ಮುಳ್ಳಯ್ಯನ ಗಿರಿ: ಸಹ್ಯಾದ್ರಿ ಹಾಡಿದ.......

 ಮುಳ್ಳಯ್ಯನ ಗಿರಿ: ಸಹ್ಯಾದ್ರಿ ಹಾಡಿದ ಸೌಂದರ್ಯ ಲಹರಿ!

 ಲೇಖನ - ಡಾ. ಮಂಜುಳಾ ಹುಲ್ಲಹಳ್ಳಿ,  ಚಿಕ್ಕಮಗಳೂರು 


    ಚಿಕ್ಕಮಗಳೂರು ಎಂದರೆ ಸಾಕು, ಮೈಮನಗಳಲ್ಲಿ ರಸಾನುಭೂತಿಯ ಪುಲಕ. ಈ ಪುಲಕದ ಮುಖ್ಯ ಕಾರಣ ಚಿಕ್ಕಮಗಳೂರಿನಲ್ಲಿ ಎತ್ತ ನಿಂತು ನೋಡಿದರು ತನ್ನೆಡೆಗೆ ಕೈಚಾಚಿ ಕೆರೆವ ಗಿರಿ ಪರ್ವತಶ್ರೇಣಿ. ರವಿ, ಚಂದ್ರ, ತಾರೆ, ನೀಲಾಕಾಶ, ಮುಗಿಲಮಾಲೆಗಳೊಡನೆ ಸರಸದಾಟ ಆಡುತ್ತಾ ಕ್ಷಣಕ್ಷಣಕ್ಕೂ ವೈವಿಧ್ಯಮಯ ದಿವ್ಯ ರಂಗು ತರಂಗಗಳನ್ನು ಹೊಮ್ಮಿಸಿ ಚಿಮ್ಮಿಸಿ, ಮನವನ್ನು ವಿಸ್ಮಯದ ಕಡಲಿನಲ್ಲಿ ಮುಳುಗಿಸುವ, ಬೆರಗಿನ ಹೊನಲಿನಲ್ಲಿ ಹರಿಯಿಸುವ ದಿವ್ಯ ಭಾವ ಸೌಂದರ್ಯದ ಲಹರಿ, ಮುಳ್ಳಯ್ಯನ ಗಿರಿ!

    ಎಲ್ಲಾ ದಿಕ್ಕುಗಳಿಂದಲೂ ಚಿಕ್ಕಮಗಳೂರಿನೆಡೆಗೆ ಬರುವವರನ್ನ ಅತಿ ದೂರದಿಂದಲೇ ತನ್ನತ್ತ ಬನ್ನಿ ಎಂದು ಮುಗುಳ್ನಕ್ಕು ಕೈ ಬೀಸಿ ಕರೆಯುವ, ಕಣ್ಮನ ತಣಿಸಿ ಪರಿಪೂರ್ಣ ಸೌಂದರ್ಯದ ಒಲವುಣಿಸಿ ಮೆರೆಯುವ ಮುಳ್ಳಯ್ಯನಗಿರಿ ಇರುವ ಮಲೆಯ ಶ್ರೇಣಿಗೆ ಚಂದ್ರದ್ರೋಣ ಪರ್ವತವೆಂಬುದು ಸೊಗಸಾದ ಅನ್ವರ್ಥನಾಮ. ಬಿದಿಗೆಯ ಚಂದ್ರಾಕೃತಿ, ಕುದುರೆಯ ಲಾಳಾಕೃತಿಯ ಸಹ್ಯಾದ್ರಿ ಮಡಿಲಿನ ಈ ಬೆಟ್ಟ ಸಾಲುಗಳು ಹಿಮಾಲಯಕ್ಕೂ ನೀಲಗಿರಿ ಪರ್ವತಗಳಿಗೂ ನಡುವೆ ಇರುವ ಎತ್ತರದ ಗಿರಿ ಶ್ರೇಣಿಗಳಂತೆ! ಅದಕ್ಕೆ ಸಮುದ್ರ ಮಟ್ಟದಿಂದ 6317 ಅಡಿ ಎತ್ತರವಿರುವ ಮುಳ್ಳಯ್ಯನಗಿರಿಗೆ ಕರ್ನಾಟಕದಲ್ಲೆ ಎತ್ತರದ ಸ್ಥಾನವೆಂಬ ಕಿರೀಟ. ಮಲೆನಾಡ ಒಡಲಿನ ಚಾರಣಿಗರ ಸ್ವರ್ಗ, ಪ್ರವಾಸಿಗರ ಸ್ವಿಟ್ಜರ್ಲೆಂಡ್‌‌ ಎಂಬ ಹೆಗ್ಗಳಿಕೆ.

