ಫಾ ಹಿಯೆನ್

ಫಾ ಹಿಯೆನ್

ಲೇಖನ - ಡಾ ಸಿ ವಿ ಮಧುಸೂದನ 


ಪ್ರಾಚೀನ ಭಾರತದ ಜನ ಜೀವನದ ಬಗ್ಗೆ ನಮಗೆ ಅನೇಕ ವೇಳೆ ಕುತೂಹಲಕಾರಿ ಮತ್ತು ಉಪಯುಕ್ತ ಮಾಹಿತಿ ದೊರಕುವುದು ಪರದೇಶದ ಪ್ರಯಾಣಿಕರು ಬರೆದಿಟ್ಟಿರುವ ತಮ್ಮ ಪ್ರವಾಸ ಕಥನಗಳಿಂದ. ಇಂಥ ಪ್ರವಾಸಿಗರಲ್ಲಿ ಚೀನಾ ದೇಶದ ಬೌದ್ಧ ಯಾತ್ರಿಕನಾದ ಫಾ ಹಿಯೆನ್ ಅಗ್ರಗಣ್ಯನು. ಈತನು ಜೀವಿಸಿದ್ದು ಕ್ರಿ.ಶ. ೩೩೭ ರಿಂದ ಕ್ರಿ.ಶ. ೪೨೨ ರ ವರೆಗೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಈತನು ಚೀನಾದ ಪೂರ್ವ ತೀರದಿಂದ ಕ್ರಿ.ಶ ೩೯೯ ರಲ್ಲಿ ಹೊರಟು ಆರು ವರ್ಷಗಳ ನಂತರ ಭಾರತವನ್ನು ಸೇರಿ, ಅಲ್ಲಿ ಆರು ವರ್ಷವಿದ್ದು ಅನಂತರ ಮೂರು ವರ್ಷಗಳ ನೌಕಾಯಾನ ಮಾಡಿ, ಸಿಂಹಳ ಮುಂತಾದ ದ್ವೀಪಗಳನ್ನು ಸಂದರ್ಶಿಸಿ, ಚೀನಾದ ನಾನ್ ಕಿಂಗ್ ನಗರವನ್ನು ಕ್ರಿ.ಶ ೪೧೪ ರಲ್ಲಿ ತಲುಪಿದನೆಂದು ಅವನ ಬರಹದಿಂದಲೇ ತಿಳಿದು ಬರುತ್ತದೆ. ಇವನ ನೆನಪುಗಳನ್ನು ಚೀನೀ ಭಾಷೆಯಿಂದ ಇಂಗ್ಲೀಷಿಗೆ ಮೊದಲು ಭಾಷಾಂತರಿಸಿದ ಜೇಮ್ಸ್ ಲೆಗ್ ಎಂಬುವವರು ಫಾ ಹಿಯೆನ್ನನು ಸನ್ಯಾಸಿಯಾಗಿದ್ದು ಅವನಿಗೆ ಇಪ್ಪತ್ತು ವರ್ಷವಾಗಿದ್ದಾಗ ಮತ್ತು ಅವನು ತನ್ನ ಪ್ರಯಾಣವನ್ನು ಕೈಗೊಂಡಾಗ ಅವನಿಗೆ ಇಪ್ಪತ್ತೈದು ವರ್ಷವಾಗಿದ್ದಿರಬಹುದೆಂದು ಊಹಿಸುತ್ತಾರೆ. ಅಲ್ಲದೆ ಕ್ರಿ.ಶ ೫೧೯ ರಲ್ಲಿ ರಚಿತವಾದ ‘ಶ್ರೇಷ್ಠ ಸಂತರ ಚರಿತ್ರೆ’ (memoirs of eminent monks) ಎಂಬ ಚೀನೀ ಗ್ರಂಥದ ಪ್ರಕಾರ ಫಾ ಹಿಯೆನ್ನನು ತನ್ನ ಎಂಭತ್ತೆಂಟನೆಯ ವಯಸ್ಸಿನ ವರೆಗೆ ಜೀವಿಸಿದ್ದನು ಎಂದು ತಿಳಿಯುತ್ತದೆ. ಈ ವಿವರಗಳನ್ನು ನೋಡಿದರೆ ಈತನ ಜೀವನ ಕಾಲ ಕ್ರಿ.ಶ. ೩೭೪ ರಿಂದ ಕ್ರಿ.ಶ. ೪೬೨ರ ವರೆಗೆ ಎಂದು ತೀರ್ಮಾನಿಸಬೇಕು. ಇದು ಹೇಗಾದರೂ ಇರಲಿ- ಇವನು ಭಾರತದಲ್ಲಿ ಇದ್ದುದು ಕ್ರಿ.ಶ. ೪೦೫ ರಿಂದ ಕ್ರಿ.ಶ. ೪೧೧ ರ ವರೆಗೆ ಎನ್ನುವುದು ನಿರ್ವಿವಾದ.                  

