ನಮ್ ಕರ್ನಾಟಕ - ನಮ್ ಹೆಮ್ಮೆ

 ನಮ್ ಕರ್ನಾಟಕ - ನಮ್ ಹೆಮ್ಮೆ

ಲೇಖನ -  ಶ್ರೀಮತಿ ಆಶಾ ವಿಶ್ವನಾಥ್




ಹಾಯ್ ಅಲ್ಲೋ ನಮಸ್ಕಾರ! 

ಹೌದು, ಹಾಯ್ ಅಲ್ಲ, ಅಚ್ಚ ಕನ್ನಡದಲ್ಲಿ ಸ್ವಚ್ಚ ಪ್ರೀತಿಯ ನಮಸ್ಕಾರ ಕನ್ನಡದ ಮನಸ್ಸುಗಳಿಗೆ.

"ನಮ್ ಕರ್ನಾಟಕ - ನಮ್ ಹೆಮ್ಮೆ"

ಈ ನಮ್ಮ ಕನ್ನಡ ನಾಡನ್ನ ಇವತ್ತು ಕರ್ನಾಟಕ ಅಂತ ಕರೀತೀವಲ್ಲ ಈ ಹೆಸರು ಮುಂಚಿನಿಂದ್ಲೂ ಇದ್ದದ್ದೇನಲ್ಲ. ಬೇರೆಬೇರೆ ಕಾಲದಲ್ಲಿ, ಬೇರೆಬೇರೆ ಪ್ರದೇಶದಲ್ಲಿ, ಬೇರೆಬೇರೆ ಹೆಸರಿನಿಂದ ಕರೆಸ್ಕೊಂಡು ಕೊನೆಗೆ ಕರ್ನಾಟಕ ಆಯ್ತು. ಈ ಹೆಸರು ಬರೋಕ್ಕೂ ಮುಂಚೆ ಏನೇನೆಲ್ಲಾ ಹೆಸರು ನಮ್ಮ ಕನ್ನಡ ನಾಡಿಗೆ ಇತ್ತು ಅನ್ನೋ ಇತಿಹಾಸ ಇಲ್ಲಿದೆ ನೋಡಿ.

ಕರ್ನಾಟಕ. ಈ ಹೆಸರಿನ ಹಿಂದಿನ ಕಥೆ ಹೀಗಿದೆ. ನಮ್ಮ ಕರ್ನಾಟಕವನ್ನ ಮುಂಚೆ ಕನ್ನಡ ಅಂತ್ಲೇ ಕರೀತಿದ್ರಂತೆ. ಕಣ್ ಅಥವಾ ಕಳ್ ಅನ್ನುವ ಒಂದು ಜನಾಂಗ ಈ ನಾಡಲ್ಲಿ ಇತ್ತಂತೆ. ಅವರಿಂದಲೇ ಈ ನಾಡಿಗೆ ಕಣ್ಣಾಡು ಅನ್ನೋ ಹೆಸರು ಬಂದು ಮುಂದೆ ಅದೇ ಕನ್ನಾಡು ಅಂತಾಯ್ತು. ಆಮೇಲೆ ಕನ್ನಡ ಅಂತಾಯ್ತು ಅನ್ನೋದು ಒಂದ್ ಕತೆ. ಇದು ಬರೀ ಕಥೆ ಮಾತ್ರ ಅಲ್ಲ, ಪುರಾವೆಗಳು ಕೂಡಾ ಇವೆ. "ಕಾವೇರಿಮಿರ್ದಮಾ ಗೋದಾವರಿಮಿರ್ದ ನಾಡ್ದಾ ಕನ್ನಡ" ಅಂತ ನಮ್ಮ ಕವಿರಾಜಮಾರ್ಗದಲ್ಲಿದೆ. ಆಂಡಯ್ಯ ಒಂದ್ಕಡೆ "ಕನ್ನಡವೆನಿಪ್ಪಾ ನಾಡು" ಅಂತಾನೇ ಬರೀತಾರೆ. ಅಂದ್ರೆ ಇದರಿಂದಲೇ ಗೊತ್ತಾಗತ್ತೆ ನಮ್ಮ ನಾಡನ್ನ ಕನ್ನಡ ಅನ್ನೋ ಹೆಸರಿಂದ್ಲೇ ಕರೀತಿದ್ರು ಅಂತ.