      ಮುಳ್ಳಯ್ಯನ ಗಿರಿಯೆಡೆಗೆ ಹೊರಡುವುದೆಂದರೆ, ಅದೇ ಒಂದು ಭಾವ ಸಂಭ್ರಮ. ಚಿಕ್ಕಮಗಳೂರಿನ ಪಕ್ಕವೇ ಇದೆ ಎನಿಸಿದರೂ ಗಿರಿನೆತ್ತಿ ಮುಟ್ಟಲು 20 ಕಿ.ಮೀ. ಪ್ರಯಾಣ ಬೇಕೇ ಬೇಕು. ಹಾದಿಯುದ್ದಕ್ಕೂ ನಿಸರ್ಗ ದೇವಿಯ ವೈವಿಧ್ಯ ಪೂರ್ಣ ದಿವ್ಯಸೌಂದರ್ಯ. ಹಸುರಿನ ಹೊನಲು, ತಂಗಾಳಿಯ ನವಿರು, ವಾಹನದಾರಿಯ ಹಿರಿಕಿರಿಯ ಕವಲು, ಕಣಿವೆಯಾಳದ ಸೊಬಗಿನ ಹೊದರು...



    ಕೈಕಾಲು ಕಣ್ಮನಗಳು ಗಟ್ಟಿ ಇದ್ದು ಸಾಕಷ್ಟು ಸಮಯವಿದ್ದರೆ ಚಾರಣದ ಹಾದಿ ಅಪೂರ್ವ ಅನುಭವದ ಬುತ್ತಿ ಕಟ್ಟಿಕೊಡುತ್ತದೆ. ಕೈಮರ ಸಮೀಪದ ಸುಂದರ ನೆಲೆ ನಿರ್ವಾಣ ಸ್ವಾಮಿ ಮಠದ ಬಳಿ ಬಂದರೆ ಸಾಕು. ನಿರ್ವಾಣ ಸ್ವಾಮಿಗಳ ಗದ್ದುಗೆಗೆ ಕೈಮುಗಿದು ತಪ್ಪಲಿನ ಚಾರಣದ ಹಾದಿಯನ್ನು ಹಿಡಿಯಬಹುದು. ಈ ನಿರ್ವಾಣ ಸ್ವಾಮಿಗಳೂ ಐತಿಹಾಸಿಕ ಪುರುಷರೇ. ಗಿರಿಪಾದದ ಈ ಸ್ಥಳದಲ್ಲಿ ಪ್ರಶಾಂತತೆಯ ಸೊಬಗು, ಭಕ್ತಿಯ ಆಪ್ತ ಸೌಂದರ್ಯ ತಾವೇ ತಾವಾಗಿ ಮೇಳೈಸಿವೆ.

     ಇಲ್ಲಿಂದ ಮುಳ್ಳಯ್ಯನ ಗಿರಿ ಏರಲು ಆರಂಭವಾಗುವ ಚಾರಣದ ಕಾಲು ದಾರಿ, ಸರ್ಪದ ಹಾದಿ. ಎಚ್ಚರಿಕೆಯಿಂದ ಹೆಜ್ಜೆಯ ಮೆಲೆ ಹೆಜ್ಜೆಯನಿಡುತ್ತಾ, ಸರ್ಪದ ಹಾಗೆ ಹೊರಳಿ ಹೊರಳಿ ನೆಡೆಯುತ್ತಾ, ನೆಡೆಯಲಾಗದಿದ್ದರೆ ದೇಕುತ್ತಾ, ಅದೂ ಆಗದಿದ್ದರೆ ತೆವಳುತ್ತಾ, ಒಬ್ಬರಿಗೊಬ್ಬರು ಕೈ ಆಸರೆಯಾಗುತ್ತಾ ಸುತ್ತಮುತ್ತಲ ಸಿರಿ ಸೊಬಗನ್ನು ಆಸ್ವಾದಿಸುತ್ತಾ, ಗಿರಿಯ ಮುಡಿ ತಲುಪುವ ಸುಮಾರು 12 ಕಿ.ಮೀ.ಗಳ ಹಾದಿ ಸ್ವರ್ಗದ ದಾರಿಯ ಹೊಯ್ ಕೈ!

