ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ...

ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ...

ಲೇಖನ - ಶ್ರೀಮತಿ ಮಂಜುಳಾ ಡಿ



1648 ರಲ್ಲಿ ಮಡದಿ ಮಮ್ತಾಜ್ ಳ ನೆನಪಿನ‌ದ್ಯೋತಕವಾಗಿ ಷಹಜಹಾನ್ ನಿರ್ಮಿಸಿದ

"ಪ್ರೇಮ ಸೌಧ", ಇದುವರೆಗೂ ಅದೆಷ್ಟೋ ಜೋಡಿಗಳು ಒಟ್ಟಿಗೆ ನೋಡಬೇಕು ಎಂದು ಕನಸುವ ಸೌಧ ವಾಗಿದೆ.

ಇಷ್ಟಕ್ಕೂ " ಪ್ರೇಮವೆಂದರೇನು?"

ಖಂಡಿತಾ "ಪ್ರೇಮ ಸೌಧ"  ಈ ಪದದೊಂದಿಗೆ ತಾಜುಮಹಲು ಬಿಟ್ಟರೆ ಬೇರೆ ಮಹಲುಗಳ ಹೆಸರು ಯಾರಿಗೂ  ತೋಚಲಾರದು, ಗೂಗಲ್ ಕೂಡ ಇದಕ್ಕೆ ಹೊರತಲ್ಲ!   ತಾನು ಕಟ್ಟಿದಂತಹ ಮಹಲು ಇನ್ಯಾರೂ ನಿರ್ಮಿಸಬಾರದೆಂದು ನಿರ್ಮಾಣ ಮಾಡಿದವರ ಕೈ ಕತ್ತರಿಸಿದ ಸುಲ್ತಾನರ ಪ್ರೇಮ ಅವರ ಎನ್ನುವ ಮುನ್ನ ಭಾರತದಲ್ಲಿರುವ ಇನ್ನೂಂದು ಪ್ರೇಮ ಸೌಧದ ಬಗ್ಗೆ ಅರಿಯುವ ಅಗತ್ತತೆ ಇದೆ.  ಬಹುತೇಕರು ಇದರ ಬಗ್ಗೆ ಕಂಡು ಕೇಳಿರದ  ಇನ್ನೊಂದು  "ಪ್ರೇಮ ಸೌಧ" ವಿದೆ. ಇದರ ಬಗ್ಗೆ ಅರಿಯುತ್ತಾ ಹೋದಂತೆ ಕಣ್ಣು ತೇವವಾಗುತ್ತದೆ. ಬೆಳಕಿನ ಸೆಲೆಯ ಕಾಲಂದುಗೆ ಜೀವಲೋಕದ ಸ್ಪರ್ಶ ಉಣಿಸುವ  ಈ ದಿವ್ಯ ಸೌಧ ನಿಜವಾದ

   "ಪ್ರೇಮ ಸೌಧ" ಎಂಬ ಭಾವದಿಂದ ನಸು ಆಲಾಪವೊಂದು ಮೂಡುತ್ತದೆ.

ಯಾವುದು ಆ "ಪ್ರೇಮ ಸೌಧ"!!!

ಟಾಟಾ ಮನೆತನ, ಭರತ ಭೂಮಿ ನೆಲೆಕೊಟ್ಟ  ಒಂದಷ್ಟು ಅಗಲ ಜಾಗಕ್ಕೆ ಪ್ರತಿಯಾಗಿ ಕೋಟಿಪಟ್ಟು ಈ ನೆಲಕ್ಕೆ ನೀಡಿದ ಮನೆತನ! ಆ ಮನೆಯ ಒಂದೊಂದು ಜೀವವೂ ಈ ನೆಲೆಕ್ಕೆ ಕೊಡುಗೆಯೇ! ಎಲ್ಲದರಲ್ಲೂ ವಿಶೇಷತೆ ಉಣಿಸುವ ಟಾಟಾ ಮನೆತನದ ಪ್ರೇಮ‌ಕಥೆಗಳೂ ಅತ್ಯಂತ ಮನೋಜ್ಞ! ದೋರಾಜ್ಜಿ ಟಾಟಾ ತಮ್ಮ ತಂದೆ ಜೆಮ್ಸಶೆಡ್ಜಿ ಟಾಟಾ ಅವರೊಂದಿಗೆ ಮೈಸೂರಿಗೆ ಗೆಳೆಯರ ಮನೆಗೆ ಭೇಟಿ ನೀಡಿದಾಗ,  ಗೆಳೆಯರ ಮಗಳು, ಮೆಹರ್ ಬಾಯಿಯ ಬುದ್ದಿಮತ್ತೆ- ಹಲವು ಪ್ರಕಾರಗಳಲ್ಲಿ  ನೈಪುಣ್ಯತೆ  ಅಚ್ಚಳಿಯದ ಛಾಪು ಮೂಡಿಸುತ್ತದೆ. ಅವರ ಮೊದಲ ಭೇಟಿಯಲ್ಲೇ  ದೊರಾಬ್ಜಿ ಟಾಟಾ ಅವರನ್ನು ಆವತಿಸುವ ಕಡುಪರವಶತೆ,  ಫೆಬ್ರವರಿ 14 1898 ರಂದು ಅವರ ವಿವಾಹವಾಗುತ್ತದೆ.