ಕನ್ನಡ ನಾಡಿನ ಹೆಸರಿನ ಇತಿಹಾಸದ ಮತ್ತಷ್ಟು ಕಥೆಗಳನ್ನ ಕೇಳಿದ್ರೆ, ಒಂದ್ ಹೆಸ್ರಿನ್ ಹಿಂದೆ ಇಷ್ಟೆಲ್ಲಾ ಪುರಾಣ ಇರತ್ತಾ ಅನ್ನಿಸೋದು ಸಹಜ. ಕನ್ನಡ ಅಂತ ಕರೀತಿದ್ದ ನಮ್ಮ ನಾಡನ್ನ ಮುಂದೆ ಸಂಸ್ಕೃತದಲ್ಲಿ ಕರ್ನಾಟ ಅಂತ ಕರೀತಾರೆ. ಕರ್ಣೇ + ಅಟಯತಿ = ಕರ್ನಾಟ. ಕಷ್ಟ ಅಲ್ವಾ ಅರ್ಥ ಮಾಡ್ಕೊಳ್ಳೋದು? ಒಂದ್‍ಸ್ವಲ್ಪ ಸುಲಭ ಮಾಡ್ಲಾ? ಕಿವಿಗೆ ಹೊಡೆಯುವ ಅಥವಾ ಖ್ಯಾತನಾಡು ಅನ್ನೋ ಕಲ್ಪನೆಯಿಂದ ಕರ್ನಾಟ ಅಂತ ಆಯಿತಂತೆ. ಅದು ಇನ್ನೊಂದು ಕತೆ. ಇಷ್ಟಕ್ಕೇ ಮುಗೀತಾ? ಊಹೂಂ ಇನ್ನೂ ಇದೆ. ಓದಿ, ಪೂರ್ತಿ ಇತಿಹಾಸ ಬಿಚ್ಚಿಡ್ತೀನಿ.


