ಆಸರೆ ಮನೆ - 7

ಆಸರೆ ಮನೆ - 7

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ 



 ಮೀಸೆ ನಂಜುಂಡಯ್ಯ ಆಸರೆ ಬಯಸಿ 'ಆಸರೆ ಮನೆ' ಗೆ ಬಂದು ಮೀಸೆ ಮಾವನಾದದ್ದು

ಮೂರ್ತಿಯವರು ಶಿಸ್ತಿನ ಮನುಷ್ಯ. ಅಂದಿನ ಲೆಕ್ಕ ಅಂದೇ ಬರೆದು ಮುಗಿಸುವುದು. ಮಾರನೆಯ ದಿನದ ಖರ್ಚಿಗಾಗುವಷ್ಟು ಹಣ ಇಟ್ಟುಕೊಂಡು ಉಳಿದದ್ದು ಬ್ಯಾಂಕಿನ ಖಾತೆಗೆ ಜಮಾ ಆಗಲೇಬೇಕು. ಇದು ಮೂರ್ತಿಯವರ ನಿಯಮ. ತಮ್ಮ ಹತ್ತು ಲಕ್ಷ ರೂ. ಹಣವನ್ನು ಆಸರೆ ಮನೆಯ ಲೆಕ್ಕಕ್ಕೆ ಸೇರಿಸಿದ್ದ ಮೂರ್ತಿ ಪ್ರತಿ ತಿಂಗಳ ಬಡ್ಡಿಯನ್ನು ಆಸರೆ ಮನೆಯ ಖಾತೆಗೆ ಜಮಾ ಮಾಡುತ್ತಿದ್ದರು. ಖರ್ಚು- ವೆಚ್ಚದ ಪಟ್ಟಿ ಒಂದೇ ರೀತಿ. ಹಣಕಾಸಿನ ವಿಷಯದಲ್ಲಿ ಮೂರ್ತಿ ಬಹಳ ಬಿಗಿ. ಇದು ಕಲ್ಯಾಣಿ- ನಿರಂಜನರಿಗೂ ಗೊತ್ತಿದ್ದರಿಂದ ಅವರು ಮೂರ್ತಿಯ ಹೆಗಲಿಗೆ ಲೆಕ್ಕ ಪಾತ್ರ ವ್ಯವಹಾರ ವಹಿಸಿದ್ದರಿಂದ ತಾವು ನಿಶ್ಚಿಂತರಾಗಿ ಉಳಿದ ಕಾರ್ಯನಿರ್ವಹಣೆ ಬಗ್ಗೆ ಗಮನ ಕೊಡುತ್ತಿದ್ದರು. ೫೦ ಜನ ಸದಸ್ಯರುಗಳಿಂದ ತುಂಬಿ ಹೋಗಿದ್ದ ಆಸರೆಯ ಮನೆ ಒಂದೆರಡು ಅನಾಥ ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 

ಮನೆಯನ್ನು ವಿಸ್ತರಿಸಿ ಮಲಗುವ ಕೋಣೆಗಳನ್ನು ಹೆಚ್ಚು ಮಾಡುವ ಬಗ್ಗೆ ಕಾರ್ಯ ಪ್ರಾರಂಭಿಸಲು ನಿರಂಜನ ಚಿಂತಿಸಿ ಕಲ್ಯಾಣಿ, ಮೂರ್ತಿಗಳ ಒಪ್ಪಿಗೆ ಪಡೆದು ಕಾರ್ಯ ಪ್ರಾರಂಭಿಸಿದ್ದ. ಈಗ ಹಣಕಾಸು ತರುವುದು, ವಿತರಿಸುವುದು ಈ ಕೆಲಸ ಜಾಸ್ತಿಯಾಗಿ ಮೂರ್ತಿಯವರ ಬ್ಯಾಂಕಿನ ಓಡಾಟವೂ ಜಾಸ್ತಿಯಾಗಿತ್ತು. 

ಅಂದು ಮೂರ್ತಿಯವರು ಬ್ಯಾಂಕಿನ ಮೆಟ್ಟಿಲಿಳಿಯುವಾಗ ಪಕ್ಕದ ಸ್ವೀಟ್ ಅಂಗಡಿಯ ಬಳಿ ಒಂದು ಪುಟ್ಟ ಜಗಳ. ಮಾಲೀಕ ಸೇಠುವಿನ  ಜೊತೆ ಯಾರೋ ಒಬ್ಬ ಸ್ವಲ್ಪ ವಯಸ್ಸಾದವರು ಮಾತಿಗೆ ಮಾತು ನಡೆಸುತ್ತಿದ್ದರು. ನೋಡಿದವರೆ ಗೌರವಯುತವಾಗಿ ಕಾಣುತ್ತ ಶುಭ್ರವಾದ ಬಟ್ಟೆ ಧರಿಸಿದ್ದ ಆತ ಮಾಮೂಲಿನಂತೆ ಅಂಗಡಿ ಜಗಳ ಕಾಯದೆ ವಿಚಿತ್ರವಾಗಿ ಮಾತಾಡುತ್ತಿದ್ದರು. ನಡೆದಿದ್ದು ಇಷ್ಟು. ಆತ ಅಂಗಡಿಯಲ್ಲಿ ೪ ಜಿಲೇಬಿ ತೆಗೆದುಕೊಂಡು ತಿಂದು ಹಣ ಇಲ್ಲ, ಸಿಕ್ಕಿದಾಗ ಕೊಡುತ್ತೇನೆ ಎನ್ನುವ ವಿಚಿತ್ರ ವಾದ ಮಾಡುತ್ತಿದ್ದರು. ಅದು ಮೂರ್ತಿಯವರ ಗಮನ 

ಸೆಳೆಯಿತು. 

