ಆಸರೆ ಮನೆ - ಭಾಗ 15 (ಅಂತಿಮ ಭಾಗ)

ಆಸರೆ ಮನೆ - ಭಾಗ 15 (ಅಂತಿಮ ಭಾಗ) 

ಲೇಖನ -  ದಿ||  ಶ್ರೀಮತಿ ಸುಮಿತ್ರಾ ರಾಮಣ್ಣ 



ಹೆಣ್ಣು ಹೊನ್ನಿಗಿಂತ ಮಣ್ಣಿನ ವ್ಯಾಮೋಹ ಮಿಗಿಲು

ನಾನಿಲ್ಲಿಗೆ ಬರಬಹುದಾ ತಾಯಿ ಕೇಳಿದ ದ್ಯಾವೇಗೌಡ

ಸಂಜೆಯ ಇಳಿಬೆಳಕು ಆಸರೆಮನೆಯ ಅಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದೆ. ಬೆಳಗಿನ ಕೆಲಸಗಳೆಲ್ಲ ಮುಗಿದು ಸಂಜೆಯ ಕೆಲಸದ ಪ್ರಾರಂಭಕ್ಕೆ ಸಮಯ ಆಗಿಲ್ಲವೆನ್ನುವ ನಿರಾಳಭಾವದಲ್ಲಿ ಆಸರೆಮನೆಯ ಸದಸ್ಯರೆಲ್ಲ ತಮ್ಮಿಷ್ಟ ಬಂದೆಡೆ ಹಜಾರದಲ್ಲಿ ಕುಳಿತು ಹೊಸದಾಗಿ ನಿರಂಜನ- ಮೂರ್ತಿ ತಂದಿಟ್ಟಿದ್ದ ಟಿ.ವಿ. ವೀಕ್ಷಣೆಯಲ್ಲಿ ಮಗ್ನರಾಗಿದ್ದರು. ಆತ್ಮವಿದಾನಂದಜೀಗಳು ಮಾತ್ರ ಕೈತೋಟದಲ್ಲಿ ಕುಳಿತು ಮುಳುಗುವ ಸೂರ್ಯನ ರಂಗಿನ ಚಿತ್ತಾರ ಬಿಡಿಸಿದ ಆಕಾಶವನ್ನೇ ನೋಡುತ್ತ ಕುಳಿತಿದ್ದರು. 

ಗೇಟಿನ ಚಿಲಕ ಸದ್ದಾಗಿದ್ದು ಅವರ ಗಮನಕ್ಕೆ ಬರಲಿಲ್ಲ. ಹೊರಗೆ ನಿಂತವ ಸ್ವಾಮಿ, ಬುದ್ಧೀ ನಾನು ಒಳಗೆ ಬರಬಹುದಾ ಬುದ್ಧಿ, ವಸಿ ಗೇಟ್ ಬೀಗ ತೆಗೀತೀರಾ ಎಂದಾಗಲೇ ಅವರಿಗೆ ಇಹದ ಪ್ರಜ್ಞೆ. ಒಳಗಿನಿಂದ ಟಿ.ವಿ.ಯ ಶಬ್ದ. ಅವರು ಕುಳಿತಲ್ಲಿಂದ ಎದ್ದು ''ನಿಂಗಮ್ಮಾ ನಿಂಗಮ್ಮಾ ಯಾರೋ ಬಂದಿದ್ದಾರೆ ನೋಡಮ್ಮ. ಬೀಗ ತೆಗಿ'' ಎಂದರು. ನಿಂಗಮ್ಮ ತಡಬಡ ಎದ್ದು ಬಂದು ಗೇಟಿನ ಬಳಿ ಬಂದವಳು ''ಯಾರಪ್ಪ, ಇಷ್ಟೊತ್ನಾಗೆ  ಏನು ಕೆಲಸ?'' ಎಂದಳು. 

''ಏನಿಲ್ಲ ಕಣಮ್ಮ ಇಲ್ಯಾರೋ ....ದಿಕ್ಕಿಲ್ಲದೆ ಬಂದವರಿಗೆ ಆಸ್ರೆ ಕೊಡ್ತಾರಂತೆ ಹೌದಾ?'' ಎಂದ. 

''ಇರಣ್ಣ ಅಮ್ಮಾವ್ರನ್ನ ಕರೀತೀನಿ ವಸಿ ಅಲ್ಲೇ ನಿಂತ್ಕೊ'' ಎಂದಳು. ಆ ವೇಳೆಗೆ ಮಾತಿನ ಶಬ್ದ ಕೇಳಿ ಕಲ್ಯಾಣಿ, ನಿರಂಜನ ಹೊರ ಬಂದರು. ಕಲ್ಯಾಣಿಯ ನೆರಳು ನಿರಂಜನ. 

''ನಿಂಗವ್ವಾ ಬಾಗ್ಲು ತೆಗೆಯಮ್ಮ ಯಾರನ್ನೂ ಹಾಗೆ ಹೊರಗೆ ನಿಲ್ಲಿಸಬಾರದು'' ಎಂದಳು.