ಶ್ರೀಗಂಧದ ನಾಡು ನಮ್ಮ ಕನ್ನಡ ನಾಡು. ಇಡೀ ಪ್ರದೇಶದ ತುಂಬೆಲ್ಲಾ ಘಮಗುಡೋ ಶ್ರೀಗಂಧ! ಆಹಾ ಈಗ ನೆನೆಸ್ಕೊಂಡ್ರೇ ಎಷ್ಟು ಸೊಗಸು ಅಲ್ವಾ? ಈ ಸುವಾಸನೆಗೋಸ್ಕರಾನೇ "ಘಂ" ಅಥವಾ "ಕಂ + ನಾಡು" ಅಂತ ನಮ್ಮ ನಾಡನ್ನ ಕರೆದ್ರಂತೆ. ಅದನ್ನೇ ಒಟ್ಟುಗೂಡಿಸಿ "ಕಮ್ಮಿತ್ತು ನಾಡು" ಅಂತ ಹೆಸರು ಕೊಟ್ರು. ಅಂದ್ರೆ ಸುವಾಸನೆ ಅನ್ನೋ ಅರ್ಥ ಈ ಪದಕ್ಕೆ ಇರೋದು. ಹಾಗಾಗಿ "ಕಂ-ನಾಡು ಅಥ್ವಾ ಕಮ್ಮಿತ್ತು ನಾಡು" ಅನ್ನೋದು ಇನ್ನೂ ಒಂದು ಹೆಸರಾಯ್ತು. ಇಷ್ಟಾದ್ರೂ ಮುಗೀಲಿಲ್ಲ ನಮ್ಮ ನಾಡಿನ ಹೆಸರಿನ ಪಟ್ಟಿ. ಮತ್ತಷ್ಟು ಹೆಸರುಗಳಿವೆ.  ಘಂ ಅನ್ನೋ ಶ್ರೀಗಂಧ ಇದ್ದ ಪ್ರದೇಶದಲ್ಲಿ ಕಪ್ಪು ಮಣ್ಣು ಹೆಚ್ಚಾಗಿತ್ತು. ಕರಿ ಮಣ್ಣಿನ ನೆಲ ಇದಾಗಿತ್ತು. ಹೀಗಾಗಿ ಕರಿ+ನಾಡು ಅನ್ನೋ ಹೆಸರು ಕೂಡಾ ನಮ್ಮ ನೆಲಕ್ಕೆ ಅಂಟಿಕೊಂಡ್ತು. ಇದೇ ಮುಂದೆ ಕರ್ನಾಡು ಅಂತಾಯ್ತು ಅಂತಾರೆ ಕೆಲವರು. ಹಾಗೇನೇ ಈ ಕರ್ನಾಡು ಅನ್ನೊ ಪದಕ್ಕೆ ಇನ್ನೊಂದು ಅರ್ಥ ಗೊತ್ತಾ ನಿಮಗೆ? ಎತ್ತರದ ಪ್ರದೇಶ ಅಥವಾ ದೊಡ್ಡ ನೆಲ ಅಂತೆ! ಏನೇ ಇರ್ಲೀಪ್ಪಾ ನಾವಿವತ್ತು ಸುಲಭವಾಗಿ ಕರ್ನಾಟಕ ಅಂತ ಕರೆಯೋ ನೆಲ ಎಷ್ಟೆಲ್ಲಾ ಹೆಸರಿನಿಂದ ಕರೆಸ್ಕೊಂಡಿದೆ ನೋಡಿ. ಈ ಬಹುತೇಕ ಹೆಸರುಗಳು ನಮ್ಮ ಪುರಾಣಗಳಲ್ಲೇ ಬಂದು ಹೋಗಿಬಿಟ್ಟಿವೆ. ಈಗ್ನೋಡಿ ಎತ್ತರದ ಪ್ರದೇಶ ಹಾಗಾಗಿ ಕರ್ನಾಡು ಅಂದ್ವಲಾ, ಇದೇ ಭೂಮಿ ತಮಿಳರಿಗೆ ಘಟ್ಟದ ಮೇಲಿನ ಪ್ರದೇಶದ ಹಾಗೆ ಕಾಣಿಸ್ತಿತ್ತಂತೆ. ಹಾಗಾಗಿ ಕರ್ನಾಟರ್ ಅಂತ ಅವರು ಕರೆದ್ರು ಅಂತ ತಮಿಳು ಗ್ರಂಥಗಳಲ್ಲಿ ಉಲ್ಲೇಖ ಇದ್ಯಂತೆ. ಮಹಾಭಾರತದಲ್ಲಿ ಒಂದ್ಕಡೆ ಉನ್ನತ್ಯಕ ಅಂತ ಇದೆ. ಉನ್ನತ್ಯಕ ಅಂದ್ರೆ ಮತ್ತೆ ಎತ್ತರದ ಪ್ರದೇಶ ಅಂತ್ಲೇ ಆಗತ್ತೆ

ಕನ್ನಡ, ಕರ್ನಾಟ, ಕಮ್ಮಿತ್ತ್ ನಾಡ್, ಕರಿನಾಡು, ಕರ್ನಾಡು, ಕರ್ನಾಟರ್, ಉನ್ನತ್ಯಕ..... ಒಂದಾ ಎರಡಾ ನಮ್ಮ ಇಂದಿನ ಕರ್ನಾಟಕದ ಹೆಸರಿನ ಪುರಾಣ! ಇನ್ನೂ ಇದೆ ತಾಳ್ಮೆ ಇರ್ಲಿ.

ಕರ್ನಾಟ ಅನ್ನೋ ರಾಕ್ಷಸ ಹಿಂದೆ ಮಧ್ಯಭಾರತದಲ್ಲಿ ಸಿಕ್ಕಿದ್ನಂತೆ. ಅವನನ್ನ ವಿಂಧ್ಯದ ದಕ್ಷಿಣಕ್ಕೆ ಅಟ್ಟಿದ್ರು ಅಂತ ಶಂಭಾಜೋಶಿ ಒಂದ್ಕಡೆ ಹೇಳ್ತಾರೆ ಇದು ಸ್ಕಂದ ಪುರಾಣದಲ್ಲಿ ಬರೋಂಥ ವಿಷಯ.

