ಅಂಬುಲೆನ್ಸ್ ಮತ್ತು ರೇಡಿಯೋ

 ಅಂಬುಲೆನ್ಸ್ ಮತ್ತು ರೇಡಿಯೋ

ಲೇಖನ - ಶ್ರೀಮತಿ ಮಂಜುಳಾ ಡಿ

ರೇಡಿಯೋ ಈ ಪದ ಎಲ್ಲರ ಜೀವನದಲ್ಲಿ ಒಂದೊಂದು ಅರ್ಥದಲ್ಲಿ ಮಿಳಿತವಾಗಿದೆ. ರಾತ್ರಿ 10.30 ಕ್ಕೆ ಪ್ರಸಾರವಾಗುತ್ತಿದ್ದ ಗೀತ್ ಮಾಲಾ ಆಲಿಸದೇ ನಿದ್ರಿಸಿದವರು 70-80 ದಶಕದಲ್ಲಿ ಬಹಳ ಕಡಿಮೆ ಇರಬಹುದು. ಅಷ್ಟರಮಟ್ಟಿಗೆ ರೇಡಿಯೋ ಜನರ ದೈನಂದಿನದಲ್ಲಿ ಕಲಸಿ ಹೋಗಿತ್ತು. ಆಗ ಇದ್ದದ್ದು ಎ.ಎಂ ಮಾಡ್ಯುಲೇಷನ್. ಇದರ ತರಂಗಗಳು ಸರಿಯಾಗಿ ಕೇಳಿಸದೇ ಮಧ್ಯೆ ಕರ್ಕಶವಾಗುತ್ತಿತ್ತು. 80 ರ ದಶಕದ ನಂತರ ಬಂದ ಟಿ ವಿ ಎಂಬ ದೈತ್ಯ ರಾಕ್ಷಸ ರೇಡಿಯೋವನ್ಮು, ಇನ್ನಿಲ್ಲದಂತೆ ಅಪ್ಪಳಿಸಿ, ಅಳಿಸಿ ಹಾಕುವ ಹಂತಕ್ಕೆ ತಂದಿತು. ಟಿ ವಿ ಯ ಧ್ವನಿ ಆಪ್ತವಾಗಲು ಕಾರಣ ಅದರಲ್ಲಿನ ಎಫ್ ಎಂ ಮಾಡ್ಯೂಲೇಷನ್ ಅಳವಡಿಕೆ. ರೇಡಿಯೋ ಎಂಬ ಪದವೇ ಹುಡುಕುವಂತಾಗುವಷ್ಟರಲ್ಲೇ ಎಫ್ ಎಂ ಮಾಡ್ಯೂಲೇಷನ್  ರೇಡಿಯೋ ಚಾನಲ್ ಗಳು ಆರಂಭವಾದವು. ಎಂತಹ ಉದ್ವಿಗ್ನ ಸ್ಥಿತಿಯಲ್ಲೂ ಎಂದೋ ಕೇಳಿದ ರಾಗದ ಗಂಧವೊಂದು  ಕಂಪು ತುಂಬಿ  ಮನಸ್ಸನ್ನು ತಿಳಿಗೊಳಿಸುವ ಶಕ್ತಿ ಸಂಗೀತಕ್ಕೆ ಇದೆ. ಇದರೊಂದಿಗೆ ಒಳ್ಳೆ ಮಾತು ಸುವಿಚಾರ  ಕೆಲವೊಮ್ಮೆ ದಿಕ್ಕುತೋಚದ ಸ್ಥಿತಿಯಲ್ಲಿ  ಮಾರ್ಗದರ್ಶನವಾಗಿ ಬಿಡಬಲ್ಲವು. ಕೂತು ನೋಡಬೇಕಿಲ್ಲ! ಏಕಾಗ್ರತೆ ಮೊದಲೇ ಬೇಡ!! ಆಪ್ತ ರಾಗ ಸರಳವಾಗಿ‌ ಮನ‌ತಾಕುವ ಧೀಶಕ್ತಿ ಹೊಂದಿರುವುದರಿಂದಲೇ ಕಿಕ್ಕಿರಿದ ಟ್ರಾಫಿಕ್ ನಲ್ಲೂ ಎಫ್ ಎಂ ರೇಡಿಯೋ ಎಲ್ಲರ ಗಾಡಿಗಳಲ್ಲಿ - ಇಯರ್ ಫೋನ್ ಗಳಲ್ಲಿ ಸದಾ ಸಂಗಾತಿಯಾಗತೊಡಗಿತು.



