ಸ್ತ್ರೀ ಸಮಾನತೆಯೂ ಕೇಶ-ಕ್ಲೇಶ ಪುರಾಣವೂ

 ಸ್ತ್ರೀ ಸಮಾನತೆಯೂ ಕೇಶ-ಕ್ಲೇಶ ಪುರಾಣವೂ

ಹಾಸ್ಯ ಲೇಖನ - ಅಣುಕು ರಾಮನಾಥ್  

ಆಗಸ್ಟ್ ತಿಂಗಳ ಕೊನೆಯ ವಾರ. ‘ನಿಲ್ಲು ನೀ ನಿಲ್ಲು ನೀ ನೀಲವೇಣಿ...’ ಸುಮಧುರ ಗಾನವನ್ನು ಸುರುಸುರುಳಿಯಾಗಿ ಹೊರಸೂಸುತ್ತಿತ್ತು ಎಫ್‌ಎಂ ರೇಡಿಯೋ. ಶುದ್ಧವಾದ ಕನ್ನಡ ಎಫ್‌ಎಂನಲ್ಲಿ ಮೂಡುವುದೆಂದರೆ ಅದು ಹಾಡುಗಳಲ್ಲಿ ಮಾತ್ರ. ಮಿಕ್ಕೆಲ್ಲವೂ ಅಷ್ಟು ಕೆಚಪ್ ಇಷು ಸಾಸ್‌ಗಳಿಂದ ಅಲಂಕೃತಗೊಂಡು ತೀವ್ರ ಗಾಯಗೊಂಡ ರೋಗಿಯನ್ನು ಹೋಲುವಂತಹ ಪಾಸ್ಟಾದಂತಹ ಪಾಸ್ಟು ಪ್ರೆಸೆಂಟುಗಳ ಕಲಸುಮೇಲೋಗರದ ಭಾಷಾಶವ. 



ಹಾಡು ಕೇಳುತ್ತಾ ಕಿಟಕಿಯಿಂದ ಹೊರಗೆ ದೃಷ್ಟಿ ಹಾಯಿಸಿದೆ. ಋಷಿಯ ಜಟೆ, ಹೆಣ್ಣಿನ ಜಡೆಗಳನ್ನು ಕೂಡಿ ಒಂದು ಆವರೇಜ್ ತೆಗೆದುಕೊಂಡರೆ ಮೂಡಬಹುದಾದಂತಹ ಕೇಶಶೈಲಿಯನ್ನು ಹೊಂದಿದ ಡೂಡ್ ಒಬ್ಬ ಸಾಗುತ್ತಿದ್ದ. ಮೈಮೇಲೆ ವಿಶ್ವಾಮಿತ್ರನ ಕಾಲಕ್ಕೆ ಗಿಡ್ಡವೂ ಮಹಾತ್ಮಾಗಾಂಧಿಯ ಕಾಲಕ್ಕೆ ಉದ್ದವೂ ಎನಿಸುವಂತಹ ‘ಬುಕ್‌ಪೋಸ್ಟ್ ಪಂಚೆ’ಯನ್ನು ಹೋಲುವ ಬರ್ಮುಡಾ ಚಡ್ಡಿ, ಕಾಫಿಕರೆಗಳಿಂದ ರಾರಾಜಿಸುತ್ತಿದ್ದ ಟಿಶರ್ಟ್. ಭುಜದಿಂದ ಕೆಳಗಿಳಿದು ಕಟಿಯನ್ನು ಮುಟ್ಟಲೋ ಬೇಡವೋ ಎನ್ನುವ ಮಟ್ಟದಲ್ಲಿದ್ದ ಕೇಶವನ್ನು ಹೊಂದಿದ ಹುಡುಗನಿಗೆ ‘ನೀಲವೇಣಿ’ ಎನ್ನಬಹುದೋ, ಪಾಣಿನಿ ‘ಅವ್ಯಾಕರಣಿ’ ಎಂದು ಬೈಯುವನೋ ಎಂದುಕೊಳ್ಳುತ್ತಲೇ ‘ವೈ ದಿಸ್ ಹೇರ್ ಸ್ಟೈಲ್’ ಎಂದು ಕುಳಿತಲ್ಲಿಂದಲೇ ಬ್ರೇಕಿಂಗ್ ನ್ಯೂಸ್ ಅರಚುವವನ ಸ್ಟೈಲಿನಲ್ಲಿ ಅರಚಿದೆ.

