ, ತನ್ನ "reincarnation and biology" ಪುಸ್ತಕದಲ್ಲಿ ಉಲ್ಲೇಖಿಸಿದ 225 ಕೇಸ್ ಸ್ಟಡಿ ಗಳಲ್ಲಿ, ಪ್ರಮುಖ ಪ್ರಕರಣವಾಗಿ ಉಲ್ಲೇಖಿಸಿದ್ದಾನೆ.

ಇದೇ ರೀತಿ 2-3-1948 ರಲ್ಲಿ  ಷಾಪುರದಲ್ಲಿ ಜನಿಸಿದ ಸ್ವರ್ಣಲತಾ, ನಾಲ್ಕರ ವಯಸ್ಸಿನಲ್ಲಿ ತನ್ನ ತಂದೆಯೊಂದಿಗೆ ಕಟ್ನಿಯ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ, ತನ್ನ ಮನೆ ಎಂದು ಒಂದು ಮನೆಯನ್ನು ತೋರಿ, ಅಲ್ಲಿ ಒಳ್ಳೇ ಚಹಾ ಸಿಗುತ್ತದೆ ಎಂದು ಹೇಳಿದಳು. ಇದಾದ ನಂತರ ಸ್ವರ್ಣಲತಾ ಎಂದೂ ಕೇಳದ ಭಾಷೆಯಲ್ಲಿ ಹಾಡುವುದು-ನರ್ತನ ಆರಂಭಿಸಿದಳು. ಆಕೆಯ ತಂದೆ,  ಆಕೆ ಹೇಳುವುದನ್ನೆಲ್ಲಾ ದಾಖಲಿಸಿದ. ರಾಜಸ್ಥಾನ ಯುನಿವರ್ಸಿಟಿಯ ಸೈಕಾಲಜಿ ವಿಭಾಗದ ಪ್ರೊಫೆಸರ್ ಹೆಚ್.ಎಲ್ ಬ್ಯಾನರ್ಜಿ, ಈಕೆಯ ಬದುಕಿನ ಬಗ್ಗೆ ಪೂರ್ಣ ಸಂಶೋಧನೆ‌ಮಾಡಿದ ನಂತರ, ಸ್ವರ್ಣಲತಾ  ಕಟ್ನಿಯಲ್ಲಿ ಫಾಟಕ್ ಕುಟುಂಬದ ಬಿಯಾ ಫಾಟ್ನಕ್ ಆಗಿದ್ದು, ಬಿಯಾ ಗೆ 40 ವರ್ಷವಾಗಿದ್ದಾಗ  ಸಾವನ್ನಪ್ಪಿದಳು ಎಂಬ ಮಾಹಿತಿ ತಿಳಿಯುತ್ತದೆ. ಇದೇ ಪ್ರಕರಣವನ್ನು ಇಯಾನ್ ಸ್ಟೀವನ್ ಸನ್ ಸಹ ಸಂಶೋಧಿಸಿ, 1966 ರಲ್ಲಿ ಪ್ರಕಟಗೊಂಡ ತನ್ನ

"Twenty cases of reincarnation" ಪುಸ್ತಕದಲ್ಲಿ ದಾಖಲಿಸಿದ್ದಾನೆ.

ಭಾರತದಲ್ಲಿ ಇಂತಹ ಹಲವಾರು ಪ್ರಕರಣಗಳು ದಾಖಲಾಗಿವೆ.

ಎಲ್ಲಾ ಧರ್ಮಗಳಲ್ಲೂ ಪುನರ್ಜನ್ಮದ ಪರಿಕಲ್ಪನೆಯಿದೆ. ಅಂತ್ಯ ಇರುವುದು ದೇಹಕ್ಕೆ‌ಮಾತ್ರ. ಆತ್ಯ ಹೊಸ ಹುಟ್ಟು ಪಡೆಯುತ್ತಲೇ ಇರುತ್ತದೆ. ತೀವ್ರ ಹಂಬಲಿಕೆಗಳು, ಇನ್ನೊಂದು ಜೀವದೆಡೆಗೆ ಅಗಾಧ ವ್ಯಮೋಹ ಪುನರ್ಜನ್ಮಕ್ಕೆ ಮುಖ್ಯ ಕಾರಣವಾಗಬಹುದು ಎಂಬ ವಿಶ್ಲೇಷಣೆ ಇದೆ.

