ಹಬ್ಬ - 2

 ಹಬ್ಬ - 2

ಲೇಖನ - ಶ್ರೀ ನಾಗಶೈಲ ಕುಮಾರ್  


ಭಾಗ  1  ಹಿಂದಿನ ಸಂಚಿಕೆ 


ಭಾಗ  2   ಮುಂದುವರೆದ ಭಾಗ 2 ...... 

                   ......ರಾಮಣ್ಣ, ಸದಾನಂದನಿಗಿಂತ ಸುಮಾರು  ಹತ್ತು ವರ್ಷಗಳಷ್ಟು ದೊಡ್ಡವರು. ಆಧುನಿಕ ವಿಚಾರ, ಸಾಹಿತ್ಯ, ಹೀಗೆ ಹಲವು  ವಿಷಯಗಳಲ್ಲಿ ಅವರು ಅವನಿಗೆ ಮಾರ್ಗದರ್ಶಕರಾಗಿದ್ದರು. ಅವರನ್ನು ಅಣ್ಣನಂತೆ ಭಾವಿಸಿದ್ದ. ಅವರ ಊಟದಲ್ಲಿ ಪಾಲು ನೀಡುವುದು, ಆಗಾಗ್ಗೆ ಮನೆಗೆ ಕರೆದುಕೊಂಡು ಹೋಗುವುದು ಎಲ್ಲಾ ಮಾಡುತ್ತಿದ್ದರು. ಒಟ್ಟಿನಲ್ಲಿ ಸದಾನಂದನಿಗೆ ಅವರ ಬಳಿ ಒಂದು ವಿಧವಾದ ಆತ್ಮೀಯತೆ ಬೆಳೆದಿತ್ತು.

ಅವರು ತನ್ನತ್ತ ಬರುವುದ ಕಂಡ ಕೂಡಲೇ, ತನ್ನ ದುಗುಡವನ್ನು ಹೇಳಿಕೊಳ್ಳಲು ಇವರೇ ಸರಿಯಾದ ವ್ಯಕ್ತಿ ಎಂದು ಸಮಾಧಾನವಾಯ್ತು.

"ಏನ್ ಸದೂ, ಏನಂದ ಆ ಪ್ರಮೋದ? ಅವನ ಮಾತ್ಗೆಲ್ಲಾ ಬೇಜಾರು ಮಾಡ್ಕೋಬೇಡ ಮರೀ. ಇದೆಲ್ಲ ಮುಗೀಲಿ, ಅವನ್ಗೆ, ಸರಿಯಾಗಿ ಬುದ್ಧಿ ಹೇಳ್ತೀನಿ", ಸದಾನಂದನ ಭುಜದ ಮೇಲೆ ಕೈ ಹಾಕಿ ಆತ್ಮೀಯವಾಗಿ ಹೇಳಿದರು.

"ರಾಮಣ್ಣ, ಸರಿಯಾದ ಸಮಯಕ್ಕೆ ಬಂದ್ರಿ, ನನ್ ಮನಸ್ಸಿನಲ್ಲಿ ಇರೋದನ್ನ ಯಾರ ಹತ್ರನಾದ್ರೂ ಹೇಳ್ಕೋಬೇಕು ಅಂತ ಕಾಯ್ತಾ ಇದ್ದೆ, ಅದಕ್ಕೆ ಸರಿಯಾಗಿ ನೀವೇ ಬಂದ್ರಲ್ಲ".

"ಅದೇನ್ ಸದೂ ಅಂತದ್ದು, ಅದೂ ಅಲ್ಲದೆ ನನ್ನ ಹೇಳಕ್ಕೆ ನಿನಗೆ ಇಷ್ಟೊಂದು ಪೀಠಿಕೆ ಬೇಕಾ", ರಾಮಣ್ಣ ನುಡಿದರು.

ಸದಾನಂದನಿಗ ಮತ್ತಷ್ಟು ಆಸರೆ ದೊರೆತಂತಾಯ್ತು,

"ಮೊದಲೇ ಹೇಳಿ ಬಿಡ್ತೀನಿ ರಾಮಣ್ಣ ನಿಮ್ಮನ್ನು ಬಿಟ್ಟು ಬೇರೆ ಯಾರ ಹತ್ರಾನೂ ಇದನ್ನು ಹೇಳಿಕೊಳ್ಳೋಕೆ ಆಗಲ್ಲ".

"ಅಪ್ಪಾ ಪುಣ್ಯಾತ್ಮ, ನನ್ಮೇಲೆ ನಿಂಗೆ ನಂಬಿಕೆ ಇಲ್ವಾ, ಅದೇನ್ ಹೇಳು".

"ಅಲ್ಲ ರಾಮಣ್ಣ ಇದೆಲ್ಲ ತಪ್ಪಲ್ವಾ ನಿಮಗೇನನಿಸುತ್ತೆ ನಿಜ ಹೇಳಿ" ಎಂದು ರಾಮಣ್ಣನವರನ್ನು ಕೇಳಿದ.

ರಾಮಣ್ಣ ಗಲಿಬಿಲಿಗೊಂಡಂತೆ ಆಯ್ತು ಒಂದು ಕ್ಷಣ ಯೋಚಿಸಿ, "ಅಲ್ಲ ಮರಿ, ನೀನು ಯಾವ ವಿಷಯ ಮಾತಾಡ್ತಾ ಇದ್ದೀಯಾ ಹೇಳು" ಎಂದು ಕೇಳಿದರು.

"ರಾಮಣ್ಣ, ಫ್ಯಾಕ್ಟರಿಗೂ, ಮನೆಗೂ, ದೇವಸ್ಥಾನಕ್ಕೂ, ವ್ಯತ್ಯಾಸ ಇಲ್ವಾ? ಎಲ್ಲೆಲ್ಲಿ ಏನೇನೋ ಮಾಡಬೇಕು ಅದು ಅಲ್ಲಲ್ಲಿ ಮಾಡಿದರೆ ಸರಿ ಅಲ್ವಾ. ಇದು ನಾವುಗಳೆಲ್ಲ ಕೆಲಸ ಮಾಡೋ ಜಾಗ, ಕೆಲಸ ಮಾಡೋದು ಬಿಟ್ಟು ಇಲ್ಲಿ ಪೂಜೆ-ಪುನಸ್ಕಾರ ಅಂದ್ರೆ ಹೇಗೆ. ಪೂಜೆ ಮಾಡೋಕೆ, ಹಬ್ಬ ಮಾಡಕ್ಕೆ, ದೇವಸ್ಥಾನ ಇದೆ ಮನೆ ಇದೆ. ಆದರೆ ಫ್ಯಾಕ್ಟರೀನೆ ದೇವಸ್ಥಾನ ಮಾಡಿಕೊಂಡರೆ ಹೇಗೆ ಅಲ್ವಾ ರಾಮಣ್ಣ.., ನನಗೇನೋ ಇದು ಸರಿ ಅನಿಸ್ತಾ ಇಲ್ಲ ನೀವೇನಂತೀರಾ? ಇಷ್ಟು ಹೇಳಿ ರಾಮಣ್ಣನ ಮುಖ ನೋಡಿದ.