ಫಾ ಹಿಯೆನ್ನನ ತಂದೆ ತಾಯಿಗಳಿಗೆ ಇವನ ಮುನ್ನ ಮೂರು ಗಂಡು ಮಕ್ಕಳಾದರೂ, ಇವರೆಲ್ಲರೂ ಬಾಲ್ಯದಲ್ಲೇ ತೀರಿಕೊಂಡರು. ಆದ್ದರಿಂದ ಇವನ ತಂದೆಯು ಈ ಮಗನ ಮೇಲಾದರೂ ಬುದ್ಧನ ಕೃಪೆಯಾಗಲಿ ಎಂದು ಫಾ ಹಿಯೆನ್ನನನ್ನು ಮನೆಯಲ್ಲೇ ಇದ್ದುಕೊಂಡು ಸ್ಥಳೀಯ ಬುದ್ಧ ವಿಹಾರದ ಸೇವೆ ಮಾಡುವಂತೆ ನಿಯಮಿಸಿದನು. ಸ್ವಲ್ಪ ದಿನಗಳಾದ ಮೇಲೆ ಫಾ ಹಿಯೆನ್ನನಿಗೆ ತೀವ್ರವಾದ ಖಾಯಿಲೆಯಾಗಲು, ವಿಹಾರದವರು ಅವನನ್ನು ತಮ್ಮಲ್ಲೇ ಇಟ್ಟುಕೊಂಡು ಚಿಕಿತ್ಸೆ ನಡೆಸಿದರು. ಕಾಲಕ್ರಮದಲ್ಲಿ ಅವನಿಗೆ ಗುಣವಾದರೂ ಮತ್ತೆ ಅವನು ಮನೆಗೆ ಹೋಗಲು ಇಚ್ಛಿಸಲಿಲ್ಲ. ವಿಹಾರದಲ್ಲೇ ಇದ್ದುಬಿಟ್ಟನು.                 

ಇವನಿಗೆ ಹತ್ತು ವರ್ಷವಾದಾಗ ಇವನ ತಂದೆಯೂ ಮೃತನಾದನು. ಒಬ್ಬಂಟಿಯೂ, ಅಸಹಾಯಕಳೂ ಆದ ಇವನ ತಾಯಿಯ ಕಷ್ಟವನ್ನು ನೋಡಲಾರದೆ, ಇವನ ಸೋದರಮಾವನು ಮಠಕ್ಕೆ ಬಂದು ಫಾ ಹಿಯೆನ್ನನನ್ನು ಮನೆಗೆ ಹಿಂತಿರುಗುವಂತೆ ಕೇಳಿಕೊಂಡನು. ಆಗ ಅವನು "ಹಿಂದೆ ನನ್ನ ತಂದೆ ಬಂದು ಕರೆದಾಗ ನಾನು ಹಿಂತಿರುಗಲಿಲ್ಲ. ಏಕೆಂದರೆ ನನಗೆ ಪ್ರಾಪಂಚಿಕ ವಿಷಯಗಳಲ್ಲಿ ಇಷ್ಟವಿಲ್ಲ.ಅದಕ್ಕೆ ನಾನು ಈಗಲೂ ಮನೆಗೆ ಹಿಂತಿರುಗಲಾರೆ" ಎಂದು ಹೇಳಿದನು. ಮಾವನು ಮತ್ತೆ ಅವನನ್ನು ಬಲವಂತ ಮಾಡದೇ ಬಂದುಬಿಟ್ಟನು. ಫಾ ಹಿಯೆನ್ನನು ಹೀಗೆ ನಿರ್ಧರಿಸಿದರೂ ಅವನಿಗೆ ತಾಯಿಯ ಮೇಲೆ ನಿಜವಾಗಿ ಎಷ್ಟು ಪ್ರೀತಿ ಇತ್ತೆಂಬುದನ್ನು, ಆಕೆ ಮುಂದೆ ಕಾಲವಶಳಾದಾಗ ಆತನು ವ್ಯಕ್ತಪಡಿಸಿದ ಸಂತಾಪದಿಂದಲೇ ಎಲ್ಲರೂ ಅರಿತರು.                

