ಆತ

ಆತ

ಲೇಖನ - ಶ್ರೀಮತಿ ಮಂಜುಳಾ ಡಿ 



ಆತನ ಚಹರೆ ನೋಡುತ್ತಿದ್ದರೆ, ಹೊಲಿಗೆಗಳಿಂದ ಸೇರಿಸಿ ಜೋಡಿಸಿದ ಚರ್ಮ, ಇನ್ನೂ ತುಸು ಅರಿತರೆ ಮೈಯಲ್ಲಿ ಮೂಳೆ ಇರಬೇಕಾದಲ್ಲೆಲ್ಲಾ ಸ್ಟೀಲ್ ರಾಡ್ ಗಳು. ನಮ್ಮ ಸಾಮಾನ್ಯ ಊಹೆಗಳು ಕಾರು ಬಸ್ಸು ಟ್ರೆöÊನು ಫ್ಲೆöÊಟ್ ಹೀಗೆ ದೊಡ್ಡ ಅಪಘಾತ ಒಂದು ಸುತ್ತು ಊಹಿಸಿ ಬರುತ್ತವೆ. ಪ್ರಸ್ತುತ ಬರ್ಮಿಂಗ್ ಹ್ಯಾಂನ  ಶಾಲೆಯಲ್ಲಿ ಓದುತ್ತಿರುವ ಈತನ ಕುರಿತು ಮೊದಲು ಎಲ್ಲಾ ಸಹಪಾಠಿಗಳಲ್ಲೂ ಪ್ರಶ್ನಾರ್ಥಕ ನೋಟಗಳಿದ್ದವು. ಆತನೂ ತನ್ನ ಕಥೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿರಲಿಲ್ಲ. ಆದರೆ ಅವರ ನೋಟಗಳನ್ನು ಮೊದಮೊದಲು ಎದುರಿಸುತ್ತಿರಲಿಲ್ಲ. ನಿಧಾನವಾಗಿ ಇಂತಹ ಸಭೆಗಳಲ್ಲಿ ಮಾತಾಡುವುದಕ್ಕೆ ತೆರೆದುಕೊಳ್ಳತೊಡಗಿದ. ಆತ ಅವರ ದೃಷ್ಟಿಗಳನ್ನು ಎದುರಿಸತೊಡಗಿದ. ಅವರ ಕಣ್ಣುಗಳಲ್ಲಿ ಕಂಡ ನೀರು, ತನ್ನ ನೋವು ತಲುಪಿದ್ದು ಆತನಿಗೆ ಮೂಡಿಸಿದ ಸಮಾಧಾನ. ಇಂದು ಜಗತ್ತಿನ ವಿಶಿಷ್ಠ ಮೋಟಿವೇಷನಲ್ ಸ್ಪೀಕರ್‌ಗಳಲ್ಲಿ ಒಬ್ಬ  ಆಗಿದ್ದಾನೆ. ನಿಜಕ್ಕೂ ಆತನ ಕಥೆ ತಿಳಿದಾಗಿನಿಂದಲೂ ಕೂತಲ್ಲಿ ನಿಂತಲ್ಲಿ ಕಾಡಿದ ಪರಿ ಈ ಲೇಖನ ಬರೆಯದೇ ಇರಲಾಗಲಿಲ್ಲ. 

