ಕುವೆಂಪು

ಕುವೆಂಪು

 ಲೇಖನ - ಡಾ ಮಂಜುಳಾ ಹುಲ್ಲಹಳ್ಳಿ.‌‌


     "ಮತ್ತೆ ಮತ್ತೇ ಕುವೆಂಪು."

      ಪ್ರಕೃತಿಯಿಂದ ಬಂದು, ಪ್ರಕೃತಿಯೊಡಲಿನಲ್ಲಿ ಬೆಳೆದು ಪ್ರಕೃತಿಯನ್ನು ಆರಾಧಿಸಿ, ಪ್ರಕೃತಿಯ ಪೂರ್ಣ ಕೃಪೆಗೆ ಪಾತ್ರವಾದ ಅಪೂರ್ವ ದಿವ್ಯ ಚೇತನ ಕುವೆಂಪು. ಪ್ರಕೃತಿಯೊಡಲಿನಲ್ಲಿ ಹುಟ್ಟಿದ ಅವರು ಪ್ರಕೃತಿಯೊಳಗೇ ಲೀನವಾಗಿ ಇಪ್ಪತ್ತು ವರುಷಗಳು ಕಳೆದಿವೆ. ಆದರೆ ಕನ್ನಡನಾಡಿನ ಪ್ರಕೃತಿಯ ಕಣ ಕಣದಲ್ಲೂ ಕುವೆಂಪು ದಿವ್ಯ ಶಕ್ತಿ ಸಂಚರಿಸುತ್ತಿರಬಹುದೆಂಬ ಅನುಭೂತಿಯ ಭಾವ ರೋಮಾಂಚನ ನಿತ್ಯನೂತನವಾಗಿದೆ.

     ಈ ಜಗತ್ತಿನಲ್ಲಿ ಮಹಾವ್ಯಕ್ತಿಗಳು ಹುಟ್ಟುವುದೇ ತುಂಬಾ ಅಪರೂಪ. ಮಹಾಕವಿಗಳು ಹುಟ್ಟುವುದು ಇನ್ನೂ ಅಪರೂಪ. ಮಹಾವ್ಯಕ್ತಿಯೊಬ್ಬ ಮಹಾಕವಿಯಾಗಿ ರೂಪುಗೊಂಡು ಹುಟ್ಟುವುದು ಶತಮಾನಕ್ಕೊಮ್ಮೆ ಲಭಿಸಬಹುದಾದ ಅಪೂರ್ವ ಯೋಗ. ಹಾಗೆ ಆಗುವುದು ಭುವನದ ಭಾಗ್ಯದಿಂದ, ಜನಾಂಗದ ಪುಣ್ಯದಿಂದ. ಅಂಥ ಭಾಗ್ಯ ಪುಣ್ಯಗಳನ್ನು ಪಡೆದ ನಮ್ಮ ನಾಡಿನಲ್ಲಿ ಅಸಾಧಾರಣ ಕಾವ್ಯಮಾನವ ಕುವೆಂಪು ಅವರು ಜನ್ಮ ತಳೆದರೆಂಬುದೇ ಅನನ್ಯ ಭಾವಸಂಭ್ರಮ!

     ದರ್ಶನ ದೀಪ್ತ ಋಷಿ ಚೇತನದ ಮೂರ್ತರೂಪವೊಂದು ತನ್ನ ಹುಟ್ಟಿಗೆ ಆಯ್ದುಕೊಂಡ ಕ್ಷೇತ್ರವೇ ಹಸುರಿನ ತವರುನೆಲೆಯಾದ ಹಿರೆಕೊಡಿಗೆ. ಅಂಕುರವಿಟ್ಟು ಬೆಳೆದುದು ಸಹಸ್ರ ಪಕ್ಷಿಗಳ ವಸಂತಗಾನದ, ಹಸುರಿನ ಹೆಮ್ಮೆಯ, ಗಂಭೀರಮೌನದ ಪವಿತ್ರ ಶಾಂತಿಯ ಮಲೆನಾಡಿನ  ತುಂಬುಕುಟುಂಬ ಕುಪ್ಪಳಿ ಮನೆಯಲ್ಲಿ.  ಈ ಮನೆಯ ಉಪ್ಪರಿಗೆ ಶಾಲೆಯಲ್ಲಿ ವಿದ್ಯಾಭ್ಯಾಸದ ಓನಾಮವನ್ನೂ ಕಲಿತ ಪುಟ್ಟಪ್ಪ ಬಾಲ್ಯದಿಂದಲೇ ಏಕಾಂತವಾಸ, ಪ್ರಕೃತಿಯಾರಾಧನೆ, ಗ್ರಂಥೋಪಾಪನೆಗಳಿಗೆ ಮನತೆತ್ತರು.


