ನೂರಾದರೇನು ಉಸಿರ ನಿಲ್ಲಿಸುವಿರೇನು !

ನೂರಾದರೇನು ಉಸಿರ ನಿಲ್ಲಿಸುವಿರೇನು !

ಲೇಖನ - ಬದರಿ ತ್ಯಾಮಗೊಂಡ್ಲು 

ಜಗತ್ತು ಯಶಸ್ಸನ್ನು ಮತ್ತು ಯಶಸ್ವೀ ಮನುಜರನ್ನು ಹಾಡಿ ಹೊಗಳುವಂತೆ, ಅವರು ತುಳಿದ ಹಾದಿಯನ್ನು, ಪಟ್ಟ ಶ್ರಮವನ್ನು ಅವಲೋಕಿಸುವುದು ಬಹಳ ವಿರಳವೆನ್ನುವರು ಚಿಂತಕರನೇಕರು. ಇದೇನಿದು ! “ಹೊರನಾಡ ಚಿಲುಮೆಯ” ನೂರನೆಯ ಸಂಚಿಕೆಯು ಸಂಭ್ರಮ ಪಡುವ ಸಮಯ, ಇದೆಂತಹ ಭಿನ್ನನುಡಿ ಎನ್ನುವಿರೇ? ಖಂಡಿತ ಇಲ್ಲ. ಸಿಡ್ನಿಯಲ್ಲಿ ಸಿಗುವ ಅಕ್ಕಿಚೀಲದ ಮೇಲೆ “ಸೋನ ಮಸೂರಿ ಅಕ್ಕಿ” ಎಂದು ಬರೆದಿದ್ದನ್ನು ನೋಡಿ ಸಂತೋಷಪಟ್ಟುಕೊಂಡವನು ನಾನು. ಪೀಠಿಕೆಯಲ್ಲಿ ಹೇಳಿದ ಮಾತು ಭಾಷಾ ಕಲಿಕೆಯಲ್ಲೂ ನಾವು ಕೇವಲ ಯಶಸ್ಸನ್ನು ಗುರಿಯಾಗಿಸಿಕೊಳ್ಳದೆ ನಿರಂತರ ಕಲಿಕೆಯಲ್ಲಿಯೂ ನಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳುವುದಕ್ಕಷ್ಟೇ. 


ಕನ್ನಡದ ಮಟ್ಟಿಗೆ ಹೇಳುವುದಾದರೆ ಪ್ರಾಥಮಿಕ ಹಂತದಲ್ಲಿ ಕನ್ನಡವನ್ನು ಓದಿ, ನಂತರವೂ ಪದವಿಯ ತನಕ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿದವರು/ಮಾಡುವವರು ಅನೇಕರಿದ್ದಾರೆ.  ಅವರೆಲ್ಲರಲ್ಲಿ ಹೆಚ್ಚೆಚ್ಚು ಜನರು ಕನ್ನಡವನ್ನು ಚೆನ್ನಾಗಿ ಅರಿತುಕೊಂಡು ಮತ್ತೆ ಸಮಾಜಕ್ಕಾಗಿ  ತಮ್ಮ ಮಾತುಗಳ ಮೂಲಕ, ಬರಹ/ಹಾಡು/ಕಥೆ/ಕವನ ಅಥವಾ ಲಲಿತ ಕಲೆಗಳ ಮೂಲಕ ಉತ್ಸಾಹದಿಂದ ಕೊಡುಗೆ ಕೊಟ್ಟಿದ್ದರೆ, ಕರ್ನಾಟಕದ ರಾಜಧಾನಿಯಲ್ಲೇ ಕನ್ನಡದ ಬರಕ್ಕೆ ಆಸ್ಪದವಿರುತ್ತಿರಲಿಲ್ಲ. ಆದರೆ ಪ್ರಸ್ತುತ ಆಗುತ್ತಿರುವುದು ವಿಡಂಬನೆಯಿಂದ ಹೇಳುವ “ನವೆಂಬರ್ ಕನ್ನಡಿಗರು” ಎಂಬುದನ್ನು ಸಾಕಾರಗೊಳಿಸುತ್ತಿರುವ ನಾವನೇಕರು. ಒಬ್ಬರನ್ನು ದೂರುವುದು ಬಹಳ ಸುಲಭ. ಇಲ್ಲಿ ನಾನು ಅಂತಹ ಯಾವುದೇ ಉದ್ದೇಶ ಇಟ್ಟುಕೊಂಡಿಲ್ಲವೆಂದು ಸ್ಪಷ್ಟಪಡಿಸುವೆ. ಇಲ್ಲಿ ವಸ್ತುಸ್ಥಿತಿಯು ಸತ್ಯಕ್ಕೆ ಹತ್ತಿರವೇ ಎನ್ನುವ ಪರಿಶೀಲನೆಯಷ್ಟೇ.

