ನಾದಬ್ರಹ್ಮ ಶ್ರೀ ತ್ಯಾಗರಾಜ ಸ್ವಾಮಿಗಳು

ನಾದಬ್ರಹ್ಮ ಶ್ರೀ ತ್ಯಾಗರಾಜ ಸ್ವಾಮಿಗಳು 

 ಲೇಖಕರು : ಎಂ ಆರ್ ವೆಂಕಟರಾಮಯ್ಯ 


     ‘ದಾಶರಥಿ, ರಘುನಂದನ’  ಮೊದಲಾದ ನಾಮಗಳಿಂದ ಸಂಬೋಧಿಸಲ್ಪಡುವ ಶ್ರೀರಾಮ ಚಂದ್ರ ಮೂರ್ತಿಯ ಪರಮಭಕ್ತರೂ  ಆತನನ್ನು ಸ್ತುತಿಸಿದ ಸರ್ವಜನ ರಂಜಿತ ಕೃತಿಗಳನ್ನು ರಚಿಸಿ, ಅವಕ್ಕೆ ತಾವೇ ರಾಗ ಸಂಯೋಜಿಸಿ, ನಾದೋಪಾಸನೆಯ ಮೂಲಕ ಭಗವತ್ಕೃಪೆಗೆ ಪಾತ್ರರಾದವರು,  ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸಂತ ಶ್ರೇಷ್ಠರೇ ಈ ತ್ಯಾಗರಾಜ ಸ್ವಾಮಿಗಳು. ದಕ್ಷಿಣ ಭಾರತದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದರೂ, ಪಾಶ್ಚಾತ್ಯ ದೇಶಗಳವರೆಗೂ ಇವರ ಕೀರ್ತಿ ಹರಡಿದೆ ಎಂದರೆ ಅಚ್ಚರಿಯೇ ! ಇಲ್ಲಿದೆ ಈ ಸಂತರನ್ನು ಕುರಿತ ಕಿರು ಪರಿಚಯ : 

ತಮಿಳುನಾಡಿನಲ್ಲಿರುವ ತಿರುವಾರೂರ್ ಶಿವಾರಾಧನೆ ಮತ್ತು ಸಂಗೀತಕ್ಕೆ ಹೆಸರಾದ  ಕ್ಷೇತ್ರ. ಈ ಪುಣ್ಯ ಕ್ಷೇತ್ರದಲ್ಲಿ ವಾಸವಾಗಿದ್ದ ತೆಲುಗು ಬ್ರಾಹ್ಮಣ ಪಂಗಡದ ಕಾರ‍್ಲ ರಾಮಬ್ರಹ್ಮಂ ಮತ್ತು ಸೀತಮ್ಮ (ಶಾಂತಮ್ಮ) ದಂಪತಿಗಳಿಗೆ ಮೂರನೆಯ ಪುತ್ರನು ಕ್ರಿ ಶ ೧೭೫೯ ರ ಸಂವತ್ಸರದ ಪುಷ್ಯ ಮಾಸದ ಬಹುಳ ದಶಮಿಯಂದು ಜನಿಸಿದ್ದು ಈ ಶಿಶುವಿಗೆ ಮಾತಾಪಿತರು ತ್ಯಾಗ (ಬ್ರಹ್ಮಂ) ರಾಜನೆಂದು ನಾಮಕರಣ ಮಾಡಿದರು. ಪಂಚಾನಂದ ಬ್ರಹ್ಮಂ (ಜಪ್ಯೇಸ) ಮತ್ತು ಪಂಚಕೇಶ ಬ್ರಹ್ಮಂ ಎಂಬುವರು ತ್ಯಾಗರಾಜರ ಇಬ್ಬರು ಅಣ್ಣಂದಿರು. 

ಉತ್ತಮ ಸಂಸ್ಕಾರವಂತ ಕುಟುಂಬಕ್ಕೆ ಸೇರಿದ ತ್ಯಾಗರಾಜರ ತಾತ (ತಂದೆಯ ತಂದೆ) ಗಿರಿರಾಜ ಕವಿ ಸಂಸ್ಕೃತ ಪಂಡಿತರೂ ಸಂಗೀತ ವಿದ್ವಾಂಸರೂ ಆಗಿದ್ದರು. ಗಿರಿರಾಜ ಕವಿ ಮತ್ತು ರಾಮಬ್ರಹ್ಮಂ ಇಬ್ಬರೂ ಶ್ರೀರಾಮನ ಪರಮ ಭಕ್ತರಾಗಿದ್ದು ದಿನವೂ ಮನೆಯ ಒಳಗೆ, ಹೊರಗೆ ಇಷ್ಟ ದೈವವಾದ ಶೀರಾಮನ ಕುರಿತ ಪೂಜೆ, ಭಜನೆ, ಧ್ಯಾನ, ಉಪನ್ಯಾಸ, ಹರಿಕಥೆಗಳನ್ನು ನಡೆಸುವ ಮೂಲಕ ಧನಾರ್ಜನೆ, ಉದರ ಪೋಷಣೆ ನಿರ್ವಹಣೆಯಾಗುತ್ತಿತ್ತು. 

