ರೇಷನ್ ಕಾರ್ಡ್

ರೇಷನ್ ಕಾರ್ಡ್

ಲೇಖನ ಹೇಮಾ ಸದಾನಂದ್ ಅಮೀನ್ 

ಮೌನದ ದ್ರವವನ್ನು ಇನ್ನಷ್ಟು ಕಾಯಿಸಿ ಬೆನ್ನ ಹುರಿಗೆ ಸುರಿಸಿ ಯೋಚನೆಯ ಕೊಠಡಿಯಲ್ಲಿ ತನ್ನನ್ನು ಬಂಧಿಯನ್ನಾಗಿಸಿದ ರೇಷನ್ ಕಾರ್ಡ ಪೆನ್ನಿನ ಶಾಯಿ ಮುಗಿದರೂ ಗೀಚುತ್ತಾ ಇದ್ದುದ್ದನ್ನು ಅಡುಗೆ ಮನೆಯಿಂದಲೇ ನೋಡುತ್ತಿದ್ದ ರೇಣುಕಳಿಗೆ  ಅವನ ಮನಸ್ಥಿತಿ ಅರ್ಥವಾಗಲೂ ಹೆಚ್ಚು ಹೊತ್ತು ಬೇಕಾಗಲಿಲ್ಲ.  ಪೂರ್ತಿ ವಿ಼ಷಯ ತಿಳಿಯಬೇಕಾದರೆ ಸುಮಾರು ಎರಡು ತಾಸು ಅವನಿಗೆ ಕೊಡಬೇಕು. ಆದರೆ ಈಗ ಅವಳ ಬಳಿ ಅಷ್ಟು ಸಮಯವಂತು ಇಲ್ಲವೇ ಇಲ್ಲ.  ಬದಿಯ ಕೋಣೆಯಲ್ಲಿ ಅಮ್ಮ ಹಾವಿನಂತೆ ಕತ್ತೆತ್ತಿ   ಕಣ್ಣಲ್ಲೇ ಹಾಸಿಗೆ  ಚಂಡಿಯಾಗಿರುವುದರ ಸೂಚನೆ ಕೊಟ್ಟು ಮತ್ತೆ     ಅಸಹಾಯಕಳಾಗಿ ಅದರಲ್ಲಿಯೇ  ಮಲಗಿದ್ದಳು . ಇತ್ತ ಗಡಿಯಾರದಲ್ಲಿ ಸೆಕೆಂಡಿನ ಗೆರೆಗಳ ಮದ್ಯ ಮ್ಯಾನೇಜರ್ ಪುರುಷೋತ್ತಮ ಅವರ ಕಿಡಿಗಣ್ಣುಗಳೇ  ಇಣುಕಿಣುಕಿ , " ಇದಾ  ಬರುವ ಹೊತ್ತು ? ಎಂದು ಅಣುಕಿಸಿದಂತಾಗಿತ್ತು.

ರೇಣುಕ ಅವಸರದಲ್ಲಿ ಅಮ್ಮನ ಮತ್ತು ಮನೆಯ ಒಂದು ಹಂತದ ಕೆಲಸ ಮುಗಿಸಿ, ಬ್ಯಾಗನ್ನು ಹೆಗಲಿಗೆ ಸಿಕ್ಕಿಸಿ ಹೊರಡುತ್ತಾ ,” ರೇಷನ್,   ಸಂಜೆ ಬಂದು ನಿನ್ನೊಡನೆ ಮಾತಾಡ್ತೇನೆ ಆಯಿತಾ? ಅಮ್ಮನನ್ನು ನೋಡ್ತಿರು. ಹೆಚ್ಚಿಗೇನೂ ತಿನ್ನಿಸಬೇಡ.  ನೀನೂ  ಊಟ  ಮಾಡು. ಯಾರನ್ನೂ ಮನೆಗೆ ಸೇರಿಸಬೇಡ .”  ಎಂದು ರೆಕಾರ್ಡೆಡ್  ಮಂತ್ರದಂತೆ ಪಠಿಸುತ್ತಾ ಸ್ಕೂಟಿ ಸ್ಟಾರ್ಟ  ಮಾಡಿ ಹೊರಟು ಬಿಟ್ಟಳು. 

ವಿನಾಯಕನ ಚೆಂದದ ಹೆಸರು ರೇಷನ್ ಕಾರ್ಡು ಎಂದು ಬದಲಾಗಲು ಅವನ"  ಉದಾಸೀನವೇ ಕಾರಣ.  ಹುಟ್ಟಿದಾಗಲೂ ಬರೋಬ್ಬರಿ ಮೂರು ಕಿಲೋ ಇದ್ದು , ಮಗು ಬಲಿದಿದೆ. ಹೆರಿಗೆ ಕಷ್ಟ,  ಅಪರೇಷನ್ ಮಾಡಿ ಮಗುವನ್ನು ಹೊರತೆಗೆಯ ಬೇಕೆಂದು ಡಾಕ್ಟರ್ ಹೇಳಿದಾಗ ಒಪ್ಪದೇ ಬೇರೆ ದಾರಿ ಇರಲಿಲ್ಲ.   ಆಗ ಅಗಿರುವ ಆಸ್ಪತ್ರೆ ಖರ್ಚು   ಎಪ್ಪತ್ತು ಸಾವಿರದ ಲೆಕ್ಕಚಾರವನ್ನೂ ಇವನದ್ದೇ ಖರ್ಚಿನ ಖಾತೆಗೆ ಜೋಡಿಸಿಬಿಟ್ಟ  ಅಪ್ಪನಿಗೆ ಮೊದ ಮೊದಲು ಏಪ್ಪತ್ತು ಸಾವಿರ ಖರ್ಚಾದರೂ ಗಂಡು ಮಗು ಎಂಬ ಸಮಾಧಾನ . ಇಂದಲ್ಲ ನಾಳೆ ದುಡಿದು ನಮ್ಮನ್ನು ನೋಡಿಯಾನು ಎಂದು ಆಸೆ ಪಟ್ಟದ್ದೆ ಬಂತು. ಅವಮಾತ್ರ  ಅಷ್ಟೇ ನಿರಾಳವಾಗಿ “  ನಿಮ್ಮ ಯಾವ  ಕನಸುಗಳನ್ನೂ ಸಾಕಾರಗೊಳಿಸುವ ಮಂತ್ರ ದಂಡ ನನ್ನಲಿಲ್ಲ “ ಎಂದು ಸಾಬೀತು ಪಡಿಸಿದನು. 