      

ಪುಟ್ಟ ಹುಡುಗ ಪುಟ್ಟಪ್ಪ ತನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಬರಲೇಬೇಕಿತ್ತು. ಆ ವೇಳೆಗೆ ತಂದೆ ದಿವಂಗತರಾಗಿದ್ದರು. ಚಿಕ್ಕಪ್ಪ ಹೆಚ್ಚು ಓದುವುದು ಬೇಡ, ಇಲ್ಲೇ ಇದ್ದು ಆಸ್ತಿ ನೋಡಿಕೋ ಎಂದರು. ಆದರೆ ಓದಿನ ವಿಷಯದಲ್ಲಿ ತಾಯಿಯ ಮೌನರಕ್ಷೆ ಪಡೆದಿದ್ದ ಹುಡುಗ ‘ಏನೇ ತೊಂದರೆ ಆಗಲಿ, ಓದು ನಿಲ್ಲಿಸುವುದಿಲ್ಲ’ ಎಂದು ದೃಢವಾಗಿ ಹೇಳಿ ಮೈಸೂರಿಗೆ ಬಂದರು. ಮೈಸೂರಿನ ಕೀರ್ತಿಗೆ ಮತ್ತೊಂದು ಭವ್ಯತೆಯ ಕಿರೀಟ ತೊಡಸಿದರು!

      ‘ರಾಬಿನ್ ಸನ್ ಕ್ರೂಸೋ’  ಪುಸ್ತಕ ಮೈಸೂರಿನಲ್ಲಿ ಬಾಲಕ ಪುಟ್ಟಪ್ಪ ಓದಿದ ಮೊದಲ ಪುಸ್ತಕ. ಇದರ ಪ್ರಭಾವ ಅವರ ಮೇಲೆ ಹೇಗಾಯಿತೆಂದರೆ, ನಂತರದ ದಿನಗಳಲ್ಲಿ ಅವರು ಊಟ ತಿಂಡಿ ನಿದ್ರೆ ಬಿಟ್ಟರೂ ನಿತ್ಯ ಗ್ರಂಥಾಲಯಗಳಿಗೆ ಹೋಗುವುದನ್ನು ಬಿಡಲಿಲ್ಲ. ಹೈಸ್ಕೂಲಿನಲ್ಲಿದ್ದಾಗಲೆ ಷೇಕ್ಸ್ಫಿಯರ್‌ನ ಕೃತಿಗಳನ್ನು ಓದಲು ತೊಡಗಿದರು. ಮೊದಲು ಓದಿದಾಗ ಏನೂ ಅರ್ಥವಾಗಲಿಲ್ಲ. ಆದರೆ ನಿಘಂಟನ್ನು ಪಕ್ಕದಲ್ಲಿರಿಸಿಕೊಂಡು ಪದ ಪದಗಳಿಗೆ ಅರ್ಥ ಹುಡುಕಿ ಮೊದಲಿನಿಂದ ಕೊನೆಯವರೆಗೆ ಓದಿ ಅರ್ಥ ದಕ್ಕಿಸಿಕೊಳ್ಳುವ ರೀತಿಯನ್ನು ಅರಿತರು.

