ಅಯ್ಯನಕೆರೆ: ತ್ಯಾಗ, ಬಲಿದಾನ,,,,,

 ಅಯ್ಯನಕೆರೆ: ತ್ಯಾಗ, ಬಲಿದಾನ, ಔದಾರ್ಯಗಳ ಸೆಲೆ!

ಲೇಖನ - ಡಾ  ಮಂಜುಳಾ ಹುಲ್ಲಹಳ್ಳಿ.



    ಚಿಕ್ಕಮಗಳೂರೆಂದರೆ ಮಲೆ ಮಳೆಗಳಿಂದಾವೃತ ಮಲೆನಾಡಷ್ಟೇ ಅಲ್ಲ. ವಿಶಾಲ ಭೂವಿಸ್ತಾರದ ಬಯಲು ಹರವುಗಳ ಬಯಲು ಸೀಮೆಯೂ ಹೌದು! ಮಲೆನಾಡಿನ ಚೈತನ್ಯವನ್ನು ಬಯಲುಸೀಮೆಗೆ ಹೊತ್ತೊಯ್ಯುವ ಹಲವು ಕೊಂಡಿಗಳಲ್ಲಿ ಒಂದು ಮದಗದ ಕೆರೆ. ಮತ್ತೊಂದು ದೊಡ್ಡ ಮದಗದ ಕೆರೆ ಎಂದೂ ಹೆಸರಿದ್ದ ಈಗ ಅಯ್ಯನಕೆರೆ ಎಂದು ಮನೆಮಾತಾಗಿರುವ ವಿಶಾಲ ಸರಸ್ಸು.

      ಚಿಕ್ಕಮಗಳೂರಿನಿಂದ ಕಡೂರಿನ ಕಡೆ ಹೊರಟು ಕಣಿವೆ ಇಳಿಯುತ್ತಿದ್ದಂತೆ ಆಹ್ಲಾದಕರ ಹಸಿರಿನ ವೈಭವದ ತೆರೆತೆರೆ ಸರಿದು ಅಲ್ಲಲ್ಲಿ ಗೋಚರವಾಗುವ ಹಸಿರಸಿರಿಯ ಸೆರಗು, ಹೊಲಗದ್ದೆ ತೋಟಗಳ ಬೆಡಗು ಮಲೆನಾಡು ಕಳೆದು ಬಯಲು ಸೀಮೆ ಆಗಮಿಸುತ್ತಿರುವ ಸೂಚನೆಯನ್ನು ನೀಡುತ್ತವೆ. ಮುಂದುವರೆದಂತೆ, ಸರಪನಹಳ್ಳಿ ಕ್ರಾಸ್, ಉದ್ದೇಬೋರನಹಳ್ಳಿ ಅಥವಾ ಸಖರಾಯಮಟ್ಟಣದ ಹಾದಿಗಳಲ್ಲಿನ ಎಡ ತಿರುವು ಅಯ್ಯನಕೆರೆ ಕಡೆಗೆ ಮುಖಮಾಡುತ್ತವೆ. ನೀರಿನ ಮೂಲಸೆಲೆಯೆಡೆಗೆ ಸಾಗುವ ಹಾದಿಗಳಾದುದ್ದರಿಂದ ಹಾದಿಯುದ್ದದ ತೋಟಗಳು, ಹಾದಿ ನಡುವಣ ಹಳ್ಳಿಗಳು ಸಮೃದ್ಧಿಯ ತೊಟ್ಟಿಲಲ್ಲಿ ನೆಮ್ಮದಿಯಿಂದ ಆಟವಾಡಿ ನಿದ್ರಿಸುವ ಶಿಶುಗಳಂತೆ ಹಾಯಾಗಿವೆ. ಮೂರು ಕವಲುಗಳು ಅಂತ್ಯದಲ್ಲಿ ಒಂದೇ ಆಗಿ ವಿಶಾಲವಾದ ನೀರಿನ ಎದುರು ಕೊನೆಯಾದಾಗ ಒಮ್ಮೆಲೆ ಸಂಭ್ರಮಾಶ್ಚರ್ಯಗಳ ಉದ್ಗಾರ ಚಿಮ್ಮುವುದು. ನಮ್ಮ ನಾಗವರ್ಮ ವರ್ಣಿಸಿದ ಅಚ್ಛೋದ ಸರೋವರ ನೆನಪಾಗುವುದು.

