ತುಳಸಿ ಮುಂಡಾ

 ತುಳಸಿ ಮುಂಡಾ

ಲೇಖನ - ಶ್ರೀಮತಿ ಮಂಜುಳಾ ಡಿ



ಕಾರ್ಯಕ್ರಮದ ಕೊನೆಯ ದಿನವಾದ್ದರಿಂದ ತುಸು ದುಬಾರಿ ಹೋಟೇಲಿನಲ್ಲಿ ನೂರಾರು ಬಗೆಯ ಖಾದ್ಯ ಪೇಯಗಳನ್ನೊಳಗೊಂಡ ಭೋಜನದ ವ್ಯವಸ್ಥೆಯಾಗಿತ್ತು. ಇದರ ನಂತರ ಭುವನೇಶ್ವರದಿಂದ ಮಾಲ್ಕನ್ ಗಿರಿ ಜಿಲ್ಲೆ ತಲುಪಿ ಅಲ್ಲಿ  ಒಂದು ಚಿಕ್ಕ ಕೂಟ ಮುಗಿಸಿ  ಆಂದ್ರದ ಮೂಲಕ ಬೆಂಗಳೂರಿಗೆ ತಲುಪುವ ನಿರ್ಣಯ ಮೊದಲೇ ಆಗಿತ್ತು. ಮಾಲ್ಕನ್ ಗಿರಿ ಜಿಲ್ಲೆಯಲ್ಲಿ ಕೂಟ ಮುಗಿದೊಡನೇ,  ಎಲ್ಲರೂ ಆ ಜಿಲ್ಲೆಯ ಪ್ರಸಿದ್ದ ತಾಣಗಳಿಗೆ ಅತೀ ಸಹಜವೆಂಬಂತೆ ಭೇಟಿ ನೀಡಲು ನಿರ್ಣಯಿಸತೊಡಗಿದರು. ಸಂಜುಕ್ತಾ ಒಡಿಸ್ಸಾ ರಾಜ್ಯದ ಸಂಬಲ್ ಪುರ ಜಿಲ್ಲೆಯವಳು, ಚಿಕ್ಕ ವಯಸ್ಸಿಗೆ ಎನ್ ಜಿ ಒ ದಲ್ಲಿ ಕೆಲಸ ಮಾಡುತ್ತಿದ್ದಾಕೆ. ಅಲ್ಲಿ ಬೊಂಡಾ ಆದಿವಾಸಿ ಜನಾಂಗದ ಬಗ್ಗೆ ಪ್ರಯಾಣ ಪೂರ್ತಿ ಮಾಹಿತಿ ನೀಡುತ್ತಾ ಬಂದಿದ್ದಳು. ನಮ್ಮ ನಾಲ್ಕು ಜನರ ಗುಂಪು ಮತ್ತು ಸಂಜುಕ್ತಾ ಮಾಲ್ಕನ್ ಗಿರಿ ಜಿಲ್ಲೆಯಲ್ಲಿನ ಬೊಂಡಾ ಜನಾಂಗದ ಸ್ಥಳಕ್ಕೆ ಹೋಗುವ ಕುರಿತು ನಿರ್ಣಯಿಸಿದೆವು.  ರಾತಿ ೮ ರ ಒಳಗೆ ಹಿಂದಿರುಗುವುದಾಗಿ ತಿಳಿಸಿ ಹೊರಟೆವು.

