ಜಡೆಯ ನೋಡಿರಣ್ಣ ....

 ಜಡೆಯ ನೋಡಿರಣ್ಣ ಬೆಡಗಿಯ ಜಡೆಯ ನೋಡಿರಣ್ಣ

 ಹಾಸ್ಯ ಲೇಖನ - ಅಣುಕು ರಾಮನಾಥ್


ಜಡೆಯ ನೋಡಿರಣ್ಣ ಬೆಡಗಿಯ ಜಡೆಯ ನೋಡಿರಣ್ಣ ||

ಜಡೆಯ ನೋಡಿರಿದು ಸೆಳೆಯುವ ಪರಿಯನು

ಹುಡುಗಿ ನಡೆಯುತಿರೆ ಸಳಸಳ ತೊನೆಯುವ

ಜಡೆಯ ನೋಡಿರಣ್ಣ ||ಮೂರು ಕಾಳಿನ ಹೆಣೆದಿಹ ಹೆರಳು

ಪೋರಿಯರಳಿಯ ಬಿಳಲು

ಧೀರ ಶೂರರು ಕೇಶ ಬಂಧದಲಿ

ಸೇರಿ ಬೆಡಗಿನಾ ದಾಸರಾಗುತಿಹ

ಜಡೆಯ ನೋಡಿರಣ್ಣ ||

ಹಾರು ಹೆರಳ ಕಟ್ಟಿ ಮೇಲಕೆ ಏರಿಸಲದು ಗಂಟು

ಹಾರಿ ಗಾಳಿಯೊಡನೆ ಆಡುವಂಥ ತುಂಟು

ಮೋರೆಯಂದವನು ತೋರಿ ಹೊಳೆಯುತಿಹ

ಜಡೆಯ ನೋಡಿರಣ್ಣ ||

ಮಿನುಗುತಿರಲು ದಿವಸ ರಸಿಕರ

ಮನದಿ ಇದರ ವಾಸ

ಯೋಗಿ ರಾಜ ಶಿಶು ಋಷ್ಯಾಧೀಶರ

ಸೋಗ ಕಳಚಿ ನಿಜ ರೂಪವ ತೋರುವ

ಜಡೆಯ ನೋಡಿರಣ್ಣ ಬೆಡಗಿಯ ಜಡೆಯ ನೋಡಿರಣ್ಣ ||


         ಎಂದು ಯಾರಾದರೂ ಎಂದಾದರೂ ‘ಗುಡಿಯ ನೋಡಿರಣ್ಣ’ ಧಾಟಿಯಲ್ಲೇ ಹಾಡಿದ್ದಾರು. ತೊಟ್ಟಿಲಿನಿಂದ ಕಟ್ಟಿಗೆಯವರೆಗೆ, ಹೆರಳನ್ನು ಬಾಚಿಕೊಳ್ಳಲು ತ್ರಾಣ ಇರುವವರೆಗೆ ತಮ್ಮೊಡನೆ ಇರಲೇಬೇಕೆಂದು ಭಾರತೀಯ ಸ್ತ್ರೀಯರು ಆಶಿಸುತ್ತಿದ್ದ ಕೂದಲಿನ ಪಡೆ ಈ ಜಡೆ.

