ಡಯಟ್ ರಾದ್ಧಾಂತ

 ಡಯಟ್ ರಾದ್ಧಾಂತ 

 ಹಾಸ್ಯ  ಲೇಖನ - ಶ್ರೀಮತಿ ವಯ್ ಕೆ ಸಂಧ್ಯಾ ಶರ್ಮ   

 ಇನ್ನೂ ಬೆಳಬೆಳಗ್ಗೆ. ಸವಿಗನಸು ಚಪ್ಪರಿಸುತ್ತ ಹಾಗೇ ಮಲಗಿದ್ದಳು ಕಮ್ಲೂ ಎಚ್ಚರವಾದರೂ. ಪಕ್ಕದಲ್ಲಿ ಯಾರೋ ಧುಡುಮ್ಮನೆ ಬಂದು ನಿಂತ ಭಾಸ. ಪಟ್ಟನೆ ಕಣ್ತೆರೆದಳು. ನೆಲದಿಂದ ತಾರಸಿವರೆಗೂ ಯಾರೋ ಸೈಂಧವ ಭರ್ಜರಿಯಾಗಿ ನಿಂತಂತಿತ್ತು!!!...ಅವಳ ಹೃದಯವೇ ಬಾಯಿಗೆ ಬಂತು.

 ಥೇಟ್ ಯಮದೂತನಂಥ ಆಕಾರ. ಕೈಯಲ್ಲಿ ಯಮಪಾಶವೊಂದು ಇಲ್ಲ.!..ಗಾಬರಿಗೊಂಡು ಬುಡಕ್ಕನೆ ಎದ್ದು ಕೂತಳು. ತಲೆಯೆತ್ತಿ ನೋಡಿ, ಕಣ್ಣುಜ್ಜಿಕೊಂಡಳು. 

ಧಾಣಾ ಧಡಿಯ ಮಗ!!!



‘ಅಯ್ಯೋ ನಿನ್ನ ಮನೆ ಕಾಯ್ವಾಗ...ಹೀಗೇನೋ  ಅನಾಮತ್ತು ಬಂದು ಶಾಕ್ ಕೊಡೋದು’ ಎಂದು ಅವನ ಕೆನ್ನೆ ತಿವಿದು- ‘ ಕಾಫೀಗೆ ಅಷ್ಟೇನು ಅವಸರ ನಿಂಗೆ...ಹಾಯಾಗಿ ನಿದ್ದೆ ಮಾಡಕ್ಕೂ ಬಿಡಲ್ಲ, ಪ್ರಾಣ ತಿಂತೀಯ’ ಎಂದು ಗೊಣಗಿಕೊಂಡು, ಮುಖ ತೊಳೆಯಲು ಬಚ್ಚಲುಮನೆಗೆ ಹೋಗೋಳನ್ನ, ಅವನ ಬಲವಾದ ಕೈ, ಅವಳ ರೆಟ್ಟೆ ಹಿಡಿದು ನಿಲ್ಲಿಸಿದಾಗ ನಿಜಕ್ಕೂ ಕೋಪದಿಂದ ಚಾಮುಂಡಿಯಾಗಿದ್ದಳು.

ಮುಖ್ಯಪ್ರಾಣನಂತೆ ವಿನೀತನಾಗಿ ಗೋಗರೆಯೋ ಮುಖದಲ್ಲಿ ನಿಂತು ಅವನು -‘ಅಮ್ಮಾ, ಇವತ್ತಿಂದ ನನ್ನ ಡಯಟ್ ಶುರು...ಕಾಫಿ, ಅರ್ಧಲೋಟ, ಸಕ್ಕರೆ ಬೇಡ..’ ಎಂದವನ ಮುಖವನ್ನೇ ವಿಚಿತ್ರವಾಗಿ ದಿಟ್ಟಿಸಿದಳು. ನಿಜವಾಗ್ಲೂ ಇವನು ನನ್ನ ಮಗನೇನಾ ಅಂತ ಅವಳಿಗೆ ಅನುಮಾನವಾಯ್ತು. ಪ್ರತಿದಿನ ಸಕ್ಕರೆ ಪಾನಕದ ಕಾಫಿ ಕೊಡದಿದ್ರೆ ಅವನು ಕಾಫಿಲೋಟ ಸೋಕಿದ್ರೆ ಕೇಳಿ. ಚೂರು ಕಡಮೆಯಾದ್ರೂ ಆಕಾಶ-ಭೂಮಿ ಒಂದು ಮಾಡೋ ಆಸಾಮಿ. 

