ಸೋದರ ಸಂಬಂಧಗಳು ಅಂದು - ಇಂದು

 ಸೋದರ  ಸಂಬಂಧಗಳು ಅಂದು -ಇಂದು                                              

  ಲೇಖಕರು :  ಎಂ ಆರ್ ವೆಂಕಟರಾಮಯ್ಯ ,     ಬೆಂಗಳೂರು  



     ಪ್ರಸಕ್ತ ಲೇಖನದ ಶೀರ್ಷಿಕೆಯಲ್ಲಿ, ‘ಸೋದರ” ಎಂಬ ಶಬ್ಧವನ್ನು ಕೇವಲ ಅಣ್ಣ, ತಮ್ಮ ಎಂಬ ಎರಡು ಸಂಬಂಧಗಳಿಗೆ ಮಾತ್ರ ಸೀಮಿತಗೊಳಿಸದೆ, “ಅಣ್ಣ ತಮ್ಮ, ಅಕ್ಕ, ತಂಗಿ ಎಂಬ ಎಲ್ಲ ಒಡಹುಟ್ಟಿದವರ ನಡುವಿನ ಸಂಬಂಧಗಳು” ಎಂಬ ವಿಶಾಲ ಅರ್ಥದಲ್ಲಿ ಬಳಸಲಾಗಿದೆ. ಈ ಸೋದರ, ಸೋದರಿಯರ ನಡುವಿನ ಬಾಂಧವ್ಯ ಅಂದಿದ್ದಂತೆ ಇಂದಿಲ್ಲವೇ ? ಇಲ್ಲದಿದ್ದರೆ ಅದಕ್ಕೆ ಕಾರಣವೇನು ಎಂಬ ಬಗ್ಗೆ ಒಂದು ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ  : 

      ‘ಹೆಂಗರಳು’ ಎಂಬ ಪದ ನಮ್ಮಲ್ಲಿ ಬಳಕೆಯಲ್ಲಿದೆ. ಅಂದರೆ ಸ್ತಿç ಅಷ್ಟು ಮೃದು, ಕೋಮಲ, ಮೆತ್ತಗಿನವಳು, ನಯ, ಅನುಕಂಪಿತೆ, ಸುಲಭವಾಗಿ ಮನ ಕರಗುವ ವ್ಯಕ್ತಿ ಎಂಬ ಅರ್ಥಗಳಿವೆ. ತನ್ನ ಸೋದರೆಲ್ಲರೂ ಒಮ್ಮೆಗೇ ಮರಣಿಸಿದಾಗ, ತೌರಿನ, ಒಡಹುಟ್ಟಿದವರ, ವಂಶಾಭಿವೃದ್ಧಿಗೆ ಕಾರಣರಾದವರು ಇಲ್ಲವೆನಿಸಿದಾಗ ಒಬ್ಬ ಸೋದರಿ ಹೇಗೆ ವರ್ತಿಸಿದಳು ಎಂಬುದಕ್ಕೆ ಇಲ್ಲಿದೆ ಒಂದು ಪ್ರಸಂಗ : 

     ಪಾಂಡ್ಯ ರಾಜ್ಯದ ವೇದ ಶರ್ಮನೆಂಬ ಬ್ರಾಹ್ಮಣನಿಗೆ ಎಂಟು ಗಂಡು ಮಕ್ಕಳು, ಸುಶೀಲಾ ಎಂಬ ಒಬ್ಬ ಮಗಳಿದ್ದಳು. ಒಮ್ಮೆ ಗರುವಿನ ದೃಷ್ಟಿಯಿಂದ ಪ್ರಾಣ ರಕ್ಷಿಸಿಕೊಳ್ಳಲು ತನಗೆ ಆಶ್ರಯ ನೀಡಬೇಕೆಂದು ನಾಗರ ಹಾವೊಂದು ಸುಶೀಲೆಯನ್ನು ಬೇಡಿಕೊಂಡ ಕಾರಣ, ಆಕೆಯು ಅದಕ್ಕೆ ತನ್ನ ಮನೆಯಲ್ಲಿ ಸ್ಥಳ ನೀಡಿ, ಪೋಷಿಸಿದಳು. ನಾಗರವು ತನ್ನ ಕೃತಜ್ಞತಾ ಸೂಚಕವಾಗಿ ದಿನವೂ ಸ್ವಲ್ಪ ಬಂಗಾರವನ್ನು ತಂದು ಸುಶೀಲೆಗೆ ಕೊಡಲಾರಂಭಿಸಿತು. ಪರಿಣಾಮವಾಗಿ ಆ ಕುಟುಂಬದ ಬಡತನ ನೀಗಿತು. 

