ನದಿದೇವತೆಯರು

 ನದಿದೇವತೆಯರು: ನಮ್ಮ ಮಲೆನಾಡು ಈ ದೇವತೆಯರಿಗೇ ತವರು!!!

ಲೇಖನ  - ಡಾ. ಮಂಜುಳಾ ಹುಲ್ಲಹಳ್ಳಿ,

ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು..



   ಜೀವನದಿಗಳೆಂದರೆ ತಾಯೊಡಲಿನಿಂದ ಚಿಮ್ಮಿ ಹರಿಯುವ ಅಮೃತದ ಹೊನಲು, ಜೀವನದಿಗಳು ಹರಿಯುವ ತಾಣವೆಲ್ಲ ಸಮೃದ್ಧಿಯ ಕಡಲು. ಈ ಕಾರಣದಿಂದಲೇ ನಮ್ಮೆಲ್ಲ ಪ್ರಾಚೀನ ನಾಗರಿಕತೆಗಳು ರೂಪುಗೊಂಡಿರುವುದು ನದಿ ಬಯಲಿನ ತೊಟ್ಟಿಲುಗಳಲ್ಲಿ. ಶಾಂತ ಸ್ವರೂಪಿಯಾಗಿದ್ದಾಗ ಮಂಗಳಗೌರಿಯಂತೆ ನಳನಳಿಸಿ ಸರ್ವ ವರಗಳನ್ನೂ ದಯಪಾಲಿಸುವ ನದಿದೇವತೆ ರುದ್ರಭಯಂಕರಿಯಾದಾಗ ಭದ್ರಕಾಳಿಯ ಅಪರಾವತಾರವೇ ಆಗಿಬಿಡುತ್ತಾಳೆ. ತಾನೇ ಕಟ್ಟಿಕೊಟ್ಟ ಬದುಕನ್ನು ಕ್ಷಣಾರ್ಧದಲ್ಲಿ ಇಲ್ಲವಾಗಿಸಿಬಿಡುತ್ತಾಳೆ. ಹೀಗಾಗಿಯೇ ನಮ್ಮ ಪೂರ್ವಜರಿಗೆ ನದಿ ದೇವತೆಯೆಂದರೆ ಭಯಮಿಶ್ರಿತ ಗೌರವ, ಅಂಜಿಕೆ ಬೆರೆತ ಆದರ, ಬದುಕನ್ನು ಕೊಡು, ಕೀಳಬೇಡ ಎಂಬ ನಿರಂತರ ಬೇಡಿಕೆ.

   ಗಂಗಮ್ಮನ ಪೂಜೆ ನಮ್ಮ ಗರತಿಯರಿಗೆ ಪರಂಪರೆಯಿಂದ ಬಂದ ಮೌಲ್ಯ. ನಮ್ಮ ಗರತಿಗೆ ಎದ್ದೊಂದು ಗಳಿಗೆ ನೆನೆಯ ಬೇಕೆನಿಸುವುದು ಕಲ್ಲು ಕಾವೇರಿ ಕಪಿಲೆಯರನ್ನು. ಬೇಸಿಗೆಯ ದಿನಗಳಲ್ಲಿ ಭೀಮೆಯ ಒಡಲ ತಂಪಿಗೆ ಹಂಬಲಿಸುವ ಅವಳಿಗೆ ಹರಿಯುವ ನೀರೆಲ್ಲ ಗಂಗೆಯ ಸ್ವರೂಪೆಯರೇ. ಹರಿಯುವ ನೀರಷ್ಟೇ ಅಲ್ಲ ಕೆರೆ, ತೊರೆ, ಹಳ್ಳ, ಕೊಳ್ಳ, ಕಲ್ಯಾಣಿ, ಬಾವಿ, ಕಡೆಗೆ, ಒಂದು ಪುಟ್ಟ ಕಳಸ, ಎಲ್ಲೆಲ್ಲಿ ಇರುವ ನೀರೂ ಗಂಗಾಮಾತೆಯರೆ! ಈ ನೀರನ್ನು ಪೂಜಿಸಿ ಈ ಜಲದಲ್ಲಿ ಗಂಗೆ ಯಮುನೆ ಗೋದಾವರಿ ಸರಸ್ವತಿ ನರ್ಮದಾ ಸಿಂಧೂ ನದಿಗಳ ಪವಿತ್ರ ಜಲವನ್ನು ಆವಾಹನೆ ಮಾಡಿ ಪವಿತ್ರ ಪರಿಶುದ್ಧ ಪರಮಾನಂದಕರ ಮಾಡಿಕೊಳ್ಳುವ ಭಾವ ನಮ್ಮ ಹಿರಿಯರದ್ದು.

    ನದಿ ದೇವತೆಯನ್ನು ಕುರಿತಂತೆ ಋಗ್ವೇದದಲ್ಲಿ ಶ್ಲೋಕವೊಂದು 'ವಿಪುಲವಾದ ಜಲವೇ, ನೀನು ಐಶ್ವರ್ಯದ ಅಧಿದೇವತೆ. ಉತ್ತಮಸಂಪತ್ತು, ಧಾರ್ಮಿಕಆಚರಣೆಗಳು ಮತ್ತು ಅಮರತ್ವವನ್ನು ನೀನು ಬೆಂಬಲಿಸುವೆ. ನೀನು ಸಂಪತ್ತು ಮತ್ತು ಸಂತತಿಯ ರಕ್ಷಕಿ' ಎಂದು ನದಿಯ ಹಿರಿಮೆಯನ್ನು ಸಾರುತ್ತದೆ.

