ಧನ್ಯವಾದಗಳು ಚಿಲುಮೆಯೆ!

 ಧನ್ಯವಾದಗಳು ಚಿಲುಮೆಯೆ!

ಲೇಖನ - ಅಣುಕು ರಾಮನಾಥ್ 


‘If you are too good you will be somebody else’s food ಅಂತಿದ್ರು ವೈಎಂಎನ್ ಮೂರ್ತಿ’ ಎಂದ ಸೀನು.

‘ನಾನು ಟೂ ಗುಡ್ಡೇನು?’

‘ನೀನಲ್ಲ. ಹೊರನಾಡ ಚಿಲುಮೆ ವಿದ್ಯುನ್ಮಾನ ಪತ್ರಿಕೆ. ಮನುಷ್ಯನಿಗೆ ನೂರು ಪೂರ್ಣಾಯಸ್ಸು. ಮಾಸದ ಅಂಕಣಕ್ಕೂ ಅಷ್ಟೆ’

‘ನನ್ನದು ಎಂದೂ ಮಾಸದ ಅಂಕಣ. Ever Fresh’ ಸ್ವಪ್ರತಿಷ್ಠೆಯ ಮೆಟ್ಟಿಲೇರಿದೆ.

‘ಕಟ್ಟಿಕೊಂಡವಳಿಗೆ ಕೋಡಂಗಿ ಮುದ್ದು; ಕನಕಾಪುರ ನಾಣಿಗೆ ನಿನ್ನ ಲೇಖನ ಹಿಡಿಸಿದ್ದೀತು. ಅಥವಾ ಅವರೂ ‘how to say no and yet save relationship’ ಎಂದು ಯೋಚಿಸುತ್ತಿದ್ದಾರು. ಅತಿ ಸರ್ವತ್ರ ವರ್ಜಯೇತ್’ ಗರಂ ಆದ ಸೀನು.

‘ನನ್ನ ಬರವಣಿಗೆಯಲ್ಲಿನ ನಿನ್ನ ಪಾತ್ರವನ್ನೂ ಮೆಚ್ಚಿದ್ದಾರಲ್ಲೋ’ ಅನುniceಯಿದೆ.

‘ಕೊರೊನಾ ಮುಂಚಿನ ಕಾಲದಲ್ಲಿ ಸೀನು ತಡೆಯೆಬಲ್ ಅಫೆನ್ಸ್ ಆಗಿತ್ತು; ಕೆಲವರಂತೂ ನಶ್ಯ ಹಾಕಿಕೊಂಡು ಸೀನಾಹ್ವಾನದಲ್ಲಿ ತೊಡಗುತ್ತಿದ್ದರು. ಈಗ ಎಲ್ಲ ಬದಲಾಗಿದೆ. ಸೀನು unseen ಆಗಿರುವುದೇ ಇಂದಿನ ಅವಶ್ಯಕತೆ. ಪೂರ್ಣಮದಃ ಪೂರ್ಣಮಿದಂ| ಪೂರ್ಣಾತ್ ಪೂರ್ಣಂ ಉದಚ್ಯತೇ ಎಂದು ತಿಳಿದಿರುವ ನೀನು ಇನ್ನು ಮುಂದುವರಿಯುವುದು ತರವಲ್ಲ’

‘ವಿವರಿಸು’

‘ನೂರಾದರೂ ಬರೆಯುತ್ತಲೇ ಇರುತ್ತೇನೆ, ನನ್ನದು ಎಲ್ಲರೂ ಬಯಸುವ ಬರಹ ಎನ್ನುವುದೇ ನಿನ್ನಲ್ಲಿರುವ ಪೂರ್ಣ ಮದ. Poor numb ಇದಂ – ಬರವಣಿಗೆ ಬಡವಾಗಿ, ಓದುಗನಲ್ಲಿ ಭಾವವೇ ಹೊಮ್ಮದಷ್ಟು numb ಆಗುವಂತಿದ್ದರೂ ನೀನು ಚೆನ್ನವೆಂದೇ ನಂಬಿರುವುದೇ ‘ಪೂರ್ಣಮಿದಂ’ನ ‘ಪೂರ್ನಂಬಿದಂ’ ರೂಪ. ‘ಪೂರ್ಣಾತ್’ ಎಂದರೆ ನೂರು ಮುಗಿಸಿದ್ದಾದ್ದರಿಂದ poor ಮತ್ತು numb ಗಳು ಉದಿಸುವ ಮಟ್ಟಕ್ಕೆ ತಲುಪಿದ್ದೀಯ. ಸಾಕಿನ್ನು’

