ಹಬ್ಬ - ಭಾಗ 1

ಹಬ್ಬ - 1

ಲೇಖನ - ಶ್ರೀ ನಾಗಶೈಲ ಕುಮಾರ್ 



ರೀ, ಹಬ್ಬಕ್ಕೆ ಸಾಮಾನುಗಳು ತರಬೇಕು, ಎಲ್ಲಾ ಚೀಟಿ ಬರೆದಿಟ್ಟಿದ್ದೀನಿ. ಸಂಜೆಗೆ ಅಂಗಡಿ ಕಡೆ ಹೋಗಿ ಬರಬೇಕು” ಸದಾನಂದನಿಗೆ ಪತ್ನಿ ಸುನಂದ ನೆನಪಿಸಿದಳು. 

“ಹಾಗೇ ರಾಮನ ಮನೆ ಕಡೆ ಹೋಗಿ ಬರ್ತೀನಿ, ನಿನ್ನೆ ಫೋನ್ ಮಾಡಿದ್ದ. ಅಣ್ಣಾ ಈ ಸಲನಾದ್ರೂ ಗಣೇಶನ ಹಬ್ಬಕ್ಕೆ ಅಮ್ಮಾವ್ರನ್ನೂ ಕರ್ಕೊಂಡು ನಮ್ಮನೇಗೆ ಬನ್ನಿ ಅಂದ. ನಾನು ಹಬ್ಬದ ದಿನ ಬೇಡಪ್ಪ ಯಾವಾಗಲಾದ್ರ್ರೂ ಮುಂಚೇನೆ ಬಂದು ಹೋಗ್ತೀನಿ ಅಂದೆ” ಎಂದುತ್ತರಿಸಿದ ಸದಾನಂದ. 

“ಅದ್ಯಾಕೆ ಹಾಗೆ ಹೇಳಿದ್ರಿ? ಎರಡ್ಮೂರು ವರ್ಷ ಆಯ್ತಲ್ವೆ ನಾವು ಹಬ್ಬಕ್ಕೆ ಅವರ ಮನೆಗೆ ಹೋಗಿ. ನಾನೂ ಬರ್ತೀನಿ, ಹಬ್ಬದ ದಿನಾನೆ ಅವರ ಮನೆಗೆ ಹೋಗ್ಬರೋಣ” ಎಂದಳು ಸುನಂದ.

ಬಂಧುವಲ್ಲ, ಬಳಗವಲ್ಲ, ಆದರೂ ಅದೇನು ನಂಟೋ ಈ ರಾಮನದು. ತನ್ನ ಮದುವೆಗೆ ಮುಂಚೆ ಪರಿಚಯವಾದ ರಾಮನ ಜೊತೆಗಿನ ಒಡನಾಟ ಮದುವೆಯ ನಂತರವೂ ಮುಂದುವರೆಯುವುದಷ್ಟೇ ಅಲ್ಲದೆ, ರಾಮನು ಸುನಂದಳ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಅವಳಿಗೂ ಆಪ್ತನಾಗಿದ್ದ. ಸದಾನಂದ ಹೇಳಿದ ಹಿಂದೆ ನಡೆದ ಗಣೇಶನ ಹಬ್ಬದ ಘಟನೆಯ ವಿವರಗಳನ್ನು ಕೇಳಿದಾಗಿನಿಂದ, ಗಂಡನ ಮತ್ತು ರಾಮನ ಬಗ್ಗೆ ಹೆಮ್ಮೆ ಅಭಿಮಾನಗಳು ಉಂಟಾಗಿತ್ತು.

ಸುನಂದಳ ಮಾತಿನಿಂದ ಸದಾನಂದನಿಗೆ ಸಂತೋಷವೇ ಆಯಿತು. ಹಬ್ಬ ಆಚರಿಸುವ ಹೊಸತೊಂದು ವಿಧಾನ ರಾಮನ ಸ್ನೇಹದಿಂದ ತನಗೆ ಗೋಚರಿಸಿತ್ತು. 

ಮರೆಯಲಾಗದ ಆ ದಿನ, ಮರೆಯಲಾಗದ ಆ ದಿನದಿಂದ ತಾನು ಹಬ್ಬಗಳನ್ನು ನೋಡುವ ಪರಿಯೇ ಬದಲಾಗಿತ್ತು. ಸದಾನಂದನ ಮನಸ್ಸಿನಲ್ಲಿ ಆ ದಿನಗಳ ನೆನೆಪು ಮತ್ತೆ ಮರುಕಳಿಸಿತ್ತು.

*************

ಸದಾನಂದ ಡಿಪ್ಲೊಮೋ ಮುಗಿಸಿ, ಯಶವಂತಪುರದ ಸಮೀಪ ಸರ್ಕಾರೀ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಿದ್ದ ದಿನಗಳವು. ಇನ್ನೂ ಮದುವೆಯೂ ಇರಲಿಲ್ಲ, ಮಾತುಗಾರ, ಹಾಸ್ಯಪ್ರಿಯ, ಮೃದು ಸ್ವಭಾವಗಳಿಂದಾಗಿ, ಎಲ್ಲರಿಗೂ ಅವನು ಬೇಕಾದವನಾಗಿದ್ದ. ಅವನ ವಯಸ್ಸಿನವರು, ಅವನಿಗಿಂತ ಹಿರಿಯರು, ಅಥವಾ ಕಿರಿಯರು ಯಾರೇ ಇರಲಿ, ಎಲ್ಲರೂ ಅವನ ಸ್ನೇಹಿತರೇ. 