ದಟ್ಟಡವಿ, ಕಾರು ರಸ್ತೆ ಸೀಳಿ ಹಸಿರ ಧಾರೆಯ ಮಧ್ಯೆ ಸಾಗುತ್ತಿದ್ದ ಭಾವ. ಸಮುದ್ರ ಮಟ್ಟದಿಂದ ೩೫೦೦ ಅಡಿ ಎತ್ತರದ ಹಸಿರ ರಾಶಿ ಮಧ್ಯೆ ಇರುವ ಪ್ರದೇಶ. ೩.೫ ಕಿ ಮೀ ಬೆಟ್ಟ ಏರಿ ಹೋಗಬೇಕಾದ ದುರ್ಗಮ ಹಾದಿ.  ನಾವು ಕಂಡ ಭಾರತದಾಚೆ ಇನ್ನೊಂದು ಭಾರತವಿದೆ. ಸಾಮಾಜಿಕವಾಗಿ,  ಭಾವನಾತ್ಮಕವಾಗಿ ನಾವು ಕಂಡರಿಯದ ಬದುಕಿನ ಚಿತ್ರಣ. ಮಣ್ಣಿನ ಮನೆಗಳು, ಕುಟ್ಟಿ ಪುಡಿ ಮಾಡಲು ಬಳಸುವ ಸಾಧನಗಳು, ಮಹಿಳೆಯರ ಉಡುಪು,  ಬದುಕಿನ ರೀತಿ ಇನ್ನೂ ಶತಮಾನಗಳಷ್ಟು ಹಿಂದಿನದು. 

ಹಿಂದಿರುಗುವ ಹಾದಿ, ಪ್ರಶ್ನೆಗಳ ರಾಶಿ ಚಲ್ಲಿತ್ತು. ಒಂದೆಡೆ ಭಾರತ ಪರ್ಯಾಯ ವಿದೇಶವಾಗುತ್ತಿದ್ದರೆ ಇನ್ನೊಂದಡೆ ಶತಮಾನಗಳಷ್ಟು ಹಿಂದಿದೆ. ತಾಂತ್ರಕತೆಯ ಬುನಾದಿಯ ಮೇಲೆ ಭಾರತದ ಬದುಕು ಹೆಣೆಯುತ್ತಿರವ ಈ ಕಾಲಘಟ್ಟದಲ್ಲಿ ಈ ಜನಾಂಗದ ಬದುಕು ಹೀಗಿದ್ದರೆ,

ಸ್ವಾತಂತ್ರ ಪೂರ್ವದಲ್ಲಿ ಹೇಗಿದ್ದರಬಹುದು? ಊಹೆಗೆ ನಿಲುಕಲಿಲ್ಲ. ಸ್ವತಂತ್ರೋತ್ತರದ ಅವಧಿಯಲ್ಲಿ ಮಹಿಳಾ ಶಿಕ್ಷಣವೇ ದೊಡ್ಡ ಸವಾಲಾಗಿದ್ದ ಕಾಲಘಟ್ಟದಲ್ಲಿ ಆದಿವಾಸಿ  ಜನಾಂಗದ ಅದರಲ್ಲೂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಕಲ್ಪನೆಯೇ ವಿಚಲಿತಗೊಳಿಸುವುದು. ಆದರೆ ಇದೇ  ಅದಿವಾಸಿ ಜನಾಂಗದ ಕುಟುಂಬವೊಂದರ ಏಳನೇ ಕುಡಿಯಾಗಿ ಹುಟ್ಟಿದ ಆ ಹೆಣ್ಣು ಆತ್ಮಕ್ಕೆ ಇಂಥದ್ದೊಂದು ಕಲ್ಪನೆ ತೋಚಿದ್ದಾದರೂ ಹೇಗೆ? ದುರ್ಬರವಾಗಿ ಬದುಕುತ್ತಿದ್ದ ೨೦೦೦೦ ಕ್ಕೂ ಹೆಚ್ಚು ಜೀವಿತಗಳ ಬದಲಾವಣೆಗೆ ಕಾರಣರಾದ ಆಕೆ ಯಾರು? 



