ಆಸರೆ ಮನೆ - 6

 ಆಸರೆ ಮನೆ - 6


 ಆಸರೆ ಮನೆ - 6

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ 


ಒಂದು ವಾರ ಕಳೆಯಿತು. ಅಂದು ಬೆಳಗ್ಗೆ ಇದ್ದಕ್ಕಿದ್ದಂತೆ ಬಂದ ಗಿರಿಧರ ಅಣ್ಣನೊಡನೆ ಏನೋ ಪಿಸಾಗುಸ ಸಂಭಾಷಣೆ ನಡೆಸಿದ. ವಿಜಯ ಎಂದಿನಂತೆ ಮೈದುನನನ್ನು ಮಾತಾಡಿಸಿ ಕಾಫಿ ತಿಂಡಿ ಕೊಟ್ಟಳು. ಗಿರಿಧರ ಹೊರಟ ಒಂದೆರಡು ಗಂಟೆ ಕಳೆದ ನಂತರ ಬಂದವನು ಮೂರ್ತಿಯ ಇನ್ನೊಬ್ಬ ತಮ್ಮ ಶಶಿಧರ. ಅವನು ಗುಟ್ಟಾಗಿಯೇ ಅಣ್ಣನೊಡನೆ ಮಾತನಾಡಿದಾಗ ವಿಜಯನಿಗೆ ಅನುಮಾನ. ಏನೂ ಮಾತಾಡದೆ ಮೈದುನನನ್ನು ಊಟಕ್ಕೆ ಎಬ್ಬಿಸಿದಳು. ಊಟ ಮುಗಿಸಿ ಶಶಿಧರ ಮತ್ತೊಂದು ಬಾರಿ ಅಣ್ಣನೊಡನೆ ಮಾತನಾಡಿ ತೆರಳಿದ. 

**********

ಸಂಜೆ ಟೀ ಕುಡಿದು ಟಿ.ವಿ. ನೋಡುತ್ತ ಕುಳಿತಾಗ ವಿಜಯ ಮೂರ್ತಿಯನ್ನು ಮಾತಿಗೆಳೆಯುತ್ತ,''ಮೂರ್ತಿ  ಏನು ಗಿರಿ, ಶಶಿ ಇಬ್ಬರೂ ಒಂದೇ ದಿನ ಬಂದು ಅಣ್ಣನೊಡನೆ ಗೌಪ್ಯ ಸಮಾಲೋಚನೆ ನಡೆಸಿದ್ದು'' ಎಂದಳು. ಮೂರ್ತಿ ನಸುನಗುತ್ತ,  ''ವಿಜಿ, ನಿಮ್ಮ ಅಕ್ಕ ತಂಗಿ ಬಂದು ಐದು ಲಕ್ಷಕ್ಕೆ ತಳಹದಿ ಹಾಕಿ ನಿಮಗೆ ಮಕ್ಕಳಿಲ್ಲ ಕೊಡಿ'' ಎಂದರಲ್ಲ, ಹಾಗೇ  ಇವರಿಬ್ಬರು ಹಣ ಬೇಕೆಂದು ನಿಮಗೆ ಮಕ್ಕಳಿಲ್ಲ ಮುಂದೆ ನಿಮ್ಮ ಜೀವನ, ಕ್ರಿಯಾಕರ್ಮದ ವ್ಯವಸ್ಥೆ ನಾವೇ ನೋಡಿಕೊಳ್ಳುತ್ತೇವೆ ಎಂದು ಹೇಳಿ, ಹೋದರು'' ಎಂದು ಮೂರ್ತಿ ತಣ್ಣಗೆ ಹೇಳಿದಾಗ ವಿಜಯನಿಗೆ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದಳು. ''ಅಯ್ಯೋ ಹುಚ್ಚಿ, ನೀನ್ಯಾಕೆ ಅಳ್ತೀ , ಗೊತ್ತಾಯ್ತಲ್ಲ ಈಗ ದೂರದ ಬೆಟ್ಟ ನುಣ್ಣಗೆ ಅಂತ. ಅದನ್ನ ತಿಳಿಸಿದ. ದೇವರಿಗೆ ಥ್ಯಾಂಕ್ಸ್ ಹೇಳು, ಮೂರ್ಖರು ಎಲ್ಲ. 

ಬೇಡಿದುದ ನೀವ ನೀಶ್ವರನೆಂಬ ನೆಚ್ಚಿಲ್ಲ।

ಬೇಡಲೊಳಿ ತಾವುದೆಂಬುದರರಿವಿಲ್ಲ।।

ಕೂಡಿ ಬಂದುದನೆ ನೀನ್ ಅವನಿಚ್ಛೆ ಎಂದುಕೊಳೆ ।

ನೀಡುಗೆದೆಗೆಟ್ಟಿಯನು ಮಂಕುತಿಮ್ಮ|| 

ಅಂತ ಕೇಳಿಲ್ಲವೇ, ದೊಡ್ಡವರ ಮಾತನ್ನ. ನಾನು ಎಲ್ಲ ಸರಿಯಾದ ವ್ಯವಸ್ಥೆ ಮಾಡುತ್ತೇನೆ. ನೀನು ಸುಮ್ಮನಿರು. ಯಾರು ಬಂದು ಏನು ಕೇಳಿದರು ನನ್ನ ಮೇಲೆ ಹೇಳಿಬಿಡು'' ಎಂದರು.

*********

ವಿಜಯನಿಗೂ ಸುಳಿವಿಲ್ಲದಂತೆ ಮೂರ್ತಿ ಒಂದು ಪ್ಲಾನ್ ಸಿದ್ಧಪಡಿಸಿ ಒಂದು ದಿನ ಎಲ್ಲವನ್ನು ಒಂದು ಕಾಗದದ ಮೇಲೆ ಬರೆದು ವಿಜಯನ ಮುಂದಿಟ್ಟರು. 

ಗಿರಿ-ಶಶಿಗೆ ಒಂದೊಂದು ಲಕ್ಷ. ನಾಗೂಗೆ ವಿಜಯನ ಒಂದು ಜೊತೆ ಬಳೆ, ಎರಡು ಎಳೆ  ಸರ, ವಿಜಯ ಅಕ್ಕ ಸುಭದ್ರನ ಮಗನಿಗೆ ಒಂದು ಲಕ್ಷ. ಇದ್ಯಾವ ಮಾತಿಗೂ ಪ್ರವೇಶಿಸಿದ ನಿಷ್ಕಾಮವಾಗಿ ತಂಗಿ ತಂಗಿಯ ಗಂಡನನ್ನೇ ನೋಡಿದ ಸುಬ್ಬಣ್ಣನಿಗೆ ತುಂಬಾ ಅವಶ್ಯಕತೆ ಇದ್ದ ಕಾರಣ ಎರಡು ಲಕ್ಷ. ಶಾರದಾನಿಗೆ ಮಾಡುವೆ ಖರ್ಚಿಗೆ ಒಂದು ಲಕ್ಷ. 

