ಆಸರೆ ಮನೆ - 8

 ಆಸರೆ ಮನೆ - 8

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ 



ಆಸರೆ ಮನೆಗೆ ಧನ್ವಂತರಿಯಾಗಿ ಬಂದ ಡಾ।। ವಿಶಾಲ್

ಒಂದು ದಿನ ಇನ್ನು ಚುಮು ಚುಮು ಚಳಿಯ ಬೆಳಗು. ಸೂರ್ಯನ ಎಳೆ ಬಿಸಿಲು ಬರುವುದೋ ಬೇಡವೋ ಎಂದು ಮೆಲ್ಲಗೆ ಮುಖ ತೋರಿಸುತ್ತಿತ್ತು. ಕಲ್ಯಾಣಿ ಕೈ ತೋಟದ ಬೆತ್ತದ ಕುರ್ಚಿಯ ಮೇಲೆ ಬೆಚ್ಚನೆಯ ಶಾಲು ಹೊದ್ದು ಕುಳಿತು ಬಿಸಿ ಬಿಸಿ ಕಾಫಿಯನ್ನು ಕುಡಿಯುತ್ತ ಬೆಳಗಿನ ಸುಂದರ ಸೊಬಗನ್ನು ನೋಡುತ್ತಿದ್ದಳು. ವೆಂಕಮ್ಮಜ್ಜಿ ಆಸರೆಯ ಮನೆಗೆ ಬಂದ ಮೇಲೆ ಬೆಳಗು ಕಣ್ಣು ಬಿಡುವ ಹೊತ್ತಿಗೆ ವೆಂಕಮ್ಮಜ್ಜಿ ಬಿಸಿ ಬಿಸಿ ಸುವಾಸನೆಯ ಕಾಫಿಯನ್ನು ತಮಗೊಂದು ಲೋಟ ಅಡಿಗೆಮನೆಯ ಕಟ್ಟೆಯ ಮೇಲಿಟ್ಟುಕೊಂಡು ಕೈತೋಟದಲ್ಲಿರುತ್ತಿದ್ದ ಕಲ್ಯಾಣಿಗೊಂದು ಲೋಟ ತಂದು ಕೊಡುತ್ತಿದ್ದರು. ಮೂರ್ತಿ ವಾಕಿಂಗ್ ಹೋಗುತ್ತಿದ್ದರು. ನಿರಂಜನ ಯೋಗಾಸನ ವ್ಯಾಯಾಮ ಮಾಡುತ್ತಿರುತ್ತಿದ್ದ,

ಮೀಸೆ ಮಾವನಿಗೆ ಕಾಫಿ ವಾಸನೆ ಬಂದ ಮೇಲೆ ಬೆಳಗಾಗುತ್ತಿತ್ತು. ವಿಜಯ ಮಾತ್ರ ಎಲ್ಲರ ಕಾಫಿ ಆದ ಮೇಲೆ ಎದ್ದು ಸ್ನಾನ ಮಾಡಿದ ನಂತರವೇ ಕಾಫಿ ಕುಡಿಯುತ್ತಿದ್ದುದು. 

ಮುಕ್ತಾ ಮಾತ್ರ ಯಾವತ್ತು ಕಾಫಿ ಕುಡಿದವಳೇ ಅಲ್ಲ. ವೆಂಕಮ್ಮಜ್ಜಿ ಮುಕ್ತಾಳ ಬಗ್ಗೆ ಹೆಚ್ಚಿನ ಪ್ರೀತಿಯಿಂದ ಅವಳಿಗಾಗಿ ಒಂದು ಲೋಟ ಬಿಸಿ ಬಿಸಿ ಹಾಲು ಕೊಡುತ್ತಿದ್ದರು. ಕಲ್ಯಾಣಿ ಇದ್ಯಾವುದಕ್ಕೂ ತಡೆ ಒಡ್ಡಿದವಳಲ್ಲ. ವೆಂಕಮ್ಮಜ್ಜಿ ಹಿತ ಮಿತ ಅರಿತ ತಾಯಿ ಕರುಳಿನ ದಯಾರ್ದ್ರ  ಹೃದಯದ  ಹೆಂಗಸು. ಯಾರಿಗೂ ಭಿನ್ನ ಭೇದ ಎಣಿಸುವವರಲ್ಲ. ಉಳಿದ ಸದಸ್ಯರಿಗೂ ಕಾಫಿ-ಟೀ ಅವರವರ ಇಚ್ಛೆಯಂತೆಯೇ ಮಾಡಿಕೊಡುತ್ತಿದ್ದರು. ಅಲ್ಲಿನ ಒಂದು ಕಠಿಣ ನಿಯಮ ಎಂದರೆ, ಯಾರೂ ಯಾವುದನ್ನು ಹಾಳು  ಮಾಡುವುದು, ಚೆಲ್ಲುವುದು ಇತ್ಯಾದಿಗಳನ್ನು ಮಾಡುವಂತಿಲ್ಲ. ಬೇಕಷ್ಟು ತಿಂದು ಕುಡಿದು ಮಾಡಬಹುದು. ಆದರೆ ಸಮಯದ ಅಥವಾ ಪದಾರ್ಥಗಳ ಮಿತಿಯ ನಿಯಮ ಮೀರುವಂತಿಲ್ಲ. 

