ಮಣ್ಣು ಪುರಾಣವು

ಮಣ್ಣು ಪುರಾಣವು

ಹಾಸ್ಯ ಲೇಖನ - ಅಣುಕು ರಾಮನಾಥ್ 


‘ಆ್ಯಪಿ ಸಾಯಿಲ್ ಡೇ ಮೈ ಸನ್’ ಎಂದರು ಮಣ್ಣಿನ ಮಗ. ಅಂದು ವಿಶ್ವ ಮಣ್ಣಿನ ದಿನವಾಗಿತ್ತು.

‘ಆಚರಣೆ ಹೇಗೆ?’ಕೇಳಿದ ಮಣ್ಣಿನ ಮೊಮ್ಮಗ.

‘ಬೆಳಗ್ಗೇನೇ ಕಳಿಸಿವ್ನಿ. ಕಾಡಿನ ಪಕ್ಕದ ಆರೆಕರೆ ಜಮೀನು ಇವತ್ತು ಸಂಜೆಯಹೊತ್ತಿಗೆ ಏಳೆಕರೆ ಜಮೀನಾಗತ್ತೆ’

 ಮ.ಮೊ. ಅಚ್ಚರಿಯಿಂದ ದಿಟ್ಟಿಸಿದ. ಭೂಮಿಯೂ ಎಲಾಸ್ಟಿಕ್‌ನಂತೆ ಹಿಗ್ಗಲು ಸಾಧ್ಯವೆ?

‘ಕಾಡು ದೇಶದ ಸಂಪತ್ತು. ಜನ ದೇಶದ ಸಂಪತ್ತು. ಆದ್ದರಿಂದ ಕಾಡು ಜನರ ಸಂಪತ್ತು’ ಇಲ್ಲದ ಮೀಸೆಯ ಅಡಿಯಲ್ಲಿ ನಗುತ್ತಾ ನುಡಿದರು ಮ.ಮ.

ಮಣ್ಣಿಗೂ, ಮನುಷ್ಯನಿಗೂ ಬಿಡಿಸಲಾಗದ ನಂಟು ಎನ್ನುವುದಕ್ಕೆ ಮಣ್ಣಿನ ವಿಷಯದಲ್ಲಿಯೇ ಕಗ್ಗಂಟಾಗಿ ಇತ್ಯರ್ಥವಾಗದ ದಶಕಗಳ ಹಳೆಯ ಕೇಸುಗಳ ಗುಡ್ಡವೇ ಸಾಕ್ಷಿ. ೧೯೬೦ರ ದಶಕದ ‘ಫಿರ್ ಸುಬಹ್ ಹೋಗಿ’ ಚಿತ್ರದಲ್ಲಿ ‘ಚೀನೋ ಅರಬ್ ಹಮಾರಾ; ಹಿಂದೂಸ್ತಾನ್ ಹಮಾರಾ; ರೆಹನೇ ಕೊ ಘರ್ ನಹೀ ಹೈ; ಸಾರಾ ಜಹಾ ಹಮಾರಾ’ ಎನ್ನುವ ಹಾಡು ಸ್ವಾಮ್ಯಕ್ಕೂ, ಅನುಭೋಗಿಸುವುದಕ್ಕೂ ಬಹಳವೇ ಅಂತರವಿದೆ ಎಂಬುದನ್ನು ಸೊಗಸಾಗಿ ಸೂಚಿಸಿತ್ತು. ಬ್ರಹ್ಮನನ್ನೂ, ಮಡಿಕೆ ಕೆಲಸದಲ್ಲಿ ನಿರತನಾದವನನ್ನೂ ಭಕ್ತ ಕುಂಬಾರ ಚಿತ್ರದ ಈ ಹಾಡು ಹೋಲಿಸಿರುವ ರೀತಿಯೇ ಚೆನ್ನ:

ಮಣ್ಣಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದ ಕುಂಬಾರ ನಾನು

ಜೀವಿಗಳೆಂಬೊ ಗೊಂಬೆಯ ಮಾಡೋ ಬ್ರಹ್ಮನ ತಂದೆ ಕುಂಬಾರ ನೀನು

ಎನ್ನುವುದು ಒಂದು ವಿಧವಾದ ರಿವರ್ಸ್ ಜೀನಿಯಾಲಜಿ. ಅಪ್ಪನ ಕಾಯಕವನ್ನು ಗುರುತಿಸಿ ‘ಕಮ್ಮಾರನ ಮಗ ಕಮ್ಮಾರ’, ‘ಮಡಿವಾಳನ ಮಗ ಮಡಿವಾಳ’ ಎನ್ನುವುದು ವಾಡಿಕೆಯಾದರೆ ಇಲ್ಲಿ ಗೊಂಬೆ ತಯಾರಿಕೆಯ ಮೂಲಕ ಕುಂಬಾರವೃತ್ತಿ ಕೈಗೊಂಡ ಬ್ರಹ್ಮ ಕುಂಬಾರನಾದ್ದರಿಂ ಅವರ ಅಪ್ಪನೂ ಕುಂಬಾರನರಂಬುದು ಅತ್ಯಂತ ವಿಶಿಷ್ಟವಾದ ವಾದವಾಗಿದೆ.

ಬ್ರಹ್ಮನ ವಿಷಯ ಬಂದಾಗ ಮಾಸ್ಟರ್ ಹಿರಣ್ಣಯ್ಯನವರ ನೆನಪಾಗುತ್ತಿದೆ. ಒಂದು ನಾಟಕದ ಸನ್ನಿವೇಶದಲ್ಲಿ ಬ್ರಹ್ಮನ ಮುಂದೆ ಶಾಪವನ್ನು ಪಡೆದ ಮುನಿಯೊಬ್ಬನು ನಿಂತು ‘ದೇವದೇವ, ನನ್ನ ಶಾಪವನ್ನು ಹಿಂತೆಗೆದುಕೊ’ ಎನ್ನುತ್ತಾನೆ. ಬ್ರಹ್ಮನು ‘ಒಮ್ಮೆ ಕೊಟ್ಟ ಶಾಪವನ್ನು ಹಿಂದಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ’ ಎನ್ನಬೇಕು. ಮುನಿಯ ಪಾತ್ರಧಾರಿ ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯನವರು. ಬ್ರಹ್ಮನ ಪಾತ್ರದಲ್ಲಿ ಅವರ ಮಗ ಮಾಸ್ಟರ್ ಹಿರಣ್ಣಯ್ಯ ನಟಿಸುತ್ತಿದ್ದರು. ಮುನಿಗಳ ಡೈಲಾಗ್ ಸರಿಯಾಗಿ ಮೂಡಿತು. ಮಾಸ್ಟರ್ ‘ಒಮ್ಮೆ ಕೊಟ್ಟ ಶಾಪವನ್ನು ರಿಟರ್ನ್ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದುಬಿಟ್ಟರು. ಮಗನಿಗೆ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದ ಅವರು ‘ಏನೆಂದಿರಿ ಬ್ರಹ್ಮದೇವ?’ ಎಂದರು. ಮಾಸ್ಟರ್ ಮತ್ತೆ ‘ರಿಟರ್ನ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ’ ಎಂದು ನಕಾರಾತ್ಮಕವಾಗಿ ತಲೆಯಾಡಿಸುತ್ತಾ ನುಡಿದಾಕ್ಷಣ ಭುಗಿಲೆದ್ದ ಕಲ್ಚರ್ಡ್ ಕಮೆಡಿಯನ್ ‘ನೀನು ನಿಜಕ್ಕೂ ನನ್ನ ಮಗನೇನೋ? ಬ್ರಹ್ಮದೇವ ರಿಟರ್ನ್ ಎನ್ನುವನೇನು? ಥೂ...’ ಎನ್ನುತ್ತಾ ಮದ್ರಿಸಲಾಗದ ಬೈಗುಳವನ್ನು ಆರಂಭಿಸುತ್ತಿದ್ದಂತೆಯೇ ಬ್ರಹ್ಮದೇವನ ಕಿರೀಟವನ್ನು ಕಳಚಿಟ್ಟ ಮಾಸ್ಟರ್ ಒಂದೇ ಉಸಿರಿನಲ್ಲಿ ಸ್ಟೇಜಿನಿಂದ ಓಡಿಹೋದರು!