ಕ್ಯಾಂಟೀನ್ ನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ರಾಮ, ಪ್ರತಿದಿನ ಬೆಳಗ್ಗೆ ಖಾಲಿಯಾದ ಕಾಫಿ ಲೋಟಗಳನ್ನ ತೆಗೆದುಕೊಂಡು ಹೋಗಲು ಬರುತ್ತಿದ್ದ. ರಾಮ ಸುಮಾರು ೧೨/೧೩ ವರ್ಷದ ಹುಡುಗ. ಗುಂಡುಗುಂಡಾಗಿ, ಕುಳ್ಳಗೆ, ಬಲು ಮುದ್ದಾಗಿ ಇದ್ದ, ಬಣ್ಣವಂತೂ ಕಡುಗಪ್ಪು. ಸದಾ ನಗುಮುಖವಿದ್ದು, ಹೊಳೆಯುವ ಕಣ್ಣುಗಳು,, ಅಚ್ಚುಕಟ್ಟಾದ ದಂತಪಂಕ್ತಿ ಆ ಕಪ್ಪು ಮುಖದಲ್ಲಿ ಎದ್ದು ಕಾಣುತ್ತಿದ್ದವು. ಆನಂದ, ಚಂದ್ರ, ಮಹೇಶ, ಗೋಪಾಲ ಎಂದರೆ ಅವನಿಗೆ ಏನೋ ಆತ್ಮೀಯತೆ, ಹಾಗೇ ಸಲಿಗೆ ಕೂಡ. ಆದರೆ ಸದಾನಂದ ಹಾಗೂ ಚಂದ್ರನ ಬಳಿ ಪ್ರತಿ ಸಲವೂ ಕೊಂಚ ಹೊತ್ತು ನಿಂತು, ಮಾತನಾಡಿ ಹೋಗುತ್ತಿದ್ದ. ಅವನೊಡನೆ ಕೊಂಚ ಹೊತ್ತು ಮಾತನಾಡದಿದ್ದರೆ ಮನಸ್ಸಿಗೆ ಸಮಾಧಾನ ಇರುತ್ತಿರಲಿಲ್ಲ. ಮುಗ್ಧ, ನಿಷ್ಕಪಟ ಮಾತುಗಳು ಮನಸ್ಸಿಗೆ ಹಿತ ನೀಡುತ್ತಿದ್ದವು. ವೆಂಕಟಾಪುರದಲ್ಲಿರುವ ತನ್ನ ಮನೆ, ತಾಯಿ, ತಂಗಿಯ ವಿಷಯ ಸದಾ ಹೇಳುತ್ತಿದ್ದ. ತಂಗಿ ವೆಂಕಟಮ್ಮನನ್ನು ಚೆನ್ನಾಗಿ ಓದಿಸಬೇಕೆಂದು ತುಂಬಾ ಆಸೆ ಇಟ್ಟುಕೊಂಡಿದ್ದ. ಅದಕ್ಕಾಗಿ ಕ್ಯಾಂಟೀನಿನಲ್ಲಿ ಹೆಚ್ಚು ಹೆಚ್ಚು ದುಡಿದು, ಅವಳ ಬಟ್ಟೆ, ಪುಸ್ತಕ, ಎಂದು ಹಣ ಸೇರಿಸುತ್ತಿದ್ದ.

ಅವನಿಗೆ ಮಾತನಾಡಲು ಕೇವಲ ಕನ್ನಡ ಮಾತ್ರ ಬರುತ್ತಿತ್ತು. ಆದರೆ ಅಲ್ಲಿ, ಕನ್ನಡ, ತೆಲುಗು, ತಮಿಳು ಮೂರು ಭಾಷೆಯವರೂ ಇದ್ದರು.

ಒಮ್ಮೆ ಸದಾನಂದ, ಚಂದ್ರ, ಗೋಪಾಲ, ಮಹೇಶ ನಾಲ್ವರೂ ಇದ್ದಾಗ ಬಂದ,

"ಅಣ್ಣೋ, ಅಣ್ಣೋ, ಅಣ್ಣೋ", ಅವನು ವೇಗವಾಗಿ ಮಾತನಾಡಿದರೆ, ಪೂರ್ತಿ ಪದಗಳು ಕೇಳುತ್ತಲೇ ಇರಲಿಲ್ಲ. "ಣೋಣೋಣೋ", ಎನ್ನುವ ಹಾಗೆ ಇರುತ್ತಿತ್ತು.

"ಯಾಕೋ ರಾಮಾ, ಏನಾಯ್ತು? ಸದಾನಂದ ಕೇಳಿದ.

"ಅಲ್ಲಣ್ಣ, ನೀನು ಕನ್ನಡ, ಈವಣ್ಣ ತಮಿಳು, ಈವಣ್ಣ ಮತ್ತೆ ಈವಯ್ಯ ಇಬ್ರೂ ತೆಲ್ಗು, ಆಂ..., ನಂಗೆ ಕನ್ನಡ ಬಿಟ್ರೆ, ಅದ್ಯಾವ್ದೂ ಗೊತ್ತಿಲ್ಲ. ಇನ್ಮೇಗಿಂದ ನಾವ್ಗೋಳು ಒಂದೇ ಬಾಷೆ ಮಾತಾಡಣ".

"ಸರಿ ಸರಿ, ಯಾವ ಭಾಷೆ ಮಾತಾಡೋಣ ಹೇಳು", ನಗುತ್ತಾ ಗೋಪಾಲ ಕೇಳಿದ.

"ಊಂ, ಒಂದ್ಕೆಲ್ಸ ಮಾಡಾಣ, ಹೊಸಾ ಭಾಷೆ ನಾವೇ ಶುರು ಮಾಡಣಾ" ಉತ್ಸಾಹದಿಂದ ರಾಮ ಹೇಳಿದ. "ದಿನಾಲೂ ಒಂದು ಪದ ಏಳ್ಕೋಡ್ತೀನಿ, ನೀವೆಲ್ಲಾ ಕಲ್ತ್ಕೋಳಿ".

ಅಂದಿನಿಂದ ಗೆಳೆಯರ ಹೊಸ ಪಾಠ ಪ್ರಾರಂಭ ಆಗಿತ್ತು. ಸದಾನಂದ ಚಂದ್ರ ಅಂತೂ, ತುಂಬಾನೇ ಸೀರಿಯಸ್ ಆಗಿ ರಾಮನ ಹತ್ರ ಪಾಠ ಹೇಳಿಸಿಕೊಂಡ್ರು.

"ಚುರ್ರಾ" ಅಂದ್ರೆ "ಚೆನ್ನಾಗಿದ್ದೀಯಾ?"

"ಕುಂಯ್ಯಾ" ಅಂದ್ರೆ "ನಾಷ್ಟ ಆಯ್ತಾ?"

"ಕಡಗ" ಅಂದ್ರೆ ಊಟ ಆಯ್ತಾ"

ಹೀಗೆ, ಇನ್ನೂ ಏನೇನೋ. ಯಾರ್ಯಾರಿಗೆ ಎಷ್ಟೆಷ್ಟು ಅರ್ಥ ಆಯ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ಅವನ ಹತ್ರ ಎಲ್ರೂ ಸುಮ್ನೆ ಈ ಪದಗಳನ್ನ ಬಳಸ್ತಾ ಇದ್ದರು

ಅವತ್ತು ರಾಮ ಬಂದಾಗ ಸದಾನಂದ ಯಾವುದೋ ತಲೆನೋವಿನ ಕೆಲಸದಲ್ಲಿ ತೊಡಗಿದ್ದ.

"ಅಣ್ಣಾ ಚುರ್ರಾ..."