   ಸಾಧಾರಣವಾಗಿ ನದಿಗಳ ಉಗಮ ಸ್ಥಾನಗಳೆಂದರೆ ಪರ್ವತಗಳೇ. ಇದನ್ನು ಮನಗಂಡೇ 'ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ' ಎಂದರು ಹಿರಿಯರು. ಸಮುದ್ರವನ್ನೇ ಉಡುಗೆಯಾಗಿ ತೊಟ್ಟ ನಮ್ಮ ಭೂದೇವಿಯ ಪರ್ವತ ಸ್ತನಗಳಿಂದ ಉಕ್ಕಿ ಹರಿಯುವ ಅಮೃತಧಾರೆಗಳೇ ನಮ್ಮ ನದಿಗಳ ಮೂಲಸೆಲೆಗಳು. ತಾಯೊಲುಮೆಯನ್ನು ಜಗದೆಲ್ಲ ಜೀವಕ್ಕೆ ಹಂಚಿಕೊಡಲು ಚಿಮ್ಮಿ ಬರುವ ವಾತ್ಸಲ್ಯಮಯಿ ಮಾತೆಯೇ ನಮ್ಮ ನದಿದೇವತೆ. ಹೀಗಾಗಿ ಭಾರತೀಯ ನದಿಗಳಿಗೆಲ್ಲ ಮಮತಾಪೂರ್ಣ ಹೆಸರುಗಳೇ! ಬೆಟ್ಟಗಳಲ್ಲಿ ಹುಟ್ಟಿ ಸಾಗರವನ್ನು ಸೇರುವವರೆಗಿನ ನದಿಯ ಹರಿವು ಒಂದು ದಿವ್ಯಗಾನವೇ, ರಮ್ಯಲೋಕವೇ!

    ನೈರುತ್ಯ ಮತ್ತು ಈಶಾನ್ಯ ಮಾರುತಗಳಿಂದ ಒದಗುವ ಮಳೆ ನಮ್ಮ ಕರ್ನಾಟಕದ ಜಲಸಂಪತ್ತಿಗೆ ಮೂಲ ಆಧಾರ. ನಮ್ಮ ರಾಜ್ಯದ ಕೃಷ್ಣಾ, ತುಂಗಭದ್ರಾ, ಕಾವೇರಿ ಕಣಿವೆಗಳ ಮೂಲಕ ವಿಶಾಲ ಪ್ರದೇಶದಲ್ಲಿ ಹರಿದು ನಮ್ಮ ಜಲ ಸಂಪತ್ತಿಗೆ ಶ್ರೀಮಂತಿಕೆಯ ಮುದ್ರೆಯೊತ್ತಿವೆ. ಈ ನೀರೋಟದ ಆಧಾರದಿಂದ ನಮ್ಮ ರಾಜ್ಯದ ಒಟ್ಟು ಪ್ರದೇಶವನ್ನು ಐದು ಭಾಗಗಳಾಗಿ ವಿಂಗಡನೆ ಮಾಡಲಾಗಿದೆ.

1. ಪಶ್ಚಿಮ ಘಟ್ಟಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಅರಬ್ಬಿ ಸಮುದ್ರಕ್ಕೆ ಹರಿಯುವ ನದಿಗಳ ಜಲಾನಯನ.

2. ಪಶ್ಚಿಮ ಘಟ್ಟದ ಶ್ರೇಣಿಯಿಂದ ಪೂರ್ವದ ಬಯಲುನಾಡಿನಲ್ಲಿ ಉತ್ತರಕ್ಕೆ ಕೃಷ್ಣಾ ನದಿ ಮತ್ತು ಅದರ ಉಪನದಿಗಳ ಜಲಾನಯನ.

3. ಪಶ್ಚಿಮ ಘಟ್ಟ ಶ್ರೇಣಿಯ ಪೂರ್ವ ಬಯಲುನಾಡಿನ ದಕ್ಷಿಣಕ್ಕೆ ಕಾವೇರಿ ಮತ್ತು ಅದರ ಉಪನದಿಗಳ ಜಲಾನಯನ.

4. ಕರ್ನಾಟಕದ ಉತ್ತರದ ತುದಿಯಲ್ಲಿ ಗೋದಾವರಿಯ ಉಪನದಿ ಮಂಜರಾ ಜಲಾನಯನ.

5. ಕರ್ನಾಟಕದ ನೈರುತ್ಯಕ್ಕೆ ನಂದಿದುರ್ಗದಿಂದ ಉಗಮಿಸುವ ಪಾಲಾರ್ ಮತ್ತು ಪೆನ್ನಾರ್ ನದಿ ಜಲಾನಯನ.