     ಕಣ್ತುಂಬಿಕೊಳ್ಳುವ ಸ್ಪಟಿಕದ ತಿಳಿಯಂತಹ ಮುತ್ತಿನ ಮಾಲೆಯಂತಹ ನೀರಿನ ಹರವು, ಕಣ್ಣು ಹಾಯಿಸಿದಷ್ಟು ದೂರಕ್ಕೆ ಹರಡಿಕೊಂಡ ನೀರಿನ ಹರಿವು, ದೂರದಲ್ಲಿ ಸುತ್ತಲು ಹಸಿರಿನ ಅಂಚು, ನಡುನಡುವೆ ಕಂಗೊಳಿಸುವ ದ್ವೀಪಗಳು, ಎಡಭಾಗದಲ್ಲಿ ಮಗುಚಿಟ್ಟ ಲಾಲಿಕೆ ಆಕಾರದ ಶಕುನರಂಗನಾಥ ಬೆಟ್ಟ, ಎದುರಿಗೆ ದೂರದಲ್ಲಿ ಕಣ್ತುಂಬಿಕೊಳ್ಳುವ ಚಂದ್ರದ್ರೋಣ ಪರ್ವತದ ಉನ್ನತ ಶ್ರೇಣಿಗಳು, ಗೌರಿಹಳ್ಳ ಹರಿದು ಬರುವ ಕಣಿವೆಯ ಆಳದ ಭಾಗ, ಸುತ್ತಲು ಸದಾ ಕಾಲವು ಹಕ್ಕಿಗಳ ಕೊರಳಿಂದ ಹೊರಹೊಮ್ಮುವ ಚಿಲಿಪಿಲಿ ಇಂಚರ, ಉದಯಾಸ್ತಮಾನ, ದಿನರಾತ್ರಿಗಳಲ್ಲಿ ಭಿನ್ನವಿಭಿನ್ನವಾಗಿ ಕಂಗೊಳಿಸುವ ರವಿಚಂದ್ರ ತಾರೆಯರ ಸೊಬಗು, ರಜಾದಿನಗಳಾದರೆ ಎಲ್ಲೆಲ್ಲಿಂದಲೋ ಹರಿದು ಬರುವ ಪ್ರವಾಸಿಗರ ಸಾಗರ!  ಕೆರೆನೀರಿಗಿಳಿದು ಕೈತುಂಬಾ ಪವಿತ್ರಗಂಗೆಯನ್ನು ತುಂಬಿಕೊಂಡು, ಕಣ್ಣಿಗೊತ್ತಿಕೊಂಡು ಶಿರಸ್ಸಿನ ಮೇಲೆ ಹನಿಸಿಕೊಂಡರೆ ಸಾಕು ಜನುಮ ಜನುಮಗಳ ತಾಪವೆಲ್ಲ ಹಾವಿಯಾಗಿ ಶೀತಲ ತಂಪು ಮೈಮನಗಳನ್ನು ಆವರಿಸಿದ ಭಾವ.


     

  ಕೆರೆಗಳನ್ನು ಕಟ್ಟಿಸು, ಬಾವಿಗಳನ್ನು ತೋಡಿಸು, ದೇವಾಗರಗಳನ್ನು ಮಾಡಿಸು ಎಂದು ತಾಯಂದಿರು ಹರಸಿ, ಆರೈಸಿ ತಮ್ಮ ಮಕ್ಕಳನ್ನು ಬೆಳೆಸುತ್ತಿದ್ದ ಸಿರಿಯ ಸಂಸ್ಕೃತಿ ನಮ್ಮದು. ಕ್ರಿ.ಪೂ ಕಾಲದಿಂದಲೆ ಕೆರೆಗಳನ್ನು ಕಟ್ಟಿಸುತ್ತಿದ್ದ, ಹಳ್ಳಿಗೊಂದು ಕೆರೆ ಇರಲೇಬೇಕೆಂದು ಬಯಸಿದ್ದ ಪರಂಪರೆ ನಮ್ಮದು. ಆದರೆ, ಯಾವೊಂದು ಕರೆಯು ಆ ಪರಿಸರದ ಜನಸಾಮಾನ್ಯರ ಶ್ರಮ, ತ್ಯಾಗ, ಬಲಿದಾನ, ಔದಾರ್ಯಗಳಿಲ್ಲದೇ, ಆ ನಾಡಿನ ಒಡೆಯರ ಧೃಡ ಸಂಕಲ್ಪ, ಕೊಡುಗೈ ನೆರವಿಲ್ಲದೆ ರೂಪುಗೊಂಡಿಲ್ಲ ಎನ್ನುವುದು ಸತ್ಯ. ಹೀಗಾಗಿ ಒಂದೊಂದು ಕೆರೆಯು ತನ್ನೊಳಗಿನ ಜೀವಜಲದಂತೆ ಹಲವು ಹತ್ತು ಕಥೆಗಳನ್ನು ತನ್ನೊಳಗೆ ಕಾಪಿಟ್ಟುಕೊಂಡಿರುತ್ತದೆ.

