ಅನುವಾದವೆಂಬ ಅನಂತ ಆನಂದ

 ಅನುವಾದವೆಂಬ ಅನಂತ ಆನಂದ

 ಹಾಸ್ಯ ಲೇಖನ - ಅಣುಕು ರಾಮನಾಥ್  




ಒಂದು ಚಿಕ್ಕ ಗಾಯ ಕೊಡಿ’ ಎಂದ ಸೀನು.

ಪ್ಲೇಟ್‌ಲೆಟ್‌ನಲ್ಲಿ ಕೊಡಲೋ ಬುಕ್‌ಲೆಟ್‌ನಲ್ಲಿ ಕೊಡಲೋ?’

ಬುಕ್‌ಲೆಟ್ಟೇ ಸಾಕು.

ಇಬ್ಬರ ಸಂಭಾಷಣೆಯೂ ಅರ್ಥವಾಗದೆ ಕಣ್ಣುಕಣ್ಣು ಬಿಡುತ್ತಿದ್ದೆ. ಅನುವಾದದ ಸ್ವಾರಸ್ಯ ಅಂದರೆ ಇದೇ ಸಾರ್. ಗಾಯ ಎಂದರೆ ಕಟ್. ಚಿಕ್ಕ ಗಾಯ ಎಂದರೆ ಕಟ್‌ಲೆಟ್. ಕಟ್‌ಲೆಟ್ ಕೊಡು ಎಂದು ಆರ್ಡರ್ ಮಾಡಿದೆ. ಅವನು ಚಿಕ್ಕ ತಟ್ಟೆಯಲ್ಲಿ ಕೊಡಲೋ ಅಥವಾ ಹಾಳೆಯಲ್ಲಿ (ಬುಕ್‌ನ ಚಿಕ್ಕ ಭಾಗವೇ ಹಾಳೆಯಲ್ಲವೆ!) ಕೊಡಲೋ ಎಂದು ಕೇಳಿದ. ಹಾಳೆಯಲ್ಲೇ ಕೊಡು ಎಂದೆ’ ವಿವರಿಸಿದ ಸೀನು. ಸರಿಯೇ. ಪಿಗ್‌ಲೆಟ್ ಎಂದರೆ ಮರಿಹಂದಿಈಗ್ಲೆಟ್ ಎಂದರೆ ಮರಿಗಿಡುಗ ಅಂದಂತೆ ಕಟ್‌ಲೆಟ್‌ಗೆ ಹೀಗೂತಟ್ಟೆಗೆ ಹಾಗೂ ಹೇಳಿದರೆ ತಪ್ಪೇನಿಲ್ಲ. ನನ್ನ ಬಾಲ್ಯದಲ್ಲಿ ಜನಪ್ರಿಯವಾಗಿದ್ದ ಚಿಕ್ಲೆಟ್ ಚ್ಯೂಯಿಂಗ್ ಗಮ್ ಈ ನಿಟ್ಟಿನಲ್ಲಿ ನೋಡಿದಾಗ ಬೇರೆಯೇ ಅರ್ಥವನ್ನು ಪಡೆಯಬೇಕಾದೀತು – ಚಿಕ್ ಎಂದರೆ ಹುಡುಗಿಲೆಟ್ ಎಂದರೆ ಪುಟ್ಟ ಹುಡುಗಿ. ಬಹಳ ತಲೆ ತಿನ್ನುವ ಬಾಲೆಯನ್ನು ಚಿಕ್ಲೆಟ್ ಚ್ಯೂಯಿಂಗ್ ಗಮ್ ಎಂದು ಕರೆಯಬಹುದು. ಹ್ಯಾಮ್ಲೆಟ್ ಎಂದರೆ ಕುಗ್ರಾಮ. ಹ್ಯಾಮ್ ಒಂದು ವಿಧವಾದ ಮಾಂಸಹ್ಯಾಮ್ಲೆಟ್ ಎಂದರೆ ಚಿಕ್ಕ ಮಾಂಸದ ತುಂಡು ಎಂದರ್ಥವೆಅಂತೆಯೇ ಕಾಫ್‌ಲೆಟ್’ ಎಂದರೆ ಪುಟಾಣಿ ಕೆಮ್ಮು ಎಂದು ಅರ್ಥವೆತಮಾಷೆಯೆಂದರೆ ಈ ಅರ್ಥದ ಹೆಸರನ್ನು ಹೊಂದಿರುವ ಟ್ಯಾಬ್‌ಲೆಟ್ (ಓಹ್! ಕೀಪ್ ಟ್ಯಾಬ್ಸ್ ಎಂದರೆ ಚಲನವಲನವನ್ನು ಗಮನಿಸು’ ಎಂದರ್ಥ. ಟ್ಯಾಬ್‌ಲೆಟ್ ಎಂದರೆ ಕಿರು ಅವಲೋಕನ ಎಂದು ಅರ್ಥವಾಗುತ್ತದೆಯೆ?) ಕೆಮ್ಮು ಗುಣವಾಗಲು ಬಳಸುವ ಔಷಧ. ಅನುವಾದಪ್ರಪಂಚದ ಸ್ವಾರಸ್ಯಗಳು ಅಗಣಿತ.