‘ಆಗಸ್ಟ್ ೨೬’ ಎನ್ನುತ್ತಾ ಮೊಬೈಲಿನ ಮೇಲೆ ವಿಂಡ್‌ಷೀಲ್ಡ್ ವೈಪರ್‌ನಂತೆ ಬೆರಳುಗಳನ್ನು ಆಡಿಸುತ್ತಾ ಮುಂದೆ ಸಾಗಿತು ನೀಲವೇಣಿಯ ಮೇಲ್ ವರ್ಷನ್ನು. ಕ್ಯಾಲೆಂಡರಿನ ಮೊರೆ ಹೊಕ್ಕಾಗ ಅಮೆರಿಕದಲ್ಲಿ ಆ ದಿನವನ್ನು ಮಹಿಳಾ ಸಮಾನತೆಯ ದಿನವಾಗಿ ಆಚರಿಸುತ್ತಾರೆಂದು ತಿಳಿಯಿತು. ಲಾಸ್ ಏಂಜಲೀಸ್, ಲಾಸ್ ವೇಗಸ್, ಲಾಸ್ ಆಲ್ಟೋಸ್, ಲಾಸ್ ಗೇಟೋಸ್‌ಗಳ ಹೆಸರು ಕೇಳಿದರೆ ಲಾಲಾರಸವನ್ನು ಸುರಿಸುವ ಅಮೆರಿಕ ಬಂಟರಾದ ಇಂಡಿಯನ್ ಪ್ರಾಡಕ್ಟುಗಳು ಅಮೆರಿಕನ್ ಡೇಸ್‌ಗಳನ್ನು ಇಂಡಿಯನ್ ನೈಟ್ ಗಳಲ್ಲಿ ಆಚರಿಸುವುದು ಈಗ ಸಮ್ಮತ ಪದ್ಧತಿಯಷ್ಟೇ ಅಲ್ಲ, ಅಪೇಕ್ಷಿತ ಫ್ಯಾಶನ್ನು. ಆಗಸ್ಟಿನ ದಿನಕ್ಕೆಂದು ಅಷ್ಟುದ್ದ ಕೇಶ ಬೆಳೆಸಿಕೊಳ್ಳಬೇಕಾದರೆ ಆತ ಫೆಬ್ರವರಿಯಿಂದಲೇ ಕೇಶವರ್ಧನೆಯಲ್ಲಿ ತೊಡಗಿಕೊಂಡಿರಬೇಕು. ಮಿಕ್ಕೆಲ್ಲ ವಿಷಯಗಳಲ್ಲಿ ಹೇಗಾದರೂ ಇರಲಿ, ದೀರ್ಘಕೇಶದ ವಿಷಯದಲ್ಲಂತೂ ಅವನು ಸ್ತ್ರೀಸಮಾನತೆಗೆ ಒತ್ತು ಕೊಟ್ಟಿದ್ದು ಸುಸ್ಪಷ್ಟವಾಗಿತ್ತು. ಹುಡುಗಿಯೂ ಕಿಲಾಡಿಯೇ ಇರಬೇಕು – ಜುಟ್ಟು ಸಿಕ್ಕರೆ ಜನ್ಮ ಜಾಲಾಡುವಷ್ಟು ಸಮರ್ಥಳಾದ ಹೆಣ್ಣಿಗೆ ದೀರ್ಘಕೇಶವೇ ಸಿಕ್ಕಿಬಿಟ್ಟರೆ ಅವನ ಕೇಶಪಾಶದಲ್ಲಿ ಅವನನ್ನೇ ಬಂಧಿಸುವುದು ಸುಲಭವಾದೀತಲ್ಲವೆ!