ಇಷ್ಟಕ್ಕೂ ಅಷ್ಟು ಕಾಡುವಂಥ ಕಥೆಯಾದರೂ ಏನು? ಈತನ್ಯಾರು... ಈ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ಇನ್ನೂ ಒಂದೆರಡು ವಿಷಯ ತಿಳಿಯಬೇಕಿದೆ. ಇಡೀ ಜಗತ್ತಿಗೆ ಭಯೋತ್ಪಾದನೆಯ ರಕ್ತದೂಟ ಉಣಿಸುತ್ತಿರುವ ಪಾಕಿಸ್ಥಾನ ತನ್ನ ಸ್ವಂತ ನೆಲದಲ್ಲಿ ಅದನ್ನೇ ಭಿತ್ತಿ ಬೆಳೆದು ಇಂದು ಅದನ್ನೇ ಉಣ್ಣುತ್ತಿದೆ. ಸದಾ ಭಯೋತ್ಪಾದನಾ ದಾಳಿಯ ನೆರಳಲ್ಲೇ ಬದುಕುತ್ತಿರುವ ದೇಶದಲ್ಲಿ ಅದರ ಪರಿಣಾಮ ಎದುರಿಸುವದು ಮಾತ್ರ ಅಮಾಯಕ ಜನರು. ದೇಶದಲ್ಲಿ ಅತ್ಯಂತ ಪ್ರಬಲವಾಗಿರುವ ಟಿಟಿಪಿ ಅಂದರೆ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಮತ್ತು ದೇಶ್ ನಂತಹ ಉಗ್ರ ಗುಂಪುಗಳು ಇನ್ನೂ ಹತ್ತು ಹಲವು ಉಗ್ರ ಸಂಘಟನೆಗಳು ಇಡೀ ದೇಶದ ಶಾಂತಿ ನೆಮ್ಮದಿ ಕದಡಿ ಉಗ್ರ ಭಯವೊಂದರ ಭೀತಿಯಲ್ಲಿ ಜನಜೀವನ ಸಾಗುತ್ತಿದ್ದರೂ ಆ ದೇಶ ಮಾತ್ರ ತನ್ನ ಎಂದಿನ ಕೃತ್ಯ ನಿಲ್ಲಿಸಿಲ್ಲ. 

     ಅಕ್ಟೋಬರ್ ೧೪-೨೦೧೪ ರಂದು ಪೇಶಾವರದಲ್ಲಿನ ಮಿಲಿಟರಿ ಶಾಲೆ ಎಂದಿನಂತೆ  ತೆರೆದಿತ್ತು. ೧೨ ರ ಹರೆಯದ ಬಾಲಕ ತನಗೆ ಅಂದು ಆರೋಗ್ಯ ಸರಿಯಿರದಿದ್ದರೂ, ಶಿಶುವಿಹಾರದಲ್ಲಿದ್ದ ತನ್ನ ತಮ್ಮನಿಗಾಗಿ ತಯಾರಾಗಿ ಅವನೊಂದಿಗೆ ಶಾಲೆಗೆ ಹೊರಡುತ್ತಾನೆ. ಅಂದು ಪ್ರಥಮ ಚಿಕಿತ್ಸೆ ಕುರಿತು ಆರ್ಮಿ ಡಾಕ್ಟರ್ ಒಬ್ಬರು ನೀಡಲಿದ್ದ ಉಪನ್ಯಾಸಕ್ಕಾಗಿ ಎಲ್ಲಾ ತರಗತಿಯ ಮಕ್ಕಳು ಸಭಾಂಗಣದಲ್ಲಿ ಸೇರುತ್ತಾರೆ. ಮಾನಿಟರ್ ಆಗಿದ್ದ ವಾಲಿದ್ ಖಾನ್ ಎಲ್ಲಾ ತರಗತಿಗಳಿಗೂ ಸಭಾಂಗಣದಲ್ಲಿ ಸೇರುವಂತೆ ಖುದ್ದು ತಾನೆ ಮಾಹಿತಿ ನೀಡಿ ಬರುತ್ತಾನೆ. ಸಭಾಂಗಣದ ಹಾದಿಯಲ್ಲಿರುವಾಗಲೇ ಗುಂಡಿನ ಸದ್ದು ತುಸು ಜೋರಾಗಿ ಕೇಳುತ್ತದೆ. ಇದು ಮಿಲಿಟರಿಯ ಎಂದಿನ ಕಾರ್ಯಾಚರಣೆ ಎಂದುಕೊಂಡು ಎಲ್ಲಾ ಶಿಕ್ಷಕರು ಮಕ್ಕಳು ಸೇರಿದಂತೆ ಸಭಾಂಗಣದಲ್ಲಿ ಸೇರುತ್ತಾರೆ. ಮುಖ್ಯ ಶಿಕ್ಷಕ ಮತ್ತು ಆರ್ಮಿ ಡಾಕ್ಟರ್ ಅವರೊಂದಿಗೆ ವೇದಿಕೆ ಮೇಲಿದ್ದ ವಾಲಿದ್ ಗೆ ಆಡಿಟೋರಿಯಮ್ ಹೊರಗೆ ಗನ್ ಹಿಡಿದು ನಿಂತಿದ್ದ ಆರು ಜನ ಕಾಣುತ್ತಾರೆ. ಅಲ್ಲಿಂದ ಶುರುವಾದ ಗುಂಡಿನ ಸುರಿಮಳೆ, ಏನಾಗುತ್ತಿದೆ ಎಂದು ಯೋಚಿಸಲೂ ಅವಕಾಶವಿಲ್ಲದಂತೆ, ಸೇರಿದ್ದ ಎಲ್ಲಾ ಮಕ್ಕಳೂ ಶವಗಳಾಗಿ ಚೇರ್ ನಿಂದ ಕೆಳಗೆ ಬೀಳುತ್ತಿದ್ದಾರೆ. ಇಡೀ ಸಭಾಂಗಣ ರಕ್ತದಲ್ಲಿ ಅದ್ದಿ ಕೆಂಪು ನೆಲವಾಗಿ ಮಾರ್ಪಡುತ್ತದೆ. ವೇದಿಕೆ ಮೇಲೆ ಏನೊಂದು ಅರಿವಾಗದೇ ನೋಡುತ್ತಿದ್ದ ವಾಲಿದ್ ನನ್ನೂ ಒಬ್ಬ ಶೂಟ್ ಮಾಡಿದ ಕೂಡಲೇ ನೆಲಕ್ಕುರುಳುವ ವಾಲಿದ್.



