ಅಳಸಿಂಗ ಪೆರುಮಾಳ್

ಅಳಸಿಂಗ ಪೆರುಮಾಳ್

ಲೇಖನ  -  ಡಾ. ಮಂಜುಳಾ ಹುಲ್ಲಹಳ್ಳಿ. 

(ಜನವರಿ ಹನ್ನೆರಡು, ಸ್ವಾಮಿ ವಿವೇಕಾನಂದರ ಜನುಮದಿನ. ಈ ದಿನವನ್ನು ರಾಷ್ಟ್ರೀಯ ಯುವದಿನವಾಗಿ ಗೌರವಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರನ್ನು ಚಿಕಾಗೋಗೆ ಕಳಿಸಿಕೊಡಲು ಅವರ ಪ್ರಿಯಶಿಷ್ಯರಾದ, ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದ ಸನ್ಮಾನ್ಯ ಶ್ರೀ ಅಳಸಿಂಗ ಪೆರುಮಾಳ್ ಅವರ ಪಾತ್ರ ಹಿರಿದು. ಈ ಸ್ಮರಣೆಯಲ್ಲಿ ಈ ಲೇಖನ)

"ಅಳಸಿಂಗ ಪೆರುಮಾಳ್: ವಿವೇಕಜ್ಯೋತಿ ಬೆಳಗಲು ಹಣತೆಯಾದ ಹಿರಿಯ ಆಳ್!!!"


      ಅಳಸಿಂಗ ಪೆರುಮಾಳ್ ಅವರ ಹೆಸರು ನಮ್ಮ ನಾಡಿನ ಆದ್ಯಂತ ಕೇಳಿಯೂ ಕೇಳದಂತೆ, ಗೊತ್ತಿಲ್ಲದೆಯೂ ಗೊತ್ತಾದಂತೆ, ಅರಿವಾಗದಿದ್ದರೂ ಅರಿವು ಹೆಚ್ಚಿಸುವಂತೆ ಹರಡಿಕೊಂಡಿದೆ.  'ಅಳಸಿಂಗ ಪೆರುಮಾಳ್ ಯಾರು ಗೊತ್ತಾ?' ಎಂದು ಕೇಳಿದರೆ 'ಗೊತ್ತು' ಎಂದು ಏಕಕಾಲಕ್ಕೆ ಪ್ರತಿಕ್ರಿಯಿಸುವ ಧ್ವನಿಗಳು 'ಅವರ ಸಾಧನೆ ಏನು' ಎಂದು ಕೇಳಿದಾಗ ಮೌನವಾಗುತ್ತವೆ. ತಮಗೆ ಗೊತ್ತಿರುವುದು ಸರಿಯೋ-ತಪ್ಪೋ ಎಂದು ಆಲೋಚಿಸತೊಡಗುತ್ತವೆ. 'ಸರಿ' ಎಂದು ದೃಢವಾಗಿ ಹೇಳಲು ಇದೇನು ಪಠ್ಯಪುಸ್ತಕದ ಮಾಹಿತಿ ಅಲ್ಲವಲ್ಲ!

   ಹೌದು. ಅಳಸಿಂಗ ಪೆರುಮಾಳರಿಗೂ ವಿವೇಕಾನಂದರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಶ್ರೀರಾಮ- ಹನುಮರಂತೆ, ಶ್ರೀಕೃಷ್ಣ- ಕುಚೇಲರಂತೆ. ಸಂದರ್ಭಗಳು ಬೇರಿರಬಹುದು. ಆದರೆ ಕಾರ್ಯಕಾರಣ ಸಂಬಂಧಭಾವಗಳು ಬಹುತೇಕ ಒಂದೇ. ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಿ ಬರಲೇಬೇಕೆಂದು ದೃಢಸಂಕಲ್ಪ ಮಾಡಲು ಕಾರಣ ನಮ್ಮ ಅಳಸಿಂಗ ಪೆರುಮಾಳ್. ಅಮೆರಿಕಾದಲ್ಲಿ ಸ್ವಾಮಿ ವಿವೇಕಾನಂದರು ಹಲವು ಸಾವಿರ ರೀತಿಯ ಅಡಚಣೆಗಳನ್ನು ಎದುರಿಸಿದಾಗ ಹತಾಶರಾಗಿ ಹಿಂದಿರುಗಿ ಬಂದು ಬಿಡಬೇಕೆಂದುಕೊಂಡರೂ ಹಾಗೆ ಮಾಡದೇ ಅಲ್ಲೇ ದೃಢವಾಗಿ ನಿಲ್ಲುವುದಕ್ಕೆ ಕಾರಣ ಮತ್ತು ಪ್ರೇರಣೆ ನಮ್ಮ ಅಳಸಿಂಗ ಪೆರುಮಾಳ್. ನಿಜ ಹೇಳಬೇಕೆಂದರೆ ಸ್ವಾಮಿ ವಿವೇಕಾನಂದರು ವಿಶ್ವದಾದ್ಯಂತ ಹಚ್ಚಿದ ಧರ್ಮಜ್ಯೋತಿ ಪ್ರಜ್ವಲಿಸಿ ಬೆಳಗಲು ಹಣತೆಯಾದ ತ್ಯಾಗಜೀವಿ ನಮ್ಮ ಅಳಸಿಂಗ ಪೆರುಮಾಳರು.

