ದಾಸರೆಂದರೆ ಪುರಂದರ ದಾಸರಯ್ಯ !

ದಾಸರೆಂದರೆ ಪುರಂದರ ದಾಸರಯ್ಯ !

ಲೇಖಕರು : ಎಂ. ಆರ್. ವೆಂಕಟರಾಮಯ್ಯ  



 “ದಾಸರೆಂದರೆ ಪುರಂದರ ದಾಸರಯ್ಯ, ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ ದಾಸರೆಂದರೆ ಪುರಂದರ ದಾಸರಯ್ಯ” ಎಂದು ಹೊಗಳಿದವರು ಸಾಮಾನ್ಯ ಜನರಲ್ಲ. ಬದಲಿಗೆ, ಹೀಗಂದವರು ಒಬ್ಬ ಮಹಾನ್ ಗುರು. ಸಾಮಾನ್ಯವಾಗಿ ಶಿಷ್ಯರು ಗುರುವನ್ನು ಸ್ತುತಿಸಿ, ಕೊಂಡಾಡಿ, ಹೊಗಳುವ, ಮೆಚ್ಚುವ ಪರಿಪಾಠವಿದೆ. ಆದರೆ ಗುರುವೇ ತನ್ನ ಶಿಷ್ಯನನ್ನು ಮೆಚ್ಚಿ, ಹೊಗಳುವುದು ಎಂದರೆ ಅದು ಒಂದು ಅಸಾಮಾನ್ಯ : ಅತಿ ಮಹತ್ವದ ವಿಷಯವಾಗುತ್ತದೆ. ಗುರು ವ್ಯಾಸ (ತೀರ್ಥ)ರಾಯರೇ ತಮ್ಮ ಶಿಷ್ಯರಾದ ಪುರುಂದರ ದಾಸರನ್ನು ಈ ರೀತಿ ಹಾಡಿ ಹೊಗಳಿದ್ದಾರೆ ಎಂದಾಗ, ಇದೊಂದು ಅಪರೂಪದ ಮೆಚ್ಚುಗೆ ಎನಿಸುತ್ತದೆ. 

ಈ ದಾಸರ ಬಗ್ಗೆ ಇಂಥಹಾ ಮೆಚ್ಚುಗೆ, ಹೊಗಳಿಕೆ ಕೇಳಿ ಬಂದಿರುವುದು ಈ ಗುರುಗಳೊಬ್ಬರಿಂದಲೇ ಅಲ್ಲ. ಇವರ ಬದುಕು, ಸಾಧನೆಗಳನ್ನು ಕಂಡು, ಕೇಳಿದ ಹಲವರಿಂದಲೂ ಮೆಚ್ಚುಗೆ ಕೇಳಿ ಬಂದಿದೆ. ಇವರು ಜನನ ಕಾಲದಿಂದಲೇ ದಾಸರಾದವರಲ್ಲ. ಸಿರಿಯ ಉಪ್ಪರಿಗೆಯನ್ನೇರಿ ತಮ್ಮ ಐಶ್ವರ್ಯವನ್ನು ಇನ್ನಷ್ಟು, ಮತ್ತಷ್ಟು ಹೆಚ್ಚಿಸಬೇಕೆಂಬ ಬಾಯಾರಿಕೆ ಹೊಂದಿದ್ದ ಈತನ ಬದುಕು ಅನಿರೀಕ್ಷಿತ ತಿರುವು ಪಡೆದದ್ದು ದಿಢೀರನೆ ಸಂಭವಿಸಿದ ಒಂದು ಮಹತ್ವದ ಘಟನೆಯಿಂದ. ಸಿರಿಯ ವೃದ್ಧಿಯಲ್ಲೇ ತಲ್ಲೀನರಾಗಿದ್ದ ಈತ, ಅದೇ ಸಿರಿಯ ಮೇಲೆ ಅಸಹ್ಯಪಟ್ಟು ವೈರಾಗ್ಯವನ್ನು ತಾಳಿ ತಮ್ಮ ಸಂಪತ್ತೆಲ್ಲವನ್ನೂ ನಿರ್ಗತಿಕರಿಗೆ ಹಂಚಿ, ಹರಿ ಕೀರ್ತನೆಯಲ್ಲೇ ಜೀವನವನ್ನು ಸವೆಸಿ ಪರಮಾತ್ಮನಲ್ಲಿ ಲೀನವಾದ ಇವರ ಯಶೋಗಾಥೆ ಹೀಗಿದೆ :