  ಒಮ್ಮೆ ಫಾ ಹಿಯೆನ್ನನು ತನ್ನಂತಹ ಇಪ್ಪತ್ತು ಮೂವತ್ತು ಶಿಷ್ಯರೊಂದಿಗೆ ಭತ್ತದ ಪೈರನ್ನು ಕಡಿಯುತ್ತಿದ್ದನು. ಆಗ ಹಸಿವಿನಿಂದ ಕಂಗೆಟ್ಟ ಕಳ್ಳರ ಗುಂಪೊಂದು ಬಂದು ಭತ್ತವೆಲ್ಲವನ್ನೂ ನಮಗೆ ಕೊಡಿ ಎಂದು ಬೆದರಿಸಿದರು. ಉಳಿದ ಶಿಷ್ಯರೆಲ್ಲರೂ ಹೆದರಿಕೊಂಡು ಓಡಿ ಹೋದರು. ಫಾ ಹಿಯೆನ್ನನೊಬ್ಬನೇ ನಿರ್ಭಯವಾಗಿ ನಿಂತು ಕಳ್ಳರಿಗೆ "ಬೇಕಾದಷ್ಟು ತೆಗೆದುಕೊಳ್ಳಿ. ನೀವು ಹಿಂದೆ ಮಾಡಿದ ಅಧರ್ಮಗಳೇ ನಿಮ್ಮನ್ನು ಈ ದುರ್ಗತಿಗೆ ಇಳಿಸಿವೆ. ನೀವು ಹೀಗೆಯೇ ಮಾಡಬಾರದ್ದನ್ನು ಮಾಡುತ್ತಿದ್ದರೆ, ನಿಮ್ಮ ಸ್ಥಿತಿ ಇನ್ನೂ ಕೆಟ್ಟದ್ದಾಗುತ್ತದೆ. ಅದಕ್ಕೆ ನಿಮ್ಮಮೇಲೆ ನನಗೆ ಕರುಣೆಯಾಗುತ್ತಿದೆ" ಎಂದನು. ಕಳ್ಳರೆಲ್ಲರೂ ವ್ಯಾಕುಲರಾಗಿ, ಭತ್ತದ ಒಂದು ಕಾಳನ್ನೂ ಮುಟ್ಟದೆ ಹೊರಟು ಹೋದರು. ಈ ವಿಷಯವನ್ನು ತಿಳಿದ ಆ ಮಠದಲ್ಲಿದ್ದ ನೂರಾರು ಸನ್ಯಾಸಿಗಳೆಲ್ಲರೂ ಫಾ ಹಿಯೆನ್ನನ ನಡತೆಯನ್ನೂ, ಧೈರ್ಯವನ್ನೂ ಕುರಿತು ಕೊಂಡಾಡಿದರು.               