        ಜಡೆ ಒಂದು ವಿಧದಲ್ಲಿ ಕೋವಿಡ್‌ನಂತೆ  – ಜಾತ್ಯತೀತ, ಲಿಂಗಾತೀತ, ದೇಶಾತೀತ, ವಯಾತೀತ. ರೋಮನ್ ಮತ್ತು ಗ್ರೀಕ್ ನಾಟಕಗಳಲ್ಲಿ ಹೆಣ್ಣಿನ ಪಾತ್ರಕ್ಕಿಂತ ಸೊಗಸಾದ ಕೇಶರಾಶಿ ಹೊಂದಿದ ಗಂಡು ಪಾತ್ರಗಳನ್ನು ಕಾಣಬಹುದು. ನಮ್ಮಲ್ಲಿಯೂ ಹಲವಾರು ಪುರುಷದೇವತೆಗಳು ‘ಬಾಬ್ ಕಟ್’ ಮಟ್ಟದ ಕೇಶವುಳ್ಳವರು. ‘ಪುರುಷದೇವತೆಗಳಿಗೆ ಯಾವಾಗಲೂ ಅಷ್ಟೇ ಉದ್ದದ ಕೂದಲಿರುತ್ತದಲ್ಲಾ, ದೇವಲೋಕದಲ್ಲಿಯೂ ‘ಹೇರ್ ಲೆಂತ್ ಮೇಂಟೆನೆನ್ಸ್’ಗಾಗಿ ಕ್ಷೌರಿಕರು ಇರುವರೇನು?’ ಎಂದೊಬ್ಬ ಕೇಳಿದ್ದ. ‘ಇಲ್ಲ. ದೇವತೆಗಳು ಹುಟ್ಟುಗೂದಲು. ಇನ್ನೂ ಚೌಲ ಆಗಿಲ್ಲ’ ಎಂದು ಉತ್ತರಿಸಿದ್ದೆ. ದೇವತೆಗಳಿಗೆ ಆಗಾಗ, ಅಷ್ಟಷ್ಟು ಗಾಂಧರ್ವ ವಿವಾಹಗಳೋ, ಘನ ಗರ್ವ ವಿವಾಹಗಳೋ ನಡೆದಿರುವ ಉಲ್ಲೇಖಗಳಿವೆಯಾದರೂ ಎಲ್ಲಿಯೂ ಅವರ ಮೌಂಜಿ, ಚೌಲಗಳ ಉಲ್ಲೇಖವಿಲ್ಲವಾದ್ದರಿಂದ ‘by theory of elimination’ ಅದನ್ನು ಹುಟ್ಟುಗೂದಲೆಂದು ಹೇಳಬಹುದು. 

               ದೇವತೆಗಳಿರಲಿ, ರಾಕ್ಷಸರಿಗೂ ಎಂತಹ ದಟ್ಟ ಕೂದಲುಗಳು! ಕಾಡುಮೇಡುಗಳಲ್ಲಿ ಅಲೆದು, ಸಿಕ್ಕಸಿಕ್ಕ ಪ್ರಾಣಿಗಳನ್ನು ಸಿಗಿಸಿಗಿದು ತಿಂದರೂ ಅವರು ಒಳ್ಳೆಯ lever ಇದ್ದ good livers ಆಗಿದ್ದರು. ‘ಲಿವರ್ ಕೆಟ್ಟರೆ ಕೂದಲು ಉದುರುತ್ತದೆ’ ಎನ್ನುವುದು ಒಬ್ಬ ರಕ್ಕಸ/ಸಿಗೂ ಅನ್ವಯಿಸಿಲ್ಲ. ಒಂದೇ ಕಡೆ ಮಲಗಿದ್ದು, ‘ಇರ‍್ರೆಗ್ಯುಲರ್ ಫುಡ್ ಹ್ಯಾಬಿಟ್ಸ್’ ಇದ್ದ ಕುಂಭಕರ್ಣನಿಗೂ ಅದೆಂತಹ ಘನಕೇಶರಾಶಿ! ತಮಟೆ, ನಗಾರಿಗಳ ಸದ್ದಿಗೂ ಏಳದ ಕುಂಭಕರ್ಣ ಕೂದಲು ಬಾಚುವುದರಿಂದ ಖಂಡಿತ ಏಳುವುದಿಲ್ಲ ಎಂದು ತಿಳಿದಿದ್ದ ರಾವಣ ಕುಂಭಕರ್ಣನು ಹೊರಳಿದಾಗಲೆಲ್ಲ ಕೂದಲನ್ನು ಬಾಚಿ ಸ್ವಚ್ಛಗೊಳಿಸಲು ಆದೇಶ ನೀಡಿದ್ದನೋ ಏನೋ. ಇಂದಿನ ಸಲೂನುಗಳು ಅಥವಾ ಬ್ಯೂಟಿ ಪಾರ್ಲರ್‌ಗಳಿಗೆ ಅಂದಿನ ಕುಂಭಕರ್ಣನ ‘ಹೇರ್ ವಾಷಿಂಗ್ ಎಟ್ ದ ಸ್ಪಾಟ್’ ಸ್ಫೂರ್ತಿ ಎಂದು ಕೇಶಪುರಾಣದ ಕ್ಲೇಶಾಚಾರ್ಯರು ಬರೆದಿದ್ದಾರೆ. ಕಾಡಿನಲ್ಲೇ ಅಲೆದ ತಾಟಕಿ, ಶುಂಭ, ನಿಶುಂಭ, ಹಿಡಿಂಬ ಮುಂತಾದವರ ಕೇಶರಾಶಿ ನೋಡಿದರೆ ಧೂಳು, ಆಹಾರಮ ಜೀವನಶೈಲಿ ಇವಾವುವೂ ಕೇಶವರ್ಧನೆಗೆ ತೊಂದರೆ ನೀಡುವುದಿಲ್ಲ, ಕೇಶತೈಲವಿಲ್ಲದೆಯೂ ‘ಹೆರಿಡಿಟರಿ’ಯಾಗಿ ಕೂದಲು ಬೆಳೆಯುತ್ತದೆ ಎಂಬುದುನ್ನು ನಿರ್ವಿವಾದವಾಗಿ ಸಾಬೀತು ಪಡಿಸುತ್ತವೆ.  