‘ನಾನು ನಿಲ್ಲಿಸಿದರೆ ಹರಿಣಿ ಬೇಸರಿಸಿಕೊಳ್ಳಬಹುದು’ ನನ್ನ ಹಲವು ಲೇಖನಗಳಿಗೆ ಪ್ರತಿಕ್ರಿಯೆ ನೀಡಿದವರನ್ನು ನೆನೆದೆ.

‘To be in love with one’s own self is the only lifelong passion possible ಅಂತ ಕೈಲಾಸಂ ಹೇಳಿದ್ದು ನಿನ್ನಂತಹವರನ್ನು ನೋಡಿಯೇ. ಅಲ್ಲಿಯೇ ಇರುವ ಸ್ಮಿತಾ ಮೇಲುಕೋಟೆ ಚೆನ್ನಾಗಿ ಬರೆಯುತ್ತಾರೆ. ಮಧುಸೂದನರು ಒಳ್ಳೆಯ ಪಾಂಡಿತ್ಯವುಳ್ಳವರು. ನಾಗಶೈಲ, ಸ್ವತಃ ನಾಣಿ ಎಲ್ಲರೂ ಒಳ್ಳೆಯ ಬರಹಗಾರರೇ. ನೀನು ಕಪಿಲ್ ದೇವ್ ತರಹವಾಗಲಿ, ತೆಂಡುಲ್ಕರ್ ತರಹವಾಗಲಿ ಆಗಬೇಡ’



‘ಅವರಷ್ಟು ಫೇಮ್ ಪಡೆಯುವುದು ತಪ್ಪೇನು?’

‘ಊಹೂಂ. ಆದರೆ ನಿರ್ಗಮನದ ಸಮಯವನ್ನು ನಿರ್ಧರಿಸುವುದರಲ್ಲಿ ಗಾವಸ್ಕರ್ರೇ ಬೆಷ್ಟು. ಮಾಸ್ಟರ್ ಹಿರಣ್ಣಯ್ಯನವರ ಮಾತನ್ನು ನೆನೆಸಿಕೊ’

‘ಸಾವಿರಾರು ಇವೆ. ಅವುಗಳ ಪೈಕಿ ಯಾವುದು?’

‘ಜನ ಇನ್ನೂ ಬೇಕು ಬೇಕು ಅಂತಿರೋವಾಗ್ಲೇ ಹೊರಟುಬಿಡಬೇಕು. ಸಾಕು ಸಾಕು ಅಂತ ಶಪಿಸೋ ಮಟ್ಟಕ್ಕೆ ಕಪಿಲ್, ಸಚಿನ್ ಇಳಿದರು. ನೀನು ಆಗಲೇ ಆ ಹಂತ ತಲುಪಿದ್ದರೂ ತಲುಪಿರಬಹುದು. ‘ಪ್ರತಿ ತಿಂಗಳೂ ಒಂದೇ ತರಹ ಬರೀತಾರೆ’ ಅಂತ ಯಾರೋ ಎಲ್ಲೋ ಹೇಳಿದ ಸದ್ದು ಕೇಳಿದಹಾಗಿತ್ತು’

‘ಸಾಧ್ಯವೇ ಇಲ್ಲ. ಪ್ರತಿ ತಿಂಗಳೂ ಅಂದಿಗಂದಿಗೆ ಹೊಂದುವ ವಸ್ತುವನ್ನೇ ತೆಗೆದುಕೊಂಡಿದ್ದೆ’