ಆದರೆ ಆತ ಸತ್ತಿರಲಿಲ್ಲ. ಆತನ ಎಲ್ಲಾ ಸಹಪಾಠಿಗಳು ಕಣ್ಮುಂದೆ ಶವವಾಗುವದಕ್ಕೆ ವೀಕ್ಷಕನಾಗಿದ್ದ. ಆತ ಜೀವಂತವಿರುವುದು ಗುರುತಿಸಿದ ಇನ್ನೊಬ್ಬ ಟೆರರಿಸ್ಟ್ ಸತತ ಆರಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ದ. ಆ  ಘಳಿಗೆ ಅಮ್ಮನನ್ನು ಕೊನೆಯ ಬಾರಿಗೆ ನೋಡಬೇಕು ಎಂಬುದೊಂದೇ  ಆತನಿಗೆ ತೀವ್ರವಾಗಿ ಅನ್ನಿಸುತ್ತದೆ. ಆತನ  ಇಡೀ ದೇಹ ರಕ್ತದಲ್ಲಿ ಮುಳುಗಿತ್ತು. ಅದಾಗಲೇ ಮುಖದ ಅವಯವಗಳು ಒಂದೂ ಗುರುತಿಸಲು ಸಾಧ್ಯವಾಗದಂತೆ ರಕ್ತದಲ್ಲಿ ಅದ್ದಿದ್ದ ಚಹರೆ, ಆ ರಕ್ತ ಸಿಕ್ತ ದೇಹವನ್ನೂ ಸತ್ತಿದ್ದಾನಾ!? ಎಂಬುದನ್ನು ಮತ್ತೊಮ್ಮೆ ಖಾತರಿಸಿಕೊಳ್ಳಲು ಉಗ್ರನೊಬ್ಬ ಬೂಟು ಕಾಲಿನಿಂದ ಎದೆಗೆ ಒದ್ದ! ಉಗ್ರವಾದ ಎಂದರೆ ಹೀಗಿರುತ್ತದಾ!!!!! ಎಂಬ ಉದ್ಗಾರ ಎಂಥವರಿಗೂ ಸಂಕಟದೊಂದಿಗೆ ಹೊಮ್ಮುವಂತೆ! ಆ ನಂತರ “ಉಗ್ರರು ಕಾಲೇಜಿನೆಡೆಗೆ ಧಾವಿಸದ್ದಾರೆ!”, “ಇಲ್ಲಿಂದ ಹೋದರು!”  ಎಂಬ ಅರಚಾಟದ ಅಲೆ ಇಡೀ ಹಾಲ್ ಆವರಿಸಿತ್ತದೆ.  ಇದರ ಹಿಂದೆಯೇ ಗುಂಡಿನೇಟು ತಿಂದೂ ಜೀವ ಉಳಿದವರು ಸಭಾಂಗಣದಿಂದ ಹೊರಗೆ ಓಡುತ್ತಾರೆ. ಅಂತಹ ಸ್ಥಿತಿಯಲ್ಲೂ ವಾಲಿದ್ ನ ಇಂದ್ರಿಯಗಳು ಕೆಲಸ ಮಾಡುತ್ತಿದ್ದವು. ಇಡೀ ದೇಹ ನಿಶ್ಚೇತವಾಗಿತ್ತು. ಸಹಾಯಕ್ಕಾಗಿ ಕೈಯೆತ್ತಿದರೆ ಯಾರೂ ಆತನನ್ನು ಗಮನಿಸುವ ಸ್ಥಿತಿ ಇರಲಿಲ್ಲ. ಎಲ್ಲರ ಪರಿಸ್ಥಿತಿ ಹಾಗೆಯೇ ಇತ್ತು. 