ಅವರೇ ತುಳಸಿ ಮುಂಡಾ! ಸ್ವತಂತ್ರ ಬರುವ ಸರಿಯಾಗಿ ಒಂದು ತಿಂಗಳ ಹಿಂದೆ ಅತ್ಯಂತ ಹಿಂದುಳಿದ ಮುಂಡಾ ಒಡಿಸ್ಸಾದ ಕಿಯೋನ್ಜರ್ ನ ಆದಿವಾಸಿ ಜನಾಂಗದ ಕುಟುಂಬವೊಂದರಲ್ಲಿ ಏಳನೇ ಕುಡಿಯಾಗಿ ಜನಿಸಿದರು. ಹಾರಾಡುತ್ತಾ ಕಳೆಯಬೇಕಾದ ಬಾಲ್ಯ, ಆಡಬೇಕಾದ ವಯಸ್ಸಿನಲ್ಲಿ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹಗಲಿರುಳು ದುಡಿದರೂ ತಮ್ಮ ಜನಾಂಗದ ಸ್ಥಿತಿ ಏಕೆ ಹೀಗೆ ಎಂಬ ಪ್ರಶ್ನೆ ಮಾತ್ರ ಆ ಎಳೆಯ ಮನದಲ್ಲಿ ಸುಳಿಯುತ್ತಲೇ ಇತ್ತು. ೧೨ ನೇ ವಯಸ್ಸಿನಲ್ಲಿ ತನ್ನ ಸೆರೆನೆಡಾದ ತನ್ನ ಅಕ್ಕನ ಮನೆಗೆ ತೆರಳುವ ತುಳಸಿ ಆಗ ಪ್ರಬಲವಾಗಿದ್ದ ವಿನೋಬ ಬಾವೆಯವರ “ಭೂದಾನ ಉದ್ಯಮ ಯೋಜನೆಯ “ ಬಗ್ಗೆ ತಿಳಿದು ಬಹು ಪ್ರಭಾವಿತರಾಗುತ್ತಾರೆ. ಈ ಯೋಜನೆಯ  ಕಾರ್ಯಕತೆðಯಾಗಿ ಮಾರ್ಪಟ್ಟು ಬಿಹಾರ್- ಒಡಿಸ್ಸಾ ಹೀಗೆ ಸಂಚರಿಸುತ್ತಾ ಹಲವು ಅನುಭವ ಗಳಿಸುತ್ತಾರೆ. ತುಳಸಿಯ ಕಲಿಕೆಯಯಡೆಗಿನ ಅಗಾಧ ಹುಚ್ಚು ಶಿಕ್ಷಣ ಶಿಬಿರಗಳಲ್ಲಿ ಮಾಲತಿ ಚೌಧರಿ, ರೋಮಾ ದೇವಿ, ಮತ್ತು ನಿರ್ಮಲಾ ದೇಶಪಾಂಡೆಯಂತ ಸಮಾಜಮುಖೀ ವ್ಯಕ್ತಿತ್ವಗಳ ಸಂಪರ್ಕ ಸಾಧ್ಯವಾಗುತ್ತದೆ. 

ಹೀಗೆ ಜನರ ಮತ್ತು ಸಮಾಜದ ಮಧ್ಯೆ ಓಡಾಡುವ ತುಳಸಿಗೆ ತನ್ನ ಜನಾಂಗದ ಪರಿಸ್ಥಿತಿ ಸುಧಾರಿಸುತ್ತಿಲ್ಲವೇಕೆ ಎಂಬ ಪ್ರಶ್ನೆ ತೀವ್ರವಾಗಿ ಕಾಡತೊಡಗುತ್ತದೆ. ಹಗಲು ರಾತ್ರಿ ಕೆಲಸ ಮಾಡಿದರೂ ಹಸಿವು ಅನಾರೋಗ್ಯ , ಹೆಚ್ಚು ಸಂತಾನ , ವಸತಿ ಹೀನತೆ, ಮೂಢನಂಬಿಕೆ ಇವುಗಳ ಮಧ್ಯೆ ನರಳುತ್ತಿದ್ದ ತನ್ನ ಜನಾಂಗದ ಪರಿಸ್ಥಿತಿ ತೀವ್ರವಾಗಿ ಬಾಧಿಸತೊಡಗಿತು. ಇಂಡೋರ್ ಶಾಂತಿ ಸೇನಾ ಶಿಕ್ಷಣ ಸಮಿತಿ ಸೇರಿ ಅಲ್ಲಿ ಈ ಕುರಿತು ಹಲವರ ಅಭಿಪ್ರಾಯ ಪಡೆದು ಸುಧೀರ್ಘವಾಗಿ ಚರ್ಚಿಸಿದರು. ಇದರ ಫಲವಾಗಿ ತಮ್ಮ ಜನಾಂಗದ ಸ್ಥಿತಿಗೆ ಶಿಕ್ಷಣ ಇಲ್ಲದಿರುವುದೇ ಕಾರಣ ಎಂಬುದು ಮನದಟ್ಟಾಗಿ ಇದರೆಡೆಗೆ ತಮ್ಮ ಜೀವನ ಮುಡಿಪಾಗಿಡುವ ಸಂಕಲ್ಪ ತೊಟ್ಟರು.  ೧೯೬೭ ರಲ್ಲಿ ಈ ನಿರ್ಣಯ ತೆಗೆದುಕೊಂಡಾಗ ತುಳಸಿಯ ವಯಸ್ಸು ಮಾತ್ರ !