ಅಲ್ಲಿ ಯಾವುದೇ ಭಾವನೆಗಳು ಕಾಣಲಿಲ್ಲ. ಈಗ ಕೈಗಳನ್ನು ಕಟ್ಟಿಕೊಂಡು ತೀಕ್ಷ್ಣವಾಗಿ ಅವನನ್ನೇ ನೋಡುತ್ತಿದ್ದರು. 


ಸದಾನಂದ ಮತ್ತೆ ಮುಂದುವರೆಸಿದ, " ರಾಮನವಮಿ ಆಯ್ತು, ಈಗ ಗಣೇಶನ ಹಬ್ಬ, ಮುಂದೆ ದಸರಾ, ಹೀಗೇ ಶುರು ಆಗುತ್ತೆ ಒಂದಾದ ಮೇಲೊಂದು. ಬೀದಿ ಬೀದಿಲಿ ಗಣೇಶ ಇಡೋ ಹಾಗಾಯ್ತು. ನಾವು ಮಾತಾಡೋವಾಗೆಲ್ಲಾ, ಜಪಾನ್, ಜರ್ಮನಿ, ಅಂತೆಲ್ಲಾ ಹೇಳಿ, ಅವರ ಕಾರ್ಯ ಪ್ರಜ್ಞೇನಾ ಎಷ್ಟೊಂದು ಹೊಗಳ್ತೀವಿ. ನಾವು ಮಾಡೋದು ಮಾತ್ರ ಅದಕ್ಕೆ ವಿರುದ್ಧ. ಈಗ ನೋಡಿ, ಸುಮಾರು ಒಂದು ವಾರದಿಂದ ಸರ್ಯಾಗಿ ಕೆಲ್ಸಗಳೇ ನಡ್ದಿಲ್ಲ", ಒಂದೇ ಸಮನಾಗಿ ಭಾಷಣ ಮಾಡುವಂತೆ ಮಾತನಾಡಿ, ಕಡೆಗೆ ಹಾಸ್ಯ ಮಿಶ್ರಿತ ಧ್ವನಿಯಲ್ಲಿ "ಹೀಗೇ ಬಿಟ್ರೆ, ಒಂದಿನ ನಮ್ಮ ಡಿಪಾರ್ಟ್ಮೆಂಟ್ ನ ಮುಂದೆ  ಬಾಗಿಲಿಗೆ ಒಂದು ಗೋಪುರ ಬಂದಿರುತ್ತೆ ಅಷ್ಟೇ", ಎನ್ನುತ್ತಾ ರಾಮಣ್ಣನ ಮುಖ ನೋಡಿದ. ಮುಖ ಕೋಪದಿಂದ ಕೆಂಪಾಗಿ ಸಿಡಿಯುತ್ತಿತ್ತು, ಕಾಲ ಮಿಂಚಿ ಹೋಗಿತ್ತು.

"ತಪ್ಪು ಮಾಡಿದೆ", ಎಂದು ತಲೆಗೆ ಹೋಗುವಷ್ಟರಲ್ಲಿ, ರಾಮಣ್ಣ ಜೋರಾಗಿ ಚಪ್ಪಾಳೆ ತಟ್ಟಿದರು. ಸುಮಾರು ಜನ ಇವರ ಕಡೆಗೆ ತಿರುಗಿದರು.

"ರಾಮಣ್ಣ, ರಾಮಣ್ಣ, ಏನು ಮಾಡ್ತಾ ಇದ್ದೀರ ನೀವು, ಪ್ಲೀಸ್ ಸುಮ್ನೆ ಇರಿ" ಎಂದು ರಾಮಣ್ಣನ ತೋಳು ಹಿಡಿದು ಜಗ್ಗಿದ.

ಕೆಲವರು ಏನು ನಡೆಯುತ್ತಿದೆ ಎನ್ನುವಂತೆ ಇವರತ್ತ ನಿಂತ ಕಡೆಯಿಂದಲೇ ನೋಡುತ್ತಿದ್ದರು.

ರಾಮಣ್ಣ್ ಸದಾನಂದನ ಕೈ ಕೊಸರಿಕೊಂಡು, ಎರಡೂ ಕೈಗಳ ಬೆರಳುಗಳನ್ನು ಬಾಯಲ್ಲಿರಿಸಿ ಜೋರಾಗಿ ಶಿಳ್ಳೆ ಹೊಡೆದು, ಎಲ್ಲರ ಗಮನ ಸೆಳೆದರು.

ಪೂಜೆ, ಅಲಂಕಾರ ಎಂದು ಕೆಲಸಗಳಲ್ಲಿ ತೊಡಗಿದ್ದ ಎಲ್ಲರೂ, ಕುತೂಹಲದಿಂದ ಇವರತ್ತ ಬಂದರು.

ಸದಾನಂದ ಆಗಲೂ "ರಾಮಣ್ಣ, ದಯವಿಟ್ಟು ಸುಮ್ನೆ ಇರಿ, ನಾನು ನಿಮ್ಮ ಹತ್ತಿರ ಇರೋ ನಂಬಿಕೆ, ವಿಶ್ವಾಸದಿಂದ ನನ್ನ ಮನಸ್ಸಿನಲ್ಲಿ ಇರೋದ್ರನ್ನ ಹೇಳ್ಕೊಂಡೆ. ನೀವು ಈ ತರಾ ಮಾಡ್ತೀರಾ ಅಂತ ಅಂದಕೊಂಡಿರ್ಲಿಲ್ಲ, ಪ್ಲೀಸ್ ಸುಮ್ನೆ ಇದ್ಬುಡಿ", ಪಿಸುಗುಡುತ್ತಾ ಕೇಳಿಕೊಂಡ.

ರಾಮಣ್ಣನ ಮುಖ ಸಿಟ್ಟಿನಿಂದ ಕೆಂಪಗೆ ಬುಸುಗುಡುತ್ತಿತ್ತು, ಕೋಪದಲ್ಲಿ ತಮ್ಮ ಕೈಯನ್ನು ಸದಾನಂದನ ಭುಜದ ಮೇಲೆ ಹಾಕಿ, ಭುಜ ನೋಯುವಂತೆ ಜೋರಾಗಿ ಅದುಮುತ್ತಾ,

"ಬೊಗಳೋ, ಇಷ್ಟು ಹೊತ್ತೂ ನನ್ನ ಹತ್ರ ಏನೋ ಹೇಳ್ದ್ಯಲ್ಲ, ಇನ್ನೊಂದು ಸಲ ಬೊಗಳು, ಎಲ್ರೂ ಕೇಳ್ಲಿ," ಎಂದರು.