ಇದ್ದಕ್ಕಿದ್ದ ಹಾಗೆ ಅವನಿಗೆ ಜ್ಞಾನೋದಯವಾಗಿ ಬಿಟ್ಟಿತ್ತು ಈ ದಿನ !!...ತನ್ನ ನೂರಾ ಹತ್ತು ಕೆಜಿ ತೂಕದ ಮಾಂಸಲ ದೇಹವನ್ನು ಸ್ಲಿಮ್ ಅಂಡ್ ಟ್ರಿಮ್ ಮಾಡ್ಕೋಬೇಕೂಂತ. ಇದುವರೆಗೂ ಕಮ್ಲೂ ಅವನಿಗೆ ಈ ಬಗ್ಗೆ ಬುದ್ಧಿವಾದ ಹೇಳಿ ತಲೆ ತಿಂದಿದ್ದೆಲ್ಲ ಗೋರ್ಕಲ್ಲ ಮೇಲೆ ನೂರ್ಕಾಲ ಮಳೆ ಸುರಿದಂತೆ ವ್ಯರ್ಥವಾಗಿತ್ತು. ಅವನು ಆಗ ಉಭ ಶುಭಾ ಎಂದಿರಲಿಲ್ಲ. 

ಅವನ ಈ ದೇಹ ಮಹಾತ್ಮೆಗೆಲ್ಲ ಕಾರಣ, ಇಡೀ ವಿಶ್ವವನ್ನು ತನ್ನ ಕಬ್ಜಕ್ಕೆ ತೊಗೊಂಡಿರೋ ‘ಕೊರೋನಾ’ ಎಂಬ ಮಹಾರಕ್ಕಸ!!.. ಬೇಡದ ಈ ಅಪರಿಚಿತ ಅತಿಥಿ, ತಿಥಿ ಮಾಡಕ್ಕೆ ಬಂದವ,  ಯಾವ ಮುಲ್ಲಾಜೂ ನೋಡದೆ, ಮನೆಮನೆಗೆ ವಕ್ರಿಸಿದ ಪ್ರಾರಂಭದಲ್ಲಿ ಅವನ ದೈತ್ಯ ಕುಣಿತ, ಕುತೂಹಲದ ಜೊತೆಗೆ ಗಾಬರಿ, ಭಯ, ಆಘಾತ ಹುಟ್ಟಿಸಿದಾಗ ಮನೆಯಲ್ಲೇ ಬೀಗ ಜಡಿದುಕೊಂಡು ಖೈದಿಗಳಂತಿದ್ದ ದಿನಗಳು ನೆನಪಾದವು. 

ಬೆಳಗಿಂದ ರಾತ್ರಿವರೆಗೂ ಮನೆಯಲ್ಲೇ ಅಡೆ ಹಾಕಿದಂತಾಗಿ ಬೋರೋ ಬೋರು!...ವರ್ಕ್ ಫ್ರಂ ಹೋಂ ಮಾಡೋ ಮಗರಾಯ, ಈ ಮೊದಲು, ಸ್ವಿಗ್ಗಿ, ಜೊಮ್ಯಾಟೊ, ಡೋನ್ಜೋಗಳಿಂದ ಎಗ್ಗಿಲ್ಲದೆ ಬಗೆಬಗೆಯ ತಿಂಡಿ-ಊಟಗಳನ್ನು ತರಿಸಿಕೊಂಡು ತಿನ್ನುತ್ತಿದ್ದ ಚಾಳಿಗೆ ಈಗ ಹಟಾತ್  ಕತ್ತರಿ ಬಿದ್ದಿತ್ತು. ಇದರ ಪರಿಣಾಮ, ಗ್ರಹಚಾರ ಕಮ್ಲೂ ಬೆನ್ನು ಹತ್ತಿತ್ತು.  