                      ರಾವಣನ ಜಡೆಯೇ ನನಗೆ ಸೋಜಿಗದ ವಿಷಯ. ಹತ್ತು ತಲೆಗಳಿದ್ದ ರಾವಣನಿಗೆ ಹತ್ತು ಜಡೆಗಳಿದ್ದವೆ? ಇದ್ದರೆ ಒಂಬತ್ತಕ್ಕೆ ಬೆನ್ನಿನ ಆಧಾರವೇ ಇರುತ್ತಿರಲಿಲ್ಲವಾದ್ದರಿಂದ ಒಂಬತ್ತು ತುರುಬು, ಒಂದು ಜಡೆ ಇದ್ದಿತೇನು? ರಾವಣನ ಬಗ್ಗೆ ಸಾವಿರಾರು ಪುಟಗಳನ್ನು ಬರೆದವರಿದ್ದಾರೆ. ಅವನ ಚಿತ್ರಗಳನ್ನು ಬಿಡಿಸಿದ ನೂರಾರು ಕಲಾವಿದರಿದ್ದಾರೆ. ಸ್ವತಃ ವಾಲ್ಮೀಕಿಯೇ ರಾವಣನ ಗುಣಾವಗುಣಗಳನ್ನು ವಿವರವಾಗಿ ಚಿತ್ರಿಸಿದ್ದಾರೆ. ಆದರೆ ಎಲ್ಲ ಪದಚಿತ್ರ, ಕುಂಚಚಿತ್ರಗಳೂ ಬರೀ ಫ್ರಂಟ್ ಎಲಿವೇಶನ್‌ದೇ ಆಗಿವೆಯೇ ವಿನಹ ಬೆನ್ನಿನ ಚಿತ್ರ ರಹಸ್ಯವಾಗಿಯೇ ಉಳಿದಿದೆ.

                    ದ್ವಾಪರದಲ್ಲೂ ಭೀಮಸೇನನಿಗೆ ‘ಬಾಯ್‌ಕಟ್’ ಅಥವಾ ‘ಬಾಬ್‌ಕಟ್’ ಇತ್ತೆಂದೇ ಚಿತ್ರಗಳು ಸಾರುತ್ತವೆ. ಆದರೆ ಅವನ ಮಗನಿಗೆ ಗುಡ್ಡದಂತಹ ಕೇಶರಾಶಿ. ಘಟೈವ ಉತ್ಕಚಃ ಘಟೋತ್ಕಚಃ – ಮೋಡದಂತೆ ದಟ್ಟವಾದ ಕೂದಲುಳ್ಳವನೇ ಘಟೋತ್ಕಚ/ಜ. ಭೀಮನಿಗಿಲ್ಲದ ಕೇಶ ಮಗನಿಗೆ ಬಂದಿತೆಂದರೆ ಅದಕ್ಕೆ ಹಿಡಿಂಬೆಯೇ ಕಾರಣವಿರಬೇಕು. ದ್ವಾಪರದಲ್ಲಿಯೂ ರಾಕ್ಷಸರಿಗೆ ತಲೆ ತುಂಬಾ ಕೂದಲು ಎನ್ನುವುದನ್ನು ಇದು ಸೂಚಿಸುತ್ತದೆ.

