ಕಾಫಿ!

 ಕಾಫಿ!

ಲೇಖನ -  ಡಾ. ಮಂಜುಳಾ ಹುಲ್ಲಹಳ್ಳಿ.



ಚಿಕ್ಕಮಗಳೂರು: ಕಾಫಿ ಎಂಬ  ಅಮೃತದ ನೆಲೆಯೂರು.

'ಮೊದಲ ಹದಮಳೆ ತಿರೆಯ ತೊಯ್ಯಲು ಮಿಂದ ಕಾಫಿಯ ತೋಟವು

ಇಂದ್ರನಂದನದಮರ ವೃಂದಕೂ ಬೆರಗನೀಯುವ ನೋಟವು!

ಬೆಟ್ಟದೋರೆಯು, ಕಣಿವೆ, ತಪ್ಪಲು, ಗಿರಿಯ ನೆತ್ತಿಯೊಳೆಲ್ಲಿಯೂ

ಕಣ್ಣು ಹೋಹೆಡೆಯಲ್ಲು ಕಾಫಿಯ ಹೂವು: ಬೆಣ್ಣೆಯು, ಬೆಳ್ಳಿಯು!'

    'ಮೊದಲ ಹದಮಳೆ ಭೂಮಿಯ ಒಡಲಿಗೆ ಬಿದ್ದರೆ, ಭೂತಾಯಿಯ ಮೈತುಂಬ ನವಿರು ಕಂಪನಗಳು!  ಈ ಹೊನಲಿನಲ್ಲಿ ಮಿಂದು ತೇಲುವ ಕಾಫಿ ತೋಟದ ಸೌಂದರ್ಯ ವರ್ಣಿಸಲಾದರೂ ಸಾಧ್ಯವೇ!!!  ಇಂದ್ರ ನಂದನದ ಅಮರವೃಂದಕ್ಕೂ ಬೆರಗು ಹುಟ್ಟಿಸುತ್ತದೆ. ಬೆಟ್ಟದ ಓರೆ, ಕಣಿವೆ, ತಪ್ಪಲು, ಗಿರಿಯ ನೆತ್ತಿ... ಕಣ್ಣು ಹೋದೆಡೆಯಲ್ಲೆಲ್ಲಾ ಅರಳಿ ನಗುವ ಕಾಫಿಯ ಹೂವು!  ಬೆಣ್ಣೆಯಂತೆ... ಬೆಳ್ಳಿಯಂತೆ! ಆಹಾ!!! ಈ ಹೂವಿನ ರೂಪವಾದರೂ ಯಾವ ತರಹದ್ದು! ಗಗನದ ಅಭ್ರತೆ, ಜಗದ ಶುಭ್ರತೆಗಳೆಲ್ಲ ಸುಂದರವಾದ ಶಾಪ ಒಂದಕ್ಕೆ ತುತ್ತಾಗಿ ದೃಷ್ಟಿ ಪುಣ್ಯದ ರೂಪದಲ್ಲಿ ಈ ಕಾಫಿ ಕಾನಿಗೆ ಬಂದು ಸೇರಿವೆ! ಈ ಅಪರೂಪದ, ಸುಂದರ ಹಾಲು ಹೊಳೆಯಂದದ ಕಾಫಿ ಹೂಗಳನ್ನು ನೋಡುತ್ತಿದ್ದರೆ ಕಣ್ಣು ತಣಿಯುವುದು, ಮನಸು ಮಣಿಯುವುದು.  ಬಿಳಿಯ ಮುತ್ತಿನ ಮಳೆಯಂತಹ  ಕಾಫಿ ಹೂಗಳ ದರ್ಶನವೇ ಅಮೃತ ಸ್ನಾನದಂತೆ ಪುಣ್ಯಕರ, ಕೊಳಲಗಾನದಂತೆ ಶ್ರೇಯಸ್ಕರ' ಎಂದು ಕಾಫಿ ತೋಟ, ಕಾಫಿ ಹೂಗಳ ಚೆಲುವ ಲೋಕವನ್ನು ಕುವೆಂಪು ಅವರು ಹಾಡಿ ವರ್ಣಿಸಿದ್ದಾರೆ. 