     ಹೀಗೇ ಟಾಲ್‌ಸ್ಟಾಯ್, ಹಾರ್ಡಿ, ವರ್ಡ್ಸ್ವರ್ತ್ ಮೊದಲಾದವರ ಕೃತಿಗಳ ಜತೆಗೆ ಸ್ವಾಮಿ ವಿವೇಕಾನಂದರ ಕೃತಿಗಳನ್ನು ಮನನ ಮಾಡಿಕೊಂಡರು. ಸಾಹಿತ್ಯೋದ್ದೇಶದ ಅರ್ಥ,  ಸಂಕಲ್ಪಸಿದ್ಧಿಯ ಸಾರ್ಥಕತೆ ಮನವರಿಕೆಯಾಯಿತು. ಅಂದಿನಿಂದ ಸಾಹಿತ್ಯದ ಮೂಲಕ ಆತ್ಮಕಲ್ಯಾಣವನ್ನು ಸಾಧಿಸಬೇಕೆಂಬುದನ್ನು ಜೀವನದ ಪ್ರಧಾನಗುರಿಯಾಗಿರಿಸಿಕೊಂಡರು.

     ವಿದ್ಯಾರ್ಥಿಯಾಗಿದ್ದಾಗ ಅವರ ವಾಸ ಮೈಸೂರಿನ ಸಂತೆಪೇಟೆಯ ಹೋಟೆಲಿನ ಮಹಡಿಯ ಮೇಲಿನ ಪುಟ್ಟ ಕೊಠಡಿ. ಆಗಲೇ ಅಧ್ಯಾತ್ಮ ಶಕ್ತಿಯ ಕಡೆಗೂ ಒಲಿದಿದ್ದ ಅವರು ಸಂತೆಪೇಟೆಯನ್ನೇ ಪಾಠಶಾಲೆಯಾಗಿಸಿಕೊಂಡು ವ್ಯಾಪಾರದ ಗಲಾಟೆಯಲ್ಲೇ ತಪೋನಿರತೆಯನ್ನು ಅನುಭವಿಸುತ್ತಿದ್ದರು. ಅಲ್ಲಿನ ಹರಿದ ಚಾಪೆಯಲ್ಲೇ ದಿವ್ಯ ವೇದಿಕೆಯನ್ನು ಕಲ್ಪಿಸಿಕೊಂಡು ಧ್ಯಾನಾಸಕ್ತರಾಗುತ್ತಿದ್ದರು . ಜನ್ಮತಃ ಪ್ರತಿಭಾವಂತರಾದ ಅವರಲ್ಲಿ ಕಾವ್ಯಪ್ರಜ್ಞೆ ಸಹಜವಾಗಿ ವಿಕಾಸಗೊಂಡು ವಿದ್ಯಾರ್ಥಿ ಅನುಭವಗೋಷ್ಟಿ ನಡೆಯಲೂ ಸಾಧ್ಯವಾಗಿತ್ತು. ಇಂತಹ ಕಾರಣಗಳಿಂದ ಪುಟ್ಟಪ್ಪನವರ ಕಾವ್ಯನಾಮ ಕಿಶೋರಚಂದ್ರವಾಣಿಯಾಗಿ, ನಂತರ ಕುವೆಂಪು ಎಂದು ಸ್ಥಿರವಾಯಿತು.



     ಅಧ್ಯಯನ, ಅಧ್ಯಾತ್ಮ ಸಾಧನೆ, ಕಾವ್ಯಕ್ರಿಯೆ ಈ ಮೂರು ಒಂದರೊಡನೆ ಒಂದು ಬೆಸೆದುಕೊಂಡು ನುಡಿದಂತೆ ನಡೆದ, ನಡೆದಂತೆ ಬರೆದ, ಬರೆದಂತೆ ಬದುಕಿದ ಅಪೂರ್ವ ತಪೋನಿಧಿಯಾದರು ಕುವೆಂಪು. ಅವರದೇ ನುಡಿ, "ಮುಗಿದಿರಲಿ ಕೈ, ಮಣಿದಿರಲಿ ಮೈ ಮತ್ತೇ ಮಡಿಯಾಗಿರಲಿ ಬಾಳ್ವೆ" ಎನ್ನುವುದಕ್ಕೆ ಸಾರ್ಥಕ ಪ್ರತಿಮಾರೂಪವೇ ಅವರಾಗಿದ್ದರು.

