ಕೋವಿಡ್ ನಂತರ.....

ಕೋವಿಡ್ ನಂತರ....

ಲೇಖನ - ಶ್ರೀಮತಿ ಭಾರತಿ ಬಿ ವಿ  






ಲೇಖಕರ ಪರಿಚಯ -  ಶ್ರೀಮತಿ ಭಾರತಿ ಬಿ ವಿ. 

ಕನ್ನಡ ಸಾಹಿತ್ಯ ಲೋಕದಲ್ಲಿಂದು ಸಾಸಿವೆ ತಂದವಳ ಪರಿಚಯವಿಲ್ಲದವರು ಇಲ್ಲವೇ ಇಲ್ಲವೆಂದೇ ಹೇಳುವಷ್ಟರ ಮಟ್ಟಿಗೆ, ಬರಿಯ ಸಾಹಿತ್ಯವಷ್ಟೇ ಅಲ್ಲದೆ ಕಲೆ, ಕಲಾರಂಗದಲ್ಲಿಯೂ ಚಿರಪರಿಚಿತರಾಗಿ ತಾವೇ ಸ್ವತಃ ನಾಟಕಗಳನ್ನು ಬರೆದು ಗೆದ್ದಿರುವ, ದಿಟ್ಟ ಕನ್ನಡತಿ ಪ್ರಪಂಚ ಪರ್ಯಟನೆಯ ಹವ್ಯಾಸವನ್ನಾಗಿಸಿಕೊಂಡು ತಿರುಗಾಡಿರುವ ದೇಶಗಳ ಪಟ್ಟಿ ದೊಡ್ಡದಿದೆ.ಅವರು ಪರ್ಯಟನೆ ಮಾಡಿದ ದೇಶ, ಸಂಸ್ಕೃತಿ, ಜನರ ಬಗೆಗಿನ, ಅಲ್ಲಿನ ಅನುಭವಗಳ ಬಗೆಗಿನ ಪ್ರವಾಸ ಕಥನಗಳನ್ನೋದುವದೇ ಒಂದು ಆಹ್ಲಾದಕರ  ಅನುಭವ. 

ಇವರ ಪ್ರಮುಖ ಕೃತಿಗಳಲ್ಲಿ “ಸಾಸಿವೆ ತಂದವಳು” ಕ್ಯಾನ್ಸೆರ್ , ಅದರರೊಂದಿಗಿನ ಹೋರಾಟ, ಜನ ಮನಸ್ಥಿತಿಯ ತೆರೆದಿಡುವ ಕೃತಿಗೆ ಪ್ರಶಸ್ತಿ ಪುರಸ್ಕಾರಗಳಷ್ಟೇ ಅಲ್ಲದೆ ಅದರ ಭಾಗಗಳನ್ನು ಶೈಕ್ಷಣಿಕ ಪಠ್ಯಪುಸ್ತಕದಲ್ಲಿಯೂ ಅಳವಡಿಸಲಾಗಿದೆ. ಈ ಕೃತಿಯು ಅನುಭವದ ಅಡಿಪಾಯದ ಮೇಲಿದ್ದು ಎಷ್ಟೋ ಮಂದಿಗೆ ದಾರಿ ದೀಪವಾಗಿದೆ. 

“ನಕ್ಷತ್ರಗಳ ಸುಟ್ಟ ನಾಡಿನಲ್ಲಿ” ಪೋಲೆಂಡ್ ಪ್ರವಾಸ ಕಥನ ಸರಿ ಸುಮಾರು ಎಲ್ಲೆಡೆ ಪ್ರಕಟವಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಹಾಗೆಯೇ ಲಲಿತ ಪ್ರಬಂಧಗಳನ್ನೊಳಗೊಂಡ “ಮೀಸಳ್ ಬಾಜಿ”, ಜನಪ್ರಿಯವಾದ “ಜಸ್ಟ್ ಮಾತ್ ಮಾತಲ್ಲಿ” ಲೇಖನ ಸಂಗ್ರಹ ಹಾಗು ಜನಮನ ರಂಜಿಸುವ “ಕಿಚನ್ ಕವಿತೆಗಳು” ಕವನ ಸಂಕಲನ  ಮತ್ತೀಗ ಆಗಮಿಸಬೇಕಿರುವ “ಎಲ್ಲಿಂದಲೋ ಬಂದವರು” .. ಹೀಗೆ ಬಹುಕೃತಿಗಳ ರಚಿಸಿ ಅವಕ್ಕೆ ಮೆರುಗು ನೀಡಲೆಂಬಂತೆ ನಾಟಕಗಳನ್ನು ಬರೆದಿರುವ ಕೊಳ್ಳೇಗಾಲದ ಕನ್ನಡತಿ, ಬಿಕಾಂ ಮುಗಿಸಿ ಎಲ್ಲರಂತೆ ಲೆಖ್ಖ, ಬ್ಯಾಂಕ್ ಎನ್ನದೆ ಲೇಖನಿ ಹಿಡಿದಿರುವದು ನಮ್ಮೆಲ್ಲರ ಭಾಗ್ಯವೇ ಸರಿ. ಸರಳತೆಯಿಂದ ಕೂಡಿ ತುಂಬಿದ ಕೊಡ ತುಳುಕುವದಿಲ್ಲವೆಂಬ ಆಡುಮಾತನ್ನು ಅನುಭವಕ್ಕೆ ತಂದಂತಹವರು.

- * -


ಕೋವಿಡ್ ನಂತರ...