ಎಲ್ಲರಿಗೂ ಆಗಿದ್ದೇ ನಮಗೂ ಎಂದು ಸಮಾಧಾನ ಮಾಡಿಕೊಂಡು, ಅವಳು, ಮನೆಯಲ್ಲಿ ಮಗನ ಹೆಬ್ಬಯಕೆಯಂತೆ ಎರ್ರಾಬಿರ್ರಿ ತಿಂಡಿ-ಖಾದ್ಯಗಳನ್ನು ಮಾಡಿದ್ದೇ ಮಾಡಿದ್ದು.. ಒಲೆಯ ಮೇಲೆ ಇಟ್ಟ ಎಣ್ಣೆಯ ಬಾಣಲೆಯನ್ನು  ಕೆಳಗಿಳಿಸಿದ್ದೇ ಇಲ್ಲ ಕಮ್ಲೂ. ಬೇಜಾರು ಅಂದ್ಕೊಂಡು, ತನಗೆ ಬರೋ ಪಾಕ ವೈವಿಧ್ಯಗಳಲ್ಲದೆ, ಸದಾ ಯುಟ್ಯೂಬ್ ಹಾಕ್ಕೊಂಡು ನೂರೆಂಟು ಹೊಸ ಬಗೆಯ ಅಡುಗೆಗಳನ್ನು ಪ್ರಯೋಗ ಮಾಡೋದು ನಡೆದಿತ್ತು.  ತಿನ್ನೋದು ಅತಿಯಾಗಿದ್ದರ ಫಲವೇ ಮನೆಯಲ್ಲಿ ಎಲ್ಲರೂ ಯದ್ವಾ ತದ್ವಾ ಊದಿದ್ದು. 

ಈಗ ಇದ್ದಕ್ಕಿದ್ದ ಹಾಗೇ ಅವಳ ಮಗರಾಯನ ತಲೆಯಲ್ಲಿ ಅದ್ಯಾವ ಹುಳ ಹೊಕ್ಕಿತೋ- ಶತಾಯ ಗತಾಯ ಸಣ್ಣ ಆಗಲೇಬೇಕೂಂತ ಚಾಣಕ್ಯ ಶಪಥ ಮಾಡಿಬಿಟ್ಟಿದ್ದ. ಕೊರೋನಾ ಬಡಪೆಟ್ಟಿಗೂ  ತೊಲಗೋ ಲಕ್ಷಣ ಕಾಣದಾದಾಗ, ದಿನೇ ದಿನೇ ಅಡ್ದಡ್ದಕ್ಕೆ ಬೆಳೆಯುತ್ತಿದ್ದ ದೇಹಾನ ನೋಡ್ಕೊಂಡವನೆ, ಹೃದಯ ಹಾರಿ, ಬಕಾಸುರನ ಹಾಗೇ ಇದೇ ಥರ ತಿಂತಾ ಹೋದ್ರೆ ಮುಂದೆ ಏನಾಗಬಹುದು ಅನ್ನೋ ಯೋಚ್ನೆ ಕುಟುಕಿದೆ. 


 ‘ಯುರೇಕಾ’ ಎಂದು ಏನೋ ಕಂಡುಹಿಡಿದ ಹುಮ್ಮಸ್ಸಿನಲ್ಲಿ ಬೆತ್ತಲೆಯೇ  ಬೀದಿಗೆ ಓಡಿಬಂದ ವಿಜ್ಞಾನಿ ಆರ್ಕಿಮೆಡೀಸನ ಅಪರಾವತಾರದಂತೆ ಕಮ್ಲೂ ಮಗ, ‘ಹುರ್ರೇ’ ಎಂದು ಧುತ್ತೆಂದು ಅಮ್ಮನ ಮುಂದೆ ಎಗರಿ ನಿಂತ!...