       


           ಒಂದೇ ಒರಿಜಿನಲ್ ಸಂದೇಹ – ಕಾಡಿನಲ್ಲಿದ್ದ ದ್ರೌಪದಿ, ಉದ್ಯಾನದಲ್ಲಿದ್ದ ಸೀತೆ ಜಡೆಯನ್ನು ಸಂಭಾಳಿಸಿದ್ದಾದರೂ ಹೇಗೆ? ರಾವಣನ ಆಸ್ಥಾನದಲ್ಲಿ ಬಾಚಣಿಗೆಗಳ ಸ್ಟಾಕ್ ಇದ್ದಿತೆ? ಮಂಡೋದರಿ hair stylist ಗಳನ್ನು ಹೊಂದಿದ್ದಳೆ? ಇಂದ್ರಜಿತು ಸೊಂಪಾದ ಕೂದಲನ್ನು ದಿನವೂ ಬಾಚಿಕೊಳ್ಳುತ್ತಿದ್ದು, ತತ್ಕಾರಣ ಜಡೆಸಂಬಂಧಿತ ಸಲಕರಣೆಗಳು ಅಲ್ಲಿ ಲಭ್ಯವಿದ್ದವೆ? ದ್ರೌಪದಿಯಂತೂ ಮುಡಿ ಕಟ್ಟಿಕೊಳ್ಳುವುದಿಲ್ಲ ಎಂದಿದ್ದಳಲ್ಲಾ, ಸಿಕ್ಕುಗಟ್ಟಿದ್ದನ್ನು ಬಿಡಿಸಲು ಸಿಕ್ಕಟಿಗೆಗಳು ಇದ್ದವೆ? ಅದೇಕೋ ವ್ಯಾಸ ವಾಲ್ಮೀಕಿಯರು ಈ ವಿವರಗಳತ್ತ ಗಮನವನ್ನೇ ಹರಿಸಲಿಲ್ಲ. ‘ಪುರುಷರಿಗೇನು ಗೊತ್ತು ಜಡೆಗಳ ಕಷ್ಟ...’ ಎಂದು ನಾರೀಮಣಿಯರು ಈ ಕಾರಣಕ್ಕೂ ಮುನಿಗಳ ಬಗ್ಗೆ ಮುನಿದಿದ್ದಾರು.

                               ಗತಕಾಲದ ಹೆರಳುಗಳ ವರ್ಣನೆಯೇ ಸೊಗಸು. ‘ವರ್ಷಋತುವಿನ ಕಾರ್ಮೋಡಗಳು ಬಾನನ್ನು ಆಚ್ಛಾದಿಸುವೋಪಾದಿಯಲ್ಲಿ ಆ ತರಳೆಯ ಶಿರವನ್ನು ಕೇಶರಾಶಿಯು ಆವರಿಸಿತ್ತು’ ಎಂಬ ವರ್ಣನೆಯ ಭಾಗ್ಯ ಇಂದಿನ ಚೂರುಕೇಶಿ, ಗೀರುಕೇಶಿ (ಗೂಗಲ್ ಮ್ಯಾಪ್‌ನಂತೆ ನೆತ್ತಿಯತ್ತ ವಿವಿಧ ‘ಬೈತಲೆ’ ದಾರಿಗಳನ್ನು ತೋರಿಸುವಂತಿರುವ ಗೀರುಗೀರಿನಂತೆ ಕಾಣುವ ಕೇಶವುಳ್ಳವರು) ನಾರುಕೇಶಿ(ನೂಡಲ್ಸ್ ಮಾದರಿಯಲ್ಲಿ ೧೦೮ಓ, ೧೦೦೮ಓ ಜಡೆಗಳನ್ನು ಹೆಣೆದುಕೊಳ್ಳುವವರು)ಯರಿಗೆ ಉಂಟೆ?