ಆದಿವಾಸಿಗಳು ಅಧಿಕ ಸಂಖ್ಯೆಯಲ್ಲಿದ್ದ ಸೆರೆನೆಡಾ ಪ್ರದೇಶವನ್ನು ತಮ್ಮ ಧ್ಯೇಯೋದ್ದೇಶಕ್ಕಾಗಿ ಆಯ್ದುಕೊಂಡರು. ಮಹಿಳೆಯರನ್ನು ಮಕ್ಕಳನ್ನು ಸೇರಿಸಿ ಓದು ಕಲಿಸಬೇಕು ಎಂಬುದು ತುಳಸಿಯ ಆಲೋಚನೆಯಾಗಿತ್ತು. ಈ ಆಲೋಚನೆ ಅತ್ಯಂತ ಆಕರ್ಷಕವಾಗಿ ಕಂಡರೂ ಅಷ್ಟೇ ಆಳದ ಸುಳಿಯಂತ ಸಮಸ್ಯೆಗಳಿದ್ದವು. ಮಕ್ಕಳಿಗೆ ಕಲಿಸಲು ಸ್ಥಳಾವಕಾಶವಿರಲಿಲ್ಲ. ಇದೆಲ್ಲಕ್ಕಿಂತ ಮೊದಲು ಬಾಲ ಕಾರ್ಮಿಕರಾದ ಮಕ್ಕಳು ಕಲಿಯಲು ಕುಳಿತರೆ ಬದುಕು? ಇದನ್ನೆಲ್ಲಾ ಯೋಚಿಸಿದ ತುಳಸಿ, ರಾತ್ರಿ ವೇಳೆ ಲಾಟೀನು ಬೆಳಕಿನಲ್ಲಿ ಕಲಿಸಲು ಆರಂಬಿಸಿದಳು. ದಿನವೆಲ್ಲ ದಿಕ್ಕೆಟ್ಟಂತೆ ಮನೆ ಮನೆ ಅಲೆದು ಶಿಕ್ಷಣದ ಮಹತ್ವದ ಅರಿವು ಮೂಡಿಸಲು ಪ್ರಯತ್ನಿಸುತ್ತಿದದಳು. ಎಷ್ಟು ಪ್ರಯತ್ನಿಸಿದರೂ ಮಕ್ಕಳ ಸಂಖ್ಯೆ ಹೆಚ್ಚಲಿಲ್ಲ. ಆದರೆ ತುಳಸಿ ಮಾತ್ರ ನಿಲ್ಲಲಿಲ್ಲ. ಭೂಮಿಯ ಸಹನೆಯಿಂದ ಶಿಕ್ಷಣದ ಕುರಿತಾದ ಅರಿವು ಮೂಡಿಸುವ ಸಲುವಾಗಿ ಇನ್ನಷ್ಟು  ಹೆಚ್ಚು ಅಲೆದಾಡಿದಳು.