ಮಾಸ್ಟರ್ ಮತ್ತು ಬ್ರಹ್ಮನ ಉಲ್ಲೇಖ ಒಟ್ಟಿಗೆ ಬಂದದ್ದು ಅವರನ್ನು ‘ಜಗತ್ತಿನಲ್ಲಿ ಹೆಚ್ಚಾಗಿ ಹಾಸ್ಯಪಟುಗಳೆಲ್ಲ ಕುಳ್ಳರೇ ಇರುತ್ತಾರಲ್ಲಾ, ಯಾಕೆ?’ ಎಂದು ನಾನು ಪ್ರಶ್ನಿಸಿದಾಗ.

‘ಬ್ರಹ್ಮ ಇವತ್ತಿನ ಸಾಫ್ಟ್ ವೇರ್ ಇಂಜಿನಿಯರುಗಳಂತೆ ಬಿಡುವಿಲ್ಲದೆ ಕೆಲಸ ಮಾಡ್ತಾ ಕೂತಿದ್ದ. ಜೊತೆಯಲ್ಲಿ ಸತಿ ಸರಸ್ವತಿಯೂ ಕೂತಿದ್ಳು. ಮಾತಾಡ್ತಾ ಆಡ್ತಾ ಸರಸ್ವತಿ ಏನೋ ಜೋಕ್ ಹೇಳಿದಳು. ಬ್ರಹ್ಮ ಜೋರಾಗಿ ನಗ್ತಾ ಅವನು ಮಾಡಿದ್ದ ಗೊಂಬೆಯ ಮೇಲೆ ರಪ್ಪಂತ ಕೈ ಇಳಿಸಿಬಿಟ್ಟ. ಗೊಂಬೆ ಮಾಮೂಲಿಗಿಂತ ಕುಳ್ಳಾಗಿಹೋಯಿತು. ಇನ್ನಷ್ಟು ಮಣ್ಣು ತೆಗೆದುಕೊಂಡು ಉದ್ದ ಮಾಡಲು ಬ್ರಹ್ಮಲೋಕದ ರೈಲ್ಸಲ್ಲಿ ಪ್ರಾವಿಷನ್ ಇರಲಿಲ್ಲ. ಒಂದು ಗೊಂಬೆಗೆ ಇಷ್ಟೇ ಮಣ್ಣು ಅನ್ನೋ ರೇಷನ್ ಇಂದಿಗೂ ಅಲ್ಲಿದೆ. ‘ಛೆ! ಕುಳ್ಳ ಆಗ್ಬಿಟ್ನಲ್ಲಾ... ಎಲ್ಲಾ ನಿನ್ನ ಜೋಕ್ ಪ್ರಭಾವ’ ತನ್ನೆಲ್ಲ ತಪ್ಪುಗಳನ್ನು ಹೆಂಡತಿಯ ಮೇಲೆ ಹಾಕುವುದರಲ್ಲಿ ಬ್ರಹ್ಮನೂ ಹಿಂದೆ ಬೀಳಲಿಲ್ಲ. ‘ನನ್ನಿಂದಾದ ತಪ್ಪನ್ನು ನಾನೇ ಸರಿಪಡಿಸುತ್ತೇನೆ. ಇವನಿಗೆ ಹೆಚ್ಚಿನ ಹಾಸ್ಯ ಮನೋಭಾವ ತುಂಬಿಬಿಡುತ್ತೇನೆ’ ಅಂತ ಸರಸ್ವತಿ ಗೊಂಬೆಯಲ್ಲಿ ಹ್ಯೂಮರ್ ತುಂಬಿದಳು. ಅವತ್ತಿನಿಂದ ಎತ್ತರದವರಿಗಿಂತ ಕುಳ್ಳರೇ ಜಾಸ್ತಿ ವಿನೋದಪ್ರಿಯರು. ಇದಕ್ಕೆ ಚಾಪ್ಲಿನ್, ನಾನು, ನರಸಿಂಹರಾಜು, ಕೈಲಾಸಂ ಈ ತರಹದ ಬೇಕಾದಷ್ಟು ಉದಾಹರಣೆಗಳಿವೆ’ ಎಂದಿದ್ದರು ಮಾಸ್ಟರ್. 