ಅದಕ್ಕೆ  ಅಕ್ಕಪಕ್ಕದವರು, “ ಇವನು ಬರೀ ರೇಷನ್ ಕಾರ್ಡಿನಲ್ಲಿ ಹೆಸರಿಗೆ ಮಾತ್ರ.  ಒಂದು ಪೈಸೆಯ ಪ್ರಯೋಜನವಿಲ್ಲ “ ಎಂದು ಚುಡಾಯಿಸುತ್ತಿದ್ದರು.  ಕ್ರಮೇಣ ಅವನ  ಹೆಸರೇ ʼ ರೇಷನ್ ಕಾರ್ಡ್ʼ  ಆಗಿ ಉಳಿಯತು. ಮೊದಲು ಹೊರಗಿನವರಾದರೆ, ಬರ ಬರುತ್ತಾ  ಮನೆಯವರ ಬಾಯಲ್ಲೂ ʼ ರೇಷನ್ ಕಾರ್ಡ್ʼ ಎಂದೆ ಕರೆಸಲ್ಪಟ್ಟ.  ಇದರಿಂದ ಅವನ ಚರ್ಮಕ್ಕಾಗಲಿ ಮನಸ್ಸಿಗಾಗಲಿ ಯಾವ  ಪ್ರಭಾವವೂ ಬೀರಿಲ್ಲ.    ರೇಷನ್ ಕಾರ್ಡಿನಲ್ಲಿ ಹೆಸರು ನಮೂದಿಸಿದ್ದರಿಂದ  ಹೊಟ್ಟೆಯಂತು  ತುಂಬುತ್ತೆ. ಮಿಕ್ಕ ವಿಷಯಕ್ಕಾಗಿ  ಅಕ್ಕನೆದುರು ಪದೇ ಪದೇ ಕೈ ಚಾಚುವುದು ಸುತರಾಂ  ಇಷ್ಡವಿರಲಿಲ್ಲ.  ವಿದ್ಯೆವಿಲ್ಲದಿದ್ದರಿಂದ ಊರು ಕೇರಿನವರು ಗಿರಣಿಯಿಂದ ಹಿಟ್ಟು , ಮಸಾಲೆ, ಬೀಡಿ , ತಂಬಾಕು. ಸಿಗರೇಟು,   ತಂದು ಕೊಟ್ಟರೆ  ದೇವರ ಗುಡಿಯ ಹರಿವಾಣದಲ್ಲಿಕೂಡಿದಚಿಲ್ಲರೆಯಂತೆ ಒಂದು ಪಾಲು ಸಾಕಾಗುತ್ತಿತ್ತು.   

ಮನೆಮಾಲೀಕ  ದುರ್ಗದಾಸ್ ಕಾಮತರಿಗೆ ಮಾತ್ರ ಚಪ್ಪಲಿ ತೊಟ್ಟು ಬೀದಿಗೆ ಬಂದನೆಂದರೆ ರೇಷನ್ ಕಾರ್ಡಿನ ನೆರಳಿನ ಬೆಸುಗೆ ಬೇಕೇ ಬೇಕು. ತಟ್ಟನೆ ಹೊರಬಂದು, ಕಟಾಂಜನಕ್ಕೆ ಮುಖಮಾಡಿ, ರೇಷೂ…… ಎಂಬ ಅಲಾಪ ಕೇಳಿಸಿದರೆ ಸಾಕು  ರೇಣುಕ ಎಲ್ಲೇ ಇದ್ದರೂ ಅಡುಗೆ ಕೋಣೆಗೆ ಓಡಿಹೋಗುತ್ತಿದ್ದಳು.   .  ಈ ಅಸಾಮಿ ತನ್ನ ಅಕ್ಕನಿಗೆ ಅರೆಗಣ್ಣೂ ಹಿಡಿಸುವುದಿಲ್ಲ ಎಂಬ ಸತ್ಯ ಅವನಿಗೂ ಗೊತ್ತು.  ರೇಷನ್  ಮೆಟ್ಟಿಲು ಇಳಿಯುತ್ತಾ ಕೆಳಗೆ ಬರುತ್ತಿದ್ದಂತೆ ಒಳಗೆ ಅಮ್ಮ ರೂಢಿಯಂತೆ ತಲೆಎತ್ತಿ ನೋಡಿದ್ದಳು.  ರೇಣುಕ, ಇದ್ದಲ್ಲಿಂದಲೇ “ ಬರ್ತಾನೆ ಬರ್ತಾನೆ, ಇಲ್ಲೆ  ಕೆಳಗೆ ಹೋಗಿದ್ದಾನೆ ಎಂದು ಗಡುಸಾಗಿ ಹೇಳಿದರೆ ತೆಪ್ಪಗಿರುತ್ತಿದ್ದಳು. 

ಅಮ್ಮನ ಅವಸ್ಥೆ ಕಳೆದ ಎರಡು ವರುಷಗಳಿಂದ ಹೀಗೆಯೇ ಇದೆ.  ಅಮ್ಮನ ಬೆಳಗಿನ ಒರಸರಿ ಒಮ್ಮೆ ಮುಗಿಸಿ ಬಿಟ್ಟರೆ ಹೆಚ್ಚಿನ ಕೆಲಸ ರೇಷನ್ನ ಪಾಲಿಗೆ ಸೇರಿದ್ದು.  ಅದನ್ನು ಮಾಡುವುದರಲ್ಲಿ ಅವನೂ ಯಾವತ್ತು ಅಸಡ್ಡೆ ತೋರಿಸಲಿಲ್ಲ.  ರೇಣುಕ ಈ ವಿಷಯಕ್ಕಾಗಿ ತಮ್ಮನಲ್ಲಿ ಅಪಾರ ನಂಬಿಕೆ. ಬದುಕಿನಲ್ಲಿ ಬಂದ್ದದ್ದನ್ನು ಎದುರಿಸುವ ಗಟ್ಟಿಮನಸ್ಸು ಅವಳದ್ದು. ಬಡತನ , ಶ್ರಮ ಎಲ್ಲದರೊಂದಿಗೂ ಜಿದ್ದಿನಿಂದ ಹೋರಾಡಬಲ್ಲಳು . ಆದರೆ ಬಡತನಕ್ಕೆ ಹೆಣ್ತನವನ್ನು ಹರಾಜು ಮಾಡುವಂತಹ ಜಿಗಣೆಗಳನ್ನು  ಸುತರಾಂ ಇಷ್ಟಪಡುತ್ತಿರಲಿಲ್ಲ.  

