ದೀಪದ ಕೆಳಗೆ....

 ದೀಪದ ಕೆಳಗೆ.....                              

ವೈ.ಕೆ.ಸಂಧ್ಯಾಶರ್ಮ 

ತ್ಯಾಗರಾಜಯ್ಯನವರ ಮನೆಯ ವರಾಂಡದ ಎಲ್ಲಾ ಕುರ್ಚಿಗಳೂ ತುಂಬಿ ತುಳುಕುತ್ತಿದ್ದವು. ನಿಂತುಕೊಂಡಿದ್ದ ಅನೇಕರು ಅಸಹನೆ, ಆತಂಕಗಳಿಂದ ಹೆಜ್ಜೆ ಬದಲಿಸುತ್ತ, ಅತ್ತಿತ್ತ ಹೊಯ್ದಾಡುತ್ತ , ಮಂತ್ರಿಗಳ ಪಿ.ಎ. ತಮ್ಮ ಹೆಸರನ್ನು ಕರೆಯಬಹುದೇ? ಎಂದು ಕಾತರಿಸುತ್ತಿದ್ದರು. ಇನ್ನು ಹಲವರು ತಮ್ಮ ಕಿವಿಗಳನ್ನು ಮೊರದಂತೆ ಅಗಲಿಸಿಕೊಂಡು ಪಿ.ಎ. ಕೃಪಾ ಕಟಾಕ್ಷ ತಮ್ಮತ್ತ ಹರಿದೀತೇ ಎಂದು ತಮ್ಮ ಸರದಿಗಾಗಿ ಚಡಪಡಿಸುತ್ತಿದ್ದರು. 



ಎಲ್ಲರೂ ನಿರೀಕ್ಷೆಯಲ್ಲಿದ್ದುದರಿಂದ ಒಂದು ರೀತಿಯ ಬಿಗುವಿನ ವಾತಾವರಣ ಹರಡಿತ್ತು. 

ತೆರೆದ ದೊಡ್ಡ ವರಾಂಡದಲ್ಲಿ ಸುಮಾರು

ನಲವತ್ತೈದಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ಬಂಗಲೆಯ ಮುಂಭಾಗದ ಪೋರ್ಟಿಕೋದಲ್ಲಿ ರಾಜಹಂಸನಂತೆ ರಾಜಠೀವಿಯಿಂದ ಮೈಚಾಚಿ ನಿಂತಿದ್ದ ಕೆನೆ ಬಿಳುಪಿನ ನೀಳವಾದ ಇನೋವಾ ಕಾರು. ಅದಕ್ಕೆ ಮಾಲೆ ಹಾಕಿದಂತೆ ಮಾಳಿಗೆಯಿಂದ ತೂಗುಬಿದ್ದಿದ್ದ ಮೆಜೆಂತಾ-ಹಳದಿ ಬಣ್ಣದ ಗುಲ್ ಮೊಹರ್ ಗೊಂಚಲುಗಳು. ಪೋರ್ಟಿಕೋದ ಇಕ್ಕೆಲದ ದಾರಿ ವರ್ತುಲಾಕಾರದಲ್ಲಿ ಸುತ್ತಿಕೊಂಡು ಮುಂಭಾಗದ ದೊಡ್ಡ ಗೇಟುಗಳವರೆಗೂ ತಲುಪಿತ್ತು. ಹೊರಗೆ ಗೇಟಿನ ಒಂದು ಪಿಲ್ಲರ್‍ನ  ಹೊರ ಮೈಯಲ್ಲಿದ್ದ ಕಪ್ಪನೆಯ ಗ್ರಾನೈಟ್ ಕಲ್ಲಿನ ಮೇಲೆ `ಧರ್ಮ ರತ್ನಾಕರ ಶ್ರೀ ತ್ಯಾಗರಾಜಯ್ಯ'ನವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿತ್ತು. ಇನ್ನೊಂದು ಪಿಲ್ಲರ್‍ನ     ಗ್ರಾನೈಟ್ ಮೇಲೆ ಅವರ ಮಾತೃಶ್ರೀಯವರ ಹೆಸರು ಅಲಂಕರಿಸಿತ್ತು.

