ಅಳಿದ ಮೇಲೆ ಉಳಿದುದೆನು..?

 ಅಳಿದ ಮೇಲೆ ಉಳಿದುದೆನು..?

ಲೇಖನ - ನಾಶ್ರೀ ಹೆಬ್ಳೀಕರ್ 

ಚೈತ್ರ ಮಾಸದ ಬ್ಯಾಸಿಗಿ ಹುಣ್ಣಿಮೆಯ ಸುಂದರವಾದ ಸಂಜಿ. ಮಾವಿನ ಮಿಡಿ ಕಾಯಿಯಿಂದ ವಸರುವ ಹನಿ, ಮನ ಮದವೇರಿಸುವ ವಾತಾವರಣ. ಹಾಂಗ ಮುಂದ ನಡದರ ಕಾಡು ಮಲ್ಲಿಗೆಯ ಪರಿಮಳ, ಅಲ್ಲಲ್ಲಿ ಕೆಂಡುಸಂಪಿಗೆಯ ಘಾಡ ಸುವಾಸನಿ.



ಕವಲು ಹಾದಿಯುದ್ದಕ್ಕೂ ಎಡ ಬಲ ಬದಿಗಳಲ್ಲಿ ಬ್ರಹ್ಮ ಕಮಲ ಎಲೆಯಿಂದಲೇ ಹುಟ್ಟಿದ ದಡ ಬಾಗಿಸಿ ಬಾ ಎಂದು ತಲೆ ಎತ್ತಿ ಚಂದಿರನಿಗೆ ನೀ ಚಂದವೋ ನಾ ಚಂದವೋ ಎಂದು ಸವಾಲೆಸಗುವಂತಿತ್ತು ಆ ದೃಶ್ಯ. ಚಂದಿರನಿಗೆ ಇದರ ಅರಿವಾಗಿ ತಲೆ ತಗ್ಗಿಸಿ ಸೋಲಿನ ಮುಖ ಹೊತ್ತು ಮೋಡಗಳ ಹಿಂದೆ ಮರೆಮಾಚುತಿದ್ದನು. ಬೃಹ್ಮ ಕಮಲಗಳ ಸುವಾಸನೆಯೊ ಆಹ್ಲಾದಕರದಿಂದ ಚೈತನ್ಯ ಭರಿತವಾಗಿತ್ತು. ಮುಂದೆ ಕಾಣುತ್ತಿರೋ ದಿಬ್ಬಾ ಎರಿ ನಿಂತಾಗ, ಎರಡ ಕಣ್ಣ ಸಾಲದ ಅದನ್ನ್ ಬಿಡಿಸಿ ಹೇಳಾಕ. ಅಷ್ಟ ಚಂದ ಇತ್ತ. ಚಂದಿರನ ಬೆಳದಂಗಳದ ಬೆಳಕು ಸಾಲು ಗುಡ್ಡಗಳ ಮ್ಯಾಲ ಬಿದ್ದು, ಬೆಳೆದ ಮಾರುದ್ದಿನ ಒಣಹುಲ್ಲು, ಸುಳಿ ಗಾಳಿ ಯೊಡನೆ ಬಂಗಾರದಲೆಯಂತೆ ಮೈಮಣಸಿ ಕುಣಿಯುತಿತ್ತು. ಕಣ್ಣುಗಳು ಅದನ್ನೇ ಸ್ವಾದಿಸುತ್ತ ಸ್ವಲ್ಪ ಹೊತ್ತ ಮನಸ್ಸ ಮೌನವಾಗಿತ್ತು. ಹಾಗೆಯೇ ತಲೆ ಬಾಗಿ ತಳಗ ನೋಡಿದಾಗ, ಗುಡ್ಡಗಳ ತಪ್ಪಲಿನಲ್ಲಿ ತಿಳಿ ನೀರಿನ ಸರೋವರ ಸುತ್ತ ಹಚ್ಚ ಹಸಿರಿನ ಬಾಣ'ಗಳಂಗ ನಿಂತ ದರ್ಭೆ. ಸರೋವರದೊಳಗ ಬ್ಯಾರ ಬ್ಯಾರೆ ಜಾತಿಯ ಹಂಸಗಳು, ಬಾತಕೋಳಿಗಳು. ಅವುಗಳ ಚಂದ ಹೆಚ್ಚಿಸಾಕಂತ ಹುಟ್ಟಿದ ಕಮಲಗಳು,ಅದರ ಮಣಕೈ ಅಗಲ ಎಲಿಗಳು. ಎಲಿಗಳ ಮೇಲೆ ಚಲ್ಲಾಡಿದ ಇಬ್ಬನ್ನಿ ಮುತ್ತುಗಳು. ನಡು ನಡುವೆ ಸುಳಿ ಗಾಳಿಗೆ ನಡಕ ಬಂದಂಗ ನಲುಗುವ ಹನಿಮುತ್ತುಗಳು ಅವಾಗ ಅವಾಗ ವಜ್ರದಾಂಗ ಹೊಳೆತ್ತಿದ್ದವು.

