ಬಲೆ

 ಬಲೆ

ಲೇಖನ - ಹೇಮಾ ಸದಾನಂದ ಅಮೀನ್

ನಿನ್ನೆ ಅನಿರೀಕ್ಷಿತವಾಗಿ ಸಂಧ್ಯಾಳಿಗೆ  ಶಶಿಯ ಭೇಟಿಯಾಯಿತು.  ಮಾತುಂಗದ “ ಪಿವಿಆರ್”   ಚಿತ್ರಮಂದಿರದಲ್ಲಿ ಸಿಕ್ಕಿದ್ದ.   ಒಬ್ಬನಿಗೆ ಮನೆಯಲ್ಲಿರಲು ಬೇಜಾರಾಗಿ ಸಿನಿಮಾಗೆ ಬಂದುದಾಗಿಯೂ,  ಸಿನಿಮಾ ನೋಡಲು ಅಷ್ಟೊಂದು ಮನಸ್ಸು ಸರಿಯಿಲ್ಲವೆಂಬುದಾಗಿಯೂ ತಿಳಿಸಿದ್ದ. ಅವಳೂ  ತನ್ನ ಉತ್ಸಾಹವನ್ನು ಕುಗ್ಗಿಸಿಕೊಂಡಳು. ಆದ್ದರಿಂದ, “ನನಗೂ ಮನೆಯಲ್ಲಿರಲು  ತುಂಬಾ ಬೋರು, ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಬಂದೆ. ನಿಮಗೆ ಮೂಡಿದ್ದರೆ ನಾಳೆ ಖಂಡಿತಾ ನಮ್ಮನೆಗೆ ಬನ್ನಿ ಸಿಕ್ತಿನಿ” ಎಂದಳು. ಶಶಿ ಶುಷ್ಕನಗು ಬೀರಿ ಸಿಗರೇಟೊಂದನ್ನು ತುಟಿಗೇರಿಸಿ, ಕಡ್ಡಿಗೀರಿ, ಹೊಗೆಯನ್ನು ಸುರುಳಿಸುರುಳಿಯಾಗಿ ಹೊರಬಿಟ್ಟ. 


ಸಂಧ್ಯಾ  ಸಂದೀಪನನ್ನು ಮದುವೆಯಾದಂದಿನಿಂದ  ದ್ವೇಷಿಸುತ್ತಾ ಬಂದ ಕಾರಣವೆಂದರೆ   ಈ ಸಿಗರೇಟು. ಅದಕ್ಕಿಂತ ಮೊದಲು ಸಿಗರೇಟು ಸೇದುವವರನ್ನು ದ್ವೇಷಿಸುತ್ತಿರಲಿಲ್ಲವೆಂದಲ್ಲ. ಆದರೆ ಮದುವೆಯ ನಂತರ ಗಂಡ ಹೆಚ್ಚೆಚ್ಚು ಸಿಗರೇಟು ಸೇದುತ್ತಿರುವುದೇ ಅವಳಿಗೆ ಅಲರ್ಜಿ. ಮಾತು ಮಾತಿಗೂ ಒಂದರ ಹಿಂದೆ ಇನ್ನೊಂದರಂತೆ ಸಿಗರೇಟುಗಳನ್ನು ಸುಡುವ ಸಂದೀಪನ ಬಗ್ಗೆ ಅವಳಿಗೆ ಯಾಕೋ ಜಿಗುಪ್ಸೆ. 

ಈಚೀಚೆಗೆ, ಅಂದರೆ ಕಳೆದ ಒಂದು ವರ್ಷದಿಂದ ಸಂದೀಪನ ಈ ಅಭ್ಯಾಸ ವಿಪರೀತವಾಗಿ, ಅಸಹ್ಯವಾಗಿ, ಸಿಗರೇಟು ಸೇದುವ ದುರಭ್ಯಾಸವನ್ನು ತಹ ಬಂದಿಗೆ ತರಲು ಅವಳು ಪ್ರಯತ್ನಿಸಿದ್ದು0 ಟು. ಕೆಲವೊಮ್ಮೆ  ಬಹಳ ಹೊತ್ತಿನ ತನಕ ಗಹನವಾಗಿ ಮಾತನ್ನಾಡುವಾಗ ಆಕಸ್ಮಾತ್ ಸಿಗರೇಟು ಹಚ್ಚಿದರೆ, ಅವಳು ತನ್ನ ಗಂಡನ ಮಾನಸಿಕ ಹಿಂಸೆಯನ್ನು ಅರ್ಥ ಮಾಡಿಕೊಂಡು ಕ್ಷಮಿಸುತ್ತಿದ್ದಳು. 