ಕೇಶವೆಂದರೆ ನಮಗೆ ಕೂಡಲೆ ನೆನಪಾಗುವುದು ಕೇಶವನೇ. ಮೇಲೊಂದು ಗೊಂಡೆ, ಸುತ್ತಲೂ ಕಪ್ಪು ಜಲಪಾತದಂತೆ ಧುಮ್ಮಿಕ್ಕಿದ ವಿಪುಲ ಕೇಶದೆಸಳುಗಳು, ಮೇಲೊಂದು ನವಿಲುಗರಿ ಸೆಕ್ಕಿಸಿದ ಬಾಲಕೇಶವನ ಕೇಶವೇ ಕೇಶ ಎಂದಿರೆ? ಕೊಂಚ ತಾಳಿ. ಹಿಮಾಲಯದ ಚಳಿಯಲ್ಲಿಯೂ ಗಂಗೆಯನ್ನು ಶಿರದಲ್ಲಿ ಧರಿಸಿ, ಗಂಗೆಯಂತಹ ನದಿಗೆ ಕೇಶದಿಂದಲೇ ಅಣೆಕಟ್ಟು ನಿರ್ಮಿಸಿದ ಉಮಾಪತಿಯ ಕೇಶರಾಶಿಯೂ ಕೇಶರೇಷನ್ನಿನವರೊಗೆ ಹೈ ಕ್ಲಾಸ್ ಹೊಟ್ಟೆಕಿಚ್ಚಿಗೆ ಅರ್ಹವಾದ ಸೊಂಪಿನ ಪೆಂಪೇ. ದೇವತೆಗಳ ಮಧ್ಯದಲ್ಲಿ ಒಬ್ಬ ರಕ್ಕಸನಿಗೂ ಕೇಶದ ವಿಷಯದಲ್ಲಿ ಮಣೆ ದೊರಕಿಬಿಟ್ಟಿದೆ – ರಕ್ಕಸನಾದರೂ ಧರ್ಮದತ್ತ ವಾಲಿದ್ದ ಘಟೋತ್ಕಚನಿಗೆ ಆ ಹೆಸರು ಬರಲು ಘಟ(ಮೋಡ)ದಂತೆ ಇದ್ದ ಅವನ ಉತ್ಕಚ(ಕೂದಲು)ವೇ ಕಾರಣವಂತೆ. ಟಿವಿಯಲ್ಲಿ ಪ್ರಸಾರವಾದ ಧಾರಾವಾಹಿಯಲ್ಲಿ ಮಾತ್ರ ಘಟ ಎಂದರೆ ಮಡಿಕೆ ಎಂದು ಅರ್ಥ ಮಾಡಿಕೊಂಡರೇನೋ... ಘಟೋತ್ಕಚನನ್ನು ಮಡಕೆಯ ಹೊರಭಾಗದಷ್ಟೇ ನುಣ್ಣನೆ ಮಿಂಚು ಬೋಳುತಲೆಯವನನ್ನಾಗಿ ತೋರಿಸಿಬಿಟ್ಟಿದ್ದರು! ಒಂದು ಪದಕ್ಕೆ ಹತ್ತಾರು ಅರ್ಥಗಳಿರುವುದು ಸಂಸ್ಕೃತದ ತಪ್ಪೇ ಹೊರತು ಸೀರಿಯಲ್ ಡೈರೆಕ್ಟರನ ತಪ್ಪು ಅಲ್ಲವೆಂದು ವಾಹಿನಿಗಳು ಡೊಳ್ಳು ಬಾರಿಸಿಯಾವು. 



