ಚಳಿಗಡಗಡಂ ಗೆಲ್ಗೆ

ಚಳಿಗಡಗಡಂ ಗೆಲ್ಗೆ

ಹಾಸ್ಯ ಲೇಖನ - ಅಣುಕು ರಾಮನಾಥ್ 



ಗಾಳಿ ಚಳಿಯೆಲ್ಲ ತಂದೆಂದಿತು

ಮಳೆಯು ಸುರಿದು ಸುರಿದು ತಣುಪೇ ತಾನೆಂದಿತು |

ಫಾಲ್ಗುಣವು ಶೀತದಲ್ಲಿ ತಾನೇ ಮೊದಲೆಂದಿತು
ಬೆಚ್ಚನೆ ತನು ನಡುನಡುಗುವ ಮಾಸವೆ ತಾನೆಂದು
ಮೂಗು ಸೊರಬರೆನಲು ಖುಷಿ ತನಗೆ ಎಂದೆಂದಿತು 
ಗಾಳಿ ಚಳಿಯೆಲ್ಲ ತಂದೆಂದಿತು |
ದೂರದ ಬಂಗಾಳ ಕೊಲ್ಲಿ ತಾನೇ ಮಿಗಿಲೆಂದಿತು
ಒತ್ತಡವದು ಇಳಿಯುತಲಿರೆ ಎಲ್ಲೆಡೆ ತಂಪೆಂತು
ಬೆಂಗ್ಳೂರಲ್ಲಿ ಚಳಿಗೂ ಕಾರಣವೆ ತಾನೆಂದಿತು |
ಗಾಳಿ ಚಳಿಯೆಲ್ಲ ತಂದೆಂದಿತು |

ಈ ಹಾಡು ಯಾವುದೇ ಚಳಿವಾರದಲ್ಲಿ ಬೆಂಗಳೂರಿನಲ್ಲಿ ಕೇಳಿಸಿದರೆ ಅಚ್ಚರಿಯಿಲ್ಲ. ಬೆಂಗಳೂರು ಯಾವುದೇ ವಿಷಯದಲ್ಲಿ ಸ್ವಂತಿಕೆ ಹೊಂದಿದ್ದರೂ ಮಳೆಯ ವಿಷಯದಲ್ಲಿ ಮಾತ್ರ ಮದ್ರಾಸು, ಬಂಗಾಳ ಕೊಲ್ಲಿಗಳನ್ನೇ ಬಹುತೇಕ ಅವಲಂಬಿಸುತ್ತದೆ. ಬಂಗಾಳಕೊಲ್ಲಿ ಖಿನ್ನವಾದರೆ (ಡಿಪ್ರೆಸ್ ಆದರೆ – ಡಿಪ್ರೆಷನ್ ಉಂಟಾದರೆ) ಬೆಂಗಳೂರು ‘ಆಜ್ ತುಮ್ಸೇ ದೂರ್ ರಹ್ತೇ ಭೀ ಐಸೆ ರೋಯಾ ಮೇರಾ ಪ್ಯಾರ್; ದಿನ್ ಭಿ ರೋಯಾ ರಾತ್ ಭಿ ರೋಯಾ ಸಾರೆ ಹಫ್ತೇ ಬಾರ್ ಬಾರ್’ ಎಂದು ಹಾಡಿಕೊಂಡು ಗೊಳೋ ಎನ್ನುತ್ತದೆ. ತಮಿಳು ಬ್ಯಾಂಡಿನ ಶಬ್ದವಿಲ್ಲದೆಯೂ ನೂರು ಸೀರಿಯಲ್‌ಗಳ ಅಳುವನ್ನು ಮೂರು ದಿನದಲ್ಲಿಯೋ, ಒಂದು ವಾರದಲ್ಲಿಯೋ ಸುರಿಸಲು ಪ್ರಚೋದಕವಾಗುವ ಕೊಲ್ಲಿಗೂ, ತಮಿಳುಸೊಲ್ಲಿನ ಎಡೆಗೂ ಬೆಂಗಳೂರು ಗಡಗಡ ಪ್ರಣಾಮವನ್ನು ಸಲ್ಲಿಸುತ್ತದೆ.