ಅದರಂತೆ  ಇಂದು  ಶಶಿ ಸಹ   ಮಾತಿನ  ಮಧ್ಯ  ಸಿಗರೇಟು ಸೇದಿದಾಗ ಸುಮ್ಮನಾದಳು.  ಏಕೆಂದರೆ ಅವನು ತನ್ನ ಸ್ಥಿತಿಯನ್ನು ತನಗಿರುವ ಚಟವನ್ನು ಹೇಳಿ ಹೊಗೆ ಬಿಡುವಾಗ, ಅವಳ ಮುಖದಲ್ಲಿ  ಏನೋ ಅನುಮಾನ, ಯೋಚನೆಗಳ ಲಹರಿಯ ಜೊತೆಗೆ ಅವನನ್ನೊಮ್ಮೆ ದಿಟ್ಟಿಸಿ ನೋಡಿದಳು .  ಅಲ್ಲಲ್ಲಿ ಪಾಲಿಶ್ ಮಾಸಿ ಹೋಗಿ, ಅಟ್ಟೆಗಳು ಬಿರಿಯುವಂತಿದ್ದ ಕಾಲಿನ ಹಳೆಯ ಬೂಟುಗಳು, ಒಂದೆರಡು ಕಡೆ ಹೊಲಿಗೆ ಬಿಟ್ಟ ಶರ್ಟು, ಪ್ಯಾಂಟಿನ ಜೊತೆಗೆ ಸವಕಲಾದ ರುಮಾಲು ಶಶಿಗೆ ತನ್ನ ಮಾತು ಮತ್ತು ವಯ್ಯಾರ ಯಾವ ರೀತಿಯ ಪೆಟ್ಟನ್ನು ಕೊಡಬಹುದೋ ಎಂದು ಯೋಚಿಸಲಾರಂಭಿಸಿದಳು . ಏಕಮುಖ  ಪ್ರೀತಿಯ ನೋವನ್ನು ಅನುಭವಿಸಿದ ಯಾತನೆ ,  ಮನಸ್ಸಿಲ್ಲದ ನಿರ್ಣಯವನ್ನು ಕೈಗೊಳ್ಳಬೇಕಾದ ಅಸಹಾಯಕತೆ. ಇದಕ್ಕೆ ಮೂಲ ಕಾರಣ ಇವನೇ  ಎಂದು ಮನಸ್ಸು ಬಿಕ್ಕಿ ಬಿಕ್ಕಿ ಹೇಳಿತ್ತಿತ್ತು.   ಮೌನವಾಗಿದ್ದ ಮುಖದಲ್ಲಿ ಕೀಳರಿಮೆ ಮತ್ತು ನೋವಿನ ಛಾಯೆ ಕಾಣಿಸಿತು. ತೆಳುವಾಗಿ ನಗುವಿನ ಲೇಪನವನ್ನು ಲೇಪಿಸಿ  ಮೌನ ಮುರಿಯುತ್ತಾ ಹೇಳಿದಳು :

“ಮನೆ ಗೊತ್ತಿರಬೇಕಲ್ಲ? ಕಿಂಗ್ಸರ್ಕಲ್ ಬಳಿ ಬಿಗ್‌ ಬಜಾರ್‌ ಎದುರು  ನಾಲ್ಕನೇ ಮೈದಾನಿನ ಕ್ರಾಸ್ ರೋಡಿನಲ್ಲಿ ಅರ್ಧ ಫರ್ಲಾಂಗ್ ನಡೆದರೆ ಸಾಕು, ಬಲಕ್ಕೆ ಕಾಣಿಸುವ ‘ಅದ್ವಿತಿ ಅಪಾರ್ಟಮೆಂಟ್‌  ,   ಬಿ ವಿಂಗ್‌  ರೂಮ್‌ ನಂ, ೬೦೮ …”

