ಭಾವ ! ನಿಯತ್ತಿಗೇ ಅಭಾವ ! ?

 ಭಾವ !  ನಿಯತ್ತಿಗೇ ಅಭಾವ ! ?

 ಲೇಖಕರು : ಎಂ ಆರ್ ವೆಂಕಟರಾಮಯ್ಯ    



‘ಜಂತೂನಾ ನರಜನ್ಮಂ ದುರ್ಲಭಂ’ ‘ಪರೋಪಕಾರಾರ್ಥಂ ಇದಂ ಶರೀರಂ“ ಎಂದಿದೆ ಭಾರತೀಯ ಸನಾತನ ಧರ್ಮ. ಶಾಸ್ತ್ರ, ಪುರಾಣಗಳು. ಇಂತಹಾ ಶ್ರೇಷ್ಠವಾದ ಮಾನವ ಜನ್ಮವನ್ನು ವ್ಯರ್ಥಗೊಳಿಸದೆ ಸಾರ್ಥಕ ಪಡಿಸಿಕೊಳ್ಳಬೇಕು. ಮಾನವ ಮಾನವನಾಗಿ ವರ್ತಿಸಬೇಕು. ‘ಮಾನವ ಸೇವೆ ಮಾಧವ ಸೇವೆ’ ಎಂದು ಅಗತ್ಯವಿದ್ದವರಿಗೆ ಕೈಲಾದ ಸಹಾಯವನ್ನು ಸಲ್ಲಿಸಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಆದರೆ, ಹೀಗೆ ಮಾಡದೆ ‘ಮಾನವ ದಾನವನಾಗಿ ವರ್ತಿಸಿದರೆ ‘! ? ಪಾಪ, ಪುಣ್ಯ, ದಯೆ, ಧರ್ಮಗಳ ವಿವೇಚನೆ ಇಲ್ಲದೆ, ನೆಂಟರಲ್ಲೇ ತಂಟೆಮಾಡಿ ದಾನವನಂತೆ ವರ್ತಿಸಿದರೆ !  ನನ್ನ ಗೆಳೆಯನಿಂದ ನಾ ತಿಳಿದ ಕೆಲವು ದಶಕಗಳ ಹಿಂದಿನ ಒಂದು ಪ್ರಸಂಗ ಹೀಗಿದೆ :

     ಆಕೆ ಶ್ರೀಮತಿ. ಅಂದು ೩೪-೩೫ ರ ವಯಸ್ಸಿನ ಅನಕ್ಷರಸ್ತ ಗೃಹಿಣಿ. ೫೬-೫೭ ರ ವಯಸ್ಸಿನ ಶಂಕರಪ್ಪ ಈಕೆಯ ಪತಿ. ಶ್ರೀಮತಿ ಈತನ ಎರಡನೆಯ ಪತ್ನಿ. ದಂಪತಿಗಳ ನಡುವೆ ವಯಸ್ಸಿನ ಅಧಿಕ ಅಂತರದ ಕಾರಣ, ಸಂತಾನ ಭಾಗ್ಯ ಒದಗಿರಲಿಲ್ಲ. ೧೦-೧೨ ವರ್ಷಗಳ ಸಾಂಸಾರಿಕ ಜೀವನ ಸಾಗಿಸುವ ವೇಳೆಗೆ, ಶಂಕರಪ್ಪ ಹಲವಾರು ಕಾಯಿಲೆಗಳಿಗೆ ತುತ್ತಾಗಿ, ಜರ್ಜಿರಿತ ದೇಹ ಹೊತ್ತು, ಹಾಸಿಗೆ ಹಿಡಿದರು. ಕೆಲ ಕಾಲದ ನಂತರ, ಈತ ಧೀರ್ಘ ಕಾಯಿಲೆಯ ಕಾರಣ, ನಿಧನರಾದರು. ಅದರೊಂದಿಗೆ ಆತ ಭವ ಬಂಧನದಿಂದ ಬಿಡುಗಡೆ ಹೊಂದಿದರು.

     ಹಿರಿಯನ ನಿಧನದ ಕಾರಣ, ಆಗಮಿಸಿದ್ದ ಬಂಧುಗಳೆಲ್ಲಾ ೧-೨ ದಿನಗಳಲ್ಲೇ ತಮ್ಮ ತಮ್ಮ ಸಂಸಾರ ನಿರ್ವಹಣೆಯ ನೆವದಿದ ಒಬ್ಬೊಬ್ಬರಾಗಿ ಶ್ರೀಮತಿಯ ಮನೆಯಿಂದ ಕಾಲ್ತೆಗೆದರು. ಒಂಟಯಾದ ಶ್ರೀಮತಿ ‘ಯಾರಲ್ಲಿ ಹೇಳಿಕೊಳ್ಳಲಿ ನನ್ನ ಕಷ್ಟ, ದುಃಖಗಳನ್ನು’ ? ಎಂದು ರೋಧಿಸತೊಡಗಿದಳು. ಆ ಕುಟುಂಬದ ಜೊತೆ ವಿಧಿಯಾಡಿದ ಆಟ, ಮನೆಯ ಯಜಮಾನನ ನಿರ್ಗಮನ, ಶ್ರೀಮತಿಯ ಒಂಟಿತನ, ಆಕೆಯ ಅಸಹಾಯಕತೆ, ವ್ಯವಹಾರ  ಜ್ಞಾನದ ಕೊರತೆ, ಇತ್ಯಾದಿಗಳನ್ನು ಗಮನಿಸಿದ ಆಕೆಯ ಮನೆಯಲ್ಲಿದ್ದ ಬಾಡಿಗೆದಾರರು ಒಬ್ಬೊಬ್ಬರಾಗಿ ಸಕಾಲದಲ್ಲಿ ಬಾಡಿಗೆ ಸಲ್ಲಿಸಲು ತಕರಾರು, ವಿಳಂಬ ನೀತಿ ಶುರುಮಾಡಿದರು. ಬಾಡಿಗೆಯ ಹಣವೇ ಆಕೆಯ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಕಾರಣ, ತನ್ನಲ್ಲಿದ್ದ ಅಲ್ಪ ಸ್ವಲ್ಪ ಧೈರ್ಯ ಒಟ್ಟುಗೂಡಿಸಿ, ಬಾಡಿಗೆದಾರರ ಮನವೊಲಿಸಿದಳು, ಇದಕ್ಕೆ ಜಗ್ಗದಾಗ, ನೆರೆಹೊರೆಯ ಹಿರಿಯರ ನೆರವು ಆಕೆ ಪಡೆದು ದಿನಗಳನ್ನು ಕಳೆದಳು. 

ಏನೇ ಆದರೂ, ‘ಊರು ಅಂದ ಮೇಲೆ ಹೊಲಗೇರಿ’ ಇದ್ದೇ ಇರುತ್ತದೆ ಅಲ್ವೇ !  ಕೆಲ ಒಳ್ಳೆಯವರ ನಡುವೆ, ಒಬ್ಬಿಬ್ಬ ತರಲೆ, ತಂಟೆಕೋರರೂ ಇರುವುದು ಸಹಜವೇ. ಹೀಗೇನೇ, ಆ ಬಾಡಿಗೆದಾರರ ಪೈಕಿ, ಒಬ್ಬ, ನೆರೆಹೊರೆಗೆ ಹೆದರದವ, ತಾನಿರುವ ಮನೆಗೆ ಬಾಡಿಗೆ ಜಾಸ್ತಿ, ಅದನ್ನು ಕಡಿಮೆ ಮಾಡಿ ಎಂದ, ಕೆಲ ತಿಂಗಳುಗಳ ನಂತರ, ಮತ್ತೆ  ಅವನು  ತನಗೆ ಕೆಲವು ಕಷ್ಟಗಳಿವೆ, ಬಾಡಿಗೆ ಕೊಡಲು ನಿಧಾನವಾಗುತ್ತೆ, ಸ್ವಲ್ಪ ತಡಕೋಬೇಕು ಎಂದವ, ಬಾಡಿಗೆ ನಿಧಾನ ಮಾಡಿದ. ‘ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ’ ಎಂಬಂತೆ, ನನ್ನ ಪಕ್ಕದವ ಮಾಡಿದಂತೆ ನಾನೂ ಏಕೆ ಬಾಡಿಗೆ ಕೊಡುವುದು ನಿಧಾನ ಮಾಡಬಾರದು ? ಹೇಗಿದ್ದರೂ ಒಂಟಿ ಹೆಂಗಸು, ಕೈಲಾಗದವಳು, ಈಕೆಗೆ ಯಾರೂ ಸಪೋರ್ಟ್ ಇಲ್ಲ, ನಾವು ಜೋರು ಮಾಡಿದರೆ ಆಕೆ ನಮಗೆ ಹೆದರಿ ಸುಮ್ಮನಾಗಬಹುದು. ಏನು ಮಾಡುತ್ತಾಳೋ ನೋಡಿಯೇ ಬಿಡೋಣ ಎಂಬ ಧೈರ್ಯ ವಹಿಸಿದ ಇತರ ಬಾಡಿಗೆದಾರರು ನೆರೆಯವನ ಹಾದಿ ಹಿಡಿದು ಬಾಡಿಗೆ ಕೊಡಲು ನಿಧಾನಮಾಡಿದರು. ಇವರ ಒಗ್ಗಟ್ಟು ನೋಡಿ ಶ್ರೀಮತಿ ಬೆಚ್ಚಿಬಿದ್ದಳು. ಎಲ್ಲರೂ ಬಾಡಿಗೆ ಕೊಡದಿದ್ದರೆ ತಾ ಜೀವನ ನಡೆಸುವುದು ಹೇಗೆ ? ಎನಿಸಿ, ಭಯಭೀತಳಾದಳು. ತನ್ನೆಲ್ಲಾ ತೊಂದರೆಗಳನ್ನು ಪರಿಹರಿಸಿ, ಸುಗಮ ಜೀವನಕ್ಕೆ ತನಗ್ಯಾರು ಸಹಾಯ ಮಾಡುವವರು ? ನಾ ಯಾರಿಗೆ ಮೊರೆ ಇಡಲಿ ! ಎಂದು ದಿಕ್ಕುಗಾಣದೆ ಕಂಬನಿ ಮಿಡಿಯಲಾರಂಭಿಸಿದಳು. ಇಂತಹಾ  ಆಪತ್ಕಾಲದಲ್ಲಿ, “ನಾ ಇರುವೆ ನಿನ್ನ ಸಹಾಯಕ್ಕಾಗಿ” ಎಂದು ಮುಂದೆ ಬಂದಿದ್ದು, ಶ್ರೀಮತಿಯ ಭಾವ, ಶಾಮಣ್ಣ. 

      ವಯಸ್ಸಿನಲ್ಲೂ ಹಿರಿಯ. ವ್ಯವಹಾರಗಳಲ್ಲಿ ಅನುಭವಸ್ಥ. ಮನೆಯ ನಿರ್ಮಾಣ, ಸೈಟು, ಮನೆಗಳ ಖರೀದಿ, ಮಾರಾಟ, ಭೋಗ್ಯ, ಆಧಾರ, ಬಾಡಿಗೆ ವಸೂಲಿ, ಕೋರ್ಟು, ಪೋಲೀಸು ಮೊದಲಾದ ವ್ಯವಹಾರಗಳಲ್ಲಿ ಪಳಗಿದವ. ಒಟ್ಟಿನಲ್ಲಿ, ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಯಂತೆ,  ಆಲ್ ರೌಂಡರ್ ಆಗಿದ್ದವ. ಯಾವುದೇ ತಂಟೆ ತಕರಾರುಗಳು ಬಂದಾಗ, ಈತನನ್ನು ಬಳಸಿಕೊಂಡರೆ, ಪರಿಹಾರ, ಅನುಕೂಲ, ಸಾಧ್ಯ ಎಂಬ ಪ್ರಚಾರ, ಖ್ಯಾತಿ ಬಂಧುಗಳಲ್ಲಿ ಈತ ಗಳಿಸಿದ್ದ. ಆದರೆ ‘ದಂಡಿನಲ್ಲಿ ಸೋದ ಮಾವನೇ ? ಎಂಬಂತೆ ತನಗೆ ಲಾಭವಿಲ್ಲದ ಯಾವುದೇ ವ್ಯಹಾರದಲ್ಲಿ ಈತ ಕೈ ಇಡುತ್ತಿರಲಿಲ್ಲ. ’ಪೈಸಾಮೆ ಹೈ ಪರಮಾತ್ಮ’ ಎಂಬುದು ಶಾಮಣ್ಚನದು ನಿತ್ಯ ಮಂತ್ರವಾಗಿತ್ತು. ‘ಜೇನು ಕಿತ್ತವ, ತನ್ನ ಕೈಗೆ ಅಂಟಿದ ಜೇನನ್ನು ನೆಕ್ಕದೆ ಬಿಡುತ್ತಾನೆಯೇ’ ! ಹಾಗೆ ಬಿಟ್ಟವ ದಡ್ಡ, ಮೂರ್ಖ, ಅವಿವೇಕಿ ಎಂಬುದು ಈತನ ನೀತಿ, ನಿಲುವಾಗಿತ್ತು. ತಂಟೆಕೋರ ಬಾಡಿಗೆಯವನ ತರಲೆತನ ಕೇಳಿದ ಶಾಮಣ್ಣ, ಓಹೋ ! ಹಾಗಂತಾನಾ ಅವ ! ಅವನಿಗೆ ಗೊತ್ತಿಲ್ಲ ಈ ಶಾಮಣ್ಣನ ವಿಚಾರ, ಎಂತೆಂತಹಾ ಕಿಲಾಡಿಗಳನ್ನೇ ಪಲ್ಟಿ ಹೊಡೆಸಿದೀನಿ, ಇನ್ನು ಇವನು ಯಾವ ಲೆಕ್ಕ , ಇರಲಿ, ‘ನಾನೇನು, ನನ್ನ ಪವರೇನು’  ಎಂಬುದರ ರುಚಿ ಅವನಿಗೆ ತೋರಿಸುತ್ತೇನೆ ಎಂದು ಚಾಲೆಂಜ್ ಮಾಡಿ ರಂಗಕ್ಕೆ ಇಳಿದ, ಶಾಮಣ್ಣ. ತರಲೆ ಬಾಡಿಗೆಯವ ಇಲ್ಲಿದ್ದರೇ ತಾನೇ ಇವನ ಬೆಂಬಲ ಅಕ್ಕ ಪಕ್ಕದವರಿಗೆ ಸಿಗುವುದು ! ಅದಕ್ಕಾಗಿ ಮೊದಲು ಈ ತರಲೆಯನ್ನೇ ಹೇಗಾದರೂ ಮಾಡಿ, ಮನೆ ಬಿಡಿಸು ಭಾವಾ, ಎಂದ ಬೇಡಿಕೊಂಡಳು ಶ್ರೀಮತಿ. ‘ಇವನಿಂದ ಬಾಡಿಗೆ ಬಾಕಿ ಬಹಳ ಉಳಿದಿದೆ, ಸರಿಯಾಗಿ ಬಾಡಿಗೆ ಕೊಡುತ್ತಿಲ್ಲ, ಆದ್ದರಿಂದ ಮನೆ ಕೂಡಲೇ ಬಿಡಿಸಿ ಅಸಹಾಯಕ ಹೆಣ್ಣಿಗೆ ಸಹಾಯ ಮಾಡಿ ಎಂದು ಕೋರಿ’ ವಕೀಲನ ಮುಖಾಂತರ. ಕೋರ್ಟಿಗೆ ಮನವಿಮಾಡಿಸಿದ, ತರಲೆ ಬಾಡಿಗೆದಾರನನ್ನು ಕೋರ್ಟು ಹತ್ತಿಸಿದ, ಶಾಮಣ್ಣ.

