ಅಮ್ರಿತ್ಸರ್ , ವಾಘಾ - ಪ್ರವಾಸ

ಅಮ್ರಿತ್ಸರ್ , ವಾಘಾ - ಪ್ರವಾಸ

ಲೇಖನ - ಶ್ರೀರಾಮಮೂರ್ತಿ ಬೇಸಿಂಗ್ ಸ್ಟೋಕ್ UK 


ಅಮ್ರಿತ್ಸರ್ ಪಂಜಾಬ್ ಪ್ರಾಂತ್ಯದ ಮಖ್ಯವಾದ ಸ್ಥಳ, ನಮ್ಮ ಪುರಾಣದಲ್ಲಿ ವಾಲ್ಮೀಕಿ ಆಶ್ರಮ ಇದ್ದದು  ಮತ್ತು ಸೀತೆ ಮತ್ತು ರಾಮನ ಮಕ್ಕಳು ಲವ ಹಾಗೂ ಕುಶ  ಹುಟ್ಟಿದುದು  ಇಲ್ಲೇ ಎಂಬ ಪ್ರತೀತಿ. ಹತ್ತಿರದಲ್ಲೇ ಇರುವ  ಲಾಹೋರ್ (ಈಗ ಪಾಕಿಸ್ತಾನ್ ) ಮತ್ತು ಕಸೂರ್ ಪಟ್ಟಣಗಳನ್ನು ಇವರೇ ಕಟ್ಟಿದವರು ಮತ್ತು ರಾಮನ ಅಶ್ವಮೇಧ  ಯಜ್ಞದಲ್ಲಿ ಈ ಮಕ್ಕಳು ಯಜ್ಞದ ಕುದುರೆಯನ್ನು ಹಿಡಿದು ಈಗಿನ ದುರ್ಗಿಯಾನಾ  ದೇವಸ್ಥಾನದ ಹತ್ತಿರ ಕಟ್ಟಿಹಾಕಿದರು ಎನ್ನುವುದು ಸಹ ಇಲ್ಲಿಯ ಸ್ಥಳ ಪುರಾಣ.

ಅಮ್ರಿತ್ಸರದಲ್ಲಿ   ೩-೪ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿವೆ.  ಗೋಲ್ಡನ್ ಟೆಂಪಲ್, ಹತ್ತಿರದಲ್ಲೇ  ಇರುವ ಜಲ್ಲಿಯನ್ ವಾಲಾ ಬಾಗ್, ಪಾರ್ಟಿಷನ್ ಮ್ಯೂಸಿಯಂ  ಮತ್ತು ಪಾಕಿಸ್ತಾನ- ಭಾರತದ ವಾಘ ಬಾರ್ಡರ್. 

ಗೋಲ್ಡನ್ ಟೆಂಪಲ್

 


ಮೊದಲನೇ ದಿನ ನಾವು ನೋಡ ಹೊರಟದ್ದು ವಿಶ್ವ ವಿಖ್ಯಾತ ಗೋಲ್ಡನ್ ಟೆಂಪಲ್. ಈಗಿನ ಅಮ್ರಿತ್ಸರ್ (ಅಮೃತ ಸರೋವರ ) ಹದಿನಾರನೇ ಶತಮಾನದಲ್ಲಿ (೧೫೭೭), ಮೂರನೇ ಸೀಖ್ ಪಂಗಡದ ಗುರು ಅಮರ್ ದಾಸ್ ಅವರ ಆದೇಶದ ಮೇಲೆ ನಾಲಕ್ಕನೆ ಗುರು, ಶ್ರೀ ರಾಮ್ ದಾಸ್ ಅವರು ಒಂದು ಸರೋವರ ವನ್ನು ಕಟ್ಟಲು ಪ್ರಾರಂಭಿಸಿದರು. ಐದನೇ ಗುರು ಅರ್ಜನ್ ದೇವ್ ಈ ಸರೋವರಕ್ಕೆ ಇಟ್ಟಿಗೆಯ ಗೋಡೆ ಕಟ್ಟಿ ಮಧ್ಯೆ ಶ್ರೀ ಹರಿಮಂದಿರ್ ಸಾಹೀಬ್ ಮಂದಿರವನ್ನು ಸ್ಥಾಪಿಸಿ ಶ್ರೀ ಗುರು ಗ್ರಂತ್ (ಸೀಖ್ ಪಂಗಡದ ಪವಿತ್ರ ಗ್ರಂಥ) ವನ್ನು  ೧೬ ಆಗಸ್ಟ್ ೧೬೦೪ ರಲ್ಲಿ ಇಲ್ಲಿ ಇಡಲಾಯಿತು  . ಇದು ಈಗ  ಗೋಲ್ಡನ್ ಟೆಂಪಲ್   ಎಂದು ಪ್ರಪಂಚಕ್ಕೆ ಹೆಸರಾಗಿದೆ. 

