ನೀನೇ ಸಾಕಿದಾ ಗಿಣಿ

 


 ನೀನೇ ಸಾಕಿದಾ ಗಿಣಿ\ ನಿನ್ನಾ ಮುದ್ದಿನಾ ಗಿಣಿ ! ಹದ್ದಾಗಿ ಕುಕ್ಕಿತಲ್ಲೋ ! ? 

                                                                         ಲೇಖಕರು : ಎಂ ಆರ್ ವೆಂಕಟರಾಮಯ್ಯ

         ಶೀರ್ಷಿಕೆ ಓದುತ್ತಿದ್ದಂತೆಯೇ ನೀವಂತಿರಿ, ಏ, ಇದು ‘ಮಾನಸ ಸರೋವರ’ ಕನ್ನಡ ಚಲನ ಚಿತ್ರದ ಹಾಡು ಅಂತ. ಹೌದು, ಇದು ಆ ಚಿತ್ರದ ಹಾಡೇ. ಈ ಹಾಡಿನ  ಮೊದಲ ಸಾಲನ್ನು ನನ್ನೀ ಲೇಖನಕ್ಕೆ ಅಳವಡಿಸಿಕೊಂಡಿದ್ದೇನೆ. ಹೀಗಂದಾಗ, ಈ ಶೀರ್ಷಿಕೆಗೂ ನಿಮ್ಮೀ ಲೇಖನಕ್ಕೂ ಏನು ಸಂಬಂಧ ಅಂದಿರಾ !



 ನಾ  ಹೇಳೋದು ಬೇಡ. ಲೇಖನ ಓದುತ್ತಿದ್ದಂತೆ ನಿಮಗೆ ಅರ್ಥವಾಗುತ್ತೆ, ಇಲ್ಲಿರುವ  ಎರಡು ಪ್ರಸಂಗ ಗಳನ್ನು ನಂಬಲು ಕಷ್ಟ ಎಂದು ನಿಮಗೆ ಅನಿಸಿದರೂ ನೀವು ನಂಬಲೇ ಬೇಕು, ಏಕೆಂದರೆ  ಇವು ನನ್ನ ಹತ್ತಿರದ ಸಂಬಂಧಿಗಳ ಕುಟಂಬದಲ್ಲಿ ನಡೆದಿದ್ದು ಇವನ್ನು ನಾ ಕಣ್ಣಾರೆ ಕಂಡಿದ್ದು. 

    ಆ ಕುಟುಂಬದಲ್ಲಿ ಬಹಳ ಕಾಲವಾದರೂ  ಸಂತಾನವಾಗಲಿಲ್ಲ ಎಂದು ದುಃಖಿಸಿದ ಆ ದಂಪತಿ ಸಂತಾನಗೋಪಾಲ ಸ್ವಾಮಿಯನ್ನು ಕೆಲ ಕಾಲ ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸಿದರೂ ಆ ದೇವ ಇವರ ಮೊರೆಗೆ  ಓಗೊಡಲಲ್ಲ. ಇರಲಿ, ಮತ್ತೊಬ್ಬ ದೇವರನ್ನು ಸ್ಮರಿಸೋಣ ಎನ್ನುತ್ತಾ ಅವರು ಓದಿದ, ಕೇಳಿದ ಹಲವು ದೇವರುಗಳಿಗೆ ಪ್ರೀತಿಯಾಗಲಿ ಎಂದು ಅವರ ಆಲಯಗಳಲ್ಲೂ ಉರುಳು ಸೇವೆ  ಮಾಡಿದರು, ಏಕಾದಶಿ, ಶನಿವಾರ, ಸೋಮವಾರ, ಗುರು ವಾರ ಉಪವಾಸ ವ್ರತ, ಹೋಮ, ಯಾಗ, ಯಜ್ಞಗಳನ್ನೆಲ್ಲಾ ಮಾಡಿದರು.‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ’ ಎಂಬಂತೆ ಆ ರಂಗಯ್ಯನನ್ನು ನಂಬಿದರು. ಇವರು ಅದೆಷ್ಟು ದೇವರುಗಳನ್ನು ಸ್ಮರಿಸಿದ್ದರೋ ಅವರೆಲ್ಲಾ ಇವರ ಮೊರೆ ಕೇಳಿದ್ದರು ಅನ್ನಿಸುತ್ತೆ, ಅಲ್ಪ ಕಾಲದಲ್ಲೇ ಇವರಿಗೆ ಒಂದರ ಹಿಂದೆ ಒಂದರಂತೆ ೪ ಹೆಣ್ಣು ಮಕ್ಕಳು ಜನಿಸಿದರು. ಈಗ ಮತ್ತೆ ಈ ದಂಪತಿಗಳು ಅದೇ  ದೇವರುಗಳನ್ನು ಮತ್ತೆ ಸ್ಮರಿಸಿದರು, ಸ್ವಾಮಿ, ಒಂದೇ ಒಂದು ಗಂಡು ಪಿಳ್ಳೇನ ನಮಗೆ ಕೊಟ್ಟಿದ್ರೆ ಸಾಕಾಗಿತ್ತು, ಆದರೆ ನೀನು ಹಾಗೆ ಮಾಡದೆ ೪ ಹೆಣ್ಣುಗಳನ್ನು ಕೊಟ್ಟೆ, ಇರ‍್ನೆಲ್ಲಾ ನಾ ಹೇಗೆ ಸುಧಾರಿಸಲಿ ! ‘ಅಪುತ್ರಸ್ಯ ಗತಿರ್ನಾಸ್ತಿ’ ಅಂದಿದ್ದಾರೆ ಹಿರಿಯರು. ನಮಗೆ ಸದ್ಗತಿ ಸಿಗಲಾದರೂ ಒಂದೇ ಒಂದು ಗಂಡು ಪಿಳ್ಳೇನ ಕರುಣಿಸಿ ದೇವ, ಮಹದೇವ ಎಂದು ಗೋಳಾಡಿದರು. 