    ಚಿಕ್ಕಮಗಳೂರು ಜಿಲ್ಲೆಯ ಹಸಿರು ಸಿರಿಯ ಕೊಡುಗೆಯಲ್ಲಿ ಕಾಫೀ, ಟೀ ಎಸ್ಟೇಟುಗಳ ಪಾತ್ರವೂ ತುಂಬಾ ಹಿರಿದಾಗಿದೆ. ಅದರಲ್ಲೂ ಮಲಾನಾಡಿನ ಎಲ್ಲಾ ಹಾದಿಗಳ ದಡದಲ್ಲೂ ಕಾಪಿ ಸೊಬಗಿನ ಸಂಭ್ರಮವೇ ಸಂಭ್ರಮ! ಕಾಫಿ ಮೊಗ್ಗು ಅರಳಿ ಹೂವಾಗುವ ಸಮಯದಲ್ಲಿಯಂತೂ ಬೆರಗಿನ ಪರಿಮಳ ಎಲ್ಲೆಲ್ಲೂ ತುಂಬಿ ತುಳುಕಾಡುತ್ತಿರುತ್ತದೆ. ಮಲ್ಲಿಗೆ ಹೂವಿನ ಜಡೆ ಹೆಣೆಸಿಕೊಂಡಂತೆ ಬಳುಕಿ ನಲಿಯುವ ಕಾಫಿ ರೆಂಬೆ ಕೊಂಬೆಗಳಲ್ಲೂ ಕಾಫಿ ಸೊಬಗೇ ಹೂವಾಗುವ ಸೊಗಸನ್ನು ಕಣ್ತುಂಬಿಕೊಂಡು ಆನಂದಿಸಬೇಕು. ಶುಭ್ರ ಬಿಳಿಯ ಹೂವು ಹಸಿರು ಕಾಯಾಗಿ, ಕೆಂಪು ದೋರೆ ಹಣ್ಣಾಗಿ, ಕಡು ಕೆಂಪು ಕಳಿತ ಹಣ್ಣಾಗಿ ತನ್ನೊಳಗಿನ ಬೀಜಗಳಲ್ಲಿ  ‘ಕಾಫಿ’ ಎಂಬ ಭೂಲೋಕದಮೃತದ ರುಚಿಯನ್ನು ತುಂಬಿಕೊಂಡ ಮಾಧುರ್ಯವನ್ನು ಮನದಣಿಯೇ ಹೀರಿ ಅನುಭವಿಸಬೇಕು! 



        ಆಕಾಶದ ನಕ್ಷತ್ರಗಳನ್ನೆಲ್ಲ ಕಿತ್ತು ಒಟ್ಟುಗೂಡಿಸಿ, ಒಂದೊಂದನ್ನೇ ಹೆಕ್ಕಿ, ಸೂಜಿಯಿಂದ ಪೋಣಿಸಿ ಹೂಮಾಲೆ ಮಾಡಿದಂತೆ ಕಾಫಿ ಹೂಗಳು ಕಾಫಿ ಪೊದೆಯ ಮೇಲೆ ಹರಡಿ ಹಬ್ಬಿದ ಸೊಗಸು! ಕಣ್ಣು ಹಾಯಿಸಿದಲ್ಲೆಲ್ಲ ಹೊಳೆವ ಕಾಫಿ ಹೂಗಳ ದಿವ್ಯ ಚೆಲುವು ಒಂದೆಡೆಯಾದರೆ ಈ ಹೂವು ಬೀರುವ ಅಪರೂಪದ ಪರಿಮಳದ ಆಸ್ವಾದದ ಒಲವು ಮತ್ತೊಂದೆಡೆ. 