ನಿಂಗಮ್ಮ ಸೆರಗಿಗೆ ಕಟ್ಟಿಕೊಂಡಿದ್ದ ಬೀಗದ ಕೈಗೊಂಚಲಿನಿಂದ ಬೀಗದ ಕೈ ಹಿಡಿದು ಬಾಗಿಲು ತೆಗೆದಳು. ಸಂಜೆ ೫. ಕ್ಕೆ ಆಸರೆ ಮನೆಯ ಗೇಟಿಗೆ ಬೀಗ ಹಾಕುವುದು ಪದ್ಧತಿ. 

ತೆರೆದ ಬಾಗಿಲಿನಿಂದ ದ್ಯಾವೇಗೌಡ ಒಳಗೆ ಬಂದ. ಕಲ್ಯಾಣಿ ''ಬಾಪ್ಪ ಒಳಗೆ'' ಎಂದು ಮನೆಯ ಒಳಗೆ ಕರೆದು ವರಾಂಡದಲ್ಲಿದ್ದ ಕುರ್ಚಿಯಲ್ಲಿ ಕೂರಲು ಹೇಳಿ ನಿರಂಜನನೊಡನೆ ''ನಿರಂಜನ ಮೂರ್ತಿಗಳನ್ನು ಕರೆಯಪ್ಪ'' ಎಂದಳು. ಶಾಂತಾರಾಮ ಸೋದರರು ಮಕ್ಕಳ ಪಾಠ ಪ್ರವಚನ ನೋಡಿಕೊಳ್ಳುತ್ತಿದ್ದರು. ಮೀಸೆ ಮಾವ ಉಗ್ರಾಣ ಚೆಕ್ ಮಾಡಿ ಮಾರನೆಯ ದಿನದ ಸಾಮಾನಿನ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. 

ಮೂವರು ಬಂದು ಕುಳಿತ ಮೇಲೆ ದ್ಯಾವೇಗೌಡ ಎಲ್ಲರಿಗೂ ಕೈಮುಗಿದು ಕೆಳಗೆ ಕುಳಿತುಕೊಳ್ಳಲು ಹೋದ. 

''ಬೇಡಪ್ಪ ಮೇಲೇ ಕೂತ್ಕೋ'' ಎಂದರು ಮೂರ್ತಿಗಳು. 

''ಹೂಂ ಹೇಳಪ್ಪ ಯಾರು ನೀನು? ಇಲ್ಲಿಗ್ಯಾಕೆ ಬಂದೆ? ನಮ್ಮಿಂದ ನಿನಗೆ ಏನಾಗಬೇಕು?'' ಎಂದರು. 

ಅವ್ವಾ, ಅಪ್ಪಾರೆ ಕೇಳಿ ನನ್ನ ಕಥೆ ಎಲ್ಲ ಹೇಳಿ ಬಿಡ್ತೀನಿ. ಇಲ್ಲೇ ಇರಬೇಕು ಅಂತ ಬಂದೀವ್ನಿ. ನಿಮಗೆ ಸರಿ ಕಂಡ್ರೆ ನನಗೂ ವಸಿ ಜಾಗ ಕೊಡಿ. ಏನಾದ್ರು ಹಣ್ಣು ಹೂವು ತರಕಾರಿ ಬೆಳೆದು ಯವಸಾಯ ಮಾಡಿ ಕೊಡ್ತೀನಿ. ನನ್ನ ಹೆಸರು ದ್ಯಾವೇಗೌಡ ಅಂತ'' ಹೇಳಿದ. 

**********

ತಾನಾಗೆ ಒಳಗೆ ಬಂದು ತನ್ನ ಕಥೆ ಹೇಳಿದ ದೇವೇಗೌಡನ ಕಥೆ ಇದು. 

ದೇವೇಗೌಡ ನಗರಕ್ಕೆ ಸಮೀಪವಿದ್ದ ಒಂದು ಪುಟ್ಟ ಹಳ್ಳಿಯಲ್ಲಿ ಜಮೀನು ಇಟ್ಟುಕೊಂಡು ತಂದೆ ತಾತಂದಿರ ಕಾಲದಿಂದಲೂ ವ್ಯವಸಾಯ ಮಾಡುತ್ತಿದ್ದ ರೈತ. ಊರಿನಲ್ಲಿ ಒಂದು ಗೌರವಾನ್ವಿತ ಕುಟುಂಬ ಅವನದು. ನಗರದ ಯಾವ ಥಳಕು-ಬಳಕು ಅವನಿಗಿಲ್ಲ. ಒಳ್ಳೆಯ ಜಾನಪದ ಸಂಸ್ಕೃತಿಯ ಗೌಡತಿ ಕೆಂಪಮ್ಮ ಮೂವರು ಗಂಡು ಮಕ್ಕಳು ಇರುವ ಚೆನ್ನಾದ ಸಂಸಾರ.  

ಆರಂಭದಿಂದಲೇ ಹೊಟ್ಟೆ ತುಂಬಿಸಿಕೊಂಡು ನಾಲ್ಕು ಜನರಿಗೂ ಕೈಯೆತ್ತಿ ಕೊಡುವ ದ್ಯಾವಣ್ಣ ದನಕರು ಎತ್ತು ಎಮ್ಮೆ ಕೋಳಿ ಕುರಿ ಎಲ್ಲವುಗಳನ್ನು ತನ್ನ ಸಂಸಾರವೆಂದೇ ಭಾವಿಸಿದ್ದ. 