                                        2020ನೆಯ ವರ್ಷ ಹೇಳಲು, ಬರೆಯಲು ಮುದ್ದುಮುದ್ದಾಗಿರುತ್ತದೆ ಅನ್ನಿಸಿಯೋ ಅಥವಾ 20-20 ಕ್ರಿಕೆಟ್‌ ನೆನಪಿಸುತ್ತದೆ ಅಂತಲೋ ಒಟ್ಟಿನಲ್ಲಿ ಏನೂ ಹೆಚ್ಚುವರಿ ಯೋಗ್ಯತೆ ಇಲ್ಲದೆ ಕೂಡಾ ಎಲ್ಲದರಂತೆ ಇದೂ ಮತ್ತೊಂದು ವರ್ಷ ಅನ್ನಿಸಿಕೊಳ್ಳದೇ ಅನಗತ್ಯ ಹೈಪ್ ಸೃಷ್ಟಿ ಮಾಡಿಕೊಂಡಿತ್ತು. ಹಾಗಾಗಿ ಜನವರಿಯೆಲ್ಲ ಅದೇನೋ ಸಂಭ್ರಮದಲ್ಲಿ ಕಳೆದುಹೋಯಿತು. ಆ ನಂತರ ಫೆಬ್ರವರಿ ಬಂದೇ ಬಿಟ್ಟಿತು. ಫೆಬ್ರವರಿ ಅಂದರೆ ಫಿಲ್ಮ್ ಫೆಸ್ಟಿವಲ್ ಸಂಭ್ರಮ! ಅದು ಮುಗಿಯುತ್ತಿದ್ದಂತೆಯೇ ಮಾರ್ಚ್ ತಿಂಗಳಲ್ಲಿ ಯೂರೋಪ್ ಪ್ರವಾಸಕ್ಕೆ ಸಿದ್ದತೆ ನಡೆದಿತ್ತು. ಈ ಬಾರಿ ಪ್ರಾಹ್, ವಿಯೆನ್ನಾ, ಬುಡಾಪೆಸ್ಟ್ ನಗರಗಳನ್ನು ನೋಡುವವರಿದ್ದೆವು. ಈ ಪ್ರಾಹ್‌ನ ಹುಚ್ಚು ನಮಗೆ ಹತ್ತಿದ್ದು ಕೂಡಾ ನಾಲ್ಕು ವರ್ಷದ ಹಿಂದೆ ಫಿಲ್ಮ್ ಫೆಸ್ಟಿವಲ್‌ನಲ್ಲಿ Letters from Prague ಅನ್ನುವ ಸಿನೆಮಾ ನೋಡಿಯೇ. ಆಗಿನಿಂದ ಕಂಡ ಕನಸಿಗೆ ಈಗ ರೆಕ್ಕೆ ಮೂಡಿತ್ತು. ಇನ್ನು ಹಾರುವುದೊಂದು ಬಾಕಿ. ಒಟ್ಟಿನಲ್ಲಿ ಲೈಫ಼್ ವಾಸ್ ಬ್ಯೂಟಿಫ಼ುಲ್...!

                                            ಫಿಲ್ಮ್ ಫೆಸ್ಟಿವಲ್‌ ಶುರುವಾಯಿತು. ದಿನಕ್ಕೆ 3-4-5 ಸಿನೆಮಾ ನೋಡಿ, ರಾತ್ರಿ ಕಣ್ಣಿಗೆ ಡ್ರಾಪ್ ಬಿಟ್ಟುಕೊಂಡು ಮಲಗುವ ಸುಖವನ್ನು ಅನುಭವಿಸುತ್ತಿರುವಾಗಲೇ ಒಂದು ದಿನ ನನ್ನ ಗಂಡನಿಂದ ನನಗೆ ವಾಟ್ಸಪ್‌ನಲ್ಲಿ ಒಂದು ಉದ್ದದ ಮೆಸೇಜ್ ಬಂದಿತು! ಸಾಧಾರಣವಾಗಿ ಅವನು ‘ಊಟ’, ‘ಚಪಾತಿ 2', `ಮೊಸರನ್ನ’, ‘ಕೊರಿಯರ್ ತಗೊ’ ಎಂದು ಮೆಸೇಜ್ ಮಾಡುತ್ತಾನೆ. ನಾನು ‘ಓಕೆ’ ಎನ್ನುವ ಮೆಸೇಜ್‌ನಲ್ಲಿ ಉತ್ತರಿಸಿರುತ್ತೇನೆ. ಅಂಥದ್ದು ಇದೇನು ಇಷ್ಟುದ್ದದ ಮೆಸೇಜ್ ಎಂದು ನೋಡಿದರೆ ‘ಮನೆಗೆ ಬಂದ ಕೂಡಲೇ ಸೋಪ್‌ನಿಂದ ಕೈ ಚೆನ್ನಾಗಿ ತೊಳೆದುಕೋ. ಅಲ್ಲಿ ಸಿಗುವ ಯಾವ ಫ್ರೆಂಡನ್ನೂ ಹಗ್ ಮಾಡಿಕೊಳ್ಳಬೇಡ. ಶೇಕ್ ಹ್ಯಾಂಡ್ ಮಾಡಬೇಡ. ಸ್ಯಾನಿಟೈಜ಼ರ್ ಇಟ್ಟುಕೊ ಜೊತೆಗೆ, ಹುಷಾರು’ ಎಂದಿತ್ತು. ಅದನ್ನು ಓದಿ ನಾನು ಕಕಮಕ! ‘ಅಯ್ಯ ರಾಮ ಇವನಿಗೇನಾಯಿತು ಬೆಳಿಗ್ಗೆ ಹೊರಟಾಗ ಚೆನ್ನಾಗಿಯೇ ಇದ್ದನಲ್ಲ’ ಎಂದುಕೊಂಡಿದ್ದೆ! ಅವನಾದರೂ ಕೊರೋನಾ ಹೆಸರೆತ್ತಿರಲಿಲ್ಲ, ನಾನಾದರೂ ಇದೆಲ್ಲ ಯಾಕೆ ಹೇಳುತ್ತಿದ್ದೀ ಎಂದು ಕೇಳಿರಲಿಲ್ಲ, ಕೇಳಲು ಸಮಯವೂ ಇರಲಿಲ್ಲವೆನ್ನಿ. ಫಿಲ್ಮ್ ಫೆಸ್ಟಿವಲ್‌ ಸಮಯದಲ್ಲಿ ಯಾವುದೋ ಅನ್ಯಲೋಕದಲ್ಲೆಂಬಂತೆ ಬದುಕಿರುತ್ತೇನೆ. ದೇಶವಿದೇಶಗಳಿಂದ ಸಾವಿರಾರು ಜನ ಹುಚ್ಚರಂತೆ ಒಟ್ಟೊಟ್ಟಾಗಿ ಕುಳಿತು ವಾರವೊಂದರಲ್ಲಿ 35 ಸಿನೆಮಾ ನುಂಗಿ ನೀರು ಕುಡಿದಿದ್ದೆವು! ಈ ಜಗತ್ತಿನ ಒಂದು ಮೂಲೆಯ ಚೈನಾದಲ್ಲಿ ಶುರುವಾದ ಕೊರೋನಾ ಎಂಬ ವೈರಸ್‌ನ ಬಗ್ಗೆ ಯಾವ ಯೋಚನೆಯೂ ಇರಲಿಲ್ಲ! ಆ ನಂತರ ಗೆಳತಿಯರೊಂದಿಗೆ ತಲತ್ ಅಜ಼ೀನನ ಗಜ಼ಲ್ ಕಾರ್ಯಕ್ರಮ ನೋಡಿ, ಒಂದು ದಿನದ ಟೂರ್ ಮುಗಿಸಿ, ಒಂದು ಪಾರ್ಟಿ ಮುಗಿಸಿದೆವು. ನಂತರ ನಮ್ಮ ಯೂರೋಪ್ ಟೂರ್‌ಗೆ ಸಡಗರದಿಂದ ಪ್ಯಾಕಿಂಗ್ ಶುರು ಮಾಡಬೇಕಿತ್ತು. ಮೊದಲನೆಯ ಹಂತವಾಗಿ ಒಂದು ಸಣ್ಣ ಟ್ಯೂಬ್ ಕ್ಲೋಸಪ್ ಟೂತ್ ಪೇಸ್ಟ್ ತರಿಸಿಟ್ಟೆ. ಅವತ್ತು ಮಾರ್ಚ್ 13! ಹೊರಡಲು ಕೇವಲ 9 ದಿನಗಳು...