ತನ್ನ ‘ಸ್ಲಿಮ್ಮಾಯಣ’ದ ಅಂಕಕ್ಕೆ ಗೂಗಲೆಲ್ಲ ಜಾಲಾಡಿ, ಅಂತೂ ಕಡೆಗೂ ಒಬ್ಬ ಒಳ್ಳೆಯ ‘ಫಿಟ್ಟರ್’ ಅನ್ನು ಆರಿಸ್ಕೊಂಡು, ಮೂರು ತಿಂಗಳ ‘ಕೋರ್ಸ್ ಗೆ ಸಾವಿರಾರು ರೂಪಾಯಿ ಫೀಸ್ ತೆತ್ತು, ಪ್ಯಾಕೇಜ್ ಫಿಕ್ಸ್ ಮಾಡಿಕೊಂಡೇ ಮಹಡಿಯಿಂದ ಧಡ ಧಡ ಇಳಿದು ಬಂದವನು,  ಕಮ್ಲೂ ಮುಂದೆ ಒಂದು ದೊಡ್ಡ ಪಟ್ಟಿ ತಂದಿಟ್ಟ ಗಂಭೀರವಾಗಿ . 

‘ಅಮ್ಮ, ನಾಳೆಯಿಂದ ಇದರಲ್ಲಿ ಬರ್ದಿರೋ ಸಾಮಾನುಗಳನ್ನೆಲ್ಲ ತರಿಸಿ, ನಂಗೆ ಡಯಟ್ ಅಡುಗೆ ಮಾಡಿಹಾಕೋ ಜವಾಬ್ದಾರಿ ನಿಂದು’-ಅಂದುಬಿಟ್ಟ ಖಡಕ್ಕಾಗಿ.   

ಅವನ ಕಮ್ಯಾಂಡ್ ಕೇಳಿ ಕಮ್ಲೂ ತಟ್ಟನೆ ಸ್ಟ್ಯಾಚು ಆದಳು!...

ಬೆಳಗ್ಗೆ ಆರುಗಂಟೆಗೆ ಅರ್ಧಲೋಟ ಸಕ್ಕರೆ ಇಲ್ಲದ ಕಾಫಿ, ಎಂಟುಗಂಟೆಗೆ ಮ್ಯಾಗಿ ಅಥವಾ ಟಾಪ್ರಾಮನ್ ನ್ಯುಡಲ್ಸ್, ಒಂದು ಗ್ರೀನ್ ವೆಜ್ಜೀಸ್, ಒಂದು ಹಾಳೆ ಚೀಸ್ ಮತ್ತು ಪನ್ನೀರು ತುಂಡುಗಳನ್ನು ತುಪ್ಪದಲ್ಲಿ ಹುರಿದು, ಅದಕ್ಕೆ ಕೆಂಪು ಮೆಣಸಿನಕಾಯಿ ಫ್ಲೇಕ್ಸ್- ಉಪ್ಪು, ಅಥವಾ ಪಾಲಕ್ ಪನ್ನೀರ್ ಜೊತೆಗೆ ಈರುಳ್ಳಿಯನ್ನು ಅರ್ಧಂಬರ್ಧ ಬಾಡಿಸಿ ಟಿಫನ್ ರೆಡಿ ಮಾಡಬೇಕು. ಮಧ್ಯಾಹ್ನ ಒಂದುಗಂಟೆಗೆ ತೆಳ್ಳಗೆ, ಚಿಕ್ಕದಾಗಿರೋ ಒಂದು ಚಪಾತಿ, ಉಳಿದವೆಲ್ಲ ಡಿಟ್ಟೋ ಡಿಟ್ಟೋ ಡಿಟ್ಟೋ...ರಾತ್ರೀನೂ ಮಧ್ಯಾಹ್ನದ ಮೆನೂನೇ ಡಿಟ್ಟೋ ...ನೊ ಕಾರ್ಬೋಹೈಡ್ರೆಟ್ಸ್... ತಿಳೀತಾ...ಅಕ್ಕಿ ನಿಷಿದ್ಧ ..’

ಕಮ್ಲೂ ಕಣ್ ಕಣ್ ಬಿಟ್ಟುಕೊಂಡು ನೋಡಿ, ಗೋಣಾಡಿಸಿದಳು. 

‘ ದಿನಕ್ಕೆ ನೂರೈವತ್ತು ಗ್ರಾಂ ಪನ್ನೀರು, ಚೀಸು, ಮ್ಯಾಗಿ ಪ್ಯಾಕ್ಸೂ ಎಲ್ಲ ಬಿಗ್ ಬ್ಯಾಸ್ಕೆಟ್ ನಲ್ಲಿ ಬೇಗ ಆರ್ಡರ್ ಮಾಡಿಬಿಡು...’ ಎಂದು ಹುಕುಂ ನೀಡಿ ಅಂತರ್ಧಾನನಾದ!