ಫಾ ಹಿಯೆನ್ನನು ಶಿಷ್ಯತ್ವವನ್ನು ಮುಗಿಸಿ ಪೂರ್ಣ ಸನ್ಯಾಸಿಯಾದನು. ಆ ವೇಳೆಗೆ ಬೌದ್ಧ ಧರ್ಮವು ಭಾರತದಿಂದ ಚೀನಾ ದೇಶಕ್ಕೆ ಬಂದು ಸುಮಾರು ಐನೂರು ವರ್ಷಗಳಾಗಿದ್ದವು. ಆ ಧರ್ಮದ ಗ್ರಂಥಗಳ ಶುದ್ಧ ಪ್ರತಿಗಳು ಸಿಕ್ಕುವುದು ಕಷ್ಟವಾಗಿತ್ತು. ಇದನ್ನು ಗಮನಿಸಿದ ಫಾ ಹಿಯೆನ್ನನು ಭೌದ್ಧ ಗ್ರಂಥಗಳ, ಅದರಲ್ಲೂ ಮುಖ್ಯವಾಗಿ ವಿನಯ ಪಿಟಕದ (ಸದ್ವರ್ತನೆಯ ಸೂತ್ರಗಳು)ಸಂಗ್ರಹಣೆಗೋಸ್ಕರ ಭಾರತಕ್ಕೆ ಪ್ರಯಾಣಿಸುವುದೆಂದು ನಿರ್ಧರಿಸಿದನು. ಈತನ ಇನ್ನೊಂದು ಉದ್ದೇಶ, ಭಗವಾನ್ ಬುದ್ಧನು ಸಂಚಾರ ಮಾಡಿ ಬೋಧಿಸಿದ ಕ್ಷೇತ್ರಗಳ ದರ್ಶನ ಮಾಡುವುದು. ಇವನ ಜತೆಗೆ ಇನ್ನೂ ನಾಲ್ಕು ಸನ್ಯಾಸಿಗಳು ಬರಲು ಇಚ್ಛಿಸಿದರು. ಹಾಗಾಗಿ ಒಟ್ಟು ಹೊರಟವರ ಸಂಖ್ಯೆ ಐದು. ದಾರಿಯಲ್ಲಿ ಇನ್ನೂ ನಾಲ್ಕು ಜನ ಸನ್ಯಾಸಿಗಳು ಇವರ ಗುಂಪಿಗೆ ಸೇರಿಕೊಂಡರು. ಕಾಲ್ನಡಿಗೆಯಲ್ಲಿ ಇವರು ಕೈಗೊಂಡ ಈ ಯಾತ್ರೆ ತುಂಬಾ ದೀರ್ಘ ಮತ್ತು ಅತ್ಯಂತ ಕಠಿಣವಾದದ್ದು. ಚೀನಾದ ಪೂರ್ವ ತೀರದಿಂದ ಹೊರಟು, ಮಧ್ಯ ಏಷ್ಯದ ಅಡ್ಡಗಲಕ್ಕೂ ನಡೆದು ಅನಂತರ ದಕ್ಷಿಣಾಭಿಮುಖವಾಗಿ ನಡೆದು ಭಾರತವನ್ನು ಪ್ರವೇಶಿಸಬೇಕು. ಹೀಗೆ ನಡೆಯುವಾಗ ತಕ್ಲ ಮಕಾನ್ ಎಂಬ ಗಿಡ ಮರಗಳಿಲ್ಲದ ಮರಳು ಕಾಡನ್ನು ದಾಟಬೇಕು, ಹಿಂದೂ ಕುಷ್ ಪರ್ವತ ಶ್ರೇಣಿಯ ಮೂಲಕ ಹೋಗಬೇಕು. ಇದರಿಂದ ಅನೇಕ ಸಲ ಇವರಿಗೆ ಸುಡುವ ಬಿಸಿಲನ್ನೂ, ಕೊರೆಯುವ ಚಳಿಯನ್ನೂ ಸಹಿಸಬೇಕಾಯಿತು; ದುರ್ಗಮ ಕಣಿವೆಗಳನ್ನು ಹತ್ತಿಳಿಯಬೇಕಾಯಿತು; ಭೋರ್ಗರೆಯುವ ನದಿಗಳನ್ನು ದಾಟಬೇಕಾಯಿತು. ಅನೇಕ ಕಡೆ ತಿಂಗಳಾನುಗಟ್ಟಲೆ ಅನಿವಾರ್ಯವಾಗಿ ತಂಗಬೇಕಾಯಿತು. ಆದರೆ ಹಲವಾರು ದೇಶಗಳಲ್ಲಿ ಇವರಿಗೆ ಒಳ್ಳೆಯ ಅತಿಥಿ ಸತ್ಕಾರವೂ ದೊರೆಯಿತು.         