ಒಟ್ಟು ಜೀವವಿಮೆಯಿಂದ ಬಂಡ ಐದು ಲಕ್ಷ ರೂ. ಅದರ ಬಡ್ಡಿ ಹಣವನ್ನೂ ವಿತರಿಸಿದ್ದರು. 

ಬಾಡಿಗೆ ಮನೆಯ ಕಿಷ್ಕಿಂದೆಯ ಜಾಗದಲ್ಲಿ ಕಷ್ಟದಲ್ಲಿ ನಡೆಯುತ್ತಿದ್ದ ಅನಾಥ ಮಕ್ಕಳ ಆಶ್ರಮಕ್ಕೆ ಮನೆಯನ್ನು ಬರೆದುಕೊಡುವುದಾಗಿ ಹೇಳಿದರು. ವಿಜಯನಿಗೆ ಇದೆಲ್ಲ ಸರಿ ಎನಿಸಿದರು ಮನೆಯನ್ನು ಕೊಟ್ಟು ತಾವೆಲ್ಲಿರುವುದು ಎನ್ನುವ ಚಿಂತೆ. ಆದರೆ ಮಾತನಾಡಲಿಲ್ಲ. ಉಳಿದ ಹತ್ತು ಲಕ್ಷದ ಇಡುಗಂಟು ಬ್ಯಾಂಕ್ ನಲ್ಲಿ ಭದ್ರವಾಗಿತ್ತು.

ಒಂದು ದಿನ ಹಬ್ಬದಡಿಗೆ ಮಾಡಿಸಿ ಮೂರ್ತಿ ಎಲ್ಲರನ್ನು ಮನೆಯಲ್ಲಿ ಔತಣಕ್ಕೆ ಬರಲು ಹೇಳಿದರು. ಎಲ್ಲರಿಗೂ ಏಕೆ ಎನ್ನುವುದು ಗೊತ್ತಿಲ್ಲದೇ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ ಊಟದ ವೇಳೆಗೆ ಒಬ್ಬೊಬ್ಬರೇ ಬಂದು ಸೇರಿದರು. 

ಭರ್ಜರಿ ಪಾಯಸದ ಊಟದ ನಂತರ ಮೂರ್ತಿಗಳು ತಮ್ಮ ಉದ್ದೇಶವನ್ನು ಎಲ್ಲರಿಗೂ ವಿವರಿಸಿ ಹೇಳಿದರು. ಕೇಳಿದ ಎಲ್ಲರ ಮುಖ ಕಪ್ಪಿಟ್ಟಿತು. ಸುಬ್ಬಣ್ಣ ಮಾತ್ರ ತಮಗೆ ಹಣ ಖಂಡಿತ ಬೇಡವೆಂದರು. ಮೂರ್ತಿ ಯಾರ ಮಾತನ್ನು ಲೆಕ್ಕಿಸಲಿಲ್ಲ. ತಮ್ಮ ನಿರ್ಧಾರ ಬದಲಿಸಲಿಲ್ಲ. ಅಣ್ಣ ಕೊಟ್ಟ ದಾಖಲೆ ಪತ್ರಗಳನ್ನು ಅಸಮಾಧಾನದಿಂದಲೇ ಪಡೆದು ಎಲ್ಲರೂ ಮನೆಗೆ ಹೊರಟರು. ಸುಬ್ಬಣ್ಣ ಮಾತ್ರ ಕೊನೆಯಲ್ಲಿ ಹೊರಟವರು. 

''ಭಾವ ಏನಿದು ವ್ಯವಹಾರ ಮನೆಯನ್ನು ಕೊಟ್ಟು ನೀವೆಲ್ಲಿರುತ್ತೀರಿ'' ಎಂದಾಗ ಮೂರ್ತಿ, ''ಸುಬ್ಬಣ್ಣ ನೀವೀಗ ನಮ್ಮ ನಿಜವಾದ ಬಂಧು. ಎಲ್ಲರ ಹಣೆಬರಹ ಗೊತ್ತಾಯಿತು. ನಾನು ಅದಕ್ಕೂ ಒಂದು ವ್ಯವಸ್ಥೆ ಮಾಡಿದ್ದೇನೆ. ನಾವಿಬ್ಬರು ಗಂಡ ಹೆಂಡತಿ, ಮಕ್ಕಳಿಲ್ಲ ನಾವೇ ಇವರಿಗೆ ಆಶ್ರಯ ಎಂದು ಭಾವಿಸಿದ್ದವರ ಕೈ ಕೆಳಗೆ ನಾವು ಇರುವುದಿಲ್ಲ. ಬ್ಯಾಂಕಿನಲ್ಲಿರುವ ಹಣದ ಬಡ್ಡಿ ನಮ್ಮಿಬ್ಬರ ಜೀವನಕ್ಕೆ ನಡೆಯುತ್ತದೆ. ನಾನು ನಿಶ್ಚಯಿಸಿರುವಂತೆ ನಾವಿಬ್ಬರು ''ಆಸರೆ ಮನೆ''ಯ ಕಲ್ಯಾಣಮ್ಮನ ಆಶ್ರಯಕ್ಕೆ ಹೋಗುವುದೆಂದು ನಿರ್ಧರಿಸಿದ್ದೇವೆ. ನಮ್ಮ ನಂತರ ಆ ಹಣ 'ಆಸರೆಮನೆ' ಗೆ ಮೀಸಲು'' ಎಂದಾಗ ಸುಬ್ಬಣ್ಣನ ಕಣ್ಣು ಹನಿಗೂಡಿತು. ನಿಷ್ಕಳಂಕ ಹೃದಯದಿಂದ ಸುಬ್ಬಣ್ಣ ತಂಗಿ-ಭಾವನನ್ನು ಪ್ರೀತಿಸುತ್ತಿದ್ದ. ಅವರಿಂದ ಏನೂ ಅಪೇಕ್ಷೆ ಪಟ್ಟಿರಲಿಲ್ಲ. ಈಗಲೂ ಅವರಿಬ್ಬರಿಗೆ ಒಳಿತಾಗಲೆಂದು ಹರಸಿದ. 

ಹೀಗೆ ಆಸರೆ ಮನೆಗೆ ಬಂದವರು ಮೂರ್ತಿ-ವಿಜಯ ದಂಪತಿಗಳು. 