ಮಕ್ಕಳು ಸೊಸೆಯರು ಅತ್ತೆ ಮಾವರಿಗಂಜಿ ಬಾಳುವೆ ಮಾಡುವಂತಹವರು. ಕೊನೆಯ ಮಗ ಸಿದ್ಧೇಗೌಡ ಮಾತ್ರ ನಗರಕ್ಕೆ ಹೋಗಿ ಒಂದಿಷ್ಟು ಇಂಗ್ಲೀಸು ಪಂಗ್ಲೀಸು ಕಲಿತು ಟುಸ್ ಪುಸ್ ಎಂದು ಇಂಗ್ಲೀಸು ಮಾತಾಡುವುದಲ್ಲದೆ ಕಾನೂನು, ಕಟ್ಟಳೆ ಎಂದು ಓಡಾಡುತ್ತಿದ್ದ. 

ದ್ಯಾವಣ್ಣನು ಇನ್ನೂ ಅರೀದ ಮಗ ನಾಕು ದಿನ ಕೂಗಾಡ್ಲೀ. ಓಡಾಡ್ಲೀ ಆಮೇಲೆ ಆರಂಭಕ್ಕೆ ಹಾಕಿ ಬಗ್ಗಿಸುವ ಎಂದು, ಹಿರಿಯ ಗಂಡು ಮಕ್ಕಳಿಗೆ ಹೇಳಿಬಿಟ್ಟಿದ್ದ. ಕೆಂಪವ್ವನಿಗೆ ಕಿರೀ ಮಗನ  ಬಗ್ಗೆ ಸ್ವಲ್ಪ ಜಾಸ್ತಿ ಪ್ರೀತಿ. ಕಂಡೂ ಕಾಣದಂತೆ ತನ್ನ ಸೊಂಟದ ಎಲೆ ಅಡಿಕೆ ಚೀಲದಲ್ಲಿ ಕೂಡಿಸಿಟ್ಟಿದ್ದ ಹತ್ತು, ಇಪ್ಪತ್ತರ ನೋಟನ್ನು ಸಿದ್ಧಣ್ಣನ ಕೈಗೆ ತುರುಕುತ್ತಿದ್ದಳು. ಕಿರೀಮಗ ಕಿವಿಕಿತ್ತರು ಚೆಂದವಲ್ಲವೆ. 

ಸಿದ್ಧಣ್ಣನ ವಿದ್ಯೆ, ಬುದ್ಧಿ ಬೆಳೆಸಲಿಲ್ಲ. ವಿದ್ಯೆ ಮಾತ್ರ ಅವನಿಗೆ ಇತ್ತು. ಅಣ್ಣಂದಿರು ಗುರುವೇಗೌಡ, ರಾಚಪ್ಪ, ತಂದೆ ದ್ಯಾವೇಗೌಡ ಇವರೆಲ್ಲ ಸುಖವಾಗಿಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ಅಂಟಿಕೊಂಡು ಕೊಳೆಯುತ್ತಿದ್ದಾರೆ. ಇವರುಗಳಿಗೆ ಸುಖ ಎನ್ನುವುದು ತಿಳಿದೇ ಇಲ್ಲ ಎಂದು ತಿಳಿದಿದ್ದ. 

ಬೆಳಗಾದರೆ ಅಣ್ಣಂದಿರು, ಅಪ್ಪ ಆಕಾಶದಾಂಗೆ ಸೂರಪ್ಪ ಮೂಡುವ ಮುನ್ನವೇ ಎದ್ದು ಕೈಕಾಲು ಮುಖ ತೊಳೆದು ಹಣೆಗೆ ಈಬತ್ತಿ ಧರಿಸಿ ಒಂದು ಗಂಧದಕಡ್ಡಿ ಹತ್ತಿಸಿ ಅಂಗಳದಲ್ಲಿ ನಿಂತು ಸೂರಪ್ಪನಿಗೆ ಕೈ ಮುಗಿಯುತ್ತಿದ್ದರು. 

ಆ ವೇಳೆಗಾಗಲೇ ಸೊಸೆಯಂದಿರು ಎದ್ದು ಕೊಟ್ಟಿಗೆ ಕಸ ತೆಗೆದು ಕರು ಬಿಚ್ಚಿ ತಾಯಿ ಬಳಿ ಬಿಟ್ಟು ಹಾಲು ಸೊರ ಬಿಟ್ಟ ಮೇಲೆ ಎಳೆದು ಕಟ್ಟಿದರೆ ಅತ್ತೆ ಕೆಂಪವ್ವ ಗೋಮಾತೆಗೆ ಕೈಮುಗಿದು ಹಾಲು ಕಾಯಿಸಿ ರೊಟ್ಟಿ ತಟ್ಟಿ ಚಟ್ನಿ ಮಾಡಿ ಗಣದ, ಭಾವ, ಮೈದುನರಿಗೆ ರೊಟ್ಟಿ ಚಟ್ನಿ ಗಂಗಳಕ್ಕೆ ಹಾಕಿಕೊಟ್ಟು ಕಾದ ಬಿಸಿ ಬಿಸಿ ಹಾಲನ್ನು ಮೂವರು ಗಂಡಸರಿಗೂ ಕೊಡುತ್ತಿದ್ದರು. 