 ಭಾರತವನ್ನು ಉದ್ಯಾನ ಎಂಬ ನಗರದಲ್ಲಿ ಪ್ರವೇಶಿಸಿದರು. ಇದು ಆಗಿನ ಕಾಲದಲ್ಲಿ ಶುಭವಸ್ತು ಎಂದು ಕರೆಯುತ್ತಿದ್ದ ಕಣಿವೆಯಲ್ಲಿತ್ತು.(ಈ ಶುಭವಸ್ತುವೇ ಈಗಿನ ಪಾಕಿಸ್ತಾನದಲ್ಲಿರುವ Swat valley) ಉದ್ಯಾನವು ಭೌದ್ಧರ ಒಂದು ಮುಖ್ಯ ನೆಲೆಯಾಗಿದ್ದಿತು. ಇಲ್ಲಿ ಐನೂರಕ್ಕೂ ಹೆಚ್ಚು ಭಿಕ್ಷುಗಳು ಅನೇಕ ಸಂಘಾರಾಮಗಳಲ್ಲಿರುತ್ತಿದ್ದರು. ಯಾರಾದರೂ ಪರದೇಶದ ಭಿಕ್ಷುಗಳು ಬಂದರೆ ಅವರಿಗೆ ಉಚಿತವಾಗಿ ಮೂರು ದಿನದ ಊಟ ಮತ್ತು ವಸತಿ. ಅನಂತರ ಬೇರೆ ಏರ್ಪಾಡು ಮಾಡಿಕೊಳ್ಳಬೇಕು. ಇದಾದ ನಂತರ ಅವರು ತಕ್ಷಶಿಲ, ಪುರುಷಪುರ(ಇಂದಿನ ಪೆಷಾವರ್) ಮುಂತಾದ ಭೌದ್ಧರಿಗೆ ಪವಿತ್ರವಾದ ಕ್ಷೇತ್ರಗಳನ್ನು ಸಂದರ್ಶಿಸಿದರು. ಪುರುಷಪುರವನ್ನು ನೋಡಿದ ಬಳಿಕ ಇಬ್ಬರು ಯಾತ್ರಿಕರು ಹಿಂತಿರುಗಿದರು. ಇನ್ನು ಕೆಲವರು ಆಗಲೇ ಬೇರೆ ದಾರಿಯನ್ನು ಹಿಡಿದಿದ್ದರು. ಒಬ್ಬನು ಚಳಿಯನ್ನು ತಡೆಯಲಾರದೆ ಮೃತನಾದನು. ಮುಂದಿನ ಯಾತ್ರೆಗೆ ಉಳಿದವರು ಫಾ ಹಿಯೆನ್ ಮತ್ತು ತಾಒ ಚಿಂಗ್ ಎಂಬ ಇನ್ನೊಬ್ಬ ಸನ್ಯಾಸಿ ಮಾತ್ರವೇ. ಮುಂದೆ ಅವರು ಯಮುನಾ ನದಿಯ ತೀರದಲ್ಲಿದ್ದ ಮಥುರಾ ನಗರವನ್ನು ತಲುಪಿದರು. ಆಗ ಭಾರತದ ಸ್ವರ್ಣಯುಗ-ಗುಪ್ತ ಚಕ್ರವರ್ತಿಯಾದ ಎರಡನೆಯ ಚಂದ್ರಗುಪ್ತ (ವಿಕ್ರಮಾದಿತ್ಯ) ರಾಜ್ಯಭಾರವನ್ನು ನಡೆಸುತ್ತಿದ್ದನು. ಚಕ್ರವರ್ತಿಯು ಹಿಂದುವಾದರೂ, ಭೌದ್ಧಮತಕ್ಕೆ ಅಪಾರ ಗೌರವವಿತ್ತು- ಮಥುರಾ ನಗರದಲ್ಲಿ ಇಪ್ಪತ್ತು ಭೌದ್ಧ ವಿಹಾರಗಳೂ ೩೦೦೦ ಸನ್ಯಾಸಿಗಳೂ ಇದ್ದರಂತೆ. ಈ ದೇಶದ ವಿಷಯವಾಗಿ ಫಾ ಹಿಯೆನ್ನನು ಹೀಗೆ ಬರೆದಿದ್ದಾನೆ: ಇಲ್ಲಿ ಹೆಚ್ಚು ಚಳಿಯೂ ಇಲ್ಲ, ಹೆಚ್ಚು ಬಿಸಿಲೂ ಇಲ್ಲ. ಜನಸಂಖ್ಯೆ ಹೆಚ್ಚಾಗಿದ್ದರೂ ಎಲ್ಲರೂ ಸುಖಿಗಳಾಗಿದ್ದಾರೆ. ಚಂಡಾಲರ ವಿನಹ ಯಾರೂ ಪ್ರಾಣಿವಧೆ ಮಾಡುವುದಿಲ್ಲ. ಈರುಳ್ಳಿ, ಬೆಳ್ಳುಳ್ಳಿಗಳನ್ನು ತಿನ್ನುವುದಿಲ್ಲ. ಯಾರೂ ತಾವಿರುವ ಸ್ಥಳಗಳನ್ನು ದಾಖಲಿಸಬೇಕಾಗಿಲ್ಲ - ಇಷ್ಟವಿದ್ದಷ್ಟು ದಿವಸ ಇರಬಹುದು, ಇಲ್ಲವಾದರೆ ಬೇರೆ ಕಡೆ ಹೋಗಬಹುದು. ಎಂಥ ಅಪರಾಧವೇ ಆಗಿರಲಿ, ಅದಕ್ಕೆ ಮರಣ ದಂಡನೆ ಏಕೆ, ಕಠಿಣ ಶಿಕ್ಷೆಯನ್ನೂ ಕೊಡುವುದಿಲ್ಲ- ಅಪರಾಧಕ್ಕನುಸಾರವಾಗಿ ಶುಲ್ಕ ವಿಧಿಸುತ್ತಾರೆ. ಒಬ್ಬನೇ ವ್ಯಕ್ತಿ ಪದೇ ಪದೇ ದುಷ್ಕ್ರಿಯೆ ನಡೆಸುತ್ತಿದ್ದರೆ ಮಾತ್ರ ಅವನ ಹಸ್ತಚ್ಛೇಧ ಮಾಡುತ್ತಾರೆ. ತಮ್ಮ ಜಮೀನಿನಲ್ಲೇ ಬೆಳೆದ ಪೈರಿಗೆ ತೆರಿಗೆ ಕೊಡಬೇಕಾಗಿಲ್ಲ. ಸರ್ಕಾರದ ಜಮೀನಿನಲ್ಲಿ ಬೆಳೆದರೆ ಮಾತ್ರ ಅದರ ಒಂದು ಅಂಶವನ್ನು ರಾಜನಿಗೆ ಕೊಡಬೇಕು-ಇತ್ಯಾದಿ‘.                   