    ಒಂದು ಮಹಾಕಾವ್ಯ, 3 ಖಂಡಕಾವ್ಯ, 27 ಭಾವಗೀತಾ ಸಂಗ್ರಹ, ಒಂದು ಕಥನ ಕವನ ಸಂಗ್ರಹ, 3 ಸಣ್ಣ ಕಥಾ ಸಂಗ್ರಹ, 14 ನಾಟಕಗಳು, 2 ಕಾದಂಬರಿಗಳು ,2 ಜೀವನ ಚರತ್ರೆಗಳು, 6 ಮಕ್ಕಳ ಸಾಹಿತ್ಯ, 7 ವಿಮರ್ಶೆ ಕಾವ್ಯಮೀಮಾಂಸೆ, ಎರಡು ‘ಆತ್ಮಕಥೆ’, 2 ಅನುವಾದ ಪ್ರಕಟವಾಗದೆ ಅವರ ಮನೋಭೂಮಿಕೆಯಲ್ಲೇ ಉಳಿದುಹೋದ ಹೇರಳ ಕಾವ್ಯಗಣಿತಗಳು  ಶ್ರೀಯುತರ ಕೃತಿ ಸಂಪತ್ತು.

     ಜಗತ್ತಿಗೆ ಶುಭವಾಗಲೆಂದು, ಮನುಕುಲದ ಬದುಕು ಹೊನ್ನಾಗಲೆಂದು ಕುವೆಂಪು ತಪಸ್ಸಾಗರದಲ್ಲಿ ಮುಳುಗಿ ಈ ಕೃತಿ ರತ್ನಗಳನ್ನು ಹೊರತಂದರು. ಒಂದೊಂದು ಕೃತಿಯಲ್ಲೂ ಅವರ ಅಲೌಕಿಕ ಪ್ರತಿಭೆ ಪ್ರಖರ ವ್ಯಕ್ತಿತ್ವ ಹೊರಹೊಮ್ಮುತ್ತದೆ.

    ಕುವೆಂಪು ತಮ್ಮ ಕೃತಿಗಳಲ್ಲಿ ಕಣ್ಮರೆಯಾಗಿಹೋದ ಪುರಾತನ ಮೌಲ್ಯಗಳಿಗೆ ಮರುಹುಟ್ಟು ನೀಡಿದ್ದಾರೆ, ಜೀರ್ಣವಾಗಿಹೋದ ತತ್ವಗಳನ್ನು ಪರಿಷ್ಕರಿಸಿದ್ದಾರೆ. ನೂತನ ಮೌಲ್ಯಗಳನ್ನು ಸೃಷ್ಟಿಸಿದ್ದಾರೆ. ಪ್ರಾರ್ಥನೆ ತಪಸ್ಸುಗಳು ಅವರ ಕೃತಿಗಳಲ್ಲಿ ಹಾಸು ಹೊಕ್ಕಾಗಿವೆ. ಜತೆಗೆ ಸಮಾಜದಲ್ಲಿ ತಾಂಡವವಾಡುವ ಸರ್ವ ಮೌಢ್ಯಗಳನ್ನು ಖಂಡಿಸಿದ್ದಾರೆ. ದೇವರ ಹೆಸರಿನಲ್ಲಿ ನಡೆಸುವ ಅನಾಚಾರವನ್ನು ಕೈಬಿಡಬೇಕೆಂದು ಘೋಷಿಸುತ್ತಾರೆ, ಶಾಸ್ತ್ರಗಳ ನೆಪದಲ್ಲಿ ನಡೆಸುವ ಕಂದಾಚಾರಗಳನ್ನು ತಿರಸ್ಕರಿಸುತ್ತಾರೆ.