" ಹ್ಞೂಂ"

"ಅಣ್ಣಾ ಕುಂಯ್ಯಾ"

" ಹ್ಞೂಂ"

" ಅಣ್ಣಾ ಕಡಗ"

" ಹ್ಞೂಂ"

" ಏನಣ್ಣೋ, ನಾ ಕೇಳಿದಕ್ಕೆಲ್ಲಾ, ಸುಮ್ಕೆ ಹ್ಞೂಂಗುಟ್ತೀಯಾ".

" ಮತ್ತಿನ್ನೇನು ಮಾಡ್ಲಿ, ಮೊದಲೇ ನಂಗೆ ತಲೆ ಕೆಟ್ಟೋಗಿದೆ, ಅದರಲ್ಲಿ ನೀನೊಬ್ಬ ತಲೆ ತಿನ್ನೋಕೆ ಬಾಕಿ ಇದ್ದೆ" ಸದಾನಂದ ರೇಗಿದ.

ಒಂದು ಕ್ಷಣ ಸಪ್ಪಗಾದ ರಾಮ, ಮತ್ತೆ ಮುಖ ಅರಳಿಸಿ,

"ಬರಿಅಣ್ಣಾ ಬತ್ತಾವ್ರೆ", ಎನ್ನುತ್ತಿದ್ದಂತೆ, ಚಂದ್ರ ಅಲ್ಲಿಗೆ ಬಂದ.

( ರಾಮ, ಹೊಸದರಲ್ಲಿ, ಎಲ್ಲರನ್ನೂ ಅವರ ಹೆಸರು ಕೇಳಿ, ಅದರ ಮುಂದೆ 'ಅಣ್ಣ' ಎಂದು ಸೇರಿಸಿ ಕರೆಯುತ್ತಿದ್ದ. ಹಾಗೇ ಚಂದ್ರನನ್ನು ಕೇಳಿದಾಗ ಅವನು ತನ್ನ ಹೆಸರು ಹೇಳದೇ, " ಬರೀ ಅಣ್ಣ ಎಂದು ಕರಿ ಸಾಕು" ಎಂದಿದ್ದ. ಅಂದಿನಿಂದ ರಾಮ ಅವನನ್ನು 'ಬರಿಅಣ್ಣ' ಎಂದೇ ಕರೆಯಲಾರಂಭಿಸಿದ. ಚಂದ್ರನೂ ಅದನ್ನು ತಮಾಷೆಯಾಗಿ ತೆಗೆದುಕೊಂಡು ಸುಮ್ಮನಾಗಿದ್ದ).

" ರಾಮ ಚುರ್ರಾ....?"

" ಹೂಂ ಬರಿಅಣ್ಣೋ"

"ರಾಮ ಕುಂಯ್ಯಾ.....?"

" ಹೂಂ ಬರಿಅಣ್ಣೋ...."

"ರಾಮ ಕಡಗಾ.....?"

"ಹೂಂ ಬರಿಅಣ್ಣೋ"

ರಾಮ, ಚಂದ್ರನ ಪ್ರಶ್ನೆಗಳಿಂದ ಖುಷಿಯಾಗಿ ಹೋಗಿದ್ದ.

"ನೋಡ್ ಬರಿ ಅಣ್ಣೋ, ಈವಣ್ಣ ಸುಮ್ ಸುಮ್ಕೆ ನನ್ ಬಯ್ಯೋದ, ನೀವ್ ಬರೋದೇನಾರ ಇನ್ನೂ ತಡ ಆಗಿದ್ರೆ, ನನ್ನ ಹೊಡ್ದೇ ಬಿಡೋರು", ಎಂದು ಹೆದರಿದವನಂತೆ ನಟಿಸುತ್ತಾ ಸದಾನಂದನ ಮೇಲೆ ದೂರು ಹೇಳಿದ.

"ನಿನ್ನ ಮೇಲೆ ಅವನೇನಾದ್ರೂ ಕೈ ಮಾಡಿದ್ರೆ ಹೇಳು, ನಾನು ಅವನಿಗೆ ಹೊಡಿತೀನಿ" ಎನ್ನುತ್ತಾ ರಾಮನ ಭುಜದ ಮೇಲೆ ಕೈ ಹಾಕಿ “ನಡಿ, ನಾವು ನನ್ನ ಜಾಗಕ್ಕೆ ಹೋಗೋಣ" ಎನ್ನುತ್ತಾ ಕರೆದುಕೊಂಡು ಹೋದ.

ಸದಾನಂದ ಅವರಿಬ್ಬರೂ ಹೋಗುವುದನ್ನು ನೋಡುತ್ತಾ, "ನನ್ನ ಕೆಲಸದ ಒತ್ತಡದಲ್ಲಿ ಪಾಪ ಆ ಹುಡುಗನ ಮೇಲೆ ರೇಗಿಕೊಂಡೆ, ಅವನು ಬಂದು ಮಾತನಾಡಿಸಿದರೆ, ಮನಸ್ಸಿಗೆ ಏನೋ ಸಮಾಧಾನ. ಇನ್ನು ಮುಂದೆ ಅವನ ಮೇಲೆ ರೇಗಬಾರದು", ಎಂದು ಯೋಚಿಸಿ, ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ.

ಪ್ರತಿ ಶುಕ್ರವಾರ ಸದಾನಂದನ ಸೆಕ್ಷನ್ ನಲ್ಲಿ ಪೂಜೆ. ಎಲ್ಲರೂ ಬೆಳಿಗ್ಗೆ ಬಂದು ಕೆಲಸ ಆರಂಭಿಸುವ ವೇಳೆಗೆ, ಸತ್ಯ, ಗಣೇಶ ಲಕ್ಷ್ಮಿಯರಿದ್ದ ಫೋಟೋ ಒರೆಸಿ, ಹೂವಿನ ಹಾರ ಹಾಕಿ ಪೂಜೆಗೆ ಸಿದ್ಧ ಮಾಡುತ್ತಿದ್ದ. ಆ ವೇಳೆಗೆ ಎಲ್ಲರೂ ಅಲ್ಲಿ ಸೇರುತ್ತಿದ್ದರು. ದೇವರಿಗೆ ಮಂಗಳಾರತಿ ಮಾಡಿ, ತಾನು ತಂದು ನೈವೇದ್ಯಕ್ಕೆ ಇಡುತ್ತಿದ್ದ ಆರೆಂಟು ಬಾಳೆಹಣ್ಣುಗಳನ್ನು ಕತ್ತರಿಸಿ ಎಲ್ಲರಿಗೂ ಪ್ರಸಾದವೆಂದು ಹಂಚುತ್ತಿದ್ದ. ಇದು ಸಾಧಾರಣವಾಗಿ ನಡೆದು ಬರುತ್ತಿದ್ದ ಪದ್ಧತಿ.