ತ್ಯಾಗರಾಜರ ತಾಯಿ ಸೀತಮ್ಮನವರೂ ಉತ್ತಮ ಸಂಸ್ಕಾರವAತ ಗೃಹಿಣಿ, ಶ್ರೀರಾಮನ ಭಕ್ತೆ, ಸಂಗೀತ ಬಲ್ಲವರೂ ಆಗಿದ್ದರು. ಬಾಲ್ಯದಿಂದಲೂ ಈ ತಾಯಿ ಮಗನಿಗೆ ಭದ್ರಾಚಲ ರಾಮದಾಸರು, ಅನ್ನಮಾಚಾರ್ಯರ ಕೀರ್ತನೆಗಳನ್ನು ಕೇಳಿಸುತ್ತಾ ಅವನಲ್ಲಿ ಶ್ರೀರಾಮ ಭಕ್ತಿಯ ಪ್ರಥಮ ಬೀಜವನ್ನು ಬಿತ್ತಿದರು. ಮಗನನ್ನು ಒಳ್ಳೆಯ ಪರಿಸರದಲ್ಲಿ ಬೆಳೆಸಲು ಶ್ರಮವಹಿಸಿದರು. ಈ ವಾತಾವರಣವೇ ತ್ಯಾಗರಾಜರ ಭವಿಷ್ಯದ ಬೆಳವಣಿಗೆ, ಸಾಧನೆಗೆ ಪೂರಕವಾಯಿತು. ಹುಟ್ಟೂರಿನಲ್ಲೇ ಮಗನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಯಿತು. ಬಾಲಕನ ೭ ನೇ ವಯಸ್ಸಿನಲ್ಲಿ ಉಪನಯನ ಜರುಗಿತು. ೮ ನೇ ವಯಸ್ಸಿಗೆ ತಂದೆಯಿAದ ಶ್ರೀ ರಾಮತಾರಕ ಮಂತ್ರೋಪದೇಶವಾಯಿತು. ಜೊತೆಗೆ ತಂದೆಯಿಂದ ಸಂಸ್ಕೃತ, ತೆಲುಗಿನ ಸಾಹಿತ್ಯ ಗ್ರಂಥಗಳ, ಶಾಸ್ತç ಗ್ರಂಥಗಳ ಬೋಧನೆ, ಗುರುವಾದ ಶ್ರೀರಾಮಕೃಷ್ಣಾನಂದ ಇವರಿಂದ ‘ನಾರದ ಮಂತ್ರ’ದ ಉಪದೇಶವಾಯಿತು.

ಈ ಮಧ್ಯೆ, ತಂಜಾವೂರಿನ ದೊರೆ ತುಲಿಯಾಜಿ ಎಂಬಾತನ ಆಹ್ವಾನದ ಅನುಸಾರ, ರಾಮಬ್ರಹ್ಮಂ ತಿರುವಾರೂರನ್ನು ಬಿಟ್ಟು ತಿರುವೈಯಾರಿಗೆ ಬಂದರು. ಅಲ್ಲಿ ದೊರೆ ನೀಡಿದ ೬ ಎಕರೆ ಭೂಮಿಯಲ್ಲಿ ತಿರುಮಂಜನ ಎಂಬ ಬೀದಿಯಲ್ಲಿ ಮನೆಯನ್ನು ನಿರ್ಮಿಸಿಕೊಂಡು ಕುಟುಂಬದ ವಾಸವನ್ನು ಮುಂದುವರಿಸಿದರು. ಅದೊಂದು ದಿನ, ಮನೆಯಲ್ಲಿ ಯಥಾ ಪ್ರಕಾರ ಶ್ರೀರಾಮನ ಭಜನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಗ ‘ನಮೋ ನಮೋ ರಾಘವಾಯ ‘ ಎಂಬ ಶುದ್ಧ ತೋಡಿ ರಾಗದಲ್ಲಿನ ಕೀರ್ತನೆಯನ್ನು ಹಾಡಿದಾಗ, ಮಗನ ಕಂಠ ಮಾಧುರ್ಯ, ಸ್ವರ ಸ್ಥಾನವನ್ನು ಮೆಚ್ಚಿದ ತಂದೆ ರಾಮಬ್ರಹ್ಮಂ ಮಗನನ್ನು ವೇದಾದ್ಯಯನ ಸಂಪನ್ನರೂ ಸಂಗೀತ ವಿದ್ವಾಂಸರೂ ಆದ ಸೊಂಟಿ ವೆಂಕಟರಮಣಯ್ಯ ಎಂಬುವರ ಬಳಿ  ಹೆಚ್ಚಿನ ಕಲಿಕೆಗಾಗಿ ಸೇರಿಸಿದರು. 

