ಅನಿಲ ಯೋಜನೆ

 ಅನಿಲ ಯೋಜನೆ

ಹಾಸ್ಯ ಲೇಖನ - ಅಣಕು ರಾಮನಾಥ್ 



ಯಾವುದೇ ಪದವನ್ನು ಕೊಡಿ, ಅದರ ಬಗ್ಗೆ ಹಾಸ್ಯಲೇಖನ ಬರೆಯಲು ಯತ್ನಿಸುತ್ತೇನೆ ಎಂದಾಗ ಅನು ಶಿವರಾಮ್ರ ಮನದಲ್ಲಿ This fellow is full of hot air ಎಂಬ ಭಾವಸ್ಫುರಣವಾಗಿ, ತತ್ಕಾರಣ ‘ಅನಿಲ ಯೋಜನೆ’ಯ ಬಗ್ಗೆ ಬರೆಯಿರಿ ಎಂದಿದ್ದಾರೆ. ಬರವಣಿಗೆ ಯಾವ ದಿಕ್ಕಿಗೆ ಹಾರಿಸಿಕೊಂಡುಹೋಗುವುದೋ ನೋಡೋಣ.  

ಅನಿಲ ಯೋಜನೆ ಎಂಬ ಪದಜೋಡಿಯಲ್ಲಿರುವ ಯೋ ಅಕ್ಷರವು Yo-Yo ವನ್ನು ನೆನಪಿಗೆ ತರುವ ಮೂಲಕ windy ways ಅನ್ನು ಪ್ರತಿಪಾದಿಸುತ್ತದೆ. ನಿಲ ಎನ್ನುವುದು ನಿಲುಗಡೆಯ ಹ್ರಸ್ವರೂಪವೆಂದು ಭಾವಿಸಿದರೆ ಅನಿಲವು ನಿಲುಗಡೆರಹಿತ ಎನ್ನುವ ಅರ್ಥ ನೀಡುತ್ತದೆ. Gases, unless acted upon by an external lid ಒಂದೆಡೆ ನಿಲ್ಲುವುದಿಲ್ಲವಾದ್ದರಿಂದಲೇ ಅವನ್ನು ಅ-ನಿಲ ಎಂದು ಕರೆದಿರಬಹುದು. ಹೀಗಾಗಿ ಯಾವುದೇ Non stop ಯೋಜನೆಯನ್ನು ನಾವು ಅನಿಲ ಯೋಜನೆಯೆಂದು ಕರೆಯಬಹದು. 

ಅನಿಲದ ಅಗಾಧತೆಯನ್ನು ಅರಿಯಬೇಕಾದರೆ ಆಂಗ್ಲದ ಅರ್ಥಗಳನ್ನು ಅನುಸರಿಸುವುದು ಅವಶ್ಯ. ಯಾವ ವಸ್ತುವು ನಿರಂತರವಾಗಿ ವಿಸ್ತರಣ ಗುಣವನ್ನು ಹೊಂದಿರುವುದೇ ಅದೇ ಅನಿಲ ಎನ್ನುತ್ತಾಳೆ ನಿಘಂಟಿನ ಮೆರ್ರಿಯಮ್ಮ. (Merriam Webster dictionary). ಬ್ರೇಕಿಂಗ್ ನ್ಯೂಸ್ ಅರಚಾಟ, ಅಧಿಕಾರಿಗಳ ಅಹಂಕಾರ, ಬ್ರಹ್ಮಾಂಡಜ್ಯೋತಿಷಿಗಳ ಕೈಗೊಂಬೆಗಳ ಮೌಢ್ಯ, ರಾಜಕಾರಣಿಗಳ ಆಸ್ತಿಗಳು ಇವೆಲ್ಲವೂ ನಿರಂತರವಾಗಿ ವಿಸ್ತರಣೆಗೊಳ್ಳುವ ವಸ್ತುವಿಷಯಗಳಾದ್ದರಿಂದ ಇವನ್ನು ಸಹ ಅನಿಲ ಎಂದು ಕರೆಯಬಹುದು. ಬ್ರೇಕಿಂಗ್ ನ್ಯೂಸಿಗೆ ಸಂಬಂಧಿತವಾದ ಬುರುಡೆ ಬಿಡುವ ಸಾಮರ್ಥ್ಯದ ಬೆಳವಣಿಗೆ. ದಿನಕ್ಕೊಂದು ಮೌಢ್ಯವನ್ನು ಪರಿಚಯಿಸುವ ಜ್ಯೋತಿಷಿಗಳ ಯತ್ನ, ಹೊಸ ಹೊಸ ಹಗರಣಗಳನ್ನು ಹುಡುಹುಡುಕಿ ಆಸ್ತಿವಿಸ್ತರಣೆಗೆ ಮಾಡುವ ಹುನ್ನಾರ ಇವುಗಳನ್ನೆಲ್ಲ ಅನಿಲ ಯೋಜನೆ ಎಂದು ಕರೆಯಬಹುದು. 