    ಅದೊಂದು ದಿನ ಸುಶೀಲೆ ನಿದ್ರಿಸುತ್ತಿದ್ದಾಗ, ಆಕೆಯ ದುಷ್ಟ, ದುರಾಶಾ ಅಣ್ಣನೊಬ್ಬ ನೀನು ದಿನವೂ ಸ್ವಲ್ಪವೇ ಬಂಗಾರ ತರುವ ಬದಲು ನಿನ್ನಲ್ಲಿರುವುದನ್ನೆಲ್ಲಾ ಒಂದೇ ಸಲ ನನಗೇಕೆ ಕೊಡಬಾರದು ? ಎಂದು ಗದ್ದರಿಸಿ, ಹಾವನ್ನು ಒದ್ದನು. ಆದ ನೋವಿನಿಂದ ಕುಪಿತನಾದ ಆ ನಾಗರವು, ಅ ದುಷ್ಟನನ್ನು, ಉಳಿದ ಗಂಡು ಮಕ್ಕಳನ್ನೂ ಕಚ್ಚಿದ ಕಾರಣ, ವಿಷವೇರಿ ಬೆಳಗಾಗುವ ವೇಳೆಗೆ ಅವರೆಲ್ಲರೂ ಮೃತರಾದರು. ಇದ್ದಕ್ಕಿದ್ದಂತೆ ಎಲ್ಲ ಗಂಡು ಮಕ್ಕಳೂ ಸಾಯಲು ಕಾರಣವೇನೆಂದು ನಾಗನನ್ನು ಸುಶೀಲೆಯು ವಿಚಾರಿಸಿದಾಗ, ಹಿಂದಿನ ರಾತ್ರಿ ನಡೆದದ್ದೆಲ್ಲವನ್ನೂ ಅದು ಆಕೆಗೆ ತಿಳಿಸಿದ್ದೇ ಅಲ್ಲದೆ, ಇಂತಹಾ ಕಟುಕರ ಮನೆಯಲ್ಲಿ ನಾ ಉಳಿಯಲಾರೆ ಎಂದು ಆ ಜಾಗವನ್ನು ಬಿಟ್ಟು ಹೊರಟುಹೋಯಿತು. ಹಾವಿಗೆ ಹಾಲುಣಿಸಿ ಸಾಕಿದ್ದಕ್ಕಾಗಿಯೇ ನನ್ನ ಅಣ್ಣಂದಿರೆಲ್ಲಾ ನನ್ನೀ ಅಕಾರ್ಯದಿಂದ ಮೃತರಾದರು, ತಂದೆಯ ವಂಶವೇ ತನ್ನಿಂದ ನಾಶವಾಯಿತು, ಎಂದು ದುಃಖಿಸಿದ ಸೋದರಿ ಅವರನ್ನು ಬದುಕಿಸೆಂದು ಶ್ರೀಮನ್ನಾರಾಯಣನನ್ನು ಪ್ರಾರ್ಥಿಸಿದಳು. ಆವೇಶಭರಿತಳಾಗಿ ಹತ್ತಿರವಿದ್ದ ಖಡ್ಗದಿಂದ ತನ್ನ ಶಿರಚ್ಛೇದನ ಮಾಡಿಕೊಳ್ಳಲು ಮುಂದಾದಳು. ಅಷ್ಟರಲ್ಲಿ ಭಕ್ತ ವತ್ಸಲನಾದ ಭಗವಂತನು ಪ್ರತ್ಯಕ್ಷನಾಗಿ, ನಾಗನನ್ನು ಕರೆದು, ಸಂಜೀವಿನೀ ರಸದಿಂದ ಆಕೆಯ ಸಹೋದರರೆಲ್ಲರನ್ನು ಬದುಕಿಸುವಂತೆ ಆದೇಶಿಸಿದನು. ಹೀಗೆ, ಸೋದರಿ ಸುಶೀಲೆಯ  ಪ್ರಾರ್ಥನೆಯಿಂದ, ಭಗವಂತನ ದಯೆಯಿಂದ ಸತ್ತವರೆಲ್ಲರೂ ಬದುಕಿ ಭಾಗ್ಯವಂತರಾಗಿ ಬಾಳಿದರು ಎಂದಿದೆ ಈ ಪುರಾಣ ಪ್ರಸಂಗ. 



     ಈ ಕಾರಣಕ್ಕಾಗಿಯೇ ಆಸ್ತಿಕರು ಪ್ರತಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯನ್ನು ‘ನಾಗಪಂಚಮಿ : ಗರುಡ ಪಂಚಮಿ’ ಎಂದು ಹೆಸರಿಸಿ, ಅಂದು ಸೋದರಿಯರು ನಾಗನನ್ನು ಶ್ರದ್ಧಾ ಭಕ್ತಿಗಳಿಂದ ಪೂಜಿಸಿ ಸೋದರರ ಬೆನ್ನಿಗೆ, ಹೊಟ್ಟೆಗೆ, ಹಾಲು, ತುಪ್ಪ ಎರೆದು, ಬೆನ್ನಿನಲ್ಲಿ ಹುಟ್ಟಿದವರು, ಅರ್ಥಾತ್ ಸೋದರ, ಸೋದರಿಯರು, ಹೊಟ್ಟೆಯಲ್ಲಿ ಹುಟ್ಟಿದವರು ಎಂದರೆ ಅವರ ಸಂತಾನ ತಣ್ಣಗಿರಲಿ, ಸುಖವಾಗಿರಲಿ ಎಂದು ಹಾರೈಸುವ ಹಿನ್ನೆಲೆಯಲ್ಲಿ ನಾಗಪಂಚಮಿಯನ್ನು ಆಚರಣೆಗೆ ತಂದಿದ್ದಾರೆ. ತನ್ಮೂಲಕ, ಸೋದರ ಸೋದರಿಯರಲ್ಲಿ ಸಹಜ ಪ್ರೀತಿ, ವಿಶ್ವಾಸಗಳು ವೃದ್ಧಿಸಲಿ. ಈರ್ವರ ಶುಭ ಹಾರೈಕೆ ಕೇವಲ ಯಾಂತ್ರಿಕ ಮಾತುಗಳಾಗಿ : ಒಣ ಹಾರೈಕೆಯಾಗಿ ಮುಗಿಯದೆ, ಪರಸ್ಪರರಲ್ಲಿ  ಸದಭಿಮಾನ, ಸದ್ಭಾವನೆಗಳು ಹೃದಯದಲ್ಲಿ ಮೂಡಲಿ ಎಂಬ ಮಹದಾಶಯ ಇಲ್ಲಿದೆ.

   ಪಂಚಮಿಯಂದು  ಅಕ್ಕ, ತಂಗಿಯ ಮನೆಗೆ ತೆರಳಲಾಗದ ಸೋದರನ ಸಂದರ್ಭ ಎಂತಹುದೇ ಇರಲಿ, ಅತ್ತ, ಸೋದರ ಬರಲಿಲ್ಲವಲ್ಲಾ ! ಎಂದು ಕಾತುರದಿಂದ ತಲೆಬಾಗಿಲಲ್ಲಿ ಕಣ್ಣಗಲಿಸಿ ನೋಡುತ್ತಾ ನಿಂತ ಸೋದರಿಯ ಚಿತ್ರ ನಮ್ಮ ಕಣ್ಣ ಮುಂದೆ ಬರದೆ ಇರದು. ಇನ್ನು ಇತ್ತೀಚಿನ ಕಾಲದ ಸಿನಿಮಾ ಗೀತೆ, “ಅಣ್ಣಾ,  ನಿನ್ನ, ಸೋದರಿಯಣ್ಣ, ಮರೆಯದಿರು ಎಂದೆAದೂ,  ಓ ! ಅಣ್ಣ ! ಎಂಬುದನ್ನು ಆಲಿಸಿದಾಗಲಾದರೂ ಕಣ್ಣಂಚಿನಲ್ಲಿ ಹನಿ ಎಂತಹಾ ಕಠಿಣ ಮನಸ್ಸಿನ ಸೋದರಿನಿಗಾದರೂ ಕಾಣಿಸದಿರಲಾರದು.