        ಶುಭ್ರ ಬಿಳಿಯವರ್ಣದ ಹೂಗಳು ಕ್ರಮೇಣ ಹಸುರು ಕಾಯಾಗಿ, ಕೆಂಪು ಹಣ್ಣಾಗಿ, ಕಪ್ಪಿಗೆ ತಿರುಗುತ್ತಾ ಬರುವ ಪ್ರತಿ ಹಂತದಲ್ಲೂ ಕಾಫಿ ತೋಟಗಳ ಸೌಂದರ್ಯ ತನಗೆ ತಾನೇ ವೈಶಿಷ್ಟ್ಯಪೂರ್ಣ. ಪಕ್ವಗೊಂಡು, ಗಿಡದಿಂದ ಕೀಳಿಸಿಕೊಂಡು, ಮೇಲಿನ ಹಣ್ಣಿನ ತಿರುಳನ್ನು ಯಂತ್ರದ ಸಹಾಯದಿಂದ ಕಳೆದುಕೊಂಡು, ಬಿಸಿಲಿಗೆ ಚೆನ್ನಾಗಿ ಒಣಗಿಸಿಕೊಂಡು  ಬೀಜ ಮಾತ್ರವಾಗಿ ಉಳಿಯುವುದನ್ನು ಹದವಾಗಿ ಘಮ್ಮ್ ಎನ್ನುವ ಹಾಗೆ ಹುರಿದು, ಬೀಸಿದಾಗ ಕಾಫಿಪುಡಿ ಸಿದ್ಧ. ಕಾಫಿಪುಡಿ ತರಿತರಿಯಾಗಿದ್ದರೆ ಫಿಲ್ಟರ್ ಕಾಫಿ ಇಲ್ಲವೇ ನುಣ್ಣಗಾದರೆ ಅಮ್ಮನ ಕೈರುಚಿ ಕಾಫಿ! ಈ ಕಾಫಿಪುಡಿ ಹದವಾದ ಹಾಲು ಸಕ್ಕರೆಯೊಡನೆ ಬೆರೆತು ಕೈಗೆ ಬಂದು ತುಟಿಗೆ ಸೇರಿ ಹೃದಯಕ್ಕೆ ಮುಟ್ಟಬೇಕು.

ಆಹಾ! ಸೊಗಸು!! ಸೊಗಸು!!! ಸೊಗಸೇ ಸೊಗಸು...!

     ಈ ಕಾಫಿಯಾಳದ ಗತ್ತು ಗಮ್ಮತ್ತುಗಳೆನ್ನೆಲ್ಲಾ ಶೋಧಿಸಲು ಬಾಳೆಹೊನ್ನೂರಿನ ಸಮೀಪದಲ್ಲಿ ಸೆಂಟ್ರಲ್ ಕಾಫಿ ರೀಸರ್ಚ್ ಸ್ಟೇಷನ್‌  ಕಾರ್ಯ ನಿರ್ವಹಿಸುತ್ತಿದೆ. ಸಿ.ಸಿ ಆರ್.ಐ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ 1915 ರಿಂದ ಬಾಳೆಹೊನ್ನೂರಿನ ಸೀಗೋಡು ಬಳಿ ಆರಂಭವಾಯಿತು. ಡಾ. ಕೋಲ್ಮನ್ ಅವರು ಇದರ ಆರಂಭಿಕ ನಿರ್ದೇಶಕರಾಗಿ ಕಾಫಿ ಬೆಳೆಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆ ಭಾರತದಲ್ಲಿ ಆರಂಭವಾಗಲು ಕಾಯಕಲ್ಪ ನೀಡಿದರು.