ನಾಷ್ಟ ಮುಗಿಸಿದ ಗಂಡಸರು ಎತ್ತು ಏರು ದನಕರುಗಳನ್ನು ಹಿಡಿದು ಆರಂಭಕ್ಕಾಗಿ ಹೊಲದ ಕಡೆ ಹೊರಡುತ್ತಿದ್ದರು. ಸಿದ್ದಪ್ಪ ಮಾತ್ರ ಸೂರ್ಯ ತಲೆಯ ಮೇಲೆ ಬಂದಾಗ ಮೇಲೇಳುತ್ತಿದ್ದ. ಆ ವೇಳೆಗೆ ಕೆಂಪಮ್ಮ ಕೊಟ್ಟಿಗೆಯಲ್ಲಿ ಗುಡ್ಡೆ ಮಾಡಿದ್ದ ಜೋಳದ ಕಡ್ಡಿ, ಒಣ ಹುಲ್ಲುಗಳನ್ನು ನೀರೊಲೆಗೆ ಒಟ್ಟಿ ಸಿದ್ಧಪ್ಪನ ಸ್ನಾನಕ್ಕೆ ನೀರು ಕಾಯಿಸುತ್ತಿದ್ದಳು. 

ಇಬ್ಬರು ಸೊಸೆಯಂದಿರು ಇರುವ ಕೆಲಸ ಹಂಚಿಕೊಂಡು ಹಿಟ್ಟು, ಸಾರು ಮಾಡಿ ಹೊಲಕ್ಕೆ ಬುತ್ತಿ ಒಯ್ಯಲು  ಸಿದ್ಧ ಮಾಡುತ್ತಿದ್ದರು. ಬಾಕಿ ಮನೆಯ ಎಲ್ಲ ಕೆಲಸಗಳನ್ನು ಯಾವುದೇ ತಂಟೆತಕರಾರು ಇಲ್ಲದೆ ಚೆನ್ನಾಗಿಯೇ ನಡೆಸಿಕೊಂಡು ಹೋಗುತ್ತಿದ್ದರು. ಸಿದ್ಧಪ್ಪ ಮಾತ್ರ ಮನೆ ಆರಂಭ ಸಾರಂಬದ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ನಾಷ್ಟಾ ಮಾಡಿ ನೀಟಾಗಿ ಬಟ್ಟೆ ಧರಿಸಿ ನಗರ ಪ್ರದಕ್ಷಿಣೆಗಾಗಿ ಸೈಕಲ್ ಹತ್ತುತ್ತಿದ್ದ. 

ತಾನು ಬಿ .ಎ.  ಓದಿದ ವಿದ್ಯಾವಂತ. ಹಳ್ಳಿಗಮಾರನಂತೆ ಸೈಕಲ್  ತುಳಿಯುವುದು ನಾಚಿಕೆಗೇಡು. ತನಗೊಂದು ಕುಟುಕುಟು ಮೋಟಾರ್ ಬೈಕ್ ಇರಬೇಕು ಎನ್ನುವುದು ಅವನ ಆಸೆ. ಆದರೆ ದುಡ್ಡು ಬೇಕಲ್ಲ. ಆಸೆಗಳಿಗೇನು. ಸಂಜೆಯವರೆಗೂ ಅಲೆತ ಬೇಡದ ಕಾಡು ಹರಟೆ, ಮಧ್ಯಾಹ್ನದ ಊಟ ಯಾರಾದರು ಗೆಳೆಯರ ಜೊತೆ. ರಾತ್ರಿ ಮನೆಗೆ ಬಂದು ಕೈಕಾಲು ತೊಳೆದು ಒಂದಷ್ಟು ಹೊತ್ತು ಪಂಚಾಯ್ತಿ ಕಚೇರಿಯ ರೇಡಿಯೋ ಕೇಳಿಕೊಂಡು ಮನೆಗೆ ಮತ್ತೆ ಬಂದು ಊಟ ಮಾಡಿ ಮಲಗುವನು. 

ಅಪ್ಪ, ಅಣ್ಣಂದಿರು ದಿನ ದಿನ ನೋಡಿ ಬೇಸತ್ತರು. ತಡೆಯಲಾರದೆ ಒಂದು ದಿನ ದ್ಯಾವೇಗೌಡ 

''ಲೋ ಮಗಾ ಸಿದ್ದ ಏನ್ಲಾ ಇದು ಚಾವಡಿ ಹತ್ತು ಕಟ್ಟೆ ಇಳಿ ಇಷ್ಟೇ ಆಗ್ಹೋಯ್ತಲ್ಲ  ನಿನ್ನ ಬದುಕು. ನಾಳೆಯಿಂದ ನೀನು ಆರಂಭ ಮಾಡು ಬಾ ನನಗೆ ವಯಸ್ಸಾಯ್ತು ನೀನು ಒಸಿ ಕೆಲಸ ಕಲ್ತು ಬದುಕ ನಡ್ಸು'' ಎಂದ. 