   'ಅಳಸಿಂಗ ಪೆರುಮಾಳ್' ತಮಿಳು ಹೆಸರಿನಂತಿದೆ. ಇವರು ಹೇಗೆ ನಮ್ಮವರು? ಎಂದುಕೊಂಡರೆ ಉತ್ತರಿಸಲು ಮಾಸ್ತಿ, ಕಸ್ತೂರಿ, ಡಿವಿಜಿ, ಕೈಲಾಸಂರಂತಹ ನೂರಾರು ತೇಜೋ ಪುಂಜಗಳು ಸುಳಿದಾಡುತ್ತವೆ. ಅಷ್ಟೆಲ್ಲಾ ಏಕೆ? ನಮ್ಮ ಹಿರೇಮಗಳೂರು ಕಣ್ಣನ್ ಒಬ್ಬರೇ ಸಾಕಲ್ಲವೇ!

    ಹೀಗೆಯೇ, ಭಾರತೀಯ ಕಲೆ, ಸಂಸ್ಕೃತಿ, ಧರ್ಮಗಳು ಅತ್ಯುತ್ಕೃಷ್ಟ, ವಿಶ್ವಮಾನ್ಯ ಎಂದು ಸ್ವಾಮಿ ವಿವೇಕಾನಂದರ ಜೊತೆಜೊತೆಗೆ ತನ್ನ ಮಿತಿಯಲ್ಲಿ ಕಷ್ಟಪಟ್ಟು ದುಡಿದ ಅತ್ಯನ್ನತ ದೇಶಭಕ್ತ, ತಮಿಳುಕನ್ನಡಿಗ, ಕನ್ನಡದಕುಡಿ, ಮಂಡ್ಯದಬೇರು ಪಲ್ಲವಿಸಿದ್ದು ಚಿಕ್ಕಮಗಳೂರು ನೆಲದಲ್ಲಿ. ಅಳಸಿಂಗ ಪೆರುಮಾಳ್ ಎನ್ನುವ ಮಹಾತರು ಚಿಗುರಿ ಜನುಮ ತಳೆದುದು  ಚಿಕ್ಕಮಗಳೂರಿನಲ್ಲಿ.

     1865 ಮಾರ್ಚ್ 18 ರಂದು ಚಿಕ್ಕಮಗಳೂರು ಮುನ್ಸಿಪಾಲಿಟಿ ಕಚೇರಿಯ ಗುಮಾಸ್ತ ಮಂಡ್ಯಂ ಚಕ್ರವರ್ತಿ ನರಸಿಂಹಾಚಾರ್ಯ- ಪೆರುಂದೇವಿ ದಂಪತಿಗಳಿಗೆ ಚಿಕ್ಕಮಗಳೂರಿನಲ್ಲಿ ಹುಟ್ಟಿದ ಮಗು ಅಳಸಿಂಗ ಪೆರುಮಾಳ್. ಪ್ರಾಥಮಿಕ ವಿದ್ಯಾಭ್ಯಾಸ ಪಡೆದುದು ಇಲ್ಲಿನ ಬಸವನಹಳ್ಳಿ ಶಾಲೆಯಲ್ಲಿ. ಮುನ್ಸಿಪಾಲ್ ಕಚೇರಿಯ ಕಡಿಮೆ ವೇತನದಲ್ಲಿ ದೊಡ್ಡ ಕುಟುಂಬ ನಿರ್ವಹಣೆ ಮಾಡಲಾಗದೆ ಅನಿವಾರ್ಯವಾಗಿ ಮದ್ರಾಸಿಗೆ 1872ರ ವೇಳೆಗೆ ನರಸಿಂಹಾಚಾರ್ಯರು ತೆರಳಬೇಕಾಯಿತು. ಹೀಗಾಗಿ ಅಳಸಿಂಗ ಪೆರುಮಾಳ್ ಮುಂದಿನ ವಿದ್ಯಾಭ್ಯಾಸ ಮದ್ರಾಸಿನ ಹಿಂದೂ ಹೈಸ್ಕೂಲ್, ಪ್ರೆಸಿಡೆನ್ಸಿ ಕಾಲೇಜು ಮತ್ತು ಮದ್ರಾಸ್ ಕ್ರಿಶ್ಚಿಯನ್ ಕಾಲೇಜುಗಳಲ್ಲಿ ಸಾಗಿತು.  ಪ್ರಿನ್ಸಿಪಾಲ್ ವಿಲಿಯಮ್ ಮಿಲ್ಲರ್ ಅವರು ಅಳಸಿಂಗರ ಬುದ್ಧಿಮತ್ತೆಗೆ ಶರಣಾಗಿ ಅವರಿಗೆ ವಿಶೇಷ ಸ್ಕಾಲರ್ಶಿಪ್ ನೀಡಿದರಂತೆ. ಈ ಅವಧಿಯಲ್ಲಿಯೇ ಶ್ರೀರಂಗಪಟ್ಟಣದ ಅರಕೆರೆಯ ಸೋದರಮಾವನ ಮಗಳು ರಂಗಮ್ಮರೊಡನೆ ಅಳಸಿಂಗ ಪೆರುಮಾಳರ ವಿವಾಹವೂ ಆಯಿತು.