      ಕಾಫೀ ಗಿಡಗಳಿಗೆ ಬರುವ ರೋಗಗಳು, ಆ ರೋಗದ ಮುಖ್ಯ ಕಾರಣಗಳು, ಪರಿಹಾರೋಪಾಯ, ಕಾಫಿ ಗಿಡಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಉತ್ತಮ ಗೊಬ್ಬರದ ಸಂಯೋಜನೆ, ಕಾಫಿ ಹಣ್ಣುಗಳ ಸಂಸ್ಕರಣೆ, ಕಾಫೀ ಬೀಜಗಳ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುವ ಪ್ರಯೋಗಗಳು, ಕಾಫಿ ಬೆಳೆಯುವ ಮಣ್ಣಿನ ಗುಣಮಟ್ಟ ನಿರ್ವಹಣೆ, ಕಾಫಿ ಹಣ್ಣಿನ ಸಿಪ್ಪೆಯಂತಹ ಅನುಪಯುಕ್ತ ಪದಾರ್ಥಗಳನ್ನು ಉಪಯುಕ್ತವಾಗಿ ಬದಲಿಸುವುದು, ಯಂತ್ರೋಪಕರಣಗಳ ಸುಧಾರಣೆ, ಸೂಕ್ತ ಕೀಟನಾಶಕಗಳ ಅನ್ವೇಷಣೆ ಹೀಗೆ ಅನೇಕ ರೀತಿಯ ಸಂಶೋಧನೆಗಳು ಇಲ್ಲಿ ನಡೆಯುತ್ತಿವೆ. ಭಾರತದ ಕಾಫೀ ಸಂಶೋಧನೆಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿರುವ ಈ ಕಾಫೀ ಸಂಶೋಧನಾ ಕೇಂದ್ರದ ಶಾಖೆಯನ್ನು  ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲೂ ತೆರೆಯಲಾಗಿದೆ.

   ಮಾಸ್ತಿ ಅವರು 1933 ರ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆಗಿದ್ದಾಗ  ಚಿಕ್ಕಮಗಳೂರು ದೇಶೀ ಕಾಫಿ ಬೆಳೆಗಾರರು ಅನೇಕ ಸಂಕಷ್ಟಗಳಿಗೆ ಈಡಾಗಿದ್ದುದನ್ನು ಕಣ್ಣಾರೆ ಕಂಡು ಅವರ ಸ್ಥಿತಿಗತಿಗಳ ಉತ್ತಮೀಕರಣಕ್ಕಾಗಿ ಹಲವಾರು ಸೂಚನೆಗಳನ್ನು ಈ ರೀತಿ ನೀಡಿದ್ದರು:

     'ಕಾಫಿಯ ಬೆಲೆ ಬಹಳ ಇಳಿದುಹೋಗುವುದಕ್ಕೆ  ಒಂದು ಕಾರಣ ಕಾಫಿ ಬೆಳೆಯುವವರು ಒಬ್ಬೊಬ್ಬರೂ ತಮಗೆ ಅನುಕೂಲ ಕಂಡಂತೆ ತಾವು ಬೆಳೆದ ಕಾಫಿಯನ್ನು ಮಾರಿಬಿಡುವುದು. ಒಂದು ಜಿಲ್ಲೆಯ ಕಾಫೀ ಜನ ಬೆಳೆದ ಕಾಫಿಯನ್ನೆಲ್ಲಾ ಒಂದು ಕಡೆ ಸೇರಿಸಿ ಬೆಲೆಯನ್ನು ಹಿಡಿತದಲ್ಲಿಡುವುದು ಒಳ್ಳೆಯದು.  ಕಾಫಿಯಲ್ಲಿ ಪ್ಲಾಂಟೇಷನ್ ಕಾಫಿ , ನೇಟಿವ್ ಕಾಫಿ , ಎಂತ ಆಂಗ್ಲರು ಎರಡು ಜಾತಿ ಮಾಡಿದ್ದರೂ ನಮ್ಮ ಕಾಫಿ ಅವರ ಕಾಫಿಗಿಂತ ಕಡಮೆ ಅಲ್ಲ ಎನ್ನಿಸುವಂತೆ ಮಾಡಬೇಕು. ಸದ್ಯ ಕಾಫಿ "ಕ್ಯೂರ್" ಆಗುವುದಕ್ಕೆ ಪಿಯರ್ ಲೆಸ್ಲಿ ಎಂಬ ಆಂಗ್ಲರ ಕಂಪೆನಿಗೆ ಮಂಗಳೂರಿಗೆ ಹೋಗುವ ಬದಲಿಗೆ ಈ "ಕ್ಯೂರಿಂಗ್" ಚಿಕ್ಕಮಗಳೂರಿನಲ್ಲೇ ಆಗುವಂತೆ ಮಾಡುವುದು ಕಾಫಿ ಬೆಳೆಯುವವರಿಗೆ ಕ್ಷೇಮ.'