ಗೋಲ್ಡನ್ ಟೆಂಪಲ್  ಅಥವಾ ಶ್ರೀ ಹರಿಮಂದಿರ್ ಸಾಹೇಬ್ ಬಿಳಿ ಬಣ್ಣದ ಸೊಗಸಾದ ಕಟ್ಟಡ ಈ ಕಟ್ಟಡ ನಿರ್ಮಾಣ ಹೊರಗಿನ ನೆಲಕ್ಕಿಂತ ಸ್ವಲ್ಪ ಕೆಳಗಿದೆ. ನಾಲಕ್ಕು ದಿಕ್ಕಿನ ಪ್ರವೇಶ ಎಲ್ಲಾ ಪಂಗಡದವರು ಭೇದ ಭಾವ ಇಲ್ಲದೆ ಒಳಗೆ ಬರಬಹುದು,  ಆದರೆ ಹೆಂಗಸರು ಮತ್ತು ಗಂಡಸರು ತಲೆಯ ಮೇಲೆ ಒಂದು ವಸ್ತ್ರವನ್ನು ಧರಿಸಿಯೇ  ಒಳಗೆ ಬರಬೇಕು , ಸರೋವರದ ಮದ್ಯದಲ್ಲಿ ೬೭ ಚದುರ ಅಡಿಯ ವೇದಿಕೆ, ಇದರ ಒಳಗೆ ೪೦ ಅಡಿ ಚದುರದ ಮಂದಿರ. ಇಲ್ಲೇ ಪವಿತ್ರವಾದ ಗುರು ಗ್ರಂಥ ಇರುವುದು. ೨೦೨ ಅಡಿ ಸೇತುವೆಯಿಂದ ಇಲ್ಲಿಗೆ ಪ್ರವೇಶ. ದಿನಕ್ಕೆ ಸುಮಾರು ೧೦೦೦೦೦ ಜನ ದರ್ಶನಕ್ಕೆ ಬರುತ್ತಾರೆ, ಇದರ ಬಾಗಿಲು ೨೪/೭ ತೆರೆದುರಿತ್ತೆ.

 


“ಲಂಗಾರ್” ಅಂದರೆ ಉಚಿತ ಊಟ ಇಲ್ಲಿನ ಪದ್ದತಿ, (ಎಲ್ಲಾ ಗುರುದ್ವಾರದಲ್ಲೂ ಸಹ ) ದಿನಕ್ಕೆ ೫೦,೦೦೦ ಭಕ್ತಾದಿಗಳಿಗೆ ಊಟ ಬಡಿಸುತ್ತಾರೆ. ೧,೫೦,೦೦೦ ರೊಟ್ಟಿ ದಿನ ಮಾಡುವುದು ಸಾಮಾನ್ಯದ ಕೆಲಸವಲ್ಲ.  ಇಲ್ಲಿ ಕೆಲಸ ಮಾಡುವರು ೯೦ ಪ್ರತಿಶತ  ಸ್ವಯಂಸೇವಕರು, ಪ್ರತಿಯೊಂದು ಮನೆಯಿಂದ ಒಬ್ಬರೋ ಇಬ್ಬರು ಇಲ್ಲಿ ಬಂದು ತಮ್ಮ ಕೈಲಾದ ಕೆಲಸ ಮಾಡುತ್ತಾರೆ.