''ಅಪ್ಪಾ ನಾನು ಕಾಲೇಜು ಕಲ್ತಿದೀನಿ. ನನಗೆ ಇವೆಲ್ಲ ಆಗಾಕ್ಕಿಲ್ಲ. ನೋಡ್ತಿರು ನಾನೊಂದು ಪ್ಲಾನ್ ಮಾಡಿದೀನಿ. ನಮ್ಮನೆಗೆ ಶುಕ್ರದೆಸೆ ಬಾರೋ ಹಾಗೆ''

''ಏನ್ಲಾ ಅದು ಪಿಲಾನು,  ಸುಕ್ರದೆಸೆ ಅವೆಲ್ಲ ಏನು ಬ್ಯಾಡ ಸುಮ್ನೆ ಹೊಲಕ್ಕೆ ಬಂದು ಗೆಯ್ಮೆ ಮಾಡೋದು ಕಲ್ತುಕೊ '' ಎಂದ. 

**********

ಇದೆ ವಾದ ವಿವಾದ ದಿನ ನಿತ್ಯ ನಡೆದು ನಡೆದು ಸಿದ್ದಪ್ಪನ ಪಿಲಾನು ಏನು ಎನ್ನುವುದು ಮನೆಯಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಒಂದು ದಿನ ಸೋಮವಾರ ಬಸವಣ್ಣನಿಗೆ ಕೆಲಸಕ್ಕೆ ವಿರಾಮ. ಆರಂಭ ಇಲ್ಲ. ಆದರೇನು ಹೊಲದ ಬಳಿ ಕಸಕಡ್ಡಿ ತೆಗೆಯುವುದು ಗಿಡಗಂಟಿ ಮುಳ್ಳು ಸೊಪ್ಪು ಸರಿ ಮಾಡುವುದು ಎಲ್ಲ ಕೈಕೆಲಸ. 

ದನಕರುಗಳಿಗೆ ಹುಲ್ಲು ಸೊಪ್ಪು ಕಟ್ಟಿಕೊಂಡು ಮನೆಗೆ ಬೇಗ ಬಂದರು. ಸೊಸೆಯಂದಿರು ಸೌದೆ-ಕಡ್ಡಿ ಪುರಲೆ ಒಟ್ಟುಮಾಡಿಕೊಂಡು ಬಂದರು ಒಲೆಯುರಿಸುವುದಕ್ಕೆ. ಅದೇ ಹೊತ್ತಿಗೆ ಸಿದ್ಧಪ್ಪ ಒಬ್ಬ ಪ್ಯಾಂಟು ಸರಟಿನ ಸಾಹೇಬನೊಡನೆ ಕುಟುಕುಟಿಯ ಮೇಲೆ ಕುಳಿತು ದಿಲ್ ದಾರನಾಗಿ ಮನೆಯ ಮುಂದೆ ಇಳಿದ. ಅವನು ಕರೆತಂದಿದ್ದ ಭೂಮಿ ಖರೀದಿಸುವ ಒಬ್ಬ ಮಧ್ಯವರ್ತಿ ಮನುಷ್ಯನನ್ನು ಅಪ್ಪ ಅಣ್ಣಂದಿರಿಗೆ ಪರಿಚಯಿಸಿದ. 

ಭೂಮಿ ಮಾರಾಟ ಮಾತನ್ನು ಬಂದಿದ್ದ ಸಾಹೇಬ ತೆಗೆದಾಗ ದ್ಯಾವೇಗೌಡ ಕೆರಳಿ ಕೆಂಡವಾದ. 

''ಏನ್ಲಾ ಸಿದ್ಧ ಹೆತ್ತವ್ವನ್ನ ಮಾರಾಟ ಮಾಡು ಅಂತಿಯೇನೋ. ಅನ್ನಕೊಡೋ ಭೂಮಿ ಮಾರಿ ಮಣ್ಣುತಿನ್ತಿಯೇನ್ಲಾ. ಈ ನಡುವಳಿಕೆ ಚೆಂದಾಕಿಲ್ಲ ಬುಡು'' ಎಂದ. 

ಬಂದಿದ್ದಾತ ಲಕ್ಷ ಲಕ್ಷದ ಹಣದ ಮಾತಾಡಿ ನಾಲಿಗೆ ನೀರೂರುವಂತೆ ಮಾಡಿದ. ದ್ಯಾವೇಗೌಡ ಯಾವುದಕ್ಕೂ ಒಪ್ಪಲಿಲ್ಲ. 

ಒಂದೇ ದಿನ ವ್ಯವಹಾರ ಸಾಗುವುದಿಲ್ಲವೆಂದು ಅವನು ವಾಪಸ್ ಹೋದ ಸಿದ್ಧಪ್ಪನ ಕಡೆಗೆ ಕಣ್ಣು ಮಿಟುಕಿಸಿ. 

************

ದ್ಯಾವೇಗೌಡನೇನೋ ಭೂಮ್ತಾಯಿ ಎಂದರೆ ಹೆತ್ತಮ್ಮ. ಅವಳನ್ನು ಮಾರಾಟ ಮಾಡಬಾರದು ಎಂದು ಕೂಗಾಡಿದ. ಆದರೆ ಗಂಡು ಮಕ್ಕಳು ಸೊಸೆಯರು ಅದನ್ನು ಒಪ್ಪುತ್ತಾರೆಯೇ? ರಾತ್ರಿ ಗಂಡಂದಿರ ಮುಂದೆ ಸೊಸೆಯರ ಗುಸುಗುಸು ಅಳು ಕರೆ. ರೇಗಾಟ ಸಿಡುಕಾಟ ಮೈಮುಟ್ಟದಂತೆ ದೂರ ಸರಿಸಾಟಿ ಎಲ್ಲ ದಿನನಿತ್ಯದ ಕಥೆಯಾಯ್ತು. 