ಈಗ ಆಸರೆ ಮನೆ ಲೆಕ್ಕ ಪತ್ರ ನಿರ್ವಹಣೆಯ ಕೆಲಸ ಮೂರ್ತಿಯದಾದರೆ ಚಿಕ್ಕ ಕೈತೋಟದ ಉಸ್ತುವಾರಿ ವಿಜಯನಿಗೆ. ನಗುನಗುತ್ತಾ ಜವಾಬ್ದಾರಿ ಸ್ವೀಕರಿಸಿದರು ದಂಪತಿಗಳು.      

**********

ಮೂಕಾಂಬಿಕೆಯಾಗಿ ಬಂದ  ಮುಕ್ತಾ

ಮುಕ್ತಾ ಆಸರೆ ಮನೆಯ ಅನಿರೀಕ್ಷಿತ ಅತಿಥಿ. ಮಾತು ಬಾರದ ಅಕ್ಕ ಮೂಕಾಂಬಿಕ. 

ಕಲ್ಯಾಣಿ-ನಿರಂಜನ ಆಸರೆ ಮನೆಗೆ ತಿಂಗಳ ಸಾಮಾನು ಸರಂಜಾಮು ತರಲು ಒಂದು ದಿನ ಪಟ್ಟಣಕ್ಕೆ ಬಂದವರು ತಮ್ಮ ಕೆಲಸ ಮುಗಿಸಿ ಕಾರು ಹತ್ತುವ ವೇಳೆಗೆ ಹರಿದ ಸೀರೆ, ಕೆದರಿದ ತಲೆ, ಚಿಂತೆಯ ಗಂಟನ್ನ ಮುಖದ ಮೇಲಿಟ್ಟುಕೊಂಡು ಸಂತೆ ಮಾಳದ ಮೂಲೆಯ ಕಟ್ಟೆಯ ಮೇಲೆ ಕುಳಿತಿದ್ದ ಮೂಕಾಂಬಿಕೆ ಅವರ ಕಣ್ಣಿಗೆ ಬಿದ್ದಳು. ಕಲ್ಯಾಣಿಯ ಮನಸ್ಸಿನಲ್ಲೆಲ್ಲೋ ಸಂವೇದನೆ. ತಾನೇ ಕಾರಿನಿಂದಿಳಿದು ಹತ್ತಿರ ಹೋಗಿ ಮಾತಾಡಿಸಿದರು. ಕಿವಿ ಕೇಳಿಸಿದರು ಮಾತು ಬಾರದ ಮೂಕಾಂಬಿಕೆ ಪೆಚ್ಚು ನೋಟದಿಂದ ಕಲ್ಯಾಣಿಯನ್ನೇ ನೋಡಿದಾಗ ಅತ್ತಿಗೆಯ ಮನಸ್ಸರಿತವನಂತೆ ನಿರಂಜನ ಮೂಕಾಂಬಿಕೆಯನ್ನು ಕಾರು ಹತ್ತಿಸಿದ. ಹೀಗೆ ಆಸರೆಯ ಮನೆಗೆ ಬಂದ ಮೂಕಾಂಬಿಕೆ ಮೂಕಿ ಎಣಿಸಿಕೊಳ್ಳದೆ ಅತ್ತಿಗೆ ಮೈದುನರ ಪ್ರೀತಿಯ ಮುಕ್ತಾ ಅಕ್ಕಳಾದಳು. 

ಆಸರೆಯ ಮನೆಯಲ್ಲಿ ಶುಚಿಯಾಗಿ ಸ್ನಾನ ಮಾಡಿ ಶುಚಿಯಾದ ಬಟ್ಟೆ ಧರಿಸಿ ಕೊಳಕು ತಲೆ ತೊಳೆದುಕೊಂಡು ಎಣ್ಣೆ ಹಚ್ಚಿ ತಲೆ ಬಾಚಿಕೊಂಡು ವೆಂಕಜ್ಜಿಯ ಕೈನ ರುಚಿಯಾದ ಊಟ ಮಾಡಿ ಮುಕ್ತಾ ಗೆಲುವಾದಳು. ಮಾತುಬಾರದ ಹೆಂಗಸಾದರು ಕಿವಿ ಕೇಳುತ್ತಿದ್ದುದರಿಂದ ಕಲ್ಯಾಣಿ ವೆಂಕಮ್ಮ ವಿಜಯ ಎಲ್ಲರ ಸಾಂತ್ವನದ ಮಾತಿಗೆ ಕರಗಿದಳು. ತನ್ನ ವ್ಯಥೆಯ ಕಥೆಯನ್ನು ಬರೆದು ಹೇಳಿದ್ದು ಹೀಗೆ. 

**************

ನೀವೆಲ್ಲ ನನ್ನ ಅಮ್ಮಂದಿರು. ನಿಮಗಲ್ಲದೆ ನನ್ನ ಕಥೆ ಇನ್ಯಾರಿಗೆ ಹೇಳಲಿ. ಇದುವರೆಗೆ ನನ್ನನ್ನು ನೋಡಿದವರೆಲ್ಲ ಮೂಗಿ ಎನ್ನುವುದನ್ನು ಬಿಟ್ಟರೆ ಇನ್ಯಾವ ರೀತಿಯಲ್ಲೂ ನನಗೆ ಪ್ರೀತಿ ವಿಶ್ವಾಸ ತೋರಿಸಲಿಲ್ಲ. ನಾನು ಮೂಕಾಂಬಿಕೆ ಮೂಕಿಯಾದೆ. ನಿಜವಾಗಲೂ ಮೂಗಿಯೇ ಆಗಿದ್ದು ಈಗ ನಿಮ್ಮೆಲ್ಲರ ಪ್ರೀತಿಯಿಂದ ಮುಕ್ತಾ ಆಗಿದ್ದೇನೆ. ಎಂದು ಪ್ರಾರಂಭಿಸಿದ ಮೂಕಾಂಬಿಕೆಯ ಕಥೆ ಹೀಗೆ ಸಾಗಿತು.

**********

ಅನಂತಯ್ಯ -ಗಿರಿಜಮ್ಮ ಸೌಮ್ಯ ಸ್ವಭಾವದ ಮಾಧ್ಯಮ ವರ್ಗದ ದಂಪತಿಗಳು. ಇಬ್ಬರು ಗಂಡು ಮಕ್ಕಳು ಒಬ್ಬಳೇ ಮಗಳು. ಆರಕ್ಕೇರದ ಮೂರಕ್ಕಿಳಿಯದ ಸಂಸಾರ. ಇಬ್ಬರು ಅಣ್ಣಂದಿರು ಒಬ್ಬಳೇ ತಂಗಿಯನ್ನು ಪ್ರೀತಿಯಿಂದಲೇ ನೋಡುತ್ತಿದ್ದರು. ತಂದೆ ತಾಯಿ ಹೊಟ್ಟೆ ಬಟ್ಟೆಯ ಚಿಂತೆ ಇಲ್ಲದಂತೆ ಮಕ್ಕಳನ್ನು ಸಾಕಿದ್ದರು. 