ಬ್ರಹ್ಮ ಮತ್ತು ಮಾಸ್ಟರ್ ಕುರಿತಾದ ಮತ್ತೊಂದು ಕಾಲ್ಪನಿಕ ಸನ್ನಿವೇಶವೂ ರಂಜನೀಯವೆ. ಯಾವುದೋ ಸಮಾರಂಭ; ಮಾಸ್ಟರರ ಅಕ್ಕಪಕ್ಕದಲ್ಲಿ ಕುಳಿತಿದ್ದವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು. ಮಾಸ್ಟರ್ ಮಾತ್ರ ಕಾಲುಗಳನ್ನು ಇಳಿಬಿಟ್ಟು ಕುಳಿತಿದ್ದರು. ಪ್ರೇಕ್ಷಕರಲ್ಲೊಬ್ಬ ‘ನೋಡೋ, ಎಷ್ಟೇ ದೊಡ್ಡವರಾದರೂ ಎಷ್ಟು ಸರಳವಾಗಿ ಕೂತಿದ್ದಾರೆ! ಅಕ್ಕಪಕ್ಕದವರಿಗೆ ಪೊಗರು’ ಎಂದಿದ್ದನ್ನು ಕೇಳಿಸಿಕೊಂಡ ಮಾಸ್ಟರ್ ತಮ್ಮ ಮಾತಿನ ಅವಕಾಶ ಬಂದಾಗ ‘ಬ್ರಹ್ಮ ನನ್ನನ್ನು ಸೃಷ್ಟಿಸಲು ನಿಗದಿತ ಪ್ರಮಾಣದ ಮಣ್ಣು ತೊಗೊಂಡ. ಮೊದಲು ತಲೆಯ ಕಡೆಯಿಂದ ಮಾಡಿಕೊಂಡು ಬಂದ. ತಲೆಗೆ ಒಂದು ಮುದ್ದೆ ಇಟ್ಟು, ಮೈಗೆ ಇನ್ನೊಂದು ಮುದ್ದೆ ತೊಗೊಂಡ. ಆ ಮುದ್ದೆ ಸ್ವಲ್ಪ ದಪ್ಪವಾಗ್ಹೋಯ್ತು. ಅದಕ್ಕೇ ನನ್ನ ಮೈ ಕೊಂಚ ದಪ್ಪವೇ. ತಲೆ, ಮೈಗಳಾದಮೇಲೆ ಕಾಲುಗಳನ್ನು ಮಾಡಲು ನೋಡಿದರೆ ಸ್ವಲ್ಪವೇ ಮಣ್ಣು ಉಳಿದಿತ್ತು. ಅದರಲ್ಲೇ ಎಷ್ಟಾಗತ್ತೋ ಅಷ್ಟು ಕಾಲು ಮಾಡಿ ಕೈ ಬಿಟ್ಟ. ದೇಹ ದೊಡ್ಡದು, ಕಾಲುಗಳು ಚಿಕ್ಕವು ಆದವು. ಈಗ ನಾನೇನಾದರೂ ಕಾಲ ಮೇಲೆ ಕಾಲು ಹಾಕಿಕೊಂಡು ಕೂತರೆ ಮತ್ತೆ ಯಥಾಸ್ಥಿತಿಗೆ ಕಾಲನ್ನು ತರಬೇಕಾದರೆ ಕ್ರೇನ್ ತರಬೇಕಾಗತ್ತೆ’ ಎಂದು ಸ್ಪಷ್ಟನೆ ಇತ್ತರು.