 

೧೯೮೪ ರಲ್ಲಿ ಕಾಲಿಸ್ಥಾನ್  ಅಂದರೆ ಸಿಖ್ ಪಂಗಡವರಿಗೆ ಒಂದು ದೇಶ ಬೇಕೆಂದು ಹೋರಾಡಿದ ಕೆಲವರು ಈ ಮಂದಿರವನ್ನು  ಆಕ್ರಮಿಸಿ ಶಸ್ತ್ರಾಸ್ತ್ರಗಳನ್ನು ಇಲ್ಲಿ ಸಂಗ್ರಹಿಸಿದ್ದರು.  ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಆದೇಶದಂತೆ  “ಆಪರೇಷನ್ ಬ್ಲೂ ಸ್ಟಾರ್”  ಹೆಸರಿನಲ್ಲಿ ಧಾಳಿ ನಡೆಸಿದ  ಅಲ್ಲಿಯ ಪಂಜಾಬ್ ಪೊಲೀಸ್ ಮತ್ತು ಭಾರತೀಯ ಸೈನ್ಯದವರು ಈ ಒಳಸಂಚನ್ನು ಅಡಗಿಸದರು.  ಈ ಕಟ್ಟಡಕ್ಕೆ ಸುಮಾರು ಹಾನಿಯಾಗಿ ಅನೇಕ ವಾರಗಳು ಈ ಮಂದಿರಕ್ಕೆ ಜನರಿಗೆ ಪ್ರವೇಶವಿರಲಿಲ್ಲ. ಇದರ ಬಗ್ಗೆ ಮಂದಿರದ ಗೋಡೆಯ ಮೇಲೆ ಮಾಹಿತಿ ಇದೆ.



ಯಾವಾಗಲೂ ಮಂದಿರದ ಒಳೆಗೆ ಹೋಗಲು ದೊಡ್ಡ ಕ್ಯೂ ಇರುತ್ತೆ ಆದ್ದರಿಂದ ಬೆಳಗ್ಗೆ ೮ ಘಂಟೆಯ ಒಳಗೆ ಅಲ್ಲಿದ್ದರೆ ನಿಮಗೆ ಬೇಗ ಮಂದಿರಕ್ಕೆ ಪ್ರವೇಶ ಸಿಗಬಹುದು. ಇದಾದನಂತರ ನಿಮಗೆ ಬೇಕಾದಷ್ಟು ಸಮಯ ಇರುತ್ತದೆ. ಲಂಗರ್  ಸಹ ಹೊಸ  ಅನುಭವ ಆದರೆ ಕೆಳಗೆ ಕೂತು ಊಟ ಮಾಡುವ ಅಭ್ಯಾಸ ಇರಬೇಕು.


 

ಎರಡನೇ ದಿನ ಭಾರತ ಪಾಕಿಸ್ತಾನದ ನಡುವಿನ ವಾಘಾ ಬಾರ್ಡರ್.  ಅಮ್ರಿತ್ಸರ್ ನಿಂದ ಭಾರತ-ಪಾಕಿಸ್ತಾನದ  ಗಡಿ  ಕೇವಲ  ೩೦ ಕಿಲೋಮೀಟರ್ ದೊರದಲ್ಲಿದೆ.  ಅಟಾರಿ ಭಾರತದ ಕೊನೆ ಊರು, ಪಾಕಿಸ್ತಾನ್ ಕಡೆಯಿಂದ ವಾಘ (Wagha ) ಕೊನೆಯ ಊರು.  ಅಮ್ರಿತ್ಸರ್  ಲಾಹೋರ್ ನಿಂದ ಕೇವಲ  ೨೫ ಕಿಲೋಮೀಟರ್ ದೂರದಲ್ಲಿದೆ. ಅಮ್ರಿತ್ಸರ್  ಮತ್ತು ಲಾಹೋರ್ ನಡುವಿನ  Grand Trunk Road  ಈ ಎರಡು ಊರುಗಳ  ಮೂಲಕ ಹಾದುಹೋಗುತ್ತದೆ.  ೧೯೪೭ ನಲ್ಲಿ ದೇಶ ವಿಭಜನೆಯಾದಾಗ,  ಹಿಂದೂಗಳು ಭಾರತಕ್ಕೆ ಬಂದಿದ್ದು  ಮತ್ತು ಪಂಜಾಬಿನ  ಮುಸಲ್ಮಾನರು ಪಾಕಿಸ್ತಾನಕ್ಕೆ ಹೋದದ್ದು  ಇದೇ ಗಡಿಯ  ಮೂಲಕ. ಈ ರಸ್ತೆಯ ಮಧ್ಯೆ ಗಡಿ ಭಾಗದಲ್ಲಿ  ಅವರವರ ದೇಶದ ಭಾವುಟಗಳನ್ನು ಹಾರಿಸಿದ್ದಾರೆ, ಪ್ರತಿದಿನ ಸಾಯಂಕಾಲ ಸುಮಾರು ೨ ಗಂಟೆ ಸೈನಿಕರ ಪರೇಡ್ ಮತ್ತು ಕೊನೆಗೆ ಸೂರ್ಯಾಸ್ತದ  ಸಮಯದಲ್ಲಿ  ಬಾವುಟಗಳನ್ನು  ಕೆಳಗಿಳಿಸುವ  ಪ್ರದರ್ಶನ ನಡೆಯುತ್ತವೆ.  ಇದು ೧೯೫೯ ರಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. 