ಅವರು ಒತ್ತಿ ಹಿಡಿದಿದ್ದ ಭುಜ ನೋಯುತ್ತಿತ್ತು. ಬಲವಂತದಿಂದ ಅವರ ಕೈಯ್ಯನ್ನು ಕೊಡವಿ, ನೆಲ ನೋಡುತ್ತಾ ನಿಶ್ಚಲನಾಗಿ ನಿಂತು ಬಿಟ್ಟ ಸದಾನಂದ.

ಕಣ್ಣು ಕತ್ತಲಿಟ್ಟಂತೆ, ತಲೆ ಸಂಪೂರ್ಣ ಖಾಲಿಯಾದಂತೆ, ಏನೂ ಯೋಚನೆಗಳೇ ಮೂಡದಂತೆ, ಬುದ್ಧಿಯೇ ಮರಗಟ್ಟಿ ಹೋದಂತಾಗಿತ್ತು ಅವನ ಪರಿಸ್ಥಿತಿ.

"ಏನಾಯ್ತು ರಾಮಣ್ಣ, ಯಾಕೆ ಅಷ್ಟೊಂದು ಸಿಟ್ಟಾಗಿದ್ದೀರ, ಏನು ಸಮಾಚಾರ?", ರಘುರಾಮಣ್ಣ ಕೇಳಿದರು.

"ಅಲ್ಲ, ಎಲ್ರೂ ಪೂಜೆಗೆ ಅಷ್ಟೊಂದು ಖುಷಿಯಿಂದ ರೆಡಿ ಆಗ್ತಾ ಇದ್ದೀವಿ, ಈ ಟೈಂ ನಲ್ಲಿ ಯಾಕಪ್ಪಾ ಜಗಳ, ಎಲ್ಲಾ ಸೇರ್ಕೊಂಡು ನಗ್ ನಗ್ತಾ ಹಬ್ಬ ಮಾಡೋದು ಬಿಟ್ಟು....", ಮತ್ತೊಬ್ಬ ಹಿರಿಯ ಮುರುಗಪ್ಪ, ಸಮಾಧಾನದ ನುಡಿಯಲ್ಲಿ ಹೇಳ ಹೊರಟರು.

"ಹ್ಞಾಂ, ಅದೇ ಅದೇ, ನಾವೆಲ್ಲಾ ಸೇರಿ ಹಬ್ಬ ಮಾಡ್ತಾ ಇರೋದು ತಪ್ಪಂತೆ" ರಾಮಣ್ಣ ನಡೆದುದನ್ನು ಹೇಳಲಾರಂಭಿಸಿದರು.

ಅಷ್ಟು ಹೊತ್ತಿಗೆ ಸದಾನಂದನ ಮನಸ್ಸಿಗೆ, ಏನಾಗುತ್ತಿದೆ ಎಂದು ಅರಿವಾಗಿತ್ತು. ಏನಾದರೂ ಆಗಲಿ ಎದುರಿಸೋಣ ಎಂದು ಸಿದ್ಧನಾಗಿದ್ದ, ಆದರೆ ಅವನಿಗಾಗಿದ್ದ ನೋವು, ಅವಮಾನ ಮಾತು ಹೊರಬಾರದಂತೆ ಮಾಡಿತ್ತು.

"ಇದೇನು ದೇವಸ್ಥಾನನಾ, ಮನೇನಾ, ಅಥ್ವಾ ಬೀದೀನಾ ಗಣೇಶನ್ನ ಇಡಕ್ಕೆ, ಅಂತ ಕೇಳ್ತಾನೇ? ನಾವ್ಯಾರೂ ಕೆಲ್ಸ ಮಾಡಲ್ವಂತೆ, ಸಮಯ ಹಾಳು ಮಾಡ್ತೀವಂತೆ. ನಾವೆಲ್ಲಾ ಜಪಾನ್, ಜರ್ಮನಿ ಎಲ್ಲಾ ನೋಡಿ, ಅವರ ಹಾಗೇ ಕೆಲ್ಸ ಮಾಡೊದು ಕಲೀಬೇಕಂತೆ" ಕೋಪದಿಂದ ಬುಸುಗುಟ್ಟುತ್ತ ಹೇಳುತ್ತಿರುವಾಗ, ಮಧ್ಯದಲ್ಲಿ ಪ್ರಮೋದ ಸೇರಿಕೊಂಡ.

"ನಂಗೊತ್ತಿತ್ತು, ಇವನು ಅಂತೋನೆ ಅಂತ. ಇವನಂತೋರು ಇರೋದ್ರಿಂದಾನೇ ನಮ್ಮ ಧರ್ಮ ಉದ್ದಾರ ಆಗಲ್ಲ, ಪೂಜೆ ಪುನಸ್ಕಾರ ಮಾಡಿದ್ರೆ ತಾನೇ ನಾವೂ ಬದ್ಕಾಕ್ಕಾಗದು. ಇವನ ಹತ್ರ ದಂಡ ಕಟ್ಟಿಸಿಕೊಂಡು, ನಮ್ಮ ಡಿಪಾರ್ಟ್ಮೆಂಟ್ ನಿಂದ ಆಚೆ ಹಾಕ್ಬೇಕು, ನನ್ ಮಕ್ಕಳ್ಗೆ ಬುದ್ಧಿ ಬರುತ್ತೆ."

ಮೊದಲು ಕುಳಿತಲ್ಲಿಯೇ ಅಸಹಾಯಕರಾಗಿ ಎಲ್ಲವನ್ನೂ ನೋಡುತ್ತಿದ್ದ ಸೂಪರ್ವೈಸರ್ ಗೋವಿಂದರಾವ್ ಈಗ ಎದ್ದು ಸದಾನಂದನ ರಕ್ಷಣೆಗೆ ಎಂಬಂತೆ ಆವನ ಇನ್ನೊಂದು ಬದಿಗೆ ಬಂದು ನಿಂತಿದ್ದರು. "ಅವಕಾಶ ಸಿಕ್ಕರೆ ಮೊದಲು ನಿನ್ನನ್ನು ಹೊರಗೆ ಹಾಕ್ತೀನಿ, ಅವನನ್ನಲ್ಲ", ಎಂದು ಮೆಲ್ಲಗೆ ಗೊಣಗಿಕೊಂಡರು. ಆ ಪರಿಸ್ಥಿತಿಯಲ್ಲೂ ಸದಾನಂದನಿಗೆ ನಗು ಮೂಡಿತು.

ಅಲ್ಲಿದ್ದವರೆಲ್ಲಾ ತಮಗೆ ತೋಚಿದಂತೆ ಸದಾನಂದನಿಗೆ ಬುದ್ದಿ ಹೇಳತೊಡಗಿದರು. ಆಗ ಯಾರೇ ಅವನ ಪರವಾಗಿ ಮಾತನಾಡಿದರೂ, ಅವರಿಗೆ ಯಾವ ಬೆಲೆಯೂ ಸಿಗುತ್ತಿರಲಿಲ್ಲ.

