ಅಯ್ಯೋ ರಾಮ!

ಅಯ್ಯೋ ರಾಮ!

ಹಾಸ್ಯ ಲೇಖನ - ಅಣಕು ರಾಮನಾಥ್



ತ್ರೇತಾಯುಗಕ್ಕೆ ಮುಂಚಿನ ಕೃತಯುಗದಲ್ಲಿ ರೇವತಿಗೊಂದು ವರಾನ್ವೇಷಣೆಯಲ್ಲಿ ತೊಡಗಿದ್ದ ಕೃತವರ್ಮನು ಪ್ರತಿ ಗಂಡನ್ನು ಮಗಳು ರೇವತಿಯು ತಿರಸ್ಕರಿಸಿದಾಗಲೂ ಹಣೆಹಣೆ ಚಚ್ಚಿಕೊಂಡಿರುತ್ತಾನೆ. ಆಗ ಏನೆಂದು ಉದ್ಗರಿಸಿರಬಹುದು? ‘ಅಯ್ಯೋ ಕೂರ್ಮ!’ ಎಂದೋ, ‘ಅಯ್ಯೋ ಮತ್ಸ್ಯ!’ ಎಂದೋ, “ಅಯ್ಯೋ ನಾರಾಯಣ” ಎಂದೋ, “ಅಯ್ಯೋ ಶಿವನೇ” ಎಂದೋ ಉದ್ಗರಿಸಿರಬಹುದೆ? ತ್ರೇತದಲ್ಲಿಯೂ, ತ್ರೇತದ ನಂತರವೂ ಫಾಲಘಟ್ಟನದೊಡನೆ ‘ಅಯ್ಯೋ ರಾಮ!’ ಹೊರಡುವುದು ಸಹಜವಾದರೂ ಅಂದಿನ ಘಟ್ಟನಸಹಿತೋದ್ಗಾರವನ್ನು ಕುರಿತು ಸಾಕಷ್ಟು ರಿಸರ್ಚ್ ನಡೆದಿಲ್ಲ. ‘ಯಾರೀ ರೇವತಿ?’ ಎಂದಿರೆ? ಅಯ್ಯೋ ರಾಮ! ಬಲರಾಮನ ಹೆಂಡತಿ ಕಣ್ರೀ! ಕೃತವರ್ಮನು ಅಲ್ಲಿ ಇಲ್ಲಿ ಹುಡುಕುವ ಬದಲು ಬ್ರಹ್ಮನನ್ನೇ ಕೇಳಿ, ನೇರವಾಗಿ ಗಂಡಿನಮನೆಯ ಬಾಗಿಲನ್ನು ತಟ್ಟುವ ನಿರ್ಧಾರ ತೆಗೆದುಕೊಂಡು, ಬ್ರಹ್ಮನ ಬಳಿಗೆ ಬಂದು, ಬ್ರಹ್ಮನು ಯಾವುದೋ ಡ್ಯಾನ್ಸ್ ಪ್ರೋಗ್ರಾಮ್ ವೀಕ್ಷಣೆಯಲ್ಲಿ ತಲ್ಲೀನನಾಗಿರುವುದನ್ನು ಕಂಡು, ಅವನನ್ನು ಡಿಸ್ಟರ್ಬ್ ಮಾಡಬಾರದೆಂದು ಹೊರಗೇ ಕುಳಿತಿದ್ದ. ಬ್ರಹ್ಮನನ್ನು ಸಂಧಿಸಿದಾಗ, “ದಡ್ಡ! ನೀನು ಕುಳಿತ ಸಮಯದಲ್ಲಿ ಕೃತಯುಗ ಮುಗಿದು, ತ್ರೇತವೂ ಕಳೆದು, ದ್ವಾಪರ ಬಂದಿದೆ. ಹೋಗು, ನಿನ್ನ ಮಗಳನ್ನು ಬಲರಾಮನಿಗೆ ಕೊಟ್ಟು ವಿವಾಹ ಮಾಡು” ಎಂದುದನ್ನು ಕೇಳಿಯೇ ಇಲ್ಲವೇನು ನೀವು? ರಾಮರಾಮಾ! 