    ಪುರಂದರ ದಾಸರ ಜನ್ಮ ಸ್ಥಳ ಕುರಿತಂತೆ ಲೇಖಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರ ಅನುಸಾರ, ಇವರು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಳಿಯ ಕ್ಷೇಮಪುರ ಎಂಬಲ್ಲಿ ಕ್ರಿ ಶ ೧೪೮೦-೮೪ ರ ಆಸುಪಾಸಿನಲ್ಲಿ ಜನಿಸಿದವರು ಎಂದರೆ, ಮತ್ತೆ ಕೆಲವರ ಪ್ರಕಾರ, ಪುಣೆಯ ಸಮೀಪದ ಪುರಂದರ ಘಟ್ಟ : ಪುರಂದರ ಘಡ ಎಂಬುದು ಕೇಳಿಬರುತ್ತಿದೆ. ಹೀಗೇನೇ, ಲೀಲಾವತಿ ಇವರ ತಾಯಿ ಎಂದು ಕೆಲವರೆಂದರೆ, ಇವರ ತಾಯಿಯ ಹೆಸರು ಲಕ್ಷö್ಮಕ್ಕ ಎಂಬುದು ಮತ್ತೆ ಕೆಲವರ ಅಭಿಪ್ರಾಯ.

    ಏಳು ಬೆಟ್ಟಗಳೊಡೆಯ ಶ್ರೀನಿವಾಸನ ಸ್ಮರಣೆ ಯಾವಾಗಲೂ ತಮಗಿರಲಿ ಎಂದು ಇವರ ಮಾತಾ ಪಿತೃಗಳು ಮಗನಿಗೆ ಶ್ರೀನಿವಾಸ ನಾಯಕ (ಕೃಷ್ಣಪ್ಪ ನಾಯಕ ಎಂಬ ಹೆಸರೂ ಕೇಳಿ ಬಂದಿದೆ)ನೆAದು ನಾಮಕರಣಮಾಡಿದರು. ಇವರು ಬ್ರಾಹ್ಮಣ ಮಾಧ್ವ ವೃಂದದಲ್ಲಿ ಜನಿಸಿ, ಪ್ರಖ್ಯಾತರಾದರೂ, ಇವರ ಕೃತಿ ರಚನೆಗಳು ಮತತ್ರಯರ, ಬ್ರಾಹ್ಮಣ, ಅಬ್ರಾಹ್ಮಣರನ್ನೂ ಸಮನಾಗಿಯೇ ಮನ ಮೆಚ್ಚಿಸುತ್ತಿದೆ. ದೇಶ, ಕಾಲದ ಎಲ್ಲ ಎಲ್ಲೆಕಟ್ಟುಗಳನ್ನೂ ಮೀರಿ, ನಾಡಿನ ಮಹಾಪುರುಷರ ಸಾಲಿಗೆ ಸೇರಿದ್ದಾರೆ ಈ ದಾಸರು. ಅಂದಿನ ಕಾಲ ಪದ್ದತಿಯನುಸಾರ ವಿದ್ಯಾಭ್ಯಾಸ ಪಡೆದು ೧೬ ನೆಯ ವಯಸ್ಸಿನಲ್ಲಿ ಆಚಾರವಂತ ಹೆಣ್ಣಾದ ಸರಸ್ವತಿ ಬಾಯಿಯನ್ನು ಈ ನಾಯಕರು ವಿವಾಹವಾದರು. ತಮ್ಮ ತಂದೆಯ ನಿಧನದ ನಂತರ ಅವರು ಪಾಲಿಸಿಕೊಂಡು ಬಂದಿದ್ದ (ಚಿನಿವಾಲ ವೃತ್ತಿ) ಮುತ್ತು ರತ್ನಗಳ ವ್ಯಾಪಾರ, ಹಾಗೂ ಆಭರಣಗಳನ್ನು ಅಡವಿಟ್ಟುಕೊಂಡು ಸಾಲ ಕೊಡುವ ವ್ಯಾಪಾರದಲ್ಲಿ ತೊಡಗಿ ಗೃಹಸ್ಥಾಶ್ರಮ ಮುಂದುವರಿಸಿದರು. ಕಾಲಕ್ರಮೇಣ ವ್ಯಾಪಾರದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿ ಕೋಟಿಗಟ್ಟಲೆ ಧನ ಗಳಿಸಿ ‘ನವಕೋಟಿ ನಾರಾಯಣ’ ಎಂಬ ಬಿರುದು ಪಡೆದರೂ ಸಿರಿಯೊಂದಿಗೆ ಜಿಪುಣತನವನ್ನೂ  ಹೆಚ್ಚಿಸಿಕೊಂಡರು. 