  ಅಂಬುಲೆನ್ಸ್ ಮತ್ತು ರೇಡಿಯೋ    ಈ ಎರಡೂ ಶಬ್ದಗಳಿಗೆ ಎಲ್ಲಿಯೂ ಸಂಬಂಧವಿಲ್ಲ. ಆದರೆ ಕಿಕ್ಕಿರಿದ ಟ್ರಾಫಿಕ್ ಸಾಗರದ ಮಧ್ಯೆ ರೇಡಿಯೋದಿಂದಾಗಿ  ಅಂಬುಲೆನಸ್ ಗೆ ವ್ಯವಸ್ಥಿತವಾಗಿ ದಾರಿ ಕಲ್ಪಿಸುವಂತಹ ಊಹೆಗೂ ಮೀರಿದ ಚಳುವಳಿಯಾಗಿ ಮಾರ್ಪಟ್ಟ ಘಟನೆ!!  ಆಹ್!!! ಎನ್ನುವ ಅಚ್ಚರಿಯ ಎಳೆ ಚಹರೆಯ ತುಂಬೆಲ್ಲಾ ಹರಡುವಂತದ್ದು. ಸಂವಹನ ಮಾಧ್ಯಮ ಹೀಗೂ ಉಪಯುಕ್ತ ಎಂಬುದಕ್ಕೆ ಸಾಕಾರ ನಿದರ್ಶನ ಈ  ಘಟನೆ.

ದೆಹಲಿಯ ರೇಡಿಯೋ ಜಾಕಿ ಕುರೇಫತ್ ನಿತಿನ್ ಎಫ್ ಎಂ ಚಾನಲ್ ಲೋಕದಲ್ಲಿ ತುಸು ಪ್ರಚಲಿತ ಧ್ವನಿ. ಹೀಗೆ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಚಾನಲ್ ನಿಂದ ಕೆಲವು ಕಾರಣಗಳಿಂದ ನಿತಿನ್ ಹೊರಬಂದಾಗ,  'ತಮ್ಮನ್ನು ಜನ ಗುರುತಿಸಿದ್ದಾರೆ,  ಇತರೆ ರೇಡಿಯೋ ಚಾನಲ್ ಗಳಿಂದ ತಮಗೆ ಕರೆ ಬರಬಹುದು' ಎಂದೇ ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ತುಸು ಹೆಚ್ವು ಸಮಯದ ವರೆಗೂ ಯಾವುದೇ ಕೆಲಸವಿಲ್ಲದೇ, ಕೊನೆಗೆ ಅನಿವಾರ್ಯವಾಗಿ ಸಮೋಸ ಮಾರುವ ಕೆಲಸಕ್ಕೆ ಇಳಿದರು. ಕೆಲವು ಕಾಲ ಜೀವನ‌ ನಿರ್ವಹಣೆ ಸಾಗಿತಾದರೂ, ಇವರಿಗಿಂತ  ಎದುರಿನ ಅಂಗಡಿಯವನ ಕಡಿಮೆ ಬೆಲೆಯ ಸಮೋಸಗಳಿಂದ ಇವರ ಅಂಗಡಿ ಮುಚ್ಚುವಂತಾಯಿತು. ಇವೆಲ್ಲದರಲ್ಲಿ ಬೆಂದ ನಿತಿನ್ ಅವರಿಗೆ ಜೀವನ‌ ದೊಡ್ಡ ಪಾಠ ಕಲಿಸಿತ್ತು. ನೋವು ಎಂದರೆ ಏನು ಎಂದು ಅರ್ಥವಾಗಿತ್ತು. ಕೆಲವು ಸಮಯದ ನಂತರ ರೇಡಿಯೋ ಚಾನಲ್ ವೊಂದರಿಂದ ಬಂದ ಆಫರ್ ಗೆ ಹಾಜರಾಗಿ, 'ತಾವು ಮೊದಲು ಮಾಡುತ್ತಿದ್ದ ಕಾರ್ಯಕ್ರಮ ಮಾಡುವುದಿಲ್ಲ. ಇನ್ನೇನಿದ್ದರೂ ಸಾರ್ವಜನಿಕರಿಗೆ ಉಪಯೋಗವಾಗುವಂತಹ "ಸಿಎಸ್ ಆರ್" ಅಂದರೆ 'ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ'  ಕಾರ್ಯಕ್ರಮ ಮಾಡುತ್ತೇನೆ' ಎಂಬ ತಮ್ಮ ಕೋರಿಕೆ ಇಟ್ಟರು.