ರೇಷನ್  ಕೆಳಗಿಳಿದವನೇ ನೇರವಾಗಿ ತಿರುವಿನ ಪಕ್ಕದ್ಲಲಿದ್ದ ಮಂಜಪ್ಪನ ಪಾನ ಬಿಡಿ ಅಂಗಡಿಯತ್ತ ಓಡಿದನು.  ದುರ್ಗಾದಾಸ್  ಮನೆಯಿಂದ ಹೊರಟವನು  ಪ್ರತಿಬಾರಿ  ಹತ್ತು ಹದಿನೈದು ನಿಮಿಷ ಅಲ್ಲಿ  ನಿಂತು ಒಂದು "  ಜಾಪ್ರಾಣಿ ಬತ್ತಿಸಿ "   ಪಾನ್ ಹೇಳಿದರೆ, ಆತ  ಎಲ್ಲಾ ಸಾಮಾಗ್ರಿಗಳೊಂದಿಗೆ ಊರಿನ ಗರಿ ಗರಿ ಸುದ್ದಿಗಳನ್ನೂ ರಸವತ್ತಾಗಿ ಬಿತ್ತರಿಸುತ್ತಾನೆ.

ರೇಷನ್ ಉಸಿರು ಗಟ್ಟಿ ಓಡುತ್ತಾ  ಬರುತ್ತಿದ್ದದ್ದನ್ನು ನೋಡಿ ತಾನೇ ಮುಂದೆ ಬಂದು ,” ರೇಷು ….. ಊರಿಗೆ ಹೋಗಬೇಕಾಗಿದೆ. ರಾತ್ರಿಯಾಗಬಹುದುದೆಂದು ಮನೆಯಲ್ಲಿ ಹೇಳಿಬಾ. “ 

ಕೂಡಲೇ  ವಿಷಯ ಏನು ಅನ್ನುವಂತೆ  ಕಣ್ಣರಳಿಸಿದಾಗ, “   ಹೇಳ್ತೇನೋ,  ನೀನು ಹೇಳಿ ಬಾ ಮೊದಲು”  ಎಂದು ಗೌಪ್ಯ ಪಾಲಿಸುವಂತೆ ಅತ್ತ ಇತ್ತ ಯಾರೂ ಕೇಳಿಸಿ ಕೊಳ್ಳಲಿಲ್ಲವಲ್ಲ?  ಎಂದು ಖಾತ್ರಿ ಮಾಡಿಕೊಂಡ.  ಆತ ಹಿಂತಿರುಗಿ ಎರಡು ಹೆಜ್ಜೆ ಮುಂದಿಡಲು ವಾಪಸ್ ಕರೆದು, " ಕೇಳು, ಅಕ್ಕನಿಗೆ ಕೆಲಸಕ್ಕೆ ಹೋಗಲು ಹೇಳು.  ಕೆಲಸ ಮತ್ತೆ ಅತ್ತೆಯನ್ನು ನಮ್ಮ ಗುಲಾಬಿ ನೋಡಿಕೊಳ್ಳುತ್ತಾಳೆ. ನಾನು ಹೇಳಿ ಬಂದಿದ್ದೇನೆ  ರೇಣು ಬರುವವರೆಗೂ ನಿಮ್ಮಲ್ಲಿಯೇ ಇರ್ತಾಳೆ." ಎಂದು ಹೇಳಿ ಬಾ “  ಎಂದು  ಒತ್ತೊತ್ತಿ ಹೇಳಿದನು. ರೇ಼ಷನ್ ವಿಷಯವನ್ನು  ಯಾವ ರೀತಿಯಲ್ಲಿ ಮಂಡಿಸಿದ್ದನೋ ಗೊತ್ತಿಲ್ಲ ,ಐದೇ ನಿಮಿಷದಲ್ಲಿ ಪ್ರತ್ಯಕ್ಷನಾದನು.   ಮಂಜಪ್ಪನಿಗೆ  ಹೊಸ ಸುದ್ದಿ ಪಾಕಗೊಳ್ಳುವ ವಾಸನೆ ಮೂಗಿಗೆ ಅಡರಿದರೂ , ದುರ್ಗಾದಾಸ ಪಿಟ್ಟೆನ್ನಲಿಲ್ಲ. 

ಮುಖ್ಯರಸ್ತೆಯಲ್ಲಿ ನಾಗೇಶ್ ಕಾರ್ ತಂದು ದುರ್ಗಾದಾಸರನ್ನು ಕಾಯುತ್ತಿದ್ದ.   ಇದು ಅವನ ರೂಢಿ.  ಸ್ವಲ್ಪ  ಪ್ರಯಾಸ ಮಾಡಿದರೆ ಗಾಡಿಯನ್ನು  ಮನೆಯ ಮುಂದೂ ತರಬಹುದು. ಆದರೆ ದೇವಸ್ಥಾನದೆದುರು ಹೂವು ಮಾರುವ  ಕಪ್ಪಾದರೂ ಮೈಕೈ ತುಂಬಿ ಲಕ್ಷಣವಾಗಿರುವ ಹರಿಣಾಕ್ಷಿಯನ್ನು ಕಣ್ತುಂಬಿಸಿ ಕೊಳ್ಳುವ , ಕಣ್ಣಲ್ಲಿಯೇ ನೂರಾರು ಕವನ ಓದುವ ಸದವಕಾಶ ಎಲ್ಲಿ ತಪ್ಪಿಹೋಗುತ್ತೋ ಎಂದು, “  ಯಜಮಾನರೇ, ಇಕ್ಕಟ್ಟಾದ ಓಣಿಯಲ್ಲಿ ಗಾಡಿಗೇನಾದರೂ ಡ್ಯಾಮೇಜ್ ಗೀಮೆಜ್ ಆದ್ರೆ   ಕಷ್ಟ. ಕೂತಲ್ಲಿಯೇ ಹತ್ತು ಹದಿನೈದು ಸಾವಿರದ ಖರ್ಚು .  ಎಂದು ಸಣ್ಣಗೆ ಭೀತಿ  ಹುಟ್ಟಿಸಿ ಪಕ್ಕ ರಸ್ತೆಯಲ್ಲೇ ಕಾರ್ ಪಾರ್ಕ್ ಮಾಡಿ ಅಲ್ಲೇ ಕಾಯುವ ಆದೇಶವನ್ನೂ ಮಂಜೂರು ಮಾಡಿಕೊಂಡಿದ್ದ.   ಕಳೆದ ಸಂಕ್ರಾಂತಿಯ ಜಾತ್ರೆಯಂದು ಇವರ ಪ್ರೇಮ ಕುದುರಿದ್ದಿತ್ತು.

