ಆಸರೆ ಮನೆ - ಭಾಗ 13

ಆಸರೆ ಮನೆ - ಭಾಗ 13

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ




ಆತ್ಮವಿದಾನಂದ ಜೀ ಆಸರೆ ಮನೆಗೆ ಬಂದರು

ಗೇಟಿನ ಬಳಿ ಯಾರೋ ಕಾವಿ ತೊಟ್ಟ ಸಾಧು ಬಂದು ನಿಂತು ಇಲ್ಲಿ ''ಆಸರೆಮನೆ'' ಯಾವುದು ಎಂದು ಕೈ ತೋಟದಲ್ಲಿ ಕುಳಿತಿದ್ದ ಕಲ್ಯಾಣಿಯನ್ನೇ ಕೇಳಿದರು. ಶುಭ್ರವಾದ ತೊಳೆದ ಮುತ್ತಿನಂತಹ ಬಣ್ಣ. ನೀಟಾದ ಕಾವಿಬಟ್ಟೆ. ಚಂದ್ರನ ಸುತ್ತ ಕಿತ್ತಲೆಯ ರಂಗು ಇದ್ದಂತೆ. ಹೊಸದಾಗಿ ಒಂದೆರಡು ದಿಂದ ಹಿಂದೆ ಶೇವ್ ಮಾಡಿದ್ದಂತಹ ಮುಖದಲ್ಲಿ ನಸು ನೀಲಿಬಣ್ಣದ ಕೆನ್ನೆಗಲ್ಲಗಳು. ಚಂದ್ರನ ಹಿನ್ನೆಲೆಯ ಆಕಾಶ ನೀಲಿ ಬಣ್ಣವಿದ್ದಂತೆ ಕೈಯಲ್ಲೊಂದು ಕಾವಿ ಬಟ್ಟೆಯ ಚೀಲ, ಪಾದರಕ್ಷೆಗಳು ಬಿಸಿಲಿಗಾಗಿ ತಲೆಯ ಮೇಲೊಂದು ಕಾವಿಟೋಪಿ. ಕಲ್ಯಾಣಿ 

ತಟ್ಟಂತ ಎದ್ದು  ನಿಂತು ಗೇಟಿನ ಬಳಿ ಬಂದು ಬಾಗಿಲು ತೆಗೆದು ಕೈ ಮುಗಿಯುತ್ತ ''ಬನ್ನಿ ಸ್ವಾಮೀಜಿ, ಒಳಗೆ ಬನ್ನಿ. ಇದೇ ಆಸರೆಮನೆ'' ಎಂದಳು. 

ಆಗ ಕಲ್ಯಾಣಿಗೆ ಹೊಳೆಯಿತು ಮನೆಯ ಮುಂದೊಂದು ಹೆಸರಿನ ಫಲಕ ಇರಬೇಕು ಎಂದು. 

ಒಳಗೆ ಬಂದ ಸ್ವಾಮೀಜಿ ಎಲ್ಲರಂತೆ ಸಹಜವಾಗಿ ಅಲ್ಲಿದ್ದ ಬೆತ್ತದ ಕುರ್ಚಿಯ ಮೇಲೆ ಕುಳಿತು ''ಅಮ್ಮ ನನ್ನ ಹೆಸರು 'ಅತ್ಮವಿದಾನಂದ'  ಎಂದು ಇದು ನಮ್ಮ ಗುರುಗಳು ಕೊಟ್ಟ ಹೆಸರು. ನನ್ನ ನಿಜನಾಮಧೇಯ 'ಆಕಾಶ್' ಎಂದು. ನಾನು ಪೂರ್ಣ ವ್ರತ ಹಿಡಿದ ಸನ್ಯಾಸಿಯಲ್ಲ. ಆದರೆ ಸಂಸಾರಿಯಂತು ಅಲ್ಲಮ್ಮ ಎಂದರು. 

''ಇರಲಿ ಸ್ವಾಮೀಜಿ ಅದೆಲ್ಲ ಆಮೇಲೆ ತಾವು ಪಾನಕ, ಕಾಫಿ, ಟೀ, ಹಾಲು ಏನು ತೆಗೆದುಕೊಳ್ಳುತ್ತೀರಿ. ನಾವು ಮಾಡಿದ್ದು ನಡೆಯುತ್ತದೆಯೇ'' ಎಂದಳು.