ಮಣಿಪೋಣಿಸಿದಂತೆ ರಸ್ತೆಯಲ್ಲಿ ಉದ್ದಕ್ಕೆ ನಿಂತಿದ್ದ ಕಾರುಗಳಿಂದ ಜನ ದುಬುದುಬನೆ ಇಳಿಯುತ್ತಿದ್ದರು. ಬಾಗಿಲು ಕಾಯುತ್ತಿದ್ದ ಗೂರ್ಖ-ಆಲ್‍ಸೇಷನ್ ನಾಯಿಯಿಂದ ಹಿಡಿದು ಗಾರ್ಡನ್‍ನಲ್ಲಿದ್ದ ಮಾಲಿ,ಆಳು-ಕಾಳು, ಸಿಬ್ಬಂದಿ, ಅಡಿಗೆಯವರು, ಆಫೀಸಿನ ಸ್ಟ್ಯಾಫ್, ಪಿ.ಎ.ವರೆಗೂ ಪ್ರತಿಯೊಬ್ಬರಿಗೂ ಡೊಗ್ಗು ಸಲಾಮು ಹಾಕುತ್ತ, ಮುಖವನ್ನು ನಗುವಿನ ಕೊಡ ಮಾಡಿಕೊಂಡು ಹಲ್ಲುಕಿರಿಯುತ್ತ, ತ್ಯಾಗರಾಜಯ್ಯನವರ ಸಂದರ್ಶನದಿಂದ ಪುಲಕಿತರಾಗಿ, ಧನ್ಯತೆಯಿಂದ ಹಿರಿಹಿರಿ ಹಿಗ್ಗಿ ಅವರ ಮುಂದೆ ಮುಖ್ಯಪ್ರಾಣನಂತೆ ಕೈಮುಗಿದು ವಿಧೇಯತೆಯಿಂದ ನಿಲ್ಲುತ್ತಿದ್ದ ದೃಶ್ಯ ಇಲ್ಲಿ ಪ್ರತಿದಿನದ ಕಾಣಬಹುದಾಗಿದ್ದ ಸಾಮಾನ್ಯ ನೋಟ.

ತ್ಯಾಗರಾಜಯ್ಯನವರು, ಬೆಳಗಿನ ಮೊದಲ ಕಿರಣ ಕಣ್ಣು ಬಿಚ್ಚಿದಾಗಲೇ ಕಣ್ಣುತೆರೆದು ಹಾಸಿಗೆಯಿಂದ ಮೇಲೆದ್ದವರು, ರಾತ್ರಿ ರೆಪ್ಪೆಗೂಡಿಸುವವರೆಗೂ ಉಸಿರಾಡಲೂ ಪುರುಸೊತ್ತಾಗದಂಥ ಪ್ರಚಂಡ ಬಿಜಿ ಮನುಷ್ಯ. ಬಹುಮತದಿಂದ ಆರಿಸಿಬಂದ ಆಡಳಿತ ಪಕ್ಷದ ಬಹು ಪ್ರಭಾವೀ ಕ್ಯಾಬಿನೆಟ್ ದರ್ಜೆಯ ಮಂತ್ರಿಯೆನ್ನುವುದಕ್ಕಿಂತ ಹೆಚ್ಚಾಗಿ ಅವರು ಸಮಾಜಸೇವಾ ಧುರೀಣ, ಜನಾನುರಾಗಿ ನಾಯಕರಾಗಿ ಪ್ರಸಿದ್ಧರು. ಅವರು ಸಾಗಿ ಬಂದ ಹಾದಿ ಜನಸೇವೆ-ಹೋರಾಟಗಳದು. ಬಾಲ್ಯದಿಂದ ನೇತಾರನಾಗುವ ಲಕ್ಷಣ ಅವರಲ್ಲಿತ್ತು. ಸಮಾಜಸೇವೆಯೇ ತಮ್ಮ ಪರಮಗುರಿಯೆಂದು ಅವರು ಭಾಷಣಗಳಲ್ಲಿ ಪದೇ ಪದೇ ಹೇಳುತ್ತಿದ್ದರು. ಶಾಲೆ-ಕಾಲೇಜು ದಿನಗಳಿಂದಲೂ ಬಡಬಗ್ಗರಿಗೆ ಸಹಾಯ, ಆಸ್ಪತ್ರೆ-        ದೇವಸ್ಥಾನ,ಧರ್ಮಸಂಸ್ಥೆಗಳಿಗೆ ಅವರು ಕೊಟ್ಟ,ಕೊಡಿಸಿದ ದಾನ,ಹಣ ಸಂಗ್ರಹ, ಮಾಡಿದ ಘನ ಕಾರ್ಯಗಳಿಗೆ ಲೆಕ್ಕವೇ ಇರಲಿಲ್ಲ. ಸದಾ ಜನೋಪಕಾರೀ ಆಲೋಚನೆ-ಚಿಂತನೆಗಳು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡ ಹುಡುಗರಿಗಾಗಿ ಊಟ-ವಸತಿನಿಲಯಗಳ ಸ್ಥಾಪನೆ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದು, ಅನಂತರ ವರ್ಗ-ಬಡ್ತಿ, ಸೈಟು, ಮನೆ ಕೊಡಿಸುವುದು, ವಿಧವೆಯರಿಗೆ ಪಿಂಚಣಿ,ವೃದ್ಧರಿಗೆ ವೈದ್ಯಕೀಯ ನೆರವು ಮುಂತಾದ ನಾನಾ ಬಗೆಯ ಸಹಾಯಗಳನ್ನು ಮಾಡಿದ್ದರವರು. ಹೀಗಾಗಿ ಸದಾ ಅವರ ಬೆನ್ನ ಹಿಂದೆ ಜನಗಳ ದಂಡು. ಅವರ ಮುಖ ಕಂಡೊಡನೆ ದೇವರನ್ನೇ ಕಂಡಷ್ಟು ಸಂತೋಷ. ನಾನಾ ಬೇಡಿಕೆಗಳನ್ನು ಅವರ ಮುಂದಿಡುತ್ತಿದ್ದರು ಜನಸಾಮಾನ್ಯರು. ಒಟ್ಟಿನಲ್ಲಿ ಇವರು ಮಾಡಿರುವ ಸಹಾಯಗಳನ್ನೆಲ್ಲ ಪಟ್ಟಿ ಮಾಡುತ್ತ ಹೋದರೆ ಒಂದು ದೊಡ್ಡ ಕಡತವೇ ಆದೀತು. ತಮ್ಮ ಹೆಸರು ಎಲ್ಲೆಡೆ ಪಸರಿಸಿ ಶಾಶ್ವತವಾಗಿ ನಿಲ್ಲಬೇಕೆಂಬುದೇ ಅವರ ತೀವ್ರ ಆಕಾಂಕ್ಷೆ. ಅದರ ಫಲವೇ ಅವರಿಗೆ ದತ್ತವಾದ `ಧರ್ಮರತ್ನಾಕರ' ಎಂಬ ಬಿರುದು. ಎಲ್ಲಕ್ಕಿಂತ ಮಿಗಿಲಾಗಿ ಅವರ `ಬಡವರ ಬಂಧು' ಎಂಬ ವ್ಯಕ್ತಿತ್ವಕ್ಕೆ ಸಾರ್ಥಕತೆ ತಂದುಕೊಡಲು ಸರ್ಕಾರದಲ್ಲಿ ಒಂದು ಉನ್ನತ ಹುದ್ದೆ!

