ನಾವಿಂದು ಮೂಗರ ಪ್ರಪಂಚದಲ್ಲಿದ್ದೇವೆಯೇ !

 ನಾವಿಂದು ಮೂಗರ ಪ್ರಪಂಚದಲ್ಲಿದ್ದೇವೆಯೇ ! 

  ಲೇಖಕರು : ಎಮ್ ಅರ್ ವೆಂಕಟರಾಮಯ್ಯ    

      “ನಾವಿಂದು ಮೂಗರ ಪ್ರಪಂಚದಲ್ಲಿದ್ದೇವೆಯೇ “ ?  ಎಂಬ ಪ್ರಶ್ನೆಯನ್ನು ಚರ್ಚೆಗೆ ತೆಗೆದುಕೊಂಡಾಗ, ಇಂದಿನ ವಿಷಯ ಪಕ್ಕಕ್ಕಿರಲಿ. ಹಿಂದೆ, ಅಂದು, ನಮ್ಮ ಪ್ರಪಂಚ ಹೇಗಿತ್ತು ? ಎಂಬುದನ್ನು ಪರಿಶೀಲಿಸಬೇಕು . ಆಗ ನಮಗೆ ತಿಳಿಯುತ್ತದೆ ಅಂದಿನ ದಿನಗಳು ಚಂದವಿದ್ದುವೋ ! ಇಂದಿನ ದಿನಗಳು ಚಂದಾಗಿದೆಯೋ  ! ಎಂಬುದು. ಈ ದೃಷ್ಟಿಯಿಂದ ಅಂದಿನ ದಿನಗಳು ಎಂದರೆ ನಾವೇನೂ ಶತಮಾನಗಳ ಹಿಂದಕ್ಕೆ ತೆರಳಬೇಕಾಗಿಲ್ಲ.  ಕೇವಲ ೪ -೫ ದಶಕಗಳ ಹಿಂದೆ ನಾವು  ಕಂಡಿದ್ದ ಪ್ರಪಂಚ, ಅದರಲ್ಲಿ ನಾವು  ನಡೆಸಿದ ಸುಖ  ಸ್ವಂತ  ಅನುಭವಿಸಿದ್ದ ಜೀವನದ ಚಿತ್ರಣವನ್ನು ಒಮ್ಮೆ ಸ್ಮರಿಸಿ ಮೆಲುಕು ಹಾಕೋಣ ಬನ್ನಿ.



     ಅಂದು ನಾವಿದ್ದದ್ದು ‘ಪತಿ, ಪತ್ನಿ, ಔರ್ ವೋ’ ಎಂಬಂತೆ  ಮೂರು ಜನದ ಕುಟಂಬದಲ್ಲಲ್ಲ. ಅಂದಿನದು ನಮ್ಮದು ಜಂಟಿ ಕುಟುಂಬ. ಜಂಟಿ ಅಂದರೆ ಬಹಳ ಕಡಿಮೆಯೆಂದರೆ  ೧೫-೨೦ ಜನÀರದ್ದು. ಅಂದರೆ ಮನೆಯ ಹಿರಿಯ, ಅಜ್ಜ, ಅಜ್ಜಿ, ಅಮ್ಮ, ಅಪ್ಪ, ಇವರ ಅಣ್ಣ ತಮ್ಮಂದಿರು, ಇವರ ಪತ್ನಿಯರು, ಇವರು ಹೆತ್ತ ಮಕ್ಕಳು ಹೀಗೆ ಅದೆಷ್ಟೋ ಸಂಬಂಧಿಗಳು. ಇಷ್ಟೂ ಜನರ ವಾಸಕ್ಕೆ ಅಗತ್ಯವಾದಷ್ಟು ವಿಶಾಲವಾದ ಮನೆ, ಹೊಲ, ತೋಟ, ಗದ್ದೆಯ ಕೆಲಸ, ಜಾನುವಾರುಗಳ ಪಾಲನೆ, ಪೋಷಣೆಗಾಗಿ ಆಳುಗಳು, ಹಸು, ಎತ್ತು, ಎಮ್ಮೆ ಮೊದಲಾದ ಸಾಕು ಪ್ರಾಣಿಗಳು. ಇವರೆಲ್ಲರ ಉದರ ಪೋಷಣೆಗಾಗಿ ಮನೆಯ ಗೃಹಿಣಿಯರಿಗೆ ದಿನಪೂರ್ತಿ ಬಿಡುವಿಲ್ಲದ ಕೆಲಸ. ದಿನವೂ ಮಧ್ಯಾಹ್ನ, ರಾತ್ರಿ, ಊಟಕ್ಕೆ  ಕನಿಷ್ಟ ೧೫ -೨೦ ಎಲೆಗಳು ಹಾಸಲ್ಪಡುತ್ತಿದ್ದುವು. ಎಲೆಗಳಲ್ಲಿ ಬಡಿಸಲ್ಪಡುತ್ತಿದ ಪದಾರ್ಥಗಳ  ರುಚಿ ಕುರಿತಂತೆ ಅಷ್ಟೊಂದು ಕೊರಳುಗಳ ವಿಭಿನ್ನ ಕಾಮೆಂಟ್ಸ್, ನನಗೆ ಅದು, ನನಗೆ ಇದು ಬಡಿಸಿ ಎಂಬುದು ಮಕ್ಕಳ  ಕೂಗಾಟ, ಚೀರಾಟವಾದರೆ, ದೊಡ್ಡವರದು ದೊಡ್ಡ ದ್ವನಿಯ ಮತ್ತೊಂದು ರೀತಿಯ ಮಾತುಗಳ ವಿನಿಮಯ. ಬೆಳಗಿನಿಂದ ಹೊರಗೆ ದುಡಿದು ಬಂದ ಅವರ  ಸ್ವಾರಸ್ಯಕರ ಅನುಭವಗಳ ವಿನಿಮಯ, ಹೀಗೆ ಆ ಮನೆಯಲ್ಲಿ ಸದಾ ತುಂಬಿರುತ್ತಿತ್ತು  ಅಷ್ಟೊಂದು ಕುಟುಂಬ ಸದಸ್ಯರ ಮಾತು, ಮಾತು, ಮಾತು. ಅಕಸ್ಮಾತ್ ಯಾರಾದರೂ ಮೌನವಾಗಿ ಉಣ್ಣುತ್ತಿದ್ದರೆ, ಉಳಿದವರು ಅವನತ್ತ ತಿರುಗಿ, ಯಾಕ್ಲೇ ತಮ್ಮಾ, ಗುಮ್ಮಣ್ಣ\ಮೂಗಣ್ಣನ ಥರಾ ತಿನ್ತಿದ್ದೀ, ಏನಾಗಿದೆ ನಿನಗೆ ಇಂದು ! ಎಂದು ಛೇಡಿಸುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿರುತ್ತಿತ್ತು. ಹೀಗೆ ಕೆಲ ದಿನಗಳು ಯಾರಾದರೂ  ಮಾತಿಲ್ಲದೆ ಉಣ್ತಿದ್ದರೆ,  ಏ, ಬಿಡ್ರಿ ಅವನ ಸಂಗ, ಅವನೊಬ್ಬ ಮಾತ್ ಬರದ ಮೂಶಂಡಿ ಎಂದು ಅವನನ್ನು ಮನೆಯ ಜನ ಬಹಿಷ್ಕರಿಸುತ್ತಿದ್ದದ್ದೂ ಉಂಟು. 

   ಮನೆಯ ಗಂಡಸರ ಊಟ ಮುಗಿದ ನಂತರ ಹೆಂಗಸರ ಊಟದ ಪಾಳಿ. ಮೇಲೆ ವಿವರಿಸಿದಂತೆ ಉಣ್ಣುತ್ತಲೇ ಇವರದೂ ಬೆಳಗಿನಿಂದ ಮಧ್ಯಾಹ್ನ : ರಾತ್ರಿಯವರೆಗಿನ ಮನೆಯ ಕೆಲಸಗಳು ಅಂದಾದ ಕೆಲ ಎಡವಟ್ಟುಗಳು, ಅದನ್ನು ಪರಿಹರಿಸಿಕೊಂಡ ತಮ್ಮ ಚತುರತೆ ಜಾಣತನ ಇತ್ಯಾದಿ ಕುರಿತ ವಿಚಾರ ವಿನಿಮಯ. ಇವರ ನಡುವೆಯೂ ಎಲ್ಲರದೂ ಮಾತು, ಮಾತು, ಮಾತು.  

    ಇಂತಹುದೇ ದೃಶ್ಯ ರಾತ್ರಿ ವೇಳೆಯ ಭೋಜನ ಸಮಯದಲ್ಲಿ ಕಾಣಸಿಗುತ್ತಿತ್ತು. 