ನಾನು ಕಿಟ್ಟಿಯೊಡನೆ ಕಾಲ ಕಳೆದೆ’ ಎಂಬ ಸರಳವಾದ ವಾಕ್ಯವನ್ನೇ ತೆಗೆದುಕೊಳ್ಳೋಣ. ಗುಡ್ ಓಲ್ಡ್ ದಿನಗಳಲ್ಲಿ ಕಿಟ್ಟಿ ಎಂದರೆ ಕೃಷ್ಣಮೂರ್ತಿಯೋ ಕೃಷ್ಣಪ್ರಸಾದನೋ ಅಥವಾ ಇನ್ನಾವುದೋ ಕೃಷ್ಣ ಪ್ಲಸ್‌ಪ್ಲಸ್ಸೋ ಆಗಿರುತ್ತಿದ್ದ. ಇದು ಕಂಗ್ಲಿಷ್ ಯುಗ. ನಾನು ಎನ್ನುವುದಕ್ಕೆ ಐ ಎನ್ನುವುದು ಸುಲಭವಾಗಿ ದೊರೆಯುವುದಾದರೂ ಕಿಟ್ಟಿ’ ಪದಕ್ಕೆ ತಿಜೋರಿ ಎಂಬ ಅರ್ಥವನ್ನು ತೆಗೆದುಕೊಳ್ಳಬೇಕೋ (he added one more thousand to his kitty) ಚಾಕೊಲೇಟಿನ ಡಬ್ಬಿ ಎಂದುಕೊಳ್ಳಬೇಕೋ (there were 3 chocolates in his kitty) ಅಥವಾ ಬೆಕ್ಕಿನ ಮರಿಯೊಡನೆ ಇದ್ದದ್ದು ಎಂದುಕೊಳ್ಳಬೇಕೋ ಅಥವಾ ಕೃಷ್ಣಮೂರ್ತಿ ಇತ್ಯಾದಿಗಳ ಹೆಸರಿನವರೊಡನೆ ಎಂದುಕೊಳ್ಳಬೇಕೋ ಅರಿಯಲಾಗುವುದಿಲ್ಲ. ಮೂರನೆಯ ಪದವಾದ ಕಾಲ’ ಸಹ period, time, duration ಮುಂತಾದ ಪದಗಳನ್ನು ಮುಂದೊಡ್ಡುವುದಲ್ಲದೆ ಯಮಸಾವು ಎಂಬ ಅರ್ಥವನ್ನೂ ಹೊಂದಿದೆ. ಕಡೆಯ ಪದ ಕಳೆದೆ’ ಸಹ spent, lost, deducted ಎಂಬ ಅರ್ಥಗಳನ್ನು ಮುಂದೊಡ್ಡುತ್ತದೆ. ಗೂಗಲಮ್ಮನಿಗೆ ಇದೇ ತೊಡಕಾಗಿ I lost period with kitten’ ಎಂದೋ‘I lost kitty and died’ ಎಂದೋ ಅರ್ಥವಿಲ್ಲದ ಅನುವಾದವನ್ನು ಮಾಡಿಬಿಡುತ್ತದೆ.