ಈ ಸಮಯದಲ್ಲಿ ಸಾವಿರಾರು ಜನರು ತಮ್ಮ ದೇಶದ ರಾಷ್ಟ್ರಗೀತೆಗಳನ್ನು ಸಂತೋಷದಿಂದ ಹಾಡಿ ನಲಿಯುತ್ತಾರೆ. ನಾವು ಗಮನಿಸಿದ್ದು  ಪಾಕಿಸ್ತಾನಕ್ಕಿಂತ ಭಾರತದ ಕಡೆ ತುಂಬಾ ಉತ್ಸಾಹವಿತ್ತು. ನಮ್ಮ ಕಡೆ ಸುಮಾರು ೧೦,೦೦೦ ಜನರಿದ್ದರೆ “ಆ” ಕಡೆ ಸುಮಾರು ೩-೪ ಸಾವಿರ ಅಷ್ಟೇ. ಭಾರತದ ನೂರಾರು ಮಹಿಳೆಯರು ತ್ರಿವರ್ಣ ಧ್ವಜ ಹಿಡಿದು “ಭಾರತ್ ಮಾತಾಕಿ  ಜೈ “ಎಂದು  ಡಾನ್ಸ್ ಮಾಡುತ್ತಿರುವಾಗ ಗಡಿ ಆಚೆ ನಿಶಬ್ದ !!  ಸೈನಿಕರು ೩೦ ನಿಮಿಷ ಗೂಸ್ ಸ್ಟೆಪ್ಸ್  ಹಾಕುವುದು ನೋಡಿದಾಗ Monty Python ಅನ್ನುವ comedy  ಜ್ಞಾಪಕ ಬರುತ್ತೆ. ನೀವು ಈಚೆಗೆ ಯುಕೆ ಗೆ ಬಂದಿದ್ದರೆ  ನಿಮಗೆ ಇದು ಬಹುಶಹ  ಗೊತ್ತಿರುವುದಿಲ್ಲ. 