                                          ಹೀಗಿರುವಾಗ 15 ನೆಯ ತಾರೀಖಿಗೆ ಇದ್ದಕ್ಕಿದ್ದಂತೆ ಪ್ರವಾಸ್ ಹೊರಟಿದ್ದ ಮೂವರಲ್ಲಿ ಒಬ್ಬಳು ಗೆಳತಿ ಕೊರೋನಾ ಬಗ್ಗೆ ಶಂಕೆ ವ್ಯಕ್ತ ಪಡಿಸಿ ‘ಹೋಗುವುದು ಅಷ್ಟು ಒಳ್ಳೆಯ ಯೋಜನೆ ಅನ್ನಿಸುತ್ತಿಲ್ಲ. ನಮ್ಮ ಆಫೀಸ್‌ನಿಂದಲೂ ಏನೋ ರೂಲ್ಸ್ ಬರುತ್ತಿದೆ’ ಎಂದಾಗಲೂ ನಾನು, ಮತ್ತೊಬ್ಬಳು ಮೊಂಡುತನದಲ್ಲೇ ‘ಅಯ್ಯೋ ಏನಾಗಲ್ಲ ಬಿಡು. ಏನಂತೆ ಮಹಾ ಈ ಕೊರೋನಾ? ಪ್ರಾಣ ಹೋಗುವುದಾದರೆ ಪ್ರಾಹ್‌ನಲ್ಲೇ ಹೋಗಿಬಿಡಲಿ! ಅದೊಂಥರಾ ವೀರಮರಣ’ ಎಂದು ನಗಾಡಿದ್ದೆವು. ನವೆಂಬರ್‌ನಲ್ಲಿ ಅಮರಿಕೊಂಡ ಕೊರೋನಾ ನಮ್ಮ ಮನದಂಗಳಕ್ಕೆ ಇನ್ನೂ ಕಾಲು ಇಟ್ಟಿರಲೇ ಇಲ್ಲ. ಹಾಗಾಗಿ ನಮಗೆಲ್ಲವೂ ಹಾಸ್ಯವೇ. ಹೀಗೆ ಇದ್ದ ಪರಿಸ್ಥಿತಿ 16ಕ್ಕೆ ಪ್ರವಾಸ ಹೋಗದಿರುವುದೇ ಒಳ್ಳೆಯದು ಎಂದಾಗಿ, 22ಕ್ಕೆ ಅಂದರೆ ನಾವು ಹೊರಡಬೇಕಿದ್ದ ರಾತ್ರಿ ಭಾರತದಲ್ಲಿ ಮೊದಲ ಒಂದು ದಿನದ ಲಾಕ್‌ಡೌನ್ ಘೋಷಣೆಯಾಗಿ, ಅದಾದ ನಂತರ ಮಾರ್ಚ್ 24ಕ್ಕೆ ಸಂಪೂರ್ಣ ಲಾಕ್ ಡೌನ್ ಆಗಬಹುದು ಎಂಬ ಕನಸು ಕೂಡಾ ಕಂಡಿರಲಿಲ್ಲ! ‘ನೀರು ಕೂಡಾ ಸಿಗುತ್ತಿಲ್ಲ ಪ್ರಜೆಗಳಿಗೆ ಅಂದರೆ ಅದಕ್ಕೇನಂತೆ ಬಿಯರ್ ಕೊಟ್ಟರಾಯಿತು’ ಎಂಬ ಹಳೆಯ ಜೋಕ್ ಒಂದಿದೆಯಲ್ಲ, ಆ ರೀತಿ ನಾನು ಕೂಡಾ ಲಾಕ್ ಡೌನ್ ಎಲ್ಲ ದೇಶಗಳಲ್ಲೂ ಇದ್ದರೆ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತದೆ, ತಿರುಗಾಡಲು ಆರಾಮ್ ಬಿಡು ಎಂದೆಲ್ಲ ಹಾಸ್ಯದ ಮೂಡ್‌ನಲ್ಲಿದ್ದೆ. ಆ ಲಾಕ್ ಡೌನ್ ಅನ್ನುವುದು ನನಗೆ ಅನ್ವಯಿಸುವ ಮಾತೇ ಅಲ್ಲ ಎನ್ನುವಂತಿತ್ತು ನನ್ನ ಲೆಕ್ಕಾಚಾರ. ಅಸಲಿಗೆ ನನಗೆ ದೇಶದೇಶಗಳನ್ನು ಇಡಿಯಾಗಿ ಹೇಗೆ ಲಾಕ್ ಮಾಡಬಹುದು ಅನ್ನುವ ಕಲ್ಪನೆಯೇ ಇರಲಿಲ್ಲ. ಸಾವಿರಾರು ರಸ್ತೆಗಳಿರುವ ಊರುಗಳನ್ನು ಲಾಕ್ ಮಾಡುವುದು ಅಸಾಧ್ಯ ಎಂದು ನಂಬಿಕೊಂಡಿದ್ದೆ. ಮಲ್ಲೇಶ್ವರದಿಂದ ಬಸವೇಶ್ವರ ನಗರಕ್ಕೆ ಹೋಗಿ ಬರಲು ನಡುವಣ ನಾಲ್ಕೈದು ಎಂಟ್ರಿ ಪಾಯಿಂಟ್ ಮುಚ್ಚಿದರೆ ನಾವು ಎರಡು ದ್ವೀಪಗಳಾಗಿ ಬಿಡುತ್ತೇವೆ ಎಂಬುದು ಗೊತ್ತಾಗಿದ್ದು ಮಾರ್ಚ್ 24ಕ್ಕೆ. ಹಾಗೆ ಶುರುವಾದ ಲಾಕ್ ಡೌನ್ ಮುಗಿದಿದ್ದು ಮೇ 31ಕ್ಕೆ! ಅಂದರೆ ನಾವು ತಲೆಹರಟೆ ಮಾಡಿ ಯೂರೋಪ್ ಪ್ರವಾಸ ಹೊರಟಿದ್ದರೆ ಮೇ 31ರವರೆಗೂ ಹಿಂತಿರುಗಿ ಬರಲಾಗುತ್ತಿರಲಿಲ್ಲ! ಯೂರೋಪ್‌ನ ದೇಶಗಳಲ್ಲಿ  ತಿಂಗಳುಗಟ್ಟಲೆ ಸಿಕ್ಕಿಹಾಕಿಕೊಂಡಿದ್ದರೆ ತಗಲುವ ಖರ್ಚು ಲೆಕ್ಕ ಹಾಕಿದರೆ ಮನೆ ಮಠ ಮಾರಿ ನಮ್ಮನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಿತ್ತು! ಪರಿಸ್ಥಿತಿಯ ಗಂಭೀರತೆ ಅರ್ಥವಾದ ಮೇಲೆ ಹಿಟ್ಟು ರುಬ್ಬಲು ಪ್ರಾಹ್‌ನಲ್ಲಿ ದೋಸೆ ಮಾಡುವ ಹೋಟೆಲ್ ಕೂಡಾ ಇಲ್ಲವಲ್ಲ ಎಂದು ತಮಾಷೆ ಮಾಡಿ ನಕ್ಕಿದ್ದೆವು. ಅಲ್ಲಿಗೆ ತಿಂಗಳುಗಟ್ಟಲೆ ಸಮಯ ಹೂಡಿ ಯೋಜಿಸಿದ್ದ ಪ್ರವಾಸದ ಅಧ್ಯಾಯ ಈ ರೀತಿಯಲ್ಲಿ ಮುಗಿದುಬಿಟ್ಟಿತು. ಒಂದೆರಡು ದಿನ ಅದೇ ವಿಷಾದದ ಮೂಡ್‌ನಲ್ಲಿ ದುಃಖಿಸಿದೆವು. ಟೇಬಲ್ ಮೇಲೆ ಇಟ್ಟಿದ್ದ ಕ್ಲೋಸ್ ಅಪ್ ಟೂಥ್ ಪೇಸ್ಟ್ ಅಲ್ಲಿ ಓಡಾಡುವಾಗಲೆಲ್ಲ ನನ್ನನ್ನು ಅಣಕಿಸುತ್ತಿತ್ತು.