ಈ ಕಡೆಯ ದಂಡಿಗ ಹತ್ತಿ, ದೊಡ್ಡ ಬಯಲನ್ಯಾಗ ಇರುವದ ನಮ್ಮ ಕಥಾವಸ್ತು. ಮೆತ್ತಗಿನ ಹುಲ್ಲು ಹಾಸಿಗಿ ಮ್ಯಾಲ, ನಾಜುಕದಾಗ ಮಾಡಿದ ಉಪವನ. ಅದರಾಗ ಕಾರಂಜಿ ಝರ ಝರಿಗಳಿಂದ ಕೂಡಿದ ಬಯಲು ಭಾಳ ಚಂದ ಕಾಣಸ್ತಿತ್ತ. ಪಾರಿಜಾತದಿಂದ ಹಿಡಿದ ಪರಗಿ ಹೂಗಳವರೆಗೆ ಎಲ್ಲ ಹೂಗಳ ಗಿಡಗಳು. ರಾಜ ಭವನದಾಗ ಇದ್ದಾಂಗ ದೊಡ್ಡ ಉದ್ದ ಉದ್ದ ಊಟದ ಮೇಜುಗಳು. ಮೇಜಿನ ಎರಡು ಮಗ್ಗಲಕ ಮೃಷ್ಟಾನ್ನಾ ಬಡಿಸಿದ ಬೆಳ್ಳಿ ತಾಟಗಳು. ಬಂಗಾರದ ಬಟ್ಟಲದೊಳಗ ಕೇಸರಿ ಯಳಿ ತೆಲತಿರೊ ಬಿಸ್ಸಿ ಶ್ಯಾವಗಿ ಪಾಯಸಾ, ಅದರಾಗ ಅರ್ದಾ ಮುಣಗಿರೋ ಬಂಗಾರದ ಚಮಚಾ. ಕುಸರ ಕೆಲಸಾ ಮಾಡಿದ ನೀರಿಗೆ ಒಂದ, ಪಾನಕ್ಕ ಒಂದ ಅಂತ ತುಂಬಿ ಇಟ್ಟ ಬಂಗಾರದ ಚಂಬು. ಒಟ್ಟಿನ ಮ್ಯಾಲೆ ಜೀವನದಾಗ ಮೊದಲನೆ ಸಲ ನೋಡೊಹಂಗ ಇತ್ತ. ಆ ನೋಟ. ಅಷ್ಟರಾಗ ಮುಸ್ಸಂಜಿ ಘಳಿಗಿ ಮುಗದಿತ್ತ. ಎಲ್ಲಿಂದಲೋ ಘಂಟಿ ಬಾರಸ್ತ. ಭೂಲೋಕದಾಗ ಸತ್ತ ನರಕಕ್ಕ ಬಂದ ಮಂದಿ ಎಲ್ಲಾ ಸಾಲ ಹಿಡಕೊಂಡ ಕಾಲ ಎಳಕೊಂತ ಬರಲಾಕ ಸುರು ಮಾಡಿದರು. ವಿಚಿತ್ರ ಅಂದರ ಅವರ್ಗೆ ಮಣಕಾಲ ಮತ್ತ ಮಣಕೈ ಗಡ್ಡಿ'ನ ಇರಲಿಲ್ಲ‌. ಬಿದರ ಕಟಗಿಗತೆ ನೆಟ್ಟಗ ಇದ್ದು. ಮಡಚಾಕ ಬರತಿರಲಿಲ್ಲ. ಎಲ್ಲಾರೂ ಸಪ್ಪ ಮಾರಿ ಮಾಡಕೊಂಡ ಬಂದ ಊಟಾ ಬಡಸಿರೊ ಮೇಜಿಗೆ ಹತ್ತಿರೊ ಕುರ್ಚಿ ಮ್ಯಾಲ ಕೂತ್ರು. ಅಲ್ಲಿ ಇದ್ದ ಅಪ್ಸರೆಯರು ಬೆಳ್ಳಿ ಬಕಿಟ್ ಹಿಡಕೊಂಡ ಬಡಸಲಿಕ್ಕ ತಯಾರಾಗಿ ನಿಂತಿದ್ರ. ಎರಡನೆ ಘಂಟಿ ಬಾರಸ್ತ. ಕೂತ ಮಂದಿ ಎಲ್ಲಾ ಎದ್ದ ನಿಂತ, ಕುರ್ಚಿ ಹಿಂದ ಸರಸಿ ಮತ್ತ ಕೂತ್ರ. ಮೂರನೇ ಘಂಟಿ ಬಾರಸೋದ ತಡ ಊಟಾ ಸುರು ಮಾಡಿದ್ರು. ಬಂಗಾರದ ಚಮಚಾದಾಗ ಪಾಯಸಾ ಕುಡಿಲಕ್ಕ ನೊಡತಾರ ಕೈ ಬಾಯಿಗ ಹೊಗವಲ್ತು. ಭುಜದಿಂದ ಮುಗೈ ತನಾ ಅಖಂಡ ಕೈ ಆಗಿಬಿಟ್ಟದ. ಕೆಲವೊಬ್ಬರು ಚಮಚಾ ಹಿಡದ ಕೈ ಮ್ಯಾಲ ಮಾಡತಾ ಇದ್ದಾರ, ಹನಿ ಹನಿ ಬಾಯಾಗ ಹೋಗಿ ಬಾಕಿ ಮಾರಿ ಮೈಮ್ಯಾಲ ಬೀಳಿಖತ್ತಿತ್ತು. ಎಲ್ಲರಿಗೂ ಪಿತ್ತ ನೆತ್ತಿಗೆರಲಿ ಸುರು ಆಗಿತ್ತು. ಊಣ್ಣೊದಕಿಂತ ಹೆಚ್ಚು ಮಣ್ಣ ಸೆರತಿತ್ತು.