ಯಾಕೆ ಬೇಕಾಗಿತ್ತು ಭಾವ, ಈ ಕೋರ್ಟು, ಲಾಯರುಗಳ ಪಜೀತಿ, ನ್ಯಾಯ, ಪಂಚಾಯತಿಗಳ ಮೂಲಕ ಅವನನ್ನು ಮನೆ ಬಿಡಿಸಿದ್ದರೆ ಆಗ್ತಿತ್ತಲ್ಲಾ ! ಎಂದು ಶ್ರೀಮತಿಯ ಸಲಹೆಗೆ, ಏ, ನೀನೊಬ್ಬ ಶುದ್ಧ ದಡ್ಡಿ, ನಿನಗೇನೂ ಗೊತ್ತಾಗುವುದಿಲ್ಲ. ಬಿಡು, ಹೆಂಗಸಿಗೇನು ತಿಳಿಯುತ್ತೆ ಇಂತಹಾ ವ್ಯವಹಾರಗಳು ! ಯಾರನ್ನು, ಹೇಗೆ ಬಗ್ಗಿಸಬೇಕೆಂಬುದು ನನಗೆ ತಿಳಿಯದೇ ! ಅಡುಗೆ ಮನೆಯ ವಿಷಯ ನೀ ನೋಡು, ಕೋರ್ಟಿನ ವಿಷಯ ನನಗೆ ಬಿಡು. ಎಲ್ಲಾ ನೋಡಿಕೊಳ್ಳೋಕೆ ನಾನಿದ್ದೀನಲ್ಲಾ ! ಇದಕ್ಕೆ ಬೇಕಾದ ಹಣ ಮಾತ್ರ ನಾ ಕೇಳಿದಾಗ ನೀ ಕೊಡುತ್ತಿರು, ಮಿಕ್ಕ ವಿಷಯ ನನಗಿರಲಿ ಎಂದು ಮುಸಿಮುಸಿ ನಕ್ಕ ಭಾವ, ತನ್ನ ನೆರೆತ ತಲೆ ನೇವರಿಸಿಕೊಂಡ. ಏನಾದರೂ ಮಾಡು ಭಾವ, ನಾ ನಿನ್ನೇ ನಂಬಿದ್ದೀನಿ, ‘ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು’ ಎಂದು ದೀನ ವದನೆಯಾಗಿ ಕೈ ಮುಗಿದು ನಿಂತಳಾ ನಾದಿನಿ,  ಶ್ರೀಕೃಷ್ಣನ ಮುಂದೆ ಅರ್ಜುನ ದೈನ್ಯದಿಂದ ನಿಂತಂತೆ. ಎದುರಿಗಿದ್ದವ ತನ್ನ ದೇವರೇ ಎಂಬಂತೆ. ನೀ ಏನೂ ಯೋಚಿಸಬೇಡ, ಎಂದು ಅಭಯ ನೀಡಿದ ಅ ಭಾವ, 

     ತನ್ನ ವಿರುದ್ಧ ಕೇಸು ಹಾಕಿದಳೇ ಈ ಹೆಣ್ಣು ! ಇವಳಿಗೆ, ಭಾವನಿಗೆ ಏಳು ಕೆರೆ ನೀರು ಕುಡಿಸಿ, ನಾ ಯಾರು, ನಾ ಇರುವುದೆಲ್ಲಿ ಎಂಬುದನ್ನು ಪರಿಚಯಿಸ್ತೇನೆ ಎನ್ನುತ್ತಾ ತನ್ನಲ್ಲೇ ತಾ ನಕ್ಕ ಬಾಡಿಗೆದಾರ. ಇಲ್ಲಿ ವಿಷಯದ ಸ್ವಾರಸ್ಯ ಎಂದರೆ, ಆ ತಂಟೆಕೋರ ಬಾಡಿಗೆದಾರ ಕೆಲಸದಲ್ಲಿದ್ದದ್ದೂ ರಾಜ್ಯದ ಒಂದು ಕೆಳ ನ್ಯಾಯಾಲಯದಲ್ಲಿ. ಅಲ್ಲಿನ ಕಾರ್ಯ ವೈಖರಿ, ಕೇಸುಗಳ ಏಳು ಬೀಳುಗಳು, ಏನು ಮಾಡಿದರೆ ಕೇಸು ಹಾಕಿರುವನನ್ನು ಮಣ್ಣು ಮುಕ್ಕಿಸಬಹುದು ಎಂಬೆಲ್ಲಾ ಒಳ ಮರ್ಮಗಳನ್ನು ಇವ ಚೆನ್ನಾಗಿ ಅರಿತಿದ್ದ.  ಹೀಗಾಗಿ, ಪ್ರತಿ ಸಲ ಕೇಸು ವಿಚಾರಣೆಗೆ ಬಂದಾಗಲೂ, ತನಗೆ ನೋಟಿಸ್ ಸರ್ವಾಗಿಲ್ಲ, ತನ್ನ ಆರೋಗ್ಯ ಸರಿಯಿಲ್ಲ ತನ್ನ ವಕೀಲ ಬೇರೆ ಕೋರ್ಟಿನಲ್ಲಿ   ಇಂಪಾರ್ಟೆನ್ಟ್ ಕೇಸಿನಲ್ಲಿ ಎಂಗೇಜ್ ಆಗಿದ್ದಾನೆ, ಹೀಗೆ ಯಾವುದೋ ಒಂದು ಕಾರಣ ನೀಡಿ, ಕೇಸನ್ನು ಧೀರ್ಘ ಕಾಲಕ್ಕೆ ವಾಯಿದೆ ಹಾಕಿಸಲು ಶುರು ಮಾಡಿದ. 