ನನಗೆ ಹಿಂದಿನ ಕಾಲದ ಜನಗಳನ್ನು ನೋಡಿದಷ್ಟೂ ಅಚ್ಚರಿ ಹೆಚ್ಚುತ್ತದೆ. ರೋಮನ್ ಪುರಾಣದಲ್ಲಿ ಬರುವ ಪಾತ್ರಗಳು ಥಾನುಗಟ್ಟಲೆ ಬಟ್ಟೆ ಹಾಕಿಕೊಂಡಿರುತ್ತವೆ. ಅಲ್ಲಿನ ಐತಿಹಾಸಿಕ ಪಾತ್ರಗಳೂ ಹೆಕ್ಟಾಮೀಟರ್ ವಸನಧಾರಿಗಳೇ. ನಮ್ಮಲ್ಲಿ ದೇವತೆಗಳು ಪಂಚೆ ಉಟ್ಟಿರುತ್ತಾರೆ, ವಲ್ಲಿ ಹೊದ್ದಿರುತ್ತಾರೆ. ಋಷಿಗಳು ಏಕವಸ್ತ್ರರು. ಚಳಿಗಾಲದಲ್ಲಿ ಒಂದು ಪುಟಾಣಿ ಛತ್ರಿ ಹಿಡಿದು ಬಂದ ವಾಮನನೂ ಪಂಚೆಯವನೇ. ಮೇಲುದ ಇದ್ದರೂ ಒನ್ ಸೈಡ್ ಓಪನ್ ಆಗಿರುವಂತಹದ್ದೇ. ಇವರಿಗೆ ಚಳಿಯೇ ಇರಲಿಲ್ಲವೆ? ಅಥವಾ ಆಗ ಭೂಮಿಯ ಕಾವು ಇಂದಿಗಿಂತ ಹೆಚ್ಚಾಗಿದ್ದು ಬರುಬರುತ್ತಾ ಮಂಜುಯುಗದತ್ತ ಸಾಗುತ್ತಿದ್ದೇವೆಯೆ ಎನ್ನುವ ಪ್ರಶ್ನೆ ಏಳುತ್ತದೆ. ವಿಜ್ಞಾನ ‘ಮಂಜು ಕರಗುತ್ತಿದೆ’ ಎನ್ನುತ್ತದೆ. ಅಂದಿನ ಡ್ರೆಸ್ ಕೋಡನ್ನು ಇಂದಿಗೆ ಹೋಲಿಸಿದರೆ ಹಾಗೆನಿಸುವುದಿಲ್ಲ.