‘ಅಯ್ಯೋ ರಾಮ’ ಎಂಬ ನುಡಿಗಟ್ಟಿನ ವಿಸ್ತಾರವನ್ನು ಪರಿಶೀಲಿಸುವುದೇ ನನ್ನ ಈ ಕ್ಷಣದ (ಈಕ್ಷಣದ್ದೂ ಹೌದು)  ಉದ್ದೇಶ. ಪ್ರಾಯಶಃ ಈ ನುಡಿಗಟ್ಟನ್ನು ಮೊದಲಿಗೆ ಬಳಸಿದ್ದು ದಶರಥನೇ. ಬಾನಿನಲ್ಲಿರುವ ಚಂದ್ರನನ್ನು ಕಿತ್ತುಕೊಡು ಎಂದು ರಂಪ ಎಬ್ಬಿಸಿದ ಮಗನನ್ನು ಕಂಡು, ‘ಇದೆಲ್ಲವೂ ಸಾಧ್ಯವೇನೋ? ಅಯ್ಯೋ ರಾಮಾ!’ ಎಂದು ಮೊಟ್ಟಮೊದಲ ಬಾರಿಗೆ ಹಣೆಹಣೆ ಚಚ್ಚಿಕೊಂಡಿದ್ದು ಆತನೇ ಎಂದು ಅಯೋಧ್ಯಾ ಕ್ರಾನಿಕಲ್ಸ್‍ ದಾಖಲಿಸಿದೆಯಂತೆ. ರಾಮ ಬೆಳೆದ. ಹದಿಹರೆಯವನ್ನು ತಲುಪಿದ. ವಿಶ್ವಾಮಿತ್ರ ಬಂದ. ‘ಕಳುಹಿಸು ರಾಮಲಕ್ಷ್ಮಣರನ್ನು’ ಎಂದ. ‘ಅಯ್ಯೋ ರಾಮ! ಅಯ್ಯೋ ಲಕ್ಷ್ಮಣ!’ ಎಂದು ಜೋಡಿವಾಲಗದ ರಾಗವನ್ನೆಳೆದ ದಶರಥ. ರಾಮನು ಕಾಡಿಗೆ ಹೋದನು. ತಾಟಕಿ ಬಂದಳು, ಖರದೂಷಣರು ಬಂದರು. ರಾಮನ ಶೌರ್ಯವನ್ನು ಕಂಡು ‘ಅಯ್ಯೋ! ರಾಮ!’ ಎಂದು ಹೌಹಾರಿದರು. ರಾಮನೊಡನೆ ಅಯ್ಯೋ ಎಂದು ಬಳಸುವುದು ಮನೆಮಾತಾಯಿತು. 