     ಇನ್ನಷ್ಟು, ಮತ್ತಷ್ಟು ಸಿರಿ ಗಳಿಸಬೇಕು ಎಂಬ ಸಿರಿಯ ಮರೀಚಿಕೆಯ ಬೇಟೆಯಲ್ಲಿರುವಾಗಲೇ ಅದೊಂದು ದಿನ ಭಗವಂತನೇ ಬ್ರಾಹ್ಮಣ ರೂಪದಲ್ಲಿ ಇವರ ಅಂಗಡಿಗೆ ಬಂದು, ತನ್ನ ಮಗನ ಉಪನಯನಕ್ಕಾಗಿ ಧನ ಸಹಾಯ ಬೇಡಿದ್ದು, ಜಿಪುಣ ನಾಯಕರಿಗೆ ದಾನ ಕೊಡುವ ಮನವಿರದ ಕಾರಣ, ನಾಳೆ ಬಾ ಎಂದು ಸತಾಯಿಸಿದ್ದು. ಕೊನೆಗೆ ಬ್ರಾಹ್ಮಣ ವೇಷಧಾರಿ ಭಗವಂತ ಇವರ ಪತ್ನಿಯ ಬಳಿ ದಾನ ಬೇಡಿ ಆಕೆಯ ಮೂಗುತಿ ದಾನ ಪಡೆದು ನಾಯಕರ ಅಂಗಡಿಗೇ ತಂದು ಇದನ್ನು ಅಡವಿಟ್ಟು ಹಣ ಕೊಡಿ ಎಂದು ಬೇಡಿದ್ದು, ಈ ಮೂಗುತಿ ತನ್ನ ಪತ್ನಿಯದಿರುವಂತೆಯೇ ಇದೆಯಲ್ಲಾ !ಎನಿಸಿದ್ದು, ಮೊದಲಾದ ಪ್ರಸಂಗಗಳು ಎಲ್ಲರಿಗೂ ತಿಳಿದದ್ದೇ ಆಗಿದೆ. ಈ ವ್ಯವಹಾರzಲ್ಲಿ ತನಗೆ ತಿಳಿಯದ ರಹಸ್ಯವೇನೋ ಅಡಗಿದೆ ಎಂಬ ಸಂಶಯದ ಕಾರಣ ಮನೆಗೆ ಬಂದ ದಾಸರು ಪತ್ನಿಯನ್ನು ವಿಚಾರಿಸಿದಾಗ ಆಕೆ ನಡೆದಿದ್ದೆಲ್ಲವನ್ನೂ ಪತಿಗೆ ತಿಳಿಸಿದಳು.