ಆ ದಿನ ಅವರು ತಮ್ಮ ಧರ್ಮಪತ್ನಿ ಶಾರದಮ್ಮನವರೊಡನೆ ಊರ ಹೊರವಲಯದಲ್ಲಿ ನೂತನವಾಗಿ ನಿರ್ಮಿತವಾಗಿದ್ದ ಹೈಟೆಕ್ `ವೃದ್ಧಾಶ್ರಮ'ದ ಉದ್ಘಾಟನಾ ಸಮಾರಂಭಕ್ಕೆ ಹೊರಡುವ ಅವಸರದಲ್ಲಿದ್ದರು. ಅವರನ್ನು ಕಾಣಲು ಬಂದ ಜನಗಳ ಗುಂಪು ಇನ್ನೂ ಕರಗಿರಲಿಲ್ಲ. ಈಗ ಮಂತ್ರಿಗಳಿಗೆ ಪುರುಸೊತ್ತಿಲ್ಲ ಎಂದು ಪಿ.ಎ. ಗದರುತ್ತ ಜನಗಳನ್ನು ಚೆದುರಿಸಲು ಪ್ರಯತ್ನಿಸುತ್ತಿದ್ದಂತೆ ಮಂತ್ರಿಗಳಾಗಲೇ ಕಾರು ಹತ್ತುವ ಸನ್ನಾಹದಲ್ಲಿದ್ದರು. ಆ ಗುಂಪನ್ನು ಸೀಳಿಕೊಂಡು ತಮ್ಮ ಕೃಶವಾದ ಕಂಠದಲ್ಲಿ ನಾಗರಾಜಯ್ಯ ಮೆಲ್ಲನೆ         ಧ್ವನಿ ಹೊರಡಿಸಲು ಪ್ರಯತ್ನಿಸುತ್ತ, ಸೋತ ಹೆಜ್ಜೆಗೆ ಕಸುವನ್ನು ತುಂಬುತ್ತ ವೇಗವಾಗಿ ಮುಂದುವರಿಯಲು ಎತ್ತಿದ ಪಾದ ಕುಸಿಯುತ್ತ, ಸಚಿವರನ್ನು ಸಮೀಪಿಸಲು ಅವರು ಮಾಡಿದ ಶತಪ್ರಯತ್ನವೆಲ್ಲ ವ್ಯರ್ಥವಾಯಿತು. ಆತನ ಕ್ಷೀಣಕಂಠವು ಭುರ್ರನೆ ಹೊರಟ ಕಾರಿನ ಸದ್ದಿನಲ್ಲಿ ಕರಗಿಹೋಯಿತು. ಜಂಘಾಬಲ ಉಡುಗಿದಂತಾಗಿ ನಾಗರಾಜಯ್ಯ ನಿಂತಲ್ಲೇ ಕುಸಿದರು. 

