ಆಡುಗೂಲಜ್ಜಿಯ ಸಂದೂಕಿನಲ್ಲಿ

ಆಡುಗೂಲಜ್ಜಿಯ ಸಂದೂಕಿನಲ್ಲಿ

ಲೇಖನ - ಹೇಮಾ ಸದಾನಂದ್ ಅಮೀನ್ 


ಕಾಗಕ್ಕ ಗುಬ್ಬಕ್ಕನ ಜಾಣತನ ನರಿಯ ಕಪಟತನ;  ದುಷ್ಟನಾದರೂ ಗೋವಿನ ಮೂಕ ನೋವಿಗೆ ಕರಗುವ ಮಾತೃ ಹೃದಯದ ಹುಲಿಯ ಔದಾರ್ಯವನ್ನು ರಾಜಕುಮಾರಿ ಮನಸ್ಸಿನ ತಲ್ಲಣಗಳನ್ನು ಬಿಡಿ ಬಿಡಿಯಾಗಿ ದಿನ ದಿನ ಹೊಸ ರೀತಿಯಲ್ಲಿ ಹೊಸ ರಸದಲ್ಲಿ  ನೆನೆಸಿ ಅತೀ ಮುದ್ದಾಗಿ “ ಕುತೂಹಲಕಾರಿಯಾಗಿ ಮುಂದೇನು? ಎಂದು ಕಾತರ ಉಂಟು ಮಾಡುವ ಶೈಲಿಯಲ್ಲಿ  ಹೇಳಿಕೊಡುತ್ತಿದ್ದ ಅಜ್ಜಿಯ ಮಡಿಲಲ್ಲಿ ಮಲಗಿ ಎಲ್ಲರೂ ಕಥೆ ಕೇಳಿರಬಹುದು. ಆ  ಕಥೆ ಶುರುವಾಗುವುದೇ ಒಂದಾನ್ನೊಂದು ಕಾಲದಿಂದ . ಆ ಕಾಲ ಯಾವುದೆಂದು ಬಹುಶಃ ಅಜ್ಜಿಗೂ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅಜ್ಜಿ ಕಥೆಗಳು ಎಲ್ಲಿಯೂ ಬರೆದ ಉಲ್ಲೇಖಗಳಿರುತ್ತಿರಲಿಲ್ಲ.   ಬಾಯಿಂದ  ಬಾಯಿಗೆ ವರ್ಗಾವಣೆ ಆಗುತ್ತಾ ಬಂದಿರುವುದು. ಅಜ್ಜಿ ತನ್ನ ಮೊಮ್ಮಕ್ಕಳಿಗೆ ಹೇಳುವಂತಹ ಸೊಗಸಾದ ಕಥೆಗಳ ಸರಮಾಲೆಗಳಿಗೆ ಕೊನೆಯಿಲ್ಲ ಎನ್ನುವಂತೆ ಅಲ್ಲಿ ಪ್ರೀತಿಯೂ ಬರಪೂರ.  

ಕಥೆ ಹೇಳುವುದು ಒಂದು ಕಲೆ.  ಆ ಕಾಲದಲ್ಲಿ ಈ ಅಜ್ಜಿಯ ಕಥೆಗಳು ಒಂದು ರೀತಿಯ ನಿದ್ದೆಯ ಟಾನಿಕಿನಂತೆ  ಕೆಲಸ ಮಾಡುತಿತ್ತು. ಕೂಡು ಕುಟುಂಬಗಳಲ್ಲಿ ಮನೆಯ ತಾಯಿಯಂದಿರು ಎಲ್ಲಾ ಕೆಲಸ ಮಾಡಿ ಮುಗಿಸುವಷ್ಟರಲ್ಲಿ ಸುಸ್ತಾದ ಮಕ್ಕಳಿಗೆ ಮಲಗಲು ಚ್ವರೆ ಮಾಡುವ ಪುಟಾಣಿಗಳಿಗೆ ಅಜ್ಜಿಯಲ್ಲದೆ ಬೇರೆ ಯಾರೂ ಬೇಡ. ಅಜ್ಜಿಗೂ ಈ ಮುದ್ದು ಮಕ್ಕಳ ಸಹವಾಸವೇ ಸ್ವರ್ಗ.  ಕಥೆಯ ಚಾಲನೆಗೆ ‘ಹ್ಮೂ’  ಗುಟ್ಟುವುದು ಅತೀ ಅಗತ್ಯ. ಹ್ಮೂ ಗುಟ್ಟುವುದು ನಿಂತರೆ ಕಥೆಯೂ ನಿಂತಂತೆ.  