ದೊಡ್ಡ ಮಗ ವಿಶ್ವ. ವಿದ್ಯೆ ತಲೆಗೆ ಹತ್ತಲಿಲ್ಲ. ಪಿಯುಸಿ ಮುಗಿಸಿ ಎಲ್ಲೋ ಒಂದು ಸಣ್ಣ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ. ಎರಡನೆಯವನು ಆನಂದ, ಅಲ್ಪಸ್ವಲ್ಪ ವಿದ್ಯಾಸಕ್ತನಾಗಿ ಬಿ.ಎ. ಮುಗಿಸಿ ಒಂದು ಕಂಪನಿಯಲ್ಲಿ ಗುಮಾಸ್ತಗಿರಿ ಹಿಡಿದ. ಅನಂತಯ್ಯನವರು ಒಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದುದರಿಂದ ರಿಟೈರ್ಮೆಂಟ್ ಬೆನಿಫಿಟ್ ಪೆನ್ಶನ್ ಆ ರೀತಿಯ ಸೌಲಭ್ಯ ಏನೂ ಇಲ್ಲವಾಗಿತ್ತು. . 

ಮೂರನೆಯವಳೇ ಮಗಳು ಮೂಕಾಂಬಿಕೆಯದೇ ದಂಪತಿಗಳ ಚಿಂತೆ. ಮುದ್ದಾದ ಶ್ವೇತ ವರ್ಣದ ಮಗು ಮೂರನೆಯ ವರ್ಷದಲ್ಲಿ ಅರಳು ಹುರಿದಂತೆ ಮಾತನಾಡುತ್ತಿದ್ದವಳು ಸಣ್ಣ ಜ್ವರ ಬಂದದ್ದೇ ನೆಪವಾಗಿ ಮಾತು ಬಾರದ ಮೂಕಿಯಾದಳು. ಸ್ಪಷ್ಟವಾಗಿ ಚೆನ್ನಾಗಿ ಮಾತನಾಡುತ್ತಿದ್ದ ಮೂಕಾಂಬಿಕೆ ಹೆಸರಿಗೆ ತಕ್ಕಂತೆ ಮೂಕಿಯೇ ಆದಳು . ಕಿವಿ ಕೇಳುತ್ತಿದ್ದರೂ ಮಾತು ನಿಂತು ಹೋಯಿತು. 

ಅನಂತಯ್ಯನವರು ತಮ್ಮ ಆರ್ಥಿಕ ಶಕ್ತಿಯನ್ನೂ ಮೀರಿ ಕಂಡ ಕಂಡ ಆಸ್ಪತ್ರೆ, ವೈದ್ಯರು ದೇವರು ಎಲ್ಲರನ್ನು ಕಂಡರೂ. ದೇವರಿಗೆ ಹರಕೆ, ಸೇವೆ, ವ್ರತ, ಉಪವಾಸ ಎಲ್ಲ ಆಯಿತು. ಇದ್ದ ಮೂರು ಬಿಡಿಗಾಸು ಕೈನಿಂದ ಜಾರಿತೇ ಹೊರತು ಮೂಕಾಂಬಿಕೆ ಮೊದಲಿನಂತಾಗಲಿಲ್ಲ. ಮೂಕಾಂಬಿಕೆ ಲಕ್ಷಣದಲ್ಲಿ ಮೂಕಾಂಬಿಕೆಯಾಗಿಯೇ ಬೆಳೆದಳೇ ಹೊರತು ಮಾತಿಲ್ಲದೆ ಮೂಕಿಯಾದಳು. ಬರುತ್ತಿದ್ದ ಆದಾಯ ಜೀವನಕ್ಕೆ ಸಾಕಾಯಿತೇ ಹೊರತು ಹೆಚ್ಚಿನ ವೆಚ್ಚಕ್ಕಲ್ಲ. ಗಂಡು ಮಕ್ಕಳು ಬೆಳೆದು ನಿಂತರು. ಗಂಡಾದರೇನು ಹೆಣ್ಣಾದರೇನು ನಿಸರ್ಗ ಸಹಜವಾದ ಕೆಲಸಗಳನ್ನೆಲ್ಲ ಮಾಡಲೇಬೇಕು. ಅನಿವಾರ್ಯವಾಗಿ ಅನಂತಯ್ಯನವರು ತಮ್ಮ ಯೋಗ್ಯತೆಗೆ ತಕ್ಕಂತಿರುವ ಬಡವರ ಮನೆಯ ಮಗಳನ್ನು ಸೊಸೆಯಾಗಿ ತಂದುಕೊಳ್ಳಲು ನಿಶ್ಚಯಿಸಿದರು. ವಿಶ್ವನಿಗೆ ತಾನು ಕಡಿಮೆ ಓದಿದವನು ಚಿಕ್ಕ ಕೆಲಸ ಶ್ರೀಮಂತರ ಮನೆ ಹುಡುಗಿ ಬಂದರೆ ಮುಂದೆ ನನ್ನ ಜೀವನ ಚೆನ್ನಾಗಬಹುದು ಎನ್ನುವ ಕನಸು. ಯಾವ ಶ್ರೀಮಂತರ ಮನೆ ಮಗಳು ಈ ಬಡವರ ಮನೆ ಹೊಸಿಲು ಮೆಟ್ಟಿಯಾಳು. ಹಾಗಾಗಿ ಬಡವರ ಮನೆಯ ರತ್ನ ವಿಶ್ವನ ಕೈ ಹಿಡಿದು ಬಂದಳು. 

ರತ್ನ ಹೆಸರಿನಂತೆ ಪೂರ್ಣ ರತ್ನ ಪಡಿಯ ಕೈನಿಂದ ಮೆರುಗು ಹೊತ್ತ ರತ್ನಳಲ್ಲ. ಆದರೆ ಸಂಪೂರ್ಣ ಗಾಜು ಅಲ್ಲದ ಮೆರುಗಿನ ಹೊಳಪುಳ್ಳ ರತ್ನಳಷ್ಟೇ ಆಗಿದ್ದಳು. ಊದುಬತ್ತಿ ಕಾರ್ಖಾನೆಯಲ್ಲೊಂದು ದಿನಗೂಲಿ ಕೆಲಸ ಅವಳದು. ಆದರು ವಿಶ್ವನ ತಣ್ಣೀರಿಗೊಂದು ಬಿಸಿನೀರಿನ ನೆರವು ರತ್ನಳಿಂದ ದೊರಕಿತು. 