Gas ಎಂದರೆ ಉದರದಲ್ಲಿರುವ ಜೀರ್ಣಪ್ರೇರಕ ಅನಿಲ ಎಂಬ ಅರ್ಥದತ್ತ ಗಮನ ಹರಿಸೋಣ. ಆಲೂಗಡ್ಡೆಯ ಮೂಲಕವೋ, ನಾಲಿಗೆಗೆ ಹಿತವೆನಿಸುವ ಚೂರುಚೂರು ಚುರುಚುರು ಪಕೋಡಗಳ ಮೂಲಕವೋ, ಪಟ್ಟಾಗಿ ಕತ್ತರಿಸಿದ ಆಂಧ್ರ ಸ್ಟೈಲ್ ಖಾರಾಹಾರದ ಪ್ರಭಾವದಿಂದಲೋ ಒಳಸೇರಿದ ಗ್ಯಾಸ್ ಎಲ್ಲೆಲ್ಲಿ ಸೇರಬಾರದೋ ಅಲ್ಲಲ್ಲಿ ಸೇರಿ ‘ವಾಯು ಜೀವ ಒತ್ತತ್ತೋ ತಮ್ಮ’ ಎಂಬ ಉದ್ಗಾರವನ್ನು ಹೊರಡಿಸಿ, hurry ಯಲ್ಲೇ ವೈದ್ಯರತ್ತ ಸಾಗುವುದೇ ಸರ್ವೋತ್ತಮ ಎನಿಸಿಬಿಡುವ ವಾಯುವು ಒಳಸೇರಿದಾಗ 