ಇತ್ತ, ಪ್ರತಿ ಸಾರಿ ಕೇಸು ಬಂದಾಗಲೂ, ಏ, ಶ್ರೀಮತಿ, ಒಂದು ಇಪ್ಪತ್ತು (  ೬-೭ ದಶಕಗಳ ಹಿಂದಿನ ಕಾಲವದು) ಇತ್ತ ಕೊಡು, ಕೋರ್ಟು ಖರ್ಚಿಗೆ, ಲಾಯರಿಗೆ ಹಣ ಕೊಡದಿದ್ದರೆ ಅವ ಕೇಸಿನಲ್ಲಿ ಮುತುವರ್ಜಿ ವಹಿಸುವುದಿಲ್ಲ ಎಂದು ನಾದಿನಿಯಿಂದ ಹಣ ಪೀಕಲಾರಂಭಿಸಿದ. ಶಾಮಣ್ಣ,  ಭಾವನ ಮಾತು ನಿಜವೇನೋ, ಕೋರ್ಟು ವ್ಯವಹಾರ ಅಂದರೆ ಹೀಗೇನೇನೋ ! ಎಂದು ಹಾಗೋ, ಹೀಗೋ, ಹ್ಯಾಗೋ, ಬಂದ ಬಾಡಿಗೆ ಹಣದಿಂದ ಹಣ ಹೊಂದಿಸಿ, ಭಾವ ಕೇಳಿದಾಗೆಲ್ಲಾ ಹಣ ಕೈಲಿಟ್ಟು ‘ಕೃಷ್ಣಾರ್ಪಣಮಸ್ತು’ ಎಂದು ಕೈ ಮುಗಿಯುತ್ತಿದ್ದಳು. ನಾದಿನಿಯಿಂದ ಕಿತ್ತ ಹಣವನ್ನು ಶಾಮಣ್ಣ ಜೇಬಿಗೆ ಸೇರಿಸಿ, ಲಾಯರ್ ಹಣ ಕೇಳದಾಗೆಲ್ಲಾ, ಏನು ಮಾಡಲಿ ಸ್ವಾಮಿ. ನನ್ನ ಕಷ್ಟ ಪರಿಹರಿಸು ಭಾವಾ, ನೀನೇ ನನಗೆ ದಿಕ್ಕು ಎಂದು ನಾದಿನಿ ನನಗೆ ದುಂಬಲು ಬಿದ್ದಿದ್ದಾಳೆ, ಇದೆಲ್ಲಾ ಖರ್ಚಿನ ಬಾಬ್ತು ಎಂದರೆ, ನನಗೆ ತಾಪತ್ರಯ, ಹೇಗಾದರೂ ನೀನೇ ಹಣ ಹೊಂದಿಸು ಎಂದು ನನ್ನ ಮೇಲೆ ಬಿದ್ದಿದ್ದಾಳೆ. ಅವಳ ಕಷ್ಟ ಕೇಳಲಾರೆ, ನಿಮಗೆ ಹಣ ಇಲ್ಲ ಎನ್ನಲಾರೆ, ಅವಳ ಪರವಾಗಿ, ನಾನೇ ಅಲ್ಲೋ, ಇಲ್ಲೋ, ಹಣ ಬಡ್ಡಿಗೆ ತಂದಿದೀನಿ, ಸದ್ಯಕ್ಕೆ ನೀವು ಇಷ್ಟು ಇಟ್ಟುಕೊಂಡು ಕೇಸು ನಡೆಸಿ, ಮುಂದೆ ನಿಮ್ಮ ಫೀಸಿಗೆ ದೋಕಾ ಇಲ್ಲದಂತೆ ನಾ ನೋಡಿಕೊಳ್ಳುವೆ ಎನ್ನುತ್ತಾ, ಶ್ರೀಮತಿ ತನಗೆ ಕೊಟ್ಟ ಹಣದ ಪೈಕಿ, ಒಂದಷ್ಟು ಹಣ ಲಾಯರಿಗೆ ನೀಡಿ, ಉಳಿದ ಹಣವನ್ನು, ‘ಇದು ಇಂದಿನ ಲಾಭ’ ಎಂದು ತನ್ನ ಜೇಬಿಗಿಳಿಸುತ್ತಿದ್ದ ಶಾಮಣ್ಣ. ‘ಲಿವ್ ಅಂಡ್ ಲೆಟ್ ಲಿವ್, ತಾನೂ ಬದುಕಬೇಕು, ತನ್ನ ನಂಬಿದ ಲಾಯರೂ ಬದುಕಬೇಕು’ ಎಂಬ ಉದಾರ ತತ್ವ, ಪಾಲಿಸಿ ಶಾಮಣ್ಣನದು, 