ಬೆಳಿಗ್ಗೆ ೯ ರೊಳಗೆ ಎಲ್ಲರ ನಿತ್ಯ ಪಾನೀಯಗಳ ಸೇವನೆಯ ನಂತರ ಸ್ನಾನ ಮುಗಿಸಿ ಅವರವರ ಇಷ್ಟದಂತೆ ದೇವರಿಗೆ ಕೈಮುಗಿದು ನಮಸ್ಕರಿಸಿ ಪೂಜೆ ಮಾಡುವುದಿದ್ದರೆ ಮಾಡಿ ಗುಡಿಸುವುದು, ಸಾರಿಸುವುದು. ಅಡಿಗೆ ಮನೆ ಸಹಾಯ, ತರಕಾರಿ ಹೆಚ್ಚುವುದು, ಪಾತ್ರೆ ತೊಳೆಯುವುದು ಇತ್ಯಾದಿ ಕೆಲಸಗಳ ನಿರ್ವಹಣೆ. ಕಲ್ಯಾಣಿಯೂ ಸಹ ತನ್ನ ಕೈಗೆ ಬಂದ ಕೆಲಸ ಮಾಡದೇ ಇರುತ್ತಿರಲಿಲ್ಲ. ಮುಕ್ತಾಳಿಗೆ ಮಾತ್ರ ಬೆಳಗ್ಗೆ ಎದ್ದು ತೋಟದಲ್ಲಿನ ಹೂ ಕೊಯ್ದು ಮಾಲೆ ಕಟ್ಟಿ ದೇವರ ಪೂಜೆಗೆ ಅಣಿ ಮಾಡುವುದು ಮೊದಲ ಕೆಲಸ. ವೆಂಕಮ್ಮಜ್ಜಿ ಹೂವಿಟ್ಟು ದೇವರನ್ನು ಅಲಂಕರಿಸಿ ಜಪ ಮಾಡಿ ಕಾಫಿ ತಯಾರಿ ಪ್ರಾರಂಭಿಸುತ್ತಿದ್ದರು. ಇದು ''ಆಸರೆಮನೆ'' ಬೆಳಗಿನ ದಿನಚರಿ. ಯಾರಿಗೂ ಆಯಾಸವಿಲ್ಲ. ಶ್ರಮವಿಲ್ಲ. ಹಂಚಿಕೊಂಡ ಕೆಲಸ ಪ್ರೀತಿಯ ಸಹಬಾಳ್ವೆ. 

ಆದರೆ ಅಂದು  ಸ್ವಲ್ಪ ಬದಲಾದ ದಿನಚರಿ ಕಲ್ಯಾಣಿ, ವಿಜಯ, ಮೂರ್ತಿ, ನಿರಂಜನರಿಗೆ. 