‘ವಸ್ತು ಸೂಕ್ತವಿರಬಹುದು. ಅದೇ ಉಪ್ಪು, ಅದೇ ಹುಳಿ, ಅದೇ ಖಾರವನ್ನು ಮೂರು ಅಡುಗೆಯವರಿಗೆ ಕೊಟ್ಟರೆ ಮೂರು ವಿಧದ ಅಡುಗೆ ತಯಾರಾಗುತ್ತದೆ. ಬರವಣಿಗೆಯ ಪಾಕ ವರ್ಷಗಟ್ಟಲೆ ಒಂದೇ ತರಹ ಇರುವುದಿಲ್ಲ. ನಿನ್ನ ತಪ್ಪುಗಳನ್ನ ಹೊಟ್ಟೆಗೆ ಹಾಕ್ಕೊಂಡು ದೇಶಾವರಿ ನಗೆ ನಕ್ಕವರೂ ಇದ್ದಾರು. ಅಷ್ಟಕ್ಕೂ ಎಲ್ಲವೂ ಚೆನ್ನಾಗಿಯೇ ಇದ್ದವೂನ್ನೋ ನಿನ್ನ ಹುಂಬ ವಾದವನ್ನೇ ಒಪ್ಪಿದರೂ ಬಾದಾಮಿಹಲ್ವ ಬಡ್ಸೂಡ್ ಎವೆರಿಡೇ ಬಿಕಮ್ಸ್ ಬೋರಿಂಗು ಬಚ್ಚೂ’

‘ಮುಂದೇನು?’

‘ನಿನ್ನ ಅಂಕಣ ಬೇಕು ಎಂದು ಜನ ಕಾತರಿಸಿದಾಗ ಬರೆ. ಆಗಲೋ ಈಗಲೋ ಒಮ್ಮೆ ಬರೆದರೆ ಕೌತುಕ; ಎಲ್ಲೆಲ್ಲೂ ನೀನೇ ಎಂದರೆ ವೆಗಟು’

‘ಈಗ ಕಾತರಿಸುತ್ತಿಲ್ಲ ಎನ್ನುವೆಯೇನು?’

‘ಕಡೆಯ ಆರೇಳು ತಿಂಗಳಿಂದ ನಾಣಿಯ ಇಂಫ್ಲುಯೆನ್ಸ್ ಮೇಲೆ ಒಂದೆರಡು ಪ್ರತಿಕ್ರಿಯೆಗಳಿದ್ದವಷ್ಟೆ. ಹೊರನಾಡ ಕನ್ನಡಿಗರಿಗೆ ನಿನ್ನ ಸೇವೆ ಸದ್ಯಕ್ಕೆ ಸಾಕು ಮಾಡೆಂದು ಕಳಕಳಿಯಿಂದ ಬೇಡಿಕೊಳ್ಳುತ್ತೇನೆ’ ಅಂಜಲೀಬದ್ಧನಾದ ಸೀನು.

ಸರಿಯೆಂದೆ. ನೂರೆರಡಕ್ಕೆ ಹರ್ಟ್ ಆಗದೆಯೇ ರಿಟೈರ್ಡ್ ಆಗುತ್ತಿದ್ದೇನೆ. ಈವರೆಗೆ ಪ್ರೋತ್ಸಾಹಿಸಿದ, ಸಹಿಸಿದ, ಬೈಯಲು ಮನಸ್ಸಿಲ್ಲದ ಏಕೈಕ ಕಾರಣಕ್ಕೆ ಹೊಗಳಿದ, ನೀವೇನ್ಬರೆದ್ರೂ ಓದಲ್ಲವೆಂದು ತಟಸ್ಥರಾಗಿದ್ದ, ‘ನಕ್ಕೇವು, ಆದರೆ ಪ್ರತಿಕ್ರಿಯೆ ನೀಡೇವು’ ಎಂಬ ಧೋರಣೆ ತೋರಿದ ಎಲ್ಲರಿಗೂ, ಮುಖ್ಯವಾಗಿ ನಾಣಿ,  ಶ್ರೀಮತಿ ನಾಣಿ, ಬದರಿ, ನಾಗಶೈಲರಿಗೂ ಈವರೆಗಿನ ಅವಕಾಶಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಮತ್ತೆಲ್ಲೋ ಮತ್ತೆಂದೋ ಭೇಟಿಯಾಗೋಣ. ಶುಭಮಸ್ತು.