    ಈ ಐದು ವಿಭಾಗಗಳನ್ನು ಸೂಕ್ಷ್ಮವಾಗಿ ನೋಡುತ್ತಾ ಆಲೋಚಿಸಿದರೆ ಮೈತುಂಬ ಒಂದು ರಸಾನುಭವದ ಪುಳಕ. ಇದರಲ್ಲಿ ಮೊದಲ ಮೂರು ವಿಭಾಗದಲ್ಲೂ ನಮ್ಮ ಮಲೆನಾಡಿನಲ್ಲಿ  ಹುಟ್ಟಿ ಜಗದೊಳಿತಿನ ದೀಕ್ಷೆ ಹಿಡಿದು ಹೊರಟ ನದಿಗಳ ಪಾಲೇ ಅಧಿಕ!

    ಚಿಕ್ಕಮಗಳೂರು ಜಿಲ್ಲೆಯ ನದಿಗಳನ್ನು ಮೊದಲು ಗಮನಿಸುವುದಾದರೆ, ನಮ್ಮ ತೇಜಸ್ವಿ ಹೇಳುತ್ತಾರೆ, 'ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟುವ ನದಿಗಳ ಸಂಖ್ಯಾ ವಿವರವನ್ನು ನಾನು ನಿಮಗೆ ನೀಡಬಹುದು. ಆಗ ಅದು ನಿಮಗೊಂದು ನಿರ್ಜೀವ ಸಂಗತಿಯಾಗುತ್ತದೆ. ಅದನ್ನೊಂದು ಸಜೀವ ವಾಸ್ತವವನ್ನಾಗಿ ನೋಡಬೇಕಾದರೆ ಮೂಡಿಗೆರೆಯ ಮೇಲೊಂದು ಕಾಲಮೇಘ ಹೆಪ್ಪುಗಟ್ಟಿ ಮಳೆ ಸುರಿಸುತ್ತ ಇರಬೇಕಾದರೆ ಬನ್ನಿ. ಈ ಒಂದು ಮೋಡದಿಂದ ಉದುರುವ ಮೂರು ಹನಿಗಳು ಸಮುದ್ರ ಸೇರುವುದು ಎಲ್ಲಿ? ಆಲೋಚಿಸಿ! ಬಸ್ಟಾಂಡಿನ ಬಲಕ್ಕೆ ಬೀಳುವ ಹನಿ ಕುಂದೂರಿನ ಹಳ್ಳ ಸೇರಿ ಮಾಗುಂಡಿಯ ಬಳಿ ಭದ್ರಾ ನದಿಯನ್ನು ಸೇರಿ ಭದ್ರಾವತಿಯ ಬಳಿ ತುಂಗಾ ನದಿಗೆ ಸೇರಿ ಮಹಾರಾಷ್ಟ್ರದಿಂದ ಬರುವ ಕೃಷ್ಣಾನದಿಗೆ ಸೇರಿ ವಿಜಯವಾಡದ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮೂಡಿಗೆರೆಯ ಬಸ್ಟಾಂಡಿನ ಎಡಕ್ಕೆ ಬಿದ್ದ ಹನಿ ಚಿಕ್ಕ ಹಳ್ಳವಾಗಿ ಹರಿಯುತ್ತಾ ಅಣಚೂರಿನ ಬಳಿ ಹೇಮಾವತಿ ನದಿಯನ್ನು ಸೇರಿ ಅಲ್ಲಿಂದ ಮುಂದೆ ಕಾವೇರಿ ನದಿಯನ್ನು ಕೂಡಿಕೊಂಡು ಕಬಿನಿ ನದಿಯನ್ನು ಒಳಗೂಡಿ ತಮಿಳುನಾಡಿನ ಚಿದಂಬರಂ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಅದೇ ಬಸ್ಟ್ಯಾಂಡ್ ನಿಂದ ಹಿಂದಕ್ಕೆ ಬಿದ್ದ ಹನಿ ಚಾರ್ಮಾಡಿ ಕಣಿವೆ ಇಳಿದು ನೇತ್ರಾವತಿ ನದಿಯನ್ನು ಸೇರಿ ಮಂಗಳೂರಿನ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಮಂಗಳೂರು ಎಲ್ಲಿ? ವಿಜಯವಾಡವೆಲ್ಲಿ? ಚಿದಂಬರಂ ಎಲ್ಲಿ? ಇದರಿಂದ ನಿಮಗೆ ಅರಿವಾಗಬಹುದು ಎಲ್ಲೋ ಒಂದೆಡೆ ಕೆಲವೇ ಗಜಗಳ ಅಂತರದಲ್ಲಿ ಮೋಡದಿಂದ ಉದುರುವ ಹನಿಗಳು ತಮ್ಮ ತೆಕ್ಕೆಯೊಳಗೆ ಏನೇನನ್ನು ತಬ್ಬುತ್ತವೆ ಎಂದು!'