ನಮ್ಮ ಯಾತ್ರಿಕರು ಮುಂದೆ ಶ್ರಾವಸ್ತಿ(ಬುದ್ಧನು ಅನೇಕ ಬಾರಿ ಬೋಧನೆ ಮಾಡಿದ ಮತ್ತು ಕ್ರೂರಿ ಅಂಗುಲಿಮಾಲನ ಪರಿವರ್ತನೆಯಾದ ಸ್ಥಳ), ಕುಶನಗರ ಅಥವಾ ಕುಶಿನಾರ(ಬುದ್ಧನು ಮಹಾನಿರ್ವಾಣ ಹೊಂದಿದ ಊರು) ಮುಂತಾದ ಭೌದ್ಧರ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ ಮಗಧ ರಾಜಧಾನಿಯಾದ ಪಾಟಲಿಪುತ್ರ(ಇಂದಿನ ಪಾಟ್ನಾ) ನಗರವನ್ನು ಬಂದು ಸೇರಿದರು. ಈ ಪಟ್ಟಣದ ಬಗ್ಗೆ ಫಾ ಹಿಯೆನ್ನನ ಅಭಿಪ್ರಾಯ ಹೀಗಿದೆ: ‘ಈ ದೇಶವು ಸಂಪದ್ಭರಿತವಾದುದು. ಇಲ್ಲಿ ಅನೇಕ ಧನವಂತರಿದ್ದು ದಾನ ಧರ್ಮಗಳಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಇಲ್ಲಿನ ವರ್ತಕರು ಇಲ್ಲಿ ಹಲವಾರು ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ. ಈ ಆಸ್ಪತ್ರೆಗಳಲ್ಲಿ ದೇಶದ ಯಾವ ಭಾಗದಿಂದಲಾದರೂ ಬರುವ ದೀನ ದರಿದ್ರರು, ಅನಾಥರು, ಅಂಗವಿಹೀನರು, ವ್ಯಾಧಿಗ್ರಸ್ಥರು, ವಿಧುರರು, ಪುತ್ರವಿಹೀನರು ಮುಂತಾದವರಿಗೆ ಸ್ವಾಗತವಿದೆ. ವೈದ್ಯರು ಇಂಥವರನ್ನು ಚೆನ್ನಾಗಿ ಪರೀಕ್ಷಿಸಿ ಚಿಕಿತ್ಸೆಗೆ ಬೇಕಾದ ಮದ್ದು ಮತ್ತು ಆಹಾರವನ್ನು ಕೊಡುವ ವ್ಯವಸ್ಥೆ ಮಾಡುತ್ತಾರೆ. ಯಾವ ವಿಧದಲ್ಲೂ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಗುಣ ಹೊಂದಿದವರು ತಾವೇ ತಮ್ಮ ಊರಿಗೆ ಹಿಂತಿರುಗುತ್ತಾರೆ (ಬಲವಂತ ಮಾಡಿ ಹೊರಡಿಸಬೇಕಾಗಿಲ್ಲ)’ ಪಾಟಲಿಪುತ್ರದಿಂದ ಹೊರಟು ರಾಜಗೃಹ(ಇದರ ಸಮೀಪದಲ್ಲಿ ಬುದ್ಧನ ಮೆಚ್ಚಿನ ಶಿಷ್ಯರಲ್ಲೊಬ್ಬನಾದ ಸಾರಿಪುತ್ರನ ಜನ್ಮಸ್ಥಳವಿದೆ, ಅಮ್ರಪಾಲಿಯ ಉದ್ಯಾನವನವೂ ಇದೆ). ಮತ್ತು ಗಯ(ಬುದ್ಧನ ಜ್ಞಾನೋದಯವಾದ ಕ್ಷೇತ್ರ) ಮುಂತಾದ ಸ್ಥಳಗಳನ್ನು ದರ್ಶಿಸಿದರು. ಆ ಸಮಯಕ್ಕಾಗಲೇ ಎರಡೂ ಪಟ್ಟಣಗಳೂ ಪಾಳು ಬಿದ್ದಿದ್ದವು. ಇಲ್ಲಿಂದ ಮುಂದೆ ಅವರು ಬುದ್ಧನು ಮೊಟ್ಟಮೊದಲು ಬೋಧನೆ ಮಾಡಿದ, ಕಾಶೀ ರಾಜ್ಯದ ವಾರಣಾಸಿಯ ಸಮೀಪದಲ್ಲಿರುವ ‘ಜಿಂಕೆಗಳ ವನ’ಕ್ಕೆ ಭೇಟಿಕೊಟ್ಟು ಪಾಟಲಿಪುತ್ರಕ್ಕೆ ಹಿಂತಿರುಗಿದರು. ಅಲ್ಲಿನ ಮಹಾಯಾನ ಬುದ್ಧವಿಹಾರದಲ್ಲಿ ಅವರಿಗೆ ಬೇಕಾಗಿದ್ದ ವಿನಯ ಪಿಟಕದ ಶುದ್ಧ ಪ್ರತಿಯೇ ಅಲ್ಲದೇ, ಮುಖ್ಯವಾದ ಇತರ ಅನೇಕ ಗ್ರಂಥಗಳು ದೊರಕಿದವು. ಇವುಗಳೆಲ್ಲವನ್ನೂ ಅರ್ಥಮಾಡಿಕೊಂಡು ಬರೆಯಬೇಕಾದರೆ ಸಂಸ್ಕೃತವನ್ನೂ, ಪಾಲಿಯನ್ನೂ ಮೊದಲು ಕಲಿಯಬೇಕಾಯಿತು. ಹಾಗಾಗಿ ಯಾತ್ರಿಕರಿಬ್ಬರೂ ಪಾಟಲಿಪುತ್ರದಲ್ಲೇ ಮೂರು ವರ್ಷ ನಿಂತರು.                  