ಸೇರಿದ್ದ ಜನರೆಲ್ಲ ತಲೆಗೊಂದು ಮಾತಾಡುತ್ತಿದ್ದರು. ಆತ ಮಾತ್ರ ನಿರ್ವಿಕಾರವಾಗಿ ನಿಂತಿದ್ದರು. ಅವರ ವ್ಯಕ್ತಿತ್ವ ಗೌರವಯುತವಾಗಿ ಇದ್ದಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮೀಸೆ ಇಡೀ ಮನುಷ್ಯನ ಆಕಾರಕ್ಕೆ ವಿಶಿಷ್ಟ ಮಿಲಿಟರಿ ಕಳೆ ನೀಡಿತ್ತು. ಮೀಸೆಯಿಂದ ಆಕರ್ಷಿತರಾದ ಮೂರ್ತಿ ಮಧ್ಯೆ ನುಗ್ಗಿ ಏನೆಂದು ವಿಚಾರಿಸಿದಾಗ ಮಾಲೀಕ ಸೇಠು, ''ನೋಡಿ ಸಾರ್  ಈ ಮನುಷ್ಯ ಜಿಲೇಬಿ ಬೇಕು ಎಂದು ಕೇಳಿದರು. ನಾವು ಮಾಮೂಲಿ ತೆಗೆದುಕೊಳ್ಳುವ ಗಿರಾಕಿ ಎಂದು ಭಾವಿಸಿ ೪ ಜಿಲೇಬಿ ತೂಕ ಮಾಡಿ ಕೊಟ್ಟರೆ ಎಲ್ಲವನ್ನು ತಿಂದು ಹಣ ಇಲ್ಲ, ಸಿಕ್ಕಿದಾಗ ಕೊಡುತ್ತೇನೆ ಎನ್ನುತ್ತಾರೆ'' ಎಂದು ಹೇಳಿದ. ಮೀಸೆಯವರು,''ಹೌದೆಂದು ಒಪ್ಪಿದ್ದಲ್ಲದೆ ಏನು ಮಾಡಲಿ ಸಾರ್, ನನ್ನ ಹತ್ತಿರ ಹಣ ಇಲ್ಲ. ಇಷ್ಟ ಕಂಡದ್ದನ್ನೂ ತಿನ್ನದಿದ್ದರೆ ನನ್ನ ಹೊಟ್ಟೆ, ನಾಲಿಗೆ ಸುಮ್ಮನಿರುವುದಿಲ್ಲ. ಅದಕ್ಕಾಗಿ ಕದಿಯಲು ಸಾಧ್ಯವೇ ನೀವೇ ಹೇಳಿ ಸಾರ್. ಹಾಗಾಗಿ ಕೇಳಿ ತಿಂದೆ'' ಎಂದರು. 

ಅವರ ವಾದ ವಿಚಿತ್ರ. ಮೂರ್ತಿಯವರಿಗೆ ಕಳವಳವಾಯಿತು. ಬಹುಷಃ ತಮಗೆ ಅಣ್ಣನಾಗಬಹುದಾದ ವಯಸ್ಸಿನವರು. ತಲೆ ಕೆಟ್ಟಿರುವರಂತೂ  ಅಲ್ಲ. ಮಾತಾಡದೆ ಹಣವನ್ನು ಅಂಗಡಿಗೆ ತಾವೇ ಸಂದಾಯ ಮಾಡಿ ''ಸರಿ ಯಜಮಾನರೇ ನೀವಿನ್ನು ಹೊರಡಿ , ನಾನು ಬರುತ್ತೇನೆ'' ಎಂದು ಮುಂದೆ ಹೊರಟರು. ಸ್ವಲ್ಪ ದೂರ ಹೋದ ಮೇಲೂ ಅವರು ತಮ್ಮನ್ನೇ ಹಿಂಬಾಲಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯ. ''ಯಾಕೆ ಸ್ವಾಮಿ  ತಾವು ಈ ಕಡೆಗೆ ಹೊರಟಿದ್ದವರೇನು?'' ಎಂದಾಗ, ''ಇಲ್ಲ ಸಾರ್ ನಿಮಗೆ ಥ್ಯಾಂಕ್ಸ್. ನನ್ನನ್ನು ನೋಡಿ ನಿಮಗೆ ಬೇಜಾರಾಗಿರಬಹುದು. ಇದೇನು ಇಷ್ಟು ವಯಸ್ಸಾಗಿ  ಈ ಮನುಷ್ಯ ಹೀಗೆ ನಡೆದುಕೊಂಡ ಎಂದು. ಅದು ನನ್ನ ದೌರ್ಬಲ್ಯ. ಎಂದುಕೊಳ್ಳಿ ಅದರ ಹಿಂದೆ ಒಂದು ಕಥೆಯಿದೆ ಸಾರ್. ನಿಮಗೆ ಸಮಯ ಇದ್ದರೆ ಹೇಳುತ್ತೇನೆ ಎಂದರು. ಮೂರ್ತಿಯವರಿಗೆ ಕುತೂಹಲವಾಯಿತು. 

''ಬನ್ನಿ ಸ್ವಾಮೀ ನನ್ನ ಜೊತೆ. ನಮ್ಮ ಮನೆಯಲ್ಲಿ ಕೂತು ಮಾತಾಡೋಣ'' ಎಂದು ಹೇಳಿ ಅವರನ್ನು ಆಸರೆ ಮನೆಗೆ ಕರೆ ತಂದರು. ಕಲ್ಯಾಣಿಗೆ ಪರಿಚಯ ಮಾಡಿಸಿದರು. ನಿರಂಜನ ಕಲ್ಯಾಣಿ ಇಬ್ಬರಿಗೂ ಆ ಹಿರಿಯ ವ್ಯಕ್ತಿಯನ್ನು ನೋಡಿ ಒಂದು ರೀತಿಯ ಗೌರವ ಬಂದಿತು. 

''ಅಮ್ಮಾ ತಾಯಿ ನೀನು ನೋಡಲು ದೇವಿಯಂತೆ ಕಾಣುತ್ತಿ. ನನ್ನ ಕಥೆ ಕೇಳುತ್ತೀಯೇನಮ್ಮಾ ಹೇಳಲೇ'' ಎಂದರು.   

ಕಲ್ಯಾಣಿ ಶಾಂತಳಾಗಿ ''ಹೇಳಿ ಮಾವ ಕೇಳುತ್ತೇವೆ  ನಾವೆಲ್ಲರೂ'' ಎಂದಳು. ಇದು ನಂಜುಂಡಯ್ಯನವರ ಕಥೆ. 

***********

ಮಧ್ಯಮ ವರ್ಗದ ನಂಜುಂಡಯ್ಯನವರ ಕಥೆಯು ಎಲ್ಲ ಮಧ್ಯಮ ವರ್ಗದವರಂತೆಯೇ. ಆದರೆ ಸ್ವಲ್ಪ ಬದಲಾವಣೆ ಅಷ್ಟೆ . 