ಅರಹೊಟ್ಟಿ ಆಗಿದ್ದಕ್ಕ ಸಿಟ್ಟಿನಿಂದ ಒಬ್ಬರ ಮ್ಯಾಲ ಒಬ್ಬರ ತಾಟ ಎತ್ತಿ ಒಗಿಲಿಕ್ಕೆ ಸುರು ಮಾಡಿದ್ರು. ಸ್ವರ್ಗದಂತಿದ್ದ ನರಕ, ನರಕಕಿಂತ ಕಡೆಯಾಗಿ ಹೊಗಿತ್ತು.

ನರಕದ ನಾಡನ್ನು ನೋಡಿ ಆಗಿತ್ತು. ಇನ್ನೂ ಸ್ವರ್ಗದ ಸುಂದರತೆಯನ್ನು ನೋಡುವ ಮನಸ್ಸಾಗಿತ್ತು. ಅಲ್ಲಿ ಹೋದಾಗ ಅಂಥಾದ್ದ ಮುಸಂಜೆಯ ಚಂದಿರ. ಮಾವು, ಮಲ್ಲಿಗೆ, ಕಡುಸಂಪಿಗೆಗಳ ಸುವಾಸನೆ. ಗುಡ್ಡ, ಸರೋವರ,ಹಂಸ,ಬಾತುಕೋಳಿ, ಕಮಲ, ಉಪವನ, ಮೇಜು ಕುರ್ಚಿ ಊಟದ ವ್ಯವಸ್ಥೆ. ಮುಸಂಜೆಯ ಘಳಿಗೆ ಮುಗಿದಿತ್ತು. ಮೃಷ್ಟಾನ್ನ ಭೋಜನ ಬಡಿಸಿದ ಬೆಳ್ಳಿತಾಟುಗಳು. ನರಕದಲ್ಲಿರುವ ಹಂಗ ಎಲ್ಲವು ವ್ಯವಸ್ಥಿತವಾಗಿತ್ತು. ಒಂದ ಮತಿನಲ್ಲಿ ಹೆಳಬೇಕಂದರೆ, ಆ ಕಡೆ ಕಡ್ಡಿ ತಗದ ಈ ಕಡೆ ಇಟ್ಟಂಗ ಇತ್ತು ಸ್ವರ್ಗ.

ಒಂದನೆ ಘಂಟಿ ಬಾರಸಿತ್ತು. ಮೊದಲ ಸಲ ಸ್ವರ್ಗಸ್ತರಾಗಿ ಸ್ವರ್ಗಕ್ಕೆ ಬಂದ ಮಂದಿ ಸಾಲಾಗಿ ಭೋಜನದ ಮೇಜಿನನ ಹತ್ರ ಬರಲಾಕ ಸುರು ಮಾಡಿದರು. ಅವರಿಗೂ ನರಕದಾಗ ಇದ್ದ ಜನರ ಹಂಗ ಮೊಣಕಾಲು ಮತ್ತ ಮಣಕೈ ಕೀಲು ಇರದ ಮಡಚಾಕ ಬರದ ಬಿದರ ಕಟಗಿಗತೆ ಇದ್ದವು. ಆದರ ಅವರ ಮುಖದಾಗ ಮಂದಹಾಸ ಇತ್ತು. ನಡಗಿ ಒಳಗ ಚಿಗರಿ ಚಂಚಲತೆ ಇತ್ತು. ಮೃಷ್ಟನ್ನ ಭೋಜನದ ಬೆಳ್ಳಿ ತಾಟಿನ ಎದರಗೆ ಇದ್ದ ಕುರ್ಚಿ ಮೇಲೆ ಬಂದು ಕುಳಿತರು. ಒಬ್ಬರಿಗೊಬ್ಬರು ಉಭಯ ಕುಶಲೋಪರಿ ಮಾತನಾಡುತ್ತ ಕುಳಿತಿದ್ದರು.