ನಗರದಿಂದ ಸುಮಾರು 25 ಕಿ.ಮಿ. ದೂರದಲ್ಲಿದ್ದ ಆ ನೂತನವಾದ `ವೃದ್ಧಾಶ್ರಮ'ದ ಭವ್ಯ ಕಟ್ಟಡವನ್ನು ಕಂಡು ತ್ಯಾಗರಾಜಯ್ಯ ನಿಜಕ್ಕೂ ದಂಗಾಗಿಹೋಗಿದ್ದರು. ಸುತ್ತ ಐದು ಎಕರೆಯ ಜಾಗದ ನಡುವಿನಲ್ಲಿ ಸಮೃದ್ಧ ಕೈತೋಟ!...ಸುತ್ತ ಬೇಲಿಯ ಅಂಚಿನಲ್ಲಿ ನೆಟ್ಟ ನೂರಾರು ತೇಗದ ಸಸಿಗಳು. ಅದಕ್ಕೆ ಹೊಂದಿಕೊಂಡಂತೆ ಮಾವು-ಬಾಳೆಯ ತೋಟ. ಹಸಿರುವನದ ಮಧ್ಯದಲ್ಲಿ ತಲೆ ಎತ್ತಿ ನಿಂತಿದ್ದ ಆ ಮಹೋನ್ನತ ಸಂಸ್ಥೆಯ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದವರು ಬೇರಾರೂ ಅಲ್ಲ, ಅವರೇ, ಉದ್ಘಾಟನೆಗೆ ಸಜ್ಜುಗೊಂಡಿದ್ದ ಆ ವೃದ್ಧಾಶ್ರಮ ಅವರ ಒಡೆತನಕ್ಕೇ ಸೇರಿತ್ತು. ಏನಿಲ್ಲವೆಂದರೂ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಅವರ ಜಮೀನು ಕೋಟ್ಯಾಂತರ ರೂಪಾಯಿಗಳ ಆಸ್ತಿ, ಬಂಗಾರದ ಬೆಲೆ. ಹೆಮ್ಮೆಯಿಂದ ಬೀಗಿತು ಅವರೆದೆ. ಮನಸ್ಸು ಧನ್ಯತಾಭಾವದಿಂದ ತುಂಬಿ ತುಳುಕಿತು. ಭವನದ ಮುಖ್ಯದ್ವಾರದ ಕಮಾನಿನ ಮೇಲೆ ಅವರ ನಾಮಧೇಯ ಬಂಗಾರದ ಬಣ್ಣದ ಲೋಹದ ಅಕ್ಷರಗಳಿಂದ ಫಳಫಳಿಸುತ್ತಿತ್ತು. ಇಕ್ಕೆಲದಲ್ಲಿ ಹಸಿರುವಾಣಿಯ ಹೂ ಚಪ್ಪರ.

ಕೊಕ್ಕರೆಯ ಗರಿಯ ಬಿಳುಪಿನ ಜುಬ್ಬದ ಮೇಲಿನ ಉತ್ತರೀಯವನ್ನು ನಾಜೂಕಾಗಿ ಸರಿಪಡಿಸಿಕೊಳ್ಳುತ್ತ, ಚಿನ್ನದ ಕಟ್ಟಿನ ಕನ್ನಡಕದೊಳಗಿನ ಕಣ್ಣುಗಳಿಂದ ಆ ಸೌಧವನ್ನು ತೃಪ್ತಿಯಿಂದ ದಿಟ್ಟಿಸುತ್ತ, ಆನಂದಬಾಷ್ಪ ತುಳುಕಿಸುತ್ತ ಟೇಪ್ ಕತ್ತರಿಸಿದರು. ಆಕಾಶದಿಂದ ಪುಷ್ಪವೃಷ್ಟಿಯಾದಂತೆ ತಟ್ಟನೆ, ಬಹುಮಹಡಿಯತ್ತಣದ ಮೇಲಿನ ತಾರಸಿಯಿಂದ ಅವರ ಮೇಲೆ ಪರಿಮಳಭರಿತ ಹೂರಾಶಿ....ಮಲ್ಲಿಗೆಯ ಹೂಮಳೆಗರೆಯಿತು!!.. 

ಚಪ್ಪಾಳೆ ಗಡಚಿಕ್ಕಿತು.