ಈ ಕರ್ನಾಟ ಅನ್ನೋ ಹೆಸರು ಎಷ್ಟು ಹಳೆಯದ್ದು ಗೊತ್ತಾ? ಸುಮಾರು  ಕ್ರಿ.ಶ.450. ಅಂದ್ರೆ ಸರಿ ಸುಮಾರು 16 ಶತಮಾನಗಳ ಹಿಂದೆ ಬೀರೂರು ತಾಮ್ರಪಟ್ಟಗಳು ಅಂತ ಇದ್ವು. ಇದು ಕದಂಬ ವಿಷ್ಣುವರ್ಧನನಿಗೆ ಸೇರಿದ್ದು. ಅದರಲ್ಲಿ ಈತ "ಸಮಗ್ರ ಕರ್ನಾಟ ದೇಶಭೂವರ್ಗ ಭರ್ತಾರನಾಗಿದ್ದ" ಅನ್ನೋ ಉಲ್ಲೇಖ ಸಿಗತ್ತೆ.

7ನೇ ಶತಮಾನದ ಸಂಸ್ಕೃತ ಕವಯಿತ್ರಿ ವಿಜಯ ಅಂತ. ಈಕೆ ಚಾಳುಕ್ಯ ರಾಣಿ. ತಾನೊಂದ್ಕಡೆ ಕರ್ನಾಟ ರಾಜಪ್ರಿಯ ಅಂತ ಹೇಳ್ಕೋತಾಳೆ. ಬಾದಾಮಿ ಚಾಳುಕ್ಯರ ಸೇನೆಯನ್ನ ಕರ್ನಾಟ-ಬಲ ಅಂತ ಕರೀತಿದ್ರಂತೆ. ಸುಮಾರು 11ನೇ ಶತಮಾನದಲ್ಲಿ ಜಾವಾ ದ್ವೀಪದ ಒಬ್ಬ ದೊರೆ, ಶ್ರೀವಿಜಯ ಐರ್ಲಿಂಗ. ಈತ ಬರೆಸಿದ್ದ ಒಂದು ಶಾಸನದಲ್ಲಿ ಅವನ ರಾಜ್ಯಕ್ಕೆ ಬೇರೆ ಬೇರೆ ದೇಶದ ಜನ ವ್ಯಾಪಾರಕ್ಕೆ ಬರ್ತಿದ್ರು ಅಂತ ಹೇಳತ್ತೆ. ಅಂಥಾ ದೇಶಗಳಲ್ಲಿ ಈ ಕರ್ನಾಟ ಕೂಡಾ ಒಂದು ಅಂತ ಹೇಳ್ತಾರೆ. ಸಾಗರದಾಚೆಯ ದೇಶಗಳಲ್ಲೂ ನಮ್ಮ ಕರುನಾಡಿನ ಹೆಸರಿನ ಉಲ್ಲೇಖಗಳಿದ್ವು ಅನ್ನೋಕ್ಕೆ ಇವೆಲ್ಲವೂ ಸಾಕ್ಷಿಯಾಗುತ್ತೆ. ಅವೆಲ್ಲಾ ಏನೇ ಇರ್ಲಿ ಇವತ್ತು ನಾವೆಲ್ರೂ ಮೆಚ್ಚುಗೆಯಿಂದ ಪ್ರೀತಿಯಿಂದ ಒಪ್ಪಿಕೊಂಡಿರೋ ಹೆಸರು ನಮ್ಮ ಅಚ್ಚು ಮೆಚ್ಚಿನ ಕರ್ನಾಟಕ, ಅಲ್ವಾ?

ಕರ್ನಾಟಕ ಅಂದ ಕೂಡ್ಲೇ ಕನ್ನಡಿಗರೆಲ್ಲರ ಕಿವಿ ನೆಟ್ಟಗಾಗಿ ಹೃದಯ ಅರಳೋದು ನಿಜಾ ತಾನೆ? ಇದು ಸಹಜಾನೂ ಹೌದು. ಇಡೀ ಭಾರತದಲ್ಲಿ ಕರ್ನಾಟಕ ಒಂದು ವಿಶಿಷ್ಟವಾದ ರಾಜ್ಯ. ನಮ್ಮ ನಾಡಿನ ಕುರಿತಾದ ಅನೇಕ ಅಚ್ಚರಿಯ ವಿಷಯಗಳು ಇಲ್ಲಿವೆ ನೋಡಿ.