ಆ ನಂತರ ಬಿಡಿ, ಮನೆ ಕೆಲಸದವರು ಬರುವ ಹಾಗಿಲ್ಲವಾದ್ದರಿಂದ ವಿಷಾದಕ್ಕೂ ಸಮಯವಿಲ್ಲದಂತೆ ಕಸ ಗುಡಿಸುವ, ನೆಲ ಒರೆಸುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಕಾಯಕದಲ್ಲಿ ಮುಳುಗಿಯೇ ಹೋದೆವು. ದಿನಕ್ಕೆ ಮೂರು ಬೇಸಿನ್ ತುಂಬ ಪಾತ್ರೆ... ಛತ್ರದವರ ಥರ ತೊಳೆದೇ ತೊಳೆದದ್ದಾಯ್ತು. ಇದರ ನಡುವೆ ಹೊರಗಿನಿಂದ ತಿನ್ನಲೇನೂ ತರಿಸುವ ಹಾಗಿಲ್ಲದ ಕಾರಣ ಮನೆಯಲ್ಲಿ ಏನನ್ನಾದರೂ ಮಾಡಿ ತಿನ್ನುವ ಚಪಲ ಶುರುವಾಯಿತು. ಅದು ಮಾಡಿ ತಿಂದರೆ ಮತ್ತೆ ರಾಶಿ ಪಾತ್ರೆ ಬೀಳುತ್ತಿತ್ತು. ಅದು ಸಿಟ್ಟು ತರಿಸಿದರೂ ನಮಗೆ ಆ ದಿನಕ್ಕೆ ಇದ್ದ ಮನರಂಜನೆಯೆಂದರೆ ಅದೊಂದೇ. ಹಾಗಾಗಿ ಸಿಕ್ಕಸಿಕ್ಕದ್ದನ್ನೆಲ್ಲ ತಯಾರಿಸಿ ತಿಂದು, ಮತ್ತಿಷ್ಟು ಪಾತ್ರೆ ತೊಳೆದೆವು. ಆ ದಿನಗಳಲ್ಲಿ ನಮಗೆ ಏನೆಲ್ಲ ಜ್ಞಾನೋದಯಗಳಾದವೋ! ಪಾತ್ರೆಗೆ ನೀರು ಹಾಕಿ ನೆನೆಸದಿದ್ದರೆ ತೊಳೆಯುವವರಿಗೆ ಅದೆಷ್ಟು ಕಷ್ಟವಾಗುತ್ತದೆ ಎಂದು ಮಮ್ಮಲ ಮರುಗಿದೆವು. ಡಸ್ಟ್ ಬಿನ್‌ನಲ್ಲಿನ ಕಸವನ್ನು ಸರಿಯಾಗಿ ಮ್ಯಾನೇಜ್ ಮಾಡುವ ತಾಳ್ಮೆ ಕಲಿತೆವು. ರಾತ್ರಿ ಮಲಗುವಾಗ ಅಡಿಗೆ ಮನೆಯ ಕಟ್ಟೆ ತೊಳೆದು ಬಳಿದರೆ ಬೆಳಿಗ್ಗೆ ಏಳುತ್ತಲೇ ಕೆಲಸ ಅದೆಷ್ಟು ಸುಲಭ ಎಂದು ಅರಿತೆವು. ಹೀಗೆ ಕಲಿತ ಪಾಠಗಳನ್ನು ಇನ್ನು ಜನ್ಮೇಪಿ ಮರೆಯುವುದಿಲ್ಲ ಬಿಡು ಎಂದುಕೊಂಡು ಖುಷಿ ಪಟ್ಟೆವು. ಒಟ್ಟಿನಲ್ಲಿ ಪ್ರಾಹ್‌ನಲ್ಲಿ ಬಿಯರ್ ಸ್ಪಾನಲ್ಲಿ ಸ್ನಾನ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದ ನಾವು, ಅವತ್ತಿನ ದಿನ ನಮ್ಮೂರಲ್ಲಿ ತೊಳೆಯುತ್ತ, ಬಳಿಯುತ್ತ, ಗುಡಿಸುತ್ತ, ಒರೆಸುತ್ತ ಬೆವರಿನ ಸ್ನಾನ ಮಾಡುತ್ತ ಪುನೀತರಾದೆವು. ಪ್ರತಿ ವರ್ಷ ಬಿಸಿಲೇರಿದರೆ ಉಶ್ಶಪ್ಪ ಎಂದು ಸುಕೋಮಲೆಯರಾಗುತ್ತ, ಮೋಡ ಕಟ್ಟಿದರೆ ನವಿಲಾಗುತ್ತ, ಹನಿ ಮಳೆ ಬಿದ್ದರೆ ರೊಮ್ಯಾಂಟಿಕ್ ಆಗುತ್ತಿದ್ದವರೆಲ್ಲ ಈ ಬಾರಿ ಬಿಸಿಲಿನ ಕುರಿತು ಚಕಾರ ಎತ್ತಲಿಲ್ಲ, ಮಳೆಯ ಫೋಟೋ ಫೇಸ್‌ಬುಕ್‌ನಲ್ಲಿ ಹಾಕಲಿಲ್ಲ... ಅದಕ್ಕೆಲ್ಲ ಯಾರಿಗೆ ಸಮಯವಿತ್ತು? ಅದೇ ಸಮಯದಲ್ಲಿ ಎಷ್ಟೆಲ್ಲ ಪಾತ್ರೆ ತೊಳೆಯಬಹುದಿತ್ತಲ್ಲ! ಇದಷ್ಟೇ ಸಾಲದು ಎನ್ನುವಂತೆ ಸ್ಯಾನಿಟೈಜ಼್ ಮಾಡುವ ಹೊಸ ಕೆಲಸವೊಂದು ಗಂಟು ಬಿದ್ದಿತ್ತು. ತರಕಾರಿ ತೊಳಿ, ಹಣ್ಣು ತೊಳಿ, ಕೊತ್ತಂಬರಿ, ಕರಿಬೇವು, ನಿಂಬೆಹಣ್ಣು ತೊಳಿ, ಕವರ್‌ನಲ್ಲಿ ಬಂದದ್ದನ್ನೆಲ್ಲ ಸ್ಯಾನಿಟೈಜ಼ರ್ ಹಾಕಿ ಒಳಸೇರಿಸು ಈ ಘನಕಾರ್ಯಗಳು ಬೇರೆ.