    ದೇವರು ಭಕ್ತವತ್ಸಲ, ಕರುಣಾಮಯಿ ಅಲ್ಲವೇ ! ಮತ್ತೆ ಕೊಟ್ಟ ಒಂದು ಗಂಡು ಶಿಶುವನ್ನು . ನೀವು ನೋಡಬೇಕಿತ್ತು ಆ ದಂಪತಿಗಳ ಖುಶಿಯನ್ನು ! ಆಹಾ ! ಭಗವಂತ, ಕೊನೆಗೂ ನಮ್ಮ ಮೊರೆ ಕೇಳಿಸಿತಾ ! ಈಗಲಾದರೂ ಒಬ್ಬ ವಂಶೋದ್ದಾರಕನನ್ನು ಕೊಟ್ಟೆಯಾ ಎನ್ನುತ್ತಾ ಮೊರದ ಅಗಲ ಬಾಯಿ ತೆರೆದು ನಕ್ಕು ಸಂತಸಪಟ್ಟರು, ಸಂಭ್ರಮಿಸಿದರು. 

     ಹೆಣ್ಣು ಪಿಳ್ಳೆಗಳು ನಮ್ಮ ಖರ್ಚಿನಲ್ಲಿ ಈ ಮನೆ ತಿಂಡಿ, ಊಟ ಸವಿದು, ಇಂದಲ್ಲಾ ನಾಳೆ ನಮ್ಮೀ ಮನೆ ಬಿಟ್ಟು ಬೇರೆ ಮನೆ ಸೇರಿ ಆ ಮನೆ ಬೆಳಗುವವರು, ಅದಕ್ಕೇ ಇವಕ್ಕೆ ಹೆಚ್ಚು ಕಾಳಜಿ  ವಹಿಸೋದು ಬೇಡ, ಇವ ಇದ್ದಾನಲ್ಲಾ ನಮ್ಮೀ ಮನೆ ಬೆಳಗುವವ, ನಮ್ಮ ವಂಶ ಬೆಳಗಿ ನಮಗೆ ಗತಿ ಕಾಣಿಸುವವನು, ಇವನಿಗಿರಲಿ ಎಲ್ಲಾ ರಾಜೋಪಚಾರ, ಷೋಡಶೋಪಚಾರಗಳು ಎನ್ನುತ್ತಾ ಮಗ ನೆಲದಲ್ಲಿ ನಡೆದರೆ ಕಾಲು ಸವೆಯುತ್ತೆ, ಗಲೀಜಾಗುತ್ತೆ ಎನ್ನುತ್ತಾ ಪತಿ ಪತ್ನಿ ಮಗನನ್ನು ಭುಜದ ಮೇಲೆ ಕೂರಿಸಿಕೊಂಡು ದಿನವೂ  ಊರು ಸುತ್ತಿಸಿದರು. ಕಂಕುಳಲ್ಲಿ ಕೂರಿಸಿಕೊಂಡು ಮುದ್ದಾಡಿದರು, ಹೆಣ್ಣಿಗೇಕೆ ಹೆಚ್ಚು ಓದು ? ನಾಲ್ಕಕ್ಷರ ಓದಿ ಸಹಿ ಮಾಡೋದು, ಹಣ ಲೆಕ್ಕಮಾಡೋದು ಕಲಿತರೆ ಸಾಕು ಎಂದು ಅದನ್ನು ಕಲಿಸಿದರು ಆ ಹೆತ್ತವರು.  ಮಗ ದೊಡ್ಡ ಇಂಜಿನಿಯರ್ ಸಾಯೇಬನೋ ಡಾಕುಟರೋ ಆಗಲಿ ಎನ್ನುತಾ ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಗನ ಓದಿಗೆ ಲಕ್ಷಗಳಷ್ಟು ಹಣ ಸುರಿದರು. 