ದೊರಾಬ್ಜಿ ಟಾಟಾ ಅವರು ಮೆಹರ್ ಬಾಯಿ ಅವರಿಗೆ, ಲಂಡನ್ ಮೂಲದ ವರ್ತಕರಿಂದ ಖರೀದಿಸಿದ  ಕೊಹಿನೂರ್ ಡೈಮಂಡ್ ಗಿಂತ ಎರಡು ಪಟ್ಟು ದೊಡ್ಡದಾದ,  245.35 ಕ್ಯಾರೆಟ್ ಜುಬೀಲಿ ಡೈಮಂಡ್ ಕೊಡುಗೆಯಾಗಿ ನೀಡುತ್ತಾರೆ. 1900 ರಲ್ಲಿ ಅದರ ಮೊತ್ತ ಒಂದು‌ ಲಕ್ಷ ಪೌಂಡ್!!! ಆಗಿತ್ತು. ಮೆಹರ್ ಬಾಯಿ ಅವರು ವಿಶೇಷ ಕಾರ್ಯಗಳಲ್ಲಿ ಪ್ಲಾಟಿನಂ ಸರದೊಂದಿಗೆ ಅದನ್ನು ಧರಿಸುತ್ತಿದ್ದರು.



ಇದರಲ್ಲಿ ವಿಶೇಷವಾದರೂ ಏನು!!? ಅವರು ದುಡ್ಡಿದ್ದವರು, ಡೈಮಂಡ್ ಉಡುಗೊರೆ ನೀಡುತ್ತಾರೆ. ಅಕ್ಕರೆಯಿಂದ  ತಂದ ಮೊಳದುದ್ದ ಮಲ್ಲಿಗೆಯೂ ಪುಸ್ತಕಗಳ ಮಧ್ಯೆ ಸದಾ ಕಾಲಕ್ಕೂ ಕಂಪು ನೀಡುವ ನೆನಪಿನ ದ್ಯೋತಕವಾಗಬಲ್ಲದು ಎನಿಸಿದಿರದು. ಆದರೆ ವಿಶೇಷತೆ ಇರುವುದು ಆ ಡೈಮಂಡ್ ನಿಂದ ಉಳಿದ ಸಹಸ್ರಾರು  ಬದುಕುಗಳ ಮತ್ತು ಭಾರತದ ಕೈಗಾರಿಕೆಯೊಂದು ಹೆಮ್ಮರವಾಗಿ ಬೆಳೆದ ಕಥೆಯಲ್ಲಿ!