ಈ ದಿನಗಳಲ್ಲಿ ಹೆದರಿದವರಿಗೆ ಒಂದಿಷ್ಟು ಧೈರ್ಯ ಕೊಡುವುದರ ಬದಲಿಗೆ ಟಿವಿಯಲ್ಲಿ ಪ್ರಾಸಬದ್ದವಾದ

ಕೊರೋನಾ ಮಾರಿ!

ಯಮನ ಸಾಮ್ಯಾಜ್ಯ!!

ಬೆಂದುಹೋದ ಬೆಂದಕಾಳೂರು!!!

ಎಂಬಿತ್ಯಾದಿ ಟೈಟಲ್‌ಗಳು. ಅದರ ಅಡಿಯಲ್ಲಿ ಮುದುಡಿ ಕುಳಿತ ಸಣ್ಣಕ್ಷರಗಳಲ್ಲಿ ವ್ಯಾಕ್ಸಿನ್ ಬಗ್ಗೆ ಏನಾದರೂ ಸುದ್ದಿ ಯಾವತ್ತು ಬರುತ್ತದೋ ಎಂದು ಕ್ಷಿತಿಜದತ್ತ ಕಣ್ಣು ಕಿರಿದು ಮಾಡಿ ಆಶಾವಾದದ ದೃಷ್ಟಿ ನೆಟ್ಟ ನಾವು! ಇನ್ನೇನು ಆಗಸ್ಟ್ 15ಕ್ಕೆ ಬಂದೇಬಿಟ್ಟಿತು ಅನ್ನುವ ಸುದ್ದಿ ಒಂದು ದಿನವಾದರೆ, ಮರುದಿನಕ್ಕೆ 2021ರವರೆಗೆ ವ್ಯಾಕ್ಸಿನ್ ಬರುವ ನಿರೀಕ್ಷೆಯಿಲ್ಲ ಎಂಬ ಸುದ್ದಿ. ಅಸಲಿಗೆ ನಾವು ಸಧ್ಯಕ್ಕೆ ಅದನ್ನು ನಿರೀಕ್ಷೆ ಮಾಡಿಯೇ ಇಲ್ಲ. ಸುದ್ದಿ ಹೇಳಿದವರೂ ಅವರೇ, ನಿರೀಕ್ಷೆ ಮಾಡಬೇಡಿ ಅಂದವರೂ ಅವರೇ! ಏನೋ ಸಧ್ಯ ಇಂಥ ಕರಾಳ ದಿನಗಳಲ್ಲಿ ಡ್ರೋನ್ ಪ್ರತಾಪ್‌ನಂಥವರು ಕಾಗೆ ಹಾರಿಸಿ ಕೊರೋನಾದಿಂದ ಒಂದಿಷ್ಟು ಬಿಡುಗಡೆ ಕೊಟ್ಟರು! ಥು ಈ ಜಗತ್ತು ಹೀಗಾಗಿಹೋಯಿತು ಅಂತ ಹಳಹಳಿಸುತ್ತ, ಬದುಕಿಗೆ ಏನೂ ಆಶಾವಾದವೇ ಇಲ್ಲವೇ ಅಂತ ವಿಷಾದದ ಮೂಡಿಗೆ ಹೋಗುತ್ತಿತ್ತು ಆಗಾಗ ಮನಸ್ಸು.

ಅಷ್ಟರಲ್ಲೇ ಈ ಹಿಂದೆ ಯಾವತ್ತೂ ಜಗತ್ತಿಗೆ ಈ ಥರದ ರೋಗ ಅಮರಿಕೊಂಡಿರಲೇ ಇಲ್ಲವಾ ಎನ್ನುವ ಪ್ರಶ್ನೆ ಶುರುವಾಗಿ ಓದಲು ಶುರು ಮಾಡಿದರೆ ಮೊದಲನೆಯ ಮಹಾಯುದ್ದ 1918 ರಲ್ಲಿ ನಡೆಯುತ್ತಿರುವಾಗಲೇ ಸ್ಪೈನ್ ಫ಼್ಲು ಎಂಬ ಸಾಂಕ್ರಾಮಿಕ ರೋಗ ಜಗತ್ತಿನ ಉದ್ದಗಲಕ್ಕೂ ಹರಡಿತ್ತು ಎಂಬ ವಿಷಯ ತಿಳಿಯಿತು. ಅದು 1920ರ ಏಪ್ರಿಲ್‌ವರೆಗೂ ಜಗತ್ತನ್ನು ಅಲ್ಲಾಡಿಸಿ ಒಟ್ಟು 5 ಕೋಟಿ ಜನರನ್ನು ಸಾಯಿಸಿತ್ತು! ಮೂರು ಮೂರು ಒಬ್ಬೆಗಳಲ್ಲಿ ಜಗತ್ತನ್ನು ಹಿಂಡಿಹಾಕಿದ ಈ ಮಾರಿಗೆ ಕೊನೆಗೂ ವ್ಯಾಕ್ಸಿನ್ ಕಂಡು ಹಿಡಿಯಲಾಗಲಿಲ್ಲ. ರೋಗನಿರೋಧಕ ಶಕ್ತಿ ಇದ್ದವರು ಬದುಕಿ ಉಳಿದು, ಆ ಶಕ್ತಿ ಇಲ್ಲದವರು ಪ್ರಾಣ ಕಳೆದುಕೊಂಡರು. ಮೊದಲನೆಯ ಮಹಾಯುದ್ದ ಮತ್ತು ಸ್ಪ್ಯಾನಿಷ್ ಫ಼್ಲು ಎರಡೂ ಸೇರಿಸಿ 6 ವರ್ಷದಲ್ಲಿ 7 ಕೋಟಿ ಜನರು ಇಲ್ಲವಾದರು. ಕಾಲಾನಂತರ ಆ ವೈರಸ್ ಮ್ಯುಟೇಷನ್ ಆಗುತ್ತ ಹೋಗಿ ಅದರ ಶಕ್ತಿ ಕುಂದುತ್ತ ಹೋಯಿತು. ಇದಲ್ಲದೇ ಕಾಲರಾ, ಸಿಡುಬು, ಪೋಲಿಯೋ ಮತ್ತು ಇನ್ನೂ ಇಂಥ ಹಲವಾರು ರೋಗಗಳು ಸಾಕಷ್ಟು ಸಲ ನಮ್ಮ ಮೇಲೆ ಆಕ್ರಮಣ ಮಾಡಿದೆ ಮತ್ತು ಪ್ರತಿ ಬಾರಿಯೂ ವಿಜ್ಞಾನ ಮತ್ತು ನಮ್ಮೊಳಗಿನ ರೋಗನಿರೋಧಕ ಶಕ್ತಿ ಅದರೊಡನೆ ಹೋರಾಡಿ ಹಿಮ್ಮೆಟ್ಟಿಸಿದೆ! ಇದನ್ನೆಲ್ಲ ಓದಿ ವಿಷಾದದ ಮೂಡಿನಲ್ಲಿರುವ ಮನಸ್ಸು ಛಂಗನೆ ಪುಟಿದೆದ್ದು ಕೊರೋನಾ ಕೂಡಾ ಹಾಗೆ ಶಕ್ತಿಗುಂದಬಹುದಾ? ವೈರಸ್‌‌ಗೆ ವ್ಯಾಕ್ಸಿನ್ ಕಂಡುಹಿಡಿಯಲಾಗುತ್ತಿದೆ. ಮನುಷ್ಯರ ಮೇಲೆ ಟೆಸ್ಟ್‌ಗಳು ನಡೆಯುತ್ತಿವೆ. ಇನ್ನೊಂದಿಷ್ಟು ತಿಂಗಳುಗಳ ಒಳಗೆ ವ್ಯಾಕ್ಸಿನ್ ಬಂದೇಬಿಡಬಹುದಾ ಎಂದು ಸಂಭ್ರಮಿಸಲು ಪ್ರಾರಂಭಿಸುತ್ತದೆ!