    ಜಲಮೂಲದ ಹುಡುಕಾಟ ಆದಿ ಮಾನವನ ಕಾಲದಿಂದಲೂ ನಿರಂತರವೇ. ನೀರಿದ್ದರೆ ಬದುಕು ಎಂದು ಕಂಡುಕೊಂಡ ನಮ್ಮ ಪೂರ್ವಜರು ಹೊಳೆ, ಚಿಲುಮೆ, ಸಾಗರ, ಸರಸ್ಸುಗಳಂತಹ ಜಲಸಂಪತ್ತಿನ ಸಮೀಪವೇ ನಿವಾಸಗಳನ್ನು ಹಳ್ಳಿ_ಪಟ್ಟಣಗಳನ್ನು ನಿರ್ಮಿಸುತ್ತಾ ಬಂದರು. ಇಲ್ಲವೇ ತಮಗೆ ಸೂಕ್ತವೆಂದು ಕಂಡುಕೊಂಡ ವಾಸಸ್ಥಳದ ಸಮೀಪವೇ ಜಲಸಮೃದ್ಧಿಯನ್ನು ತಂದುಕೊಂಡರು. ಕೆರೆಕಟ್ಟೆ ಕಾಲುವೆಗಳು ರೂಪುಗೊಂಡಿದ್ದು ಹೀಗೆ.

       ಸಖರಾಯಪಟ್ಟಣದ ಹೃದಯದಂತಿರುವ ಅಯ್ಯನಕೆರೆಯ ಹಿಂದೆಯೂ ಹೀಗೆಯೇ ನಿಸರ್ಗದ ವಿಶೇಷ ವರದಾನದ ಜೊತೆಗೆ ಪೂರ್ವಿಕರ ಅಪೂರ್ವ ದೂರದೃಷ್ಟಿ ಅಪಾರ ಶ್ರಮಗಳಿವೆ. ಜೊತೆಗೆ ನಾಡ ಜನತೆಗೆ ಒಳಿತಾಗಲೆಂದು ತ್ಯಾಗ ಬಲಿದಾನದ ಕಾಣಿಕೆ ನೀಡಿದ ಸಹೃದಯಿ ಚೈತನ್ಯಗಳ ಹಿರಿಯಾಶಯಗಳು ಇವೆ.

      ಪಶ್ಚಿಮಘಟ್ಟ ಸರಮಾಲೆಯ ಚಂದ್ರದ್ರೋಣಪರ್ವತ ಚಿಕ್ಕಮಗಳೂರು ಜಿಲ್ಲೆಗೆ ಪ್ರಕೃತಿ ನಿರ್ಮಿಸಿಕೊಟ್ಟಿರುವ ಅಪೂರ್ವ ವರದಾನ. ರಾಜ್ಯದಲ್ಲಿಯೇ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿಯ ಹಿರಿಮೆಯ ಜೊತೆಗೆ ಬರಡು ಭೂಮಿಗೆಲ್ಲ ಜೀವ ಜಲ ಹನಿಸುವ ಯಗಚಿ, ವೇದಾ, ಆವತಿ ನದಿಗಳ ಉಗಮಸ್ಥಾನವೂ. ವಿಶೇಷ ಗಿಡಮೂಲಿಕೆಗಳ, ಔಷಧಿ ಸಸ್ಯಗಳ ತವರಾಗಿರುವ ಇಲ್ಲಿ ಉಗಮಿಸಿ ಹೊರಹೊಮ್ಮುವ ಪಾವನ ಜಲಧಾರೆಗಳಲ್ಲಿ ಒಂದು ಸಣ್ಣಹಳ್ಳ ಬೆಟ್ಟವಿಳಿದು, ಕಣಿವೆದಾಟಿ, ಕಣ್ಣಳೆತೆಯಷ್ಟು ದೂರದ ಸಖರಾಯಪಟ್ಟಣದ ಶಕುನಗಿರಿಗೆ ತಲುಪುವ ವರೆಗೆ ಕೊಂಚ ಹಿರಿದಾಗುತ್ತದೆ. ಈ ಆಯಕಟ್ಟಿನ ಸ್ಥಳದಲ್ಲಿ ವಿಶಾಲ ಕೆರೆಯೊಂದನ್ನು ರೂಪಿಸಿದರೆ ಜೀವಜಲಧಾರೆಯನ್ನು ತಡೆದು ಮಾನವ ಉಪಯೋಗಕ್ಕೆ ಬಳಸಿ ಮುಂದೆ ನದಿಯಾಗಿ ಹರಿಸಬಹುದೆಂಬ ನಮ್ಮ ಹಿರಿಯದ ದೂರದೃಷ್ಟಿ ಜಿಲ್ಲೆಯಲ್ಲಿಯೇ ಎರಡನೆಯ ವಿಶಾಲ ಕೆರೆ ಎಂಬ ಹೆಗ್ಗಳಿಕೆಯ ಅಯ್ಯನಕೆರೆಯನ್ನು ನಿರ್ಮಿಸಲು ಕಾರಣವಾಯಿತು.