ಅಂತರಂಗದಾ ಮೃದಂಗ ಅಂತು ಥೋಂ ಥ ನಾ ನಾ 

ಚಿತ್ರಹಿಂಸೆ ಮೂಡಿಸಿತ್ತ ತಿನ್ನುತಿತ್ತ ಪ್ರಾಣ

ಕಟಿಯ ಸುತ್ತ ಸೇರಿ ಒತ್ತಿ ಹಿಂಡುತಿತ್ತ ತ್ರಾಣ

ಹೊಟ್ಟೆಯಿಂದ ಹೊರಡುತಿಹುದು ಹುಳಿಯತೇಗ ಬಾಣ



ಎಂಬ ರಾಗವು ತಂತಾನೇ ಹೊರಡುತ್ತದೆ. ಆ ಸಮಯದಲ್ಲಿ ‘ಪಕೋಡಗಳ ವಂಶ ನಿರ್ವಂಶವಾಗಲಿ; ಆಲೂಗಡ್ಡೆಯ ಗುಡ್ಡವೇ ಕುಸಿದುಬೀಳಲಿ; ಆಂಧ್ರಶೈಲಿಯ ಬಾಣಸಿಗರೆಲ್ಲ ಅಂತ್ಯವಾಗಲಿ; ಕರಿದ ತಿಂಡಿ ಹುರಿದ ತಿನಿಸು ಜಗವ ಬಿಟ್ಟು ತೊಲಗಲಿ’ ಎನ್ನಿಸುವುದು ಸತ್ಯಸ್ಯ ಸತ್ಯ. ಒಂದಿನಿತು ಹಿಂಗು, ಒಂದಷ್ಟು ಸೈಂಧವಲವಣ, ಒಂದಿಷ್ಟು ಶುಂಠಿಯ ಕಷಾಯ ಜಠರವೇರಿ, ತೇಗ್ ಬಹದ್ದೂರ್ ಆದವನು ಸುಸ್ತಿನ ಸ್ಥಿತಿಯಿಂದ ಸುಸ್ಥಿತಿಗೆ ತಲುಪಿದಾಕ್ಷಣ ‘ಅಪಾರ ಖಾರ ಕೊಡುವ ಖುಷಿಯ ಸಮವೆ ಇಲ್ಲವು! ಆಹಾರವೆಲ್ಲ ಸಪ್ಪೆಯಿರಲು ಜೀವಿಸುವುದ ವ್ಯರ್ಥವು| ಒಹೋಹೊ ಖಾರವೇ...’ ಎನ್ನುತ್ತಲೋ ‘ದಿಲ್ ಕಾ ಹಾಲ್ ಸುನ್ ದಿಲ್‍ವಾಲಾ| ಖಾನೇ ಜೋ ಚಾಹೆ ಮಿರ್ಚಿ ಮಸಾಲಾ ಖಾತೇ ರಹೇಗಾ ಸ್ಪೈಸೀ ಸಾಲಾ’ ಎನ್ನುತ್ತಲೋ ಚಿಲ್ಲಿ ಚಿಲ್ಲಿ(ಉತ್ತರಭಾರತದ ಅತ್ತೆಯರಲ್ಲಿ ಎರಡು ವಿಧವಂತೆ – ಸಿಹಿಸಿಹಿಯಾಗಿರುವವಳು ಟೊಮೇಟೋ ಸಾಸ್; ಖಾರಖಾರವಾಗಿರುವವಳು ಚಿಲ್ಲಿ ಸಾಸ್) ಕಾರ್ನರ್‍ಗೋ, ಮಂಚೂರಿ ಮಹಲ್‍ಗೋ ಆಂಬುಲೆನ್ಸಿನ ವೇಗದಲ್ಲಿ ಧಾವಿಸುವುದು ನಿಶ್ಚಿತ. ಆ ಮಾತು ಅಂತಿರಲಿ. ಗ್ಯಾಸ್ ಉರುಫ್ ಅನಿಲದ ಉದ್ಭವಕ್ಕೆ ಕಾರಣವಾಗುವ ಅಡುಗೆ, ತಿಂಡಿ, ಪಾನೀಯಗಳನ್ನು ತಯಾರಿಸುವ, ಒದಗಿಸುವ ಎಲ್ಲ ಕಾರ್ಯಗಳನ್ನು ಅನಿಲ ಯೋಜನೆ ಎಂದು ಕರೆಯಬಹುದು.  