ಮುಂದೆ, ತಾತ (ತಾಯಿಯ ತಂದೆ) ಕಾಳಹಸ್ತಯ್ಯ ಎಂಬ ಸುಪ್ರಸಿದ್ಧ ವೀಣಾ ಪಂಡಿತರಿಂದ  ಬಾಲಕ ವೀಣಾ ವಾದನ ಕಲಿತರು. ಮನೆಯಲ್ಲಿ ಆಗಾಗ್ಗೆ ನಡೆಸುತ್ತಿದ್ದ ‘ಸೀತಾ ಕಲ್ಯಾಣ, ರುಕ್ಮಿಣಿ ಕಲ್ಯಾಣ, ರಾಧಾ ಕಲ್ಯಾಣ’ ಮೊದಲಾದ ಗೀತ ನಾಟಕಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು, ನವವಿಧ ಭಕ್ತಿಗಳಲ್ಲಿ ಒಂದಾದ ಸಂಕೀರ್ತನ ಭಕ್ತಿ ಮಾರ್ಗವನ್ನು ತಮ್ಮ ಮುಂದಿನ ಹಾದಿಯಾಗಿಸಿಕೊಂಡರು.         

      ೧೮ ವಯಸ್ಸು ತಲುಪಿದಾಗ ತ್ಯಾಗರಾಜರು ಪಾರ್ವತಿ ಎಂಬಾಕೆಯನ್ನು ವಿವಾಹವಾದರು. ಆದರೆ ಈಕೆ ಪತಿ ಇನ್ನೂ ೨೩ ವಯಸ್ಸಿನಲ್ಲಿದ್ದಾಗಲೇ ನಿಧನರಾದ ಕಾರಣ, ಈಕೆಯ ಸೋದರಿ ಕಮಲಾಂಭ ಎಂಬುವರನ್ನು ತ್ಯಾಗರಾಜರು ಮದುವೆಯಾದರು. ಈ ದಂಪತಿಗೆ ಸೀತಾಮಹಾಲಕ್ಷ್ಮೀ ಎಂಬ ಪುತ್ರಿಯು ಜನಿಸಿದಳು.

ಶಿಷ್ಯನ ಕಲಿಕೆ ಹೇಗಿದೆ ಎಂಬುದನ್ನು ಪರೀಕ್ಷಿಸಲು ಅದೊಂದು ದಿನ ಗುರು ವೆಂಕಟರಮಣಯ್ಯನವರು ತ್ಯಾಗರಾಜರನ್ನು ತಮ್ಮ ಮನೆಗೆ ಕರೆಸಿದಾಗ, “ಎಂದುರೋ ಮಹಾನುಭಾವುಲು’ ಎಂಬ ಕೀರ್ತನೆಯನ್ನು ರಚಿಸಿ ಹಾಡಿದರು. ಇದರಿಂದ ಬಲು ಆನಂದಿತರಾದ ಗುರುವು, ದೊರೆಯ ಕೃಪೆ ದೊರೆತು ತಮ್ಮೀ ಶಿಷ್ಯನ ವಿದ್ವತ್ ಪ್ರತಿಭೆಯು ಮತ್ತಷ್ಟು ಉಜ್ವಲವಾಗಿ ಬೆಳಗಲಿ ಎಂಬ ಸದುದ್ದೇಶದಿಂದ ಇದನ್ನು ತಂಜಾವೂರಿನ ದೊರೆಯ ಗಮನಕ್ಕೆ ತಂದಾಗ, ಆ ದೊರೆಯು, ಹರ್ಷಿತನಾಗಿ, ಇವರು ತಮ್ಮ ಆಸ್ಥಾನದಲ್ಲಿ ಸಂಗೀತ ಕಛೇರಿ ನಡೆಸಲು : ವಿದ್ವಾಂಸನಾಗಿರಲು ಆಹ್ವಾನವನ್ನು, ಬೆಲೆ ಬಾಳುವ ಬಹುಮಾನಗಳನ್ನೂ ತ್ಯಾಗರಾಜರಿಗೆ ಕಳುಹಿಸಿದರು. ಇಂಥಹಾ ರಾಜಾಶ್ರಯ ದೊರಕಲು ಪೂರ್ವ ಜನ್ಮದ ಸುಕೃತವಿರಬೇಕು, ಇದು ಸಿಕ್ಕಿದರೆ ಸಾಕು, ತಮ್ಮ ಅದೃಷ್ಟದ ಬಾಗಿಲು ತೆರೆದಂತೇನೇ, ಧನ, ಕೀರ್ತಿ, ಯಶಸ್ಸು, ಅಧಿಕಾರ ಎಲ್ಲವೂ ನಮ್ಮ ವಶ ಎಂದೇ ಹಲವರು ಭಾವಿಸುತ್ತಿದ್ದ ಆ ಕಾಲದಲ್ಲೇ, ತ್ಯಾಗರಾಜರು, ಈ ಯಾವ ಲೌಕಿಕ ಲಾಭಗಳಿಗೂ ಮನಸೋಲದೆ, ದೊರೆಯ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದರು. ಈ ಸಂದರ್ಭಕ್ಕಾಗೇ ಇವರು ರಚಿಸಿದ ಕೃತಿ, ‘ನಿಧಿ ಚಾಲಾ ಸುಖಮಾ, ಶ್ರೀರಾಮುಣಿ ಸನ್ನಿಧಿ ಸುಖಮಾ’ ಎಂಬುದು. 