     ಏರುತ್ತಾ ಏರುತ್ತಾ ಬದಲಾಗುವ ಪ್ರಕೃತಿ ಸೌಂದರ್ಯ, ಬಯಲಾಗುವ ನೈಸರ್ಗಿಕ ವೈಭವ ಅವರ್ಣನೀಯ! ಗಿಡ ಮರ ವನ ಕಾನನ ಕಾಫಿ ಬನಗಳನ್ನು ದಾಟುತ್ತಾ ಮೇಲೇರಿದಂತೆ ಪಶ್ಚಿಮ ಘಟ್ಟಗಳ ವಿಶಿಷ್ಟ ಶೊಲಾ ಕಾಡುಗಳ ಮಹಾಸಿರಿ ಮೈ ತೆರೆದುಕೊಳ್ಳುತ್ತದೆ. ಕಣ್ಣೆತ್ತಿ ನೋಡಿದರೆ ಮೈತುಂಬಾ ಹಸಿರು ಮಕಮಲ್ಲಿನ ಮೇಲ್ವಾಸು ಹೊದ್ದ ಪರ್ವತಸಾಲು, ಅತ್ತ ಇತ್ತ ಎತ್ತೆತ್ತಲು ಹರಡಿದ ಹಸುರಿನ ಕಡಲು! ಈ ರೀತಿಯ ಹಸುರನ್ನು ನೋಡ ನೋಡುತ್ತಲೇ ಇದ್ದರೆ ಕುವೆಂಪು ಅವರಂತೆ ನಮ್ಮ ಆತ್ಮಗಳೂ ಹಸುರುಗಟ್ಟುತ್ತವೆ, ಒಡಲೊಳಗಿನ ನೆತ್ತರೂ ಹಸುರಸುರೇ!


     ಈ ಚಾರಣದ ಹಾದಿಯು ಹಲವು ನೂರು ಸೌಂದರ್ಯದ ರಸ ಘಟ್ಟಗಳನ್ನು ಮೂರು ನಾಲ್ಕು ಘಂಟೆಗಳ ದಿವ್ಯಾನು ಭೂತಿಯಲ್ಲಿ ಸವಿಸಿ, ಸವೆಸಿ ಮುಳ್ಳಯ್ಯನಗಿರಿ ಶಿಖರದ ಮೇಲಣ ಎಡಭಾಗದ ತುದಿಯಲ್ಲಿ ಮುಳ್ಳಯ್ಯನ ಗುಡಿಯೆಡೆಗೆ ಪ್ರವೇಶಾವಕಾಶ ಮಾಡಿಕೊಡುತ್ತದೆ.

    ವಾಹನದ ಹಾದಿಯ ಭವ್ಯಾನುಭೂತಿ ಮತ್ತೂ ಸೊಗಸು. ಕೈಕಾಲುಗಳಿಗೆ ಶ್ರಮವಿಲ್ಲ , ಮೈಮನಗಳಿಗೆಲ್ಲಾ ಉಲ್ಲಾಸವೇ ಉಲ್ಲಾಸ. ನೋಡುಗರು ಸುತ್ತಾ ನೋಡಿ ಸವಿಯಲು ಮೈಯೆಲ್ಲಾ ಕಣ್ಣಾಗಬೇಕು. ಚಾಲಕರೂ ಕಿರಿದಾದ ರಸ್ತೆಯ ಕಡೆಗೆ ಮೈಮನವೆಲ್ಲಾ ಕಣ್ಣಾಗಿರಬೇಕು!

     ದಾರಿಯಲ್ಲಿ ಅಲ್ಲಲ್ಲೆ ತಿರುವುಗಳಲ್ಲಿ ವಾಹನ ನಿಲ್ಲಿಸಿ ಗಿರಿಸಿರಿಯ ಸೌಂದರ್ಯ ಸವಿ ಸವಿದು, ಬೆಟ್ಟದ ನಡುವಿಂದ ಉಕ್ಕಿ ಹರಿದು ಬರುವ ಝರಿಗಳ ಹೂ ಚಿಂತನಕ್ಕೆ ಮೈಯೊಡ್ಡಿ ಸುಖಿಸಿ, ಏರು ಬೆಟ್ಟದ ಕಡಿದಾದ ಹಾದಿಯಲ್ಲಿ ಸಾಗಿದರೆ ಮೊದಲ ಹಂತ ಶ್ರೀ ಸೀತಾಳ ಮಲ್ಲಿಕಾರ್ಜುನನ ವಿಶಾಲ ಆವರಣದ ಸುಂದರ ಆಲಯದ ರಮ್ಯ ತಾಣ ಎದುರಾಗುತ್ತದೆ. ಸೀತಾಳಯ್ಯನವರ ಗದ್ದುಗೆ ಎಂದು ಕರೆಸಿ ಕೊಳ್ಳುವ ಈ ಕ್ಷೇತ್ರದ ಶಿವಲಿಂಗ ಸ್ವರೂಪ ಅತ್ಯಂತ ವಿಶಿಷ್ಟ. ಲಿಂಗದ ಮುಂದಿರುವ ಪುಟ್ಟ ಹಳ್ಳದಿಂದ ಪವಿತ್ರ ಜಲ ಉಕ್ಕುಕ್ಕಿ ಬರುತ್ತದೆ. ತೀರ್ಥ ರೂಪದಲ್ಲಿ ಇದನ್ನು ಸ್ವೀಕರಿಸುವುದೇ ಒಂದು ಧನ್ಯತೆ.