   ಹೊರಗಿನ ಕೆಲಸ ಕಾರ್ಯಗಳ ವಿತರಣೆ ನಿರ್ಧಾರ ಮನೆಯ ಹಿರಿಯ\ಯಜಮಾನನದಾದರೆ, ಮನೆಯೊಳಗಿನ ಕೆಲಸಗಳ ವಿತರಣೆ ಮನೆಯ ಹಿರಿಯ ಯಜಮಾನಿಯದೇ. ಎಂತಹುದೇ ವಿವಾದ ವೈಮನಸ್ಯ ಹುಟ್ಟಿಕೊಂಡರೂ ಮನೆಯ ಹಿರಿಯ\ಯಜಮಾನನ ತೀರ್ಮಾನವೇ ಅಂತಿಮ, ಅದೇ ಆಖೈರು. ಯಾರಿಗಾದರೂ ಎಂತಾದ್ದರೂ ಜಡ್ಡಾದರೆ ಅದು ತಮಗೇ ಆಗಿದೆಯೇನೋ ಎಂಬಷ್ಟು ಎಲ್ಲರ ಕಾಳಜಿಯಾಗರ‍್ತಿತ್ತು. ಇದೆಲ್ಲದರ ಒಟ್ಟಾರೆ ಪರಿಣಾಮ- “ಒಬ್ಬನಿಗಾಗಿ ಎಲ್ಲರೂ,  ಎಲ್ಲರಿಗಾಗಿ ಒಬ್ಬ’ ಎಂಬ ಒಗ್ಗಟ್ಟಿನ ಸಿದ್ಧಾಂತದ ಪಾಲನೆಯಾಗಿತ್ತು. 

    ಇದುವರೆಗೆ ಹೇಳಿದ್ದು ಮನೆಯೊಳಗಿನ ವಿಷಯಗಳಾದರೆ, ಮನೆಯ ಹೊರಗೆ ಓಡಾಡುವಾಗ ಎದುರಿಗೆ  ಬಂಧುಗಳೋ, ಮಿತ್ರರೋ, ನೆರೆಹೊರೆಯವರೋ ಯಾರಾದರೂ ಸರಿ ಎದುರಾದಾಗ ಇವರೆಲ್ಲಾ ನಮ್ಮವರೇ ಅಲ್ಲವೇ ! ಎಂಬ ಏಕತೆಯ ಭಾವನೆಯಿಂದ ಬಾಯಿ ತುಂಬಾ ಮಾತನಾಡಿ, ಉಭಯತ್ರರ ಕಷ್ಟ ಸುಖಗಳ ವಿಚಾರ ವಿನಿಮಯ, ಅಗತ್ಯ ಸಲಹೆ ಸೂಚನೆ ಹೊರಬಿಡುತ್ತಿದ್ದರೇ ವಿನಹಾ, ಇಂದಿನ ಹಲವರಂತೆ, ಬಲವಂತದ ಒಣ ನಗೆ ನಕ್ಕೋ, ಕೈ ಅತ್ತಿತ್ತ ಆಡಿಸಿ, ಹಾಯ್, ಬಾಯ್ ಎನ್ನುತ್ತಾ ಮುನ್ನಡೆಯುತ್ತಿರಲಿಲ್ಲ. 