 ಹರಿಣಾಕ್ಷಿ ಎರಡು  ಮೊಳ   ಜಾಜಿ ಹೂವಿನ ಹಾರವನ್ನು ತಯಾರಿಸಿ ತಾನೇ ಕಾರಿನಲ್ಲಿಯ ರಾಯರ ಫೋಟೋಗೆ ತೊಡಿಸಲು ಬಂದಾಗ, ಅವಳ ಕೈಯನ್ನು ನಯವಾಗಿ ಅಮುಕಿ ರಾಯರೆದುರೇ ಮಾತು ಕೊಡ್ತಿದ್ದೇನೆ ಹರಿಣಾ , "    ಈ ಬಾರಿ ಮಳೆ ನಿಂತ ಬಳಿಕ ಇದೇ  ದೇವಸ್ಥಾನದಲ್ಲಿ ಹಾರ ಬದಲಿಸುವ  ಕಾರ್ಯ ಮುಗಿಸಿಯೇ ಬಿಡ್ತೇನೆಂದು ಅವಳ ಕೈಗಳನ್ನು ಅಮುಕುತ್ತಾ ಮೆಲ್ಲನೆ,  ಅವಳ ಕಣ್ಣಲ್ಲಿಯೇ ಹೊಸ ಹೊಳಪನ್ನು ತನ್ನ ಕಣ್ಣಲ್ಲಿ ಸೆಳೆದು,  ಇದು ನಮ್ಮದೇ ಪ್ರಪಂಚ ಅತ್ತ ಇತ್ತ ಯಾರೂ ಇಲ್ಲವೆನ್ನುವಂತೆ ಅವಳ ತುಟಿ ರೇಖೆಯನ್ನು  ಬೆರಳಿನಿಂದಲೇ  ಒಮ್ಮೆ ತೀಡಿ ಮೃದುವಾಗಿ ತನ್ನ ತುಟಿಯನ್ನೊತ್ತಿ ಬಿಟ್ಟ. .   ಒಂದೆರಡು ಕ್ಷಣ ಹಾಗೆಯೇ ಇದ್ದು ಮತ್ತೆ ನಶೆಗಣ್ಣಿನಲ್ಲಿಯೇ  " ಒಲವಿನ ಚೆಲುವೆಗೆ  ಇದೇ  ನನ್ನ  ಪ್ರೇಮದ ಮುದ್ರೆ " ಎನ್ನುವಷ್ಟರಲ್ಲಿ ಎದುರಿನಿಂದ ಯಜಮಾನರು ಬರುವುದನ್ನು ನೋಡಿ ಹರಿಣಾ ಪರಾರಿಯಾದಳು.  ನಾಗೇಶನ ಕನಸಿನ ರೀಲು ನಾನ್ ಸ್ಟಾಪ್ ಓಡುತ್ತಲೇ ಇತ್ತು . 

ದುರ್ಗದಾಸರು ಅವನ್ಹೆಸರನ್ನು ಎರಡು ಮೂರೂ ಬಾರಿ ಕರೆದರೂ ಪ್ರತಿಕ್ರಿಯೆಯಿಲ್ಲದಿರಲು ಹೆಂಟೆಗೂಡಿನೊಳಗೆ ತಲೆ ತುರುಕಿಸಿ ಮೊಟ್ಟೆ ಹುಡುಕುವ  ಪರಿ,  " ಲೋ... ನಾಗೇಶೂ .. ಎಲ್ಲಿದ್ದೀಯೋ?"  ಎಂದು ಹೆಗಲು ಕಲುಕಿಸಿ ಎಚ್ಚರಿಸಿದ.  ಪರಿಸ್ಥಿತಿಯನ್ನು ಸುಧಾರಿಸುತ್ತಾ, ಏನಿಲ್ಲ ಯಜಮಾನರೇ  ನಿನ್ನೆ ಮಲಗುವಾಗ ಸ್ವಲ್ಪ ಲೇಟಾಗಿತ್ತು. ಹಾಗಾಗಿ ನಿದ್ದೆಗಣ್ಣು .   ಪಕ್ಕ  ಸುಳ್ಳು ಹೇಳ್ತಿದ್ದಾನೆ ಮಗಾ..  ಎಂದು ಗೊತ್ತಾದರೂ,  ಈಗ  ಆ ವಿಷಯ ಕೆದಕುವುದು ಸರಿಯಿಲ್ಲವೆಂದು  ಸುಮ್ಮನೆ ಕಾರೊಳಗೆ ಕೂತು , "  ಹಳ್ಳಿ ಮನೆಗೆ " ಅಂದ . ನಾಗೇಶ್ ಹಠಾತ್ತನೆ ಹಿಂತಿರುಗಿ  " ಮೊದಲು ತಿಳಿಸಲೇ ಇಲ್ವಲ್ಲಾ ಎಂದು ಪ್ರಶ್ನಾರ್ಥಕವಾಗಿ ನೋಡಿದ. 