ಇಷ್ಕಕ್ಕೂ ಪುನರ್ಜನ್ಮದ ಬಗ್ಗೆ ವಿಜ್ಞಾನ ಹೇಳುವುದೇನು? ಶೇ 20 ರಷ್ಟು 6 ವಯಸ್ಸಿನ ಒಳಗಿನ ‌ಮಕ್ಕಳಿಗೆ ಹುಟ್ಟು ಸಾವಿನ‌ ಬಗ್ಗೆ ಸ್ಮರಣೆ ಹೆಚ್ಚಾಗಿರುತ್ತದೆ. ನಂತರ ಅದು ಕ್ಷೀಣಿಸುತ್ತದೆ. ಎಲ್ಲೋ ಕೆಲವರಿಗೆ ಮಾತ್ರ ಯಾಕೆ ಹೀಗೆ ನೆನಪಾಗುತ್ತದೆ, ಎಲ್ಲರಿಗೂ ಯಾಕೆ ಗತ ಜನ್ಮ ನೆನಪಿನಲ್ಲಿ ಉಳಿಯುವುದಿಲ್ಲ...ಎಂಬ ಪ್ರಶ್ನೆ ಅತೀ ಸಹಜವೆಂಬಂತೆ ಮೂಡುತ್ತದೆ.

ಭಗವದ್ಗೀತೆಯ ಅಧ್ಯಾಯ 4.5 ರಲ್ಲಿ ಶ್ರೀಕೃಷ್ಣ ಅರ್ಜುನನಿಗೆ ವಿವರಿಸುವಂತೆ

ಶ್ರೀ ಭಗವಾನ್ ಉವಾಚ ।

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।

ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ।।

ಅಂದರೆ: ಓ ಅರ್ಜುನನೇ, ನಿನಗೂ ನನಗೂ ಅನೇಕ ಜನ್ಮಗಳಾಗಿ ಹೋಗಿವೆ.  ನನಗೆ ಅವೆಲ್ಲವೂ ಸ್ಮರಣೆಯಲ್ಲಿವೆ; ನೀನು ಅವೆಲ್ಲವನ್ನೂ  ಮರೆತಿರುವೆ.

ಜೀವಿಗಳಿಗೆ ಗತ ಜನ್ಮ ನೆನಪಿನಲ್ಲಿದ್ದರೆ, ಪ್ರಸ್ತುತ ಜನ್ಮದ ಕರ್ಮಗಳನ್ನು ಎದುರಿಸುವುದು ದುಸ್ತರವಾಗುವುದರಿಂದ, ಹಿಂದಿನ ‌ಜನ್ಮಗಳು ಸ್ಮರಣೆಯಲ್ಲಿರುವುದಿಲ್ಲ ಎಂಬುದು ಸರಳಾರ್ಥವಾಗಿದೆ. ಮತ್ತು ಜನ್ಮಾಂತರಗಳ ಸ್ಮರಣೆ ದೈವಕ್ಕೆ ಮಾತ್ರ ಸಾಧ್ಯ ಎಂಬುದನ್ನೂ ಭಗವದ್ಗೀತೆಯಲ್ಲಿಯೇ ಉಲ್ಲೇಖಿಸಲಾಗಿದೆ.

ಜನ್ಮಾಂತರ-ಪುನರ್ಜನ್ಮ-ಋಣಾನುಬಂಧ ಇಂತಹ ಪದಗಳು ದಿನಿತ್ಯದ ಮಾತುಗಳಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಪುನರ್ಜನ್ಮ ಎಂಬುದು ವಿಜ್ಞಾನಿಗಳಿಗೆ ಶೋಧನೆಗೆ ಮಾರ್ಗವಾದರೆ, ನಾಸ್ತಿಕರಿಗೆ ವಾದ ಮಂಡನೆಗೆ ಅವಕಾಶ, ಮನೋವೈದ್ಯಶಾಸ್ತ್ರಕ್ಕೆ ಸಂಶೋಧನೆಗೆ ವಸ್ತು...ಆದರೆ ಜನಸಾಮಾನ್ಯರಿಗೆ ಇದೊಂದು ಸಾದಾಕಾಲದ ಕೌತುಕ-ವಿಸ್ಮಯ-ನಿಗೂಢ.

falling for him was'nt falling at all...

it was walking into a house and suddenly knowing you are at home...