          ಇದು ಸ್ವಾಮಿ, ಅಂದು ನಾವಿದ್ದ, ಕಂಡಿದ್ದ ಪ್ರಪಂಚ, ಮಾತಿನ ಪ್ರಪಂಚ. ಅಂದಿನದು ಮೂಗರ ಪ್ರಪಂಚವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮಾತಿಗೆ ಬಹಳ ಮಹತ್ವವಿದೆ. “ಭಗವಂತ, ಬಾಯ್ ಕೊಟ್ಟ ನುಡಿಯೋಕಂತಾ “ ಎಂದು ಡಾ, ರಾಜಕುಮಾರ್ ರವರೇ ಹಾಡಿದಂತೆ ಬಾಯಿ ಇರೋದೇ ಮಾತಾಡೋಕಲ್ವೇ ! ಇದಕ್ಕೇನೂ ಕಾಸು ಖರ್ಚಿಲ್ಲವಲ್ಲಾ  ! ಭಗವಂತ ತನ್ನ ಸೃಷ್ಟಿ ಯಲ್ಲಿನ ಯಾವ ಜೀವಿಗೂ ನೀಡದ, ಮನುಷ್ಯನಿಗೆ ಮಾತ್ರ ದಯಪಾಲಿಸಿದ ಬಹು ಅಮೂಲ್ಯ ವಾದ ವರ ಎಂದರೆ “ಮಾತು.” ಮನುಷ್ಯ  ತÀನ್ನ ಎಲ್ಲಾ ನೋವು, ನಲಿವು, ಕಷ್ಟ, ಸುಖ, ದುಃಖ ಇತ್ಯಾದಿ ಅನಿಸಿಕೆ, ಭಾವನೆಗಳನ್ನೂ ಇತರರಿಗೆ ತಿಳಿಸಿ, ಅವರದನ್ನೂ ತಾವು ಹಂಚಿ ಕೊಳ್ಳಲು, ತನ್ಮೂಲಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ಸೂಚನೆ, ಸಲಹೆಗಳನ್ನು ಕಂಡುಕೊಳ್ಳಲೆAದೇ  ಈ ವಾಕ್ ಶಕ್ತಿ ಸಿಕ್ಕಿರುವುದು.  ಆದರೆ ಇಂದು .. .  ಏನಾಗಿದೆ ನಮಗೆ . . . !   ನಮ್ಮ ಮಾತಿಗೆ   !   ?  

          ಇತ್ತೀಚಿನ ಎರಡು ದಶಕಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಬಹಳ ಮುಂದುವರಿದಿದೆ. ಹೊಸ ಹೊಸ ಸಂಪರ್ಕ, ಸಾಧನಗಳು, ಉದಾಹರಣೆಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್ ಪೋನ್, ಐ ಪ್ಯಾಡ್, ವಿವಿಧ ಅನುಕೂಲಗಳುಳ್ಳ ಮೊಬೈಲ್‌ಗಳು ಬಹು ಅಗ್ಗದ ದರಗಳಲ್ಲಿ ಉಳ್ಳವರ ಕೈ ಸೇರುತ್ತಿವೆ. ಕುಳಿತ ಜಾಗದಿಂದಲೇ ಜಗತ್ತಿನ ಯಾವ ಮೂಲೆಯಲ್ಲಿರುವ ವ್ಯಕ್ತಿಯನ್ನೂ ಕ್ಷಣಗಳಲ್ಲಿ ಸಂಪರ್ಕಿಸಿ ವಿಚಾರ ವಿನಮಯ ಮಾಡಿಕೊಳ್ಳಬಹುದಾಗಿದೆ. ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬುದರ ಲೇಟೆಸ್ಟ್ ಮಾಹಿತಿಯನ್ನು ಪಡೆಯಬಹುದಾದ ಸೌಕರ್ಯ ಜನಕ್ಕೆ ಸಿಕ್ಕಿದೆ. ಈ ಎಲ್ಲಾ ಸೌಲಭ್ಯ, ಸೌಕರ್ಯ, ಸಲಕರಣೆಯ ಸಾಧನೆಗಳು ನಮ್ಮ ಕೈ ಸೇರಿದ ಮೇಲೆ ‘ನೀನ್ಯಾಕೋ  ನಿನ್ನ ಹಂಗ್ಯಾಕೋ’ ಎಂಬ ಪುರಂದರ ದಾಸರ ಪದದಂತೆ ಯಾರ ಬಳಿ ಏನಿದೆ ಮಾತನಾಡೋಕೆ ? ಅವರಿವರ ಬಳಿ ಮಾತನಾಡಿ ವ್ಯರ್ಥವಾಗಬಹುದಾದ ಸಮಯವನ್ನು ನಮ್ಮ ಮೊಬೈಲ್ ಚಾಲನೆಗೆ ಬಳಸಿದರೆ ಅದೆಷ್ಟೋ ಜನರನ್ನು ಸಂಪರ್ಕಿಸಿ ವಿಚಾರ ವಿನಿಮಯ ಮಾಡಿಕೊಳ್ಳಬಹುದು, ಬಂಧು ಮಿತ್ರರು, ಸಂಗೀತ, ರಾಜಕೀಯ, ಕ್ರೀಡೆ, ಸಿನಿಮಾ, ಮಾರುಕಟ್ಟೆ ವ್ಯಾಪಾರ, ವ್ಯವಹಾರ, ರಾಜ್ಯ, ದೇಶ, ವಿದೇಶಗಳಲ್ಲಿನ ಆಗುಹೋಗುಗಳ ವಿಷಯಗಳು, ಆರ್ಥಿಕ ಸಂಸ್ಥೆಗಳ ವಿಚಾರಗಳು, ಹೀಗೆ ವೈವಿಧ್ಯಮಯ ವಿಷಯ ವಿಚಾರಗಳೆಲ್ಲಾ ನಮ್ಮ ಅಂಗೈನಲ್ಲಿರುವ ಮೊಬೈಲ್‌ನಲ್ಲೇ ಸಿಗುತ್ತಿರುವಾಗ ಇವನಿಗಿಂತಾ ಬೇರೇ ಫ್ರೆಂಡ್ ಫಿಲಾಸಫರ್ ಗೈಡ್ ನಮಗುಂಟೇ ! ನೋ, ನೆವರ್.  ಎನ್ನುವುದು ಇಂದಿನವರ ವಿಚಾರ ಧಾರೆ ಎನ್ನುವುದಕ್ಕಿಂತಾ ತತ್ವ , ಸಿದ್ಧಾಂತ, ವೇ ಆಫ್ ಲೈಫ್ ಎಂದರೆ ಸರಿಹೋದೀತೇನೋ ಮಾತು. 