    ‘ಕುದುರೇನ ಕೆರೆಗೆ ಕೊಂಡೊಯ್ಯಬಹುದು. ಆದರ ಬಾಯಿಗೆ ನೀರು ತುಂಬೋಕೆ ಆಗುತ್ತಾ’ ! ಹೀಗೇ ಆಯಿತು ಈ ಮಗನ ಹಣೆಬರಹ, ೫-೬ ಕ್ಲಾಸುಗಳನ್ನು ದಾಟುವ ವೇಳೆಗೆ ಶರೀರ ಕೊಂಚ ಬಲಿತಿತ್ತು. ಅಪ್ಪಯ್ಯ, ನನಗೆ ಈ ಓದೆಲ್ಲಾ ತಲೇಗೇ ಹಿಡಿಸೊಲ್ಲಾ, ನನ್ನ ಜೊತೆಯವರೆಲ್ಲಾ ಕೈ ಕೆಲಸ ಕಲಿಯಲು ಮುಂದಾಗಿದ್ದಾರೆ. ನಾನು ಅದನ್ನೇ ಕಲೀತೀನಿ, ನನಗೊಂದು ಹೊಲಿಗೆ ಯಂತ್ರ  ತೆಕ್ಕೊಡು ಅಂತ ರಚ್ಚೆ ಹಿಡಿದ. ಅಯ್ಯೋ ಪಾಪ, ಮಗು ಅತ್ತರೆ ಜ್ವರವೋ ತಲೆನೋವೋ ¨ಬಂದರೆ ! ಇವನೊಬ್ಬ ಇಂಜಿನಿಯರ್\ಡಾಕ್ಟರ್ ಆಗಲಿ ಎಂಬುದು ನಮ್ಮ ಆಸೆಯಿತ್ತು. ಆದರೇನು ಮಾಡೋದು ! ಇವನ ಹಣೆ ಬರಹ ಹೀಗಿದ್ದರೆ ? ಎಂಬ ಸಮಾಧಾನ ಪಡೆದ  ಆ ಹೆತ್ತವರು, ಆಯಿತಪ್ಪಾ ನೀ ಅಳಬೇಡ, ನಾಳೇನೇ ತಕ್ಕೊಂಡು ಬರುವಾ ಎಂದವರೇ ಮರು ಬೆಳಗ್ಗೆಯೇ ಪೇಟೆಗೆ ಹೋಗಿ ಯಂತ್ರ ತಂದೇ ಬಿಟ್ಟರು ಮನೆಗೆ. ಹೀಗೆ ಸಾಗಿತ್ತು ನಮ್ಮೀ ಟೈಲರ್ ಹೀರೋನ ವಿದ್ಯಾಭ್ಯಾಸ. 

     ತಮ್ಮ ಮನೆಯ ಹೆಣ್ಣು ಪಿಳ್ಳೆಗಳಿಗೆ ವಿಧಿ ಬರೆದಂತೆ, ಅವರವರ ಅದೃಷ್ಟವಿದ್ದಂತೆ ಗಂಡು ಗಳು ಸಿಕ್ಕಿದ ಕಾರಣ ನಮ್ಮೀ ದಂಪತಿಗಳು ಹಾಗೋ, ಹೀಗೋ, ಹ್ಯಾಗೋ ಮದುವೆ ಅಂತ ಮುಗಿಸಿ ಅವರನ್ನು ತಮ್ಮ ಮನೆಯಿಂದ ಹೊರಗಟ್ಟಿದರು.    

    ‘ಎಳೆಗರುಂ ಎತ್ತಾಗದೇ’ ! ಎಂ¨ ಗ್ರಾಮೀಣ ಭಾಷೆಯ ನುಡಿಯಂತೆ  ಈ ಟೈಲರ್ ಬೆಳೆದು ದೊಡ್ಡವನಾದ. ಈ ವೇಳೆಗೆ ಈ ವೃತ್ತಿ ಇವನಿಗೆ ಒಲಿದಿತ್ತು  ದಿನೇ ದಿನೇ ಸಂಪಾದನೆ ಹೆಚ್ಚಿತು. ಈಗ ಮಗ ವಯಸ್ಸಿಗೆ ಬಂದಿದ್ದಾನೆ. ಅವನಿಗೊದು ವೈನಾಗಿ ಮದುವೆ ಮಾಡಬೇಡವೇ ! ಎನ್ನುತ್ತಾ ‘ಅಮ್ಮಾ ನಿಮ್ಮಾ ಮನೆಗಾಳಲ್ಲಿ ಹುಡುಗಿ ಉಂಟೇ ನಮ್ಮೀ ರಂಗನಿಗೆ’ ! ಎಂದು ಹಾಡುತ್ತಾ ಹೆಣ್ಣು ಹೆತ್ತವರ ಹಲವು ಹೊಸಿಲುಗಳನ್ನು ಹತ್ತಿ ಇಳಿಯಲಾರಂಭಿಸಿದರು ಸಡಗರ ದಿಂದ. ಈ ಜಗದಲ್ಲಿ ಗಂಡಿಗೊಂದು ಹೆಣ್ಣನ್ನು ಸೃಷ್ಟಿಕರ್ತಾ ಇಟ್ಟೇಯರ‍್ತಾನೆ ಅಂದಿದ್ದಾರೆ ಹಿರಿಯರು, ಅನುಭವಿಗಳು. ಕೊನೆಗೂ ರಂಗಯ್ಯನನ್ನು ಮೆಚ್ಚಿತು ಒಂದು ಹೆಣ್ಣು. ಮದುವೆಯೂ ಮುಗಿಯಿತು ಒಂದು ದಿನ.  