ಅನಿಲವೆಂದರೆ ಇಂಧನ ಎಂಬ ಅರ್ಥವೂ ಉಂಟು. ಇಂಧನದಲ್ಲಿ ಹಲವಾರು ವಿಧಗಳಿವೆ. ಜನಗಳಿಗೆ ಪೆಟ್ಟು ನೀಡಿ, ಸರ್ಕಾರಕ್ಕೆ ಕರೆನ್ಸಿ ನೋಟುಗಳನ್ನು ನೀಡುವ ಇಂಧನ ಪೆಟ್ ರೋಲ್ ಆದರೆ ಸರ್ಕಾರವೆಂಬ ಯಂತ್ರವನ್ನು ನಡೆಸಲು ಅವಶ್ಯವಾದ ಇಂಧನವೇ ಕರೆನ್ಸಿ ರೋಲ್. ಕೆಲವು ವಾಹನಗಳು ನೇರವಾಗಿ ಪೆಟ್ರೋಲ್ ಅಥವಾ ಡೀಸೆಲ್‍ನಿಂದ ಓಡುವುವಾದರೆ ಇನ್ನು ಕೆಲವಕ್ಕೆ ಕೊಂಚ ಪೆಟ್ರೋಲ್ ಕೊಂಚ ಆಯಿಲ್ ಹಾಕಬೇಕು. ಸರ್ಕಾರವೆಂಬ ವಾಹನ ಎರಡನೆಯ ಜಾತಿಗೆ ಸೇರಿದ್ದು – ಕರೆನ್ಸಿಯ ಇಂಧನದ ಜೊತೆಜೊತೆಗೆ ಕರೆಪ್ಷನ್ನಿನ ಆಯಿಲ್ ಬೆರೆಸಿದರೆ ನಿದ್ದೆಬುಗುರಿಯಂತೆ (ಹೆಂಡತಿ ಕಣ್ಣಗಲಿಸಿದಾಗ ಸೈಲೆಂಟ್ ಝೋನಿಗೆ ತಲುಪುವ ಹೆನ್‍ಪೆಕ್ಡ್ ಹಸ್ಬೆಂಡ್‍ನಂತೆ ಏನೇನೂ ಸದ್ದು ಮಾಡದೆ ತಿರುಗುವ ಬುಗುರಿಯನ್ನು ನಿದ್ದೆಬುಗುರಿ ಎನ್ನುತ್ತಿದ್ದೆವು) ಕಾರ್ಯ ನಿರ್ವಹಿಸುತ್ತದೆ. ವಿರೋಧಪಕ್ಷಗಳಿಗೆ ಆಡಳಿತಪಕ್ಷ ಮಾಡಿದುದೆಲ್ಲ ಇಂಧನವೇ. ರಸ್ತೆಗೆ ಟಾರ್ ಹಾಕಿಸುತ್ತೇವೆ ಎಂದರೆ ‘ಸಾರ್ವಜನಿಕರ ಓಡಾಟಕ್ಕೆ ತೊಂದರೆ. ರಾತ್ರಿ ಟಾರ್ ಹಾಕಿಸಿ’ ಎನ್ನುತ್ತವೆ; ರಾತ್ರಿ ಟಾರ್ ಕೆಲಸ ಆರಂಭಿಸಿದರೆ ‘ರಾತ್ರಿಯೆಲ್ಲ ಸದ್ದಿನಿಂದ ಸಾರ್ವಜನಿಕರ ನಿದ್ರೆ ಕೆಟ್ಟು, ಅವರ ಆರೋಗ್ಯ ಹದಗೆಡಲಿ. ಹಾಗಾದಾಗ ಮಾರಾಟವಾಗುವ ಔಷಧಗಳ ಮೇಲಿನ ಜಿಎಸ್‍ಟಿಯಿಂದ ಆದಾಯ ಹೆಚ್ಚಾಗಲಿ ಎಂಬುದು ಸರ್ಕಾರದ ಹುನ್ನಾರ’ ಎನ್ನುತ್ತವೆ. ನಮ್ಮ ವಾಹಿನಿಗಳಿಗಂತೂ ಯಾರದೋ ಎರಡನೆಯ ಹೆಂಡತಿ ಇನ್ನಾರಿಗೋ ಮೂರನೆ ಹೆಂಡತಿಯಾದರೆ, ಯಾರೋ ಎಲ್ಲೋ ಗರ್ಭಿಣಿಯಾದರೆ, ಯಾರೋ ಯಾರಿಗೋ ಕಚಗುಳಿ ಇಟ್ಟರೆ, ಯಾವುದೋ ನಾಯಿ ಯಾವುದೋ ಧರ್ಮಗುರುವಿಗೆ ಬೊಗಳಿದರೆ ಅಂದಿನ ಇಡೀ ವಾರ್ತಾ ಅವಧಿಗೆ ಇಂಧನ ದೊರೆತಂತೆ. ಈ ಎಲ್ಲ ಇಂಧನಗಳನ್ನು ಪೂರೈಸಲು ಹಾಕಿಕೊಳ್ಳುವ ಯೋಜನೆಗಳೇ ಇಂಧನ ಉರುಫ್ ಗ್ಯಾಸ್ ಉರುಫ್ ಅನಿಲ ಯೋಜನೆಗಳೆಂದು ಪರಿಗಣಿಸಲಾಗುತ್ತದೆ. 