ಮೊದಲ ವರ್ಲ್ಡ್ ವಾರ್!!! ನಂತರ ಇಡೀ ಜಗತ್ತಿನ ಎಲ್ಲಾ ಕ್ಚೇತ್ರಗಳೂ ವ್ಯವಹಾರಿಕವಾಗಿ ಆರ್ಥಿಕವಾಗಿ ನೆಲಕಚ್ಚಿದ ಸಮಯ. ಟಾಟಾ ಅವರ ಬೃಹತ್ ಕಬ್ಬಿಣ ಉಕ್ಕು ಕಾರ್ಖಾನೆಯೂ ಇದಕ್ಕೆ ಹೊರತಾಗಿರಲಿಲ್ಲ! ಕಾರ್ಮಿಕರಿಗೆ ವೇತನ ಪಾವತಿಸಲು ಸಾಧ್ಯವಾಗದೇ ಕಾರ್ಖನೆ ಮುಚ್ಚು ಪರಿಸ್ಥಿತಿ ಎದುರಾಯಿತು. ಎಲ್ಲಾ ಪ್ರಯತ್ನಗಳ ನಂತರವೂ ಆರ್ಥಿಕ ಬಿಕ್ಕಟ್ಟು ಬಗೆಹರಿಯಲಿಲ್ಲ. ಕೊನೆಗೆ ಟಾಟಾ ಮನೆತನದ  ಜುಬಿಲಿ ಡೈಮಂಡ್ ಸೇರಿದಂತೆ ಸಮಸ್ತ ಆಭರಣಗಳನ್ನು ಅಡವಿರಿಸಿ ಕಾರ್ಮಿಕರ ವೇತನ ಪಾವತಿಸಲಾಯಿತು. ಎಲ್ಲಾ ಕಾರ್ಮಿಕರು ಉದ್ಯೋಗ ಭೀತಿಯಿಂದ ಮುಕ್ತರಾದರು.  ಸಮಯ ತೆಗೆದುಕೊಂಡರೂ  ನಿಧಾನವಾಗಿ ಮತ್ತೆ ಕಂಪನಿ ಚೇತರಿಸಿಕೊಂಡಿತು.

ಮೆಹರ್ ಬಾಯಿ ಟಾಟಾ, ಇವರು ಲೇಡಿ ಟಾಟಾ ಅಥವಾ ಮೆಹ್ರೀ ಎಂದು ಪ್ರಸಿದ್ದರಾದ ಈಕೆಯ ಕುರಿತು ಒಂದೆರಡು ಸಾಲುಗಳಲ್ಲಿ ಈಕೆಯ ವ್ಯಕ್ತಿತ್ವ ಹಿಡಿದಿಡುವುದು ಕಷ್ಟ ಸಾಧ್ಯ!  ಶಾರದ ಆಕ್ಟ್ - ಬಾಲ್ಯ ವಿವಾಹ ರದ್ದತಿ ಕಾಯ್ದೆ 1929 ರ ಅನುಮೋದನೆಯ ಹಿಂದೆ ಸತತ ಇವರ ಹೋರಾಟವಿದೆ. 1924 ರ ಒಲಂಪಿಕ್ಸ್ ನಲ್ಲಿ ಮಿಕ್ಸೆಡ್ ಡಬಲ್ಸ್‌ ಆಡಿದ ಮೊದಲ ಭಾರತೀಯ ಮಹಿಳೆ. ಸ್ವಲ್ಪ ಹಣ ನೋಡುತ್ತಿದ್ದಂತೆ  ಮಹಿಳೆಯರ ಉಡುಗೆ-ಮಾತು ಎಲ್ಲಾ ಬದಲಾಗಿ ಹೋಗುವ ದಾಟಿ ಎಲ್ಲಾ ಕಾಲಕ್ಕೂ ಅನ್ವಯ. ಇಡೀ ಭಾರತದ ಇಂದಿನ ಮಹಿಳೆಯರು ಚಕಿತಗೊಳ್ಳುವಂತೆ ಮೆಹರ್ ಬಾಯಿ ಸೀರೆ ಬಿಟ್ಟು ಇನ್ಯಾವುದೇ ಉಡುಗೆ ತೊಡಲಿಲ್ಲ. ವಿದೇಶಗಳ ಎಲ್ಲಾ ಸಭೆಗಳು, ಅಷ್ಟೇಕೆ ಎಲ್ಲಾ ಆಟಗಳನ್ನೂ ಸೀರೆ ತೊಟ್ಟು ಆಡಿರುವುದು ನಮ್ಮ ಸಂಸ್ಕೃತಿಯೆಡೆಗೆ ಆಕೆಗಿದ್ದ ಗೌರವಾಧರದ ದ್ಯೋತಕ.