ಇದೆಲ್ಲಾ ಪುರಾಣ ಕಾಲದ ಅಕ್ಕ-ತಂಗಿ-ಅಣ್ಣ-ತಮ್ಮನ ವಿಷಯ. ಇಂದಿನ ಸ್ಥಿತಿ ಹೇಗೇ  ಎಂದಿರಾ ! ?  ಇದು ಕೆಲವು ದಶಕಗಳ ಹಿಂದಿನ ವಿಷಯ. ಕೇವಲ ಅಕ್ಷರ ಕಲಿಕೆಗೆ ಮಾತ್ರ ಪ್ರಾಧಾನ್ಯ ನೀಡದೆ ಶಿಸ್ತಿಗೂ ಹೆಸರಾಗಿದ್ದ ಶಾಲೆ ಅದಾಗಿತ್ತು. ಸಮವಸ್ತç ಧರಿಸದಿರುವಿಕೆ, ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದಿರುವಿಕೆ, ಹೋಂ ವರ್ಕ್ ಮಾಡದಿರುವಿಕೆ, ಸುಳ್ಳು ಹೇಳುವಿಕೆ ಇತ್ಯಾದಿಗಳು “ತಪ್ಪು” ಎನಿಸಿದ್ದು, ಅದಕ್ಕೆ ಘೋರ ಶಿಕ್ಷೆ ಅನುಭವಿಸಬೇಕಾಗಿತ್ತು. ಅಂದರೆ, ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಶಾಲೆಯ ಎಲ್ಲರೆದುರಿಗೆ ತಪ್ಪಿಸ್ಥನು ಬೆತ್ತದಿಂದ ೭ ಏಟುಗಳನ್ನು ಪಡೆಯಬೇಕಿತ್ತು. ಅದೊಂದು ದಿನ ೩ ನೇ ತರಗತಿಯ ಬಾಲಕಿಯೊಬ್ಬಳು ಶಾಲೆಗೆ ತಡವಾಗಿ ಬಂದಿದ್ದು, ತಡಕ್ಕೆ ಕಾರಣ ತಾಯಿಗೆ ಹುಷಾರಿಲ್ಲವೆಂದು ತಿಳಿಸಿದಳು. ಆ ಕಾರಣ ನಿಜವೇ ? ಎಂದು ಓರಗೆಯವರನ್ನು ವಿಚಾರಿಸಿದಾಗ, ಬಾಲಕಿ ಸುಳ್ಳು ಹೇಳಿದ್ದಾಳೆಂದು ಗೊತ್ತಾಯಿತು. ಶಾಲೆಯ ನಿಯಮದಂತೆ ಶಿಕ್ಷೆ ನೀಡಲು ಮುಖ್ಯೋಪಾಧ್ಯಾಯರು ಪ್ರಾರ್ಥನಾ ಸಮಯದಲ್ಲಿ ಎಲ್ಲರೆದುರಿಗೆ ಬಾಲಕಿಯನ್ನು ಕರೆದರು. ಕಠಿಣತೆಗೆ ಹೆಸರಾದ, ಗಂಟು ಮುಖದ, ಮುಖ್ಯೋಪಾಧ್ಯಯರ ಮುಖ ಕಂಡೇ ಬಾಲಕಿಗೆ ಅಳು ಬಂದಿತು. “ಹಿಡಿ ಕೈ” ಎಂದರು ಆತ ಗಡಸು ಧ್ವನಿಯಲ್ಲಿ. ಭಯದಿಂದ ಕುಗ್ಗಿದ ಅವಳು ಅಳು ಮುಖದಿಂದ ಕೈ ಚಾಚಿದಾಗ, ಅಂಗೈ ಮೇಲೆ ಬಿದ್ದ ಛಟೀರ್ ಎಂಬ ಏಟಿನಿಂದ “ಅಯ್ಯೋ” ! ಎಂದು ಚೀರಿದ್ದು ಕೇಳಿ, ಅಲ್ಲಿ ಸೇರಿದ್ದವರೆಲ್ಲರೂ ಬೆಚ್ಚಿದರು. ಉಪಾಧ್ಯಾಯರ ಕಲ್ಲೆದೆಯೂ ಕರಗಿತಾದರೂ, ಶಿಸ್ತಿನ ಪಾಲನೆಯಾಗಬೇಕಿದ್ದ ಕಾರಣ, ಬೇರೆಯರ‍್ಯಾರಾದರೂ ಉಳಿದ ೬ ಏಟುಗಳನ್ನು ಪಡೆಯಲು ಸಿದ್ಧರಿದ್ದರೆ ಇವಳನ್ನು ಬಿಡುವುದಾಗಿ ಹೇಳಿದರು.

ಸುತ್ತಲೂ ನೆರೆದಿದ್ದವರು ಪರಸ್ಪರರ ಮುಖ ನೋಡಿ ಮೌನಿಗಳಾದರು. ಕೆಲವೇ ಕ್ಷಣಗಳಲ್ಲಿ ಮೊದಲ ತರಗತಿಯ ಪುಟ್ಟ ಸಣಕಲ ಬಾಲಕನೊಬ್ಬ ಅಧ್ಯಾಪಕರ ಮುಂದೆ ಕೈಚಾಚಿ ನಿಂತ. “ಕರ್ತವ್ಯಪಾಲನೆ ಮುಖ್ಯ” ಎಂದು ಅಧ್ಯಾಪಕರು ಕೂಡಲೇ ಬೆತ್ತದಿಂದ ಹುಡುಗನ ಕೈ ಮೇಲೆ ೬  ಏಟುಗಳನ್ನು ಬಿಗಿದರು. ನೋವಿಗೆ ಬಾಲಕನ ಕಣ್ಣಿಂದ ಹನಿ ಸುರಿದರೂ ಅವನು ಅಯ್ಯೋ ಎನ್ನಲಿಲ್ಲ. ಅವಳಿಗಿಂತಾ ಸಣ್ಣವನಾದ ನೀನ್ಯಾಕೋ ಬಂದೆ ಅವಳ ಬದಲು ಏಟು ತಿನ್ನೋಕೆ  ? ಎಂದರು ದಪ್ಪ ದನಿಯಲ್ಲಿ ಮಾಸ್ತರು. ತಕ್ಷಣವೇ ಅವನಂದ ಸರ್, ಅವಳು ನನ್ನಕ್ಕ, ಒಂದೇ ಏಟಿನಿಂದ ಅವಳಿಗಾದ ನೋವು ನೋಡಲಾರದೆ ಉಳಿದ ಏಟನ್ನು ನಾ ಪಡೆಯಲು ಬಂದೆ ಎಂದ, ಬಿಕ್ಕಳಿಸುತ್ತಾ. ಆ ಅಕ್ಕ ತಮ್ಮನ ಪ್ರೀತಿ ಅಭಿಮಾನಕ್ಕೆ ತಲೆ ಬಾಗಿದ ಅಲ್ಲಿದ್ದವರು,” ಇರಬೇಕು, ಇರಬೇಕು, ಹೀಗೇ, ಅಕ್ಕ, ತಮ್ಮ ಎಂಬುವವರು” ಎಂದುಕೊಂಡರು. 