ಕೇಶಕ್ಕೂ ಮನಃಸ್ಥಿತಿಗೂ ಸಂಬಂಧವಿದೆ ಎಂದು ಕೇಶ-ಕ್ಲೇಶ ಮೆಡಿಕಲ್ ಜರ್ನಲ್ ಹೇಳುತ್ತದಂತೆ. ಕಾಲಕಾಲಕ್ಕೆ ಆ ಸಂಬಂಧ ಅರ್ಥವ್ಯತ್ಯಾಸವನ್ನೂ ಹೊಂದುವುದಂತೆ. ರಾಮಾಯಣದ ಕೈಕೇಯಿ ಕೇಶಪಾಶಕ್ಕೂ ಬಾಚಣಿಗೆಗೂ ಡೈವೋರ್ಸ್ ಕೊಟ್ಟು ನೆಲದಮೇಲೆ ಹರಡುವಂತೆ ಕೂದಲನ್ನು ಹರವಿ ಮಲಗಿಕೊಂಡರೆ ಅದು ಕೋಪದ ಸಂಕೇತ. ಆಧುನಿಕ ಯುಗದಲ್ಲಿ ಕೈಕೇಯಿಯ ಪೋಸ್‌ನಲ್ಲಿ ಕೂದಲು ಹರಡಿಕೊಂಡರೆ ಅದು ಶೃಂಗಾರದ, ಆಧುನಿಕತೆಯ, ಸ್ತ್ರೀಸಮಾನತೆಯ ಹಾಗೂ ಹೊರಡುವ ಸಮಯದಲ್ಲಿ ಕ್ಲಿಪ್ ಸಿಗದಿರುವುದರ ಸಂಕೇತ! ನಾರುಮಡಿಯುಟ್ಟ ಋಷಿಗಳ ಜಟೆಗಳು ತಪೋನಿರತರಾದುದರಿಂದ ಇಂತಹ ಕಾರ್ಯಗಳಿಗೆ ಬಿಡುವಿಲ್ಲದುದರ, ಘನತಪಸ್ಸಿನ, ದೀರ್ಘತಪಸ್ಸಿನ ಸಂಕೇತ. ಈಗ ಅದೇ ರೀತಿಯ ಗಂಟು ಬ್ಯೂಟಿ ಪಾರ್ಲರಿನ ಹೇರ್ ಸ್ಟೈಲಿಸ್ಟಿನ ಕರಕೌಶಲದ ದ್ಯೋತಕ.