ಆತ ಮೌನವಾಗಿದ್ದ, ಈ ಬಾರಿ ಆಡಿದ ಮಾತಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಶಶಿ ಸುಮ್ಮನಿದ್ದ.  ಹಾಗಾಗಿ ಆಕೆಗೆ ನಿರಾಶೆಯಾಯಿತು.  ತಾನು ಹಾಗೆ ಆಡದೆ, ತನ್ನ ಶ್ರೀಮಂತಿಕೆಯನ್ನು ಆ ರೀತಿ ತೋರಿಸಿಕೊಳ್ಳದಿದ್ದಲ್ಲಿ,  ಅವನ ದೃಷ್ಠಿಯಲ್ಲಿ ಅಗ್ಗವಾಗಿಬಿಡುವ ಸಂಭವವಿತ್ತು ಎಂದೆನಿಸಿ ತುಟಿಕಚ್ಚಿ ಕೊಂಡಳು. ಅವನೂ ತುಟಿ ಎರಡು ಮಾಡದ್ದರಿಂದ ಆಕೆ ಮುಂದಕ್ಕೆ ಹೆಜ್ಜೆ ಇಕ್ಕಿದಾಗ,  ಶಶಿ ,

“ಸ್ವಲ್ಪ ನಿಲ್ಲು .. ಕ್ಷಮಿಸಿ   ನಿಂತುಕೊಳ್ಳಿ…” ಎಂದ, ಅವಳು ನಿಂತಳು.

“ನೋಡಿ ನಿಮ್ಮ ಹತ್ತಿರ ಒಂದು ಮುಖ್ಯವಾದ ವಿಷಯ ಮಾತನಾಡೋದಿದೆ” ಎಂದು ಬಾಯ್ದೆರೆದ.

“ಹಾಗಾದ್ರೆ ನಾಳೆ ಬನ್ನಿ, ಹೇಗಿದ್ದರೂ ಮನೆಗೆ ಬರ್ತಿರಲ್ಲ. ಈಗ ಸಿನಿಮಾ ಶುರುವಾಗುವ ಹೊತ್ತಾಯ್ತು. ನನ್ನದು ಬಾಲ್ಕನಿ ಟಿಕೇಟು…. ಎಂದಷ್ಟೇ ಹೇಳಿ ಮುಂದೆ ನಡೆದು, ಮಹಡಿಯ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿದಳು.

ಶಶಿ ಸಿಗರೇಟಿಗಾಗಿ ಜೇಬು ತಡಕಾಡಿದ. ಪ್ಯಾಕು ಖಾಲಿಯಾಗಿತ್ತು.

***

ಮಧ್ಯಾಹ್ನದ ಹೊತ್ತು. ಸಂಧ್ಯಾ  ಊಟ ಮುಗಿಸಿ ವಿಶ್ರಮಿಸುತ್ತಿದ್ದಳು. ಮೊಬೈಲ್ ರಿಂಗಣಿಸಿತು.  ಎತ್ತಿಕೊಂಡು ‘ಹಲೋ’ ಎಂದಳು. ಗೆಳತಿ ಸುಕನ್ಯಾ ಮಾತನಾಡುತ್ತಿದ್ದಳು. ರಾತ್ರಿ ಎಂಟು ಗಂಟೆಯ ಹೊತ್ತಿಗೆ  ತಾನು ತನ್ನ ಗಂಡನೂ ಮನೆಗೆ  ಬರುವುದಾಗಿಯೂ, ಎಲ್ಲಿಗೂ ಹೋಗದೆ ಮನೆಯಲ್ಲಿಯೇ ಇರಬೇಕೆಂದೂ ಒಂದೇ ಉಸಿರಿನಲ್ಲಿ ಉಸುರಿದಳು. ಅದಕ್ಕವಳು  “ಧಾರಳವಾಗಿ! ಖಂಡಿತಾ ಬನ್ನಿ” ಎಂದು ಹೇಳಿ ಮೊಬೈಲ್  ಕೆಳಗಿರಿಸಿ ಸಂದೀಪನಿದ್ದ ರೂಮಿನತ್ತ ಧಾವಿಸಿದಳು.