   ಚಿಕ್ಕಮಗಳೂರಿನ ಮತ್ತೊಬ್ಬ ಜಿಲ್ಲಾಧಿಕಾರಿಗಳು, ಡಾ. ಎಚ್. ಎಲ್ ನಾಗೇಗೌಡರು ಚಿಕ್ಕಮಗಳೂರು ಕಾಫಿ ಸೊಗಸಿಗೆ ಮಾರು ಹೋಗಿ, "ಬೆಟ್ಟದಿಂದ ಬಟ್ಟಲಿಗೆ" ಎನ್ನುವ ಕಾಫಿ ಸಂಬಂಧಿಸಿದ ಸಂಶೋಧನಾ ಕೃತಿಯನ್ನೇ ರಚಿಸಿದುದಷ್ಟೇ ಅಲ್ಲ, ಬೇಂದ್ರೆ ಅವರ 'ಇಳಿದು ಬಾ ತಾಯೆ ಇಳಿದು ಬಾ' ಧಾಟಿಯಲ್ಲಿ 

'ಇಳಿದು ಬಾ ಕಾಫಿ ಇಳಿದು ಬಾ

ಇಳಿದು ಬಾ ಕಾಫಿ ಇಳಿದು ಬಾ

ಮಲೆಯ ಬೀಡಿನಿಂ ಗಿರಿಯ ಮೇಲಿನಿಂ

ಮಳೆಯ ನಾಡಿನಿಂ ಸೊಗದ ತಾಣದಿಂ

ಬೆಟ್ಟದೋರೆಯಿಂ ಇಳಿದು ಬಾ,

ಬಟ್ಟಲಿಗೆ ಇಳಿದು ಬಾ.


ಚಿಗುರು ಚಿಗುರಾಗಿ ಮೂಡಿ ಸೊಗಸಾಗಿ, 

ಹಸಿರು ಗಿಡವಾಗಿ ಮಲೆಯ ಬೆಡಗಾಗಿ,

ಬಿಳಿಯ ಹೂವಾಗಿ ಗಿರಿಯ ಕಳೆಯಾಗಿ,

ಕೆಂಪು ಹಣ್ಣಾಗಿ ಕಂದು ಬೀಜಾಗಿ,

ತನುಗೆ ತಂಪಾಗಿ ಮನಕೆ ಮೋಜಾಗಿ,

ಕರಿಯ ಪುಡಿಯಾಗಿ ಹಾಲ ಸೆರೆಯಾಗಿ

ಸಿಹಿಯ ಜೊತೆಯಾಗಿ ಬಟ್ಟಲಾಸರೆಯಾಗಿ 

ಇಳಿದು ಬಾ ಕಾಫಿ, ನಾಲಿಗೆಗೆ ಇಳಿದು ಬಾ' 

                   ಎಂದು ಹಾಡಿ ಮನ ತಣಿಸಿಕೊಂಡರು.

   ಈ  ಕಾಫಿ ಸೊಗಸಿಗೆ ಮಾರು ಹೋಗಿರುವ ನಮ್ಮ ಹಿರೇಮಗಳೂರು ಕಣ್ಣನ್ ಅಣ್ಣನವರ ಜನಪ್ರಿಯ ವಾಕ್ ಶೋ 'ಕಾಫಿ ವಿತ್ ಕಣ್ಣನ್'! 

ಅವರು,

'ಶುಕ್ಲಾಂಬರದರಂ ವಿಷ್ಣುಂ  ಶಶಿವರ್ಣಂ ಚತುರ್ಭುಜಂ. 

ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ' 


    ಈ ಶ್ಲೋಕವನ್ನು  ಹದವಾಗಿ ಕಾಫಿಯನ್ನು ಆಸ್ವಾದಿಸಿ ಕುಡಿಯುವ ಸೌಭಾಗ್ಯಕ್ಕೆ ತಳುಕು ಹಾಕಿ ಹೇಳುತ್ತಾರೆ!