ಮೇಲೆ ಪ್ರಸ್ತಾವಿಸಿದ ಮೊದಲನೆಯ ಪ್ರಸಂಗದಲ್ಲಿ, ತಂಗಿ, ಮರಣಿಸಿದ ಸೋದರರನ್ನು ಬದುಕಿಸಿ ಜೀವ ದಾನ ಮಾಡಿ, ತನ್ಮೂಲಕ,  ಸೋದರ-ಸೋದರಿಯರು ಎಂದರೆ ಹೇಗಿರಬೇಕು, ಅವರಲ್ಲಿರಬೇಕಾದ ಪ್ರೀತಿ, ಅಭಿಮಾನ, ತ್ಯಾಗ ಎಂತಹುದಿರಬೇಕು !  ಎಂಬದನ್ನು ವ್ಯಕ್ತ ಪಡಿಸಿದರೆ, ಎರಡನೆಯ ಪ್ರಸಂಗ, ಅಕ್ಕನ ನೋವನ್ನು ನೋಡಿ ಸಹಿಸಲಾರದ ತಮ್ಮ, ಶಿಕ್ಷೆಗೆ ಸಿದ್ದವಾಗಿ ಬಂದಿದ್ದು, ರಕ್ತ ಸಂಬAಧವೆAದರೆ ಎಂತಹುದು, ಒಡಹುಟ್ಟಿದವರ ಮನಸ್ಸು ಅದೆಷ್ಟು ಮೃದು\ಕೋಮಲವಾಗಿರಬೇಕು ಎಂಬುದನ್ನು ಚಿತ್ರಿಸಿದೆ.  

ಕೆಲವು ದಶಕಗಳ ಹಿಂದೆ ಅಸ್ಥಿತ್ವದಲ್ಲಿದ್ದ ಒಂದೊAದು ಜಂಟಿ ಕುಟುಂಬದಲ್ಲಿ  ಪ್ರತಿ ಒಬ್ಬನ ಕಷ್ಟ, ಸುಖ, ನೋವು, ನಲಿವು, ಸಂತಸ, ದುಃಖ, ಲಾಭ, ನಷ್ಟ, ಎಲ್ಲವನ್ನೂ, “ಇದು ನಮ್ಮದು, ನಮ್ಮೆಲ್ಲರದು” ಎಂಬಂತೆ ಹಂಚಿಕೊಂಡು ನಿರ್ವಹಿಸುತ್ತಿದ್ದರು. ಮನೆಯ ಗಂಡು ಸಂತಾನ, ಆ  ವಂಶವೃದ್ಧಿಕಾರಕ ಎನಿಸಿದರೆ ಹೆಣ್ಣು ಮಕ್ಕಳು ಮನೆಯ ಮಹಾಲಕ್ಷ್ಮೀ ಗೃಹಲಕ್ಷ್ಮೀ  ‘ಆಕೆ ‘ಹುಟ್ಟಿದ ಮನೆ, ಮೆಟ್ಟಿದ ಮನೆ ಎರಡನ್ನೂ ಬೆಳಗುವಾಕೆ ‘ ಎಂಬ ಪರಿಗಣನೆಯಿತ್ತು. ಹೀಗಾಗಿ, ಇವ ನನ್ನ ಅಣ್ಣ,  ತಮ್ಮ, ಈಕೆ ನನ್ನ ತಂಗಿ, ಅಕ್ಕ ನಾವೆಲ್ಲಾ  ಒಂದೇ ತಾಯಿ ತಂದೆಯ ಮಕ್ಕಳು ಎಂಬ ಸಹಜ ಸದ್ಭಾವನೆ ಮೂಡಿ, ತನ್ಮೂಲಕ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಒಲವು, ಮಮತೆ, ವಾತ್ಸಲ್ಯ, ಅಕ್ಕರೆ ಅಭಿಮಾನಗಳಿಗೆ ಕೊರತೆಯಿರಲಿಲ್ಲ. ಜನನದಿಂದ ಮರಣದವರೆಗೆ ಈ ಪ್ರೀತಿ ಅನುಬಂಧ ಬತ್ತದ ಚಿಲುಮೆಯಂತೆ ಇರುತ್ತಿದ್ದದ್ದನ್ನು ಇಂದಿನ ಹಲವರು ಕಣ್ಣಾರೆ ಕಂಡಿರದಾದರೂ,, ಇಂದಿನ ಕೆಲವು ಹಿರಿಯರಾದರೂ ಅವರ ಹಿರಿಯರಿಂದ  ಕೇಳಿ ಬಲ್ಲರು ಅಂದಿನ ಸೋದರ ಸಂಬಂಧಗಳು ಎಷ್ಟು ಮಧುರವಾಗಿತ್ತು ಎಂಬುದನ್ನು. 

ಬಾಲ್ಯದಲ್ಲಿ, ನಿನ್ನನ್ನು ತನ್ನ ಕಂಕುಳಲ್ಲಿ ಕೂರಿಸಿಕೊಂಡು ಊರೆಲ್ಲಾ ಸುತ್ತಿಸಿ, ಕೈಗೆ ಮಿಠಾಯಿಟ್ಟು ಮನೆಗೆ ಕರೆ ತರುತ್ತಿದ್ದ ಆ ಸೋದರಿ, ನಿನ್ನ ನಿತ್ಯದ ಬಟ್ಟೆ, ಪುಸ್ತಕಗಳನ್ನು ಜೋಪಾನವಾಗಿಟ್ಟು ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಅವನ್ನು ಹುಡುಕುವ ಕಷ್ಟ ನಿನಗೆ ನೀಡದೆ, ನೀ ಇಚ್ಛಿಸಿದಾಗ ಕೈಗೆಟುಕಿಸಿದ ಆ ಸೋದರಿ, ಅಮ್ಮ ಗದರಿದಾಗ ಅವಳ ಕೈ ಏಟು ತಪ್ಪಿಸಿ, ನಿನ್ನ ಹೊರ ತಂದು ರಕ್ಷಿಸಿದ ಆ ಸೋದರಿ, ನೀ ಬಿದ್ದು ಗಾಯ ಮಾಡಿಕೊಂಡಾಗ, ಅದು ತನಗೇ ಆದ ಗಾಯವೆಂಬಂತೆ ಕಣ್ಣೀರು ಸುರಿಸಿ, ಮುಲಾಮು ಹಚ್ಚಿ, ನಿನ್ನ ಕಣ್ಣೀರು ಒರೆಸಿದ ಆ ಸೋದರಿ,  ಬಡತನ ಕಿತ್ತು ತಿನ್ನುತ್ತಿದ್ದ ಆ ದಿನಗಳಲ್ಲಿ ತಾನು ಅಂಬಲಿ ಕುಡಿದು, ನಿನಗೆ ಅನ್ನ ಕೊಟ್ಟು ಬೆಳೆಸಿದ ಆ ಸೋದರಿ,-“ತನಗೇನಾದರಾಗಲಿ, ಸೋದರನು ಮಾತ್ರ ಚೆನ್ನಾಗಿರಲಿ’ ಎಂದು ತಾನು ಕಂಡು, ಕೇಳಿದ ದೇವರುಗಳಿಗೆಲ್ಲಾ ಕೈ ಮುಗಿದು, ನಿನ್ನ ರಕ್ಷಣೆಗೆ ಹರಕೆ ಹೊತ್ತು ಬೇಡಿದ ಆ ದಿನದ ಸೋದರಿ, ನೀ ದೊಡ್ಡವನಾಗಿ, ಹೆಸರು, ಯಶಸ್ಸು, ಗಳಿಸಿದಂದು ಎಲ್ಲರ ದೃಷ್ಟಿ ನಿನಗೆ ತಾಕದಿರಲೆಂದು ದೃಷ್ಟಿ ನಿವಾಳಿಸಿ ತೃಪ್ತಿಗೊಂಡ ಸೋದರಿ, ಇಂಥಹಾ ಸೋದರಿಯ ಬಗ್ಗೆ ಸೋದರನಿಗಿರಬೇಡವೇ ಅವಿರತ ಗರಿಷ್ಠ ಪ್ರಮಾಣದ ಪ್ರೀತಿ ವಾತ್ಸಲ್ಯಗಳು !