“ರೀ, ನೋಡಿ ರಾತ್ರಿಗೆ ಸುಕನ್ಯಾ ಹಾಗೂ ಮಾಧವ ಬರುವವರಿದ್ದಾರೆ. ನೀವೆಲ್ಲೋ ಹೊರಗೆ ಹೋಗ್ತೀನಿ ಅಂತ ಹೋಗ್ಬಿಟ್ರೆ ನಾನೊಬ್ಬಳೆ ಪೇಚಾಡುವ ಸ್ಥಿತಿಯಾದೀತು” ಅವಳು ಅಷ್ಟು ಹೇಳಿ ಮುಗಿಸುತ್ತಿದ್ದಂತೆಯೇ ಸಂದೀಪ ಅವಳನ್ನು ತನ್ನತ್ತ ಎಳೆದು ಅಪ್ಪಿ ತುಟಿಯನ್ನು ಚುಂಬಿಸಿದ. ಆಕೆ ಕೊಸರಾಡಿದಳು.  ಆತ ಬಿಡಲಿಲ್ಲ. “ಇದೇನಿದು ಇಷ್ಟು ಹೊತ್ತಿನಲ್ಲಿ….” ಅವಳು ಮುಖ ಸಿಂಡರಿಸಿದಾಗ, “ ಅಯ್ಯೋ ಮುದ್ದು , ರಸಿಕತೆಗೆ ಹೊತ್ತುಗೊತ್ತು ನೋಡೋಕ್ಕಾಗುತ್ತಾ ? ” ಎನ್ನುತ್ತಾ ಇನ್ನಷ್ಥು ಬಿಗಿಯಾಗಿ  ಅಲಂಗಿಸಲು ಕಾಲಿಂಗ್ ಬೆಲ್  ಅಡ್ಡಿಯಾಯಿತು. ಆಕೆ ದಡಬಡಿಸಿ ಗಂಡನಿಂದ ಬಿಡಿಸಿಕೊಂಡು ಹೊರ  ಬರಲು ಸ್ಡಲ್ಪ ಸಮಯ ತಾಗಿತು. ಕೇಶವ್‌ ಕಾಕಾ ಬಾಗಿಲು ತೆರೆದು, ಸಂಧ್ಯಾ ಬೇಟೀ.. ದೆಕೋತೋ ಕೋನ್‌ ಆಯೇ ಹೈ ಎಂದು ಎರಡು ಬಾರಿ ಕೂಗಿ ಕರೆದಿದ್ದರು.  ಅವಳು ಹೊರಗೆ ಬರುತ್ತಿದಂತೆ ಟೀಪಾಯ್ ಸುತ್ತಲೂ ಇರುವ ಕುರ್ಚಿಗಳೊಂದರಲ್ಲಿ ಶಶಿ ಆಗಲೇ ಬಂದು  ಕುಳಿತಿದ್ದ. 

ಸಂಧ್ಯಾಳ  ಮುಖ ನೋಡಿದವನೆ ಏಳಲು ಹೊರಟ. ಅವಳು, “ಇರ್ಲಿ ಕೂತ್ಕೊಳ್ಳಿ, ಯಾವಾಗ ಬಂದ್ರಿ?” ಎಂದು ಮುಗುಳ್ನಗುತ್ತಾ ಪ್ರಶ್ನಿಸಿದಳು. :ಈಗಷ್ಟೆ ಬಂದೆ” ಎಂದುತ್ತರಿಸಿ ಆತನೂ ಕಿರುನಗೆ ಬೀರಿದ. ಗಂಡನನ್ನು ಕೂಗಿಕರೆದು ಪರಿಚಯಿಸುತ್ತಾ . ನಾವಿಬ್ಬರೂ ಬಾಲ್ಯದ ಒಡನಾಡಿಗಳೆಂದೂ, ಒಂದೇ ಊರಿನಲ್ಲಿದ್ದು ಶಾಲೆ, ಕಾಲೇಜು ಓದಿದವರೆಂದೂ  ತನ್ನ ಗಂಡನಿಗೆ ತಿಳಿಸಿ ಶಶಿಯ ಕಡೆ ತಿರುಗಿ, -

“ನಿಮಗೆ ಸುಕನ್ಯಾ ಸಿಕ್ಕಿದ್ದಳೇ? ನಿನ್ನೆ ಇದನ್ನು ನಿಮ್ಮಲ್ಲಿ ಕೇಳುವುದನ್ನೇ ಮರೆತೆ, ಅವಳೂ ಇವತ್ತು ಅಂದರೆ ಈ ರಾತ್ರಿ ಹೊತ್ತಿಗೆ ಬರ್ತಾಳೆ. ನೀವು ಸಿಕ್ಕಿದ್ದನ್ನು ನಿನ್ನೆ ಅವಳು ಫೋನು ಮಾಡಿದಾಗ ಹೇಳೋದು ಮರೆತು ಬಿಟ್ಟೆ: ಎಂದು ವಿಷಾದ ವ್ಯಕ್ತಪಡಿಸಿದಳು.