ನಡೆಯೋ... ವಿಷಯ ಹೇಳ್ತೇನೆ ನಡಿ  ಎಂದು ಅವನ ಕುತೂಹಲಕ್ಕೆ ಪೂರ್ಣವಿರಾಮ ಹಾಕಿದ.  ದುರ್ಗದಾಸರ ಹಳ್ಳಿ ಮನೆ ಗೋಕರ್ಣದಿಂದ ಮೂವತ್ತು ಕೀಲೊಮೀಟರ್ ಅಂತರದ ಕುಮುಟಾದಲ್ಲಿರುವುದು. ಅಲ್ಲಿಯ ಹಳೆ ಮನೆಯನ್ನು ದುರಸ್ತಿ ಮಾಡಿ ಈಗ ಬಂಗಲೆ ತರಹ ಕಟ್ಟಿ ದುರ್ಗಾದಾಸರ ಹಿರಿಯ  ಅಣ್ಣ ಆದಿದಾಸ ತನ್ನ  ಪರಿವಾರದೊಂದಿಗೆ ಇರುತ್ತಿದ್ದನು . ತನಗಂತು ಸ್ವಂತ ಮಕ್ಕಳಿರಲಿಲ್ಲ.  ಅಣ್ಣನ ಮಕ್ಕಳೊಂದಿಗೆ ಬೆರೆತು ಒಂದೆರಡು ದಿನ ಅಲ್ಲೇ ಇದ್ದು ಬಂದಾಗ ಏನೋ?  ಸಮಾಧಾನ.  ಹಾಗಂತ ಅವನ ಹೆಂಡ್ತಿ  ಟೀಚರಮ್ಮ ಶೋಭಾಳಿಗೆ ಇವೆಲ್ಲಾ  ಒಂದ್ಚೂರು  ಹಿಡಿಸುತ್ತಿರಲಿಲ್ಲ. “ ಎಲ್ಲಾ ಇಮೋಷನಲ್ ಪೂಲ್ಗಳು  , ಹೀಗೆ ಬೆಲ್ಲ ಸವರಿ ಮಾತಾಡಿ ತನ್ನ ಗಂಡನಿಂದ ಹಣ ಕಬಳಿಸುವ ಹುನ್ನಾರವಿದು. ನಾನ್ಮಾತ್ರ ಇವರ ಯೋಜನೆಯನ್ನು  ಯಶಸ್ಸಾಗಲೂ  ಬಿಡಲಾರೆ " ಎಂದು ಹುತ್ತಕ್ಕೆ  ಸುತ್ತಿದ ಹಾವಿನಂತೆ ಯಾವಾಗಲೂ ಬುಸುಗುಟ್ಟುತ್ತಿದ್ದಳು.  ಇಂದೂ  ಹಳ್ಳಿ ಮನೆಗೆ ಗಂಡನ ಜೊತೆಗೆ ಹೋಗಬೇಕೆನ್ನುವುದು   ಅವಶ್ಯಕ ಎಂದೆನಿಸಲಿಲ್ಲ.  

ನಿನ್ನೆ ರಾತ್ರಿ ಅಣ್ಣ ಕರೆ ಮಾಡಿ " ಚೆನ್ನೈಯಿಂದ ಅಪರಿಚಿತ ವ್ಯಕ್ತಿಯೊಬ್ಬರ ಕಾಲ್ ಬಂದಿತ್ತು.  ನಮ್ಮ ಆರೂ  ತೀರಿ ಹೋದಳಂತೆ"  ಯಾವತ್ತೂ ಬಾಯಿಗೆ ಬಾರದ ಹೆಸರು ಕೇಳಿ ಒಮ್ಮೆಲೇ ದುರ್ಗಾದಾಸರ ಎದೆ ಧಸಕ್ಕೆಂದಿತು.   ಅಣ್ಣನ ಮಕ್ಕಳು ವಿಡಿಯೋ ಕಾಲ್ ಮಾಡಿ ವಿಷಯವನ್ನು ಖಚಿತ ಪಡಿಸಿದ  ಬಳಿಕ,  ಅಂತಿಮ ಸಂಸ್ಕಾರ ಹಳ್ಳಿ ಮನೆಯಲ್ಲೇ ಆಗಬೇಕೆಂದು ಆ ವ್ಯಕ್ತಿಯೊಂದಿಗೆ ಮಾತನಾಡಿ ಅಂಬ್ಯುಲೆನ್ಸ್ ಮೂಲಕ ಶವವನ್ನು ಹಳ್ಳಿ ಮನೆಗೆ  ಕಳುಹಿಸಿಕೊಡಲು  ಬಿನ್ನಯಿಸಿದರು. 

ದುರ್ಗಾದಾಸರು ಈ ವಿಷಯ ಹೆಂಡ್ತಿ ಜೊತೆಗೆ ಹೇಳಿ  ಆಕೆಯನ್ನು ಬರಲು  ಒತ್ತಾಯಿಸಿದಾಗ,  " ಆಕೆ ಯಾವ ಘನಂಧಾರಿ ಕೆಲಸ ಮಾಡಿದ್ದಳೆಂದು  ನನ್ನನ್ನು ಒತ್ತಾಯಿಸುತ್ತಿದ್ದೀರಿ?  ತಂಗಿ ಮೇಲೆ ಅಷ್ಟು ಪ್ರೀತಿ ಇದ್ರೆ ನೀವೇ ಹೋಗಿ ಎಂದು ಎರಡೂ ಕೈ ಜೋಡಿಸಿ ಇದೆ ನನ್ನ ಉತ್ತರ ಎನ್ನುವಂತೆ ನಿರ್ದಾಕ್ಷಿಣ್ಯಾವಾಗಿ ಹೇಳಿಬಿಟ್ಟಳು. 