ತಿಂಗಳುಗಳು ಉರುಳಿದುವು.. ಅದೊಂದು ದಿನ ಕೇಸು ಅಂತಿಮ ವಿಚಾರಣೆಗೆ ಬಂದಿತು. ಶ್ರೀಮತಿಯ ಲಾಯರು, ಹಳೆಯ ಕಾಲದವ. ತನ್ನ ವೃತ್ತಿ ಧರ್ಮಕ್ಕೆ ಚ್ಯುತಿ ಬಾರದಂತೆ, ನಿಯತ್ತಾಗಿ, ಬಲವಾದ ಕಾರಣಗಳನ್ನು ಕೋರ್ಟಿಗೆ ಒದಗಿಸಿ, ತನ್ನ ಕಕ್ಷಿದಾರಳು ಒಬ್ಬ ವಿಧವೆ, ಬಡ ಮಹಿಳೆ, ಅನ್ಯಾಯಕ್ಕೆ, ಶೋಷಣೆಗೆ ಒಳಗಾಗಿದ್ದಾಳೆ, ಆಕೆಗೆ ನ್ಯಾಯ ದೊರಕಿಸಿಕೊಡಬೇಕು, ಬಾಡಿಗೆದಾರನಿಂದ ಬಾಕಿ ಇರುವ ಬಾಡಿಗೆಯನ್ನು ಕೊಡಿಸಿ, ಮನೆ ಖಾಲಿ ಮಾಡಿಸಬೇಕು ಎಂದು ವಾದಿಸಿದರು. ವಾದಗಳನ್ನು ಆಲಿಸಿದ ಕೋರ್ಟು, “ಬಾಡಿಗೆದಾರನ ಮನೆ ಜಫ್ತಿ ಮಾಡಿ, ಅಲ್ಲಿರುವ ವಸ್ತುಗಳನ್ನು ಬಹಿರಂಗ ಹರಾಜು ಮಾಡಿ, ಅದರಿಂದ ಬರುವ ಹಣವನ್ನು ಬಾಡಿಗೆದಾರ ಕೊಡ ಬೇಕಾದ ಬಾಕಿ ಬಾಡಿಗೆಗೆ ಅಡ್ಜೆಸ್ಟ್ ಮಾಡಿ, ಕೂಡಲೇ ಅವನು ಮನೆ ಖಾಲಿ ಮಾಡಲಿ” ಎಂಬ ತೀರ್ಪು ನೀಡಿ, ಕೇಸನ್ನು ಮುಕ್ತಾಯಗೊಳಿಸಿತು. ತೀರ್ಪು ತನ್ನ ಪರ ಆಗಿದೆ ಎಂದು ತಿಳಿದ ಶ್ರೀಮತಿ, ಇನ್ನು ತನ್ನೆಲ್ಲಾ  ಕಷ್ಟಗಳೂ ತೇಲಿ ಹೋದಂತೆ, ಇಷ್ಟು ಕಾಲದಿಂದ ಬಾಕಿ ಇದ್ದ ಬಾಡಿಗೆ ಹಣ ತನ್ನ ಕೈ ಸೇರುತ್ತೆ, ಆ ತಂಟೆಕೋರ ಮನೆಯನ್ನೂ ಬಿಡ್ತಾನೆ, ಉಳಿದ ಬಾಡಿಗೆದಾರರು ತನ್ನನ್ನ ಇನ್ನು ಹೆದರಿಸಲಾರರು ಎಂಬ ಸಂತಸಪಟ್ಟು ಸಮಾಧಾನದ ಉಸಿರುಬಿಟ್ಟಳು, ನೋಡಿದೆಯೇನೇ ಶ್ರೀಮತಿ ! ನನ್ನ ಪವರ್, ನಾ ಕೈ ಇಟ್ಟ ಕಡೆ ಮಟಾಶ್, ಉಳಿಗಾಲವೇ ಇಲ್ಲ ಎಂದು ಭಾವ ಬೀಗಿದ. 

       ಮುಂದೆಂದಾದರೊಂದು ದಿನ, ಎಂತಹಾ ತೀರ್ಪು ಬರುತ್ತೋ, ಆ ತೀರ್ಪು ತನ್ನ ವಿರುದ್ಧವೇ ಆದರೆ ? ಎಂಬ ಸಂಶಯ ಆ ಬಾಡಿಗೆದಾರನಿಗೂ ಇತ್ತು. ಎಷ್ಟಾದರೂ ಅವನೂ ಕೋರ್ಟಿನ ಉದ್ಯೋಗಿಯಲ್ಲವೇ ! ತೀರ್ಪು ಹೇಗಾದರೂ ಬರಲಿ ಎಂಬ ಮುಂಜಾಗ್ರತೆಯಿಂದ ತನ್ನ ಮನೆಯಲ್ಲಿದ್ದ ಬೆಳ್ಳಿ, ಬಂಗಾರದ ಆಭರಣಗಳು, ಬೆಲೆ ಬಾಳುವ ಸಾಮಗ್ರಿಗಳನ್ನು ರಾತ್ರಿ ವೇಳೆಯಲ್ಲಿ ಯಾರಿಗೂ ತಿಳಿಯದಂತೆ ತನ್ನ ಆಪ್ತರ ಮನೆಗೆ ಗುಟ್ಟಾಗಿ ಸಾಗಿಸಿ, ನಿತ್ಯ ಜೀವನಕ್ಕೆ ಬೇಕಾಗಿದ್ದ ಸಾಮಗ್ರಿಗಳನ್ನು ಮಾತ್ರ ಮನೆಯಲ್ಲಿ ಉಳಿಸಿಕೊಂಡಿದ್ದನು. ಬಾಡಿಗೆದಾರನ ಈ ಕರಾಮತ್ತು ಶ್ರೀಮತಿಗಾಗಲಿ, ಆ ಚಾಣಾಕ್ಷ ಶಾಮಣ್ಣನಿಗಾಗಲಿ ಕೊನೆಯವರೆಗೂ ಸುಳಿವೇ ಸಿಗಲಿಲ್ಲ. ಜಫ್ತಿ ಆರ್ಡರ್‌ನೊಡನೆ ಕೋರ್ಟಿನ ಸಿಬ್ಬಂದಿಯನ್ನು ಮನೆಯ ಬಳಿ ಕರೆತಂದ ಶಾಮಣ್ಣ, ಹೂಂ, ಇದೇ ಅವನ ಮನೆ, ಒಳಗೆ ನುಗ್ಗಿ ಎಲ್ಲಾ  ಸಾಮಾನುಗಳನ್ನೂ ಹೊರಗೆ ತಂದಿಡಿ, ಯಾವುದೂ ಬಿಡ ಬೇಡಿ ಎಂದು ಕೂಗಾಡುತ್ತಾ ಆ ಮನೆಯ ಒಳಹೊಕ್ಕ. ಬಾಡಿಗೆದಾರ ತನ್ನ ಕುಟುಂಬ ಸಮೇತ ಹೊರ ಬಂದು ನಿಂತ, ‘ಏನಿದೆ ಅಲ್ಲಿ ಕೊಂಡು ಹೋಗಲು’ ! ಎಂಬ ವಿಶ್ವಾಸದಿಂದ. ಮನೆಯಲ್ಲಿದ್ದ ಸಾಮಾನನ್ನು ಕೋರ್ಟಿನ ಸಿಬ್ಬಂದಿ ಹೊರ ತಂದಿಟ್ಟು, ತಮ್ಮ ಕೆಲಸ ಮುಗಿಸಿದರು. ಅಲ್ಲಿದ್ದ ಸಣ್ಣ ಪುಟ್ಟ ಬೆಲೆ ಬಾಳುವ ಸಾಮಗ್ರಿಗಳ ಬೆಲೆಯನ್ನು ಮನದಲ್ಲೇ ಲೆಕ್ಕಿಸಿ, ಇವುಗಳನ್ನೆಲ್ಲಾ  ಬೇರೆಯವರು ಏಕೆ ಕೊಂಡೊಯ್ಯಬೇಕು ! ಇವಕ್ಕೆ ತಾನಿಲ್ಲವೇ ! ಎನ್ನುತ್ತಾ, ಕೋರ್ಟಿನ ಸಿಬ್ಬಂದಿಯನ್ನು ತನ್ನ ವಶಪಡಿಸಿಕೊಂಡು, ಆ ಸಾಮಗ್ರಿಗಳ ಲಾಟ್‌ನ ಹರಾಜಿಗೆ ಹೊರಗಿನವರು ಬರದಂತೆ ಎಚ್ಚರವಹಿಸಿ, ಆ ವಸ್ತುಗಳನ್ನು ಬೇರೆ ಇಡಿಸಿ, ತನ್ನ ಮನೆಗೆ ಸಾಗಿಸಿದ. ತನಗೆ ಬೇಡದ, ಉಳಿದಂತಹ ವಸ್ತುಗಳ ಹರಾಜಿನ ಬೆಲೆ ಇಷ್ಟೇ ಎಂದು ಕೋರ್ಟಿಗೆ ತಿಳಿಸುವ ಏರ್ಪಾಟು ಮಾಡಿದ, ಶಾಮಣ್ಣ.