ನಂಜುಂಡಯ್ಯನವರ ತಂದೆ ತಾಯಿಗೆ ಐದು ಜನ ಗಂಡು ಮಕ್ಕಳು. ಅದರಲ್ಲಿ ಭೀಮ ನಂಜುಂಡ. ಎಷ್ಟು ತಿಂದರೂ ಅರಗಿಸಿಕೊಂಡು ಮತ್ತೆ ಬೇಕೆನ್ನುವ ಹುಡುಗ. ತಂದೆ ತಾಯಿ ಎಲ್ಲರಿಗಿಂತ ಇವನ ಹೊಟ್ಟೆಗೆ ಜಾಸ್ತಿ ಹಾಕುತ್ತಿದ್ದರು. ಕೆಲವೊಮ್ಮೆ ಅವರ ತಾಳ್ಮೆ ತಪ್ಪುತ್ತಿತ್ತು. ಕಾರಣ ಇಲ್ಲದ ಅಸಹಾಯಕತೆ. ಬೈದರೂ ಹೊಡೆದರೂ ಜಗ್ಗದ ಹುಡುಗ ನಂಜುಂಡ. ಹೀಗೆ ನಿತ್ಯ ಕಲಹ, ಸಂಧಾನದೊಡನೆ ಹುಡುಗ ದೊಡ್ಡವನಾದ. ಅಣ್ಣ ತಮ್ಮಂದಿರೆಲ್ಲ ಓದಿ ವಿದ್ಯಾವಂತರಾಗಿ ಒಂದೊಂದು ಕೆಲಸ ಹಿಡಿದು ಅವರವರ ದಾರಿ ಹಿಡಿದರು. ನಂಜುಂಡನು ತಕ್ಕ ಮಟ್ಟಿಗೆ ವಿದ್ಯೆ ಕಲಿತು ಕೆಲಸ ಹಿಡಿದು ಸಂಬಳದವನಾದ. ತಂದೆ ತಾಯಿ ಹೇಗೋ ತೃಪ್ತರಾದರು. ತಮ್ಮಂತೆ ಮಧ್ಯಮ ವರ್ಗದವರ ಮನೆಯ ಮಗಳಾದ ಮಂಜುಳನನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡರು. ಅತ್ತೆಯ ಮನೆಯಲ್ಲಿ ಮುತ್ತಾಗಿ ಅಲ್ಲದಿದ್ದರು ಮಂಜುಳ ಮನುಷ್ಯಳಾಗಿ ವರ್ತಿಸುವಷ್ಟು ಸೌಜನ್ಯ ವಿನಯ ಇದ್ದವಳು. ಇಷ್ಟಾದರು ಮಂಜುಳನಿಗೆ ಅರ್ಥವಾಗದ ವಿಷಯ ಎಂದರೆ ಗಂಡನ ಹೊಟ್ಟೆ ಬಾಕತನ. ಎಷ್ಟು ತಿಂದರೂ ಅವನಿಗೆ ತೃಪ್ತಿ ಎನ್ನುವುದು ಇಲ್ಲವೇ ಇಲ್ಲ. ಎಷ್ಟೋ ಸಾರಿ ಅತ್ತೆಯನ್ನು ಕೇಳಬೇಕೆಂದುಕೊಂಡವಳು ಹೇಗೆ ಕೇಳುವುದು ಎಂದು ಸುಮ್ಮನಾಗಿದ್ದಳು. 

ನಂಜುಂಡ ಕ್ರಮೇಣ ಎರಡು ಮಕ್ಕಳ ತಂದೆಯಾದ. ವಯಸ್ಸಾದ ತಂದೆ ಸ್ವರ್ಗಸ್ಥರಾದರು. ಹಾಗಾಗಿ ಮನೆಯ ಯಜಮಾನನಾಗಿ ನಂಜುಂಡ ನಂಜುಂಡಯ್ಯನಾದ. ಸೊಗಸಾಗಿ ಬೆಳೆಸಿದ್ದ ಅವನ ಮೀಸೆಯ ಕಾರಣ ಮೀಸೆ ನಂಜುಂಡಯ್ಯನೂ ಆದ. ಆದರೆ ತಿನ್ನವ ಚಟ ಚಪಲ ಕಡಿಮೆಯಾಗಲಿಲ್ಲ. ಬರುವ ಆದಾಯದಲ್ಲಿ ಬಹುಪಾಲು ನಂಜುಂಡಯ್ಯನ ಹೊಟ್ಟೆಗೆ ಹೋಗತೊಡಗಿದ ಮೇಲೆ ಮಕ್ಕಳ, ಅತ್ತೆಯ, ತನ್ನ ಬದುಕಿಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಮಂಜುಳ ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ಸೊಸೆಯಿಂದ ಮನೆಯ ಅಗತ್ಯತೆ ಪೂರೈಸತೊಡಗಿತು. ಇದರಿಂದ ಅತ್ತೆಯ ಪಾಲಿಗೆ ಸೊಸೆ ದೇವತೆಯಾದಳು. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ನಂಜುಂಡಯ್ಯನ ಹೆಂಡತಿ ಮಂಜುಳನನ್ನು ಬಿಟ್ಟರೆ ಮಿಕ್ಕ ಸೊಸೆಯರು ಅತ್ತೆಯನ್ನು ಹತ್ತಿರಕ್ಕೂ ಸೇರಿಸುವವರಲ್ಲ. ಹೀಗಾಗಿ ಆಕೆಗೆ ಮಂಜುಳನ ನೆರಳು ಅಗತ್ಯವಾಗಿತ್ತು. ಜೊತೆಗೆ ಮಂಜುಳ ಸಹ ತುಂಬಾ ಒಳ್ಳೆಯತನದಿಂದ ನಡೆದುಕೊಳ್ಳುತ್ತಲಿದ್ದಳು. ಅತ್ತೆಯಷ್ಟು ತನ್ನ ಮಕ್ಕಳನ್ನು ಬೇರೆ ಯಾರು ನೋಡಿಕೊಳ್ಳಲಾರರು ಎನ್ನುವ ವಿಷಯವು ಅವಳಿಗೆ ತಿಳಿಯದ್ದೇನಲ್ಲ. 

ಆದರೆ ಅದೂ ಎಷ್ಟು ದಿನ ನಡೆಯುವುದೋ. ಅತ್ತೆಗೂ ವಯಸ್ಸಾಗುತ್ತಿದೆ. ಗಂಡ ಎಲ್ಲ ಜಾಣ ತುಸು ಕೋಣ ಎನ್ನುವಂತೆ ಈ ಹೊಟ್ಟೆಬಾಕತನ. ಅದಕ್ಕಾಗಿ ಏನು ಬೇಕಾದರು ಮಾಡುವ ಚಟ. ಇಲ್ಲದಿದ್ದರೆ ಒಂದು ರೀತಿ ಒಳ್ಳೆಯವನೆ. ಮಂಜುಳೆಗೆ ತಾನೆಂದೋ ಓದಿದ ಕಗ್ಗದ ನೆನಪಾಯಿತು. 

''ಎಷ್ಟು ನೀನುಂಡರೇ? ಪುಷ್ಟಿ ಮೈಗಾಗುವುದು।

ಹೊಟ್ಟೆ ಜೀರ್ಣಿಸುವಷ್ಟೆ : ಮಿಕ್ಕುದೆಲ್ಲ ಕಸ|| 

ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?।

ಮುಷ್ಠಿ ಪಿಷ್ಟವು ತಾನೇ? -ಮಂಕುತಿಮ್ಮ 

ಏನಾದರಾಗಲೀ ಗಂಡ, ಕಟ್ಟಿಕೊಂಡವನು. ಧರ್ಮ ಸಮ್ಮತವಾಗಿ ಋಣ ತೀರಿಸಬೇಕು. ಎಂದು ಮಂಜುಳ ತೆಪ್ಪಗೆ ಸಂಸಾರ ರಥ ಎಳೆಯ ತೊಡಗಿದಳು. 