ಒಂದು ದಿನ ಸತ್ಯ ಬಾಳೆ ಹಣ್ಣಿನ ಬದಲಾಗಿ ಎಲ್ಲರ ಕೈಗೂ ಒಂದೊಂದು ದೊನ್ನೆ ಕೊಟ್ಟು, ಅದರಲ್ಲಿ ತಾನು ತಂದಿದ್ದ ಸ್ಟೀಲ್ ಕ್ಯಾರಿಯರ್ ನಿಂದ ಇಷ್ಟಿಷ್ಟು ಬಾಳೆಹಣ್ಣಿನ ರಸಾಯನ ಹಾಕಿದಾಗ, ಎಲ್ಲರಿಗೂ ಆಶ್ಚರ್ಯ. ಬಾಳೆಹಣ್ಣಿಗೆ, ಹದವಾಗಿ ಕಾಯಿತುರಿ, ಬೆಲ್ಲ, ಏಲಕ್ಕಿ ಬೆರೆಸಿದ ರಸಾಯನ, ಎಲ್ಲರಿಗೂ ಅಮೃತದಂತಿತ್ತು. ಚಪ್ಪರಿಸಿಕೊಂಡು ತಿಂದು, ದೊನ್ನೆಯನ್ನು ಬೆರಳುಗಳಲ್ಲಿ ಬಳಿದು, ಅದನ್ನೂ ಸವಿಯುತ್ತಾ, " ಏನು ಸತ್ಯಣ್ಣ ಇದು, ಏನು ವಿಶೇಷ ಇವತ್ತು, ರಸಾಯನ ಮಾಡ್ಕೊಂಡು ಬಂದ್ಬಿಟ್ಟೀದರಲ್ಲ", ಎಂದು ಎಲ್ಲರಿಗಿಂತ ಹಿರಿಯರಾದ ರಘುರಾಮಣ್ಣ ಕೇಳಿದರು.

"ಅದೇನ್ ರಘುರಾಮಣ್ಣ ಹಿಂಗ್ ಕೇಳ್ತೀರಾ, ಇವತ್ತು ಶ್ರೀ ರಾಮನವಮಿ ಅಲ್ವಾ, ಅದಕ್ಕೆ ಏನೋ ಸ್ವಲ್ಪ ರಸಾಯ್ನ ಮಾಡ್ಕೊಂಡ್ಬಂದು, ಪ್ರಸಾದ ಎಲ್ಲಾರ್ಗೂ ಹಂಚಣಾ ಅನ್ನುಸ್ತು. ಅದೇನು ನಂದೇ ಏನಲ್ವಲ್ಲಾ ದುಡ್ಡು, ನೀವುಗ್ಳು ಹಾಕ್ದ ಮಂಗ್ಳಾರ್ತಿ ಹಣದಲ್ಲೇ, ಬಾಳೆಹಣ್ಣು, ಬೆಲ್ಲ, ಕಾಯಿ ಎಲ್ಲಾ ತಂದು ಮಾಡ್ದೆ ಅಷ್ಟೇ". ಸತ್ಯ ತನ್ನ ಎಂದಿನ ನಾಟಕವನ್ನು ಆಡಿದ.

"ಅದು ಗೊತ್ತು ಸತ್ಯಣ್ಣ, ಆದರೆ ನಮ್ಗೂ ಹೇಳಿದ್ರೆ, ನಾವೂ ಏನಾದ್ರೂ ಮಾಡ್ಕೊಂಡು ಬಂದು, ಇನ್ನೂ ಜೋರಾಗೇ ರಾಮದೇವರ ಪೂಜೆ ಮಾಡಬಹುದಿತ್ತಲ್ಲಾ ಅಂತ", ಎಂದು ರಘುರಾಮಣ್ಣ ಹೇಳುತ್ತಾ ಎಲ್ಲರ ಮುಖ ನೋಡಿದರು.

"ಹೌದೌದು, ಆದ್ರೂ ಈಗೇನು, ನಾಳೆ ಹೇಗೂ ಶನಿವಾರ, ರಾಮರ ಪೂಜೆಗೆ ಒಳ್ಳೇ ದಿನಾನೇ. ನಾಲ್ಕು ಜನ ಒಂದೊಂದು ಪ್ರಸಾದ ಮಾಡ್ಕೊಂಡು ಬರೋಣ, ಚೆನ್ನಾಗಿ ಪೂಜೇನೂ ಮಾಡೋಣ, ಏನಂತೀರಾ" ಎನ್ನುತ್ತಾ ಈ ಸಲ ಮಾತನಾಡಿದವರು ಮತ್ತೊಬ್ಬ ಸೀನಿಯರ್ ಸಾಯಿಕೃಷ್ಣ.

ಮತ್ತೆ ಅವರೇ " ನಾನು ಬೇಕಿದ್ರೆ ಸುಂಡಲ್  ಮಾಡ್ಕೊಂಡು ಬರ್ತೀನಿ" ಎಂದು ಮುಂದಾದರು.

ರಘುರಾಮಣ್ಣ " ನಾನು ಸಜ್ಜಿಗೆ ತರ್ತೀನಿ, ಆಂ... ಸತ್ಯಣ್ಣ, ನೀವೇ ಮತ್ತೆ ರಸಾಯ್ನ ಮಾಡಿ, ಇವತ್ತು ತುಂಬಾ ಚೆನ್ನಾಗಿತ್ತು. ಅದರ ದುಡ್ಡು ನಾನೇ ಕೊಡ್ತೀನಿ", ಎಂದರು. 



ಹೀಗೆ, ಕೋಸಂಬರಿ, ಪಾನಕ, ಮಜ್ಜಿಗೆ, ಅವಲಕ್ಕಿ ಎಂದೆಲ್ಲಾ ಹಲವಾರು ಜನ ಒಪ್ಪಿಕೊಂಡರು.