ಕಮ್ಲೂ ಕಕ್ಕಾಬಿಕ್ಕಿ!...

ಆಮೇಲೆ ಸುಧಾರಿಸಿಕೊಂಡು, ಫೋನ್ ತೊಗೊಂಡು ಒಂದು ಕೆಜಿ ಪನ್ನೀರು ಇತ್ಯಾದಿ ಅವನು ಹೇಳಿದ್ದನ್ನೆಲ್ಲ ಆರ್ಡರ್ ಹಾಕಿ ಬಿಲ್ ನೋಡಿದವಳೇ ಮೆಟ್ಟಿಬಿದ್ದಳು. ಇಡೀ ತಿಂಗಳ ಸಂಸಾರದ ದಿನಸಿ ಬೆಲೆ!...

‘ಸುಡುಗಾಡು ಈ ಪನ್ನೀರಿಗೆ ಇಷ್ಟೊಂದು ಬೆಲೆಯೇ’ ಎಂದು ಶಾಪ ಹಾಕ್ತಾ ವಾರಕ್ಕಾಗೋಷ್ಟು ಅವನ ಡಯಟ್ ಐಟಮ್ಸಿಗೆ  ಆರ್ಡರ್ ಹಾಕಿ ‘ಉಸ್ಸಪ್ಪ’ ಎಂದು ಸೊಫಾದ ಮೇಲೆ ಒರಗಿದಳು.

‘ಏನೇ, ಮೊದಲ ದಿನವೇ ಇಷ್ಟೊಂದು ಸುಸ್ತೇ?’- ಎಂದು ಅವಳ ಪತಿರಾಯ  ಶ್ರೀಕಂಠೂ , ಕಮ್ಲುವನ್ನು ಚುಡಾಯಿಸಿದಾಗ, ಮುಖ ದಪ್ಪ ಮಾಡಿಕೊಂಡು ಅವಳು- ‘ನಾನು ಈಗ ಸುಸ್ತಾಗೋದಿರಲಿ,  ಬಿಲ್ ಬಂದಾಗ ನೀವು ಸುಸ್ತಾಗೋದು ಗ್ಯಾರಂಟಿ ’ -ಎಂದವನಿಗೆ ಪ್ರತಿಗುದ್ದು ಕೊಟ್ಟು ಕಿಚಾಯಿಸಿದಳು.

ಅಲ್ಲಿಂದ ದಿನ ಪೂರ್ತಿ ಶುರುವಾಯ್ತು, ಕ್ಷಣ ಕ್ಷಣಕ್ಕೂ ಕಾಲಿಂಗ್ ಬೆಲ್ಲು!...

ಅಮೆಜಾನ್, ಬಿಗ್ ಬ್ಯಾಸ್ಕೆಟ್, ಒಟಿಪಿ ಎಕ್ಸಪ್ರೆಸ್ ಇನ್ನೂ ಎಂಥೆಂಥದೋ...ಒಟ್ನಲ್ಲಿ ಅವಳ ಪ್ರಾಣ ತಿನ್ನಕ್ಕೆ ಯಮಕಿಂಕರರ ಹಾಗೇ ಬಾಗಿಲು ಬಡಿಯುವ ಅನೇಕ ಮಂದಿಗಳು. 

ಅಮೆಜಾನ್ನಿಂದ ಪುಟಾಣಿ ತೂಕದ ಮೆಷಿನ್ ಬಂದಿಳಿಯಿತು. ‘ ಅಮ್ಮಾ, ಇಲ್ನೋಡು, ಚಪಾತಿ ಹಿಟ್ಟು ಮೂವತ್ತು ಗ್ರಾಂ ಅಷ್ಟೇ, ತರಕಾರಿಗಳು ಒಟ್ಟು ಐವತ್ತು ಗ್ರಾಂ, ಎಲ್ಲ ತೂಕ ಮಾಡಿ ಮಾಡಿ ಹಾಕ್ಬೇಕು, ಯದ್ವಾತದ್ವಾ ಮಾಡಿದ್ಯೋ ನನ್ನ ಡಯಟ್ ಢಮಾರ್ ಅಷ್ಟೇ’ -ಎಂದು ಮಗ ಎಚ್ಚರಿಕೆ ಗಂಟೆ ಅಲ್ಲಾಡಿಸಿ ಹೋದ. 