ಈ ಮಧ್ಯೆ ಕೆಂಪಮ್ಮನಿಗೆ ಸಣ್ಣದಾಗಿ ಪ್ರಾರಂಭವಾದ ಕೆಮ್ಮು, ಚಳಿಜ್ವರ ದಿನೇ ದಿನೇ ಹೆಚ್ಚಾಗಿ ಹಾಸಿಗೆ ಹಿಡಿಯುವಂತಾಯ್ತು. ಮಿಕ್ಕ ವಿಷಯದ ಕಡೆ ಯಾರ ಗಮನವೂ ಹರಿಯಲಿಲ್ಲ. ಔಷಧಿ ಪಥ್ಯ ಏನೆಲ್ಲ ಆದರು ಕೆಂಪಮ್ಮ ಮೇಲೇಳಲಿಲ್ಲ. ನಿತ್ರಾಣ ಹೆಚ್ಚಾಯಿತು. ಕಡೆಗೆ ನಗರದ ವೈದ್ಯರ ತಪಾಸಣೆಯಿಂದ ಕೆಂಪಮ್ಮನಿಗೆ ಟಿ.ಬಿ. ಕಾಯಿಲೆ ಎಂದು ದೃಢಪಟ್ಟಿತು. ಔಷಧಿ ಸರ್ಕಾರದ ಆಸ್ಪತ್ರೆಗಳಲ್ಲಿ ಬಿಟ್ಟಿ ಮಾತ್ರೆ ರೂಪದಲ್ಲಿ ಸಿಕ್ಕರೂ, ಉಳಿದಂತೆ ಹಣ್ಣು, ತರಕಾರಿ, ಟಾನಿಕ್ ಎಲ್ಲದಕ್ಕೂ ಬಡ ರೈತ ಎಲ್ಲಿಂದ ತಂದಾನು ದುಡ್ಡನ್ನು? ಕುರಿ, ಕೋಳಿ ಮಾರಾಟವಾಯ್ತು. ಕರೆಯುವ ಹಸು ಕೊಟ್ಟರೆ ರೋಗಿಗೆ ಹಾಲು ಬೇಕಲ್ಲ ಹಾಗಾಗಿ ಅದು ಕೊಟ್ಟಿಗೆಯಲ್ಲೇ ಉಳಿಯಿತು. ಉಳುವ ಎತ್ತನ್ನು ಕಣ್ಣೀರು ಹಾಕುತ್ತ ಸಂತೆಗೆ ಹೊಡೆಸಿದ ದ್ಯಾವೇಗೌಡ. 

ಕೊಟ್ಟಿಗೆಯ ಲಕ್ಷ್ಮಿಯರು ಖಾಲಿಯಾದರೂ ಮನೆಯ ಲಕ್ಷ್ಮಿ ಹಾಸಿಗೆ ಬಿಡಲಿಲ್ಲ. ಸಿದ್ಧಣ್ಣ ನಗರಕ್ಕೆ ಹೋಗಿ ಬರುವಾಗಲೆಲ್ಲ ಕಂತೆ ಕಂತೆ ನೋಟನ್ನು ಹಣ್ಣು ಟಾನಿಕ್, ತರಕಾರಿಗಳನ್ನು ಮೊಟ್ಟೆ ಮೀನೆಣ್ಣೆಗಳನ್ನು ಬುಟ್ಟಿ ತುಂಬಾ ತರುತ್ತಿದ್ದ. ಎಲ್ಲಿಂದ ಬರುತ್ತಿದೆ ಹಣ ಇದಕ್ಕೆ ಎಂದು ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಹಣ ಬಂತು ಹರಿದುಹೋಯ್ತು. ಕೆಂಪಮ್ಮನ ಕಾಯಿಲೆ ಹಾಗೆ ಹರಿದು ಹೋಗಲಿಲ್ಲ. ಕಡೆಗೊಂದು ದಿನ ಕೆಂಪಮ್ಮನೇ ಕಾಯಿಲೆಯೊಡನೆ ಹೊರಟು ಹೋದಳು. 

ದ್ಯಾವೇಗೌಡ ಪೂರ್ಣ ಕುಸಿದು ಕಂಗಾಲಾದ. ಮಕ್ಕಳು ಸೊಸೆಯರು ಕಂಗೆಟ್ಟರು. ಕಾಲ ಎಲ್ಲಕ್ಕೂ ಮದ್ದು ಅರೆಯಿತು. 