ಭಾರತದ  ನೈರುತ್ಯದಲ್ಲಿ ಒಂದು ಲಕ್ಷ ತೊಂಬತ್ತು ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯ ಹರಹಿನ ರಾಜ್ಯ ನಮ್ಮ ಕರ್ನಾಟಕ. ಪಶ್ಚಿಮ ಘಟ್ಟಗಳ ಏರಿಳಿತದ ಸಾಲು ಸಾಲು... ವಿಧವಿಧವಾದ ಖಗ-ಮೃಗ, ಸಸ್ಯಸಂಪತ್ತನ್ನು ಹೊಂದಿರುವ ನಿಭಿಡಾರಣ್ಯ ನಮ್ಮ ಹೆಮ್ಮೆಯ ಕರುನಾಡು. ಜೀವನದಿಗಳೂ ಅಂತ್ಲೇ ಕರೆಸಿಕೊಳ್ಳೋ ಕೃಷ್ಣೆ,  ಕಾವೇರಿ, ತುಂಗೆ, ಶರಾವತಿ, ನೇತ್ರಾವತಿ, ಹೇಮಾವತಿ! ಈ ಎಲ್ಲ ನದಿಗಳ ಹರಿವಿನಿಂದ ತಣಿದು ಕಂಗೊಳಿಸುವ ಭೂಪ್ರದೇಶ ನಮ್ಮ ನಾಡು.  ಸೂರ್ಯೋದಯ ಸೂರ್ಯಾಸ್ತಗಳ ರಮ್ಯ ನೋಟ,  ಭೋರ್ಗರೆವ ಕಡಲತಡಿ,  ನೊರೆನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳು ಅವುಗಳ ರುದ್ರರಮಣೀಯತೆ! ತೆಂಗು ಕಂಗುಗಳ ತಲೆದೂಗು; ಭತ್ತ ರಾಗಿ  ಜೋಳ ಅವರೆ  ಹುರುಳಿ ತೊಗರಿ ಕಬ್ಬುಗಳ ಲಾಸ್ಯ!  ಕರಿ ಮಣ್ಣಿನ,  ಎರೆಮಣ್ಣಿನ ಸೊಗಡು,  ನಿಸರ್ಗಶ್ರೀಯ ನೆಲೆವೀಡು.  ಇಲ್ಲಿ ಇಲ್ಲದ್ದು ಮತ್ತೆಲ್ಲಿ?