ಮಗನ ನಡವಳಿಕೆ ಕಂಡ ತಾಯಿ, ಮಕ್ಕಳು ಸೊಸೆ ಮನೆಯಲ್ಲಿಲ್ಲದಿರುವಾಗ ''ಲೋ ನಂಜುಂಡ ಇದು ಸರಿಯಲ್ಲಪ್ಪ ಚಿಕ್ಕ ವಯಸ್ಸಿನಲ್ಲಿ ಏನೋ ಹುಡುಗ ಹೊಟ್ಟೆ ಬಾಕತನ. ಜವಾಬ್ದಾರಿ ಬಂದ ಮೇಲೆ ಸರಿ ಹೋಗುತ್ತಾನೆ ಎಂದು ನಾವು ಸುಮ್ಮನಿದ್ದೆವು. ಆದ್ರೆ ನಿನ್ನದ್ಯಾಕೋ ದಿನೇ ದಿನೇ ವಿಪರೀತವಾಗ್ತಿದೆ. ನಿನ್ನ ಸಂಪಾದನೆ ಮನೆಗೆ ಮೂರು ಕಾಸು ಕೊಡುತ್ತಿಲ್ಲ. ಎಂದರೆ ಈಗ ಅವಳ ಸಂಪಾದನೆಯನ್ನು ನೀನೇ ಕಬಳಿಸುತ್ತೀಯಲ್ಲ. ಆ ಹುಡುಗಿ ಮಕ್ಕಳ ಹೊಟ್ಟೆಗೆ ಏನು ಹಾಕಬೇಕು ಹೇಳು'' ಎಂದಾಗ, ''ಅಮ್ಮ ಎಲ್ಲ ನನಗೆ ಗೊತ್ತಾಗುತ್ತೆ. ಆದರೆ ಏನು ಮಾಡಲಮ್ಮ. ಕಂಡಿದ್ದನ್ನು ಬಯಸಿದ್ದನ್ನು ಆ ಗಳಿಗೆಯಲ್ಲಿ ತಿನ್ನದಿದ್ದರೆ ನನಗೆ ಹುಚ್ಚು ಹಿಡಿದು ಬಿಡುತ್ತದೆ'' ಎಂದನು. ಮಗನ ಮಾತಿಗೆ ಏನು ಹೇಳಬೇಕೋ ತಿಳಿಯದೆ ತಾಯಿ ಮೌನವಾದಳು. ಆದರೂ ಇದು ಎಷ್ಟು ದಿನ ನಡೆಯಲು ಸಾಧ್ಯ. ಮಂಜುಳ ಮಕ್ಕಳಿಗೆ ಅತ್ತೆಗೆ ಒಪ್ಪೊತ್ತಿನ ಊಟವನ್ನಾದರೂ ಹಾಕಬೇಕು. ಮಗನ ವರ್ತನೆಯಿಂದ ನೊಂದ ತಾಯಿ ಸಂಕೋಚದಿಂದ ದಿನೇ ದಿನೇ ತಮ್ಮ ಪಾಲಿನ ತುತ್ತನ್ನು ಕಡಿಮೆ ಮಾಡಿಕೊಳ್ಳುತ್ತ ಮೊಮ್ಮಕ್ಕಳಿಗಾಗಿ ಬಿಡತೊಡಗಿದರು. 

ಏರುತ್ತಿರುವ ಧಾರಣ ವಾಸಿ, ಬೆಳೆಯುತ್ತಿರುವ ಮಕ್ಕಳ ಹೊಟ್ಟೆ ಮಿತಿಯಾದ ಆದಾಯ, ಕಂಗೆಟ್ಟ ಮಂಜುಳ ಮನೆಯಲ್ಲಿಯ ಯಾವ ಆಹಾರ ಪದಾರ್ಥ ಅಳತೆ ಮೀರಿ ಮಾಡದೆ ಎಚ್ಚರ ವಹಿಸಿದಳು. ಮಕ್ಕಳ ಹಸಿವು ತಣಿಸಲು ಶಾಲೆಯ ಹತ್ತಿರವೇ ಬ್ರೆಡ್ ಬನ್ನುಗಳ ವಿತರಣೆ ಮಾಡಿದಳು. ಉಂಡು ಉಪವಾಸಿಯಂತಾದ ನಂಜುಂಡಯ್ಯ ಹುಚ್ಚನಂತಾದ. ಕಂಡ ಕಂಡ ಕಡೆ ಸಾಲ ಮಾಡಿದ. ಸಾಲ ಕೊಟ್ಟವರು ಮನೆಯ ಬಳಿ ಬಂದು ಜಗಳವಾಡಿದಾಗ ಮಂಜುಳ ತನ್ನ ಕೈಬಳೆ ಮಾರಿ ಸಾಲದವರಿಗೆ ಸಾಲ ತೀರಿಸಿ ಮುಂದೆ ಅವರಿಗೆ ಸಾಲ ಕೊಟ್ಟರೆ ತಾನು ಹೊಣೆಯಲ್ಲ ಎಂದು ಹೇಳದೆ ವಿಧಿಯಿಲ್ಲವಾಯಿತು. 

ಕೈಗೆ ಹಣ ಸಿಗದಂತಾದಾಗ ನಂಜುಂಡಯ್ಯ ಶೆಟ್ಟರ ಅಂಗಡಿಯಲ್ಲಿ ಸಾಲಕ್ಕೆ ಹೋದ. ಮಂಜುಳನ ಧೈರ್ಯದ ಮೇಲೆ ಶೆಟ್ಟರು ಸಾಲ ಕೊಟ್ಟರು. ದಿನಸಿ ಸಾಮಾನಿನೊಂದಿಗೆ ಮಗ ಮನೆಗೆ ಬಂದಾಗ ಆ ತಾಯಿಗೆ ಆಶ್ಚರ್ಯ. 

''ಇದೇನೋ ನಂಜುಂಡ ಎಂದೂ ಇಲ್ಲದ್ದು ಇಂದು ನೀನು ಸಾಮಾನು ತಂದೆ'' ಎಂದರು. ''ಯಾಕಮ್ಮ ನಂಗೆ ಬುದ್ಧಿ ಇಲ್ಲವೇ ಸಾಮಾನು ಇರಲಿಲ್ಲ ಅದಕ್ಕೆ ತಂದೆ'' ಎಂದವನೇ ''ಅಮ್ಮಾ ನಿನ್ನ ಕೈಯಿಂದ ಬಿಸಿಬೇಳೆ ಬಾತ್, ಅಆಂಬೊಡೆ, ಹಯಗ್ರೀವ ತಿಂದು ಎಷ್ಟು ದಿನ ಆಯಿತು. ಈ ದಿನ ಎಲ್ಲ ಮಾಡು. ಎಲ್ಲರೂ ತಿನ್ನೋಣ. ಆದರೆ ನನ್ನ ಪಾಲು ಹೇಗಿರಬೇಕು ಎಂದು ನಿನಗೆ ಗೊತ್ತಲ್ಲ'' ಎಂದ. 