ಕವಿ ಜಿ.ಎಸ್.ಎಸ್. ಇದರ ಬಗ್ಗೆ ಒಂದು ಥೀಸೀಸ್ ಬರೆಯುವ ಮಟ್ಟದ ಕವಿತೆಯನ್ನೇ ಬರೆದಿದ್ದಾರೆ.

ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ

ಅತ್ತಿತ್ತ ಹರಿದ ಜಡೆ!

ಚೇಳ್ ಕೊಂಡಿಯಂತಹ ಜಡೆ ಮೋಟು ಜಡೆ, ಚೋಟು ಜಡೆ

ಚಿಕ್ಕವರ ಚಿನ್ನ ಜಡೆ!

ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ

ಬಡ ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ

ಗಂಟು ಜಡೆ!

ಅಕ್ಕ ತಂಗಿಯ ಮುಡಿಯ ಹಿಡಿದು ನಾನೆಳೆದಂಥ

ಮಲ್ಲಿಗೆಯ ಕಂಪು ಜಡೆ ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ

ಹರಿವ ತಾಯ ಜಡೆ!

"ಕುರುಕುಲ ಜೀವಾಕರ್ಷಣ ಪರಿಣತ"- ಆ ಪಾಂಚಾಲಿಯ ಜಡೆ!

ಸೀತೆಯ ಕಣ್ಣೀರೊಳು ಮಿಂದ ಜಡೆ ಓ ಓ ಈ ಜಡೆಗೆಲ್ಲಿ ಕಡೆ!

                                    ಎನ್ನುತ್ತಾ ಹೆರಳ ಹೊನಲನ್ನು ಹರಿಸಿದ್ದಾರೆ. ‘ಸುಂದರಾಂಗದ ಸುಂದರೀಯರ ಹಿಂದುಮುಂದಿನಲಿ’ ನಡೆದಾಡಿದ ಎಲ್ಲಾ ಹುಡುಗರಿಗೂ ಹಲವು ಜಡೆಗಳ ಪರಿಚಯವಂತೂ ಇದ್ದೇ ಇರುತ್ತದೆ. ಅಪ್ರಯತ್ನವಾಗಿಯೇ ಪಡ್ಡೆಯ ಹುಡುಗರಿಗೆ ಕಾಳು ಹಾಕುವ ಶತಶತಮಾಗಳಷ್ಟು ಹಳೆಯ ಮೂರು ಕಾಳಿನ ಜಡೆ. ಹುಡುಗಿ ತಲೆ ಆಡಿಸಿದಾಗಲೆಲ್ಲ ಒಮ್ಮೆ ಬೆನ್ನಿನತ್ತ, ಒಮ್ಮೆ ಮುಂದೋಳಿನತ್ತ ಪೆಂಡುಲಮ್‌ನಂತೆ ಹರಿದಾಡುವ ಒಂದು ಜಡೆ; ಮ್ಯಾತ್ಸ್ ಪೇಪರ್ ಕಂಡ ತಕ್ಷಣ ಸಂಪೂರ್ಣ ಗೊಂದಲಮಯವಾಗುವ ಮಿದುಳನ್ನು ನೆನಪಿಸುವ ಸಾವಿರ ಕಾಳಿನ ಜಡೆ; ಬಡತನದಲ್ಲಿಯೂ ಹೊಂದಬಹುದಾದ ಎರಡು ಗಂಟುಗಳ ಪೈಕಿ ಒಂದಾದ ಹೆಣೆಗಂಟು (ಇನ್ನೊಂದು ಹುಬ್ಬುಗಂಟು!); ಅಭ್ಯಂಜನದಿಂದ ಹೊರಬಂದಾಗ ಹಾಕಿಕೊಳ್ಳುವ ತೆಳು ಜಡೆ; ಬೆನ್ನಿನ ಎರಡೂ ಭಾಗಗಳಿಗೆ ಮೋಸವಾಗದಂತೆ ಹೆಣೆದುಕೊಳ್ಳುವ ಎರಡು ಜಡೆ; ಎಲ್ಲ ಮಕ್ಕಳಿಗೂ ಜೀವನದಲ್ಲಿ ಒಮ್ಮೆಯಾದರೂ ಹಾಕಿಯೇ ಹಾಕುವಂತಹ ಕೃಷ್ಣಗೊಂಡೆ; ತರಕಾರಿ ಅಂಗಡಿಯನ್ನು ನೆನಪಿಸುವ ಸೌತೆಕಾಯಿ ಜಡೆ, ಬದನೆಕಾಯಿ ಜಡೆ, ಬಾದಾಮಿ ಜಡೆ; ಜಡೆಗಳಲ್ಲೇ ಚಕ್ರವರ್ತಿನಿಯಾದ ಸೊಗದ ಆಗರವಾದ ಮೊಗ್ಗಿನ ಜಡೆ; ಅರವತ್ತರ ದಶಕದ ಮಾಡ್ರನ್ ಲೇಡಿಯ ‘ಜಂಬದ ಗಂಟು’ ಇತ್ಯಾದಿಗಳು ಒಂದು ತೂಕವಾದರೆ ‘ಪೋನಿ ಟೈಲ್’ ಸೊಬಗೇ ಮತ್ತೊಂದು ತೂಕ!