       ‘ಆ ಮತದ ಈ ಮತದ 

       ಹಳೆ ಮತದ ಸಹವಾಸ

       ಸಾಕಿನ್ನು ಸೇರಿರೈ ಮನುಜ ಮತಕೆ,

       ಓ ಬನ್ನಿ ಸೋದರರೆ ವಿಶ್ವ ಪಥಕೆ’

ಎಂಬುದು ಅವರ ಪರಮಾದರ್ಶದ ಕರೆ. ಅವರ ಹಿತನುಡಿಗಳು ಅವರ ಮಕ್ಕಳಿಗೆ ಮತ್ತು ನಾಡಿನ ಯುವಜನತೆಗೆ ಏಕಪ್ರಕಾರವಾಗಿ ಇದ್ದಿತೆಂಬ ಒಂದು ಅಂಶ ಸಾಕು, ಅವರ ಆಲೋಚನಾ ದರ್ಶನವನ್ನು ಅರ್ಥೈಸಿಕೊಳ್ಳಲು. ಕುವೆಂಪು ಅವರ ಕೃತಿಗಳ ವಾಚನ, ಮನನ, ಆಚರಣೆಗಳಿಂದ ನಿಜಕ್ಕೂ ಬದುಕು ಹಸನಾಗುತ್ತದೆ, ವಿಶ್ವಮಾನವತೆ ಲಭಿಸುತ್ತದೆ.



     ಭಾರತದ ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಕುವೆಂಪು ಪಡೆದರು.  ಆದರೆ ಅವರು ಎಂದೂ ಕೀರ್ತಿಯನ್ನು ಬಯಸಲಿಲ್ಲ. ಆನೆ ತೇರು ಪಲ್ಲಕ್ಕಿಗಳ ಮೆರವಣಿಗೆ ಬೇಕೆಂದು ನಿರೀಕ್ಷಿಲಿಲ್ಲ. ಅವರಿಗೆ ಬೇಕಾಗಿದ್ದುದು ಅವರ ಕೃತಿಗಳನ್ನು ಓದಿ ಜೀರ್ಣಿಸಿಕೊಂಡು ಆತ್ಮೋನ್ನತಿ ಗಳಿಸಿಕೊಳ್ಳುವ ಸಹೃದಯರು. ಅವರ ಕೃತಿಯನ್ನು ಓದಿದ ಸಹೃದಯರಿಂದ  ಅವರು ನಿರೀಕ್ಷಿಸುತ್ತಿದ್ದ ಕಾಣಿಕೆ ಎಂದರೆ, ಆನಂದದ ಕಂಬನಿಗಳ ರಸಾಶ್ರು ತರ್ಪಣ!  ನಾವು, ಕನ್ನಡದ ಜನತೆ ಎಲ್ಲೇ ಇದ್ದರೂ ಅಷ್ಟು ಮಾತ್ರವನ್ನು ಆ ಮಹಾನುಭಾವರಿಗೆ ನೀಡುವಷ್ಟು ಭಾಗ್ಯವಂತರಾಗೋಣ.


 

Comments

  1. ಸೊಗಸಾದ ಲೇಖನ. ಕುಪ್ಪಳಿ ನಲ್ಲಿ ಇರುವ ಮನೆ ನೋಡಲೇಬೇಕು

    ReplyDelete
  2. Thanks for writing again about our legendary Gnaaapeeta award winning writer. Your narration and informations are very nice in this as well as in previous articles.

    ReplyDelete
  3. ಕುವೆಂಪು ಬಗ್ಗೆ ಎಷ್ಟು ಓದಿದರೂ ಇನ್ನೂ ತಿಳಿಯುವ ಆಸೆ. ಕೆಲವು ಈ ಮೊದಲು ತಿಳಿಯದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು. ತಮ್ಮ ಲೇಖನ ವಿವರಣೆ, ಪದ ಬಳಕೆ ಬಹಳ ಸೊಗಸು. thanks Dr Manjula madam

    ReplyDelete
  4. ಸುಂದರ ಲೇಖನ. ಕುವೆಂಪು ರವರನ್ನು ಕುರಿತ ಅಪರೂಪದ ಮಾಹಿತಿಯನ್ನು, ಫ಼ೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  5. ಕುವೆಂಪು ಅವರ ಬಗ್ಗೆ ಒಳ್ಳೆಯ ಮಾಹಿತಿ.

    ReplyDelete
  6. ಕುವೆಂಪು ಅವರ ಜೀವನ ಹಾಗು ಸಾಧನಗೆಳ ಬಗ್ಗೆ ತಿಳಿಸಿಕೊಟ್ಟಿರಿ - ಅಪಾರ ಧನ್ಯವಾದಗಳು

    ReplyDelete

Post a Comment