ಕೂಡಲೇ ನಾಯಕರಿಗೆ ಜ್ಞಾನೋದಯವಾಯಿತು. ಭಗವಂತನು ನನ್ನನ್ನು ಪರೀಕ್ಷಿಸಲೆಂದೇ ಇದೆಲ್ಲಾ ನಡೆಸಿದ್ದು. ನನ್ನ ಜಿಪುಣತನ ಬಿಡಸಲೆಂದೇ ಇರಬಹುದು, ಆತ ಈ ನಾಟಕ ಹೂಡಿದ್ದು, ಅಯ್ಯೋ, ಎದುರಿಗೇ ಇದ್ದ ಭಗವಂತನನ್ನು ಗುರ್ತಿಸದೆ ನಿಂದಿಸಿದೆನಲ್ಲಾ ! ಎಂದು ಪಶ್ಚಾತ್ತಾಪಪಟ್ಟು, ನನಗಿಂತಾ ನನ್ನ ಪತ್ನಿಯೇ ಅದೃಷ್ಟವಂತೆ. ಭಗವಂತನನ್ನು ಆಕೆ ಕಾಣುವ ಜೊತೆಗೆ ತನಗೂ ಬುದ್ಧಿ ಕಲಿಸಿದಳು ಎಂದು ಪತ್ನಿಯನ್ನು ಹೊಗಳಿ, ೩೦ ವರ್ಷ ವಯಸ್ಸಿನ ನಾಯಕರು ತಮ್ಮೆಲ್ಲಾ ಮನೆ, ಸಂಪತ್ತನ್ನೂ ದಾನ ಮಾಡಿ, ಹೆಂಡತಿ ಮಕ್ಕಳ ಸಮೇತ ಹರಿ ಸಂಕೀರ್ತನೆ ಮಾಡುತ್ತಾ ಹೊರಹೊರಟರು. ಈ ಸಂದರ್ಭದಲ್ಲಿ “ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿಯಂತೆ ಗರ್ವಿಸುತ್ತಿದ್ದೆ, ತುಳಸಿ ಮಾಲೆಯ ಹಾಕುವುದಕ್ಕೆ ಅರಸನಾಗಿ ನಾಚುತ್ತಿದ್ದೆ, ದಂಡಿಗಿ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಡಿ ನಾಚುತ್ತಿದ್ದೆ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ, ಹೆಂಡತಿ ಸಂತತಿ ಸಾವಿರವಾಗಲಿ, ಆದದ್ದೆಲ್ಲಾ ಒಳೀತೇ ಆಯಿತು” ಎಂಬ ಅವರು ರಚಿಸಿದ ಕೀರ್ತನೆ ಬಹಳ ಜನಪ್ರಿಯವಾಗಿದೆ. 



ಕ್ರಿ ಶ ೧೫೨೫ ರ ಸಮೀಪದ ವರ್ಷದಲ್ಲಿ ಪಂಪಾ (ಹಂಪೆ) ಕ್ಷೇತ್ರಕ್ಕೆ ಬಂದು ವಿಜಯ ನಗರದ ಅರಸರಾದ ಶ್ರೀಕೃಷ್ಣದೇವರಾಯರ ಗುರುಗಳಾಗಿದ್ದ ಶ್ರೀ ವ್ಯಾಸತೀರ್ಥ((ವ್ಯಾಸರಾಯ)ರನ್ನು ಕಂಡು ಶಿಷ್ಯನಾಗ ಬಯಸಿದರು. ಆದರೆ ಈ ಗುರುವು ಹೊಸಬನನ್ನು ಹಲವಾರು ರೀತಿಯಲ್ಲಿ ಪರೀಕ್ಷಿಸಿದ ನಂತರವೇ ಶಿಷ್ಯತ್ವ, ಮಂತ್ರೋಪದೇಶ, ಹರಿದಾಸ ದೀಕ್ಷೆ ನೀಡಿದರು. ನಂತರದಲ್ಲಿ ‘ಪುರಂದರ ದಾಸ’ರೆಂಬ ಹೆಸರನ್ನು ಹೊಂದಿ ‘ಪುರಂದರ ವಿಠಲ’ ನೆಂಬ ಅಂಕಿತದಲ್ಲಿ ಹಲವು ಕೀರ್ತನೆಗಳನ್ನು ರಚಿಸಿದರು. ಹಂಪೆಯಲ್ಲಿ ದಾಸರು ತಂಗಿದ್ದ ಸ್ಥಳವು ‘ಪುರಂದರ ದಾಸರ ಮಂಟಪ’ ಎಂದೇ ಇಂದೂ ಪ್ರಸಿದ್ಧಿಯಾಗಿದೆ. ಮುಂದೆ ಪಂಡರಾಪುರಕ್ಕೆ ತೆರಳಿ ಅಲ್ಲಿ ತಮ್ಮ ಆರಾಧ್ಯ ದೈವವಾದ ಶ್ರೀ ಪಾಂಡುರAಗ ವಿಠಲನನನ್ನು ಕುರಿತ ಹಲವು ಕೀರ್ತನೆಗಳನ್ನು ರಚಿಸಿದರು. ದಕ್ಷಿಣ ಭಾರತದ ಉದ್ದಗಲಕ್ಕೂ ಸಂಚರಿಸಿ ಹರಿನಾಮ ಸಂರ್ಕೀನೆ ಮಾಡಿದರು. ಭಗವನ್ನಾಮದ ಮಹಿಮೆಯನ್ನು ಸಾಮಾನ್ಯ ಜನರಿಗೂ ತಿಳಿಯುವಂತೆ ಸರಳ ಕನ್ನಡದಲ್ಲಿ ಕೃತಿಗಳನ್ನು ರಚಿಸಿ, ಅವಕ್ಕೆ ಮನಮೋಹಕ ರಾಗಗಳನ್ನು ಅಳವಡಿಸಿ ಹಾಡಿ ಜನರನ್ನು ಭಗವದ್ಭಕ್ತರನ್ನಾಗಿ ಮಾಡಲು ಶ್ರಮಿಸಿ ಸಮಾಜ ಸುಧಾರಣೆ ಕೆಲಸ ಮಾಡಿದರು. 