ಇಷ್ಟು ಹೊತ್ತೂ ಅಕ್ಕ ತಂಗಿಯ ಬಗ್ಗೆಯೇ ಹೇಳ್ತಿದ್ದೀರಲ್ಲಾ, ಸೋದರರೇನು ಸೋದರಿಯರ ಬಗ್ಗೆ ಕಾಳಜೀನೇ ವಹಿಸೊಲ್ಲವಾ !  ಎಂಬ ಠೀಕೆ ಬೇಡ.ಬಾಲ್ಯದಲ್ಲಿ ಒಂದೇ ತಟ್ಟೆಯಲ್ಲಿ ತಿಂಡಿ, ಊಟ ಮಾಡಿದ ಸೋದರ ಸೋದರಿಯರು, ವಿದ್ಯೆ, ಬುದ್ಧಿ, ಜೀವನಾನುಭsವ ತಿಳಿ ಹೇಳಿದ ಸೋದರ, ಒಳ್ಳೆಯ ಸಂಬAಧ ತಂದು ಮದುವೆ ಮಾಡಿ, ನೂರ್ಕಾಲ ಚೆನ್ನಾಗಿ ಬಾಳಮ್ಮ ಎಂದು ಮನಸ್ಪೂರ್ತಿ ಸೋದರಿ ಯನ್ನು ಹರಸಿದ ಸೋದರ, ಇಷ್ಟು ಕಾಲ ನಮ್ಮೆಲ್ಲರ ಜೊತೆಯಲ್ಲೇ ಇದ್ದವಳು, ಇಂದು ಬೇರೆಯವರ ಮನೆ ಸೇರಿದ್ದಾಳಲ್ಲಾ ! ಅಲ್ಲಿ ಹೇಗಿದ್ದಾಳೋ, ಎಂತಿದ್ದಾಳೋ, ಎಂಬ ಕಳವಳದಲ್ಲಿ ಆಗಾಗ್ಗೆ ಸೋದರಿಯ ಮನೆಗೆ ಧಾವಿಸಿ ಅಲ್ಲವಳ ನಗು ಮುಖ, ನೆಮ್ಮದಿ ಕಂಡು ಸಂತಸ ಸಮಾಧಾನ ಪಟ್ಟ ಸೋದರ, ಮದುವೆ ಮಾಡಿ ಬೇರೆಯವರ ಮನೆಗೆ ಅಟ್ಟಿದರೆ ನಮ್ಮ ಹೊಣೆ ಮುಗಿಯಿತೇ ?  ಆಕೆಯ ಕಷ್ಟ ರೋಗ ರುಜಿನಗಳಿಗೆ ಆಗಬೇಕಾದವರು ಒಡ ಹುಟ್ಟಿದ ನಾವೇ ಅಲ್ಲವೇ ? ಎಂದು ತಾ ನೆರವು ನೀಡಿದ ಸೋದರರನ್ನು ಯಾವ ಸೋದರಿಯಾದರೂ ಮರೆಯಬಹುದೇ  ? 

ಆದರೆ ! ಇತ್ತೀಚಿನ ಕಾಲದಲ್ಲಿ ಏನಾಗಿದೆ  ಇವರೆಲ್ಲರ ನಡುವೆ ? ಇವರೇಕೆ (ಎಲ್ಲರೂ ಅಲ್ಲದಿದ್ದರೂ ಬಹಳಷ್ಟು ಜನ) ಸೋದರ ಸೋದರಿಯರಂತೆ ಬಾಳದೆ ದಾಯಾದಿಗಳಂತೆ ವರ್ತಿಸಿ, “ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು” ಎಂಬ ಹಳೆಯ ಗಾದೆ ಸರ್ವಕಾಲಿಕ ಸತ್ಯ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಇಂದು ಎಲ್ಲರನ್ನೂ ಕಾಡುತ್ತಿದೆ.