ಸಭಾಂಗಣದ ವೇದಿಕೆಯಿಂದ ತೆವಳಲು ಆರಂಭಿಸಿದ. ಆ ಸ್ಥಿತಿಯಲ್ಲಿ  ಎಚ್ಚರವಾಗಿ ಉಳಿದಿರಬೇಕೆಂಬುದರ ತಿಳುವಳಿಕೆಯಿಂದ ಎಚ್ಚರವಾಗಿ ಪ್ರಯತ್ನಪೂರ್ವಕ  ಕೈಕಾಲು ಅಲ್ಲಾಡಿಸಲು ಪ್ರಯತ್ನಿಸುತ್ತಿದ್ದ. ಶಾಲೆಯಿಂದ ಹೊರಗೆ ಶೆಲ್ ದಾಳಿ ಸದ್ದು ಆಗಸಕ್ಕಿಟ್ಟಿತ್ತು. ಅರೆತೆರೆದ ಕಣ್ಣುಗಳಿಂದ ಹಕ್ಕಿಗಳು ಚಲ್ಲಾಪಿಲ್ಲಿಯಾಗಿ ಹಾರುವುದ ಕಂಡ ಅವನಿಗೆ,  ಘಳಿಗೆ ಹಕ್ಕಿಯಾಗಿ ತಾನು ಅಲ್ಲಿಂದ ಹಾರಿ ಹೋಗುವಂತಿದ್ದಿದ್ದರೆ ಅನ್ನಿಸಿತು. ಹತ್ತು ನಿಮಿಷಗಳ ನಂತರ ಮಿಲಿಟರಿ ಪಡೆ ಬಂದು ಎಲ್ಲರನ್ನೂ  ಆಸ್ಪತ್ರಗೆ ಸೇರಿಸಿತು. 

ರಕ್ತದಲ್ಲಿ ಸಂಪೂರ್ಣ ಮುಳುಗಿ ನಿಶ್ಚಲವಾಗಿದ್ದ  ದೇಹ ನೋಡಿ ವೈದ್ಯರು ಉಳಿದ ಶವಗಳೊಂದಿಗೆ ವಾಲೀದ್ ನನ್ನು  ಸೇರಿಸಿದರು. ತಾನು ಜೀವಂತವಿರುವುದನ್ನು ಹೇಳಲು ಮಾಡಿದ ಆತನ ಯತ್ನಗಳು ಅರ್ಥಕಾಣಲಿಲ್ಲ. ಒಮ್ಮೆ ದೀರ್ಘ ಉಸಿರೆಳೆದುಕೊಂಡು ಕೈಕಾಲು ಕದಲಿಸಲು ಯತ್ನಿಸಿದ.  ಮುಖದ ತುಂಬಾ ಹರಿದಿದ್ದ ರಕ್ತ, ರಕ್ತದ ಗುಳ್ಳೆಗಳಾಗಿ ಮಾರ್ಪಟ್ಟವು. ನರ್ಸ್ ಒಬ್ಬಾಕೆ ಇದನ್ನು ಗುರ್ತಿಸಿ ವೈದ್ಯರನ್ನು ಕರೆದಳು. ಕೂಡಲೇ ಆಪರೇಷನ್ ಗಾಗಿ ಕರೆದೊಯ್ದರು. ಅಲ್ಲಿಂದ ಹತ್ತು ದಿನ ಕೋಮಾವಸ್ಥೆ ಹಲವಾರು ಸರ್ಜರಿಗಳು, ಎರಡು ವರ್ಷದ ವೈದ್ಯ...ಎಲ್ಲವೂ ಸೇರಿ ಇಂದು ವಾಲೀದ್ ಖಾನ್ ಮತ್ತೆ  ಬರ್ಮಿಂಗ್ ಹ್ಯಾಮ್ ನ ಶಾಲೆಯಲ್ಲಿ ಓದುತ್ತಿದ್ದಾನೆ. 