ದೊಡ್ಡಗೇಟಿನ ಮುಚ್ಚಿದ ಬಾಗಿಲ ಮುಂದೆ ಒಬ್ಬ ಸ್ಪುರದ್ರೂಪಿ ೩೫ ರ ಆಸುಪಾಸಿನ ಯುವಕ. ಎತ್ತರವಾದ ಎತ್ತರೆಕ್ಕೆ ತಕ್ಕ ಮಟ್ಟಸವಾದ ಮೈಯಿನ, ಬಿಳಿಯ ಬಣ್ಣದ ಸುರುಳಿ ಸುರುಳಿಯಾದ ಕರಿಯ ಕ್ರಾಪು ಕೂದಲಿನ ಶುಭ್ರ ಶ್ವೇತವಸ್ತ್ರ ಧರಿಸಿದ ಗಂಡಸು ಗೇಟಿನ ಚಿಲಕ ಕುಟ್ಟುತ್ತ ''ಮೇ ಐ ಕಮಿನ್ ಮೇಡಂ'' ಎಂದಾಗ ಕಲ್ಯಾಣಿ ಕಾಫಿ ಕಪ್ ಕೆಳಗಿಟ್ಟು ಎದ್ದುನಿಂತು ಮುಂದೆ ಬಂದು ''ಯಸ್ ಕಮ್ ಇನ್'' ಎಂದಳು. 

ಅಷ್ಟು ಹೊತ್ತಿಗೆ ಅಲ್ಲಿ ವಿಜಯ, ವ್ಯಾಯಾಮ ಮುಗಿಸಿ ಬಂದ ನಿರಂಜನ ನಿಂತಿದ್ದರು. ಮೂರ್ತಿ ವಾಕಿಂಗ್ ಮುಗಿಸಿ ಗೇಟಿನ ಬಳಿ ಬಂದರು. 

ಕೈತೋಟದಲ್ಲಿ ಯಾವಾಗಲೂ ಇರುತ್ತಿದ್ದ ನಾಲ್ಕಾರು ಬೆತ್ತದ ಕುರ್ಚಿಗಳೊಡನೆ ಕೆಲಸದ ನಿಂಗಮ್ಮ ಇನ್ನೊಂದು ಕುರ್ಚಿ ತಂದಿಟ್ಟಳು. ಎಲ್ಲರೂ ಕುಳಿತರು. ಬಂದಾತನಿಗೆ ಕನ್ನಡ ಬರುತ್ತಿರಲಿಲ್ಲ. ಇಂಗ್ಲಿಷ್ ಎಲ್ಲಕ್ಕಿಂತ ಸುಲಲಿತವಾಗಿ ಹಿಂದಿ ಮಾತನಾಡುತ್ತಿದ್ದ. ಕಲ್ಯಾಣಿ ಇಂಗ್ಲಿಷ್ ಬಲ್ಲವಳಾದರು ಕನ್ನಡ ಅವಳ ತಾಯ್ನುಡಿ. ಹಿಂದಿಯ ಗಂಧ ಇಲ್ಲವೇ ಇಲ್ಲ ಎನ್ನುವಷ್ಟು ಅಲ್ಲ. ವಿಜಯ-ಮೂರ್ತಿಗಳಿಗೆ ಹಿಂದಿ ನೀರು ಕುಡಿದಷ್ಟು ಸಲೀಸು. ಹಾಗಾಗಿ ಸಂಭಾಷಣೆಯೆಲ್ಲ ವಿಜಯ-ಮೂರ್ತಿಯರದೇ. ಮಧ್ಯೆ ಮಧ್ಯೆ ಇಂಗ್ಲಿಷ್ ನಲ್ಲಿ ಕಲ್ಯಾಣಿ ಮಾತಾಡಿದಳು. ವಿಜಯ-ಮೂರ್ತಿಯವರಿಂದ ಡಾ।। ವಿಶಾಲ್ ನ ದುರಂತ ಕಥೆ ಆಸರೆ ಮನೆಯ ಎಲ್ಲರಿಗೂ ತಿಳಿದದ್ದು ನಂತರ. ಒಟ್ಟಿನಲ್ಲಿ ಆಸರೆ ಮನೆಗೆ ಅವಶ್ಯವಿದ್ದ ಒಬ್ಬ ಡಾ|| ಆಗಿ ವಿಶಾಲ್ ಬಂದ. ಬಂದುಳಿದವನು ತನಗೂ ಉಳಿದವರಿಗೂ ನೆಮ್ಮದಿಯನ್ನು ತಂದ ವಿಶಾಲ್ ಹೆಸರಿಗೆ ತಕ್ಕಂತೆ ವಿಶಾಲ ಮನಸ್ಸಿನ ಸಹೃದಯಿ. 