ಕರ್ನಾಟಕ ಭೌಗೋಳಿಕವಾಗಿ ರಾಜಕೀಯವಾಗಿ ಹಿಂದೆ ಹೇಗೆಲ್ಲಾ ಇತ್ತು ಅನ್ನೋ ಇತಿಹಾಸದ ಚಿತ್ರಣ ಹೇಗಿದೆ ನೋಡಿ. ನಮ್ಮ ಕರ್ನಾಟಕದ ಹರಹು ಕಾವೇರಿಯಿಂದ ಗೋದಾವರಿಯವರೆಗೆ  ಹಬ್ಬಿತ್ತು.  ಹೀಗೆ ಹಬ್ಬಿದ್ದ ನಮ್ಮ ರಾಜ್ಯ,  ಹೊಯ್ಸಳರು ಹಾಗೂ ಸವಣರ ಕಾಲದಲ್ಲಿ ನಡೆದಂಥಾ ಯುದ್ಧಗಳಿಂದ ಛಿದ್ರಛಿದ್ರವಾಗಿ  ಹರಿದು ಹಂಚಿ ಹೋಗಿತ್ತು. ಗೆದ್ದವರು ತಾವು ಗೆದ್ದ ಭೂ ಪ್ರದೇಶವನ್ನು ತಮ್ಮ ರಾಜ್ಯಗಳಿಗೆ ಸೇರಿಸಿ ಕೊಂಡಿದ್ರು. ಹೀಗೆ ಸುಮಾರು 750ವರ್ಷಗಳ ಕಾಲ ಕನ್ನಡಿಗರೇ ಹೆಚ್ಚಾಗಿದ್ದ ಭೂಪ್ರದೇಶವನ್ನು ಆಳಿದವರು ಯಾರು ಗೊತ್ತಾ? ಹೇಳಿದ್ರೆ ಹೌದಾ ಅನ್ನಿಸೋದು ಖಂಡಿತಾ! ಇಂಥಾ ಭೂಪ್ರದೇಶವನ್ನು ಅಷ್ಟೊಂದು ವರ್ಷಗಟ್ಟಲಿ ಆಳಿದ್ದು ಕನ್ನಡೇತರರು!!  ಕರ್ಣಾಟ ದೇಶ,  ಕರುನಾಡು ಎಂದು ಹೆಸರಾಗಿದ್ದ ನಮ್ಮ ನಾಡು ಇಪ್ಪತ್ತೈದು ಸಣ್ಣ ಸಣ್ಣ ಸಂಸ್ಥಾನಗಳಲ್ಲಿ ಭೌಗೋಳಿಕವಾಗಿ,  ರಾಜಕೀಯವಾಗಿ  ಹಾಗೂ ಸಾಂಸ್ಕೃತಿಕವಾಗಿ ಚೂರು ಚೂರಾಗಿತ್ತು! ಈಗ ಹಾಗಿಲ್ವಲ್ಲಾ ಅನ್ನಿಸ್ತಿದ್ಯಾ? ನಿಜ. ಈಗಿರೋದು ಏಕೀಕರಣದ ನಂತರದ ನಾಡು. ಇದರ ಕಥೆ ಕೇಳಿ ಬನ್ನಿ...




1956 ರಲ್ಲಿ ಅಂದರೆ ಭಾಷಾವಾರು ರಾಜ್ಯಗಳ ಸ್ಥಾಪನೆಯ ಕಾಲದಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚಾಗಿ ಮಾತನಾಡುವ ನಾಲ್ಕು ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನ ಮಾಡಿದ ಒಂದು ಪ್ರಕ್ರಿಯೆ ನಡೀತು. ಅದೇ ಕರ್ಣಾಟಕ ಏಕೀಕರಣ.  ಈ ಏಕೀಕರಣ ನಾವು ಊಹಿಸಿಕೊಳ್ಳೋಷ್ಟು  ಸುಲಭವಾಗಿ ನಡೀಲಿಲ್ಲ.  19ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾಜ್ಞರು,  ಸಾಹಿತಿಗಳು, ಕವಿಗಳು,  ಚಿಂತಕರು,  ಶಿಕ್ಷಕರು,  ಅಧಿಕಾರಿಗಳು,  ರಾಜಕೀಯ ಧುರೀಣರು...  ಏಕೀಕರಣ ಚಳುವಳಿ ಪ್ರಾರಂಭಿಸಿದ್ದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಪ್ರಾಂತೀಯ ಕಾಂಗ್ರೆಸ್ ಘಟಕ ಸ್ಥಾಪನೆ ಆಯ್ತು. ಆಗ ಈ ಚಳುವಳಿಗೆ ಒಂದು ರಾಜಕೀಯ ಸ್ವರೂಪ ಕೂಡ ಬಂತು. ಆದರೂ ಈ ಕರ್ಣಾಟಕ ಚಳುವಳಿಗೆ ಓಟ ಸಿಕ್ಕಿದ್ದು ಆಲೂರು ವೆಂಕಟರಾಯರು ಎಂಬಂಥ ಹೊರಾಟಗಾರ ಚಳುವಳಿಗೆ ಕಾಲಿಟ್ಟ ಮೇಲೆ. ಈ ಕನ್ನಡ ಕುಲಪುರೋಹಿತ “ಕರ್ನಾಟಕ ಗತ ವೈಭವ” ಅನ್ನುವ ಪುಸ್ತಕವನ್ನು ಬರೆದು ಕನ್ನಡದ ಕೆಚ್ಚನ್ನು,  ಕಿಚ್ಚನ್ನು ಕರ್ನಾಟಕದ ಮೂಲೆ ಮೂಲೆಗೆ ತಲುಪಿಸಿದರು.  ಅದೂ ಅಲ್ದೆ “ಕನ್ನಡಿಗರ ಕರ್ಮಕಥೆ” ಯನ್ನು ಬರೆದ ಗಳಗನಾಥ,  ಜಯದೇವಿತಾಯಿ ಲಿಗಾಡೆ, ಸಿದ್ದಪ್ಪ ಕಂಬಳಿ,  ಕೌಜಲಗಿ,  ಮಂಗಳವೇಡೇಕರ,  ಮೊಹರೆಯವರು,  ಕೆಂಗಲ್ ಹನುಮಂತಯ್ಯ,  ನಿಜಲಿಂಗಪ್ಪ, ಬೀಎಂಶ್ರೀ,  ಬೀಚಿ ಮೊದಲಾದವರು ಏಕೀಕರಣಕ್ಕಾಗಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಿದರು.