ಎರಡನೇ ಘಂಟಿ ಬಾರಿಸಿತು. ಎಲ್ಲರೂ ಎದ್ದು ನಿಂತು ಎದುರಿನವರಿಗೆ ಕೈ ಕುಲುಕಿ ಕುರ್ಚಿ ಸ್ವಲ್ಪ ಹಿಂದೆ ಸರಸಿ ಕುಳಿತರು. ಬಂಗಾದ ಬಟ್ಟಲಲ್ಲಿ ಕೇಸರ ಕೂಡಿದ ಶಾವಗಿ ಪಾಯಸ ಎಲ್ಲರಿಗೂ ಬಡಸಿ, ಅಪ್ಸರೆಯರು ಬೆಳ್ಳಿ ಬಕೀಟ್ ಹಿಡಿದು ಸಾಲಾಗಿ ನಿಂತಿದ್ದರು. ಮೂರನೇ ಘಂಟಿ ಬಾರಿಸಿತು. ಎಲ್ಲರೂ ಬಟ್ಟಲದಲ್ಲಿದ್ದ ಬಂಗಾರದ ಚಮಚದಲ್ಲಿ ಪಾಯಸವನ್ನು ಎದುರಿಗೆ ಕುಳಿತವರಿಗೆ ತಿನಿಸ ಹತ್ತಿದರು. ಪಕ್ಕದವರು ಇವರಿಗೆ ತಿನಿಸುವವರು. ಹೀಗೆ ನಡೆಯಿತು ಸಂಭ್ರಮದ ಭೋಜನ ಕೂಟ ನಡೆಯಿತು. ಮದ್ಯ ಮದ್ಯ ಯಾರದೋ ಬಲಗೈ ಬಂದು ತಾಯಿ ತುತ್ತು ಉಣಿಸಿದಂಗ ಅಮೃತವಾಗಿ ಬಾಯಿ ಸೆರುವದು. ಎಲ್ಲ ಕಡೆಗೂ ರೋಮಂಚನವಾಗುವ ವಾತಾವರಣ. ಮುಖಗಳಲ್ಲಿ ಸಂತೃಪ್ತಿಯ ಭಾವವಿತ್ತು. ಅವರಾರಿಗೂ ಉನತೆಯ ಭಾಸವೇ ಇರಲಿಲ್ಲ. ಎಲ್ಲರ ಊಟವಾದ ಮೇಲೆ ಅಲ್ಲಿದ್ದ ಒಬ್ಬ ಹಿರಿಯರಿಗೆ ಇಷ್ಟು ಸಂಭ್ರಮದಿಂದ ನೀವುಗಳು ಇರುವ ಗುಟ್ಟೆನು? ಎಂದು ಕೇಳಿದಾಗ, ನಮ್ಮ ಸಾವಿಗಿಂತ ಮೊದಲು ಭೂಲೋಕದಲ್ಲಿಯು ಸಹ ಒಬ್ಬರಿಗೊಬ್ಬರು ಪರಸ್ಪರ ಸ್ವಸಹಾಯ ಮಾಡುತ ಜೀವನ ನಡೆಸಿದ್ದೆವು, ಅದೆ ಇಲ್ಲಿ ಮುಂದುವರೆದಿದೆ. ಇದು ಬಿಟ್ಟು ಬೇರೆ ಏನು ಹೆಳಲಿ ಎಂದು ಅಂದು ಅದೃಶ್ಯರಾದರು.

*** ***

ಹುಟ್ಟೂರು ಹೆಬ್ಬಳ್ಳಿ. ವಾಡೆಯ ಒಂದಂಚಿನಲ್ಲಿ ಮೇಲಮುದ್ದಿ ಮನೆ. ನಡುಮನೆಗೆ ಹತ್ತಿ ಮಲಗುವ ಕೋಣೆ, ಅರೆಮುಚ್ಚಿದ ಮೇಲ'ಕಿಡಕಿಯಿಂದ ಮುಂಜಾವಿನ ಎಳೆಬಿಸಿಲ್'ಗೊಲು ಹಣೆಯ ಮೇಲಿಂದ ಮುಚ್ಚಿದ ಕಣ್ಣ್'ರೆಪ್ಪೆಗಳ ಮೇಲೆ ಬಿದ್ದು, ಮನದೊಂದಿಗೆ ತನುವು ನಿಚ್ಚಳವಾಗಿ ಎಚ್ಚರವಾಗಿತ್ತು. ಹಿತ್ತಲ ಕಡೆಯಿಂದ, 'ಬೇಗ ಏಳೋ ಶಗಣಿ-ಕಸಾ ಮಾಡಿ ಹಾಲ ಹಿಂಡಿ, ಗಂಗೆ ಗೌರಿಗೆ ಮೆಯಲಾಕ ಬಿಡ್' ಅಂತ ಅವ್ವಳ ಇಂಪಾದ ದನಿ ಕೆಳಸ್ತ.