************

ಮಳೆ ಬಂದಿತು. ಭೂಮಿ ಅರುಗಬೇಕು. ಆದರೆ ಉಳುವ ಎತ್ತಿಲ್ಲ. ತರಲು ಚೈತನ್ಯವಿಲ್ಲ. ಇದೆ ವೇಳೆಗೆ ಕುಟುಕುಟು ಬೈಕಿನ ಸಾಹೇಬ ಮತ್ತೆ ಬಂದ. ಹಣದ ಪ್ರಸ್ತಾಪ ತೆಗೆದ. ಗೌಡ ಮತ್ತೆ ಕಣ್ಣು ಕೆಂಪಾಗಿಸಿದ. ಆದರೆ ಸಿದ್ಧಣ್ಣ ಅಪ್ಪನನ್ನು ಒಳಗೆ ಕರೆದು ''ಅಪ್ಪಾ ಅವ್ವನ ಕಾಯಿಲೆಯಾದಾಗ ಖರ್ಚಿಗಾಗಿ ಈ ಸಾಹೇಬರೇ ಸಾವಿರಾರು ರೂಪಾಯಿ ಕೊಟ್ಟಿದ್ದಾರೆ. ಅವರಿಗೆ ಹಣ ಹೇಗೆ ವಾಪಸ್ಸು ಕೊಡುತ್ತೀ? ಉಳಲು ಎತ್ತು ಇಲ್ಲ. ಮಳೆ ಬಂದು ಭೂಮಿ ಆರಿ ಹೋಗುತ್ತಿದೆ'' ಎಂದ. 

ದ್ಯಾವೇಗೌಡ ಬೆಚ್ಚಿ ಬಿದ್ದ. ಕೆಂಪಿ ಕಾಯಿಲೆ ಮಲಗಿದ್ದಾಗ ಸಿದ್ಧಣ್ಣ ತರುತ್ತಿದ್ದ ಎಲ್ಲ ಸಾಮಾನುಗಳು ಈ ಸಾಹೇಬನ ವಹಿವಾಟಿನಿಂದ ಎಂದು ಅವನಿಗೆ ಆಗ ತಿಳಿಯಿತು. ಉಳಿದ ಇಬ್ಬರು ಮಕ್ಕಳು, ಭೂಮಿ ಸಾಹೇಬನಿಗೆ ಮಾರುವುದೇ ಒಳ್ಳೆಯದೆಂದರು. ಕೈ ತುಂಬಾ ದುಡ್ಡು ಬರುತ್ತದೆ ಎಂಬ ಹೆಂಡತಿಯರ ಒತ್ತಾಸೆ ಅವರನ್ನು ಮಾರಾಟಕ್ಕೆ ಒಪ್ಪುವಂತೆ ಮಾಡಿತ್ತು. 

ದ್ಯಾವೇಗೌಡ ಈಗ ಅಸಹಾಯಕ. ಸುತ್ತಲೂ ವಿಧಿ ಹೆಣೆದಿರುವ ಮುಳ್ಳಿನ ಬಲೇ ಅವನನ್ನು ಭೂಮಿಯು ತಾಯಿಯನ್ನು ದೂರ ಮಾಡಲು ಸಿದ್ಧವಾಗಿತ್ತು. 

ಬೇರೆ ದಾರಿಕಾಣದ ಬಡಪಾಯಿ ರೈತ ದ್ಯಾವೇಗೌಡ ತನ್ನ ಕರುಳಿನ ಕುಡಿಯಂತಿದ್ದ ಭೂಮಿಯನ್ನು ಉಳ್ಳವರ ಸೌಧ ಕಟ್ಟಿಕೊಳ್ಳಲು, ಸೈಟು ಮಾಡಿಕೊಳ್ಳಲು ನಿಸ್ಸಹಾಯಕನಾಗಿ ಪರಭಾರೆ ಮಾಡಲು ಸಮ್ಮತಿಸಿದ. 

ಮಕ್ಕಳು ಸೊಸೆಯರು ನಗುನಗುತ್ತ ಮಾರಾಟಕ್ಕೆ ಸಿದ್ಧರಾಗಿರುವಾಗ ತನ್ನದೇನು ಇನ್ನು. ದುಡ್ಡೇ ದೊಡ್ಡಪ್ಪನಾಗಿ ಹೆತ್ತ ಅಪ್ಪ ಮರೆಯಾದ. ನಗರದ ಜೀವನ ಎಲ್ಲರಿಗೂ ಬೇಕು ಬೇಕು ಅನಿಸಿತು. 

*************

ಮನಸ್ಸು ಗಟ್ಟಿ ಮಾಡಿಕೊಂಡು ದ್ಯಾವೇಗೌಡ ಗಂಡು ಮಕ್ಕಳೊಡನೆ ರಿಜಿಸ್ಟ್ರಿ ಕಚೇರಿಗೆ ಹೋಗಿ ಹೆಬ್ಬೆಟ್ಟು ವತ್ತಿ ಕಾಗದದ ಕಟ್ಟನ್ನು ಕುಟುಕುಟಿ ಸಾಹೇಬರಿಗೆ ಒಪ್ಪಿಸಿಬಿಟ್ಟ. ಹಣ ಕೊಡಲು ಬಂದ ಸಾಹೇಬನಿಂದ ಹಣ ಪಡೆಯಲು ನಿರಾಕರಿಸಿದ ದ್ಯಾವೇಗೌಡ ಅಲ್ಲಿಂದ ಸೀದಾ ತನ್ನ ಹೊಲದ ಬಳಿ ಬಂದು ಕೈ ಮುಗಿದು ಕಣ್ಣಿಗೊತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತ ತಾಯಿಯನ್ನು ತೊರೆದ ಮಗುವಿನಂತೆ ಅವನ ಒಡಲ ಸಂಕಟ ಕಣ್ಣೀರಧಾರೆಯಾಗಿ ಹರಿಯಿತು. ತಾನೇ ಸಮಾಧಾನಿಸಿಕೊಂಡು ಒಂದು ಹಿಡಿ ಭೂಮಿ ತಾಯಿಯ ಮಣ್ಣನ್ನು ತನ್ನ ಹರಕು ಚೌಕದಲ್ಲಿ ಕಟ್ಟಿಕೊಂಡು ಸೀದಾ ಬಂದದ್ದೇ ಆಸರೆ ಮನೆಗೆ. ಕಲ್ಯಾಣಿಯ ಬಳಿ ಆಸರೆಗಾಗಿ. 