***********

ಡಾ||ವಿಶಾಲ್ ಉತ್ತರ ಪ್ರದೇಶದ ಒಂದು ಚಿಕ್ಕ ನಗರದವನು. ಹುಟ್ಟಿನಿಂದ ಪರೋಪಕಾರ. ಸಹನೆ, ಸೌಹಾರ್ದ, ಮಿತಿಯಾದ ಆಸೆಯುಳ್ಳ ತಂದೆ-ತಾಯಿಗಳ ಹೊಟ್ಟೆಯಲ್ಲಿ ಹುಟ್ಟಿದವನು ವಿಶಾಲ್. 

ವಿಶಾಲ್ ನ ತಂದೆ ರಂಜಾನ್ ಮಿಶ್ರಾ, ತಾಯಿ ಊರ್ಮಿಳಾ. ಇಬ್ಬರೂ ಅವರವರ ಮನೆಯವರ ಒಪ್ಪಿಗೆಯನ್ನು  ಪಡೆದು ಮದುವೆಯಾಗಿದ್ದವರು. ರಂಜನ್ ಮಿಶ್ರಾನ ಅಣ್ಣ ಪ್ರಭಂಜನ್ ಮಿಶ್ರಾ ದೊಡ್ಡ ಹೃದಯ ತಜ್ಞ. ರಂಜನ್ ಮಿಶ್ರಾ ಒಬ್ಬ ದೊಡ್ಡ ಸಾಮಾನ್ಯ ರೋಗ ತಜ್ಞ ಡಾಕ್ಟರ್. ತಾಯಿ ಸ್ತ್ರೀ ರೋಗ ತಜ್ಞೆ ಡಾ|| ಊರ್ಮಿಳಾ. ಹೆಚ್ಚು ಕಮ್ಮಿ ಮನೆಯವರೆಲ್ಲ ಡಾಕ್ಟರ್ ತಳಿಗಳು. 

ವಿಶಾಲ್ ಹುಟ್ಟಿದಾಗ ತಂದೆ-ತಾಯಿಗಳಿಬ್ಬರೂ ಅವನನ್ನು ದೊಡ್ಡ ನರರೋಗ ತಜ್ಞನನ್ನಾಗಿ ಮಾಡುವ ಅಸೆ. ಆದರೆ ವಿಶಾಲ್ ತಂದೆಯಂತೆಯೇ ಸಾಮಾನ್ಯ ರೋಗ ತಜ್ಞನಾಗಿದ್ದು ಮಾತ್ರವಲ್ಲ ತಂದೆಯ ನರ್ಸಿಂಗ್ ಹೋಮ್ ನಲ್ಲೇ ದುಡಿದು ಬರುವ ಎಲ್ಲ ರೋಗಿಗಳನ್ನು ಯಾವುದೇ ಹಣಕಾಸಿನ ಆಮಿಷಗಳಿಗೆ ಒಳಗಾಗದೆ ಚಿಕಿತ್ಸೆ ನೀಡುತ್ತಿದ್ದ. ತಂದೆ ತಾಯಿಗಳಿಗೆ ಸರಳ ಸಾಮಾನ್ಯ ಜೀವನವನ್ನು ಪ್ರೀತಿಸುವ ಹುಡುಗನಾಗಿದ್ದ. 

ವಿಶಾಲ್ ನ ತಮ್ಮ ಪ್ರಜ್ವಲ್ ವಿಶಾಲ್ ನ ನಂತರ ಎಷ್ಟೋ ವರ್ಷಗಳು ಕಳೆದ ಮೇಲೆ ಅಪರೂಪವಾಗಿ ಹುಟ್ಟಿದವನು. ಓದಿನಲ್ಲಿ ಚುರುಕು, ಆಟದಲ್ಲಿ ಮುಂದು, ರೂಪಿನಲ್ಲಿ ಮನ್ಮಥ. ಶಾಲೆಯಲ್ಲೂ ಬೀದಿಯಲ್ಲೂ ಕೊನೆಗೆ ಅವರ ನರ್ಸಿಂಗ್ ಹೋಮಿನಲ್ಲೂ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದವನು. ಎಲ್ಲ ತಂದೆ ತಾಯಿಗಳು ಹುಟ್ಟಿದರೆ ಇವರಂತಹ ಅದರಲ್ಲೂ ಪ್ರಜ್ವಲ್ ನಂತಹ ಮಕ್ಕಳು ಹುಟ್ಟಬೇಕು ಎಂದು ಬಯಸುತ್ತಿದ್ದರು. 