ಮಾರನೇ ದಿನ ಶನಿವಾರ, ಅರ್ಧ ದಿನ ಕೆಲಸವಷ್ಟೇ. ಎಲ್ಲರೂ ಅದರಲ್ಲೂ ಅರ್ಧ ದಿನದಷ್ಟೇ ಕೆಲಸ ಮಾಡಿ, ಪೂಜೆಗೆ ಸಿದ್ಧರಾಗಿ ಬಂದು ನಿಂತರು. ಸತ್ಯ ಎಲ್ಲರೂ ಬೆಳಗ್ಗೆಯೇ ತಂದಿರಿಸಿದ್ದ ಪ್ರಸಾದದ ಡಬ್ಬಿಗಳನ್ನು ದೇವರ ಮುಂದಿರಿಸಿ,  ಹಣ್ಣು ಹೂಗಳ ಜೊತೆಗೆ ನೈವೇದ್ಯ ಮಾಡಿ, ಪೂಜೆ ಮಾಡಿದ. ನಂತರ ಪ್ರಸಾದ ವಿನಿಯೋಗದ ಕಾರ್ಯಕ್ರಮ. ಸಾಕಷ್ಟೇ ಇದ್ದ ಪ್ರಸಾದವನ್ನು ಎಲ್ಲರೂ ಬಲು ಸಂತಸದಿಂದ ತಿಂದರು.

ಆಗಲೇ ಶುರುವಾಗಿತ್ತು ಮುಂದಿನ ಹಬ್ಬಗಳ ಆಚರಣೆಯ ಬಗ್ಗೆ ಮಾತುಕತೆಗಳು, ಯೋಜನೆಗಳು.


ಮುಂದಿನ ದಿನಗಳಲ್ಲಿ ಬೇರೆಲ್ಲಾ ಸೆಕ್ಷನ್ ಗಳಲ್ಲಿ ಇಲ್ಲಿ ನಡೆದ ರಾಮನವಮಿಯ ಬಗ್ಗೆಯೇ ಮಾತು. ಇದೇ ಮೊದಲ ಬಾರಿಗೆ ಈ ರೀತಿಯ ಹಬ್ಬದಾಚರಣೆ ನಡೆದಿದ್ದು, ಎಲ್ಲರಿಗೂ ಆಶ್ಚರ್ಯ, ಕುತೂಹಲ, ಅಸೂಯೆ ಇವೆಲ್ಲದರ ಜೊತೆಗೆ ಕುಹಕ ಕೂಡ.

ಆ ಸೋಮವಾರ ರಾಮ ಎಂದಿನಂತೆ ಕಾಫಿ ಲೋಟ ತೆಗೆದುಕೊಂಡು ಹೋಗಲು ಬಂದ.

"ರಾಮ ಕುಂಯ್ಯಾ?"...

"........."

"ರಾಮ ಚುರ್ರಾ?"

".........."

"ರಾಮ ಕಡಗಾ?"

"..........."

" ಇವತ್ತು ನಿಂಗೇನಾಯ್ತೋ ರಾಮ. ಒಳ್ಳೆ ಮೂಕಬಸವನ ಹಾಗೆ ಇದ್ದೀಯ, ಹೌದು ಶನಿವಾರ ಮಧ್ಯಾಹ್ನ ಬಂದು ಹಬ್ಬದ ರಸಾಯ್ನ, ಸಜ್ಜಿಗೆ ಎಲ್ಲಾ ತಿಂದೆ ತಾನೇ".

ರಾಮ ಇಲ್ಲ ಎಂಬಂತೆ ಕತ್ತನ್ನಾಡಿಸಿದ.

"ಯಾಕೆ, ನಿಂಗೆ ಅವತ್ತು ಬೆಳಗ್ಗೇನೆ ಹೇಳಿದ್ದೆ ಅಲ್ವಾ".

"ಬಂದೆ ಕಣಣ್ಣೋ, ಆದ್ರೆ ಆವಯ್ಯ, ಅದೆ ಒಂಥರಾ ಕನ್ನಡ ಮಾತ್ನಾಡ್ತಾರಲ್ಲ, ಆವಯ್ಯ, ಒಳೀಕ್ ಬರಾಕ್ ಬಿಡ್ಲಿಲ್ಲ".

ಸದಾನಂದನಿಗೆ ಆಶ್ಚರ್ಯ ಆಯಿತು, " ಯಾಕೆ",

" ನೀನು ಸಾನ ಮಾಡಿಲ್ಲ, ಬಟ್ಟೆ ಎಲ್ಲಾ ಕೊಳಕಾಗೈತೆ, ಕಿಲೀನ್ ಮಾಡ್ಕೊಂಡು ಬಾ ಓಗು, ಅಂತ ಅಂಗೇ ಕಳಸ್ಬುಟ್ರಣ್ಣ", ಎಂದು ರಾಮ ಹೇಳಿದ.

ಆ ಪ್ರಮೋದನಿರಬೇಕು. ಸದಾ ಹಣೆಗೆ ಕುಂಕುಮವಿಟ್ಟು, ಎಣ್ಣೆ ಹಚ್ಚಿ, ನೀಟಾಗಿ ತಲೆ ಬಾಚಿ, ಶುಭ್ರವಾದ ಬಟ್ಟೆ ತೊಟ್ಟು, ಧಾರ್ಮಿಕ ಮುಖಂಡನಂತೆ ಇರುತ್ತಾನೆ. ಆದರೆ, ಅವನ ಆಲೋಚನೆಗಳು, ಮಾತುಕತೆ, ನಡವಳಿಕೆ ಅಷ್ಟೇ ಕೊಳಕು. ಅವನ ವೇಷಭೂಷಣಕ್ಕೂ, ಅವನ ಸ್ವಭಾವಕ್ಕೂ ಸಂಬಂಧವೇ ಇಲ್ಲ. ಕುಹಕತನ, ಅಸೂಯೆ, ಮೋಸ, ಇವುಗಳು ಅವನ ಆಂತರ್ಯದ ಉಡುಗೆ ತೊಡುಗೆಗಳಾಗಿದ್ದವು.

"ಓ ಅವನಾ, ಅವನೊಂತರಾ ಹಾಗೇನೇ. ಹೋಗ್ಲಿ ಬಿಡು ರಾಮ, ನೀನು ಸ್ನಾನ ಮಾಡ್ದೆ ಇದ್ರೂ ಸರಿ, ಒಗೆದಿರೋ ಬಟ್ಟೆ ಹಾಕದೆ ಇದ್ರೂ ಸರಿ, ನೀನು ಅವನಿಗಿಂತ ತುಂಬಾನೇ ಕ್ಲೀನು, ಗೊತ್ತಾಯ್ತಾ. ಮುಂದಿನ ಸಲ ನಾನೇ ನಿನ್ನ ಕರ್ಕೊಂಡು ಬಂದು, ಪ್ರಸಾದ ಎಲ್ಲಾ ಕೊಡ್ತೀನಿ".

ಅದೆಷ್ಟು ಅರ್ಥ ಆಯ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ರಾಮ ಸದಾನಂದನ ಮಾತಿನಿಂದ ಸಮಾಧಾನ ಹೊಂದಿದ.