ಏನೋ ಮಗ ಸರಿದಾರಿಗೆ ಬರುತ್ತಿದ್ದಾನಲ್ಲ ಅಷ್ಟೇ ಸಾಕು ದೇವರೇ ಎಂದು ಆ ತಾಯಿ ಖುಷಿಯಿಂದ ಅಡಿಗೆ ತಯಾರಿ ನಡೆಸಿದರು. ಆಫೀಸಿನಿಂದ ಮಂಜುಳ, ಶಾಲೆಯಿಂದ ಮಕ್ಕಳು ಬಂದವರಿಗೂ ಆಶ್ಚರ್ಯವೋ ಆಶ್ಚರ್ಯ. ''ಇದೇನತ್ತೆ ಇಷ್ಟೊಂದು ಘಮ ಘಮಿಸುವ ಅಡುಗೆ ತಿಂಡಿ, ಎಲ್ಲಿತ್ತು ನಿಮಗೆ ದಿನಸಿ ಸಾಮಾನು ಎಂದು ಮಂಜುಳ ಕೇಳಿದಾಗ 

''ಅಯ್ಯೋ ಮಂಜು ನಿನ್ನ ಗಂಡನಿಗೆ ದೇವರೇ ಒಳ್ಳೆ ಬುದ್ಧಿ ಕೊಟ್ಟಿದ್ದಾನೆ ಕಣೆ. ಸಾಮಾನೆಲ್ಲ ಅವನೇ ತಂದು ಮಾಡು ಎಂದ ಮಾಡಿದೆ. ಏನೋ ಪಾಪ ಮಕ್ಕಳಿಗೆ ಹೀಗೆ ರುಚಿಯಾದ ಊಟ ಹಾಕಿ ಯಾವ ಕಾಲವಾಗಿತ್ತೋ ಬಾ. ನೀನು ಕೈಕಾಲು ತೊಳೆದುಕೊ. ಬಿಸಿ ಇರುವಾಗಲೇ ಎಲ್ಲರು ತಿನ್ನುವಿರಂತೆ'' ಎಂದಾಗ ಮಂಜುಳನಿಗೂ ನಿಜವಾದ ಸಂತೋಷವೇ ಆಯಿತು. ಅಂದು ಎಲ್ಲ ಒಟ್ಟಿಗೆ ಕೂತು ನಗುತ್ತ ಉಪಹಾರ ಮಾಡಿದರು. ಎಂದಿನಂತೆ ನಂಜುಂಡನಿಗೆ ಸಿಂಹಪಾಲು ಬಡಿಸಿದ್ದಾಯಿತು. 

''ಅತ್ತೆ ನಿಮಗೂ ಹಾಕಿಕೊಳ್ಳಿ'' ಎಂದು ಮಂಜುಳ ಹೇಳಿದಾಗ ''ಇರಲಿ ನೀವೆಲ್ಲ ತಿನ್ನಿ'' ಎಂದರು ಅಮ್ಮ. ಮಂಜುಳನ ಬಲವಂತಕ್ಕೆ ಮಣಿದು ಒಂದು ತುತ್ತು ತಮ್ಮ ಎಲೆಯ ಮೇಲೆ ಹಾಕಿಕೊಂಡು ಮಿಕ್ಕಿದ್ದನ್ನು ಮಗನ ಎಲೆಗೆ ಬಡಿಸಿದರು. 

ಮೂರ್ನಾಕು ತಿಂಗಳು ಮನೆಯ ತುಂಬಾ ದಿನಸಿ, ದಿನಕ್ಕೊಂದು ಬಗೆ ತಿಂಡಿಯಾದರು ಬಕಾಸುರನ ಬಂಡಿ ಚಪಲ ತೀರಲಿಲ್ಲ.

ಸಾಲ ಕೊಟ್ಟ ಶೆಟ್ಟರ ದುಡ್ಡಿನ ವರಾತ ಹೆಚ್ಚಾಯಿತು. ನಂಜುಂಡ ಮುಖ ತಪ್ಪಿಸಿ ತಿರುಗಲಾರಂಭಿಸಿದ. 

ಶೆಟ್ಟರಿಗೂ ಕಾಯುವ ತಾಳ್ಮೆ ಮೀರಿತು. ಒಂದು ದಿನ ನಂಜುಂಡಯ್ಯನ ಹೆಂಡತಿ ಮಂಜುಳ ತನ್ನ ಪಾಡಿಗೆ ತಾನು ಹೋಗುತ್ತಿದ್ದಳು. ಶೆಟ್ಟರು ಹಿಂದೇನೆ ಬಂದು, ''ಅಮ್ಮಾವ್ರೆ ಅಮ್ಮಾವ್ರೆ ಎಂದು ಕೂಗಿದಾಗ ಮಂಜುಳ ಬೆಚ್ಚಿ ತಿರುಗಿದಳು. 

''ಏನು ಅಮ್ಮಾವ್ರೆ ನೀವು ಒಳ್ಳೆಯವರು, ಗೌರವಸ್ಥರು ಎಂದು ನಾಲ್ಕು ತಿಂಗಳಿನಿಂದ ಸಾಮಾನು ಕೊಟ್ಟೆ. ಈಗ ನೀವು ದುಡ್ಡು ಕೊಡದೆ ಹೀಗೆ ನಿಧಾನ ಮಾಡಿದರೆ ನಾನು ಎಷ್ಟು ದಿನ ಸುಮ್ಮನಿರುವುದಕ್ಕಾಗುತ್ತದೆ ನೀವೇ ಹೇಳಿ. ನಮ್ಮದು ಸಣ್ಣ ಅಂಗಡಿ. ನಿಮ್ಮಂಥ ಗಿರಾಕಿಗಳು ಕೊಟ್ಟ ದುಡ್ಡೇ ನಮ್ಮ ಬಂಡವಾಳ ಅಮ್ಮಾವ್ರೇ'' ಎಂದು ದೊಡ್ಡ ಭಾಷಣ ಮಾಡಿದಾಗ ಮಂಜುಳ ಕಕ್ಕಾಬಿಕ್ಕಿಯಾದಳು. 

''ಏನು ಶೆಟ್ರೆ ನಾನ್ಯಾವಾಗ ಸಾಮಾನು ಸಾಲ ತೆಗೆದುಕೊಂಡೆ. ನನಗೆ ಸಾಲ ಮಾಡಿ ಅಭ್ಯಾಸ ಇಲ್ಲವಲ್ಲ'' ಎಂದಳು.