ಜೀವವೊಂದನ್ನು ಕಂಡ‌ ಮರುಗಳಿಗೆ  ಅತ್ಯಂತ ಆಪ್ತ ಭಾವ ಮೂಡಿ, ಇನ್ನು ಎಂದಿಗೂ ಕೊನೆಯಾಗದ ಬಂಧ ಎನಿಸುವುದು, ಯಾವುದೋ ಹಾದಿ ಹಾಯುವಾಗ, ಬಹುಕಾಲದಿಂದ ಓಡಾಡಿದ ಹಾದಿಯಂತೆ ಅನ್ನಿಸಿಬಿಡುವುದು, ಒಂದೇ ಕನಸು ಪದೇ ಪದೇ ಬೀಳುವುದು ಇವು ಹಿಂದಿನ ಜನ್ಮದ ಎಳೆಗಳು ಎಂಬುದಾಗಿ ಉಲ್ಲೇಖಿಸಲಾಗಿದೆ.


ಮುಂದಿನ ಕ್ಷಣದ ಬಗ್ಗೆ ಅರಿವಿರದ ನಾವು ನಮ್ಮ ಮುಂದಿರುವ ಕ್ಷಣಗಳನ್ನು ಮನಃಪೂರ್ವಕವಾಗಿ ಬದುಕುವುದು ಸಾರ್ಥಕಥೆ ಎನಿಸುತ್ತದೆ. ಇದರ ಸ್ಪಷ್ಟ ಅರಿವಿದ್ದರೂ "ಪುನರ್ಜನ್ಮ" ಎಂಬ ಶಬ್ದ ಮಾತ್ರ ಸಾದಾಕಾಲಕ್ಕೂ ಕೌತುಕತೆ ಮೂಡಿಸಿತ್ತಲೇ ಇರುತ್ತದೆ


Comments

  1. ಪುನರ್ಜನ್ಮದ ಬಗ್ಗೆ ಲೇಖನ ಎಲ್ಲರಿಗೂ ಒಂದು ಕುತೂಹಲ ಸಂಶಯ ಹಾಗೂ ವಿಚಿತ್ರ ಭಾವನೆಗಳನ್ನು ಮೂಡಿಸುವುದು ಸಹಜ. ಭೂತ ಪ್ರೇತ ಸಾವಿನ ನಂತರ ಜೀವನ ಈ ರೀತಿಯ ವಿಷಯಗಳು ವೈಜ್ಞಾನಿಕವಾಗಿ ತೀರ್ಮಾನಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಈ ಪೂರ್ವ ಜನ್ಮದ ಬಗ್ಗೆಯೋ ಒಂದು ವಿಸ್ಮಯಕಾರಿ ರೋಚಕ ವಿಷಯವಾಗುತ್ತದೆ.
    ಲೇಖಕಿ ಮಂಜುಳಾ ಡಿ ಯವರು ವೈಜ್ಞಾನಿಕ ಭಗವದ್ಗೀತೆ, ಶಂಕರಚಾರ್ಯರ ಹಾಗೂ ಇನ್ನಿತರ ಕೃತಿಗಳ ಆಧರಿಸಿ ಒಂದು ಉತ್ತಮವಾದ ಲೇಖನವನ್ನು ಬರೆದಿದ್ದಾರೆ. ಪುನರ್ಜನ್ಮದ ವಿಷಯವಾಗಿ ಗಾಂಧೀಜಿಯವರು ಒಂದು ಸಮಿತಿಯನ್ನು ರಚಿಸಿದ್ದಾರೆ ಎಂದು ತಿಳಿದು ಆಶ್ಚರ್ಯವಾಯಿತು.
    ಇತ್ತೀಚಿನ ಕೆಲವು ವೈಜ್ಞಾನಿಕ ವಿಶ್ಲೇಷಣೆ ಅಧ್ಯಾಯನ ವನ್ನು ಆಧರಿಸಿ ಇನ್ನಷ್ಟು ನೂತನ ಮಾಹಿತಿಯನ್ನು ಕೊಡಬಹುದಿತ್ತೇನೋ.
    ಮನುಷ್ಯನ ಜೀವನ ಕಾಲಚಕ್ರವನ್ನು ಅರಿಯುವುದು ಇನ್ನೂ ತುಂಬಾ ಇದೆ. ಈ ರೀತಿಯ ಕುತೂಹಲ ಭರಿತ ಲೇಖನವನ್ನು ಬರೆದ ಲೇಖಕಿಗೆ ಧನ್ಯವಾದಗಳು

    ReplyDelete
  2. ಲೇಖನ ವಿಚಾರಪೂರ್ಣವಾಗಿದೆ. ಎಸ್. ಎಲ್. ಭೈರಪ್ಪನವರ " ನಾಯಿ ನೆರಳು" ಕಾದಂಬರಿ ನೆನಪಿಗೆ ಬರುತ್ತದೆ.

    ReplyDelete

Post a Comment