ತನ್ನ ಜನಾಂಗದ ಜನರ ಬದುಕು ಉತ್ತಮಗೊಳಿಸುವ ಸಲುವಾಗಿ ಆದಿವಾಸಿ ವಿಕಾಸ ಸಮಿತಿ ಸ್ಥಾಪಿಸಿದಳು.  ನಿಯಮಬದ್ದ ಶಿಕ್ಷಣ ಪಡೆಯದ ತುಳಸಿ,  ವಿನೊಬಾ ಭಾವೆ, ಜಯಪ್ರಕಾಶ ನಾರಾಯಣ, ಗಾಂಧಿ , ಸ್ವತಂತ್ರ ವೀರರ ಹೋರಾಟ, ಶಿಕ್ಷಣ ಶಿಬಿರಗಳಲ್ಲಿ ಕಂಡ ಅನುಭವಗಳನ್ನು ಮಕ್ಕಳಿಗೆ ಬೋದಿಸುತ್ತಾ ಹೋದಳು. ಮೊದಲಿಗೆ ಇದೊಂದು ಆದಿವಾಸಿ ಸಮಿತಿ ಎಂದು ಯಾರೂ ಹತ್ತಿರ ಸುಳಿಯಲಿಲ್ಲ. ಕ್ರಮೇಣ ಆದಿವಾಸಿಗಳಿಗೆ ಶಿಕ್ಷಣದ ಅರಿವು ಮೂಡಿಸುವ ಅವಳ ಸಂಕಲ್ಪ  ತಲುಪುತ್ತಾ ಸಾಗಿದಂತೆ ಅವಳನ್ನು ಆವರಿಸತೊಡಗಿದರು. 

ಮಹಿಳೆಯರನ್ನು ಒಗ್ಗೂಡಿಸಿ ಹಗಲು ರಾತ್ರಿ ದುಡಿದರೂ ಇಂಗದ ಹಸಿವು ಅನಾರೋಗ್ಯಕ್ಕೆ ಕಾರಣ ಕುಡಿತ ಎಂಬುದನ್ನು ಮನವರಿಕೆ ಮಾಡಿಸಿ ಮಧ್ಯ ನಿಷೇದ ಹೋರಾಟ ಮೊದಲಿಟ್ಟಳು. ಅಕ್ರಮ ಸಾರಯಿ ಮಾರಾಟ ನಿಲ್ಲಿಸುವವರೆಗೂ ಜಗ್ಗದ ಹೋರಾಟ ಮುಂದುವರೆಯಿತು. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುವಾಗಿ ತುಳಸಿ ಹೆಸರು ಕೇಳತೊಡಗಿತು. ಆದರೆ ಇದರಿಂದ ತುಳಸಿಗೆ ತುಸುವಾದರೂ ವ್ಯತ್ಯಾಸವಾಗಲಿಲ್ಲ. ಆಕೆಯ ಸಂಕಲ್ಪ ಏಕಮಾತ್ರವಾಗಿತ್ತು. ಆದಿವಾಸಿಗಳ ಬದುಕು ಉತ್ತಮಗೊಳಿಸುವುದು. ಇದಕ್ಕಾಗಿ ತನ್ನ ಇಡೀ ಬದುಕು ಮುಡುಪಾಗಿಟ್ಟ ತುಳಸಿಯ ಧ್ಯೇಯ ಕ್ರಮೇಣ ಆದಿವಾಸಿಗಳ ಅರಿವಿಗೆ ನಿಲುಕಿತು. ತುಳಸಿ ಕ್ರಮೇಣ ಆ ಎಲ್ಲರ ಮನೆಯ ಭಾಗವಾಗಿ  “ ತುಳಸಿ ಆಪಾ” ಆಗಿ ಮಾರ್ಪಟ್ಟಳು. “ ಅಪಾ” ಅಂದರೆ ಒಡಿಸ್ಸಿಯಲ್ಲಿ “ ಸಹೋದರಿ” ಎಂಬರ್ಥವಿದೆ.