ಕುದುರೆಯ ಬಾಲದ ಸೊಬಗಲಿ ಸೆಳೆಯುವ

ಚದುರೆಯ ಸೊಬಗಿನ ಕೇಶದ ಸೆಳವಿಗೆ

ಮದಿರೆಯ ಅಮಲಿನ ಪೊಗರಿದೆ ಕಾಣೈ

ಚದುರರ ಮನಸಿಗೆ ಇದು ದಿಟ ಖೆಡ್ಡಾ

ಎನ್ನುವ ಸರಸಕವಿಗಳ ಹಿಂಡೇ ಎಲ್ಲೆಡೆಯೂ ಕಾಣಸಿಗುತ್ತದೆ. ‘ಕಾಡುಕುದುರೆ ಓಡಿ ಬಂದಿತ್ತಾ’ ಎಂದು ಕುದುರೆಯನ್ನು ನೆನೆಯುವಂತೆಯೇ

‘ನಾಡ ಚದುರೆ ಕೇಶ ಹಾರಿತ್ತಾ...

ನಾರಿಯರು ಗುಂಪುಗೂಡಿ ಸೇರುವಂಥ ಜಾಗದಲ್ಲಿ

ಪೋರರ ಕಣ್ಣ ಸೆಳೆಯುವಂಥ ಆಟಗಳನ್ನು ಆಡುವಲ್ಲಿ

ಹಾರುವಂತೆ ಕೇಶ ಕಟ್ಟಿ ಶಿರ ಆಡಿಸುತಿರೆ ಅತ್ತಾ ಇತ್ತಾ

ಪೋರರ ಹೃದಯ ಧಿಮಿಧಿಮಿಗುಟ್ಟಿತ್ತಾ

ನಾಡ ಚದುರೆ ಕೇಶ ಹಾರಿತ್ತಾ...