ಈ ವೇಳೆಗೆ, ತ್ಯಾಗರಾಜರ ಹಿರಿಯಣ್ಣ ಪಂಚಾನAದ ಬ್ರಹ್ಮಂ (ಜಪ್ಯೇಸ) ಮನೆಯ ಜವಾಬ್ಧಾರಿ ನಿರ್ವಹಿಸುತ್ತಿದ್ದರು. ತಮ್ಮನು ಉದ್ಯೋಗ, ಆದಾಯ ಗಳಿಸದೆ ಯಾವಾಗಲೂ ಭಕ್ತಿ, ಪೂಜೆ, ಧ್ಯಾನ, ಸಂಗೀತ ಸಾಧನೆ, ಭಿಕ್ಷಾಟನೆಗಳಲ್ಲಿ ತೊಡಗಿರುವುದು ಅಣ್ಣನಿಗೆ ಸಹಿಸಲಾರದಾಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಗಳಿಸುವವÀರೊಬ್ಬರಾದರೆ ತಿನ್ನುವವರು ಹಲವರು. ಈ ಕಷ್ಟದಿಂದ ಪಾರಾಗಲೆಂದೇ ದೇವರು ತಮ್ಮನಿಗೆ ರಾಜರ ಆಹ್ವಾನ ಕೊಡಿಸಿರಬಹುದು. ಇದನ್ನು ಒಪ್ಪಿದ್ದರೆ ತಮ್ಮೆಲ್ಲಾ ಕಷ್ಟಗಳೂ ಒಮ್ಮೆಗೇ ಮಾಯವಾಗುತ್ತಿತ್ತು. ಆದರೆ ಮನೆಗೆ ಬಂದ ಮಹಾಲಕ್ಷ್ಮಿಯನ್ನು ತಮ್ಮ ನಿರ್ಲಕ್ಷಿಸಿದ ಎಂಬ ಕೋಪದಿಂದ ತ್ಯಾಗರಾಜರು ದಿನವೂ ಪೂಜಿಸುತ್ತಿದ್ದ ಶ್ರೀರಾಮನ ವಿಗ್ರಹ, ಪೂಜಾ ಸಾಮಗ್ರಿ ಎಲ್ಲವನ್ನೂ ಸೋದರನು ಕ್ರಿ ಶ ೧೮೦೫ ರಲ್ಲಿ ಕಾವೇರಿ ನದಿಗೆ ಎಸೆದನು. ತಾನು ದೃಢವಾಗಿ ನಂಬಿದ್ದ ಶ್ರೀರಾಮನು ದೂರವಾದನಲ್ಲಾ ಎಂಬ ಬಾಧೆಯನ್ನು ತಾಳಲಾರದ ಸಂದರ್ಭದಲ್ಲೇ “ಪ್ರಾರಬ್ಧಂ ಇಟ್ಟುಂಡುಗ, ಸರಿವಾರಿ ಲೋನ ..ಎಂದು ದಾಗಿನಾಡೋ” ಎಂಬ ಕೃತಿಗಳಲ್ಲಿ ತ್ಯಾಗರಾಜರು ತಮ್ಮ ದುಃಖವನ್ನು ತೋಡಿಕೊಂಡರು. ಶ್ರೀರಾಮನಿಲ್ಲದ ಮನೆಯಲ್ಲಿ ಒಂದು ಕ್ಷಣವೂ ಇರಲಾರದೆ ಮನೆ ತ್ಯಜಿಸಿದ ತ್ಯಾಗರಾಜರು, ದಕ್ಷಿಣ ಭಾರತದ ಹಲವಾರು ದೇವಾಲಯಗಳನ್ನು ಸಂದರ್ಶಿಸಿ, ಅಲ್ಲಿನ ದೇವರುಗಳನ್ನು ಸ್ತುತಿಸಿದ ಹಲವು ಕೀರ್ತನೆಗಳನ್ನು ರಚಿಸಿದರು. ಭಕ್ತನ ಸಂಕಟವನ್ನು ಅರಿತು ಶ್ರೀರಾಮನೇ ಕನಿಕರಿಸಿದನೇನೋ ಎಂಬಂತೆ ಕಳೆದುಹೋದ ವಿಗ್ರಹಗಳು ಗೋಚರಿಸಿದುವು.