       ಈ ಕೆರೆಯನ್ನು ಮೊದಲಿಗೆ ಯಾರು ನಿರ್ಮಿಸಿರಬಹುದೆಂಬ ಕುತೂಹಲಕ್ಕೆ ಇತಿಹಾಸದ ಉತ್ತರವಿಲ್ಲ. ಆದರೆ ಪುರಾಣ ಕಥೆಗಳು ರಾಮಾಯಣದ ಹನುಮಂತನನ್ನು ತೋರಿಸುತ್ತದೆ. ರಾಮರಾವಣದ ಘೋರ ಯುದ್ಧದಲ್ಲಿ ಇಂದ್ರಜೀತುವಿನ ಶರಾಘಾತಕ್ಕೆ ಮೈಮರೆತು ಒರಗಿದ ಲಕ್ಷ್ಮಣದ ಜೀವ ಉಳಿಸಲು ಸಂಜೀವಿನಿ ಪರ್ವತವನ್ನು ತರಲೆಂದು ಹೊರಟುಬಂದ ಹನುಮಂತ. ಆತ ಹುಡುಕಿಬಂದ ಸಂಜೀವಿನಿ ಗಿರಿ ಎಂದರೆ ನಮ್ಮ ಚಂದ್ರದ್ರೋಣ ಪರ್ವತವೇ. ಆದರೆ ಶಕುನಗಿರಿಯ ಸಮೀಪವಿದ್ದ ಮಾಯಾರಾಕ್ಷಸ ಕಾಲನೇಮಿಯ ಮಾಯೆಗೆ ವಶನಾದ ಹನುಮಂತ ಈ ಸಮೀಪದಲ್ಲೇ ನಿದ್ರೆಯ ಮಂಪರಿಗೆ ಸಿಲುಕಿದ. ಮೊಸಳೆಯ ರೂಪತಾಳಿದ ಕಾಲನೇಯಿ ಹನುಮಂತನನ್ನು ಕಬಳಿಸಲು ಬಂದಾಗ ಗುಡುಗು, ಸಿಡಿಲು, ಮಿಂಚುಗಳಿಂದ ಎಚ್ಚೆತ್ತ ಹನುಮಂತ ತನ್ನ ಬಳಿ ಬರುತ್ತಿದ್ದ ಮೊಸಳೆಯ ದವಡೆ ಸೀಳಿ ಎರಡು ಭಾಗ ಮಾಡಿ ಎಸೆದಾಗ ಒಂದು ಈ ದೊಡ್ಡಕೆರೆಯಾಗಿ ರೂಪು ಪಡೆಯಿತಂತೆ!

     ಎಂತಹ ಅದ್ಬುತ ಕಲ್ಪನೆ! ನಮ್ಮ ಜನಪದರು ಯಾರನ್ನು ಬೇಕಾದರು ಎಲ್ಲಿಂದರಾದರೂ ಕರೆದುಕೊಂಡು ಬಂದು ಕ್ಷಣಾರ್ಧದಲ್ಲಿ ತಮ್ಮವರನ್ನಾಗಿಸಿಕೊಂಡು ಏನು ಬೇಕಾದರು ಕೆಲಸ ಕಾರ್ಯ ಮಾಡಿಸಿಕೊಳ್ಳುವಲ್ಲಿ ನಿಸ್ಸೀಮರು. ಹೀಗೆಯೇ ಅವರು ಹನುಮಂತನನ್ನು ಕರೆತಂದು ಕಾಲನೇಮಿಯ ಸಂಹಾರ ಮಾಡಿ ವಿಶಾಲ ಕೆರೆ ರೂಪಿಸಿಕೊಳ್ಳುವುದನ್ನು ನಿಮಿಷದಲ್ಲಿ ಹೇಳಿಬಿಟ್ಟಿದ್ದಾರೆ. ಆದರೆ ಒಂದು ಕೆರೆ ಕಟ್ಟುವುದು ಅಷ್ಟು ಸುಲಭವೇ?