     ಹದಿನೈದನೇ ಶತಮಾನದಲ್ಲಿ, ಸ್ಥಳೀಯ ಪಾಳೇಗಾರ ಅರಸರಿಂದ ನಿರ್ಮಾಣಗೊಂಡಿರಬಹುದಾದ ಈ ದೇಗುಲವೇ ಒಂದು ವಿಸ್ಮಯ. ಏನೆಲ್ಲಾ ಸೌಲಭ್ಯಗಳಿರುವ ಇಂದಿನ ದಿನಗಳಲ್ಲೂ ಈ ತಾಣ ಮುಟ್ಟಲು ಜೀವವನ್ನು ಕೈಲಿ ಹಿಡಿದುಕೊಂಡು ತಿಣುಕಾಡುತ್ತೇವೆ. ಆ ಕಾಲದಲ್ಲಿ, ಮರ,ಗಿಡ ಕಲ್ಲು, ಮುಳ್ಳು ,ಖಗ ಮೃಗ, ಝರಿ, ಗಾಳಿ, ಬಯಲುಗಳಲ್ಲದೇ ಮತ್ತೇನು ಇಲ್ಲದ ಆಕಾಲದಲ್ಲಿ ನಮ್ಮ ಪೂರ್ವಜರು ಇಂತಹ ಮಲೆಯ ತುದಿಯಲ್ಲಿ ಇಷ್ಟು ಗಟ್ಟಿಮುಟ್ಟಾದ ದೇಗುಲವನ್ನು ಅದು ಹೇಗೆ ತಾನೇ ಕಟ್ಟಿರಬಹುದು! ಮಾತುಗಳು ಸೋಲುತ್ತವೆ. ನಮ್ಮ ಹಿರಿಯರ ಅಪೂರ್ವ ಶ್ರದ್ಧಾಭಕ್ತಿಗಳಿಗೆ ಮನ ತಲೆಬಾಗಿ ನಮಿಸುತ್ತದೆ.

     ಸೀತಾಳಯ್ಯನ ಗುಡಿಯಿಂದ ಮುಳ್ಳಯ್ಯನಗಿರಿಯವರೆಗಿನ ಸುಮಾರು 5 ಕಿ.ಮೀ. ಹಾದಿ ಭವ್ಯ ಭಯಂಕರ! ವಾಹನದ ಹಾದಿಯಲ್ಲಿ ಸ್ವಲ್ಪ ಲಯ ತಪ್ಪಿದರೂ ಕ್ಷಣ ಮಾತ್ರದಲ್ಲಿ ಕಣಿವೆಯಾಳದ ದರ್ಶನ. ಕಾಲ್ನಡಿಗೆಯಲ್ಲಿ ಹೊರಟರಂತೂ ಅತ್ಯದ್ಭುತ ಕುಳಿರ್ಗಾಳಿಯೊಡನೆ ಅವಿಸ್ಮರಣೀಯ ಸರಸ.

    ಮುಳ್ಳಯ್ಯನ ಗಿರಿ ಬೆಟ್ಟದ ತಪ್ಪಲಿನಿಂದ ಶಿಖರ ಮುಟ್ಟಲು 300 ರಷ್ಟು ಮೆಟ್ಟಿಲನ್ನು ಎಲ್ಲರೂ ಕಡ್ಡಾಯವಾಗಿ ಹತ್ತಲೇ ಬೇಕು. ಒಂದೊಂದು ಮೆಟ್ಟಿಲು ಏರಿದಾಗಲೂ ಒಂದೊಂದು ಆನಂದದ ರಸಕೀಲಿಕೈ ತೆರೆದುಕೊಳ್ಳುತ್ತದೆ. ಒಮ್ಮೆ ರಭಸದಿಂದ ಎತ್ತಿ ಬಿಸಾಡುವೆನೆಂಬ ಆರ್ಭಟದಲ್ಲಿ ಬೀಸುವ ಗಾಳಿ ಕೆಲವೇ ಕ್ಷಣಗಳಲ್ಲಿ ಮಂಜುಮೋಡಗಳ ಬೆರಳುಗಳಿಂದ ಮೈಸವರಿ ಕಚಗುಳಿ ಇಡುತ್ತವೆ. ಒಮ್ಮೆ ರವಿಕಿರಣದ ಹೊನ್ನ ಮಳೆಯನ್ನು ಆಸ್ವಾದಿಸುವ ಕಣ್ಣುಗಳು ಮರುಕ್ಷಣದಲ್ಲಿ ತನ್ನ ಕೈಕಾಲುಗಳನ್ನೂ ಗುರುತಿಸಲಾರದ ಮಂಜುಹೊನಲಿನಲ್ಲಿ ಕಂಗೆಡುತ್ತದೆ. ನಿಸರ್ಗರಮಣಿಯ ಮೌನಗೀತವನ್ನು ಮನತುಂಬಿ ಹಾಡುತ್ತಿದ್ದ ತಂಗಾಳಿ ಇದ್ದಕ್ಕಿದ್ದಂತೆ ರಭಸದಿಂದ ಕಿವಿಗಡಚಿಕ್ಕುತ್ತದೆ! ಟೋಪಿ, ಶಾಲು, ಸ್ವೆಟರ್ ಈ ಕಾಲದಲ್ಲಿ ಏಕೆ ಎಂದು ಕೈಬಿಟ್ಟಿದ್ದರೆ ಸ್ವಲ್ಪ ಹೊತ್ತಿನಲ್ಲೆ ಅವು ಇಲ್ಲದೇ ಉಳಿಯಲಾರೆವೆಂದು ಜೀವ ಚಡಪಡಿಸುತ್ತದೆ!