ದ್ಯಾವೇಗೌಡನ  ಕರುಣಾಜನಕ  ಕಥೆ ಕೇಳಿ ಎಲ್ಲ ಕಣ್ಣೀರಿಟ್ಟರು. ಮುಕ್ತಾ ಬಿಕ್ಕಿ ಬಿಕ್ಕಿ ಅತ್ತಳು. ಆತ್ಮವಿದಾನಂದಜೀಗಳು ಮಾತ್ರ ನಿರ್ವಿಕಾರಚಿತ್ತರಾಗಿ ಪ್ರಶಾಂತ ಮುಖಮುದ್ರೆಯಿಂದ ದ್ಯಾವೇಗೌಡನ ಕಥೆ ಕೇಳಿದರು. ಸೀದಾ ಎದ್ದು ನಿಂತು ದ್ಯಾವೇಗೌಡನ ಬಳಿ ಬಂದು ಅವನ ತಲೆ ಸವರಿ ಒಳ ನಡೆದರು. 

ದ್ಯಾವೇಗೌಡ ಆಸರೆಮನೆಯ ಒಳಬಂದ. ಬೆಳಗಾಯಿತು. ಎಂದಿನಂತೆ ಗೌಡ ಎದ್ದು ಮುಖ ಕೈಕಾಲು ತೊಳೆದು ವೆಂಕಮ್ಮಜ್ಜಿಯ ಬಳಿ ಬಂದು 

''ಅವ್ವಾ ಒಸಿ ಈಬತ್ತಿ ಕೊಡಿ'' ಎಂದು ಕೇಳಿ ಹಣೆಗೆ ಹಚ್ಚಿಕೊಂಡು ಯಾನು ಕಟ್ಟಿ ತಂದಿದ್ದ ತನ್ನ  ಹೊಲದ ಮಣ್ಣನ್ನು ಕೈ ತುಂಬಾ ಹಿಡಿದು ಸೂರಪ್ಪನಿಗೆ ಕೈಮುಗಿದು ಆಸರೆಮನೆಯ ಕೈತೋಟ ಗಿಡಗಳ ಮೇಲೆಲ್ಲ ಚೆಲ್ಲಿ ಭೂಮಿತಾಯಿಗೆ ಕೈಮುಗಿದು ಸನಿಕೆ, ಪಿಕಾಸಿ ಹಿಡಿದು ನೇಗಿಲಯೋಗಿಯ ಕಾಯಕ ಪ್ರಾರಂಭಿಸಿದ. ಆತ್ಮವಿದಾನಂದಜೀ ಮತ್ತೆ ದ್ಯಾವೇಗೌಡನ ಕೈಮುಟ್ಟಿ ನಕ್ಕರು. 

ಆಸರೆಮನೆಯ ದಿನಚರಿ ಯಥಾಪ್ರಕಾರ ಪ್ರಾರಂಭವಾಯಿತು. 

ಹೆಸರನೆರಿಯದ ಸಸಿಯೊಳಿರವೆ  ರಸಗಂಧಗಳು?।

ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೇ?।।

ಪಸರಿಸದೆ ಗಾಳಿಯದ ನೊಯ್ದು ದಿಸೆ ದಿಸೆಗಳೊಳು?।

ಉಸಿರುತಿಹೆ ವದ ನಾವು -ಮಂಕುತಿಮ್ಮ||       


ದಿವಂಗತರಾದ ಶ್ರೀಮತಿ ಸುಮಿತ್ರಾ ರಾಮಣ್ಣ ಅವರು  ಸೊಗಸಾದ ಕಥೆ / ಲೇಖನವನ್ನು ಬರೆದು ಪುಸ್ತಕ ರೂಪದಲ್ಲಿ ಪ್ರಕಟವಾದ ಇದನ್ನು ಹೊರನಾಡ ಚಿಲುಮೆಗಾಗಿ ಹಂಚಿಕೊಂಡ ಶ್ರೀಮತಿ ಆಶಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. 

Comments

  1. ಮನ ಮುಟ್ಟುವ ಕಥೆ ಕೊಟ್ಟಂತಹ ದಿವಂಗತರಾದ ಶ್ರೀಮತಿ ಸುಮಿತ್ರಾ ರಾಮಣ್ಣ ಅವರಿಗೆ ಧನ್ಯವಾದಗಳು
    ಕಥೆ ಮುಗಿದೇ ಹೋಯಿತೇ ಆನಿಸಿದೆ

    ReplyDelete

Post a Comment