ಭಾಷೆಯ ಅಭಿವೃದ್ಧಿಗೆ, ಕುಂಠಿತಗೊಳ್ಳುವಿಕೆಗೆ ಅಥವಾ ಮಂದ ಬೆಳವಣಿಗೆಗೆ ಜನರು ಮಾತ್ರವೇ ಕಾರವಾಗಲಾರರು. ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳೂ ಪೂರಕವಾಗುವುವು.  ಹೀಗಾಗಿ ನವೆಂಬರ್ ನಲ್ಲಿ ಆಚರಿಸುವ ವಿವಿಧ ಕಾರ್ಯಕ್ರಮಗಳು ಸ್ವಾಗತಾರ್ಹವೇ. ನಮ್ಮಲ್ಲಿ ಭಾಷೆಯ ಜಾಗೃತಿ ಮೂಡಿಸಿದರೂ ಸಾಕು. ಅಷ್ಟಕ್ಕಾದರೂ ಅವು ಸಫಲ. ಅತಿರೇಕವಾದರಷ್ಟೇ ಸಮಾಜ ಒಪ್ಪದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡವನ್ನು ಪೋಷಿಸುವ ಪ್ರಪಂಚದೆಲ್ಲೆಡೆ ಇರುವ ಇನ್ನಿತರ ಒಕ್ಕೂಟಗಳು ಕಳೆದ ಶತಮಾನದಲ್ಲಿ ಮಾಡಿರುವ ಮತ್ತು ಈಗಲೂ ಮಾಡುತ್ತಿರುವ ಕೆಲಸಗಳನ್ನು ಸ್ಮರಿಸಲೇಬೇಕು ಮತ್ತು ಪ್ರೋತ್ಸಾಹಿಸಲೇಬೇಕು. 