    ಓಹೋ ಅದೆಂಥಾ ದಿವ್ಯ ರಸಾನುಭವಗಳು! ಮೆಟ್ಟಿಲು ಮೆಟ್ಟಿಲು ಏರುತ್ತಲೆ ಅವನ್ನೆಲ್ಲಾ ಆಸ್ವಾದಿಸಬೇಕು. ಕೊನೆಯ ಮೆಟ್ಟಿಲು ಏರಿದರೆ ಮುಳ್ಳಯ್ಯನ ಗುಡಿಯ ಬಲಭಾಗದಿಂದ ಮುಳ್ಳಯ್ಯನ ಗುಡಿಯೆಡೆಗೆ ಪ್ರವೇಶಿಸಬಹುದು. ಇಲ್ಲಿ ನಾವು 6317 ಅಡಿ ಎತ್ತರಕ್ಕೆ ಏರಿದ್ದೇವೆ ಎಂದು ಸೂಚಿಸಿದ ಫಲಕ ಪ್ರೀತಿಯಿಂದ ಸ್ವಾಗತಿಸುತ್ತದೆ.

     ಮೊದಲು ಗರ್ಭಗುಡಿ ಮಾತ್ರವಿದ್ದ ಮುಳ್ಳಯ್ಯನ ಗುಡಿಗೀಗ ವಿಶಾಲವಾದ ಹಜಾರದ ಕಟ್ಟಡವಾಗಿದೆ. ಪಕ್ಕದಲ್ಲೆ ಹಗಲಿರುಳು ಮುಳ್ಳಯ್ಯರ ಜೊತೆಗೆ ಇರುವ, ಪ್ರವಾಸಿಗರ ಯೋಗಕ್ಷೇಮಗಳಿಗೆ ಸ್ಪಂದಿಸುವ ಅರ್ಚಕರ ಪುಟ್ಟ ನಿವಾಸ. ಅವರದೆಂಥಾ ಭಾಗ್ಯವೋ! ಸೌಭಾಗ್ಯವೋ! ತಪ:ಶ್ಚರ್ಯಯೋ! ಒಂದು ಬೆಂಕಿ ಕಡ್ಡಿಯೂ ದೊರೆಯಲಾರದ ಬೆಟ್ಟದ ನಡು ನೆತ್ತಿಯಲ್ಲಿ ಚಳಿ, ಮಳೆ, ಗಾಳಿ, ಬಿಸಿಲು ಒಂದನ್ನು ಲೆಕ್ಕಿಸದೇ ಮುಳ್ಳಯ್ಯನಿಗೆ ನಿತ್ಯವೂ ನಂದಾ ದೀಪ ಹಚ್ಚುತ್ತಿರುವ ಆ ಮಹಾನುಭಾವರ ಧೀಶಕ್ತಿಗೆ ಮನ ಮಣಿಯುತ್ತದೆ.


     ಮುಳ್ಳಯ್ಯ ಮತ್ತು ಸೀತಾಳಯ್ಯ ಇಬ್ಬರೂ ಮಹಾನ್ ಯೋಗಿ ಸಾಧಕರು. ಇವರ ಹೆಸರಿನಲ್ಲಿ ಈ ರಮ್ಯ ತಾಣಗಳಲ್ಲಿ ಗುಡಿ ಕಟ್ಟಿ ಪೂಜೆ ಸಲ್ಲಿಸುತ್ತಿರುವ ನಮ್ಮ ಪೂರ್ವಜರೂ ಮಹಾನ್ ದಾರ್ಶನಿಕರೇ! ಮುಳ್ಳಯ್ಯನ ಶಿಖರದ ತುತ್ತ ತುದಿಯಲ್ಲಿ ಹಚ್ಚುವ ದೀಪ ಮೋಡವಿಲ್ಲದ ಇರುಳಿನಲ್ಲಿ ಚಿಕ್ಕಮಗಳೂರಿಗೆ ಆ ಹಿರಿಯರ ಒಲವಿನ ಬೆಚ್ಚನೆಯ ನೆನಪನ್ನು ಕಟ್ಟಿಕೊಡುತ್ತದೆ. ಈ ದೀಪ ಒಮ್ಮೊಮ್ಮೆ ಆಗಸದಿಂದ ಭುವಿಗಿಳಿದ ನಕ್ಷತ್ರದಂತೆ ಕಣ್ಣು ಮಿಟುಕಿಸಿ ನಕ್ಕರೆ ಮತ್ತೊಮ್ಮೆ ಚಿಕ್ಕಮಗಳೂರಿನ ಕ್ಷೇಮದ ಕಾವಲುಗಾರನಂತೆ ರಾರಾಜಿಸುತ್ತದೆ.