ಕಲಿಯಲು ಬರುತ್ತಿದ್ದ ಮಕ್ಕಳು ಸುರಿವ ಬಿಸಿಲು, ಚಳಿ- ಮಳೆಯ ಮಧ್ಯೆ ನಲುಗುತ್ತಿದ್ದದ ನೋಡಿ ಶಾಲೆ ನಿರ್ಮಾಣದ ಅಗತ್ಯತೆ ಬಗ್ಗೆ ಜನರನ್ನು ಒಗ್ಗೂಡಿಸಿ ಅರಿವು ಮೂಡಿಸಿದಳು. ಪ್ರೆöÊಮರಿ ವ್ಯಾಸಾಂಗ ಮುಗಿಸಿದವರನ್ನು ಬೋದಿಸಲು ಸ್ವಯಂ ಪ್ರೇರಕರಾಗಿ ಬರುವಂತೆ ಪ್ರೋತ್ಸಾಹಿಸಿದಳು. ಹೀಗೆ ಆದಿವಾಸಿ ವಿಕಾಸ ಸಮಿತಿ ವಿಕಸಿಸುತ್ತಾ ಹೋದಂತೆ ಜವಾಬ್ದಾರಿ- ಬಾದ್ಯತೆಗಳೂ ಹೆಚಿದವು. 

ತುಳಸಿ ಹೆಚ್ಚು ಹೆಚ್ಚು ಸಂಚರಿಸುತ್ತಾ ಆದಿವಾಸಿಗಳ ಬದುಕು ಉತ್ತಮಗೊಳಿಸುವತ್ತಾ ಶ್ರಮಿಸಿದಳು. ತುಳಸಿಯ ನಿಷ್ಕಲ್ಮಷ ಸಂಕಲ್ಪದ ಅರಿವಾಗುತ್ತಿದ್ದಂತೆ ಹವಲು ಕಡೆಯಿಂದ ಎಲ್ಲಾ ರೀತಿಯ ಪ್ರೋತ್ಸಾಹ ದೊರೆಯಾಲಾರಂಭಿಸಿತು. ಇವರ ಅಗಾದ ಹೆಜ್ಜೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೦೧ ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಅವಾರ್ಡ ಸಹಾ ನೀಡಿ ಗೌರವಿಸಿದೆ.

ಅತೀ ದುಸ್ಸಾಹಸವಾಗಿದ್ದ ಕಾಲಘಟ್ಟದಲ್ಲಿ ಇದು ಸಾಧ್ಯವಾದ್ದದ್ದು ಹೇಗೆ? ಎಂಬ ಪ್ರಶ್ನೆಗೆ ತುಳಸಿಯ ಸರಳ ಉತ್ತರ... “ ನನ್ನ ಬಗ್ಗೆ ನಾನು ಯೋಚಿಸಿಕೊಳ್ಳಲಿಲ್ಲ, ಇದೊಂದೇ ಧ್ಯೇಯವಾಗಿತ್ತು. ಸಮಾಜದಲ್ಲಿ ನಿಜಕ್ಕೂ ಬದಲಾವಣೆ ತರಬೇಕೆಂದರೆ ಸ್ವಾರ್ಥವಿರಬಾರದು” ಎಂದು ಕಿರುನಗೆ ಬೀರುತ್ತಾರೆ. ಅವರ ಬದುಕಿನಲ್ಲಿ ಇರುವುದು ಇದ್ದುದು ಒಂದೇ... ಅದು ಆಧಿವಾಸಿಗಳ ಬದುಕು ಉತ್ತಮ ಪಡಿಸುವುದು. 