      ಈ ಪ್ರದೇಶದಲ್ಲಿ ವಿಶಾಲ ಕೆರೆಯನ್ನು ನಿರ್ಮಿಸಲೇಬೇಕೆಂದು ಪಣತೊಟ್ಟ ಹೊಯ್ಸಳ ಚಕ್ರವರ್ತಿಯ ಎಲ್ಲ ಪ್ರಯತ್ನಗಳು ನಿಷ್ಪಲವಾಗುವಂತೆ ಕೆರೆಯ ಏರಿಯನ್ನು ನಿರ್ಮಿಸುತ್ತಿದ್ದಾಗೆಯೇ ಕುಸಿಕುಸಿದು ಹೋಗುತ್ತಿತ್ತು. ಹತಾಶನಾದ ದೊರೆಯು ಕೆರೆ ಬದಿಯ ಗುಡ್ಡದ ಮೇಲೆ ಚಿಂತಿಸುತ್ತಾ ಕುಳಿತಾಗ ಕಾಣಿಸಿಕೊಂಡ ವೃದ್ಧ ಅಯ್ಯನವರು ಚಿಂತೆ ಬೇಡ ದೊರೆ ಏರಿಗೆ ಅಡ್ಡಲಾಗಿ ನಾನೇ ಕೂರುವೆ. ನನ್ನನ್ನು ಸೇರಿಸಿ ಏರಿಕಟ್ಟಿಸಿಬಿಡು ಭದ್ರವಾಗಿರುತ್ತದೆ ಎಂದು ಹೇಳಿದಾಗ ಔಹಾರಿದ ರಾಜ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೂ ಅವಕಾಶ ಇಲ್ಲದಂತೆ ಅವರೇ ಸ್ವತ: ಹೋಗಿ ಕಟ್ಟುತ್ತಿದ್ದ ಏರಿಗೆ ಅಡ್ಡವಾಗಿ ಪದ್ಮಾಸನ ಹಾಕಿ ಕುಳಿತರಂತೆ. ದಿಕ್ಕೆಟ್ಟ ಕಾರ್ಮಿಕರಿಗೆ ಸೂಕ್ಷ್ಮ ಸ್ವರದಲ್ಲಿ ಕೆಲಸ ಮುಂದುವರೆಸಲು ಕರೆಕೊಟ್ಟರು. ಎಂದು ಕಂಡು ಕೇಳರಿಯದ ಜೀವಂತ ಸಮಾಧಿಯು ಏರಿಯ ಒಡಲಿನಲ್ಲೇ ನಿರ್ಮಾಣವಾಯಿತು. ಈ ಬಾರಿ ಕಟ್ಟಿದ ಏರಿ ಭದ್ರವಾಗಿಯೇ ನಿಂತಿತು.

        ಈ ಅಯ್ಯನವರನ್ನು ಈ ಪರಿಸರದ ಕಲ್ಮರಡಿ ಮಠದಲ್ಲಿದ್ದ ಗುರುಗಳು ಎಂದು ಕೆಲವು ಕಥೆಗಳಲ್ಲಿ ನಿರೂಪಿಸಿದರೆ ಮತ್ತೆ ಕೆಲವು ಹೇಳಿಕೆಗಳು ಈ ಭಾಗದ ಖ್ಯಾತ ಗುರುಗಳಾದ ನಿರ್ವಾಣ ಸ್ವಾಮಿಯವರೆಂದು ಹೇಳುತ್ತವೆ. ಕೆರೆಯ ಏರಿಯನ್ನು ಭದ್ರವಾಗಿ ಉಳಿಸಲು ಕಿಡಿಗೇಡಿಗಳಿಂದ ರಕ್ಷಿಸಿಕೊಳ್ಳಲು ಜನಮಾನಸದಲ್ಲಿ ರೂಪುಗೊಳ್ಳುವ ಇಂತಹ ಕತೆಗಳು ಕೆರೆಕಟ್ಟೆಗಳಿಗೆ ಅಪೂರ್ವ ದೃಷ್ಟಿಕೋನವನ್ನು ತಂದುಕೊಡುವಲ್ಲಿ ಯಶಸ್ವಿಯಾಗುತ್ತವೆ.