***********

ಆದರೇನು ವಿಶ್ವನ ಸಿಡಿಮಿಡಿ ತಪ್ಪಲಿಲ್ಲ. ಜೀವನದ ಬಂಡಿ ಸರಾಗವಾಗಿ ಅಲ್ಲದಿದ್ದರು ಚಲಿಸುತ್ತಿತ್ತು. ಈ ಮಧ್ಯೆ ಮೂಕಾಂಬಿಕೆ ದೊಡ್ಡವಳಾಗಿ ತಂದೆ ತಾಯಿಯ ಚಿಂತೆಗೆ ಮತ್ತಷ್ಟು ಬೆಂಬಲ ನೀಡಿದಳು. 

ಆನಂದ ಮೊದಲಿನಿಂದ ಸ್ವಾರ್ಥಿ. ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡು ಅದರೊಳಗೆ ಬದುಕುತ್ತಿದ್ದವ. ವಿಶ್ವನ ಕೋಪತಾಪ, ಆನಂದನ ಸ್ವಾರ್ಥ, ಮೂಕಾಂಬಿಕೆಯ ಅಸಹಾಯ ಸ್ಥಿತಿ ತಂದೆ ತಾಯಿಗಳನ್ನು ಹಗಲಿರುಳು ಕಾಡುವ ಚಿಂತೆ. 

ವಿಶ್ವ ರತ್ನ ತಮ್ಮ ಪಾಡಿಗೆ ತಾವು ದುಡಿಯುತ್ತ ಇದ್ದರಾದರು ರತ್ನ ಮುಂದಾಲೋಚನೆಯ ಹುಡುಗಿ. ತಾವಿರುವ ಸ್ಥಿತಿ ಹೀಗೆ ಮುಂದುವರರೆದರೆ ತಮಗೆ ಮುಂದೆ ಮಕ್ಕಳು ಮರಿಗಳಾದರು ಬದುಕು ಹೀಗೆ ಇರುವುದಲ್ಲದೆ ಬೇರೇನು ಬದಲಾವಣೆಯಾಗದು ಎಂದು ಯೋಚಿಸಿ ಮೆಲ್ಲಗೆ ಅತ್ತೆಯ ಮನೆಯಿಂದ ಕಾಲ್ತೆಗೆಯುವ ಯೋಚನೆ ಮಾಡಿದಳು. 

ವಿಶ್ವನ ಕೋಪತಾಪ ಇಲ್ಲದ ಸಮಯ ನೋಡಿಕೊಂಡು ರತ್ನ ಮೆಲ್ಲಗೆ ಭವಿಷ್ಯದ ಕನಸನ್ನು ಅವನ ಮುಂದೆ ಹರಡಿ ಪುಸಲಾಯಿಸಿದಳು. ಹೆಚ್ಚಿನ ವಿದ್ಯೆ ಇಲ್ಲ. ಕೆಲಸ ಮಾಡುವ ತಲೆಯಿಲ್ಲದ ಕೋಲೆ ಬಸವ ವಿಶ್ವ ರತ್ನಳ ತಾಳಕ್ಕೆ ಹೆಜ್ಜೆ ಹಾಕಿದ. ರತ್ನ ಮೆಲ್ಲಗೆ ಯಾರಿಗೂ ಗುಟ್ಟು ಬಿಡದಂತೆ ಗಂಡನ ಹಾಗೂ ತನ್ನ ಸಂಬಳವನ್ನು ಕೂಡಿಸಲು ಪ್ರಾರಂಭಿಸಿದಳು. ಒಂದಾರು ತಿಂಗಳಾಗುವ ಹೊತ್ತಿಗೆ ಒಂದಷ್ಟು ದುಡ್ಡು ಕೈಸೇರಿ ರತ್ನಳ ಕನಸು ಸ್ವಲ್ಪ ಸ್ವಲ್ಪ ಗರಿಗೆದರುವಂತಾಯಿತು. ಅನಂತಯ್ಯ- ಗಿರಿಜಮ್ಮನಿಗೆ ಸಂಸಾರದ ರಥ ಎಳೆಯಲು ಕಷ್ಟವಾದರು ಸ್ವಾಭಿಮಾನಿಗಳಾದ ಅವರು ಮಗ ಸೊಸೆಯ ಬಳಿ ಹಣಕ್ಕೆ ಕೈ ಚಾಚಲಿಲ್ಲ. ಹೀಗಾಗಿ ರತ್ನಳ ಪುಟ್ಟ ಗಂಟು ಕ್ರಮೇಣ ದೊಡ್ಡದಾಗಲು ಪ್ರಾರಂಭಿಸಿತು. ಚೀಟಿ ಗೀಟ್ಟಿ  ಕಟ್ಟಿ ಪಾತ್ರೆ ಪಡಗ ಮಾಡಿಕೊಂಡ ರತ್ನ ಎಲ್ಲವನ್ನು ತಾಯಿಯ ಮನೆಯಲ್ಲಿ ಸಂಗ್ರಹಿಸಿಕೊಂಡಳು. ವರ್ಷವೆನ್ನುವಷ್ಟರಲ್ಲಿ ಪುಟ್ಟದೊಂದು ಗೂಡನ್ನು ಹುಡುಕಿ ಅಡ್ವಾನ್ಸ್ ಕೊಟ್ಟು ಗಂಡನಿಗೆ ಹೇಳಿ ಹೊರಡುವ ಸಿದ್ಧತೆ ಮಾಡಿದಳು. ದುಡುಕು ವಿಶ್ವನಿಗೆ ರತ್ನಳ ಆರ್ಥಿಕ ಚಿಂತನೆ ದೇಶದ ಪಂಚವಾರ್ಷಿಕ ಯೋಜನೆಗಿಂತ ಮಿಗಿಲೆನಿಸಿತು. ಹೀಗಾಗಿ ತಂದೆ ತಾಯಿಗಳನ್ನು ಬಿಟ್ಟು ಹೋಗುವ ಚಿಂತೆ ಅವನಿಗೆಷ್ಟೂ ಬರಲಿಲ್ಲ. 

ರತ್ನ ಒಂದು ದಿನ ಇದ್ದಕ್ಕಿದ್ದಂತೆ ಆಫೀಸಿಗೆ ಹೊರಡುವ ಮುಂಚೆ ಗಂಡನ ಜೊತೆ ಅತ್ತೆ ಮಾವನ ಮುಂದೆ ಬಂದು 

''ಅಮ್ಮಾ ನಾವಿಬ್ಬರು ಬೇರೆ ಮನೆ ಮಾಡಿದ್ದೇವೆ. ಇನ್ನು ಮೇಲೆ ಅಲ್ಲೇ ಇರುತ್ತೇವೆ. ನಮಗೆ ಆಶೀರ್ವಾದ ಮಾಡಿ'' ಎಂದು ಗಂಡ ಹೆಂಡಿರಿಬ್ಬರು ಅವರಿಗೆ ನಮಸ್ಕರಿಸಿದರು. 