ಸ್ವಂತತ್ರ ಕಳೆದು ಇಷ್ಟು ವರ್ಷ ಗತಿಸಿದ್ದರೂ ಆದಿವಾಸಿಗಳ ಬದುಕು ಇನ್ನೂ ಇದೆ ಸ್ಥಿತಿಯಲ್ಲಿ ಮುಂದುವರೆದಿರುವ ಬಗ್ಗೆ ನೋವಿನಿಂದ ಮಾತಾಡುವ ತುಳಸಿ ಅಪಾ “ ಇಂದು ನಮ್ಮ ದೇಶದಿಂದ ಮಾನವರನ್ನು  ಚಂದ್ರ ಮಂಡಲ ಇತ್ಯಾದಿ ಗ್ರಹಗಳವರೆಗೂ ಕಳಿಸಿದ್ದಾರೆ. ಅದಕ್ಕಾಗಿ ಸಾವಿರಾರು ಕೋಟಿ ವ್ಯಯವಾಗಿದೆ- ಆಗುತ್ತಿದೆ. ಆದರೆ ಇದೇ ಭೂಮಿಯಲ್ಲೇ ಶಿಕ್ಷಣ, ಸಮಯಕ್ಕೆ ವೈದ್ಯ ದೂರ, ಎಷ್ಟೋ ಜನ ಸರಿಯಾಗಿ ಹೊತ್ತಿನ ಆಹಾರ ಸಿಗದೇ ನರಳುತ್ತಿದ್ದಾರೆ. ಈ ಬಗ್ಗೆ ಆದ್ಯತೆ ನೀಡಬೇಕಾಗಿರುವುದು ಎಲ್ಲರ ಜವಾಬ್ದಾರಿ ಎನ್ನುತ್ತಾರೆ”.

ಶಿಕ್ಷಣ- ವೈದ್ಯ ಇವುಗಳ ಬಗ್ಗೆ ಬೋಂಡಾ ಜನಾಂಗದ ಜನರು ಮಾತಾಡಿದ ರೀತಿ, ಉಡುಪು ವೇಷ- ಆಚಾರಗಳು ಬಹಳವಾಗಿ ಮನಸ್ಸನ್ನು ರಾಡಿ ಎಬ್ಬಿಸದವು. ಸಂಜುಕ್ತಾರAತಹ ಎಷ್ಟೋ ಯುವಕರು ಹೆಸರು- ಪ್ರಚಾರ ಇವ್ಯಾವುದರ ಹಂಗಿಲ್ಲದೇ ಇಂತಹ ಧ್ಯೋಯೋದ್ದೇಶಗಳಿಗೆ ಅಲೆದಾಡುವುದು ನೋಡಿದರೆ “ ತುಳಸಿ ಅಪಾ” ಅವರ ಕಿಡಿ ಯುವ ಮನಸ್ಸುಗಳಲ್ಲಿ ಜ್ವಾಲೆ ಹೊತ್ತಿಸಿ ಇಂತಹ ಬದುಕುಗಳಿಗೆ ಬೆಳಕು ತರಲು ಹೆಣಗುತ್ತಿರುವುದು ಎಂಬಂತೆ ತೋಚುವುದು.

ತಾಂತ್ರಿಕ ಯುಗದಲ್ಲೇ ಆದಿವಾಸಿಗಳ ಬದುಕು ಈ ಸ್ಥಿತಿಯಾದರೆ ಮಹಿಳೆ ಮನೆಯಿಂದ ಹೊರಗೆ ಹೆಜ್ಜೆ ಇಡದ ಆ ಕಾಲದಲ್ಲಿ ತುಳಸಿ ಅಪಾ ಅವರ ದಿಟ್ಟ ಹೆಜ್ಜೆ ಒಂದಿಡೀ ಜನಾಂಗದ ಒಂದು ಹೆಜ್ಜೆ ಮುನ್ನೆಡೆಸಿದ್ದು ದೈತ್ಯ ಹೆಜ್ಜೆಯಾಗಿ ತೋಚುವುದು.



 ಲೇಖನ - ಶ್ರೀಮತಿ ಮಂಜುಳಾ ಡಿ

Comments

  1. ಉತ್ತಮ ಲೇಖನ. ಇಂತಹ "ವನಸುಮ"ವನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು. ತುಳಸಿ ಮುಂಡಾ ಅವರಿಗೆ ನನ್ನ 🙏🙏🙏

    ReplyDelete

Post a Comment