ಮಾರೀಚ ಚಿನ್ನದ ಜಿಂಕೆಯಾಗಿ ಬಂದ. “ಅಗೋ ನೋಡಲ್ಲಿ ರಾಮ!” ಎಂದಳು ಸೀತೆ. “ಅದು ಮಾಯೆ!” ಎಂದ ರಾಮ. “ಅಯ್ಯೋ... ರಾಮಾ... ಅರಮನೆಯ ಚಿನ್ನವನ್ನು ಬೇಡಲಿಲ್ಲ, ಚಿನ್ನದಂತೆ ಇರುವ ಜಿಂಕೆಯನ್ನಾದರೂ ಹಿಡಿದು ತಾ ಎಂದರೆ ಅದಕ್ಕೂ ಸಮ್ಮತಿಸುವುದಿಲ್ಲವಲ್ಲಾ!” ಎಂದು ಹಲುಬಿದಳು ಸೀತೆ. ಚಿನ್ನದ ಜಿಂಕೆ ಮುಂದೆ ಓಡಿತು. ರಾಮನ ದಿಕ್ಕು ತಪ್ಪಿಸಿ, ತಾನೂ ತಪ್ಪಿಸಿಕೊಂಡು ಲಂಕೆಯನ್ನು ಸೇರುವ ಇರಾದೆ ಹೊಂದಿದ್ದ ಮಾರೀಚನು ರಾಮನು ಬಾಣವನ್ನು ಹೂಡಿದಾಗ ಒಳಗೊಳಗೇ “ಅಯ್ಯೋ! ರಾಮಾ! ನೋ.... ಡೋಂಟ್ ಶೂಟ್” ಎಂದು ರಕ್ಕಸಭಾಷೆಯಲ್ಲೇ ಅಂದುಕೊಂಡಿದ್ದಾನು. ಇತ್ತ ರಾವಣನು ಸೀತೆಯನ್ನು ಹೊತ್ತೊಯ್ಯುವಾಗಲೂ “ಅಯ್ಯೋ! ರಾಮಾ! ರಾಮಾ!” ಎಂಬ ಲಿಟರಲ್ ಅರಣ್ಯರೋದನವು ನಡೆದಿತ್ತು. ಸೀತೆಯನ್ನು ಕಳೆದುಕೊಂಡ ರಾಮನನ್ನು ಕಂಡು ಲಕ್ಷ್ಮಣನೂ “ಅಯ್ಯೋ (ಪಾಪ) ರಾಮ!” ಎಂದು ಅನೇಕ ಬಾರಿ ನುಡಿದನಂತೆ. 

ಸುಗ್ರೀವ ವಾಲಿಗೆ ಹಾರ ತೊಡಿಸಿದ. ರಾಮ ಬಾಣ ಬಿಟ್ಟ. “ಅಯ್ಯೋ!” ಎಂದು ಅರಚುತ್ತಾ ಕೆಳಗುರುಳಿದ ವಾಲಿಯು ಮರೆಯಿಂದ ಹೊರಬಂದ ವ್ಯಕ್ತಿಯನ್ನು ಕಂಡು “ರಾಮ!” ಎಂದುದ್ಗರಿಸಿದ. “ಅಯ್ಯೋ ರಾಮ!” ಎಂಬ ಪದಪುಂಜ ವಿತ್ ಸಮ್ ಟೈಮ್ ಗ್ಯಾಪ್ ಬಳಸಲ್ಪಟ್ಟದ್ದು ಇಲ್ಲೇ ಮೊದಲಿರಬೇಕು. ವಾಲಿ ಕೆಳಗುರುಳಿದ. ಸುಗ್ರೀವ ಡಬಲ್ ಹೆಂಡಿರೊಡನೆ ಅಂತಃಪುರವನ್ನು ಸೇರಿ ಸಮಯವನ್ನು ಕಳೆದ. ಕೊಟ್ಟ ಮಾತನ್ನು ಮರೆತ. ಲಕ್ಷ್ಮಣ ವಾರ್ನಿಂಗ್ ಕಳುಹಿಸಿದ. “ಅಯ್ಯೋ! ರಾಮ! ಕ್ಷಮಿಸೆನ್ನನು” ಎನ್ನುತ್ತಾ ಸುಗ್ರೀವ ಡ್ಯೂಟಿಗೆ ಮತ್ತೆ ರಿಪೋರ್ಟ್ ಮಾಡಿಕೊಂಡ. 