ಅನಂತಯ್ಯ ಗಿರಿಜಮ್ಮ ದಿಗ್ಭ್ರಾಂತರಾದರು. ಗಿರಿಜಮ್ಮನಿಗೆ ರತ್ನಳ ಈಚಿನ ನಡವಳಿಕೆಯಿಂದ ಅನುಮಾನ ಬಂದಿದ್ದರು ಅದು ಇಷ್ಟು ಬೇಗ ಖಚಿತವಾಗುತ್ತದೆಂದು ತಿಳಿದಿರಲಿಲ್ಲ. ಕೈ ಮೀರಿದೆ ಈಗ ಮಾತನಾಡಿ ಏನು ಪ್ರಯೋಜನ, ಸುಮ್ಮನೆ ಆಶೀರ್ವದಿಸಿ ಕಳುಹಿಸಿಕೊಟ್ಟರು. 

ಈಗ ಆನಂದನ ಮೇಲೆ ಅವರ ಭರವಸೆ ಉಳಿದಿದ್ದು. ಆರ್ಥಿಕವಾಗಿ ದೈಹಿಕವಾಗಿ ದುರ್ಬಲರಾದ ತಾವು ಮೂಕಿಯಾದ ಮಗಳನ್ನು ಕಟ್ಟಿಕೊಂಡು ಏನು ಮಾಡಲು ತಾನೇ ಸಾಧ್ಯ. ಆನಂದನಿಗೂ ಮದುವೆ ವಯಸ್ಸು ಬಂದಿದೆ. ತಮ್ಮ ಯೋಗ್ಯತೆ ತಿಳಿದಿರುವ ಯಾರು ಹೆಣ್ಣು ಕೊಡುತ್ತಾರೆ?

''ಪ್ರಾರ್ಥನೆ ಮಾಡಲು ಹೋಗಿ ಮಸೀದಿಯನ್ನೇ ಕೊರಳಿಗೆ ಕಟ್ಟಿಕೊಳ್ಳಲು ಯಾವ ಹೆತ್ತವರು ಸಿದ್ಧರಿರುತ್ತಾರೆ? ಆದರೆ ನಡೆಯಬೇಕಾದ ಕಾರ್ಯ ನಿಲ್ಲುವಂತಿಲಿಲ್ಲವಲ್ಲ. ಏನು ಮಾಡುವುದು ಎನ್ನುವ ಚಿಂತೆಯಲ್ಲಿ ಇಬ್ಬರೂ ಮತ್ತಷ್ಟು ದುರ್ಬಲರಾದರು. 

ಆನಂದ ಮಾತ್ರ ಯಥಾಪ್ರಕಾರ ಆಫೀಸು ಮನೆ, ರಜಾ ದಿನಗಳಂದು ಗೆಳೆಯರೊಡನೆ ಸುತ್ತಾಟಕ್ಕೆಂದು ಹೇಳಿ ಹೋಗುತ್ತಿದ್ದ. ಆನಂದ ಮಾತುಗಾರನಲ್ಲ. ಆದರೆ ಲೆಕ್ಕಾಚಾರದಲ್ಲಿ  ಪಕ್ಕಾ. ಅವನ ತಲೆ ಯಾವಾಗಲೂ ಸುತ್ತುತ್ತಲೆ ಇರುತ್ತಿತ್ತು. ತಂದೆ ತಾಯಿ ಮೂಕ ತಂಗಿ ಮುರುಕಲು ಮನೆ ಇದರಿಂದ ತನ್ನ ಜೀವನ ಬೆಳಗಲಾರದೆಂದು ಆನಂದ ಒಳಗೊಳಗೆ ನಿರ್ಧರಿಸಿದ್ದ. ಅವಕಾಶಕ್ಕಾಗಿ ಕಾಯುತ್ತಲೇ ಇದ್ದ. 

ಶೋಭಾ ಆನಂದನ ಆಫೀಸಿನ ಸಹದ್ಯೋಗಿ. ವಯಸ್ಸಿಗೆ ತಕ್ಕಂತೆ ಥಳಕು ಬಳಕು,  ವಯ್ಯಾರ ವಿಲಾಸ ಎಲ್ಲ ಇತ್ತು. ಜೊತೆಗೆ ಕೈ ತುಂಬಾ ಸಂಬಳ. ತಂದೆ ತಾಯಿಗಳಿಗೊಬ್ಬಳೆ ಮಗಳು. ರೂಪ ಯೌವ್ವನ, ವಿದ್ಯೆ ತುಂಬಾ ಹಣ ಎಲ್ಲ ಇದ್ದರೂ ಅವಳ ಮದುವೆಗೆ ಇದ್ದ ಒಂದೇ ತೊಂದರೆ ಎಂದರೆ ಅವಳ ತಂದೆ ತಾಯಿ ಇಬ್ಬರೂ ಅಂತರ್ಜಾತಿಯ ವಿವಾಹವಾಗಿದ್ದರು. ಶೋಭಾ ಯಾರ ಕಡೆ ಒಲಿಯಬೇಕು? ತಂದೆ? ತಾಯಿ? ಹೀಗಾಗಿ ವಯಸ್ಸು ೩೦ ಆದರು ಶೋಭಾ ಕನ್ಯಾಕುಮಾರಿಯಾಗಿಯೇ ಇದ್ದಳು. 

ಆನಂದ ಶೋಭಾಳ ಕಚೇರಿಯಲ್ಲಿ ಗುಮಾಸ್ತನಾಗಿ ಸೇರಿದ್ದವನು ಕ್ರಮೇಣ ಕ್ಯಾಷಿಯರ್ ಆಗಿ ಬಡ್ತಿ ಪಡೆದಿದ್ದ. ಈಗ ಶೋಭಾಳ ಕಣ್ಣು ಆನಂದನತ್ತ. ಪರಿಚಯ, ಕಿರುನಗೆ, ಸ್ನೇಹ, ಕಾಫಿ ಸೇವನೆಯ ನಂತರ ಇಬ್ಬರದೂ ಸಮಾನ ಮನಸ್ಥಿತಿಯ ಪರಿಚಯ. ಹಾಗಾಗಿ ಶೋಭಾ ಆನಂದನತ್ತ ಮೆಲ್ಲನೆ ಬಂದಳು. 