ವಾಲೀದ್ ಕೋಮಾದಿಂದ ಕಣ್ಣುಬಿಟ್ಟಾಗ, ಗುಂಡೇಟು ತಿಂದು ಸಾವು ಸನಿಹದಲ್ಲಿದೆ ಅನ್ನಿಸಿದಾಗ ಮತ್ತೆ ನೋಡಲಾರೆನೇನೋ ಅಂದುಕೊಂಡ ಅಮ್ಮ ಕಣ್ಮುಂದೆ ಕಂಡದ್ದು, ಇಡೀ ಜೀವಮಾನದಲ್ಲಿ ಮರೆಯದ ಘಳಿಗೆ ಅಂತ ಪ್ರತೀಬಾರಿಯ ತನ್ನ ಮಾತುಗಳಲ್ಲಿ ವ್ಯಕ್ತಪಡಿಸುತ್ತಾನೆ. ಆಸ್ಪತ್ರಯಲ್ಲಿದ್ದ ಅವನನ್ನು ಎಲ್ಲಾ ಸಾಮಾಜಿಕ ತಾಣಗಳಿಂದ ದೂರ ಇರಿಸಲಾಗಿತ್ತು. ಮತ್ತೆ ಆ ಘಟನೆಯ ಬಗ್ಗೆ ತಿಳಿದು ಅವನ ಮಾನಸಿಕ ಸ್ಥಿತಿ ಕುಸಿಯಬಹುದೆಂದು. ಇದೇ ಘಟನೆ ಆಧರಿಸಿ ಭಯಾನಕ ಸ್ವಪ್ನ ಬರುತ್ತಿದ್ದವು ಅತೀ ಸಹಜವೆಂಬಂತೆ.  ಆಸ್ಪತ್ರೆಯಲ್ಲಿ ನಾಲ್ಕು ತಿಂಗಳು ಕಳೆದ ನಂತರ ಒಮ್ಮೆ ಯಾರೂ ಇಲ್ಲದ ವೇಳೆ ಅಂದಿನ ಘಟನೆ ಬಗ್ಗೆ ಮತ್ತು ತನ್ನೆಲ್ಲಾ ಶಿಕ್ಷಕರು ಸ್ನೇಹಿತರ ಬಗ್ಗೆ ಮಾಹಿತಿ ಹುಡುಕುತ್ತಾನೆ. ಅಂದು ಸಭಾಂಗಣದಲ್ಲಿ ಸೇರಿದ್ದ ಸಾವಿರಕ್ಕೂ ಹೆಚ್ಚು ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳ ಪೈಕಿ ೧೩೨  ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೧೪೯ ಜನ ಸಾವನ್ನಪ್ಪಿದ್ದರು. ಇನ್ನು ಜರ್ಜರಿತರಾಗಿ ಗಾಯಗೊಂಡವರ ಲೆಕ್ಕವೇನೋ... ಅಸಲಿಗೆ ಅಂದು ಪೇಶಾವರ ಶಾಲೆಯಲ್ಲಿ ಜರುಗಿದ ಉಗ್ರ ಆಕ್ರಮಣ ಜಗತ್ತು ಕಂಡ ೪ ನಾಲ್ಕು ಶಾಲೆಗಳ ಮೇಲೆ ಆದ ಆಕ್ರಮಣಗಳಲ್ಲಿ ಒಂದು!!! ಇದನ್ನು ಅರಿಯುತ್ತಿದ್ದಂತೆ ಬಿಕ್ಕತೊಡಗಿದ. ಆಗ ಬಂದ ಅವನ ತಾಯಿಯೂ ಆತನೊಂದಿಗೆ ಅತ್ತರು. ನಂತರ ಸಾವರಿಸಿಕೊಂಡು, “ಹೀಗೆ ಅಳುವ ಬದಲು, ಇಂತಹದ್ದೇ ನೋವಿನಲ್ಲಿರುವವರೆಗೆ ಏನಾದರೂ ಮಾಡಲು ಸಾಧ್ಯವಾ ಯೋಚಿಸು ಎಂದರು”.