ಈ ಸಮಯದಲ್ಲೇ  ಭಾರತದ ಸ್ವಾತಂತ್ರ್ಯ ಚಳುವಳಿ ಸಂಗ್ರಾಮ ಕೂಡಾ ಆರಂಭವಾದ ಹಿನ್ನೆಲೆಯಲ್ಲಿ ಸಾಹಿತಿಗಳು ಅತ್ಯಂತ ಪ್ರಮುಖ ಪಾತ್ರವಹಿಸಿ ಜನರನ್ನು ಜನರ ಭಾವನೆಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು. ತಮ್ಮ ಕೃತಿಗಳು  ಬರಹಗಳ ಮೂಲಕ ವೈಚಾರಿಕವಾಗಿ ಹಾಗೂ ಭಾವನಾತ್ಮಕವಾಗಿ ಜನರನ್ನು ಏಕೀಕರಣದ ಪ್ರಕ್ರಿಯೆಗೆ ಪ್ರಚೋದಿಸಿದರು. ಕುತೂಹಲಕಾರೀ ವಿಷಯ ಅಂದ್ರೆ ಹುಯಿಲಗೋಳ ನಾರಾಯಣರಾಯರು ಬರೆದಂಥ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಇಡೀ ಕರ್ನಾಟಕದಲ್ಲೇ ಮನೆ ಮಾತಾಗಿದ್ದಲ್ಲದೆ, ಕನ್ನಡದ ನಾಡಗೀತೆ ಅಂತ್ಲೂ ಅದರಲ್ಲೂ ಮೊದಲ ನಾಡಗೀತೆ ಅಂತ್ಲೂ ಪ್ರಸಿದ್ಧವಾಯಿತು. ಹೀಗೆ ಬೆಳೆದಂತಹ ನಮ್ಮ ಕರ್ನಾಟಕ ಇಂದಿಗೆ ಒಟ್ಟಾರೆ 30 ಜಿಲ್ಲೆಗಳನ್ನು ಹೊಂದಿದೆ.  ನಮ್ಮ ರಾಜಧಾನಿಯಾದ ಬೆಂಗಳೂರು ಇಂದು ವಿಶ್ವವಿಖ್ಯಾತವಾಗಿದೆ. ಶೈಕ್ಷಣಿಕ,  ವಾಣಿಜ್ಯೋದ್ಯಮ,  ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ,  ಕ್ರೀಡೆ,  ಲಲಿತ ಕಲೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿರುವ ನಮ್ಮ ಕನ್ನಡ ನಾಡು ಭಾರತದ ಕಣ್ಮಣಿ ಅಂದ್ರೆ ಖಂಡಿತಾ ಅತಿಶಯೋಕ್ತಿ ಅಲ್ಲ!