ಈ ಪ್ರದರ್ಶನ ನೋಡುವುದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ, ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದ ಮೇಲೆ ಪ್ರವೇಶ ದೊರೆಯುತ್ತದೆ, ಆದಷ್ಟು ಬೇಗ ಹೋಗಿ ನಿಮ್ಮ ಜಾಗ ಹಿಡಿಯ ಬೇಕು, ನಿಮ್ಮ ಹೋಟೆಲ್ ನಿಂದ ಟಾಕ್ಸಿ ಸಿಗುತ್ತೆ, ೧,೨೦೦-೧,೫೦೦ ರೂಪಾಯಿಗಳು. ಬೇರೆ ದೇಶದ ಪಾಸ್ ಪೋರ್ಟ್ ಇದ್ದರೆ  ಮರೆಯದೆ ತೆಗೆದುಕೊಂಡು ಹೋಗಿ. ನಿಮಗೆ ಬೇರೆ ಕ್ಯೂ ಇದೆ ಮತ್ತು ನಿಮಗೆ ವಿಐಪಿ ಸೀಟ್ ಸಿಗುತ್ತೆ . ಹ್ಯಾಂಡ್ ಬ್ಯಾಗ್ ಹೋಟೆಲ್ನಲ್ಲಿ ಬಿಡಿ ಮಧ್ಯಾನ ನಾಲಕ್ಕೂವರೆಗೆ  ಶುರುವಾಗಿ ಐದೂವರೆಗೆ  ಸರಿಯಾಗಿ ಈ ಸಮಾರಂಭ ಮುಗಿಯುತ್ತೆ, ಆದರೆ ನೀವು ಮೂರು ಘಂಟೆಗೆ ಅಲ್ಲಿದ್ದರೆ ಸಾಕು. ಅಟಾರಿ ಊರಿನ ದಾರಿಯಲ್ಲಿ  ಸರ್ಹಾದ್ ನಲ್ಲಿ “Museum of Peace ” ಇದ್ದು, ಇಲ್ಲಿ ದೇಶ ವಿಭಜನೆಯ ಕಾಲದಲ್ಲಿ ನಡೆದ ದುರ್ಘಟನೆಗಳ ಬಗ್ಗೆ ಕೆಲವು ದಾಖಲೆಗಳಿವೆ. 

ಜಲ್ಲಿಯನ್ ವಾಲಾ ಬಾಗ್  ಮತ್ತು Partition Museum

 


ಕೊನೆಯ ದಿನ ನಾವು ನೋಡಲು ಹೊರಟದ್ದುಜಲ್ಲಿಯನ್ ವಾಲಾ ಬಾಗ್  ಮತ್ತು Partition Museum.   ಇವೆರಡೂ Golden Temple ಸಮೀಪದಲ್ಲೆ ಇವೆ. ಭಾರದಲ್ಲಿ ೧೯೧೯ ರಲ್ಲಿ ನಡೆದ ಅತ್ಯಂತ ಅಮಾನುಶ  ಘಟನೆಗಳಲ್ಲಿ Jallianwala Bagh Massacre ಒಂದು. ಏಪ್ರಿಲ್ ೧೩, ೧೯೧೯ ನಲ್ಲಿ ಸಾವಿರಾರು ಜನರು  ಭೈಸಾಕಿ ಹಬ್ಬವನ್ನು ಆಚರಿಸಲು ಇಲ್ಲಿ ನೆರೆದಿದ್ದರು,  ಆದರೆ ಇಲ್ಲಿ ಸಾರ್ವಜನಿಕರ ಸಭೆಗೆ ನಿಷೇಧವಿತ್ತು. ಬ್ರಿಟಿಷ್ ಸೇನಾ ಅಧಿಕಾರಿ ಡಯರ್ ಇಲ್ಲಿ ನೆರದಿದ್ದವರ  ಮೇಲೆ ಗುಂಡು ಹಾರಿಸುವಂತೆ   ತನ್ನ ಸೈನಿಕರಿಗೆ ಆದೇಶ ಕೊಟ್ಟಾಗ ೪೦೦ ಕಿಂತ ಹೆಚ್ಚಾಗಿ ನಿರಪರಾಧಿ ಜನರು ಸತ್ತರು ಮತ್ತು ಸಾವಿರಾರು ಮಂದಿ ಗಾಯಗೊಂಡರು. ಇಂಗ್ಲೆಂಡಿನಲ್ಲಿ ಇದರ ಬಗ್ಗೆ ತನಿಖೆ ನಡೆಸಲು ಲಾರ್ಡ್ ಹಂಟರ್ ಅನ್ನುವರನ್ನು ನೇಮಿಸಿ ೧೯೨೦ ರಲ್ಲಿ ಇವರ ವರದಿಯನ್ನು ಪ್ರಕಟಿಸಿದರು. ಆದರೆ ಡಯರ್ ನನ್ನು  ಕೆಲಸದಿಂದ ನಿವೃತ್ತಿ ಮಾಡಲಾಯಿತೇ ಹೊರತು ಈತನಿಗೆ ಏನೂ ಶಿಕ್ಷೆ ಕೊಡಲಿಲ್ಲ. ಈ ಪ್ರಸಂಗ ನಡೆದಮೇಲೆ ಭಾರತದ ಸ್ವಾತಂತ್ರ್ಯದ ಹೋರಾಟ ಭರದಿಂದ ಗಾಂಧಿ ಅವರ ನೇತೃತ್ವದಲ್ಲಿ ಶುರುವಾಯಿತು. 