ಅಶೋಕವನದಲ್ಲಿದ್ದ ಸೀತೆಯಂತೂ ಅದೆನಿತು ಬಾರಿ “ಅಯ್ಯೋ!” ಎಂದು ತನ್ನ ಪರಿಸ್ಥಿತಿಗೆ ನೊಂದುಕೊಳ್ಳುತ್ತಾ, ರಾಮನೆಷ್ಟು ವಿರಹವೇದನೆ ಅನುಭವಿಸುತ್ತಿರುವನೋ ಎಂಬುದನ್ನು ನೆನೆದಾಗಲೆಲ್ಲ “ರಾಮಾ” ಎನ್ನುತ್ತಿದ್ದಳು. ಅಗ್ನಿಪರೀಕ್ಷೆಗೆ ಗುರಿಯಾಗು ಎಂದಾಗಲೂ “ಅಯ್ಯೋ! ರಾಮ! ಇದೇನು ಅನ್ಯಾಯ!” ಎಂದು ಮುಖಭಾವದಲ್ಲಿಯೇ ಪ್ರದರ್ಶಿಸಿದಳು. ರಾಮನ ಮಾತುಗಳನ್ನು ಕೇಳಿ ಬಾಲ್ಕನಿಯಲ್ಲಿ ನಿಂತಿದ್ದ ದೇವತೆಗಳೂ “ಅಯ್ಯೋ ರಾಮ! ಇದೆಂತಹ ಸತ್ವಪರೀಕ್ಷೆ!” ಎಂದಿದ್ದರು. 

ಯುದ್ಧ ಮುಗಿಯಿತು. ರಾಮನು ನಂದಿಗ್ರಾಮಕ್ಕೆ ಮರಳಿದ. ಭರತನು “ಅಯ್ಯೋ! ರಾಮನೇ? ನಿಜಕ್ಕೂ ರಾಮ ಬಂದನೇ? ಅಯ್ಯೋ! ಎಷ್ಟು ದಿನಗಳಾದವಣ್ಣ ನಿನ್ನನ್ನು ಕಂಡು! ರಾಮಾ! ರಾಮಾ!” ಎನ್ನುತ್ತಾ ಬರಸೆಳೆದಪ್ಪಿದ. 

ಸೀತೆ ಗರ್ಭಿಣಿಯಾದಳು. ಅಗಸನೊಬ್ಬ “ಸೀತೆಯ ಬಟ್ಟೆಗಳು ಮಲಿನವಾಗಿವೆ” ಎಂದಿರಬೇಕು, ಕೇಳಿಸಿಕೊಂಡವರು “ಸೀತೆ ಮಲಿನವಾಗಿದ್ದಾಳೆ” ಎಂದು ವರದಿ ಒಪ್ಪಿಸಿರಬೇಕು. ತತ್ಫಲವಾಗಿ ರಾಮ ಸೀತೆಯನ್ನು ಕಾಡಿಗಟ್ಟಿದ. ಲಕ್ಷ್ಮಣನು ವಿಷಯವನ್ನು ಸೀತೆಗೆ ಅರುಹಿದಾಗ “ಅಯ್ಯೋ! ರಾಮ! ನೀನು ರಾಜಾರಾಮನೇ ಹೊರತು ಸೀತಾರಾಮನಾಗಲಿಲ್ಲವಲ್ಲ!” ಎಂದು ಸೀತೆಯು ಕೊರಗಿದ್ದಳೆಂದು ಕೆಲವರೂ, “ಅಯ್ಯೋ ರಾಮ! ನಿನಗೆ ನಿನ್ನ ಮಗು ಹುಟ್ಟಿದಾಕ್ಷಣ ಎತ್ತಿಕೊಳ್ಳುವ ಭಾಗ್ಯವಿಲ್ಲವಲ್ಲ” ಎಂದು ಅತ್ತಳೆಂದೂ ವಿವಿಧ ಮಂದಿ ಹೇಳುತ್ತಾರೆ. “ಅಯ್ಯೋ ರಾಮ!” ಎಂಬ ನುಡಿಗಟ್ಟು ಹೀಗೆ ನವರಸಗಳಲ್ಲಿಯೂ ಉದ್ಗರಿಸಲಾಗುತ್ತದೆ. 