ಬಹಳ ಹಳೆಯ ಕಾಲದ ಅನುವಾದವೊಂದರ ಸನ್ನಿವೇಶವೊಂದು ಹೀಗಿದೆ : ಶಾಲೆಯ ಸಮಾರಂಭವೊಂದಕ್ಕೆ ಮಿಸ್ಟರ್ ಸ್ವ್ಯಾನ್ಸನ್ಮಿಸ್ಟರ್ ಕ್ಯಾಂಪ್‌ಬೆಲ್ಜಾರ್ಜ್ ದ ಫಿಫ್ತ್ಮಿಸೆಸ್ ಕುಕ್ ಆಗಮಿಸಿದ್ದರು. ಶಾಲೆಯ ಕನ್ನಡದ ಶಿಕ್ಷಕನಿಗೆ ಅಪಾರ ಕನ್ನಡಪ್ರೀತಿ. ಆತನೇ ಸ್ವಾಗತಭಾಷಣಕಾರ. ಇಂದಿನ ಸಭೆಗೆ ಆಗಮಿಸಿರುವ ಹಂಸಪುತ್ರ ಅಯ್ಯನವರೆಗುಡಾರದ ಗಂಟೆಯ ಅಯ್ಯನವರೆಐದನೆಯ ಜಾರಜರೆಅಡುಗೆಯವರ ಶ್ರೀಮತಿಯವರೆ’ ಎಂದು ಆರಂಭಿಸಿದರು. ಮಿಸ್ಟರ್’ ಪದಕ್ಕೆ ಅಯ್ಯ’ ಎಂಬ ಗೌರವಸೂಚಕ, ‘ಮಿಸೆಸ್ಗೆ ಹೆಂಡತಿಯೆಂಬ ಅನ್ವರ್ಥ ಅನುವಾದಮಿಕ್ಕೆಲ್ಲ ನಾಮಪದಗಳ ಕನ್ನಡ ರೂಪವನ್ನು ಕಂಡು ಬೆಕ್ಕಸಬೆರಗಾದ ಪ್ರಾಂಶುಪಾಲರು ನಾಮಪದಗಳನ್ನು ತರ್ಜುಮೆ ಮಾಡಬೇಡಿ’ ಎಂದು ಕುಳಿತಲ್ಲಿಂದಲೇ ಚೀಟಿ ಕಳುಹಿಸಿದರು. ಸಮ್ಮತಿಸಿದ ಶಿಕ್ಷಕರು ಸ್ವಾನ್ಸನ್ ಅಯ್ಯನವರು ಬಾರ್ ಇಷ್ಟದವರಾಗಿದ್ದಾರೆಮಿಸೆಸ್ ಕುಕ್ ಈಗಷ್ಟೇ ಮೆಜಾರಿಟಿಗೆ ಬಂದ ಕುಕ್‌ರ ಮನೆಯೊಡತಿಯಾಗಿದ್ದಾರೆ’ ಎಂದು ಮುಂದುವರಿಸಿದರು. ಪ್ರಾಂಶುಪಾಲರೇ ಎದ್ದುನಿಂತು ಸ್ವಾನ್ಸನ್ನರು ಬ್ಯಾರಿಸ್ಟರ್ ಪದವಿ ಪೂರೈಸಿದ್ದಾರೆಬಾರ್ ಇಷ್ಟ ಪಡುವವರಲ್ಲಹಾಗಿದ್ದರೂ ಅದು ವೈಯಕ್ತಿಕ ವಿಷಯವೇ ವಿನಹ ಪದವಿಯಲ್ಲ. ಮಿಸೆಸ್ ಕುಕ್‌ರ ಪತಿ ಈಗ ಸೈನ್ಯದಲ್ಲಿ ಮೇಜರ್ ಹುದ್ದೆಗೆ ಏರಿದ್ದಾರೆಈಗ ಮೆಜಾರಿಟಿಗೆ ಬಂದಿಲ್ಲ. ಮಿಕ್ಕ ಸ್ವಾಗತಭಾಷಣವನ್ನು ನಾನೇ ಮುಂದುವರೆಸುತ್ತೇನೆ’ ಎನ್ನುತ್ತಾ ಗೊಂದಲಕ್ಕೆ ತೆರೆಹಾಕಿದರು.