ಇದು ನಾಡಿನ ಹುಟ್ಟು ಹೇಗಾಯ್ತು ಅನ್ನೋ ಕಥೆ. ಇಲ್ಲಿಗೆ ಮುಗೀತು. ಮುಂದೆ ಈಗ ಪ್ರಸ್ತುತ ಕನ್ನಡನಾಡನ್ನು ಕಾಪಿಡುವುದು, ಮುನ್ನಡೆಸಿ ಅಲ್ಲಿನ ಜನ-ಮನ ಸಂಸ್ಕೃತಿ, ಭಾಷೆ, ಭಾವನೆ ಎಲ್ಲವನ್ನೂ ಕಾಪಾಡುವುದು ನಮ್ಮ ನಿಮ್ಮ ಕೈಯ್ಯಲ್ಲಿಯೇ ಇದೆ. ನಿತ್ಯ ಜೀವನದಲ್ಲಿ ಹರುಕು ಮುರುಕಾದರೂ ಸರಿಯೇ, ಕನ್ನಡದಲ್ಲಿ ಮಾತಾಡುವ. ಕನ್ನಡ ಮಾತಾಡಿಸುವ. ಕನ್ನಡ ಮಾತಾಡಲು ಪ್ರೇರೇಪಿಸುವ. ಉಚ್ವಾಸ ನಿಚ್ವಾಸದ ಹಾಗೆ ಕನ್ನಡ ನಮ್ಮದಾದ್ರೆ ಮಾತು ವ್ಯವಹಾರ ಕಷ್ಟವೇನೂ ಅಲ್ಲ ಅಲ್ಲವೇ?  ಜೈ-ಕರ್ನಾಟಕ. ಜೈ-ಕನ್ನಡ.

Comments

  1. Very nice article for Rajyothsava month. well written and very nice narration.

    ReplyDelete
  2. ನಿಜವಾಗಿಯೂ ಹೆಮ್ಮೆ ತರುವ ನಾಡು ನಮ್ ಕರ್ನಾಟಕ. ಒಂದು ಉತ್ತಮ ಲೇಖನ ಕೊಟ್ಟಿದ್ದೀರಿ. ಧನ್ಯವಾದಗಳು

    ReplyDelete
  3. ಒಳ್ಳೆಯ ಲೇಖನ! ಲವಲವಿಕೆಯಿಂದ ಕೂಡಿದ್ದು ಉತ್ತಮ ಮಾಹಿತಿ ನೀಡಿದ್ದಾರೆ

    ReplyDelete
    Replies
    1. ಮಾಹಿತಿ ಬಹುತೇಕರಿಗೆ ತಿಳಿದದ್ದೆ. ಹೌದು ಪ್ರಸ್ತುತಿಗೆ ನನ್ನತನ... ಪ್ರತಿಕ್ರಿಯೆಗೆ ಧನ್ಯವಾದಗಳು... 😍🙏

      Delete
  4. ನೀವು ಕರ್ನಾಟಕದ ಬಗ್ಗೆ ಬರೆದಿರುವ ಈ ಲೇಖನ ಅತ್ಯುತ್ತಮವಾಗಿದೆ. ಅಭಿನಂದನೆಗಳು

    ReplyDelete
    Replies
    1. ಹೃತ್ಪೂರ್ವಕ ಧನ್ಯವಾದಗಳು.. 🙂🙏

      Delete
  5. ಕರ್ನಾಟಕದ ಬಗ್ಗೆ ನೀವು ಬರೆದಿರುವ ಪ್ರಬುದ್ಧ ಲೇಖನ ಬಹಳ ಅತ್ಯುತ್ತಮವಾಗಿದೆ ಅಭಿನಂದನೆಗಳು ಎಸ್ಆರ್ ನಾಗರಾಜ್, ವಿದ್ಯಾರಣ್ಯಪುರ

    ReplyDelete
    Replies
    1. ನಾಗರಾಜ್ ಸರ್, ಹೃತ್ಪೂರ್ವಕ ಧನ್ಯವಾದಗಳು.. 🙂🙏

      Delete
  6. ಅತ್ಯುತ್ತಮ ಲೇಖನ. ಪ್ರಸ್ತುತ ಪಡಿಸಿದ ರೀತಿ ನಮ್ಮೊಂದಿಗೆ ಕುಳಿತು ಮಾತನಾಡಿದಂತಿದೆ.

    ReplyDelete
    Replies
    1. ನಿಮಗೆ ಇಷ್ಟ ಆಯಿತಲ್ಲ, ಅಷ್ಟೆ ಖುಷಿ. ಹೃತ್ಪೂರ್ವಕ ಧನ್ಯವಾದಗಳು.. 🙂🙏

      Delete

Post a Comment