ಹಂಪೆಯಲ್ಲಿ ವ್ಯಾಸರಾಯರು, ಕನಕದಾಸರು, ವಾದಿರಾಜರು, ನರಹರಿ ತೀರ್ಥರು, ವಿಜಯ ದಾಸರು ಜಗನ್ನಥ ದಾಸರು, ಗೋಪಾಲ ದಾಸರು ಮೊದಲಾದವರನ್ನು ಹೊಂದಿದ ‘ದಾಸಕೂಟ’ವನ್ನು ಆರಂಭಿಸಿದರು. ಅಂದಿನ ಕಾಲ ಘಟ್ಟದಲ್ಲಿ ಇವರ ಸಾಹಿತ್ಯ : ಕೀರ್ತನೆಗಳಲ್ಲಿ ಉಗಾಭೋಗಗಳು, ಸುಳಾದಿಗಳೆಂಬ ಹೊಸ ಪ್ರಕಾರಗಳೂ ಕಂಡುಬಂದುವು. ಭಕ್ತಿ ಜ್ಞಾನ ವೈರಾಗ್ಯ ಭಾವವನ್ನೊಳಗೊಂಡ ಹಲವು ಪದ್ಯ : ಪದಗಳನ್ನು ರಚಿಸಿ, ಸಾಹಿತ್ಯದೊಂದಿಗೆ ಸಂಗೀತ ಪದ್ಧತಿಯನ್ನೂ ಬೆಳೆಸಿ, ರಾಗ ಸಂಯೋಜಿಸಿ ಹಾಡಿದ ಮಹಾನುಭಾವರು ಪುರಂದರ ದಾಸರು. ಕರ್ನಾಟಕ ಸಂಗೀತಕ್ಕೆ, ದಾಸ ಸಾಹಿತ್ಯಕ್ಕೆ ಪುರಂದರ ದಾಸರ ಕೊಡುಗೆ ಅಪಾರ. ಆದ್ದರಿಂದಲೇ, ಇವರು ‘ವಾಗ್ಗೇಯಕಾರ’ ‘ಕರ್ನಾಟಕ ಸಂಗೀತದ ಪಿತಾಮಹ “ ಎಂಬೆಲ್ಲಾ ಬಿರುದುಗಳನ್ನು ಪಡೆದರು. ಕರ್ನಾಟಕದಲ್ಲಿ ಜನಿಸಿದರೂ ದಾಸರ ಮೇಲೆ ಹಿಂದೂಸ್ಥಾನಿ ಸಂಗೀತವೂ ಹೆಚ್ಚು ಪ್ರಭಾವ ಬೀರಿತ್ತು. ಹಿಂದೂಸ್ಥಾನಿ ಸಂಗೀತದ ಪ್ರಖ್ಯಾತ ಗಾಯಕ ತಾನೇಸೇನ್‌ನ ಗುರು, ಸ್ವಾಮಿ ಹರಿದಾಸರೂ ಪುರಂದರ ದಾಸರ ಶಿಷ್ಯರಾಗಿದ್ದರು ಎಂಬುದು ಕೆಲವು ಲೇಖಕರ ಅಭಿಪ್ರಾಯವಾಗಿದೆ. ದಾಸ ಸಾಹಿತ್ಯವು ಭಕ್ತಿ, ಹರಿಸ್ಮರಣೆ, ನಾಮದ ಮಹತ್ವ, ಮೋಕ್ಷ ಮಾರ್ಗ, ಸೇವಾ ಭಾವನೆಗಳನ್ನು ವರ್ಣಿಸುತ್ತವೆ. ಹೀಗಾಗಿ ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದಿದೆ. ಶ್ರೀಹರಿಯ ಹಲವು ವಿಧದ ಅವತಾರಗಳ ವರ್ಣನೆ, ಕೃಷ್ಣನ ಬಾಲ ಲೀಲೆಗಳು, ರಾಕ್ಷಸರ ಸಂಹಾರ, ದುಷ್ಟ ಮರ್ಧನ, ಶಿಷ್ಟ ರಕ್ಷಣೆ, ಮನುಷ್ಯನ ಜೀವಿತದಲ್ಲಿ ಗುರುವಿನ ಮಹತ್ವ ಮೊದಲಾದ ವಿಷಯಗಳು ದಾಸರ ಕಾವ್ಯ ವಿಶೇಷಗಳಾಗಿವೆ.  