      ವಿವಾಹವಾದ ಮೇಲೆ ಮತ್ತೇನುಂಟು ಆಗಲಿಕ್ಕೆ  ! ಅದೇ ಆಯಿತು ಇವರಿಗೂ. ೩ ಹೆಣ್ಣು ಪಿಳ್ಳೆಗಳು. ರಂಗಯ್ಯ ರಂಗಮ್ಮ ಈಗ ಭಾರೀ ಸಂಸಾರಸ್ಥರು. ಅರ್ಥಾತ್ ಇವರು ೫ ಜನ + ಯಾವ ಸಂಪಾದನೆಯೂ ಇಲ್ಲದೆ ಬಿಟ್ಟಿ ಕೂಳು ತಿನ್ನುವ ಅಮ್ಮ, ಅಪ್ಪ. ಇಷ್ಟು ಜನರ ಹೊಟ್ಟೆ ಬಟ್ಟೆಗೆ ಬಂತು ಕಷ್ಟ. ಈ ಮಧ್ಯೆ ಅಮ್ಮ ಅಪ್ಪನ ಕಾಯಿಲೆಗೆ ಚಿಕಿತ್ಸೆ, ಹಣ ಖರ್ಚು, ಇವರ ಕಾರಣ ಇನ್ನೂ ಮುಂದೆಷ್ಟು ಖರ್ಚುಗಳು ಕಾದಿದೆಯೋ ಎಂಬ ಚಿಂತೆ ರಂಗಯ್ಯನಿಗೆ. ಪರಿಣಾಮ, ಆಗಾಗ್ಗೆ ರೇಗಾಟ ಕೂಗಾಟ, ಮಿನಿ ವಾರ್. 

     ಅದೊಂದು ದಿನ ಹತ್ತಿರದ ಬಂಧುಗಳ ಮನೆಯ ವಿವಾಹ ಕಾರ್ಯಕ್ರಮಕ್ಕೆ ರಂಗಯ್ಯನ ಮನೆಯವರೆಲ್ಲರೂ ಹಾಜರಾಗಿದ್ದರು. ಈತನ ಅಮ್ಮ ಅಪ್ಪ  ಅಲ್ಲಿಗೆ ಬಂದ ನೆಂಟರ ಬಳಿ ಕಷ್ಟ ಸುಖದ ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು, ಯಾಕೋ, ಏನೋ, ಇದನ್ನು ಕಂಡ ರಂಗಯ್ಯನ ಪಿತ್ತ ನೆತ್ತಿಗೇರಿತು. ನೆಂಟರು, ಮಿತ್ರರು, ಹೊಸಬರು ತುಂಬಿದ್ದ ಆ ಛತ್ರದಲ್ಲಿ ಅಪ್ಪಾ ! ಎಂದು ತನ್ನ ಕಂಚಿನ ಕಂಠದಲ್ಲಿ ಗಟ್ಟಿಯಾಗಿ ಅರಚಿದ ರಂಗಯ್ಯ, ಬಂದವರ ಹತ್ತಿರವೆಲ್ಲಾ ಏನ್ ನಿನ್ನ ಪುರಾಣ, ಸುಮ್ಮನೆ ಕೂತುಕೊಳ್ಳೋಕೆ ಅಗೊಲ್ವಾ ? ಬಾಯಿ ಮುಚ್ಕೊಂಡ್ ಕೂತ್ಕೋ ಎಂದ. ಅನಿರಿಕ್ಷೀತವಾಗಿ ಮಗನ ಬಾಯಲ್ಲಿ ಬಂದ ಈ ಕರ್ಕಶ ಕೂಗು ಆ ಅಪ್ಪನನ್ನು ಕಂಗೆಡಿಸಿತು. ಆಯ್ತಪ್ಪಾ ಎಂದ ಅಪ್ಪ ಪಕ್ಕದವನೊಡನೆ ಮಾತು ಮುಂದುವರೆಸಿದ. ಈಗ ರಂಗಯ್ಯ ಕೆರಳಿದ ರುದ್ರನಾದ. ಅಪ್ಪಾ, ಎದ್ದು ಬಾ ಇಲ್ಲಿ ಎಂದು ಆರ್ಭಟಿಸಿದ, ಜಾಗದಿಂದ ಮೇಲೆದ್ದ ಅಪ್ಪ  ತೂರಾಡಿಕೊಂಡು ಹೆಜ್ಜೆ ಇಡುತ್ತಿದ್ದಂತೆ ನಿನ್ನನ್ನು ಇಲ್ಲಿಗೆ ಕರ‍್ಕೊಂಡ್  ಬಂದು ನಾ ತಪ್ಪು ಮಾಡಿದೆ, ಇನ್ ಮೇಲೆ ನೀ ಮನೇಲೇ ಬಿದ್ದರಬೇಕು ಎನ್ನುತ್ತಾ ಸಿಡುಗುಟ್ಟಿದ ಮಗ. ಮಗನ ಕೋಪಕ್ಕೆ ತುತ್ತಾದೆನಲ್ಲಾ  ಎಂಬುದು ಒಂದು ಚಿಂತೆಯಾದರೆ, ಮತ್ತೊಂದೆಡೆ ಎಲ್ರ ಮುಂದೆ ಹಿರಿಯನಾದ ನನ್ನನ್ನು ಮಗ ಹೀಗೆ ಅವಮಾನಪಡಿಸಿದನಲ್ಲಾ, ಇನ್ನು ನಾ ಬದುಕಿದ್ದೇನು ಪ್ರಯೋಜನ ಎಂಬ ದುಃಖದಿಂದ ಕಣ್ಣೀರು ಸುರಿಸುತ್ತಾ ಮಗನಿದ್ದ ಕಡೆ ಹೆಜ್ಜೆ ಹಾಕಿದ ಆ ದುರಾದೃಷ್ಟ ಅಪ್ಪ. ‘ಸಾಕಿದಾ ಗಿಣಿ ಹದ್ದಾಗಿತ್ತು. ಹಾಲಿಟ್ಟ ಕೈಯನ್ನೇ ಕಚ್ಚಿತ್ತು’ 