''ಬಿಸಿಲಿದೆ ಕೊಂಚ ಪಾನಕ ಆದರೆ ಒಳ್ಳೆಯದು. ಯಾರಾದರು ಮಾಡಲಿ ಏನೂ ಅಡ್ಡಿಯಿಲ್ಲ. ಒಳಗಿನ ಪರಮಾತ್ಮನ ದಣಿವು ಶಮನವಾದರೆ ಸಾಕು'' ಎಂದರು. 

ಹೀಗೆ ಸ್ವಾಮಿ ಆತ್ಮವಿದಾನಂದರ ಪ್ರವೇಶ ಆಸರೆಮನೆಗಾಯಿತು. 

ಅದರೊಡನೆಯೇ ನಿರಂಜನ, ಶಾಂತಾರಾಮರ ನೆರವಿನಲ್ಲಿ ಆಸರೆ ಮನೆಗೆ ದೊಡ್ಡ ದೊಡ್ಡ ಅಕ್ಷರದಲ್ಲಿ ಬರೆದಿದ್ದ 'ಆಸರೆಮನೆ' ಎಂಬ ನಾಮಫಲಕವೂ ತೂಗಾಡಿತು. ಅದನ್ನು ನೋಡಿದ ಸ್ವಾಮೀಜಿಗಳು ಕಿರುನಗೆ ನಕ್ಕರು. 

***********

ಆತ್ಮವಿದಾನಂದ ಜೀ ಆಗುವ ಮೊದಲಿನ ಆಕಾಶನ ಕಥೆಯೂ ಒಂದು ವಿಚಿತ್ರ. ಹುಟ್ಟಿದ್ದು ಬಡತನದ ಮನೆ. ಮನೆ ತುಂಬಾ ಮಕ್ಕಳು. ಹೊಟ್ಟೆಗಾದರೆ ಬಟ್ಟೆಗಿಲ್ಲ. ಬಟ್ಟೆಯಾದರು ಇನ್ನೊಬ್ಬರಿಗೆ ಶರ್ಟ್ ಆದರೆ ಮತ್ತೊಬ್ಬರಿಗೆ ಚಡ್ಡಿ, ಒಬ್ಬಳಿಗೆ ಲಂಗ, ಮತ್ತೊಬ್ಬಳಿಗೆ ಹರಿದ ಬಟ್ಟೆ ಚೂರಿನಲ್ಲಿ ಮೈಮುಚ್ಚುವ ದಾವಣಿ. ಹತ್ತು ಜನ ಮಕ್ಕಳು. ಕುಡುಕ ತಂದೆ ಅವರಿವರ ಮನೆಯಲ್ಲಿ ಮುಸುರೆ ತೊಳೆದು ಬಂದದ್ದರಲ್ಲಿ ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದ ತಾಯಿ. ಇಷ್ಟಾದರು ಮಕ್ಕಳು ಮಾತ್ರ ಒಬ್ಬರಿಗೊಬ್ಬರನ್ನು ಮೀರಿಸುವ ಚೆಲುವಿನ ಚಿತ್ತಾರದ ಗೊಂಬೆಗಳು. ದಂತದ ಮೈಬಣ್ಣ ಒಳ್ಳೆಯ ಎತ್ತರ. ತಲೆಯ ತುಂಬಾ ಸುರುಳಿ ಕೂದಲು ಗಂಡು ಮಕ್ಕಳಿಗೆ. ಎಣ್ಣೆ ಕಾಣದಿದ್ದರು ನೀಡು ಜಡೆ ಹೆಣ್ಣುಮಕ್ಕಳಿಗೆ. ಹೊತ್ತಿನ ಕೂಲಿಗೆ ಬರವಾದರು ಯಾರು ಹಸಿವೆಯ ಖಾಯಿಲೆಯಿಂದ ಬಳಲಿದವರಲ್ಲ. ತನಗೆ ಹೊಟ್ಟೆಗಿಲ್ಲದಿದ್ದರು ಕಂಕುಳಿನ ಕೂಸಿಗೆ ಎದೆಹಾಲು ನೀಡಿ ಸಲಹುವ ಚೈತನ್ಯವಿದ್ದ ಬಡತಾಯಿ. ಇದ್ಯಾವುದು ಲಕ್ಷ್ಯವಿಲ್ಲದೆ ತನ್ನ ಲೋಕದಲ್ಲಿ ತಾನು ಕುಡಿದ ಮತ್ತಿನಲ್ಲಿರುತ್ತಿದ್ದ ತಂದೆ. ಹಣ ಇಲ್ಲದಾಗ ಕುಡಿತದ ಹಂಬಲ ಮೀರಲಾರದ ಅಪ್ಪ ತಾಯಿಯ ದುಡಿಮೆಯ ಹಣಕ್ಕೂ ಕೈ ಹಚ್ಚುತ್ತಿದ್ದ. ಹೊಡೆತ ಬಡಿತ ಬೈಗುಳ ತಾಯಿಯ ಪಾಲಿಗೆ ನಿತ್ಯದೂಟ. ಆದರೆ ಮನೆ ತುಂಬುತ್ತಿದ್ದ ಮಕ್ಕಳನ್ನು ತಡೆಗಟ್ಟುವ ಪ್ರಯತ್ನ ಇಲ್ಲವೇ ಇಲ್ಲ. ಅಷ್ಟು ಮುಗ್ಧತೆ ತಾಯಿಯದು. ತಂದೆಯದು ದೈಹಿಕ ಚಟ. ಮಕ್ಕಳಿಗೆ ಒಳ್ಳೊಳ್ಳೆಯ ಹೆಸರಿಟ್ಟಿದ್ದು ತಾಯಿ ತನ್ನ ಹೂಮನಸ್ಸಿನ ಭಾವುಕತೆಯಿಂದ.