ಸಂಸ್ಕೃತದಲ್ಲಿ ಅಕ್ಷರಕ್ಷರವೂ ಅರ್ಥಪೂರ್ಣ. ಅ ಎಂದರೆ ಇರುವ ಹಲವಾರು ಅರ್ಥಗಳಲ್ಲಿ ಅಂತಃಪುರ ಎಂಬುದೂ ಒಂದು. ಅಂತೆಯೇ ನಿ ಎಂದರೆ ಆದೇಶ; ಲ ಎಂದರೆ ಭಯ ಎಂಬ ಅರ್ಥಗಳಿವೆ. ಅನಿಲ ಎಂದರೆ ಅಂತಃಪುರದ ಆದೇಶದ ಭಯ ಎಂದಾಯಿತು. ಇದು ನೇರವಾಗಿ ಅಯೋಧ್ಯೆಯ ಕೋಪಗೃಹಲಲನೆಗೆ ಸಲ್ಲುವ ಮಾತು. ‘ಕಿರಿರಾಣಿಯು ಕೋಪಗೃಹದಲ್ಲಿದ್ದಾಳೆ’ ಎಂದಾಗಲೇ ದಶರಥನು ಮನದಲ್ಲೇ ‘ಅವಳು ಕಿರಿರಾಣಿಯಲ್ಲ, ಕಿರಿಕಿರಿರಾಣಿ’ ಎಂದುಕೊಂಡಿದ್ದಾನು. ‘ಅನಿಲ ಯೋಜನೆ’ ಎಂದರೆ ಅಂತಃಪುರದಿಂದ ಆದೇಶ ಹೊರಡಲು ಅನ್ವಯಿಸಬೇಕಾದ ಯೋಜನೆ, ಅರ್ಥಾತ್ ಮಂಥರಾಮಂತ್ರಾಲೋಚನೆ ಎಂದಾಯಿತು. ಇಂತಹ ‘ಅನಿಲ ಯೋಜನೆ’ಯಿಂದ ಜಗತ್ತಿಗೇ ಒಳ್ಳೆಯದಾದುದಿದೆ. ಸುರುಚಿಯ ಆದೇಶದ ಮೇರೆಗೆ ಉತ್ತಾನಪಾದನು ನಡೆದುಕೊಳ್ಳದಿದ್ದರೆ ಧ್ರುವನು ಧ್ರುವನಕ್ಷತ್ರವಾಗುತ್ತಿರಲಿಲ್ಲ, ನಾವಿಕರಿಗೆ ನಾರ್ತ್ ಸ್ಟಾರ್ ಇಲ್ಲದಿದ್ದರೆ ಪ್ರಯಾಣವೇ ಕಷ್ಟವಾಗುತ್ತಿತ್ತು. ಕೈಕೇಯಿ-ಮಂಥರೆಯ ಜಂಟಿ ಅನಿಲಯೋಜನೆ ಇಲ್ಲದಿದ್ದರೆ ರಾವಣ ಇಂದಿಗೂ ನಗರಗಳಿಗೆ ಬಂದಾಗಲೆಲ್ಲ ಕರೆಂಟ್ ಲೈನಿಗೆ ಹತ್ತರಲ್ಲೊಂದು ತಲೆಯಾದರೂ ಸಿಲುಕಿಕೊಂಡು ‘ಕರೆಂಟ್ ಅಫೇರ್ಸ್’ನ ನೇರ ಅನುಭವ ಹೊಂದುವಂತಾಗುತ್ತಿತ್ತು. 

ಅ ಎಂದರೆ ವಿಷ್ಣು, ನಿ ಎಂದರೆ ಆದೇಶ, ಲ ಎಂದರೆ ದೀಪ್ತಿ ಎಂಬ ಅರ್ಥವನ್ನು ಅನ್ವಯಿಸಿದಾಗ ವಿಷ್ಣುವಿನ ಆದೇಶದ ದೀಪ್ತಿಯೆಂಬ ಅರ್ಥವು ಸಮುದ್ರಮಥನಕಾಲದ ಅಮೃತಹಂಚುವಿಕೆಯ ಸಂದರ್ಭವನ್ನು ನೆನಪಿಗೆ ತರುತ್ತದೆ. ರಕ್ಕಸರಿಗೆ ಮೋಹಿನಿಯ ರೂಪದ ವಿಷ್ಣು ನೀಡಿದ ಆದೇಶದ ಪ್ರಕಾಶದಲ್ಲಿ ಮೊದಲೇ ಮಂಕರಾದ ರಾಕ್ಷಸರು ಮತ್ತಷ್ಟು ಮಂಕಾದುದನ್ನು ಅನಿಲ ಯೋಜನೆ ಎನ್ನಬಹುದು. ಅಂತೆಯೇ ಮೋಹಿನಿಯ ಆದೇಶದ ಪ್ರಕಾಶದಲ್ಲಿ ತನ್ನ ತಲೆಯಮೇಲೆ ತಾನೇ ಕೈಯಿಟ್ಟುಕೊಂಡು ಸುಟ್ಟುಹೋದ ಭಸ್ಮಾಸುರನ ಕಥೆಯೂ ಅನಿಲ ಯೋಜನೆಯೇ ಆಗಿದೆ. 