ಭಾರತಕ್ಕೆ ಬಂದ ಕಾರ್ಯವೆಲ್ಲವೂ ಮುಗಿಯಲು ಫಾ ಹಿಯೆನ್ನನು ತನ್ನ ದೇಶಕ್ಕೆ ಮರಳಲು ಸಿದ್ಧನಾದನು. ಅವನ ಸಹಯಾತ್ರಿ ತಾಒ ಚಿಂಗನು "ಇಲ್ಲಿನ ಸನ್ಯಾಸಿಗಳ ನಡತೆ, ಮೌನ ಮತ್ತು ಗಾಂಭೀರ್ಯದ ಮುಂದೆ ನಮ್ಮ ಜನರ ಅಶಿಸ್ತು ಮತ್ತು ಗಲಾಟೆಯನ್ನು ಹೋಲಿಸಿ ನೋಡಿದ ಮೇಲೆ, ನಾನು ಇಲ್ಲೇ ಇದ್ದು ಬಿಡಬೇಕೆಂದು ನಿರ್ಧರಿಸಿದ್ದೇನೆ. ನೀನು ಮಾತ್ರ ಈ ಪವಿತ್ರ ಗ್ರಂಥಗಳೊಂದಿಗೆ ಚೀನಾಗೆ ಹಿಂತಿರುಗು" ಎಂದು ಬಿಟ್ಟನು. ಅಂತೆಯೇ ಫಾ ಹಿಯೆನ್ನನೊಬ್ಬನೇ ತನ್ನ ಅಮೂಲ್ಯ ಗ್ರಂಥಗಳನ್ನು ತೆಗೆದುಕೊಂಡು ತನ್ನ ಮರುಪ್ರಯಾಣವನ್ನು ಆರಂಭಿಸಿದನು. ಗಂಗಾ ನದಿ ಹರಿಯುತ್ತಿದ್ದ ಮಾರ್ಗವನ್ನೇ ಅನುಸರಿಸಿ ತಾಮ್ರಲಿಪ್ತಿ ಎಂಬ ದೇಶಕ್ಕೆ ಬಂದನು. ಇಲ್ಲಿ ೨೨ ಭೌದ್ಧವಿಹಾರಗಳಿದ್ದವು. ಫಾ ಹಿಯೆನ್ನನು ಇಲ್ಲೇ ಮತ್ತೆರಡು ವರ್ಷವಿದ್ದು ಇನ್ನೂ ಅನೇಕ ಸೂತ್ರಗಳನ್ನು ಬರೆದನು. ಪ್ರತಿಮೆಗಳ ಚಿತ್ರಗಳನ್ನೂ ಬಿಡಿಸಿದನು. ಮುಂದೆ ಸಮುದ್ರಯಾನ ಮಾಡಿ ಸಿಂಹಳ ದ್ವೀಪದಲ್ಲಿ ಮತ್ತೆರಡು ವರ್ಷವಿದ್ದು ತನ್ನ ಯಾತ್ರೆಯನ್ನು ಮುಂದುವರಿಸಿದನು. ಕೊನೆಗೆ ಮತ್ತೊಂದು ಹಡಗನ್ನೇರಿ ಮಾರ್ಗದಲ್ಲಿ ಜಾವಾ ದ್ವೀಪದಲ್ಲಿ (ಆಗ ಅಲ್ಲಿ ಹಿಂದೂಗಳು ಮಾತ್ರವೇ ಇದ್ದರು- ಬೌದ್ಧರು ಯಾರೂ ಇರಲಿಲ್ಲ ಎಂದು ಫಾ ಹಿಯೆನ್ನನು ಹೇಳುತ್ತಾನೆ) ಕೆಲವು ದಿನವಿದ್ದು ಅನೇಕ ಚಂಡಮಾರುತ, ನೌಕಾಘಾತಗಳನ್ನು ಅನುಭವಿಸಿ ಕೊನೆಗೂ ತನ್ನ ಪವಿತ್ರ ಗ್ರಂಥಗಳೊಂದಿಗೆ ಚೀನಾವನ್ನು ತಲುಪಿದನು. ಅವನ ಒಟ್ಟು ಪ್ರಯಾಣಕ್ಕೆ ಹದಿನೈದು ವರ್ಷಗಳು ಹಿಡಿದವು. ಆ ವೇಳೆಗಾಗಲೇ ಬುದ್ಧಭದ್ರ ಮತ್ತು ಕುಮಾರಜೀವ ಎಂಬ ಭಾರತದ ಇಬ್ಬರು ಬೌದ್ಧ ಸನ್ಯಾಸಿಗಳು ಭೂಮಾರ್ಗದಿಂದ ಚೀನಾಗೆ ಆಗಮಿಸಿದ್ದರು. ಇವರಿಬ್ಬರ ಸಹಾಯದಿಂದ ಫಾ ಹಿಯೆನ್ನನು ಗ್ರಂಥಗಳನ್ನು ಸಂಶೋಧಿಸಿ, ಪರಿಷ್ಕರಿಸಿದ ಪ್ರತಿಗಳನ್ನು ತಯಾರು ಮಾಡಿದನು.               