ಈ ಸಂಸಾರ ಚಿತ್ರಣ ಚಿಕ್ಕ ಆಕಾಶನ ಮನಸ್ಸಿನಲ್ಲಿ ಅಸಹ್ಯ ಹುಟ್ಟಿಸಿತು ಸಂಸಾರದ ಬಗ್ಗೆ. ಚಿಕ್ಕ ಹುಡುಗ ಶಾಲೆಯಿಂದ ಬರುವಾಗ ಹೋಗುವಾಗ ಸರ್ಕಾರಿ ಆಸ್ಪತ್ರೆಯ ಮುಂದೆಯೇ ಹೋಗಬೇಕು. 

ಒಂದು ದಿನ ಶಾಲೆಗೆ ಹೋಗುವಾಗ ಆಸ್ಪತ್ರೆಯ ಮುಂದೆ ಜನಜಂಗುಳಿ. ಕುಟುಂಬ ಯೋಜನೆಯ ಬಗ್ಗೆ ಬರೆದಿರುವ ಬ್ಯಾನರ್ ಬಟ್ಟೆಗಳು. ಧೈರ್ಯ ಮಾಡಿದ ಹುಡುಗ ಸೀದಾ ಆಸ್ಪತ್ರೆಯ ಒಳನುಗ್ಗಿ ಡಾಕ್ಟರ್ ರೂಮಿನ ಮುಂದೆ ನಿಂತ. ಅಲ್ಲಿ ಡಾಕ್ಟರ್ ಮಾತನಾಡುತ್ತಿದ್ದ ಜನರಿಗೆ ಕೊಡುತ್ತಿದ್ದ ಸಲಹೆ ಕೇಳಿ ತಾನು ಒಳಗೆ ನುಗ್ಗಿ 

''ಡಾಕ್ಟ್ರೇ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆ ಮಾಡುತ್ತೀರಾ? ಎಂದು ಹಿಂಜರಿಕೆಯಿಲ್ಲದೆ ಕೇಳಿದ. ಒಂದು ಗಳಿಗೆ ಡಾಕ್ಟರು ಅಲ್ಲಿದ್ದ ಜನಗಳು ಸ್ತಬ್ಧರಾದರು. ನಂತರ ಅಲ್ಲಿದ್ದ ವೈದ್ಯರೇ 

''ಏನೋ ನಿನಗ್ಯಾಕೊ ಕುಟುಂಬ ಯೋಜನೆ. ನಿನಗೆ ಮಾಡುವೆ ಆಗಿದೆಯೇನೋ. ಇಲ್ಲಿ ಕೊಡುವ ದುಡ್ಡು ಹಣ್ಣು ಹಂಪಲಿನ ಆಸೆಗೆ ಬಂದಿದ್ದರೆ ಹೊರಟು ಹೋಗು. ಬೇಕಾದರೆ ಚಿಕ್ಕ ಹುಡುಗ ನಿನಗೊಂದಿಷ್ಟು ಹಣ್ಣು ಕೊಡಿಸುತ್ತೇನೆ ನಡಿ ನಡಿ '' ಎಂದರು. 