ಸದಾನಂದ ಮೆಲ್ಲಗೆ ಹೊರ ಬಂದು ಅಲ್ಲಿದ್ದ ಕಟ್ಟೆಯ ಮೇಲೆ ಕುಳಿತ. ರಾಮಣ್ಣನ ಮೇಲೆ ಇದ್ದ ವಿಶ್ವಾಸ ನುಚ್ಚು ನೂರಾಗಿ   ಅವನಗೊಂದು ದೊಡ್ಡ ಆಘಾತವಾಗಿತ್ತು.

ಯಾರೋ ಹಿಂದಿನಿಂದ ಬಂದು ಮೆಲ್ಲಗೆ ಭುಜದ ಮೇಲೆ ಕೈ ಇಟ್ಟರು, ಸಮಾಧಾನ ನೀಡುವ ಮೃದುತನ ಅಲ್ಲಿತ್ತು. ಯಾರೆಂದು ಕಣ್ತೆರೆದು ನೋಡಿದ ಸದಾನಂದ. ಕೃಷ್ಣನ್ ಬಂದು ನಿಂತಿದ್ದರು.  ಹುಸಿನಗು ಬೀರುತ್ತಾ ಭುಜದ ಮೇಲೆ ಕೈ ಹಾಕಿ ಸದಾನಂದನ ಪಕ್ಕ ಕುಳಿತರು.


ಕೃಷ್ಣನ್, ಆ ಡಿಪಾರ್ಟ್ಮೆಂಟಿನ ಯೂನಿಯನ್ನನ್ನು ಪ್ರತಿನಿಧಿ. ಒಳ್ಳೆಯ ಗೆಳೆಯರೇ ಆದರೂ, ಅಂತಹ ಆತ್ಮೀಯವಾಗಿ ಮಾತನಾಡುವಷ್ಟು ಇರಲಿಲ್ಲ, ಅಥವಾ ಅವಕಾಶ ಒದಗಿರಲಿಲ್ಲ. ಎಲ್ಲರೊಡನೆಯೂ ಸ್ನೇಹದಿಂದ ಮಾತನಾಡಿಕೊಂಡು, ಸದಾ ಹಸನ್ಮುಖಿಯಾಗಿ, ಚಟುವಟಿಕೆಯಿಂದ ಓಡಾಡಿಕೊಂಡಿದ್ದರೂ, ಸದಾನಂದನೇನು ಅವರನ್ನು ಹತ್ತಿರದಿಂದ ಅರಿತಿರಲಿಲ್ಲ.

ಅವರು ಬಳಿ ಬಂದು ಕುಳಿತದ್ದು ಈ ಸಮಯದಲ್ಲಿ ಅವನಿಗೆ ಕೊಂಚ ಮುಜುಗರವೇ ಆಯ್ತು.

" ಬೇಜಾರು ಮಾಡ್ಕೋಬೇಡಿ ಸದಾನಂದ್, ನಾನು ನಿಮ್ಮ ಕಡೇನೆ ಇರೋದು, ಆದರೆ ಏನ್ಮಾಡೋದು ಹೇಳಿ, ಎಲ್ಲರಿಗೂ ವಿರುದ್ಧವಾಗಿ ಮಾತಾಡೋಕೆ ಆಗಲ್ವೇ".

" ಹಾಗಿದ್ದರೆ, ಅಲ್ಲಿ ಎಲ್ಲರೂ ನನ್ನ ವಿರುದ್ಧ ಮಾತಾಡುವಾಗ ನೀವು ನನ್ನ ಪರವಾಗಿ ಏನಾದ್ರೂ ಮಾತನಾಡಬಹುದಿತ್ತು ಅಲ್ವಾ".

" ಮಾತಾಡ್ತೀನಿ ರಾಜು, ಮಾತಾಡ್ತೀನಿ, ಆದರೆ ಗುಂಪಿನಲ್ಲಿ ಅಲ್ಲ. ನನಗೆ ಗೊತ್ತು ನೀವು ಇಷ್ಟೊಂದು ಬೇಜಾರು ಮಾಡ್ಕೋಳಕ್ಕೆ ಕಾರಣ ಆ ರಾಮಣ್ಣ ನಿಮಗೆ ಮಾಡಿದ ನಂಬಿಕೆ ದ್ರೋಹ ಅಂತ. ಅದೊಂದು ರೀತೀಲಿ ನಿಮಗೆ ಶಾಕ್ ಆಗಿರಬೇಕು."

ಅವನಿಗೆ ಆಶ್ಚರ್ಯ ಆಯ್ತು, ಈಗ ಕೃಷ್ಣನ್ ಅವರ ಕಡೆ ತಿರುಗಿ ನೋಡಿದ. ಅವರ ಮಾತುಗಳಲ್ಲಿ ಅವನ ಬಗ್ಗೆ ಕಳಕಳಿ, ಅನುಕಂಪ ಇತ್ತು.

“ಹೌದು ಸದಾನಂದ್, ನಿಮ್ಮಿಬ್ಬರ ನಡುವೆ ಎಂತಹ ಆತ್ಮೀಯತೆ ಇದೆ ಅಂತ ನಾನೂ ನೋಡಿದ್ದೀನಿ. ನೀವು ರಾಮಣ್ಣನ ಮೇಲೆ ಇಟ್ಟ ನಂಬಿಕೆ, ವಿಶ್ವಾಸದಿಂದ, ನಿಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಹೇಳಿಕೊಂಡ್ರಿ, ಆದ್ರೆ, ಅವನು ಮಾಡಿದ್ದು ತುಂಬಾನೇ ತಪ್ಪು ಬಿಡಿ. ನೀವು ಅವನ ಮೇಲಿಟ್ಟಿದ್ದ ನಂಬಿಕೆಗೆ ಮೋಸ ಮಾಡ್ದ",

ಕ್ಷಣ ಕಾಲ ಯೋಚಿಸಿದ ನಂತರ ಮತ್ತೆ ಮಾತು ಮುಂದುವರೆಸಿ "ಹಾಗೆ ನೋಡಕ್ಕೆ ಹೋದ್ರೆ ರಾಮಣ್ಣ ಒಳ್ಳೆಯವನೇ, ಆದ್ರೆ ದುಡುಕೋದು ಜಾಸ್ತಿ, ಬೇಕಿದ್ರೆ ನೋಡಿ, ಇನ್ನೊಂದು ಗಂಟೇನಲ್ಲಿ ಅವನೇ ಬಂದು ನಿಮ್ಮನ್ನ ಮಾತಾಡ್ತಾನೆ.

"ಯಾರಿಗೆ ಬೇಕು, ಒಂದು ಸಲ ಅವರ ಬುದ್ಧಿ ಗೊತ್ತಾದ ಮೇಲೆ, ಅವರೆಷ್ಟು ಮಾತಾಡಿದರೂ ಅಷ್ಟೇನೆ".

ಅಷ್ಟರಲ್ಲಿ ರಾಮ ಅಲ್ಲಿಗೆ ಬಂದ.