“ಅಯ್ಯೋ ರಾಮ”ಕ್ಕೆ ಇಂದಿನದೊಂದು ರೂಪವಿದೆ. ಅದೇ Ï owe Rama”  ಎಂಬುದು. “ಇಂದು ನಾನು ಏನಾಗಿದ್ದೇನೋ ಅದು ರಾಮನ ಕೃಪೆಯಿಂದ” ಎಂಬ ಅರ್ಥ ಬರುವ ನುಡಿಗಟ್ಟಿದು. ಇದನ್ನು ಮೊದಲು ನುಡಿದವನು ವಿಶ್ವಾಮಿತ್ರ. ಅವನೊಂದಿಗೆ ಧ್ವನಿ ಜೋಡಿಸಿದವರು ಅರಣ್ಯವಾಸಿಗಳು ಮತ್ತು ಮುನಿಗಳು. “ಇಂದಿನ ರಕ್ಕಸರಹಿತ ಕಾನನದಲ್ಲಿ ನಾವು ನೆಮ್ಮದಿಯನ್ನು ಕಾಣಲು ರಾಮನೇ ಕಾರಣ. ವೀ ಓ ರಾಮಾ! ಐ ಓ ರಾಮಾ!” ಎಂಬ ಸ್ಲೋಗನ್ನಿನಿಂದ ಅಂದಿನ ಅರಣ್ಯವು ಅನುರಣಿಸಿತ್ತು. “ಪಕ್ಷಿಯಾದರೇನು, ನಾನು ರಾಮನ ಪಕ್ಷದವನು. ಸೀತೆಯನ್ನು ಹೊತ್ತೊಯ್ಯುವ ಹೇಯ ಕಾರ್ಯವನ್ನು ಖಂಡಿಸುತ್ತೇನೆ. ರಾಮ ಈ ದೇಶದ ರಾಜ. Ï owe Rama” ಎಂದಿತು ಜಟಾಯು. 

ರಾಮ ಬಂದ. ಹಣ್ಣುಗಳನ್ನು ತಿಂದ. “ಎಂಜಲು ತಿಂದ ಈ ಏಂಜಲ್ ನನ್ನ ಮನಸ್ಸಿಗೆ ತೃಪ್ತಿ ತಂದ, ನೆಮ್ಮದಿ ತಂದ. Ï owe Rama” ಎಂದಳು ಶಬರಿ. “ಬಂಡೆಯಾಗಿ ಬಿದ್ದಿದ್ದ ನನ್ನನ್ನು ಮತ್ತೆ ಮನುಷ್ಯಳನ್ನಾಗಿ ಮಾಡಿದೆ. Ï owe you Rama” ಎಂದಳು ಅಹಲ್ಯೆ. “ನಾನು ಲಂಕೆಯ ರಾಜನಾಗಲು ಅವನ ಕೃಪೆ ಇಲ್ಲದಿದ್ದರೆ ಸಾಧ್ಯವಾಗುತ್ತಿತ್ತೆ? ನೆವರ್. Ï owe Rama” ಎಂದ ವಿಭೀಷಣ. ಇವೆಲ್ಲಕ್ಕಿಂತಲೂ ಬಹಳ ಮುಂಚೆ, ದಾರಿಹೋಕರನ್ನು ಅಡ್ಡಗಟ್ಟುತ್ತಿದ್ದ ದರೋಡೆಕೋರನೊಬ್ಬನು “ಕ್ವಿಲ್ ಈಸ್ ಮೈಟಿಯರ್ ದ್ಯಾನ್ ಸ್ವೋರ್ಡ್” ಎಂಬುದನ್ನು ನಾರದರ ಮೂಲಕ ಕಂಡುಕೊಂಡು ತನ್ನ ಜೀವನಮಾರ್ಗವನ್ನೇ ಬದಲಿಸಿಕೊಂಡನು. ಮೃಗಗಳ ಹಿಂದೆ ಓಡುತ್ತಿದ್ದವನು ಅಕ್ಷರಗಳ ಜಾಡನ್ನು ಹಿಡಿದು ವಾಲ್ಮೀಕಿಯಾದನು. ಅಂತಹವನು ಇಂತಹವನಾದುದೇಕೆಂದರೆ ಆತನೂ Ï owe Rama ಎಂದೇ ಹೇಳಿಯಾನು. 