ಇವೆರಡರ ಮಧ್ಯದ ಪರಿಸ್ಥಿತಿಗಳೂ ಇವೆ. ದ್ರೌಪದಿ ನಿಂತಿದ್ದಳು. ಜಯದ್ರಥ ಬಂದ, ನೋಡಿದ, ಕಿಡ್‌ನ್ಯಾಪ್ ಮಾಡಿದ. ಭೀಮ ‘ತಲೆ ತರುತ್ತೇನೆ’ ಎಂದು ಧರ್ಮರಾಯನಿಗೆ ಹೇಳಿ ಬಾಗಿಲ ಬಳಿ ತಲುಪಿ ಚಪ್ಪಲಿ ಮೆಟ್ಟುವಷ್ಟರಲ್ಲಿ ‘ಕ್ಲೇಶಕ್ಕಾಗಿ ಶಿರವಿರಲಿ, ಕೇಶವನ್ನು ತಾ’ ಎಂದ. ಭೀಮ ಜಯದ್ರಥನನ್ನು ಹಿಡಿದು ಅರ್ಧ ತಲೆ ಬೋಳಿಸಿ ಒಂದು ಕೈಯಲ್ಲಿ ಮೇಲ್ ಬ್ರ್ಯಾಂಡ್ ಚೌರಿಯನ್ನೂ, ಇನ್ನೊಂದು ಕೈಯಲ್ಲಿ ನತಮಸ್ತಕನಾದ ಜಯದ್ರಥನ ಕುತ್ತಿಗೆಯನ್ನೂ ಹಿಡಿದು ಒಳಬಂದ. ಅರೆಬೋಳು ತಲೆಯವ ಆಗ ಶಿಕ್ಷಿತನೆಂದೂ, ಅವಮಾನಿತನೆಂದೂ ಪರಿಗಣಿಸಲಾಗುತ್ತಿದ್ದ. ಆಗ ಸೀಝ್ ಮಾಡಿ ಸೆಮಿಬಾಲ್ಡ್ ಮಾಡುತ್ತಿದ್ದರು. ಈಗ ಸಿಝರ್ ಬಳಸಿ ಸೆಮಿಬಾಲ್ಡ್ ಮಾಡುತ್ತಾರೆ. ಅದರಲ್ಲೂ ವಿವಿಧ ಪರಿಗಳು – ಮೇಲೆ ಸೊಂಪಾದ ಕೇಶವನ್ನು ಹೊಂದಿ ಅಕ್ಕಪಕ್ಕದಲ್ಲೆಲ್ಲ ಕೊಚ್ಚಿದಂತಹ ‘ಎಳನೀರು ಕಟ್’, ಹಣೆಯಿಂದ ಹೆಕ್ಕತ್ತಿನವರೆಗೆ ಮಧ್ಯದಲ್ಲಿ ಮಾತ್ರ ಕೂದಲನ್ನಿರಿಸಿಕೊಂಡು ಮಿಕ್ಕೆಲ್ಲವನ್ನೂ ಲೇಔಟ್ ಮಾಡಲು ತೋಪನ್ನು ಪಡೆದ ಡೆವಲಪರ್ ಬೋಳಿಸಿದಂತೆ ಬೋಳಿಸಿರುವಂತಹ ‘ರೋಡ್ ಡಿವೈಡರ್ ಕಟ್’, ಮಧ್ಯದಲ್ಲಿ ಮಾತ್ರ ಬೋಳಾಗಿಸಿ ಅತ್ತಿತ್ತ ಕೂದಲನ್ನು ಬಿಟ್ಟಿರುವಂತಹ ‘ಹೈವೇ-ಪಾರ್ಕಿಂಗ್ ಲಾಟ್ ಕಟ್’, ಗುಡ್ಡಗಾಡುಗಳಲ್ಲಿ ನೀರು ಹರಿದಂತೆ ಮೂಡಿದ ಪಥಗಳನ್ನು ಹೋಲುವಂತಹ ‘ನ್ಯಾಚುರಲ್ ರಿವುಲೆಟ್ ಕಟ್’... ಕೇಶವಿಷಯೇ ಲೋಕೋ ಭಿನ್ನರುಚಿಃ. ಹಾ! ಭಿನ್ನ ಕೇಶಗಳದೂ ಒಂದು ಸಾಮ್ರಾಜ್ಯವಿದೆ. ಒಂದೊಂದು ಕಡೆ ಒಂದೊಂದು ಅಳತೆಗೆ ಕೂದಲನ್ನು ಕತ್ತರಿಸಿದ ‘ಸ್ಟೆಪ್ ಕಟ್’ ಭಿನ್ನ ರುಚಿಯೇ. ಅಂತೆಯೇ ಹೆಂಗಳೆಯರನ್ನು ಕಾಡುವ ‘ಸ್ಪ್ಲಿಟ್ ಹೇರ್ಸ್’ಗಳನ್ನು ಕಟ್ ಮಾಡುವ ಕಾಯಕದಲ್ಲಿ ಒಳ್ಳೆಯ ದುಡಿಮೆ ಇರುವ ಕ್ಷೌರಿಕಳೂ ‘ಕೇಶ ಭಿನ್ನವೇ ನಮಗೆ ರುಚಿ’ ಎಂದಳು. ಅಂದು ಹಿರಿಯರನ್ನು ಕಳೆದುಕೊಂಡವರು ಮಾತ್ರ ತಾಮ್ರದ ಚೊಂಬನ್ನು ಹೋಲುವಷ್ಟರ ಮಟ್ಟಕ್ಕೆ ತಲೆ ಬೋಳಿಸಿಕೊಳ್ಳುತ್ತಿದ್ದರು. ಈಗ ಹಿರಿಯರೆದುರಿಗೇ ಮಿರಮಿರ ಮೆರಗುವ ‘ಹೇರ್‌ಲೆಸ್ ಹೇರ್‌ಸ್ಟೈಲ್’ ಅನ್ನು ‘ಕೂಲ್ ಕಟ್’ ಎನ್ನುತ್ತಾರಂತೆ.