ಪ್ರತಿ ದಿನದ ಪದ್ಧತಿಯಂತೆ ಬೀದಿಯಿಂದ ಬೀದಿಗೆ ಭಿಕ್ಷೆ ಪಡೆಯಲು ಸಂಚರಿಸುತ್ತಿದ್ದ ಒಂದು ಸಮಯದಲ್ಲಿ ಹರಿದಾಸನೆಂಬ ಸಂತನು ‘ನೀನು ಶ್ರೀರಾಮನ ನಾಮವನ್ನು ಲಕ್ಷ ಸಾರಿ ಜಪಿಸಬಲ್ಲೆಯಾ ! ಎಂದು ಸವಾಲನ್ನು ಎಸೆದಾಗ, ಸಂತರ ಇಚ್ಛೆಯಂತೇನೇ ಶ್ರೀರಾಮ ನಾಮವನ್ನು ಜಪಿಸಿ ತಮ್ಮ ಕೊಠಡಿ ಸೇರಿದ ತ್ಯಾಗರಾಜರಿಗೆ ಯಾರೋ ಬಾಗಿಲು ಬಡಿದಂತಾಯಿತಂತೆ . ಚಿಲಕ ತೆರೆದು ನೋಡಿದರೆ ಅಲ್ಲಿ ಹನುಮತ್ಸಮೇತ ಸೀತಾರಾಮರು ಪಟ್ಟಾಭಿಷಕ್ತರಾದ ಸಂದರ್ಭದಲ್ಲಿ ಇದ್ದ ಭಂಗಿಯಲ್ಲಿ ದರ್ಶನವಿತ್ತರಂತೆ. ಆ ಸಮಯದಲ್ಲೇ “ಎಲಾ ನೀ ದಯರಾದು” “ಭಾವನುತ” ಎಂಬ ಕೀರ್ತನೆಗ¼ನ್ನು ರಚಿಸಿ ಹಾಡಿದ್ದು. 

ಶ್ರೀನಿವಾಸನ ದರ್ಶನ ಪಡೆಯಲು ತಿರುಪತಿಗೆ ಆಗಮಿಸಿದಾಗ, ಆಲಯವು ಮುಚ್ಚಲ್ಪಟ್ಟಿತ್ತು. ಇದರಿಂದ ತೀವ್ರವಾಗಿ ನೊಂದು “ತೆರತೀಯಗರಾದ” ಎಂಬ ಕೃತಿಯನ್ನು ಅತ್ಯಂತ ಭಾವುಕರಾಗಿ ಹಾಡಿದ ಕೆಲವೇ ಕ್ಷಣಗಳಲ್ಲಿ ಆಲಯದ ಬಾಗಿಲುಗಳು, ಸ್ವಾಮಿಗೆ ಅಡ್ಡಲಾಗಿದ್ದ ತೆರೆಯುತನ್ನಷ್ಟಕ್ಕೇ ತೆರೆಯಲ್ಪಟ್ಟು, ಸ್ವಾಮಿಯ ದರ್ಶನ ದೊರಕಿತು. ಆನಂದದಿಂದ  ಪುಲಕಿತರಾಗಿ, “ವೆಂಕಟೇಶ ನಿನು ಸೇವಿಂಪನು” ಎಂಬ ಕೃತಿ ತ್ಯಾಗರಾಜರಿಂದ ರಚಿತವಾಯಿತು.

ಆ ಕಾಲದ ಹಲವು ರಾಜ ಮಹಾರಾಜರುಗಳು ತ್ಯಾಗರಾಜರನ್ನು ತಮ್ಮ ಆಸ್ಥಾನದ ವಿದ್ವಾಂಸರನ್ನಾಗಿ ಮಾಡಿಕೊಳ್ಳಲು ಪೈಪೋಟಿಯಲ್ಲಿ ಹಲವು ಆಸೆ ಆಮಿಶಗಳನ್ನು ಒಡ್ಡಿದ್ದರೂ, ಅವರ ಪ್ರಯತ್ನಗಳು ಸಫಲವಾಗಲಿಲ್ಲ. ಕಾರಣ, ಶ್ರೀರಾಮನನ್ನು ಅಲ್ಲದೆ ಮತ್ಯಾರನ್ನೂ ಸ್ತುತಿಸುವುದಿಲ್ಲ : ಮನರಂಜಿಸುವುದಿಲ್ಲ ಎಂಬ ಬಿಗಿ ಪಟ್ಟು ಹಿಡಿದರು ತ್ಯಾಗರಾಜರು.    