    ಈ ಕೆರೆಯನ್ನು ಬಲ್ಲಾಳರಾಯ ಕಟ್ಟಿಸಿದುದ್ದನ್ನು ಪುಷ್ಟಿಕರಿಸಲು ಕೆರೆಯ ಏರಿಯ ಮೇಲಣ ಗುಡ್ಡದಲ್ಲಿ ಬಲ್ಲಾಳರಾಯನ ದೇಗುಲವಿದೆ. ಶಿಥಿಲವಾದ ದೇಗುಲ ನವೀನವಾಗಿ ಪುನರ್‍ರಚಿತವಾಗಿದ್ದರು ಬಲ್ಲಾಳೇಶ್ವರ ಲಿಂಗ, ಚನ್ನಕೇಶವ, ಕಾಲಭೈರವ, ಗಣಪತಿ, ಚಾಮುಂಡೇಶ್ವರಿ ವಿಗ್ರಹಗಳಲ್ಲಿರುವ ಹೊಯ್ಸಳ ಶೈಲಿಯ ಶಿಲ್ಪ ವಿನ್ಯಾಸ ಮತ್ತು ಈ ದೇಗುಲದ ಮುಂದೆಯೇ ಇರುವ ಕ್ರಿ.ಶ 1158_59 ರ ಶಾಸನವು ಹೊಯ್ಸಳ ಇಮ್ಮಡಿ ವೀರಬಲ್ಲಾಳನ ಅವಧಿಯನ್ನ ಸೂಚಿಸುತ್ತವೆ. ಇದರ ಜೊತೆಗೆ ಕೆರೆಯ ಕಾಲುವೆಗಳ ದಡದಲ್ಲಿರುವ ಹೊಯ್ಸಳ ನಿರ್ಮಿತ ಚಂದ್ರಮೌಳೇಶ್ವರ, ಕಾಳಹಸ್ತೀಶ್ವರ ದೇಗುಲಗಳು ಸಾಕ್ಷಿಯಾಗುತ್ತವೆ.

      ಕೆರೆಯ ಏರಿ ಗಟ್ಟಿಯಾಗಿ ನಿಂತಿತು ನಿಜ. ಆದರೆ ಮಾಯದಂತಹ ಮಳೆ ಬಂದಾಗ ಎಂತಹ ಏರಿಯಾದರೂ ಹೇಗೆ ತಡೆದೀತು. ನಮ್ಮ ಶ್ರೇಷ್ಟ ಜನಪದ ಗೀತೆಗಳಲ್ಲಿ ಒಂದಾದ `ಮಾಯದಂತಹ ಮಳೆ ಬಂತಣ್ಣಾ ಮದಾಗಾದ ಕೆರೆಗೆ' ಹಾಡು ಹಾಡಿದ್ದು ನಮ್ಮದೇ ಕೆರೆಗೆ ಎಂದು ಸ್ವಂತ ಮಾಡಿಕೊಳ್ಳುವ ಅವಕಾಶ ಎಲ್ಲ ಹಿರಿಯ ಕೆರೆಗಳಿಗೂ ಇದೆ. ಅಂತೆಯೇ ಅಯ್ಯನಕೆರೆಗೂ.

       ಮಾಯದಂತಹ ಮಳೆ ಓಥಪ್ರೋಥವಾಗಿ, ಒನಕೆ ದಪ್ಪದ ಧಾರೆಯಾಗಿ ಸುರಿಯ ತೊಡಗಿದಾಗ ಹಿರಿಯ ಮದಗದ ಕೆರೆ ಎಂದೂ ಹೆಸರಾಗಿದ್ದ ಅಯ್ಯನಕೆರೆಯ ಬಲವಾದ ಏರಿಯೂ ತತ್ತರಿಸಿಹೋಯಿತು. ಅಂಗೈ ಅಗಲದ ಮೋಡಕ್ಕೆ ಭೂಮಿ ತೂಕದ ಗಾಳಿ ಜೊತೆಯಾದಾಗ ಮಳೆರಾಯ ಗುಡುಗಿ, ಸಿಡಿದು ಧೋ ಎಂದು ಸುರಿದಾಗ ಕೆರೆಯೊಳಗಿನ ಗಂಗಮ್ಮ ತಾಯಿ ಏರಿ ಹೊಡೆದು ಚೆಲ್ಲಾಡಿ ಹರಿಯಬೇಕಾದ ಅನಿವಾರ್ಯ ಉಂಟಾಯಿತು. ತಾಯಿಗರುಳಿನ ಗಂಗೆ ತನ್ನನ್ನೆ ನಂಬಿ ಬದುಕು ಕಟ್ಟಿಕೊಂಡಿರುವ ಊರಿನ ನಾಶವನ್ನು ಒಮ್ಮೆಲೆ ಹೇಗೆ ಮಾಡಿಯಾಳು? ಸಮೀಪವೇ ಇದ್ದ ಬೆಸ್ತರ ಹುಡುಗರಿಗೆ ಏರಿಯ ಮೇಲೆ ಅದನ್ನು ಕಾಯ್ದುಕೊಂಡಿರುವ ಬಲ್ಲಾಳ ರಾಯನಿಗೆ ಕೂಗಿ ಕೂಗಿ ಹೇಳುತ್ತಾಳೆ ನಾನಿಲ್ಲಲಾಗುತ್ತಿಲ್ಲ, ನಾನಿಲ್ಲುವವಳಲ್ಲ. 