ಈಗಲೂ ನಮ್ಮ  ಬಾಲ್ಯದ ನೆನಪುಗಳಲ್ಲಿ ಸ್ಥಿರವಾಗಿರುವ ಅಜ್ಜಿಯ ಕಥೆಗಳ ಸಂದೂಕುಗಳನ್ನು ತೆರೆದರೆ ನಾವು  ಮೂರು ನಾಲ್ಕು ದಶಕ  ಹಿಂದೆ ಹೋಗುತ್ತೇವೆ.  ಆ ದಿನಗಳಲ್ಲಿ ನಮ್ಮ ಮನೋರಂಜನೆಗೆ ಸುಲಭವಾಗಿ ದಕ್ಕುವ  ವಸ್ತುಗಳೆಂದರೆ ಪುಸ್ತಕಗಳು.  ನಮ್ಮ ಮನೆಗೆ ಅಮ್ಮನಿಗಾಗಿ ಪ್ರಜಾಮತ ಬಂದರೆ ನಮಗೆ ಚಂದಮಾಮ.   ಆ ಪುಟ್ಟ  ಪುಸ್ತಕವನ್ನು ನಮ್ಮ ಸೋದರ ಮಾವನವರಂತೆ ಹೆಚ್ಚಿಕೊಂಡಿರುತ್ತಿದ್ದೆವು. ಹಾಗೂ ಅವುಗಳನ್ನು ಬಹಳ ಜತನದಿಂದ ಸಂಗ್ರಹ ಮಾಡಿಟ್ಟದ್ದೂ ಉಂಟು.   ತಿಂಗಳು  ಎರಡು ತಿಂಗಳಿಗೊಮ್ಮೆ ಆ ಪುಸ್ತಕಗಳನ್ನು ಓದುವಾಗ ಆ ಕಥೆ ಮತ್ತೆ ಅಷ್ಟೇ ಹೊಸದಾಗಿ ಸ್ವಾರಸ್ಯಕರವಾಗಿ ಅನಿಸುತ್ತಿತ್ತು. ಅಲ್ಲಿ ಬರುವ ಎಲ್ಲಾ ಕಥೆಗಳು ಸುಖಾಂತ್ಯವಾಗಿರುವುದರಿಂದ  ಅವು ಮೃದು ಮನಸ್ಸಿನ ಮಗುವಿನಿಂದ ಹಿಡಿದು ಮುದಿ ಜೀವಿಗಳಿಗೂ ಅಷ್ಟೇ ಪ್ರಿಯವಾಗಿರುತಿತ್ತು. ಅಷ್ಟೇ ಅಲ್ಲ, ಚಂದಮಾಮದಲ್ಲಿ ಬರುವಂತಹ  ಕಥೆಗಳಿಗೆ ಹೊಂದುವಂತಹ ಚಿತ್ರಗಳನ್ನು ನೋಡಿದಾಗ ನಮ್ಮ ಕನಸಿನ ರಾಜಕುಮಾರ ಹಾಗೂ ರಾಜಕುಮಾರಿಯರು ಹೀಗೆಯೇ ಇರಬೇಕೆಂದು ಮನದಲ್ಲಿಯೇ ಲೆಕ್ಕಹಾಕಿದ್ದು ಉಂಟು. 

ಮುಂಬಯಿಯಲ್ಲಿ ಮಯೂರವರ್ಮ ಪ್ರತಿಷ್ಠಾನ  ಕನ್ನಡ ವೆಲ್ಫೇರ್ ಸಹಯೋಗದಿಂದ ಹೊಸದಾಗಿ ಆಡುಗೂಲಜ್ಜಿಯ ಕಥೆಗಳು ಎಂಬ ಕಾರ್ಯಕ್ರಮದಲ್ಲಿ ಮುಂಬಯಿಯ ಹಿರಿಯ ಸಾಹಿತಿ ಡಾ. ಸುನೀತಾ ಶೆಟ್ಟಿ ಅವರು ತಮ್ಮ ಮಾತಲ್ಲಿ ಆಡುಗೂಲಜ್ಜಿಯ ಪರಿಚಯವನ್ನು, ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಅಜ್ಜಿ.  ತಾಂಬೂಲವನ್ನು  ಕುಟ್ಟಿ ಬಾಯಲ್ಲಿಟ್ಟು ಕಥೆ ಹೇಳುವ ಅಜ್ಜಿ. ಇಲ್ಲೊಂದು ಸುಂದರವಾದ ಓಗಟು  ನೋಡಿ 