ಎಲ್ಲಿಯದನೋ, ಅದೆಲ್ಲಿಯದಕೋ ಹೆಣೆಯುವನು| 

ಒಲ್ಲೆವೆನೆ ನೀವೇ ಕಿತ್ತಾಡಿಕೊಳಿರೆನುವನ್ ।।

ಬೆಲ್ಲದಡುಗೆಯಲಿ ಹಿಡಿ ಮರಳ ನೆರೆ ಬಿರಿಸುವನು ।

ಒಳ್ಳೆಯುಪಕಾರಿ ವಿಧಿ- ಮಂಕುತಿಮ್ಮ ।।

ಆನಂದ ನಿಧಾನವಾಗಿ ಶೋಭಾಳ ಸೆಳೆತಕ್ಕೆ ಒಳಗಾದ. ಒಂದು ಸುದಿನ ಶೋಭಾ ಆನಂದರ ವಿವಾಹ ರಿಜಿಸ್ಟರ್ ಆಯಿತು. ಆಫೀಸಿಗೆಂದು ಹೋದ ಮಗ ಮದುವೆ ಮಾಡಿಕೊಂಡು ಮನೆಗೆ ಬಂದಾಗ ಅನಂತಯ್ಯ ಗಿರಿಜಮ್ಮನ ಉಸಿರು ನಿಲ್ಲದಿದ್ದುದು ಅವರ ಪುಣ್ಯ. ಮೆಟ್ಟಕ್ಕಿ ತುಳಿದು ಹೊಸಿಲು ದಾಟಿ ಮನೆ ತುಂಬಾ ಬೇಕಾದ ಸೊಸೆ ಹೈ ಹೀಲ್ಡ್  ಧರಿಸಿ ಬಾಬ್ ಕಟ್ ನಲ್ಲಿ  ಒಳಗೆ ಬಂದಳು. ಒಳಗೆ ಬಂದದ್ಧಷ್ಟೆ. ಅರೆಗಳಿಗೆಯೂ ಮನೆಯಲ್ಲಿ ಕೂರದೆ ಹಳೆಯ ಮನೆಯನ್ನು ಮುದುಕ ದಂಪತಿಗಳನ್ನು ಮೂಕಿ ಮಗಳನ್ನು ಕಡೆಗಣ್ಣ ನೋಟದಲಿ ಅಳೆದು ಕಣ್ಣಿನಲಿ ಅನಾದರ ಉಕ್ಕಿಸಿದಳು. ಹಾಲು ಹಿಡಿದು ಒಳಬಂದ ಗಿರಿಜಮ್ಮ ಹೊರಟು ನಿಂತ ಮಗ ಸೊಸೆಯನ್ನು ನೋಡಿ, ''ಏಕೋ ಆನಂದು ಆಗಲೇ ಹೊರಟೆ. ಹಾಲು ತರುತ್ತೇನೆ, ಕುಡಿಯಿರಿ'' ಎಂದಳು. ಶೋಭಾ ದೊಡ್ಡ ಮನಸ್ಸು ಮಾಡಿ ಅತ್ತೆ ತಂದಿತ್ತ ಹಾಲು ಕುಡಿದಳು ಅಷ್ಟೇ. ಅತ್ತೆ ಮಾವರ ಭೇಟಿ ಸೊಸೆಯದು. ಮಗ ಸೊಸೆ ಮನೆಯಿಂದ ಕಾಲ್ತೆಗೆಯುವುದನ್ನೇ ನೋಡುತ್ತ ಗಿರಿಜಮ್ಮ ಕಣ್ತುಂಬಿಕೊಂಡು ಬಾಗಿಲಲ್ಲಿ ನಿಂತಿದ್ದರು. ಅನಂತಯ್ಯ ಮೂಕಾಂಬಿಕೆ ಎಲ್ಲದಕ್ಕೂ ಮೂಕಸಾಕ್ಷಿ. 

ಅಂದು ರಾತ್ರಿ ಏಕೋ ಚಳಿಯಾಗುತ್ತಿದೆ ಎಂದು ಹಾಸಿಗೆ ಹಿಡಿದ ಗಿರಿಜಮ್ಮ ತಿಂಗಳು ಕಳೆದರೂ ಮೇಲೇಳಲಿಲ್ಲ. ಮನೆಯ ಎಲ್ಲ ಕೆಲಸ ಕಾರ್ಯಗಳು ಮೂಕಾಂಬಿಕೆಯದೇ. ಔಷಧಿ ಪಥ್ಯ ಮನೆಯವರ ಹೊಟ್ಟೆ ಬಟ್ಟೆಗೆ ಅನಂತಯ್ಯನವರ ಆದಾಯ ಏತಕ್ಕೂ ಸಾಲದು. ಗಂಡು ಮಕ್ಕಳಿಬ್ಬರು ಒಂದೇ ಊರಿನಲ್ಲಿದ್ದರು ಮನೆಗೆ ದೂರ, ಮನಸ್ಸಿಗೆ ಇನ್ನೂ ದೂರವಾಗಿದ್ದರು. ಗಿರಿಜಮ್ಮನ ಖಾಯಿಲೆಗೆ ಮಾಡಿದ ಸಾಲ ಬಡ್ಡಿ ಹತ್ತದಂತೆ ಬೆಳೆಯಿತು. ಅನಂತಯ್ಯನವರು  ದಿಕ್ಕುಗಾಣದಂತಾದರು. 

ಗಿರಿಜಮ್ಮನ ಖಾಯಿಲೆ ದಿನೇ ದಿನೇ ಉಲ್ಬಣಿಸಲಾರಂಭಿಸಿತು. ಗಂಡು ಮಕ್ಕಳು ಮಾಡಿದ ಹಿತಶತ್ರುತ್ವ ಗಿರಿಜಮ್ಮನ ಮನೋಚಿಂತೆಗೆ ಕಾರಣವಾಯಿತು. ಯಾವ ಔಷಧಿಯೂ ಕೆಲಸ ಮಾಡಲಿಲ್ಲ. ದಿನೇ ದಿನೇ ಕೊರಗಿ ಕೊರಗಿ ೨ ತಿಂಗಳು ನರಳಿದ ಗಿರಿಜಮ್ಮ ಮೂಕಿಯ ಕೈ ಹಿಡಿದು ಕಣ್ಣೀರು ಸುರಿಸುತ್ತ ಗಂಡನ ಮುಖ ನೋಡುತ್ತ ಮುತ್ತೈದೆಯಾಗಿ ಕಣ್ಮುಚ್ಚಿದರು. ಗಂಡು ಮಕ್ಕಳ ವಿಳಾಸವೇ ತಿಳಿಯದ ಅನಂತಯ್ಯ ತಾವೇ ಮುಂದಾಗಿ ಪತ್ನಿಯ ಕ್ರಿಯಾಕರ್ಮ ನಡೆಸಿದರು. 