     ಕುಂಭಕೋಣಂ, ಚಿದಂಬರಂ ಮುಂತಾದೆಡೆಗಳಲ್ಲಿ ಶಿಕ್ಷಕರಾಗಿ ದುಡಿದ ಪೆರುಮಾಳರು 1887ರಲ್ಲಿ ತಂದೆಯವರ ಮರಣದಿಂದ ತಮ್ಮ ಹೆಗಲಿಗೇರಿದ ಕುಟುಂಬ ನಿರ್ವಹಣೆಗಾಗಿ ಮದರಾಸಿನಲ್ಲೇ ನೆಲೆಸಿದರು. ಜಾರ್ಜ್ ಟೌನ್  ಪಚ್ಚೈಯಪ್ಪ ಸ್ಕೂಲ್ನಲ್ಲಿ ಶಿಕ್ಷಕ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ 1909 ಮೇ 11 ರಂದು ನಲವತ್ತನಾಲ್ಕನೇ ವಯಸ್ಸಿಗೇ ಜಗತ್ತಿಗೆ ವಿದಾಯ ಹೇಳಿದರು.

   ವೃತ್ತಿ ಜೊತೆಗೆ ಪ್ರವೃತ್ತಿಯಲ್ಲಿ ಅಳಸಿಂಗ ಪೆರುಮಾಳರು ತಮ್ಮನ್ನು ತೊಡಗಿಸಿಕೊಂಡ ರೀತಿ ಅತ್ಯಪೂರ್ವ. ಶಾಲ ಶಿಕ್ಷಕರಾಗಿದ್ದರೂ, ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದರೂ ಅವರ ತುಡಿತ, ಒಲವು ಅಧ್ಯಾತ್ಮದ ಕಡೆಗೇನೇ. ಭಾರತೀಯತೆ ಎನ್ನುವುದೇ ದಾಸ್ಯದ ಭಾರಕ್ಕೆ ಕುಸಿದು ಕುಗ್ಗಿ ಹೋಗಿದ್ದ, ಆಂಗ್ಲ ಬಿಗಿಮುಷ್ಟಿಯಲ್ಲಿ ಸಿಲುಕಿ ಭಾರತೀಯರೆಲ್ಲರೂ ನಲುಗಿ ಹೋಗಿದ್ದ ಆ ದಿನದಲ್ಲಿ ಭಾರತೀಯತೆಯ ಕನಸು ಕಂಡು ಅದಕ್ಕಾಗಿ ಹೋರಾಡಿದ, ತಮ್ಮ ಜೀವವನ್ನೇ ಪಣವಾಗಿಟ್ಟು ಸಾಧಿಸಲು ಹೆಣಗಿದ ಅಳಸಿಂಗ ಪೆರುಮಾಳ್ ಅವರು ಕೈಗೊಂಡ ಯೋಜನೆಗಳು ಆ ಕಾಲಸನ್ನಿವೇಶಗಳಲ್ಲಿ ಸಾಹಸಪೂರ್ಣವೇ!

       1890ರಲ್ಲಿ ಪೆರುಮಾಳರಿಗೆ ಅಮೇರಿಕಾದ ಚಿಕಾಗೋದಲ್ಲಿ ವಿಶ್ವಧರ್ಮಸಮ್ಮೇಳನವು 1893ರ ವೇಳೆಗೆ ನಡೆಯುವ ವಿಷಯ ತಿಳಿಯಿತು. ಅವರ ನಿಕಟವರ್ತಿಗಳಿಗೆ ಪ್ರಬಂಧ ಮಂಡಿಸಲು ಬಂದ ಅವಕಾಶವನ್ನು ಅವರು ಆ ಕಾಲದಲ್ಲಿ ಪ್ರಚಲಿತವಿದ್ದ ಸಮುದ್ರಯಾನ ನಿಷಿದ್ಧ ಎಂಬ ಕಟ್ಟುಪಾಡಿಗೆ ಜೋತುಬಿದ್ದು ನಿರಾಕರಿಸಿಕೊಂಡಿದ್ದರು. ಈ ವಿಷಯವನ್ನು ತಮ್ಮ ಸಮಾನಮನಸ್ಕ ಗೆಳೆಯರೊಡನೆ ಚರ್ಚಿಸುತ್ತಾ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಹಿಂದೂಧರ್ಮದ ಔನ್ನತ್ಯವನ್ನು ಪ್ರತಿನಿಧಿಸುವ ಯಾರಾದರೂ ಸಿದ್ಧರಾಗಬಾರದೆ ಎಂದು ಪೆರುಮಾಳರು ಹೃದಯಾಂತರಾಳದಿಂದ ಹಂಬಲಿಸಿದ್ದೇ ಹಂಬಲಿಸಿದ್ದು. ಸುಮಾರು ಒಂದು ವರ್ಷದ ಕಾಲ ಇದೇ ಹಂಬಲಿಕೆಯ ಪರಾಕಾಷ್ಠತೆಯಲ್ಲಿದ್ದ ಅಳಸಿಂಗರು ಅಚಾನಕ್ಕಾಗಿ 1892ರ ಡಿಸೆಂಬರ್ನಲ್ಲಿ ಸ್ವಾಮಿ ವಿವೇಕಾನಂದರನ್ನು ನೋಡುತ್ತಾರೆ:



ವಜ್ರದ ಮೈ, ಉಕ್ಕಿನ ನರ, 

ಕುಡಿಮಿಂಚಿನ ಕಣ್ಣು;                     

ಗುಡುಗಿನ ದನಿ, ಹೊನಲಿನ‌ ನೆಡೆ, 

ಎದೆ ಬೆಳದಿಂಗಳ ಹಣ್ಣು! 