“  ದೋಸೆ ಕಾವಲಿನಲ್ಲಿ ಏಳು  ದೋಸೆ. ಹಾಸುಗಲ್ಲಿನ ಮೇಲೆ ಆರು ದೋಸೆ  ಮೆಲುವಿನಲ್ಲಿ  ಹತ್ತು ದೋಸೆ ಈಗ ಹೇಳಿ ಎಷ್ಟು ದೋಸೆ?   ಈ ರೀತಿ ಮಕ್ಕಳಿಗೆ ಚಾಣ್ಯಕ್ಷತನ ಪ್ರಶ್ನೆಗಳನ್ನು ಹಾಕಿ ಇಂಥ ಸಾಹಿತ್ಯ ಪ್ರಕಾರದಲ್ಲಿ ಅವರಿಗೆ ಅಭಿರುಚಿ ಹುಟ್ಟುವಂತೆ ಮಾಡಬಹುದು. ಉತ್ತರ ಒಂದೇ.... ದೋಸೆ. ಇಂದಿನ ಮಕ್ಕಳು ಅಜ್ಜಿಯ ಹೇಳುವ ಕಥಾ ವಲಯಗಳಿಗಿಂತಲೂ  ತೀಕ್ಷ್ಣ ಬುದ್ದಿಯ ತಾಂತ್ರಿಕ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿ ನಮಗಿಂತಲೂ ಬೇಗ ಆಂಡ್ರಾಯ್ಡ್ ಮೊಬೈಲ್ ಹಾಗೂ  ಡಿಜಿಟಲ್ ಜಗತ್ತಿನ ಪರಿಚಯ ಅವರಿಗಾಗುವುದು. 

ಈ ನಿಟ್ಟಿನಲ್ಲಿ ಆಡುಗೂಲಜ್ಜಿಯ ಕಥೆಗಳು ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನ  ಪಡೆದಿದೆ. .  ಏನಿದು ಆಡುಗೂಲಜ್ಜಿಯ ಕಥೆಗಳೆಂದರೆ ಏನೆಂಬ ಪ್ರಶ್ನೆಗೆ ಹಲವು ಬಗೆಯ ವಿವರಗಳು ಸಿಕ್ಕಿವೆ. ಆದರೆ  ಪ್ರೊ|| ಜಿ. ವೆಂಕಟಸುಬ್ಬಯ್ಯನವರು ತಮ್ಮ "ಇಗೋ ಕನ್ನಡ" ನಿಘಂಟುವಿನಲ್ಲಿ "ಅಡುಗೂಲಜ್ಜಿ" ಎಂಬ ಶಬ್ಧವನ್ನು ನಿಖರವಾಗಿ ಹೀಗೆ ವಿಶ್ಲೇಷಿಸಿದ್ದಾರೆ : "ಅಡುಗೂಳಜ್ಜಿ" ಇದು ಸರಿಯಾದ ರೂಪ. ಜನರ ಮಾತಿನಲ್ಲಿ ಅದು "ಅಡುಗೂಲಜ್ಜಿ" ಆಗಿದೆ. ಅಡು = ಅಡುಗೆ ಮಾಡು, ಕೂಳು = ಅನ್ನ, ಅಜ್ಜಿ = ಮುದುಕಿ. ಅನ್ನವನ್ನು ಅಡುಗೆ ಮಾಡಿ ಬಡಿಸುವ ಮುದುಕಿ. ಹಿಂದಿನ ಕಾಲದಲ್ಲಿ ಎಲ್ಲ ಊರುಗಳಲ್ಲೂ ಇಂಥ ಮುದುಕಿಯರು ತಾವೇ ಸಂಪಾದನೆ ಮಾಡಿ ಜೀವನವನ್ನು ನಡೆಸುತಿದ್ದರು. ಇವರ ಮನೆಗೆ ಬಂದವರು ಆಡುವ ಮಾತುಗಳನ್ನೆಲ್ಲ ಕೇಳಿ ಮುದುಕಿ ಸಮಾಚಾರಗಳನ್ನು ಹರಡುತ್ತಿದ್ದಳು. ಅವಳು ಕಟ್ಟಿ ಹೇಳುತ್ತಿದ್ದ ಕತೆಗಳೇ ಅಡುಗೂಲಜ್ಜಿಯ ಕತೆಗಳು. ಅಂದರೆ ಇಂಥ ಅಡುಗೂಳಜ್ಜಿಗಳಿಗೆ ವರ್ತಮಾನಗಳಿಗೆ ಕೈ ಕಾಲುಗಳನ್ನು ಬೆಳೆಸಿ  ಕತೆ ಹೇಳುವ ಜಾಣತನವೂ ಇತ್ತು. ಎಷ್ಟೋ ವೇಳೆ ಕಾಲಹರಣ ಮಾಡಲು, ಇಂಥ ಅಜ್ಜಿಯ ಮನೆಗೆ ವರ್ತಮಾನಗಳಲ್ಲಿ ಆಸಕ್ತಿಯಿರುವವರು ಬರುತ್ತಿದ್ದರು. ಇವರ ಸಹಾಯದಿಂದ ಕತೆಗಳೂ ಬೆಳೆಯುತ್ತಿದ್ದವು. ಕೆಲವು ವೇಳೆ ರಾಜರು ವೇಷಾಂತರವನ್ನು ಧರಿಸಿ ಅಡುಗೂಲಜ್ಜಿಯ ಮನೆಗೆ ಬರುತ್ತಿದ್ದರೆಂದೂ ಕತೆಗಳಿವೆ. ಹೀಗೆ ಇಂಥ ಸಮರ್ಥ ಕತೆಗಾರರಾದ ಅಡುಗೂಳಜ್ಜಿಗಳ ಸಹಾಯದಿಂದಲೇ ನಮ್ಮ ರಾಕ್ಷಸರ ಕತೆಗಳು, ಮಂತ್ರವಾದಿಗಳ ಕತೆಗಳು, ಪ್ರಾಣಿಪಕ್ಷಿ ಕತೆಗಳು ಮುಂತಾದವೆಲ್ಲಾ ಹುಟ್ಟಿ ಬೆಳೆದು ನಿಂತಿವೆ. 