ಇಬ್ಬರು ಗಂಡು ಮಕ್ಕಳು ಇದ್ದರೂ ನರ್ಸಿಂಗ್ ಹೋಮ್ ನಿಂದ ಮನೆಗೆ ಬಂದರೆ ಒಬ್ಬರೂ ಇರುವುದಿಲ್ಲ. ಮನೆ ಮೌನ ಸಾಮ್ರಾಜ್ಯ, ಬೇಸರ ಒಂಟಿತನ ಮುಸುಕು ಹೊದ್ದು ಮನೆಯನ್ನು ಆವರಿಸಿರುತ್ತಿತ್ತು. ಡಾ|| ವಿಶಾಲ್ ಗಂತೂ ಆಸ್ಪತ್ರೆಯೇ ೨೪ ಗಂಟೆಗಳ ಸ್ವರ್ಗವಾದರು ಕೊಂಚ ವೇಳೆಯಾದರು ಮನೆಯಲ್ಲಿ ಗಲಗಲ ಎನ್ನುವ ಗಲಾಟೆ ಇರಬೇಕೆಂದು ಬಯಸಿದ್ದ. ಪ್ರಜ್ವಲ್ ಇದ್ದಾಗ ಗಲಾಟೆ ನಗು ಎಲ್ಲ. ನಂತರ ಮತ್ತೆ ನೀರವ ಮೌನ. ಕಡೆಗೆ ಇದನ್ನು ತಡೆಯಲಾರದೆ ಡಾ|| ತಂದೆ- ತಾಯಿಗಳಿಬ್ಬರು ಮಗನಿಗೆ ಮದುವೆ ಮಾಡಿಕೊಳ್ಳಲು ಬಲವಂತ ಮಾಡಲಾರಂಭಿಸಿದರು. ಆದರೆ ಡಾ|| ವಿಶಾಲ್ ನದು ಒಂದೇ ಹಟ. ಪ್ರಜ್ವಲ್ ವಿದ್ಯಾಭ್ಯಾಸ ಮುಗಿಸಿ ಡಾ|| ಆದ ನಂತರವೇ ತನ್ನ ಮದುವೆ ಎಂದು. 

ಕಡೆಗೆ ಎಲ್ಲರ ಒಮ್ಮತದ ತೀರ್ಮಾನದಂತೆ ಚೆನ್ನೈ ನಲ್ಲಿದ್ದ ಬಡೇ ಭಯ್ಯನ ಮಗಳು ಅನಾಮಿಕ ತಮ್ಮಲ್ಲಿ ಬಂದಿರಲಿ ಎಂದು ತೀರ್ಮಾನಿಸಿ ಅಣ್ಣನ ಸಮ್ಮತಿ ಪಡೆಯಲು ಡಾ|| ದಂಪತಿಗಳು ಚೆನ್ನೈ ಗೆ  ಹೊರಟರು. ಖುಷಿಯಿಂದ ಕುಣಿಯುತ್ತ ಅನಾಮಿಕ ಚಾಚಾ ಚಾಚಿಯರ ಜೊತೆ ಬಂದಿಳಿದಳು. ಮನೆ ತುಂಬಿದಂತಾಯಿತು. ಯಾವಾಗ ಮನೆಗೆ ಬಂದರೂ ಅನಾಮಿಕಾಳ ನಗು ಕುಣಿತ ಗೆಜ್ಜೆಯ ಘಲ್ ಘಲ್ ಶಬ್ದ ಮನೆಗೊಂದು ವಿನೂತನ ಕಳೆ  ತಂದಿತು. 

ಡಾ|| ಕುಟುಂಬ ಸುಖೀ ಕುಟುಂಬ  ನೋಡುವವರ ಕಣ್ಸೆಳೆಯುವ ಸಂಸಾರ ಹಿತೈಷಿಗಳಿಗಾದರೆ, ಅಸಮಾಧಾನ ತೋರ್ಪಡಿಸುವವರಿಗೆ ಕಣ್ಣುರಿಸುವ ಕುಟುಂಬ. 

ಮನೆಯಲ್ಲಿ, ಹೊರಗಡೆ, ನರ್ಸಿಂಗ್ ಹೋಮ್ ನಲ್ಲಿ ಎಲ್ಲಿಯಾದರು ಸರಿ ಡಾ|| ದಂಪತಿಗಳು ಯಾವುದೇ ರೋಗಿಯಾದರೂ ಬಡವ ಶ್ರೀಮಂತ ಎನ್ನದೇ  ಹೊತ್ತು ವೇಳೆಗಳನ್ನು ಗಮನಿಸದೆ ಸೇವೆಗೆ ಸಿದ್ಧರಾಗುತ್ತಿದ್ದರು. ಮಗ ವಿಶಾಲ್ ಕೂಡ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದ. 