 ಆಸ್ಪತ್ರೆಯ ಬಿಳಿಯ ಗೋಡೆಗಳ ಮಧ್ಯೆ ಅಂದು ತನ್ನ ತಾಯಿ ಹೇಳಿದ ಮಾತುಗಳು ಸದಾ  ರಿಂಗಣಿಸುತ್ತಿದ್ದವು. ಎರಡು ವರ್ಷದ ವೈದ್ಯದ ನಂತರ ಹೊಲಿದು ಬೆಸೆದ ಚರ್ಮ, ಸ್ಟೀಲ್ ರಾಡ್ ಗಳೊಂದಿಗೆ ಕೂಡಿಸಿದ ತನ್ನ  ದೇಹದೊಂದಿಗೆ ಮತ್ತೆ ಶಾಲೆ ಆರಂಭಿಸಿದ ವಾಲೀದ್. ಸಹಪಾಠಿಗಳ, ಜಗತ್ತಿನ ಎಲ್ಲರ ಮುಂದೆ ತನ್ನ ಕಥೆ ತಾನಾಗಿ ತೆರೆದಿಡುತ್ತಾ...ಇಂದು ದೊಡ್ಡ ಜಗತ್ತಿನ ದೊಡ್ಡ ಮೋಟಿವೇಷನಲ್ ಸ್ಪೀಕರ್ ಗಳಲ್ಲಿ ಒಬ್ಬನಾಗಿದ್ದಾನೆ. ಜರ್ಜರಗೊಂಡು ಇನ್ನು ಏಳಲಾರೆ ಎಂಬ ಸ್ಥಿತಿಯಲ್ಲಿ ಈತನ ಒಂದು ಝಲಕು ಮತ್ತೆ ಏಳಿಸಬಲ್ಲದು. ವಾಲೀದ್ ನಿನಗೇ ನೀನೇ ಸಾಟಿ!


Comments

  1. The young man's spirit is indomitable. His instinct for survival is incredible. His mission to motivate others is exemplary.