ದೇವತೆಗಳ ಮಾತು ಹಾಗಿದ್ದರೆ ರಾಕ್ಷಸರದಂತೂ ಇದ್ದಿದ್ದೂ ಕಡಿಮೆ ಬಟ್ಟೆ. ತಾಟಕಿಯಂತಹ ಓಲ್ಡ್ ಲೇಡಿ (ರಾಕ್ಷಸಿಗೆ ಲೇಡಿ ಅನ್ನಬಹುದೆ? ವಿಮೆನ್ಸ್ ಲಿಬ್‌ನವರೇ ಉತ್ತರಿಸಬೇಕು) ಕೂಡ ಒಂದು ಸ್ಟ್ರಾ ಸ್ಕರ್ಟ್, ಒಂದು ಎಂಥದೋ ವಸ್ತುವಿನಿಂದ ತಯಾರಿಸಿದ ಟಾಪ್ ಧರಿಸಿ ಇಂದಿನ WWF ಮಂದಿಯಂತೆ ಮರ, ಬಂಡೆಗಳನ್ನು ಬಳಸಿ ವೇಯ್ಟ್ ಲಿಫ್ಟಿಂಗ್ ಮಾಡುತ್ತಿದ್ದಳು. ಒಬ್ಬ ರಾಕ್ಷಸನಾದರೂ ‘ಛೆ! ತುಂಬಾ ಚಳಿ. ನಡೆ ಗುಹೆಗೆ ಹೋಗೋಣ’ ಎಂದ ಉಲ್ಲೇಖ ಯಾವುದೇ ಪುರಾಣದಲ್ಲಿ ಕಂಡುಬAದಿಲ್ಲ.
ದೇವದಾನವರ ಮಾತುಗಳು ಅಂತಿರಲಿ; ಸಣ್ಣಪುಟ್ಟ ಮಕ್ಕಳೂ ಚಳಿ ಎಂದುದಿಲ್ಲವಲ್ಲ! ಹಿಮಾಲಯನ್ ಮೆಟರ್ನಿಟಿ ಹೋಂನಲ್ಲಿ ಹುಟ್ಟಿದ ಗಣೇಶನಿಗೂ ಅಮ್ಮ ‘ಸ್ವೆಟರ್ ಹಾಕಿಕೋ ಪುಟ್ಟಾ’ ಎನ್ನದೆ ಬೀದಿಬಾಗಿಲಲ್ಲಿ ನಿಲ್ಲಿಸಿದ್ದಳಲ್ಲ! ಇತ್ತ ಭುವಿಯಲ್ಲಿ ಪ್ರಹ್ಲಾದ ಎಂದಾದರೂ ಫುಲ್ ಸ್ಲೀವ್ಸ್ ಬಟ್ಟೆ ಧರಿಸಿದ್ದನ್ನು ಯಾವುದಾದರೂ ಕ್ಯಾಲೆಂಡರಲ್ಲಿ ಕಂಡಿದ್ದೀರೇನು? ಬುಕ್ ಪೋಸ್ಟ್ ಪಂಚೆಯೊಂದರ ವಿನಹ ಎಂಥದೂ ಇಲ್ಲ! ಮುದ್ದುಕೃಷ್ಣನಂತೂ ಇಷ್ಟೇ ಬಟ್ಟೆ ಧರಿಸಿ ಎಲ್ಲೆಡೆಯೂ ಓಡಾಡಿಕೊಂಡಿದ್ದನು. ಅದೇ ಡ್ರೆಸ್‌ನಲ್ಲೇ ಪೂತನಿಯ ವಧೆ, ಚಕ್ರಾಸುರನ ವಧೆಗಳೂ ನಡೆದವು. ಯುದ್ಧಕ್ಕೊಂದು, ದೈನಂದಿನ ಲೆಕ್ಕಕ್ಕೊಂದು, ಡ್ಯಾನ್ಸ್ ಮಾಡುವಾಗಲೊಂದು ಡ್ರೆಸ್ ಕೋಡ್ ಎಂಬುದು ಅಂದಿಗೆ ತಿಳಿದೇ ಇರಲಿಲ್ಲ. ಹ್ಞಾಂ! ದೇವಿಯರಿಗೆ ಕೊಂಚ ಚಳಿ ಇದ್ದರೂ ಇದ್ದೀತು. ಕಡಲಿನಲ್ಲಿಯೇ ಕಾಲ ಕಳೆದ ಸರಸ್ವತಿ ಲಕ್ಷ್ಮಿಯರು ಪೂರ್ಣ ಸೆರಗಿನ, ಮ್ಯಾಚಿಂಗ್ ಬ್ಲೌಸಿನ ದಿರಿಸನ್ನೇ ಧರಿಸುತ್ತಾರೆ. ಅದರಲ್ಲೂ ಸಿಲ್ಕ್ ಡ್ರೆಸ್ಸೇ. ಪಾರ್ವತಿಯೂ ಈ ರೀತಿಯೇ ವಸ್ತ್ರ ಧರಿಸಿದರೂ ಶಿವನದು ಲೆದರ್ ಗಾರ್ಮೆಂಟ್ ಆದ್ದರಿಂದ ಆಕೆಯದೂ ಲೆದರ‍್ರೇ ಇದ್ದೀತೆಂಬ ಗುಮಾನಿ ಒಮ್ಮೊಮ್ಮೆ ಮೂಡುತ್ತದೆ.
ದೇವತೆಗಳು, ಋಷಿಗಳ ಕಾಲ ಮುಗಿದು (ದೇವತೆಗಳ ಕಾಲ ಮುಗಿಯುವುದು ಅಸಾಧ್ಯ, ಅವರು ಅಮರರು, ನಿರ್ಜರರು ಎನ್ನುವವರಿದ್ದಾರೆ. ಆ ಮಾತು ಅಂತಿರಲಿ. ಋಷಿಗಳದಂತೂ ಮುಗಿಯಿತಲ್ಲ. ಈಗ ಅವರದೇನಿದ್ದರೂ ಪ್ರವರದಲ್ಲಿ ಐಕ್ಯವಾಗಿರುವುದಷ್ಟೇ ಕೆಲಸ.) ಇತಿಹಾಸದ ಕಾಲಘಟ್ಟಕ್ಕೆ ತೆರಳಿದರೆ ಡ್ರೆಸ್ ಕೋಡ್ ಬದಲಾಗಿರುವುದು ಕಂಡುಬರುತ್ತದೆ. ಶ್ರೀಕೃಷ್ಣದೇವರಾಯನಿಂದ (ಅವನಿಗಿಂತ ಮುಂಚಿನ ರಾಜರೂ ಸಹ) ಶ್ರೀಜಯಚಾಮರಾಜ ಒಡೆಯರ ಕಾಲದವರೆಗೆ ಎಲ್ಲ ರಾಜರೂ ಸೊಗಸಾದ ವಸ್ತ್ರಗಳನ್ನು ಧರಿಸಿದವರೇ. ಈ ಸಮಯಕ್ಕೆ ಚಳಿ ಭಾರತಕ್ಕೆ ಕಾಲಿಟ್ಟಿತ್ತೆಂದು ತೋರುತ್ತದೆ. ಉತ್ತರಭಾರತದ ಅಶೋಕನೂ ಫುಲ್ ಡ್ರೆಸ್‌ನಲ್ಲೇ ಇರುತ್ತಿದ್ದ. ಈ ಸಮಯದಲ್ಲೆಲ್ಲೋ ತೂರಿಬಂದ ಚಳಿ ನಂತರ ಮನುಕುಲದ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿತು ಎನಿಸುತ್ತದೆ.
ಚಳಿ-ಮಳೆಗಳ ಕಾಲವನ್ನು ನಮ್ಮ ಕವಿಗಳು ಹೇಗೆ ಬಣ್ಣಿಸುವರೆಂಬ ಕಲ್ಪನೆಯೂ ಚೆಂದವೇ. ಪಂಪನು ಬೈ ಚಾನ್ಸ್ ಚಳಿಯಿಂದ ನಡುಗಿದ್ದಿದ್ದರೆ (ಪ್ಲೀಸ್ ನೋಟ್ - ಪಂಪ ಶರ್ಟ್ ಹಾಕಿಕೊಂಡ ಚಿತ್ರ ಎಲ್ಲಿಯೂ ಇಲ್ಲ)