   ಚಿಕ್ಕಮಗಳೂರು ಜಿಲ್ಲೆಯ ವರಾಹ ಪರ್ವತ, ನರಸಿಂಹ ಪರ್ವತ, ಜಾವಳಿ ಪರ್ವತ, ಚಂದ್ರದ್ರೋಣ ಪರ್ವತಗಳು ಜಿಲ್ಲೆಯ ಮುಖ್ಯ ನದಿಗಳ ಉಗಮ ತಾಣವಾಗಿವೆ. ವರಾಹ ಪರ್ವತ ಶೃಂಗೇರಿ ಮೂಡಿಗೆರೆ ತಾಲೂಕುಗಳ ಗಡಿಯಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಯ ಮಹೋನ್ನತ ಪರ್ವತಗಳಲ್ಲಿ ಒಂದು. ದಟ್ಟ ಹಸುರಿನ, ಮುಗಿಲು ಮುಟ್ಟುವ ಎತ್ತರದ ಸೌಂದರ್ಯದ ತವನಿಧಿಯಲ್ಲಿ ಗಂಗಾಮೂಲ ಎಂಬೊಂದು ಶಿಖರ. ಶಿಖರವನ್ನು ಏರಿ ನಾಲ್ಕಾರು ಕಿಲೋ ಮೀಟರ್ ಸಾಗಿದರೆ ದೊಡ್ಡ ಬಂಡೆಗಲ್ಲು, ಅಲ್ಲೇ ಒಳ ಹೋಗಬಹುದಾದ ಗುಹೆ. ಗುಹೆಯ ಒಳಗೆ ಕಷ್ಟಪಟ್ಟು ತೆವಳಿಕೊಂಡು ಹೋದರೆ ಅಲ್ಲಿ ವರಾಹಮೂರ್ತಿಯ ವಿಗ್ರಹರೂಪ. ಸ್ಥಳೀಯರಿಂದ ಭಕ್ತಿಭಾವ ಪೂಜಾರ್ಚನೆ ಇದೆ. ಆದರೆ ದಟ್ಟಕಾಡಿನ ಬೆಟ್ಟಾರಣ್ಯ ಸುತ್ತಿ ಇಲ್ಲಿಯವರೆಗೂ ಹೋಗಲು ಅರಣ್ಯ ಇಲಾಖೆಯ ಪೂರ್ವಾನುಮತಿ ಬೇಕೇ ಬೇಕು. ಇಲ್ಲಿ ಈ ಗುಹೆಯ ಕಡೆಯಿಂದ ಹರಿದು ಬಂದು ಕೆಲವೇ ಮೀಟರ್ ಗಳ ಅಂತರದಲ್ಲಿ ತೊಟ್ಟಿಕ್ಕುತ್ತಾ... ಹನಿ ಹನಿ ಸೇರಿ ಪುಟ್ಟ ಪುಟ್ಟದಾಗಿ ಮೂರು ದಿಕ್ಕುಗಳಿಗೆ ಹರಿಯುವ ಮೂರು ಝರಿಗಳು ಕರ್ನಾಟಕ ಭೌಗೋಳಿಕದ ವಿನ್ಯಾಸದಲ್ಲಿ ಅತಿ ಮಹತ್ವ ಪಡೆದಿರುವ ದೊಡ್ಡ ನದಿಗಳ ಮೂಲ ಎಂದು ಹೇಳಿದರೆ ಆಶ್ಚರ್ಯದಿಂದ ಕಣ್ಣುಗಳು ಅರಳಿ ಎವೆಯಾಡಿಸುವುದನ್ನೂ ಮರೆಯುತ್ತವೆ. ವರಾಹರೂಪದಲ್ಲಿ ಭೂದೇವಿಯನ್ನು ಹಿರಣ್ಯಾಕ್ಷನಿಂದ ಕಾಪಾಡಿದ ವಿಷ್ಣು ಬಲದಾಡೆಯ ಎತ್ತರದಿಂದ ಹರಿದ ಬೆವರಧಾರೆ ತುಂಗಾ ನದಿಯಾಗಿ, ಎಡದಾಡೆಯಿಂದ ಬಿದ್ದ ಭೂದೇವಿಯ ತೃಪ್ತಿಯ ಉಸಿರಿನ ಸೆಲೆ ಭದ್ರಾ ನದಿಯಾಗಿ ಮತ್ತು ವಿಷ್ಣುವಿನ  ಕಣ್ಣುಗಳಿಂದ ತೊಟ್ಟಿಕ್ಕಿದ ಆನಂದಭಾಷ್ಪ ನೇತ್ರಾ ನದಿಯಾಗಿ ಹರಿದುವೆಂಬ ಜನಪ್ರಿಯ ನಂಬಿಕೆ ಇದೆ.

   ಈ ಮೂರು ಝರಿಗಳಲ್ಲಿ ತುಂಗಾ ಹೆಸರಿನ ಝರಿ ಈಶಾನ್ಯ ಮುಖವಾಗಿ ಹರಿಯುತ್ತಾ ಶೃಂಗೇರಿ, ಬಗ್ಗುಂಜಿ, ಹರಿಹರಪುರಗಳನ್ನು ದಾಟಿ ಶಿವಮೊಗ್ಗ ಜಿಲ್ಲೆ ಪ್ರವೇಶಿಸುತ್ತದೆ. 'ಗಂಗಾ ಸ್ನಾನ ತುಂಗಾ ಪಾನ' ಎಂಬ ನಾಣ್ಣುಡಿಯೇ ಸಾಕು, ಈ ನದಿಯ ಸವಿರುಚಿ ಬಣ್ಣಿಸಲು. ಆಸ್ವಾದ, ರುಚಿ ಅಷ್ಟೇ ಅಲ್ಲ, ಔಷಧೀಯ ಗುಣಗಳೂ ತುಂಗಾಜಲಕ್ಕಿದೆ.