ಸೊಂಪು ಕೇಶ ಮಿರುಗುತ್ತಿತ್ತಾ ಬೆಡಗಿನ ಬಿಸಿಲ ಹರಿಸುತ್ತಿತ್ತ

ಝಂಪೆ ರಾಶಿ ಬಂಧದಲ್ಲಿ ಟುಕುಟುಕು ಎಂದು ಕುಣಿಯುತ್ತಿತ್ತ

ವ್ಯೋಮಕೇಶ ತುರುಬಾಗಿತ್ತ ಕಿರಿದಾಗಿತ್ತ ಹುರಿ ಕಟ್ಟಿತ್ತ

ಹಾಯ್ ಹಾಯ್ ಎನ್ನುವ ದಂಡನು ಸೆಳೆದಿತ್ತಾ

ನಾಡ ಚದುರೆ ಕೇಶ ಹಾರಿತ್ತಾ’

ಎಂದು ಇಂದಿನ ಚದುರೆಯರನ್ನು ಎಂದೆಂದಿಗೂ ನೆನೆಯುವ ಹೃದಯತರುಣರಿದ್ದಾರೆ, ಇರುತ್ತಾರೆ. ಇನ್ನೂ ಎಷ್ಟೇ ಶತಮಾನಗಳು ಕಳೆದರೂ ಹೆಣ್ಣಿನ ಸೌಂದರ್ಯದ, ಗಂಡಿಗೆ ಪುಳಕದ ಕೇಶಪಡೆ ಈ ಜಡೆ.


Comments

  1. ಸರ್,ರಾವಣ ಕೂದಲಿನ ಬಗ್ಗೆ ಒಂದು ಪಿ.ಹೆಚ್.ಡಿ ಮಂಡಿಸಬಹುದು.

    ReplyDelete
  2. ಬಹುಶಃ ಕವಿಗಳಿಗೆ ಹೆಣ್ಣನ್ನು ಬಣ್ಣಿಸಲು ಜಡೆಯಲ್ಲಿ ದೊರಕುವಷ್ಟು ವಿವಿಧ ವಿನ್ಯಾಸಗಳು ಪ್ರಕೃತಿಯಲ್ಲೂ ಕಾಣದೇನೋ. ಹಾಗೇ ರಾಮನಾಥ್ ಸರ್ ಅವರು ಜಡೆಭಾರತವನ್ನೇ ಬರೆಯಬಹುದು. ಇದನ್ನು ಮೊದಲನೇ ಅಧ್ಯಾಯ ಎನ್ನಬಹುದೇ?

    ReplyDelete
  3. This article is not just hilarious but shows your immense imagination. Liver and hair loss, Demons and hairstyle was very nice comparisons. Great to see you remembering GSS poem . Enjoyed

    ReplyDelete
  4. ರಾಮ ರಾಮ!! ಆಡು ಮುಟ್ಟದ ಸೊಪ್ಪಿಲ್ಲ ಅಂತಾರೆ. ನೀವು ಬಿಟ್ಟ ಸಬ್ಜೆಕ್ಟ್ ಇಲ್ಲ. ಜಡೆ / ಮುಡಿ ಮಹತ್ವ ನೋಡಿ ಬೆರಗಾಗಿದ್ದೇನೆ. ರಾವಣ ಕುಂಭಕರ್ಣರಿಂದ ಪಾಂಡವರು ಜಡೆ ಕಟ್ಟಿದ್ದರೋ ಬಾಬ್ ಕಟ್ ಬಿಟ್ಟಿದ್ದರೋ ಗೊತ್ತಿಲ್ಲ ಅದನ್ನು ಅಲ್ಲಿಂದ ಇಲ್ಲಿಗೆ ಅಲ್ಲಗೆಳೆದು ದೇಹವೆಲ್ಲಾ ಅಲ್ಲಾಡುವ ಹಾಗೆ ನಗಿಸಿದ್ದೀರಿ. ಅಲ್ಲ ಸಾರ್ ರಾವಣನ ಆಸ್ಥಾನದಲ್ಲಿ ಬಾಚಣಿಗೆ ಇತ್ತಾ ಎನ್ನುವ ಪ್ರಸ್ತಾಪ ನಿಮಗ್ಯಾಕೆ ಹೊಳೀತು? ಜಿ ಎಸ್ ಎಸ್ ಕವನ ಪರಿಚಯ ಚೆನ್ನಾಗಿದೆ

    ReplyDelete
  5. I cannot get enough of this :)

    ReplyDelete

Post a Comment