ಅಜ್ಜಿಯರು ತನ್ನ ಅಜ್ಜಿಯರಿಂದ ಕಲಿತ ಕಥೆಗಳನ್ನು ತಮ್ಮ ಮೊಮ್ಮಕ್ಕಳಿಗೆ ಹೇಳುತ್ತಾ ಬಂದಿದ್ದಾರೆ. ಅವುಗಳನ್ನು ಮಕ್ಕಳು ಬಹಳ ಇಷ್ಟ ಪಡುತ್ತಾರೆ. ಇದೊಂದು ರೀತಿಯ ವಾತ್ಸಲ್ಯದ ಮಡಿಲಿನ ತೊಟ್ಟಿಲು. ಮಕ್ಕಳಿಗೆ ನಿದ್ದೆ ಬರುವ ಕಥೆಗಳು. ಇನ್ನು ಕಥೆ ಹೇಳುವ ಅಜ್ಜಿಯ ಹಾವ ಭಾವ ಏರಿಳಿತ ಅಡಗೊಳಜ್ಜಿಯ ಕಥೆ ಅನ್ನುವಾಗ  ಎರಡು ಸಂಗತಿಗಳು ಮುಖ್ಯವಾಗುತ್ತದೆ. ಅವರು ಹೇಳುವ ರಾಜನ ಕಥೆಗಳು ರಾಜರ ಹೋರಾಟದ ಬದುಕು , ಯಕ್ಷ ಯಕ್ಷಿಣಿಯರ ವ್ಯಕ್ತಿತ್ವ ಎಲ್ಲವ್ವೂ ಚಿಕ್ಕ ಮಕ್ಕಳಲ್ಲಿ ಬೆರಗನ್ನ್ಹುಟ್ಟಿಸಿ ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುವ  ಮಾಂತ್ರಿಕ ಚಾಪೆ . 

ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ  ಮಕ್ಕಳು ಸಣ್ಣ  ಪ್ರಾಯದಲ್ಲಿಯೇ ಗುರುಕುಲಕ್ಕೆ ಹೋಗಿ ವಾಸಿಸುತ್ತಿರುವಾಗ ಅಲ್ಲಿ ಹೆಣ್ಣು ಗಂಡೆಂಬ ಬೇಧವಿಲ್ಲದೆ  ಕಥೆಗಳೆ ಪಾಠ ಹೇಳಿಕೊಡುವ ಒಂದು ವಿಶೇಷ ವಿಧಾನವಾಗಿರುತ್ತಿತ್ತು . ಅದರಲ್ಲೂ ವಿಜ್ಞಾನ. ಗಣಿತ, ಕಲೆ ಸಮಾಜ ಶಾಸ್ತ್ರಕ್ಕೆ ಕಥೆಗಳ ಆಧಾರದಿಂದ ಹೇಳಿದರೆ ಅದು ಮಕ್ಕಳ ಬುದ್ದಿಗೆ ಒರೆ ಹಚ್ಚಿದಂತೆ ಅರ್ಥವಾಗುತ್ತಿತ್ತು. ಅವು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿದ್ದವು.  ಆದರ್ಶದ ಕಥೆಗಳಿಂದ ಸ್ಪೂರ್ತಿಪಡೆದು ಜೀವನದ ಗುರಿಯನ್ನು ತಲುಪುವ ಸಾಧನೆ ಇಂದಿಗೂ ಪ್ರಚಲಿತವಾಗಿದೆ. ಎಷ್ಟೋ ಪ್ರೇರಣಾತ್ಮಕ ಕಮ್ಮಟಗಳಲ್ಲಿ  ಕಥೆಗಳ ಜಾಡು ಹಿಡಿದು ಪ್ರೇಕ್ಷಕರ ಮನಸ್ಸಿನಲ್ಲಿ ಚೈತನ್ಯದ ಬೀಜ ಬಿತ್ತುವ ಕೆಲಸ ಈಗಲೂ ಚಾಲ್ತಿಯಲ್ಲಿದೆ. ಅಲ್ಲಿಯ ಕಥೆಗಳಲ್ಲಿ ಅಡಗಿರುವ ಪ್ರೀತಿ, ಸ್ಪೂರ್ತಿಯ ಮಾಂತ್ರಿಕ ಶಕ್ತಿ  ಬಹುಶಃ ಹಣಕೊಟ್ಟು ನಡೆಸಲಾಗುವ ಕಮ್ಮಟಗಳಲ್ಲಿ ಕಾಣಸಿಗುವುದಿಲ್ಲ. 

ಆದರೆ ಡಿಜಿಟಲ್ ಲೋಕದಲ್ಲಿ ಅಜ್ಜಿಯ ಕಥೆ ಯಾರಿಗೂ ಬೇಡವಾಗಿದೆ. ಮಕ್ಕಳಾಗಲಿ ಹಿರಿಯರಾಗಲಿ ಮಧ್ಯರಾತ್ರಿಯ ವರೆಗೂ ನಿದ್ದೆಗೆ ಮಾರಕವಾಗಿರುವಂತೆ  ಜಾಲತಾಣದಲ್ಲಿ ಜಾಲಾಡಿಸುತ್ತಾ,  ವ್ಹಾಟ್ಸ್ಆಪ್ದಲ್ಲಿ ಅನಗತ್ಯ ಸಂವಾದದಲ್ಲಿ ತೊಡಗಿರುತ್ತಾರೆ. ಕತ್ತಲೆ ಕೋಣೆಯಲ್ಲಿ ಮೊಬೈಲಿನ ಬೆಳಕು ಕಣ್ಣಿಗೆ ಹಾನಿಕಾರ ಎಂದು ತಿಳಿದಿದ್ದರೂ ಅದರಿಂದ ಹೊರಬರುವ ಮನಸ್ಸಿಲ್ಲ.  ಕೈಯಲ್ಲಿ ಜಗತ್ತನ್ನೇ ತೋರಿಸುವ ಪುಟ್ಟ ಮೊಬೈಲಿಗೆ ಮಕ್ಕಳಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎನ್ನುವ   ಇರುವುದಿಲ್ಲ.  ಅದೇ ಅನುಭಾವದ ಕುಲುಮೆಯಲ್ಲಿ ಬೆಂದ ನಮ್ಮಜ್ಜಿ ತನ್ನ  ಮೊಮ್ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬುವುದನ್ನು ಚೆನ್ನಾಗಿ ಅರಿತ್ತಿರುತ್ತಾಳೆ.  ಆದರೆ ಈ ಮೊಬೈಲಿನ ಹಾವಳಿಯಿಂದಾಗಿ  ಮಕ್ಕಳಿಗೆ ಈಗ ಅಜ್ಜ ಅಜ್ಜಿಯ ಸಹವಾಸವೇ ಇಲ್ಲದಿರುತ್ತದೆ.  ಮಕ್ಕಳ ತಂದೆ ತಾಯಿಯೂ ಕೆಲಸ , ಪಾರ್ಟಿ, ಅದು ಇದೂ ಎಂದು ಬ್ಯುಸಿಯಾಗಿರುವಾಗ ಅಜ್ಜ ಅಜ್ಜಿ ಮನೆಗೆ ಭಾರವಾಗಿ ಒಂದಾ ಊರಿನ  ಪೂರ್ವಜರ ಮನೆ ಕಾಯುವ ಕಾವಲುಗಾರರಾಗಿಯೋ, ನಗರಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಆಯಾರಂತೆ ದುಡಿಯುತ್ತಿರುತ್ತಾರೆ. 