         

ಸದಾ ಶ್ರೀರಾಮನ  ಸ್ಮರಣೆಯೇ ತನ್ನ ಧ್ಯೇಯವಾಗಬೇಕು ಎಂದು ಅವರು ಪರಿಗಣಿಸಿದ್ದರು. ಹೀಗಾಗಿ ಸಂಗೀತ : ಶ್ರೀರಾಮ ನಾಮ ಸಂಕೀರ್ತನೆಯೇ  ಇವರ ಉಸಿರಾಗಿತ್ತು. ಸಂಗೀತದಲ್ಲಿ ಸಾಹಿತ್ಯ ರಾಗ, ತಾಳ, ಭಾವ ಎಲ್ಲವೂ ಸರಿಯಿರಬೇಕು, ಯಾವುದನ್ನೂ ನಿರ್ಲಕ್ಷಿಸಬಾರದು ಎಂದು ನಂಬಿ ನಡೆದವರು ತ್ಯಾಗರಾಜರು. ಸಂಗೀತದ ಭಂಡಾರ ಎನಿಸಿದ ನಾರದ ಮಹರ್ಷಿಗಳ ಅನುಗ್ರಹ ತ್ಯಾಗರಾಜರಿಗಿತ್ತು ಎಂಬ ಪ್ರತೀತಿಯೂ ಕೇಳಿಬಂದಿದೆ. ಭಗವಂತ ವೇದ ಪ್ರಿಯನಾದಂತೆ ನಾದ ಪ್ರಿಯನೂ ಹೌದು. ಭಕ್ತಿ, ಸಂಗೀತ, ನಾದೋಪಾಸನೆ ಮೂಲಕ ಪರಮಾತ್ಮನ ಅನುಗ್ರಹ : ಮೋಕ್ಷ ಸಾಧ್ಯ ಎಂಬುದಕ್ಕೆ ತ್ಯಾಗರಾಜರ ಜೀವನವೇ ಒಂದು ಉಜ್ವಲ ಉದಾಹರಣೆಯಾಗಿದೆ. ಪ್ರಹ್ಲಾದ, ಧ್ರುವ, ಹನುಮಂತ ಮೊದಲಾದ ಭಗವದ್` ಭಕ್ತರ ಬಗ್ಗೆ ತ್ಯಾಗರಾಜರಿಗೆ ಅಪಾರ ಗೌರವವಿತ್ತು.

ಕರ್ನಾಟಕ ಸಂಗೀತದ ವಿಷಯಕ್ಕೆ ಬಂದಾಗ ತ್ಯಾಗರಾಜರ ‘ಪಂಚರತ್ನ ಕೃತಿ’ಗಳ ಕುರಿತು ಉಲ್ಲೇಖಿಸಲೇಬೇಕಾಗುತ್ತದೆ. ಸಂಸ್ಕೃತದ ‘ಪಂಚರತ್ನ’ ಎಂಬ ಪದಕ್ಕೆ ಐದು ರತ್ನಗಳು ಎಂಬ ಅರ್ಥವಿದೆ. ನಾಟ ರಾಗದಲ್ಲಿನ ಜಗದಾನಂದಕಾರಕ, ಗೌಳ ರಾಗದಲ್ಲಿನ ‘ದುಡುಕುಗಲ’ ಆರಭಿ ರಾಗದ ‘ಸಾಧಿಂಚಿನೇ’ ವರಾಳಿ ರಾಗದ ‘ಕಾನಕಾನರುಚುನ, ಶ್ರೀ ರಾಗದಲ್ಲಿನ ‘ಎಂದುರೋ ಮಹಾನುಭಾವುಲು’ ಎಂಬುದೇ ಐದು ಪಂಚರತ್ನ ಕೃತಿಗಳಾಗಿವೆ. ಇವು ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಅಮೂಲ್ಯ ಕೊಡುಗೆಗಳಾಗಿದ್ದು ಇವು ಅವರ ವಿದ್ವತ್, ಪ್ರತಿಭೆ, ಸಾಧನೆೆ ಎಷ್ಟಿತ್ತು ಎಂಬುದರ ಸೂಚಕವಾಗಿವೆ. 