‘ವರ್ಲ್ಡ್ ಸಾಯಿಲ್ ಡೇ’ ಎಂದರೆ ಮಣ್ಣಿನೊಡನೆಯೇ ಇರುವ ಜಲ, ಬಂಡೆಗಳನ್ನೂ ಪರಿಗಣಿಸಬಹುದು. ಈ ತ್ರಿವಸ್ತುಗಳನ್ನು ಕುರಿತೇ ‘ಕಲ್ಲಾದರೆ ನಾನು ಬೇಲೂರಿನ ಶಿಲೆಯಾಗಿರುವೆ’ ಎಂಬ ಸೊಗಸಾದ ಹಾಡಿದೆ. ಅದು ಅಂದಿನ ಕಾಲ. ಈಗ ‘ಕಲ್ಲಾದರೆ ನಾನು ಗಣಿರಾಜರ ಮನೆಯಲಿ ಇರುವೆ; ಮಣ್ಣಾದರೆ ನಾನು ಭೂಗಳ್ಳರ ಜೊತೆಯಲಿ ಮೆರೆವೆ; ಮರವಾದರೆ ನಾನು ಕಾಡಿನ ಸಚಿವರ ಮನೆಗೆ; ನೀರಾದರೆ ನಾನು ಪರನಾಡಿನ ದಿಕ್ಕಿಗೆ ಹರಿವೆ’ ಎಂಬುದೇ ಸಮಂಜಸ. 



ಮಣ್ಣಿನ ಗುಣಗಳು ಅಗಣಿತ. ಆಷಾಢದ ದಿನಗಳಲ್ಲಿ ಗಾಳಿಯೊಡನೆ ಸರಸವಾಡುತ್ತಾ ಎಲ್ಲೆಡೆಗೆ ಏಳುವ ಧೂಳು ಮಣ್ಣು ಎಷ್ಟೋ ಕಣ್ಣಿನ ಡಾಕ್ಟರುಗಳಿಗೆ ಉದ್ಯೋಗ ಒದಗಿಸುತ್ತದೆ. ಕಾಲರ್‌ನ ಸಂದಿಗಳಲ್ಲಿ ಸೇರಿ ಅಗಸವೃತ್ತಿಗೆ ಆಶಾದೀಪವಾಗಿ ಗೋಚರಿಸುತ್ತದೆ. ಗರ್ಭಿಣಿಯರಿಗೆ ಮಣ್ಣು ತಿನ್ನುವುದೆಂದರೆ ಬಹಳ ಇಷ್ಟ. ‘ಸ್ತ್ರೀ ಸಮಾನತೆ’ಗೆ ಗೌರವ ನೀಡುವ ಕೆಲವು ಗಂಡಸರೂ ಕೆಮ್ಮಣ್ಣಿನ ಉಂಡೆಗಳನ್ನು ಆಗಾಗ್ಗೆ ಕದ್ದು ತಿನ್ನುವುದುಂಟು. ಒಂದು ವಿಶಿಷ್ಟವಾದ ಗಂಧ ಮತ್ತು ರುಚಿಯನ್ನು ಹೊಂದಿರುವ ಕೆಮ್ಮಣ್ಣು ಕೆಲವರಿಗಂತೂ ಮಾದಕವಸ್ತುವಿನಷ್ಟೇ ಚಟೋತ್ಪಾದಕ.