ಆದರೆ ಮುಂದಿನ ಸಲ ರಾಮನನ್ನಿರಲಿ ಸದಾನಂದನನ್ನೇ ಅಲ್ಲಿ ಸೇರಿಸುವುದು ಅನುಮಾನ ಎಂಬಂತಹ ಸನ್ನಿವೇಶ ಬರಬಹುದೆಂಬ ಊಹೆ ಕೂಡ ಅವನಿಗಿರಲಿಲ್ಲ.


                      *************

ರಾಮನವಮಿ ಆಚರಣೆಯ ಯಶಸ್ಸಿನ ಹೆಮ್ಮೆ ಎಲ್ಲರಿಗೂ ಜೋರಾಗಿಯೇ ಹತ್ತಿತ್ತು. ದಿನಗಳು ಕಳೆದಂತೆ ಮುಂದೆ ಬರಲಿರುವ ಗಣೇಶನ ಹಬ್ಬ ಎಲ್ಲರ ಗಮನ ಸೆಳೆದಿತ್ತು.

ಆ ಸಲ ಗಣೇಶನ ಹಬ್ಬ ಗುರುವಾರ ಬಂದಿತ್ತು. ಮಾಮೂಲಿನಂತೆ ರಜಾ ಮತ್ತು ಎಲ್ಲರ ಮನೆಯಲ್ಲೂ ಆಚರಣೆ ಬೇರೆ. ಹಾಗಾಗಿ ಎರಡು ದಿನ ನಂತರ ಶನಿವಾರ ಡಿಪಾರ್ಟ್ಮೆಂಟ್ ನಲ್ಲಿ ಆಚರಿಸುವುದು ಎಂದು ತೀರ್ಮಾನವಾಯಿತು. ಶನಿವಾರ ಅರ್ಧ ದಿನ ಮಾತ್ರ ಕೆಲಸ. ನಂತರ ಪೂಜೆ, ಊಟ, ಇತ್ಯಾದಿ. ಸಾಧಾರಣ ದಿನಗಳಲ್ಲಿ ಎಷ್ಟೇ ಕೆಲಸವಿದ್ದರೂ, ಸಮಯವಾದ ಕೂಡಲೇ  ಗೇಟಿನಾಚೆ ಇರಲು ತವಕಿಸುವವರೆಲ್ಲಾ, ಹಬ್ಬದ ಸಲುವಾಗಿ ಸಂಜೆಯವರೆಗೂ ಏನು ಬೇಕಾದರೂ ಮಾಡಲು ಸಿದ್ಧ ಎಂದರು.

ಅದೊಂದು ಹಬ್ಬ ಎಲ್ಲರೂ ಸೇರಿ, ಭೇದ ಭಾವವಿಲ್ಲದೆ ಆಚರಿಸಬಹುದಾದ ಹಬ್ಬ, ಹಾಗಾಗಿ ಭಾಗವಹಿಸಲು ಎಲ್ಲರೂ ಮುಂದೆ ಬಂದರು. ಗಣೇಶನ ಹಬ್ಬ ಹತ್ತಿರ ಬಂದಂತೆಲ್ಲಾ ಕೂತರೆ ನಿಂತರೆ, ಅದರದೇ ಮಾತುಕತೆ.

ಇಡೀ ಸೆಕ್ಷನ್ನನ್ನು ಎರಡು ಭಾಗ ಮಾಡಿ, ಒಂದು ಕಡೆ ರಘುರಾಮಣ್ಣ, ಮತ್ತೊಂದು ಕಡೆ ಸಾಯಿಕೃಷ್ಣ ಮುಂದಾಳತ್ವ ಎಂದಾಯಿತು. ಅದರಲ್ಲಿ ಉಪಸಮಿತಿಗಳು ಬೇರೆ. ಈ ಸಲ ಬೇರೆ ಡಿಪಾರ್ಟ್ಮೆಂಟಿನವರುಗಳು ಅಕಸ್ಮಾತ್ ಬಂದರೆ ಅವರಿಗೂ ಊಟ ನೀಡುವ ತೀರ್ಮಾನವಾಯಿತು.

ಊಟ ಎಂದರೆ ಭರ್ಜರಿ ಹಬ್ಬದೂಟ, ಅದೂ ಬಾಳೆಲೆಯ ಮೇಲೆ.

ಪೂಜೆಗೆ, ಅಡುಗೆಗೆ, ಊಟ ಬಡಿಸಲು, ಮೊದಲು ಮತ್ತು ನಂತರದ ಶುಚಿಗೊಳಿಸುವ ಹೊಣೆ, ವ್ಯಾಪಾರ, ಹೀಗೆ ಒಂದೊಂದಕ್ಕೂ ಒಂದೊಂದು ಗುಂಪು ಜವಾಬ್ದಾರಿ.

ಪೂಜೆಗೆ ಗಣೇಶನ ವಿಗ್ರಹ ತಂದು, ದೇವ ಮೂಲೆಯಲ್ಲಿ ಮಂಟಪ ಕಟ್ಟಿ ಕೂಡಿಸುವುದು. ಆ ಮಂಟಪಕ್ಕೆ ಮತ್ತು ಸೆಕ್ಷನ್ ಹೆಬ್ಬಾಗಿಲಿಗೆ ಬಾಳೆ ಕಂದು. ನೈವೇದ್ಯಕ್ಕೆ ಉಸಲಿ ಮತ್ತು ಕಡುಬು. ಸತ್ಯನದೇ ಪೂಜೆ.

ಊಟಕ್ಕೆ ಪುಳಿಯೋಗರೆ, ಮೊಸರನ್ನ, ಪಲ್ಯಗಳು, ಕೋಸಂಬರಿ, ಸಿಹಿಗೆ ಜಾಂಗೀರು. ಎಲ್ಲರ ಕೆಲಸದ ಮೇಜುಗಳನ್ನು ಕ್ಲೀನ್ ಮಾಡಿ, ಅದರ ಮೇಲೆ ಬಾಳೆಲೆ ಹಾಕಿ ಊಟ ಬಡಿಸುವುದು. ಬಡಿಸಲು ಆರು ಜನ. ನಂತರ ಶುಚಿಗೊಳಿಸಲು ಆರು ಜನ.