     'ಆರು ಸಾವಿರ ಒಡ್ಡರ ಕರೆಸಿ ಮೂರು ಸಾವಿರ ಗುದ್ದಲಿ ತರಿಸಿ ಸೊಲ್ಲು_ಸೊಲ್ಲಿಗೆ ಮಣ್ಣ ಹಾಕಿಸಿದರು; ಆರು ಸಾವಿರ ಕುರಿಗಳ ತರಿಸಿ ಮೂರು ಸಾವಿರ ಕುಡುಗೋಲು ತರಿಸಿ ಕಲ್ಲುಕಲ್ಲಿಗೆ ರಕ್ತವ ಹನಿಸಿದರು; ಒಂದು ಬಂಡೀಲಿ ವೀಳ್ಯದ ಅಡಿಕೆ, ಒಂದು ಬಂಡೀಲಿ ಚಿಗಳಿ ತಂಬಿಟ್ಟು ತಂದು ಮೂಲೆಮೂಲೆಗೆ ಗಂಗಮ್ಮನನ್ನು ಮಾಡಿಸಿದರು ನಾ ನಿಲ್ಲುವಳಲ್ಲ. ಓಡಿ ಓಡಿ ಸುದ್ದಿಯ ಕೊಡಿರಯ್ಯೋ ನಾ ನಿಲ್ಲುವಳಲ್ಲ' ಎಂದಾಗ ಅದನ್ನು ಕೇಳಿ ಹೆದರಿದ ಬೆಸ್ತರ ಹುಡುಗರು 'ಸುದ್ದಿಯನ್ನು ಕೊಟ್ಟು ತಾವು ಹಿಂದಿರುಗಿ ಬರುವವರೆಗೂ ಏರಿ ಒಡೆಯದೆ ನಿಂತಿರಬೇಕೆಂದು' ಗಂಗಮ್ಮನನ್ನು ಬೇಡಿಕೊಳ್ಳುತ್ತಾರೆ. ತಾಯಿಯನ್ನು ಒಪ್ಪಿಸಿ ಊರ ಕಡೆ ನಾಗಲೋಟ ಓಡುತ್ತಾರೆ.

       ಭೋರ್ ಎಂದು ಸುರಿಯುತ್ತಿರುವ ಮಳೆಯ ನಟ್ಟನಡುರಾತ್ರಿಯಲ್ಲಿ ಈ ಹುಡುಗರು ತಂದ ಸುದ್ದಿಯನ್ನು ಊರವರು, ಊರನ್ನಾಳುವವರು ಹೇಗೆ ಅರಗಿಸಿಕೊಳ್ಳುವುದು? ಆ ರಾತ್ರಿಯಲ್ಲಿ ಏನು ಮಾಡಲು ಅವಕಾಶ ಇಲ್ಲ. ಅಲ್ಲದೇ ಗಂಗೆಯೂ ಹೇಳಿಬಿಟ್ಟಿದ್ದಾಳೆ ಯಾವ ಪೂಜೆ, ಪುನಸ್ಕಾರ, ಕೆಲಸ ಕಾರ್ಯಗಳಿಗೂ ತಾನು ನಿಲ್ಲುವವಳಲ್ಲ ಎಂದು. ಉಳಿದಿರುವುದೊಂದೆ ದಾರಿ ಬೆಸ್ತರ ಹುಡುಗರು ಗಂಗಮ್ಮ ತಾಯಿಗೆ ಸಲ್ಲಿಸಿದ್ದ ಕೋರಿಕೆ. ಅವರು ಹಿಂದಿರುಗಿ ಹೋಗುವವರೆಗೂ ತಾಯಿ ತಡೆದು ನಿಂತಿರುತ್ತಾಳೆ. ಅಂದರೆ ಮಕ್ಕಳು ಹಿಂದಿರುಗಿ ಹೋಗದಿದ್ದರೆ ತಾಯಿ ಬಲವಾಗಿಯೇ ನಿಲ್ಲುತ್ತಾಳೆ. ಬೆಸ್ತರ ಹುಡುಗರು ಊರಿನ ಮನಸ್ಸನ್ನು ಅರಿತರು. ತಾವು ಮತ್ತೆಂದು ಗಂಗೆಯ ಮಡಿಲಿಗೆ ಹಿಂದಿರುಗಿ ಹೋಗಲಾಗುವುದಿಲ್ಲ ಎಂದು ಮನಗಂಡರು. ಕತ್ತಿ ಹಿಡಿದು ಪರಸ್ಪರರ ರುಂಡ ಹಾರಿಸಿಕೊಂಡರು. 