ನೆರೆದ ಪ್ರೇಕ್ಷಕರ ಮುಂದೆ ಅವರು ಆನಂದಭಾಷ್ಪಗಳನ್ನುದುರಿಸಿ ಮೈದುಂಬಿ ಭರ್ಜರಿಯಾಗಿ ಭಾಷಣ ಮಾಡಿದರು.

ಅವರ ಮೊಗದಲ್ಲಿ ಸಾರ್ಥಕತೆಯ ಭಾವ ಜಿನುಗಿದಂತೆ ಕಂಠದಲ್ಲಿ ಭಾವುಕತೆ ತುಂಬಿತ್ತು.

`ನನ್ನ ಬಹುದಿನಗಳ ಕನಸು ಇದು...ದೇವರು ಈಗ ಇದನ್ನು ಸಾಕಾರಗೊಳಿಸಲು ಮುಹೂರ್ತ ನಿಗದಿಪಡಿಸಿದ್ದ ಅಂತ ಕಾಣತ್ತೆ...ಜೀವನದಲ್ಲಿ ಎಲ್ಲದಕ್ಕಿಂತ ಅತ್ಯಂತ ಹಿರಿದಾದ ಭಾಗ್ಯವೆಂದರೆ, ನಮ್ಮ ಪಾಲಿನ ಅತ್ಯಮೂಲ್ಯ ವಸ್ತುವೆಂದರೆ ನಮ್ಮ ಹೆತ್ತವರು...ಅವರ ಋಣ ತೀರಿಸಲು ಸಾಧ್ಯವೇ ಇಲ್ಲ...ಹೊಟ್ಟೆ ಬಟ್ಟೆ ಕಟ್ಟಿ, ತಮ್ಮ ಸುಖ-ಸಂತೋಷಗಳನ್ನೆಲ್ಲ ಬದಿಗೊತ್ತಿ, ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸವೆಯುವ ಅವರ ನಿರ್ವಂಚನೆಯ ತ್ಯಾಗಜೀವನವನ್ನು ನಾವು ಎಷ್ಟು ಹೊಗಳಿದರೂ ಸಾಲದು. ಈಗ ನಮ್ಮ ಸರದಿ, ಅವರ ಕೈಲಾಗದ ಮುಪ್ಪಿನ ಬಾಳಿನಲ್ಲಿ ನಾವು ಮಕ್ಕಳು, ಅವರಿಗೆ ಊರುಗೋಲಾಗಬೇಕು, ಅವರ ಕಡೆಯ ದಿನಗಳನ್ನು ಸುಖ-ಶಾಂತಿಯಿಂದ ಕಳೆಯುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅವರನ್ನು ನಾವು ಮಕ್ಕಳಂತೆ ಜೋಪಾನವಾಗಿ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ...ಅವರ ಆಶೀರ್ವಾದ ಬಹಳ ಮುಖ್ಯ' ಮುಂತಾಗಿ ತ್ಯಾಗರಾಜಯ್ಯನವರು ಮಾಡಿದ ಅಮೋಘ ಭಾಷಣವನ್ನು ಕೇಳಿ ಅಲ್ಲಿ ನೆರೆದ ಜನಸ್ತೋಮ ಮತ್ತೊಮ್ಮೆ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದರು, ಜಯಕಾರ ಹಾಕಿದರು.

ತ್ಯಾಗರಾಜಯ್ಯನವರ ವಾತ್ಸಲ್ಯಮಯ ವ್ಯಕ್ತಿತ್ವ ಹಾಗೂ ಮಾನವೀಯ ಅಂತಃಕರಣ ಕಂಡು ಜನ ಅವರನ್ನು ಮನಸಾರೆ ಕೊಂಡಾಡಿದರು.

ಪತಿಯ ಗುಣಗಾನ ಕೇಳಿ ಶಾರದಮ್ಮನವರು ಹಿರಿಹಿರಿ ಹಿಗ್ಗಿದರು. ಅವರ ಕೊರಳನ್ನು ಅಲಂಕರಿಸಿದ್ದ ವಜ್ರದ ಹಾರ ಫಳಫಳಿಸಿತು. ಆ ಕಿವಿಯಿಂದ ಈ ಕಿವಿಯವರೆಗೂ ಬಾಯಿ ಹಿಗ್ಗಲಿಸಿ ನಗುತ್ತ `ಇಂಥ ಒಳ್ಳೆಯ ಮನಸ್ಸಿನ ಗಂಡನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ' ಎಂದುಕೊಂಡರು ಮನಸ್ಸಿನಲ್ಲೇ.

` ಇಂಥ ಪುಣ್ಯಾತ್ಮನ್ನ ಹೆತ್ತಮ್ಮ ಸುಖವಾಗಿರಲಿ'-ಎಂದಿತು ಒಂದು ಹಣ್ಣು ಹಣ್ಣು ಮುದುಕಿ.