ಪ್ರಜ್ವಲ್ ತನ್ನ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿದ್ದ ಎಂ.ಬಿ.ಬಿ.ಎಸ್. ಮುಗಿಸಿ ಅವನು ಎಂ.ಡಿ. ಮಾಡಿ ದೊಡ್ಡ ಡಾಕ್ಟರ್ ಆಗುವ ವೇಳೆಗೆ ನರ್ಸಿಂಗ್ ಹೋಮ್ ಅನ್ನು ಇನ್ನಷ್ಟು ವಿಶಾಲವಾಗಿ ಆಧುನಿಕಗೊಳಿಸುವ ಪ್ರಯತ್ನ ಮಾಡುವ ಬಗ್ಗೆ ಡಾ|| ರಂಜನ್ ಮಿಶ್ರಾ ಹೆಂಡತಿಯೊಡನೆ ಚರ್ಚಿಸಿದರು. ಮಗ ವಿಶಾಲ್ ಕೂಡ ಅದಕ್ಕೆ ಸಮ್ಮತಿಸಿದ. 

ಪ್ರಜ್ವಲ್ ಮೂಳೆ  ರೋಗ ತಜ್ಞನಾಗಿ ಹೆಸರು ಮಾಡುವ ಆಸೆಯಿಂದ ಓದುತ್ತಿದ್ದ. ಡಾಕ್ಟರ್ ಗಳಾದರು ಹೆಚ್ಚಿನ ಹಣ ಸಂಪಾದಿಸುವ ಪ್ರವೃತ್ತಿ ಅವರದಾಗಿರಲಿಲ್ಲ. ಹಾಗಾಗಿ ಆಸ್ಪತ್ರೆ ವಿಸ್ತರಣೆಗೆ ಸಾಲ ತೆಗೆಯುವುದು ಅನಿವಾರ್ಯವಾಗಿತ್ತು. 

ಮೂರು ಜನರೂ ಕುಳಿತು ಚರ್ಚಿಸಿ ಅಳೆದು ಸುರಿದು ಸಾಲ ತೆಗೆಯುವ ನಿರ್ಧಾರ ಮಾಡಿದರು. ಬ್ಯಾಂಕಿನಲ್ಲಿ ಮೂವರಿಗೂ ಭದ್ರತೆ ನೀಡುವ ಧೈರ್ಯ ಇದ್ದುದರಿಂದ ಸಮಾಲೋಚನೆ ಮಾಡಿ ಖರ್ಚು-ವೆಚ್ಚಗಳ ಪಟ್ಟಿ, ಆಸ್ಪತ್ರೆಗೆ ಬೇಕಾದ ಸಲಕರಣೆ, ಆಧುನಿಕ ಯಂತ್ರೋಪಕರಣಗಳು ಕಟ್ಟಡ ವಿಸ್ತರಣೆ ಎಲ್ಲದಕ್ಕೂ ಒಟ್ಟು ಲೆಕ್ಕಾಚಾರ ಹಾಕಲು ತಜ್ಞರನ್ನು ನಿಯಮಿಸಿ ಮಾತುಕತೆ ಆಡಿ ಬ್ಯಾಂಕಿನ ಕ್ರಮಕ್ಕೆ ಅನುಸಾರವಾಗಿ ನೀಡಬೇಕಾದ ಕಾಗದ ಪತ್ರಗಳನ್ನು ಮಾಡಲು ನಿರ್ಧರಿಸಿದರು. ಪ್ರಜ್ವಲ್ ಗೆ ತನ್ನ ಓದು ಆಟ  ಪಾಠಗಳನ್ನು ಬಿಟ್ಟು ವ್ಯವಹಾರದ ಬಗ್ಗೆ ಅರಿವೇ ಇಲ್ಲ. 

*************

ವಿಶಾಲ್ ದೊಡ್ಡಣ್ಣನಂತೆ ತಂದೆ ತಾಯಿಗಳೊಡನೆ ಪ್ರಜ್ವಲ್ ಅಭಿವೃದ್ಧಿಗಾಗಿ ಬ್ಯಾಂಕ್ ಸಾಲದ ಬಗ್ಗೆ ಓಡಾಟ ಪ್ರಾರಂಭಿಸಿದ. 