    ಇದೆಲ್ಲದರ ಫಲಶ್ರುತಿ . . . .     ಹಿಂದಿನ ಕಾಲದ ಹಲವು ವೃದ್ಧರ ಕೈಗಳಲ್ಲ್ದಿ ನಡೆಯುವ ಉರುಗೋಲೋ, ನಶ್ಯದ ಡಬ್ಬಿಯೋ ಮೂಗು ಒರೆಸಿಕೊಳ್ಳುವ ಕೈ ವಸ್ತ್ರವೋ ಇರುತ್ತಿದ್ದಂತೆ ಇಂದಿನ ಹಲವರ (ಇಲ್ಲಿ ಮಕ್ಕಳು, ಯುವಕರು, ವೃದ್ಧರು, ಉಳ್ಳವರು ಬಡವರು,  ಎಂಬ ಯಾವ ತಾರ ತಮ್ಯ ಬೇಧಭಾವವೂ ಇಲ್ಲದೆ) ಕೈಗಳಲ್ಲಿ ನೊಬೈಲ್ ತಪ್ಪದು. ಹೊರಗೆ ನಡೆದಾಡುವಾಗ, ಬಸ್ ಆಟೋ ವಾಹನ ಚಾಲನೆ ಮಾಡುವಾಗ, ಪ್ಯಾಂಟಿನೊಳಗೇ ಇರುವಾಗ,  ಉಣ್ಣುವಾಗ, ಕೂತಾಗ, ನಿಂತಾಗ (ನಿದ್ರೆಯಲ್ಲಿರಬಹುದಾದ ಅಲ್ಪ ಸಮಯವನ್ನು ಹೊರತುಪಡಿಸಿ) ಉಳಿದೆಲ್ಲಾ ಸಮಯದಲ್ಲೂ ಕಿವಿಗೆ ತಾಕಿಸಿಕೊಂಡೇ ಇರಲಾಗುತ್ತದೆ ಈ ಮೊಬೈಲ. ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಇರುವಾಗಲೂ  ಅಮ್ಮ ಅಪ್ಪ, ಮಗ\ಮಗಳು ಈ ಎಲ್ಲರೂ ತಮ್ಮ ತಮ್ಮ ಕೈಗಳಲ್ಲಿರುವ ನೊಬೈಲ್ ಚಾಲನೆ ಮಾಡುತ್ತಾ ಸಮಯ, ಲೋಕವನ್ನೇ ಮರೆತು ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ತಿಂಡಿ, ಊಟ ಸೇವಿಸುವಾಗಲೂ ಇವರು ಮೊಬೈಲ್ ಕಿವಿಗೆ ತಾಗಿಸಿಕೊಂಡೇ ಇರುವುದರಿಂದ ತಾವು ಸೇವಿಸಿದ ಆಹಾರದ ಶುಚಿ ರುಚಿಗಳು ಉಪ್ಪು ಖಾರ ಸಾಕೆ ಬೇಕೆ ಏನೂ ತಿಳಿಯುವಂತಿಲ್ಲ. ಈ ಮನೆಯಲ್ಲಿ ಇರ‍್ಯಾರೂ ಪಕ್ಕದಲ್ಲೊ ಎದುರಿದ್ದವರ ಸಂಗಡವೋ ಮಾತನಾಡುವವರಲ್ಲ. ಅಕಸ್ಮಾತ್ ಅವರು ಯಾರಾದರೂ ಮಾತನಾಡಿಸಿದರೂ ಇವರ ಬಾಯಿಂದ ಹಾಂ, ಹೂಂ, ಅಚ್ಚ, ರೈಟ್, ವಾಕೆ, ಇತ್ಯಾದಿ ಬೀಜಾಕ್ಷರಗಳ ಹೊರಬಿಡವಿಕೆಯೊಂದಿಗೆ ಸಂಭಾಷಣೆ ಮುಕ್ತಾಯವಾಗುವುದು.. 