ನಂತರ ಪೂಜೆಯ ಖರ್ಚಿನ ವಿಷಯ ಬಂದಾಗ ಯಾರೋ ಒಬ್ಬರು ನಾನು ಐವತ್ತು ರೂಪಾಯಿ ಕೊಡ್ತೀನಿ ಎಂದರು, ಅದಕ್ಕೆ ಪ್ರಮೋದ, " ಪುಟಗೋಸಿ, ಐವತ್ತು ರೂಪಾಯಲ್ಲಿ ಏನಾಗುತ್ತೆ, ನಾನು ನೂರು ಕೊಡ್ತೀನಿ," ಎಂದ.

ಮತ್ತೊಬ್ಬರು ನೂರಿಪ್ಪತ್ತು ಎಂದರೆ, ಇನ್ನೊಬ್ಬರು ನೂರೈವತ್ತು ಎಂದರು. ಹೀಗೆ ಇನ್ನೂರರವರೆವಿಗೂ ಏರಿತ್ತು.

ಕಡೆಗೆ ವ್ಯಾಪಾರ ವ್ಯವಹಾರಗಳಲ್ಲಿ ಚೆನ್ನಾಗಿ ಪಳಗಿದ್ದ ಮೂರ್ತಿ, "ಒಬ್ಬೊಬ್ಬರೂ ಒಂದೊಂದು ರೀತಿ ಕೊಡೋದು ಬೇಡ, ಅದು ಚೆನ್ನಾಗಿರಲ್ಲ. ಎಲ್ಲರೂ ತಲೆಗೆ ಇನ್ನುರು ರೂಪಾಯಿ ಹಾಕೋಣ. ಖರ್ಚು ಎಲ್ಲಾ ಕಳೆದು ಮಿಕ್ಕಿದರೆ, ಗಣೇಶನ ಹೆಸರಿನಲ್ಲಿ ಒಂದು ಗಿಫ್ಟ್ ಎಲ್ಲರಿಗೂ, ಏನಂತೀರಾ ಎಲ್ರೂ", ಎಂದರು.

ಹಲವಾರು ಜನರಿಗೆ ಇನ್ನೂರು ರೂಪಾಯಿ ತುಂಬಾ ಹೆಚ್ಚೇ ಎನ್ನಿಸಿತು.

"ಅಷ್ಟೊಂದು ಬೇಕಾಗುತ್ತಾ" ಎಂದು ಅಸಮಾಧಾನ ತೋರಿದ ರಾವ್ ಗೆ, ಪ್ರಮೋದ " ಕುದುರೆ ಬಾಲಕ್ಕೆ ಮಾತ್ರ ಐನೂರು ಬೇಕಾದ್ರೂ ಹಾಕ್ತೀಯ, ದೇವರಿಗೆ ಕೊಡಕ್ಕೆ ಮಾತ್ರ ನಿಂಗೆ ಇನ್ನೂರು ಜಾಸ್ತಿ ಆಯ್ತು, ಕೊಡಯ್ಯಾ ಸುಮ್ಮನೆ", ಎಂದಾಗ, ಮತ್ಯಾರೂ ಮಾತನಾಡಲಿಲ್ಲ.

ಸದಾನಂದ ಚಂದ್ರು, ಗೋಪಾಲ ಮತ್ತು ಗೌಡ, ಇವಗಳೆಲ್ಲದರಿಂದ ದೂರವೇ ಉಳಿದಿದ್ದರು.

ಸದಾನಂದನಿಗೇಕೋ ಇದೆಲ್ಲಾ ಅತಿರೇಕವೆನಿಸುತ್ತಿತ್ತು. ಅದ್ದೂರಿಯ ಪೂಜೆಗಳು ಮನೆ, ದೇವಸ್ಥಾನಗಳಿಗೆ ಸರಿ. ಕೆಲಸ ಮಾಡುವ ಜಾಗಗಳಲ್ಲಿ ಮಾಡುವುದು ಎಷ್ಟು ಸರಿ? ಎಷ್ಟು ಸಮಯ ಹಾಳು, ಮೊದಲೇ ದಿನದಲ್ಲಿ ಅರ್ಧಕ್ಕಿಂತ ಹೆಚ್ಚು ಕಾಲ, ಮಾತುಕತೆ, ಸ್ವಂತ ವ್ಯವಹಾರ, ಪೇಪರ್, ಕಾಮೆಂಟ್ರಿ ಎಂದೆಲ್ಲಾ ಕಳೆಯುತ್ತಾರೆ. ಇನ್ನು ಈ ಪೂಜೆಯ ಕಾರಣದಿಂದ ವಾರಗಟ್ಟಲೆ ಅಮೂಲ್ಯವಾದ ಕೆಲಸದ ಸಮಯ ವ್ಯರ್ಥ. ಮನೆಯಲ್ಲಿ ಎಷ್ಟು ಬೇಕಾದರೂ ಮಾಡಬಹುದು, ಆದರೆ ಇಲ್ಲಿ ಮಾಡುವುದರಲ್ಲಿ ಏನರ್ಥ?

ಯಾರಿಗೂ ತಾವು ಮಾಡುವುದು ತಪ್ಪು  ಎಷ್ಟೊಂದು ಕೆಲಸದ ಸಮಯ ವ್ಯರ್ಥ ಮಾಡುತ್ತಿದ್ದೇವೆ ಎಂದು ತಪ್ಪಿತಸ್ಥ ಮನೋಭಾವ ಇಲ್ಲವೇ? ಹರಟೆಗೆ ಕುಳಿತಾಗ, ಜಪಾನ್, ಜರ್ಮನಿ, ಇತ್ಯಾದಿ ದೇಶಗಳ ಕಾರ್ಮಿಕರ ಕಾರ್ಯ ತತ್ಪರತೆ, ಶ್ರಮದ ದುಡಿಮೆ ಮುಂತಾದವುಗಳ ಮೆಚ್ಚಿ ಕೊಂಡಾಡುತ್ತಾರೆ. ಅದೆಲ್ಲವನ್ನೂ ಸ್ವಲ್ಪವಾದರೂ ತಾವೂ ಅಳವಡಿಸಿಕೊಳ್ಳೋಣ ಎಂಬ ಹಂಬಲವಿಲ್ಲವೇ?

ಇಂದು ಮಧ್ಯಾಹ್ನವೇ ಪೂಜೆ. ಬೆಳಿಗ್ಗಿನಿಂದಲೇ ತಯಾರಿ ಜೋರಾಗಿ ನಡೆದಿತ್ತು. ಎಲ್ಲರದೂ ಸಡಗರದ ಓಡಾಟ. ಒಳಗೆ ವಿಶಿಷ್ಟ ಯಂತ್ರಗಳ ಕೋಣೆಯೊಳಗೆ ಅಡುಗೆ ಸಾಮಾಗ್ರಿಗಳು ಬಂದಿದ್ದವು. ಬಾಳೆಲೆಯ ಕಟ್ಟು ತಂದಾಯ್ತು. ಎಲ್ಲರ ನಡುವೆ, ಕೆಲಸ ಮಾಡುತ್ತಿದ್ದ ಸದಾನಂದನೊಬ್ಬ ಪರಕೀಯನಂತಿದ್ದ.