ಕಳೆದ ಇಪ್ಪತ್ತೈದು ವರ್ಷಗಳನ್ನು ಮೆಲುಕು ಹಾಕಿದರೆ, ಕೇವಲ ಕನ್ನಡ  ಭಾಷೆಗೆ ಸೀಮಿತವಾಗಿರದೆ, ಬಹುತೇಕ ಎಲ್ಲೆಡೆಯೂ ಭಾಷಾಭ್ಯಾಸಿಗಳು ಮತ್ತು ಪುಸ್ತಕ ಪ್ರಿಯರು ಕಡಿಮೆಯಾಗಿದ್ದಾರೆ.  ಟಿ.ವಿ. / ಸಾಮಾಜಿಕ ಜಾಲತಾಣ ಇತ್ಯಾದಿ  ಮನರಂಜನಾ ಅಪೇಕ್ಷೆಯನ್ನು ಇಟ್ಟುಕೊಂಡಿರುವ ವೀಕ್ಷಕರು ಹೆಚ್ಚಾಗಿದ್ದಾರೆ. ವಿವಿಧ ಬಗೆಯ ಹಾಸ್ಯ, ಹಲವಾರು ರಿಯಾಲಿಟಿ ಷೋ ಇತ್ಯಾದಿಗಳು ಆ ಕ್ಷಣದ ಮನದ ಹಸಿವನ್ನು ಇಂಗಿಸಬಹುದೇನೋ. ಅವುಗಳಲ್ಲೂ ಕೆಲವು ಒಳ್ಳೆಯ ಕಾರ್ಯಕ್ರಮಗಳು ಭಾಷೆಯ ಅಭಿಮಾನವನ್ನು ಪ್ರಚೋದಿಸಬಹುದೇನೋ ನಿಜ. ಆದರೆ ಹೇಗೆ ನಿರಂತರ ಕೃಷಿಯು ಇಲ್ಲದಿದ್ದರೆ ಧವಸ ಧಾನ್ಯಗಳು ದೊರೆಯದೋ, ಹಾಗೆಯೇ ಭಾಷೆಯ ಬಳಕೆಯನ್ನು ದಿನನಿತ್ಯದಲ್ಲಿ ಮಾಡದಿದ್ದರೆ ನಮ್ಮ ಪೀಳಿಗೆಗೂ ಸೇರಿದಂತೆ ಮುಂದಿನ ತಲೆಮಾರಿಗೂ ಕೊಡಲು ನಮ್ಮಲ್ಲಿ  ಹೆಚ್ಚೇನೂ ಉಳಿದಿರುವುದಿಲ್ಲ. ಇಷ್ಟೆಲ್ಲಾ ಹೇಳಿಯೂ, ಇನ್ನೊಂದು ಆಯಾಮವನ್ನು ನೋಡಲೇಬೇಕು. ನಮ್ಮಲ್ಲಿ ಅನೇಕ ಜನರಿಗೆ ಭಾಷೆಯ ಮೇಲೆ ಅತೀವ ಪ್ರೇಮವಿರುತ್ತದೆ. ಕಾರಣಾಂತರದಿಂದ ಅವರವರ ಸ್ಥಿತಿ, ಸನ್ನಿವೇಶದಿಂದಾಗಿ ಹೆಚ್ಚಾಗಿ ಭಾಷೆಯನ್ನು ಬಳಸಲಾಗುತ್ತಿರುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಅಪವಾದವೆಂದು ತಿಳಿಯಬೇಕೇ ಹೊರತು “ ಹೋ! ಈಗ ಕಾಲ ಕೆಟ್ಟು ಹೋಗಿದೆ” ಏನೂ ಮಾಡಲಾಗುವುದಿಲ್ಲ ಎನ್ನುವ “ಉಸ್ಸಪ್ಪ” ಗಳಾಗಬಾರದು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲವೂ ಭಾಷೆಯನ್ನು ಬಳಸಬೇಕು.

ಶಿವರಾಮ ಕಾರಂತರು ಹೀಗೆ ತಿಳಿಸುತ್ತಾರೆ “ಭಾಷೆ ಮಾಡಬೇಕಾದ ಮುಖ್ಯ ಕೆಲಸವೆಂದರೆ – ಮಾನವನ ಅನುಭವ, ಭಾವನೆಗಳನ್ನೂ, ವಿಚಾರ ಸರಣಿಯನ್ನೂ ಇನ್ನೊಬ್ಬನಿಗೆ ತಿಳಿಸುವುದು”. ಹೀಗಾಗಿ ನಾವಾಡುವ ನುಡಿಯು ನಮ್ಮ ಭಾವನೆಗಳ ಒಳನೋಟವನ್ನು ಮತ್ತೊಬ್ಬರಿಗೆ ತಿಳಿಸಿಕೊಡುತ್ತಿಲ್ಲವೆಂದರೆ ನಮ್ಮ ಭಾಷಾ ಪ್ರಯೋಗದ ಮೇಲೆ ಒಮ್ಮೆ ದೃಷ್ಟಿ ಹಾಯಿಸಬೇಕು. 