` ನಮ್ಮಂಥ ಬಡವರಿಗೇ ಇಂಥ ಮಹಲ್ಲು ಕಟ್ಟಿಕೊಟ್ಟೋರು, ಇನ್ನು ಅವರ ಸ್ವಂತ ತಾಯ್ತಂದೆಗಳಿಗೆ ಇನ್ನೆಂಥ ರಾಜವೈಭೋಗದಲ್ಲಿ ಮುಳುಗಿಸಿರಬೋದು!!...ಇಂಥ ಸದ್ಗುಣಗಳ  ಯೋಗ್ಯ ಮಗನ್ನ ಪಡೆಯೋಕ್ಕೆ ಅವರೂ ಅದೃಷ್ಟ ಮಾಡಿದ್ರು'- ಎಂದು ಅಲ್ಲಿ ನೆರೆದ ಹಿರಿ ಜೀವಗಳು ಉದ್ಗಾರವೆತ್ತಿದವು.

ಸಮಾರಂಭ ಮುಗಿಯುವಷ್ಟರಲ್ಲಿ ಅವರು ಹೂವಿನ ತೇರಿನೊಳಗೆ ಹುದುಗಿಹೋಗಿದ್ದರು. ನೂರಾರು ಜನ ವೃದ್ಧರು ಸಚಿವ ದಂಪತಿಗಳನ್ನು ಹರಸಿದರು. ವಾಸ್ತವವಾಗಿ ಅಲ್ಲಿದ್ದ ಹಿರಿಯ ನಾಗರಿಕರಿಗಿಂತ ರಾಜಕಾರಣಿಗಳ ದಂಡೇ ದೊಡ್ಡದಿತ್ತು. ಜೊತೆಗೆ ಸಚಿವರನ್ನು ಮುತ್ತಿದ್ದ ಚೇಲಾಗಳ ಹಿಂಡು.

ಎಸ್ಟೇಟಿನ ಪ್ರವೇಶ ದ್ವಾರದಿಂದ ಉದ್ದಕ್ಕೆ ನೂರಾರು ಕಾರುಗಳು ಪೋಣಿಸಿದಂತೆ ನಿಂತಿದ್ದವು. ಗರಿಗರಿ ಇಸ್ತ್ರಿ ಮಾಡಿದ ಬಿಳಿಯ ಖಾದೀ ಪೈಜಾಮ-ಜುಬ್ಬಗಳನ್ನು ತೊಟ್ಟವರ ಓಡಾಟ ಪೈಪೋಟಿಯ ಮೇಲೆ ನಡೆದಿತ್ತು. ಒಂದೆಡೆ ಊಟದ ಏರ್ಪಾಡು ಜೋರಾಗಿ ನಡೆದಿತ್ತು. ವಿಶಾಲವಾದ ಲಾನ್ ಮೇಲೆ ನೀಟಾಗಿ ಜೋಡಿಸಿದ್ದ ಟೇಬಲ್ಲು-ಕುರ್ಚಿಗಳು. ಬಿಸಿಲಿನ ಬೇಗೆಗೆ ಛತ್ರಿ ಹಿಡಿದಂತೆ ನೆತ್ತಿಯ ಮೇಲೆ ಸುಭದ್ರ ಷಾಮಿಯಾನವನ್ನು ಹಾಕಲಾಗಿತ್ತು. ಕೇಟರಿಂಗ್ ಜನಗಳು ಹುರುಪಿನಿಂದ ಓಡಾಡುತ್ತಿದ್ದರು. ಯಾರೋ ದೊಡ್ಡ ಕುಳ ಪಕ್ವಾನ್ನಭರಿತ ಭೂರಿ ಭೋಜನದ ವ್ಯವಸ್ಥೆ ಮಾಡಿದ್ದು ಕಂಡುಬರುತ್ತಿತ್ತು. ಜೊತೆಗೆ ಲಾಡು-ಮೈಸೂರು ಪಾಕುಗಳ ಸಿಹಿ ಹಂಚುತ್ತಿದ್ದವರು ಕೆಲವರು.

ಮುಸ್ಸಂಜೆ ಕಳೆದು ಸುತ್ತ ಕತ್ತಲು ಅಂಬೆಗಾಲಿಡುವಷ್ಟರಲ್ಲಿ ಝಗ್ಗನೆ ಸಾಲು ದೀಪಗಳು ಬೆಳಗಿದವು. ಭವನದ ನಖಶಿಕಾಂತ ಇಳಿಬಿಟ್ಟಿದ್ದ ಆಕಾಶ ನೀಲಿ ಬಣ್ಣದ ದೀಪಗಳ ಗೊಂಚಲು ದಿವ್ಯವಾದ ಪ್ರಭೆ ಬೀರುತ್ತ ಮಾಯಾಲೋಕ ಸೃಷ್ಟಿಸಿತ್ತು.