 ಅವನನ್ನು ನೋಡಿ ಕೃಷ್ಣನ್ "ಹೋಗೋ ರಾಮ, ನಿಮ್ಮಣ್ಣಂಗೆ ಒಂದು ಲೋಟ ಬಿಸಿ ಬಿಸಿ ಕಾಫಿ ತೊಗೊಂಬಾ", ಎಂದರು.

"ತಂದಿವ್ನಿ ಕಾಣಣ್ಣೋ", ಎನ್ನುತ್ತಾ ರಾಮ ಸದಾನಂದನ ಮುಂದೆ ಬಿಸಿ ಕಾಫಿ ಹಿಡಿದ.

"ನೋಡಿ, ಆ ರಾಮಣ್ಣನ ಬಗ್ಗೆ ತಲೆಕೆಡಿಸಿಕೊಳ್ಳೋದು ಬಿಡಿ. ಈ ರಾಮನ್ನ ನೋಡಿ, ಎಷ್ಟು ಮುಗ್ಧ, ನಿಮ್ಮ ತಮ್ಮನ ತರ ನಿಮ್ಮ ಹಿಂದೆ ಸುತ್ತುತ್ತಾನೆ. ಇಂತಹ ಪ್ರೀತಿಗೆ ಬೆಲೆ ಕೊಡಕ್ಕಾಗಲ್ಲ. ಏ ರಾಮ, ನೋಡ್ಕಳ್ಳೋ ನಿಮ್ಮಣ್ಣನ್ನ," ಎನ್ನುತ್ತಾ ಕೃಷ್ಣನ್ ಅಲ್ಲಿಂದ ಹೊರಟರು.

ಅವರೊಡನೆ ಮಾತನಾಡಿದ ಮೇಲೆ ಮನಸ್ಸು ಸ್ವಲ್ಪ ತಿಳಿಯಾಗಿತ್ತು. ರಾಮ ಕೊಟ್ಟ ಕಾಫಿ ಕುಡಿದು, ಮುಂದೇನು ಎಂದು ಯೋಚಿಸುವ ಹದಕ್ಕೆ ಬಂದಿದ್ದ ಸದಾನಂದ.

"ಅಣ್ಣಾ ಚುರ್ರಾ?"

"................."

"ಅಣ್ಣಾ ಕುಂಯ್ಯಾ"

".....…........"

"ಏಯ್ ರಾಮಾ, ನನ್ಕೈಲಿ ಏಟು ತಿಂತೀಯಾ ಈಗ",

"ಯಾಕಣ್ಣೋ, ನನ್ಮೇಲೆ ಕೋಪ ಮಾಡಿಕೊಂಡು ಏನುಪ್ಯೋಗ? ಸರಿ ಬಿಡು ನಾನೋಗ್ತೀನಿ".

"ಏಯ್ ರಾಮಾ ಕೂತ್ಕೋ ಬಾ ಇಲ್ಲಿ, ಅದೇನು ನನಗೆ ಇದ್ದಕ್ಕಿದ್ದ ಹಾಗೆ ಕಾಫಿ ತಂದ್ಕೊಟ್ಟೆ" ಅವನೊಡನೆ ಏನಾದರೂ ಮಾತನಾಡಬೇಕೆಂದು ಕೇಳಿದ ಸದಾನಂದ.

"ಅದಂಗಲ್ಲ ಅಣ್ಣಾ, ನಾನು ಲೋಟ್ಗೋಳ್ನ ತಗೊಂಡೋಗೋವ ಅಂತ ಅಲ್ಲಿಗ್ ಬಂದಾಗ, ಎಲ್ರೂ ಸೇರ್ಕೊಂಡು ನಿಮ್ಮನ್ನ ಅಮರ್ಕೊಳ್ತಾ ಇದ್ದಿದ್ದು ನೋಡ್ದೆ, ಎಲ್ರೂ ಅಷ್ಟು ಮಾತಾಡ್ತಾ ಇದ್ರೂ, ನೀವು ಮಾತ್ರ ಸುಮ್ಕೇನೆ ನಿಂತಿದ್ರಿ. ಆ ನಿಮ್ಮ ಕ್ಲೋಸ್ ಪ್ರೆಂಡು ರಾಮಣ್ಣೋರು, ಆ ಪಮೋದಣ್ಣ ಎಲ್ಲಾ ಅಂಗೆ ಒಂದೇ ಸಲಕ್ಕೆ ಕತ್ತೆಕಿರುಬ ಬಿದ್ದಂಗಾ ಬೀಳೋದು ನಿಮ್ಮೇಲೆ. ಆಮ್ಯಾಕೆ ನೀವು ಇತ್ಲಾಗೆ ಬಂದ್ರಿ, ನಂಗೆ ಶಾನೆ ಬೇಜಾರಾಯ್ತಣ್ಣೋ. ನಿಮ್ಮನ್ನ ಮಾತ್ನಾಡ್ಸೋಣ ಅಂತ ಬಂದೆ, ಅಷ್ಟೊತ್ಗೆ ಆ ಕೃಷ್ಣಣ್ಣೋರು ನಿಮ್ತಾವ ಮಾತಾಡಕ್ ಬಂದ್ರು", ಎಂದು ಮಾತು ನಿಲ್ಲಿಸಿದ.

ಅವನು ತನ್ನ ಬಗ್ಗೆ ತೋರುತ್ತಿರುವ ಪ್ರೀತಿಗೆ ಮೂಕನಾಗಿದ್ದ ಸದಾನಂದ.

“ಅಣ್ಣೋ ಎಚ್ಗೆ ಬೇಜಾರು ಮಾಡ್ಕೋಬೇಡ್ರಣ್ಣೋ, ಇವತ್ತು ಅಬ್ಬ ಬೇರೆ...”,

“ನನಗೂ ಹಬ್ಬ, ಪೂಜೆ, ಓಡಾಟ, ಹಬ್ಬದೂಟ ಎಲ್ಲಾ ಇಷ್ಟಾನೇ ಕಾಣೋ ರಾಮ, ಆದ್ರೆ ಅದನ್ನ ಮಾಡಬೇಕಾಗಿರೋದು ಇಲ್ಲಲ್ಲ. ಮಾಡ್ಬೇಕಾಗಿರೋ ಕಡೆ ಮಾಡಿದ್ರೆ ನಾನೂ ಜೋರಾಗೇ ಓಡಾಡ್ತೀನಿ. ಇಲ್ಲೂನು ನಮ್ಮ ಪಾಲಿನ ಕೆಲಸ ಮುಗಿಸಿ ಆ ಮೇಲೆ ಸಣ್ಣದಾಗಿ ದೇವರ ಫೋಟೋಗೆ ಒಂದು ಪೂಜೆ ಮಾಡಿದ್ರೆ, ನಾನೂ ಆಷ್ಟೊಂದು ತಲೆ ಕೆಡಸಿಕೊಳ್ತಿರಲಿಲ್ಲ”.

“ಈಗೇನಾಯ್ತಣ್ಣ, ನಿಮ್ಗುನೂವೇ ಬರ್ಬೇಡ ಅಂದ್ರಾ?” ರಾಮ ಕೇಳಿದ.