ದೊಡ್ಡ ವ್ಯವಹಾರ ಕಾಗದ ಪತ್ರಗಳು ಮೇಜಿನಿಂದ ಮೇಜಿಗೆ ಕಂಪ್ಯೂಟರ್ ನಿಂದ ಕಂಪ್ಯೂಟರ್ ಗೆ ಸಾಗಿ ಕೊನೆಗೆ ಇವರೆಲ್ಲರ ಹುದ್ದೆ ಸ್ವಂತ ಮನೆ, ಈಗಿನ ಸ್ವಂತ ನರ್ಸಿಂಗ್ ಹೋಮ್ ಎಲ್ಲದರ ಆಧಾರದ ಮೇಲೆ ಬ್ಯಾಂಕ್ ೫೦ ಲಕ್ಷ ರೂ.ಗಳ ಸಾಲ ನೀಡಲು ಅಧಿಕೃತವಾಗಿ ಸಮ್ಮತಿಸಿತು.  

ಪ್ರಜ್ವಲ್ ಎಂ.ಬಿ ಮುಗಿಸಿ ಎಂ.ಡಿ ಓದಲು ತಯಾರಿ ನಡೆಸುತ್ತಿದ್ದ. ಮಧ್ಯದ ಬಿಡುವಿನ ದಿನಗಳು ಮನೆಯಲ್ಲಿರುತ್ತಿದ್ದ ಮೂರು ಜನ ಡಾಕ್ಟರ್ ಗಳು ತಮ್ಮ ಎಂದಿನ ಕೆಲಸದಲ್ಲಿ ನಿರತರಾಗಿದ್ದರು. ಬಿಎಸ್.ಸಿ ಮುಗಿಸಿದ ಅನಾಮಿಕ ಮನೆಯಲ್ಲಿ ಸುಂದರವಾದ ಅರಗಿಣಿಯಂತಿದ್ದ ಅನಾಮಿಕ ಎಂದೂ ಪ್ರಜ್ವಲ್ ನನ್ನು ಭೈಯ್ಯಾ ಎಂದು ಕರೆದವಳಲ್ಲ. ಅವಳಿಗೆ ವಿಶಾಲ್ ಮಾತ್ರ ಭೈಯ್ಯಾ. ಪ್ರಜ್ವಲ್ ನನ್ನು  ಪ್ರಜೂ ಎಂದೇ ಕರೆಯುತ್ತಿದ್ದಳು. ಊರ್ಮಿಳಾ ಮಾತ್ರ ''ಅನು  ಯಾಕೆ ಪ್ರಜ್ವಲ್ ನಿನ್ನ ಭೈಯ್ಯಾ ಅಲ್ವೇನೆ. ನೀನು ಯಾಕೆ ಅವನನ್ನು ಪ್ರಜೂ ಎಂದು ಕರೆಯುವುದು'' ಎಂದು ಕೇಳುತ್ತಿದ್ದರು. ಊಹುಂ ಅನಾಮಿಕ ಯಾವುದಕ್ಕೂ ಕಿವಿಗೊಡಲಿಲ್ಲ. 

ಸಾಲ ಕೈಗೆ ಬರುವ ದಿನ ಹತ್ತಿರವಾಗುತ್ತಿತ್ತು. ಕೆಲಸ ಪ್ರಾರಂಭಿಸಲು ಒಳ್ಳೆಯ ಮುಹೂರ್ತ ಒಂದೆರಡು ತಿಂಗಳು ಇಲ್ಲ ಎಂದು ಪಂಡಿತರು ಹೇಳಿದ್ದರು. ಕಾಯಬೇಕಾದದ್ದು ಅನಿವಾರ್ಯವಾಗಿತ್ತು.    