ಇದೆಲ್ಲದರಿಂದ ಏನಾಯಿತೋ, ಏನು ಬಿಟ್ಟಿತೋ ಗೊತ್ತಿಲ್ಲ, ಆದರೆ ನಾವು ಹಿಂದೆಂದಿಗಿಂತಲೂ ಪ್ರೀತಿಗಾಗಿ, ಮನುಷ್ಯ ಸಂಬಂಧಗಳಿಗಾಗಿ ಹಾತೊರೆಯುತ್ತಿದ್ದೇವೆ. ಒಂದು ಬೆಚ್ಚನೆಯ ಸ್ಪರ್ಶಕ್ಕಾಗಿ ಬಾಯಾರಿ ಕಾದು ಕುಳಿತಿದ್ದೇವೆ, ಪ್ರೀತಿಸುವವರ ಒಡನಾಟಕ್ಕೆ ಪರಿತಪಿಸುತ್ತಿದ್ದೇವೆ. ಎಂದೋ ಮಿಸ್ ಮಾಡಿಕೊಂಡ ಯಾವುದೋ ಕಾಫಿಯ ಭೇಟಿ, ಯಾವುದೋ ಮದುವೆ, ಹುಟ್ಟಿದ ಹಬ್ಬಗಳಿಗೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ. ಈ ರೀತಿಯೆಲ್ಲ ಆಗಬಹುದು ಎಂದು ಗೊತ್ತಿದ್ದರೆ ನಾವು ಆ ಭೇಟಿಯನ್ನು ಹೇಗೋ ಸಾಧ್ಯವಾಗಿಸಬಹುದಿತ್ತು ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದೇವೆ. ನಮ್ಮ ಬಿಜ಼ಿಯ ನೆಪಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಎಸೆದು ಅದೊಂದು ದಿನ... ಅದೊಂದು ದಿನ ಹೋಗಿ ಬರಬೇಕಿತ್ತು ಎಂದು ಕನವರಿಸುತ್ತಿದ್ದೇವೆ. ನಾವು ಎದುರಿಗೆ ಸಿಕ್ಕ ಪ್ರೀತಿಪಾತ್ರರನ್ನು ಪ್ರೀತಿಯಿಂದ ಅಪ್ಪುವ ಆ ದಿನ... ಹೇಗಿರಬಹುದು ಆ ದಿನ ಎಂದು ತವಕದಿಂದ ಕಾಯುತ್ತಿದ್ದೇವೆ. ಜನಜಂಗುಳಿಯಲ್ಲಿ ಯಾವುದೇ ಭಯವಿಲ್ಲದೇ ಬೆರೆಯುವ ದಿನವೊಂದು ಮತ್ತೆ ಬರಲಿ ಎನ್ನುವ ಪ್ರಾರ್ಥನೆಯಲ್ಲಿದೆ ಜಗತ್ತು.




ಕಷ್ಟಗಳ ನಂತರದ ಸುಖಕ್ಕೂ

ಸಾವಿನ ಸನಿಹ ಹೋಗಿ ಬಂದ ನಂತರದ ಬದುಕಿಗೂ

ಮನುಷ್ಯರೆಲ್ಲ ಒಂದೊಂದು ದ್ವೀಪಗಳಾಗಿ ಬದುಕಿದ ನಂತರದ ಸ್ಪರ್ಶ, ಸಾಂಗತ್ಯಕ್ಕೂ

ಆಷಾಢದ ಮಳೆ, ಗಾಳಿಯ ನಂತರ ಕಾಲಿಕ್ಕುವ ಶ್ರಾವಣಕ್ಕೂ

ಹೆಚ್ಚಿನ ಬೆಲೆ, ಹೆಚ್ಚು ಜೀವನ ಪ್ರೀತಿ ಅಲ್ಲವಾ...!

Comments

  1. ನಿಮ್ಮ ಲಲಿತ ಪ್ರಬಂಧ ಚೆನ್ನಾಗಿದೆ. ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ, ನನ್ನ ಬಿಟ್ಟರಿಲ್ಲ ಎನ್ನುವ ಮನುಷ್ಯನಿಗೆ ಪಾಠ ಕಲಿಸುತ್ತಿದೆ.

    ReplyDelete
  2. ಭಾರತಿ ಬರೆಯೋ ಶೈಲಿಯೇ ಅಂದ! 😍👌

    ReplyDelete
  3. “ಆದರೆ ನಾವು ಹಿಂದೆಂದಿಗಿಂತಲೂ ಪ್ರೀತಿಗಾಗಿ, ಮನುಷ್ಯ ಸಂಬಂಧಗಳಿಗಾಗಿ ಹಾತೊರೆಯುತ್ತಿದ್ದೇವೆ. ಒಂದು ಬೆಚ್ಚನೆಯ ಸ್ಪರ್ಶಕ್ಕಾಗಿ ಬಾಯಾರಿ ಕಾದು ಕುಳಿತಿದ್ದೇವೆ, ಪ್ರೀತಿಸುವವರ ಒಡನಾಟಕ್ಕೆ ಪರಿತಪಿಸುತ್ತಿದ್ದೇವೆ. ಎಂದೋ ಮಿಸ್ ಮಾಡಿಕೊಂಡ ಯಾವುದೋ ಕಾಫಿಯ ಭೇಟಿ, ಯಾವುದೋ ಮದುವೆ, ಹುಟ್ಟಿದ ಹಬ್ಬಗಳಿಗೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ“
    ನಿಜಕ್ಕೂ ಈ ಕರೋನ ಬಂದು ಜನರ ಸ್ವಚ್ಚಂದಕ್ಕೆ, ಜನಜೀವನಕ್ಕೆ ಬ್ರೇಕ್ ಹಾಕಿ ಚಿಂತನೆಗೊಳಮಾಡಿದೆ. ಎಷ್ಟೆಷ್ಟೋ ಬಿಟ್ಟು ಹೋದ ಕೊಂಡಿಗಳು ಹೊಸ ಹೊಳಪು ಕಂಡುಕೊಳ್ಳುತ್ತಲಿವೆ.