ಕವಿ, ಋಷಿ, ಯೋಗಿ, ಸಂತ. 

ಲೋಕಾದ್ಯಂತ ನಡೆವ ವಸಂತ!

ಆ ಧ್ರುವ ಮಂಡಲದಿಂದ ಬಂದ 

ಶ್ರೀ ಗುರು ವಿವೇಕಾನಂದ!!!(ರಾಷ್ಟ್ರಕವಿ: ಜಿಎಸ್ಎಸ್) 

 ಮೊರೆಯುವ ಕಡಲಿಗೆ ಹಾರಿ ಧುಮುಕಿದ, ತೆರೆಗಳ ಸೀಳಿದ, ಈಜಿದ, ನುಗ್ಗಿದ, ಗಟ್ಟಿ ಬಂಡೆಯಲ್ಲಿ ಬೇರೂರಿ, ಬಾನೆತ್ತರ ಬೆಳೆದ, ಬೆಳಕಿನ ಗೋಪುರವೇ ಆದ ವಿವೇಕಾನಂದರು!   ಆ ಅನನ್ಯ  ತೇಜೋಕಾಂತಿಯನ್ನು ನೋಡ ನೋಡುತ್ತಿದ್ದ ಹಾಗೆ ಅಳಸಿಂಗ ಪೆರುಮಾಳರಿಗೆ ಮಿಂಚು ಹೊಡೆದಂತಾಯ್ತು! ತಾವು ಬಯಸಿದ ನಿಧಿ ಕೈಗೆ ಸಿಕ್ಕ ಅನುಭವ! ಅಳಸಿಂಗ ಪೆರುಮಾಳರ ನಿಷ್ಕಪಟ, ನಿರ್ಮಲ ಪ್ರೀತಿ ಭಕ್ತಿಗೆ ಮನಸೋತ ವಿವೇಕಾನಂದರೂ ಆ ಕ್ಷಣವೇ ಇವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಅಪೂರ್ವ ಮಿಲನವಾಯಿತು!

    ಚಿಕಾಗೋ ವಿಶ್ವಧರ್ಮ ಸಮ್ಮೇಳನದ ವಿಷಯ ಈಗಾಗಲೇ ಸ್ವಾಮೀ ವಿವೇಕಾನಂದರ ಕಿವಿಗೆ ತಲುಪಿತ್ತು. ಆದರೆ ಅದನ್ನು ಅವರ ಹೃದಯಕ್ಕೆ ಮುಟ್ಟಿಸಿ ಚಿಕಾಗೋಗೆ ಹೋಗಿ ಬರಲೇಬೇಕೆಂಬ ದೃಢ ಸಂಕಲ್ಪವನ್ನು ಅವರಿಗೆ ತುಂಬಿದವರು ಅಳಸಿಂಗ ಪೆರುಮಾಳರು. ಇದಕ್ಕಾಗಿ ವಿವೇಕಾನಂದರನ್ನು ಅವರು ಬೆಂಬಿಡದೆ ಕಾಡಿದರು, ಬೇಡಿದರು, ಒಪ್ಪಿಸಿದರು! ಹಣದ ವ್ಯವಸ್ಥೆಗಾಗಿ ಮನೆಮನೆ ತಿರುಗಿ ಭಿಕ್ಷೆಯೆತ್ತಿ ರೂ.500ರಷ್ಟನ್ನು ಹೊಂದಿಸಿದರು. ಆದರೆ ಅವರ ಈ ಸಂಕಲ್ಪ ಈಡೇರದು ಎಂದಾದಾಗ ದಾನ ಕೊಟ್ಟವರಿಗೆ ಪೈಸೆಪೈಸೆ ಹಣ ಹಿಂದಿರುಗಿಸಿದರು, ನಿರಾಶೆಯ ಕೂಪಕ್ಕೆ ಕುಸಿದು ಹೋದರು. ಓಹ್, ಏನೆಲ್ಲ ಪರಿಪಾಟಲುಗಳು...