ಅಲ್ಲಿಂದ ಮುಂದೆ ಕಮ್ಲೂ ಒಂದು ಗಳಿಗೆ ಕೂತಿದ್ರೆ ಕೇಳಿ.... ಕಾಲಿಗೆ ಗಾಲಿ ಕಟ್ಟಿಕೊಂಡವಳಂತೆ ಟಕ ಟಕ ಅಡುಗೆಮನೆಗೂ ಬೀದೀ ಬಾಗಿಲಿಗೂ ಎಡತಾಕಿದಳು. ತಮ್ಮ ಅಡುಗೆ-ತಿಂಡಿ ಜೊತೆ,  ಮಗನ ತೂಕ ಮಾಡಿದ ತಿಂಡಿ-ಊಟಗಳ ತಯಾರಿಕೆ. ತೂಕದ ಯಂತ್ರದ ಮೇಲೆ ಪದಾರ್ಥಗಳನ್ನು ಇಟ್ಟು ಕನ್ನಡಕ ಹಾಕಿಕೊಂಡು ಗುಲಗಂಜಿ ತೂಕ ವ್ಯತ್ಯಾಸವಾಗದ ಹಾಗೇ ಕೆಳಗೆ-ಮೇಲೆ ಬಗ್ಗಿ ನೋಡಿ ಸರಿಯಾಗಿದೆ ಅಂತ ಖಾತರಿ ಮಾಡಿಕೊಳ್ಳೋದ್ರಲ್ಲಿ ಅವಳ ಕತ್ತು ಕೊಕ್ಕರೆ ಕತ್ತಿನ ಹಾಗೇ ನಿಗರಿಕೊಂಡಿತ್ತು. 

ಜೊತೆಗೆ, ‘ಆಲೀವ್ ಆಯಿಲ್ ಮಾತ್ರ ಹಾಕಬೇಕು, ಬೇರೆ ಎಣ್ಣೆ ಸೋಕಿಸ್ಬೇಡ..ಎಲ್ಲ ಟೈಮ್ ಟೈಮ್ ಗೆ ಆಗಬೇಕು, ಇಲ್ಲದಿದ್ರೆ ಎಲ್ಲ ವೇಸ್ಟೂ ಕಣಮ್ಮ...’ ಎಂದು ಅವಳ ಮಗ ಸೋರಾಗ ಹಾಡಿ ಆಕ್ಷೇಪಣೆಯ ಕೊಂಕು ಎತ್ತಿದಾಗ, ಕಮ್ಲೂ ಕಮಕ್ ಕಿಮಕ್ ಅನ್ನಲಿಲ್ಲ. ಮೇಲೆ ಎಗರಾಡೋ ದಮ್ಮಿಲ್ಲದೆ,

 ‘ನಿನ್ನ ಗಂಟೇನು ಹೋಗ್ಬೇಕು, ಆಲೀವ್ ಆಯಿಲ್ ಬೆಲೆ ಗೊತ್ತೇನೋ ಕತ್ತೆಭಡವಾ’ -ಎಂದು ಗಂಟಲಲ್ಲೇ ಬಯ್ದುಕೊಂಡಳು.

ಅಮೆಜಾನ್ನಿಂದ ಬಂದಿಳಿದ  ತೂಕದ ಮೆಷಿನ್ ಮತ್ತು ಅಳತೆಯ ಇಂಚುಪಟ್ಟಿಯನ್ನು ಹಿಡ್ಕೊಂಡು ಬಂದ ಮಗನನ್ನು ಕಂಡು ಕಮ್ಲೂ ಎದೆ ಧಸಕ್ಕೆಂದಿತು-‘ಇನ್ನೇನು ಕಾದಿದೆಯಪ್ಪ’-ಅಂತ! 