    ಸೋದರ ಸೋದರಿಯರ ನಡವಿನ ಸಂಬAಧಗಳು ಹಳಸಲು ಕೆಟ್ಟು ಹಾಳಾಗಲು ಮುಖ್ಯ ಕಾರಣ, ಅಹಂ, ಸ್ವಾರ್ಥ, ಅತಿಯಾದ ದುರಭಿಮಾನ, ಭೌತಿಕ, ಐಹಿಕ, ಲೌಕಿಕ, ಭೋಗ, ಭಾಗ್ಯ, ಸಿರಿ, ಸಂಪತ್ತು, ಅಧಿಕಾರ, ಪದವಿ, ಸಂಬಳ, ಸವಲತ್ತು, ಸಮಾಜದಲ್ಲಿ  ಅಂತಸ್ತು, ಘನತೆ, ಗೌರವ, ಮಾನ್ಯತೆ, ಸ್ಥಾನಮಾ£ಗಳಿಗೇ ಹೆಚ್ಚು ಪ್ರಾಧಾನ್ಯತೆ ನೀಡಿ, ಇವೇ ನಮಗೆ  ಮುಖ್ಯ. ಇವಿದ್ರೆ ಎಲ್ಲವೂ ಇದ್ದಂತೆ.  ಇವುಗಳೇ ನೆಂಟಸ್ಥನ, ಸಂಬಂಧಗಳು ಮುಂದುವರಿಸುವ ಅಂಶಗಳಾಗಿವೆ.  ಅವನು ಸೋದರನೋ, ಸೋದರಿಯೋ, ಸಂಬಂಧ ಏನಾದರಾಗಲಿ, ಅವನಲ್ಲಿ : ಅವಳಲ್ಲಿ ಇವಿದ್ರೇನೇ ಇವ ನಮ್ಮವ ಎಂದು ಪೂರ್ಣಕುಂಭದ ಸ್ವಾಗತ ನೀಡಿ ಆದರಿಂದ ಬರ ಮಾಡಿಕೊಂಡು,  ಅಪ್ಪಿ ಮುದ್ದಾಡುವುದು. ಉಡುಗೊರೆಗಳನ್ನು ಕೊಟ್ಟು ಕೊಂಡಾಡು ವುದು, ನೀ ಇಂದ್ರ, ಚಂದ,್ರ ದೇವೇಂದ್ರನೆAದು. ಕುಟುಂಬಗಳಲ್ಲಿನ ಸದಸ್ಯರ ನಡುವೆ ಪ್ರೀತಿ ವಿಶ್ವಾಸಗಳನ್ನು ನಿರ್ಧರಿಸುವ ಮಾನದಂಡಗಳು ಇಂದು ಇವೇ ಆಗಿವೆ. “ಇವಿಲ್ಲದವರು ನಮಗೇನೂ ಸಂಬಂಧವಿಲ್ಲದವರು ಎನಿಸಿಕೊಳ್ಳುತ್ತಾರೆ. ಕಸಕ್ಕಿತಾ  ಕಡೆಯಾಗುತ್ತಾರೆ” 

     ಸಾಧಾರಣವಾಗಿ, ಸೋದರಿಗೂ ತೌರಿಗೂ ಎಡಬಿಡದ ನಂಟು ಇರುವುದು ಸಹಜವೇ. ಹೀಗಾಗಿ, ಆಕೆ ವಿವಾಹಕ್ಕೆ ಮುನ್ನ ತೌರಿನೊಂದಿಗೇ ಅದೆಷ್ಟು ಅಂಟಿ ಕೊಂಡಿರುತ್ತಾಳೋ, ವಿವಾಹವಾದ ನಂತರವೂ ಆ ತೌರಿನ ಬಗ್ಗೆ ಅಷ್ಟೇ, ಅಥವಾ ಮತ್ತೂ ಹೆಚ್ಚಿನಷ್ಟು ವ್ಯಾಮೋಹ ಬೆಳೆಸಿಕೊಂಡಿರುತ್ತಾಳೆ ಎಂಬುದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ಬದಲಿಗೆ ಬಹಳಷ್ಟು ಸಂಖ್ಯೆಯ ಸೋದರಿಯರದೇ ಆಗಿದೆ. ತೌರಿನಿಂದ ಆಕೆ ನೆರವನ್ನು ಬಯಸುವುದು, ಅದು ಸಿಕ್ಕಾಗ, ತೌರು, ಸೋದರ ಸಂಬAಧ ಚೆನ್ನಾಗಿದೆ, ನಮ್ಮ ಪುಣ್ಯ ಎಂದುಕೊಳ್ಳುವುದು, ತೌರಿನಿಂದ ಏನೂ ಸಿಗದಾಗ, “ಅಮ್ಮ ಅಪ್ಪ ಇರುವವರೆಗೆ ತೌರಿನ ನಂಟು, ಅವರ ನಂತರ ಸೋದರರು, ಅವರ ಹೆಂಡತಿ, ಮಕ್ಕಳು, ಮೊಮ್ಮಕ್ಕಳ ಒಳಿತು ನೋಡ್ತಾರೆಯೇ ಹೊರತು ಒಡಹುಟ್ಟಿದವರನ್ನು ಗಮನಿಸ್ತಾರಾ ! ಎಂದಿಗೂ ಇಲ್ಲ” ಎಂಬ ರಾಗ ಹಾಡುವುದು, “ಮದುವೆಯಾಗಿ ಎಷ್ಟು ವರ್ಷವಾದರೂ  ನೆರವಿಗೆ ಸದಾ ತೌರೇ ಎಂದು ತೌರಿನ ಮೇಲೇ ವಾಲುತ್ತಿದ್ದರೆ ಹೇಗೆ !  ನಮಗೇ £ಮ್ಮದೇ ಆದ ಸಂಸಾರ, ಮಕ್ಕಳು ಮೊಮ್ಮಕ್ಕಳು, ಅವರ ಹೊಣೆ ಇಲ್ಲವೆ, ನಿರ್ವಹಿಸಲು ! ಇವರ ಗಂಡAದಿರಿದ್ದಾರಲ್ಲ ಇವರನ್ನು ರಕ್ಷಿಸಲು” ಎನ್ನುವ ಸೋದರರು, 

  “ನೀನು ನಾನೂ ಒಂದೇ ಅಮ್ಮ ಅಪ್ಪನ ಮಕ್ಕಳಲ್ಲವೇ ! ಸವತಿಯ ಮಕ್ಕಳಲ್ಲವಲ್ಲಾ ! ಎಂದು ತನ್ನ ಕೈಲಿರುವ ತಿಂಡಿಯಲ್ಲಿ ತುಣುಕೊಂದನ್ನು ಮುರಿದು,  ಅಮ್ಮಾ ! ಕೋ ನಿನಗಿದು, ನನಗಿದು ಎಂದು ಸಂತಸದಿAದ ಕೊಟ್ಟು ನಾವೆಲ್ಲರೂ ಸಂತಸದಿAದಿರ ಬೇಕಮ್ಮಾ ಎಂಬ ಹೃದಯ ವೈಶಾಲ್ಯತೆ ಇಲ್ಲದ ಸೋದರರು, ನೀವು,  ಆಹಾ ! ನಿನ್ನಲ್ಲಿರುವ ತಿಂಡಿಯಲ್ಲಿ ನನಗೆ ಮುರಿದು ಕೊಟ್ಟರೆ ನಿನಗೆ, ನಿನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಬೇಡವಾ ! ಇದರಲ್ಲಿ ಚೂರೂ ನಿನಗಿಲ್ಲ,  ನನ್ನ ಮಕ್ಕಳು ಮೊಮ್ಮಕ್ಕಳಿಗೇ ಇದೆಲ್ಲಾ ಎನ್ನುವ ಸ್ವಾರ್ಥಿಗಳು ನೀವು, ನೀವೆಂತಾ ಸೊದರರೋ,  ನಮಗೆ ! ರಕ್ತ ಸಂಬAಧವನ್ನೂ ಕಡಿದುಕೊಂಡರೂ ಪರವಾಗಿಲ್ಲ, ನೋಡಿ ! ನಿಮಗೆ ಬುದ್ಧಿ ಕಲಿಸ್ತೇವೆ” ಎಂದು ಸೋದರರ ವಿರುದ್ಧ ಸಮರ ಸಾರುವ ಸೋದರಿಯರು, ನಮಗ್ಯಾರೂ ಸೋದರಿಯರೇ ಜೊತೆಯಲ್ಲಿ ಜನಿಸಲಿಲ್ಲ ಎನ್ನುವ ಸೋದರರು, ಇಂದು ಬಹುತೇಕ ಕುಟುಂಬಗಳಲ್ಲಿ ಕಾಣಿಸುತ್ತಿದ್ದಾರೆ.