ಕೊರೊನಾ ಕಾಲದಲ್ಲಂತೂ ‘ಎಂದೂ ಮರೆಯದ ಕ್ಷೌರಗಳು’ ಶೀರ್ಷಿಕೆಯಲ್ಲಿ ಕನಿಷ್ಠ ಹಂಡ್ರೆಡ್ ಎಪಿಸೋಡ್ಸ್ ತೋರಿಸಬಹುದಾದ ವಿಶಿಷ್ಟ ಹೇರ್‌ಸ್ಟೈಲ್‌ಗಳು ಉದ್ಭವಿಸಿದವು. ‘ಗಂಡಸ್ರೇ ಏನ್ಕಟ್ ಮಾಡೋದು? ನಾವೂ ಮಾಡ್ತೀವಿ’ ಎಂದ ಕರ್ತರೀಪ್ರಯೋಗಕ್ಕೆ ಸಿದ್ಧರಾದವರ ‘ಸ್ತ್ರೀ ಸಮಾನತೆ’ಗೆ ಶಿರ ಬಾಗಿದಾಗ ಇಲಿ ಕಚ್ಚಿದಂತೆ ಅಲ್ಲಲ್ಲಿ ಬೋಳು, ಅಲ್ಲಲ್ಲಿ ಕೇಶಗಳ ಹೋಳು, ಮಾಡಿಸಿಕೊಂಡವನಿಗಂತೂ ಸಂಪೂರ್ಣ ಗೋಳು ಆದ ರ್ಯಾಭಟ್ ಕಟ್’, ತೊಟ್ಟಿಯಲ್ಲಿನ ಪ್ಲಾಸ್ಟಿಕ್ ಚೀಲವನ್ನು ಕುತೂಹಲಿ ಶ್ವಾನಗಳು ಎಳೆದು ಬೀದಿಯಲ್ಲಿ ಹರಡಿದಾಗ ಕಾಣುವಷ್ಟೇ ಅಸ್ತವ್ಯಸ್ತವಾಗಿ ಕಾಣಿಸುವ ‘ಬಿಟ್ಬಿಡೇ... ಕಟಿಂಗ್ ಬೇಡ್ವೇ’ ಎಂದರೂ ‘ಛಲದೊಳ್ ದುರ್ಯೋಧನನ್’ ಬ್ರ್ಯಾಂಡಿನ ಹೋಮ್‌ಮೇಕರ್‌ನ ಕೈಚಳಕದಲ್ಲಿ ಮೂಡಿದ ‘ಡಾಗೆಡ್ ಕಟ್’, ಇಲಿಗಳೆರಡು ರೊಟ್ಟಿಯನ್ನು ‘ಈಕ್ವಲ್ ಹಾಫ್’ ಮಾಡಿಕೊಳ್ಳಲು ಆಗದಿದ್ದಾಗ ಬೆಕ್ಕೊಂದು ತಕ್ಕಡಿಗೆ ಹಾಕುತ್ತಾ ‘ಇದು ಜಾಸ್ತಿಯಾಯಿತು, ಕೊಂಚ ಕಟ್ ಮಾಡುತ್ತೇನೆ’ ಎಂದು ಅತ್ತಲಿಂದ ಆ ಸರತಿ, ಇತ್ತಲಿಂದ ಈ ಸರತಿ ತಿನ್ನುತ್ತಾ ಇಡೀ ರೊಟ್ಟಿಯನ್ನು ತಾನೇ ತಿಂದುಬಿಟ್ಟ ಕಥೆಯನ್ನು ನೆನಪಿಸಿವು ‘ಇಷ್ಟೇ ಕಟ್ ಮಾಡ್ತೀನ್ರೀ’ ಎನ್ನುತ್ತಾ ಸಾಗಿ ಚಿತ್ರದುರ್ಗದ ಮೇಲ್ಮಟ್ಟದಲ್ಲಿನ ಬೋಳುಬಂಡೆಯನ್ನು ಹೋಲುವಂತಹ ಸ್ಥಿತಿಗ ಬುರುಡೆಯನ್ನು ತಂದಿರಿಸಿದಂತಹ ‘ಬೋಲ್ಡರ್ ಕಟ್’... ಆಹಾ! ಕೇಶವಿನ್ಯಾಸದೊಳದೆನಿತು ಪರಿಯೋ.