ಹುಡುಗ ಗಾಬರಿಯಾದ. ''ಅಯ್ಯೋ ಇಲ್ಲಾ ಸಾರ್ ನಾನು ಅದಕ್ಕೆ ಬಂದಿಲ್ಲ''

''ಮತ್ತೇನೋ ನಿಂದು, ಇವತ್ತು ಹೊರ ರೋಗಿಗಳನ್ನು ನೋಡುವುದಿಲ್ಲ ನಾಳೆ ಬಾ'' ಎಂದರು. 

ಆಗ ಆಕಾಶ್ ಧೈರ್ಯದಿಂದ ವೈದ್ಯರ ಬಳಿ ತಮ್ಮ ಮನೆಯ ಕಥೆ ಹೇಳಿದ. ತಮ್ಮ ತಾಯಿಗೆ ಕುಟುಂಬ ಯೋಜನೆಯ ಅಗತ್ಯ ಇರುವುದನ್ನು ಹೇಳಿದ. ತಂದೆಯನ್ನು ಕರೆತರುವುದಕ್ಕಾಗುವುದಿಲ್ಲ. ತಾಯಿಯನ್ನಾದರು ಒಪ್ಪಿಸಬಹುದು ಎಂದು ವಿವರಿಸಿದ. 

ಹುಡುಗನ ತಿಳುವಳಿಕೆ ನೋಡಿ ವೈದ್ಯರು ಬೆರಗಾದರು. 

ಚಿಕ್ಕ ಹುಡುಗನಾದರು ಚೊಕ್ಕ ತಿಳುವಳಿಕೆ ಎಂದು ಮನಸ್ಸಿನಲ್ಲೇ ಮೆಚ್ಚಿಕೊಂಡರು. ''ಆಯ್ತು ಕಣೋ ಆಕಾಶ, ಅಮ್ಮನನ್ನು ಕರೆದುಕೊಂಡು ಬಾ ಇವತ್ತು ,ಎಲ್ಲಾ ಪರೀಕ್ಷೆ ನಡೆಸಿ ಇನ್ನೊಂದು ವಾರದೊಳಗೆ ಚಿಕಿತ್ಸೆ ಮಾಡೋಣ'' ಎಂದರು. ಆಕಾಶ್ ಖುಷಿಯಿಂದ ಶಾಲೆಗೆ ಹೊರಟ. ತಮ್ಮ ಮನೆಯ ಕಷ್ಟ ಎಲ್ಲ ಕಳೆಯಿತು ಎನ್ನುವ ಭಾವನೆ ಅವನ ಪುಟ್ಟ ಮನಸ್ಸಿನಲ್ಲಿ.  

ಕುಣಿಯುತ್ತ ಮನೆಗೆ ಬಂದು ತಾಯಿಯನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ. ತಂದೆಗೆ ತಿಳಿಯದಂತೆ, ಆ ವಾರದಲ್ಲಿ ತಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಬಂದರು. ಆಸ್ಪತ್ರೆಯಲ್ಲಿ ಕೊಟ್ಟ ಹಣ, ಹಣ್ಣು ಸ್ಟೀಲ್ ತಟ್ಟೆ ಲೋಟ ಎಲ್ಲ ಮನೆಗೆ ಸಹಾಯವಾಯಿತು. ತಾಯಿಗೆ ಕೆಲಸ ಮಾಡಲು ಅಶಕ್ತತೆ ಇರುವುದೆಂದು ತಿಳಿದ ಆಕಾಶ್ ತಾನು ಅವಳೊಡನೆ ಹೋಗಿ ಮನೆ ಮನೆಯ ಕೆಲಸದಲ್ಲಿ ಸಹಾಯ ಮಾಡಿದ. ಮನೆಯವರು ಕರುಣಾಳುಗಳಾಗಿ ಅವರಿಗೆ ನೆರವಾದರು. ಆದರೆ ಬಂದ ದೊಡ್ಡ ಸಮಸ್ಯೆ ಎಂದರೆ ತಂದೆಯಿಂದ ತಾಯಿಯನ್ನು ದೂರ ಇಟ್ಟಿರಬೇಕಾದದ್ದು. ಅದು ಆಕಾಶನ ಕೈಲಿ ಆಗುವಂತಹುದಲ್ಲ. ಆಗ ದೊಡ್ಡಕ್ಕ ನೆರವಿಗೆ ಬಂದಳು. ಜ್ವರದ ಕಾರಣ ಹೇಳಿ ತಾಯಿಯನ್ನು ಹರಕು ಸೀರೆ ಹಾಕಿ ಮಲಗಿಸಿ ಔಷಧೀಯ ಸೀಸೆಯನ್ನು ತಲೆದಸಿಯಲ್ಲಿಟ್ಟು ಜೋಪಾನ ಮಾಡಿಕೊಂಡರು. 