ಶ್ರವಣ, ಕೀರ್ತನೆ, ನಾಮಸ್ಮರಣ, ಪಾದಸೇವೆ, ದಾಸ್ಯ, ಸಖ್ಯ ನಿವೇದನ, ಅರ್ಚನ, ವಾತ್ಸಲ್ಯ ಹೀಗೆ ವಿವಿಧ ಭಕ್ತಿ ಭಾವಗಳು ದಾಸರ ಪದ್ಯಗಳಲ್ಲಿ ಕಾಣುತ್ತವೆ. ಸಮಾಜದಲ್ಲಿ ಕಾಣಿಸಿದ ಲೋಪ ದೋಷಗಳನ್ನು ಕಟುವಾಗಿ ಠೀಕಿಸಿ ಬುದ್ಧಿ ಹೇಳಿದ ದಾಸರು, ವಿನೋದ ಪ್ರಿಯರೂ ಆಗಿರುವುದು ಅವರ ಹಲವು ಕೃತಿಗಳಲ್ಲಿ ಕಾಣಸಿಗುತ್ತವೆ. ಹಲವು ಕಡೆ ತತ್ವೋಪದೇಶವನ್ನು ಕಟುವಾಗಿ ಹೇಳದೆ, ಕಹಿ ಗುಳಿಗೆಯ ಮೇಲೆ ಸಿಹಿಯ ಲೇಪನವಿದ್ದಂತೆ ವಿನೋದಪೂರ್ಣವೂ ಅರ್ಥಪೂರ್ಣವೂ ಆಗುವಂತೆ ಇವರ ಕೀರ್ತನೆಗಳಲ್ಲಿ ವಿಷಯಗಳನ್ನು ತಿಳಿಸಿದ್ದಾರೆ. 