     ಈ ರೋಷ ಕೋಪ ದ್ವೇಷ, ಸೇಡು, ಮುಂದೆ ಪರಸ್ಪರ ವಿರುದ್ಧ  ಅಸೂಯೆ, ವೈಮನಸ್ಯಕ್ಕೆ ತಿರುಗಿ, ಸೆಣಸಾಟ ಕದನಕ್ಕೆ ದಾರಿಯಾಗುವುದರಲ್ಲಿ ಸಂದೇಹವಿಲ್ಲ.  ಬಹುಶಃ ಈ ಎಲ್ಲಾ ಕಾರಣಗಳಿಂದಲೇ ಇರಬಹುದು ಇಂದು ಸೋದರ ಸೋದರಿಯರ ನಡುವಿನ ಬಾಂಧವ್ಯ ಕ್ಷೀಣಿಸಿ ನಶಿಸಿ ಹಾಳುಗುತ್ತಿರುವುದು ಎನಿಸುತ್ತಿದೆ. “ದುಡ್ಡಿದ್ದವನು ದೊಡ್ಡಪ್ಪ “ ದುಡ್ಡನ್ನು ಹೇಗಾದರೂ ಸಂಪಾದಿಸಬೇಕು. ಅದು ಧರ್ಮ ಮಾರ್ಗವೋ ಅಧರ್ಮವೋ, ಅದರ ಚಿಂತೆ ಎನಗಿಲ್ಲ. ಅದು ನನಗಿರಬೇಕು ಎಂಬ ಸಿರಿಯ ಹಿಂದಿನ ನಾಗಾಲೋಟ ಬಂಧುತ್ವ ಸಂಬಂಧ, ಸೋದರಿಕೆ ಎಲ್ಲವನ್ನೂ ಪಕ್ಕಕ್ಕೆ ತಳ್ಳಿದೆ. ಒಡಹುಟ್ಟಿದವರು ದಾಯಾದಿಗಳಂತೆ ಕಾದಾಟಕ್ಕೆ ಆಹ್ವಾನ ನೀಡುತ್ತಿದ್ದಾರೆ. “ಕೌರವ ಕೊಡ, ಪಾಂಡು ಬಿಡ” ಎಂಬAತೆ, ಮೊದಲು, ಸೋದರ ಸೋದರಿಯರ  ನಡುವಿನ ಪ್ರಾರಂಭಿಕ ಮುಸುಕಿನ ಗುದ್ದಾಟ, ನಂತರದಲ್ಲಿ ಎಲ್ಲರಲ್ಲೂ ಕುತೂಹಲ ಕೆರಳಿಸುವ ಸಾರ್ವಜನಿಕ ಪ್ರದರ್ಶನದ ಕದನವಾಗುತ್ತದೆ.  

     ಪರಿಣಾಮ : ಸೋದರ ಸೋದರಿಯ ಮೇಲೆ ಸೇಡು ತೀರಿಸಿಕೊಳ್ಳಲು, ಆಕೆಯ, ಪತಿಯ ಜೀವ ತೆಗೆಯುವ ಪ್ರಯತ್ನಗಳು, ಹೀಗೇನೇ. ಸೋದರ, ಅವನ ಕುಟುಂಬವನ್ನೇ ಮುಗಿಸಿ ಕೆಟ್ಟ ತೃಪ್ತಿ ಪಡುತ್ತಿರುವ ಸೋದರಿಯರು, ಇಂಥಹಾ ವಿಷಯಗಳೆಲ್ಲಾ ಇಂದು ನಮ್ಮ ಕಣ್ಣೆದುರೇ ಜರುಗುತ್ತಿವೆ. 

     ಇವನ್ನು ಕಂಡ ಕೆಲ ನಿಮಿಷಗಳು ಮಾತ್ರ, ಥೂ, ಹೀಗಾಗಬಾರದಪ್ಪಾ ! ಒಂದೇ ರಕ್ತವನ್ನು ಹಂಚಿಕೊಂಡು ಜನಿಸಿದವರು, ಪರಸ್ಪರರ ವಿರುದ್ಧವೇ ಸಂಪತ್ತು ಆಸ್ತಿ ಅಂತಾ ಹೀಗೆ ಹೊಡೆದಾಡಿ, ತಲೆಗಳು ಒಡೆದುಕೊಳ್ಳಬೇಕಾ ! ಇಂದು ನಮ್ ಹತ್ತಿರ ಇರೋದನ್ನ ಸತ್ತ ಮೇಲೂ ನಮ್ಮ ಜೊತೆ ತಗೊಂಡು ಹೋಗ್ತೀವಾ ? “ಮನುಷ್ಯ ಕೊಟ್ಟಿದ್ದು ಮನೆವರೆಗೂ ದೇವರು ಕೊಟ್ಟಿದ್ದು ಕೊನೆಯವರೆಗೂ” ಎಂಬ ಸಣ್ಣ ತಿಳಿವಳಿಕೆಯೂ ಇವರಿಗಿರಬೇಡವೇ ! ಇಬ್ರ ಪೈಕಿ ಯಾರಾದರೊಬ್ಬರು ಬುದ್ಧಿ ತಂದುಕೊಂಡು ಎಲ್ರೂ ನೆಮ್ಮದಿಯಾಗಿ ಬಾಳಬಾರದಾ ? ಏನ್ ಸಾಯ್ತಾರೋಪ್ಪಾ , ಆಸ್ತಿ ಹಣ, ಭ,Æಮಿ ಅಂತಾ, ಅನ್ನೋ ವೈರಾಗ್ಯ ನಮ್ಮಲ್ಲಿ ಬಹಳಷ್ಟು ಜನರಲ್ಲಿ ಉದಯಿಸಿದರೂ, ಕೆಲ ಗಂಟೆಗಳ ನಂತರ, ಮೊದಲಿನ ವೈರಾಗ್ಯ ಮಾಯವಾಗಿ,  ಮತ್ತೇ  ಅದೇ ಹಳೇ ಮಾತೇ, ಅಣ್ಣ, ತಮ್ಮ, ಅಕ್ಕ, ತಂಗಿ, ನನಗೆ ಮೋಸ ಮಾಡಿದರು, ಕೊಡಬೇಕಾದ್ದು ಕೊಡಲೇ ಇಲ್ಲ, ಆಗಲಿ, ನನಗೊತ್ತು, ಅವರಿಂದ ಹೇಗೆ ವಸೂಲಿ ಮಾಡಬೇಕು ಅಂಥಾ ಎಂಬ ಮಾತುಗಳು ಇವರ ಬಾಯಲ್ಲಿ ಬರುತ್ತಿರುತ್ತವೆ.  