“ಹೌದೇನು. ನನಗೆ ಯಾವತ್ತೋ ಒಮ್ಮೆ ಸಿಕ್ಕಿದಾಗ ಮೊಬೈಲ್  ನಂಬರ್ ಕೊಟ್ಟಿದ್ದಳು. ಮಾತನಾಡೋಕೆ ಸಾಧ್ಯವಾಗಿಲ್ಲ. ಹೇಗಿದ್ರೂ  ಈಗ ಬರ್ತಾಳಲ್ಲ”. ಎಂದು ಹೇಳಿ ತಾನು ತಂದಿದ್ದ ಚಿಪ್ಸ್  ಮತ್ತು ಕುಕ್ಕಿಸ್ ಪ್ಯಾಕೇಟನ್ನು ತೆಗೆದು ಅವಳ ಕೈಗೆ ಕೊಡುತ್ತಾ, “ಮಕ್ಕಳಿಗಾಗಿ ತಂದೆ” ಎಂದ. ಅವಳು ಕ್ಷಣಕಾಲ ಮೂಕಳಾಗಿ ನಿಂತುಕೊಂಡಳು. ಅಷ್ಟೇ ವೇಗದಲ್ಲಿ ಸಾವರಿಸಿಕೊಂಡು ಸ್ವೀಕರಿಸುತ್ತಾ, “ಥ್ಯಾಂಕ್ಸ್, ಆದರೆ ನಮಗಿನ್ನು ಮಕ್ಕಳಾಗಿಲ್ಲ” ಎಂದು ಮುಸಿಮುಸಿ ನಕ್ಕಳು. ಶಶಿ ಪೆಚ್ಚಾದ.

ಸ್ವಲ್ಪ ಹೊತ್ತು ಹಾಗೇ ಎಲ್ಲರೂ ಮೌನವಾಗಿದ್ದರು. ಅನಂತರ ಶಶಿಯೇ, “ಒಂದು ಲೋಟ ನೀರು ಬೇಕು” ಎಂದು ಮೌನದ ಕೊಳಕ್ಕೆ ಮಾತಿನ ಕಲ್ಲೊ0ದನ್ನು  ಬಿಸಾಕಿದ. ಅವಳು ನಿರುತ್ಸಾಹದಿಂದ ಎದ್ದು ಒಳಗೆ ಹೋಗಿ, ಒಂದು ಗ್ಲಾಸ್ ನೀರು ತಂದು ಟೀಪಾಯ್ ಮೇಲೆ ಇಟ್ಟು ಹೋದಳು. ಶಶಿಯ ಮುಖ ಬೆಚ್ಚಿದಂತಿತ್ತು. ಅದನ್ನು ಕಾಣದವನಂತೆ ನಟಿಸುತ್ತಾ ಅಲ್ಲೇ ಕುಳಿತಿದ್ದ ಸಂದೀಪ್, “ಇನ್ನೇನು ಸಮಾಚಾರ?   ಎಂದು ಪ್ರಶ್ನಿಸಿದ. ಅವನಿಗೆ ಅಷ್ಟೇ ಬೇಕಾದದ್ದು, ಮಾತಿಗಾರಂಭಿಸಿದ.

“ನನಗೆ ನಿಮ್ಮ ಹೆಂಡ್ತಿಯ ಜತೆ ಸ್ವಲ್ಪ ಮಾತನಾಡಬೇಕಾಗಿತ್ತು. ಒಂದು ವಿಷಯದ ಮೇಲೆ ಚರ್ಚಿಸೋದಿದೆ…” ಎಂದಾಗ “ಆಗಲಿ ನೋಡುವ” ಎಂದಷ್ಟೇ ಹೇಳಿ ಸಂದೀಪ ಸುಮ್ಮನಾದ.  ಅದೇ ಹೊತ್ತಿಗೆ ಸಮನಾಗಿ ಹೊರಗೆ ವ್ಯಾಗನಾರ್ ಕಾರ್  ಪಾರ್ಕ್‌ ಆಗ್ತಿರೋದು ಕಂಡಿತು . ಅವಳು ಗಡಿಬಿಡಿಯಿಂದ ಹೊರಹೊರಟಳು. ಸಂದೀಪನೂ ಹೆಂಡತಿಯನ್ನು ಹಿಂಬಾಲಿಸಿದ. ಶಶಿಯೂ ಜೊತೆಗೆ ಹೊರಟ. ಆಗ ತಾನೇ ಸುಕನ್ಯಾ ತನ್ನ ಗಂಡ  ಮಾಧವನೊಂದಿಗೆ ಕಾರಿನಿಂದ ಇಳಿದು, ಗೇಟ್ ಕಡೆಗೆ ನಡೆದು ಬರುತ್ತಿದ್ದಳು. ಅವಳನ್ನು ನೋಡುತ್ತಲೇ ನಗೆ ಮುಖದಿಂದ “ಹಾಯ್” ಎಂದಳು. ಅವಳೂ  ಉಲ್ಲಸಿತಳಾಗಿ, “ಹಲೋ” ಎಂದು ಅವರಿಬ್ಬರನ್ನೂ  ಸ್ವಾಗತಿಸಿದಳು. ಸಂದೀಪ ಮಾಧವನ ಜೊತೆ ಸೇರಿದ. 