 ಈ ಮುಂಡೇಮಗನ ಮನೆಯಲ್ಲಿ ಬೆಳ್ಳಿ, ಬಂಗಾರ, ಏನೇನೋ ಬೆಲೆ ಬಾಳುವ ಸಾಮಗ್ರಿಗಳು ಇವೆ ಅಂತ ಕೋರ್ಟಿನಿಂದ ನಾ ಜಫ್ತಿ ಆರ್ಡರ್ ತಂದರೆ, ಇಲ್ಲೇನಿದೇ ! ಹರಕಲು ಚಾಪೆ, ಮುರಕಲು ಕುರ್ಚಿ, ಪುರಕಲು ಬಟ್ಟೆ, ಹರಿದ ಹಾಸಿಗೆಗಳು, ಆ ಹಳೆ ಸಾಮಾನುಗಳ ಹರಾಜು ದುಡ್ಡು ಬಂದಿದ್ದು ಇಷ್ಟೇ ಎನ್ನುತ್ತಾ, ಇಗೊಳ್ಳೇ, ಹಣ ಎಂದು ಶ್ರೀಮತಿಯ ಕೈಲಿಟ್ಟು, ನಿನ್ನ ಹಣೆಯಬರೆಹ ಹೀಗಿತ್ತು, ನಾನೇನು ಮಾಡಲಿ ಎನ್ನುತ್ತಾ ತನ್ನ ನೆರತ ತಲೆ ಕೆರೆದುಕೊಂಡ, ಶಾಮಣ್ಣ. ನೋಡಿದೆಯಾ, ಒಂದೇ ಏಟಿಗೆ ಎರಡು ಹಕ್ಕಿಗಳು ಉದುರಿದುವು. ಆ ಬಾಡಿಗೇದಾರನ ಮನೆಯಲ್ಲಿನ ಬೆಲೆ ಬಾಳುವ ಸಾಮಗ್ರಿಯೂ ತನಗೇ ಗಿಟ್ಟಿತು. ಇಷ್ಟು ಕಾಲವೂ ಕೋರ್ಟಿಗೆ ಅಲೆದಾಡಿದ್ದಕ್ಕೆ ಹಣಾನೂ ಕಿತ್ತಿದ್ದಾಯ್ತು. ಇನ್ನು, ಇದರಲ್ಲಿ ಆ ಲಾಯರಿಗಿಷ್ಟು ಕೊಟ್ಟು ವ್ಯವಹಾರ ಮುಗಿಸೋಣ ಎನ್ನುತ್ತಾ ಹೊರಹೊರಟ. 

ಲಾಯರನ್ನು ಭೇಟಿ ಮಾಡಿದ ಶಾಮಣ್ಣ, ನಾ ಏನು ಮಾಡಲಪ್ಪಾ ! ಹರಾಜಿನಲ್ಲಿ ಹೆಚ್ಚು ಹಣ ಸಿಗತ್ತೆ, ಅದರಲ್ಲಿ ನಿನ್ನ ಫೀಸು ಪೂರ್ತಿ ಕೊಡೋಣ ಅಂತಿದ್ದೆ. ಆದರೇನು ಮಾಡಲಿ ! ‘ಮ್ಯಾನ್ ಪ್ರಪೋಸಸ್, ಗಾಡ್ ಡಿಸ್‌ಪೋಸಸ್’ ಎಂಬ ಗಾದೆಯಂತೆ ‘ನಾವೊಂದು ಬಗೆದರೆ, ದೈವವೊಂದು ಬಗೆಯಿತು’ ಎಂದು ಸಮಾಧಾನದ ಮಾತುಗಳನ್ನು ಲಾಯರಿಗೆ ಹೇಳಿ, ಕಡಿಮೆ ಫೀಸಿನಲಿ ಕೆಲಸ ಮುಗಿಸಿದ. ಆ ಲಾಯರೋ, ವಯಸ್ಸಾದವ, ಬಲು ಸರಳ, ಸಜ್ಜನ, ಪಾಪ, ಪುಣ್ಯ, ಧರ್ಮಗಳಲ್ಲಿ ನಂಬಿಕೆ ಇಟ್ಟವ, ಬಡ ಹೆಂಗಸು, ವಿಧವೆ, ಈಕೆಯ ಕೇಸಿಗೆ ಹಣ ತೆಕ್ಕೊಳ್ಳುವುದೇ  ಪಾಪವಲ್ಲವೇ ! ನನ್ನ ಕೈಲಾದ ವಾದವನ್ನು ಶ್ರದ್ಧೆಯಿಂದ ಮಾಡಿದ್ದೇನೆ. ಕೇಸು ಜಯಿಸಿಕೊಟ್ಟೆ, ಅಷ್ಟಾದರೂ ಆಕೆಗೆ ನನ್ನಿಂದ ಸಹಾಯವಾಯಿತಲ್ಲಾ ! ಈ ಕೇಸಿನಲ್ಲಿ ಹಣ ನನಗೆ ಕಡಿಮೆ ಸಿಕ್ಕಿರಬಹುದು. ಇರಲಿ, ಮತ್ತೊಂದು ಕೇಸಿನಲ್ಲಿ ದೇವರು ಹೆಚ್ಚು ಹಣ ಕೊಡಿಸ್ತಾನೆ ಎಂದು ದೈವಕ್ಕೆ ಕೈ ಮುಗಿದ, ಆ  ನಿಷ್ಠಾವಂತ ಹಳೆಯ ಕಾಲದ ಲಾಯರು. 