 ''ಯಾಕೆ ಅಮ್ಮಾವ್ರೆ  ಸುಳ್ಳು ಹೇಳೀರಿ ನಿಮ್ಮ ಯಜಮಾನರೇ ಬಂದು ಆಗಾಗ್ಯೆ ಬೇಕಾದ ಸಾಮಾನೆಲ್ಲ ತೆಗೆದುಕೊಂಡು ಹೋಗುತ್ತಿದ್ದರಲ್ಲ ನಿಮಗೆ ಗೊತ್ತಿಲ್ಲವೇನ್ರಮ್ಮ'' ಎಂದಾಗ ಮಂಜುಳೆಗೆ ತಟ್ಟನೆ ಮನೆಯಲ್ಲಿ ಆಗುತ್ತಿದ್ದ ದಿನಕ್ಕೊಂದು ಸಂಭ್ರಮದ ಅಡುಗೆ-ತಿಂಡಿಗಳ ನೆನಪಾಗಿ ನಾಚಿಕೆಯಾಯಿತು. 

ಥೂ ನಾನೆಂತಹ ಪೆದ್ದು ಕೆಲಸ ಮಾಡಿದೆ. ಗಂಡ ಇಷ್ಟೆಲ್ಲಾ ಸಾಮಾನು ಎಲ್ಲಿಂದ ತಂಡ ಎನ್ನುವ ಯೋಚನೆಯೂ ಮಾಡದೆ ಅವನನ್ನು ನಂಬಿ ಕಣ್ಮುಚ್ಚಿ ಕುಳಿತೆನಲ್ಲ ಎಂದು ನಾಚಿಕೆಯಾಯಿತು. ಸಧ್ಯಕ್ಕೆ ಶೆಟ್ಟರನ್ನು ಸಮಾಧಾನಿಸಬೇಕಲ್ಲ. 

''ಎಷ್ಟಾಗಿದೆ ಶೆಟ್ಟರೆ?'' ಜಾಸ್ತಿಯೇನು ಇಲ್ರಮ್ಮ ಒಂದು ಹನ್ನೆರಡು ಸಾವಿರ ಎಂದಾಗ ಮಂಜುಳ ಬೆಚ್ಚಿದಳು. 

''ಶೆಟ್ರೇ ಇಷ್ಟಾಗಿರುವುದು ನನಗೆ ಗೊತ್ತೇ ಇರಲಿಲ್ಲ. ಅವರೇ ಕೊಟ್ಟಿದ್ದಾರೆ ಎಂದು ತಿಳಿದಿದ್ದೆ''. ''ಇಲ್ಲ ತಾಯಿ ಅವರು ಕೊಟ್ಟಿದ್ರೆ ನಾನು ನಿಮ್ಮನ್ನು ಯಾಕೆ ಕೇಳ್ತಿದ್ದೆ'' ಅವಮಾನದಿಂದ ನೆಲಕ್ಕೆ ಕುಸಿದ ಮಂಜುಳ 

''ಶೆಟ್ರೇ ಇದು ನನಗೆ ಗೊತ್ತಿರಲಿಲ್ಲ. ನಾನು ನಿಮ್ಮ ದುಡ್ಡಿಗೆ ಮೋಸ ಮಾಡುವುದಿಲ್ಲ. ಸ್ವಲ್ಪ ಟೈಂ ಕೊಡಿ ಕಂತು ಕಂತಾಗಿ ತೀರಿಸುತ್ತೇನೆ. ಆದರೆ ಇನ್ನು ಮುಂದೆ ನಮ್ಮ ಯಜಮಾನರಿಗೆ ದಯವಿಟ್ಟು ಸಾಮಾನು ಕೊಡಬೇಡಿ'' ಎಂದು ಹೇಳಿದಳು.     

''ಆಗಲಿ ತಾಯಿ, ನೀವು ಹೇಳಿದಂತೆ ಮಾಡುತ್ತೇನೆ'' ಎಂದು ನಮಸ್ಕರಿಸಿದರು. 

ಮಂಜುಳ ಹನ್ನೆರಡು ಸಾವಿರದ ಹೊರೆ ಹೊತ್ತು ಮುನ್ನಡೆದಳು. ಹೇಗೆ ತೀರಿಸುವುದು ಶೆಟ್ಟರ ಸಾಲ ಎನ್ನುವ ಚಿಂತೆ ತಲೆಯಲ್ಲಿ. ಮನೆಗೆ ಬಂದವಳು ಅತ್ತೆಯ ಮುಂದೆ ಎಲ್ಲ ಹೇಳಿಕೊಂಡು ಅತ್ತಳು. ಮಂಜುಳನಿಗೆ ಸಹಾಯ ಹಸ್ತ ಚಾಚುವಂತಹ ತೌರು ಇರಲಿಲ್ಲ. 

ಮಗನ ಈ ನಡವಳಿಕೆಯಿಂದ ನೊಂದ ತಾಯಿ ತಾವು ಈ ಪಾಪದ ದಿನಸಿಯಲ್ಲಿ ತುತ್ತಾದರೂ ತಿಂದೆನಲ್ಲ. ಅದು ಮಂಜುಳನ ಕಣ್ಣೀರು  ಕೂಳು ಎನ್ನುವ ಪಾಪಪ್ರಜ್ಞೆ ಕಾಡ ತೊಡಗಿತು.    

ನಂಜುಂಡಯ್ಯ ಮನೆಗೆ ಮೀಸೆ ತಿರುಗಿಸುತ್ತ ಬಂದಾಗ ಮಂಜುಳ ಕೋಪದಿಂದ ಕಿರುಚಿದಳು. ''ಯಾಕ್ರೀ ನೀವು ಶೆಟ್ಟರ ಅಂಗಡಿಯಲ್ಲಿ ಸಾಲ ಮಾಡಿದ್ದೀರಿ''

''ಯಾಕೆ ಅಂದ್ರೆ ನೀನು ಹಾಕುವ ರೇಷನ್ ಊಟ ನನಗೆ ಸಾಕಾಗುತ್ತಿರಲಿಲ್ಲ. ಅದಕ್ಕೆ ನಾನೇ ಸಾಮಾನು ತಂದೆ''

''ತಂದವರು ಸಾಲ ತೀರಿಸುವ ಹೊಣೆಯನ್ನು ಹೊತ್ತುಕೊಳ್ಳಬೇಕು''. 

''ಹಣ ನನ್ನ ಹತ್ತಿರ ಎಲ್ಲಿದೆ?'' ನಂಜುಂಡಯ್ಯ ಅಮಾಯಕನಂತೆ ಹೇಳಿದಾಗ 

''ನಿಮ್ಮ ಸಂಬಳದ ಹಣ ಏನಾಯಿತು?''