ತ್ಯಾಗರಾಜರ ಸಾಮಾಜಿಕ ಪ್ರಜ್ಞೆ ಅದ್ಭುತವಾದದ್ದು. ಸಮಾಜದಲ್ಲಿ ಕಾಣಿಸಿದ ಲೋಪ ದೋಷಗಳನ್ನು ಕಟುವಾಗಿ ಟೀಕಿಸಿ ಬುದ್ಧಿ ಹೇಳಿದ ಇವರು, ಅಂಧಶ್ರದ್ಧೆ, ಅಧರ್ಮ, ಬೂಟಾಟಿಕೆ, ತೋರಿಕೆ ಆಚರಣೆಗಳನ್ನು ಖಂಡಿಸಿದ್ದಾರೆ. ಹಲವು ಕಡೆ ವೇದಾಂತ ತತ್ವ, ನೀತಿಗಳನ್ನು ಸೂಕ್ಷ್ಮವಾಗಿ ಬೋಧಿಸಿದ್ದಾರೆ.  

ತ್ಯಾಗರಾಜರು ೨೪,೦೦೦ ಕ್ಕೂ ಹೆಚ್ಚಿನ ಸಂಖ್ಯೆಯ ಕೃತಿಗಳನ್ನು ರಚಿಸಿ ಅವಕ್ಕೆ ರಾಗ ಸಂಯೋಜಿಸಿ ಹಾಡಿದ್ಧಾರೆಂಬುದು ಸಂಗೀತ ವಿದ್ವಾಂಸರ ಅಭಿಪ್ರಾಂಭವಾಗಿದೆ. 

ಇಂತಹಾ ಶ್ರೀರಾಮನ ಕಟ್ಟಾ ಭಕ್ತ, ಆಸಾಧಾರಣ ಕೃತಿ ರಚನೆಕಾರ, ಸಂಗೀತಗಾರರಿಗೆ, ತಮ್ಮ ಅಂತ್ಯದ ದಿನಗಳು ಸಮೀಪಿಸುತ್ತಿದೆ ಎನಿಸಿ ೦೫. ೦೧. ೧೮೪೭ ರಂದು ಬ್ರಹ್ಮಾನಂದ ಸ್ವಾಮಿಯವರಿಂದ ಸ(ಸಂ)ನ್ಯಾಸ ಸ್ವೀಕರಿಸಿದರು. “ನಾದ ಬ್ರಹ್ಮಾನಂದ” ಎಂಬ ಮರು ನಾಮಕರಣ ಹೊಂದಿದರು. ಜನಿಸಿದ ಮೇಲೆ ತಾವು ನಿರ್ವಹಿಸಬೇಕಾಗಿದ್ದ ಕಾರ್ಯಗಳೆಲ್ಲವನ್ನೂ ಸಾಧಿಸಿದ್ದಾಗಿದೆ. ನನ್ನನ್ನು ನಿನ್ನಲ್ಲಿ ಐಕ್ಯಮಾಡಿಕೊಳ್ಳಲು ಇದು ಸಕಾಲ ಎಂದು ಗಾನವರ್ಧಿನಿ ರಾಗದಲ್ಲಿ ”ದಯಚೂಚುಟುಕಿದಿ ವೇಳ” ಎಂಬ ಕೃತಿಯನ್ನು ರಚಿಸಿ ಹಾಡಿದ ಕೆಲವೇ ದಿನಗಳಲ್ಲಿ ತ್ಯಾಗರಾಜರಿಗೆ ಸೀತಾ ಲಕ್ಷö್ಮಣ ಹನುಮತ್ಸಮೇತ ಶ್ರೀರಾಮನ ದಿವ್ಯ ದರ್ಶನವಾಯಿತಂತೆ. ಆ ಕ್ಷಣದಲ್ಲೇ ಮನೋ ಹರಿ ರಾಗದ ಕೃತಿ ಹಾಡುತ್ತಿರುವಂತೇನೇ ತ್ಯಾಗರಾಜರಿದ್ದ ಸ್ಥಳದ ಸುತ್ತಲೂ ಓಂಕಾರ ನಾದ ತುಂಬಿತ್ತಂತೆ ಇವರ ಶಿರದಿಂದ ಜ್ಯೋತಿಯೊಂದು ಮೇಲ್ಮುಖವಾಗಿ ಪಯಣಿಸಿತು. ರಾಜರು ಕೈಲಿದ್ದ ತಂಬೂರಿಗೆ ಒರಗಿದಂತೇನೇ ೮೮ ವರ್ಷಗಳ ಸಾರ್ಥಕ ಜೀವನ ಮುಕ್ತಾಯಗೊಂಡಿತು. ೧೮೪೭ ರ ಜನವರಿ ೬ ಪ್ರಭವ ನಾಮ ಸಂವತ್ಸರ ಪುಷ್ಯ ಬಹುಳ ಪಂಚಮಿಯಂದು  ಶಿಷ್ಯರೆಲ್ಲರ ಸಮ್ಮುಖದಲ್ಲೇ “ನಾದಬ್ರಹ್ಮ ತ್ಯಾಗರಾಜರ” ಆತ್ಮವು ಬ್ರಹ್ಮಭಾವ ಹೊಂದಿ ಪರಬ್ರಹ್ಮನೊಂದಿಗೆ ಲೀನವಾಯಿತು.