 


೧೯೪೭ರಲ್ಲಿ ಭಾರತ ವಿಭಜಿಸಿದಾಗ ಲಕ್ಷಾಂತರ ಹಿಂದೂ ಮತ್ತು ಸಿಖ್  ಪಂಗಡದ ಜನಗಳು ಗಡಿಯನ್ನು ದಾಟಿ ಬಂದಿದ್ದು ಮತ್ತು ಸ್ಥಳೀಯ ಮುಸಲ್ಮಾನರು  ಇಲ್ಲಿಂದ  ಪಾಕಿಸ್ತಾನಕ್ಕೆ ಹೋದಾಗ ನಡೆದ ಅನಾಹುತಗಳು  ನಮ್ಮ ಇತಿಹಾಸದಲ್ಲೇ ಅತ್ಯಂತ ಕರಾಳವಾದದ್ದು.  ಈ ಸಮಯದಲ್ಲಿ ೧೨-೧೮ ದಶಲಕ್ಷ ಕುಟುಂಬಗಳು ಬೀದಿಪಾಲಾದರು, ಲಕ್ಷಾಂತರ ಜನರ ಪ್ರಾಣ ಹಾನಿಯಾಯಿತು.  ಈ ಘಟನೆಗಳ ಚರಿತ್ರೆ ಇಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ. ಅಮ್ರಿತ್ಸರ್ ಪುರಭವನದ ಆವರಣದಲ್ಲಿ ಈ ಸಂಗ್ರಾಲಯ ೨೦೧೬ರಲ್ಲಿ ಪ್ರಾರಂಭವಾಯಿತು.  ಆಡಿಯೋ ವಿಶುಯಲ್ (AV) ನಲ್ಲಿ ಅನೇಕ ಸುದ್ದಿಗಳನ್ನು ನೋಡಿ ಮತ್ತು ಕೇಳಬಹುದು. ಪ್ರಖ್ಯಾತ ಪತ್ರಕರ್ತ ಕುಲದೀಪ್ ನಾಯರ್ ಮತ್ತು ಸಿರಿಲ್ ರಾಡ್ ಕ್ಲಿಫ್ ( ಈತನೇ ಭಾರತವನ್ನು ವಿಭಾಗಸಿದ್ದು ) ಸಂಭಾಷಣೆ ಇಲ್ಲಿ ನೋಡಬಹುದು. ಈ ಮ್ಯೂಸಿಯಂ ಇಲ್ಲಿನ ಜನರಿಂದ ಪ್ರಾರಂಭವಾಯಿತು, ಅವರ ಅನುಭವಗಳವನ್ನು ಅತ್ಯಂತ ಹೃತ್ಪೂರ್ವಕವಾಗಿ ವರ್ಣಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಇಂತಹ ದುರ್ಘಟನೆಗಳು ನಡೆದಿರುವುದು ಅಪರೂಪ. ಎಲ್ಲಾ ಭಾರತೀಯರು ೧೯೪೭ ರಲ್ಲಿ ನಡೆದ ಈ ಘಟನೆಗಳನ್ನು ನೋಡುವ ಅವಕಾಶ ಇಲ್ಲಿದೆ. ತಪ್ಪದೆ ನೋಡಿ.  ಹೆಚ್ಚು ಸಮಯ ಇದ್ದರೆ ಇಲ್ಲಿಂದ ಚಂದೀಘರ್ ಮತ್ತು ಧರ್ಮಶಾಲಾ ಮುಂತಾದ ಸ್ಥಳಗಳನ್ನು ನೋಡಬಹುದು.


Comments

  1. Very nice article. I did not know many facts that you have provided. Thanks sir

    ReplyDelete

Post a Comment