     ಭಾವುಕ ಕಣ್ಣುಗಳಿಗೆ ಗಿರಿಯ ಶಿಖರದ ತುತ್ತ ತುದಿಯ ಅಂಚಿನಲ್ಲಿ ಕಾಣುವ ಮನ ತಣಿಸುವ ಸೌಂದರ್ಯ, ಸ್ವರ್ಗದ ಅಸೀಮ ಸೀಮೆಯಿಂದ ಅಯಾಚಿತವಾಗಿ ಒದಗಿಬಂದ, ಸರ್ವರಿಗೂ ಸಮಪಾಲು ಹಂಚುವ ಪ್ರಕೃತಿಯ ಅದ್ಭುತ ಐಶ್ವರ್ಯ.

     ಮಳೆಗಾಲದಲ್ಲಿ ಒಂದು ರೀತಿಯ ಸೊಬಗು, ಚಳಿಗಾಲದಲ್ಲೊಂದು ಭಾವದ ಬೆರಗು, ಬೇಸಿಗೆಯಲ್ಲಿ ಬರೀ ಆಹ್ಲಾದದ ಗುನುಗು. ಮುಂಜಾನೆಯ ಪರಿಯೇ ಬೇರೆ, ಮಧ್ಯಾಹ್ನದ ಮುಗಿಲೇ ಬೇರೆ, ಸಂಜೆಯ ಸುಖವೇ ಬೇರೆ! ಮಂಜು ಮೋಡವಿದ್ದರೆ ಒಂದು ಬಗೆಯ ಪುಳಕ, ಕಣ್ಮುಂದೆ ಹಾಲಿನ ಸಾಗರವೆ ಉಕ್ಕುಕ್ಕಿ ಹರಿಯುವ ಮೊರೆತ, ಮೋಡಗಳೊಳಗೆ ತೂರಿ ಏರಿ ಸವಾರಿ ಮಾಡಿಯೇ ಬಿಟ್ಟವೆನ್ನುವಷ್ಟು ರೋಚಕ! ಹೊಂಬಿಸಿಲಿನ ಆಗಸದಲ್ಲಿ ಬೇರೆ ರೀತಿಯದ್ದೇ ಸರಸ, ದೂರದಲ್ಲಿ ಕಾಣುವ ಊರು ಕೆರೆಗದ್ದೆತೋಟಗಳು ಪ್ರಕೃತಿಯ ಆಟದ ಸಾಮಾನಿನಂತೆ ಭಾಸ, ಮುಗಿಲು ನೆಲದ ದಿವ್ಯ ಭಾಂದವ್ಯದ ಆಸ್ವಾದದ ಸಹವಾಸ, ಶುಭ್ರ, ಶುದ್ಧ ಗಾಳಿಯನ್ನು ಒಮ್ಮೆ ಎಳೆದು ಎದೆ ತುಂಬ ತುಂಬಿಕೊಂಡರೆ ಮತ್ತೇನು ಬೇಡವೆಂಬ ನಿರಾಳ ಶ್ವಾಸ! 


     ವೈಚಾರಿಕ ನೆಲೆಗೆ ಈ ಮಹೋನ್ನತ ಶಿಖರ ಒಡ್ಡುವ ಹರಿತ ಮತೀಯ ವಿಚಾರಗಳೂ ಮಹತ್ವಪೂರ್ಣ. ಈ ಗಿರಿ ನೆತ್ತಿಯ ಮೇಲೆ ನಿಂತು ನೋಡಿದ ಪೂರ್ಣಚಂದ್ರ ತೇಜಸ್ವಿ “ಉತ್ತರ ಭಾರತಕ್ಕೆ ಹಿಮಾಲಯ ಹೇಗೆ ಪರಿಸರ ಸಮತೋಲನದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯೋ, ಹಾಗೆಯೇ ದಕ್ಷಿಣ ಭಾರತಕ್ಕೆ ಈ ಸಹ್ಯಾದ್ರಿ ಪರ್ವತಗಳು. ಮುಳ್ಳಯ್ಯನ ಗಿರಿಯ ಮೇಘಾಚ್ಛಾದಿತ ಶೀಖರದ ಮೇಲೆ ನಿಂತು ಎಡಕ್ಕೂ ಬಲಕ್ಕೂ ನೋಡಿದರೆ ಉತ್ತರದಲ್ಲಿ ಗುಜರಾತಿನವರೆಗೂ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ಹರಡಿದ ಪಶ್ಷಿಮಘಟ್ಟಗಳೆಂಬ ಹೆಸರಿನ ಸಹ್ಯಾದ್ರಿಯ ನೋಟ ದಕ್ಕುವುದು” ಎನ್ನುತ್ತಾರೆ.