ವಾಟ್ಸಾಪ್ ನಲ್ಲಿ ಇತ್ತೀಚಿಗೆ ಒಂದು ಸಂದೇಶ ಬಂದಿತ್ತು. ಹಿಂದಿನ ತಲೆಮಾರಿನ ಜನರು ಗಾದೆಗಳನ್ನು ಮಾತುಕತೆಗಳ ಮೂಲಕ ಹೇಗೆ ಸುಗಮವಾಗಿ ದೈನಂದಿನ ಚಟುವಟಿಕೆಗಳಲ್ಲಿ ಉಪಯೋಗಿಸುತ್ತಿದ್ದರು ಎಂದು. ಅದನ್ನು ಓದಿ ಸಂತೋಷ ಪಟ್ಟವನು ನಾನೂ ಹೌದು. ಆದರೆ ಅಷ್ಟೊಂದು ಗಾದೆಗಳನ್ನು ಯಾಕೆ ಉಪಯೋಗಿಸದೆ ಬಿಟ್ಟು ಬಿಟ್ಟಿದ್ದೀವಿಯೋ ಗೊತ್ತಿಲ್ಲ. ಹಲವಾರು ಭಾಷೆಗಳ ಪ್ರಭಾವವು ಕನ್ನಡದ ಮೇಲೆ ಆಗುತ್ತಿರುವುದು ಮತ್ತು ಸಾಂಸ್ಕೃತಿಕವಾಗಿಯೂ ಸಮಾಜವು ಪರಿವರ್ತನೆಗೊಳ್ಳುತ್ತಿರುವುದು ಗಾದೆಗಳ ಅಪ್ರಸ್ತುತೆಗೆ ಕಾರಣವಿರಬಹುದು.

ನಾನು ಗಮನಿಸಿದಂತೆ ಆಸ್ಟ್ರೇಲಿಯಾಗೆ ವಲಸೆ ಬಂದವರ ಮಕ್ಕಳು ಇಲ್ಲಿನ ಶಾಲೆಗಳಲ್ಲಿ ಓದುವ ಇಂಗ್ಲಿಷ್ ಭಾಷೆಯನ್ನು ಮತ್ತು ಅದನ್ನು ತಮ್ಮ ದೈನಂದಿನ ಮಾತುಕತೆಗಳಲ್ಲಿ ಇಂಗ್ಲೀಶ್ ಭಾಷೆಯ ಸೌರಭವನ್ನು ಅದೆಷ್ಟು ಸರಾಗವಾಗಿ ಒಗ್ಗಿಸಿಕೊಂಡು ಬಿಡುತ್ತಾರೆ. ಅದೆಷ್ಟು ಸುಲಲಿತವಾಗಿ ಇಂಗ್ಲಿಶ್ ಭಾಷೆಯ ಗಾದೆಗಳು, ನುಡಿಗಟ್ಟುಗಳು, ಆಡುಭಾಷೆಯ ಪದಪುಂಜಗಳು ಇತ್ಯಾದಿಗಳನ್ನು ಕಲಿತುಕೊಂಡುಬಿಡುತ್ತಾರೆ. ಅದಕ್ಕೆ ಶಾಲೆಯಲ್ಲಾಗಲಿ, ಮನೆಯಲ್ಲಾಗಲೀ ಹೆಚ್ಚಿನ ಪರಿಶ್ರಮ ಹಾಕಬೇಕಾಗುವುದಿಲ್ಲ. ಅವರಿರುವ ಪರಿಸರದೆಲ್ಲೆಡೆಯೂ ಅವುಗಳ ಬಳಕೆಯನ್ನು ನೋಡಿ ಅವು ತಾನೇ ತಾನಾಗಿ ಬಂದು ಬಿಡುತ್ತದೆ. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವುದು, ಸ್ನೇಹಿತರ ಜೊತೆ ಮಾತುಕತೆ, ಅಂಗಡಿಗೆ ಹೋದರೆ ಅಲ್ಲೂ ವಿಧವಿಧ ಪದಗಳ ಬಳಕೆಯನ್ನು ನೋಡುವುದು ಇತ್ಯಾದಿ. ಇನ್ನು ದೂರದರ್ಶನ ಮತ್ತು ಸಮೂಹ ಮಾಧ್ಯಮದಲ್ಲಿ ನೋಡುವ ಕಾರ್ಯಕ್ರಮಗಳು ಎಲ್ಲವೂ ಇಂಗ್ಲಿಶ್. ಈ ಹಿನ್ನಲೆಯಲ್ಲಿ ಹೇಳುವುದಾದರೆ ನಮ್ಮ ಭಾಷೆಯ ಬಳಕೆಯನ್ನು ಆ ರೀತಿಯಲ್ಲಿ ಎಲ್ಲೆಡೆಯೂ ಮಾಡಿದಾಗ ಹೆಚ್ಚು ಶ್ರಮವಿಲ್ಲದೆ ಮನಸ್ಸಲ್ಲಿ ನಾಟಿ, ಅನಾಯಾಸವಾಗಿ ಕನ್ನಡವನ್ನು ಉಪಯೋಗಿಸುತ್ತೇವೆ. 