ಪ್ರಜ್ವಲ್-ಅನಾಮಿಕ ಈ ಬಿಡುವಿನ ದಿನಗಳಲ್ಲಿ ತೀರಾ ಹತ್ತಿರವಾದರು. ಇದು ಮೊದಲು ಗಮನಕ್ಕೆ ಬಂದದ್ದು ಊರ್ಮಿಳಾಗೆ. ಮನಸ್ಸಿಗೆ ತುಂಬಾ ಗಾಬರಿಯಾಯಿತು. ಗಂಡ- ಮಗನೊಡನೆ ಹೇಳುವಂತಹುದೇನೂ ಇಲ್ಲ. ಆದರೆ ಗಂಡಸರಿಗೆ ಈ ಸೂಕ್ಷ್ಮ ತಿಳಿಯುವುದೂ ಇಲ್ಲ. ಊರ್ಮಿಳಾ ಗಂಭೀರ ಚಿಂತನೆ ನಡೆಸಿದಳು. ಏನು ಮಾಡಬೇಕೆಂದು ತೋಚಲಿಲ್ಲ. ತಾವು ಡಾಕ್ಟರ್ ವಿಶಾಲ್ ಮನಸ್ಸಿನಿಂದ ಯೋಚಿಸಬೇಕು. ಆದರೂ ಕೆಲವೊಂದು ವಿಷಯ ಹಾಗೆ ಬಗೆಹರಿಯುವಂತಹುದಲ್ಲ. ಊರ್ಮಿಳಾಗೆ ಕೂತರೂ ನಿಂತರೂ ಒಂದೇ ಚಿಂತೆ. ಆಸ್ಪತ್ರೆಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎಲ್ಲ ಗಮನಿಸಿದ ರಂಜನ್ ಮಿಶ್ರಾ 

''ಊರ್ಮಿ ಏನಿದು ಇತ್ತೀಚಿಗೆ ನೀನು ಯಾವಾಗಲೂ ಅನ್ಯಮನಸ್ಕಳಾಗಿ ಇರುತ್ತೀ. ಏನಾಗಿದೆ ನಿನಗೆ. ಏನಂತಹ ಚಿಂತೆ. ನರ್ಸಿಂಗ್ ಹೋಮ್ ವಿಸ್ತರಣೆಯ ಕೆಲಸ ಪ್ರಾರಂಭವಾಗಲಿಲ್ಲ ಎಂದು ಚಿಂತಿಸುತ್ತೀಯ?'' ಎಂದರು. '

''ಹಾಗಲ್ಲ ರಂಜನ್. ನನಗೇನಾಗಿದೆಯೋ ನನಗೇ ಗೊತ್ತಿಲ್ಲ. ಒಟ್ಟಿನಲ್ಲಿ ಮನಸ್ಸು ಸರಿಯಿಲ್ಲ''. ಎಂದಳು. 

''ಊರ್ಮಿ ನಿನಗೆ ಕೆಲಸ ಜಾಸ್ತಿ. ಒಂದ್ಸಲ್ಪ ದಿನ ರೆಸ್ಟ್ ತಗೋ ಎಲ್ಲ ಸರಿ ಹೋಗುತ್ತೆ'' ಎಂದರು. 

ಮನೆಯಲ್ಲಿ ಉಳಿದ ಊರ್ಮಿಳಾಗೆ ಪ್ರಜ್ವಲ್-ಅನಾಮಿಕ ಚಲನವಲನಗಳನ್ನು ನೋಡಿ ಮತ್ತಷ್ಟು ಗಾಬರಿ ಹೆಚ್ಚಾಯಿತು. ಇದನ್ನು ಹೀಗೆ ಬಿಟ್ಟರೆ ಮುಂದೆ ದೊಡ್ಡ ಅನಾಹುತವೇ ಆಗುತ್ತದೆ. ಅಣ್ಣ-ತಂಗಿಯ ಸಂಬಂಧ ಬೇರೊಂದು ದಿಕ್ಕಿನಲ್ಲಿ ಸಾಗಿ ಹೋಗುತ್ತಿದೆ. ಚಿಗುರಿನಲ್ಲೇ ಚಿವುಟದಿದ್ದರೆ ಇದನ್ನು ಸರಿಪಡಿಸಲು ಆಗುವುದಿಲ್ಲ ಎಂದು ನಿರ್ಧರಿಸಿದಳು. 

ಅದು ತನ್ನೊಬ್ಬಳಿಂದ ಆಗುವಂತಹ ಕೆಲಸ ಅಲ್ಲ. ಖಂಡಿತ ಇದಕ್ಕೆ ಗಂಡನ ಸಹಾಯ ಬೇಕೇ ಬೇಕು ಎಂದು ತೀರ್ಮಾನಿಸಿದಳು. 


Comments