     ಸುಂದರವಾದ ಪದ ಪ್ರಯೋಗ, ಆಕರ್ಷಕ ಶೈಲಿ. ಮಾಧುರ್ಯ, ಸುಕುಮಾರತೆ ಮೊದಲಾದ ಗುಣಗಳು, ಹಲವು ಅಲಂಕಾರಗಳು, ಅನುಭವ ಲೋಕೋಕ್ತಿಗಳು ಇವರ ಪದ್ಯಗಳಲ್ಲಿ ಕಾಣಸಿಗುತ್ತವೆ. ಪದ್ಯಗಳ ಮುಖ್ಯ ಗುರಿಯು ಭಕ್ತಿ ಪ್ರಧಾನವಾದರೂ, ನೀತಿ ಭೋದೆ, ಸಮಾಜದಲ್ಲಿ ಕಂಡು ಬರುತ್ತಿರುವ ಡಂಭಾಚಾರ, ದುರಾಚಾರ, ಹಲವು ಲೋಪ ದೋಷಗಳನ್ನು ತಿದ್ದಿ ಜನರನ್ನು ಸನ್ಮಾರ್ಗಕ್ಕೆ ತರುವ ಪ್ರಯತ್ನ ಇವರ ರಚನೆಗಳಲ್ಲಿವೆ. ದಾಸರ ಕೃತಿಗಳ ವಿಸೇಷತೆ ; ಮಹತ್ವ  ಕುರಿತಂತೆ ಹೇಳುತ್ತಾ ಹೊರಟರೆ ಪುಟಗಳು ಪುಸ್ತಕವಾಗಿ ಬೆಳೆಯುತ್ತದೆ. ಸಂಸ್ಕೃತದಲ್ಲಿರುವ ಹಲವು ಅಧ್ಯಾತ್ಮಿಕ ತತ್ವಗಳನ್ನು, ವೇದ, ಉಪನಿಷತ್ತು ಭಗವದ್ಗೀತೆಗಳ ಸಾರವನ್ನು ಸರಳ ಸುಂದರವಾದ ರೀತಿಯಲ್ಲಿ, ಸಾಮಾನ್ಯರಿಗೂ ಅರ್ಥವಾಗುವ ಶುದ್ಧ ಕನ್ನಡದ ಆಡು ಮಾತಿನಲ್ಲಿ ನಿರೂಪಿಸಿರುವ ಶ್ರೇಯಸ್ಸು ದಾಸ ಶ್ರೇಷ್ಠ ಪುರಂದರ ದಾಸರಿಗೇ ಸಲುತ್ತದೆ. ಹಲವು ಕೃತಿಗಲ್ಲಿ ಉಪಮೆಗಳನ್ನು ಹೇರಳವಾಗಿ ಬಳಸಿದ್ದಾರೆ. ಸುಮಾರು ೪. ೭೫ ಲಕ್ಷ ಪದ್ಯ : ಕೀರ್ತನೆಗಳನ್ನು ಈ ದಾಸರು ರಚಿಸಿ ಸಂಗೀತ ಸಂಯೋಜಿಸಿದ್ದಾರೆAಬುದು ಕೆಲವು ಬರಹಗಾರರ ಅಭಿಪ್ರಾಯವಾಗಿದೆ.



ಪುರಂದರ ದಾಸರ ರಚನೆಗಳ ಸಂಗ್ರಹವನ್ನು ಗುರುಗಳಾದ ವ್ಯಾಸರಾಯರು “ಪುರಂದರೋಪನಿಷತ್” ಎಂದು ಕರೆದು ಗೌರವಿಸಿದ್ದಾರೆ.

ಇಂಥಹಾ ಮಹಾನ್ ಭಗವದ್ ಭಕ್ತರು, ಸಮಾಜೋದ್ಧಾರಕರು ೮೦ ವರ್ಷಗಳ ಆಯುಷ್ಯವನ್ನು ಪೂರೈಸಿ ಕ್ರಿ ಶ ೧೫೬೪ ರಲ್ಲಿ ರಕ್ತಾಕ್ಷಿ ಸಂವತ್ಸರದ ಪುಷ್ಯ ಮಾಸದ ಬಹುಳ ಅಮಾವಾಸ್ಯೆ ಶನಿವಾರದಂದು ಪರಮಾತ್ಮನ ಪಾದ ಸೇರಿದರು. ಇಂದು ಇವರು ನಮ್ಮೊಡನೆ ಇಲ್ಲದಿದ್ದರೂ ಇವರು ರಚಿಸಿ ಹಾಡಿರುವ ದೇವರ ನಾಮಗಳು ಇಂದು, ಮುಂದೂ, ಎಂದೆಂದೂ  ಆಸ್ತಿಕರ ಪಾಲಿಗೆ ದೊಡ್ಡ ಜ್ಞಾನ  ಭಂಡಾರವೂ ಪ್ರಾತಃ ಸ್ಮರಣಿಯವೂ ಆಗಿರುತ್ತವೆ ಎಂದರೆ  ಮಾತು ಅತಿಶಯೋಕ್ತಿಯಾಗಲಾರದು. ಈ ಪುಣ್ಯ ಮೂರ್ತಿಯ ಪುಣ್ಯ ದಿನದ ಆಚರಣೆಯ ಸಂದರ್ಭದಲ್ಲಿ ಇವರ ಎಲ್ಲ ಕೃತಿಗಳನ್ನು ಅರಿಯಲು ಸಾಧ್ಯವಾಗದಿದ್ದರೂ, ಕೆಲವನ್ನಾದರೂ ಅರಿತು, ಅವುಗಳಲ್ಲಿರುವ ನೀತಿ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಇವರಿಗೆ ಕೃತಜ್ಞತೆ ಸಲ್ಲಿಸಬಹುದಾಗಿದೆ.