   ಚಿಕ್ಕಮಗಳೂರಿನ ಪುಟ್ಟ ಮೂಲೆಯಲ್ಲೆಲ್ಲೋ ಕುಳಿತ ನಮಗೆ ಗುಜರಾತಿನಿಂದ ಹಿಡಿದು ಕನ್ಯಾಕುಮಾರಿಯವರೆಗೂ ಬಾಂಧವ್ಯವಿದೆ! ಹಾಗೆಯೇ ನಮ್ಮ ಮುಳ್ಳಯ್ಯನಗಿರಿಯ ಒಂದು ಮರಕ್ಕೆ ಬೀಳುವ ಕೊಡಲಿಯ ಪೆಟ್ಟಿಗೂ ಮೊಳಕಾಲ್ಮೂರಿನ ಜನ ನೀರಿಲ್ಲದೇ ಕಂಗೆಡುವುದಕ್ಕೂ ಒಳನಂಟು ಇದೆ.


     ನಮ್ಮೀ ಮುಳ್ಳಯ್ಯನಗಿರಿ ವೇದಾ ಮತ್ತು ಆವತಿ ಈ ಎರಡು ಜೀವ ನದಿಗಳ ತವರು. ಇವು ಕಡೂರಿನ ಕಡೆಗೆ ಹರಿದು ವೇದಾವತಿಯಾಗಿ ಮುಂದುವರೆದರೆ ಸೀತಾಳಯ್ಯನಗಿರಿ ತಪ್ಪಲಿನಲ್ಲಿ ಹುಟ್ಟುವ ಯಗಚಿನದಿ ಬೇಲೂರು ಕಡೆಗೆ ಹರಿದು ಬೇಲೂರು ಬಳಿಯಲ್ಲೆ ಅಣೆಕಟ್ಟು ಕಟ್ಟಿಸಿಕೊಂಡು ಮುಂದೆ ಹೇಮಾವತಿಯ ಮಡಿಲಿಗೆ ಸೇರಿಹೋಗುತ್ತಾಳೆ.

    ಹೇಳಿದಷ್ಟೂ ಮುಗಿಯಲಾರದ ಮುಳ್ಳಯ್ಯನಗಿರಿಯಿರುವ ಚಂದ್ರದ್ರೋಣ ಪರ್ವತದ ಸೌಂದರ್ಯ ಲಹರಿಯ ಭಾವಸಂಭ್ರಮಕ್ಕೆ ಡಿ.ವಿ.ಜಿ ಅವರ ಶಿಖರಪ್ರಾಯ ನುಡಿಯಿಂದ ತಾತ್ಕಾಲಿಕ ವಿರಾಮ ಇಡೋಣ.

“ಕುಲಪರ್ವತ ಹೃದಯಾಂಶಮೊ

ಇಳೆಯಾ ಕನಲಿಕೆಯ ಬುದ್ಬುದೋದ್ರೇಕಮೊ ಮೇ

ಣೊಲವಿನ ಪುಲಕಮೊ ಎನ್ನಿಪ

ವೊಲು ಬೆರಾಗಾಗಿಸುವುದಿತ್ತ ಚಂದ್ರದ್ರೋಣಂ”.


   ಕುಲಪರ್ವತಗಳ ಹೃದಯಾಂಶವೇ ಘನೀಭೂತವಾಗಿರುವಂತೆ ಕಾಣುವ, ಭೂಮಿಯ ರೋಮಾಂಚನದ ಉದ್ರೇಕದಿಂದ ಎದ್ದ ಬುದ್ಬುದದಂತೆ ಎದ್ದು ಕಾಣುವ, ಒಲವಿನ ಪಲಕದಂತೆ ಮಧುಮಧುರವಾಗಿರುವ ಚಂದ್ರದ್ರೋಣಪರ್ವತ ನೋಡುಗರನೆಲ್ಲ ಬೆರಗಾಗಿಸುತ್ತದೆ!!!


ಡಾ. ಮಂಜುಳಾ ಹುಲ್ಲಹಳ್ಳಿ.