ತ್ಯಾಗರಾಜರ ಗೌರವಾರ್ಥವಾಗಿ ತಮಿಳುನಾಡಿನ ತಿರುವೈಯಾರ್‌ನಲ್ಲಿ ಪ್ರತಿ ವರ್ಷದ ಪುಷ್ಯ ಬಹುಳ ಪಂಚಮಿ ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ೧ ವಾರದ ಅವಧಿಗೆ ಸಂಗೀತ ಸಭೆಗಳನ್ನು ನಡೆಸಲಾಗುತ್ತಿದ್ದು, ಇದರಲ್ಲಿ ವಿಶ್ವದಾದ್ಯಂತವಿರುವ ತ್ಯಾಗರಾಜರ ಭಕ್ತರು, ಸಂಗೀತ ಪ್ರೇಮಿಗಳು  ಭಾಗವಹಿಸಿ ತಮ್ಮ ಸಂಗೀತದ ಕೊಡುಗೆಯನ್ನು ಸಲ್ಲಿಸುವ ಜೊತೆಗೆ, ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೃತಿಗಳನ್ನೂ ಹಾಡಿ “ನಾದಬ್ರಹ್ಮ”ರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.  ಈ ಅವಧಿಯಲ್ಲಿ ವೀಣೆ, ಪಿಟೀಲು, ಕೊಳಲು, ನಾದಸ್ವರ, ಮೃದಂಗ, ಘಟಂ, ಮೊದಲಾದ ಪಕ್ಕ ವಾದ್ಯಗಳ ಕಲಾಕಾರರೂ ಸ್ವಯಂ ಪ್ರೇರಿತರಾಗಿ ಈ ಸಭೆಗಳಲ್ಲಿ ಭಾಗವಹಿಸಿ ಅಗಲಿದ ವಿದ್ವಾಂಸರಿಗೆ ಗೌರವ ಸಲ್ಲಿಸುತ್ತಾರೆ.

ಇಂದೂ ಪ್ರತಿ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅಮೆರಿಕಾದ ಕ್ಲೀವ್ ಲ್ಯಾಂಡ್ : ಓಹಿಯೋದಲ್ಲಿ ತ್ಯಾಗರಾಜರ ಅರಾಧನೆ ಸಂಭ್ರಮ, ಸಡಗರಗಳಿಂದ ನಡೆಯುತ್ತಿದೆ. ಹೀಗೇನೇ, ಚಿಕಾಗೋದಲ್ಲಿ, ದಕ್ಷಿಣ ಭಾರತದ ತೆಲುಗು, ತಮಿಳು, ಕನ್ನಡ, ಮಲೆಯಾಳಂ ಜನರಿರುವ ಅಮೆರಿಕಾ ಹಾಗೂ ಇತರ ದೇಶಗಳಲ್ಲೂ ವರ್ಷಕ್ಕೊಮ್ಮೆ ತ್ಯಾಗರಾಜರ ಆರಾಧನೆ/ ಉತ್ಸವ ತಪ್ಪದೆ ನಡೆಯುತ್ತದೆ.

           ಶ್ರೀರಾಮಚಂದ್ರಮೂರ್ತಿಯ ಪರಮ ಭಕ್ತರಾಗಿ, ಸಂಗೀತವನ್ನೇ ತಮ್ಮ ಉಸಿರಾಗಿಸಿ ಕೊಂಡು ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನಿತ್ತು, ‘ರಾಜರಿಗೇ ರಾಜ, ತ್ಯಾಗರಾಜ’ ಎನಿಸಿಕೊಂಡ ನಾದ ಬ್ರಹ್ಮ ತ್ಯಾಗರಾಜ ಸ್ವಾಮಿಗಳನ್ನು ಭಕ್ತ್ನಿಯಿಂದ ಸ್ಮರಿಸಿ ಗೌರವದಿಂದ ನಮ್ಮ ನುಡಿ ನಮನಗಳನ್ನು ಅರ್ಪಿಸೋಣ. 


Comments

  1. Thank you for wonderful article and nice photos.

    ReplyDelete

Post a Comment