         ಶುಕ್ಲಾಂ, ಕಂದು ವರ್ಣದ ಕಾಫಿ ಡಿಕಾಕ್ಷನ್; ಅಂಬರದರಂ, ಆಕಾಶದಿಂದ ಇಳಿದು; ವಿಷ್ಣುಂ, ಬಿಳಿವರ್ಣದ ಹಾಲಿನೊಡನೆ ಸೇರಿ; ಶಶಿವರ್ಣಂ ಉದಯಿಸುತ್ತಿರುವ ಚಂದ್ರನಂತೆ ಕಡು ಕೆಂಪು ವರ್ಣದ ಕಾಫಿಯಾಗಿ;  ಚತುರ್ಭುಜಂ, ಎರಡು ಕೈಗಳಿಂದ ಪ್ರೀತಿಯಿಂದ ಎತ್ತಿಕೊಡುವವರು, ಆಹ್ಲಾದಕರ ಮನದಿಂದ ಎರಡು ಕೈಗಳಿಂದ ಪಡೆಯುವರು ಸೇರಿ ಆದ  ನಾಲ್ಕು ಭುಜಗಳು; ಪ್ರಸನ್ನವದನಂ ಧ್ಯಾಯೇತ್,  ಪ್ರಸನ್ನ ವದನದಿಂದ ಧ್ಯಾನ ಮಾಡುವ ರೀತಿಯಲ್ಲಿ ಕಾಫಿ ಸ್ವಾದವನ್ನು ಸವಿಯುತ್ತಿದ್ದರೆ; ಸರ್ವ ವಿಘ್ನೋಪಶಾಂತಯೇ,  ಮನದ ಮುಂದಿದ್ದ ಸರ್ವ ವಿಘ್ನಗಳೂ ಉಪಶಾಂತ, ಕರಗಿಯೇ ಹೋಗಬೇಕು! 

     ಕೊಡಗು, ಹಾಸನ, ಚಿಕ್ಕಮಗಳೂರು ಪರಿಸರ ಕಾಫಿ ಬೆಳೆಗೆ ಹೇಳಿ ಮಾಡಿಸಿದಂತಹ ವಾತಾವರಣ. ಭಾರತದಲ್ಲಿ ಮೊಟ್ಟ ಮೊದಲಿಗೆ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿ ಕಾಫಿ ಬೆಳೆಯಿತೆಂಬ ಐತಿಹ್ಯ ಇದೆ. ಇದರಿಂದ ಚಿಕ್ಕಮಗಳೂರು ಪ್ರದೇಶವನ್ನು ಭಾರತೀಯ ಕಾಫಿ ನೆಲೆಯ ತವರು ಎನ್ನಬಹುದಾದರೂ ಎಚ್. ಎಲ್. ನಾಗೇಗೌಡರ ಪ್ರವಾಸಿ ಕಂಡ ಇಂಡಿಯಾ ಮತ್ತಿತರ ಕೃತಿಗಳಲ್ಲಿ ಕಾಣದೊರೆಯುವ ಕಾಫಿಯ ಬಗೆಗಿನ ಉಲ್ಲೇಖಗಳು ಭಾರತದಲ್ಲಿನ‌ ಕಾಫಿಯ ಪ್ರಾಚೀನತೆಯ ಬಗೆಗೆ ಬೇರೆ ಬೇರೆ ಕಥೆಗಳನ್ನೂ ಹೇಳುತ್ತವೆ.

            ನಮ್ಮ ದೇಶದ ಕಾಫಿ ಉತ್ಪಾದನೆಯಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರಿನ ಸ್ಥಾನ ಅಧಿಕ ನಿಜ. ಆದರೆ ಅಷ್ಟೇ  ಸತ್ಯ ಇಲ್ಲಿನ ಮಾಲೀಕರು, ಕೂಲಿ ಕಾರ್ಮಿಕರು ಅನುಭವಿಸುತ್ತಿರುವ ಅವರವರದೇ ಆದ ನೋವು, ಯಾತನೆ, ನರಳಾಟಗಳು. ಇವುಗಳನ್ನು ಹುಡುಕ ಹೋದಷ್ಟೂ ವೈವಿಧ್ಯಮಯ ಸಂಗತಿಗಳು ಪುಂಖಾನುಪುಂಖವಾಗಿ ಹೊರಚಿಮ್ಮುತ್ತವೆ.