ಅನುವಾದಕ್ಕೆ ಸಂದರ್ಭ ಬಹಳ ಮುಖ್ಯ. ಸರಳ ಸುಂದರ ಸಮಾರಂಭದಲ್ಲಿ...’ ಎಂಬ ತುಂಡುವಾಕ್ಯವನ್ನು ಅನುವಾದಿಸುವುದು ಬಹಳ ಕಷ್ಟ. In a simple, lovely function ಎಂದು ಅನುವಾದಿಸಿದಿರೆಮತ್ತೊಮ್ಮೆ ಯೋಚಿಸಿ - ಸರಳ ಎನ್ನುವುದು ಹುಡುಗಿಯ ಹೆಸರಾಗಿದ್ದರೆ Sarala, in a lovely function  ಎಂದಾಗುತ್ತದೆ. ಸರಳ ಮತ್ತು ಸುಂದರ ಎರಡೂ ವ್ಯಕ್ತಿಗಳ ಹೆಸರಾಗಿದ್ದರೆ Sarala and Sundara in the function ಎಂದಾಗುತ್ತದೆ. ಸರಳು ಎಂದರೆ ಬಾಣ ಎನ್ನುವ ಅರ್ಥದಲ್ಲಿ ತೆಗೆದುಕೊಂಡರೆ In the fine function of archery ಎಂದು ಬದಲಾಗಿಬಿಡುತ್ತದೆ. ಸಮಾರಂಭವನ್ನು ಸಮ ಆರಂಭ – ಈಕ್ವಲ್ ಬಿಗಿನಿಂಗ್ – ಗಂಡು ಹೆಣ್ಣು ಇಬ್ಬರೂ ಸಮಾನರೆಂಬ ಭಾವದಲ್ಲಿ ಆರಂಭಿಸಿದ್ದು – ಎಂದೂ ಒಳ ಅರ್ಥ ಕೊಡುವ ಈಕ್ವಲ್ ಸ್ಟೇಟಸ್’ ಮಂದಿ ಇದ್ದಾರು. ಶಿವರಾಮ ಕಾರಂತರ ಕೃತಿಗಳ ಕುರಿತು ನಡೆದ ಸಮಾರಂಭದ ಕಡೆಯ ಭಾಗದ ನಿರ್ವಹಣೆಗೆ ಯಾರು ಬಂದಿದ್ದಾರೆಂದು ತಿಳಿಯಲು ಕಾರಂತರು ನನ್ನ ಕೃತಿಗಳ ಸಮಾ ಆರೋಪ ಮಾಡಲು ಯಾರು ಬಂದಿದ್ದಾರೆ?’ ಎಂದು ಕೇಳಿದ್ದರಂತೆ. ಶ್ಲೇಷೆ ಇಲ್ಲದೆಯೇ ಶೇಷನ ಹೆಡೆಯಂತೆ ಬಿಚ್ಚಿಕೊಳ್ಳುವಸುತ್ತಿಕೊಳ್ಳುವ ತಾಕತ್ತಿರುವ ಭಾಷೆಗೆ ಶ್ಲೇಷೆಯೂ ಸೇರಿಬಿಟ್ಟರೆ ಶ್ರೀಹರ್ಷದೇವ ವಿರಚಿತ ಸಂಸ್ಕೃತ ನಾಟಕವಾದ ನಾಗಾನಂದದ ಕಡೆಯ ದೃಶ್ಯದಲ್ಲಿ ಕಾಣುವಂತೆ ಎಲ್ಲೆಲ್ಲಿಯೂ ಹೊರಳುನಡೆಗಳೇ ಕಂಡುಬAದಾವು. ಅವರು ಬಹಳ ಸರಳ ಜೀವಿ’ ಎನ್ನುವುದಂತೂ ವಿಶೇಷ ವಾಕ್ಯವೇ ಸೈ – He is a simple being ಎನ್ನುವುದು ನೇರ ಅರ್ಥವಾದರೆ, ‘ಬಹಳ ಸರಳು’ ಎಂದರೆ ಹೆಚ್ಚು ಕಂಬಿಗಳು’ ಎಂದು ಅರ್ಥವಾಗಿ, ‘ಬಹಳ ಸರಳ ಜೀವಿ’ ಎಂದರೆ ಕಂಬಿಗಳ ಹಿಂದಿನ ಜೀವನ ನಡೆಸುತ್ತಿರುವಅರ್ಥಾತ್ ಜೈಲಿನಲ್ಲಿರುವ ವ್ಯಕ್ತಿ – ಜೈಲ್‌ಬರ್ಡ್ ಎಂದೂ ಅರ್ಥೈಸಬಹುದು. ಅನುವಾದದ ಅವತಾರಗಳು ಅನಂತ.