    ReplyDelete
  4. ನಮಸ್ತೆ ಮೇಡಂ, ಹೌದು ಪ್ರಕೃತಿಯ ಮುಂದೆ ಯಾರು ದೊಡ್ಡವರಲ್ಲ ಅಂಥ ತೋರಿಸಿ ಕೊಡುತ್ತಿರೋದು ಈ ಸಾಂಕ್ರಾಮಿಕ ರೋಗ. ಎಂದೋ ತಪ್ಪಿಸಿ ಕೊಂಡ ಶುಭ ಸಮಾರಂಭಗಳು ಒಂದು ಕಡೆ ಮನಸ್ಸಿಗೆ ನೋವನ್ನು ಕೊಟ್ರೆ, ಈ ಸಾಂಕ್ರಾಮಿಕ ಕಾಯಿಲೆ ಇಂದ ನಮನ್ನು ಅಗಲಿದ ಆತ್ಮೀಯರನ್ನು ಕೊನೆಯ ಕಷ್ಟದ ಸಮಯದಲ್ಲಿ ನಮಿಂದ ಏನು ಸಹಾಯ ಮಾಡೋಕೆ ಆಗದ ಅಸಹಾಯಕ ಪರಿಸ್ಥಿತಿಯ ನೋವು ನಾವು ಜೀವಂತ ಇರುವರೆಗೂ ನಮನ್ನು ಬಾಧಿಸುತ್ತದೆ. ಈ ಸಾಂಕ್ರಾಮಿಕ ರೋಗ ಬಂದಾಗ ಹೆಚ್ಚಿನ ಕಾಳಜಿವಹಿಸಿ "ಮನೆಯವರೆಲ್ಲ,ನಾವೇಲರು ನಿನ್ನ ಜೊತೆ ಇದೀವಿ, ಏನು ಆಗೋಲ್ಲ ನಾವೆಲ್ಲ ಒಟ್ಟಾಗಿ ಎದರಿಸೊಣ ಅಂಥ ಹೇಳಿ ಆ ವ್ಯಕ್ತಿಯ ಮನೋಭಲವನ್ನು ಋಣನಾತ್ಮಕವಾಗಿ ಬಲಪಡಿಸಬೇಕು "ಹಾಗೆ ಅಧಾಗ ಮಾತ್ರ ಈ ಪರಿಸ್ಥಿತಿ ಇಂದ ಆರೋಗ್ಯವಾಗಿ ಹೊರ ಭರೋಕೆ ಸಾಧ್ಯ. 🙏

    ReplyDelete
    Replies
    1. ಟೈಪಿಂಗ್ ತೊಂದ್ರೆ ಇಂದ ಧನಾತ್ಮಕ ಅನ್ನುವ ಬದಲು ಋಣತ್ಮಕ ಎಂದಾಗಿದೆ ಕ್ಷಮೆ ಇರಲಿ

      Delete
  5. This comment has been removed by the author.

    ReplyDelete
  6. This comment has been removed by the author.

    ReplyDelete
  7. ನಮಸ್ತೆ ಮೇಡಂ, ಹೌದು ಪ್ರಕೃತಿಯ ಮುಂದೆ ಯಾರು ದೊಡ್ಡವರಲ್ಲ ಅಂತ ತೋರಿಸಿ ಕೊಡುತ್ತಿರೋದು ಈ ಸಾಂಕ್ರಾಮಿಕ ರೋಗ. ಎಂದೋ ತಪ್ಪಿಸಿ ಕೊಂಡ ಶುಭ ಸಮಾರಂಭಗಳು ಒಂದು ಕಡೆ ಮನಸ್ಸಿಗೆ ನೋವನ್ನು ಕೊಟ್ರೆ, ಈ ಸಾಂಕ್ರಾಮಿಕ ಕಾಯಿಲೆ ಇಂದ ನಮನ್ನು ಅಗಲಿದ ಆತ್ಮೀಯರ ಕೊನೆಯ ಕಷ್ಟದ ಸಮಯದಲ್ಲಿ ನಮ್ಮಿಂದ ಏನು ಸಹಾಯ ಮಾಡೋಕೆ ಆಗದ ಅಸಹಾಯಕ ಪರಿಸ್ಥಿತಿಯ ನೋವು ನಾವು ಜೀವಂತ ಇರುವರೆಗೂ ನಮನ್ನು ಬಾಧಿಸುತ್ತದೆ. ಈ ಸಾಂಕ್ರಾಮಿಕ ರೋಗ ಬಂದಾಗ ಹೆಚ್ಚಿನ ಕಾಳಜಿವಹಿಸಿ "ಮನೆಯವರೆಲ್ಲ, “ನಾವೆಲ್ಲರೂ ನಿನ್ನ ಜೊತೆ ಇದೀವಿ, ಏನು ಆಗೋಲ್ಲ ನಾವೆಲ್ಲ ಒಟ್ಟಾಗಿ ಎದುರಿಸೋಣ” ಎಂದು ಹೇಳಿ ಆ ವ್ಯಕ್ತಿಯ ಮನೋಬಲವನ್ನು ಬಲಪಡಿಸಬೇಕು "ಹಾಗೆ ಆದಾಗ ಮಾತ್ರ ಈ ಪರಿಸ್ಥಿತಿಯಿಂದ ಆರೋಗ್ಯವಾಗಿ ಹೊರಬರೋಕೆ ಸಾಧ್ಯವೆನಿಸುತ್ತೆ. 🙏

    ReplyDelete
  8. ಭಾರತಿ ಮೇಡಂ, ನೀವು ಚಿಲುಮೆಗೆ ಬರಿತಿರೊದು ನೋಡಿ ತುಂಬಾ ಖುಷಿಯಾಯಿತು.

    ReplyDelete
  9. A well rounded article camouflaging crisis in classic style. Thanks Madam

    ReplyDelete
  10. Nice to see article about Covid. Excellent narration madam. TV rhyming scary words are absolutely true.

    ReplyDelete

Post a Comment