ಮುಂದಿನ ಕಾರ್ಯಕಲಾಪಗಳೆಲ್ಲ ಮುಗಿದು ಮಂತ್ರಿವರ್ಯರು ಮನೆ ತಲುಪುವಾಗ ರಾತ್ರಿ ಹತ್ತುಗಂಟೆ ದಾಟಿತ್ತು. ಅವರು ತುಂಬಾ ಬಳಲಿಹೋಗಿದ್ದರು.

ಮಾಮೂಲಿನಂತೆ ಕಾರಿನ ಶಬ್ದ ಕೇಳುತ್ತಿದ್ದ ಹಾಗೆ ಗೇಟು ತೆರೆದುಕೊಳ್ಳಲಿಲ್ಲ. ಬೇಜವಾಬ್ದಾರಿ ಗೂರ್ಖನ ಬಗ್ಗೆ ರೇಗಿಕೊಳ್ಳುತ್ತ ಡ್ರೈವರ್ ಕೆಳಗಿಳಿಯುವಷ್ಟರಲ್ಲಿ ಗೇಟಿನತ್ತಲೇ ಕಣ್ಣು ಹೂತು ಅಲ್ಲೇ ಪಕ್ಕದ ಕಟ್ಟೆಯ ಮೇಲೆ ಕುಸಿದು ಕೂತಿದ್ದ ನಾಗರಾಜಯ್ಯನವರು , ಕಾರಿನ ಹಾರನ್ನಿನ ಸದ್ದಿಗೆ ಬೆಚ್ಚಿಬಿದ್ದು ಧಡಬಡಿಸುತ್ತೆದ್ದು ನಡುಗುವ ಕೈಗಳಿಂದ ಮೆಲ್ಲನೆ ಗೇಟನ್ನು ತೆರೆದರು. 

ಕಾರು ಭುರ್ರನೆ ಅವರ ಮೊಗಕ್ಕೆ ಬಿಸಿಗಾಳಿಯನ್ನು ಎರಚುತ್ತ ಪೋರ್ಟಿಕೋದತ್ತ ಸಾಗಿತು. 

ಆತಂಕ-ಗಾಬರಿಗಳ ಮುಖಭಾವದಿಂದ ಅದನ್ನೇ ಹಿಂಬಾಲಿಸುತ್ತ ಕಾಲೆಳೆದುಕೊಂಡು ನಡೆದುಬಂದ ಆತನ ಬಾಗಿದ ಬೆನ್ನು,ಸುಕ್ಕುಗಟ್ಟಿದ ಮುಖ,ಗುಳಿಬಿದ್ದ ಕಣ್ಣುಗಳಲ್ಲಿ ಅನಾಥವಾಗಿ ತತ್ತರಿಸುತ್ತಿದ್ದ ಸಣ್ಣ ಪಾಪೆಗಳು ದೈನ್ಯದ ಶಿಲ್ಪವಾಗಿದ್ದವು. 

ಕಾರಿನಿಂದ ಕೆಳಗಿಳಿದ ತ್ಯಾಗರಾಜಯ್ಯನವರು ಅವರತ್ತ ಕಣ್ಣೂ ಹಾಯಿಸದೆ ತಮ್ಮ ಪಾಡಿಗೆ ತಾವು ಮುನ್ನಡೆದರು.

ಪಸೆಯಾರಿದ ತಮ್ಮ ಗಂಟಲಿನೊಳಗೆ ಎಂಜಲನ್ನು ನುಂಗಿಕೊಳ್ಳುತ್ತ ನಾಗರಾಜಯ್ಯ ಅವರ ಬಳಿಸಾರಿ ಕುಗ್ಗಿದ ದನಿಯಲ್ಲಿ-

`ನಿಮ್ಮ ತಾಯಿಗೆ ಇದ್ದಕ್ಕಿದ್ದ ಹಾಗೆ ತುಂಬ ಸೀರಿಯಸ್ ಆಗಿದೆಯಪ್ಪ....'

-ಬಹುಪ್ರಯಾಸದಿಂದ ಒಂದೊಂದೇ ಅಕ್ಷರವನ್ನು ಉಚ್ಛರಿಸುವುದರಲ್ಲಿ ಆತನಿಗೆ ಉಬ್ಬಸ ಹೆಚ್ಚಾಯಿತು. 

ಮಂತ್ರಿಗಳ ಮುಖ ಗಂಟಿಕ್ಕಿತು. ಅವರಿಗೆ ಹಾಸಿಗೆ ಕಂಡೇನೇ ಎಂಬಷ್ಟು ಸುಸ್ತೋ ಸುಸ್ತು. ಮತ್ತೇನು ನಿಮ್ಮ ಗೋಳು ಎಂಬಂತೆ ಮುಖವನ್ನು ಹಿಂಡಿದರು.

