ಮಂಜ ಮಂಡಿಸಿದ ಟ್ವಿಸ್ಟೆಡ್ ಪರಂಪರೆ

 ಮಂಜ ಮಂಡಿಸಿದ ಟ್ವಿಸ್ಟೆಡ್ ಪರಂಪರೆ

ಹಾಸ್ಯ ಲೇಖನ - ಅಣುಕು ರಾಮನಾಥ್




ಕಂಜ ಕುಮುದಂಗಳಿಲ್ಲದ ಸರಂ ಸರದಿಂದೆ 

ರಂಜಿಸದ ಶುಕಪಿಕಂ ಶುಕಪಿಕಂಗಳ್ಗೆ ಫಲ

ಮಂಜರಿಯನೀಯದಿಹ ಮಾವು ಮಾವುಗಳನಪ್ಪದ ಬಳ್ಳಿ ಬಳ್ಳಿಗಳೊಳು

ಮಂಜುಳಧ್ವನಿಗುಡದ ಪರಮೆ ಪರಮೆಗೆ ಸಂತ

ಸಂ ಜನಿಸದಲರಲ ನವಪರಿಮಳಂಗಳಿಂ

ದಂ ಜಡಿಯದೆಳಗಾಳಿ ಎಳಗಾಳಿಯಿಲ್ಲದಾ ಬನವಿಲ್ಲವಾ ನಾಡೊಳು ||

ಪಂಪನ ಬನವಾಸಿಯ ವರ್ಣನೆಯನ್ನು ಗಟ್ಟಿಯಾಗಿ ಓದಿದೆ.

‘ದಟ್ಸ್ ಓಲ್ಡ್ ಹ್ಯಾಟ್. ನಾವು ಕಾಲಕ್ಕೆ ತಕ್ಕಂತೆ ನುಡಿಯಬೇಕು’ ಎಂದ ಮಂಜ.

‘ಹೇಗೆ?’

‘’ಕೊಚ್ಚೆ ಕೆಸರುಂಗಳಾವೃತ ಕೆರೆ ಕೆರೆಯಿಂದ

ಹೊಚ್ಚ ಹೊಸದಾದ ಲೇಔಟ್ ಲೇಔಟುಂಗಳ್ಗೆ ಪ್ಲ್ಯಾನ್

ಹೊಂಚಿ ಸ್ಯಾಂಕ್ಷನುಗಳೀವ ಮಂಡ್ಳಿ ಮಂಡ್ಳಿಗಳನ್ನಪುವ ಖೂಳ ಪಕ್ಷಗಳೊಳು

ಲಂಚದ ಧ್ವನಿಗುಡುವ ತಂತ್ರಿ ತಂತ್ರಿಗೆ ಸಂತ

ತಂ ಚರ್ಪಿನ ಬಲ ನವ ರೂಲ್ಸ್ ರೆಗ್ಯುಲೇಷನಿಂ

ದಂ ಜಡಿದೆಳೆವ ಚಾಳಿ ಚಾಳಿಯಿಲ್ಲದಾ ಎಡೆಯಿಲ್ಲವೀ ನಾಡೊಳು ||

ಎನ್ನುವುದೇ ಇಂದಿಗೆ ಹೊಂದುವ ‘ಚಂಪೂ’ ಕಾವ್ಯ. ಅಸಲಿಗೆ ತೆಲುಗಿನಲ್ಲಿ ಚಂಪು ಎಂದರೆ ಸಾಯಿಸು ಎಂದರ್ಥ. ನಮ್ಮ ಅಧಿಕಾರಿಗಳಿಗೆ ತೆಲುಗು ಅರ್ಥವಾಗತ್ತೆ, ಅನುಷ್ಠಾನಕ್ಕೂ ತರುವವರಿದ್ದಾರೆ’

‘ಮಂಜ, ನೀನು ಹೇಳಿದ್ದು ಚಂಪೂ ಅಲ್ಲ, ವೃತ್ತ’