Comments

  1. ಕುಳಿತಲ್ಲೇ ನಮಗೆ, ನಮ್ಮ ಕರ್ನಾಟಕದ ಹೆಮ್ಮೆಯ ಶಿಖರ ಮುಳ್ಳಯ್ಯನಗಿರಿಯ ಗಿರಿಯ ಚಾರಣದ ಅನುಭವವಾಯ್ತು.ಲೇಖನ ಕಾವ್ಯಮಯವಾಗಿ, ಪ್ರಕೃತಿ ಸೌಂದರ್ಯದ ರಸವನ್ನು ಉಣಬಡಿಸಿತು.
    ಸುಮಾರು ಮೂರು ವರ್ಷಗಳ ಹಿಂದೆ ಚಳಿಗಾಲದ ದಿನಗಳಲ್ಲಿ, ಮುಳ್ಳಯ್ಯನಗಿರಿಯನ್ನು ಮಂಜಿನ ಸೊಬಗಿನಲ್ಲಿ ಸೇವಿಸಬೇಕೆಂದು ಹೋದರೆ ( ಜನವರಿ ಮಧ್ಯ ಭಾಗ), ಬಿಸಿಲೋ ಬಿಸಿಲು ಮತ್ತು ಗಾಳಿಯ ಆರ್ಭಟ. ಆದರೂ ಪ್ರಕೃತಿ ಸೌಂದರ್ಯ ಸವಿಯಲೇನೂ ಅಡ್ಡಿಯಾಗಲಿಲ್ಲ.

    ReplyDelete
  2. ಬಹಳ ಚೆಂದದ ನಿರೂಪಣೆ, ಅಲ್ಲಿಯೇ ಹೋಗಿ ನೋಡುತ್ತಿರುವಂತಿದೆ. ಒಂದೊಮ್ಮೆ ಈ ಎಲ್ಲಾ ಕರೋನ ಅಬ್ಬರ ತಗ್ಗಿ ಭಾರತಕ್ಕೆ ಬರುವಂತಿದ್ದರೆ ನೀವು ಪ್ರಸ್ತುತಪಡಿಸಿರುವ ಸ್ಥಳಗಳನ್ನು ನೋಡುವಾಸೆಯಾಗಿದೆ. ಇಷ್ಟವಾಯಿತು.

    ReplyDelete
  3. ಜೀವನದಲ್ಲಿ ಒಮ್ಮೆ, ನಾವು ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬೇಕು, ಜೈ ಕರ್ನಾಟಕ

    ReplyDelete
  4. ನಮಸ್ತೆ ಮಂಜುಳ ಮೇಡಂ
    ಅದ್ಭುತವಾದ ವರ್ಣನೆ. ಚಿಕ್ಕಮಂಗಳೂರು ಭೂಲೋಕದ ಸ್ವರ್ಗವೇ ಸರಿ.ಅಂಥ ಕರ್ನಾಟಕದಲ್ಲಿ ಹುಟ್ಟಿದ ನಾವೇ ಧನ್ಯರು. ಇನ್ನು ಮುಳ್ಳಯ್ಯನಗಿರಿ ಕ್ಯೆಯ್ ಬೀಸಿ ಕರೆಯುತ್ತಿರುವ ಸಿಂಗಾರಗೊಂಡ ಮದುವಣಗಿತಿ. ಎಷ್ಟು ನೋಡಿದರು ಮತ್ತೆ ಮತ್ತೆ ನೋಡಬೇಕೆನುವ ಬಯಕೆಯನು ಹುಟ್ಟಿಸುವ ಸ್ವರ್ಗ. ಓಹೋ!ಅದರ ಸೌಂದರ್ಯ ವರ್ಣಿಸಲು ಅಸಾಧ್ಯ. ಗೊಂಪು ಗುಂಪಾಗಿ ಚಲಿಸುವ ಮೋಡಗಳು, ಆಗೀಗ ಸುರಿವ ತುಂತುರು ಮಳೆ, ರಬಸದಿಂದ ಬೀಸುವ ಕುಳಿರ್ಗಾಳಿ, ಅಬ್ಬ ಮೈ ಜೂಮೆನ್ನಿಸುವ ಪ್ರಪಾತ, ಎಲ್ಲೆಲು ಹಸಿರಿನಿಂದ ತುಂಬಿ ತುಳುಕುತಿರುವ ಪರ್ವತ ಸಾಲು,ಎಷ್ಟು ಸಲ ನೋಡಿದ್ರು ಪ್ರತಿ ಸಲ ಹೋದಾಗಲೂ ಹೊಸ ಅನುಭವ. ಮತ್ತೊಮೆ ನಮಗೆ ನಿಮ್ಮ ಮಾತಿನಲ್ಲಿ ರಸವತಾಗಿ ಉಣ ಬಡಿಸಿದಿರಿ ಧನ್ಯವಾದಗಳು 🙏

    ReplyDelete
  5. One of my favorite places in Karnataka / nostalgic memories rushed into the mind. wonderful article. beautiful explanation of Malanadu. Many thanks to Horanadachilume & the writer Mrs Manjula H

    ReplyDelete

Post a Comment