    ಗಿಣಿ ಹದ್ದಾದ ಮತ್ತೊಂದು ಪ್ರಕರಣ. ಅಮ್ಮ ಗೃಹಿಣಿ. ಸರ್ಕಾರಿ ಕೆಲಸದಲ್ಲಿದ್ದ ಅಪ್ಪ ಬಹಳ ಮಿತ ಜೀವನ ನಡೆಸಿ. ನಾ ಮಗನಿಗೇನೂ ಆಸ್ತಿ ಮಾಡೋಕೆ ಆಗಲಿಲ್ಲ, ಉನ್ನತ ಶಿಕ್ಷಣ ಕೊಡಿ ಸೋಣ ಎನಿಸಿ, ಎಂ. ಕಾಂ, ಎಂ. ಬಿ. ಎ. ಓದಿಸಿದರು. ಹೆಚ್ಚಿನ ವಿದ್ಯೆ ಇದ್ದ ಕಾರಣ ಖಾಸಗಿ ಸಂಸ್ಥೆಯಲ್ಲಿ ಹೆಚ್ಚು ಸಂಬಳದ ಉದ್ಯೋಗವೂ ದೊರೆಯಿತು ಮಗನಿಗೆ. ಉದ್ಯೋಗ ಸಿಕ್ಕಿದ  ನಂತರ ನಡೆಯಬೇಕಾದ ಕೆಲಸ ವಿವಾಹವೇ ಅಲ್ಲವೇ ! ಅದೇ ಆಯಿತು, ಸುರೇಶನ ಮದುವೆಯೂ ಮುಗಿಯಿತು. ಸೊಸೆನೂ ಗಂಡನ ಮನೆ ಪ್ರವೇಶಿಸಿದಳು ಸದ್ಯ, ಮಗನ ಜವಾಬ್ದಾರಿ ಇನ್ನು ನನಗಿಲ್ಲ ಎಂಬ ನಿರಾಳ ಅಪ್ಪನಿಗಾಯಿತು.. ಜನಿಸಿದ ಪ್ರತಿ ವ್ಯಕ್ತಿಯೂ ಮರಣಿಸುವಂತೆ ಸರ್ಕಾರಿ ಸೇವೆಗೆ ಸೇರಿದ ಪ್ರತಿ ವ್ಯಕ್ತಿಯೂ ವಯೋಮಿತಿ ಮುಟ್ಟಿದ ಕೂಡಲೇ ನಿವೃತ್ತಿಯಾಗಲೇಬೇಕು ಹೀಗೇನೇ ನಮ್ಮೀ ಸರ್ಕಾರಿ ನೌಕರ ರುದ್ರಪ್ಪ  ಸೇವೆಯಿಂದ ನಿವೃತ್ತರಾಗಿ ‘ಪಿಂಚಣಿದಾರ್’ ಎನಿಸಿಕೊಂಡರು.. 

    ನಗರದಲ್ಲಿ ಎಷ್ಟೋ ಹೊತ್ತು ಬರದೇನೇ ಇದ್ದ ಬಸ್ಸುಗಳು ಇದ್ದಕಿದ್ದಂತೆ ಒಂದರ ಹಿಂದೆ ಒಂದು ಸಾಲಾಗಿ ¨ಬರತೊಡಗುವಂತೆ, ರುದ್ರಪ್ಪನ ಜೀವನದಲ್ಲೂ ಕಷ್ಟಗಳು ಒಂದರ ಹಿಂದೆ  ಒಂದು ಸಾಲು ಸಾಲಾಗಿ ಬರತೊಡಗಿದುವು. ಅಪ್ಪ ವೃತ್ತಿಯಿಂದ ನಿವೃತ್ತಿಯಾದರೆ ಇತ್ತ ಮಗ ಸುರೇಶ ತನ್ನ ಬಾಸ್‌ನೊಡನೆ ಒಂದು ವಿಚಾರದಲ್ಲಿ ವಾಗ್ವಾದಕ್ಕೆ ಇಳಿದ ಕಾರಣ, ಬಾಸ್‌ಗೆ ಮನಸ್ಸು ಕೆಟ್ಟು, ಯಾಕೋ ನಿಮ್ಮ ಆಲೋಚನಾ ಲಹರಿ ನನಗೆ ಸರಿ ಕಾಣಿಸ್ತಿಲ್ಲ, ನೀವು ಕೆಲ ಕಾಲ ಮನೇಲಿ ವಿಶ್ರಾಂತಿ ತಗೊಳ್ಳಿ, ನಾ ಕರೆ ಕಳಿಸಿದಾಗ ಬನ್ನಿ ಎಂದ ಬಾಸ್. ನನ್ನ ಮನೇಲಿರು  ಅಂತಾನಾ ಇವನು ! ಇವನ ಮುಖ ಮತ್ತೆ ನೋಡಲಿಷ್ಟವಿಲ್ಲ ನನಗೆ, ನಾ ಇವನ ಹತ್ತಿರ ಕೆಲಸ ಮಾಡೊಲ್ಲ ಎಂದವನೇ ಮನೆ ಸೇರಿದ ಸುರೇಶ. 