   ಆದರೆ, ಅಳಸಿಂಗ ಪೆರುಮಾಳರ ಮೊರೆ ಗುರುಗಳಾದ ರಾಮಕೃಷ್ಣ ಪರಮಹಂಸರಿಗೆ ಮುಟ್ಟಿತ್ತು. ಅವರು ವಿವೇಕಾನಂದರ ಕನಸಿಗೆ ಬಂದು ಅಮೆರಿಕಾಗೆ ಹೋಗಲು ಸೂಚನೆ ಕೊಟ್ಟಂತಾಯಿತು. ಮಾತೆ ಶಾರದಾದೇವಿಯವರ ಆಶೀರ್ವಾದದ ನಿರೂಪವೂ ಸಿಕ್ಕಿತು. ವಿವೇಕಾನಂದರು ಅಮೆರಿಕಕ್ಕೆ ಹೋಗುವ ಸಂಕಲ್ಪಕ್ಕೆ ಬದ್ದರಾದರು. ಈಗ ಅಳಸಿಂಗ ಪೆರುಮಾಳರ ಉತ್ಸಾಹ ಮತ್ತೆ ಗರಿಗೆದರಿತು. ಹಗಲಿರುಳು ಹಣದ ಏರ್ಪಾಡು ಮಾಡುವ ಕಾರ್ಯಕ್ಕೆ ದುಡಿದರು. ರೈಲ್ವೆ ಸ್ಟೇಷನ್, ಬಸ್ಸ್ಟ್ಯಾಂಡ್ ಎಲ್ಲೆಂದರಲ್ಲಿ ಬೇಡಿ, ಕಾಸು ಕಾಸು ಒಟ್ಟು ಮಾಡಿ ಸುಮಾರು 4000ರೂಗಳಷ್ಟನ್ನು ಹೊಂದಿಸಿದರು. ಸ್ವಾಮಿ ವಿವೇಕಾನಂದರಿಗೆ ಅಗತ್ಯವಿರುವ ಬಟ್ಟೆ-ಬರೆ, ಸೂಟ್ಕೇಸ್ ಇತ್ಯಾದಿಗಳನ್ನು ತೆಗೆದಿರಿಸಿ ಅವರನ್ನು 1893ರ ಮೇ 31ರಂದು ಬಾಂಬೆಯಿಂದ ಹೊರಟ ಪೆನಿನ್ಸುಲಾರ್ ಹಡಗಿಗೆ ಹತ್ತಿಸಿ ನಿಟ್ಟುಸಿರುಬಿಟ್ಟರು. ಈ ಸಂದರ್ಭದಲ್ಲಿ ಹಲವು ಮನಸ್ಸುಗಳು ಸ್ವಾಮಿ ವಿವೇಕಾನಂದರ ಜೊತೆಗಿದ್ದುದು ನಿಜ. ಆದರೆ ಆ ಎಲ್ಲವುಗಳ ಒಟ್ಟು ಭಾರವನ್ನು ಅಳಸಿಂಗ ಪೆರುಮಾಳರೇ ಹೊತ್ತಂತೆ ಆಗಿದ್ದುದೂ ನಿಜ.

  ಸ್ವಾಮಿ ವಿವೇಕಾನಂದರ ಚಿಕಾಗೋ ಯಾತ್ರೆ ಭರತಖಂಡದ ಇತಿಹಾಸಕ್ಕೇ ಒಂದು ಅತ್ಯಪೂರ್ವ ದಾಖಲೆ. ಇದನ್ನು ವರ್ಣಿಸುವ ಸಾವಿರಾರು ಅವತರಣಿಕೆಗಳಿವೆ. ಅವುಗಳ ಜೊತೆಗೆ ಸ್ವಾಮಿ ವಿವೇಕಾನಂದರು ಬರೆದ ಅತ್ಯಂತ ಮೌಲ್ಯಯುತ ಪತ್ರಗಳು! ಈ ಪತ್ರಗಳನ್ನು ಅವಲೋಕಿಸಿದರೇ ಸಾಕು, ಅಳಸಿಂಗ ಪೆರುಮಾಳರು ಸ್ವಾಮಿ ವಿವೇಕಾನಂದರನ್ನು ಅದೆಷ್ಟರಮಟ್ಟಿಗೆ ಆವರಿಸಿಕೊಂಡಿದ್ದರು ಎಂಬುದು ಮನಮುಟ್ಟುತ್ತದೆ. ಈ ಮಾತುಗಳ ಕೊಂಡಿಗಳನ್ನು ಜೋಡಿಸಿಕೊಂಡರೆ ಒಂದು ಅಮೂಲ್ಯ ಕೃತಿಯನ್ನೇ ರಚಿಸಬಹುದು!

       ಆ ಪರಮಾಪ್ತ, ಅಧ್ಯಾತ್ಮ, ವೇದಾಂತ ರಸಾಯನದ ಕೆಲವೇ ಕೆಲವು ಹನಿಗಳು ಇಲ್ಲಿವೆ:

   10.07.1893ರಲ್ಲಿ ಯೇಕೋಹೋಮದಿಂದ ಬರೆದ ಪತ್ರದಲ್ಲಿ ಬಾಂಬೆಯಿಂದ ಕೊಲಂಬೋ, ಹಾಂಗ್ಕಾಂಗ್ ದಾಟಿ ಜಪಾನಿನ ನಾಗಸಾಕಿಯಲ್ಲಿ ಓಡಾಡಿದ ವಿವರಗಳನ್ನು ನೀಡುತ್ತಾ 'ಜಪಾನಿಯರು ಜಗತ್ತಿನಲ್ಲಿ ಅತ್ಯಂತ ಶುಚಿಯಾದ ಜನಾಂಗ, ಇಲ್ಲಿ ಪ್ರತಿಯೊಂದೂ ವ್ಯವಸ್ಥಿತ' ಎಂದು ಹೇಳುತ್ತಲೇ ನಮ್ಮ ಭಾರತೀಯ ಯುವಕರು ಹೇಗಿರಬೇಕೆಂದು ಅಳಸಿಂಗರನ್ನೇ ಉದ್ದೇಶವಾಗಿಟ್ಟುಕೊಂಡು ಬರೆಯುತ್ತಾರೆ. 'ನೀವು ಈಗ ಏನಾಗಿದ್ದೀರಿ? ಯಾವ ಮಹಾಕಾರ್ಯ ಮಾಡುತ್ತಿದ್ದೀರಿ? ಐರೋಪ್ಯರು ಬರೆದ ಕೆಲ ವಿಷಯಗಳನ್ನು ಓದುವುದು, ಅದನ್ನು ಅರಗಿಸಿಕೊಳ್ಳಲಾರದೆ ಅದನ್ನೇ ಗಿಳಿಯಂತೆ ಮಾತನಾಡುವುದು. ನಿಮ್ಮನ್ನು, ನಿಮ್ಮ ಪುಸ್ತಕಗಳನ್ನು, ಗೌರವದ ನಿಲುವಂಗಿಯನ್ನು, ಯೋಗ್ಯತಾ ಪತ್ರಗಳನ್ನು ಮುಳುಗಿಸುವಷ್ಟು ನೀರಿಲ್ಲವೇ ಕಡಲಿನಲ್ಲಿ?'

    'ಮುಂದೆ ಬನ್ನಿ. ಪುರುಷಸಿಂಹರಾಗಿ. ಉತ್ತಮವಾದ ಭವ್ಯ ಜೀವನಗಳ ಆದರ್ಶಗಳಿಗೆ ಹೋರಾಡೋಣ. ಭಾರತಮಾತೆಗೆ ಕನಿಷ್ಠಪಕ್ಷ 1000 ಯುವಕರ ಬಲಿಯಾದರು ಬೇಕು ಮನದಲ್ಲಿಡಿ.'

    20.8.1893ರಲ್ಲಿ ಮಸಾಚುಸೆಟ್ಸ್ ನಿಂದ ಬರೆದ ಕಾಗದ ಸ್ವಾಮೀಜಿ ಅವರು ಪರನಾಡಿನಲ್ಲಿ ಅನುಭವಿಸಿದ ಯಾತನೆ ಪರಂಪರೆಗೆ ಸಾಕ್ಷಿಯಾಗಿದೆ. ಜಪಾನಿನಿಂದ ವಾಂಕೋವಾರ್ ಮುಟ್ಟಿ ಅಲ್ಲಿಂದ ಕೆನಡಾ ದೇಶದ ಮಾರ್ಗವಾಗಿ ಚಿಕಾಗೋ ಸೇರಿದುದನ್ನು, ಶಾಖವಾದ ಬಟ್ಟೆಗಳಿಲ್ಲದೆ ಬಹಳ ಯಾತನೆ ಪಟ್ಟುದನ್ನು ವಿವರಿಸುತ್ತಾ 'ಇಲ್ಲಿ ನನ್ನ ಖರ್ಚು ವಿಪರೀತ. ಭಾರತದಿಂದ ಹೊರಡುವುದಕ್ಕೆ ಮುಂಚೆ ಕಟ್ಟಿದ್ದ ಸವಿನೆನಪುಗಳು ಈಗ ಮಾಯವಾಗಿವೆ. ನನ್ನನ್ನು ಎದುರಿಸುವ ಯಥಾರ್ಥ ಸ್ಥಿತಿಯೊಂದಿಗೆ ಈಗ ನಾನು ಹೋರಾಡಬೇಕಾಗಿದೆ' ಎನ್ನುತ್ತಾರೆ. ಸ್ವಾಮಿ ವಿವೇಕಾನಂದರ ಹಣಕಾಸಿನ ಮುಗ್ಗಟ್ಟನ್ನು ಅರ್ಥಮಾಡಿಕೊಂಡ ಅಳಸಿಂಗ ಪೆರುಮಾಳರು ತಮ್ಮ ಪತ್ನಿಯ ಒಡವೆಗಳನ್ನೂ ಮಾರಿ ಒಂದು ಸಾವಿರ ರೂಗಳನ್ನು ಹೊಂದಿಸಿ ಕಳುಹಿಸಿಕೊಡುತ್ತಾರೆ.

      ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಈ ರೀತಿಯ ಅನೇಕಾನೇಕ ರೀತಿಯ ಕಷ್ಟ ಪರಂಪರೆಗಳನ್ನು ಎದುರಿಸಿದಾಗಲೆಲ್ಲ, 'ಮದ್ರಾಸಿನ ಮೂರ್ಖನ ಮಾತು ಕೇಳಿ ನಾನಿಲ್ಲಿ ಬರಬಾರದಿತ್ತು' ಎಂದೇ ಹಳಹಳಿಸುತ್ತಾರೆ! 