   ಮತ್ತೊಂದು, ಭದ್ರಾ ಹೆಸರಿನ ಝರಿ ಆಗ್ನೇಯ ಅಭಿಮುಖವಾಗಿ ಹರಿದು ಕಳಸ, ಬಾಳೆಹೊನ್ನೂರು, ಖಾಂಡ್ಯ, ನರಸಿಂಹರಾಜಪುರ, ಲಕ್ಕವಳ್ಳಿ ಮೂಲಕ ಉತ್ತರ ಗಾಮಿನಿಯಾಗಿ ಶಿವಮೊಗ್ಗ ಜಿಲ್ಲೆ ಪ್ರವೇಶಿಸುತ್ತದೆ. ಭದ್ರಾವತಿಗೆ ಸ್ವಲ್ಪ ದೂರದ ಕೂಡಲಿಯಲ್ಲಿ ತುಂಗ-ಭದ್ರ ಸಂಗಮಿಸುತ್ತಾರೆ. ಈ ಪವಿತ್ರ ಸಂಗಮ ತಾಣವೂ ಮನೋಹರ. ಬೆಟ್ಟದ ತುದಿಯಲ್ಲಿ, ಕಿರು ಅಂತರದಲ್ಲಿ ಹುಟ್ಟುವ ಈ ನದಿ ಸಹೋದರಿಯರು ಪರಸ್ಪರ ಮುಖಾಮುಖಿಯಾಗಲು ನೂರಾರು ಕಿಲೋಮೀಟರ್ ಕ್ರಮಿಸಬೇಕು! ಹಾದಿಯುದ್ದಕ್ಕೂ ಹಸಿರು ಉಕ್ಕಿಸಿ ನಲಿವು ನಳನಳಿಸುವಂತೆ ಮಾಡಲು ನಿತ್ಯ ಶ್ರಮಿಸಬೇಕು!



   ನೇತ್ರಾವತಿ ಎಂದು ಗುರುತಿಸಿಕೊಳ್ಳುವ ಮತ್ತೊಂದು ಝರಿ ಪಶ್ಚಿಮಕ್ಕೆ ಹರಿದು ದಟ್ಟ ಕಾಡು, ಆಳದ ಕಣಿವೆಗಳಲ್ಲಿ ಹಾಯ್ದು ಬಂಗಾಡಿ ಕಣಿವೆ ದಾಟಿ ಬೆಳ್ತಂಗಡಿ ಮೂಲಕ ಅರಬ್ಬಿ ಸಮುದ್ರ ಮುಟ್ಟುತ್ತದೆ. ಈ ಮೂರು ಮುಖ್ಯ ನದಿಗಳೇ ಅಲ್ಲದೇ ಅನೇಕ ಉಪನದಿಗಳು, ಸಣ್ಣ ಪುಟ್ಟ ಝರಿಗಳು ಈ ಘಟ್ಟಗಳ ವಿವಿಧ ತಾಣಗಳಲ್ಲಿ ಉಗಮ ಆಗುತ್ತವೆ. ಲಕ್ಯಾ ಹೊಳೆ ಅಂತಹ ಒಂದು ಮುಖ್ಯ ಉಪನದಿ. ಕುದುರೆಮುಖ ಕಬ್ಬಿಣ ಗಣಿಗಾರಿಕೆಯನ್ನು ಆರಂಭಿಸಲು ಮುಖ್ಯ ಆಸರೆಯಾಗಿ ನಿಂತ ಈ ಹೊಳೆಗೆ ಉಗಮ ಸ್ಥಾನದಿಂದ 3-4 ಕಿ.ಮೀ ಒಳಗೇ ಕಟ್ಟಿರುವ ಜಲಾಶಯ ನಿಜವಾಗಲೂ ಅಚ್ಚರಿಯ ಕಡಲು.

   


ಹೇಮಾವತಿ, ಎಣ್ಣೆಹೊಳೆ, ಚಿನ್ನದ ನದಿ ಎಂದೆಲ್ಲಾ ಕರೆಸಿಕೊಳ್ಳುವ ಮತ್ತೊಂದು ಜೀವನದಿ ಜಾವಳಿ ಪರ್ವತದಲ್ಲಿ ಉಗಮವಾಗುತ್ತದೆ. ಇಲ್ಲಿ ಹೇಮಾತಾಯಿಯ ಹೆಸರಿನಲ್ಲಿ ದೇಗುಲವನ್ನೂ ನಿರ್ಮಿಸಿ ಹೇಮಾವತಿ ದೇವಿಗೆ ಭಕ್ತಿ ಸಮರ್ಪಣೆಯನ್ನು ನಿತ್ಯವೂ ಮಾಡಲಾಗುತ್ತಿದೆ. ಈ ನದಿಯ ಹರಿವಿನ ಹಾದಿ ಕಲ್ಲು ಬಂಡೆಗಳೇ ಇಲ್ಲದ ರಮಣೀಯ ಪಾತ್ರ.