Comments

  1. ಪುರಂದರದಾಸರ ಬಗ್ಗೆ ಈ ಸಮಯೋಚಿತ ಲೇಖನ ಸ್ವಾರಸ್ಯವಾಗಿದೆ. ಅವತಾರ ಪುರುಷರಾದ ಈ ದಾಸರನ್ನು ಕುರಿತು ಎಷ್ಟು ತಿಳಿದುಕೊಂಡು ಸಾಲದು.
    ಈ ಬರಹದಲ್ಲಿ "ಹಂಪೆಯಲ್ಲಿ ವ್ಯಾಸರಾಯರು, ಕನಕದಾಸರು, ವಾದಿರಾಜರು, ನರಹರಿ ತೀರ್ಥರು, ವಿಜಯ ದಾಸರು ಜಗನ್ನಥ ದಾಸರು, ಗೋಪಾಲ ದಾಸರು ಮೊದಲಾದವರನ್ನು ಹೊಂದಿದ ‘ದಾಸಕೂಟ’ವನ್ನು ಆರಂಭಿಸಿದರು." ಎಂದು ಬರೆದಿದೆ. ಇದು ಸರಿಯಲ್ಲ. ಏಕೆಂದರೆ ನರಹರಿ ತೀರ್ಥರು ಪುರಂದರ ದಾಸರಿಗಿಂತ ಬಹಳ ಹಿಂದಿನವರು.

    ReplyDelete
    Replies
    1. ಲೇಖಕರು ಡಾ ಮಧುಸೂದನ ಅವರ ಸಂದೇಶದಂತೆ ಇತಿಹಾಸ ಮಾಹಿತಿ ಕೊಡುವಲ್ಲಿ ಮುಂದಿನ ಲೇಖನಗಳಲ್ಲಿ ದಯವಿಟ್ಟು ಸ್ವಲ್ಪ ಗಮನ ಕೊಡಬೇಕಾಗಿ ವಿನಂತಿ.

      Delete
  2. ಮೇಲಿನ ಟೀಕೆಯಲ್ಲಿ "ತಿಳಿದುಕೊಂಡರೂ" ಎಂದಿರಬೇಕು "ತಿಳಿದುಕೊಂಡು" ಅಲ್ಲ. (Error caused by predictive text)

    ReplyDelete
  3. ಲೇಖಕರಿಗೆ ಧನ್ಯವಾದಗಳು. ಭಾರತೀಯ ಸಂಸ್ಕೃತಿ ಪರಂಪರೆ ಮತ್ತು ಆಧ್ಯಾತ್ಮ ವಿಷಯಗಳ ಬಗ್ಗೆ ತಮ್ಮ ಹಿಂದಿನ ಮತ್ತು ಇಂದಿನ ಲೇಖನಗಳೆಲ್ಲವೂ ಮನಮುಟ್ಟುವಂತಿದೆ.

    ReplyDelete
  4. Recently we celebrated Purandara aradhane in New Delhi. Very apt timing. Good read

    ReplyDelete
  5. ಪುರಂದರ ದಾಸರ ಬಗ್ಗೆ ಮಾಹಿತಿ ತುಂಬಾ ಇಷ್ಟವಾಯಿತು.

    ReplyDelete

Post a Comment