ಶಾಮಣ್ಣನಿಗೆ ಇಂದು ದಿಲ್ ಖುಷ್. ಈ ಅವಿವೇಕಿಗೆ ಹೀಗೇ ಆಗಬೇಕು. ನೀನು ಹೆಣ್ಣು , ಈ ತರಲೆ, ತಂಟೆಕೋರ ಬಾಡಿಗೆದಾರರ ಕೈಲಿ ನೀ ಏಗಲಾರೆ. ಬಾಡಿಗೆ ವಸೂಲಿ ಕೆಲಸ ನನಗೆ ಬಿಡು, ಅವರನ್ನು ಹೇಗೆ ದಾರಿಗೆ ತರಬೇಕು ಎಂಬುದು ನನಗೆ ಗೊತ್ತು, ನಾ  ಕೊಟ್ಟ ಬಾಡಿಗೆ ಹಣ ಈಸ್ಕೊಂಡು ನಿಶ್ಚಿಂತೆಯಾಗಿ ಇರೋದನ್ನು  ಕಲಿ ಎಂದು ಆವತ್ತೇ ಇವಳಿಗೆ ಗಿಣಿಗೆ ಹೇಳಿದ ಹಾಗೆ ಹೇಳಿದೆ. ನನ್ನ ಮಾತು ಕೇಳದೆ ಬಾಡಿಗೆ ವಸೂಲಿಗೆ ತಾನೇ ಮುಂದಾದಳು. ಅದಕ್ಕೇ ಕೈ ಸುಟ್ಟುಕೊಂಡಳು. ಈ ಹಿರಿಯ, ಭಾವನ ಮಾತು ಕೇಳದಿದ್ದಕ್ಕೆ ತಕ್ಕ ಶಾಸ್ತಿಯಾಯಿತು ಇವಳಿಗೆ ಎಂದು ಗೆಲುವಿನ ನಗೆ ನಕ್ಕ, ಶಾಮಣ್ಣ. ಇರಲಿ, ಇಷ್ಟಕ್ಕೇ ಬಿಡಬಾರದು, ಈ ಮನೆಯ ವಿಷಯ ! ಅದನ್ನು ಪೂರ್ತಿ ಮುಗಿಸಲೇಬೇಕು ಎಂದು ನಿರ್ಧರಿಸಿದ.

ಶಾಮಣ್ಣ ಶಕುನಿಯಂತೆ ಬಲು ಜಾಣ್ಮೆಯಿಂದ ದಾಳ ಉರುಳಿಸಿದ್ದ. ಬುದ್ಧಿವಂತಿಕೆಯಿAದ ಕಾಯಿ ಜರುಗಿಸಿದವ, ಅಷ್ಟಕ್ಕೇ ಸುಮ್ಮನಾಗದೆ, ಏ ಶ್ರೀಮತಿ, ನಿನಗೆ ಈ ಮನೆ ಆಗಿ ಬರಲಿಲ್ಲ, ಇದರಿಂದ ನಿನಗೆ ನಷ್ಟ ಆಗುತ್ತಿದೆಯೇ ಹೊರತು ಮೂರು ಕಾಸು ಕೈ ಅಂಟಲಿಲ್ಲ. ದಿನ ಬೆಳಗಾದರೆ ಬಾಡಿಗೆದಾರರ ಕಾಟ, ಇದೇ ಮನೆಯಲ್ಲೇ ನಿನ್ನ ಪತಿ ಗತಿಸಿದ, ಕಷ್ಟ ನಷ್ಟಗಳು ಒಂದರಮೇಲೊAದು ಜರುಗುತ್ತಿವೆ. ನೀನಿನ್ನೂ ಇದೇ ಮನೆಯಲಿದ್ದರೆ, ಇನ್ನೂ ಏನೇನು ಘೋರಗಳು ನಡೆಯುವುದೋ ಎಂದು ನನಗೇ ಭಯವಾಗುತ್ತಿದೆ. ಆಗ, ಭಾವಾ ! ನಾ ಏನ್ ಮಾಡ್ಲಿ ಎಂದು  ನನ್ನ ಹತ್ತಿರ ಬರಬೇಡ. ಅದಕ್ಕೇ ಈಗಲೇ ಎಚ್ಚೆತ್ತುಕೋ, ಈ ದರಿದ್ರ ಮನೆಯನ್ನು ಅತ್ತ ಮಾರಿಬಿಡು. ಕಡಿಮೆ ಬೆಲೆಗೆ ಒಂದು ಸಣ್ಣ ಮನೆಯನ್ನು ನಿನಗೆ ಭೋಗ್ಯಕೆ ಹಾಕಿಸಿಕೊಡ್ತೀನಿ, ಇಷ್ಟಕ್ಕೂ ನೀನಿರುವುದು ಒಬ್ಬಳೇ. ಎಷ್ಟು ಜಾಗ ಬೇಕು ನಿನಗೆ ? ಉಳಿದ ಹಣವನ್ನು ಬ್ಯಾಂಕಿನಲ್ಲಿ ಇಟ್ಟುಕೊಂಡು ಬರುವ ಬಡ್ಡಿ ಹಣದಿಂದ ಸುಖ ಜೀವನ ನಡೆಸು. ನನ್ನ ಮಾತು ಕೇಳು ಎಂದ ಆ ಭಾವ . ಭಾವನ ಪುಂಗಿಯ ನಾದಕ್ಕೆ ಹಾವಿನಂತೆ ತಲೆಯಾಡಿಸಿದಳು, ಆ ನಾದಿನಿ. ಗತ್ಯಂತರವಿಲ್ಲದೆ, ‘ಅನ್ಯಥಾ ಶರಣಂ ನಾಸ್ತಿ’ ಎಂದು ತಲೆಬಾಗಿದಳು. ಹೀಗೆ, ಶ್ರೀಮತಿ ಬಹು ಕಾಲದಿಂದ ವಾಸವಾಗಿದ್ದ ಆ ದೊಡ್ಡ ಮನೆಯನ್ನು ಶಾಮಣ್ಣ ಬಲು ಸುಲಭದ ಬೆಲೆಗೆ ಮಾರಿಸಿದ. ಸಾಕಷ್ಟು ಕಮೀಶನ್ ಗಿಟ್ಟಿಸಿದ. ‘ಎಲ್ಲರೂ ದುಡಿಯುವುದು ಗೇಣು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ, ನಾ ಏನು ಸುಮ್ಮನೆ ಕಾಸು ತಗೊಂಡನಾ ! ಇದಕ್ಕಾಗಿ ಅಲೆದಾಡಿ, ಗಿರಾಕಿ ಹುಡುಕಿ. ಅದೆಷ್ಟು ಗಿಲೀಟು ಮಾತನಾಡಿದೆ, ಈ ಹಳೆಯ ಮನೆಯನ್ನು ಕೊಳ್ಳಲು ಅವನಿಗೆಷ್ಟು ಪುಸಲಾಯಿಸಿದೆ. ಇಷ್ಟು ಕಷ್ಟಕ್ಕೆ ತಕ್ಕ ಪ್ರತಿಫಲ ನನಗೆ ಸಿಗಬೇಡವೇ ! ಪುಗಸಟ್ಟೆ ದುಡಿದು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಲೇ ! ಎಂಬ ಸಮರ್ಥನೆ ಶಾಮಣ್ಣನದು. ‘ನಂಬಿ ಕೆಟ್ಟವರುಂಟೋ ಈ ಶಾಮಣ್ಣನ, ನಂಬದೆ ಉಳಿದವರಿಗೆ ಉಳಿಗಾಲವಿಲ್ಲ’ ಎಂದು ತನ್ನಲ್ಲೇ ತಾನು ಗುನಗಿದ. 