‘ಹಾಗೇ ಇಟ್ಕೋ. ಕೂತಲ್ಲೇ ಕೂತಿದ್ದ ಲಂಚ ಕೊಡೋವ್ರು, ತೊಗೊಳೋವ್ರು, ತೊಗೊಂಡೊವ್ರನ್ನ ಹಿಡಿಯೋವ್ರು, ಹಿಡಿದವರನ್ನ ಹಿಡಿಯೋವ್ರು, ಹಿಡಿದವರನ್ನ ಹಿಡಿಯೋವ್ರನ್ನ ಬಿಡಿಸೋವ್ರು ಎಲ್ಲರೂ ಲಂಚಕಂಭದ ಸುತ್ತಲೇ ಸುತ್ತುವುದರಿಂದ ಅವರು ವೃತ್ತವೇ. ವೃತ್ತಗಳ ಬಗ್ಗೆ ವೃತ್ತದಲ್ಲಿ ಬರೆದರೂ ತಪ್ಪೇನಿಲ್ಲ’

‘ಇವೆಲ್ಲ ನಮ್ಮ ಪರಂಪರೆ ಅಲ್ಲ ಕಣೋ’

‘ಯಾವುದರ ಬಗ್ಗೆ ಹೇಳ್ತಿದ್ದೀಯ ನೀನು?’

‘ಲಂಚ’  


‘ವಿಧಾನಸೌಧದ ಮೇಲೆ ‘ಸರ್ಕಾರಿ ಕೆಲಸ ದೇವರ ಕೆಲಸ’ ಅಂತ ಬರೆದಿದೆ. ಅಂದರೆ ಅಲ್ಲಿರೋವ್ರೆಲ್ಲ ದೇವರುಗಳೇ. ಆದ್ದರಿಂದಲೇ ಅವರು ದೃಷ್ಟಿಗೆ ಗೋಚರವಾಗದಿರೋದು. ದೇವರನ್ನ ಕಾಣಬೇಕಾದರೆ ನೈವೇದ್ಯ, ಫಲ, ಪುಷ್ಪ, ಕಾಣಿಕೆ ಕೊಡಬೇಕೂಂತ ಧರ್ಮವೇ ಹೇಳೋವಾಗ, ಪುರಾಣಗಳೇ ವಿವರಣೆ ನೀಡಿರೋವಾಗ ಲಂಚ ನಮ್ಮ ಪರಂಪರೆಯ ಅಂಗವೇ. ಕೈಗೆ ಸಿಕ್ಕದೆ, ಕಣ್ಣಿಗೆ ಕಾಣದೆ, ಕಾಡಿಬೇಡಿದಾಗ ಅಷ್ಟಿಷ್ಟು ವರವನ್ನು ಕರುಣಿಸುವ ದೊಡ್ಡಮನುಷ್ಯರೆಲ್ಲಾ ದೇವರೇ; ಅವರಿಗೆ ಕೊಡುವುದನ್ನ ನೈವೇದ್ಯ ಎನ್ನಬೇಕು. ಲಂಚವಲ್ಲ’ ಗರಮ್ಮಾದ ಮಂಜ.

‘ಕೆರೆಗಳನ್ನು ಮುಚ್ಚುವುದು ಸಂಪ್ರದಾಯವೇನು?’

‘ಅದಕ್ಕೆ ದುರ್ಯೋಧನನೇ ಕಾರಣ’

‘ಹೇಗೆ?’

‘ಧರ್ಮಸಂಸ್ಥಾಪನಾರ್ಥಾಯ ಕೃಷ್ಣ ಪಾಂಡವರ ಪಕ್ಷ ವಹಿಸಿ ಕುರುವಂಶದ ನಾಶಕ್ಕಾಗಿ ಶ್ರಮಿಸುತ್ತಿದ್ದ. ದುರ್ಯೋಧನ ಭೂಮಿಯ ಮೇಲೆ ಎಲ್ಲಿದ್ದರೂ ಭೀಮ ಬಿಡುತ್ತಿರಲಿಲ್ಲ. ಆಗ ದುರ್ಯೋಧನ ರಿವರ್ಸ್ ಗೇರಲ್ಲಿ ನಡ್ಕೊಂಡ್ಹೋಗಿ ಕೆರೇಲಿ ಬಚ್ಚಿಟ್ಕೊಂಡ...’