ಆ ಚಾನಲ್ ನವರಿಗೆ ಆ ಸಮಯಕ್ಕೆ ನಿತಿನ್ ಹುಚ್ಚರಂತೆ ಕಂಡಿರಬೇಕು. ಅಷ್ಟು ಕಾಲ ಕೆಲಸ ಇಲ್ಲದೇ ಒದ್ದಾಡಿದ್ದರು. ಕೊಟ್ಟ ಕೆಲಸ ಒಪ್ಪಿಕೊಳ್ಳದೇ ಇನ್ನೇನೋ ಬೇಡಿಕೆ ಈತನದ್ದು!? ಎಂಬುದು ಅವರಿಗೆ ಉಳಿದ ಯಕ್ಚಪ್ರಶ್ನೆ. ಕೆಲಸ ಒಪ್ಪಿಕೊಳ್ಳದೇ ಹಿಂದಿರುಗಿದ ನಿತಿನ್, ಗೆ ಕೆಲವು ದಿನಗಳ ನಂತರ ಮತ್ತೇ ಅದೇ ಚಾನೆಲ್ ನಿಂದ ಕರೆ ಬರುತ್ತದೆ. ಇದರ ಮುಖಾಂತರ ಸಾರ್ವಜನಿಕ ಹಿತಾಸಕ್ತಿ ಜನರ ನೋವು  ಆಲಿಸುವ ಕಾರ್ಯಕ್ರಮ ಆರಂಭವಾಗುತ್ತದೆ.


ಹೀಗೆ ಒಮ್ಮೆ ಸ್ವೀಕೃತವಾದ ಕರೆಯ ಧ್ವನಿ ಅಳುವಿಗೂ ಮೀರಿದ  ಧ್ವನಿ. ಇನ್ನೇನೂ ಸಾಧ್ಯವಿಲ್ಲ ತನ್ನಿಂದ ಎಂಬ ಆರ್ತತೆ!?       ನಿತಿನ್ ಸಹಜವಾಗಿ ಏನು ಎತ್ತ ವಿಚಾರಿಸಿದರೆ , ಕರೆಯಲ್ಲಿದ್ದ ಸರ್ದಾರ್ ಜಿ ಹೇಳಿದರು

"ತನ್ನ ತಂದೆ ಬದುಕಿನ‌ ಅಂತ್ಯ ತಲುಪವ ಹಂತದಲ್ಲಿ ಅಂಬುಲೆನ್ಸ್ ನ ಬೆಡ್ ಮೇಲಿದ್ದಾರೆ. ಹಾಸ್ಪಿಟಲ್ ಗೆ ತುಸು ದೂರದಲ್ಲಿದ್ದೇವೆ. ಟ್ರಾಫಿಕ್ ದಿಂದಾಗಿ ತಲುಪುವುದು ಸಾಧ್ಯವಾಗುತ್ತಿಲ್ಲ. ಕೂಡಲೇ ನಿತಿನ್ ರೇಡಿಯೋ ಮೂಲಕ ವಿಷಯ ತಲುಪಿಸಿ ಅಂಬುಲೆನ್ಸ್ ಗೆ ದಾರಿ ನೀಡಿ ಒಂದು ಜೀವ ಉಳಿಸುವಂತೆ ಕೋರಿದರು.