ಸಂಧ್ಯಾ ಕಣ್ಣುಗಳನ್ನು ಅರಳಿಸುತ್ತಾ  ಸುಕನ್ಯಾಳ  ತೋಳನ್ನು ತಿವಿಯುತ್ತಾ ಹೇಳಿದಳು.

“ಸುಕ್ಕೂ, ಶಶಿ  ಬಂದಿದ್ದಾನೆ.

 ಸುಕನ್ಯಾ  ಮುಖ ಹೊರಳಿಸಿ “ನಮಸ್ಕಾರ” ಎಂದಷ್ಟೇ ಹೇಳಿ, ತನಗೆ ಅಷ್ಟೊಂದು ಪರಿಚಯದವನಲ್ಲವೆಂಬಂತಹ ಭಾವನೆಯನ್ನು ಮೂಡಿಸಿದ್ದಳು. ಅವಳಲ್ಲಿ ಕಂಡ ನಿರುತ್ಸಾಹದಿಂಧ ಶಶಿಯ ಮನ ನೊಂದಿರಬೇಕೆಂದು ಸಂಧ್ಯಾಳಿಗನಿಸಿತು. ಮೊದಲು  ಶಶಿ ಹಾಗೂ ಸುಕನ್ಯಾರ ನಡುವೆ ‘ತಾನು  ಅರ್ಥವಾಗದವಳಂತೆ ಬೆರೆತ್ತಿರುವುದು ಮತ್ತು  ತಾನು ನಗುಪಾಟಲಿಯ  ವಿಷಯವಾಗಿರುವ ಸತ್ಯ ಬಹಳ ದಿನಗಳ ಬಳಿಕ ಗೊತ್ತಾಗಿತ್ತು.  

***

ರಾತ್ರಿ ಸುಮಾರು ಹತ್ತುವರೆ ಗಂಟೆಯ ಸಮಯ. ಊಟ ಮುಗಿಸಿ ಶಶಿಗೆ ಇಷ್ಟವಾದ  ನೆಚ್ಚುರಲ್ ಟೆಂಡರ್  ಕೋಕೊನಟ್ ಆಯಿಸ್ ಕ್ರೀಂ ಎರಡನೇ ಸರತಿಯಲ್ಲಿ ಮುಗಿಸಿದ್ದಾಯಿತು.   ಸಂದೀಪ ಸಿಗರೇಟಿನ ಹೊಗೆ ಉಗುಳುತ್ತಾ ಸಮಯ ಪೋಲು ಮಾಡುತ್ತಿದ್ದ. ಶಶಿ ಡಿಪ್ಲೋಮೆಟ್. ಬೇರೆ ಸಂದರ್ಭದಲ್ಲಾಗಿದ್ದರೆ ಅವನೂ ಸಿಗರೇಟು ಸೇದುತ್ತಿದ್ದ. ಇವತ್ತು ಸುಮ್ಮನ್ನೆ ಮಾತೆದ್ದ ಕಡೆ ನೋಡಿ ಒಂದು ಕಿರು ನಗೆ ಬೀರಿ   ಸಂಧ್ಯಾಳಟ್ಟ ದೃಷ್ಟಿ ಹಾಯಿಸಿದ . ಸಿಗರೇಟುಗಳ ಹೊಗೆಯಿಂದ   ಮನ ಕದಡುತ್ತಿರುವಾಗ… ಸಂಧ್ಯಾಳಿಗೆ ಈ ಹೊಗೆಯ ವ್ಯೂಹದ ನಡುವೆ ನಿಮಿಷವೂ ಕೂರಲಾಗಲಿಲ್ಲ. ಮನಃಕ್ಷೋಭೆ ಹೆಚ್ಚಾಯಿತು. ಮೈ ನವಿರೆದ್ದು ಥರಥರಿಸ ತೊಡಗಿದಳು. ಒಟ್ಟಿನಿಂದ ಅವಡುಗಚ್ಚಿ ಕುರ್ಚಿಯಿಂದ ಭರ್ರನೆ ಎದ್ದಳು ‘ಥತ್’ ಎಂದು ಉರಿಯುತ್ತಿದ್ದ ಕೋಪವನ್ನು ಶಮನಗೊಳಿಸಳೆ0ಬಂತೆ ಅಡುಗೆ ಮನೆಗೆ ನುಗ್ಗಿ ಒಂದು ಲೋಟ ನೀರನ್ನು ಗಟಗಟ ಕುಡಿದಳು. ತಲೆ ಬಿಸಿಯಾಗಿತ್ತು. ಬಹಳ ಪ್ರಯಾಸದಿಂದ ಸಮಸ್ಥಿತಿಗೆ ಬಂದಳು. ಸ್ವಲ್ಪ ಸಮಯದ ನಂತರ ಹೊರಬಂದಳು. 