‘ಅದು ಕೆರೆಯಲ್ಲ, ಸರೋವರ’

‘ಎ ರೋಸ್ ಬೈ ಎನಿ ಅದರ್ ನೇಮ್ ಸ್ಮೆಲ್ಸ್ ಆಸ್ ಸ್ವೀಟ್ ಅನ್ನುವ ಹಾಗೆಯೇ ಎ ಕೆರೆ ಬೈ ಎನಿ ಅದರ್ ನೇಮ್ ಈಸ್ ಕೆರೆ ಓನ್ಲಿ. ಕಮಿಂಗ್ ಟು ದ ಪಾಯಿಂಟೂ... ದುರ್ಯೋಧನ ಅವಿತುಕೊಳ್ಳಕ್ಕೆ ಅವಕಾಶ ಕೊಟ್ಟಿದ್ದು ಅಧರ್ಮಕ್ಕೆ ಇಂಬು ಕೊಟ್ಟಹಾಗೆ. ದೇರ್‌ಫೋರ್ ಸರೋವರ ಈಸ್ ಅಧರ್ಮ. ಕೆರೆ ಬೀಯಿಂಗ್ ದ ಕಸಿನ್ ಆಫ್ ಸರೋವರ ಆಲ್ಸೋ ಈಸ್ ಅಧರ್ಮ. ಧರ್ಮಸಂಸ್ಥಾಪನಾರ್ಥಾಯ ಕೆರೆಗಳನ್ನು ಮುಚ್ಚುವುದೇ ಧರ್ಮ’  

‘ಕೆರೆಗಳನ್ನು ಮುಚ್ಚಿದರೆ ಬೇಸಾಯಕ್ಕೇನು ಮಾಡ್ಬೇಕೋ?’

‘ದೆಹಲಿಯಲ್ಲಿ ಊಟ ತಿಂಡಿ ಕೊಟ್ಟು ರೈತರನ್ನ ತಿಂಗಳುಗಟ್ಟಲೆ ನೋಡಿಕೊಳ್ಳುವಂತಹ ‘ಸ್ಪೆಷಲ್ ಸ್ಟ್ರೈಕ್ ಕಮಿಟಿ’ ಇದೆ. ಆ ಕಮಿಟಿಗೆ ಅರ್ಜಿ ಹಾಕಿಕೊಂಡು ರೈತರು ಕುಟುಂಬ ಸಹಿತ ತಿಂಗಳುಗಟ್ಟಲೆ ಬಿಟ್ಟಿ ಜೀವನ ನಡೆಸಬಹುದು. ಮಳೆ ಬಂದ ವಾಟ್ಸಪ್ ಮೆಸೇಜ್ ಬಂದಾಗ ರಿಟರ್ನ್ ಆದರೆ ಸಾಕು’

‘ಜಮೀನು ಪಾಳುಬಿದ್ದಮೇಲೆ ಹೊಟ್ಟೆಗೆ ಮಣ್ಣು ತಿನ್ನಬೇಕಷ್ಟೆ’

‘ಅದಕ್ಕಾಗಿ ಕೆಲವು ಮಣ್ಣಿನ ಮಕ್ಕಳ ಕುಟುಂಬಗಳೇ ಇವೆ’

‘ಇವೆ. ಅವು ಮೇಯ್ದ ಜಾಗದಲ್ಲಿ ಮತ್ತೆ ಹುಲ್ಲು ಬೆಳೆಯುವುದಿಲ್ಲ’ ಗಡುಸಾಗಿ ಧಿಕ್ಕರಿಸಿದೆ. ಮಂಜ ಸ್ವಲ್ಪ ಸಮಯ ಚಿಂತಾಕ್ರಾAತನಾದ.

‘ಮರಗಳನ್ನು ಕಡಿಯುವುದಂತೂ ಅಕ್ಷಮ್ಯ ಅಪರಾಧ’ ನನ್ನ ಪರಿಸರಪರ ವಾದವನ್ನು ಮುಂದುವರಿಸಿದೆ.

‘ಪರಂಪರೆಯನ್ನು ಧಿಕ್ಕರಿಸುವುದು ತಪ್ಪು’ ಯಥಾಸ್ಥಿತಿಗೆ ಮರಳಿದ ಮಂಜ.

‘ಮರ ಕಡಿಯುವುದು ಪರಂಪರೆಯೇನೋ?’