ಯೋಗ ನಿದ್ರೆಯಿಂದ ಎದ್ದ ಭಾಸವಾಗಿತ್ತು. ಬೆಳಗಾಮುಂಜಸನೆಯ ಸವಿಗನಸದಾಗ ಸ್ವರ್ಗ+ನರಕಗಳ ಪರಿಚಯವಾಗಿತ್ತು. ಜೀವನದುದ್ದಕ್ಕೂ ಪಾಪ ಪುಣ್ಯಗಳ ಚೌಕಟ್ಟನ್ಯಾಗ ಮನಸ್ಸಿನಲ್ಲಿ ಅಲ್ಲಿಲ್ಲಿ ಮಿಣುಕು ಹುಳುವಿನಂತೆ ಪೂಣ್ಯ ಹೊಳೆಯುತಿತ್ತು. ಜೀವ ನಿದ್ದೆಯಿಂದ ಎದ್ದು ಶಾಂತ ಚಿತ್ತವಾಗಿತ್ತು.

ಎಷ್ಟೋ ದಿನಗಳಿಂದ ಕಿರಿ ಕಿರಿಗೊಂಡ ಮನಸ್ಸು, ಅಂದು ಪಾಂಡವಾಗ್ರಜ ಧರ್ಮರಾಜನಿಗೆ ಯಕ್ಷ' ಕೇಳಿದ ಪ್ರಶ್ನೆಗೆ ಇಂದು ಉತ್ತರ ಸಿಕ್ಕ ಸಮಾಧಾನವಿತ್ತು. *ಅಳಿದ ಮೇಲೆ ಉಳಿದುದೆನು...? ಕಳೆದದ್ದು ಪಡೆಯಲಾಗದು, ಉಳಿದದ್ದು ನಮ್ಮೆದುರಿಗಿದೆ.* ಭೂ, ಸ್ವರ್ಗ, ನರಕ ಮೂರು ಲೋಕಗಳಲ್ಲೂ ಒಂದೆ ವ್ಯವಸ್ಥೆ. ಜನ್ಮಾಂತರದಲ್ಲಿ, ಸ್ವರ್ಗದಿಂದ ನರಕಕ್ಕೆ ಅಥವಾ ಭೂಮಿಗೆ ನಾವು ಬರುವ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವಿಷಯ ಮಾತ್ರ ಅರಿತಾಗಿತ್ತು, *ಪ್ರಕೃತಿ,ಪರಿಸರ,ಮತ್ತ ಸಮಾಜಕ್ಕ ತೊಂದರೆ ಮಾಡಿ ಪಾಪ ಪ್ರಜ್ಞೆಯಲ್ಲಿ ಇದ್ದಾಗ, ಹತ್ತರ ಜೋತೆಗೆ ಹನ್ನೊಂದಾಗಿ ಮಂದ್ಯಾಗ ಸಿಕ್ಕ ನನ್ನತನ ಕಳಕೊಂಡಂಗ ಆಗಿತ್ತು. ಆ ಸತ್ಯದ ಅರಿವು ಬಂದಾಕ್ಷಣ, ಅಸ್ತಿತ್ವ ಆಕಾರಪಡೆದು ಎತ್ತರಕ್ಕ ಬೆಳೆದು ನಿಂತ ಭಾಸವಾಗಿತ್ತು. ಆ ಕಡೆಯಿಂದ ಈ ಕಡೆ ಬರಲು ಒಂದೇ ಕ್ಷಣ ಸಾಕಾಗಿತ್ತು.*

ಭೂಲೋಕದಲ್ಲಿ ಹೇಗೆ ಜೀವ ಸವಿಸಿರುವೆವೋ ಅದೇ ಪರಲೋಕದಲ್ಲಿ ಮುಂದುವರಿಯುವದೆಂದು...

ಸ್ವಜನ ಸಹಾಯವೇ ಸ್ವರ್ಗ,

ಸ್ವಾರ್ಥ ಸಹಾಯವೇ ನರಕ ಎಂದು...

Comments

  1. Enjoy your uttara karnataka style language, some new words & the way you narrate sir. Very nice article

    ReplyDelete

Post a Comment