     ಅಂತು ಇಂತು ಸ್ವಾಮೀಜಿಯವರ ಸರ್ವ ಪ್ರಯತ್ನಗಳೂ ಯಶಸ್ವಿಯಾಗಿ 1893ರ ಸೆಪ್ಟೆಂಬರ್ 11ರಂದು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಸಂಸ್ಕೃತಿ ಪರಂಪರೆ ಮೌಲ್ಯಗಳ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಲು ಸಾಧ್ಯವಾಯಿತು. ಈ ಒಂದು ಅವಕಾಶದಿಂದ ಇಡೀ ಪ್ರಪಂಚ ಭಾರತದ ಕಡೆಗೆ ತಿರುಗಿ ನೋಡುವಂತಾಯಿತು. ಭಾರತೀಯರ ಹೃದಯದಾಳದ ದಿವ್ಯ ಸಂಸ್ಕೃತಿಯನ್ನು ಅರಿಯುವಂತಾಯಿತು.



  ಇತ್ತ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಯಶೋಗಾಥೆಯ ಜೊತೆಜೊತೆಗೆ ಅವರು ಧರ್ಮಪಾಷಾಂಡಿಗಳಿಂದ ಅನುಭವಿಸುತ್ತಿದ್ದ ಕಿರುಕುಳಗಳನ್ನು ಭಾರತೀಯರ ಮನ ಮುಟ್ಟಿಸಲು ಅಳಸಿಂಗ ಪೆರುಮಾಳ್ ವಿಶೇಷ ಗಣ್ಯರ ಸಭೆಗಳನ್ನು ಮದ್ರಾಸು, ಕುಂಬಕೋಣಂ, ಬೆಂಗಳೂರು, ಮೈಸೂರುಗಳಲ್ಲಿ ಆಯೋಜಿಸಿದ್ದರು. ಇಲ್ಲಿ ಠರಾವುಗಳನ್ನು ಮಂಡಿಸಿ ಸ್ವಾಮಿ ವಿವೇಕಾನಂದರ ದಿವ್ಯ ಭವ್ಯ ಸಂಸ್ಕಾರಗಳನ್ನು ಕುರಿತ ಮಾಹಿತಿಗಳನ್ನು ಅಮೆರಿಕದ ಪತ್ರಿಕೆಗಳಲ್ಲಿ ಪ್ರಕಟಪಡಿಸಿದರು.

      ಸ್ವಾಮಿ ವಿವೇಕಾನಂದರ ಪತ್ರಗಳ ಸೂಚನೆಯಂತೆ 1896ರಲ್ಲಿ ಪೆರುಮಾಳರು 'ಬ್ರಹ್ಮವಾದಿನಿ' ಪತ್ರಿಕೆಯನ್ನು ಆರಂಭಿಸಿ, ಸ್ವಾಮಿ ವಿವೇಕಾನಂದ, ಮ್ಯಾಕ್ಸ್ ಮುಲ್ಲರ್ ಸೇರಿದಂತೆ ಅನೇಕರ ಮೌಲಿಕ ಲೇಖನಗಳನ್ನು ಪ್ರಕಟಿಸುವ  ವೇದಿಕೆಯನ್ನಾಗಿ ಮಾಡಿದರು.

    ಸ್ವಾಮೀಜಿ ಮೂರು ವರ್ಷಗಳ ಕಾಲ ಪ್ರಪಂಚದ ಬಹುತೇಕ ದೊಡ್ಡ ನಗರಗಳನ್ನು ಮುಟ್ಟಿ ತಮ್ಮ ಆಧ್ಯಾತ್ಮಿಕ ಸಂಸ್ಕೃತಿಸಾರವನ್ನು ಧಾರೆಎರೆದು ಅಲ್ಲಿನ ಅನುಭವ ಸಾರವನ್ನು ಮೂಟೆ ಕಟ್ಟಿಕೊಂಡು 1897 ಜನವರಿ 15ರಂದು ಭಾರತಕ್ಕೆ ಬಂದರು. ಆಗ ಅವರು, ಭಾರತೀಯರೆಲ್ಲರೂ ಮಿಂದು ಧನ್ಯರಾಗುವ ಅಮೃತದ ಮಡುವಿನಂತೆ, ಹೊಕ್ಕು ಪ್ರಬುದ್ಧರಾಗುವ ಜ್ಯೋತಿಯ ಖನಿಯಂತೇ ಆಗಿದ್ದರು!

        ಜನವರಿ 12, ಸ್ವಾಮಿ ವಿವೇಕಾನಂದರ ಜನ್ಮದಿನ. ರಾಷ್ಟ್ರೀಯ ಯುವದಿನವಾಗಿಯೂ ಘೋಷಿತವಾಗಿದೆ. ಇದು ಅವರ ಯೌಗಿಕ ಚಿಂತನೆಗಳನ್ನು ಮನನ ಮಾಡಿಕೊಂಡು, ಆಚರಿಸುವ ಸಂಕಲ್ಪ ಮಾಡುವ ಪುಣ್ಯಸಮಯ. ಈ ಶುಭಪವಿತ್ರ ಸಮಯದಲ್ಲೇ ಆ ವಿವೇಕ ಪರಂಜ್ಯೋತಿಯನ್ನು ಹೊತ್ತ ದಿವ್ಯಹಣತೆ ನಮ್ಮ ಅಳಸಿಂಗ ಪೆರುಮಾಳರೆಂದೂ, ಆ ಹಣತೆಯನ್ನು ರೂಪಿಸಿದ ಮಣ್ಣಿನ ಕಣಕಣವೂ  ಚಿಕ್ಕಮಗಳೂರಿನದೆಂದೂ ಭಾವಾರ್ಪಣೆಯನ್ನೂ ಮಾಡೋಣ.     