''ಸಂಬಳ ಯಾವ ಸಂಬಳ, ಆಫೀಸಿನಲ್ಲಿ ಸಾಲದ ಹೊರೆ ಹೆಚ್ಚಾಯಿತು. ಕೆಲಸ ಬಿಟ್ಟೆ'' ಎಂದು ತಣ್ಣಗೆ ಮೀಸೆ ತಿರುವುತ್ತಾ 

''ಅಯ್ಯೋ ನಂಜುಂಡ ಏನಾಗಿದೆಯೋ ನಿನ್ನ ಬುದ್ಧಿಗೆ, ಬರುತ್ತಿದ್ದ ಮೂರು ಕಾಸಿಗೂ ಕಲ್ಲು ಹಾಕಿಕೊಂಡೆಯಲ್ಲೋ'' ಎಂದು ತಾಯಿ ಅಲವತ್ತುಕೊಂಡರು. ವಿಧಿ ಇಲ್ಲದೆ ಈಗ ಮಂಜುಳ ಕಲ್ಲು ಮನಸ್ಸು ಮಾಡಿಕೊಂಡು ''ನೋಡಿ ಈಗಲೇ ಹೇಳುತ್ತೇನೆ. ನಮ್ಮ ಮನೆಯಲ್ಲಿ ಎಷ್ಟು ಇರುತ್ತದೆಯೋ ಅಷ್ಟು ಹಾಕುತ್ತೇನೆ ಧರ್ಮವಾಗಿ. ನೀವು ಸಾಲ ಸೋಲ ಮಾಡಿ ನನ್ನ ತಲೆಯ ಮೇಲೆ ಹೇರಿದರೆ ನಾನು ಜವಾಬ್ದಾರಳಲ್ಲ'' ಎಂದು ಒಳ ನಡೆದಳು. ತಾಯಿ ಮಾತ್ರ ಪೆಚ್ಚಾಗಿ ಬಿಟ್ಟರು. 

''ಅನ್ಯಾಯದ ಹಣದಿಂದ ಊಟ ಮಾಡಿದೆ ಎನ್ನುವ ಪಾಪಪ್ರಜ್ಞೆ ಅವರಿಗೆ ಹೆಚ್ಚಾಗಿ ಕಾಡತೊಡಗಿತು. ಅದೇ ಒಂದು ಬೆಟ್ಟವಾಗಿ ಬೆಳೆದು ಆಕೆ ಹಾಸಿಗೆ ಹಿಡಿದು ಯಾವ ಔಷಧಿಯೂ ಅವರ ದೇಹದ ಮೇಲೆ ಕೆಲಸ ಮಾಡಲಿಲ್ಲ. ದಿನೇ ದಿನೇ ಕೃಶಳಾದ ಆಕೆ ಒಂದು ದಿನ ರಾತ್ರಿ ಮಲಗಿದ್ದವರು ಮೇಲೇಳಲಿಲ್ಲ. ನಂಜುಂಡಯ್ಯನಿಗೆ ಈ ಎಲ್ಲ ವಿದ್ಯಮಾನಗಳ ಅರಿವಿದ್ದರೂ ಅವನು ಅಸಹಾಯಕ ಅವನ ಕೈ ಮೀರಿ ಇವೆಲ್ಲ ನಡೆಯುತ್ತಿತ್ತು. 

***********

ಕಾಲ ಉರುಳುತ್ತಿತ್ತು. ಮಕ್ಕಳು ದೊಡ್ಡವರಾದರು ಅತ್ತೆ ಗತಿಸಿ ವರ್ಷಗಳೇ ಉರುಳಿದವು. ನಂಜುಂಡಯ್ಯನ ವರ್ತನೆ ಮಿತಿ ಮೀರಿತೇ ಹೊರತು ಬದಲಾಗಲಿಲ್ಲ. ಈಗ ಅವನು ಸಿಹಿ ತಿಂಡಿ ಅಂಗಡಿಗಳು, ಬೇಕರಿಯ ಬಳಿ ಹೋಗಿ ತನಗೆ ಬೇಕಾದ್ದನ್ನು ತಿಂದು ದುಡ್ಡಿಲ್ಲ ಎಂದು ಕೈಯಾಡಿಸಲು ಪ್ರಾರಂಭಿಸಿದ. ಎಷ್ಟು ದಿನ ಅಂಗಡಿಯವರು ತಾನೇ ಸುಮ್ಮನೆ ಬಿಡುತ್ತಾರೆ. ಮಂಜುಳಾನ ಕಚೇರಿ ಪತ್ತೆಮಾಡಿಕೊಂಡು ಹಣಕ್ಕಾಗಿ ವರಾತ ಹಚ್ಚಿ ನಂಜುಂಡಯ್ಯನ ವರ್ತನೆ ಬಗ್ಗೆ ಹೀನಾಮಾನ ಮಾತನಾಡುತ್ತಿದ್ದರು. ಸಹದ್ಯೋಗಿಗಳೆದುರಿಗೆ ಮಂಜುಳ ನಾಚಿಕೆಯಿಂದ ಭೂಮಿಗಿಳಿದು ಹೋದಳು. ಮಕ್ಕಳ ಶಾಲೆಯಲ್ಲೂ  ಇದೇ ಗಲಾಟೆ. ಜೊತೆಯ ಹುಡುಗರ ಹಾಸ್ಯ ತಡೆಯಲಾರದೆ ಮಕ್ಕಳು ಶಾಲೆಗೆ ಹೋಗುವುದನ್ನೇ ನಿರಾಕರಿಸತೊಡಗಿದರು. 

ಮಂಜುಳಾ ನಿರುಪಾಯಳಾಗಿ ಆಫೀಸಿನ ಇನ್ನೊಂದೂರಿನ ಶಾಖೆಗೆ ಗುಟ್ಟಾಗಿ ವರ್ಗ ಮಾಡಿಸಿಕೊಂಡು ಮಕ್ಕಳ ಶಾಲೆಯ ಬಿಡುಗಡೆ ಪತ್ರವನ್ನು ಪಡೆದು ಒಂದು ದಿನ ಹೊಸ ಊರಿನ ಶಾಲೆಗೆ ಮಕ್ಕಳನ್ನು ಸೇರಿಸಿ ಬಂದಳು. 

ಮುಂದೆ ಒಂದೇ ವಾರದಲ್ಲಿ ಗಂಡ ಮನೆಯಲ್ಲಿ ಇಲ್ಲದಿರುವಾಗ ಗಂಟುಮೂಟೆ ಕಟ್ಟಿ ಮಕ್ಕಳನ್ನು ಕರೆದುಕೊಂಡು ಹೊರಟಳು. ಆಫೀಸಿನಲ್ಲಿ ಅವಳ ಬೇಡಿಕೆಯಂತೆ ತಾನು ಎಲ್ಲಿಗೆ ಹೋದೆ ಎಂಬುದನ್ನು ಯಾರಿಗೂ ತಿಳಿಸಬಾರದೆಂದು ಹೇಳಿದಳು. ಅವಳ ಸ್ಥಿತಿ ಗೊತ್ತಿದ್ದ ಎಲ್ಲರೂ ಸಮ್ಮತಿಸಿದರು. ಮನೆ ಮಾಲೀಕನ ಹತ್ತಿರ ಅಡ್ವಾನ್ಸ್ ಹಣ ಪಡೆದು ಒಂದು ತಿಂಗಳ ಬಾಡಿಗೆ ಮಾತ್ರ ಕೊಟ್ಟು ತನ್ನ ದಾರಿ  ಹಿಡಿದಳು. 