    ಕೆಲ ದಿನಗಳು ಕಳೆಯಿತು. ದಿನವೂ ಬೆಳಗ್ಗೆ ತಿಂಡಿ ತಿಂದು ಆಚೆ ಹೊರಟರೆ ಮತ್ತೆ ಊಟದ ವೇಳೆಗೆ ಮನೇಲಿ ಹಾಜರ್, ಸ್ವಲ್ಪ ಕಾಲ ಇದನ್ನು ಸಹಿಸಿದ ಅಪ್ಪ, ಯಾವುದಾದರೂ ಕೆಲಸ ಹುಡುಕ್ಕೊಪ್ಪ, ಏಜ್ ಬಾರ್ ಆದರೆ ಕೆಲಸ ಸಿಕ್ಕೋದು ಕಷ್ಟ ಆಗಬಹುದು ಎಂದ ಅಪ್ಪ ತಾಳ್ಮೆಯಿಂದ.  ನಾನೇನೂ ಸುಮ್ನನೆ ಕೂತಿಲ್ಲಪ್ಪ, ಪ್ರಯತ್ನ ಮಾಡ್ತಾ ಇದ್ದೀನಿ. ಒಬ್ಬರ ಕೈ ಕೆಳಗಡೆ ಕೆಲಸ ಮಾಡೋದು ಅಂದರೆ ನನಗೆ ಸರಿಬರೊಲ್ಲಾ. ನಾ ಬಿಸ್‌ನೆಸ್ ಮಾಡಬೇಕು ಅಂತಿದೀನಿ. ಸ್ವಲ್ಪ ಬಂಡವಾಳಾನೂ ಸರಿ ಮಾಡಿದ್ದೀನಿ, ಆದರೆ ಅದು ಸಾಲದು, ನೀನೇದರೂ ಮನಸ್ಸು ಮಾಡಿದರೆ ನನ್ನ ವ್ಯಾಪಾರ ತಕ್ಷಣ ಶುರುಮಾಡಬಹುದು ಎಂದ ಮಗ. 

   ಇದನ್ನು ಕೇಳಿ ಅವಾಕ್ಕಾದ ಅಪ್ಪ, ನಾ ಈಗ ಕೆಲಸದಲ್ಲಿ ಇಲ್ವಲ್ಲಪ್ಪಾ, ನಾ ಈಗ ಪಿಂಚಣಿದಾರ, ಅದರಿಂದ ನನ್ನ ನಿನ್ನಮ್ಮನ ಜೀವನ ನಡೆಸಬೇಕು, ಹೀಗಿರುವಾಗ ನಾ ಏನ್ ಸಹಾಯ ನಿನಗೆ ಮಾಡಲು ಸಾಧ್ಯ ಎಂದ ಅಪ್ಪ. ಆದರೆ ಅಪ್ಪನ್ನ ಬಿಟ್ನಾ ಮಗ ! ಅದ್ಯಾಕಪ್ಪಾ ಹಾಗಂತಿ ! ನಿನ್ನ ನಿವೃತ್ತಿ ಹಣ ಬಂದಿದ್ದು ಏನಾಯಿತು ? ಎಂದಾದರೂ ಅದನ್ನ ನೀ ನನಗೇ ಕೊಡ್ತೀಯಲ್ವಾ ! ಎಂದೋ ಕೊಡೋ ಬದಲು ಇಂದೇ ಕೊಟ್ಟರೆ ನನಗೆ ಅನುಕೂಲ ಆಗುತ್ತೆ.. ನನ್ನ ವ್ಯಾಪಾರ ಸ್ವಲ್ಪ ಪಿಕಪ್ ಆದರೆ ನಿನ್ನ ಹಣ ವಾಪಸ್ ಕೊಡ್ತೇನೆ ಭಯಪಡಬೇಡ ಎಂಬ ಧೈರ್ಯ ಹೇಳಿದ ಮಗ ಅಪ್ಪನಿಗೇ. 