ಅಪ್ಪನ ರೌದ್ರಾವತಾರ ಹೊಡೆತ ಬೈಗುಳವನ್ನು ಮಕ್ಕಳು ಸಹಿಸಬೇಕಾಯಿತು. 

ಹೀಗೆ ಆಕಾಶನ ಬಾಲ್ಯ ಕಳೆದಿದ್ದು. ಕಾಲ ಕಳೆಯಿತು. ಮಕ್ಕಳು ಬೆಳೆದು ದೊಡ್ಡವರಾಗಿ ಅವರವರ ದಾರಿ ಹಿಡಿದರು. ಅಕ್ಕನಿಗೆ ಯಾರೋ ಒಳ್ಳೆಯ ಮನಸ್ಸಿನ ಬಂಧುಗಳೊಬ್ಬರ ನೆರವಿನಿಂದ ಸಾಮೂಹಿಕ ವಿವಾಹದಲ್ಲಿ ಒಂದು ಒಳ್ಳೆಯ ಹುಡುಗನೊಂದಿಗೆ ಮದುವೆ ಆಯಿತು. 

ಕುಡಿದು ಕುಡಿದು ಶರೀರ ಹಾಳು ಮಾಡಿಕೊಂಡ ಅಪ್ಪ ದೇಹ ಬಿಟ್ಟಿದ್ದು ದುಃಖದ ಸಂಗತಿಯಾದರೂ ಒಂದು ರೀತಿಯ ನೆಮ್ಮದಿಯನ್ನು ಕೊಟ್ಟಿತು. 

ಬಡಕಲು ಶರೀರದ ತಾಯಿ ಚೇತರಿಸಿಕೊಂಡರು. ಹೆಂಗರುಳಿನ ಆಕಾಶನನ್ನು ಕಂಡರೆ ಆ ತಾಯಿಗೆ ಬಹುಪ್ರೀತಿ. ಅವಳು ಕೆಲಸ ಮಾಡುತ್ತಿದ್ದ ಮನೆಯ ದೊಡ್ಡ ಸಾಹೇಬರು ಆಕಾಶನ ಚುರುಕುತನ ವಿದ್ಯಾಭ್ಯಾಸದಲ್ಲಿ ಅವನಿಗಿದ್ದ ಆಸಕ್ತಿ ಕಂಡು ತಾವೇ ಮುಂದಾಗಿ ನಿಂತು ಅವನನ್ನು ರಾಮಕೃಷ್ಣಾಶ್ರಮದ ಶಾಲೆಗೇ ಸೇರಿಸಿದರು. 

ಹೊಟ್ಟೆಬಟ್ಟೆ ಓದಿನ ಚಿಂತೆ ಆಕಾಶನಿಗೆ ನಿವಾರಣೆಯಾಯಿತು. ಆಕಾಶ್ ಪೂರ್ಣವಾಗಿ ಆಶ್ರಮಕ್ಕೆ ಹೊಂದಿಕೊಂಡ. 

ತರಿದು ಬಿಡು ತೊರೆದು ಬಿಡು, ತೊಡೆದು ಬಿಡು ನೆನ ಹಿಂದ।

ಕರೆಕರೆಯ ಬೇರುಗಳ, ಮನದ ಗಂಟುಗಳ।।

ಉರಕೆ ಸೊಗಸಾದ ಪ್ರೀತಿ ಮುಮ್ಮೊರ್ಮೆ।

ಉರುಳಪ್ಪ ದಾತ್ಮಕ್ಕೆ ಮಂಕುತಿಮ್ಮ||

ಆಕಾಶ ಬೆಳೆದ ಆಶ್ರಮದ ಅನ್ನದಲ್ಲಿ, ವಿದ್ಯೆ ಕಲಿತ ಆಶ್ರಮದ ಶಾಲೆಯಲ್ಲಿ. ಮನದ ಹಸಿವನ್ನು ಕಳೆದುಕೊಂಡ ಸ್ವಾಮೀಜಿಗಳ ಪ್ರೀತಿಯಲಿ. 