ಆದರೆ ಇಷ್ಟನ್ನು ಹೇಳುವಷ್ಟರಲ್ಲೇ ಆತನ ತಂದೆಯ ಸ್ಥಿತಿ ಗಂಭೀರವಾಗಿ, ಮಾತಾಡುತ್ತಲೇ ಸರ್ದಾರ್ ಜಿ ಚೀರಲು ಮೊದಲಿಟ್ಟರು.  ಅಂಬುಲೆನ್ಸ್ ಗೆ ದಾರಿ ದೊರೆಯದೇ, ಯಾತನೆ ಸಹಿಸಲಾಗದೇ ಅಲ್ಲೇ ಆತ ಸರ್ದಾರ್ ಜಿಯ ಶರ್ಟ್ ಹಿಡಿದೇ ಆತನ ತಂದೆ ಅಸುನೀಗಿದರು. ಶರ್ಟ ಬಟನ್ ಗಳು ಅಂಬುಲೆನ್ಸ್ ತುಂಬಾ ಚಲ್ಲಾಡಿದವು. ಇದರಲ್ಲಿ ಸರ್ದಾರ್ ಜಿ - ಅವನ‌ ತಂದೆ ಇಬ್ಬರದ್ದೂ ತಪ್ಪಿರಲಿಲ್ಲ. ‌ಇದೆಲ್ಲಾ ಲೈವ್ ಕಾಲ್ ನಲ್ಲಿ ನಡೆದ ಘಟನೆ!!!

ಎಲ್ಲರ ಧಾವಂತ. ಟ್ರಾಫಿಕ್ ನಲ್ಲಿ ಮರಳಿನ‌ಕಣ ಎರಚಿದರೂ ಕೆಳಗೆ ಬೀಳದಷಷ್ಟು ಸಂದಣಿ. ಇದರ ಮಧ್ಯೆ ಅಂಬುಲೆನ್ಸ್  ಸೈರನ್ ಕಿವಿಗೆ ಅಪ್ಪಳಿಸಿದರೂ, ಸರಿಯುವುದು ಎತ್ತ? ದಾರಿ ಕೊಡುವುದಾದರೂ ಹೇಗೆ!?  ಹಾಗಂತಾ ತೀರಾ ಅಂಬುಲೆನ್ಸ್ ಗೆ ದಾರಿ ಬಿಡಲಾರದಷ್ಟು ಮನುಷ್ಯತ್ವ ಕಳೆದುಕೊಂಡಿದ್ದೇವಾ. ಇಲ್ಲ!! ಸತ್ಯವೇನೆಂದರೆ ಮಾನವತೆಯ ಸೆಲೆ ಎಂದಿಗೂ ಬತ್ತಲಾರದ್ದು. ಆದರೆ ನಮ್ಮ ಸಮಸ್ಯೆಗಳ ಮಧ್ಯೆ ಎಷ್ಟು ಹೂತು ಹೋಗಿದ್ದೇವೆ ಎಂದರೆ, ಇದು ಎಲ್ಲರ ಒಳಿತಾಗಾಗಿ ಎಂದು ಮನುಷ್ಯರನ್ನು ಒಳಗಿನಿಂದ ಕದಲಿಸುವಂತೆ ಹೇಳುವುದು  ಅನಿವಾರ್ಯತೆಯಾಗಿದೆ.  ಇಲ್ಲದಿದ್ದರೆ ನಮ್ಮ ಸಮಾಜದಲ್ಲಿ ಹೂತಿದ್ದ ಮೌಢ್ಯಗಳನ್ನು ದೈವವೇ ದಾಸರ- ಗುರುಗಳ ರೂಪದಲ್ಲಿ ಅವತರಿಸಿ ತೊಳೆಯುವ ಅಗತ್ಯವಾದರೂ ಏನಿತ್ತು.