ಫಾ ಹಿಯೆನ್ನನ ಬರೆದಿಟ್ಟಿರುವ ಪ್ರವಾಸ ಕಥನದಲ್ಲಿ ಬುದ್ಧನಿಗೂ, ಬೌದ್ಧರಿಗೂ ಸಂಬಂಧಪಟ್ಟ ವಿಷಯಗಳಿಗೆ ಪ್ರಾಶಸ್ತ್ಯವಿದೆ, ನಿಜ. ಆದರೆ ಪ್ರಾಚೀನ ಭಾರತದ ರಾಜ್ಯಭಾರ ಕ್ರಮ, ಜನರ ನಡತೆ ಇತ್ಯಾದಿಗಳ ಬಗ್ಗೆ ನಮಗೆ ದೊರೆತಿರುವ ಕೆಲವೇ ಚಾರಿತ್ರಿಕ ದಾಖಲೆಗಳಲ್ಲಿ ಈತನ ಬರಹಗಳು ಬಹುಮೂಲ್ಯವಾದುವು ಎನ್ನುವುದರಲ್ಲಿ ಸಂಶಯವಿಲ್ಲ.  


Comments

  1. ಒಳ್ಳೆಯ ಮಾಹಿತಿಭರಿತ ಲೇಖನ. ಇಂತಹ ನೂರಾರು ವಿಷಯಗಳು ನಿಮ್ಮ ಮಸ್ತಿಷ್ಕದಲ್ಲೇ ಇರಬಹುದಲ್ಲವೆ? ಆತನ ಬಗ್ಗೆ ಮತ್ತಷ್ಟು ಅರಿಯುವ ಕುತೂಹಲ ಮೂಡಿಸಿದ್ದೀರಿ. ಧನ್ಯವಾದಗಳು ಸರ್

    ReplyDelete

Post a Comment