ಹೀಗಾಗಿ ಆಶ್ರಮ ಅಲ್ಲಿನ ವಾತಾವರಣ ಅವನ ಮೈ ಮನಸ್ಸನ್ನು ತುಂಬಿಕೊಂಡಿತು. ಮೊದಲೇ ತಾನು ಬೆಳೆದ ವಾತಾವರಣದಲ್ಲಿ ಸಂಸಾರ ಜೀವನದ ಬಗ್ಗೆ ಪೂರ್ಣ ವಿರಕ್ತತೆ ಬೆಳೆದಿದ್ದ ಅವನಿಗೆ ಆಶ್ರಮ ವಿರಕ್ತಿಯ ಪೂರ್ಣಪಾಠ ಹೇಳಿತು. ಆಕಾಶ್ ಆತ್ಮವಿದಾನಂದನಾಗಲು ವಿಧಿ ಹಿನ್ನೆಲೆಯನ್ನು ಸೃಷ್ಟಿಸಿತು. ವಿದ್ಯಾವಂತನಾದ ಆಕಾಶನಿಗೆ ಒಳ್ಳೆಯ ಉದ್ಯೋಗ ದೊರೆಯಿತು. ಕೈ ತುಂಬಾ ಹಣ ಬರುವ software ಉದ್ಯೋಗ. ಆದರೂ ಅವನು ಆಶ್ರಮದ ನೆರಳಿನಲ್ಲಿ ನಿಂತು ಒಂದಷ್ಟು ಹಣ ಕೈ ಸೇರಿದ ಮೇಲೆ ತಾಯಿಯನ್ನು ನೋಡಿ ಅವಳ ಋಣ ಕಡಿದುಕೊಂಡು ಬರಬೇಕೆನ್ನುವ ಬೇಗುದಿಯಲ್ಲಿ ಊರಿಗೆ ಹೋದ. ಅಲ್ಲೇನಿದೆ ಎಲ್ಲಾ ಬಯಲು. ಮರಣಶಯ್ಯೆಯಲ್ಲಿದ್ದ ತಾಯಿ ಅವಳ ನೆರವಿಗಾಗಿ ಬಂದ ದೊಡ್ಡಕ್ಕ. ಅದೇ ಗುಡಿಸಲು ಅದೇ ಬಡತನ. ಉಳಿದ ಮಕ್ಕಳೆಲ್ಲ ಅವರವರ ಹಾದಿಕಂಡುಕೊಂಡು ಗೂಡುಬಿಟ್ಟು ಹಾರಿ ಹೋಗಿದ್ದರು. ಆಕಾಶನನ್ನು ನೋಡಿ ತಾಯಿ ಕಣ್ಣಲ್ಲೇ ನೆಮ್ಮದಿಯನ್ನು ಸೂಚಿಸಿದಳು. ಅಕ್ಕ ತಮ್ಮನನ್ನು ಹಿತವಾಗಿ ಮಾತನಾಡಿಸಿ ತಾನು ದೇವರ ದಯದಿಂದ ಚೆನ್ನಾಗಿರುವುದಾಗಿ ಹೇಳಿದಳು. ತನ್ನ ಮನೆಗೆ ತಾಯಿಯನ್ನು ಕರೆದುಕೊಂಡು ಹೋಗಬೇಕೆನ್ನುವ ತನ್ನ ಮಾತಿಗೆ ತಾಯಿ ವಿರೋಧ ಹೇಳಿದ್ದು ಎಂದಾದರೊಂದು ದಿನ ಆಕಾಶ ಬರುತ್ತಾನೆ. ಆಗ ತಾನು ಇಲ್ಲೇ ಇರುವುದು ಸರಿ ಎಂದು ಹಟ ಹಿಡಿದಿದ್ದನ್ನು ಹೇಳಿದಳು. ಆಕಾಶನಿಗೆ ತಾಯಿಯ ಹೃದಯದ ಮಿಡಿತ ಸಂಕಟವನ್ನು ಉಂಟು ಮಾಡಿತು. ಅಕ್ಕನ ಮರುಕಕ್ಕೆ ತಾಯಿಯ ಪ್ರೀತಿಗೆ ಕೈ ಮುಗಿದ. ದುಡ್ಡಿನ ಚೀಲವನ್ನೇ ಹೊತ್ತು ತಂದಿದ್ದ ಆಕಾಶ್. ಆದರೆ ಆ ತಾಯಿಗೆ ಆಗ ಅದ್ಯಾವುದು ಬೇಡ. ಮಗನ ಸಾನಿಧ್ಯ ಸುಖ ಹಿತ ಉತ್ತಮ ಚಿಕಿತ್ಸೆ ಕೊಡಿಸಿದ ಆಕಾಶ್. ಆದರೇನು ತಾನು ಹೊರಟು ನಿಂತ ಪಯಣಿಗ ಎಂದು ಮನಸ್ಸು ಸಿದ್ಧಪಡಿಸಿಕೊಂಡಿದ್ದ ತಾಯಿ ಯಾವುದಕ್ಕೂ ಸ್ಪಂದಿಸಲಿಲ್ಲ. ಆಕಾಶನನ್ನು ನೋಡಿದ ನೆಮ್ಮದಿಯಲ್ಲಿ ಒಂದು ವಾರ ಜೀವ ಹಿಡಿದಿದ್ದ ತಾಯಿ ಒಂದು ವಾರ ಇಬ್ಬರೂ ಮಕ್ಕಳನ್ನು ನೋಡಿ ಸುಖ ಶಾಂತಿಯಲ್ಲಿ ದೇಹ ಬಿಟ್ಟಿದ್ದಾಯಿತು. 