    ReplyDelete
  2. very good article thanks for a good read

    ReplyDelete
  3. ಶ್ರೀಮತಿ ಮಂಜುಳಾ ಅವರು ಬರೆದಿರುವ ಸ್ಪೂರ್ತಿದಾಯಕ ಕಥನ ಮನಕಲಕುವಂತಿದೆ ಒಂದು ನೈಜ ಘಟನೆಯನ್ನು ತುಂಬಾ ಭಾವನಾತ್ಮಕವಾಗಿ ಹಾಗೂ ಸ್ಪಷ್ಟ ಸರಳ ಭಾಷೆಯಲ್ಲಿ ಲೇಖನ ಮೂಡಿಬಂದಿದೆ. ಭಯೋತ್ಪಾದನೆ ಆತಂಕವಾದ ಈ ಜಗತ್ತಿನ ಒಂದು ಅತ್ಯಂತ ಪ್ರಮುಖವಾದ ಸಮಸ್ಯೆಯಾಗಿದೆ. ಇದರ ಒಂದು ಕರಾಳ ಮುಖದ ಅನಾವರಣ ಮತ್ತು ಆತ್ಮವಿಶ್ವಾಸ ಸಕಾರಾತ್ಮಕ ವಿಚಾರಗಳಿಂದ ಒಂದು ದುರಂತಮಯ ಕರಾಳ ಅಧ್ಯಾಯವನ್ನು ಅಳಿಸಿಹಾಕಿ ಜೀವನದಲ್ಲಿ ಮುಂದುವರೆಯುವ ರೋಚಕವಾದ ಕಥನ .ಲೇಖಕಿಯೂ ಈ ಹುಡುಗನ ಕಥೆಯ ಮೂಲಕ ನಮ್ಮ ಜೀವನವನ್ನು ಸಕಾರಾತ್ಮಕವಾಗಿ ಬಾಳಬೇಕೆಂಬ ಆಸೆಯನ್ನು ಮೂಡಿಸುತ್ತಾಳೆ .ಜೀವನದಲ್ಲಿ ಕೆಲವೊಂದು ಕಹಿ ಘಟನೆಯನ್ನು ನೆನೆಸುತ್ತಾ ನಮ್ಮ ಮುಂದಿನ ಜೀವನವನ್ನು ನಾಶ ಮಾಡಿಕೊಂಡು ನಕಾರಾತ್ಮಕ ಜೀವನವನ್ನು ಬಿಟ್ಟು ಹೇಗೆ ನಾವು ಉಳಿದ ಭಾಗವನ್ನು ಉಪಯುಕ್ತವಾಗಿ ಸಾಗಬೇಕೆಂದು ಲೇಖಕಿಯ ಆಶಯವಾಗಿದೆ .ವಾಲಿದ್ ಮತ್ತು ಭಯೋತ್ಪಾದನೆ ಇಲ್ಲಿ ಭಾವನಾತ್ಮಕ ಹಾಗೂ ಕಣ್ಣೆದುರಿನ ಕಠೋರ ಸತ್ಯವಾಗಿ ಎಂಬ ವಾಗಿದೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಿಂದ ಆತಂಕವಾದದ ಹಿಂಸೆ ದೌರ್ಜನ್ಯದ ಸಹಿಸಿಕೊಂಡು ಬಾಳುವಂತ ಸ್ಥಿತಿಗೆ ಬಂದು ತಲುಪಿದ್ದೇವೆ. ಲೇಖಕಿಯೂ ವಾಲೆದನ ಹಾಗೂ ಅವರ ತಾಯಿಯ ಅದಮ್ಯ ವಿಶ್ವಾಸ ಜೀವನ್ಮುಖಿ ಧೈರ್ಯ ಹಾಗೂ ಆಶಾಭಾವನೆಯನ್ನು ಅತ್ಯಂತ ಯಶಸ್ವಿಯಾಗಿ ಚಿತ್ರಿಸಿದ್ದಾರೆ .ಲೇಖಕಿಗೆ ಮುಂದಿನ ಬರವಣಿಗೆಗಾಗಿ ಶುಭಾಶಯಗಳು ಹಾಗೂ ಪ್ರಕಟಣೆಗಾಗಿ ನಿಮಗೂ ಹೃತ್ಪೂರ್ವಕವಾದ ಧನ್ಯವಾದಗಳು.

    ReplyDelete
    Replies
    1. ಸೋತ ಬದುಕನ್ನು ಗೆಲ್ಲಿಸುವ ಸ್ಪೂರ್ತಿದಾಯಕ ಬರಹ.

      Delete
  4. ಶ್ರೀಮತಿ ಮಂಜುಳಾ ಅವರೇ ತಮ್ಮ ಲೇಖನ ವಿಭಿನ್ನ, ವಿಶೇಷ ಹಾಗೂ ವಿವರಣೆ ಕಣ್ಣಿಗೆ ಕಟ್ಟಿದ ಹಾಗೆ ಬರೆದಿದ್ದೀರಿ. ಲೇಖನಕ್ಕೆ ಧನ್ಯವಾದಗಳು

    ReplyDelete
  5. ಬರಹ ತುಂಬಾ ಚೆನ್ನಾಗಿದೆ

    ReplyDelete
  6. very nice article very boosting one thanks for the good article

    ReplyDelete
  7. a very good read thanks for publishing an inspiring article

    ReplyDelete

Post a Comment