‘ಮಹಾಭಾರತದ ಅರಣ್ಯ ಪರ್ವದ ಭೀಮಸೇನನೇ ಇದಕ್ಕೆ ಹರಿಕಾರ’

‘ನಿನ್ನ ಮಾತನ್ನು ಸಮರ್ಥಿಸಿಕೊಳ್ಳದಿದ್ದರೆ ಕೋವಿಡ್ ವೈರಾಣುವನ್ನು ನಿನ್ನ ಮೇಲೆ ಛೂ ಬಿಡುತ್ತೇನೆ’ ಅಬ್ಬರಕಂಠಿಯಾದೆ.

‘ಒದರಿದರೆ ಪರ್ವತದ ಶಿಖರದ

ಲುದುರಿದವು ಹೆಗ್ಗುಂಡುಗಳು ಮುರಿ

ದೊದೆಯೆ ಬಿದ್ದವು ಬೇರುಸಹಿತ ಮಹಾ ದ್ರುಮಾಳಿಗಳು |

ಗದೆಯ ಹೊಯ್ಲಿನ ಗಂಡ ಶೈಲವೊ

ಕದಳಿಗಳೊ ತಾವರೆಯ ವುಬ್ಬಿದ

ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ ||

ಭೀಮನ ಆರ್ಭಟಕ್ಕೆ ಪರ್ವತದ ಮೇಲಿದ್ದ ಹೆಬ್ಬಂಡೆಗಳೇ ಉದುರಿದವಂತೆ, ದೊಡ್ಡ ದೊಡ್ಡ ಮರಗಳೇ ಬುಡಸಮೇತ ಉರುಳಿ ಬಿದ್ದವಂತೆ. ಕುಮಾರ ವ್ಯಾಸನೇ ಹೀಗೆ ಹೇಳಿರುವಾಗ ನಿನ್ನದೇನು ಗುನುಗು?’ ಅಬ್ಬರಕಂಠಕ್ಕೆ ಮ್ಯಾಚ್ ಆಗುವ ಕೀಚಲುಕಂಠಿಯಾದ ಮಂಜ.

‘ಯುದ್ಧದಲ್ಲೋ, ಕಾಳಗದಲ್ಲೋ ಹೀಗೆ ನಡೆದಿರಬಹುದು’ ಭೀಮಸೇನನ ಪಕ್ಷ ವಹಿಸಲೆತ್ನಿಸಿದೆ.

‘ಹಾಗಾದರೆ ಅದರ ಮುಂದಿನ ಪದ್ಯವನ್ನು ಕೇಳಿಸಿಕೊ:

ಮುಡುಹು ಸೋಂಕಿದೊಡಾ ಮದಾದ್ರಿಗ

ಳೊಡನೆ ತೋರಹತರು ಕೆಡೆದುವಡಿ

ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು |

ಒಡೆದುದಿಳೆ ಬೊಬ್ಬಿರಿತಕೀತನ

ತೊಡೆಯ ಗಾಳಿಗೆ ಹಾರಿದವು ಕಿರು

ಗಿಡ ಮರಂಗಳು ಮೀರಿ ನಡೆದನು ಭೀಮ ನಡವಿಯಲಿ ||

ಭುಜ (ಮುಡುಹು) ತಗುಲಿದರೆ ಬೆಟ್ಟದ ತುಂಡು, ಜೊತೆ ಜೊತೆಗೆ ಒಂದಷ್ಟು ದೊಡ್ಡ ಮರಗಳು ಉರುಳ್ತಿದ್ವಂತೆ. ಹಳ್ಳ ತೋಡಕ್ಕೇ ಫೇಮಸ್ ಆಗಿರೋ ವಾಟರ್ ಸಪ್ಲೈ, ಸ್ಯಾನಿಟರಿ, ಆಪ್ಟಿಕ್ ಫೈಬರ್, ಎಲೆಕ್ಟಿçಕ್ ಡಿಪಾರ್ಟ್ಮೆಂಟ್, ಟೆಲಿಫೋನ್ ಕಂಪನಿ ಇವು ಯಾವುವೂ ಹಳ್ಳ ತೋಡದೆ ಭೂಮಿ ಗಟ್ಟಿ ಇದ್ದು, ಬೇರು ಆಳವಿದ್ದಾಗಲೇ ಭೀಮನ ನಡಿಗೆಗೆ ಇಷ್ಟೆಲ್ಲ ‘ಭೀಕರ ಹಾನಿ’ ಆಗಿತ್ತಂತೆ. ಈಗೇನಾದರೂ ಭೀಮ ಇದ್ದಿದ್ರೆ...’