ತುಳಸೀದಾಸನ ಹೆಂಡತಿ ತವರಿಗೆ ಹೋದಳು. ಸಂಜೆ ಮನೆಗೆ ಬಂದ ತುಳಸೀದಾಸನಿಗೆ ವಿಷಯ ತಿಳಿಯಿತು. ಕಗ್ಗತ್ತಲೆಯಲ್ಲಿ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟಿ ಅವಳ ತವರಿನ ಮನೆಯ ಕದವನ್ನು ತಟ್ಟಿದ. ಪತಿಯ ತುಡುಗುತನ್ಕಕೆ ಬೇಸತ್ತ ಸತಿಯು “ಅಯ್ಯೋ ರಾಮ! ನನಗೆ ನೀಡುವಷ್ಟೇ ಗಮನವನ್ನು ದೇವನಿಗೆ ಇತ್ತಿದ್ದರೆ ಉದ್ಧಾರವಾಗುತ್ತಿದ್ದೆ” ಎಂದಳು. ಹೆಂಡತಿಯ ದಾಸನಾಗಿದ್ದವನು ರಾಮನ ದಾಸನಾದ, ರಾಮಚರಿತಮಾನಸ ಕೃತಿಯನ್ನು ರಚಿಸಿದ. ಸತಿಯ “ಅಯ್ಯೋ ರಾಮ!” ಭಕ್ತವೃಂದಕ್ಕೊಂದು ಅಪೂರ್ವ ಕೊಡುಗೆ ನೀಡಲು ಕಾರಣವಾಯಿತು. ತುಳಸೀದಾಸನು “I owe my wife” ಎಂದುದಲ್ಲದೆ “I Owe Rama” ಎಂದು ನುಡಿದಿದ್ದಾನು! 

ಕುಡುಕನೊಬ್ಬ ಕಳ್ಳನಾಗುವುದು ಸಹಜವೇ. ರಾಮನ ದೇಗುಲಕ್ಕೆ ನುಗ್ಗಿದ. ಚಿನ್ನದಿಂದ ತಯಾರಿಸಿ ಲಲಾಟಕ್ಕೆ ಲೇಪಿಸಿದ್ದ ನಾಮವನ್ನು ಕದ್ದು ಮಾರಿ, ಬಂದ ಹಣದಲ್ಲಿ ಚೆನ್ನಾಗಿ ಕುಡಿದು ತೂರಾಡುತ್ತಾ ಅದೇ ದೇಗುಲದ ಮುಂದೆ ನಿಂತು “ರಾಮಾ! ನೀ ನಾಮಮೆಂತ ರುಚಿರಾ” ಎಂದ. ಅವನೂ “Ï owe Rama” ಎಂದು ತನ್ನ ರೀತಿಯಲ್ಲೇ ಹೇಳಿದ್ದಾನು.

ಭಾಜಪದ ಏಳ್ಗೆಗೂ, ರಾಮಮಂದಿರಕ್ಕೂ ಬಿಡಿಸಲಾರದ ನಂಟು. “ಶ್ರೀರಾಮ” ಎಂದು ಬರೆದಿರುವ ಇಟ್ಟಿಗೆಗಳನ್ನು ಹೊತ್ತು ಅಂದು ಅಧ್ವಾನಿ & ಕೋ ಪ್ರಯಾಣಿಸದಿದ್ದರೆ ಇಂದಿಗೆ ಭಾಜಪ ಈ ಹಂತವನ್ನು ತಲುಪುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಇಡೀ ಭಾಜಪವೇ “Ï owe Rama” ಎನ್ನುವುದು ಸುನಿಶ್ಚಿತ. 