Comments

  1. Sorry to know that you will not be contributing to ಹೊರನಾಡ ಚಿಲುಮೆ on a regular basis any more. I, for one, miss your humour, wit and the undercurrent of wisdom. By the way, my reactions/comments have always been spontaneous and not at the prompting of the editor! Look forward to reading your occasional, thoughtful sketches in the future issues of ಚಿಲುಮೆ.

    ReplyDelete
    Replies
    1. Seeds of doubt about the quality of my articles were sown by the lack of response from the readers sir. I am aware that your reactions were always spontaneous and sometimes better than the article itself. I will write if readers nod in approval.

      Delete
  2. ನಾನು ಕೂಡ, "ನಕ್ಕೇವು, ಆದರೆ ಪ್ರತಿಕ್ರಿಯೆ ನೀಡೆವು " ಎಂಬ ಕ್ಯಾಟಗರಿಲಿ ಇದ್ದವನೇ...ನಿಮ್ಮ ಮುಂದಿನ comeback ಲೇಖನಕ್ಕಾಗಿ ನಿರೀಕ್ಷಿಸುವ - ಇಂತಿ ನಿಮ್ಮ ಪ್ರತಿಕ್ರಿಯೆ ನೀಡದ ಅಭಿಮಾನಿ.🙃

    ReplyDelete
    Replies
    1. ಇಂದಾದರೂ ಪ್ರತಿಕ್ರಿಯೆ ನೀಡಿದಿರಲ್ಲ, ಧನ್ಯವಾದಗಳು. ಬರಹಗಾರರಿಗೆ ವಿಮರ್ಶೆ, ಟೀಕೆ, ಮೆಚ್ಚುಗೆಗಳೇ ಟಾನಿಕ್. ಕನ್ನಡಿಗರಲ್ಲಿ ಅದೇ ದೊಡ್ಡ ಕೊರತೆ.

      Delete
  3. ರಾಮ್ ಲೇಖನ ಓದುವ ಮಜವೇ ಮಜಾ. ಹಾಸ್ಯಕ್ಕೆ ಎಣೆಯೇ ಇಲ್ಲ, ಅದೆಷ್ಟು ಸಬ್ಜೆಕ್ಟ್ ಮುಟ್ಟಿ ಬಿಟ್ಟಿದ್ದೀರಿ ತಾವು. ಬರೆದೂ ಬರೆದೂ ಸಾಕಾಗಿದೆಯೇ ಸಾರ್ ತಮಗೆ? ನಮ್ಮವರು ಕಾಮೆಂಟ್ ಮಾಡುವುದು ಬಹಳ ವಿರಳ, ಕೆಲವರಿಗೆ ಮೆಚ್ಚುಗೆ ಸೂಚಿಸಿದರೆ ಪತ್ರಿಕೆಗೆ ಬೆನ್ ತಟ್ಟಿದ ಹಾಗೆ ಅನಿಸುತ್ತದೋ ಏನೋ ತಿಳಿಯದು. ಇನ್ಕೆಲವರಿಕೆ ಅವರು ಬರೆದ ಕಾಮೆಂಟಿಗೆ ಲೇಖಕರ ಪ್ರತಿಕ್ರಿಯೆ ಬರಲಿಲ್ಲವೆಂದು ಕೊರಗು. ಹೀಗೆ ಮಾಡಿದರೆ ಹೇಗೆ ಸಾರ್ ? ಆಗಾಗ್ಗೆ ವಿಶೇಷ ಸಬ್ಜೆಕ್ಟ್ ಸಿಕ್ಕಾಗ ಬರೆಯಿರಿ, ಅಥವಾ ಓದುಗರೇ ಒಂದೊಂದು ವಿಷಯ / ಪದ ಕೊಟ್ಟರೆ ಅದರ ಮೇಲೆ ನಿಮ್ಮ ನಗೆಮಂತ್ರ ಚೆಲ್ಲಿ ಸಾಕಪ್ಪಾ ಯಾಕಾದ್ರೂ ಈ ಪದ ಕೇಳಿದೆನೋ ಅನ್ನುಸುವಹಾಗೆ ನಕ್ಕು ನಲಿಸಿ. ಏನಂತೀರಾ ?