*********

 ಆರಾಧನಾ ಇಬ್ಬರು  ಅಣ್ಣಂದಿರ ಮುದ್ದಿನ ತಂಗಿ. ಅತಿ ಸಲುಗೆಯಿಂದ  ಬೆಳೆದ ಆಕೆ ಇಷ್ಟಪಟ್ಟಿದ್ದು ಗಾಣಿಕ ಸಮಾಜದ  ಹುಡುಗ ನವೀನನನ್ನು. ಅವರಿಬ್ಬರು ಕದ್ದು ಮುಚ್ಚಿ ಮದುವೆಯಾದ ವಿ಼ಷಯ ಅಣ್ಣಂದಿರಿಗೆ ನುಂಗಲಾರದ ತುತ್ತಾಗಿತ್ತು. ಅಣ್ಣಂದಿರು ಕೂಡಲೇ ಸಂಬಂಧಗಳ ಗಟ್ಟಿ ಕೊಂಡಿಯನ್ನು ಮಾತಿನ ಕೊಡಲಿ ಹೊಡೆದು ಕತ್ತರಿಸಿದ್ದರು.  ತಾನು ಕಕ್ಕುಲಾತಿಯಿಂದ ತನ್ನ ಸಹೋದರರನ್ನು  ರಾಜಿ ಮಾಡಿಸುವೆನೆಂಬ ಆರಾಧನಳ ನಂಬಿಕೆ ನೀರು ಪಾಲಾಯಿತು.   ಆ ಬಳಿಕ ಅವರಿಬ್ಬರೂ ಆ ಊರನ್ನೇ  ಬಿಟ್ಟು ದೂರ  ಚೈನೈಯಲ್ಲಿ ಹೊಸ ಜೀವನ ಪ್ರಾರಂಭಿಸಿದರು.

ಅಂದಿನಿಂದ  ತುಕ್ಕು ಹಿಡಿದ ಬದುಕನ್ನು ಎಷ್ಟು ಸಾಣೆ ಹಿಡಿಸಿದರೂ ಚೂಪುಗೊಳ್ಳಲಿಲ್ಲ . ಮನೆಯಲ್ಲಿ ಯಾವ ಪ್ರಸಂಗದಲ್ಲೂ ಮನೆಮಗಳನ್ನು ಕರೆಸಿಕೊಳ್ಳಬೇಕೆಂದು ಅಣ್ಣಂದಿರಿಗೆ ಅನಿಸಿಲ್ಲ. ಅವರು ಕರೆಯದೆ ನಾನು ಹೋಗುವುದಿಲ್ಲ ಎಂಬ ಹಠದ ಒಡ್ಡಿನ ಆಚೆಗೂ ಬಹಳಷ್ಟು ಏರುಪೇರುಗಳಾದವು.  

ಆರಾಧನಾ ಮತ್ತು ನವೀನ ಮದುವೆಯಾಗಿ  ಆರು ವರುಷಗಳಾದರೂ ಮಕ್ಕಳಾಗಲಿಲ್ಲ.   ಈ   ವಿಷಯವನ್ನೇ ಮುಖ್ಯ ಮುದ್ದೆಯನ್ನಾಗಿಸಿ ಶುರುವಾದ ಸಣ್ಣ ಪುಟ್ಟ ಜಗಳ ದೊಡ್ಡ ರಾದ್ದಾಂತಕ್ಕೆ  ನಾಂದಿಯಾಯಿತು. ಇನ್ನು ಸಹಜೀವನ ಸಹಬಾಳ್ವೆ ಎಲ್ಲಾ ಬಾಯಿಮಾತು ಎಂದು ಇಂಚು ಇಂಚು ದೂರಾಗಲು ಆರಂಭಿಸಿದ.  ಅವರಿಬ್ಬರ ಸಂಬಂಧದಲ್ಲೂ  ಒಡಕು ಹುಟ್ಟಿತ್ತು.   ಒಂದೊಮ್ಮೆ ಕೆಲಸದ ಕಾರಣ ಹೇಳಿ ಹೋದವನು ಮತ್ತೆ ಹಿಂತಿರುಗಿ ಬರಲೇ ಇಲ್ಲ.  ಎಷ್ಟಾದರೂ ತಾಳಿ ಕಟ್ಟಿದ್ದನಲ್ಲ ನಿಭಾಯಿಸಿಕೊಂಡು ಹೋಗಬೇಕೆಂದು ಕಟಾಚಾರಕ್ಕೆ ಪೊಲೀಸ್ ಕಂಪ್ಲೇಂಟ್ ಕೊಟ್ಟು  ಬಂದಿದ್ದಳು. ಗಂಡನಿಲ್ಲದಿದ್ದರೂ ತಿಂಗಳ ಖರ್ಚಿಗೆ ತೆಗೆದು ಏಳೆಂಟು ಸಾವಿರ ಉಳಿಯುವ ಸಂಬಳ ಸಿಗುವಾಗ ಇಲ್ಲದ ಗೋಳೊಯ್ದುಕೊಳ್ಳುವುದು  ಯಾಕೆಂದು  ಏಕಾಂಗಿ ಬದುಕಿಗೆ ರೈಟ್ ಎಂದಿದ್ದಳು.  

*******

ಬರೋಬ್ಬರಿ ನಲವತ್ತು ವರುಷ  ಬದುಕಿನ ದುರ್ಗಮ ಕಾಡಿನಲ್ಲಿ ತಾನೊಬ್ಬಳೇ  ನಡೆಯುತ್ತಿದ್ದಳು.  ಬೇರೆ ಮದುವೆಯಾದಳೋ,  ದತ್ತಕ ಮಗು ಪಡೆದಳೋ ಏನೂ ಗೊತ್ತಿಲ್ಲ.  ಆದರೆ ಇಂದು ಅಚಾನಕ್ ಆಕೆ ಸತ್ತ ಸುದ್ದಿ ಕೇಳಿ ಸುಮ್ಮನಿರಲಾಗಲಿಲ್ಲ. ಕೊನೆ ಪಕ್ಷ ಫೋನಾಯಿಸಿ ತಿಳಿಸಿದವರಿಗಾದರೂ ಜವಾಬ್ ಕೊಡಬೇಕಲ್ಲ. ಅದಲ್ಲದೆ ಇಷ್ಟು ದೂರದಿಂದ ನಮ್ಮ ವಿಳಾಸ ಹುಡುಕಿ ವಿಷಯ ತಿಳಿಸಬೇಕೆಂದರೆ  ನಮ್ಮ ಬಗ್ಗೆ ಅಲ್ಲಿ ಹೇಳಿರಬೇಕು.  ಎಂದು ಸಣ್ಣದಾಗಿ ಭಾತೃಪ್ರೀತಿ ಹೃದಯ  ಕಲುಕಿಸಿತು. 