“ನಿಮ್ಗೂನೂವೆ ಅಂದ್ರೆ? ಯಾಕೆ ಯಾರಿಗಾದ್ರೂ ಬರಬೇಡ ಅಂದಿದ್ದಾರಾ?” ಸದಾನಂದನಿಗೆ ಆಶ್ಚರ್ಯವಾಯ್ತು.

“ಅದೂ ಅಂಗಲ್ಲಣ್ಣ, ಮತ್ತೇ ಮತ್ತೇ,  ಏನಿಲ್ಲ ಬಿಡಣ್ಣ, ಒತ್ತಾಯ್ತು, ನಾನು ಕ್ಯಾಂಟೀನ್ಗೋಗ್ತೀನಿ”.

“ಏಯ್ ರಾಮ, ಏನದು ಹೇಳು, ಮತ್ತೆ ನಿನಗೆ ಸ್ನಾನ ಮಾಡಿಲ್ಲ, ಕ್ಲೀನಾಗಿಲ್ಲ, ಬರಬೇಡ ಅಂತೇನಾದ್ರು ಹೇಳಿದ್ನೇನೋ ಆ ಪ್ರಮೋದ?”.

“ಅಣ್ಣ ಇಲ್ಲೋಡಿಲ್ಲಿ, ಈ ಶರ್ಟ್ ನಾಗೆ ಒಂದು ಸಣ್ಣ ತೂತ ಇತ್ತಣ್ಣೋ, ಅದಿದ್ದಿದ್ದೇ ಗೊತ್ತಾಗ್ತಾ ಇರ್ಲಿಲ್ಲ. ಈಗ ನಾನು ಗ್ಲಾಸುಗಳ್ನ ಎತ್ಕೊಂಡು ಹೋಗೋಣ ಅಂತ ಹೋದಾಗ, ಆ ಪಮೋದಣ್ಣ “ಏನೋ ಇವತ್ತಾದ್ರೂ ಒಳ್ಳೇ ಬಟ್ಟೆ ಆಕ್ಕೊಂಡಿದ್ದೀಯಾ ತಾನೆ ಅಂತ ಅತ್ರ ಕರ್ದು, ಕಂಕುಳ್ತಾವ ಇದ್ದ ಈ ತೂತನ್ನ ಅದೆಂಗೋ ನೋಡ್ಬುಟ್ರು ಕಾಣಣ್ಣೋ. ಅಬ್ಬದ್ ದಿನ ತೂತ ಇರೋ ಬಟ್ಟೆ ಆಕ್ಕೋಬಾರ್ದು ಅಂತ ಗೊತ್ತಿಲ್ವ ನಿಂಗೆ” ಅಂತಂದ್ರು.

ನಾನದಕ್ಕೇ “ ಇಲ್ಲಣ್ಣ, ಈ ಶರ್ಟು ಚೆನ್ನಾಗೇ ಐತೇ, ನೋಡೀನೇ ಆಕ್ಕೋಂಡು ಬಂದೀವ್ನಿ” ಅಂದೆ, ಎನ್ನುತ್ತಾ ರಾಮನ ಕಣ್ಣಲ್ಲಿ ನೀರೂರಲಾರಂಭಿಸಿತ್ತು. ಅಳುತ್ತಳುತ್ತಲೇ “ನೋಡಣ್ಣ ಎಲ್ಡು ಬೆಳ್ಳಾಕಿ ಈ ತೂತನ್ನ ಎಂಗೆ ಅಗ್ಲ ಮಾಡವ್ನೆ ಅಂತ, ಬಿಟ್ಬುಡಣ್ಣ, ನಾನು ಬರೋದೆ ಇಲ್ಲ, ನನ್ತಾವ ಇರೋದು ಇದೊಂದೇ ಒಳ್ಳೆ ಅಂಗಿ ಅಂದ್ರೂ ಕೇಳ್ಲಿಲ್ಲ, ಓಗು, ಈಗ ಬೇರೆ ಶರ್ಟು ಆಕ್ಕೊಂಬಾ ಅಂತ ಜೋರಾಗಿ ನಗಾಡಿದ್ರು”.

ರಾಮ ಬಿಕ್ಕಳಿಸಿ ಅಳುತ್ತಿದ್ದ. ದೂರದಿಂದಲೇ ಕಾಣುವಂತೆ, ಜೋತಾಡುವ ಹರಿದ ಬಟ್ಟೆಯಂತೆ ರಾಮನ ಶರಟು ಹರಿದಿತ್ತು.

ಪ್ರಮೋದ ವಿಕೃತ ಮನಸ್ಸಿನ ಬಗ್ಗೆ ಹೇಸಿಗೆ ಮೂಡಿತ್ತು. ಮುಗ್ಧ, ಬಡ ಹುಡುಗನ ಮೇಲೆ ಅವನು ನಡೆದುಕೊಳ್ಳುವ ಪರಿಗೆ, ಕೋಪ ಉಕ್ಕೇರಿತ್ತು. ಇದರ ಬಗ್ಗೆ ಅವನನ್ನು ವಿಚಾರಿಸದೆ ಇರಬಾರದು, ಸೂಕ್ತ ಕ್ರಮ ಜರುಗಿಸಬೇಕೆಂದು ಮನಸ್ಸು ಯೋಚಿಸಿತು. ಅವನ ಬಳಿ ಹೋಗಿ, “ನೀನು ಮಾಡುವ ಹಬ್ಬ, ಪೂಜೆಗಳಿಗೆ ಅರ್ಥವೇ ಇಲ್ಲ ಎಂದು ಕೂಗ ಬೇಕೆನ್ನಿಸಿತು”.

“ರಾಮ ನಡಿ ಹೋಗೋಣ”, ರಾಮನನ್ನು ಕೈ ಹಿಡಿದು ಎಳೆದುಕೊಂಡು ಒಳಗೆ ಹೊರಟ.

“ಅಣ್ಣಾ ಬ್ಯಾಡ ಕಾಣಣ್ಣ, ನಾನು ಒಳಕ್ಕೆ ಬರಾಕಿಲ್ಲ, ಕ್ಯಾಂಟೀನ್ಗೋಗಿ, ಬ್ಯಾಗೆತ್ಕೊಂಡು ಊರಿಗೋಗ್ತೀನಿ, ಇವತ್ತು ಶನಿವಾರ ಬೇರೆ”.

“ಇರ್ಲಿ ಊರಿಗೋಗೀವಂತೆ, ಮೊದ್ಲು ನನ್ಜೊತೆ ಬಾ”

“ಎಲ್ಲೀಗಣ್ಣ?”

“ಹೇಳ್ತೀನಿ ಬಾ, ನೀನು ಕ್ಯಾಂಟೀನ್ ಗೆ ಹೋಗಿ, ನಿನ್ನ ಟೈಮ್ ಮುಗಿದ ಮೇಲೆ, ನಿನ್ನ ಬ್ಯಾಗ್ ಎತ್ಕೊಂಡು ಗೇಟ್ ಹತ್ರ ಕಾಯ್ತಾ ಇರು, ನಾನೂ ಬರ್ತೀನಿ”, ಎಂದು ಅವನನ್ನು ಕಳುಹಿಸಿದ.