    ReplyDelete
    Replies
    1. ಓದುಗರ ಪ್ರತಿಕ್ರಿಯೆಗೆ ನನ್ನ ಸ್ಪಂದನವಿಲ್ಲದಿರುವುದನ್ನು ಒಪ್ಪುತ್ತೇನೆ. ಈ ವಿಷಯದಲ್ಲಿ ಮೂಡಿರುವ ಸೋಮಾರಿತನವನ್ನು ಹತ್ತಿಕ್ಕಲು ಯಾವುದಾದರೂ ಮದ್ದನ್ನು ಕಂಡುಕೊಳ್ಳಬೇಕು. ಪದ ಕೊಡಿ, ಲೇಖನ ತೊಗೊಳಿ ಸ್ಕೀಮ್ ಚೆನ್ನಾಗಿರುತ್ತದೆ ಎನಿಸುತ್ತದೆ.

      Delete
  4. Oh! no way. we will absolutely miss one and only humor article in this magazine. Nice to writer has recognized few readers names !!!! hope the editorial team will negotiate to continue Mr Ram`s quality humor articles.

    ReplyDelete
    Replies
    1. Reaction is the true energizer. The more I get, the more I can deliver. You are one of the very few responding readers. I am grateful to you for the same.

      Delete
  5. ದಯವಿಟ್ಟು ಮುಂದುವರಿಸಿ.ನಿಮ್ಮ ಪನ್ ಥರಾ ಬೇರೆ ಎಲ್ಲೂ ಸಿಗೊಲ್ಲ.ಈ ಪದ 'ಸೀನಾಹ್ವಾನದಲ್ಲಿ' ಓದಿ ತುಂಬಾ ನಗು.

    ReplyDelete
  6. ನಿಮ್ಮ ಬರಹವನ್ನು ಓದಿ, ನಲಿದು, ನಕ್ಕು, ಪ್ರತಿಕ್ರಿಯೆ ಬರೆಯದ ಅಪರಾಧಿಗಳಲ್ಲಿ ನಾನೂ ಒಬ್ಬಳು ! ಓದುಗ ಮಿತ್ರರಲ್ಲಿ ನಿಮ್ಮ ಲೇಖನ ಹಂಚಿಕೊಂಡು ಜೊತೆಯಲ್ಲಿ ಓದಿ ನಕ್ಕಿರುವುದೂ ಉಂಟು. ಕೆಲವೊಮ್ಮೆ ನಿಮ್ಮ ಲೇಖನದಷ್ಟೇ ಸ್ವಾರಸ್ಯವಾದ ಪ್ರತಿಕ್ರಿಯೆ ನೀಡುವ ಪ್ರಯತ್ನದಲ್ಲಿ ತಿಣುಕಾಡಿರುವುದೂ ಇದೆ!
    ನಮ್ಮ ಚಿಕ್ಕ ತಪ್ಪಿಗೆ ನಿಮ್ಮ ಲೇಖನ ನಿಲ್ಲಿಸುವ ದೊಡ್ಡ ಶಿಕ್ಷೆ ಕೊಡಬೇಡಿ ! ಆಗ್ಗಾಗ ನಿಮ್ಮ ಹರಿತ ಲೇಖನಿಯಿಂದ , ಹಾಸ್ಯಲೇಪಿತ ಅಂಕಣಗಳನ್ನು ನೀಡುತ್ತಿರಿ. - ಅನು ಶಿವರಾಂ

    ReplyDelete

Post a Comment