    ಚಂದ್ರದ್ರೋಣ ಪರ್ವತದ ಸೀತಾಳಯ್ಯನ ಗಿರಿಯ ಬಳಿ ಹುಟ್ಟುವ ಯಗಚಿ ನದಿಗೆ ಬದರಿ ನದಿ ಎನ್ನುವ ಹೆಸರೂ ಇದೆ. ದಕ್ಷಿಣಾಭಿಮುಖವಾಗಿ ಹರಿದು ಬೇಲೂರು ಮುಟ್ಟುವಷ್ಟರಲ್ಲಿ ಅಣೆಕಟ್ಟು ನಿರ್ಮಿಸಿ ಈ ಪುಟ್ಟ ನದಿಯಿಂದ ಸಂಗ್ರಹಿತವಾಗುವ ಆಗಾಧ ನೀರನ್ನು ಜನೋಪಯೋಗಿಯಾಗಿ ಬಳಸುವ ಪ್ರಯತ್ನ ಮಾಡಲಾಗಿದೆ.

    ಚಂದ್ರದ್ರೋಣ ಪರ್ವತದ ಪೂರ್ವ ಮುಖದಲ್ಲಿ ಹುಟ್ಟುವ ಗೌರಿ ಹಳ್ಳ ತೊರೆಯು ಆಗ್ನೇಯಾಭಿಮುಖವಾಗಿ ಹರಿದು ಅಯ್ಯನಕೆರೆ ಸೇರಿ ಅಲ್ಲಿಂದ ಮುಂದೆ ವೇದಾನದಿಯೆಂಬ ಹೆಸರು ಪಡೆದು ಮುಂದೆ ಸಾಗಿದರೆ, ಇದರ ಸಮೀಪವೇ ಹುಟ್ಟುವ ತಾಯಳ್ಳ ಅಥವಾ ಆವತಿ ಹಳ್ಳವೆಂಬ ತೊರೆಯು ಪೂರ್ವಾಭಿಮುಖವಾಗಿ ಹರಿದು ಮದಗದ ಕೆರೆ ಸೇರಿ ಅಲ್ಲಿಂದ ಮುಂದೆ ಆವತಿ ನದಿ ಎನ್ನುವ ಹೆಸರಿನಿಂದ ಮುಂದುವರಿಯುತ್ತದೆ. ಕಡೂರು ಬಳಿ ಸಂಗಮಿಸುವ ಈ ನದಿಗಳು ವೇದಾವತಿ ಹೆಸರಿನಿಂದ ಚಿತ್ರದುರ್ಗ ಜಿಲ್ಲೆಗೆ ಜೀವಸೆಲೆ ನೀಡಿ ತುಂಗಭದ್ರೆಯನ್ನು ಸೇರುತ್ತದೆ. ಕುಂತಿಹೊಳೆ, ಸೀತಾಹಳ್ಳ, ಹಗರಿ, ಹಗರೆ ಮುಂತಾದ ಹೆಸರುಗಳೂ ಈ ನದಿಗೆ ಇವೆ.

 

    ಶೃಂಗೇರಿ ಬಳಿಯ ಕಿಗ್ಗದ ನರಸಿಂಹ ಪರ್ವತದಲ್ಲಿ ನಂದಿನಿ, ನಳಿನಿ, ಸೀತಾ, ಮಾಲತಿ, ಮಲಾಪಹಾರಿ ನದಿಗಳು ಉಗಮಿಸುತ್ತವೆ. ಈ ಉಪನದಿಗಳೇ ಅಲ್ಲದೆ ಬೇಗಾರು ಸಮೀಪದ ಬೇಗಾರು ಹಳ್ಳವೂ ಸೇರಿದಂತೆ ಅನೇಕಾನೇಕ ರಮ್ಯ ಝರಿಗಳು ತುಂಗೆಯ ಒಡಲನ್ನು ಸೇರಿ ಮುಂದುವರಿಯುತ್ತವೆ.

   ಕೊಪ್ಪ ಸಮೀಪದ ಕಮಂಡಲು ಗಣಪತಿ ಕ್ಷೇತ್ರದ ಬಳಿ ಉಗಮಿಸುವ ಬ್ರಾಹ್ಮಿ ನದಿ ತನ್ನ ರಮ್ಯತೆಯಿಂದ ಮನಸೆಳೆದುಕೊಳ್ಳುತ್ತದೆ. ಪುಟ್ಟ ನದಿಯಾದರೂ ಪವಿತ್ರತೆಯನ್ನು ಅಪಾರವಾಗಿ ತುಂಬಿಕೊಂಡಿದೆ. ಅಷ್ಟೇ ಹೃದಯಂಗಮ ಸೌಂದರ್ಯಪ್ರಜ್ಞೆಯ ತವನಿಧಿಯೂ ಆಗಿದೆ.  ಪೂರ್ವಾಭಿಮುಖವಾಗಿ ಹರಿದು ಮೃಗವಧೆಯಲ್ಲಿ ಶ್ರೀರಾಮಲಿಂಗೇಶ್ವರನ ಪಾದಗಳನ್ನು ತೊಳೆದು, ಬಳಸಿ  ಮಂಡಗದ್ದೆ ಸಮೀಪ ತುಂಗೆಯ ಸಾನ್ನಿಧ್ಯವನ್ನು ಸೇರುತ್ತದೆ.