ಅಷ್ಟು ಹೊತ್ತಿಗಾಗಲೇ ಸದಾನಂದನದೂ ಅಂದಿನ ಕೆಲಸದ ಸಮಯ ಮುಗಿದಿತ್ತು. ಗೋವಿಂದರಾವ್, ಗೌಡ, ಗೋಪಾಲ, ಕೃಷ್ಣನ್ ಅವರುಗಳಿಗೆ ತಿಳಿಸಿ ಹೊರಬಂದ.

ರಾಮ ಗೇಟಿನ ಬಳಿ ಕಾಯುತ್ತಿದ್ದ. “ಬಾರೋ ರಾಮ, ಗಾಡೀಲಿ ಹಿಂದೆ ಕೂತ್ಕೋ”.

“ಅಣ್ಣ ನಮ್ಮೂರಿನ್ ಬಸ್ಸಿಗೆ ಟೈಮಾಯ್ತೈತೆ ಕಾಣಣ್ಣೋ, ಎಲ್ಲಿಗ್ ಕರ್ಕೋಂಡು ಓಗ್ತಾ ಇದ್ದೀಯಣ್ಣ?”

“ಬಾರೋ ಯೋಚ್ನೆ ಮಾಡ್ಬೇಡ, ನಾನೇ ಬಿಡ್ತೀನಿ ನಿಮ್ಮೂರ್ಗೆ, ಎಷ್ಟು ಮಹಾ ದೂರ ಇದೆ”.

ರಾಮ ಸದಾನಂದನ ಹಿಂದೆ ಕುಳಿತ. ಯಶವಂತಪುರದಿಂದ ತುಮಕೂರು ರಸ್ತೆಯಲ್ಲಿ ಸಾಗಿ, ಪೀಣ್ಯ, ದಾಸರಹಳ್ಳಿಗಳ ದಾಟಿದ ನಂತರ ರಾಮನ ಊರು. ರಾಮ ಗಟ್ಟಿಯಾಗಿ ಅವನನ್ನು ಹಿಡಿದು ಕುಳಿತಿದ್ದ.



ದಾಸರಹಳ್ಳಿಗೆ ಬಂದಾಗ ಗಾಡಿ ನಿಲ್ಲಿಸಿ, ಹೋಟೆಲ್ ಗೆ ಕರೆದುಕೊಂಡು ಹೋದೆ. ಸದಾನಂದ ಅವನಿಗಿಷ್ಟವಾದ ಪೂರಿಸಾಗು ಇಬ್ಬರಿಗೂ ತರಿಸಿ, ಆಮೇಲೆ ಜಾಮೂನ್ ತರಿಸಿದ. ರಾಮ ಬೇಡ ಬೇಡವೆನ್ನುತ್ತಲೇ ಹೊಟ್ಟೆ ತುಂಬಾ ತಿಂದ.  

“ಅಣ್ಣಾ ಏನಣ್ಣ ಇಶೇಷ, ಸೀ ಎಲ್ಲಾ ಕೊಡುಸ್ತಿದ್ದೀಯಾ”,

“ಇವತ್ತು ಹಬ್ಬ ಅಲ್ವೇನೋ”,

“ಏಯ್ ಎಂತಾ ಅಬ್ಬ ಬಿಡಣ್ಣ, ನೀನು ಜಗಳಾ ಮಾಡ್ಕೊಂಡು, ನಾನು ಅಂಗೀನೆಲ್ಲಾ ಅರ್ಕೊಂಡು ಬಂದಿದ್ದೀವಿ...., ನಮ್ಮಮ್ಮಂಗೆ ಏನೇಳೋದು ಗೊತ್ತಿಲ್ಲ ಈಗ”

“ನಾನೆ ಏನಾದ್ರು ಹೇಳ್ತೀನಿ ಬಿಡು, ಯೋಚ್ನೆ ಮಾಡ್ಬೇಡ.”

“ಅಣ್ಣೋ ದಿಟ್ವಾಗ್ಲೂ ನೀನು ನಮ್ಮನೇಗೆ ಬರ್ತೀಯಾ, ಬ್ಯಾಡ್ ಕಾಣಣ್ಣೋ”,

“ಇರ್ಲಿ ನಡೆಯೋ ಏನಾಗಲ್ಲ” ಎನ್ನುತ್ತಾ ಅವನನ್ನು ಕರೆದುಕೊಂಡು ಹೋಟೆಲ್ನಿಂದ ಹೊರ ಬಂದ.

ಅಲ್ಲಿಯೇ ಪಕ್ಕದ ಒಂದು ಅಂಗಡಿಯಲ್ಲಿ ಬಣ್ಣಬಣ್ಣದ ಬಟ್ಟೆಗಳು ನೇತಾಡುತ್ತಿದ್ದವು. ಅದರಲ್ಲಿ ಗಂಡು ಮಕ್ಕಳು, ಹೆಣ್ಣು ಮಕ್ಕಳ ಬಟ್ಟೆಗಳೂ ಇದ್ದವು. ರಾಮನನ್ನು ಒಳಗೆ ಕರೆದುಕೊಂಡು ಹೋಗಿ, ಅವನ ಅಳತೆಯ ಬಟ್ಟೆಗಳನ್ನು ತೋರಿಸಲು ಅಂಗಡಿಯವನಿಗೆ ಹೇಳಿದ. ರಾಮನ ಅಳತೆಗೆ ಹಿಡಿದಾಗ, ಅವನಿಗೆ ಅಣ್ಣ ಏನು ಮಾಡುತ್ತಿದ್ದಾನೆಂದು ಅರಿವಾಗಿತ್ತು. ಬೇಡ ಕಣಣ್ಣೋ ಬೇಡ ಕಣಣ್ಣೋ ಎನ್ನುತ್ತಿದ್ದರೂ ಆ ಮುಗ್ಧ ಮುಖದಲ್ಲಿ ಸಂತೋಷದ ಛಾಯೆ ಮೂಡಿತ್ತು. ಅವನಿಗೆ ಸರಿ ಹೊಂದುವ ಎರಡು ಜೊತೆ ಬಟ್ಟೆ ಆರಿಸಿ ಪಕ್ಕಕ್ಕಿರಿಸಿದ. 


“ರಾಮ ನಿಮ್ಮ ವೆಂಕಟಮ್ಮನಿಗೂ ಯಾವುದಾದರೂ ನೀನೆ ಆರಿಸೋ”.