ಆಕಾಶ ತಾಯಿಯ ಅಂತ್ಯಕ್ರಿಯೆಗಳನ್ನೆಲ್ಲ ಮುಗಿಸಿದ. ೧೫ ದಿನಗಳು ಅಕ್ಕ ತಮ್ಮ, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಬೀಳ್ಕೊಡುವ ವೇಳೆ ಬಂತು. ಅಕ್ಕನನ್ನು ತಮ್ಮ ತನ್ನ ಬಳಿಯಿದ್ದ ಹಣವನ್ನೆಲ್ಲ ಕೊಟ್ಟು ಬೀಳ್ಕೊಟ್ಟ ತಮ್ಮನನ್ನು ಮತ್ತೆ ನೋಡುವೆನೋ ಇಲ್ಲವೋ ಎನ್ನುವ ಭಾವದಲ್ಲಿ ತಾಯಿಯ ಅಂತ್ಯಕಾಲದ ಸೇವೆ ಮಾಡಿದ ತೃಪ್ತಿಯಲ್ಲಿ ಅಕ್ಕ ಬಸ್ಸು ಹತ್ತಿದಳು. ಇನ್ನುಳಿದದ್ದು ಆ ಪುಟ್ಟ ಮುರುಕು ಮನೆ. ಅದನ್ನೊಂದಿಷ್ಟು ರಿಪೇರಿ ಮಾಡಿಸಿ ಆಕಾಶ ಆ ಮನೆಯನ್ನು ಊರಿನ ವಾಚನಾಲಯಕ್ಕೆ ದಾನ ಮಾಡಿದ. ಉಳಿದ ಒಡಹುಟ್ಟಿದವರು ಎಲ್ಲಿದ್ದಾರೋ ಏನು ಮಾಡುತ್ತಿರುವರೋ ಅವನಿಗೆ ತಿಳಿಯದು. ಹೀಗೆ ಊರಿನ, ತಾಯಿಯ ಋಣ ಕಡಿದುಕೊಂಡು ತನ್ನ ಮುಂದಿನ ಬದುಕಿಗೊಂದು ದೃಢನಿಶ್ಚಯ ಮಾಡಿಕೊಂಡು ಆಕಾಶ್ ಊರಿಗೆ ಕೊನೆಯ ನಮಸ್ಕಾರ ಹೇಳಿದ. 

ಮತ್ತೆ ಆಶ್ರಮ, ಕೆಲಸದ ನಿರಂತರ ಏಕತಾನತೆ. 

ಒಂದು ದಿನ ಆಶ್ರಮದ  ದೊಡ್ಡ ಸ್ವಾಮೀಜಿಗಳನ್ನು ಕಂಡು ತನಗಿನ್ನು ಈ ಬಾಹ್ಯ ಬಂಧನ ಸಾಕು, ಸನ್ಯಾಸಾಶ್ರಮ  ದೀಕ್ಷೆ ನೀಡಬೇಕೆಂದು ಕೇಳಿದ. ಮೊದಲಿನಿಂದ ಆಕಾಶನನ್ನು ನೋಡಿ ಬೆಳೆಸಿದ್ದ ಸ್ವಾಮೀಜಿಗಳು ಈ ಬೇಡಿಕೆಯನ್ನು ಮನ್ನಿಸಿದರು. ಆಕಾಶ್ ದೊಡ್ಡ ಸ್ವಾಮೀಜಿಗಳ ಕೃಪೆಯ ಆವರಣದಲ್ಲಿ ಆತ್ಮವಿದಾನಂದಜೀ ಆದ. ಸ್ವಾಮಿಗಳ ಬಯಕೆಯಂತೆ 