ದಾರಿ ಯುದ್ದಕ್ಕೂ ರೇಷನ್  ಹಾಗೂ ನಾಗೇಶ್ ಇಬ್ಬರೇ  ಸಿನೆಮಾ, ಕ್ರಿಕೆಟ್ , ರಾಜಕೀಯದ ಸುದ್ದಿಯನ್ನು ಜೊತೆಗೆ ಮೊನ್ನೆ  ನಲವತ್ತು  ದಾಟಿದ ಚಿಕ್ನಿ  ನೀಲಮ್ಮ  ಮೂವತ್ತೇಳರ  ಹರೆಯದ     ಜೋಲು ಮುಖದ ಸೈಮನ್ ಜೊತೆ ಓಡಿ ಹೋದ ವಿಷಯವನ್ನೂ  ಬೆರಗೋ ಬೆರಗೆನ್ನುವಂತೆ  ಬಿತ್ತರಿಸುತಿದ್ರು. ಬೇರೆ ಸಮಯದಲ್ಲಾಗಿದ್ದರೆ,  ದುರ್ಗಾದಾಸರಿಗೆ ಇಂಥಾ ವಿಷಯಗಳಲ್ಲಿ ಕಿವಿ ಚೂಪಾಗುವುದು ಚೂರು ಜಾಸ್ತಿನೇ.  ಆದ್ರೆ ಇಂದು ಮಾತ್ರ ಜ್ವರಬಿಟ್ಟ ನಾಲಗೆಯಂತೆ ಏನೂ ರುಚಿಸುತ್ತಿರಲಿಲ್ಲ.  ತನ್ನಷ್ಟಕ್ಕೆ ತಾನು ಬಾಲ್ಯದ ನೆನಪುಗಳನ್ನೇ ಮರುಕಳಿಸಿ ಒಮ್ಮೆ ನವಿರಾಗಿ ನಕ್ಕು ಇನ್ನೊಮ್ಮೆ ಬಾಡಿದ ಮುಖ ಮಾಡಿದ್ದನ್ನು ಇವರಿಬ್ಬರೂ ಅರ್ಥೈಸಿಕೊಂಡರು. 

 ನಲವತ್ತು ನಿಮಿಷದಲ್ಲಿ ಮನೆ ಸೇರಬೇಕಿದ್ದು, ಚಿದಾನಂದಸ್ವಾಮಿಯವರ ಪಲ್ಲಕ್ಕಿಯಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜ್ಯಾಮಾಗಿ ವಿಪರೀತ ತಡವಾಯಿತು.  ಮನೆ ತಲುಪಿದಂತೆ ನೇರವಾಗಿ ಒಳಗೆ ಸೇರಿದ  ದುರ್ಗಾದಾಸರು ಕಂಡಿದ್ದು,   ನೀರವ ಮೌನವನ್ನು ಹೊದ್ದುಕೊಂಡು ನಿರ್ಲಿಪ್ತವಾಗಿ ಮಲಗಿದ ಒಂದು ದೇಹ . ಮತ್ತು ಅದರ ಅಕ್ಕ ಪಕ್ಕದ್ಲಲೂ ಯಾರೂ ಇಲ್ಲ  ಒಂದು ಬಗೆಯ ಸೂತಕ ಅಂಟಿಕೊಂಡಂತೆ ಮನೆಯವರೆಲ್ಲಾ ನಿರ್ದಿಷ್ಟ ಅಂತರ ಪಾಲಿಸಿ  ಸುಮ್ಮನೆ ದುರ್ಗಾದಾಸರ ದಾರಿ ನೋಡುತ್ತಿದ್ದರು.  

 ಹತ್ತಿಪ್ಪತ್ತು ನಿಮಿಷ ತಾನೂ ಆ ಮೌನದಲ್ಲಿ ವಿಲೀನವಾದೆನೋ ಎನ್ನುವಂತೆ  ಆ ಮುಖವನ್ನೇ ದಿಟ್ಟಿಸಿ ನೋಡಿದ  ಯಾವ  ಕೋನಗಳಿಂದಲೂ ನಮ್ಮನ್ನು ತೊರೆದು ಹೋದಾಗ ಅವಳ ಮುಖದಲ್ಲಿದ್ದ ಕಾಂತಿ ಈಗ ಕಾಣಿಸುತ್ತಿರಲಿಲ್ಲ. ಒಂಥರಾ ಅಪರಿಚಿತ ಭಾವ.   ಆದರೂ ಮೊದಲು  ಈ ಮನೆಯ ಪಡಿತರ ಚೀಟಿಯಲ್ಲಿ ಇವಳ ಹೆಸರೂ ನಮೂದಿಸಿತ್ತು. ಎಂಬ ಸತ್ಯವನ್ನು ? ಮತ್ತೆ ಏನೋ ವಿಚಾರ ಬಂದಂತೆ ದಿಡೀರನೆ ಎದ್ದು ಹೊರಗೆ ಹೋಗಿ ಅಣ್ಣನ ಮಗ ತಾರನಾಥನನ್ನು ಪಕ್ಕಕ್ಕೆ ಕರೆಯಿಸಿ, ಜೀವ ಹೋಗುವಾಗ ಬಾಯಿಗೆ ನೀರೆರೆಯುವ ಭಾಗ್ಯವಂತೂ ಸಿಗಲಿಲ್ಲ.  ಅವಳೆದೆಗೆ ಎರಡು ತೊಟ್ಟು ಕಣ್ಣೀರು ಸುರಿಸುವವರೂ ಯಾರೂ ಇಲ್ಲ. ಆ ಸಂವೇದನೆ ಇಲ್ಲಿ ಯಾರ ಮುಖದ್ಲಲೂ ಕಾಣುತ್ತಿಲ್ಲ. ನಾನೂ ಎಷ್ಟು ಪ್ರಯತ್ನ ಪಟ್ಟರೂ ಅವಳು ಮಾಡಿದ ತಪ್ಪೇ ಗಿರಕಿ ಹೊಡೆದು ನನ್ಮನಸ್ಸು ಕಲ್ಲಾಗಿದೆಯೋ ಏನೋ?  ಅಳುವೇ ಬರುತ್ತಿಲ್ಲ.