    ಮೂಡಿಗೆರೆಯ ಸಮೀಪದಲ್ಲಿ ಆನೆಬಿದ್ದಹಳ್ಳ, ಮುತ್ತೋಡಿ ಬಳಿಯ ಸೋಮವಾಹಿನಿ, ಹೆಬ್ಬೆ ಸಮೀಪ ಹೆಬ್ಬೆಹಳ್ಳ, ಲಕ್ಕವಳ್ಳಿಯ ಬಳಿ ಕಲ್ಲತ್ತಗಿರಿ, ಕಲ್ಲು ದುರ್ಗದ ಹೊಳೆಗಳು ಭದ್ರಾ ನದಿ ಪಾತ್ರಕ್ಕೆ ಸೇರಿ ನದಿಯ ಹರವನ್ನು ಹಿಗ್ಗಿಸುತ್ತವೆ.

    ಹೇಮಾವತಿ ನದಿಯ ಉಪ ನದಿಗಳಾದ ಸಮಾವತಿ, ಬಕ್ಕಿಹಳ್ಳ, ಕಪಿಲ ಅಥವಾ ಕಡದಾಳು ಹಳ್ಳ, ಬೆರಣೆಹಳ್ಳಗಳೂ ಮೂಡಿಗೆರೆ ತಾಲ್ಲೂಕಿನಲ್ಲಿ ಹುಟ್ಟಿ ಹರಿದು ಹೇಮೆಯನ್ನು ಸೇರುತ್ತವೆ.

    ಪಶ್ಚಿಮ ಘಟ್ಟಗಳ ಪಶ್ಚಿಮದ ಆಳಕ್ಕೆ ಒಮ್ಮೆಗೆ ಧುಮುಕುವ ನೇತ್ರಾವತಿಯ ಒಡಲಿನೊಳಗೆ ಸೇರಿಹೋಗುವ ಉಪನದಿ, ಝರಿ, ಜಲಪಾತಗಳಿಗೆ ಲೆಕ್ಕವೇ ಇಲ್ಲ! ಪುಟ್ಟ ಯಗಚಿ ನದಿಗೇ ವಾಟಹೊಳೆ, ಬಿರಂಜಿ ಹೊಳೆಗಳು ಉಪನದಿಗಳಾಗಿವೆ.

     

   ಚಿಕ್ಕಮಗಳೂರು ಜಿಲ್ಲೆಯ ಮುಖ್ಯ ನದಿಗಳು ತುಂಗೆ, ಭದ್ರೆ, ನೇತ್ರೆ, ಹೇಮೆ, ಯಗಚಿ, ವೇದೆ, ಆವತಿ ಈ ಸಪ್ತನದಿಗಳೆಂದು ಮೇಲುನೋಟಕ್ಕೆ ಕಂಡರೂ ಹುಡುಕುತ್ತಾ ಹೋದ ಹಾಗೆ ಮೂವತ್ತಕ್ಕೂ ಅಧಿಕ ಸಣ್ಣಪುಟ್ಟ ನದಿಗಳು, ಉಪನದಿಗಳು ತಮ್ಮ ಅಸ್ತಿತ್ವವನ್ನು ರಮ್ಯವಾಗಿ ತೋರ್ಪಡಿಸುತ್ತವೆ. ಅಸಂಖ್ಯ ಝರಿ ತೊರೆ ಹಳ್ಳ ಜಲಪಾತಗಳು ತಮ್ಮ ಹೆಸರನ್ನೂ ಹೇಳಿಕೊಳ್ಳದೆ ತಮ್ಮ ಇರುವಿನಿಂದಲೇ ಲೋಕಕ್ಕೆ ಆನಂದ ನೀಡುತ್ತಾ ಮುಖ್ಯ ನದಿವಾಹಿನಿಗಳಿಗೆ ತಮ್ಮ ಪಾಲು ಸಮರ್ಪಿಸಿಕೊಳ್ಳುತ್ತಿವೆ.

   ಮಲೆನಾಡು, ಅರೆಮಲೆನಾಡು, ಬಯಲುಸೀಮೆಯ ತಾಣಗಳಿರುವ ಶಿವಮೊಗ್ಗ ಜಿಲ್ಲೆಯ ವೈಶಿಷ್ಟ್ಯ ಮತ್ತೊಂದು ಬಗೆಯದು. ಸಹ್ಯಾದ್ರಿ ಶಿಖರ ಕಣಿವೆಗಳ ಏರಿಳಿತದ ಸೊಬಗಿನಲ್ಲಿ ಮಿಲನವಾದ ದಟ್ಟ ಕಾಡುಗಳು, ಝರಿ, ತೊರೆ, ನದಿ, ಜಲಪಾತಗಳು ಅಪೂರ್ವ ಸೊಗಸಿನ ಕಾವ್ಯಗಳನ್ನು  ಚೆಲ್ಲುವರಿದು ಹರಡಿ ಮೆರೆಸುತ್ತಿವೆ.