ತಂತ್ರಜ್ಞಾನ ಮುಂದುವರೆದು ಕನ್ನಡ ಲಿಪಿಯನ್ನು ಸುಲಭವಾಗಿ ಟೈಪಿಸಬಹುದಾದರೂ, ಒಂದು ಶುಭಾಶಯ ಹೇಳುವುದಕ್ಕೂ ನಾವು ಕನ್ನಡ ಬಳಸುತ್ತಿಲ್ಲವೆಂದರೆ ನಮ್ಮ ಮಾತೃಭಾಷೆಯನ್ನು ವೆಂಟಿಲೇಟರ್ ನಲ್ಲಿ ನಾವೇ ಇಡುತಿದ್ದೀವಿ ಎಂದೆನಿಸದೇ ಇರದು. ನಾವು ಕನ್ನಡವನ್ನು ಮಾತೃಭಾಷೆ ಎಂದು ಒಪ್ಪಿದ್ದೀವೆಂದಾದರೆ ನಮ್ಮ ಮನದಲ್ಲಿ ಮೊದಲು ಮೂಡುವುದು ಆ ಭಾಷೆಯೇ ಹೌದು. ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ ನಾವು ಟೈಪಿಸುವ ಕಷ್ಟವೇಕೆ?

ಇನ್ನು ಸಭೆ ಸಮಾರಂಭಗಳಲ್ಲಿ, ಸೇರಿರುವ ಬಹುತೇಕರು ಕನ್ನಡ ತಿಳಿದಿರುವ ಜನರೇ ಎಂದು ಗೊತ್ತಿದ್ದರೂ, ದಪ್ಪ ದಪ್ಪ ಅಕ್ಷರಗಳಲ್ಲಿ ಇಂಗ್ಲಿಶ್/ಬೇರೆ ಭಾಷೆಯಲ್ಲಿ ಬರೆಸಿ, ಅಲ್ಲೆಲ್ಲೋ ಮೂಲೆಯಲ್ಲಿ ಬೇಕಿದ್ದರೆ ಮಾತ್ರ ಕನ್ನಡ ಬರೆಸುವಂಥವರು ನಾವಾದರೆ ಏನು ಹೇಳೋಣ. 

ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದು ಕಣಕಣವೂ ನವಿರೇಳುವಂತೆ ಕರೆಕೊಟ್ಟ ಕವಿವಾಣಿಯು ಮರೆತೇ ಹೋಯಿತೇನೋ ಎನ್ನುವ ಮುನ್ನವೇ ನಮ್ಮೆಲ್ಲರಲ್ಲೂ ಕನ್ನಡ ಭಾಷೆಯ ಪ್ರೀತಿಯು ಉಸಿರಾಡುತ್ತಿದೆ ಎಂದು ತೋರಿಸಿಕೊಡೋಣ. ಹೆಚ್ಚು ಹೆಚ್ಚಾಗಿ ನಮ್ಮ ಹೃದಯದ ಭಾಷೆಯಾದ ಕನ್ನಡವನ್ನು ಬಳಸೋಣ. ನಮ್ಮ ದೇಹಕ್ಕೆ ಉಸಿರು ಹೇಗೆ ಅತ್ಯಾವಶ್ಯವೋ ಮತ್ತು ಚೈತನ್ಯದಾಯಕವೋ, ಹಾಗೆಯೇ ಕನ್ನಡ ಭಾಷೆಯನ್ನೂ ಉಸಿರಾಗಿಸಿಕೊಂಡು ಅಮಿತ ಆನಂದವನ್ನು ಪಡೆದುಕೊಳ್ಳೋಣ. ಕನ್ನಡವನ್ನು ಆವಾಹಿಸಿಕೊಳ್ಳೋಣ! 

ಹೊನ್ನುಡಿ ಸಿಹಿ ಜೊನ್ನದ ಸವಿಯಣ್ಣ 

ಕನ್ನಡವೆಂದರೆ ಬಲುಹಿತವು

ಕನ್ನಡ ಚಿನ್ನವೆ ಅದು ಸರಿಯಣ್ಣ

ಕನ್ನಡಗೇತಕೆ ಇತಿಮಿತಿಯು





Comments

  1. ತುಂಬಾ ಅರ್ಥಪೂರ್ಣವಾಗಿ ಮತ್ತು ಅದಕ್ಕಿಂತ ಹೆಚ್ಚಾಗಿ ಚಿಂತನಶೀಲ ವಾಗಿದೆ ನಿಮ್ಮ ಲೇಖನ. ಕನ್ನಡ ಪ್ರೇಮ ಬರೀ ಬಾಯಿ ಮಾತಿಗೆ ಮುಗಿಯದೆ ಕೃತಿಗೆ ಇಳಿಸುವುದು ಬಲು ಮುಖ್ಯ. ಇತ್ತೀಚೆಗಂತೂ ಫೇಸ್ ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ಕನ್ನಡವನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆಯುವುದು ತುಂಬಾ ಹೆಚ್ಚಾಗಿದೆ. ಮತ್ತು ಕನ್ನಡಿಗರೇ ಇದ್ದರೂ ಯಾವುದೋ ಕುಂಟು ನೆಪವೊಡ್ಡಿ ಇಂಗ್ಲಿಷ್ ಬಳಸುವುದು ತುಂಬಾ ಹೆಚ್ಚಾಗಿದೆ. ಏನೇನೆಲ್ಲಾ ಸಾಧಿಸುವವರಿಗೆ ಸುಲಭಸಾಧ್ಯವಾದ ಕನ್ನಡ ಲಿಪಿಯನ್ನು ಬಳಸಲಾಗುವುದಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ನಿಮ್ಮ ಲೇಖನವು ಸಮಯೋಚಿತವಾಗಿದೆ.

    ReplyDelete
  2. ಕನ್ನಡ ಚಿಂತನೆಯಿಂದ ಆರಂಭಗೊಂಡು ಆವಾಹನೆಯವರೆಗೆ ಪ್ರೇರೇಪಣೆ ನೀಡಿರುವ ನಿಮ್ಮ ಉತ್ಕೃಷ್ಟ ಲೇಖನ ಓದುವ ಕನ್ನಡಿಗರಿಗೆ ಹೆಮ್ಮೆ, ಪ್ರಚೋದನೆ, ತಿಳುವಳಿಕೆ, ಸಂಘಟನೆ ಎಲ್ಲವನ್ನೂ ತರುತ್ತದೆ. ಉಡಾಳರಿತವಾಗಿ ಶಿವರಾಮ ಕಾರಾಂತರ ಹೇಳಿಕೆ ಬಹಳ ಮೆಚ್ಚುಗೆಯಾಯಿತು.

    ReplyDelete
  3. Good quality article. we miss your articles

    ReplyDelete

Post a Comment