ಮತ್ತೆ ನಾಗರಾಜಯ್ಯನೇ- 

`ಡಾಕ್ಟರ್ರು ಬಂದು ಹೋದರು...ಇನ್ನೂ ಅವಳಿಗೆ ಜ್ಞಾನ ಬಂದಿಲ್ಲ....ನರ್ಸಿಂಗ್ ಹೋಂಗಾದ್ರೂ....'

- ಇಷ್ಟು ಮಾತನಾಡುವಷ್ಟು ಹೊತ್ತಿಗೆ ಆತನ ಕಂಠ ಬಿಗಿದುಬಂತು...ಮುಖದಲ್ಲಿ ಕಿಕ್ಕಿರಿದ ಗಾಬರಿ!

ಮಂತ್ರಿಗಳು ಗಲಿಬಿಲಿಗೊಂಡರು ಒಂದು ಕ್ಷಣ...ಆದರವರ ಕಣ್ರೆಪ್ಪೆಗಳು ಆಯಾಸದಿಂದ ಮೆತ್ತಿಕೊಳ್ಳುತ್ತಿದ್ದವು. ದೇಹ ದಣಿದುಹೋಗಿತ್ತು. ಕಿವಿ ಕಿವುಡಾದಂತೆ ಅವರು  ಧಡಧಡನೆ ಮಹಡಿಯೇರುತ್ತ- 

`ಸರಿ ಸರಿ...ನಂಗೀಗ ತುಂಬ ಆಯಾಸವಾಗಿದೆ...ನಾಳೆ ನೋಡಿದರಾಯ್ತು....'-ಎನ್ನುತ್ತ ತ್ಯಾಗರಾಜಯ್ಯ , ತಂದೆಯತ್ತ ತಿರುಗಿ ಸಹ ನೋಡದೆ ನುಡಿದು ತಮ್ಮ ಮಲಗುವ ಕೋಣೆಯನ್ನು ಹೊಕ್ಕರು. ಬಾಗಿಲು ಟಪ್ಪೆಂದು ಜೋರಾಗಿ ಹಾಕಿಕೊಂಡಿತು.

ಕಮಕ್ ಕಿಮಕ್ಕೆನ್ನದೆ ತುಟಿಗಳಿಗೆ ಕೀಲಿಹಾಕಿಕೊಂಡು ಮಗನನ್ನು ಬಿಮ್ಮನೆ ಹಿಂಬಾಲಿಸಿ ನಡೆದ ಸರ್ವಾಲಂಕಾರಭೂಷಿತೆಯಾದ ತಮ್ಮ ಸೊಸೆ ಶಾರದದೇವಿಯನ್ನೇ, ಎವೆಯಿಕ್ಕದೆ ದೈನ್ಯದಿಂದ ದಿಟ್ಟಿಸುತ್ತ ಅಸಹಾಯಕರಾಗಿ ನಿಂತ ನಾಗರಾಜಯ್ಯನವರು ನಿಂತಲ್ಲೇ ಕಂಭವಾಗಿದ್ದರು.


Comments

  1. Nice story . well explained on few dramatic situations. Nice to see new writers being introduced

    ReplyDelete
  2. Beautifully written... Just felt like I am standing in the place...

    ReplyDelete
  3. ಏನಿದ್ದರೇನು ಬಂತು? ದೀಪದ ಕೆಳಗೆ ಕತ್ತಲೆಯೇ...ಶೀರ್ಷಿಕೆ ಸಮಯೋಚಿತವಾಗಿದೆ. ಮನೆಗೆ ಮಾರಿ ಪರರಿಗೆ ಉಪಕಾರಿಯಾದರೆ ಏನೂ ಪ್ರಯೋಜನವಿಲ್ಲ.ಧರ್ಮರತ್ನಾಕರ ಬಿರುದು ವ್ಯಂಗ್ಯಕ್ಕೆ ಸಾಟಿಯಾಹಿದೆ. ಒಳ್ಳೆಯ ಕಥೆಯನ್ನು ನೀಡಿದ್ದೀರಿ. ಧನ್ಯವಾದಗಳು.

    ReplyDelete
  4. ಹೃದಯ ಸ್ಪರ್ಶಿ ಕಥೆ.ಮಾನವೀಯ ಮೌಲ್ಯ ಗಳು ಸಮಾಜದಲ್ಲಿ ಕಳೆದು ಹೋಗುತ್ತಿರುವ ಎಚ್ಚರಿಕೆ ಗಂಟೆ ಯಂತಿದೆ

    ReplyDelete

Post a Comment