ಇಂತಹ ಘನ ವ್ಯಕ್ತಿತ್ವವುಳ್ಳ ಈಕೆ ಅಚಾನಕವಾಗಿ ಕ್ಯಾನ್ಸರ್ ನಿಂದ 1931 ರಲ್ಲಿ ಈ ಲೋಕ ತೊರೆಯುತ್ತಾರೆ. ದೋರಾಬ್ಜಿ ಟಾಟಾ ಅವರ ಜಗತ್ತು ಸಹಜವಾಗಿ ಶೂನ್ಯವಾಗುತ್ತದೆ. ಸ್ವಲ್ಪವೂ ವಿಳಂಬಕ್ಕೆ ಎಡೆಕೊಡದೆ, 1932 ರಲ್ಲಿ ಯಾವುದೇ ಸ್ಥಳ- ದೇಶ- ಸಮುದಾಯ ಗಳ ಭಿನ್ನತೆಗಳನ್ನು ಪರಿಗಣಿಸದೇ "ಸರ್ ದೊರಾಬ್ಜಿ ಟಾಟಾ ಟ್ರಸ್ಟ್" ಸ್ಥಾಪಿಸುತ್ತಾರೆ. ಇದರ ಮುಖ್ಯ ಅಂಗವಾಗಿ ಲೇಡಿ ಟಾಟಾ ಮೆಮೋರಿಯಲ್ ಟ್ರಸ್ಟ್ ಸ್ಥಾಪನೆ ಯಾಗುತ್ತದೆ.  ಇದರ ಮುಖ್ಯ ಧ್ಯೇಯ, ರಕ್ತ ಸಂಬಂದಿತ ಮತ್ತು ಕ್ಯಾನ್ಸರ್  ಸಂಶೋಧನೆಗಳು. 1941 ರಲ್ಲಿ ಇದರೊಂದಿಗೆ ಕಾರ್ಯಾರಂಭವಾದ ಟಾಟಾ ಮೆಮೋರಿಯಲ್ ಹಾಸ್ಪಿಟಲ್-"  ಟಿಎಂಎಹಚ್," ಎಂದೇ ಪ್ರಸಿದ್ಧ ವಾದ ಈ ಹಾಸ್ಪಿಟಲ್ ನಿಂದ ಲಕ್ಷಾಂತರ ಜನ ಉಚಿತ ಚಿಕಿತ್ಸೆ ಪಡೆದು ಅದೊಂದು ಹುರುಪಿನಿಂದ ಬದುಕಿನತ್ತ ಮುಖಮಾಡಿ  ಈ ಕಟ್ಟಡದಿಂದ ಹೆಜ್ಜೆ ಹಾಕುವ ದಿವ್ಯ ಸೌಧ ನಿಜವಾದ ಪ್ರೇಮಸೌಧ ಎನ್ನಿಸದೇ ಇರದು.

ಇಷ್ಟೇ ಏಕೆ, 23 ರ ವಯಸ್ಸಿಗೆ ಪತಿಯನ್ನು ಸಕಾಲ ವೈದ್ಯಕೀಯ ಚಿಕಿತ್ಸೆ ದೊರೆಯದೇ ಕಳೆದುಕೊಂಡ ನಾಲ್ಕು ಮಕ್ಕಳ ತಾಯಿ, ಸುಭಾಷಿಣಿ ಮಿಸ್ತ್ರಿ. ಸಕಾಲದಲ್ಲಿ ದೊರೆಯುವ ವೈದ್ಯಕೀಯ ಚಿಕಿತ್ಸೆಯ ಮಹತ್ವ ಅರಿತ ಈಕೆ ಪತಿಯ ನೆನಪಿಗಾಗಿ ಕಸ ಮುಸುರೆ ಬೂಟ್ ಪಾಲಿಷ್ ಇಂತಹ ಎಲ್ಲಾ ಕೆಲಸ ಮಾಡಿ ಸ್ಥಾಪಿಸಿದ ಆಸ್ಪತ್ರೆ "ಹ್ಯೂಮಾನಿಟಿ ಆಸ್ಪಿಟಲ್"!!! ಇಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತ!!! "ಪ್ರೇಮ ಸೌಧ" ಎಂದರೆ ಇದಲ್ಲವೇ!!

ಪತ್ನಿಗೆ ಚಿಕಿತ್ಸೆ ಕೊಡಿಸಲು ರಸ್ತೆ ಇಲ್ಲದ ಕಾರಣಕ್ಕಾಗಿ ಒಬ್ಬನೇ ದೊಡ್ಡ ಗುಡ್ಡ ಕಡಿದು ರಸ್ತೆ ನಿರ್ಮಿಸಿದ ದಶರತ್ ಮಾಂಜಿ!!! ಆ ರಸ್ತೆ ಜಗದ ಅಮರ ಪ್ರೇಮಸೌಧವೇ ಸರಿ!