‘ಅಮ್ಮ, ಪ್ಲೀಸ್ ಹೆಲ್ಪ್ ಮಾಡಮ್ಮ, ನನಗೊಬ್ಬನಿಗೇ ಅಳತೆ ಮಾಡ್ಕೊಳ್ಳೋದು ಕಷ್ಟ..ಹಿಡ್ಕೋ ಈ ಮೆಷರಿಂಗ್ ಟೇಪನ್ನ...ನನ್ನ ಎದೆ, ಹೊಟ್ಟೆ, ತೋಳು, ತೊಡೆ...ಇವುಗಳ ಸುತ್ತಳತೆ ತೊಗೊಂಡು ಹೇಳು, ಪ್ರತಿವಾರ ಇದನ್ನ ನಾನು ನನ್ನ ಕೋಚ್ ಗೆ ಕಳಿಸ್ಬೇಕು..ವಾರ ವಾರ ಕಡಿಮೆಯಾಗಬೇಕು ...ವಾರ ವಾರ ಡಯಟ್ ಬದಲಾಗತ್ತೆ, ಮುಂದಿನವಾರ ಅವರು ಕಳಿಸೋ ಮೆನು ಹೇಳ್ತೀನಿ, ರೆಡಿಯಾಗಿರು, ಅದಕ್ಕೆ ತಕ್ಕಹಾಗೆ ನೀನು ಮಾಡಿಹಾಕಬೇಕು, ಗೊತ್ತಾಯ್ತಾ?’ – ಎಲ್ಲಕ್ಕೂ ಕಮ್ಲೂ ಕೀಲುಗೊಂಬೆಯಂತೆ ತಲೆಯಾಡಿಸಿದಳು.  

ವಾರ ಕಳೀತು. ಬೇರೆ ಮೆನು. ‘ಅಮ್ಮ ಕೋಳಿಮೊಟ್ಟೆ ತಿನ್ನಬೇಕಂತೆ’- ಅವನ ಬಾಯ ಮೇಲೆ ಪಟ್ಟನೊಂದು ಕೊಟ್ಟೇ ಬಿಟ್ಳು ಮಹಾತಾಯಿ ಕಮ್ಲೂ. ಅವಳ ಮಾಂಕಾಳಿ ರೂಪ ಕಂಡು ಭೀತನಾದ ಮಗ, ‘ಬೇಡಬೇಡ...ಅದಕ್ಕೆ ಸಮನಾದ ಬೇರೆ ಪದಾರ್ಥ ಕೇಳ್ತೀನಿ ಬಿಡು’ ಎಂದು ಬಾಲ ಮುದುರಿಕೊಂಡು ಹೋದ.

ಮಗನನ್ನು ಸಣ್ಣ ಮಾಡೋದ್ರಲ್ಲಿ ಕಮ್ಲೂ ಹೈರಾಣಾಗಿ ಹೋಗಿದ್ಳು.

 ‘ ತಲೆ ಚಿಟ್ಟು ಹಿಡಿದು ಹೋಗಿದೇರೀ...ಒಲೆ ಮುಂದೆ ಎಷ್ಟ್ಹೊತ್ತು ಬೇಯೋದೂ...ದಿನಾ ಒಂದೇ ಮಂತ್ರ..ದನ ತಿಂದ ಹಾಗೆ ತರಕಾರಿ ತಿನ್ನು ಅಂತ ಹೇಳಿದ್ದಾರಂತೆ, ಒಬ್ಳೇ ಎಷ್ಟೂಂತ  ತರಕಾರಿ ಬಿಡಿಸ್ಕೋಳ್ಳೋದು, ಹೆಚ್ಕೊಳೋದು, ಒಲೆಯ ಮೇಲೆ ಹುರಿಯೋದು, ಬೇಯ್ಸೋದು ಬೇರೆ..ನಾನೇನು  ಹದಿನಾರುವರ್ಷದ ಹುಡುಗೀ ಕೆಟ್ಟುಹೋದ್ನೆ, ನನ್ನ ಕೈಲ್ಲಂತೂ ಆಗಲ್ಲಪ್ಪ.. ಆಮೇಲೆ ಆಕ್ಷೇಪಣೆಯಂತೂ ತಪ್ಪಲ್ಲ..ಇವನು ಸಣ್ಣ ಆಗೋದೂ  ಸಾಕು, ನನ್ನ ಗೋಳು ಹೊಯ್ಕೊಳೋದೂ ಸಾಕು..’-ಎಂದು ಗಂಡನ ಮುಂದೆ ಕಮ್ಲೂ ಒರಲಿಕೊಂಡಳು.