ಇವೆಲ್ಲವೂ ಅಂತಿರಲಿ. ನಮ್ಮ ದೇಶದ ನ್ಯಾಯಾಲಯಗಳ ಕಥೆ ನೋಡಿ ಸಾರ್. ರಾಮಜನ್ಮಭೂಮಿಯ ಕೇಸ್ ಇತ್ಯರ್ಥವಾಗಲು ಬರೋಬ್ಬರಿ ಇಪ್ಪತ್ತೆಂಟು ವರ್ಷಗಳು ಬೇಕಾದವು. ರಾಮನು ತನ್ನ ಮನೆಯನ್ನು ತನ್ನದೆಂದು ದೃಢಪಡಿಸಿ, ತನ್ನ ಮನೆಗೆ ತಾನು ಸೇರಲು ಇಷ್ಟೊಂದು ವಿಳಂಬವೇ! ಅಯ್ಯೋ ರಾಮ! ರಾಮ ರಾಮಾ! 

ಮಿಕ್ಕೆಲ್ಲ ವಿಷಯ ಅಂತಿರಲಿ. ಈ ಕನಕಾಪುರದ ನಾಣಿಗೆ ಪದವನ್ನೀಯಲು ಕೇಳಿದರೆ ಹಣೆಹಣೆ ಚಚ್ಚಿಕೊಂಡು, ಕೂಡಲೆ ಬಾಯಿಯಿಂದ ಹೊರಟ ಉದ್ಗಾರವನ್ನೇ ನನ್ನ “ಪದಕ್ಕೊಂದು ಲೇಖನ” ಯೋಜನೆಗೆ ನೀಡುವುದೇ! ಅಯ್ಯೋ ರಾಮ! 


Comments

  1. ಅಯ್ಯೋ ರಾಮಾ! ಒಂದು ಸಣ್ಣ ಪದ ಹಿಡಿದು ಅರ್ಥಗರ್ಭಿತ, ಹಾಸ್ಯಪೂರಿತ ಲೇಖನ ಬರೆಯುವ ಬಂದದ್ದು ಎಲ್ಲಿಂದ? ನೀವೂ I owe Rama ಎನ್ನುವಿರೇ ರಾಮ್ ಜಿ?

    ReplyDelete
  2. ಅಪೂರ್ವ ಕಲೆ ಬಂದದ್ದು ಎಲ್ಲಿಂದ?

    ReplyDelete
    Replies
    1. ಹೌದು, ಇತ್ತೀಚಿಗೆ ಜಯಭೇರಿ ಮೇಲೆ ಜಯಭೇರಿ ಲೇಖನಗಳು ಬರುತ್ತಿವೆ.

      Delete
  3. ಯಾವ ಪದವೇ ಇರಲಿ, ಎಲ್ಲೆಲ್ಲಿಗೆ ಕರ್ಕೊಂಡು ಹೋಗ್ತೀರಾ ಸಾರ್ . ಈ ಪದ ಯಾಕಾದ್ರೂ ಕೊಟ್ಟನೋ ರಾಮ ರಾಮ ಅನ್ನೋಷ್ಟು ನಗಿಸಿದ್ದೀರಿ. ಕುಂತ್ರೆ ನಿಂತ್ರೆ ಎಲ್ಲದಕ್ಕೂ ರಾಮನೇ ಹೊಣೆ. ಈ ಪರಿಯ ಸೊಗಸು ಇನ್ನಾವ ಬರಹಗಾರರಲ್ಲಿ ಕಾಣೆ..... ತ್ರೇತಾಯುಗದಿಂದ ರಾಮ ಜನ್ಮಭೂಮಿಯವರೆಗೂ ಅದೆಷ್ಟುಅಯ್ಯೋ ರಾಮ ಎನಿಸಿದಿರಿ ಎಲ್ಲರ ಬಾಯಲ್ಲಿ.

    ReplyDelete

Post a Comment