‘ಮಣ್ಣಿನ ಋಣ ತೀರಿಸಲಾಗದು ಎನ್ನುವರಲ್ಲೋ?’ ಸೀನುವನ್ನು ಅಂದೊಮ್ಮೆ ಕೇಳಿದೆ.

‘ನಿಜ. ಅದಕ್ಕೇ ಸರ್ಕಾರ ಸಾಲ ಮನ್ನಾ ಮಾಡೋದು’ ಹೇಳಿದ ಸೀನು.

‘ಜಗತ್ತಿನಲ್ಲಿ ಅತಿ ಮುಖ್ಯವಾದುದು ಹೊನ್ನೋ ಹೆಣ್ಣೋ ಮಣ್ಣೋ?’ ಎಂದೆ.

‘ಮಣ್ಣೇ. ಮಿಕ್ಕೆರಡೂ ಕಡೆಗೆ ಇಲ್ಲಿಯೇ ಬಂದು ನೆಲೆಸುವುದು’ ಎಂದನವ.

‘ಕೆಲವರ ಕೃತಿಗಳಲ್ಲಿ ಮಣ್ಣಿನ ವಾಸನೆ ಇರುತ್ತದೆ ಎನ್ನುವರಲ್ಲ, ಹಾಗೆಂದರೆ ಏನು?’ ಎಂದೆ.

‘ಓದದೆ ಇಟ್ಟಿದ್ದು, ಕಾಲಕ್ರಮೇಣ ಜಗತ್ತಿನ ಅತಿ ಶ್ರೇಷ್ಠ ವಿಮರ್ಶಕನಾದ ಗೆದ್ದಲು ಹತ್ತಿ ಮಣ್ಣು ಹಿಡಿದಾಗಿನ ವಾಸನೆ’ ಸಿದ್ಧವಾಗಿತ್ತು ಸೀನುವಿನ ಉತ್ತರ.

ಮಣ್ಣಿನ ಭಾಷೆಯೇ ವಿಚಿತ್ರ. ಮಣ್ಣಾಂಗಟ್ಟಿಯಲ್ಲಿ ಗಟ್ಟಿತನ ಇರುವುದೇ ಇಲ್ಲ. ‘ಮಣ್ಣು ಮಾಡಿದರು’ ಎಂದಾಗ ಎಷ್ಟೋ ಸಂದರ್ಭಗಳಲ್ಲಿ ಶವಕ್ಕೆ ಮಣ್ಣು ತಗುಲಿರುವುದೇ ಇಲ್ಲ; ಶವಪೆಟ್ಟಿಗೆಯಲ್ಲಿ ಸುಭದ್ರವಾಗಿ ಮಲಗಿರುತ್ತದೆ. ‘ಮಣ್ಣಿನ ಮಕ್ಕಳು’ ಎಂದು ಕರೆದುಕೊಳ್ಳುವ ಎಷ್ಟೋ ಜನರು ಎಂದಿಗೂ ನೇಗಿಲಿಗೆ ಕೈ ಇಟ್ಟಿರುವುದಿಲ್ಲ. ಕ್ರಿಕೆಟ್ ಮ್ಯಾಚುಗಳಲ್ಲಂತೂ ಎಷ್ಟೋ ಟೀಮುಗಳು ‘ಮಣ್ಣು ಮುಕ್ಕಲು’ ಭಾರಿ ಮೊತ್ತವನ್ನು ಪಡೆಯುವುದರಿಂದ ಅವು ಮುಕ್ಕಿದ್ದು ಮಣ್ಣೋ, ಹಣವೋ ಎಂಬ ಗೊಂದಲವೇಳುತ್ತದೆ.