ಹಿಟ್ಲರನ ಕಾಲದಲ್ಲಿ ಅನಿಲಕ್ಕೊಂದು ಕೊಠಡಿಯೇ ಇದ್ದಿತಂತೆ. ಗ್ಯಾಸ್ ಚೇಂಬರ್ ಎಂದು ಕರೆಯುವ ಈ ಕೊಠಡಿ ಲಕ್ಷಾಂತರ ಜನರ ಫೈನಲ್ ಡೆಸ್ಟಿನೇಷನ್ ಆಗಿತ್ತು. ಈಗ ಗ್ಯಾಸ್ ಚೇಂಬರ್ ಬೇರೆ ಅರ್ಥವನ್ನೇ ಪಡೆದಿದೆ – ಅಪಾರ್ಟ್ಮೆಂಟಿನ ಎಲ್ಲರ ಮನೆಯ ಸಿಲಿಂಡರುಗಳನ್ನು ಒಟ್ಟುವ ಕೊಠಡಿಯನ್ನು ಗ್ಯಾಸ್ ಚೇಂಬರ್ ಎಂದು ಕರೆಯಬಹುದೆಂದು ಅನರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ರಸಾಯನಶಾಸ್ತ್ರದಲ್ಲಿ ಅನಿಲಗಳ ದಂಡೇ ಇದೆ. ಒಂದೊಂದು ಅನಿಲವನ್ನು ಹೆಕ್ಕಿ ಒಂದೊಂದು ಗುಣವನ್ನು ಅನ್ವಯಿಸಿ ತತ್ಸಂಬಂಧಿತ ಯೋಜನೆಗಳನ್ನು ಅರಸತೊಡಗಿದರೆ ಒಂದಷ್ಟು ಪುಸ್ತಕಗಳಿಗಾಗುವಷ್ಟು ಸಾಮಗ್ರಿ ದೊರೆತೀತು. ನಗುವುದೇ ಇಲ್ಲವೆಂದು ವ್ರತ ತೊಟ್ಟವರಲ್ಲೂ ನಗೆಯುಕ್ಕಿಸುವ ನೈಟ್ರಸ್ ಆಕ್ಸೈಡ್ ಅನಿಲ, ಭೂಮಿಯನ್ನು ಹಸಿರಾಗಿಲು ಅವಶ್ಯವಾದುದು ಓಝೋನ್ ಅನಿಲ; ಇಂತಹ ಹಲವಾರು ಅನಿಲಗಳನ್ನು ಒದಗಿಸುವ ಯೋಜನೆಗಳೆಲ್ಲ ಅನಿಲ ಯೋಜನೆಗಳೇ. 

ನಿಲದೆ ಓಡುವ ಇಂತಹ ಲೇಖನಗಳನ್ನೂ ಅ-ನಿಲ ಎಂದೂ, ಇಂತಹ ಲೇಖನಗಳನ್ನು ಬರೆಯಿರೆಂಬ ಯೋಜನೆಗೆ ತಳಪಾಯ ಹಾಕುವುದನ್ನು ಅನಿಲ ಯೋಜನೆಯೆಂದೂ ಅನು ಶಿವರಾಮರನ್ನು ಅನಿಲ ಯೋಜಕಿಯೆಂದೂ, ಹೊರನಾಡ ಚಿಲುಮೆಯನ್ನು ಅನಿಲ ಯೋಜನೆ ಪ್ರಾಯೋಜಕ ಎಂದೂ ಕರೆದರೆ ಸೂಕ್ತವಾದೀತಲ್ಲವೆ? 


Comments