    ಏಕಿಂತಹಾ ಸೆಣಸಾಟ ! ಇದು ಸರಿಯೇ ! ಬೇರೆಯವರಿಂದ ನೆರವು ಪಡೆದೇ ಜೀವನ ನಡೆಸಬೇಕಾದಷ್ಟು ದುರ್ಬಲರೇ ನಾವು ! ದೇವರು ನಮ್ಮ ವಿಚಾರದಲ್ಲಿ ಕರುಣಾ ಮಯಿಯಾಗಿಲ್ಲವೇ ?  ಆತ ನಮಗೇನೂ ನೀಡೇ ಇಲ್ಲವೇ ! ಎಂಬದನ್ನು ನಾವುಮಯೋಚಿಸಬೇಕು. ದೇವರು ನಮಗೆ ಎಲ್ಲಾ ಅಂಗಾAಗಗಳನ್ನೂ ಸದೃqsವಾಗಿಟ್ಟಿದ್ದಾನೆ,  ಆರೋಗ್ಯ ಭಾಗ್ಯ ಇದೆ. ಶರೀರ ಶ್ರಮ ಪಟ್ಟು ದುಡಿದು, ನಿನ್ನ ಕಾಯಕದ ಫಲ ನೀ ತಿನ್ನು ಎಂದು ಬುದ್ದಿಯನ್ನೂ ಕಲಿಸಿದ್ದಾನೆ, ನಮಗಾ ದೇವರು. ಇಷ್ಟಕ್ಕಿಂತಾ ನಮಗೇನು ಕೊಡಬೇಕು ಆತ ? ನಮ್ಮ ಹಿರಿಯರು, ಶಾಸ್ತçಗಳುನುಸಾರ, ಮನುಷ್ಯನ ಆಯುಃ ಪ್ರಮಾಣ, ವಿದ್ಯೆ, ಸಿರಿ, ರೋಗ ರುಜಿನಗಳು, ಮರಣದ ರೀತಿ ಇವೆಲ್ಲವನ್ನೂ ದೇವರು ನಮ್ಮ ಜನನ ಕಾಲಕ್ಕೆ ಮುಂಚೆಯೇ ನಿರ್ಧರಿಸಿ ಇಲ್ಲಿಗೆ ಕಳುಹಿಸಿರುತ್ತಾನಂತೆ. 

    ಜೊತೆಗೆ, ಹಿಂದಿನ ಜನ್ಮದಲ್ಲಿ ಪ್ರತಿ ವ್ಯಕ್ತಿ ಮಾಡಿದ ಪಾಪ ಪುಣ್ಯಗಳ ಫಲವನ್ನು ಅವನು ಮುಂದಿನ ಜನ್ಮದಲ್ಲಿ ಅನುಭವಿಸಲೇಬೇಕು. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವಂತೆ. ವಸ್ತುಸ್ಥಿತಿ ಹೀಗಿರುವಾಗ, “ಯೋಗಿ ಪಡೆದುಕೊಂಡು ಬಂದಿದ್ದು ಯೋಗಿಗೆ, ಭೋಗಿ ಪಡೆದುಕೊಂಡು ಬಂದಿದ್ದು ಭೋಗಿಗೆ ಎಂಬ ಗಾದೆಯಂತೆ,  ಇಂದಿನ ನಮ್ಮ ಪರಿಸ್ಥಿತಿಗೆ ಕಾರಣ, ನಮ್ಮ ಹಿಂದಿನ ಜನ್ಮ,ದ ಕರ್ಮ ಫಲ, ಇದಕ್ಕಾಗಿ ಬೇರೆಯವರನ್ನು ದೂಷಿಸುವುದು ಸರಿಯಲ್ಲ ಎಂಬ ಸತ್ಯದ ಜ್ಞಾನ ,  ವಿವೇಕ ನಮಗಿರಬೇಡವೇ ? ಅದಕ್ಕಾಗಿಯೇ,  “ಉದ್ದರೇದಾತ್ಮನಾತ್ಮಾನಂ” ನಮ್ಮ ಉದ್ದಾರವನ್ನು ನಾವೇ ನಮ್ಮ ಸ್ವಪ್ರಯತ್ನದಿಂದ ಮಾಡಿಕೊಳ್ಳಬೇಕೇ ಹೊರತು ಇದಕ್ಕಾಗಿ ಬೇರೆಯವರು ನಮ್ಮ ನೆರವಿಗೆ ಬರುವುದಿಲ್ಲ ಎಂಬ ಭಗವದ್ಗೀತಾ ಉಪದೇಶ ((ಭ ಗೀ ೬. ೫)ವನ್ನು ಸ್ಮರಿಸಿ, ಯಾರಿಂದಲೂ ಏನನ್ನೂ ನಿರೀಕ್ಷಿಸುವ ಪರಾವಲಂಭಿಗಳಾಗದೆ, ನಮ್ಮ ಆತ್ಮ ಗೌರವವನ್ನು ರಕ್ಷಿಸಿಕೊಂಡು, ಜೀವನವನ್ನು  ಸ್ವತಂತ್ರವಾಗಿ ನಡೆಸೋಣ. ಜನ್ಮತಃ ದೊರೆತ ಸೋದರ ಸೋದರಿಯರ ನಡುವಿನ ಸುಮಧುರ ಬಾಂಧವ್ಯವನ್ನು ನಮ್ಮ  ಆಯುಷ್ಯ ಮುಗಿಯುವವರೆಗೂ ರಕ್ಷಿಸಿಕೊಂಡು, “ಸರ್ವೇ ಜನಾಃ ಸುಖಿನೋ ಭವಂತು, ಲೋಕಾ ಸಮಸ್ತಾ ಃ ಸುಖಿನೋ ಭವಂತು “ ಎಂಬ ನೀತಿಯನ್ನು ಅನುಸರಿಸಿ ಎಲ್ಲರೂ ನೆಮ್ಮದಿಯ ಬಾಳ್ವೆ ನಡೆಸೋಣ.

             ********************

Comments