‘ಸ್ತ್ರೀ ಸಮಾನತೆ’ಗೆ ಗಂಡುಗಳ ಕೊಡುಗೆ ಹೇರ್‌ಕಟಿಂಗಿಗೆ ಒಳಗಾಗುವುದಕ್ಕೆ ಸೀಮಿತವಾಗದೆ ಹೇರ್ ಡೈಯಿಂಗ್‌ಗೂ ಮುಂದುವರೆಯಿತು. ಫಲಿತಾಂಶವಂತೂ ಅಮೋಘ. ಮಾಡ್ರನ್ ಪೇಂಟಿಂಗನ್ನು ಹೋಲುವ ತಲೆಯೊಂದು, ಚೆಲ್ಲಿದ ಪೇಂಟುಗಳನ್ನೆಲ್ಲ ಒರೆಸಿದ ಬಟ್ಟೆಯಂತೆ ಕಾಣುವ ಶಿರವೊಂದು, ಕಲ್ಯಾಣಮಂಟಪದ ಹಿಂದಿನ ತೊಟ್ಟಿಯಲ್ಲಿ ಬಾಳೆಯೆಲೆಗಳ ಸಂದುಗಳಿಂದ ಹೊರಸೂಸುವ ಸರ್ವಕ್ಷ್ಯರಂಗುಗಳ ಚಿತ್ರಣವನ್ನು ಹೋಲುವ ಮಸ್ತಕವೊಂದು.... ಹುಲಿಯೊಂದ ಅರ್ಧ ತಿಂದು ಬಿಟ್ಟ ಬೇಟೆಯ ಅಂತರಂಗಗಳನ್ನು ನರಿಯೊಂದು ಕೆದಕಿದಾಗ ಸೂಸಿದ ರಂಗುಗಳ ಮಿಶ್ರಣವನ್ನು ಹೋಲುವ ರುಂಡವೊಂದು... ಮೈಕಲ್ ಏಂಜೆಲೋನನಿಂದ ವೆಂಕಟಪ್ಪನವರೆಗೆ ಯಾರಿಗೂ ಸಿದ್ಧಿಸದ ವರ್ಣಕಲೆ ಇಂದಿನವರ ಅಂಗುಲಿಗಳ ಅಂಚಿನಲ್ಲೇ!

ಇರಲಿರಲಿ. ‘ಲೈಟ್ ರೀಡಿಂಗ್’ಗೆಂದು ಕುಳಿತವರಿಗೆ ತಲೆಯ ಬಗ್ಗೆ, ಕೂದಲಿನ ಬಗ್ಗೆ ತಲೆ ತಿನ್ನುವುದು ಸೂಕ್ತವಲ್ಲ. ‘ಕೇಶದಿಂದಲೆ ರೂಪ ಕೇಶದಿಂದಲೆ ತಾಪ | ಪ್ಯಾಶನ್ನಿಗೆಟುಕಿರಲಿ ಕೇಶವಿನ್ಯಾಸ | ಫ್ಯಾಶನ್ನಿಗೀಡಾಗಿ ಪೋರ್ಷನ್ನೆ ಬಾಲ್ಡಾಗೆ | ಕ್ಲೇಶ ಮನಸಿಗೆ ಕಾಣು ಮಂಕುದಿಣ್ಣೆ |’ ಎನ್ನುತ್ತಾ ಸ್ತ್ರೀ-ಪುರುಷ ಕೇಶಸಮಾನತೆಗೆ ಮಂಗಳ ಹಾಡುತ್ತೇನೆ. ಸರ್ವೇ ಕೇಶಾನಿ ಪಶ್ಯಂತು | ಸರ್ವೇ ಕ್ಲೇಶಾನಿ ನಶ್ಯಂತು |


Comments

  1. unbelievably humorous article. your thought about equality with women fantastic with so many comparisons

    ReplyDelete
  2. "ಆಗ ಸೀಝ್ ಮಾಡಿ ಸೆಮಿಬಾಲ್ಡ್ ಮಾಡುತ್ತಿದ್ದರು. ಈಗ ಸಿಝರ್ ಬಳಸಿ ಸೆಮಿಬಾಲ್ಡ್ ಮಾಡುತ್ತಾರೆ". ಹ್ಹ ಹ್ಹ ಏನ್ ಪಂಚ್. ಸಾರ್ ಸ್ತ್ರೀ ಸಮಾನತೆ ಅಂತ ಕತ್ತರಿ ಕೈಗೆತ್ತಿಕೊಂಡ ಸನ್ನಿವೇಶ ನಕ್ಕು ನಕ್ಕು ಸಾಕಾಯ್ತು ಲೇಖನದ ಕಡೆಗೆ ಶ್ಲೋಕ ರಚನೆ ಹಾಸ್ಯಮಯವಾಗಿದೆ.

    ReplyDelete

Post a Comment