“ಅಣ್ಣಾ, ಅವಳಿಗೆ ಕೂಡಾನೂವಾ, ಬೇಡ ಕಣಣ್ಣೋ, ನಿಂಗೆ ಶ್ಯಾನೆ ದುಡ್ಡಾಗ್ತೈತೆ”,

“ಇರ್ಲಿ ಆರಿಸಿಕೊಳ್ಳೋ, ಅವಳು ಸ್ಕೂಲಿಗೆ ಹೋಗೋ ಹುಡ್ಗಿ ಅಲ್ವಾ”,

ರಾಮನ ಮುಖ ನನ್ನ ಮಾತಿನಿಂದ ಉಬ್ಬಿ ಹೋಗಿತ್ತು. 

ತಂಗಿಯ ಅಳತೆಯ ಚೀಟಿ ಬಟ್ಟೆಯ ಲಂಗಗಳನ್ನು ಅರಿಸಿದ. 

ಅಂಗಡಿಯಿಂದ ಹೊರ ಬಂದಾಗ ರಾಮ ಆ ಬಟ್ಟೆಯ ಪೊಟ್ಟಣಗಳನ್ನೇ ಸವರುತ್ತಾ ಸದಾನಂದನ ಹಿಂದೆ ಬಂದ. 

ಮತ್ತೊಂದು ಸ್ಟೇಷನರಿ ಅಂಗಡಿ ಕಡೆ ಹೋದಾಗ, “ ಅಣ್ಣಾ ಇನ್ನೇನಣ್ಣ ಮತ್ತೆ, ಊರ್ಗೋಗೋವಾ ಅಲ್ವಾ” ಎಂದ ರಾಮ.

“ಇನ್ನೊಂದು ಕಡೇ ಐಟಮ್ಮು, ಬಾ ಇಲ್ಲಿ”, ಎಂದು ಹೇಳಿ, ಅಂಗಡಿಯೊಳಗೆ ಕರೆದುಕೊಂಡು ಹೋದ.

ಅಲ್ಲಿ ಪುಟ್ಟ ಶಾಲಾ ಮಕ್ಕಳಿಗಾಗುವಂತೆ, ನಾಲ್ಕು ನೋಟ್ ಪುಸ್ತಕ, ಒಂದೆರಡು, ಪೆನ್ಸಿಲ್, ರಬ್ಬರ್ ಎಲ್ಲಾ ಕೊಂಡು, ಒಂದು ಚೀಲದಲ್ಲಿ ಹಾಕಿಸಿ, “ಇದು ನಿನ್ನ ವೆಂಕಟಮ್ಮನಿಗೆ” ಎಂದು ರಾಮನ ಕೈಗಿತ್ತ ಸದಾನಂದ.

ಅಂಗಡಿಯಿಂದ ಹೊರ ಬಂದ ಕೂಡಲೇ ರಾಮ, ಬಟ್ಟೆ ಮತ್ತು ಪುಸ್ತಕ ಎರಡೂ ಪೊಟ್ಟಣಗಳನ್ನು ನೆಲದ ಮೇಲಿಟ್ಟುಬಿಟ್ಟು, ಎರಡೂ ಕೈಗಳಿಂದ ಸದಾನಂದನನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಟ್ಟ.

“ಏಯ್ ರಾಮ, ಯಾಕೋ, ಬಿಡೋ..” ಎಂದಾಗ ರಾಮ ಕತ್ತೆತ್ತಿ ಸದಾನಂದನ ಮುಖ ನೋಡಿ. ಆ ಮುಖದಲ್ಲಿ ಸಂತೋಷದ ನಗು, ಅಳು ಎರಡೂ ಒಟ್ಟಿಗೆ ಮೂಡಿತ್ತು. ಬೆಲೆ ಕಟ್ಟಲಾಗದ ಪ್ರೀತಿಯ ಹೊನಲು ಹರಿದಿತ್ತು. ಆ ಮುಗ್ಧ ಮುಖವೇ ಸದಾನಂದನಿಗೆ ಗಣೇಶ, ಕೃಷ್ಣ, ರಾಮ ಎಲ್ಲರ ಮುಖವೂ ಕಂಡಿತ್ತು.

ಸದಾನಂದನಿಗೂ ನಿಜವಾದ ಹಬ್ಬವೊಂದನ್ನು ಆಚರಿಸಿದ ತೃಪ್ತಿಯಿಂದ ಮನಸ್ಸು ನೆಮ್ಮದಿಗೊಂಡಿತ್ತು. ರಾಮನ ಸಂತೃಪ್ತಿಯ ಮೊಗದಲ್ಲಿ ಹೊಸತೊಂದು ಬೆಳಕನ್ನು ಕಂಡ ಸದಾನಂದ. ರಾಮ ಬೆಳೆದು ಒಂದು ಒಳ್ಳೆಯ ನೌಕರಿ ಹಿಡಿಯುವವರೆಗೂ ಸದಾನಂದನೇ ರಾಮನ ತಂಗಿಯ ಓದಿಗೆ ಸಂಪೂರ್ಣ ಸಹಾಯ ನೀಡಿದ. ಅಲ್ಲದೆ ಸದಾನಂದ ಗೋಪಾಲ, ಚಂದ್ರ, ಮಹೇಶ ಇವರುಗಳೊಡನೆ ಮಾತನಾಡಿ  ರಾಮನಿಗೂ ಕೆಲಸ ಮಾಡಿಕೊಂಡೇ ಓದಲು ಪ್ರೇರೇಪಿಸಿ ಅವನಿಗೂ ಒಂದು ಒಳ್ಳೆಯ ಮಾರ್ಗ ರೂಪಿಸಿದ.



Comments

  1. ಸ್ವಾರಸ್ಯವಾದ, ಹೃದಯಸ್ಪರ್ಶಿಯಾದ ಕತೆ ಬರೆದಿದ್ದೀರಿ. ಅಭಿನಂದನೆಗಳು. ಹೀಗೆಯೇ ಇನ್ನೂ ಉತ್ತಮ ಕತೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.

    ReplyDelete
  2. ನಾಟಕ ಸಂಭಾಷಣೆಯಂತೆ ಸ್ವಾರಸ್ಯಕರವಾಗಿ ಮೂಡಿಬಂದಿದೆ ತಮ್ಮ ಲೇಖನ. ಸನ್ನಿವೇಶಗಳು ಕಣ್ಣಿಗೆ ಕಟ್ಟದಂತೆ,ಹಾಸ್ಯ ,ಸೂಕ್ಷ್ಮತೆಯ ವಿಚಾರಗಳೂ ಅಡಗಿ ಸೊಗಸಾದ ಅರ್ಥಬರುವ ಹಾಗೆ ಅಂತ್ಯ ಮಾಡಿದ್ದೀರಿ. ಲೇಖನಕ್ಕೆ ಧನ್ಯವಾದಗಳು. ಚಿಲುಮೆ ಆರಂಭದಿಂದಲೂ ವಿಭಿನ್ನ ರೀತಿಯ ಸೊಗಸಾದ ಲೇಖನಗಳನ್ನು ಬರೆದು ಹಂಚಿಕೊಳ್ಳುತ್ತಿರುವ ತಮಗೆ ಧನ್ಯವಾದಗಳು

    ReplyDelete

Post a Comment