ಭಾರತದ ಪ್ರತೀ ಜಿಲ್ಲೆಯಲ್ಲೂ ಹೀಗೆ ಸರ್ಕಾರಿ ಶಾಲೆ-ಆಸ್ಪತ್ರೆಗಳ ನಿರ್ಮಾಣಕ್ಕಾಗಿ ತಮ್ಮ ಯಾವುದೋ ಬಂಧದ ನೆನಪಲ್ಲಿ ಸ್ವಂತ ಜಮೀನುಗಳನ್ನು ದಾನವಾಗಿ ನೀಡಿರುವ ಸಹಸ್ರಾರು ಉದಾಹರಣೆಗಳಿವೆ. ಅವೆಲ್ಲವೂ ನೈಜ ಅರ್ಥದಲ್ಲಿ "ಪ್ರೇಮ ಸೌಧಗಳೇ"

ಪ್ರೇಮ ಎಂದರೆ ದೈವ ಎಷ್ಟು ಜೀವಗಳನ್ನು ಸೃಷ್ಟಿಸಿದ್ದಾನೋ ಅಷ್ಟು ವ್ಯಾಖ್ಯೆಗಳಿರಬಹುದು. ಆದರೆ, ನಿಜವಾದ ಪ್ರೇಮ ಎಂತಹ ಸ್ಥಿತಿಯಲ್ಲಿದ್ದರೂ ಪರಸ್ಪರ ಕಣ್ಣಾಗುವ- ಹೆಗಲಾಗುವ -ಮುನ್ನೆಡೆಸುವ  ಮನಸ್ಥಿತಿಯಲ್ಲಿರುತ್ತದೆ. ಜೀವವೊಂದಕ್ಕೆ ಇನ್ನೊಂದು ಜೀವ ಜಗವಾಗಿ, ಆ ಜೀವವವನ್ನು ಬಿಟ್ಟು ಉಳಿದೆಲ್ಲವೂ ಶೂನ್ಯವೆನಿಸುವ ಈ ಭಾವ ವ್ಯಾಖ್ಯಗೆ ಸಿಗುವುದು ಅಸಾಧ್ಯವೇ. ತಮ್ಮ ಪ್ರೇಮಕ್ಕಾಗಿ ಎಲ್ಲರೂ ರಾಜರಂತೆ ಅರಮನೆ ನಿರ್ಮಿಸಲಾರರು! ಅಥವಾ ಇನ್ಯಾವುದೂ ದ್ಯೋತಕ ನಿರ್ಮಿಸಲಾರರು! ಆದರೆ,  ಜೀವಕ್ಕೆ ಜೀವವಾಗಿ  ಪ್ರೀತಿಸುವ ಅದೊಂದು ಜೀವಕ್ಕಾಗಿ, ವಿಶೇಷವಾದದ್ದು ಏನಾದರೂ ಮಾಡಲೇಬೇಕೆಂದು ಹಾತೊರೆಯುತ್ತೇವೆ, ಹಂಬಲಿಸುತ್ತೇವೆ ಜಪಿಸುತ್ತೇವೆ.

  ಇಂತಹ  ಹಂಬಲದಲ್ಲಿ ಕಟ್ಟಿದ ಚಿಕ್ಕದೊಂದು ಪ್ರತೀ ಮನೆಯೂ ಯಾರಿಗಾಗಿ ಕಟ್ಟಿರುತ್ತೇವೆಯೋ ಅವರಿಗೆ ಅದು  "ಪ್ರೇಮ ಸೌಧ" ವೇ! ಪ ಸೌಧಗಳ ಪ್ರತೀ ಇಟ್ಟಿಗೆ ಅವರಿಗೆ ಸ್ಮಾರಕದ ಅಂಶವೇ. 


Comments

  1. ಟಾಟಾ ಅವರ ಪ್ರೇಮ ಸೌಧದ ಬಗ್ಗೆ ತಿಳಿಸಿದ್ದೀರಿ ಬಹಳ ಹೆಮ್ಮೆಯ ವಿಷಯ ಲೇಖನದ ಮೂಲಕ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

    ReplyDelete

Post a Comment