    ಇವರು ಹೊರಗೆ ಹೋಗುವಾಗಲೂ ತಮ್ಮ ಕಿವಿಗಳಿಗೆ ನೊಬೈಲ್‌ನ ಸಂಪರ್ಕ ಅಳವಡಿಸಿಕೊಂಡಿರುವುದರಿಂದ ತಮ್ಮ ಸುತ್ತಲಿರುವರು ಯಾರು ಏನು ಮಾತನಾಡಿದರು ಎಂಬುದನ್ನು ಇವರು ಅರಿಯಲಾರರು.  ಹಿಂದಿನಿಂದ  ಬರುವ ವಾಹನಗಳು ಹಾರನ್ ಶಬ್ಧ ಮಾಡಿದರೂ ಇವರಿಗೆ ತಿಳಿಯುವ ಹಂಗಿಲ್ಲ. ಹೀಗೆ ಮನೆಯ ಹೊರಗೆ, ಒಳಗೆ. ಇರುವಾಗಲೂ ಇವರು ಮೌನಿ ಬಾಬಾಗಳೇ ಆಗುವುದರಿಂದ ಮಾತು ಹೊರಬರಲು ಹೆದರಿ ಮನದಲ್ಲೆ ಅಡಗಿ ಕುಳಿತಿರುತ್ತದೆ.   