ಈ ಘಟನೆಯ ನಂತರ  ನಿತಿನ್ ತಮ್ಮ ಕಾರ್ಯಕ್ರಮದಲ್ಲಿ ಅಂಬುಲೆನ್ಸ್ ನ ಧ್ವನಿ ಕೇಳಿದಾಕ್ಷಣ  ತಮ್ಮ ಗಾಡಿಯನ್ನು ಎಡಭಾಗಕ್ಕೆ ಸರಿಸಿಕೊಳ್ಲುವಂತೆ ಕೋರುವ ಅಭಿಯಾನ ಆರಂಭಿಸುತ್ತಾರೆ. ಆರಂಭಕ್ಕೆ ಯಾರಿಗೂ ಇದು ಕಿವಿಗೆ ಬೀಳಲಿಲ್ಲ. ತಮ್ಮ ಪ್ರತೀ ಕಾರ್ಯಕ್ರಮದಲ್ಲಿ ಇದೇ ಮಾಹಿತಿ ನೀಡಿ ಸಾರ್ವಜನಿಕರನ್ನು ವಿನಂತಿಸುತ್ತಾ ಸಾಗಿದರು.  ಕ್ರಮೇಣ ಸಾರ್ವಜನಿಕರಿಗೆ ತಮ್ಮ ಸಾಮಾಜಿಕ ಜವಾಬ್ದಾರಿ ಅರಿವಾಗುತ್ತಾ ಹೋಗಿ ಅಂಬುಲೆನ್ಸ್ ಧ್ವನಿ ಕೇಳಿದ ಕೂಡಲೇ ಗಾಡಿಗಳನ್ಮು ಎಡಕ್ಕೆ ಚಲಿಸುವ ಕ್ರಿಯೆಯೊಂದು ಚಳುವಳಿಯಾಗಿ ಮಾರ್ಪಟ್ಟಿತು.  ಎಷ್ಟರ ಮಟ್ಟಿಗೆ ಜನರಿಗೆ ಇದು  ಅಭ್ಯಾಸವಾಯಿತು ಎಂದರೆ, ಈಗ ಅಂಬುಲೆನ್ಸ್ ಧ್ವನಿಗೆ ಅರಿವಿಲ್ಲದೆ ದೆಹಲಿಗರು ತಮ್ಮ ಗಾಡಿಗಳನ್ನು ಎಡಕ್ಕೆ ಚಲಿಸುವುದು ಒಂದು ಅಲಿಖಿತ ನಿಯಮವಾಗಿಬಿಟ್ಟಿದೆ!

2017 ರ ಮೋಟಾರ್ ವೆಹಿಕಲ್ ಕಾಯ್ದೆಯಡಿ, ಅಂಬುಲೆನ್ಸ್ ಫೈರ್ ಎಂಜಿನ್ ಇತ್ಯಾದಿ ಎಮರ್ಜೆನ್ಸಿ ಸಂಧರ್ಬದಲ್ಲಿ ದಾರಿ ಬಿಟ್ಟುಕೊಡದಿದ್ದಲ್ಲಿ 10000/-  ದಂಡ ವಿಧಿಸುವ ಮಸೂದೆ ಅಂಗೀಕಾರವಾಗಿದೆ. ಪಕ್ಕದ ಗಾಡಿಯಲ್ಲಿ ಜೀವವೊಂದು ಯಾವ ಸ್ಥಿತಿಯಲ್ಲಿ ಯಾವ ಯಾತನೆಯಲ್ಲಿದೆಯೋ, ಅದೇ ಗಾಡಿ‌ಯ ಪಕ್ಕ ನಮ್ಮ ಗಾಡಿಯಲ್ಲಿ ಕೂತು ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಕುಣಿಯುವ ಹಾಡು ಕೇಳುವುದು ಮನುಷ್ಯತವೇ!? ಇದಕ್ಕಾಗಿ ನಾವು ಮಾಡಬೇಕಾದ ದೊಡ್ಡ ಉಪಕಾರ ಎಂದರೆ ನಮ್ಮ  ಗಾಡಿಯನ್ನು  ತುಸು ಎಡಕ್ಕೆ ಸರಿಸಿಕೊಳ್ಳುವುದು. ಇಷ್ಟನ್ನೂ ಮಾಡಲಾರದಷ್ಟು ದಾಷ್ಟ್ಯತನವಾ!? ಇದರ ಬಗ್ಗೆ ಜಾಗೃತರಾಗಿ- ಜಾಗೃತರಾಗುವುದು ಪ್ರತಿಯೊಬ್ಬರ ಕನಿಷ್ಠ ಸಾಮಾಜಿಕ‌ ಜವಾಬ್ದಾರಿಯಲ್ಲವೇ.  