  ಎಲಾ ಇವನ ! ನನಗೆ, ಪತ್ನಿಗೆ ಅದು ಆಪಧ್ಧನವಾಗಿರಲಿ ಅಂತಾ ಇಟ್ಕೊಂಡರೆ ಇದರ ಮೇಲೂ ಇವನ ಕಣ್ ಬಿತ್ತಲ್ಲಾ ! ನನ್ನಲ್ಲಿರೋ ಹಣ ಕೊಟ್ಟರೆ ಮುಂದೆ ನನ್ನ, ಪತ್ನಿಯ ಕಾಯಿಲೆ, ಕಷ್ಟ ಗಳಿಗೆ ನಾ ಇವನ ಮುಂದೆ ಕೈ ಚಾಚೋಗಾಗುತ್ತಾ ? ಒಂದು ವೇಳೆ ಕೇಳಿದರೂ ಇವನು ಕೊಡ್ತಾನಾ ? ಈಗ ನಾ ಹಣ ಕೊಟ್ಟರೆ ನಾನು ಬರಿಗೈನವನಾಗ್ತೀನಿ. ನನÀ್ನ ಕಷ್ಟ ಕಾಲಕ್ಕೆ ನಾ ಯಾರ ಮುಂದೆ ಕೈ ಚಾಚಲಿ ? ಎಂದು ಚಿಂತಿತನಾದ ಅಪ್ಪ, 

    ಮತ್ತೆ ವಾರ ಬಿಟ್ಟು ಏನ್ ನಿರ್ಧಾರ ಮಾಡಿದೆಯಪ್ಪಾ ನೀ ಹಣ ಕೊಡೋ ಬಗ್ಗೆ  ? ಎಂದು ಪ್ರಶ್ನಿಸಿದ ಮಗ, ಇವನೇ ಅಪ್ಪನಿಗೆ ಹಣ ಕೊಟ್ಟಿದ್ದಂತೆ. ಅಯ್ಯಾ, ನನ್ನ ನಿವೃತ್ತಿ ಧನವನ್ನು ಆಪದ್ಧನವನ್ನಾಗಿ ಇಟ್ಟುಕೊಂಡಿದ್ದೇನೆ, ಕೊಟ್ಟೆರೆ ಮುಂದೆ ನನ್ನ, ನನ್ನವಳ ಗತಿ ! ಎಂದ ಅಪ್ಪ. ಅದಕ್ಯಾಕಪ್ಪಾ ಯೋಚನೆ ಮಾಡ್ತೀ ? ನಿನ್ನ ನೆರವಿಗೆ ನಾನಿಲ್ಲವಾ ನಿನ್ನ ಮಗ  ! ನಾ ನಿನ್ನ ಕಷ್ಟಕ್ಕೆ ಸಿಗಸ್ತೀನಾ ! ಯೋಚನೆ ಮಾಡದೆ ವ್ಯಾಪಾರ ಚೆನ್ನಾಗಿ ನಡೆಯಲಿ ಅಂತ ಒಳ್ಳೇ ಮನಸ್ಸಿನಿಂದ ಹರಸಿ, ನನ್ನ ಕೈಗೆ  ಹಣ ಕೊಡು ಎಂದ ಮಗ. ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ, ರಕ್ಷಸ್ವ ಮಾಂ ಎಂದು ದೇವರಿಗೆ ಕೈ ಮುಗಿದು ನಿವೃತ್ತಿ ಯ ಪೂರ್ತಿ ಹಣವನ್ನು ಮಗನ ಕೈಲಿಟ್ಟ ಅಪ್ಪ ರುದ್ರಪ್ಪ. ಬಂದ ದುಃಖವನ್ನು ಮನಸ್ಸಿನಲ್ಲೆ ಅದುಮಿಟ್ಟುಕೊಂಡು. 

    ದಿನಗಳು ಉರುಳಿ ತಿಂಗಳುಗಳು ಕಳೆದು ವರ್ಷಗಳಾಗಿವೆ. ಸುರೇಶನ ವ್ಯಾಪಾರ ಮೇಲೇರಲಿಲ್ಲ, ಕೆಳಗಿಳಿಯಲೂ ಇಲ್ಲ. ಇತ್ತ ಅಮ್ಮ ಅಪ್ಪ ವೃದ್ಧಾಪ್ಯದ ಕಾರಣ ಬಿಪಿ. ಶುಗರ್ ಬಾಧಿತರಾಗಿದ್ದಾರೆ. ಮನೆಗೆ ಬಂದ ಸೊಸೆ ಪತಿಗೆ ತಕ್ಕ ಮಡದಿಯಾದಳು ಅತ್ತೆ ಮಾವನನ್ನು ನಿಕೃಷ್ಟವಾಗಿ ನೋಡಲಾರಂಭಿಸಿದಳು. ಇದೇನಮ್ಮಾ ಸಪ್ಪೇ ಸಾರು ! ಕಾರವೇ ಇಲ್ಲ  ? ಎಂದ ಮಾವನಿಗೆ, ಖಾರ ತಿಂದರೆ ನಿಮಗೆ ಅಲ್ಸರ್. ಅಸಿಡಿಟಿ ಆಗುತ್ತೆ, ಆಗ ನಿಮಗೆ ಔಷಧಿ ಕೊಡಿಸೋಕೆ ದುಡ್ಡೆಲ್ಲಿದೆ ? ಇಷ್ಟು ವರ್ಷ ಉಪ್ಪು. ಕಾರ. ಹುಳಿ. ತಿಂದಿದ್ದು ಸಾಲದೇ ?  ವೃದ್ಧಾಪ್ಯದಲ್ಲಿ ಬಾಯಿ ಚಪಲ ಇರಬಾರದು ಎಂದಳು ಮುದ್ದಿನಾ ಸೊಸೆ. ಈ ಮಾತನ್ನು ಕೇಳಿಸಿಕೊಂಡ ಮಗ, ಎಲೇಲಿ ಹಾಕಿದ್ದನ್ನು ಬಾಯಿ ಮುಚ್ಕೊಂಡ್ ತಿನ್ನೋದ್ ಕಲೀರೀ, ಎಂದ.    