    ಇನ್ನು ನಮ್ಮವರ ಮನೆಗಳಲ್ಲಿ ಮದುವೆ, ಮುಂಜಿ, ಗೃಹಪ್ರವೇಶ, ಮೊದಲಾದ ಶುಭ ಕಾರ್ಯಗಳು, ಕಷ್ಟ, ನಷ್ಟ, ರೋಗ, ನೋವು, ಸಾವು ಮೊದಲಾದ ಸಂದರ್ಭಗಳಲ್ಲೂ ಇವರು  ಒಂದು ನಿಮಿಷದ ಸಮಯವನ್ನೂ ವ್ಯರ್ಥಮಾಡಿಕೊಳ್ಳುವವರಲ್ಲ, ಇಲ್ಲೂ ಇವರ ಮೊಬೈಲ್ ಚಾಲನೆ ನಾನ್ ಸ್ಟಾಪ್ ಮುಂದುವರಿದಿರುವುದೇ ! ಏನಪ್ಪಾ, ಇಂತಹಾ ಸ್ಥಳ, ಸಮಯದಲ್ಲೂ ನಿನ್ನ ಮೋಬೈಲ್ ಚಾಲನೆಯೇ ? ಎಂದು ಪ್ರಶ್ನಿಸಿದವರಿಗೆ ಇಲ್ಲಿ ನನ್ನ ಪಾತ್ರ ಏನಿದೆ ? ಹಾಜರಾತಿ ಹಾಕಬೇಕು, ಹಾಕಿದ್ದೀನಿ, ಯಾವ ಕಾಲಕ್ಕೆ ಏನು ನಡೆಯಬೇಕು ಅಂತ ಆ ಭಗವಂತ ಬರೆದು ಕಳಿಸರ‍್ತಾನೋ ಅದು ಹಾಗೇ ನಡೆಯುತ್ತೆ,  ಇದು ಭಾರತದ ಕರ್ಮ ಸಿದ್ಧಾಂತ. ಇದನ್ನು ನಾವು  ನೀವು ಕಿಂಚಿತ್ ಕೂಡಾ ಬದಲಾಯಿಸಲಾಗದು. ವಿ ಆರ್ ಹೆಲ್ಪ್ಲೆಸ್  ಎನ್ನುವ ವೈರಾಗ್ಯದ ಮಾತನಾಡತಾರೆ. ಹೀಗಾಗಿ .ಸಮಯ ಎಂಬುದು ಅತ್ಯ ಅಮೂಲ್ಯ, ಟೈಮ್ ಈಸ್ ಪ್ರಶಸ್, ವೆರಿ ವೇಲ್ಯುಬಲ್, ಟೈಮ್ ಲಾಸ್ಟ್ ಕೆನಾಟ್ ಬಿ ಗೈನ್ಡ್, ಅದಕ್ಕೇ ಅತ್ತ ಇತ್ತ ನೋಡುತ್ತಾ ಸಮಯ ವೇಸ್ಟ್  ಮಾಡೋ ಬದಲಿಗೆ ಸೆಲ್‌ನಲ್ಲಿ ಒಂದಷ್ಟು ಜನರೊಡನೆ ಚಾಟ್ ಮಾಡುವ, ಸೆಲ್ಫಿಗಳನ್ನು ಕಳುಹಿಸುವ, ಅವರ ಪೋಸ್ಟ್ಗಳ ಮೇಲೆ ಲೈಕ್ ಹಾಕಿಯೋ, ಕಾಮೆಂಟ್ ಮಾಡಿಯೋ ಸಮಯ ಬಳಸೋದು ಸರಿಯಾದ  ಮಾರ್ಗ ಅಂತಾ ನಮಗೆ ನಿಮಗೇ ತಿಳಿಹೇಳಿ ತಲೆ ತಗ್ಗಿಸ್ತಾರೆ ಮೊಬೈಲ್‌ನತ್ತ ಈ ಸಮಯ ಪ್ರಜ್ಞೆವುಳ್ಳ ಬುದ್ಧಿವಂತರು. ಈ ಎಲ್ಲಾ ಪ್ರಕ್ರಿಯಗಳ ಒಟ್ಟು ಪರಿಣಾಮ ಯಾರೂ ಯಾರೊಡನೆಯೂ ಮಾತಿಲ್ಲ. ನಮ್ಮ ಸುತ್ತಲೂ ಜನ ಇದ್ದಾರೆ,  ಆದರೆ ಇವರೆಲ್ಲಾ ಮಾತುಬಲ್ಲ ಮೂಗರು. 

   ಈ ಮೊಬೈಲ್ ಚಟಕ್ಕೆ ಸಿಲುಕದವರೋ, ಇದರ ಉಪಯೋಗ, ಚಾಲನೆಯನ್ನು ಅರಿಯದ ಬಹು ಅಲ್ಪ ಮಂದಿ ಮೊಬೈಲ್ ಜೇೆಬಿಗಿಟ್ಟು ಅಕ್ಕಪಕ್ಕದವರೊಡನೆ ವಿಚಾರ ವಿನಿಮಯಕ್ಕೆ ಇಳಿಯುವವರು..    

  ಆಫೀಸು , ಕೆಲಸ ಕಾರ್ಯಗಳ ತಾಣಗಳಲ್ಲಿ ಇದೇ ಮೊಬೈಲ್ ಹೇಗೆಲ್ಲಾ ಜನರನ್ನು ತನ್ನ ವಶ ಪಡಿಸಿಕೊಂಡಿದೆ ಎಂಬುದರತ್ತ  ಒಮ್ಮೆ ಚಿತ್ತ ಹರಿಸೋಣ. 

    . ಅವರು ಕೆಳ ದರ್ಜೆ ಸಿಬ್ಭಂದಿಯೋ, ಅಧಿಕಾರಿಯೋ, ಯಾರೇ ಆಗಲಿ ಜೇಬು\ ಡೆಸ್ಕ್ ಒಳಗೆ ಅಡಗಿಸಿಟ್ಟಿರುವ ಮೊಬೈಲ್ ಸಣ್ಣಗೆ ಶಬ್ಧ ಮಾಡಿದ ತಕ್ಷಣ ಏನುಂಟು ಅಲ್ಲಿ ಮೆಸೇಜ್ ಎಂಬುದ ನೋಡಿ, ಅದಕ್ಕೆ ಸ್ಪಂದಿಸಿದ ಮೇಲೇನೇ  ಆಫೀಸಿನ  ರೆಕಾರ್ಡ್ನತ್ತ ಚಿತ್ತ ಹರಿಸುವುದು. ಕೆಲಸಗಳ ತಾಣಗಳಲ್ಲೂ ನಡೆಯುತ್ತಿರುವುದೇ ಹೀಗೆ ಎಂದ ಮೇಲೆ, ಈ ಮೊಬೈಲ್ ಜನರನ್ನು ಹೇಗೆ ತನ್ನ ವಶಪಡಿಸಿಕೊಂಡು “ನಾ ಆಡಿಸಿದಂತೆ ಆಡುವೆ ನೀನು” ಎಂದು ಬುಗುರಿ ಆಡಿಸುತ್ತಿದೆ !  