ಡಿಪಾರ್ಟ್ಮೆಂಟ್ ನ ಹಿಂಬಾಗಿಲಿನಿಂದ ಪ್ರಮೋದ ಕೈಯ್ಯಲ್ಲಿ, ಆಗ ಕತ್ತರಿಸಿದ ಎರಡು ಬಾಳೆಕಂಬ ಹಿಡಿದುಕೊಂಡು ಬಂದ. ಸದಾನಂದನಿಗ ಗಾಬರಿಯಾಯ್ತು, ಹೊರಗಡೆ ಓಡಿ ಹೋಗಿ ನೋಡಿದರೆ, ತಾನು ಲಾಲ್ ಬಾಗ್ ನಿಂದ ತಂದು ನೆಟ್ಟಿದ್ದ ಬಾಳೆಗಿಡದ ಆಹುತಿಯಾಗಿತ್ತು. ಜೊತೆಗೆ ಆಗ ತಾನೇ ಹೂ ಬಿಡಲಾಂಭಿಸಿದ್ದ ಬೋಗನ್ ವಿಲ್ಲಾದ ಬಳ್ಳಿಗಳೂ ಸಹ ಯದ್ವಾ ತದ್ವಾ ಮುರಿದು ಬಿದ್ದಿದ್ದವು. ಪ್ರಮೋದ್ ನ ಬಳಿ ಓಡಿದ.

"ಏಯ್ ಪ್ರಮೋದ, ಬಾಳೆಕಂದನ್ನು ಯಾಕೋ ಕತ್ತರಿಸಿದೆ? ನಾನು ಅದನ್ನ ಲಾಲ್ ಬಾಗ್ ನಿಂದ ತಂದು, ದಿನಾ ನೀರು ಹಾಕಿ ಬೆಳಸ್ತಾ ಇದ್ದೆ".

"ನಿಂಗೆ ಒಳ್ಳೇದಾಗ್ಲೀ ಅಂತಾನೆ ಕತ್ತರ್ಸಿದ್ದು, ನೀನು ಹಾಕಿ ಬೆಳಸಿದ ಗಿಡ ಅಲ್ವಾ, ದೇವರ ಮಂಟಪಕ್ಕೆ ಕಟ್ಟಿದರೆ, ನಿಂಗೇ ಪುಣ್ಯ ಬರೋದು", ಕುಹಕದಿಂದ ಉತ್ತರಿಸಿದ.

"ಅದರ ಬದ್ಲು ಹಾಗೇ ಬಿಟ್ಟಿದ್ರೆ, ಗೊನೆ ಬಿಟ್ಟು, ಒಳ್ಳೇ ಜಾತಿ ಹಣ್ಣು ಸಿಕ್ಕಿರೋದು.  ಮರಾನೇ ಹಾಳ್ಮಾಡ್ದ್ಯಲ್ಲೋ, ಥೂ ನಿನ್ನ" ಸದಾನಂದ ತನ್ನ ಕೋಪವನ್ನು ತೋರಿಸಿದ.

"ಜಾಸ್ತಿ ಗಾಂಚಾಲಿ ಮಾಡ್ಬೇಡ, ನನ್ ಮನೇಗಾ ಎತ್ಕೊಂಡು ಹೋಗ್ತಾ ಇದೀನಿ.  ನೀನು ಹುಟ್ಟಾಕಿರೋದು ನಿಮ್ಮಪ್ಪನ ಮನೆ ಜಾಗದಲ್ಲಿ ಅಲ್ಲ ತಿಳ್ಕೋ", ಕೂಗಾಡುತ್ತಾ ಮುಂದೆ ಹೋದ. 

ಸದಾನಂದನ ಮನಸ್ಸಿಗೇಕೋ ತುಂಬಾ ಸಂಕಟವಾಗುತ್ತಿತ್ತು. ಯಾರ ಬಳಿಯಲ್ಲಾದರೂ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಬೇಕೆಂಬ ತುಡಿತ. ಏನೋ ಕಾರಣ ನೀಡಿ ಚಂದ್ರ ಅಂದು ರಜಾ ಹಾಕಿದ್ದ. ಮಹೇಶ, ಎಲ್ಲಕ್ಕೂ ಹೂಂ ಹೂಂ ಎನ್ನುತ್ತಾ ತಲೆ ಕೆಡಿಸಿಕೊಳ್ಳದೆ ಹಗುರವಾಗಿದ್ದ. ಗೋಪಾಲ, ನನ್ನ ಬಳಿ ಯಾರೂ ಬರಲೇ ಬೇಡಿ ಎಂದು ಎಲ್ಲರನ್ನೂ ದೂರವಿಟ್ಟಿದ್ದ.

ಅದೇ ಸಮಯಕ್ಕೆ ಎದುರಿಗೆ ರಾಮಣ್ಣ ಬರುತ್ತಿದ್ದರು. ಪ್ರಮೋದ ಅವರ ಬಳಿ ನಿಂತು, ಸದಾನಂದನ ಕಡೆಗೆ ಕೈ ತೋರಿಸಿ ಏನೋ ಹೇಳಿದ, ಅವರು ತಲೆಯಾಡಿಸುತ್ತಾ ಅವನ ಮೇಲೆ ರೇಗಿದ ಹಾಗೆ ಕಂಡಿತು.


Comments

  1. ಕಥೆ ಯಾಕೆ ಅರ್ಧದಲ್ಲಿ ಬಹಳ ಕುತೂಹಲಕಾರಿಯಾಗಿದೆ ಮುಂದಿನ ಕಂತಿಗಾಗಿ ಕಾಯ್ತಾ ಇದ್ದೀವಿ .😊

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

      Delete
  2. ಕಥೆ ಸ್ವಾರಸ್ಯವಾಗಿದೆ. ಆಗಾಗ ಹೊಸ ಹೆಸರುಗಳು ಬಂದು ಸ್ವಲ್ಪ ಗೊಂದಲವಾದರೂ, ಕಥೆಯನ್ನು ಸವಿಯಲು ಏನೂ ತೊಡಕಿಲ್ಲ. ಮುಂದಿನ ಕಂತನ್ನು ಎದುರು ನೋಡುತ್ತಿರುವೆ. ಅಭಿನಂದನೆಗಳು.

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

      Delete

Post a Comment