ಅಲ್ಲೂ ಸ್ತ್ರೀ ಸಹಜವಾದ ಮರುಕದಿಂದ ಒಂದು ತಿಂಗಳಾದರೂ ಗಂಡನಿಗೆ ಮನೆಯ ನೆರಳು ಇರಲಿ ಎಂದು ಯೋಚಿಸಿದ್ದಳು. 

ಇಂತಹ ದಿನಗಳಲ್ಲೇ ಒಂದು ದಿನ ಮೀಸೆ ನಂಜುಂಡಯ್ಯ ಮೂರ್ತಿಯವರ ಕಣ್ಣಿಗೆ ಬಿದ್ದದ್ದು. ಹೀಗೆ ಕೇಳಿದ ನಂಜುಂಡಯ್ಯನವರ ಕಥೆ ಎಲ್ಲರ ಕಣ್ಣಲ್ಲೂ ನೀರು ತರಿಸಿತು. ಚಾಪಲ್ಯ ನಂಜುಂಡಯ್ಯನ ಕೈ ಮೀರಿ ಇಡೀ ಸಂಸಾರವನ್ನೇ ಬದುಕಿನಿಂದ ದೂರ ಮಾಡಿತ್ತು. 

************

ಮೂರ್ತಿಗೂ ಕಲ್ಯಾಣಿಗೂ ತಕ್ಷಣವೇ ಗೊತ್ತಾಯಿತು, ಇದೊಂದು ಮನೋ ದೈಹಿಕ ಖಾಯಿಲೆ, ಇದಕ್ಕೆ ಮನೋವೈದ್ಯರ ಬಳಿಯೇ ಚಿಕಿತ್ಸೆ ಆಗಬೇಕೆಂದು ನಿರ್ಧರಿಸಿದರು. 

ನಂಜುಂಡಯ್ಯನವರಿಗೆ ಆವತ್ತು ಕಂಠಪೂರ್ತಿ ಊಟ. ವೆಂಕಮ್ಮಜ್ಜಿ ತಾಯಿ ಕರುಳಿನ ಪ್ರೀತಿಯಿಂದ ನಂಜುಂಡಯ್ಯನಿಗೆ ತೃಪ್ತಿಯಾಗುವಷ್ಟು ಅಡುಗೆ ಮಾಡಿ ಬಡಿಸಿದರು. ಇದಕ್ಕೆ ಕಲ್ಯಾಣಿ, ಮೂರ್ತಿ, ನಿರಂಜನರ ಒತ್ತಾಸೆಯೂ ಇತ್ತು. ಸ್ನಾನ ಊಟ ಮುಗಿಸಿ ನಂಜುಂಡಯ್ಯ ನಿಶ್ಚಿಂತೆಯಿಂದ ಮಲಗಿ ಪಟ್ಟಾಗಿ ನಿದ್ರೆ ಹೊಡೆದರು. 

ನಿರಂಜನ ಮಾರನೆಯ ದಿನವೇ ಪಟ್ಟಣದ ಮನೋವೈದ್ಯರನ್ನು ಭೇಟಿ ಮಾಡಿ ನಂಜುಂಡಯ್ಯನ ಸ್ಥಿತಿ ವಿವರಿಸಿ ಅವರ ಬಳಿ ಚಿಕಿತ್ಸೆಗೆ ಕರೆ ತರುವುದಾಗಿ ಒಪ್ಪಿಸಿದ. 

ಮುಂದಿನ ದಿನಗಳಲ್ಲಿ ಹತ್ತಾರು ಬಾರಿ ನಿರಂಜನ ಮೊದಲೆರಡು ಬಾರಿ ಕಲ್ಯಾಣಿ ಮನೋವೈದ್ಯರ ಬಳಿ ನಂಜುಂಡಯ್ಯನವರನ್ನು ಚಿಕಿತ್ಸೆಗಾಗಿ ಕರೆದೊಯ್ದರು. ನಿರಂಜನನ ಬೇಸರವಿಲ್ಲದ ಸತತ ಓಡಾಟದಿಂದ ಹತ್ತಾರು ಭೇಟಿಯಲ್ಲಿ ನಂಜುಂಡಯ್ಯನ ಸ್ಥಿತಿ ಸುಧಾರಿಸುತ್ತ ಬಂದಿತು. ಈಗ ಮೊದಲಿಗಿಂತ ತಿನ್ನುವ ಚಪಲ ಕಡಿಮೆಯಾಗುತ್ತ ಬಂದಿತು. ಈಗ ನಂಜುಂಡಯ್ಯ ನಂಜುಂಡಯ್ಯನಲ್ಲ, ಮೀಸೆಮಾವ ಆದ. 

ಚಿಕಿತ್ಸೆ ಫಲಕಾರಿಯಾಗಿ ನಂಜುಂಡಯ್ಯ ಎಲ್ಲರಂತೆ ಮಿತಾಹಾರಿಯಾದ. ತನ್ನ ಹಿಂದಿನ ನಡವಳಿಕೆಯ ಪರಾಮರ್ಶೆ ಮಾಡಿಕೊಂಡು ಸುಂದರವಾದ ಸಂಸಾರ ತನ್ನಿಂದಲೇ ಹೀಗೆ ನಾಶವಾಯಿತು ಎಂದು ದುಃಖಿಸಿದ. ಕಲ್ಯಾಣಿ-ಮೂರ್ತಿಗಳು ಅದರ ಬಗ್ಗೆಯೂ ಚಿಂತಿಸಿದರು. ಮಂಜುಳ ಪಾಪ ಸ್ವಲ್ಪ ತಿಳುವಳಿಕೆಯಿಂದ ಯೋಚಿಸಿ ಡಾಕ್ಟರ್ ಹತ್ತಿರ ತೋರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಾತನಾಡಿಕೊಂಡರು. ಈಗ ಆಸರೆ ಮನೆಯ ಉಗ್ರಾಣದ ವ್ಯವಸ್ಥೆ ಮೀಸೆ ಮಾವನ ಯಜಮಾನಿಕೆಗೆ ಒಳಪಟ್ಟಿತು. ಆಸರೆ ಮನೆಯ ಎಲ್ಲ ಸದಸ್ಯರೂ ಈ ವ್ಯವಸ್ಥೆಯಿಂದ ತೃಪ್ತರಾದರು. ಮೀಸೆ ಮಾವ ಹಿರಿಯರಿಂದ ಕಿರಿಯವರೆಗೂ ಎಲ್ಲರಿಗೂ ಮೀಸೆಮಾವ. ಇಂದು ಮೀಸೆಮಾವ ತನ್ನದಲ್ಲದ ಮಕ್ಕಳನ್ನು ತನ್ನದಾಗಿ ಪ್ರೀತಿಸುವ ವಿಶಾಲ ಹೃದಯದ ''ಮೀಸೆ ಮಾವ''. 


Comments