ಮನಸ್ಸು ವಿಮುಖಗೊಳ್ಳುತ್ತದೆ.  ಹೋಗಿ ನೋಡಿ  ಕೇರಿಯಾಚೆ ನಾಲ್ಕಾರು ಹಾಲಕ್ಕಿ ಹೆಂಗಳೆಯರಿದ್ದಲ್ಲಿ ,    ವಿಷಯ ತಿಳಿಸಿ ಒಂದು ತಾಸು ಬಂದ್ರೆ ಸಾಕು.  ಒಂದೊಂದು ತಲೆಗೆ ಇನ್ನೂರು ಇನ್ನೂರು ರೂಪಾಯಿ ಕೊಡೋಣಾಂತ ಹೇಳಿ.   ಆದಷ್ಟು ಬೇಗ ಬರಲು ಹೇಳಿ  ಎಂದು ಒಂದಿಷ್ಟು ದುಡ್ಡು  ಕೈಯಲ್ಲಿಟ್ಟು  ಕಳಿಸಿದನು.  ರೇಷನ್ , ನಾನೂ ಬರ್ತೇನೆ ಇರಿರೋ"  ಎಂದು ಪುಟಾಣಿ ಮಕ್ಕಳಂತೆ ಅವಳ ಬೆನ್ನು ಹತ್ತಿದ. 

 ಒಂದರ್ಧ ತಾಸಲ್ಲಿಯೇ   ಅರೆ ಬೆತ್ತಲೆ ಮೈಯಾ ಒಣ ಕಡ್ಡಿಯಂತಹ ಏಳೆಂಟು ಹಾಲಕ್ಕಿ ಹೆಂಗಸರು ಬರುತ್ತಲೇ ತನ್ನವರನ್ನೇ ಕಳಕೊಂಡ ನೋವನ್ನು ವ್ಯಕ್ತಪಡಿಸುವ ಪರಿ ಬೊಬ್ಬಿಡುತ್ತಾ ಬಂದು ಶವದ ಸುತ್ತಲ್ಲೂ ಕೂತು   ಅಬ್ಬೊ... ಅಬ್ಬೊ ಎಂದು ಒದರಾಡುವುದನ್ನು  ಕಂಡು ನೆರೆದವರೆಲ್ಲ ಬೆಚ್ಚು ಬೆರಗಾದರು. ಆ ನೋವು ಎದೆಯದ್ದಾ ಅಲ್ಲ ಅರೆ ತುಂಬಿದ ತುತ್ತಿನ ಚೀಲದ್ದಾ? ಅದು ಅವರವರಿಗೆ ಮಾತ್ರ ಗೊತ್ತು.  


ಇವರೆಲ್ಲಾ ಅಳುವ ಆಳುಗಳು. ಇವರಿಷ್ಟು ಅತ್ತರೂ ಮನೆಯವರಿಗೆ ಅಳುವ  ಹುಕಿ ಇನ್ನೂ ಬಂದೇ  ಇರಲಿಲ್ಲ .  ಗಡಿಯಾರದ ಮುಳ್ಳು ಗಂಟೆ ಸದ್ದು  ಮಾಡಿದಂತೆ ಅಳುವ ಆಳುಗಳು ಮನೆಯಲ್ಲಿ ಬಿಟ್ಟು ಬಂದ ಪುಟ್ಟ ಕಂದಮ್ಮಗಳ  ಬಿಕ್ಕಳಿಕೆಯನ್ನು  ಕೇಳಿಸುವಂತೆ ತಮ್ಮಲ್ಲಿಯೇ, “   ಇನ್ನು ಹೋಗೋದಾ?”  ಎಂದು  ಒಬ್ಬೊಬ್ಬರೇ ಎದ್ದು ನಿಂತರು.   ಯಾವುದೋ ಆಸೆಯಿಂದ ಸೀರೆಯ ಚುಂಗಿಯನ್ನು ತಿರುಗಿಸುತ್ತಾ ,   ಒಡೆಯರೇ ಅಮ್ಮಾವ್ರ ಸೀರೆ ಗೀರೆ ಏನಾದ್ರು ಇದ್ದಿದರೆ “, ಎಂದು ಕೈಚಾಚಿದರು.   

ಅದಿದಾಸಾ , “ ಸೀರೆನಾ, ಅಕಿಗಾ, ತನ್ನದೆಂದು ಹೇಳುವ ಮಕ್ಕಳೂ ಇಲ್ಲ. ಪತಿಯೂ ಇಲ್ಲ  ಇದ್ದ ತನ್ನ ಆಸ್ತಿಯನ್ನೆಲ್ಲ ಅಂಧ ಮಕ್ಕಳಿಗೆ ದಾನ ಮಾಡಿದ್ದಳಂತೆ .   ಇನ್ನುನಮ್ಮ ಸಂಬಂಧ  ಕೇವಲ ಪಡಿತರ ಚೀಟಿಯಲ್ಲಿ. ಇಂದಿಗೆ ಅದೂ ಮುಗಿಯಿತು. ಇನ್ನೆಲ್ಲಿಂದ ತರಲಮ್ಮ  ಒಡವೆ ಸೀರೆಯನ್ನು ? ಎಂದು ಅಂಗೈ ಮಗುಚುತ್ತಾ , " ನಡಿರೋ ಮುಂದಿನ ಕಾರ್ಯ ಮುಂದುವರಿಸಿ "  ಎಂದು  ಚಟ್ಟದೆದುರು ಬಂದು  ನಿಂತ. 

ರೇಷನ್ ಕಾರ್ಡ್ ಮನೆ ತಲುಪಲು ಹನ್ನೆರಡಾಗಿತ್ತು . ಬಂದವನೇ ತಲೆಗೆ ನೀರು ಹಾಕಿ  ಊಟ ಮಾಡಿ ಮಲಗಿದ್ದ.  ಒಮ್ಮೆ ಅಕ್ಕನಲ್ಲಿ ಮಾತಾನಾಡಲು  ಕೋಣೆಯ ಲೈಟ್ ಉರಿಯುತ್ತಿದೆಯೇ? ಎಂದು ಇಣುಕಿದ. ಇಲ್ಲ ಅಲ್ಲಿ ಕತ್ತಲು.  ಅಮ್ಮನ ಕಣ್ಣು ಮಾತ್ರ ಸಣ್ಣದಾಗಿದ್ದರೂ ದೈದೀಪ್ಯಮಾನವಾಗಿ ಬೆಳಗುತ್ತಿತ್ತು. 

Comments