   ತುಂಗಭದ್ರೆಯರ ಜೊತೆಗೆ ಶರಾವತಿ, ಕುಮುದ್ವತಿ, ವರದಾ, ಹರಿದ್ರಾವತಿ, ಶಮ್ಮಗಾವತಿ, ಕುಶಾವತಿ, ಗರ್ಗಿತ, ವರಾಹಿ, ಎಣ್ಣೆಹೊಳೆ, ಗುಡ್ವಿಹಳ್ಳ, ನಾಗರಹಳ್ಳ, ಕುಪ್ಪೆಹಳ್ಳ, ದಂಡವತಿ ಮೊದಲಾದ ಹಿರಿಕಿರಿಯ ನದಿಗಳನ್ನು ಹೆಸರಿಸಬಹುದು. ಇವಲ್ಲದೆ ನೂರಾರು ಹೆಸರಿಲ್ಲದ, ಅಲ್ಲ, ಹೆಸರೇ ಬೇಡದ ನೂರಾರು ಸಣ್ಣ ಪುಟ್ಟ ನದಿಕಾವ್ಯಗಳು ಬಾಗಿ, ಬಳುಕಿ, ಹರಿದು, ಧುಮುಕಿ ಸೌಂದರ್ಯ ಲಹರಿಗಳನ್ನು ಹಾಡುತ್ತಲೇ ಇವೆ.

   ಜನಜೀವನದ ಸಂರಕ್ಷಕಿಯರಾಗಿ, ಸಮಸ್ತ ಜೀವಕುಲದ ಆಧಾರಧಾತುಗಳಾಗಿ ಉಸಿರು, ಹಸಿರು, ಹೆಸರು ಎಲ್ಲಕ್ಕೂ ಕಾರಣರಾಗಿ ಕರ್ನಾಟಕ ರಾಜ್ಯಕ್ಕೆ ಜಲಸಂಪನ್ಮೂಲದ ಗಮನಾರ್ಹ ಪಾಲು ನೀಡುತ್ತಿರುವ, ಸಹ್ಯಾದ್ರಿ ಶ್ರೇಣಿಯ ಉನ್ನತ ಶಿಖರಗಳ ತವರಿನಲ್ಲಿ ಹುಟ್ಟಿ ಸಾಗರಗಾಮಿಗಳಾಗಿ ಹರಿಯುತ್ತಿರುವ ಈ ಎಲ್ಲ ನದಿದೇವತೆಯರಿಗೆ ಸಾವಿರದ ಶರಣು!


Comments

  1. ಆಹಾ ಅದೆಷ್ಟು ಕಾವ್ಯಮಯವಾಗಿ ನಮ್ಮ ನಾಡಿನ ಜೀವಮಾತೆಯರ ಹುಟ್ಟು, ಹರಿವನ್ನು ಸಾಹಿತ್ಯ ಧಾರೆಯಾಗಿ ಹರಿಸಿದ್ದೀರಿ. ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟಿಕೊಳ್ಳುತ್ತಾ ನಾವೂ ಸಹ ಆ ನದಿಗಳ ಒಡಲಲ್ಲಿ ಮಿಂದು ಬಂದ ಅನುಭವವಾಯ್ತು.

    ReplyDelete
  2. ನದಿಯ ಓಘ, ಬಳುಕು, ಝುಳು ಝುಳು ನಿನಾದದ ಇಂಪು, ಬಾಯಾರಿಕೆಯ ದಣಿವಾರಿಸುವ ತಂಪು ಎಲ್ಲವೂ ನಿಮ್ಮ ಲೇಖನದಲ್ಲಿ ಅಲೆ ಅಲೆಯಾಗಿ ಹರಿದು ಬಂದಿದೆ. ತುಂಬ ಚೆಂದದ ಬರಹ, ಮೊಗೆ ಮೊಗೆದು ಕುಡಿಯುವಂತಿದೆ !

    ReplyDelete
  3. ವಾಹ್ ಮತ್ತೊಂದು ರಸದೌತಣ. ಮೇಡಂ ನಾವು ಕುಳಿತಲ್ಲಿಯೇ ನಮ್ಮ ಹೆಮ್ಮೆಯ ನದೀದೇವತೆಯರ ದರ್ಶನವ ಮಾಡಿಸಿದ್ದೀರಿ. ನಿಮ್ಮ ಭಾಷೆಯ ಮೇಲಿನ ಹಿಡಿತ, ಪದಬಳಕೆ, ವಾಕ್ಯಪರಿಪೂರ್ಣತೆ ಓದುಗರನ್ನು ಅಯಸ್ಕಾಂತದಂತೆ ಹಿಡಿದಿಡುತ್ತದೆ. ನಮಗೆ ಪ್ರತಿ ತಿಂಗಳೂ ಒಂದೊಂದು ಕ್ಷೇತ್ರಗಳ ತೋರಿಸುವದಲ್ಲದೆ ಅವುಗಳ ಒಳಹೊರಗಿನ ವಿಷಯಗಳ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು 🙏🙏

    ReplyDelete

Post a Comment