ನಂತರದ ಕಾಲದಲ್ಲಿ ಶಾಮಣ್ಣನಿಂದ ಶ್ರೀಮತಿಗೆ ಆದ ಅವ್ಯವಹಾರಗಳು, ಮೋಸದ ಬಗ್ಗೆ ಬಂಧುಗಳೇ ಗುಸ ಗುಸ ಎಂದು ಸಂಶಯದ ಮಾತುಗಳಾಡಿಕೊಂಡಾಗ, ಅದನ್ನು ಕೇಳಿದ ಶ್ರೀಮತಿಗೆ ಜ್ಞಾನೋದಯವಾಯಿತು. ಶಾಮಣ್ಣ ಭಾವನನ್ನು ನಂಬಿ ನಾ ಕೆಟ್ಟೆ, ನೀರಲ್ಲಿ ಮುಳುಗಿದೆ. ‘ಆಹಾ, ಭಾವಾ ! ನಿನ್ನಲ್ಲಿ ನಿಯತ್ತಿಗೇ ಅಭಾವವೇ ! ಎಂದು ಮರುಗಿದಳು. ಒಂದು ಕಾಲಕ್ಕೆ ದೊಡ್ಡ ಮನೆಯ ಮಾಲೀಕಳಾಗಿ, ಬಾಡಿಗೆ ಹಣದಿಂದ ಜೀವನ ನಡೆಸಿದ ಶ್ರೀಮತಿ, ಇಂದು ತಾನೇ ಮತ್ತೊಬ್ಬರ ಮನೆಯಲ್ಲಿ ಬಾಡಿಗದಾರಳಾದಳು. 

        ಈ ಪ್ರಕರಣ ಓದಿದವರಿಗೆ ಅನಿಸಬಹುದೇನೋ, ಹೀಗೂ ಉಂಟೇ ! ಎಂದು. ಹೀಗ್ಯಾಕಾಗಿರಬಾರದು ಎನಿಸಲೂ ಸಹಾ ಅಡ್ಡಿಯಿಲ್ಲವಲ್ಲಾ ! ಏಕೆಂದರೆ, ‘ನಾವು ಇಂದು ಹೀಗಿದ್ದೀವಿ’ ಎಂಬ ಶೀರ್ಷಿಕೆಯಡಿ, ಡಿ ವಿ ಜಿ ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗಂದಿದ್ದಾರೆ : “ಕನಲ್ದ ಹುಲಿ, ಕೆರಳಿದ ಹಂದಿ, ಮುಳ್ ಕರಡಿ, ಛಲ ನಾಗ, ಅಣಕು ಕಪಿ, ಸೀಳ್ನಾಯಿ, ಮೊದಲಾದ ಮೃಗದ ಸೆಣಸು ಮುಸುÀಡಿಯ, ಘೋರ ದುಷ್ಟ ಚೇಷ್ಟೆಗಳೆಲ್ಲಾ ಅಡಗಿಹುವು ನರ ಮನದಿ ಮಂಕುತಿಮ್ಮ” ನಾವೆಲ್ಲರೂ ಹೀಗಲ್ಲದ್ದರೂ, ನಮ್ಮ ಮಧ್ಯೆ ಇರುವ ಹಲವರಂತೂ ಹೀಗಿದ್ದಾರೆ ಎಂಬುದಂತೂ ಅಲ್ಲಗಳೆಯಲಾಗದು. ಪ್ರಸಕ್ತ ಪ್ರಕರಣದಲ್ಲೂ ಶಾಮಣ್ಣ ಪಾತ್ರಧಾರಿ ಸಹಾ ಇಂತಹಾ ಒಂದು ಸ್ವಭಾವ : ವರ್ಗಕ್ಕೆ ಸೇರಿದವನು. 

ಈ ಪ್ರಸಂಗ ಒತ್ತಟ್ಟಿಗಿರಲಿ. “ನಂಬಿದರೆ ಬಾಳುಂಟು, ನಂಬದಿರೆ ಬಾಳಿಲ್ಲ’ ಎಂದಿದ್ದಾರೆ ಅನುಭವಿಗಳು. ಆದರೆ ಈ ನಂಬಿಕೆ ಕುರುಡು ನಂಬಿಕೆಯಾಗಬಾರದು. ಯಾವುದೇ ಒಂದು ವ್ಯಕ್ತಿ, ವಸ್ತು, ವಿಷಯ, ಕೆಲಸ, ಹೀಗೆ ಮಾಡುವುದು, ಮಾಡುತ್ತಿರುವುದು ಸರಿಯೇ ! ಈ ಬಗ್ಗೆ  ನನ್ನ ನಂಬಿಕೆ ಸರಿಯೆ, ತಪ್ಪೆ, ಎಂಬುದನ್ನು ಆಗಾಗ್ಗೆ ನಮ್ಮ ಬುದ್ಧಿ ವಿವೇಕ ತರ್ಕದಿಂದ ವಿಮರ್ಶಿಸುತ್ತಿರಬೇಕು. ಅರಿತು ನಂಬಬೇಕು, ನಂಬಿ ಅರಿಯಬೇಕು, ನಂಬಿಕೆಯ ಹಿಂದೆ ವಿವೇಚನೆ, ಎಚ್ಚರ ಇರಬೇಕು. ‘ಬಿ ಅಲರ್ಟ್’ ಎಂಬಂತೆ ನಾವು ಸದಾ ಎಚ್ಚರದಿಂದಿರಬೇಕು ಎಂಬ ನೀತಿ ಪಾಠ ಪ್ರಸಕ್ತ ಪ್ರಸಂಗದಿಂದ  ನಾವು ಕಲಿಯಬೇಕಾಗಿದೆ.


Comments