  ‘ನಿಮಗೆ ಸಂಬಳ ಕೊಡೊ ದಣಿಗೆ ಮೋಸ ಮಾಡದಂತೆ ಕೆಲಸ ಮಾಡ್ರಪ್ಪಾ’ ಎಂಬ ಬುದ್ದಿ ಮಾತು ಹೇಳಿದವನತ್ತ ದುರ ದುರನೆ ನೋಡುವ ಈ ಮೊಬೈಲ್ ಧಾರಿಗಳು “ನಮ್ದು ತಪ್ಪು ಅನ್ನೋ ನೀವು ಈ ಹಿಂದೆ, ಅಂದು, ಜ್ಞಾಪಿಸಿಕೊಳ್ಳಿ, ಏನ್ ಮಾಡಿದಿರಿ ಎಂದು ! ಜರೂರು ವಿಷಯಗಳನ್ನು ಚರ್ಚಿಸಲು ಏರ್ಪಡಿಸಿದ್ದ ಸಮಾವೇಶ, ಸಭೆಗಳಲ್ಲೂ  ನೀವು ತಲೆ ಬಗ್ಗಿಸಿ ಮೊಬೈಲ್ ಚಾಲೂ ಮಾಡಿ ಫಿಲ್ಮ್  ನೋಡಿದಿರಲ್ಲಾ , ಅದು ತಪ್ಪಲ್ವಾ ! ನಿಮಗೇನಾದರೂ ಶಿಕ್ಷೆ ಆಯ್ತಾ ? ಎಂದು ದಭಾಯಿಸಿ ಪ್ರಶ್ನಿಸಿದವರ ಬಾಯಿ ಮುಚ್ಚಿಸಿ  ಮತ್ತೆ ಮಾತಾನಾಡದೆ ಮೂಗರಾಗ್ತಾರೆ ಇವರು. 

      ಹೀಗೆ ಬಹು ಸಂಖ್ಯಾತರಿಗೆ ವಿವಿಧೋದ್ಧೇಶದ ಅತ್ಯುಪಯೋಗಿ ಸಾಧನವಾದ  ಈ  ಮೊಬೈಲ್ ಎಂಬ ಸಾಧನ ಮಾತನಾಡಬಲ್ಲವರನ್ನು ಮೂಗರನ್ನಾಗಿ ಪರಿವರ್ತಿಸಿ ಶಬ್ಧ ರಹಿತ ಪ್ರಪಂಚದಲ್ಲಿರಿಸಿದೆ. ಇನ್ನು ಬರುವಂತಹಾ ಕಾಲದಲ್ಲಿ ಈ ಚಟ ಹೀಗೇಯೋ, ಇನ್ನೂ ತೀವ್ರ ಗತಿಯಲ್ಲೋ ಬೆಳೆದರೆ ನಾವು ೨೪ * ೭ ಕಾಲ ಮೂಗರಾಗಿ, ನಾವಿರುವ ಈ ಪ್ರಪಂಚವನ್ನೂ ಮೂಗರ ಪ್ರಪಂಚವಾಗಿಸುವುದರಲ್ಲಿ ಸಂದೇಹವಿರದು ಎಂದರೆ ಮಾತು ಉತ್ಪ್ರೇಕ್ಷೆಯಾಗದು

Comments

  1. ನೀವು ಹೇಳುವುದು ಸರಿ. ಆದರೆ ಹಿನ್ನೆಡೆ ಸಾಧ್ಯವೇ?

    ReplyDelete
  2. Vandanegalu madam. Hinnade saadhane kashtavaaga bahudaadaroo asaadhyavalla mana eva manushyanam.kaaranam bandha mokshayoh manaviddare maargavide

    ReplyDelete

Post a Comment