ತೆಲುಗಿನಿಂದ ಕನ್ನಡಕ್ಕೆ ಅನುವಾದ ಮಾಡುವುದರಲ್ಲಿ ಸಿದ್ಧಹಸ್ತರಾದ ಗೆಳೆಯ ಸಂಡೂರು ವೆಂಕಟೇಶರಿಗೆ ಆಲೀನ ಚಂಪಿನವಾಳ್ಳು ಕೊಂದರು ಉನ್ನಾರು’ ಎಂಬ ವಾಕ್ಯ ಸಾಕಷ್ಟು ಗೊಂದಲ ಉಂಟುಮಾಡಿತ್ತು. ಯಾರು ಈ ಆಲಿಮಹಮದ್ ಆಲಿಯೇಆ ಕುಸ್ತಿಪಟು ಡಿಮೆಂಷಿಯಾವೋ ಎಂಥದ್ದೋ ಆಗಿ ತಾನಾಗಿಯೇ ಕೊನೆಯುಸಿರೆಳೆದ. ಹೈದರಾಲಿಯೇಕೊಂದರು ಉನ್ನಾರು ಎಂದರೆ ಕೆಲವರು ಇದ್ದಾರೆ ಎಂದಾಯಿತು. ಗ್ರೂಪ್ ಮರ್ಡರ್‌ಗೆ ಒಳಗಾದ ಈ ಆಲಿ ಯಾರುಅಲ್‌ಖೈದಾ ತರಹದ ಯಾವುದಾದರೂ ಗುಂಪು ಆಲಿ ಎಂಬ ಹೆಸರಿನವನನ್ನು ಕೊಲ್ಲಲು ಸಾಧ್ಯವೆಒಂದೇ ಬಣ್ಣದ ರೆಕ್ಕೆಯ ಪಕ್ಷಿಗಳು ಪರಸ್ಪರ ಕುಕ್ಕಿಕೊಳ್ಳುತ್ತವೆಯೆಊಹೂಂ. ಏನೇನೂ ಬಗೆಹರಿಯದಾಯಿತು. ಆ ಸಮಯದಲ್ಲಿ ಸಂಜೆ ವಾಕ್ ಬಂದ ಹಿರಿಯರೊಬ್ಬರು ಏಮಪ್ಪಾಆಲು-ಮೊಗಡು ಬಾಗುನ್ನಾರಾ?’ ಎಂದಾಗ ಇವರ ದಿಮಾಗ್ ಕೀ ಬತ್ತಿ ಛಕ್ಕನೆ ಬೆಳಗಿತು. ಆಲು ಎಂದರೆ ಹೆಂಡತಿ. ಆಲೀನ ಚಂಪಿನವಾಳ್ಳು ಎಂದರೆ ಹೆಂಡತಿಯನ್ನು ಕೊಂದವರು ಎಂದರ್ಥ!