‘ಭೀಮಯಂತ್ರಗಳಿವೆಯಲ್ಲಾ... ಗುಡ್ಡ ಉರುಳಿಸಿ, ಮರ ಕಡಿದು ಪರಿಸರ ಹಾಳು ಮಾಡೋಕ್ಕೆ ವಿಜ್ಞಾನವೂ ಕೈಜೋಡಿಸಿತು’ ಬೇಸರದಿಂದ ನುಡಿದೆ.

‘ಪರಂಪರೆಯ ಕಂಟಿನ್ಯೂಯೇಷನ್’ ಬೀಗಿದ ಮಂಜ.

‘ಭೀಮ ಯಾರ ಜೊತೆ ಕಾದಾಡುವಾಗ ಹೀಗೆ ನಡೆದದ್ದು?’

‘ಕಾದಾಟವೂ ಇಲ್ಲ, ಎಂಥದೂ ಇಲ್ಲ. ‘ಪ್ಲೀಸ್ ಗೆಟ್ ಮಿ ಒನ್ ಸೌಗಂಧಿಕಾ ಪುಷ್ಪ ಡರ‍್ಲಿಂಗ್’ ಅಂದಳು ದ್ರೌಪದಿ. ‘ಐ ವಿಲ್ ಬ್ರಿಂಗ್ ಒನ್ ವೈಲ್ ಕಮಿಂಗ್ ಬ್ಯಾಕ್ ಫ್ರಂ ಮೈ ವಾಕ್ ಹನಿ’ ಅಂತ ಭೀಮ ಹೊರಟ. ಹೂ ತರಕ್ಕೇಂತ ವಾಕಿಂಗ್ ಹೋದಾಗಲೇ ಇಷ್ಟೆಲ್ಲ ರಂಪ ಮಾಡಿರೋವ್ನು ಹಿಡಿಂಬನ್ನ, ಉಪಕೀಚಕರನ್ನ ಕಚಕ್ ಅನ್ನಿಸುವಾಗ ಇನ್ನೆಷ್ಟು ಮರಗಳನ್ನ ಉರುಳಿಸರ‍್ಬೇಕು ಊಹಿಸ್ಕೊ. ಒಬ್ಬ ವ್ಯಕ್ತಿಯೇ ಅಷ್ಟೊಂದು ಮರಗಳನ್ನ ಉರುಳಿಸಿರಬೇಕಾದರೆ ಲಕ್ಷಾಂತರ ಜನರಿಂದ ರಚನೆಯಾದ ಸರ್ಕಾರ ಇನ್ನೆಷ್ಟು ಉದುರಿಸಬೇಕೂಂತ ನೀನೇ ಲೆಕ್ಕ ಹಾಕು’

‘ಆಗೆಲ್ಲ ಮರಗಳು ಹೆಚ್ಚು, ಜನ ಕಡಿಮೆ ಇದ್ದರು ಕಣೊ. ಹಾಗೆ ಕಿತ್ತಿದರೂ, ಪುಡಿ ಮಾಡಿದರೂ ಪರಿಸರದ ಸಮತೋಲಕ್ಕೆ ಧಕ್ಕೆ ಆಗ್ತರ‍್ಲಿಲ್ಲ’ ಮತ್ತೆ ಅಂದಿನದನ್ನು ಶ್ರೇಷ್ಠವಾಗಿಸುವ ಯತ್ನದಲ್ಲಿ ತೊಡಗಿದೆ.

‘ನಮಗೆ ಕಾರಣಗಳು ಮುಖ್ಯವಲ್ಲ. ದ ಎಂಡ್ ಜಸ್ಟಿಫೈಸ್ ದ ಮೀನ್ಸ್. ಕೊನೆಯಲ್ಲಿ ಬಿದ್ದ ಮರ, ಉರುಳಿದ ಬಂಡೆ ಅಷ್ಟೇ ನಮಗೆ ಮುಖ್ಯ. ಅದೇ ಪರಂಪರೆ’ ಹಾಡಿದ್ದೇ ರಾಗ ಹಾಡಿದ ಮಂಜ.

‘ಕಾಡುಗಳನ್ನ ಸುಡೋದಾದರೂ ತಪ್ಪು ಅಂತ ಒಪ್ಕೋತೀಯಾ?’