ವರಾಂಡಕ್ಕೆ ಬರುವಾಗ ಟೀಪಾಯಿನ ಕೆಳಗೆ ಅವಳ ಗಂಡನ ಕಾಲುಗಳು ಸ್ನೇಹಿತೆ ಸುಕನ್ಯಾ ಕಾಲುಗಳನ್ನು ಹೊಸೆಯುತ್ತಿದ್ದವು. ಅವಳ ಹೃದಯ ದಿಗ್ಗೆ0ದಿತು.   ಅವಳನ್ನು ಕಂಡಾಕ್ಷಣ ಇಬ್ಬರ ಮುಖದಲ್ಲಿ ಬಣ್ಣ ಬದಲಾವಣೆಯಾದರೂ ಕಾಲುಗಳು ಬೆಸೆಯುವಾಟ ಮುಂದುವರೆದಿತ್ತು. ಅವಳು ಅದನ್ನು ಕಾಣದಂತೆ ಬಂದು ಕುಳಿತಳು. ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು   ತನಗೇನೂ  ಭಾಧಿಸಿಲ್ಲವೆಂಬಂತೆ ವರ್ತಿಸತೊಡಗಿದಳು. ಎಲ್ಲವನ್ನೂ ನೋಡುತ್ತಾ ಬಿಟ್ಟ ಕಣ್ಣು, ಬಾಯಿಂದ ಪ್ರತಿಮೆಯಂತಾಗಿದ್ದ ಶಶಿಯ ಮುಂದೆ ಅವಳು ಕುಬ್ಜಳಾಗಿ ಹೋದಳು. ಅವಳ ಮನಸ್ಸಿನ ತಳಮಳವನ್ನು ಅರಿತವಳಂತೆ, ಸುಕನ್ಯಾ ವಾಚ್ ನೋಡಿಕೊಂಡು,

“ಓಹ್ ಹನ್ನೊಂದುವರೆ, ಸಂಧ್ಯಾ ಟೈಮಾಯ್ತೆ. ನಾವಿನ್ನು ಹೋಗ್ತೀವಿ” ಎಂದಳು. ಅವಳ ಗಂಡ ಕೂಡ, “ಹೂಂ, ನಾವಿನ್ನು ಬರ್ತೀವಿ, ಬಹಳ ಲೇಟಾಯ್ತು, ಬರ್ತೀವಿ, ಬರಲಾ ಸಂದೀಪ್…?’ಎನ್ನುತ್ತಾ  ಎದ್ದೇಬಿಟ್ಟರು.  ಸುಕನ್ಯಾ ಹೈಹೀಲ್ಡ್ ಮೆಟ್ಟಿಕೊಂಡು, ಕ್ರೇಪ್‌ ಸಿಲ್ಕ ಸೀರೆಯ ಸೆರಗನ್ನು ನಾಜೂಕಿನಿಂದ ರವಿಕೆಯ ಸಂದಿಗೆ ಸಿಕ್ಕಿಸಿಕೊಳ್ಳುತ್ತ. ಶಶಿಯು ಅಸ್ಪೃಶ್ಯನೋ ಎಂಬಂತೆ ಅವನಿಂದ ದೂರದೂರಕ್ಕೆ  ಸರಿದು, ತಿರಸ್ಕಾರದ ದೃಷ್ಠಿ ಬೀರಿ,  ಕ್ಲೋಸಪ್‌ ನಗು ಪ್ರದರ್ಶಿಸುತ್ತ, ಮೆಟ್ಟಿಲುಗಳನ್ನು ಇಳಿಯತೊಡಗಿದಳು. ಮಾಧವ ಅವಳನ್ನು ಹಿಂಬಾಲಿಸಿದ.