ಮೊದಲೇ ಚಿಂತೆಯಿಂದ ಸೋತು ಸುಣ್ಣವಾಗಿದ್ದ ಅನಂತಯ್ಯನವರು ಹೆಂಡತಿಯ ಮರಣ, ಸಾಲದ ಹೊರೆಯಿಂದ ಕಂಗಾಲಾಗಿ ಕುಗ್ಗಿ ಹೋದರು. ಕಡೆಗೆ ಸಾಲಕ್ಕೊಂದು ಪರಿಹಾರ ಕಾಣಲು ತಾವಿದ್ದ ಹಳೆಯ ಮುರುಕು ಮನೆಯನ್ನು ವಿಕ್ರಯಿಸುವ ಏರ್ಪಾಡು ಮಾಡಿದರು. ಬಂದ ಹಣದಲ್ಲಿ ಹೆಚ್ಚಿನ ಭಾಗ ಸಾಲಕ್ಕೆ ಸರಿಯಾಗಿದ್ದು ಅನಂತಯ್ಯನವರ ಕೈಗೆ ಉಳಿದದ್ದು ಅಲ್ಪ ಮೊತ್ತ ಮಾತ್ರ. ಋಣಭಾರದಿಂದ ಬಿಡುಗಡೆಯ ನಿಟ್ಟುಸಿರು ಬಿಟ್ಟರು. 

ಯಾವುದೋ ಒಂದು ಸಣ್ಣ ಗಲ್ಲಿಯಲ್ಲಿ ಒಂದು ತಿಂಗಳ ಬಾಡಿಗೆಯನ್ನು ಮಾತ್ರ ಅಡ್ವಾನ್ಸಾಗಿ ಪಡೆದು ಅನಂತಯ್ಯನವರ ಮೇಲೆ ಕರುಣೆ ತೋರಿ ಯಾರೋ ಪುಣ್ಯಾತ್ಮರು ಮನೆ ಬಾಡಿಗೆಗೆ ಕೊಟ್ಟರು. ತಂದೆ ಮಗಳು ಸ್ವಂತ ಗೂಡನ್ನು ಬಿಟ್ಟು ಸಾಲದ ಹೊರೆ ಇಳಿಸಿಕೊಂಡು ಬಾಡಿಗೆ ಮನೆಯೆಂಬ ಕೋಣೆ ಸೇರಿದರು.    

**********

ಮೂಕಾಂಬಿಕೆಯ ಜೀವನದಲ್ಲಿ ಮತ್ತೊಂದು ಹೊಸ ಅಧ್ಯಾಯ ಪ್ರಾರಂಭವಾಯಿತು. ಅನಂತಯ್ಯನವರು ತಂದು ಹಾಕಿದ್ದನ್ನು ಸಾವರಿಸಿ ಜಾಣೆ ಮೂಕಾಂಬಿಕೆ ಮನೆ ನಿರ್ವಹಿಸುತ್ತಿದ್ದಳು. ಅದು ಅಷ್ಟು ದಿನ ನಡೆದೀತು. ವಯಸ್ಸಾದ ಅನಂತಯ್ಯನವರು ದುಡಿಯಲಾರದಷ್ಟು ನಿಶ್ಯಕ್ತರಾದರು. ಮನೆ ಮರಿ ಉಳಿದ ಪುಡಿಗಾಸು ಖಾಲಿಯಾಯಿತು. ಅನಂತಯ್ಯನವರ ಜೀರ್ಣ ಶರೀರದ ಪ್ರಾಣ ಪಕ್ಷಿ ಹಾರಿ ಹೋಗಿ ಗೂಡು ಖಾಲಿ ಆಯಿತು. ಮೂಕಾಂಬಿಕೆ ಪೂರ್ಣವಾಗಿ ಅನಾಥಳಾದಳು. ನೆರೆ ಹೊರೆಯವರೆಲ್ಲ ಸೇರಿ ಅನಂತಯ್ಯನವರ ಅಂತ್ಯ ಸಂಸ್ಕಾರ ನಡೆಸಿದರು. 

ಮೂಕಿ ಹುಡುಗಿಯ ಮೇಲೆ ಕರುಣೆಯಿರಿಸಿ ಒಂದೆರಡು ತಿಂಗಳು ನೆರೆಹೊರೆಯವರು ಊಟ ತಿಂಡಿ ನೀಡಿದರು. ಅದು ಎಷ್ಟು ದಿನ ನಡೆದೀತು? ಮನೆ ಮಾಲೀಕ ಬಾಡಿಗೆ ಕೇಳಲು ಬಂದಾಗ ಮೂಕಾಂಬಿಕೆ ಕೈ ಬಾಯಿ ಸನ್ನೆಯಿಂದ ಹೇಳಿದ ಯಾವುದು ಮನೆ ಮಾಲೀಕನ ಕರುಣೆಗೆ ಬರಲಿಲ್ಲ. ಮೂಕಾಂಬಿಕೆಯ ನಾಲ್ಕಾರು ಬಟ್ಟೆಗಳನ್ನು ಚೀಲಕ್ಕೆ ಹಾಕಿ ಅವಳನ್ನು ಮನೆಯಿಂದ ಆಚೆಗೆ ಕಳುಹಿಸಿದ ಮೇಲೆ ಅನಾಥೆ ಮೂಕಾಂಬಿಕೆ ಬೀದಿ ಪಾಲಾದಳು. ಇನ್ನೂ ಯೌವ್ವನವಿದ್ದ ಅವಳು ಬೀದಿಪಾಲಾದ ಮೇಲೆ ಬೀದಿ ಹೋಕರ ಕಣ್ಣಿಗೆ ಕಾಣಲಾರಂಭಿಸಿದಳು. 

ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಮೂಕಾಂಬಿಕೆ ಯಾವುದೇ ಅನಾಹುತ ಸಂಭವಿಸುವ ಮುಂಚೆ ದೇವರ ದಯೆಯಿಂದ ಕಲ್ಯಾಣಿ- ನಿರಂಜನರ ಕಣ್ಣಿಗೆ ಬಿದ್ದು ಆಸರೆ ಮನೆಯನ್ನು ಸೇರಿದಳು. 

''ಅನಾಥೋ ದೈವ ರಕ್ಷಕಃ'' ಎಂದು ಮೂಕಾಂಬಿಕೆ ತನ್ನ ಕಥೆಯನ್ನು ಬರೆದು ಮುಗಿಸಿದ್ದಳು. ಓದಿದ ಆಸರೆ ಮನೆಯವರೆಲ್ಲರೂ ಮೂಕಾಂಬಿಕೆಗಾಗಿ ಮರುಗಿದರು. ಅಂದಿನಿಂದ ಮೂಕಾಂಬಿಕೆ ಹೊಸ ಮನುಷ್ಯಳಾಗಿ ಮುಕ್ತಾ ಆದಳು. ಸರ್ವ ಕಷ್ಟಗಳಿಂದ ಸಕಲ ಚಿಂತೆಗಳಿಂದ ಮುಕ್ತಳಾಗಿ ಮುಕ್ತಳಾದಳು. 

ಇದು ಮೂಕಿ ಮೂಕಾಂಬಿಕೆಯ ಕಥೆ-ವ್ಯಥೆ.

Comments