Comments

  1. ಲೇಖನ ಕುತೂಹಲಕಾರಿಯಾಗಿದೆ ಹೃದಯಸ್ಪರ್ಶಿಯಾಗಿದೆ. "ಮುಂದುವರೆದ" ದೇಶಗಳಲ್ಲಿ ಆಂಬುಲೆನ್ಸ್, ಫ಼ೈರ್ ಬ್ರಿಗೇಡ್, ಪೋಲೀಸ್ ಇತ್ಯಾದಿ ವಾಹನಗಳ ಶಬ್ದ ಕೇಳಿದೊಡನೆಯೇ ಇತರ ವಾಹನಗಳ ಚಾಲಕರು ಪಕ್ಕಕ್ಕೆ ಸರಿದು ದಾರಿ ಬಿಟ್ಟು ಕೊಡುತ್ತಾರೆ, ಇದರಲ್ಲಿ ಎರಡು ಮಾತಿಲ್ಲ. ಯಾವ ದೇಶದಲ್ಲೇ ಆಗಲಿ, ನಿಯಮ ಪಾಲಿಸದಿದ್ದಲ್ಲಿ ದಂಡ ತೆರಬೇಕು ಎಂಬ ಅರಿವಿದ್ದಾಗಲೇ, ಜನ ಆ ನಿಯಮವನ್ನು ಪಾಲಿಸುವುದು!
    ದಾಷ್ಟ್ಯತನ ಎಂಬ ಪದ ಸರಿಯಲ್ಲ, ಧಾರ್ಷ್ಟ್ಯ ಎಂದು ಬರೆಯಬೇಕು.

    ReplyDelete
  2. ಸೂಪರ್ ಮೇಡಂ..... Bye ambika

    ReplyDelete
  3. ಮಂಜುಳಾ ಡಿ ಅವರ ಲೇಖನ ಆಂಬುಲೆನ್ಸ್ ಹಾಗೂ ರೇಡಿಯೋ ತುಂಬಾ ಕುತೂಹಲಕಾರಿಯಾಗಿ ಮೂಡಿ ಬಂದಿದೆ. ಆರಂಭದಲ್ಲಿ ರೇಡಿಯೋ ಬಗ್ಗೆ ತಾಂತ್ರಿಕವಾಗಿ ಹೇಳುತ್ತಾ ಹೋಗಿ ಮುಂದೆ ಆಂಬುಲೆನ್ಸ್ ಹಾಗೂ ರೇಡಿಯೋ ನಡುವಿನ ರೋಚಕವಾದ ನಿಜ ಜೀವನದ ಅದ್ಭುತವಾದ ಮಾನವೀಯತೆಯ ಸಕಾರ ಮೂರ್ತಿ ನಿತಿನ್ ಎಂಬುವರ ಸ್ಪೂರ್ತಿದಾಯಕ ಕಥೆಯಾಗಿದೆ. ಈ ಲೇಖನದಲ್ಲಿ ಒಂದು ಸಣ್ಣ ಪ್ರಯತ್ನ ಹೇಗೆ ಒಬ್ಬರ ಜೀವವನ್ನು ಉಳಿಸಲು ಹೇಗೆ ಸಹಾಯ ಮಾಡಬಹುದು ಎಂಬುದು ತಿಳಿಯುತ್ತದೆ. ನಿತಿನ್ ಅವರ ಅದಮ್ಯ ಉತ್ಸಾಹ ತಾಳ್ಮೆ ಹಾಗೂ ಅದ್ಭುತವಾದ ಯೋಚನೆಯಿಂದ ಇಂದು ಒಂದು ಜೀವ ಉಳಿದರು ಅದು ಮಹತ್ತರವಾಗುತ್ತದೆ.
    ಜೀವನದಲ್ಲಿ ಬರುವ ತೊಂದರೆಗಳಿಗೆ ಹೊಸ ರೀತಿಯಲ್ಲಿ ಪರಿಹಾರವನ್ನು ಕಂಡುಹಿಡಿದ ನಿತಿನ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು.
    ಜೀವನೋತ್ಸಾಹ ,ಅನ್ಯರ ಬಗ್ಗೆ ಕಾಳಜಿ, ಪರೋಪಕಾರ ಇಂತಹ ಪದಗಳು ಬರೀ ಆದರ್ಶವಾಗಿರದೆ ನಮ್ಮ ನಿಮ್ಮೆಲ್ಲರ ಜೀವನದ ಒಂದು ಭಾಗವಾಗಿ ಇರಬೇಕೆಂಬ ಆಶಯವನ್ನು ಲೇಖಕರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಒಂದು ಘಟನೆಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಪ್ತತೆ, ಮಾನವೀಯ ಮೌಲ್ಯ, ಓದುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಲೇಖನ ಶೈಲಿ ಇಷ್ಟವಾಗುತ್ತದೆ.

    ReplyDelete
  4. ನಿತಿನ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು. ಅವರ ಕೆಲಸ ನಮಗೆಲ್ಲ ಮಾದರಿಯಾಗಿರಲಿ.

    ReplyDelete

Post a Comment