‘ಪರಂಪರಾಗತವಾಗಿ ಬಂದ ಯಾವುದನ್ನು ಮುಂದುವರಿಸಿದರೂ ತಪ್ಪಲ್ಲ’

‘ಕಾಡು ಸುಡೋದೂ ಪರಂಪರೆಯೇನೋ?’

‘ಅಫ್‌ಕೋರ್ಸ್. ಖಾಂಡವ ವನವನ್ನ ಕೃಷ್ಣನ ಸೂಪರ್‌ವಿಷನ್ನಲ್ಲೇ ಅರ್ಜುನ ಸುಟ್ಟ. ಫಾರೆಸ್ಟ್ ಲ್ಯಾಂಡ್‌ನ ಸಿಟಿ ಮಾಡಕ್ಕೆ ಬಳಸಬಹುದೂಂತ ನಮಗೆ ಗೊತ್ತಾಗಿದ್ದೇ ಆ ಸಂದರ್ಭದಿಂದ’

‘ವಾಟರ್ ಪಲ್ಯೂಷನ್ನು?’

‘ಯಕ್ಷ ಇದ್ದ ಕೆರೆ ಆಗಲೇ ಪಲ್ಯೂಟ್ ಆಗಿತ್ತು ಅನ್ನಕ್ಕೆ ನಾಲ್ಕು ಪಾಂಡವರು ವಾಟರ್ ಇಂಫೆಕ್ಷನ್‌ನಿಂದ ಕೋಮಾಗೆ ಹೋಗಿಬಂದದ್ದೇ ವಾಟರ್ ಪಲ್ಯೂಷನ್ ಇಂದಿನದಲ್ಲ ಅನ್ನಕ್ಕೆ ಪ್ರೂಫು’

‘ನಾಯ್ಸ್ ಪಲ್ಯೂಷನ್ನು?’

‘ಕುರುಕ್ಷೇತ್ರ ಆಹವದೊಳ್ ಕರಿಗಳು ಫೀಳಿಟ್ಟವು; ಹಯಗಳು ಕೆನೆದವು; ಯೋಧರು ಅಬ್ಬರಿಸಿದರು. ಮಹಾರಥಿಗಳು ಆರ್ಭಟಿಸಿದರು ಅಂತೆಲ್ಲ ಇವೆಯಲ್ಲಾ... ಈಗಿನ ತರಹ ಎಲ್ಲವನ್ನೂ ‘ಮ್ಯೂಟ್’ನಲ್ಲಿ ನೋಡೋ ಛಾನ್ಸೂ ಆಗಿನ ಕಾಲದಲ್ಲಿ ಇರಲಿಲ್ಲ. ಟೈಮಾಯ್ತು. ಹೊರಡ್ತೀನಿ’ ಎನ್ನುತ್ತಾ ಮೆಟ್ಟು ಮೆಟ್ಟಿದ ಮಂಜ.

‘ಎಲ್ಲಿಗೋ?’

‘ಇವತ್ತು ವಿಶ್ವ ಪರಂಪರೆಯ ದಿನ. ನಮ್ಮ ಪರಂಪರೆಯ ಶ್ರೇಷ್ಠತೆಯ ಬಗ್ಗೆ ಭಾಷಣ ಮಾಡಕ್ಕೆ ಹೊರಟಿದ್ದೆ. ಒಳ್ಳೆಯ ರಿಹರ್ಸಲ್ ಆಯ್ತು’ ಎನ್ನುತ್ತಾ ಮೂಲೆ ತಿರುಗಿ ಕಣ್ಮರೆಯಾದ ಮಂಜ.

Comments

  1. ಲೇಖನದಲ್ಲಿ ಹಾಸ್ಯಕ್ಕೇನೂ ಕಡಿಮೆಯಿಲ್ಲ, ಆದರೂ ತಮ್ಮ ಲೇಖನದಲ್ಲಿ ಕೆಲವು ಕಣ್ತೆರೆಸುವ ಪಂಚ್ ಲೈನ್ ಇರತ್ತೆ. ‘ಜಮೀನು ಪಾಳುಬಿದ್ದಮೇಲೆ ಹೊಟ್ಟೆಗೆ ಮಣ್ಣು ತಿನ್ನಬೇಕಷ್ಟೆ’ Like this

    ReplyDelete

Post a Comment