   'A lot can happen over a cup of coffee'  'ಒಂದು ಕಪ್ಪು ಕಾಫಿ ಸವಿಯುತ್ತಾ ಏನನ್ನು ಬೇಕಾದರೂ ಸಾಧಿಸಬಹುದು' ಎಂಬ ಧ್ಯೇಯ ವಾಕ್ಯದೊಡನೆ 'ಕೆಫೆ ಕಾಫೀ ಡೇ' ಎಂಬ ಮಾಂತ್ರಿಕ ಲೋಕವನ್ನು ಹುಟ್ಟು ಹಾಕಿದವರು  ಉತ್ಸಾಹಿ ಯುವ ಉದ್ಯಮಿ, ಚಿಕ್ಕಮಗಳೂರಿನ‌ ಅದ್ಭುತ ಕಾಫಿ ಕನಸುಗಾರ, ಸಿದ್ಧಾರ್ಥ್ ಹೆಗಡೆ. ದೇಶ ವಿದೇಶಗಳಲ್ಲಿ ಕಾಫಿ ಸ್ವಾದವನ್ನು ಅನುಭವಿಸುವುದು ಹೇಗೆಂದು ಪರಿಚಯಿಸಿ ಚಿಕ್ಕಮಗಳೂರು ಕಾಫಿಗೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು.  1722 ಕೆಫೆ ಕಾಫಿ ಡೇ ಯೂನಿಟ್ ಗಳನ್ನು ಸ್ಥಾಪಿಸಿದ ಕಾಫಿಲೋಕದ ಆ ವಿಸ್ಮಯವೂ ಚಿಕ್ಕಮಗಳೂರಿನ ನೆನಪಿನಲ್ಲಿ ಸದಾ ಇರುತ್ತದೆ. ಚಿಕ್ಕಮಗಳೂರು ಕಾಫಿ ಎಂದರೆ, ಸಿದ್ಧಾರ್ಥ ಹೆಗಡೆ ಅವರ ಹೆಸರು  ಕೂಡಲೇ ಮನದಲ್ಲಿ ನಿಲ್ಲುತ್ತದೆ. 

     'ಬಾಳುವುದೇತಕೆ ನುಡಿಯಲೇ ಜೀವ?' ಎಂದರೆ, 'ಸಿರಿಗನ್ನಡದಲ್ಲಿ ಕವಿತೆಯ ಹಾಡೆ!' ಎಂದು ಕವಿ ಹಾಡಿದ್ದಾರೆ. ನನಗಂತೂ, 'ಬೆಳಗ್ಗೆ ಏಳುವುದೇತಕೆ ನುಡಿಯಲೇ ಜೀವ?'  ಎಂದರೆ, 'ಚಿಕ್ಕಮಗಳೂರಿನಲ್ಲಿ ಮುಂಜಾವದ ಸೊಬಗನ್ನು ಆಸ್ವಾದಿಸುತ್ತಾ ಬಿಸಿ ಕಾಫಿ ಕುಡಿಯಲಿಕ್ಕೆ' ಎನ್ನುವ ಉತ್ತರ ತನಗೆ ತಾನೇ ಹೊರಹೊಮ್ಮುತ್ತದೆ!

 

    

Comments

  1. ಕಾಫಿಯ ವಿವರಣೆ ವಿಶ್ಲೇಷಣೆ ಬಹಳ ಸೊಗಸಾಗಿ ಬರೆದಿದ್ದೀರಿ. ಮಲೆನಾಡಿನ ಅನುಭವ, ಪ್ರಕೃತಿ ವರ್ಣನೆ ನಿಮ್ಮ ಲೇಖನದಲ್ಲಿ ಓದುವುದೇ ಸುಂದರ. "ಇಳಿದು ಬಾ ಕಾಫಿ" and ಶ್ಲೋಕ very nice & interesting

    ReplyDelete

Post a Comment