ಮನೆಮಂದಿಯೇ  ಹಿರಿಯರಿಗೆ ಗೌರವ ಕೊಡದಿರಲು ಮಕ್ಕಳೂ ಅದನ್ನೇ ಅನುಸರಿಸುತ್ತಾರೆ. ಮಾತೆತ್ತಿದರೆ “ ಅಜ್ಜಿ ನಿನಗೇನು ಗೊತ್ತಿಲ್ಲ ಸುಮ್ಮನಿರಿ”  ಎಂಬ ಸಿದ್ದ ಉತ್ತರ ತಯಾರಾಗಿರುತ್ತದೆ.  

ಮುಗಿಯಲಾರದ ಕಥಾ ಭಂಡಾರ ಅಜ್ಜಿಯರದ್ದು. ಎಲ್ಲಾ ಕಥೆ ಹೇಳಿ ಮುಗಿದ ಬಳಿಕ ವಿಶೇಷಣಗಳ ಅಲಾಪವೇ ಕಥೆಯ ಹೂರಣಗಳಾಗಿ ಮಕ್ಕಳಿಗೆ ಲಾಲಿ ಹಾಡಿನಂತೆ ನಿದ್ದೆಗೆ ಕೊಂಡೊಯ್ಯುವವು. . ಜೀವ ಸೆಲೆಯಾಗಿರುವ ಅಜ್ಜಿಯ ಕಥೆಗಳು ಮನೆಯ ಪ್ರತಿಯೊಬ್ಬರನ್ನು ಒಂದು ಅನೂಹ್ಯ ಬಂಧನದಲ್ಲಿ ಕಟ್ಟಿಡುವುದು.  ಮಕ್ಕಳಿಗೆ ಅಜ್ಜಿಯ ಮೇಲೆ ಪ್ರೀತಿ ಗೌರವ ಸಹಜವಾಗಿಯೇ ಬೆಳೆಯುವುದು. 

 ಸಾಮಾನ್ಯವಾಗಿ ಅಜ್ಜಿಯರೆಂದರೆ ಅನುಭಾವಗಳ ಭಂಡಾರ,  ಭತ್ತದ ಒರತೆ, ಪಂಚತಂತ್ರಗಳ ಹುಟ್ಟು ಸಹ . ಹೀಗೆ ನುರಿತ ಗುರುಗಳ ಅಜ್ಞಾನ ಶಿಷ್ಯರು ಅವರನ್ನು ಮತ್ತೆ ನಿಜ ಮನುಷ್ಯರನ್ನಾಗಿ ಮಾಡುವ ಕಲೆ ಹಾಗೆಯೇ  ಅಜ್ಜಿಯ ಕಥೆಗಳಲ್ಲಿ ಸೂಕ್ಷತನವಾದ ಸಂದೇಶ, ಇದ್ದೇ ಇರುತ್ತದೆ. ಮಾನವ ಬದುಕಿನ ವಿಕಾಸದಲ್ಲಿ ಸಹ ಈ ಆಡುಗೂಲಜ್ಜಿಯರ  ಪಾತ್ರ ಹಿರಿದು. ಜಗತ್ತು ಎಷ್ಟೇ ಮುಂದುವರಿದರೂ ಇ ಆಡುಗೂಲಜ್ಜಿಯ ಕಥೆಗಳು ಮಾಸದ ನೆನೆಪಾಗಿ ಇಂದೂ ಕಾಡುತ್ತದೆ. ಮುಂದೂ ಕಾಡುವಂತಾಗಲು,  ಅಜ್ಜ ಅಜ್ಜಿಯರನ್ನು ಕಾಪಾಡುವ   ಜವಾಬ್ದಾರಿ ನಮ್ಮದು. 


Comments

  1. very touching article.Loved it madam. Brings back all old memories

    ReplyDelete

Post a Comment