ಥಣ್ಣನೆ ಗಾಳಿ ಸೋಂಕಿದೊಡಂ ಛಳ್ಛಳಿಯಾದೊಡೆಂ ತಣ್ಪೆನಿಸುವ ಮಾರ್
ಬಲ್ ನೆಲ ತುಳಿದೊಡೆಂ ಬಿರಿದ ಪಾದತಲವಂ ಸೃಜಿಸಿದ ಶೀತಲಂ |
ಕೋಳ್ಡ್ ಕ್ರೀಮ್ ಕೇಳ್ದೊಡಂ ಕಾಫಿಯುತ್ಸವಮಾದೊಡೆಂ ಏನನೆಂಬೆನಾ
ರಂಕುಶವಿಟ್ಟೊಡಂ ನೆನೆವುದೆನ್ನ ಮನಂ ರುಚಿಖಾರ ಪಕೋಡವಂ ||

ಎಂದು ಬರೆಯುತ್ತಿದ್ದನೆಂಬುದರಲ್ಲಿ ಅನುಮಾನವೇ ಇಲ್ಲ. ಮುಂದುವರಿದಂತೆ ಮನೋರಮೆಯು ಮುದ್ದಣನ ಬಳಿ ಸಾರಿ ‘ಸುಳಿದ ಗಾಳಿಯ ತಣ್ಪು ತಾಳುವ ಹಚ್ಚಡವನ್ನೇ ನೀಡು’ ಎಂದು ಉಲಿದಿರುತ್ತಿದ್ದಳು. ಕೆ.ಎಸ್.ನರಸಿಂಹಸ್ವಾಮಿಗಳಂತೂ


ಒಂದಿರುಳು ನಡುಗುತಲಿ ನನ್ನವಳ ಕೇಳಿದೆನು ಥಂಡಿ ನಿನಗಾವುದೆಂದು
ನಮ್ಮೂರು ಚಳಿಯೂರು ನಿಮ್ಮೂರು ನಡುಗೂರು ನೆಗಡಿ ನಿನಗಾವುದೆಂದು |
ನಮ್ಮೂರು ಥಂಡಿಯೋ ನಿಮ್ಮೂರು ಶೈತ್ಯವೋ ಎಂದೆನ್ನ ಕೇಳಲೇಕೆ?
ನಮ್ಮೂರ ಮಂಚದಲಿ ನಿಮ್ಮೂರ ರಗ್ಗುಗಳೇ ಬೆಚ್ಚಗೆಂದು ಹೇಳಬೇಕೆ?
ನಮ್ಮೂರು ಥಂಡಿಯೋ ನಿಮ್ಮೂರು ಶೈತ್ಯವೋ ಎಂದೆನ್ನ ಕೇಳಲೇಕೆ
ನಿದ್ರಿಸುವೆ ಸುಮ್ಮನಿರಿ ಎಂದಳಾಕೆ |

ಎಂದು ಬರೆಯುತ್ತಿದ್ದರೋ ಏನೋ. ಕವಿಗಳಿಗೆ ವಸಂತಮಾಸ ಹಿಡಿಸಿದಷ್ಟು ಹುಚ್ಚನ್ನು ಇನ್ನಾವ ಮಾಸವೂ ಹಿಡಿಸದಿದ್ದರೂ ‘ಬೆಚ್ಚನೆಯ ಭಾವ’ ಮೂಡಿಸಲು ಅಕ್ಕರೆಯ ಚಳಿಗಾಲಕ್ಕೆ ಆದ್ಯತೆ ನೀಡುವವರೂ ಇದ್ದಾರು.

ಚಳಿಗೂ ನೆಗಡಿಗೂ ಅವಿನಾಭಾವ ಸಂಬಂಧವಿರುವುದು ತಿಳಿದಿರುವ ಸಂಗತಿಯೇ. ಈ ವರ್ಷದ ‘ಕಂಡಲ್ಲಿ ಗುಂಡು’ ಹಾಕಲು ಪ್ರಚೋದನೆ ನೀಡುವಷ್ಟರ ಮಟ್ಟದ ಚಳಿಯಲ್ಲಿ ಗುಂಡೇರಿಸಿಯೂ, ಜೋಗದಲ್ಲಿ ಧುಮುಕುವ ನೀರಿನಂತೆ ಧುಮುಕುತ್ತಿರುವ ಥಂಡಿಯ ಕಾರಣ ನೆಗಡಿಯ ಕೋಳಗಳಿಗೆ ಸಿಲುಕಿಕೊಂಡ ನೆಗಡೀಶ ಸೀನೇಶ ಕೆಂಬAಧಿಯು ತನ್ನ ಗೋಳನ್ನು ‘ಪಂಚಮ ವೇದ’ ಹಾಡಿನ ಧಾಟಿಯಲ್ಲಿ ಈ ಪರಿಯಲ್ಲಿ ತೋಡಿಕೊಂಡಿದ್ದಾನೆ:




ಥಂಡಿಯ ಜೋಗ ತಂದಿದೆ ರೋಗ
ನೆಗಡಿಯ ಸೊರಬರ ನಾನಾ ರಾಗ |
ಹೃದಯ ತುಂಬಿದ ಶೈತ್ಯಾನುಬಂಧ
ಸರ‍್ರರ‍್ರಕೆ ಶ್ಲೇಷ್ಮಾನುಬಂಧ |
ಸೋನೆ ವರ್ಷಕೆ ಪರವಶವೀ ಧರೆ
ಪೃಥ್ವಿಯ ಹಾಸಿಗೇ ಶೀತಲ ಗಾರೆ
ಮೋಡದಿಗಂತದ ಕೋಲ್ಡು ಸ್ಟೋರೇ
ಸೂರ್ಯನೆ ಕಾಣದ ಮಂಜಿನ ಧಾರೆ |

ಇಂತಹ ಚಳಿಯನ್ನು ಶಪಿಸುವ ಬದಲಿಗೆ ಇದರೊಡನೆ ಹೊಂದಿಕೊಂಡರೆ ಮತ್ತೂ ಚೆನ್ನ.
ಬೆಚ್ಚನೆ ಬಟ್ಟೆಯ ಪದರಗಳಲ್ಲಿ ಕರ್ಣಕೆ ಗಿಡುಕಿದ ಅರಳೆಗಳಲ್ಲಿ
ಹಚ್ಚನೆ ಹಸುರಲು ಹಚ್ಚಡ ಹೊದೆದು ಹೆಜ್ಜೆಯನಿರಿಸಲು ಹಾವುಗೆ ಮೆರೆದು
ನರನು ಹೊರಟಿಹನು ನೋಡಿದಿರಾ ! 
ಕೆಂಪನೆ ಕರಿದಿಹ ಬೋಂಡಗಳೆಡೆಗೆ ಚಪ್ಪರಿಸುವ ರುಚಿ ಪಕೋಡದೆಡೆಗೆ
ಕೊಂಚವೆ ಹೀರಲು ಮದ್ಯದ ಎಡೆಗೆ ಚಿಪ್ಸಿನ ಚಾಪ್ಸಿನ ಕಾರಗಳೆಡೆಗೆ
ನರನು ಹೊರಟಿಹನು ನೋಡಿದಿರಾ |
ಎಂದು ಬೇಂದ್ರೆ ಅಜ್ಜನನ್ನು ನಮ್ಮದೇ ಧಾಟಿಯಲ್ಲಿ ನೆನೆಯುತ್ತಾ ಸಾಗಿದರೆ ಎಂತಹ ಚಳಿಯೂ ಸಹ್ಯವಾದೀತು. ಚಳಿಗಡಗಡಂ ಗೆಲ್ಗೆ! ಚಳಿಗಡಗಡಂ ಬಾಳ್ಗೆ!

Comments

  1. absolutely humorous & I can relate to my Delhi winter too. ನಮ್ಮೂರು ಥಂಡಿಯೋ ನಿಮ್ಮೂರು ಶೈತ್ಯವೋ coulld not stop laughing sir. ha ha ha ha . is it possible to post full song ಥಂಡಿಯ ಜೋಗ ತಂದಿದೆ ರೋಗ in panchamaveda style ?

    ReplyDelete

Post a Comment