ಅರಣ್ಯರೋಧನ.. ಶ್ರೀಕಂಠೂಗೆ ಇಬ್ಬಂದಿ ಸಂಕಟ..ಅಪರೂಪಕ್ಕೆ ಮಗನಿಗೆ ಒಳ್ಳೆ ಬುದ್ಧಿ ಬಂದಿದೆ. ಸಣ್ಣ ಆದರೆ ನೋಡಕ್ಕೂ ಚೆಂದ..ಆರೋಗ್ಯಕ್ಕೂ ಒಳ್ಳೇದು ಅಂತ ಹೆಂಡ್ತೀಗೆ ಅನುಕಂಪ ತೋರಿಸಿದೆ ಗಪ್ ಚುಪ್ಪಾಗಿದ್ದ.

‘ವಾರ ವಾರಕ್ಕೆ ನನ್ನ ತೂಕ ಇಳಿತಾನೇ ಇಲ್ವಲ್ಲಮ್ಮ’ ಎಂದು ಮಗ ಒಂದೇ ಸಮನೆ ಗೋಳು ಕರೆದಾಗ, ಕಮ್ಲೂಗೆ ಸಿಡಾರನೆ ಸಿಟ್ಟು ಸಿಡಿದು, ‘ಸಾಕೋ ಮಾರಾಯ ನಿನ್ನ ಡಯಾಟಾಯಣ’ ಎಂಬ  ಜ್ವಾಲಾಮುಖಿ ಕೊರಳ ಸೀಳಿಕೊಂಡು ಬಂದದ್ದು, ಭಾಳ ಕಷ್ಟಪಟ್ಟು ಗಂಟಲಿಗೆ ಬಿರಟೆ ಹಾಕಿಕೊಂಡಳು! 

ಮೂರೇನು, ಆರು ತಿಂಗಳೂ ಕಳೆದರೂ ಮಗರಾಯನ ದೇಹದ ತೂಕ ಅಷ್ಟೇನೂ ವ್ಯತ್ಯಾಸವಾಗದೆ ಅವನು, ಹ್ಯಾಪುಮೋರೆ ಹಾಕಿಕೊಂಡು ಬೇಸರ ಮಾಡಿಕೊಂಡಿದ್ರೆ, ಕಮ್ಲೂಗೋ  ನಿಂತರೆ ಸುಸ್ತು, ತಲೆತಿರುಗು..ಬಿದ್ದುಬಿಡೋವಂಥ ವೀಕ್ನೆಸ್ಸು! 

ಓಡಿಹೋಗಿ ವೆಯಿಂಗ್ ಮೆಷಿನ್ ಮೇಲೆ ನಿಂತು ತೂಕ ನೋಡಿಕೊಂಡವಳಿಗೆ ಹೈ ಶಾಕ್!...ಅವಳ ತೂಕ ಎಂಟು ಕೆಜಿ ಇಳಿದುಹೋಗಿರೋಣವೇ.!!

   

Comments

  1. ಲೇಖನ ತುಂಬಾ ಚೆನ್ನಾಗಿದೆ. ಡಯಟ್ ಮಾಡೊದು ಬಿಟ್ಟು, ಮೈ ಬಗ್ಗಿಸಿ ಕೆಲಸ ಮಾಡಿದರೆ ತೂಕ ‌ತಾನಾಗೆ ಇಳಿಯುತ್ತೆ ಅನ್ನೊ ಸಂದೇಶವನ್ನು ಹಾಸ್ಯ ಲೇಪನದೊಂದಿಗೆ ಸಾರುತ್ತದೆ ಈ‌ ಲೇಖನ.

    ReplyDelete
  2. ಲೇಖನ ಚೆನ್ನಾಗಿದೆ. ಡಯಟ್ ತೂಕ ಇಳಿಸುವಿಕೆ ಬಗ್ಗೆ ಹಾಸ್ಯಮಯವಾಗೇ ಸಾಕಷ್ಟು ತಿಳಿ ಹೇಳಿದ್ದಿರಿ.

    ReplyDelete

Post a Comment