ಅಚ್ಚ ತೆಲುಗಿಗೆ ಗುಡ್‌ಬೈ ಹೇಳಿ ಪ್ರಾಂತೀಯ ತೆಲುಗಿನ ಕಡೆಗೆ ಬಂದರೆ ಹೋಗಿಬರುತ್ತೇನೆ’ ಎನ್ನಲು ಪೈಯೂಡ್ಚೊಸ್ತಾನು’ ಎಂಬ ಪದಪುಂಜದ ಬಳಕೆ ಇದೆ. ಹೋಗಿಬರುತ್ತೇನೆ’ ಎನ್ನಲು ಪೈಯ್ಯೊಸ್ತಾನು’ ಎಂದರೆ ಸಾಕು. ಪೈ ಊಡ್ಚಿ ಒಸ್ತಾನು’ ಎಂದರೆ ಹೋಗಿ ಗುಡಿಸಿ ಬರುತ್ತೇನೆ’ ಎಂದಾಗುತ್ತದೆ. ಎಲ್ಲಿ ಹೋಗಿ ಏನನ್ನು ಗುಡಿಸಿ ಗುಂಡಾಂತರ ಮಾಡಿ ಬರುತ್ತಾರೋ ಎಂಬುದು ನನಗೆ ಪರ್ಮನೆಂಟ್ ವಿಸ್ಮಯವೇ ಆಗಿ ಉಳಿದಿದೆ.

ಹಿಂದಿಯಂತೂ ಸರೇಸರೆ. ಕಲ್ ಎಂದರೆ ನಾಳೆಯೂ ಹೌದುನೆನ್ನೆಯೂ ಹೌದು. ಆಜಾ’ ಎಂದರೆ ಬಾ ಎಂದು ಅರ್ಥವಂತೆ. ಇರುವ ಎರಡನ್ನೇ ಬೇರಾಗಿಸಿ ಆ ಎಂದರೆ ಬಾ ಎಂದೂ ಜಾ ಎಂದರೆ ಹೋಗು ಎಂದೂ ಅರ್ಥ. ಆಜಾ’ ಎಂದರೆ ಬಾಹೋಗು’ ಎನ್ನಬೇಕೋಬಾ ಎನ್ನಬೇಕೋ? ‘ಆಜ್‌ಕಲ್ ತೇರೆ ಮೇರೆ ಪ್ಯಾರ್ ಕಿ ಚರ್ಚೇ ಹರ್ ಜಬಾನ್ ಪರ್’ ಎಂದಾಗ ಇಂದು ನೆನ್ನೆ’ ಎಂದಾಗಲಿ, ‘ಇಂದು ನಾಳೆ’ ಎಂದಾಗಲಿ ಅರ್ಥವಲ್ಲದೆ ಈ ದಿನಗಳಲ್ಲಿ’ ಎಂದು ಅರ್ಥವಂತೆ.

ಅನುವಾದಕ್ಕೆ ಅನುವಾಗುವಾಗ ಈ ಎಲ್ಲವನ್ನೂ ಗಮನಿಸುವ ಸರ್ವ ಅನುವಾದಕರಿಗೆ ಪುಟ್ಟ ಪ್ರಮಾಣದ (ಗಮನಿಸಿ - ಪ್ರಮಾಣ ಎಂದರೆ ಪ್ರತಿಜ್ಞೆಶಪಥ ಎಂಬ ಅರ್ಥವಲ್ಲ) ಪ್ರಣಾಮಗಳು.

Comments

  1. ಜ್ಞಾನದ ಜೊತೆಗೆ ನಗುವನ್ನೂ ತರಿಸಿತು.

    ReplyDelete
  2. ಅನುವಾದದ ಜತೆಗೆ predictive test ನ ಹಾವಳಿಯೂ ಸೇರಿ ಬಿಟ್ಟರೆ ದೇವರೇ ಗತಿ! "ನಾನು ಕಿಟ್ಟಿಯೊಡನೆ ಕಾಲ ಕಳೆದೆ" ಎಂಬುದನ್ನು ಭಾಷಾಂತರ ಮಾಡುವಾಗ "ಒಡನೆ" ಯನ್ನು suddenly ಎಂದು translate ಮಾಡಿ "I lost pussy cat suddenly and died" ಎಂಬ ಉತ್ತರವೂ ಸಿಗಬಹುದು@


    ReplyDelete
  3. Nice article. so it looks like you are also expert in Telugu language !!! I have read English,Sanskrit examples in your articles. Fantastic & versatile

    ReplyDelete

Post a Comment