   ಇನ್ನೊಂದ್ ದಿನ, ಯಾಕೋ ಹಸಿವಿಲ್ಲಪ್ಪಾ, ಊಟ ಬೇಡ ಇಂದು ಎಂದರೆ ನಿಮ್ಮ ಪಾಲಿನ ಊಟ ಏನ್ ಮಾಡಬೇಕು  ?  ಅಡುಗೆ ಬಿಸಾಕೋ ಕಾಲಾನಾ ಇದು ? ಪದಾರ್ಥಗಳ ಬೆಲೆ ಎಷ್ಟಿದೆ ಅಂತಾ ಗೊತ್ತಾ ! ಲೇ, ಇವರು ಈವತ್ತು ಊಟ ಮಾಡದೆ ಇದ್ರೆ, ನಾಳೆ ಇವರಿಗೆ ಉಪವಾಸ ಮಾಡಿಸು, ಬುದ್ಧಿ ಕಲೀಲಿ ಎಂದ ಮಗ. ಸರಿಯಪ್ಪ ಈವತ್ತು ಉಣ್ತೇನೆ ಅಂದ ಆ ಹೆತ್ತವರು ಮೂಗ ಪ್ರಾಣಿಗಳಂತೆ ತಲೆ ತಗ್ಗಿಸಿ ಕಣ್ಣಲ್ಲಿ  ನೀರು ಸುರಿಸುತ್ತಾ  ತಮ್ಮ ಹಿಂದಿನ ಜನ್ಮದ ಪ್ರಾರಬ್ಧ ಕರ್ಮವನ್ನು ಉಣ್ಣುತ್ತಿದ್ದಾರೆ ಇಂದೂ.    

  ಸಂತಾನವಾಗಲಿಲ್ಲ ಎಂದು ದುಃಖಿಸಿ ಸಂತಾನಗೋಪಾಲ ಸ್ವಾಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದ ಫಲವಾಗಿ ಹುಟ್ಟಿದವನು ಈ ಕುಮಾರ ಕಂಠೀರವ. ಮಗ ಹುಟ್ಟಿದ ಎನ್ನುವ ಸಂಭ್ರಮದಲ್ಲಿ ಅತಿ ಮುದ್ದಾಗಿ ಸಾಕಿ ನಮ್ಮ ಕಷ್ಟ ಇವನಿಗೆ ತಟ್ಟದಂತೆ ಎಚ್ಚರ  ವಹಿಸಿ ಇವನನ್ನು ಪಾಲಿಸಿ ಪೋಷಿಸಿದೆವು. ನಮ್ಮ ಇಷ್ಟೂ ಸೇವೆಗೆ, ತ್ಯಾಗಕ್ಕೆ ಇದೇನಾ ಇವನು ಕೊಡಬೇಕಾದ ಬೆಲೆ ! ಮಕ್ಕಳೆಂದರೆ ಹೀಗೇಯಿರಬೇಕಾ ? “ನಾವೇ ಸಾಕಿದಾ ಗಿಣಿ\ ನಮ್ಮಾ  ಮುದ್ದಿನಾ ಗಿಣಿ ! ಹದ್ದಾಗಿ ಕುಕ್ಕಿತಲ್ಲೋ ! ನಮ್ಮನ್ನ, ಹದ್ದಾಗಿ ಕುಕ್ಕಿತಲ್ಲೋ” ಎಂದು  ಗೋಳಾಡ್ತಿದ್ದಾರೆ ಇಂದು ಈ ವೃದ್ಧರ ಜೋಡಿ.


Comments

  1. ಕಹಿ ಎನಿಸಿದರೂ ಸತ್ಯದ ಸಂಗತಿಗಳನ್ನು ವಿವರಿಸಿ ಬರೆದಿದ್ದೀರಿ. ಬಂಧುಗಳ / ಸಾಂಸಾರಿಕ ಸಂಬಂಧಗಳು ಮನುಷ್ಯನಿಗೆ ಎಷ್ಟು ಮುಖ್ಯ ಎನ್ನುವುದು ನಿಮ್ಮ ಏಖನಾದ ನಿದರ್ಶನವಾಗಿದೆ. ಮನಮುಟ್ಟುವಂತೆ ವಿವರಿಸಿದ್ದೀರಿ

    ReplyDelete

Post a Comment