     ಈ ಎರಡು ಜೀವಗಳ ಬಲಿ ಇದಿಗೂ ಕೆರೆಯ ಏರಿ ಒಡೆದುಹೋಗದಂತೆ ಭದ್ರಮಾಡಿದೆಯಂತೆ. ಕೆರೆ ನೀರಿ ಉಕ್ಕಿ ಕೋಡಿ ಬೀಳುವ ಸಂದರ್ಭದಲ್ಲಿ ಗಂಗಮ್ಮ ತಾಯಿ ಈಗಲೂ ಆ ಹುಡುಗರು, ಚನ್ನಬಿಲ್ಲ, ಹೊನ್ನಬಿಲ್ಲರನ್ನು `ಚನ್ಬಿಲ್ಲೋ ಹೊನ್ಬಿಲ್ಲೋ' ಎಂದು ಕೂಗಿ ಕರೆಯುತ್ತಾಳಂತೆ. ಕೆರೆಯ ದಡದಲ್ಲಿ ಇವರ ಹೆಸರಿನಲ್ಲಿ ಇಂದಿಗೂ ಪೂಜೆ ನಡೆಯುತ್ತಿದೆ. ಸಖರಾಯಪಟ್ಟಣ ಊರ ಕೋಟೆಯ ಹೆಬ್ಬಾಗಿಲಿನ ಗಣಪತಿ ದೇಗುಲದ ಬಳಿ ಇವರ ಸ್ಮಾರಕವಿದೆ. 

    ಹೀಗೆ ತ್ಯಾಗ, ಬಲಿದಾನ, ಔದಾರ್ಯಗಳ ನೆಲೆಗಟ್ಟಿನ ಮೇಲೆ ರೂಪಿತವಾಗಿರುವ ಅಯ್ಯನಕೆರೆ ಇಂದು ಸಖರಾಯಪಟ್ಟಣದ ಜೀವಸೆಲೆಯಾಗಿದೆ. ಇಲ್ಲಿಂದ ಹರಿಯವ ಕಡೆ ಕಾಲುವೆ, ಊರ ಕಾಲುವೆ, ಬಸವನ ಕಾಲುವೆ, ಬ್ರಹ್ಮಸಮುದ್ರ ಕಾಲುವೆಗಳು ಕಡೂರು ತಾಲ್ಲೂಕಿನ ಸುಮಾರು 1574 ಹೇಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿವೆ. ಕಟ್ಟೆಹೊಳೆಯೆಂದು ಇಲ್ಲಿಂದ ಹರಿಯುವ ನದಿ ಮುಂದೆ ವೇದಾನದಿಯಾಗಿ ಹರಿದು ಆವತಿಯೊಂದಿಗೆ ಕುಂತಿಹೊಳೆಯ ಸಮೀಪ ಸೇರಿ ವೇದಾವತಿಯಾಗಿ ಚಿತ್ರದುರ್ಗವೆಂಬ ಕಗ್ಗಲ್ಲ ನಾಡಿಗೆ ಜೀವ ಚೈತನ್ಯವಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯ, ವಾಣಿವಿಲಾಸ ಸಾಗರ ಜಲಾಶಯದ ಮೂಲಸೆಲೆಯೂ ಈ ವೇದಾವತಿಯೇ!!!



Comments

  1. ಜಾನಪದ ಸೊಗಡಿನ ಸೊಗಸಾದ ಲೇಖನ. ನಿನ್ನ ತಾಯಿಯ ತವರೂರು ಚಿಕ್ಕಮಗಳೂರು, ಹಾಗಾಗಿಯೇ ಅವರ ಬಾಯಿಂದ ಆಗಾಗ ಅಯ್ಯನ ಕೆರೆಯ ವರ್ಣನೆ ಕೇಳಿದ್ದು ನೆನಪಿತ್ತು. ಈಗ ವಿಸ್ತಾರವಾಗಿ ಓದಿ ಖುಷಿಯಾಯಿತು. 🙏

    ReplyDelete
  2. Dr Manjula you have shared wonderful nature & amazing history, thank you very much

    ReplyDelete

Post a Comment