   "ನನ್ನ ಅಳಸಿಂಗ" ಎಂದು ವಿವೇಕಾನಂದರು ಮನದಾಳದಲ್ಲಿ ಇಂಬಿಟ್ಟುಕೊಂಡವರು, "ಅನವರತವೂ ನಿನ್ನ ಪ್ರೀತಿಪೂರ್ವಕ ವಿವೇಕಾನಂದ" ಎಂದು ಹೃದಯದಾಳದಿಂದ ಮಾತನಾಡಿಸುತ್ತಿದ್ದವರು  ನಮ್ಮ ಮಣ್ಣಿನ ಅಳಸಿಂಗ ಪೆರುಮಾಳರು ಎಂದು ಒಂದು ಕ್ಷಣ ನೆನಸಿಕೊಂಡರೇ ಸಾಕು, ಮನ ಧನ್ಯತೆಯ ಕಡಲಿನಲ್ಲಿ ಜೀಕಾಡುತ್ತದೆ. ಎಂತಹ ಪವಿತ್ರಾತ್ಮಗಳಿಗೆ ಜನ್ಮ ನೀಡಿರುವ ಮಣ್ಣು ನಮ್ಮದು. ಇಂದು ಈ ಮಣ್ಣಿನಿಂದ ಚೈತನ್ಯ ಪಡೆಯುತ್ತಿರುವ ನಾವೂ ಅದೆಷ್ಟು ಧನ್ಯರು! ಈ ಧನ್ಯತಾಭಾವದಲ್ಲಿಯೇ ಹಿರೇಮಗಳೂರು ಕಣ್ಣನ್ ಅಣ್ಣನವರ ಮಾರ್ಗದರ್ಶನದಲ್ಲಿ 'ಅಳಸಿಂಗ ಪೆರುಮಾಳ್ ವೇದಿಕೆ' ಕಾರ್ಯ ನೆಡೆಸುತ್ತಿದೆ. ಅನೇಕ ರೀತಿಯ ಸಾರ್ಥಕ ಕಾರ್ಯಗಳನ್ನು ಮಾಡುವ ಹಂಬಲದಲ್ಲಿ ದಿನದಿನವೂ ದುಡಿಯುತ್ತಿದೆ. ಈ ಸಾರ್ಥಕ ಕಾರ್ಯಗಳಲ್ಲಿ ಕೈ ಜೋಡಿಸಿ ದುಡಿಯುವುದೇ ನಮ್ಮ ಪಾಲಿನ ಸಾರ್ಥಕ ಕಾರ್ಯ!!!




Comments

  1. ಅಳಸಿಂಗ ಪೆರುಮಾಳ್ ಅವರನ್ನು ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಡಾ।। ಮಂಜುಳಾ ಅವರಿಗೆ ಧನ್ಯವಾದಗಳು. ಸ್ವಾಮಿ ವಿವೇಕಾನಂದರ ಅಮೇರಿಕಾಗೆ ಹೋಗಲು ಧನ ಸಹಾಯ ಮಾಡಿದವರು ಮುಖ್ಯವಾಗಿ ಖೇತ್ರಿಯ ಮಹಾರಾಜರು (ಇವರು ಸ್ವಾಮೀಜಿ ಅವರ ಹಡಗಿನ ಪ್ರಯಾಣದ ಟಿಕೇಟು ತೆಗೆಸಿಕೊಟ್ಟಿದ್ದರು),ರಾಮನಾಥಪುರದ ಮಹಾರಾಜರು (2 ಲಕ್ಷ ರೂಪಾಯಿ?) ಮತ್ತು ಮೈಸೂರಿನ ಮಹಾರಾಜರಾಗಿದ್ದ ಹತ್ತನೆಯ ಚಾಮರಾಜ ಒಡೆಯರು. ಇವರುಗಳ ಕಾಣಿಕೆಗಳಿಗೆ ಹೋಲಿಸಿದರೆ, ಅಳಸಿಂಗ ಪೆರುಮಾಳ್ ಅವರು ಸಂಗ್ರಹಿಸಿದ್ದು ಅಲ್ಪವೆನಿಸಬಹುದು. ಆದರೆ ಅವರು ಪಟ್ಟ ಶ್ರಮ ಮತ್ತು ತೋರಿಸಿದ ಶ್ರದ್ಧೆ ಯಾವ ಮಹಾರಾಜರಿಗೂ ಕಡಮೆಯಲ್ಲ.


    ReplyDelete
  2. Thanks for sharing this Dr Manjula very nice article & information

    ReplyDelete

Post a Comment