ಶಶಿ  ಸಂಧ್ಯಾಳನ್ನು ಹಿಂಬಾಲಿಸುತ್ತಾ ಗ್ಯಾಲರಿಯಲ್ಲಿ  ಅವಳ ಪಕ್ಕಕ್ಕೆ  ಬಂದು  ಪಿಸುರುತ್ತಾ,  

“ನೋಡಿ, ನೀವು ಕೆಲ ದಿನಗಳಲ್ಲೇ  ಸಂದೀಪನನ್ನು ಕಳಕೊಳ್ಳುತ್ತೀರಿ. ಸುಕನ್ಯಾಳ ಗಂಡ ಗೇ. . ಪದೇ ಪದೇ ಫೋನು ಮಾಡಿ ಅವಳು ನಿಮ್ಮನೆಗೆ  ಬರುವ ಉದ್ಧೇಶದ ಹಿಂದೆ ಬೇರೆಯೇ ರಸಿಕತೆ ಇದೆ. ನಿನ್ನೆ ಚಿತ್ರಮಂದಿರದಲ್ಲಿ ಹೇಳಬೇಕೆಂದಿದ್ದೆ. ನೀವು ಅವಕಾಶ ಮಾಡಿಕೊಡಲಿಲ್ಲ.

ಸಂಧ್ಯಾಳಿಗೆ ತನ್ನ ಪರಿವಾರಕ್ಕೆ ಸುಕನ್ಯಾಳ ದೃಷ್ಟಿ ಬಿದ್ದಿರುವುದೆಂಬ ಕುರುಹು ಈಗಾಗಲೇ ಸಿಕ್ಕಿತ್ತು. ಅದರೂ ಪಿಟ್‌ ಎನ್ನದೇ, ಒಳಗೆ ಹೋಗಿ ಸೋಪಾದಲ್ಲಿ ದೊಪ್ಪೆಂದು ಒರಗಿದಳು. ಹಾಗೆಯೇ ಕಣ್ಣು ಮುಚ್ಚಿ ಶಶಿ ಮತ್ತು ಸುಕನ್ಯಾಳ ನಡುವೆ ಆವರಿಸಿದ ಮೌನದ ಗುಟ್ಟು ಕಣ್ಣ ಮುಂದೆ ಸಿನೆಮಾದಂತೆ ಚಲಿಸಿತು.  ಶಶಿ  ಸಂಧ್ಯಾಳನ್ನೇ ತದೇಕದೃಷ್ಟಿಯಿಂದ ನೋಡುತ್ತಿದ್ದ. 

ಸಂಧ್ಯಾ ಮತ್ತೇನೋ ನೆನಪಿಸಿಕೊಂಡು ಸಂದೀಪನ್ನು ನೋಡಲು, ಅವನು ಕಾಣಿಸದಿದ್ದಾಗ, ಅವನ ಕೋಣೆಯತ್ತ ಧಾವಿಸಿದಳು.

ಇನ್ನೂ ಬಾಗಿಲ ವರೆಗೂ ಮುಟ್ಟಿರಲಿಲ್ಲ.  ಸಂದೀಪ ಫೋನಲ್ಲಿ ಯಾರೊಂದಿಗೆ ಮಾತಾಡುತ್ತಾ, 

ವೊ ಆಯೇ ಘರ್‌ ಮೇ ಹಮಾರೆ, ಖುದಾ ಕಿ ಕುದರತ್‌ ಹೈ ಕಭಿ ಹಮ ಉನಕೊ , ಕಭಿ ಅಪನೇ ಘರ್‌ ಕೋ ಧಖತೇ ಹೈ ……. ಮೀರ್ಜಾ ಗಾಲಿಬನ ಶಾಯರಿಗಳು ತೇಲಿ ಬರುತ್ತಿದವು..


 

Comments

  1. ಸಂಬಂಧ, ಮನಸ್ಸುಗಳ ತೊಳಲಾಟವನ್ನು ಚೆಂದ ಚಿತ್ರಿಸಿದ್ದೀರಿ. ಕತೆಯು ಅರ್ಥಪೂರ್ಣವಾಗಿ ಮೂಡಿಬಂದಿದೆ.

    ReplyDelete
  2. very good read. well narrated

    ReplyDelete

Post a Comment