ಗುರುಗಳ ಆಶ್ರಮದಲ್ಲಿದ್ದು ಉದ್ಧಾರವಾಗದ ಶಿಷ್ಯನ ಕೋರಿಕೆಯೊಡನೆ ಈ ಲೇಖನಕ್ಕೆ ಮಂಗಳ ಹಾಡೋಣ:

‘ಗುರುಗಳೇ, ನಿಮ್ಮ ಪಾದಧೂಳಿ ನಮ್ಮ ತಲೆಯ ಮೇಲಿರಲಿ. ಆದರೆ ಅದು ಎಂದಿಗೂ ನಮ್ಮ ಕಣ್ಣನ್ನು ಹೊಕ್ಕು ದೃಷ್ಟಿ ಮಂಜಾಗಿಸದಿರಲಿ!’


Comments

  1. ಆಫ್ರಿಕಾದ ಮತ್ತು ಇತರ ಭೂಭಾಗಗಳ ಕೆಲವು ಮೂಲ ನಿವಾಸಿಗಳು ಆರೋಗ್ಯ ದೃಷ್ಟಿಯಿಂದ ಈಗಲೂ ಕೆಲವು ಬಗೆಯ ಮಣ್ಣುಗಳನ್ನು ತಿನ್ನುತ್ತಾರಂತೆ. ಇದಲ್ಲದೆ kaoline, bentonite ಮುಂತಾದ ಮಣ್ಣುಗಳನ್ನು Allopathic ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಹೀಗಾಗಿ "ಮಣ್ಣು ತಿನ್ನುವುದು" ಎಂದರೆ ಸೋಲನ್ನೊಪ್ಪಿಕೊಳ್ಳುವುದು ಅಥವಾ ಅಪಮಾನಿತರಾಗುವುದು ಎಂದು ಅರ್ಥೈಸಬೇಕಾಗಿಲ್ಲ, ಬದಲಿಗೆ, ಸ್ವಾಭಾವಿಕವೆಂದೇ ತಿಳಿಯಬೇಕು!😊😊

    ReplyDelete
    Replies
    1. ನಿಮ್ಮ ಓದು, ಬದುಕಿನ ಹರಹನ್ನು ಸಮೀಪಿಸುವುದೂ ಕಷ್ಟವೇ. ಇನ್ನಷ್ಟು ಮತ್ತಷ್ಟು ವಿಷಯಗಳನ್ನು ನಿಮ್ಮಿಂದ ಅರಿಯಬಯಸುವೆ.

      Delete
  2. Sri Ramachandrana Vamsha Raghu Vamsha. E Vamshada Raja Dileepa. Avana Hendathi Garbhiniyaagiddaga ( Raghu ge Janma Koduva Sandarbha ) Raja Rani Ibbaaroo Aramaneya Teresinalli nadedaaduttiddaaga Ade taane male bandu nintittante. Varshada Modala Male. Mannina Ghama baruttittu. Raja Sahajavaagi Garbhini Hendadiya Aase Enu antha Kelidananthe.Adakke Rani Nanage Ondu Hidi Mannu Tarisikodi Tinnabeku Anistide Andalanthe. Raja achcharipattaaga Rani Nanu Mannu Tinnuva Uddesha Huttuva Nanna Maga Idi Bhoomandalavannu Alali ennuva Uddeshadinda Andalanthe. Bahala Hinde Garbhini Mahileyaru Mannu Tinnuva Paripaatavittu. ( Egina Mahileyaru Bere Bere Reetiyalli Gandanige Mannu Tinnisthaare )

    ReplyDelete
    Replies
    1. ನನಗೆ ಈ ವಿಷಯ ತಿಳಿದಿರಲಿಲ್ಲ ಬೇಲೂರ್. ಧನ್ಯವಾದಗಳು.

      Delete
  3. One of your best article Mr Ramanath. People say after all maNNu but you dig out great things out of it. Your article is enriched with old tradition as well as new technology. Superb. Please share if you have any blog or website

    ReplyDelete
    Replies
    1. Thank you madam. I do not have much in my blog; mostly articles from here. I will share it.

      Delete

Post a Comment