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು| 

ಕಲ್ಲಾಗು ಕಷ್ಟಗಳ ಮಳೆಯ ವಿಧಿಸುರಿಯೆ।।

ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ| 

ಎಲ್ಲರೊಳಗೊಂದಾಗು ಮಂಕುತಿಮ್ಮ|| 

ಇದು ಆಕಾಶ ಆತ್ಮಾವಿದಾನಂದ ಜೀ ಯಾದ ಕಥೆ. ಆಸರೆ ಮನೆಯ ಸದಸ್ಯರು ಕಥೆ ಕೇಳಿ ಕಣ್ಣೀರು ಹಾಕಿದರು. 

ಅಲ್ಲಿದ್ದ ತಾಯಿ ಕರುಳಿನ ವೆಂಕಮ್ಮಜ್ಜಿ 

''ಸ್ವಾಮೀಜಿ ಅದು ಪೂರ್ವಾಶ್ರಮ ಕಥೆ. ಇದು ಈ ಆಶ್ರಮದ ಕಥೆ ನಿಮ್ಮನ್ನು ಕೈಬೀಸಿ ಕರೆದಿದೆ. ಇಲ್ಲೇ ಇರಲು ನಿಮಗೆ ದೈವ ಪ್ರೇರಣೆ'' ಎಂದು ಹೇಳಿ ಅಡುಗೆ ಮನೆಯತ್ತ ನಡೆದರು. ಅಂದಿನ ಅಡುಗೆ ಸಿದ್ಧಪಡಿಸಲು. 

ಆತ್ಮವಿದಾನಂದಜಿ ಮೆಲುಮಾತಿನ ಸೌಮ್ಯ ನಡೆಯ ಮಂದಹಾಸಭರಿತ ಸೌಮ್ಯವ್ಯಕ್ತಿ. ತೊಟ್ಟಿದ್ದೊಂದು ಕಾವಿ ಚೀಲದಲ್ಲಿ ಇನ್ನೊಂದು ಕಾವಿ ಬಟ್ಟೆಯ ಹೊರತು ಮತ್ತೇನಿಲ್ಲ ಆಸ್ತಿ. ಕೈಯಲ್ಲೊಂದು ಭಗವದ್ಗೀತೆ. ಅದೇ ಅವರ ಜಪ ಧ್ಯಾನ ಪೂಜೆ ಎಲ್ಲ.

ಆಶ್ರಮದಲ್ಲಿರಲು ಸ್ವಾಮೀಜಿಗೆ ಯಾವ ನಿರ್ಬಂಧವಿಲ್ಲದಿದ್ದರು ನಗರ ಜೀವನದ ಗೌಜು ಗದ್ದಲ ಬಿಟ್ಟು ತೋಟದ ಮನೆಯ ಪ್ರಶಾಂತತೆಗೆ ಆತ್ಮವಿದಾನಂದರು ಮಾರು ಹೋಗಿ ಆತ್ಮಾನುಸಂಧಾನ ಮಾಡಿಕೊಳ್ಳಲು ಇದು ಸೂಕ್ತ ಸ್ಥಳ ಎಂದು ನಿರ್ಧರಿಸಿದ್ದರು. 

ಆಸರೆ ಮನೆಯ ಸದಸ್ಯರಿಗೆ ಹೊರಗಿನಿಂದ ಬರುವ ಆಸಕ್ತರಿಗೆ ಭಗವದ್ಗೀತೆಯ ವಿನಹ ಇನ್ಯಾವ ಬೋಧನೆಯೂ ಅವರಿಂದ ದೊರೆಯುತ್ತಿರಲಿಲ್ಲ. 

ಹೀಗೆ ಸದ್ದಿಲ್ಲದೆ ಆಸರೆ ಮನೆಗೆ ಬಂದು ಶಾಂತವಾಗಿ ಬದುಕಿದವರು ಆತ್ಮವಿದಾನಂದಜೀ. ಆಕಾಶದಷ್ಟೇ ವಿಶಾಲ ಮನಸ್ಸಿನ ಸಾತ್ವಿಕ ಮನುಷ್ಯ. 


ಭಾಗ 14 ರಲ್ಲಿ ಮುಂದುವರೆಯುವುದು ........


Comments